Udyoga Parva: Chapter 9

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

ಇಂದ್ರವಿಜಯೋಽಪಖ್ಯಾನ

ಯುಧಿಷ್ಠಿರನು ಕೇಳಲು ಶಲ್ಯನು ಇಂದ್ರ ವಿಜಯೋಪಾಖ್ಯಾನವನ್ನು ಪ್ರಾಂಭಿಸುವುದು (೧-೨). ತ್ವಷ್ಟನು ಪ್ರಜಾಪತಿಯಾಗಿದ್ದಾಗ ಸೃಷ್ಟಿಸಿದ ಇಂದ್ರದ್ರೋಹೀ ಮಗ ತ್ರಿಶಿರನ ತಪಸ್ಸಿನಿಂದ ಹೆದರಿದ ಇಂದ್ರನು ಅವನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದುದು (೩-೧೨). ಪ್ರಯತ್ನಿಸಿದರೂ ಅಪ್ಸರೆಯರು ಅದರಲ್ಲಿ ಸೋಲಲು ಚಿಂತಿತನಾದ ಇಂದ್ರನು ವಜ್ರಾಯುಧದಿಂದ ತ್ರಿಶಿರನನ್ನು ಕೊಂದುದು (೧೩-೨೩). ಓರ್ವ ಬಡಿಗನ ಸಹಾಯದಿಂದ ಹತನಾಗಿ ಬಿದ್ದಿದ್ದ ತ್ರಿಶಿರನ ಶಿರಗಳನ್ನು ಕತ್ತರಿಸಿ ಇಂದ್ರನು ಸ್ವರ್ಗಕ್ಕೆ ಮರಳಿದುದು (೨೪-೩೯). ಕುಪಿತನಾದ ತ್ವಷ್ಟನು ತನ್ನ ಮಗನನ್ನು ಕೊಂದ ಇಂದ್ರನನ್ನು ಕೊಲ್ಲಲು ವೃತ್ರನನ್ನು ಸೃಷ್ಟಿಸಿ ಕಳುಹಿಸಿದುದು (೪೦-೪೫). ವೃತ್ರ-ಇಂದ್ರರ ಯುದ್ಧದಲ್ಲಿ ಇಂದ್ರನು ಸೋಲಲು ಸಮಾಲೋಚನೆ (೪೬-೫೨).

05009001 ಯುಧಿಷ್ಠಿರ ಉವಾಚ|

05009001a ಕಥಮಿಂದ್ರೇಣ ರಾಜೇಂದ್ರ ಸಭಾರ್ಯೇಣ ಮಹಾತ್ಮನಾ|

05009001c ದುಃಖಂ ಪ್ರಾಪ್ತಂ ಪರಂ ಘೋರಮೇತದಿಚ್ಚಾಮಿ ವೇದಿತುಂ||

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಮಹಾತ್ಮ ಇಂದ್ರನು ಭಾರ್ಯೆಯೊಡನೆ ಹೇಗೆ ಪರಮ ಘೋರ ದುಃಖವನ್ನು ಹೊಂದಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ.”

05009002 ಶಲ್ಯ ಉವಾಚ|

05009002a ಶೃಣು ರಾಜನ್ಪುರಾ ವೃತ್ತಮಿತಿಹಾಸಂ ಪುರಾತನಂ|

05009002c ಸಭಾರ್ಯೇಣ ಯಥಾ ಪ್ರಾಪ್ತಂ ದುಃಖಮಿಂದ್ರೇಣ ಭಾರತ||

ಶಲ್ಯನು ಹೇಳಿದನು: “ರಾಜನ್! ಭಾರತ! ಹಿಂದೆ ಇಂದ್ರನು ಭಾರ್ಯೆಯೊಡನೆ ಹೇಗೆ ದುಃಖವನ್ನು ಪಡೆದನು ಎನ್ನುವ ಈ ಪುರಾತನ ಇತಿಹಾಸ ವೃತ್ತಾಂತವನ್ನು ಕೇಳು.

05009003a ತ್ವಷ್ಟಾ ಪ್ರಜಾಪತಿರ್ಹ್ಯಾಸೀದ್ದೇವಶ್ರೇಷ್ಠೋ ಮಹಾತಪಾಃ|

05009003c ಸ ಪುತ್ರಂ ವೈ ತ್ರಿಶಿರಸಮಿಂದ್ರದ್ರೋಹಾತ್ಕಿಲಾಸೃಜತ್||

ದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನಷ್ಟೆ?

05009004a ಐಂದ್ರಂ ಸ ಪ್ರಾರ್ಥಯತ್ಸ್ಥಾನಂ ವಿಶ್ವರೂಪೋ ಮಹಾದ್ಯುತಿಃ|

05009004c ತೈಸ್ತ್ರಿಭಿರ್ವದನೈರ್ಘೋರೈಃ ಸೂರ್ಯೇಂದುಜ್ವಲನೋಪಮೈಃ||

05009005a ವೇದಾನೇಕೇನ ಸೋಽಧೀತೇ ಸುರಾಮೇಕೇನ ಚಾಪಿಬತ್|

05009005c ಏಕೇನ ಚ ದಿಶಃ ಸರ್ವಾಃ ಪಿಬನ್ನಿವ ನಿರೀಕ್ಷತೇ||

ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು ಮತ್ತು ಇನ್ನೊಂದರಿಂದ ಎಲ್ಲ ದಿಕ್ಕುಗಳನ್ನೂ ಕುಡಿದುಬಿಡುತ್ತಾನೋ ಎನ್ನುವಂತೆ ನೋಡುತ್ತಿದ್ದನು.

05009006a ಸ ತಪಸ್ವೀ ಮೃದುರ್ದಾಂತೋ ಧರ್ಮೇ ತಪಸಿ ಚೋದ್ಯತಃ|

05009006c ತಪೋಽತಪ್ಯನ್ಮಹತ್ತೀವ್ರಂ ಸುದುಶ್ಚರಮರಿಂದಮ||

ಆ ತಪಸ್ವಿಯು ಮೃದುವೂ ದಾಂತನೂ ಆಗಿದ್ದು ಧರ್ಮದ ತಪಸ್ಸಿನಲ್ಲಿ ತೊಡಗಿಕೊಂಡಿದ್ದನು. ಅರಿಂದಮ! ಅವನು ಆಚರಿಸಲು ಅತಿಕಷ್ಟವಾದ ಮಹಾ ತೀವ್ರ ತಪಸ್ಸನ್ನು ತಪಿಸಿದನು.

05009007a ತಸ್ಯ ದೃಷ್ಟ್ವಾ ತಪೋವೀರ್ಯಂ ಸತ್ತ್ವಂ ಚಾಮಿತತೇಜಸಃ|

05009007c ವಿಷಾದಮಗಮಚ್ಚಕ್ರ ಇಂದ್ರೋಽಯಂ ಮಾ ಭವೇದಿತಿ||

ಆ ತಪೋವೀರ್ಯ, ಸತ್ವಯುತ, ಅಮಿತತೇಜಸನನ್ನು ನೋಡಿ ಇಂದ್ರನು ಇವನು ಇಂದ್ರನಾಗಬಾರದು ಎಂದು ವಿಷಾದಿಸಿದನು.

05009008a ಕಥಂ ಸಜ್ಜೇತ ಭೋಗೇಷು ನ ಚ ತಪ್ಯೇನ್ಮಹತ್ತಪಃ|

05009008c ವಿವರ್ಧಮಾನಸ್ತ್ರಿಶಿರಾಃ ಸರ್ವಂ ತ್ರಿಭುವನಂ ಗ್ರಸೇತ್||

“ಇವನು ಭೋಗಗಳಲ್ಲಿ ತೊಡಗುವಂತೆ ಹೇಗೆಮಾಡಬೇಕು? ಇವನು ಮಹಾತಪಸ್ಸನ್ನು ತಪಿಸದಂತೆ ಏನು ಮಾಡಬೇಕು? ವರ್ಧಿಸುತ್ತಿರುವ ತ್ರಿಶಿರನು ತ್ರಿಭುವನವೆಲ್ಲವನ್ನೂ ಕಬಳಿಸಿಬಿಡುತ್ತಾನೆ.”

05009009a ಇತಿ ಸಂಚಿಂತ್ಯ ಬಹುಧಾ ಬುದ್ಧಿಮಾನ್ಭರತರ್ಷಭ|

05009009c ಆಜ್ಞಾಪಯತ್ಸೋಽಪ್ಸರಸಸ್ತ್ವಷ್ಟೃಪುತ್ರಪ್ರಲೋಭನೇ||

ಭರತರ್ಷಭ! ಹೀಗೆ ಬಹಳಷ್ಟು ಯೋಚಿಸಿದ ಬುದ್ಧಿಮಾನನು ತ್ವಷ್ಟಪುತ್ರನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದನು.

05009010a ಯಥಾ ಸ ಸಜ್ಜೇತ್ತ್ರಿಶಿರಾಃ ಕಾಮಭೋಗೇಷು ವೈ ಭೃಶಂ|

05009010c ಕ್ಷಿಪ್ರಂ ಕುರುತ ಗಚ್ಚಧ್ವಂ ಪ್ರಲೋಭಯತ ಮಾಚಿರಂ||

“ತ್ರಿಶಿರನನ್ನು ಕಾಮಭೋಗಗಳಲ್ಲಿ ತೊಡಗಿಸಿ. ಬೇಗನೇ ಹೋಗಿ ಕ್ಷಿಪ್ರದಲ್ಲಿಯೇ ಅವನನ್ನು ಪ್ರಲೋಭಗೊಳಿಸಿ.

05009011a ಶೃಂಗಾರವೇಷಾಃ ಸುಶ್ರೋಣ್ಯೋ ಭಾವೈರ್ಯುಕ್ತಾ ಮನೋಹರೈಃ|

05009011c ಪ್ರಲೋಭಯತ ಭದ್ರಂ ವಃ ಶಮಯಧ್ವಂ ಭಯಂ ಮಮ||

ಸುಶ್ರೋಣಿಯರೇ! ಶೃಂಗಾರವೇಷಗಳನ್ನು ಧರಿಸಿ ಮನೋಹರ ಭಾವಗಳಿಂದೊಡಗೂಡಿ ಅವನನ್ನು ಪ್ರಲೋಭಗೊಳಿಸಿ ಮತ್ತು ನನ್ನ ಭಯವನ್ನು ಶಮನಗೊಳಿಸಿ.

05009012a ಅಸ್ವಸ್ಥಂ ಹ್ಯಾತ್ಮನಾತ್ಮಾನಂ ಲಕ್ಷಯಾಮಿ ವರಾಂಗನಾಃ|

05009012c ಭಯಮೇತನ್ಮಹಾಘೋರಂ ಕ್ಷಿಪ್ರಂ ನಾಶಯತಾಬಲಾಃ||

ವರಾಂಗನೆಯರೇ! ನಾನು ಅತ್ಮದಲ್ಲಿ ಅಸ್ವಸ್ಥ್ಯನಾಗಿರುವುದನ್ನು ಗಮನಿಸಿದ್ದೇನೆ. ಅಬಲೆಯರೇ! ಈ ಮಹಾಘೋರ ಭಯವನ್ನು ಕ್ಷಿಪ್ರದಲ್ಲಿ ನಾಶಗೊಳಿಸಿ.”

05009013 ಅಪ್ಸರಸ ಊಚುಃ|

05009013a ತಥಾ ಯತ್ನಂ ಕರಿಷ್ಯಾಮಃ ಶಕ್ರ ತಸ್ಯ ಪ್ರಲೋಭನೇ|

05009013c ಯಥಾ ನಾವಾಪ್ಸ್ಯಸಿ ಭಯಂ ತಸ್ಮಾದ್ಬಲನಿಷೂದನ||

ಅಪ್ಸರೆಯರು ಹೇಳಿದರು: “ಶಕ್ರ! ಅವನನ್ನು ಪ್ರಲೋಭನಗೊಳಿಸಲು ಪ್ರಯತಿಸುತ್ತೇವೆ. ಬಲನಿಷೂದನ! ಅವನಿಂದ ನೀನು ಯಾವುದೇ ಭಯವನ್ನು ಹೊಂದಬೇಕಾಗಿಲ್ಲ.

05009014a ನಿರ್ದಹನ್ನಿವ ಚಕ್ಷುರ್ಭ್ಯಾಂ ಯೋಽಸಾವಾಸ್ತೇ ತಪೋನಿಧಿಃ|

05009014c ತಂ ಪ್ರಲೋಭಯಿತುಂ ದೇವ ಗಚ್ಚಾಮಃ ಸಹಿತಾ ವಯಂ|

05009014e ಯತಿಷ್ಯಾಮೋ ವಶೇ ಕರ್ತುಂ ವ್ಯಪನೇತುಂ ಚ ತೇ ಭಯಂ||

ದೇವ! ಕಣ್ಣುಗಳಿಂದ ಎಲ್ಲವನ್ನೂ ಸುಟ್ಟುಬಿಡುವನೋ ಎಂದು ಕುಳಿತಿರುವ ಆ ತಪೋನಿಧಿಯನ್ನು ಪ್ರಲೋಭಗೊಳಿಸಲೂ ನಾವು ಒಟ್ಟಾಗಿ ಹೋಗುತ್ತೇವೆ. ಅವನನ್ನು ವಶೀಕರಿಸಲು ಮತ್ತು ನಿನ್ನ ಭಯವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ.””

05009015 ಶಲ್ಯ ಉವಾಚ|

05009015a ಇಂದ್ರೇಣ ತಾಸ್ತ್ವನುಜ್ಞಾತಾ ಜಗ್ಮುಸ್ತ್ರಿಶಿರಸೋಽಂತಿಕಂ|

05009015c ತತ್ರ ತಾ ವಿವಿಧೈರ್ಭಾವೈರ್ಲೋಭಯಂತ್ಯೋ ವರಾಂಗನಾಃ|

05009015e ನೃತ್ಯಂ ಸಂದರ್ಶಯಂತ್ಯಶ್ಚ ತಥೈವಾಂಗೇಷು ಸೌಷ್ಠವಂ||

ಶಲ್ಯನು ಹೇಳಿದನು: “ಇಂದ್ರನಿಂದ ಅನುಜ್ಞಾತರಾದ ಅವರು ತ್ರಿಶಿರನ ಬಳಿ ಹೋದರು. ಅಲ್ಲಿ ಆ ವರಾಂಗನೆಯರು ವಿವಿಧಭಾವಗಳಿಂದ, ನೃತ್ಯವನ್ನು ಮತ್ತು ಹಾಗೆಯೇ ಅಂಗ ಸೌಷ್ಟವವನ್ನು ಪ್ರದರ್ಶಿಸುತ್ತಾ ಅವನನ್ನು ಲೋಭಗೊಳಿಸಲು ಪ್ರಯತ್ನಿಸಿದರು.

05009016a ವಿಚೇರುಃ ಸಂಪ್ರಹರ್ಷಂ ಚ ನಾಭ್ಯಗಚ್ಚನ್ಮಹಾತಪಾಃ|

05009016c ಇಂದ್ರಿಯಾಣಿ ವಶೇ ಕೃತ್ವಾ ಪೂರ್ಣಸಾಗರಸಮ್ನಿಭಃ||

ಆ ಮಹಾತಪಸ್ವಿಯು ಅವರನ್ನು ನೋಡಿದರೂ ಹರ್ಷಿತನಾಗಲಿಲ್ಲ. ಇಂದ್ರಿಯಗಳನ್ನು ವಶೀಕರಿಸಿ ತುಂಬಿದ ಸಾಗರದಂತೆ ತೋರುತ್ತಿದ್ದನು.

05009017a ತಾಸ್ತು ಯತ್ನಂ ಪರಂ ಕೃತ್ವಾ ಪುನಃ ಶಕ್ರಮುಪಸ್ಥಿತಾಃ|

05009017c ಕೃತಾಂಜಲಿಪುಟಾಃ ಸರ್ವಾ ದೇವರಾಜಮಥಾಬ್ರುವನ್||

ಪರಮ ಯತ್ನವನ್ನು ಮಾಡಿ ಅವರು ಪುನಃ ಶಕ್ರನ ಉಪಸ್ಥಿತಿಯಲ್ಲಿ ಬಂದು, ಎಲ್ಲರೂ ಕೈಮುಗಿದು ದೇವರಾಜನಿಗೆ ಹೀಗೆ ಹೇಳಿದರು:

05009018a ನ ಸ ಶಕ್ಯಃ ಸುದುರ್ಧರ್ಷೋ ಧೈರ್ಯಾಚ್ಚಾಲಯಿತುಂ ಪ್ರಭೋ|

05009018c ಯತ್ತೇ ಕಾರ್ಯಂ ಮಹಾಭಾಗ ಕ್ರಿಯತಾಂ ತದನಂತರಂ||

“ಪ್ರಭೋ! ಆ ದುರ್ಧರ್ಷನನ್ನು ಧೈರ್ಯದಿಂದ ಅಲುಗಾಡಿಸಲು ಶಕ್ಯವಿಲ್ಲ. ಮಹಾಭಾಗ! ಇದರ ನಂತರ ಏನು ಮಾಡಬೇಕೋ ಅದನ್ನು ಮಾಡು.”

05009019a ಸಂಪೂಜ್ಯಾಪ್ಸರಸಃ ಶಕ್ರೋ ವಿಸೃಜ್ಯ ಚ ಮಹಾಮತಿಃ|

05009019c ಚಿಂತಯಾಮಾಸ ತಸ್ಯೈವ ವಧೋಪಾಯಂ ಮಹಾತ್ಮನಃ||

ಮಹಾಮತಿ ಶಕ್ರನು ಅಪ್ಸರೆಯರನ್ನು ಗೌರವಿಸಿ ಕಳುಹಿಸಿಕೊಟ್ಟು ಆ ಮಹಾತ್ಮನ ವಧೆಯ ಉಪಾಯವನ್ನು ಚಿಂತಿಸತೊಡಗಿದನು.

05009020a ಸ ತೂಷ್ಣೀಂ ಚಿಂತಯನ್ವೀರೋ ದೇವರಾಜಃ ಪ್ರತಾಪವಾನ್|

05009020c ವಿನಿಶ್ಚಿತಮತಿರ್ಧೀಮಾನ್ವಧೇ ತ್ರಿಶಿರಸೋಽಭವತ್||

ಆ ವೀರ ಪ್ರತಾಪವಾನ್ ಧೀಮಾನ್ ದೇವರಾಜನು ತುಂಬಾ ಚಿಂತಿಸಿ ತ್ರಿಶಿರನ ವಧೆಯ ಕುರಿತು ನಿಶ್ಚಯಿಸಿದನು.

05009021a ವಜ್ರಮಸ್ಯ ಕ್ಷಿಪಾಮ್ಯದ್ಯ ಸ ಕ್ಷಿಪ್ರಂ ನ ಭವಿಷ್ಯತಿ|

05009021c ಶತ್ರುಃ ಪ್ರವೃದ್ಧೋ ನೋಪೇಕ್ಷ್ಯೋ ದುರ್ಬಲೋಽಪಿ ಬಲೀಯಸಾ||

“ಇಂದು ಈ ವಜ್ರವನ್ನು ಅವನ ಮೇಲೆ ಎಸೆಯುತ್ತೇನೆ. ಇದರಿಂದ ಅವನು ಕ್ಷಿಪ್ರವಾಗಿ ಕೊಲ್ಲಲ್ಪಡುತ್ತಾನೆ. ಎಷ್ಟೇ ದುರ್ಬಲನಾಗಿದ್ದ ಶತ್ರುವು ಪ್ರವೃದ್ಧನಾಗುತ್ತಿದ್ದಾನೆಂದರೆ ಬಲಶಾಲಿಯೂ ನಿರ್ಲಕ್ಷಿಸಬಾರದು.”

05009022a ಶಾಸ್ತ್ರಬುದ್ಧ್ಯಾ ವಿನಿಶ್ಚಿತ್ಯ ಕೃತ್ವಾ ಬುದ್ಧಿಂ ವಧೇ ದೃಢಾಂ|

05009022c ಅಥ ವೈಶ್ವಾನರನಿಭಂ ಘೋರರೂಪಂ ಭಯಾವಹಂ|

05009022e ಮುಮೋಚ ವಜ್ರಂ ಸಂಕ್ರುದ್ಧಃ ಶಕ್ರಸ್ತ್ರಿಶಿರಸಂ ಪ್ರತಿ||

ಶಾಸ್ತ್ರಬುದ್ಧಿಯನ್ನುಪಯೋಗಿಸಿ ನಿಶ್ಚಯಿಸಿ ವಧೆಗೆ ದೃಢ ಮನಸ್ಸುಮಾಡಿದನು. ಆಗ ಶಕ್ರನು ಸಂಕ್ರುದ್ಧನಾಗಿ ಅಗ್ನಿಯಂತೆ ಹೊಳೆಯುತ್ತಿರುವ, ಘೋರರೂಪೀ, ಭಯವನ್ನುಂಟುಮಾಡುವ ವಜ್ರವನ್ನು ತ್ರಿಶಿರನ ಮೇಲೆ ಎಸೆದನು.

05009023a ಸ ಪಪಾತ ಹತಸ್ತೇನ ವಜ್ರೇಣ ದೃಢಮಾಹತಃ|

05009023c ಪರ್ವತಸ್ಯೇವ ಶಿಖರಂ ಪ್ರಣುನ್ನಂ ಮೇದಿನೀತಲೇ||

ವಜ್ರದಿಂದ ಜೋರಾಗಿ ಹೊಡೆಯಲ್ಪಟ್ಟು ಹತನಾಗಿ ಅವನು ಪರ್ವತಶಿಖರವು ಮಣ್ಣಾಗಿ ನೆಲಕ್ಕೆ ಬೀಳುವಂತೆ ಬಿದ್ದನು.

05009024a ತಂ ತು ವಜ್ರಹತಂ ದೃಷ್ಟ್ವಾ ಶಯಾನಮಚಲೋಪಮಂ|

05009024c ನ ಶರ್ಮ ಲೇಭೇ ದೇವೇಂದ್ರೋ ದೀಪಿತಸ್ತಸ್ಯ ತೇಜಸಾ|

05009024e ಹತೋಽಪಿ ದೀಪ್ತತೇಜಾಃ ಸ ಜೀವನ್ನಿವ ಚ ದೃಶ್ಯತೇ||

ಅವನು ವಜ್ರದಿಂದ ಹತನಾಗಿ ಮಲಗಿದ ಪರ್ವತದಂತಿರುವುದನ್ನು ನೋಡಿ ದೇವೇಂದ್ರನು ಶಾಂತಿಯನ್ನು ಪಡೆಯಲಿಲ್ಲ. ಅವನು ತೇಜಸ್ಸಿನಿಂದ ಬೆಳಗುತ್ತಿದ್ದನು. ಹತನಾದರೂ ಆ ದೀಪ್ತ ತೇಜಸ್ವಿಯು ಜೀವಂತನಾಗಿದ್ದಾನೋ ಎಂದು ತೋರಿದನು.

05009025a ಅಭಿತಸ್ತತ್ರ ತಕ್ಷಾಣಂ ಘಟಮಾನಂ ಶಚೀಪತಿಃ|

05009025c ಅಪಶ್ಯದಬ್ರವೀಚ್ಚೈನಂ ಸತ್ವರಂ ಪಾಕಶಾಸನಃ|

05009025e ಕ್ಷಿಪ್ರಂ ಚಿಂಧಿ ಶಿರಾಂಸ್ಯಸ್ಯ ಕುರುಷ್ವ ವಚನಂ ಮಮ||

ಭಯಕ್ಕೆ ಸಿಲುಕಿದ ಶಚೀಪತಿಯು ಆಗ ಅಲ್ಲಿಗೆ ಬಂದ ಬಡಿಗನನ್ನು ನೋಡಿದನು. ತಕ್ಷಣವೇ ಪಾಕಶಾಸನನು ಅವನಿಗೆ ಹೇಳಿದನು: “ಬೇಗನೇ ಇವನ ಶಿರಗಳನ್ನು ಕತ್ತರಿಸು. ನನ್ನ ಮಾತಿನಂತೆ ಮಾಡು.”

05009026 ತಕ್ಷೋವಾಚ|

05009026a ಮಹಾಸ್ಕಂಧೋ ಭೃಶಂ ಹ್ಯೇಷ ಪರಶುರ್ನ ತರಿಷ್ಯತಿ|

05009026c ಕರ್ತುಂ ಚಾಹಂ ನ ಶಕ್ಷ್ಯಾಮಿ ಕರ್ಮ ಸದ್ಭಿರ್ವಿಗರ್ಹಿತಂ||

ಬಡಿಗನು ಹೇಳಿದನು: “ಇವನ ಭುಜಗಳು ತುಂಬಾ ದೊಡ್ಡವು. ಈ ಗರಗಸೆಯಿಂದ ಅದು ತುಂಡಾಗುವುದಿಲ್ಲ. ಒಳ್ಳೆಯವರು ಅಲ್ಲಗಳೆಯುವ ಕೆಲಸವನ್ನು ಮಾಡಲೂ ನನಗೆ ಇಷ್ಟವಿಲ್ಲ.”

05009027 ಇಂದ್ರ ಉವಾಚ|

05009027a ಮಾ ಭೈಸ್ತ್ವಂ ಕ್ಷಿಪ್ರಮೇತದ್ವೈ ಕುರುಷ್ವ ವಚನಂ ಮಮ|

05009027c ಮತ್ಪ್ರಸಾದಾದ್ಧಿ ತೇ ಶಸ್ತ್ರಂ ವಜ್ರಕಲ್ಪಂ ಭವಿಷ್ಯತಿ||

ಇಂದ್ರನು ಹೇಳಿದನು: “ಹೆದರಬೇಡ! ಬೇಗನೆ ನಾನು ಹೇಳಿದಂತೆ ಮಾಡು. ನನ್ನ ಪ್ರಸಾದದಿಂದ ನಿನ್ನ ಗರಗಸವು ವಜ್ರಕಲ್ಪವಾಗುತ್ತದೆ.”

05009028 ತಕ್ಷೋವಾಚ|

05009028a ಕಂ ಭವಂತಮಹಂ ವಿದ್ಯಾಂ ಘೋರಕರ್ಮಾಣಮದ್ಯ ವೈ|

05009028c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವೇನ ಕಥಯಸ್ವ ಮೇ||

ಬಡಿಗನು ಹೇಳಿದನು: “ಇಂದು ಈ ಘೋರಕರ್ಮವನ್ನು ಮಾಡಿರುವ ನೀನು ಯಾರೆಂದು ನಾನು ತಿಳಿಯಬೇಕು? ಇದನ್ನು ಕೇಳಲು ಬಯಸುತ್ತೇನೆ. ಸತ್ಯವನ್ನು ಹೇಳು.”

05009029 ಇಂದ್ರ ಉವಾಚ|

05009029a ಅಹಮಿಂದ್ರೋ ದೇವರಾಜಸ್ತಕ್ಷನ್ವಿದಿತಮಸ್ತು ತೇ|

05009029c ಕುರುಷ್ವೈತದ್ಯಥೋಕ್ತಂ ಮೇ ತಕ್ಷನ್ಮಾ ತ್ವಂ ವಿಚಾರಯ||

ಇಂದ್ರನು ಹೇಳಿದನು: “ನಾನು ದೇವರಾಜ ಇಂದ್ರ. ಇದು ನಿನಗೆ ತಿಳಿದಿರಲಿ. ನಾನು ಹೇಳಿದಹಾಗೆ ನೀನು ಮಾಡುತ್ತೀಯೆ. ಬಡಿಗ! ವಿಚಾರಮಾಡಬೇಡ!”

05009030 ತಕ್ಷೋವಾಚ|

05009030a ಕ್ರೂರೇಣ ನಾಪತ್ರಪಸೇ ಕಥಂ ಶಕ್ರೇಹ ಕರ್ಮಣಾ|

05009030c ಋಷಿಪುತ್ರಮಿಮಂ ಹತ್ವಾ ಬ್ರಹ್ಮಹತ್ಯಾಭಯಂ ನ ತೇ||

ಬಡಿಗನು ಹೇಳಿದನು: “ಶಕ್ರ! ಈ ಕ್ರೂರ ಕರ್ಮದಿಂದ ನೀನು ಹೇಗೆ ತಾನೇ ಪರಿತಪಿಸುತ್ತಿಲ್ಲ? ಈ ಋಷಿಪುತ್ರನನ್ನು ಕೊಂದು ನಿನಗೆ ಹೇಗೆ ಬ್ರಹ್ಮಹತ್ಯೆಯ ಭಯವಿಲ್ಲ?”

05009031 ಇಂದ್ರ ಉವಾಚ|

05009031a ಪಶ್ಚಾದ್ಧರ್ಮಂ ಚರಿಷ್ಯಾಮಿ ಪಾವನಾರ್ಥಂ ಸುದುಶ್ಚರಂ|

05009031c ಶತ್ರುರೇಷ ಮಹಾವೀರ್ಯೋ ವಜ್ರೇಣ ನಿಹತೋ ಮಯಾ||

ಇಂದ್ರನು ಹೇಳಿದನು: “ಈ ರೀತಿ ಕೆಟ್ಟದ್ದಾಗಿ ನಡೆದುಕೊಂಡಿದ್ದುದಕ್ಕೆ ಪಾವನಗೊಳ್ಳಲು ನಾನು ಅನಂತರ ಧರ್ಮದಿಂದ ನಡೆದುಕೊಳ್ಳುತ್ತೇನೆ. ಈ ಮಹಾವೀರ್ಯವಂತನು ನನ್ನ ಶತ್ರುವಾಗಿದ್ದನು. ನನ್ನ ವಜ್ರದಿಂದ ಹತನಾದನು.

05009032a ಅದ್ಯಾಪಿ ಚಾಹಮುದ್ವಿಗ್ನಸ್ತಕ್ಷನ್ನಸ್ಮಾದ್ಬಿಭೇಮಿ ವೈ|

05009032c ಕ್ಷಿಪ್ರಂ ಚಿಂಧಿ ಶಿರಾಂಸಿ ತ್ವಂ ಕರಿಷ್ಯೇಽನುಗ್ರಹಂ ತವ||

ಬಡಿಗ! ಈಗಲೂ ಕೂಡ ನಾನು ಉದ್ವಿಗ್ನನಾಗಿದ್ದೇನೆ. ಇವನಿಂದ ಈಗಲೂ ಭಯಗೊಳ್ಳುತ್ತೇನೆ. ಬೇಗನೆ ಇವನ ಶಿರಗಳನ್ನು ಕತ್ತರಿಸು. ನಿನಗೆ ಅನುಗ್ರಹವನ್ನು ಮಾಡುತ್ತೇನೆ.

05009033a ಶಿರಃ ಪಶೋಸ್ತೇ ದಾಸ್ಯಂತಿ ಭಾಗಂ ಯಜ್ಞೇಷು ಮಾನವಾಃ|

05009033c ಏಷ ತೇಽನುಗ್ರಹಸ್ತಕ್ಷನ್ ಕ್ಷಿಪ್ರಂ ಕುರು ಮಮ ಪ್ರಿಯಂ||

ಯಜ್ಞಗಳಲ್ಲಿ ಮಾನವರು ಪಶುವಿನ ಶಿರೋಭಾಗವನ್ನು ನಿನಗೆ ನೀಡುತ್ತಾರೆ. ಬಡಿಗ! ಈ ಅನುಗ್ರಹವನ್ನು ನಾನು ನಿನಗೆ ನೀಡುತ್ತಿದ್ದೇನೆ. ನನಗೆ ಪ್ರಿಯವಾದುದನ್ನು ಬೇಗ ಮಾಡು!””

05009034 ಶಲ್ಯ ಉವಾಚ|

05009034a ಏತಚ್ಚ್ರುತ್ವಾ ತು ತಕ್ಷಾ ಸ ಮಹೇಂದ್ರವಚನಂ ತದಾ|

05009034c ಶಿರಾಂಸ್ಯಥ ತ್ರಿಶಿರಸಃ ಕುಠಾರೇಣಾಚ್ಚಿನತ್ತದಾ||

ಶಲ್ಯನು ಹೇಳಿದನು: “ಆಗ ಮಹೇಂದ್ರನ ಈ ಮಾತನ್ನು ಕೇಳಿದ ಬಡಿಗನು ತಕ್ಷಣವೇ ತ್ರಿಶಿರನ ತಲೆಗಳನ್ನು ಕೊಡಲಿಯಿಂದ ತುಂಡರಿಸಿದನು.

05009035a ನಿಕೃತ್ತೇಷು ತತಸ್ತೇಷು ನಿಷ್ಕ್ರಾಮಂಸ್ತ್ರಿಶಿರಾಸ್ತ್ವಥ|

05009035c ಕಪಿಂಜಲಾಸ್ತಿತ್ತಿರಾಶ್ಚ ಕಲವಿಂಕಾಶ್ಚ ಸರ್ವಶಃ||

ತಲೆಗಳನ್ನು ತುಂಡರಿಸಲು ತ್ರಿಶಿರಗಳಿಂದ ಬಹಳಷ್ಟು ಗಿಳಿಗಳು, ಕೋಗಿಲೆಗಳು ಮತ್ತು ಗುಬ್ಬಿಗಳು ಹೊರಹಾರಿ ಬಂದವು.

05009036a ಯೇನ ವೇದಾನಧೀತೇ ಸ್ಮ ಪಿಬತೇ ಸೋಮಮೇವ ಚ|

05009036c ತಸ್ಮಾದ್ವಕ್ತ್ರಾನ್ವಿನಿಷ್ಪೇತುಃ ಕ್ಷಿಪ್ರಂ ತಸ್ಯ ಕಪಿಂಜಲಾಃ||

ಯಾವ ಬಾಯಿಯಿಂದ ವೇದಗಳನ್ನು ಪಠಿಸುತ್ತಿದ್ದನೋ ಮತ್ತು ಸೋಮವನ್ನು ಕುಡಿಯುತ್ತಿದ್ದನೋ ಆ ಬಾಯಿಯಿಂದ ಒಂದೇಸಮನೆ ಕಪಿಂಜಲಗಳು ಹಾರಿಬಂದವು.

05009037a ಯೇನ ಸರ್ವಾ ದಿಶೋ ರಾಜನ್ಪಿಬನ್ನಿವ ನಿರೀಕ್ಷತೇ|

05009037c ತಸ್ಮಾದ್ವಕ್ತ್ರಾದ್ವಿನಿಷ್ಪೇತುಸ್ತಿತ್ತಿರಾಸ್ತಸ್ಯ ಪಾಂಡವ||

ರಾಜನ್! ಯಾವುದರಿಂದ ದಿಕ್ಕುಗಳೆಲ್ಲವನ್ನೂ ಕುಡಿದುಬಿಡುವವನಂತೆ ನೋಡುತ್ತಿದ್ದನೋ ಆ ಮುಖದಿಂದ ಬಹಳಷ್ಟು ಕೋಗಿಲೆಗಳು ಹೊರಬಂದವು.

05009038a ಯತ್ಸುರಾಪಂ ತು ತಸ್ಯಾಸೀದ್ವಕ್ತ್ರಂ ತ್ರಿಶಿರಸಸ್ತದಾ|

05009038c ಕಲವಿಂಕಾ ವಿನಿಷ್ಪೇತುಸ್ತೇನಾಸ್ಯ ಭರತರ್ಷಭ||

ಭರತಶ್ರೇಷ್ಠ! ಯಾವುದರಿಂದ ಸುರಾಪಾನ ಮಾಡುತ್ತಿದ್ದನೋ ತ್ರಿಶಿರನ ಆ ಮುಖದಿಂದ ಗುಬ್ಬಿ-ಗಿಡುಗಗಳು ಹೊರಬಂದವು

05009039a ತತಸ್ತೇಷು ನಿಕೃತ್ತೇಷು ವಿಜ್ವರೋ ಮಘವಾನಭೂತ್|

05009039c ಜಗಾಮ ತ್ರಿದಿವಂ ಹೃಷ್ಟಸ್ತಕ್ಷಾಪಿ ಸ್ವಗೃಹಾನ್ಯಯೌ||

ತಲೆಗಳು ತುಂಡರಿಸಲ್ಪಡಲು ಮಘವತನು ವಿಜ್ವರನಾದನು. ಸಂತೋಷಗೊಂಡು ತ್ರಿದಿವಕ್ಕೆ ಹೋಗಿ ಸ್ವಗೃಹವನ್ನು ಸೇರಿದನು.

05009040a ತ್ವಷ್ಟಾ ಪ್ರಜಾಪತಿಃ ಶ್ರುತ್ವಾ ಶಕ್ರೇಣಾಥ ಹತಂ ಸುತಂ|

05009040c ಕ್ರೋಧಸಂರಕ್ತನಯನ ಇದಂ ವಚನಮಬ್ರವೀತ್||

ಪ್ರಜಾಪತಿ ತ್ವಷ್ಟನು ಶಕ್ರನಿಂದ ತನ್ನ ಮಗನು ಹತನಾದುದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಹೀಗೆ ಹೇಳಿದನು:

05009041a ತಪ್ಯಮಾನಂ ತಪೋ ನಿತ್ಯಂ ಕ್ಷಾಂತಂ ದಾಂತಂ ಜಿತೇಂದ್ರಿಯಂ|

05009041c ಅನಾಪರಾಧಿನಂ ಯಸ್ಮಾತ್ಪುತ್ರಂ ಹಿಂಸಿತವಾನ್ಮಮ||

05009042a ತಸ್ಮಾಚ್ಚಕ್ರವಧಾರ್ಥಾಯ ವೃತ್ರಮುತ್ಪಾದಯಾಮ್ಯಹಂ|

“ತಪಸ್ಸನ್ನು ತಪಿಸುತ್ತಿರುವ, ನಿತ್ಯವೂ ಕ್ಷಾಂತ, ದಾಂತ ಮತ್ತು ಜಿತೇಂದ್ರಿಯನಾಗಿ ಅನಾಪರಾಧಿಯಾಗಿದ್ದ ನನ್ನ ಪುತ್ರನನ್ನು ಯಾರು ಹಿಂಸಿಸಿದ್ದಾನೋ ಆ ಶಕ್ರನ ವಧೆಗಾಗಿ ನಾನು ವೃತ್ರನನ್ನು ಉತ್ಪಾದಿಸುತ್ತಿದ್ದೇನೆ.

05009042c ಲೋಕಾಃ ಪಶ್ಯಂತು ಮೇ ವೀರ್ಯಂ ತಪಸಶ್ಚ ಬಲಂ ಮಹತ್|

05009042e ಸ ಚ ಪಶ್ಯತು ದೇವೇಂದ್ರೋ ದುರಾತ್ಮಾ ಪಾಪಚೇತನಃ||

ನನ್ನ ವೀರ್ಯವನ್ನು ಮತ್ತು ತಪಸ್ಸಿನ ಮಹಾಬಲವನ್ನು ಲೋಕಗಳು ನೋಡಲಿ! ದುರಾತ್ಮ ಪಾಪಚೇತನ ದೇವೇಂದ್ರನೂ ಇದನ್ನು ನೋಡಲಿ.”

05009043a ಉಪಸ್ಪೃಶ್ಯ ತತಃ ಕ್ರುದ್ಧಸ್ತಪಸ್ವೀ ಸುಮಹಾಯಶಾಃ|

05009043c ಅಗ್ನಿಂ ಹುತ್ವಾ ಸಮುತ್ಪಾದ್ಯ ಘೋರಂ ವೃತ್ರಮುವಾಚ ಹ|

05009043e ಇಂದ್ರಶತ್ರೋ ವಿವರ್ಧಸ್ವ ಪ್ರಭಾವಾತ್ತಪಸೋ ಮಮ||

ಆಗ ಆ ಸುಮಹಾಯಶ ಕೃದ್ಧತಪಸ್ವಿಯು ನೀರನ್ನು ಮುಟ್ಟಿ, ಅಗ್ನಿಯಲ್ಲಿ ಆಹುತಿಯನ್ನು ಹಾಕಿ ಘೋರ ವೃತ್ರನನ್ನು ಉತ್ಪಾದಿಸಿ ಹೇಳಿದನು: “ಇಂದ್ರಶತ್ರುವೇ! ನನ್ನ ತಪಸ್ಸಿನ ಪ್ರಭಾವದಿಂದ ವಿವರ್ಧನಾಗು.”

05009044a ಸೋಽವರ್ಧತ ದಿವಂ ಸ್ತಬ್ಧ್ವಾ ಸೂರ್ಯವೈಶ್ವಾನರೋಪಮಃ|

05009044c ಕಿಂ ಕರೋಮೀತಿ ಚೋವಾಚ ಕಾಲಸೂರ್ಯ ಇವೋದಿತಃ|

ಸೂರ್ಯ-ಅಗ್ನಿಯರ ಸರಿಸಮನಾದ ಅವನು ದಿವವನ್ನು ಸ್ತಬ್ಧಗೊಳಿಸಿ ಬೆಳೆದನು. ಕಾಲಸೂರ್ಯನಂತೆ ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದನು.

05009044e ಶಕ್ರಂ ಜಹೀತಿ ಚಾಪ್ಯುಕ್ತೋ ಜಗಾಮ ತ್ರಿದಿವಂ ತತಃ||

05009045a ತತೋ ಯುದ್ಧಂ ಸಮಭವದ್ವೃತ್ರವಾಸವಯೋಸ್ತದಾ|

05009045c ಸಂಕ್ರುದ್ಧಯೋರ್ಮಹಾಘೋರಂ ಪ್ರಸಕ್ತಂ ಕುರುಸತ್ತಮ||

“ಇಂದ್ರನನ್ನು ಕೊಲ್ಲು!” ಎಂದು ಹೇಳಿ ಅವನು ತ್ರಿದಿವಕ್ಕೆ ತೆರಳಿದನು. ಆಗ ವೃತ್ರ-ವಾಸವರ ನಡುವೆ ಯುದ್ಧವು ನಡೆಯಿತು.

05009046a ತತೋ ಜಗ್ರಾಹ ದೇವೇಂದ್ರಂ ವೃತ್ರೋ ವೀರಃ ಶತಕ್ರತುಂ|

05009046c ಅಪಾವೃತ್ಯ ಸ ಜಗ್ರಾಸ ವೃತ್ರಃ ಕ್ರೋಧಸಮನ್ವಿತಃ||

ಆಗ ವೃತ್ರನು ವೀರ ಶತಕ್ರತು ದೇವೇಂದ್ರನನ್ನು ಹಿಡಿದನು. ಅವನನ್ನು ಜೋರಾಗಿ ತಿರುಗಿಸಿ ಕ್ರೋಧಸಮನ್ವಿತನಾದ ವೃತ್ರನು ನುಂಗಿದನು.

05009047a ಗ್ರಸ್ತೇ ವೃತ್ರೇಣ ಶಕ್ರೇ ತು ಸಂಭ್ರಾಂತಾಸ್ತ್ರಿದಶಾಸ್ತದಾ|

05009047c ಅಸೃಜಂಸ್ತೇ ಮಹಾಸತ್ತ್ವಾ ಜೃಂಭಿಕಾಂ ವೃತ್ರನಾಶಿನೀಂ||

ವೃತ್ರನಿಂದ ಶಕ್ರನು ನುಂಗಲ್ಪಡಲು ಮಹಾಸತ್ವಶಾಲೀ ತ್ರಿದಶರು ಸಂಭ್ರಾಂತರಾಗಿ ವೃತ್ರನಾಶಿನೀ ಜೃಂಭಿಕೆ (ಆಕಳಿಕೆ) ಯನ್ನು ಸೃಷ್ಟಿಸಿದರು.

05009048a ವಿಜೃಂಭಮಾಣಸ್ಯ ತತೋ ವೃತ್ರಸ್ಯಾಸ್ಯಾದಪಾವೃತಾತ್|

05009048c ಸ್ವಾನ್ಯಂಗಾನ್ಯಭಿಸಂಕ್ಷಿಪ್ಯ ನಿಷ್ಕ್ರಾಂತೋ ಬಲಸೂದನಃ|

05009048e ತತಃ ಪ್ರಭೃತಿ ಲೋಕೇಷು ಜೃಂಭಿಕಾ ಪ್ರಾಣಿಸಂಶ್ರಿತಾ||

ವೃತ್ರನು ಆಕಳಿಸಲು ಬಾಯಿ ತೆರೆದಾಗ ಬಲಸೂದನನು ತನ್ನ ಅಂಗಾಂಗಗಳನ್ನು ಸಂಕ್ಷಿಪ್ತಗೊಳಿಸಿ ಹೊರಬಂದನು. ಅಂದಿನಿಂದ ಲೋಕದಲ್ಲಿ ಜೃಂಭಿಕೆಯು ಪ್ರಾಣಿಗಳಲ್ಲಿ ಸಂಶ್ರಿತಳಾದಳು.

05009049a ಜಹೃಷುಶ್ಚ ಸುರಾಃ ಸರ್ವೇ ದೃಷ್ಟ್ವಾ ಶಕ್ರಂ ವಿನಿಹ್ಸೃತಂ|

05009049c ತತಃ ಪ್ರವವೃತೇ ಯುದ್ಧಂ ವೃತ್ರವಾಸವಯೋಃ ಪುನಃ|

05009049e ಸಂರಬ್ಧಯೋಸ್ತದಾ ಘೋರಂ ಸುಚಿರಂ ಭರತರ್ಷಭ||

ಶಕ್ರನು ಹೊರಬಂದುದನ್ನು ನೋಡಿದ ಎಲ್ಲ ಸುರರೂ ಸಂತುಷ್ಟರಾದರು. ಆಗ ಪುನಃ ವೃತ್ರ-ವಾಸವರ ನಡುವೆ ಯುದ್ಧವು ಪ್ರಾರಂಭವಾಯಿತು. ಭರತರ್ಷಭ! ಆ ಘೋರ ಮಹಾಯುದ್ಧವು ತುಂಬಾ ಸಮಯದವರೆಗೆ ನಡೆಯಿತು.

05009050a ಯದಾ ವ್ಯವರ್ಧತ ರಣೇ ವೃತ್ರೋ ಬಲಸಮನ್ವಿತಃ|

05009050c ತ್ವಷ್ಟುಸ್ತಪೋಬಲಾದ್ವಿದ್ವಾಂಸ್ತದಾ ಶಕ್ರೋ ನ್ಯವರ್ತತ||

ರಣದಲ್ಲಿ ತನ್ನ ಮತ್ತು ತ್ವಷ್ಟನ ತಪೋಬಲದಿಂದ ಬಲಸಮನ್ವಿತ ವೃತ್ರನು ವರ್ಧಿಸಿ ಅವನದೇ ಮೇಲ್ಗೈಯಾಗಲು ಶಕ್ರನು ಹಿಂದೆ ಸರಿದನು.

05009051a ನಿವೃತ್ತೇ ತು ತದಾ ದೇವಾ ವಿಷಾದಮಗಮನ್ಪರಂ|

05009051c ಸಮೇತ್ಯ ಶಕ್ರೇಣ ಚ ತೇ ತ್ವಷ್ಟುಸ್ತೇಜೋವಿಮೋಹಿತಾಃ|

05009051e ಅಮಂತ್ರಯಂತ ತೇ ಸರ್ವೇ ಮುನಿಭಿಃ ಸಹ ಭಾರತ||

ಅವನು ಹಿಂದೆ ಸರಿಯಲು ದೇವತೆಗಳು ಪರಮ ವಿಷಾದಗೊಂಡರು. ಶಕ್ರನ ಜೊತೆಗೆ ಅವರೂ ಕೂಡ ತ್ವಷ್ಟನ ತೇಜಸ್ಸಿನಿಂದ ವಿಮೋಹಿತರಾದರು. ಭಾರತ! ಆಗ ಅವರೆಲ್ಲರೂ ಮುನಿಗಳನ್ನು ಕೂಡಿ ಮಂತ್ರಾಲೋಚನೆಗೈದರು.

05009052a ಕಿಂ ಕಾರ್ಯಮಿತಿ ತೇ ರಾಜನ್ವಿಚಿಂತ್ಯ ಭಯಮೋಹಿತಾಃ|

05009052c ಜಗ್ಮುಃ ಸರ್ವೇ ಮಹಾತ್ಮಾನಂ ಮನೋಭಿರ್ವಿಷ್ಣುಮವ್ಯಯಂ||

05009052e ಉಪವಿಷ್ಟಾ ಮಂದರಾಗ್ರೇ ಸರ್ವೇ ವೃತ್ರವಧೇಪ್ಸವಃ||

ರಾಜನ್! ಏನು ಮಾಡಬೇಕು ಎಂದು ಚಿಂತಿಸಿ ಭಯಮೋಹಿತರಾಗಿ, ವೃತ್ರನ ವಧೆಯನ್ನುಬಯಸಿದ ಎಲ್ಲರೂ ಮಹಾತ್ಮ, ಅವ್ಯಯ, ಮಂದರಾಗ್ರದಲ್ಲಿ ಕುಳಿತಿರುವ ವಿಷ್ಣುವನ್ನು ನೆನೆದರು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರವಿಜಯೇ ನವಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರವಿಜಯದಲ್ಲಿ ಒಂಭತ್ತನೆಯ ಅಧ್ಯಾಯವು|

Image result for flowers against white background

Comments are closed.