Udyoga Parva: Chapter 55

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೫

ಪಾಂಡವರ ರಥಗಳ ವರ್ಣನೆ

“ಏಳು ಅಕ್ಷೌಹಿಣಿಗಳನ್ನು ಪಡೆದು ಕೌಂತೇಯ ಯುಧಿಷ್ಠಿರನು ರಾಜರೊಂದಿಗೆ ಯುದ್ಧಕ್ಕಾಗಿ ಏನು ಮಾಡುತ್ತಿದ್ದಾನೆ?” ಎಂದು ದುರ್ಯೋಧನನು ಕೇಳಲು ಸಂಜಯನು ಪಾಂಡವರ ರಥಗಳನ್ನು ವರ್ಣಿಸಿದುದು (೧-೧೬).

05055001 ದುರ್ಯೋಧನ ಉವಾಚ|

05055001a ಅಕ್ಷೌಹಿಣೀಃ ಸಪ್ತ ಲಬ್ಧ್ವಾ ರಾಜಭಿಃ ಸಹ ಸಂಜಯ|

05055001c ಕಿಂ ಸ್ವಿದಿಚ್ಚತಿ ಕೌಂತೇಯೋ ಯುದ್ಧಪ್ರೇಪ್ಸುರ್ಯುಧಿಷ್ಠಿರಃ||

ದುರ್ಯೋಧನನು ಹೇಳಿದನು: “ಸಂಜಯ! ಏಳು ಅಕ್ಷೌಹಿಣಿಗಳನ್ನು ಪಡೆದು ಕೌಂತೇಯ ಯುಧಿಷ್ಠಿರನು ರಾಜರೊಂದಿಗೆ ಯುದ್ಧಕ್ಕಾಗಿ ಏನು ಮಾಡುತ್ತಿದ್ದಾನೆ?”

05055002 ಸಂಜಯ ಉವಾಚ|

05055002a ಅತೀವ ಮುದಿತೋ ರಾಜನ್ಯುದ್ಧಪ್ರೇಪ್ಸುರ್ಯುಧಿಷ್ಠಿರಃ|

05055002c ಭೀಮಸೇನಾರ್ಜುನೌ ಚೋಭೌ ಯಮಾವಪಿ ನ ಬಿಭ್ಯತಃ||

ಸಂಜಯನು ಹೇಳಿದನು: “ರಾಜನ್! ಯುದ್ಧದ ಕುರಿತು ಯುಧಿಷ್ಠಿರನು ಅತೀವ ಹರ್ಷಿತನಾಗಿದ್ದಾನೆ. ಭೀಮಸೇನ-ಅರ್ಜುನರ, ಇಬ್ಬರು ಯಮಳರೂ ಕೂಡ ಭಯಪಡುತ್ತಿಲ್ಲ.

05055003a ರಥಂ ತು ದಿವ್ಯಂ ಕೌಂತೇಯಃ ಸರ್ವಾ ವಿಭ್ರಾಜಯನ್ದಿಶಃ|

05055003c ಮಂತ್ರಂ ಜಿಜ್ಞಾಸಮಾನಃ ಸನ್ಭೀಭತ್ಸುಃ ಸಮಯೋಜಯತ್||

ಮಂತ್ರಗಳನ್ನು ಪರೀಕ್ಷಿಸಲು ಕೌಂತೇಯ ಬೀಭತ್ಸುವು ಎಲ್ಲ ದಿಕ್ಕುಗಳನ್ನೂ ಬೆಳಗಿಸುವ ದಿವ್ಯ ರಥವನ್ನು ಸಿದ್ಧಪಡಿಸಿದ್ದಾನೆ.

05055004a ತಮಪಶ್ಯಾಮ ಸಮ್ನದ್ಧಂ ಮೇಘಂ ವಿದ್ಯುತ್ಪ್ರಭಂ ಯಥಾ|

05055004c ಸ ಮಂತ್ರಾನ್ಸಮಭಿಧ್ಯಾಯ ಹೃಷ್ಯಮಾಣೋಽಭ್ಯಭಾಷತ||

ಕವಚಗಳನ್ನು ಧರಿಸಿದ ಅವನು ಮಿಂಚಿನಿಂದ ಕೂಡಿದ ಕಪ್ಪು ಮೋಡದಂತೆ ಕಾಣಿಸುತ್ತಾನೆ. ಸ್ವಲ್ಪ ಯೋಚಿಸಿ ಅವನು ಹರ್ಷದಿಂದ ನನಗೆ ಈ ಮಾತುಗಳನ್ನಾಡಿದನು:

05055005a ಪೂರ್ವರೂಪಮಿದಂ ಪಶ್ಯ ವಯಂ ಜೇಷ್ಯಾಮ ಸಂಜಯ|

05055005c ಬೀಭತ್ಸುರ್ಮಾಂ ಯಥೋವಾಚ ತಥಾವೈಮ್ಯಹಮಪ್ಯುತ||

“ಸಂಜಯ! ಮೊದಲ ಈ ರೂಪವನ್ನು ನೋಡು. ನಾವು ಗೆಲ್ಲುತ್ತೇವೆ!” ಬೀಭತ್ಸುವು ನನಗೆ ಹೇಳಿದುದು ಸತ್ಯವಾಗಿ ತೋರಿತು.”

05055006 ದುರ್ಯೋಧನ ಉವಾಚ|

05055006a ಪ್ರಶಂಸಸ್ಯಭಿನಂದಂಸ್ತಾನ್ಪಾರ್ಥಾನಕ್ಷಪರಾಜಿತಾನ್|

05055006c ಅರ್ಜುನಸ್ಯ ರಥೇ ಬ್ರೂಹಿ ಕಥಮಶ್ವಾಃ ಕಥಂ ಧ್ವಜಃ||

ದುರ್ಯೋಧನನು ಹೇಳಿದನು: “ಅಕ್ಷದಲ್ಲಿ ಸೋತ ಆ ಪಾರ್ಥರನ್ನು ಪ್ರಶಂಸಿಸುವುದರಲ್ಲಿ ನೀನು ಖುಷಿಪಡುವಂತಿದೆ! ಹೇಳು! ಅರ್ಜುನನ ರಥವು ಹೇಗಿದೆ? ಅಶ್ವಗಳು, ಧ್ವಜವು ಹೇಗಿವೆ?”

05055007 ಸಂಜಯ ಉವಾಚ|

05055007a ಭೌವನಃ ಸಹ ಶಕ್ರೇಣ ಬಹುಚಿತ್ರಂ ವಿಶಾಂ ಪತೇ|

05055007c ರೂಪಾಣಿ ಕಲ್ಪಯಾಮಾಸ ತ್ವಷ್ಟಾ ಧಾತ್ರಾ ಸಹಾಭಿಭೋ||

ಸಂಜಯನು ಹೇಳಿದನು: “ವಿಭೋ! ವಿಶಾಂಪತೇ! ಶಕ್ರನೊಂದಿಗೆ ಭೌವನನು ಧಾತ್ರಾ ತ್ವಷ್ಟನ ಸಹಾಯದಿಂದ ಅವರ ರಥದಲ್ಲಿರುವ ಬಹುಚಿತ್ರ ರೂಪಗಳನ್ನು ಕಲ್ಪಿಸಿದನು.

05055008a ಧ್ವಜೇ ಹಿ ತಸ್ಮಿನ್ರೂಪಾಣಿ ಚಕ್ರುಸ್ತೇ ದೇವಮಾಯಯಾ|

05055008c ಮಹಾಧನಾನಿ ದಿವ್ಯಾನಿ ಮಹಾಂತಿ ಚ ಲಘೂನಿ ಚ||

ಅವನ ಧ್ವಜದಲ್ಲಿ ದೇವಮಾಯೆಯನ್ನು ತೋರಿಸುವ, ದೊಡ್ಡ ಮತ್ತು ಸಣ್ಣ ದಿವ್ಯ ಆಕಾರಗಳನ್ನು ನೀಡಿದ್ದಾರೆ.

05055009a ಸರ್ವಾ ದಿಶೋ ಯೋಜನಮಾತ್ರಮಂತರಂ

         ಸ ತಿರ್ಯಗೂರ್ಧ್ವಂ ಚ ರುರೋಧ ವೈ ಧ್ವಜಃ|

05055009c ನ ಸಂಸಜ್ಜೇತ್ತರುಭಿಃ ಸಂವೃತೋಽಪಿ

         ತಥಾ ಹಿ ಮಾಯಾ ವಿಹಿತಾ ಭೌವನೇನ||

ಭೌವನನು ಮಾಯೆಯಿಂದ ಧ್ವಜವು ಎಲ್ಲ ದಿಕ್ಕುಗಳಲ್ಲಿಯೂ, ಮೇಲೆ ಮತ್ತು ಕೆಳಗೆ ಒಂದು ಯೋಜನ ದೂರದವರೆಗೆ ಪಸರಿಸುವಂತೆ ಮಾಡಿದ್ದಾನೆ. ಗಿಡಮರಗಳೂ ಅದರ ದಾರಿಯನ್ನು ತಡೆಯಲಾರವು.

05055010a ಯಥಾಕಾಶೇ ಶಕ್ರಧನುಃ ಪ್ರಕಾಶತೇ

         ನ ಚೈಕವರ್ಣಂ ನ ಚ ವಿದ್ಮ ಕಿಂ ನು ತತ್|

05055010c ತಥಾ ಧ್ವಜೋ ವಿಹಿತೋ ಭೌವನೇನ

         ಬಹ್ವಾಕಾರಂ ದೃಶ್ಯತೇ ರೂಪಮಸ್ಯ||

ಆಕಾಶದಲ್ಲಿ ಕಾಮನಬಿಲ್ಲು ಪ್ರಕಾಶಿಸುವಂತೆ ಒಂದೇ ಬಣ್ಣವನ್ನು ತೋರಿಸುವುದಿಲ್ಲ. ಅದು ಯಾವುದರಿಂದ ಮಾಡಲ್ಪಟ್ಟಿದೆಯೆಂದು ಯಾರಿಗೂ ತಿಳಿಯದು. ಹಾಗೆ ಭೌವನನು ಅದನ್ನು ನಿರ್ಮಿಸಿದ್ದಾನೆ. ಅದರ ಆಕಾರ-ರೂಪಗಳು ಬಹಳ.

05055011a ಯಥಾಗ್ನಿಧೂಮೋ ದಿವಮೇತಿ ರುದ್ಧ್ವಾ

         ವರ್ಣಾನ್ಬಿಭ್ರತ್ತೈಜಸಂ ತಚ್ಚರೀರಂ|

05055011c ತಥಾ ಧ್ವಜೋ ವಿಹಿತೋ ಭೌವನೇನ

         ನ ಚೇದ್ಭಾರೋ ಭವಿತಾ ನೋತ ರೋಧಃ||

ಬೆಂಕಿ-ಹೊಗೆಗಳು ಒಂದಾಗಿ ಮೇಲೇರುವಂತೆ ಅದರ ಶರೀರದಿಂದ ತೇಜಸ್ಸಿನ ಬಣ್ಣಗಳು ಹೊರಸೂಸುತ್ತವೆ. ಆ ರೀತಿಯಲ್ಲಿ ಭೌವನನು ಧ್ವಜವನ್ನು ನಿರ್ಮಿಸಿದ್ದಾನೆ. ಅದಕ್ಕೆ ಭಾರವೇ ಇಲ್ಲ. ಅದನ್ನು ತಡೆಯುವುದೂ ಅಸಾಧ್ಯ.

05055012a ಶ್ವೇತಾಸ್ತಸ್ಮಿನ್ವಾತವೇಗಾಃ ಸದಶ್ವಾ

         ದಿವ್ಯಾ ಯುಕ್ತಾಶ್ಚಿತ್ರರಥೇನ ದತ್ತಾಃ|

05055012c ಶತಂ ಯತ್ತತ್ಪೂರ್ಯತೇ ನಿತ್ಯಕಾಲಂ

         ಹತಂ ಹತಂ ದತ್ತವರಂ ಪುರಸ್ತಾತ್||

ಅದಕ್ಕೆ ಚಿತ್ರರಥನು ಕೊಟ್ಟ ವಾಯುವೇಗವುಳ್ಳ ದಿವ್ಯವಾದ ಬಿಳಿಯ ನೂರು ಕುದುರೆಗಳನ್ನು ಕಟ್ಟಲಾಗಿವೆ. ಕೊಲ್ಲಲ್ಪಟ್ಟ ಹಾಗೆ ಅವುಗಳ ಸಂಖ್ಯೆಯು ಯಾವಾಗಲೂ ಪೂರ್ಣವಾಗಿರುವವೆಂದು ಹಿಂದೆ ವರವಿತ್ತು.

05055013a ತಥಾ ರಾಜ್ಞೋ ದಂತವರ್ಣಾ ಬೃಹಂತೋ

         ರಥೇ ಯುಕ್ತಾ ಭಾಂತಿ ತದ್ವೀರ್ಯತುಲ್ಯಾಃ|

05055013c ಋಶ್ಯಪ್ರಖ್ಯಾ ಭೀಮಸೇನಸ್ಯ ವಾಹಾ

         ರಣೇ ವಾಯೋಸ್ತುಲ್ಯವೇಗಾ ಬಭೂವುಃ||

ಹಾಗೆಯೇ ರಾಜ (ಯುಧಿಷ್ಠಿರನ) ರಥಕ್ಕೆ ದಂತವರ್ಣದ ಗಾತ್ರದಲ್ಲಿ ದೊಡ್ಡ, ವೀರ್ಯದಲ್ಲಿ ಸಮನಾದ ಹೊಳೆಯುತ್ತಿರುವ ಕುದುರೆಗಳನ್ನು ಕಟ್ಟಲಾಗಿದೆ. ಹಾಗೆಯೇ ರಣದಲ್ಲಿ ಭೀಮಸೇನನ ವಾಹನಕ್ಕೆ ಸಪ್ತರ್ಷಿಗಳಂತೆ ತೋರುವ ವಾಯುವೇಗವಿರುವ ಕುದುರೆಗಳಿವೆ.

05055014a ಕಲ್ಮಾಷಾಂಗಾಸ್ತಿತ್ತಿರಿಚಿತ್ರಪೃಷ್ಠಾ

         ಭ್ರಾತ್ರಾ ದತ್ತಾಃ ಪ್ರೀಯತಾ ಫಲ್ಗುನೇನ|

05055014c ಭ್ರಾತುರ್ವೀರಸ್ಯ ಸ್ವೈಸ್ತುರಂಗೈರ್ವಿಶಿಷ್ಟಾ

         ಮುದಾ ಯುಕ್ತಾಃ ಸಹದೇವಂ ವಹಂತಿ||

ಸಹದೇವನು ದೇಹದ ಮೇಲೆ ಚುಕ್ಕೆಗಳಿರುವ, ಬೆನ್ನಿನ ಮೇಲೆ ಗಿಳಿಯ ಬಣ್ಣವನ್ನು ತಳೆದಿರುವ, ಅಣ್ಣ ಫಲ್ಗುನನು ಪ್ರೀತಿಯಿಂದ ಕೊಟ್ಟಿರುವ, ವೀರ ಸಹೋದರನ ಕುದುರೆಗಳಿಗಿಂತಲೂ ವಿಶಿಷ್ಟವಾದ ಕುದುರೆಗಳನ್ನು ಓಡಿಸುತ್ತಾನೆ.

05055015a ಮಾದ್ರೀಪುತ್ರಂ ನಕುಲಂ ತ್ವಾಜಮೀಢಂ

         ಮಹೇಂದ್ರದತ್ತಾ ಹರಯೋ ವಾಜಿಮುಖ್ಯಾಃ|

05055015c ಸಮಾ ವಾಯೋರ್ಬಲವಂತಸ್ತರಸ್ವಿನೋ

         ವಹಂತಿ ವೀರಂ ವೃತ್ರಶತ್ರುಂ ಯಥೇಂದ್ರಂ||

ಮಾದ್ರಿಯ ಮಗ ಅಜಮೀಡ ನಕುಲನನ್ನು ಮಹೇಂದ್ರನು ನೀಡಿದ ಉತ್ತಮ ಕುದುರೆಗಳು ಕೊಂಡೊಯ್ಯುತ್ತವೆ. ವೇಗದಲ್ಲಿ ಅವು ವಾಯುವಿಗೆ ಸಮನಾದವು. ಆ ತರಸ್ವಿಗಳು ವೃತ್ರಶತ್ರು ಇಂದ್ರನನ್ನು ಹೇಗೋ ಹಾಗೆ ಆ ವೀರನನ್ನು ಹೊರುತ್ತವೆ.

05055016a ತುಲ್ಯಾಶ್ಚೈಭಿರ್ವಯಸಾ ವಿಕ್ರಮೇಣ

         ಜವೇನ ಚೈವಾಪ್ರತಿರೂಪಾಃ ಸದಶ್ವಾಃ|

05055016c ಸೌಭದ್ರಾದೀನ್ದ್ರೌಪದೇಯಾನ್ಕುಮಾರಾನ್

         ವಹಂತ್ಯಶ್ವಾ ದೇವದತ್ತಾ ಬೃಹಂತಃ||

ವಯಸ್ಸಿನಲ್ಲಿ ಮತ್ತು ವಿಕ್ರಮದಲ್ಲಿ ಇವುಗಳನ್ನು ಹೋಲುವ, ವೇಗದಲ್ಲಿ ಸರಿಸಾಟಿಯಿರದ, ದೇವತೆಗಳು ಕೊಟ್ಟಿರುವ ಉತ್ತಮ ದೊಡ್ಡ ಕುದುರೆಗಳು ಸೌಬದ್ರಿಯೇ ಮೊದಲಾದ ದ್ರೌಪದೇಯ ಕುಮಾರರನ್ನು ಹೊರುತ್ತವೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಪಂಚಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ತೈದನೆಯ ಅಧ್ಯಾಯವು.

Related image

Comments are closed.