Udyoga Parva: Chapter 57

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೭

ಯುದ್ಧದಿಂದ ವಿಮುಖನಾಗು ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಲು (೧-೯), ದುರ್ಯೋಧನನು ತಾನು ಮತ್ತು ಕರ್ಣ ಇಬ್ಬರೇ ಪಾಂಡವರೊಂದಿಗೆ ಯುದ್ಧಮಾಡುತ್ತಾರೆಂದೂ, ಬೇರೆ ಯಾರೂ ಬರುವ ಅವಶ್ಯಕತೆಯಿಲ್ಲವೆಂದೂ, “ತೀಕ್ಷ್ಣವಾದ ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟು ಕೊಡುವುದಿಲ್ಲ” ವೆಂದೂ ಹೇಳುವುದು (೧೦-೧೮). “ಈಗ ನಾನು ದುರ್ಯೋಧನನನ್ನು ತ್ಯಜಿಸುತ್ತೇನೆ” ಎಂದು ಧೃತರಾಷ್ಟ್ರನು ಮಗನಿಗೆ ಹೇಳಿದುದು (೧೯-೨೯).

05057001 ಧೃತರಾಷ್ಟ್ರ ಉವಾಚ|

05057001a ಕ್ಷತ್ರತೇಜಾ ಬ್ರಹ್ಮಚಾರೀ ಕೌಮಾರಾದಪಿ ಪಾಂಡವಃ|

05057001c ತೇನ ಸಮ್ಯುಗಮೇಷ್ಯಂತಿ ಮಂದಾ ವಿಲಪತೋ ಮಮ||

ಧೃತರಾಷ್ಟ್ರನು ಹೇಳಿದನು: “ಪಾಂಡವನು ಕೌಮಾರ್ಯದಿಂದಲೇ ಕ್ಷತ್ರತೇಜಸ್ಸನ್ನು ಹೊಂದಿದ್ದಾನೆ, ಬ್ರಹ್ಮಚಾರಿಯಾಗಿದ್ದಾನೆ. ಅವರೊಂದಿಗೆ ಈ ಮಂದರು, ನಾನು ವಿಲಪಿಸುತ್ತಿದ್ದೇನೆಂದು ಹೇಳಿ, ಯುದ್ಧಮಾಡಲು ಬಯಸುತ್ತಾರೆ.

05057002a ದುರ್ಯೋಧನ ನಿವರ್ತಸ್ವ ಯುದ್ಧಾದ್ಭರತಸತ್ತಮ|

05057002c ನ ಹಿ ಯುದ್ಧಂ ಪ್ರಶಂಸಂತಿ ಸರ್ವಾವಸ್ಥಮರಿಂದಮ||

ಭರತಸತ್ತಮ! ದುರ್ಯೋಧನ! ಅರಿಂದಮ! ಯುದ್ಧದಿಂದ ವಿಮುಖನಾಗು. ಸರ್ವಾವಸ್ಥೆಗಳಲ್ಲಿ ಯುದ್ಧವನ್ನು ಪ್ರಶಂಸಿವುದಿಲ್ಲ.

05057003a ಅಲಮರ್ಧಂ ಪೃಥಿವ್ಯಾಸ್ತೇ ಸಹಾಮಾತ್ಯಸ್ಯ ಜೀವಿತುಂ|

05057003c ಪ್ರಯಚ್ಚ ಪಾಂಡುಪುತ್ರಾಣಾಂ ಯಥೋಚಿತಮರಿಂದಮ||

ಅಮಾತ್ಯರೊಂದಿಗೆ ಜೀವಿಸಲು ನಿನಗೆ ಅರ್ಧಭೂಮಿಯು ಸಾಕು! ಅರಿಂದಮ! ಪಾಂಡುಪುತ್ರರಿಗೆ ಯಥೋಚಿತವಾದುದನ್ನು ಕೊಟ್ಟುಬಿಡು.

05057004a ಏತದ್ಧಿ ಕುರವಃ ಸರ್ವೇ ಮನ್ಯಂತೇ ಧರ್ಮಸಂಹಿತಂ|

05057004c ಯತ್ತ್ವಂ ಪ್ರಶಾಂತಿಮಿಚ್ಚೇಥಾಃ ಪಾಂಡುಪುತ್ರೈರ್ಮಹಾತ್ಮಭಿಃ|

ಮಹಾತ್ಮ ಪಾಂಡುಪುತ್ರರೊಂದಿಗೆ ಶಾಂತಿಯಿಂದಿರಲು ಪ್ರಯತ್ನಿಸುವುದೇ ಧರ್ಮಸಂಹಿತವೆಂದು ಎಲ್ಲ ಕುರುಗಳೂ ಅಭಿಪ್ರಾಯಪಡುತ್ತಾರೆ.

05057005a ಅಂಗೇಮಾಂ ಸಮವೇಕ್ಷಸ್ವ ಪುತ್ರ ಸ್ವಾಮೇವ ವಾಹಿನೀಂ|

05057005c ಜಾತ ಏವ ತವ ಸ್ರಾವಸ್ತ್ವಂ ತು ಮೋಹಾನ್ನ ಬುಧ್ಯಸೇ||

ಮಗನೇ! ಆಲೋಚಿಸು! ನಿನ್ನ ಈ ಸೇನೆಯು ನಿನ್ನದೇ ನಾಶಕ್ಕೆ ಕಾರಣವಾಗುವುದು. ಮೋಹದಿಂದಾಗಿ ಇದು ನಿನಗೆ ಅರ್ಥವಾಗುತ್ತಿಲ್ಲ.

05057006a ನ ಹ್ಯಹಂ ಯುದ್ಧಮಿಚ್ಚಾಮಿ ನೈತದಿಚ್ಚತಿ ಬಾಹ್ಲಿಕಃ|

05057006c ನ ಚ ಭೀಷ್ಮೋ ನ ಚ ದ್ರೋಣೋ ನಾಶ್ವತ್ಥಾಮಾ ನ ಸಂಜಯ||

05057007a ನ ಸೋಮದತ್ತೋ ನ ಶಲ್ಯೋ ನ ಕೃಪೋ ಯುದ್ಧಮಿಚ್ಚತಿ|

05057007c ಸತ್ಯವ್ರತಃ ಪುರುಮಿತ್ರೋ ಜಯೋ ಭೂರಿಶ್ರವಾಸ್ತಥಾ||

ಏಕೆಂದರೆ ನಾನು ಯುದ್ಧವನ್ನು ಬಯಸುವುದಿಲ್ಲ. ಬಾಹ್ಲೀಕನೂ ಇದನ್ನು ಬಯಸುವುದಿಲ್ಲ. ಭೀಷ್ಮನೂ, ದ್ರೋಣನೂ, ಅಶ್ವತ್ಥಾಮನೂ, ಸಂಜಯನೂ, ಸೋಮದತ್ತನೂ, ಶಲ್ಯನೂ, ಕೃಪನೂ, ಸತ್ಯವ್ರತ ಪುರುಮಿತ್ರ, ಜಯಶಾಲಿ ಭೂರಿಶ್ರವನೂ ಯುದ್ಧವನ್ನು ಇಚ್ಛಿಸುವುದಿಲ್ಲ.

05057008a ಯೇಷು ಸಂಪ್ರತಿತಿಷ್ಠೇಯುಃ ಕುರವಃ ಪೀಡಿತಾಃ ಪರೈಃ|

05057008c ತೇ ಯುದ್ಧಂ ನಾಭಿನಂದಂತಿ ತತ್ತುಭ್ಯಂ ತಾತ ರೋಚತಾಂ||

ಶತ್ರುಗಳಿಂದ ಪೀಡಿತರಾದಾಗ ಯಾರ ಮೇಲೆ ಕುರುಗಳು ಅವಲಂಬಿಸುತ್ತಾರೋ ಅವರೇ ಯುದ್ಧವನ್ನು ಇಷ್ಟಪಡುವುದಿಲ್ಲ. ಮಗೂ! ನಿನಗೂ ಅದು ಇಷ್ಟವಾಗಲಿ.

05057009a ನ ತ್ವಂ ಕರೋಷಿ ಕಾಮೇನ ಕರ್ಣಃ ಕಾರಯಿತಾ ತವ|

05057009c ದುಃಶಾಸನಶ್ಚ ಪಾಪಾತ್ಮಾ ಶಕುನಿಶ್ಚಾಪಿ ಸೌಬಲಃ||

ನೀನು ನಿನಗೆ ಬೇಕೆಂದು ಮಾಡುತ್ತಿಲ್ಲ. ಕರ್ಣ, ಪಾಪಾತ್ಮ ದುಃಶಾಸನ ಮತ್ತು ಶಕುನಿ ಸೌಬಲರು ಇದನ್ನು ನಿನ್ನಿಂದ ಮಾಡಿಸುತ್ತಿದ್ದಾರೆ.”

05057010 ದುರ್ಯೋಧನ ಉವಾಚ|

05057010a ನಾಹಂ ಭವತಿ ನ ದ್ರೋಣೇ ನಾಶ್ವತ್ಥಾಮ್ನಿ ನ ಸಂಜಯೇ|

05057010c ನ ವಿಕರ್ಣೇ ನ ಕಾಂಬೋಜೇ ನ ಕೃಪೇ ನ ಚ ಬಾಹ್ಲಿಕೇ||

05057011a ಸತ್ಯವ್ರತೇ ಪುರುಮಿತ್ರೇ ಭೂರಿಶ್ರವಸಿ ವಾ ಪುನಃ|

05057011c ಅನ್ಯೇಷು ವಾ ತಾವಕೇಷು ಭಾರಂ ಕೃತ್ವಾ ಸಮಾಹ್ವಯೇ||

ದುರ್ಯೋಧನನು ಹೇಳಿದನು: “ನಾನು ನಿನ್ನ ಮೇಲಾಗಲೀ ಅಥವಾ ಅನ್ಯರ ಮೇಲಾಗಲೀ ಭಾರವನ್ನು ಹೊರಿಸಿ ಈ ಯುದ್ಧವನ್ನು ಮಾಡುತ್ತಿಲ್ಲ. ನನಗೆ ನೀನೂ ಬೇಡ, ದ್ರೋಣನೂ ಬೇಡ, ಅಶ್ವತ್ಥಾಮನೂ ಬೇಡ, ಸಂಜಯನೂ ಬೇಡ, ವಿಕರ್ಣನೂ ಬೇಡ, ಕಾಂಬೋಜನೂ ಬೇಡ, ಕೃಪನೂ ಬೇಡ, ಬಾಹ್ಲೀಕನೂ ಬೇಡ, ಸತ್ಯವ್ರತ ಪುರುಮಿತ್ರನೂ ಬೇಡ ಮತ್ತು ಪುನಃ ಭೂರಿಶ್ರವನೂ ಬೇಡ.

05057012a ಅಹಂ ಚ ತಾತ ಕರ್ಣಶ್ಚ ರಣಯಜ್ಞಾಂ ವಿತತ್ಯ ವೈ|

05057012c ಯುಧಿಷ್ಠಿರಂ ಪಶುಂ ಕೃತ್ವಾ ದೀಕ್ಷಿತೌ ಭರತರ್ಷಭ||

05057013a ರಥೋ ವೇದೀ ಸ್ರುವಃ ಖಡ್ಗೋ ಗದಾ ಸ್ರುಕ್ಕವಚಂ ಸದಃ|

05057013c ಚಾತುರ್ಹೋತ್ರಂ ಚ ಧುರ್ಯಾ ಮೇ ಶರಾ ದರ್ಭಾ ಹವಿರ್ಯಶಃ||

ಅಪ್ಪಾ! ಭರತರ್ಷಭ! ನಾನು ಮತ್ತು ಕರ್ಣ ಇಬ್ಬರೂ ದೀಕ್ಷೆ ಕೈಗೊಂಡು, ಯುಧಿಷ್ಠಿರನನ್ನು ಬಲಿಯನ್ನಾಗಿ ಮಾಡಿ, ರಥವನ್ನು ವೇದಿಯನ್ನಾಗಿಸಿ, ಆಹುತಿಯನ್ನು ನೀಡಲು ಖಡ್ಗವನ್ನು ಸಣ್ಣ ಹುಟ್ಟನ್ನಾಗಿಸಿ, ಗದೆಯನ್ನು ದೊಡ್ಡ ಹುಟ್ಟನ್ನಾಗಿಸಿ, ಕವಚವನ್ನು ಸದಸ್ಯನನ್ನಾಗಿಸಿ, ನಾಲ್ಕು ಕುದುರೆಗಳನ್ನು ಧುರ್ಯರನ್ನಾಗಿಸಿ, ನನ್ನ ಬಾಣಗಳನ್ನು ದರ್ಬೆಗಳನ್ನಾಗಿಸಿ, ಯಶಸ್ಸನ್ನು ಹವಿಸ್ಸನ್ನಾಗಿಸಿ ರಣಯಜ್ಞವನ್ನು ಮಾಡಬೇಕಿಂದಿದ್ದೇವೆ.

05057014a ಆತ್ಮಯಜ್ಞೇನ ನೃಪತೇ ಇಷ್ಟ್ವಾ ವೈವಸ್ವತಂ ರಣೇ|

05057014c ವಿಜಿತ್ಯ ಸ್ವಯಮೇಷ್ಯಾವೋ ಹತಾಮಿತ್ರೌ ಶ್ರಿಯಾ ವೃತೌ||

ನೃಪತೇ! ರಣದಲ್ಲಿ ವೈವಸ್ವತನಿಗೆ ಈ ರೀತಿಯ ಆತ್ಮಯಜ್ಞವನ್ನು ಮಾಡಿ, ಅಮಿತ್ರರನ್ನು ಸಂಹರಿಸಿ, ಶ್ರೀಯಿಂದ ಆವೃತರಾಗಿ ವಿಜಯ ಸಾಧಿಸಿ ಹಿಂದಿರುಗುತ್ತೇವೆ.

05057015a ಅಹಂ ಚ ತಾತ ಕರ್ಣಶ್ಚ ಭ್ರಾತಾ ದುಃಶಾಸನಶ್ಚ ಮೇ|

05057015c ಏತೇ ವಯಂ ಹನಿಷ್ಯಾಮಃ ಪಾಂಡವಾನ್ಸಮರೇ ತ್ರಯಃ||

ಅಪ್ಪಾ! ನಾನು, ಕರ್ಣ ಮತ್ತು ನನ್ನ ತಮ್ಮ ದುಃಶಾಸನ ಈ ನಾವು ಮೂವರೇ ಸಮರದಲ್ಲಿ ಪಾಂಡವರನ್ನು ಇಲ್ಲವಾಗಿಸುತ್ತೇವೆ.

05057016a ಅಹಂ ಹಿ ಪಾಂಡವಾನ್ ಹತ್ವಾ ಪ್ರಶಾಸ್ತಾ ಪೃಥಿವೀಮಿಮಾಂ|

05057016c ಮಾಂ ವಾ ಹತ್ವಾ ಪಾಂಡುಪುತ್ರಾ ಭೋಕ್ತಾರಃ ಪೃಥಿವೀಮಿಮಾಂ||

ನಾನೇ ಪಾಂಡವರನ್ನು ಕೊಂದು ಈ ಪೃಥ್ವಿಯನ್ನು ಆಳುತ್ತೇನೆ. ಅಥವಾ ಪಾಂಡುಪುತ್ರರು ನನ್ನನ್ನು ಕೊಂದು ಈ ಪೃಥ್ವಿಯನ್ನು ಭೋಗಿಸುತ್ತಾರೆ.

05057017a ತ್ಯಕ್ತಂ ಮೇ ಜೀವಿತಂ ರಾಜನ್ಧನಂ ರಾಜ್ಯಂ ಚ ಪಾರ್ಥಿವ|

05057017c ನ ಜಾತು ಪಾಂಡವೈಃ ಸಾರ್ಧಂ ವಸೇಯಮಹಮಚ್ಯುತ||

ರಾಜನ್! ಪಾರ್ಥಿವ! ಅಚ್ಯುತ! ನನ್ನ ಜೀವವನ್ನು, ಧನವನ್ನು ಮತ್ತು ರಾಜ್ಯವನ್ನು ತ್ಯಜಿಸಿಯೇನು. ಆದರೆ ಪಾಂಡವರೊಂದಿಗೆ ನಾನು ಹಂಚಿಕೊಂಡು ಜೀವಿಸುವುದಿಲ್ಲ.

05057018a ಯಾವದ್ಧಿ ಸೂಚ್ಯಾಸ್ತೀಕ್ಷ್ಣಾಯಾ ವಿಧ್ಯೇದಗ್ರೇಣ ಮಾರಿಷ|

05057018c ತಾವದಪ್ಯಪರಿತ್ಯಾಜ್ಯಂ ಭೂಮೇರ್ನಃ ಪಾಂಡವಾನ್ಪ್ರತಿ||

ತೀಕ್ಷ್ಣವಾದ ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟು ಕೊಡುವುದಿಲ್ಲ.”

05057019 ಧೃತರಾಷ್ಟ್ರ ಉವಾಚ|

05057019a ಸರ್ವಾನ್ವಸ್ತಾತ ಶೋಚಾಮಿ ತ್ಯಕ್ತೋ ದುರ್ಯೋಧನೋ ಮಯಾ|

05057019c ಯೇ ಮಂದಮನುಯಾಸ್ಯಧ್ವಂ ಯಾಂತಂ ವೈವಸ್ವತಕ್ಷಯಂ||

ಧೃತರಾಷ್ಟ್ರನು ಹೇಳಿದನು: “ಅಯ್ಯಾ! ಈಗ ನಾನು ದುರ್ಯೋಧನನನ್ನು ತ್ಯಜಿಸುತ್ತೇನೆ. ಈ ಮೂಢನನ್ನು ಅನುಸರಿಸುವವರೆಲ್ಲರೂ ವೈವಸ್ವತಕ್ಷಯಕ್ಕೆ ಹೋಗುತ್ತಾರೆ.

05057020a ರುರೂಣಾಮಿವ ಯೂಥೇಷು ವ್ಯಾಘ್ರಾಃ ಪ್ರಹರತಾಂ ವರಾಃ|

05057020c ವರಾನ್ ವರಾನ್ ಹನಿಷ್ಯಂತಿ ಸಮೇತಾ ಯುಧಿ ಪಾಂಡವಾಃ||

ರುರುಗಳ ಗುಂಪುಗಳ ಮಧ್ಯೆ ಹೋರಾಡುವ ಶ್ರೇಷ್ಠ ವ್ಯಾಘ್ರದಂತೆ ಯುದ್ಧದಲ್ಲಿ ಸೇರಿರುವ ಶ್ರೇಷ್ಠ ಶ್ರೇಷ್ಠರನ್ನೂ ಪಾಂಡವರು ಸಂಹರಿಸುತ್ತಾರೆ.

05057021a ಪ್ರತೀಪಮಿವ ಮೇ ಭಾತಿ ಯುಯುಧಾನೇನ ಭಾರತೀ|

05057021c ವ್ಯಸ್ತಾ ಸೀಮಂತಿನೀ ತ್ರಸ್ತಾ ಪ್ರಮೃಷ್ಟಾ ದೀರ್ಘಬಾಹುನಾ||

ಬೆದರಿದ ಸೀಮಂತಿನಿಯಂತಿರುವ ಭಾರತಿಯನ್ನು ಯುಯುಧಾನನು ತನ್ನ ದೀರ್ಘ ಬಾಹುಗಳಿಂದ ಹಿಡಿದು, ಮುದ್ದೆಮಾಡಿ ದೂರ ಎಸೆಯುತ್ತಾನೆ.

05057022a ಸಂಪೂರ್ಣಂ ಪೂರಯನ್ಭೂಯೋ ಬಲಂ ಪಾರ್ಥಸ್ಯ ಮಾಧವಃ|

05057022c ಶೈನೇಯಃ ಸಮರೇ ಸ್ಥಾತಾ ಬೀಜವತ್ಪ್ರವಪಂ ಶರಾನ್||

ಆಗಲೇ ಸಂಪೂರ್ಣವಾಗಿರುವ ಪಾರ್ಥನ ಬಲವನ್ನು ಇನ್ನೂ ಸಂಪೂರ್ಣಗೊಳಿಸುವ ಮಾಧವ ಶೈನಿಯು ಹೊಲದಲ್ಲಿ ಬೀಜವನ್ನು ಬಿತ್ತಿದ ಹಾಗೆ ಸಮರದಲ್ಲಿ ಬಾಣಗಳನ್ನು ಸುರಿಸುತ್ತಾನೆ.

05057023a ಸೇನಾಮುಖೇ ಪ್ರಯುದ್ಧಾನಾಂ ಭೀಮಸೇನೋ ಭವಿಷ್ಯತಿ|

05057023c ತಂ ಸರ್ವೇ ಸಂಶ್ರಯಿಷ್ಯಂತಿ ಪ್ರಾಕಾರಮಕುತೋಭಯಂ|

ಭೀಮಸೇನನು ಸೇನೆಯ ಮುಖದಲ್ಲಿ ಹೋರಾಡುತ್ತಾನೆ. ಅವನ ಸೈನಿಕರೆಲ್ಲರೂ ಪ್ರಾಕಾರದ ಹಿಂದೆ ನಿಲ್ಲುವಂತೆ ಅವನ ಹಿಂದೆ ನಿಂತು ಯುದ್ಧಮಾಡುತ್ತಾರೆ.

05057024a ಯದಾ ದ್ರಕ್ಷ್ಯಸಿ ಭೀಮೇನ ಕುಂಜರಾನ್ವಿನಿಪಾತಿತಾನ್|

05057024c ವಿಶೀರ್ಣದಂತಾನ್ಗಿರ್ಯಾಭಾನ್ಭಿನ್ನಕುಂಭಾನ್ಸಶೋಣಿತಾನ್||

05057025a ತಾನಭಿಪ್ರೇಕ್ಷ್ಯ ಸಂಗ್ರಾಮೇ ವಿಶೀರ್ಣಾನಿವ ಪರ್ವತಾನ್|

05057025c ಭೀತೋ ಭೀಮಸ್ಯ ಸಂಸ್ಪರ್ಶಾತ್ಸ್ಮರ್ತಾಸಿ ವಚನಸ್ಯ ಮೇ||

ಭೀಮನು ದಂತಗಳನ್ನು ಮುರಿದು, ಕಪಾಲಗಳನ್ನು ಜಜ್ಜಿ, ರಕ್ತಸುರಿಸಿ ಆನೆಗಳನ್ನು ಕೆಳಗುರುಳಿಸಿದುದನ್ನು ನೋಡುತ್ತೀಯೆ. ಪರ್ವತಗಳಂತಿದ್ದ ಅವು ಪುಡಿಪುಡಿಯಾಗಿ ಸಂಗ್ರಾಮದಲ್ಲಿ ಬಿದ್ದುದನ್ನು ನೋಡಿ, ಭೀಮನ ಸ್ಪರ್ಷಕ್ಕೇ ಹೆದರುವಾಗ ನೀನು ನನ್ನ ಮಾತನ್ನು ನೆನಪಿಸಿಕೊಳ್ಳುತ್ತೀಯೆ.

05057026a ನಿರ್ದಗ್ಧಂ ಭೀಮಸೇನೇನ ಸೈನ್ಯಂ ಹತರಥದ್ವಿಪಂ|

05057026c ಗತಿಮಗ್ನೇರಿವ ಪ್ರೇಕ್ಷ್ಯ ಸ್ಮರ್ತಾಸಿ ವಚನಸ್ಯ ಮೇ||

ರಥ, ಕುದುರೆ ಮತ್ತು ಆನೆಗಳು ಭೀಮಸೇನನಿಂದ, ಅಗ್ನಿಯ ಮಾರ್ಗದಂತೆ ಸುಡಲ್ಪಟ್ಟಿದ್ದುದನ್ನು ನೋಡಿ ನೀನು ನನ್ನ ವಚನವನ್ನು ಸ್ಮರಿಸಿಕೊಳ್ಳುತ್ತೀಯೆ.

05057027a ಮಹದ್ವೋ ಭಯಮಾಗಾಮಿ ನ ಚೇಚ್ಚಾಮ್ಯಥ ಪಾಂಡವೈಃ|

05057027c ಗದಯಾ ಭೀಮಸೇನೇನ ಹತಾಃ ಶಮಮುಪೈಷ್ಯಥ||

ಪಾಂಡವರೊಂದಿಗೆ ಸಂಧಿಯನ್ನು ಮಾಡಿಕೊಳ್ಳದೇ ಇದ್ದರೆ ಮಹಾ ಭಯವು ನಿನಗಾಗುತ್ತದೆ. ಭೀಮಸೇನನ ಗದೆಯಿಂದ ಹತನಾಗಿ ಶಾಂತಿಯನ್ನು ಹೊಂದುತ್ತೀಯೆ.

05057028a ಮಹಾವನಮಿವ ಚಿನ್ನಂ ಯದಾ ದ್ರಕ್ಷ್ಯಸಿ ಪಾತಿತಂ|

05057028c ಬಲಂ ಕುರೂಣಾಂ ಸಂಗ್ರಾಮೇ ತದಾ ಸ್ಮರ್ತಾಸಿ ಮೇ ವಚಃ||

ಕುರುಗಳ ಸೇನೆಯು ಸಂಗ್ರಾಮದಲ್ಲಿ ಮಹಾವನದಂತೆ ಕತ್ತರಿಸಲ್ಪಟ್ಟು ಬೀಳುವುದನ್ನು ನೋಡಿದಾಗ ನನ್ನ ಮಾತನ್ನು ಸ್ಮರಿಸಿಕೊಳ್ಳುತ್ತೀಯೆ.””

05057029 ವೈಶಂಪಾಯನ ಉವಾಚ|

05057029a ಏತಾವದುಕ್ತ್ವಾ ರಾಜಾ ತು ಸ ಸರ್ವಾನ್ಪೃಥಿವೀಪತೀನ್|

05057029c ಅನುಭಾಷ್ಯ ಮಹಾರಾಜ ಪುನಃ ಪಪ್ರಚ್ಚ ಸಂಜಯಂ||

ವೈಶಂಪಾಯನನು ಹೇಳಿದನು: “ಎಲ್ಲ ಪೃಥಿವೀಪತಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ ಮಹಾರಾಜನು ಪುನಃ ಸಂಜಯನನ್ನು ಮಾತನಾಡಿಸಿ ಕೇಳಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಸಪ್ತಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೇಳನೆಯ ಅಧ್ಯಾಯವು.

Related image

Comments are closed.