Udyoga Parva: Chapter 49

ಉದ್ಯೋಗ ಪರ್ವ: ಯಾನಸಂಧಿ ಪರ್ವ

೪೯

ಸಂಜಯನು ಪಾಂಡವ ಯೋಧರನ್ನು ವರ್ಣಿಸಿದುದು

“ಯುದ್ಧಕ್ಕೆ ಸಿದ್ಧತೆ ನಡೆಸಿರುವ ಯುಧಿಷ್ಠಿರನು ಏನನ್ನು ಬಯಸುತ್ತಿದ್ದಾನೆ? ಅವನ ಸೇನೆಗಳ ಬಲಗಳೆಷ್ಟು?” ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಕುರುಸಭೆಯಲ್ಲಿ ಮೂರ್ಛಿತನಾಗಿ ಬೀಳುವುದು (೧-೧೨). ಚೇತರಿಸಿಕೊಂಡು ಸಂಜಯನು ಪಾಂಡವ ಯೋಧರನ್ನು ವರ್ಣಿಸಿದುದು (೧೩-೪೫).

05049001 ಧೃತರಾಷ್ಟ್ರ ಉವಾಚ|

05049001a ಕಿಮಸೌ ಪಾಂಡವೋ ರಾಜಾ ಧರ್ಮಪುತ್ರೋಽಭ್ಯಭಾಷತ|

05049001c ಶ್ರುತ್ವೇಮಾ ಬಹುಲಾಃ ಸೇನಾಃ ಪ್ರತ್ಯರ್ಥೇನ ಸಮಾಗತಾಃ||

ಧೃತರಾಷ್ಟ್ರನು ಹೇಳಿದನು: “ಪಾಂಡವ ರಾಜ ಧರ್ಮಪುತ್ರನು ತನ್ನನ್ನು ವಿರೋಧಿಸಿ ಬಹುದೊಡ್ಡ ಸೇನೆಯು ಸೇರಿದೆ ಎಂದು ಕೇಳಿ ಏನು ಹೇಳಿದನು?

05049002a ಕಿಮಿಚ್ಚತ್ಯಭಿಸಂರಂಭಾದ್ಯೋತ್ಸ್ಯಮಾನೋ ಯುಧಿಷ್ಠಿರಃ|

05049002c ಕಸ್ಯ ಸ್ವಿದ್ಭ್ರಾತೃಪುತ್ರಾಣಾಂ ಚಿಂತಾಸು ಮುಖಮೀಕ್ಷತೇ||

ಯುದ್ಧಕ್ಕೆ ಸಿದ್ಧತೆ ನಡೆಸಿರುವ ಯುಧಿಷ್ಠಿರನು ಏನನ್ನು ಬಯಸುತ್ತಿದ್ದಾನೆ? ಅವನ ಸಹೋದರರು-ಮಕ್ಕಳಲ್ಲಿ ಯಾರಮುಖವನ್ನು ಚಿಂತೆಯಿಂದ ನೋಡುತ್ತಾನೆ?

05049003a ಕೇ ಸ್ವಿದೇನಂ ವಾರಯಂತಿ ಶಾಮ್ಯ ಯುಧ್ಯೇತಿ ವಾ ಪುನಃ|

05049003c ನಿಕೃತ್ಯಾ ಕೋಪಿತಂ ಮಂದೈರ್ಧರ್ಮಜ್ಞಾಂ ಧರ್ಮಚಾರಿಣಂ||

ಅವನೊಡನಿರುವ ಯಾರು, ಈ ಮಂದಬುದ್ಧಿಗಳಿಂದ ಮೋಸಗೊಂಡು ಕುಪಿತನಾಗಿರುವ ಆ ಧರ್ಮಜ್ಞ ಧರ್ಮಚಾರಿಣಿಯನ್ನು ಯುದ್ಧ ಅಥವಾ ಶಾಂತಿಗೆ ತಡೆಯುತ್ತಾರೆ?”

05049004 ಸಂಜಯ ಉವಾಚ|

05049004a ರಾಜ್ಞೋ ಮುಖಮುದೀಕ್ಷಂತೇ ಪಾಂಚಾಲಾಃ ಪಾಂಡವೈಃ ಸಹ|

05049004c ಯುಧಿಷ್ಠಿರಸ್ಯ ಭದ್ರಂ ತೇ ಸ ಸರ್ವಾನನುಶಾಸ್ತಿ ಚ||

ಸಂಜಯನು ಹೇಳಿದನು: “ಪಾಂಚಾಲರೂ ಪಾಂಡವರೂ ಒಟ್ಟಿಗೇ ರಾಜ ಯುಧಿಷ್ಠಿರನ ಮುಖವನ್ನು ನೋಡುತ್ತಾರೆ. ಅವನೇ ಎಲ್ಲರನ್ನೂ ಆಳುತ್ತಾನೆ. ನಿನಗೆ ಮಂಗಳವಾಗಲಿ!

05049005a ಪೃಥಗ್ಭೂತಾಃ ಪಾಂಡವಾನಾಂ ಪಾಂಚಾಲಾನಾಂ ರಥವ್ರಜಾಃ|

05049005c ಆಯಾಂತಮಭಿನಂದಂತಿ ಕುಂತೀಪುತ್ರಂ ಯುಧಿಷ್ಠಿರಂ||

ಮತ್ತು ಪಾಂಡವರ ಮತ್ತು ಪಾಂಚಾಲರ ರಥಸಮೂಹಗಳು ಬಂದು ಕುಂತೀಪುತ್ರ ಯುಧಿಷ್ಠಿರನನ್ನು ಅಭಿನಂದಿಸುತ್ತವೆ.

05049006a ತಮಃ ಸೂರ್ಯಮಿವೋದ್ಯಂತಂ ಕೌಂತೇಯಂ ದೀಪ್ತತೇಜಸಂ|

05049006c ಪಾಂಚಾಲಾಃ ಪ್ರತಿನಂದಂತಿ ತೇಜೋರಾಶಿಮಿವೋದ್ಯತಂ||

ಕತ್ತಲೆಯಿಂದ ಸೂರ್ಯನು ಉದಯಿಸುವಂತೆ ತೇಜೋರಾಶಿಯಿಂದ ಬೆಳಗುವ, ದೀಪ್ತತೇಜಸ ಕೌಂತೇಯನನ್ನು ಪಾಂಚಾಲರು ಹರ್ಷಗೊಳಿಸುತ್ತಾರೆ.

05049007a ಆ ಗೋಪಾಲಾವಿಪಾಲೇಭ್ಯೋ ನಂದಮಾನಂ ಯುಧಿಷ್ಠಿರಂ|

05049007c ಪಾಂಚಾಲಾಃ ಕೇಕಯಾ ಮತ್ಸ್ಯಾಃ ಪ್ರತಿನಂದಂತಿ ಪಾಂಡವಂ||

ಗೋಪಾಲಕರು ಕುರಿಕಾಯುವವರು ಯುಧಿಷ್ಠಿರನನ್ನು ಹರ್ಷಗೊಳಿಸುತ್ತಾರೆ. ಪಾಂಚಾಲರು, ಕೇಕಯರು, ಮತ್ಸ್ಯರೂ ಕೂಡ ಪಾಂಡವನನ್ನು ಪ್ರತಿನಂದಿಸುತ್ತಾರೆ.

05049008a ಬ್ರಾಹ್ಮಣ್ಯೋ ರಾಜಪುತ್ರ್ಯಶ್ಚ ವಿಶಾಂ ದುಹಿತರಶ್ಚ ಯಾಃ|

05049008c ಕ್ರೀಡಂತ್ಯೋಽಭಿಸಮಾಯಾಂತಿ ಪಾರ್ಥಂ ಸಂನದ್ಧಮೀಕ್ಷಿತುಂ||

ಬ್ರಾಹ್ಮಣ ಮತ್ತು ರಾಜಪುತ್ರಿಯರು, ವೈಶ್ಯರ ಹೆಣ್ಣುಮಕ್ಕಳೂ ಆಟವಾಡುತ್ತಾ ಸಂನ್ನದ್ಧನಾದ ಪಾರ್ಥನನ್ನು ಕಾಣಲು ಬರುತ್ತಾರೆ.”

05049009 ಧೃತರಾಷ್ಟ್ರ ಉವಾಚ|

05049009a ಸಂಜಯಾಚಕ್ಷ್ವ ಕೇನಾಸ್ಮಾನ್ಪಾಂಡವಾ ಅಭ್ಯಯುಂಜತ|

05049009c ಧೃಷ್ಟದ್ಯುಮ್ನೇನ ಸೇನಾನ್ಯಾ ಸೋಮಕಾಃ ಕಿಂಬಲಾ ಇವ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಯಾವುದರಿಂದ ಪಾಂಡವರು ನಮ್ಮನ್ನು ಹೋರಾಡಲು ಸಿದ್ಧರಾಗಿದ್ದಾರೋ ಆ ಸೋಮಕ ಧೃಷ್ಟಧ್ಯುಮ್ನನ ಸೇನೆ-ಬಲಗಳು ಎಷ್ಟು ಎನ್ನುವುದನ್ನು ನಮಗೆ ಹೇಳು.””

05049010 ವೈಶಂಪಾಯನ ಉವಾಚ|

05049010a ಗಾವಲ್ಗಣಿಸ್ತು ತತ್ಪೃಷ್ಟಃ ಸಭಾಯಾಂ ಕುರುಸಂಸದಿ|

05049010c ನಿಃಶ್ವಸ್ಯ ಸುಭೃಶಂ ದೀರ್ಘಂ ಮುಹುಃ ಸಂಚಿಂತಯನ್ನಿವ|

05049010e ತತ್ರಾನಿಮಿತ್ತತೋ ದೈವಾತ್ಸೂತಂ ಕಶ್ಮಲಮಾವಿಶತ್||

ವೈಶಂಪಾಯನನು ಹೇಳಿದನು: “ಕುರುಗಳು ಸೇರಿದ್ದ ಆ ಸಭೆಯಲ್ಲಿ ಹೀಗೆ ಕೇಳಲ್ಪಟ್ಟ ಗಾವಲ್ಗಣಿ ಸೂತನು ತುಂಬ ದೀರ್ಘವಾದ ನಿಟ್ಟುಸಿರನ್ನು ಬಿಟ್ಟು, ಸ್ವಲ್ಪಹೊತ್ತು ಯೋಚನೆಯಲ್ಲಿ ಮುಳುಗಿದಂತಿದ್ದು, ಇದ್ದಕ್ಕಿದ್ದ ಹಾಗೆಯೇ ಏನೂ ಕಾರಣವಿಲ್ಲದೇ ಕೆಳಗೆ ಬಿದ್ದನು.

05049011a ತದಾಚಚಕ್ಷೇ ಪುರುಷಃ ಸಭಾಯಾಂ ರಾಜಸಂಸದಿ|

05049011c ಸಂಜಯೋಽಯಂ ಮಹಾರಾಜ ಮೂರ್ಚ್ಚಿತಃ ಪತಿತೋ ಭುವಿ|

05049011e ವಾಚಂ ನ ಸೃಜತೇ ಕಾಂ ಚಿದ್ಧೀನಪ್ರಜ್ಞೋಽಲ್ಪಚೇತನಃ||

ಆಗ ರಾಜಸಂಸದಿಯ ಸಭೆಯಲ್ಲಿ ವಿದುರನು ಜೋರಾಗಿ ಹೇಳಿದನು: “ಮಹಾರಾಜ! ಇದೋ ಸಂಜಯನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದಿದ್ದಾನೆ. ಅವನ ಪ್ರಜ್ಞೆ-ಚೇತನಗಳು ಕ್ಷೀಣವಾಗಿ ಅವನಿಗೆ ಮಾತನಾಡಲಾಗುತ್ತಿಲ್ಲ.”

05049012 ಧೃತರಾಷ್ಟ್ರ ಉವಾಚ|

05049012a ಅಪಶ್ಯತ್ಸಂಜಯೋ ನೂನಂ ಕುಂತೀಪುತ್ರಾನ್ಮಹಾರಥಾನ್|

05049012c ತೈರಸ್ಯ ಪುರುಷವ್ಯಾಘ್ರೈರ್ಭೃಶಮುದ್ವೇಜಿತಂ ಮನಃ||

ಧೃತರಾಷ್ಟ್ರನು ಹೇಳಿದನು: “ಮಹಾರಥಿ ಪುರುಷವ್ಯಾಘ್ರರ ಅಪಾರ ಸೇನೆಯನ್ನು ನೋಡಿ ಸಂಜಯನ ಮನಸ್ಸು ಉದ್ವೇಗಗೊಂಡಿರಬಹುದು.””

05049013 ವೈಶಂಪಾಯನ ಉವಾಚ|

05049013a ಸಂಜಯಶ್ಚೇತನಾಂ ಲಬ್ಧ್ವಾ ಪ್ರತ್ಯಾಶ್ವಸ್ಯೇದಮಬ್ರವೀತ್|

05049013c ಧೃತರಾಷ್ಟ್ರಂ ಮಹಾರಾಜ ಸಭಾಯಾಂ ಕುರುಸಂಸದಿ||

ವೈಶಂಪಾಯನನು ಹೇಳಿದನು: “ಆರೈಕೆಗೊಂಡು ಚೇತರಿಸಿಕೊಂಡ ಸಂಜಯನು ಕುರುಸಂಸದಿಯ ಸಭೆಯಲ್ಲಿ ಮಹಾರಾಜ ಧೃತರಾಷ್ಟ್ರನಿಗೆ ಹೇಳಿದನು:

05049014a ದೃಷ್ಟವಾನಸ್ಮಿ ರಾಜೇಂದ್ರ ಕುಂತೀಪುತ್ರಾನ್ಮಹಾರಥಾನ್|

05049014c ಮತ್ಸ್ಯರಾಜಗೃಹಾವಾಸಾದವರೋಧೇನ ಕರ್ಶಿತಾನ್|

05049014e ಶೃಣು ಯೈರ್ಹಿ ಮಹಾರಾಜ ಪಾಂಡವಾ ಅಭ್ಯಯುಂಜತ||

“ರಾಜೇಂದ್ರ! ಮತ್ಸ್ಯರಾಜನ ಮನೆಯಲ್ಲಿ ವಾಸಿಸಿ ಕಷ್ಟಪಟ್ಟು ಸಣ್ಣವರಾಗಿರುವ ಆ ಮಹಾರಥಿ ಕುಂತಿಪುತ್ರರನ್ನು ನಾನು ನೋಡಿದ್ದೇನೆ. ಮಹಾರಾಜ! ಈಗ ಯಾರೊಂದಿಗೆ ಸೇರಿ ಪಾಂಡವರು ನಿನ್ನನ್ನು ಎದುರಿಸುವವರಿದ್ದಾರೆ ಎನ್ನುವುದನ್ನು ಕೇಳು.

05049015a ಯೋ ನೈವ ರೋಷಾನ್ನ ಭಯಾನ್ನ ಕಾಮಾನ್ನಾರ್ಥಕಾರಣಾತ್|

05049015c ನ ಹೇತುವಾದಾದ್ಧರ್ಮಾತ್ಮಾ ಸತ್ಯಂ ಜಹ್ಯಾತ್ಕಥಂ ಚನ||

05049016a ಯಃ ಪ್ರಮಾಣಂ ಮಹಾರಾಜ ಧರ್ಮೇ ಧರ್ಮಭೃತಾಂ ವರಃ|

05049016c ಅಜಾತಶತ್ರುಣಾ ತೇನ ಪಾಂಡವಾ ಅಭ್ಯಯುಂಜತ||

ಮಹಾರಾಜ! ಯಾರು ರೋಷವನ್ನಾಗಲೀ, ಭಯವನ್ನಾಗಲೀ, ಕಾಮವನ್ನಾಗಲೀ ಅಥವಾ ಅರ್ಥವನ್ನಾಗಲೀ ಕಾರಣವಾಗಿಟ್ಟುಕೊಂಡು ಧರ್ಮ ಮತ್ತು ಸತ್ಯಗಳನ್ನು ಎಂದೂ ಮೀರುವುದಿಲ್ಲವೋ, ಯಾರು ಧರ್ಮದ ಪ್ರಮಾಣವಾಗಿರುವನೋ, ಆ ಧರ್ಮಭೃತರಲ್ಲಿ ಶ್ರೇಷ್ಠ, ಅಜಾತಶತ್ರು ಪಾಂಡವನು ನಿನ್ನನ್ನು ಎದುರಿಸಿ ಹೋರಾಡುವನು.

05049017a ಯಸ್ಯ ಬಾಹುಬಲೇ ತುಲ್ಯಃ ಪೃಥಿವ್ಯಾಂ ನಾಸ್ತಿ ಕಶ್ಚನ|

05049017c ಯೋ ವೈ ಸರ್ವಾನ್ಮಹೀಪಾಲಾನ್ವಶೇ ಚಕ್ರೇ ಧನುರ್ಧರಃ|

05049017e ತೇನ ವೋ ಭೀಮಸೇನೇನ ಪಾಂಡವಾ ಅಭ್ಯಯುಂಜತ||

ಯಾರ ಬಾಹುಬಲಕ್ಕೆ ಸಮನಾದವರು ಭೂಮಿಯಲ್ಲಿ ಯಾರೂ ಇಲ್ಲವೋ, ಯಾವ ಧನುರ್ಧರನು ಎಲ್ಲ ಮಹೀಪಾಲರನ್ನು ವಶಮಾಡಿಕೊಂಡನೋ ಆ ಭೀಮಸೇನನೊಂದಿಗೆ ಪಾಂಡವನು ನಿನ್ನನ್ನು ಎದುರಿಸಿ ಹೋರಾಡುತ್ತಾನೆ.

05049018a ನಿಃಸೃತಾನಾಂ ಜತುಗೃಹಾದ್ಧಿಡಿಂಬಾತ್ಪುರುಷಾದಕಾತ್|

05049018c ಯ ಏಷಾಮಭವದ್ದ್ವೀಪಃ ಕುಂತೀಪುತ್ರೋ ವೃಕೋದರಃ||

05049019a ಯಾಜ್ಞಾಸೇನೀಮಥೋ ಯತ್ರ ಸಿಂಧುರಾಜೋಽಪಕೃಷ್ಟವಾನ್|

05049019c ತತ್ರೈಷಾಮಭವದ್ದ್ವೀಪಃ ಕುಂತೀಪುತ್ರೋ ವೃಕೋದರಃ||

05049020a ಯಶ್ಚ ತಾನ್ಸಂಗತಾನ್ಸರ್ವಾನ್ಪಾಂಡವಾನ್ವಾರಣಾವತೇ|

05049020c ದಹ್ಯತೋ ಮೋಚಯಾಮಾಸ ತೇನ ವಸ್ತೇಽಭ್ಯಯುಂಜತ||

05049021a ಕೃಷ್ಣಾಯಾಶ್ಚರತಾ ಪ್ರೀತಿಂ ಯೇನ ಕ್ರೋಧವಶಾ ಹತಾಃ|

05049021c ಪ್ರವಿಶ್ಯ ವಿಷಮಂ ಘೋರಂ ಪರ್ವತಂ ಗಂಧಮಾದನಂ||

05049022a ಯಸ್ಯ ನಾಗಾಯುತಂ ವೀರ್ಯಂ ಭುಜಯೋಃ ಸಾರಮರ್ಪಿತಂ|

05049022c ತೇನ ವೋ ಭೀಮಸೇನೇನ ಪಾಂಡವಾ ಅಭ್ಯಯುಂಜತ||

ಜತುಗೃಹದಿಂದ ಪಲಾಯನ ಮಾಡುವಾಗ ಪುರುಷಾದಕ ಹಿಡಿಂಬನಿಂದ ರಕ್ಷಿಸಿದ ಕುಂತೀಪುತ್ರ ವೃಕೋದರ, ಯಾಜ್ಞಸೇನಿಯನ್ನು ಅಪಹರಿಸಿದ ಸಿಂಧುರಾಜನನ್ನು ಹಿಡಿದು ಅವಳನ್ನು ರಕ್ಷಿಸಿದ ಕುಂತೀಪುತ್ರ ವೃಕೋದರ, ಎಲ್ಲ ಪಾಂಡವರೂ ವಾರಣಾವತದಲ್ಲಿ ವಾಸಿಸುವಾಗ ಅವರನ್ನು ಬೆಂಕಿಯಿಂದ ಉಳಿಸಿದ, ಕೃಷ್ಣೆಯ ಪ್ರೀತಿಗೋಸ್ಕರ ಕ್ರೋಧವಶರು ಯಾರಿಂದ ಹತರಾದರೋ, ಯಾರು ವಿಷಮವೂ ಘೋರವೂ ಆದ ಗಂಧಮಾದನ ಪರ್ವತವನ್ನು ಪ್ರವೇಶಿಸಿದನೋ, ಯಾರ ಭುಜಗಳು ಹತ್ತು ಆನೆಗಳ ಸಾರಗಳನ್ನು ಹೊಂದಿ ವೀರ್ಯಶಾಲಿಯಾಗಿರುವನೋ ಆ ಭೀಮಸೇನನೊಂದಿಗೆ ಪಾಂಡವನು ನಿನ್ನೊಡನೆ ಹೋರಾಡುತ್ತಾನೆ.

05049023a ಕೃಷ್ಣದ್ವಿತೀಯೋ ವಿಕ್ರಮ್ಯ ತುಷ್ಟ್ಯರ್ಥಂ ಜಾತವೇದಸಃ|

05049023c ಅಜಯದ್ಯಃ ಪುರಾ ವೀರೋ ಯುಧ್ಯಮಾನಂ ಪುರಂದರಂ||

05049024a ಯಃ ಸ ಸಾಕ್ಷಾನ್ಮಹಾದೇವಂ ಗಿರಿಶಂ ಶೂಲಪಾಣಿನಂ|

05049024c ತೋಷಯಾಮಾಸ ಯುದ್ಧೇನ ದೇವದೇವಮುಮಾಪತಿಂ||

05049025a ಯಶ್ಚ ಸರ್ವಾನ್ವಶೇ ಚಕ್ರೇ ಲೋಕಪಾಲಾನ್ಧನುರ್ಧರಃ|

05049025c ತೇನ ವೋ ವಿಜಯೇನಾಜೌ ಪಾಂಡವಾ ಅಭ್ಯಯುಂಜತ||

ಜಾತವೇದಸನನ್ನು ತೃಪ್ತಿಗೊಳಿಸಲೋಸುಗ ಹಿಂದೆ ಪುರಂದರನೊಡನೆ ಯುದ್ಧಮಾಡಿ ವಿಜಯವನ್ನು ಸಾಧಿಸಿದ ವೀರ, ಎರಡನೆಯ ಕೃಷ್ಣ, ಯಾರು ಸಾಕ್ಷಾತ್ ಮಹಾದೇವ, ಗಿರೀಶ, ಶೂಲಪಾಣಿ, ದೇವದೇವ, ಉಮಾಪತಿಯನ್ನು ಯುದ್ಧದಲ್ಲಿ ಸಂತೋಷಪಡಿಸಿದನೋ, ಯಾವ ಧನುರ್ಧರನಿಂದ ಲೋಕಪಾಲಕರೆಲ್ಲರೂ ವಶರಾದರೋ ಆ ವಿಜಯನೊಡನೆ ಪಾಂಡವನು ನಿನ್ನನ್ನು ಎದುರಿಸಿ ಹೋರಾಡುತ್ತಾನೆ.

05049026a ಯಃ ಪ್ರತೀಚೀಂ ದಿಶಂ ಚಕ್ರೇ ವಶೇ ಮ್ಲೇಚ್ಚಗಣಾಯುತಾಂ|

05049026c ಸ ತತ್ರ ನಕುಲೋ ಯೋದ್ಧಾ ಚಿತ್ರಯೋಧೀ ವ್ಯವಸ್ಥಿತಃ||

05049027a ತೇನ ವೋ ದರ್ಶನೀಯೇನ ವೀರೇಣಾತಿಧನುರ್ಭೃತಾ|

05049027c ಮಾದ್ರೀಪುತ್ರೇಣ ಕೌರವ್ಯ ಪಾಂಡವಾ ಅಭ್ಯಯುಂಜತ||

ಕೌರವ್ಯ! ಪಶ್ಚಿಮ ದಿಕ್ಕಿನಲ್ಲಿರುವ ಮ್ಲೇಚ್ಛಗಣಗಳನ್ನು ವಶಪಡಿಸಿಕೊಂಡ ಚಿತ್ರಯೋಧೀ ನಕುಲನು ಯುದ್ಧಮಾಡಲು ಅಲ್ಲಿದ್ದಾನೆ. ಆ ದರ್ಶನೀಯ, ವೀರ, ಧನುರ್ಭೃತ, ಮಾದ್ರೀಪುತ್ರನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049028a ಯಃ ಕಾಶೀನಂಗಮಗಧಾನ್ಕಲಿಂಗಾಂಶ್ಚ ಯುಧಾಜಯತ್|

05049028c ತೇನ ವಃ ಸಹದೇವೇನ ಪಾಂಡವಾ ಅಭ್ಯಯುಂಜತ||

ಯಾರು ಕಾಶೀ, ಅಂಗ, ಮಾಗಧ, ಕಲಿಂಗರನ್ನು ಯುದ್ಧದಲ್ಲಿ ಜಯಿಸಿದನೋ ಆ ಸಹದೇವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049029a ಯಸ್ಯ ವೀರ್ಯೇಣ ಸದೃಶಾಶ್ಚತ್ವಾರೋ ಭುವಿ ಮಾನವಾಃ|

05049029c ಅಶ್ವತ್ಥಾಮಾ ಧೃಷ್ಟಕೇತುಃ ಪ್ರದ್ಯುಮ್ನೋ ರುಕ್ಮಿರೇವ ಚ||

05049030a ತೇನ ವಃ ಸಹದೇವೇನ ಪಾಂಡವಾ ಅಭ್ಯಯುಂಜತ|

05049030c ಯವೀಯಸಾ ನೃವೀರೇಣ ಮಾದ್ರೀನಂದಿಕರೇಣ ಚ||

ಯಾರ ವೀರ್ಯಕ್ಕೆ ಸಮಾನರಾದ ನಾಲ್ವರೇ - ಅಶ್ವತ್ಥಾಮ, ಧೃಷ್ಟಕೇತು, ಪ್ರದ್ಯುಮ್ನ ಮತ್ತು ರುಕ್ಮಿ ಮನುಷ್ಯರು ಈ ಭುವಿಯಲ್ಲಿದ್ದಾರೋ ಆ ಸಹದೇವ, ವಯಸ್ಸಿನಲ್ಲಿ ಯುವಕನಾಗಿರುವ, ಮಾಂದ್ರೀನಂದನನೊಡನೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049031a ತಪಶ್ಚಚಾರ ಯಾ ಘೋರಂ ಕಾಶಿಕನ್ಯಾ ಪುರಾ ಸತೀ|

05049031c ಭೀಷ್ಮಸ್ಯ ವಧಮಿಚ್ಚಂತೀ ಪ್ರೇತ್ಯಾಪಿ ಭರತರ್ಷಭ||

05049032a ಪಾಂಚಾಲಸ್ಯ ಸುತಾ ಜಜ್ಞೇ ದೈವಾಚ್ಚ ಸ ಪುನಃ ಪುಮಾನ್|

05049032c ಸ್ತ್ರೀಪುಂಸೋಃ ಪುರುಷವ್ಯಾಘ್ರ ಯಃ ಸ ವೇದ ಗುಣಾಗುಣಾನ್||

05049033a ಯಃ ಕಲಿಂಗಾನ್ಸಮಾಪೇದೇ ಪಾಂಚಾಲೋ ಯುದ್ಧದುರ್ಮದಃ|

05049033c ಶಿಖಂಡಿನಾ ವಃ ಕುರವಃ ಕೃತಾಸ್ತ್ರೇಣಾಭ್ಯಯುಂಜತ||

05049034a ಯಾಂ ಯಕ್ಷಃ ಪುರುಷಂ ಚಕ್ರೇ ಭೀಷ್ಮಸ್ಯ ನಿಧನೇ ಕಿಲ|

05049034c ಮಹೇಷ್ವಾಸೇನ ರೌದ್ರೇಣ ಪಾಂಡವಾ ಅಭ್ಯಯುಂಜತ||

ಭರತರ್ಷಭ! ಸತ್ತನಂತರವೂ ಭೀಷ್ಮನ ವಧೆಯನ್ನು ಇಚ್ಛಿಸಿ ಘೋರ ತಪಸ್ಸನ್ನು ಆಚರಿಸಿದ ಆ ಪುರಾತನ ಸತೀ ಕಾಶಿಕನ್ಯೆಯು ದೈವದಿಂದ ಪಾಂಚಾಲನ ಮಗಳಾಗಿ ಹುಟ್ಟಿ ನಂತರ ಗಂಡಾದ, ಪುರುಷವ್ಯಾಘ್ರ, ಸ್ತ್ರೀ-ಪುರುಷರ ಗುಣಾಗುಣಗಳನ್ನು ತಿಳಿದಿರುವ, ಕಲಿಂಗರನ್ನು ಯುದ್ಧದಲ್ಲಿ ಎದುರಿಸಿದ ಯುದ್ಧದುರ್ಮದ, ಕೃತಾಸ್ತ್ರ ಪಾಂಚಾಲ ಶಿಖಂಡಿಯು ಕುರುಗಳೊಂದಿಗೆ ಹೋರಾಡುತ್ತಾನೆ.

05049035a ಮಹೇಷ್ವಾಸಾ ರಾಜಪುತ್ರಾ ಭ್ರಾತರಃ ಪಂಚ ಕೇಕಯಾಃ|

05049035c ಸುಮೃಷ್ಟಕವಚಾಃ ಶೂರಾಸ್ತೈಶ್ಚ ವಸ್ತೇಽಭ್ಯಯುಂಜತ||

ಮಹೇಷ್ವಾಸ, ರಾಜಪುತ್ರ, ಅಭೇದ್ಯ ಕವಚಗಳನ್ನು ಧರಿಸಿದ ಶೂರ ಐವರು ಕೇಕಯ ಸಹೋದರರು ನಿನ್ನೊಡನೆ ಹೋರಾಡುತ್ತಾರೆ.

05049036a ಯೋ ದೀರ್ಘಬಾಹುಃ ಕ್ಷಿಪ್ರಾಸ್ತ್ರೋ ಧೃತಿಮಾನ್ಸತ್ಯವಿಕ್ರಮಃ|

05049036c ತೇನ ವೋ ವೃಷ್ಣಿವೀರೇಣ ಯುಯುಧಾನೇನ ಸಂಗರಃ||

ಆ ದೀರ್ಘಬಾಹು, ಕ್ಷಿಪ್ರಾಸ್ತ್ರ, ಧೃತಿಮಾನ್, ಸತ್ಯವಿಕ್ರಮಿ, ವೃಷ್ಣಿವೀರ ಯುಯುಧಾನನೊಂದಿಗೆ ನಿನಗೆ ಹೋರಾಡಬೇಕಾಗುತ್ತದೆ.

05049037a ಯ ಆಸೀಚ್ಚರಣಂ ಕಾಲೇ ಪಾಂಡವಾನಾಂ ಮಹಾತ್ಮನಾಂ|

05049037c ರಣೇ ತೇನ ವಿರಾಟೇನ ಪಾಂಡವಾ ಅಭ್ಯಯುಂಜತ||

ಮಹಾತ್ಮ ಪಾಂಡವರಿಗೆ ಸಮಯ ಬಂದಾಗ ಶರಣ್ಯನಾಗಿದ್ದ ಆ ವೀರಾಟನನ್ನು ಕೂಡಿ ಪಾಂಡವನು ನಿನ್ನೊಡನೆ ಯುದ್ಧ ಮಾಡುತ್ತಾನೆ.

05049038a ಯಃ ಸ ಕಾಶಿಪತೀ ರಾಜಾ ವಾರಾಣಸ್ಯಾಂ ಮಹಾರಥಃ|

05049038c ಸ ತೇಷಾಮಭವದ್ಯೋದ್ಧಾ ತೇನ ವಸ್ತೇಽಭ್ಯಯುಂಜತ||

ವಾರಾಣಸೀ ರಾಜ ಕಾಶೀಪತಿ ಮಹಾರಥಿಯು ಅವರ ಪಂಗಡವನ್ನು ಸೇರಿದ್ದಾನೆ. ಅವನನ್ನು ಕೂಡಿ ನಿನ್ನೊಡನೆ ಯುದ್ಧಮಾಡುವನು.

05049039a ಶಿಶುಭಿರ್ದುರ್ಜಯೈಃ ಸಂಖ್ಯೇ ದ್ರೌಪದೇಯೈರ್ಮಹಾತ್ಮಭಿಃ|

05049039c ಆಶೀವಿಷಸಮಸ್ಪರ್ಶೈಃ ಪಾಂಡವಾ ಅಭ್ಯಯುಂಜತ||

ಮಕ್ಕಳಾಗಿದ್ದರೂ ಯುದ್ಧದಲ್ಲಿ ದುರ್ಜಯರಾಗಿರುವ, ಮುಟ್ಟಿದರೆ ವಿಷಸರ್ಪಗಳ ಸಮನಾಗಿರುವ ಮಹಾತ್ಮ ದ್ರೌಪದೇಯರೊಡನೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049040a ಯಃ ಕೃಷ್ಣಸದೃಶೋ ವೀರ್ಯೇ ಯುಧಿಷ್ಠಿರಸಮೋ ದಮೇ|

05049040c ತೇನಾಭಿಮನ್ಯುನಾ ಸಂಖ್ಯೇ ಪಾಂಡವಾ ಅಭ್ಯಯುಂಜತ||

ವೀರ್ಯದಲ್ಲಿ ಕೃಷ್ಣನ ಸಮನಾಗಿರುವ, ಆತ್ಮ ನಿಗ್ರಹದಲ್ಲಿ ಯುಧಿಷ್ಠಿರನ ಸಮನಾಗಿರುವ ಆ ಅಭಿಮನ್ಯುವಿನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049041a ಯಶ್ಚೈವಾಪ್ರತಿಮೋ ವೀರ್ಯೇ ಧೃಷ್ಟಕೇತುರ್ಮಹಾಯಶಾಃ|

05049041c ದುಃಸ್ಸಹಃ ಸಮರೇ ಕ್ರುದ್ಧಃ ಶೈಶುಪಾಲಿರ್ಮಹಾರಥಃ|

05049041e ತೇನ ವಶ್ಚೇದಿರಾಜೇನ ಪಾಂಡವಾ ಅಭ್ಯಯುಂಜತ||

ವೀರ್ಯದಲ್ಲಿ ಅಪ್ರತಿಮನಾಗಿರುವ, ಕ್ರುದ್ಧನಾದರೆ ಸಮರದಲ್ಲಿ ದುಃಸ್ಸಹನಾದ, ಮಹಾಯಶ, ಮಹಾರಥಿ, ಶಿಶುಪಾಲನ ಮಗ ಧೃಷ್ಟಕೇತುವು ಅವರ ವಶದಲ್ಲಿದ್ದಾನೆ. ಅವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049042a ಯಃ ಸಂಶ್ರಯಃ ಪಾಂಡವಾನಾಂ ದೇವಾನಾಮಿವ ವಾಸವಃ|

05049042c ತೇನ ವೋ ವಾಸುದೇವೇನ ಪಾಂಡವಾ ಅಭ್ಯಯುಂಜತ||

ದೇವತೆಗಳಿಗೆ ವಾಸವನಂತೆ ಪಾಂಡವರಿಗೆ ಸಂಶ್ರಯನಾಗಿರುವ ವಾಸುದೇವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

05049043a ತಥಾ ಚೇದಿಪತೇರ್ಭ್ರಾತಾ ಶರಭೋ ಭರತರ್ಷಭ|

05049043c ಕರಕರ್ಷೇಣ ಸಹಿತಸ್ತಾಭ್ಯಾಂ ವಸ್ತೇಽಭ್ಯಯುಂಜತ||

ಭರತರ್ಷಭ! ಹಾಗೆಯೇ ಚೇದಿಪತಿಯ ಅಣ್ಣ ಶರಭನು ಕರಕರ್ಷಣನೊಡನೆ ಅವರನ್ನು ಸೇರಿದ್ದಾನೆ. ಅವನೂ ಕೂಡ ನಿನ್ನೊಡನೆ ಹೋರಾಡುತ್ತಾನೆ.

05049044a ಜಾರಾಸಂಧಿಃ ಸಹದೇವೋ ಜಯತ್ಸೇನಶ್ಚ ತಾವುಭೌ|

05049044c ದ್ರುಪದಶ್ಚ ಮಹಾತೇಜಾ ಬಲೇನ ಮಹತಾ ವೃತಃ|

05049044e ತ್ಯಕ್ತಾತ್ಮಾ ಪಾಂಡವಾರ್ಥಾಯ ಯೋತ್ಸ್ಯಮಾನೋ ವ್ಯವಸ್ಥಿತಃ||

ಜರಾಸಂಧನ ಮಗ ಸಹದೇವ ಮತ್ತು ಜಯತ್ಸೇನ ಇಬ್ಬರೂ, ಮಹಾ ಸೇನೆಯೊಂದಿಗೆ ಆವೃತನಾದ ಮಹಾತೇಜ ದ್ರುಪದ ಇವರು ಪಾಂಡವರಿಗಾಗಿ ಜೀವವನ್ನು ತೊರೆದು ಯುದ್ಧಮಾಡಲು ಸಿದ್ಧರಾಗಿದ್ದಾರೆ.

05049045a ಏತೇ ಚಾನ್ಯೇ ಚ ಬಹವಃ ಪ್ರಾಚ್ಯೋದೀಚ್ಯಾ ಮಹೀಕ್ಷಿತಃ|

05049045c ಶತಶೋ ಯಾನಪಾಶ್ರಿತ್ಯ ಧರ್ಮರಾಜೋ ವ್ಯವಸ್ಥಿತಃ||

ಇವರು ಮತ್ತು ಇತರ ಬಹಳಷ್ಟು, ನೂರಾರು, ಪೂರ್ವ-ಪಶ್ಚಿಮಗಳ ಮಹೀಕ್ಷಿತರು, ರಥಗಳನ್ನೇರಿ ಧರ್ಮರಾಜನ ಜೊತೆಗೆ ಬೀಡುಬಿಟ್ಟಿದ್ದಾರೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಏಕೋನಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ನಲ್ವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.