Udyoga Parva: Chapter 8

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

ಶಲ್ಯನು ಮೋಸಗೊಂಡು ದುರ್ಯೋಧನನ ಪಕ್ಷವನ್ನು ಸೇರಿದುದು

ಮಹಾಸೇನೆಯೊಂದಿಗೆ ಪಾಂಡವರನ್ನು ಸೇರಲು ಬರುತ್ತಿದ್ದ ಶಲ್ಯನನ್ನು ದುರ್ಯೋಧನನು ಅವನ ಮಾರ್ಗದಲ್ಲಿ ಸ್ವಲಂಕೃತ ಸಭೆಗಳನ್ನು ರಚಿಸಿ, ಸತ್ಕರಿಸಿ ಸಂತೋಷಗೊಳಿಸಿ ಯುದ್ಧದಲ್ಲಿ ಅವನ ಸಹಾಯವನ್ನು ವರವಾಗಿ ಪಡೆದುದು (೧-೧೪). ಅನಂತರ ಶಲ್ಯನು ಯುಧಿಷ್ಠಿರನಿಗೆ ನಡೆದುದೆಲ್ಲವನ್ನೂ ತಿಳಿಸಿದುದು (೧೫-೨೪). ಶಲ್ಯನು ಕರ್ಣಾರ್ಜುನರ ದ್ವಂದ್ವ ರಥಯುದ್ಧದಲ್ಲಿ ಕರ್ಣನ ಸಾರಥಿಯಾಗಬೇಕಾಗಿ ಬಂದಾಗ ಅವನ ತೇಜೋವಧೆಯನ್ನು ಮಾಡಿ ತನಗೆ ಸಹಾಯಮಾಡಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳುವುದು (೨೫-೨೭). ಹಾಗೆಯೇ ಮಾಡುತ್ತೇನೆಂದು ಹೇಳಿ ಶಲ್ಯನು ಇಂದ್ರನಿಗೂ ಕಷ್ಟವೊದಗಿ ಬಂದರೂ ನಂತರ ವಿಜಯವನ್ನು ಪಡೆದಂತೆ ಯುಧಿಷ್ಠಿರನೂ ವಿಜಯವನ್ನು ಪಡೆಯುವನೆಂದು ಹೇಳುವುದು (೨೮-೩೭).

05008001 ವೈಶಂಪಾಯನ ಉವಾಚ|

05008001a ಶಲ್ಯಃ ಶ್ರುತ್ವಾ ತು ದೂತಾನಾಂ ಸೈನ್ಯೇನ ಮಹತಾ ವೃತಃ|

05008001c ಅಭ್ಯಯಾತ್ಪಾಂಡವಾನ್ರಾಜನ್ಸಹ ಪುತ್ರೈರ್ಮಹಾರಥೈಃ||

ವೈಶಂಪಾಯನನು ಹೇಳಿದನು: “ರಾಜನ್! ದೂತರಿಂದ ಕೇಳಿದ ಶಲ್ಯನು ಮಹಾರಥ ಪುತ್ರರೊಂದಿಗೆ ಪಾಂಡವರಲ್ಲಿಗೆ ಬರುತ್ತಿದ್ದನು.

05008002a ತಸ್ಯ ಸೇನಾನಿವೇಶೋಽಭೂದಧ್ಯರ್ಧಮಿವ ಯೋಜನಂ|

05008002c ತಥಾ ಹಿ ಬಹುಲಾಂ ಸೇನಾಂ ಸ ಬಿಭರ್ತಿ ನರರ್ಷಭಃ||

ಅವನ ಸೇನೆಯ ಡೇರೆಯು ಅರ್ಧ ಯೋಜನೆಯಷ್ಟು ಜಾಗವನ್ನು ಆವರಿಸಿತ್ತು. ಅಷ್ಟೊಂದು ದೊಡ್ಡದಾಗಿತ್ತು ಆ ನರರ್ಷಭನ ಸೇನೆ.

05008003a ವಿಚಿತ್ರಕವಚಾಃ ಶೂರಾ ವಿಚಿತ್ರಧ್ವಜಕಾರ್ಮುಕಾಃ|

05008003c ವಿಚಿತ್ರಾಭರಣಾಃ ಸರ್ವೇ ವಿಚಿತ್ರರಥವಾಹನಾಃ||

ಅವರೆಲ್ಲ ಶೂರರೂ ವಿಚಿತ್ರಕವಚಗಳನ್ನು ಧರಿಸಿದವರೂ, ವಿಚಿತ್ರ ಧ್ವಜ-ಬಿಲ್ಲುಗಳನ್ನು ಹೊಂದಿದವರೂ, ವಿಚಿತ್ರಾಭರಣಗಳನ್ನು ಧರಿಸಿದವರೂ, ವಿಚಿತ್ರ ರಥವಾಹನರೂ ಆಗಿದ್ದರು.

05008004a ಸ್ವದೇಶವೇಷಾಭರಣಾ ವೀರಾಃ ಶತಸಹಸ್ರಶಃ|

05008004c ತಸ್ಯ ಸೇನಾಪ್ರಣೇತಾರೋ ಬಭೂವುಃ ಕ್ಷತ್ರಿಯರ್ಷಭಾಃ||

ಸ್ವದೇಶದ ವೇಷಾಭರಣಗಳನ್ನು ಧರಿಸಿದ ನೂರಾರು ಸಾವಿರಾರು ಕ್ಷತ್ರಿಯರ್ಷಭ ವೀರರು ಅವನ ಸೇನೆಯ ಮುಖಂಡರಾಗಿದ್ದರು.

05008005a ವ್ಯಥಯನ್ನಿವ ಭೂತಾನಿ ಕಂಪಯನ್ನಿವ ಮೇದಿನೀಂ|

05008005c ಶನೈರ್ವಿಶ್ರಾಮಯನ್ಸೇನಾಂ ಸ ಯಯೌ ಯೇನ ಪಾಂಡವಃ||

ಅವನ ಸೇನೆಯು ನಿಧಾನವಾಗಿ ಅಲ್ಲಲ್ಲಿ ವಿಶ್ರಮಿಸುತ್ತಾ ಪಾಂಡವರಿರುವಲ್ಲಿಗೆ ಬರುತ್ತಿರಲು ಭೂಮಿಯ ಮೇಲಿರುವವುಗಳು ವ್ಯಥಿತಗೊಂಡವು.

05008006a ತತೋ ದುರ್ಯೋಧನಃ ಶ್ರುತ್ವಾ ಮಹಾಸೇನಂ ಮಹಾರಥಂ|

05008006c ಉಪಾಯಾಂತಮಭಿದ್ರುತ್ಯ ಸ್ವಯಮಾನರ್ಚ ಭಾರತ||

ಭಾರತ! ಆಗ ಮಹಾಸೇನ ಮಹಾರಥನು ಬರುತ್ತಿದ್ದಾನೆಂದು ಕೇಳಿದ ದುರ್ಯೋಧನನು ಅವನನ್ನು ಸ್ವಯಂ ಎದಿರುಗೊಂಡು ಗೌರವಿಸಿದನು.

05008007a ಕಾರಯಾಮಾಸ ಪೂಜಾರ್ಥಂ ತಸ್ಯ ದುರ್ಯೋಧನಃ ಸಭಾಃ|

05008007c ರಮಣೀಯೇಷು ದೇಶೇಷು ರತ್ನಚಿತ್ರಾಃ ಸ್ವಲಂಕೃತಾಃ||

ಅವನನ್ನು ಪೂಜಿಸಲು ದುರ್ಯೋಧನನು ರಮಣೀಯ ಪ್ರದೇಶಗಳಲ್ಲಿ ರತ್ನ-ಚಿತ್ರಗಳಿಂದ ಸ್ವಲಂಕೃತ ಸಭೆಗಳನ್ನು ನಿರ್ಮಿಸಿದನು.

05008008a ಸ ತಾಃ ಸಭಾಃ ಸಮಾಸಾದ್ಯ ಪೂಜ್ಯಮಾನೋ ಯಥಾಮರಃ|

05008008c ದುರ್ಯೋಧನಸ್ಯ ಸಚಿವೈರ್ದೇಶೇ ದೇಶೇ ಯಥಾರ್ಹತಃ|

05008008e ಆಜಗಾಮ ಸಭಾಮನ್ಯಾಂ ದೇವಾವಸಥವರ್ಚಸಂ||

ದೇಶ ದೇಶಗಳಲ್ಲಿ ಆ ಸಭೆಗಳಿಗೆ ಹೋಗಿ ಅಮರನಂತೆ ದುರ್ಯೋಧನನ ಸಚಿವರಿಂದ ಯಥಾರ್ಹನಾಗಿ ಪೂಜೆಗೊಂಡು, ದೇವತೆಗಳ ವಾಸದಂತೆ ಶೋಭಿಸುವ ಇನ್ನೊಂದು ಸಭೆಗೆ ಬಂದನು.

05008009a ಸ ತತ್ರ ವಿಷಯೈರ್ಯುಕ್ತಃ ಕಲ್ಯಾಣೈರತಿಮಾನುಷೈಃ|

05008009c ಮೇನೇಽಭ್ಯಧಿಕಮಾತ್ಮಾನಮವಮೇನೇ ಪುರಂದರಂ||

ಅಲ್ಲಿ ಯುಕ್ತ ವಿಷಯಗಳಿಂದ ಅತಿಮಾನುಷ ಸುಖಭೋಗಗಳಿಂದ ಪೂಜಿಸಲ್ಪಟ್ಟು ಅವನು ತಾನು ಪುರಂದರನಿಗಿಂತ ಅಧಿಕನೇನೋ ಎಂದು ಭಾವಿಸಿದನು.

05008010a ಪಪ್ರಚ್ಚ ಸ ತತಃ ಪ್ರೇಷ್ಯಾನ್ಪ್ರಹೃಷ್ಟಃ ಕ್ಷತ್ರಿಯರ್ಷಭಃ|

05008010c ಯುಧಿಷ್ಠಿರಸ್ಯ ಪುರುಷಾಃ ಕೇ ನು ಚಕ್ರುಃ ಸಭಾ ಇಮಾಃ|

05008010e ಆನೀಯಂತಾಂ ಸಭಾಕಾರಾಃ ಪ್ರದೇಯಾರ್ಹಾ ಹಿ ಮೇ ಮತಾಃ||

ಆ ಕ್ಷತ್ರಿಯರ್ಷಭನು ಸಂತೋಷಗೊಂಡು ತನ್ನ ಸೇವಕರನ್ನು ಕೇಳಿದನು: “ಈ ಸಭೆಗಳನ್ನು ನಿರ್ಮಿಸಿದ ಯುಧಿಷ್ಠಿರನ ಜನರು ಎಲ್ಲಿದ್ದಾರೆ? ಈ ಸಭಾಕಾರರನ್ನು ನನ್ನೆದುರಿಗೆ ಕರೆದುಕೊಂಡು ಬನ್ನಿ.”

05008011a ಗೂಢೋ ದುರ್ಯೋಧನಸ್ತತ್ರ ದರ್ಶಯಾಮಾಸ ಮಾತುಲಂ|

05008011c ತಂ ದೃಷ್ಟ್ವಾ ಮದ್ರರಾಜಸ್ತು ಜ್ಞಾತ್ವಾ ಯತ್ನಂ ಚ ತಸ್ಯ ತಂ|

05008011e ಪರಿಷ್ವಜ್ಯಾಬ್ರವೀತ್ಪ್ರೀತ ಇಷ್ಟೋಽರ್ಥೋ ಗೃಹ್ಯತಾಮಿತಿ||

ಆಗ ಅಡಗಿಕೊಂಡಿದ್ದ ದುರ್ಯೋಧನನು ಮಾವನಿಗೆ ಕಾಣಿಸಿಕೊಂಡನು. ಅವನನ್ನು ನೋಡಿ ಇದು ಅವನ ಪ್ರಯತ್ನವೆಂದು ತಿಳಿದ ಮದ್ರರಾಜನು ಅವನನ್ನು ಆಲಂಗಿಸಿ “ನಿನಗಿಷ್ಟವಾದುದನ್ನು ಕೇಳಿ ಪಡೆದುಕೋ!” ಎಂದು ಹೇಳಿದನು.

05008012 ದುರ್ಯೋಧನ ಉವಾಚ|

05008012a ಸತ್ಯವಾಗ್ಭವ ಕಲ್ಯಾಣ ವರೋ ವೈ ಮಮ ದೀಯತಾಂ|

05008012c ಸರ್ವಸೇನಾಪ್ರಣೇತಾ ಮೇ ಭವಾನ್ ಭವಿತುಮರ್ಹತಿ||

ದುರ್ಯೋಧನನು ಹೇಳಿದನು: “ಕಲ್ಯಾಣ! ಸತ್ಯವಾಗ್ಮಿಯಾಗು. ನನಗೆ ವರವನ್ನು ನೀಡುವವನಾಗು. ನೀನು ನನ್ನ ಸರ್ವ ಸೇನೆಯ ನಾಯಕನಾಗಬೇಕು.””

05008013 ವೈಶಂಪಾಯನ ಉವಾಚ|

05008013a ಕೃತಮಿತ್ಯಬ್ರವೀಚ್ಚಲ್ಯಃ ಕಿಮನ್ಯತ್ಕ್ರಿಯತಾಮಿತಿ|

05008013c ಕೃತಮಿತ್ಯೇವ ಗಾಂಧಾರಿಃ ಪ್ರತ್ಯುವಾಚ ಪುನಃ ಪುನಃ||

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲಿ! ಇನ್ನೇನು ಮಾಡಲಿಕ್ಕಾಗುತ್ತದೆ?” ಎಂದು ಶಲ್ಯನು ಹೇಳಲು ಗಾಂಧಾರಿಯ ಮಗನು “ಆಯಿತು” ಎಂದು ಪುನಃ ಪುನಃ ಉತ್ತರಿಸಿದನು.

05008014a  ಸ ತಥಾ ಶಲ್ಯಮಾಮಂತ್ರ್ಯ ಪುನರಾಯಾತ್ಸ್ವಕಂ ಪುರಂ|

05008014c ಶಲ್ಯೋ ಜಗಾಮ ಕೌಂತೇಯಾನಾಖ್ಯಾತುಂ ಕರ್ಮ ತಸ್ಯ ತತ್||

ಹೀಗೆ ಶಲ್ಯನನ್ನು ಆಮಂತ್ರಿಸಿ ಅವನು ತನ್ನ ಪುರಕ್ಕೆ ಹಿಂದಿರುಗಿದನು. ಶಲ್ಯನು ಅವನು ನಡೆಸಿದುದನ್ನು ಹೇಳಲು ಕೌಂತೇಯನಲ್ಲಿಗೆ ಹೋದನು.

05008015a ಉಪಪ್ಲವ್ಯಂ ಸ ಗತ್ವಾ ತು ಸ್ಕಂಧಾವಾರಂ ಪ್ರವಿಶ್ಯ ಚ|

05008015c ಪಾಂಡವಾನಥ ತಾನ್ಸರ್ವಾಂ ಶಲ್ಯಸ್ತತ್ರ ದದರ್ಶ ಹ||

ಉಪಪ್ಲವ್ಯಕ್ಕೆ ಹೋಗಿ ಡೇರೆಯನ್ನು ಪ್ರವೇಶಿಸಿ ಅಲ್ಲಿ ಪಾಂಡವರೆಲ್ಲರನ್ನೂ ಶಲ್ಯನು ಕಂಡನು.

05008016a ಸಮೇತ್ಯ ತು ಮಹಾಬಾಹುಃ ಶಲ್ಯಃ ಪಾಂಡುಸುತೈಸ್ತದಾ|

05008016c ಪಾದ್ಯಮರ್ಘ್ಯಂ ಚ ಗಾಂ ಚೈವ ಪ್ರತ್ಯಗೃಹ್ಣಾದ್ಯಥಾವಿಧಿ||

ಮಹಾಬಾಹು ಶಲ್ಯನು ಪಾಂಡುಸುತರನ್ನು ಸೇರಿ ಯಥಾವಿಧಿಯಾಗಿ ಪಾದ್ಯ, ಅರ್ಘ್ಯ ಮತ್ತು ಗೋವನ್ನು ಸ್ವೀಕರಿಸಿದನು.

05008017a ತತಃ ಕುಶಲಪೂರ್ವಂ ಸ ಮದ್ರರಾಜೋಽರಿಸೂದನಃ|

05008017c ಪ್ರೀತ್ಯಾ ಪರಮಯಾ ಯುಕ್ತಃ ಸಮಾಶ್ಲಿಷ್ಯ ಯುಧಿಷ್ಠಿರಂ||

05008018a ತಥಾ ಭೀಮಾರ್ಜುನೌ ಹೃಷ್ಟೌ ಸ್ವಸ್ರೀಯೌ ಚ ಯಮಾವುಭೌ|

ಆಗ ಮೊದಲು ಅರಿಸೂದನ ಮದ್ರರಾಜನು ಕುಶಲವನ್ನು ಕೇಳಿ ಪರಮ ಪ್ರೀತಿಯಿಂದ ಯುಧಿಷ್ಠಿರನನ್ನು, ಭೀಮಾರ್ಜುನರನ್ನೂ ಮತ್ತು ಹಾಗೆಯೇ ಹೃಷ್ಟರಾಗಿದ್ದ ಯಮಳರಿಬ್ಬರನ್ನೂ ಬಿಗಿದಪ್ಪಿದನು.

05008018c ಆಸನೇ ಚೋಪವಿಷ್ಟಸ್ತು ಶಲ್ಯಃ ಪಾರ್ಥಮುವಾಚ ಹ||

05008019a ಕುಶಲಂ ರಾಜಶಾರ್ದೂಲ ಕಚ್ಚಿತ್ತೇ ಕುರುನಂದನ|

ಆಸನದಲ್ಲಿ ಕುಳಿತುಕೊಂಡ ಶಲ್ಯನು ಪಾರ್ಥನಿಗೆ ಹೇಳಿದನು: “ರಾಜಶಾರ್ದೂಲ! ಕುರುನಂದನ! ನೀನು ಕುಶಲವಾಗಿದ್ದೀಯೆ ತಾನೇ?

05008019c ಅರಣ್ಯವಾಸಾದ್ದಿಷ್ಟ್ಯಾಸಿ ವಿಮುಕ್ತೋ ಜಯತಾಂ ವರ||

05008020a ಸುದುಷ್ಕರಂ ಕೃತಂ ರಾಜನ್ನಿರ್ಜನೇ ವಸತಾ ವನೇ|

05008020c ಭ್ರಾತೃಭಿಃ ಸಹ ರಾಜೇಂದ್ರ ಕೃಷ್ಣಯಾ ಚಾನಯಾ ಸಹ||

ಗೆಲ್ಲುವವರಲ್ಲಿ ಶ್ರೇಷ್ಠ! ರಾಜನ್! ರಾಜೇಂದ್ರ! ಸುದುಷ್ಕರ ನಿರ್ಜನ ವನವಾಸವನ್ನು ನಿನ್ನ ಸಹೋದರರೊಂದಿಗೆ ಮತ್ತು ಈ ಗೌರವಾನ್ವಿತೆ ಕೃಷ್ಣೆಯೊಂದಿಗೆ ಒಳ್ಳೆಯದಾಗಿ ಕಳೆದೆ ತಾನೇ?

05008021a ಅಜ್ಞಾತವಾಸಂ ಘೋರಂ ಚ ವಸತಾ ದುಷ್ಕರಂ ಕೃತಂ|

05008021c ದುಃಖಮೇವ ಕುತಃ ಸೌಖ್ಯಂ ರಾಜ್ಯಭ್ರಷ್ಟಸ್ಯ ಭಾರತ||

ಭಾರತ! ಘೋರ ಮತ್ತು ದುಷ್ಕೃತ ಅಜ್ಞಾತವಾಸವನ್ನೂ ನೀನು ಮಾಡಿ ಮುಗಿಸಿದ್ದೀಯೆ. ರಾಜ್ಯಭ್ರಷ್ಟನಾದವನಿಗೆ ದುಃಖ ಮಾತ್ರವಿದೆ. ಸುಖವು ಎಲ್ಲಿಯದು?

05008022a ದುಃಖಸ್ಯೈತಸ್ಯ ಮಹತೋ ಧಾರ್ತರಾಷ್ಟ್ರಕೃತಸ್ಯ ವೈ|

05008022c ಅವಾಪ್ಸ್ಯಸಿ ಸುಖಂ ರಾಜನ್ ಹತ್ವಾ ಶತ್ರೂನ್ಪರಂತಪ||

05008023a ವಿದಿತಂ ತೇ ಮಹಾರಾಜ ಲೋಕತತ್ತ್ವಂ ನರಾಧಿಪ|

ಪರಂತಪ! ರಾಜನ್! ಧಾರ್ತರಾಷ್ಟ್ರನಿಂದ ತಂದೊಡ್ಡಿದ ಈ ಮಹಾ ದುಃಖದ ಪ್ರಮಾಣದಷ್ಟೇ ಸುಖವನ್ನು ನಿನ್ನ ಶತ್ರುಗಳನ್ನು ಸಂಹರಿಸಿ ಪಡೆಯುತ್ತೀಯೆ. ಮಹಾರಾಜ! ನರಾಧಿಪ! ಲೋಕತತ್ವವು ನಿನಗೆ ತಿಳಿದೇ ಇದೆ.

05008023c ತಸ್ಮಾಲ್ಲೋಭಕೃತಂ ಕಿಂ ಚಿತ್ತವ ತಾತ ನ ವಿದ್ಯತೇ||

05008024a ತತೋಽಸ್ಯಾಕಥಯದ್ರಾಜಾ ದುರ್ಯೋಧನಸಮಾಗಮಂ|

05008024c ತಚ್ಚ ಶುಶ್ರೂಷಿತಂ ಸರ್ವಂ ವರದಾನಂ ಚ ಭಾರತ|

ಆದುದರಿಂದ ಮಗೂ! ನಿನ್ನ ಚಿತ್ತವು ಲೋಭದಿಂದ ಮಾಡುವುದನ್ನು ತಿಳಿದಿಲ್ಲ.” ಭಾರತ! ಅನಂತರ ರಾಜಾ ದುರ್ಯೋಧನನೊಡನೆ ಭೇಟಿಯಾದುದನ್ನು ಹೇಳಿ ತಾನು ಕೊಟ್ಟ ಭರವಸೆ ಮತ್ತು ಅವನು ಕೇಳಿದ ವರದಾನಗಳ ಕುರಿತು ವಿವರವಾಗಿ ಎಲ್ಲವನ್ನೂ ಹೇಳಿದನು.

05008025 ಯುಧಿಷ್ಠಿರ ಉವಾಚ|

05008025a ಸುಕೃತಂ ತೇ ಕೃತಂ ರಾಜನ್ಪ್ರಹೃಷ್ಟೇನಾಂತರಾತ್ಮನಾ|

05008025c ದುರ್ಯೋಧನಸ್ಯ ಯದ್ವೀರ ತ್ವಯಾ ವಾಚಾ ಪ್ರತಿಶ್ರುತಂ|

05008025e ಏಕಂ ತ್ವಿಚ್ಚಾಮಿ ಭದ್ರಂ ತೇ ಕ್ರಿಯಮಾಣಂ ಮಹೀಪತೇ||

ಯುಧಿಷ್ಠಿರನು ಹೇಳಿದನು: “ರಾಜನ್! ನೀನು ಒಳ್ಳೆಯದನ್ನೇ ಮಾಡಿದೆ. ವೀರ! ಅಂತರಾತ್ಮದಲ್ಲಿ ಸಂತೋಷಗೊಂಡು ನೀನು ದುರ್ಯೋಧನನಿಗೆ ನಿನ್ನ ಮಾತನ್ನು ಕೇಳಿಸಿದೆ. ಮಹೀಪತೇ! ನಿನಗೆ ಮಂಗಳವಾಗಲಿ. ನಿನ್ನಿಂದ ಒಂದೇ ನಡೆಯಬೇಕು ಎಂದು ನಾನು ಬಯಸುತ್ತೇನೆ.

05008026a ಭವಾನಿಹ ಮಹಾರಾಜ ವಾಸುದೇವಸಮೋ ಯುಧಿ|

05008026c ಕರ್ಣಾರ್ಜುನಾಭ್ಯಾಂ ಸಂಪ್ರಾಪ್ತೇ ದ್ವೈರಥೇ ರಾಜಸತ್ತಮ|

05008026e ಕರ್ಣಸ್ಯ ಭವತಾ ಕಾರ್ಯಂ ಸಾರಥ್ಯಂ ನಾತ್ರ ಸಂಶಯಃ||

ಮಹಾರಾಜ! ಯುದ್ಧದಲ್ಲಿ ನೀನು ವಾಸುದೇವನ ಸಮನಾಗಿದ್ದೀಯೆ. ರಾಜಸತ್ತಮ! ಕರ್ಣಾರ್ಜುನರ ರಥಗಳ ದ್ವಂದ್ವಯುದ್ಧವು ಬಂದಾಗ ಕರ್ಣನ ಸಾರಥ್ಯವನ್ನು ನೀನು ಮಾಡಬೇಕಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

05008027a ತತ್ರ ಪಾಲ್ಯೋಽರ್ಜುನೋ ರಾಜನ್ಯದಿ ಮತ್ಪ್ರಿಯಮಿಚ್ಚಸಿ|

05008027c ತೇಜೋವಧಶ್ಚ ತೇ ಕಾರ್ಯಃ ಸೌತೇರಸ್ಮಜ್ಜಯಾವಹಃ|

05008027e ಅಕರ್ತವ್ಯಮಪಿ ಹ್ಯೇತತ್ಕರ್ತುಮರ್ಹಸಿ ಮಾತುಲ||

ರಾಜನ್! ನನಗೆ ಒಳ್ಳೆಯದನ್ನು ಮಾಡಲು ಬಯಸಿದರೆ ನೀನು ಆಗ ಅರ್ಜುನನನ್ನು ಪಾಲಿಸಬೇಕು. ಸೌತಿಯ ತೇಜೋವಧೆಯನ್ನು ಮಾಡಿ ನಮಗೆ ಜಯವನ್ನು ಒದಗಿಸಬೇಕು. ಮಾವ! ಮಾಡಬಾರದುದ್ದಾದರೂ ಇದನ್ನು ನೀನು ಮಾಡಬೇಕು.”

05008028 ಶಲ್ಯ ಉವಾಚ|

05008028a ಶೃಣು ಪಾಂಡವ ಭದ್ರಂ ತೇ ಯದ್ಬ್ರವೀಷಿ ದುರಾತ್ಮನಃ|

05008028c ತೇಜೋವಧನಿಮಿತ್ತಂ ಮಾಂ ಸೂತಪುತ್ರಸ್ಯ ಸಮ್ಯುಗೇ||

ಶಲ್ಯನು ಹೇಳಿದನು: “ಪಾಂಡವ! ನಿನಗೆ ಮಂಗಳವಾಗಲಿ! ಕೇಳು. ಯುದ್ಧದಲ್ಲಿ ದುರಾತ್ಮ ಸೂತಪುತ್ರನ ತೇಜೋವಧೆಗೆ ಕಾರಣನಾಗಬೇಕೆಂದು ಹೇಳಿದೆಯಲ್ಲ!

05008029a ಅಹಂ ತಸ್ಯ ಭವಿಷ್ಯಾಮಿ ಸಂಗ್ರಾಮೇ ಸಾರಥಿರ್ಧ್ರುವಂ|

05008029c ವಾಸುದೇವೇನ ಹಿ ಸಮಂ ನಿತ್ಯಂ ಮಾಂ ಸ ಹಿ ಮನ್ಯತೇ||

ಸಂಗ್ರಾಮದಲ್ಲಿ ಖಂಡಿತವಾಗಿ ನಾನು ಅವನ ಸಾರಥಿಯಾಗುತ್ತೇನೆ. ಏಕೆಂದರೆ ಅವನು ನನ್ನನ್ನು ಯಾವಾಗಲೂ ವಾಸುದೇವನಿಗೆ ಸಮನೆಂದು ತಿಳಿದುಕೊಂಡಿದ್ದಾನೆ.

05008030a ತಸ್ಯಾಹಂ ಕುರುಶಾರ್ದೂಲ ಪ್ರತೀಪಮಹಿತಂ ವಚಃ|

05008030c ಧ್ರುವಂ ಸಂಕಥಯಿಷ್ಯಾಮಿ ಯೋದ್ಧುಕಾಮಸ್ಯ ಸಂಯುಗೇ||

05008031a ಯಥಾ ಸ ಹೃತದರ್ಪಶ್ಚ ಹೃತತೇಜಾಶ್ಚ ಪಾಂಡವ|

05008031c ಭವಿಷ್ಯತಿ ಸುಖಂ ಹಂತುಂ ಸತ್ಯಮೇತದ್ಬ್ರವೀಮಿ ತೇ||

ಕುರುಶಾರ್ದೂಲ! ಪಾಂಡವ! ರಣದಲ್ಲಿ ಹೋರಾಡಲು ಬಯಸಿದಾಗ ಖಂಡಿತವಾಗಿ ನಾನು ಅವನಿಗೆ ಅವನ ದರ್ಪವನ್ನು ಅಪಹರಿಸುವ ಮತ್ತು ತೇಜಸ್ಸನ್ನು ಅಪಹರಿಸುವ ಅಹಿತ ಮಾತುಗಳನ್ನಾಡುತ್ತೇನೆ. ಇದರಿಂದ ಸುಲಭವಾಗಿ ಅವನನ್ನು ಕೊಲ್ಲಬಹುದು. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

05008032a ಏವಮೇತತ್ಕರಿಷ್ಯಾಮಿ ಯಥಾ ತಾತ ತ್ವಮಾತ್ಥ ಮಾಂ|

05008032c ಯಚ್ಚಾನ್ಯದಪಿ ಶಕ್ಷ್ಯಾಮಿ ತತ್ಕರಿಷ್ಯಾಮಿ ತೇ ಪ್ರಿಯಂ||

ಮಗೂ! ನೀನು ನನ್ನನ್ನು ಕೇಳಿದಂತೆಯೇ ನಾನು ಮಾಡುತ್ತೇನೆ. ನಿನಗೆ ಒಳ್ಳೆಯದಾಗುವಂತೆ ಇನ್ನೇನಾದರೂ ಇದ್ದರೆ ಅದನ್ನೂ ಮಾಡುತ್ತೇನೆ.

05008033a ಯಚ್ಚ ದುಃಖಂ ತ್ವಯಾ ಪ್ರಾಪ್ತಂ ದ್ಯೂತೇ ವೈ ಕೃಷ್ಣಯಾ ಸಹ|

05008033c ಪರುಷಾಣಿ ಚ ವಾಕ್ಯಾನಿ ಸೂತಪುತ್ರಕೃತಾನಿ ವೈ||

05008034a ಜಟಾಸುರಾತ್ಪರಿಕ್ಲೇಶಃ ಕೀಚಕಾಚ್ಚ ಮಹಾದ್ಯುತೇ|

05008034c ದ್ರೌಪದ್ಯಾಧಿಗತಂ ಸರ್ವಂ ದಮಯಂತ್ಯಾ ಯಥಾಶುಭಂ||

05008035a ಸರ್ವಂ ದುಃಖಮಿದಂ ವೀರ ಸುಖೋದರ್ಕಂ ಭವಿಷ್ಯತಿ|

ವೀರ! ಕೃಷ್ಣೆಯೊಂದಿಗೆ ದ್ಯೂತದಲ್ಲಿ ಏನೆಲ್ಲ ದುಃಖವನ್ನು ನೀನು ಪಡೆದೆಯೋ, ಸೂತಪುತ್ರನಾಡಿದ ಪೌರುಷದ ಮಾತುಗಳು, ಜಟಾಸುರನಿಂದ ಮತ್ತು ಮಹಾದ್ಯುತಿ ಕೀಚಕರಿಂದ ಕಷ್ಟ, ದಮಯಂತಿಯಂತೆ ದ್ರೌಪದಿಯು ಅನುಭವಿಸಿದ ಎಲ್ಲ ಕಷ್ಟಗಳೂ, ಈ ಸರ್ವ ದುಃಖಗಳೂ ಸುಖದಲ್ಲಿ ಕೊನೆಗೊಳ್ಳುತ್ತವೆ.

05008035c ನಾತ್ರ ಮನ್ಯುಸ್ತ್ವಯಾ ಕಾರ್ಯೋ ವಿಧಿರ್ಹಿ ಬಲವತ್ತರಃ||

05008036a ದುಃಖಾನಿ ಹಿ ಮಹಾತ್ಮಾನಃ ಪ್ರಾಪ್ನುವಂತಿ ಯುಧಿಷ್ಠಿರ|

05008036c ದೇವೈರಪಿ ಹಿ ದುಃಖಾನಿ ಪ್ರಾಪ್ತಾನಿ ಜಗತೀಪತೇ||

ಯುಧಿಷ್ಠಿರ! ಇದರಲ್ಲಿ ನೀನು ದುಃಖಿಸುವುದು ಏನೂ ಇಲ್ಲ. ವಿಧಿಯೇ ಬಲವತ್ತರ. ಮಹಾತ್ಮರಿಗೆ ದುಃಖಗಳು ಬರುತ್ತವೆ. ಜಗತೀಪತೇ! ದೇವತೆಗಳು ಕೂಡ ದುಃಖವನ್ನು ಹೊಂದುತ್ತಾರೆ.

05008037a ಇಂದ್ರೇಣ ಶ್ರೂಯತೇ ರಾಜನ್ಸಭಾರ್ಯೇಣ ಮಹಾತ್ಮನಾ|

05008037c ಅನುಭೂತಂ ಮಹದ್ದುಃಖಂ ದೇವರಾಜೇನ ಭಾರತ||

ಭಾರತ! ರಾಜನ್! ಮಹಾತ್ಮ ದೇವರಾಜ ಇಂದ್ರನು ಭಾರ್ಯೆಯೊಡನೆ ಮಹಾ ದುಃಖವನ್ನು ಅನುಭವಿಸಿದ್ದನೆಂದು ಕೇಳುತ್ತೇವೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಶಲ್ಯವಾಕ್ಯೇ ಅಷ್ಟಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಶಲ್ಯವಾಕ್ಯ ಎನ್ನುವ ಎಂಟನೆಯ ಅಧ್ಯಾಯವು|

Related image

Comments are closed.