Virata Parva: Chapter 67

ವಿರಾಟ ಪರ್ವ: ವೈವಾಹಿಕ ಪರ್ವ

೬೭

ಉತ್ತರೆ-ಅಭಿಮನ್ಯು ವಿವಾಹ

ತಾನೇ ಏಕೆ ಉತ್ತರೆಯನ್ನು ವಿವಾಹವಾಗುವುದಿಲ್ಲವೆಂದು ಅರ್ಜುನನು ವಿರಾಟನಿಗೆ ವಿವರಿಸಿದುದು (೧-೯). ವಿವಾಹದ ನಿಶ್ಚಯವಾಗಲು ವಿರಾಟನಗರಿಗೆ ವೃಷ್ಣಿ-ಪಾಂಚಾಲರ ಆಗಮನ (೧೦-೨೪). ಅಭಿಮನ್ಯು-ಉತ್ತರೆಯರ ವಿವಾಹಕಾರ್ಯ ಮಹೋತ್ಸವ (೨೫-೩೮).

04067001 ವಿರಾಟ ಉವಾಚ|

04067001a ಕಿಮರ್ಥಂ ಪಾಂಡವಶ್ರೇಷ್ಠ ಭಾರ್ಯಾಂ ದುಹಿತರಂ ಮಮ|

04067001c ಪ್ರತಿಗ್ರಹೀತುಂ ನೇಮಾಂ ತ್ವಂ ಮಯಾ ದತ್ತಾಮಿಹೇಚ್ಛಸಿ||

ವಿರಾಟನು ಹೇಳಿದನು: “ಪಾಂಡವಶ್ರೇಷ್ಠ! ನಿನಗೆ ನಾನಿಲ್ಲಿ ಕೊಡುತ್ತಿರುವ ನನ್ನ ಮಗಳನ್ನು ನೀನು ಹೆಂಡತಿಯನ್ನಾಗಿ ಏಕೆ ಸ್ವೀಕರಿಸುತ್ತಿಲ್ಲ?”

04067002 ಅರ್ಜುನ ಉವಾಚ|

04067002a ಅಂತಃಪುರೇಽಹಮುಷಿತಃ ಸದಾ ಪಶ್ಯನ್ಸುತಾಂ ತವ|

04067002c ರಹಸ್ಯಂ ಚ ಪ್ರಕಾಶಂ ಚ ವಿಶ್ವಸ್ತಾ ಪಿತೃವನ್ಮಯಿ||

ಅರ್ಜುನನು ಹೇಳಿದನು: “ನಿನ್ನ ಅಂತಃಪುರದಲ್ಲಿ ವಾಸಿಸುತ್ತಿದ್ದ ನಾನು ನಿನ್ನ ಮಗಳನ್ನು ಯಾವಾಗಲೂ ನೋಡುತ್ತಿದ್ದೆ. ಅವಳೂ ಕೂಡ ಏಕಾಂತ-ಬಹಿರಂಗಗಳಲ್ಲಿ ನನ್ನಲ್ಲಿ ತಂದೆಯಂತೆ ನಂಬಿಕೆಯಿಟ್ಟಿದ್ದಳು.

04067003a ಪ್ರಿಯೋ ಬಹುಮತಶ್ಚಾಹಂ ನರ್ತಕೋ ಗೀತಕೋವಿದಃ|

04067003c ಆಚಾರ್ಯವಚ್ಚ ಮಾಂ ನಿತ್ಯಂ ಮನ್ಯತೇ ದುಹಿತಾ ತವ||

ನರ್ತಕನಾಗಿ ಗೀತಕೋವಿದನಾಗಿ ನಾನು ಅವಳಿಗೆ ಇಷ್ಟನೂ ಗೌರವಾರ್ಹನೂ ಆಗಿದ್ದೆ. ನಿನ್ನ ಮಗಳು ಯಾವಾಗಲೂ ನನ್ನನ್ನು ಆಚಾರ್ಯನೆಂಬಂತೆ ಭಾವಿಸುತ್ತಿದ್ದಳು.

04067004a ವಯಃಸ್ಥಯಾ ತಯಾ ರಾಜನ್ಸಹ ಸಂವತ್ಸರೋಷಿತಃ|

04067004c ಅತಿಶಂಕಾ ಭವೇತ್ಸ್ಥಾನೇ ತವ ಲೋಕಸ್ಯ ಚಾಭಿಭೋ||

ರಾಜನ್! ಹರಯಕ್ಕೆ ಬಂದ ಅವಳೊಡನೆ ನಾನು ಒಂದು ವರ್ಷ ವಾಸಮಾಡಿದೆ. ಆದ್ದರಿಂದ ನಿನಗೆ ಸಹಜವಾಗಿ ಅತಿಯಾದ ಶಂಕೆಯುಂಟಾದೀತು.

04067005a ತಸ್ಮಾನ್ನಿಮಂತ್ರಯೇ ತ್ವಾಹಂ ದುಹಿತುಃ ಪೃಥಿವೀಪತೇ|

04067005c ಶುದ್ಧೋ ಜಿತೇಂದ್ರಿಯೋ ದಾಂತಸ್ತಸ್ಯಾಃ ಶುದ್ಧಿಃ ಕೃತಾ ಮಯಾ||

ರಾಜನ್! ಆದ್ದರಿಂದ ನಿನ್ನ ಮಗಳನ್ನು ನನ್ನ ಮಗನಿಗೆ ಕೊಡೆಂದು ಕೇಳುತ್ತಿದ್ದೇನೆ. ಇದರಿಂದ ಶುದ್ಧನೂ ಜಿತೇಂದ್ರಿಯನೂ ಸಂಯಮಿಯೂ ಆದ ನಾನು ಅವಳು ಶುದ್ಧಳೆಂಬುದನ್ನು ತೋರಿಸಿದಂತಾಗುತ್ತದೆ.

04067006a ಸ್ನುಷಾಯಾ ದುಹಿತುರ್ವಾಪಿ ಪುತ್ರೇ ಚಾತ್ಮನಿ ವಾ ಪುನಃ|

04067006c ಅತ್ರ ಶಂಕಾಂ ನ ಪಶ್ಯಾಮಿ ತೇನ ಶುದ್ಧಿರ್ಭವಿಷ್ಯತಿ||

ಸೊಸೆಗೂ ಮಗಳಿಗೂ, ಮಗನಿಗೂ ತನಗೂ ಏನೂ ಅಂತರವಿಲ್ಲ. ಈ ವಿಷಯದಲ್ಲಿ ಶಂಕೆಗೆ ಅವಕಾಶ ಕಾಣುತ್ತಿಲ್ಲ. ಆದ್ದರಿಂದ ನಮ್ಮ ಶುದ್ಧಿ ಸಿದ್ಧವಾಗುತ್ತದೆ.

04067007a ಅಭಿಷಂಗಾದಹಂ ಭೀತೋ ಮಿಥ್ಯಾಚಾರಾತ್ಪರಂತಪ|

04067007c ಸ್ನುಷಾರ್ಥಮುತ್ತರಾಂ ರಾಜನ್ಪ್ರತಿಗೃಹ್ಣಾಮಿ ತೇ ಸುತಾಂ||

ಶತ್ರುನಾಶಕ! ಆರೋಪ ಮತ್ತು ಮಿಥ್ಯಾಚಾರಕ್ಕೆ ನಾನು ಹೆದರುತ್ತೇನೆ. ರಾಜನ್! ನಿನ್ನ ಮಗಳು ಉತ್ತರೆಯನ್ನು ನಾನು ಸೊಸೆಯಾಗಿ ಸ್ವೀಕರಿಸುತ್ತೇನೆ.

04067008a ಸ್ವಸ್ರೀಯೋ ವಾಸುದೇವಸ್ಯ ಸಾಕ್ಷಾದ್ದೇವಶಿಶುರ್ಯಥಾ|

04067008c ದಯಿತಶ್ಚಕ್ರಹಸ್ತಸ್ಯ ಬಾಲ ಏವಾಸ್ತ್ರಕೋವಿದಃ||

04067009a ಅಭಿಮನ್ಯುರ್ಮಹಾಬಾಹುಃ ಪುತ್ರೋ ಮಮ ವಿಶಾಂ ಪತೇ|

04067009c ಜಾಮಾತಾ ತವ ಯುಕ್ತೋ ವೈ ಭರ್ತಾ ಚ ದುಹಿತುಸ್ತವ||

ರಾಜನ್! ನನ್ನ ಮಗ ಅಭಿಮನ್ಯುವು ಮಹಾಬಾಹು. ಸಾಕ್ಷಾತ್ ದೇವಕುಮಾರನಂತಿರುವನು. ವಾಸುದೇವನಿಗೆ ಸೋದರಳಿಯ. ಆ ಚಕ್ರಪಾಣಿಗೆ ಪ್ರಿಯನಾದವನು. ಬಾಲಕನಾಗಿಯೂ ಅಸ್ತ್ರಕೋವಿದ. ಅವನು ನಿನಗೆ ಅಳಿಯನಾಗಲು ಮತ್ತು ನಿನ್ನ ಮಗಳಿಗೆ ಪತಿಯಾಗಲು ತಕ್ಕವನು.”

04067010 ವಿರಾಟ ಉವಾಚ|

04067010a ಉಪಪನ್ನಂ ಕುರುಶ್ರೇಷ್ಠೇ ಕುಂತೀಪುತ್ರೇ ಧನಂಜಯೇ|

04067010c ಯ ಏವಂ ಧರ್ಮನಿತ್ಯಶ್ಚ ಜಾತಜ್ಞಾನಶ್ಚ ಪಾಂಡವಃ||

ವಿರಾಟನು ಹೇಳಿದನು: “ಕುರುವಂಶದಲ್ಲಿ ಶ್ರೇಷ್ಠನೂ ಕುಂತೀಪುತ್ರನೂ ಆದ ಧನಂಜಯನಿಗೆ ಈ ಮಾತು ಯೋಗ್ಯವೇ. ಈ ಪಾಂಡುಪುತ್ರನು ಧರ್ಮನಿರತ ಮತ್ತು ಜ್ಞಾನಿ.

04067011a ಯತ್ಕೃತ್ಯಂ ಮನ್ಯಸೇ ಪಾರ್ಥ ಕ್ರಿಯತಾಂ ತದನಂತರಂ|

04067011c ಸರ್ವೇ ಕಾಮಾಃ ಸಮೃದ್ಧಾ ಮೇ ಸಂಬಂಧೀ ಯಸ್ಯ ಮೇಽರ್ಜುನಃ||

ಪಾರ್ಥ! ನೀನು ಆಲೋಚಿಸುವ ಕಾರ್ಯವನ್ನು ಕೂಡಲೆ ಮಾಡು. ಅರ್ಜುನನನ್ನು ಸಂಬಂಧಿಯನ್ನಾಗಿ ಪಡೆದ ನನ್ನ ಎಲ್ಲ ಬಯಕೆಗಳೂ ಚೆನ್ನಾಗಿ ಸಿದ್ಧಿಸಿದವು.””

04067012 ವೈಶಂಪಾಯನ ಉವಾಚ|

04067012a ಏವಂ ಬ್ರುವತಿ ರಾಜೇಂದ್ರೇ ಕುಂತೀಪುತ್ರೋ ಯುಧಿಷ್ಠಿರಃ|

04067012c ಅನ್ವಜಾನಾತ್ಸ ಸಂಯೋಗಂ ಸಮಯೇ ಮತ್ಸ್ಯಪಾರ್ಥಯೋಃ||

ವೈಶಂಪಾಯನನು ಹೇಳಿದನು: “ಆ ರಾಜೇಂದ್ರನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ವಿರಾಟ-ಪಾರ್ಥರ ನಡುವೆ ಆದ ಒಪ್ಪಂದಕ್ಕೆ ಆಗಲೇ ಸಮ್ಮತಿಯಿತ್ತನು.

04067013a ತತೋ ಮಿತ್ರೇಷು ಸರ್ವೇಷು ವಾಸುದೇವೇ ಚ ಭಾರತ|

04067013c ಪ್ರೇಷಯಾಮಾಸ ಕೌಂತೇಯೋ ವಿರಾಟಶ್ಚ ಮಹೀಪತಿಃ||

ಭಾರತ! ಆಗ ಕುಂತೀಪುತ್ರ-ವಿರಾಟರಾಜರು ಎಲ್ಲ ಮಿತ್ರರಿಗೂ ವಾಸುದೇವನಿಗೂ ಆಹ್ವಾನವನ್ನು ಕಳುಹಿಸಿದರು.

04067014a ತತಸ್ತ್ರಯೋದಶೇ ವರ್ಷೇ ನಿವೃತ್ತೇ ಪಂಚ ಪಾಂಡವಾಃ|

04067014c ಉಪಪ್ಲವ್ಯೇ ವಿರಾಟಸ್ಯ ಸಮಪದ್ಯಂತ ಸರ್ವಶಃ||

ಬಳಿಕ ಹದಿಮೂರನೆಯ ವರ್ಷವು ಕಳೆಯಲು ಐವರು ಪಾಂಡವರೂ ವಿರಾಟನ ಉಪಪ್ಲವದಲ್ಲಿ ಒಟ್ಟಿಗೇ ವಾಸಮಾಡತೊಡಗಿದರು.

04067015a ತಸ್ಮಿನ್ವಸಂಶ್ಚ ಬೀಭತ್ಸುರಾನಿನಾಯ ಜನಾರ್ದನಂ|

04067015c ಆನರ್ತೇಭ್ಯೋಽಪಿ ದಾಶಾರ್ಹಾನಭಿಮನ್ಯುಂ ಚ ಪಾಂಡವಃ||

ಅಲ್ಲಿ ವಾಸಿಸುತ್ತಿರುವಾಗ ಪಾಂಡುಪುತ್ರ ಅರ್ಜುನನು ಕೃಷ್ಣನನ್ನೂ ಅನರ್ತ ದೇಶದಿಂದ ಯಾದವರನ್ನೂ ಅಭಿಮನ್ಯುವನ್ನೂ ಕರೆಯಿಸಿಕೊಂಡನು.

04067016a ಕಾಶಿರಾಜಶ್ಚ ಶೈಬ್ಯಶ್ಚ ಪ್ರೀಯಮಾಣೌ ಯುಧಿಷ್ಠಿರೇ|

04067016c ಅಕ್ಷೌಹಿಣೀಭ್ಯಾಂ ಸಹಿತಾವಾಗತೌ ಪೃಥಿವೀಪತೇ||

ರಾಜನ್! ಯುಧಿಷ್ಠಿರನಿಗೆ ಪ್ರಿಯರಾದ ಕಾಶೀರಾಜನೂ, ಶೈಬ್ಯನೂ ಅಕ್ಷೌಹಿಣೀ ಸೇನೆಯೊಡನೆ ಆಗಮಿಸಿದರು.

04067017a ಅಕ್ಷೌಹಿಣ್ಯಾ ಚ ತೇಜಸ್ವೀ ಯಜ್ಞಸೇನೋ ಮಹಾಬಲಃ|

04067017c ದ್ರೌಪದ್ಯಾಶ್ಚ ಸುತಾ ವೀರಾಃ ಶಿಖಂಡೀ ಚಾಪರಾಜಿತಃ||

ತೇಜಸ್ವಿ, ಮಹಾಬಲಶಾಲಿ ದ್ರುಪದನು ಅಕ್ಷೌಹಿಣಿಯೊಂದಿಗೆ ಬಂದನು. ದ್ರೌಪದಿಯ ವೀರ ಪುತ್ರರೂ, ಸೋಲಿಲ್ಲದ ಶಿಖಂಡಿಯೂ ಬಂದರು.

04067018a ಧೃಷ್ಟದ್ಯುಮ್ನಶ್ಚ ದುರ್ಧರ್ಷಃ ಸರ್ವಶಸ್ತ್ರಭೃತಾಂ ವರಃ|

04067018c ಸಮಸ್ತಾಕ್ಷೌಹಿಣೀಪಾಲಾ ಯಜ್ವಾನೋ ಭೂರಿದಕ್ಷಿಣಾಃ|

04067018e ಸರ್ವೇ ಶಸ್ತ್ರಾಸ್ತ್ರಸಂಪನ್ನಾಃ ಸರ್ವೇ ಶೂರಾಸ್ತನುತ್ಯಜಃ||

ಎದುರಿಸಲಾಗದ, ಎಲ್ಲ ಶಸ್ತ್ರಧಾರಿಗಳಲ್ಲಿಯೂ ಶ್ರೇಷ್ಠನಾದ, ಧೃಷ್ಟದ್ಯುಮ್ನನು ಬಂದನು. ಎಲ್ಲ ಅಕ್ಷೌಹಿಣೀಪತಿಗಳೂ, ಯಜ್ಞಮಾಡಿ ಅಪಾರ ದಕ್ಷಿಣೆ ಕೊಡುವವರೂ, ಎಲ್ಲ ಶೂರರೂ, ಯುದ್ಧದಲ್ಲಿ ದೇಹತ್ಯಾಗಮಾಡುವವರೂ ಬಂದರು.

04067019a ತಾನಾಗತಾನಭಿಪ್ರೇಕ್ಷ್ಯ ಮತ್ಸ್ಯೋ ಧರ್ಮಭೃತಾಂ ವರಃ|

04067019c ಪ್ರೀತೋಽಭವದ್ದುಹಿತರಂ ದತ್ತ್ವಾ ತಾಮಭಿಮನ್ಯವೇ||

ಧರ್ಮಧರರಲ್ಲಿ ಶ್ರೇಷ್ಠ ಮತ್ಸ್ಯರಾಜನು ಅವರೆಲ್ಲರೂ ಆಗಮಿಸಿದುದನ್ನು ನೋಡಿ ಅಭಿಮನ್ಯುವಿಗೆ ಆ ಮಗಳನ್ನು ಕೊಟ್ಟು ಸಂತುಷ್ಟನಾದನು.

04067020a ತತಃ ಪ್ರತ್ಯುಪಯಾತೇಷು ಪಾರ್ಥಿವೇಷು ತತಸ್ತತಃ|

04067020c ತತ್ರಾಗಮದ್ವಾಸುದೇವೋ ವನಮಾಲೀ ಹಲಾಯುಧಃ|

04067020e ಕೃತವರ್ಮಾ ಚ ಹಾರ್ದಿಕ್ಯೋ ಯುಯುಧಾನಶ್ಚ ಸಾತ್ಯಕಿಃ||

ಬೇರೆ ಬೇರೆ ಕಡೆಗಳಿಂದ ರಾಜರು ಆಗಮಿಸಿದ ನಂತರ ವನಮಾಲಿ ವಾಸುದೇವ, ಬಲರಾಮ, ಹಾರ್ದಿಕ್ಯ ಕೃತವರ್ಮ, ಮತ್ತು ಯುಯುಧಾನ ಸಾತ್ಯಕಿಯರು ಅಲ್ಲಿಗೆ ಬಂದರು.

04067021a ಅನಾಧೃಷ್ಟಿಸ್ತಥಾಕ್ರೂರಃ ಸಾಂಬೋ ನಿಶಠ ಏವ ಚ|

04067021c ಅಭಿಮನ್ಯುಮುಪಾದಾಯ ಸಹ ಮಾತ್ರಾ ಪರಂತಪಾಃ||

ಅನಾದೃಷ್ಟಿ, ಅಕ್ರೂರ, ಸಾಂಬ ಹಾಗೂ ನಿಶಠ - ಈ ಶತ್ರುಸಂತಾಪಕರು ಅಭಿಮನ್ಯುವನ್ನು ಅವನ ತಾಯಿಯೊಡನೆ ಕರೆದುಕೊಂಡು ಬಂದರು.

04067022a ಇಂದ್ರಸೇನಾದಯಶ್ಚೈವ ರಥೈಸ್ತೈಃ ಸುಸಮಾಹಿತೈಃ|

04067022c ಆಯಯುಃ ಸಹಿತಾಃ ಸರ್ವೇ ಪರಿಸಂವತ್ಸರೋಷಿತಾಃ||

ಒಂದು ವರ್ಷ ದ್ವಾರಕೆಯಲ್ಲಿ ವಾಸಿಸಿದ ಇಂದ್ರಸೇನ ಮೊದಲಾದವರೆಲ್ಲ ಅಲಂಕೃತ ರಥಗಳೊಡನೆ ಬಂದರು.

04067023a ದಶ ನಾಗಸಹಸ್ರಾಣಿ ಹಯಾನಾಂ ಚ ಶತಾಯುತಂ|

04067023c ರಥಾನಾಮರ್ಬುದಂ ಪೂರ್ಣಂ ನಿಖರ್ವಂ ಚ ಪದಾತಿನಾಂ||

ಹತ್ತು ಸಾವಿರ ಆನೆಗಳೂ, ಲಕ್ಷಾಂತರ ಕುದುರೆಗಳೂ, ಕೋಟಿ ಸಂಖ್ಯೆಯ ರಥಗಳೂ, ನೂರು ಕೋಟಿ ಸಂಖ್ಯೆಯು ಕಾಲಾಳುಗಳೂ ಬಂದರು.

04067024a ವೃಷ್ಣ್ಯಂಧಕಾಶ್ಚ ಬಹವೋ ಭೋಜಾಶ್ಚ ಪರಮೌಜಸಃ|

04067024c ಅನ್ವಯುರ್ವೃಷ್ಣಿಶಾರ್ದೂಲಂ ವಾಸುದೇವಂ ಮಹಾದ್ಯುತಿಂ||

ಬಹಳ ಮಂದಿ ವೃಷ್ಣಿಗಳೂ, ಅಂಧಕರೂ, ಪರಮ ಬಲಶಾಲಿಗಳಾದ ಭೋಜರೂ ವೃಷ್ಣಿಶ್ರೇಷ್ಠ ಮುಹಾತೇಜಸ್ವಿ ಕೃಷ್ಣನನ್ನು ಅನುಸರಿಸಿ ಬಂದರು.

04067025a ಪಾರಿಬರ್ಹಂ ದದೌ ಕೃಷ್ಣಃ ಪಾಂಡವಾನಾಂ ಮಹಾತ್ಮನಾಂ|

04067025c ಸ್ತ್ರಿಯೋ ರತ್ನಾನಿ ವಾಸಾಂಸಿ ಪೃಥಕ್ ಪೃಥಗನೇಕಶಃ|

04067025e ತತೋ ವಿವಾಹೋ ವಿಧಿವದ್ವವೃತೇ ಮತ್ಸ್ಯಪಾರ್ಥಯೋಃ||

ಕೃಷ್ಣನು ಮಹಾತ್ಮ ಪಾಂಡವರಿಗೆ ಬೇರೆಬೇರೆಯಾಗಿ ಅನೇಕ ಸ್ತ್ರೀಯರನ್ನೂ, ರತ್ನಗಳನ್ನೂ, ಅಸ್ತ್ರಗಳನ್ನೂ ಉಡುಗೊರೆಯನ್ನಾಗಿ ಕೊಟ್ಟನು. ಅನಂತರ ಮತ್ಸ್ಯ -ಪಾರ್ಥರ ಮನೆತನಗಳ ನಡುವೆ ಮದುವೆಯು ವಿಧಿಪೂರ್ವಕವಾಗಿ ನಡೆಯಿತು.

04067026a ತತಃ ಶಂಖಾಶ್ಚ ಭೇರ್ಯಶ್ಚ ಗೋಮುಖಾಡಂಬರಾಸ್ತಥಾ|

04067026c ಪಾರ್ಥೈಃ ಸಮ್ಯುಜ್ಯಮಾನಸ್ಯ ನೇದುರ್ಮತ್ಸ್ಯಸ್ಯ ವೇಶ್ಮನಿ||

ಪಾಂಡವರ ನಂಟುಗೊಂಡ ಮತ್ಸ್ಯರಾಜನ ಅರಮನೆಯಲ್ಲಿ ಶಂಖಗಳೂ ಭೇರಿಗಳೂ ಗೋಮುಖಾಡಂಬರ ವಾದ್ಯಗಳೂ ಮೊಳಗಿದವು.

04067027a ಉಚ್ಚಾವಚಾನ್ಮೃಗಾಂ ಜಘ್ನುರ್ಮೇಧ್ಯಾಂಶ್ಚ ಶತಶಃ ಪಶೂನ್|

04067027c ಸುರಾಮೈರೇಯಪಾನಾನಿ ಪ್ರಭೂತಾನ್ಯಭ್ಯಹಾರಯನ್||

ಬಗೆಬಗೆಯ ಜಿಂಕೆಗಳನ್ನೂ, ನೂರಾರು ತಿನ್ನಲು ಯೋಗ್ಯ ಪ್ರಾಣಿಗಳನ್ನೂ ಕೊಂದರು. ಸುರೆ ಮತ್ತು ಮೈನೇರ ಪಾನೀಯಗಳನ್ನು ಸಮೃದ್ಧವಾಗಿ ಸೇವಿಸಿದರು.

04067028a ಗಾಯನಾಖ್ಯಾನಶೀಲಾಶ್ಚ ನಟಾ ವೈತಾಲಿಕಾಸ್ತಥಾ|

04067028c ಸ್ತುವಂತಸ್ತಾನುಪಾತಿಷ್ಠನ್ಸೂತಾಶ್ಚ ಸಹ ಮಾಗಧೈಃ||

ಗಾಯನ ಆಖ್ಯಾನಗಳಲ್ಲಿ ಪರಿಣಿತ ನಟರೂ, ವೈತಾಳಿಕರೂ, ಸೂತರೂ, ಮಾಗಧರೂ ಆ ರಾಜರನ್ನು ಹೊಗಳುತ್ತಾ ಅಲ್ಲಿಗೆ ಬಂದರು.

04067029a ಸುದೇಷ್ಣಾಂ ಚ ಪುರಸ್ಕೃತ್ಯ ಮತ್ಸ್ಯಾನಾಂ ಚ ವರಸ್ತ್ರಿಯಃ|

04067029c ಆಜಗ್ಮುಶ್ಚಾರುಸರ್ವಾಂಗ್ಯಃ ಸುಮೃಷ್ಟಮಣಿಕುಂಡಲಾಃ||

ಶ್ರೇಷ್ಠ ಮತ್ತು ಸರ್ವಾಂಗಸುಂದರಿಯರಾದ ಮತ್ಸ್ಯರಾಜನ ಸ್ತ್ರೀಯರು ಮಿರುಗುವ ಮಣಿಕುಂಡಲಗಳನ್ನು ಧರಿಸಿ ಸುದೇಷ್ಣೆಯನ್ನು ಮುಂದಿಟ್ಟುಕೊಂಡು ವಿವಾಹ ಮಂಟಪಕ್ಕೆ ಬಂದರು.

04067030a ವರ್ಣೋಪಪನ್ನಾಸ್ತಾ ನಾರ್ಯೋ ರೂಪವತ್ಯಃ ಸ್ವಲಂಕೃತಾಃ|

04067030c ಸರ್ವಾಶ್ಚಾಭ್ಯಭವತ್ಕೃಷ್ಣಾ ರೂಪೇಣ ಯಶಸಾ ಶ್ರಿಯಾ||

ಚೆನ್ನಾಗಿ ಅಲಂಕರಿಸಿಕೊಂಡಿದ್ದ, ಒಳ್ಳೆಯ ಬಣ್ಣ ಮತ್ತು ರೂಪದಿಂದ ಕೂಡಿದ ಆ ಹೆಂಗಸರನೆಲ್ಲ ದ್ರೌಪದಿಯು ರೂಪ ಕೀರ್ತಿ ಕಾಂತಿಗಳಲ್ಲಿ ಮೀರಿಸಿದ್ದಳು.

04067031a ಪರಿವಾರ್ಯೋತ್ತರಾಂ ತಾಸ್ತು ರಾಜಪುತ್ರೀಮಲಂಕೃತಾಂ|

04067031c ಸುತಾಮಿವ ಮಹೇಂದ್ರಸ್ಯ ಪುರಸ್ಕೃತ್ಯೋಪತಸ್ಥಿರೇ||

ಅವರು ಮಹೇಂದ್ರನ ಮಗಳನ್ನೆಂತೋ ಅಂತೆ ಅಲಂಕೃತೆಯಾಗಿದ್ದ ರಾಜಪುತ್ರಿ ಉತ್ತರೆಯನ್ನು ಸುತ್ತುವರೆದು ಮುಂದಿಟ್ಟುಕೊಂಡು ಅಲ್ಲಿಗೆ ಬಂದರು.

04067032a ತಾಂ ಪ್ರತ್ಯಗೃಹ್ಣಾತ್ಕೌಂತೇಯಃ ಸುತಸ್ಯಾರ್ಥೇ ಧನಂಜಯಃ|

04067032c ಸೌಭದ್ರಸ್ಯಾನವದ್ಯಾಂಗೀಂ ವಿರಾಟತನಯಾಂ ತದಾ||

ಆಗ ಕುಂತೀಪುತ್ರ ಧನಂಜಯನು ಆ ಸುಂದರಿ ಉತ್ತರೆಯನ್ನು ಸುಭದ್ರೆಯ ಮಗನಿಗಾಗಿ ಸ್ವೀಕರಿಸಿದನು.

04067033a ತತ್ರಾತಿಷ್ಠನ್ಮಹಾರಾಜೋ ರೂಪಮಿಂದ್ರಸ್ಯ ಧಾರಯನ್|

04067033c ಸ್ನುಷಾಂ ತಾಂ ಪ್ರತಿಜಗ್ರಾಹ ಕುಂತೀಪುತ್ರೋ ಯುಧಿಷ್ಠಿರಃ||

ಇಂದ್ರನ ರೂಪವನ್ನು ಮೆರೆಯುತ್ತ ಅಲ್ಲಿದ್ದ ಕುಂತೀಪುತ್ರ ಮಹಾರಾಜ ಯುಧಿಷ್ಠಿರನು ಅವಳನ್ನು ಸೊಸೆಯಾಗಿ ಸ್ವೀಕರಿಸಿದನು.

04067034a ಪ್ರತಿಗೃಹ್ಯ ಚ ತಾಂ ಪಾರ್ಥಃ ಪುರಸ್ಕೃತ್ಯ ಜನಾರ್ದನಂ|

04067034c ವಿವಾಹಂ ಕಾರಯಾಮಾಸ ಸೌಭದ್ರಸ್ಯ ಮಹಾತ್ಮನಃ||

ಯುಧಿಷ್ಠಿರನು ಕೃಷ್ಣನ್ನು ಮುಂದಿಟ್ಟುಕೊಂಡು ಅವಳನ್ನು ಸ್ವೀಕರಿಸಿ ಮಹಾತ್ಮ ಅಭಿಮನ್ಯುವಿನ ಮದುವೆಯನ್ನು ನೆರವೇರಿಸಿದನು.

04067035a ತಸ್ಮೈ ಸಪ್ತ ಸಹಸ್ರಾಣಿ ಹಯಾನಾಂ ವಾತರಂಹಸಾಂ|

04067035c ದ್ವೇ ಚ ನಾಗಶತೇ ಮುಖ್ಯೇ ಪ್ರಾದಾದ್ಬಹು ಧನಂ ತದಾ||

ಆಗ ವಿರಾಟನು ಅವನಿಗೆ ವಾಯುವೇಗವುಳ್ಳ ಏಳು ಸಾವಿರ ಕುದುರೆಗಳನ್ನೂ, ಇನ್ನೂರು ಉತ್ತಮ ಆನೆಗಳನ್ನೂ, ಬಹಳ ಧನವನ್ನೂ ಕೊಟ್ಟನು.

04067036a ಕೃತೇ ವಿವಾಹೇ ತು ತದಾ ಧರ್ಮಪುತ್ರೋ ಯುಧಿಷ್ಠಿರಃ|

04067036c ಬ್ರಾಹ್ಮಣೇಭ್ಯೋ ದದೌ ವಿತ್ತಂ ಯದುಪಾಹರದಚ್ಯುತಃ||

04067037a ಗೋಸಹಸ್ರಾಣಿ ರತ್ನಾನಿ ವಸ್ತ್ರಾಣಿ ವಿವಿಧಾನಿ ಚ|

04067037c ಭೂಷಣಾನಿ ಚ ಮುಖ್ಯಾನಿ ಯಾನಾನಿ ಶಯನಾನಿ ಚ||

ವಿವಾಹದ ಬಳಿಕ ಧರ್ಮಪುತ್ರ ಯುಧಿಷ್ಠಿರನು ಕೃಷ್ಣನು ತಂದಿದ್ದ ಐಶ್ವರ್ಯವನ್ನೂ, ಸಾವಿರ ಗೋವುಗಳನ್ನೂ, ರತ್ನಗಳನ್ನೂ, ವಿವಿಧ ವಸ್ತ್ರಗಳನ್ನೂ, ಶ್ರೇಷ್ಠ ಆಭರಣಗಳನ್ನೂ, ವಾಹನ ಶಯನಗಳನ್ನೂ ಬ್ರಾಹ್ಮಣರಿಗಿತ್ತನು.

04067038a ತನ್ಮಹೋತ್ಸವಸಂಕಾಶಂ ಹೃಷ್ಟಪುಷ್ಟಜನಾವೃತಂ|

04067038c ನಗರಂ ಮತ್ಸ್ಯರಾಜಸ್ಯ ಶುಶುಭೇ ಭರತರ್ಷಭ||

ಭರತರ್ಷಭ! ಹರ್ಷಿತರೂ ಪುಷ್ಟರೂ ಆದ ಜನರಿಂದ ತುಂಬಿದ ಆ ಮತ್ಸ್ಯರಾಜನ ನಗರಿಯು ಮಹೋತ್ಸವ ಸದೃಶವಾಗಿ ತೋರಿತು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಉತ್ತರಾವಿವಾಹೇ ಸಪ್ತಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಉತ್ತರಾವಿವಾಹದಲ್ಲಿ ಅರವತ್ತೇಳನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವೇ ವೈವಾಹಿಕ ಪರ್ವ ಸಮಾಪ್ತಿ ||

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದ ಸಮಾಪ್ತಿ.

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವ ಸಮಾಪ್ತಿ ||

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದ ಸಮಾಪ್ತಿ.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೪೮/೧೦೦, ಅಧ್ಯಾಯಗಳು-೬೬೩/೧೯೯೫, ಶ್ಲೋಕಗಳು-೨೧೭೧೮/೭೩೭೮೪

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.