Udyoga Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

ವಿರಾಟ ಸಭೆಯಲ್ಲಿ ಪಾಂಡವ ಪಕ್ಷದವರ ಸಮಾಲೋಚನೆ; ಕೃಷ್ಣನಿಂದ ವಿಷಯ ಪ್ರಸ್ತಾವನೆ

ವಿವಾಹದ ನಂತರ ವಿರಾಟನ ಸಭೆಯಲ್ಲಿ ಪಾಂಡವರು, ವೃಷ್ಣಿಗಳು, ಪಾಂಚಾಲರು ಮತ್ತು ವಿರಾಟರು ಆಸೀನರಾದುದು (೧-೯). ಒಪ್ಪಂದದಂತೆ ಪಾಂಡವರು ವನವಾಸ-ಅಜ್ಞಾತವಾಸಗಳನ್ನು ಮುಗಿಸಿದ್ದಾರೆಂದೂ, ಅವರ ರಾಜ್ಯವು ಅವರಿಗೆ ದೊರೆಯಬೇಕೆಂದೂ, ಒಂದುವೇಳೆ ದುರ್ಯೋಧನನು ಅವರಿಗೆ ರಾಜ್ಯವನ್ನು ಹಿಂದಿರುಗಿಸದೇ ಇದ್ದರೆ ಈಗ ಪಾಂಡವರಿಗೆ ಸಹಾಯಕರಿದ್ದಾರೆಂದೂ, ಆದರೆ ನಿರ್ಧರಿಸುವುದರ ಮೊದಲು ಕೌರವರ ವಿಚಾರಗಳೇನೆಂದು ತಿಳಿದುಕೊಳ್ಳಲು ಅವರಲ್ಲಿಗೆ ಸಮರ್ಥ ದೂತನನ್ನು ಕಳುಹಿಸಬೇಕೆಂದು ಕೃಷ್ಣನು ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದುದು (೧೦-೨೫).

05001001 ವೈಶಂಪಾಯನ ಉವಾಚ

05001001a ಕೃತ್ವಾ ವಿವಾಹಂ ತು ಕುರುಪ್ರವೀರಾಸ್|

         ತದಾಭಿಮನ್ಯೋರ್ಮುದಿತಸ್ವಪಕ್ಷಾಃ|

05001001c ವಿಶ್ರಮ್ಯ ಚತ್ವಾರ್ಯುಷಸಃ ಪ್ರತೀತಾಃ|

         ಸಭಾಂ ವಿರಾಟಸ್ಯ ತತೋಽಭಿಜಗ್ಮುಃ||

ವೈಶಂಪಾಯನನು ಹೇಳಿದನು: “ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು.

05001002a ಸಭಾ ತು ಸಾ ಮತ್ಸ್ಯಪತೇಃ ಸಮೃದ್ಧಾ|

         ಮಣಿಪ್ರವೇಕೋತ್ತಮರತ್ನಚಿತ್ರಾ|

05001002c ನ್ಯಸ್ತಾಸನಾ ಮಾಲ್ಯವತೀ ಸುಗಂಧಾ|

         ತಾಮಭ್ಯಯುಸ್ತೇ ನರರಾಜವರ್ಯಾಃ||

ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು.

05001003a ಅಥಾಸನಾನ್ಯಾವಿಶತಾಂ ಪುರಸ್ತಾದ್|

         ಉಭೌ ವಿರಾಟದ್ರುಪದೌ ನರೇಂದ್ರೌ|

05001003c ವೃದ್ಧಶ್ಚ ಮಾನ್ಯಃ ಪೃಥಿವೀಪತೀನಾಂ|

         ಪಿತಾಮಹೋ ರಾಮಜನಾರ್ದನಾಭ್ಯಾಂ||

ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ ರಾಜರೀರ್ವರು, ಮತ್ತು ತಂದೆಯೊಂದಿಗೆ ಬಲರಾಮ ಜನಾರ್ದನರಿಬ್ಬರೂ ಕುಳಿತಿದ್ದರು.

05001004a ಪಾಂಚಾಲರಾಜಸ್ಯ ಸಮೀಪತಸ್ತು|

         ಶಿನಿಪ್ರವೀರಃ ಸಹರೌಹಿಣೇಯಃ|

05001004c ಮತ್ಸ್ಯಸ್ಯ ರಾಜ್ಞಾಸ್ತು ಸುಸಮ್ನಿಕೃಷ್ಟೌ|

         ಜನಾರ್ದನಶ್ಚೈವ ಯುಧಿಷ್ಠಿರಶ್ಚ||

05001005a ಸುತಾಶ್ಚ ಸರ್ವೇ ದ್ರುಪದಸ್ಯ ರಾಜ್ಞೋ|

         ಭೀಮಾರ್ಜುನೌ ಮಾದ್ರವತೀಸುತೌ ಚ|

05001005c ಪ್ರದ್ಯುಮ್ನಸಾಂಬೌ ಚ ಯುಧಿ ಪ್ರವೀರೌ|

         ವಿರಾಟಪುತ್ರಶ್ಚ ಸಹಾಭಿಮನ್ಯುಃ||

ಪಾಂಚಾಲನ ಸಮೀಪದಲ್ಲಿ ಶಿನಿಪ್ರವೀರನು ರೌಹಿಣೀಯನ ಸಹಿತಲೂ, ಮತ್ಸ್ಯರಾಜನ ಹತ್ತಿರ ಜನಾರ್ದನನೂ, ಯುಧಿಷ್ಠಿರನೂ, ರಾಜ ದ್ರುಪದನ ಎಲ್ಲ ಮಕ್ಕಳೂ, ಭೀಮಾರ್ಜುನರೂ, ಮಾದ್ರಿಯ ಮಕ್ಕಳೀರ್ವರೂ, ಯುದ್ಧಪ್ರವೀರ ಪ್ರದ್ಯುಮ್ನ-ಸಾಂಬರೂ, ವಿರಾಟಪುತ್ರರೊಂದಿಗೆ ಅಭಿಮನ್ಯುವೂ ಕುಳಿತಿದ್ದರು.

05001006a ಸರ್ವೇ ಚ ಶೂರಾಃ ಪಿತೃಭಿಃ ಸಮಾನಾ|

         ವೀರ್ಯೇಣ ರೂಪೇಣ ಬಲೇನ ಚೈವ|

05001006c ಉಪಾವಿಶನ್ದ್ರೌಪದೇಯಾಃ ಕುಮಾರಾಃ|

         ಸುವರ್ಣಚಿತ್ರೇಷು ವರಾಸನೇಷು||

ವೀರ್ಯ ರೂಪ ಬಲಗಳಲ್ಲಿ ತಂದೆಯಂದಿರ ಸಮಾನರಾಗಿದ್ದ ಶೂರರಾದ ಎಲ್ಲ ದ್ರೌಪದೇಯ ಕುಮಾರರೂ ಬಣ್ಣಬಣ್ಣದ ಸುವರ್ಣಖಚಿತ ಶ್ರೇಷ್ಠ ಆಸನಗಳಲ್ಲಿ ಕುಳಿತಿದ್ದರು.

05001007a ತಥೋಪವಿಷ್ಟೇಷು ಮಹಾರಥೇಷು|

         ವಿಭ್ರಾಜಮಾನಾಂಬರಭೂಷಣೇಷು|

05001007c ರರಾಜ ಸಾ ರಾಜವತೀ ಸಮೃದ್ಧಾ|

         ಗ್ರಹೈರಿವ ದ್ಯೌರ್ವಿಮಲೈರುಪೇತಾ||

ವಸ್ತ್ರಭೂಷಣಗಳಿಂದ ವಿಭ್ರಾಜಮಾನರಾಗಿ ಅಲ್ಲಿ ಕುಳಿತಿದ್ದ ಮಹಾರಥಿಗಳಿಂದ ಸಮೃದ್ಧ ಆ ರಾಜಸಭೆಯು ವಿಮಲ ಆಕಾಶದಲ್ಲಿ ಕಾಣುವ ಗ್ರಹಗಳಂತೆ ತೋರುತ್ತಿತ್ತು.

05001008a ತತಃ ಕಥಾಸ್ತೇ ಸಮವಾಯಯುಕ್ತಾಃ|

         ಕೃತ್ವಾ ವಿಚಿತ್ರಾಃ ಪುರುಷಪ್ರವೀರಾಃ|

05001008c ತಸ್ಥುರ್ಮುಹೂರ್ತಂ ಪರಿಚಿಂತಯಂತಃ|

         ಕೃಷ್ಣಂ ನೃಪಾಸ್ತೇ ಸಮುದೀಕ್ಷಮಾಣಾಃ||

ಆಗ ಪರಸ್ಪರರಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಿ ಆ ಪುರುಷಪ್ರವೀರರು ಒಂದು ಕ್ಷಣ ಪರಿಚಿಂತಿಸುತ್ತಾ ಕೃಷ್ಣನನ್ನೇ ನೋಡುತ್ತಾ ಸುಮ್ಮನಾದರು.

05001009a ಕಥಾಂತಮಾಸಾದ್ಯ ಚ ಮಾಧವೇನ|

         ಸಂಘಟ್ಟಿತಾಃ ಪಾಂಡವಕಾರ್ಯಹೇತೋಃ|

05001009c ತೇ ರಾಜಸಿಂಹಾಃ ಸಹಿತಾ ಹ್ಯಶೃಣ್ವನ್|

         ವಾಕ್ಯಂ ಮಹಾರ್ಥಂ ಚ ಮಹೋದ|ಯಂ ಚ|

ಅವರ ಮಾತುಗಳ ಕೊನೆಯಲ್ಲಿ ಮಾಧವನು ಪಾಂಡವರ ವಿಷಯದ ಕುರಿತು ಅವರ ಮನಸ್ಸನ್ನು ಸೆಳೆದನು. ಆ ರಾಜಸಿಂಹರು ಒಟ್ಟಿಗೇ ಅವನ ಮಹಾರ್ಥವುಳ್ಳ ಮಹೋದಯಕಾರಕ ವಾಕ್ಯಗಳನ್ನು ಕೇಳಿದರು.

05001010 ಕೃಷ್ಣ ಉವಾಚ|

05001010a ಸರ್ವೈರ್ಭವದ್ಭಿರ್ವಿದಿತಂ ಯಥಾಯಂ|

         ಯುಧಿಷ್ಠಿರಃ ಸೌಬಲೇನಾಕ್ಷವತ್ಯಾಂ|

05001010c ಜಿತೋ ನಿಕೃತ್ಯಾಪಹೃತಂ ಚ ರಾಜ್ಯಂ|

         ಪುನಃ ಪ್ರವಾಸೇ ಸಮಯಃ ಕೃತಶ್ಚ||

ಕೃಷ್ಣನು ಹೇಳಿದನು: “ಸೌಬಲನಿಂದ ದಾಳದಾಟದಲ್ಲಿ ಗೆಲ್ಲಲ್ಪಟ್ಟು ಮೋಸದಿಂದ ಹೇಗೆ ಯುಧಿಷ್ಠಿರನ ರಾಜ್ಯವು ಅಪಹರಿಸಲ್ಪಟ್ಟಿತು ಮತ್ತು ನಂತರದ ಒಪ್ಪಂದದಂತೆ ಅವರು ಹೊರಗೆ ವಾಸಿಸಿದ್ದುದನ್ನೂ ನೀವೆಲ್ಲರೂ ಚೆನ್ನಾಗಿ ತಿಳಿದಿದ್ದೀರಿ.

05001011a ಶಕ್ತೈರ್ವಿಜೇತುಂ ತರಸಾ ಮಹೀಂ ಚ|

         ಸತ್ಯೇ ಸ್ಥಿತೈಸ್ತಚ್ಚರಿತಂ ಯಥಾವತ್|

05001011c ಪಾಂಡೋಃ ಸುತೈಸ್ತದ್ವ್ರತಮುಗ್ರರೂಪಂ|

         ವರ್ಷಾಣಿ ಷಟ್ಸಪ್ತ ಚ ಭಾರತಾಗ್ರ್ಯೈಃ||

ಕ್ಷಣದಲ್ಲಿಯೇ ಮಹಿಯನ್ನು ಗೆಲ್ಲಲು ಶಕ್ತರಾಗಿದ್ದರೂ ಸತ್ಯದಲ್ಲಿ ಸ್ಥಿತರಾದ ಭಾರತಾಗ್ರ ಪಾಂಡುಸುತರು ಯಥಾವತ್ತಾಗಿ ನಡೆದುಕೊಂಡು ಹದಿಮೂರು ವರ್ಷಗಳ ಆ ಉಗ್ರರೂಪೀ ವ್ರತವನ್ನು ಪೂರೈಸಿದ್ದಾರೆ.

05001012a ತ್ರಯೋದಶಶ್ಚೈವ ಸುದುಸ್ತರೋಽಯಂ|

         ಅಜ್ಞಾಯಮಾನೈರ್ಭವತಾಂ ಸಮೀಪೇ|

05001012c ಕ್ಲೇಶಾನಸಹ್ಯಾಂಶ್ಚ ತಿತಿಕ್ಷಮಾಣೈಃ|

         ಯಥೋಷಿತಂ ತದ್ವಿದಿತಂ ಚ ಸರ್ವಂ||

ಸುದುಸ್ತರವಾಗಿದ್ದ ಈ ಹದಿಮೂರನೆಯ ವರ್ಷವನ್ನೂ ಕೂಡ ನಿಮ್ಮ ಸಮೀಪದಲ್ಲಿಯೇ ಯಾರಿಗೂ ತಿಳಿಯದಂತೆ ಎಲ್ಲ ರೀತಿಯ ಕ್ಲೇಶಗಳನ್ನು ಸಹಿಸಿಕೊಂಡು ಹೇಗೆ ಕಳೆದರು ಎನ್ನುವುದೂ ನಿಮಗೆಲ್ಲರಿಗೆ ತಿಳಿದಿದೆ.

05001013a ಏವಂ ಗತೇ ಧರ್ಮಸುತಸ್ಯ ರಾಜ್ಞೋ|

         ದುರ್ಯೋಧನಸ್ಯಾಪಿ ಚ ಯದ್ಧಿತಂ ಸ್ಯಾತ್|

05001013c ತಚ್ಚಿಂತಯಧ್ವಂ ಕುರುಪಾಂಡವಾನಾಂ|

         ಧರ್ಮ್ಯಂ ಚ ಯುಕ್ತಂ ಚ ಯಶಸ್ಕರಂ ಚ||

ಹೀಗಿರಲು ರಾಜ ಧರ್ಮಸುತನಿಗೂ ದುರ್ಯೋಧನನಿಗೂ ಇಬ್ಬರಿಗೂ ಒಳ್ಳೆಯದಾಗುವ ಹಾಗೆ ಕುರುಪಾಂಡವರಿಗೆ ಧರ್ಮವೂ, ಯುಕ್ತವೂ, ಯಶಸ್ಕರವೂ ಆದುದು ಏನು ಎಂದು ಯೋಚಿಸಬೇಕಾಗಿದೆ.

05001014a ಅಧರ್ಮಯುಕ್ತಂ ಚ ನ ಕಾಮಯೇತ|

         ರಾಜ್ಯಂ ಸುರಾಣಾಮಪಿ ಧರ್ಮರಾಜಃ|

05001014c ಧರ್ಮಾರ್ಥಯುಕ್ತಂ ಚ ಮಹೀಪತಿತ್ವಂ|

         ಗ್ರಾಮೇಽಪಿ ಕಸ್ಮಿಂಶ್ಚಿದಯಂ ಬುಭೂಷೇತ್||

ಧರ್ಮರಾಜನು ಸುರರ ರಾಜ್ಯವೇ ಆದರೂ ಅಧರ್ಮಯುಕ್ತವಾದುದನ್ನು ಬಯಸುವುದಿಲ್ಲ. ಆದರೆ ಒಂದೇ ಗ್ರಾಮದ ಒಡೆತನವನ್ನಾದರೂ, ಅದು ಧರ್ಮಾರ್ಥಯುಕ್ತವಾಗಿದ್ದರೆ, ಅವನು ಸ್ವೀಕರಿಸುತ್ತಾನೆ.

05001015a ಪಿತ್ರ್ಯಂ ಹಿ ರಾಜ್ಯಂ ವಿದಿತಂ ನೃಪಾಣಾಂ|

         ಯಥಾಪಕೃಷ್ಟಂ ಧೃತರಾಷ್ಟ್ರಪುತ್ರೈಃ|

05001015c ಮಿಥ್ಯೋಪಚಾರೇಣ ತಥಾಪ್ಯನೇನ|

         ಕೃಚ್ಚ್ರಂ ಮಹತ್ಪ್ರಾಪ್ತಮಸಹ್ಯರೂಪಂ||

ಧೃತರಾಷ್ಟ್ರನ ಮಕ್ಕಳು ಇವನ ಪಿತ್ರಾರ್ಜಿತ ರಾಜ್ಯವನ್ನು ಹೇಗೆ ಸುಳ್ಳುಕೆಲಸವನ್ನು ಮಾಡಿ ಅಪಹರಿಸಿದರು ಮತ್ತು ಇವನು ಹೇಗೆ ಸಹಿಸಲಸಾಧ್ಯ ಮಹಾ ಕಷ್ಟಗಳನ್ನು ಅನುಭವಿಸಿದನು ಎನ್ನುವುದು ನೃಪರೆಲ್ಲರಿಗೂ ತಿಳಿದೇ ಇದೆ.

05001016a ನ ಚಾಪಿ ಪಾರ್ಥೋ ವಿಜಿತೋ ರಣೇ ತೈಃ|

         ಸ್ವತೇಜಸಾ ಧೃತರಾಷ್ಟ್ರಸ್ಯ ಪುತ್ರೈಃ|

05001016c ತಥಾಪಿ ರಾಜಾ ಸಹಿತಃ ಸುಹೃದ್ಭಿಃ|

         ಅಭೀಪ್ಸತೇಽನಾಮಯಮೇವ ತೇಷಾಂ||

ಧೃತರಾಷ್ಟ್ರನ ಮಕ್ಕಳಿಗೆ ತಮ್ಮದೇ ಬಲದಿಂದ ಪಾರ್ಥನನ್ನು ರಣದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಕೂಡ ಹಿತೈಷಿಗಳೊಂದಿಗೆ ರಾಜನು ಅವರಿಗೆ ಒಳ್ಳೆಯದಾಗುವುದರ ಹೊರತಾಗಿ ಏನನ್ನೂ ಬಯಸುವುದಿಲ್ಲ.

05001017a ಯತ್ತತ್ಸ್ವಯಂ ಪಾಂಡುಸುತೈರ್ವಿಜಿತ್ಯ|

         ಸಮಾಹೃತಂ ಭೂಮಿಪತೀನ್ನಿಪೀಡ್ಯ|

05001017c ತತ್ಪ್ರಾರ್ಥಯಂತೇ ಪುರುಷಪ್ರವೀರಾಃ|

         ಕುಂತೀಸುತಾ ಮಾದ್ರವತೀಸುತೌ ಚ||

ಸ್ವಪ್ರಯತ್ನದಿಂದ ಭೂಮಿಪತಿಗಳನ್ನು ಸೋಲಿಸಿ ಗೆದ್ದು ಒಟ್ಟುಗೂಡಿಸಿದುದನ್ನೇ ಈ ಪುರುಷಪ್ರವೀರ, ಪಾಂಡುಸುತರೂ, ಕುಂತೀಸುತರೂ, ಮಾದ್ರವತೀಸುತರೀರ್ವರೂ ಕೇಳುತ್ತಿದ್ದಾರೆ.

05001018a ಬಾಲಾಸ್ತ್ವಿಮೇ ತೈರ್ವಿವಿಧೈರುಪಾಯೈಃ|

         ಸಂಪ್ರಾರ್ಥಿತಾ ಹಂತುಮಮಿತ್ರಸಾಹಾಃ|

05001018c ರಾಜ್ಯಂ ಜಿಹೀರ್ಷದ್ಭಿರಸದ್ಭಿರುಗ್ರೈಃ|

         ಸರ್ವಂ ಚ ತದ್ವೋ ವಿದಿತಂ ಯಥಾವತ್||

ಇವರು ಬಾಲಕರಾಗಿರುವಾಗ ಕೂಡ ಇವರ ಅ ಅಮಿತ್ರರು ಹೇಗೆ ರಾಜ್ಯವನ್ನು ತಮ್ಮದನ್ನಾಗಿಯೇ ಮಾಡಿಕೊಳ್ಳಲು ವಿವಿಧ ಉಪಾಯಗಳಿಂದ ಇವರನ್ನು ಕೊಲ್ಲಲು ಪ್ರಯತ್ನಿಸಿದರು ಎನ್ನುವುದನ್ನು ಯಥಾವತ್ತಾಗಿ ನೀವೆಲ್ಲರೂ ತಿಳಿದಿದ್ದೀರಿ.

05001019a ತೇಷಾಂ ಚ ಲೋಭಂ ಪ್ರಸಮೀಕ್ಷ್ಯ ವೃದ್ಧಂ|

         ಧರ್ಮಾತ್ಮತಾಂ ಚಾಪಿ ಯುಧಿಷ್ಠಿರಸ್ಯ|

05001019c ಸಂಬಂಧಿತಾಂ ಚಾಪಿ ಸಮೀಕ್ಷ್ಯ ತೇಷಾಂ|

         ಮತಿಂ ಕುರುಧ್ವಂ ಸಹಿತಾಃ ಪೃಥಕ್ಚ||

ಬೆಳೆದಿರುವ ಅವರ ಲೋಭವನ್ನು ಮತ್ತು ಯುಧಿಷ್ಠಿರನ ಧರ್ಮಾತ್ಮತೆಯನ್ನೂ ನೋಡಿ, ಅವರೀರ್ವರ ನಡುವೆಯಿರುವ ಸಂಬಂಧವನ್ನೂ ನೋಡಿ ನೀವೆಲ್ಲರೂ ಒಂದಾಗಿ ಮತ್ತು ಪ್ರತ್ಯೇಕವಾಗಿ ವಿಚಾರಮಾಡಬೇಕು.

05001020a ಇಮೇ ಚ ಸತ್ಯೇಽಭಿರತಾಃ ಸದೈವ|

         ತಂ ಪಾರಯಿತ್ವಾ ಸಮಯಂ ಯಥಾವತ್|

05001020c ಅತೋಽನ್ಯಥಾ ತೈರುಪಚರ್ಯಮಾಣಾ|

         ಹನ್ಯುಃ ಸಮೇತಾನ್ಧೃತರಾಷ್ಟ್ರಪುತ್ರಾನ್||

ಸದಾ ಸತ್ಯನಿರತರಾಗಿರುವ ಇವರು ಆ ಒಪ್ಪಂದವನ್ನು ಯಥಾವತ್ತಾಗಿ ಪಾಲಿಸಿದ್ದಾರೆ. ಈಗ ಧೃತರಾಷ್ಟ್ರ ಪುತ್ರರು ಅವರೊಂದಿಗೆ ಅನ್ಯಥಾ ನಡೆದುಕೊಂಡರೆ ಅವರನ್ನು ಅವರ ಬೆಂಬಲಿಗರೊಂದಿಗೆ ಇವರು ಕೊಲ್ಲುತ್ತಾರೆ.

05001021a ತೈರ್ವಿಪ್ರಕಾರಂ ಚ ನಿಶಮ್ಯ ರಾಜ್ಞಾಃ|

         ಸುಹೃಜ್ಜನಾಸ್ತಾನ್ಪರಿವಾರಯೇಯುಃ|

05001021c ಯುದ್ಧೇನ ಬಾಧೇಯುರಿಮಾಂಸ್ತಥೈವ|

         ತೈರ್ವಧ್ಯಮಾನಾ ಯುಧಿ ತಾಂಶ್ಚ ಹನ್ಯುಃ||

ಈಗ ರಾಜನಿಂದ ಇವರಿಗೆ ತಪ್ಪು ನಡೆಯಿತೆಂದರೆ ಇವರನ್ನು ಸುತ್ತುವರೆದಿರುವ ಸ್ನೇಹಿತರಿದ್ದಾರೆ. ಯುದ್ಧದಲ್ಲಿ ತಾವು ಸತ್ತರೂ ಅವರ ಶತ್ರುಗಳೊಂದಿಗೆ ಹೋರಾಡುವವರು ಅವರಿಗೆ ಈಗ ಇದ್ದಾರೆ.

05001022a ತಥಾಪಿ ನೇಮೇಽಲ್ಪತಯಾ ಸಮರ್ಥಾಃ|

         ತೇಷಾಂ ಜಯಾಯೇತಿ ಭವೇನ್ಮತಂ ವಃ|

05001022c ಸಮೇತ್ಯ ಸರ್ವೇ ಸಹಿತಾಃ ಸುಹೃದ್ಭಿಃ|

         ತೇಷಾಂ ವಿನಾಶಾಯ ಯತೇಯುರೇವ||

ಅಂಥವರು ಸ್ವಲ್ಪವೇ ಮಂದಿ ಇದ್ದು ಇವರಿಗೆ ಜಯವನ್ನು ಪಡೆಯುವ ಸಮರ್ಥರಿಲ್ಲರೆಂದು ನೀವು ತಿಳಿದರೂ ಕೂಡ ಇವರ ಸುಹೃದಯಿಗಳಾದ ಎಲ್ಲರೂ ಸೇರಿ ಒಟ್ಟಿಗೇ ಅವರ ವಿನಾಶಕ್ಕೆ ಯತ್ನಿಸಬಹುದು.

05001023a ದುರ್ಯೋಧನಸ್ಯಾಪಿ ಮತಂ ಯಥಾವನ್|

         ನ ಜ್ಞಾಯತೇ ಕಿಂ ನು ಕರಿಷ್ಯತೀತಿ|

05001023c ಅಜ್ಞಾಯಮಾನೇ ಚ ಮತೇ ಪರಸ್ಯ|

         ಕಿಂ ಸ್ಯಾತ್ಸಮಾರಭ್ಯತಮಂ ಮತಂ ವಃ||

ದುರ್ಯೋಧನ ವಿಚಾರವೇನು ಮತ್ತು ಅವನು ಏನು ಮಾಡುವವನಿದ್ದಾನೆ ಎನ್ನುವುದು ನಮಗೆ ತಿಳಿದಿಲ್ಲ. ಇನ್ನೊಂದು ಪಕ್ಷದವರ ವಿಚಾರವೇನೆಂದು ತಿಳಿಯದೇ ನಾವಾದರೂ ಮಾಡಬೇಕಾದುದರಲ್ಲಿ ಒಳ್ಳೆಯದು ಏನು ಎಂದು ಹೇಗೆ ತಾನೇ ನಿರ್ಧರಿಸಬಹುದು?

05001024a ತಸ್ಮಾದಿತೋ ಗಚ್ಚತು ಧರ್ಮಶೀಲಃ|

         ಶುಚಿಃ ಕುಲೀನಃ ಪುರುಷೋಽಪ್ರಮತ್ತಃ|

05001024c ದೂತಃ ಸಮರ್ಥಃ ಪ್ರಶಮಾಯ ತೇಷಾಂ|

         ರಾಜ್ಯಾರ್ಧದಾನಾಯ ಯುಧಿಷ್ಠಿರಸ್ಯ||

ಆದುದರಿಂದ ಅವರ ಕಡೆ ಯುಧಿಷ್ಠಿರನ ಅರ್ಧರಾಜ್ಯವನ್ನು ನೀಡಬೇಕೆಂದು ಸಮರ್ಥ ದೂತನನ್ನು ಧರ್ಮಶೀಲ, ಶುಚಿ, ಕುಲೀನ, ಅಪ್ರಮತ್ತ ಪುರುಷನನ್ನು ಕಳುಹಿಸಬೇಕು.”

05001025a ನಿಶಮ್ಯ ವಾಕ್ಯಂ ತು ಜನಾರ್ದನಸ್ಯ|

         ಧರ್ಮಾರ್ಥಯುಕ್ತಂ ಮಧುರಂ ಸಮಂ ಚ|

05001025c ಸಮಾದದೇ ವಾಕ್ಯಮಥಾಗ್ರಜೋಽಸ್ಯ|

         ಸಂಪೂಜ್ಯ ವಾಕ್ಯಂ ತದತೀವ ರಾಜನ್||

ರಾಜನ್! ಜನಾರ್ದನನ ಆ ಮಧುರ, ಸಮ, ಧರ್ಮಾರ್ಥಯುಕ್ತ ಮಾತನ್ನು ಕೇಳಿ ಅವನ ಅಣ್ಣನು ಅವನ ಮತವನ್ನು ಗೌರವಿಸಿ ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಕೃಷ್ಣವಾಕ್ಯೇ ಪ್ರಥಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ಒಂದನೆಯ ಅಧ್ಯಾಯವು|

Image result for flowers against white background

Comments are closed.