Udyoga Parva: Chapter 48

ಉದ್ಯೋಗ ಪರ್ವ: ಯಾನಸಂಧಿ ಪರ್ವ

೪೮

ನರ-ನಾರಾಯಣರು

ದುರ್ಯೋಧನನಿಗೆ ಭೀಷ್ಮನು ಕೃಷ್ಣಾರ್ಜುನರು ನರ-ನಾರಾಯಣರೆಂದು ತಿಳಿಸುವುದು (೧-೨೮). ಮಧ್ಯದಲ್ಲಿ ಕರ್ಣನು ಆಕ್ಷೇಪಿಸಲು ಭೀಷ್ಮನು ಧೃತರಾಷ್ಟ್ರನಿಗೆ ಆತ್ಮಶ್ಲಾಘೀ ಕರ್ಣನಿಂದಲೇ ಕುರುವಂಶವು ನಾಶವಾಗಬಹುದೆಂದು ಎಚ್ಚರಿಸುವುದು (೨೯-೪೧). ಆಗ ದ್ರೋಣನು “ಭೀಷ್ಮನು ಹೇಳಿದಂತೆ ಯುದ್ಧಕ್ಕಿಂತ ಮೊದಲು ಪಾಂಡವರೊಂದಿಗೆ ಕೂಡುವುದು ಸಾಧುವೆಂದು ನನಗನ್ನಿಸುತ್ತದೆ” ಎನ್ನಲು ದ್ರೋಣ-ಭೀಷ್ಮರ ಆ ಮಾತುಗಳನ್ನು ಅನಾದರಿಸಿ ರಾಜನು ಪಾಂಡವರ ಕುರಿತು ಸಂಜಯನನ್ನು ಪುನಃ ಪಶ್ನಿಸಿದುದು (೪೨-೪೭).

Image result for nara narayan05048001 ವೈಶಂಪಾಯನ ಉವಾಚ|

05048001a ಸಮವೇತೇಷು ಸರ್ವೇಷು ತೇಷು ರಾಜಸು ಭಾರತ|

05048001c ದುರ್ಯೋಧನಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್||

ವೈಶಂಪಾಯನನು ಹೇಳಿದನು: “ಭಾರತ! ಆ ರಾಜರುಗಳೆಲ್ಲರೂ ಸೇರಿರುವಾಗ ಶಾಂತನವ ಭೀಷ್ಮನು ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು:

05048002a ಬೃಹಸ್ಪತಿಶ್ಚೋಶನಾ ಚ ಬ್ರಹ್ಮಾಣಂ ಪರ್ಯುಪಸ್ಥಿತೌ|

05048002c ಮರುತಶ್ಚ ಸಹೇಂದ್ರೇಣ ವಸವಶ್ಚ ಸಹಾಶ್ವಿನೌ||

05048003a ಆದಿತ್ಯಾಶ್ಚೈವ ಸಾಧ್ಯಾಶ್ಚ ಯೇ ಚ ಸಪ್ತರ್ಷಯೋ ದಿವಿ|

05048003c ವಿಶ್ವಾವಸುಶ್ಚ ಗಂಧರ್ವಃ ಶುಭಾಶ್ಚಾಪ್ಸರಸಾಂ ಗಣಾಃ||

“ಒಮ್ಮೆ ಬೃಹಸ್ಪತಿ ಮತ್ತು ಇಂದ್ರರು ಬ್ರಹ್ಮನ ಉಪಸ್ಥಿತಿಯಲ್ಲಿ ಬಂದರು. ಇಂದ್ರನೊಡನೆ ಮರುತರು, ವಸುಗಳು, ಅಶ್ವಿನಿಯರು, ಆದಿತ್ಯರು, ಸಾಧ್ಯರು, ಸಪ್ತರ್ಷಿಗಳು, ದಿವದಲ್ಲಿರುವ ವಿಶ್ವಾವಸುಗಳು, ಗಂಧರ್ವರು, ಶುಭ ಅಪ್ಸರಗಣಗಳೂ ಇದ್ದರು.

05048004a ನಮಸ್ಕೃತ್ವೋಪಜಗ್ಮುಸ್ತೇ ಲೋಕವೃದ್ಧಂ ಪಿತಾಮಹಂ|

05048004c ಪರಿವಾರ್ಯ ಚ ವಿಶ್ವೇಶಂ ಪರ್ಯಾಸತ ದಿವೌಕಸಃ||

ಅಲ್ಲಿಗೆ ಹೋಗಿ ಲೋಕವೃದ್ಧ ಪಿತಾಮಹನಿಗೆ ನಮಸ್ಕರಿಸಿ ದಿವೌಕಸರು ವಿಶ್ವೇಶನನ್ನು ಸುತ್ತುವರೆದು ಕುಳಿತುಕೊಂಡರು.

05048005a ತೇಷಾಂ ಮನಶ್ಚ ತೇಜಶ್ಚಾಪ್ಯಾದದಾನೌ ದಿವೌಕಸಾಂ|

05048005c ಪೂರ್ವದೇವೌ ವ್ಯತಿಕ್ರಾಂತೌ ನರನಾರಾಯಣಾವೃಷೀ||

ಅದೇ ಸಮಯದಲ್ಲಿ ತಮ್ಮ ಮನಸ್ಸಿನಿಂದಲೇ ದಿವೌಕಸರ ತೇಜಸ್ಸನ್ನು ಸೆಳೆಯುತ್ತಾ ಪೂರ್ವದೇವರಾದ ನರ-ನಾರಾಯಣ ಋಷಿಗಳು ಅಲ್ಲಿಂದ ಹೊರಟರು.

05048006a ಬೃಹಸ್ಪತಿಶ್ಚ ಪಪ್ರಚ್ಚ ಬ್ರಾಹ್ಮಣಂ ಕಾವಿಮಾವಿತಿ|

05048006c ಭವಂತಂ ನೋಪತಿಷ್ಠೇತೇ ತೌ ನಃ ಶಂಸ ಪಿತಾಮಹ||

ಬೃಹಸ್ಪತಿಯು ಬ್ರಹ್ಮನನ್ನು ಇವರು ಯಾರೆಂದು ಪ್ರಶ್ನಿಸಿದನು. “ಅವರಿಬ್ಬರೂ ನಿನ್ನನ್ನು ಪೂಜಿಸದೇ ಹೋದರು. ಪಿತಾಮಹ! ಅವರ ಕುರಿತು ಹೇಳು!”

05048007 ಬ್ರಹ್ಮೋವಾಚ|

05048007a ಯಾವೇತೌ ಪೃಥಿವೀಂ ದ್ಯಾಂ ಚ ಭಾಸಯಂತೌ ತಪಸ್ವಿನೌ|

05048007c ಜ್ವಲಂತೌ ರೋಚಮಾನೌ ಚ ವ್ಯಾಪ್ಯಾತೀತೌ ಮಹಾಬಲೌ||

05048008a ನರನಾರಾಯಣಾವೇತೌ ಲೋಕಾಲ್ಲೋಕಂ ಸಮಾಸ್ಥಿತೌ|

05048008c ಊರ್ಜಿತೌ ಸ್ವೇನ ತಪಸಾ ಮಹಾಸತ್ತ್ವಪರಾಕ್ರಮೌ||

ಬ್ರಹ್ಮನು ಹೇಳಿದನು: “ಪೃಥ್ವಿ-ಆಕಾಶಗಳನ್ನು ಬೆಳಗಿಸುವಂತೆ ಪ್ರಜ್ವಲಿಸುತ್ತಿರುವ, ಎಲ್ಲವನ್ನು ವ್ಯಾಪಿಸಿ, ಎಲ್ಲವಕ್ಕೂ ಆಧಾರರಾಗಿರುವ, ಮಹಾಬಲಶಾಲಿಗಳಾದ ಈ ಇಬ್ಬರು ತಪಸ್ವಿಗಳು ನರ-ನಾರಾಯಣರು. ಲೋಕಲೋಕಗಳಲ್ಲಿ ಇರುತ್ತಾರೆ. ಅವರ ತಪಸ್ಸಿನಿಂದ ಊರ್ಜಿತರಾಗಿದ್ದಾರೆ. ಮಹಾಸತ್ವಪರಾಕ್ರಮಿಗಳಾಗಿದ್ದಾರೆ.

05048009a ಏತೌ ಹಿ ಕರ್ಮಣಾ ಲೋಕಾನ್ನಂದಯಾಮಾಸತುರ್ಧ್ರುವೌ|

05048009c ಅಸುರಾಣಾಮಭಾವಾಯ ದೇವಗಂಧರ್ವಪೂಜಿತೌ||

ಇಬ್ಬರೂ ತಮ್ಮ ಕರ್ಮಗಳಿಂದಲೇ ಲೋಕಗಳಿಗೆ ಆನಂದವನ್ನು ತರುತ್ತಾರೆ. ದೇವಗಂಧರ್ವ ಪೂಜಿತರಾದ ಅವರು ಅಸುರ ವಧೆಗಾಗಿಯೇ ಇದ್ದಾರೆ.””

05048010 ಭೀಷ್ಮ ಉವಾಚ|

05048010a ಜಗಾಮ ಶಕ್ರಸ್ತಚ್ಚ್ರುತ್ವಾ ಯತ್ರ ತೌ ತೇಪತುಸ್ತಪಃ|

05048010c ಸಾರ್ಧಂ ದೇವಗಣೈಃ ಸರ್ವೈರ್ಬೃಹಸ್ಪತಿಪುರೋಗಮೈಃ||

ಭೀಷ್ಮನು ಹೇಳಿದನು: “ಅದನ್ನು ಕೇಳಿ ಶಕ್ರನು ಬೃಹಸ್ಪತಿಯುನ್ನು ಮುಂದಿಟ್ಟುಕೊಂಡು ದೇವಗಣಗಳೊಂದಿಗೆ ಅವರಿಬ್ಬರೂ ತಪಸ್ಸನ್ನು ತಪಿಸುತ್ತಿದ್ದಲ್ಲಿಗೆ ಹೋದನು.

05048011a ತದಾ ದೇವಾಸುರೇ ಘೋರೇ ಭಯೇ ಜಾತೇ ದಿವೌಕಸಾಂ|

05048011c ಅಯಾಚತ ಮಹಾತ್ಮಾನೌ ನರನಾರಾಯಣೌ ವರಂ||

ಆಗ ದೇವತೆಗಳಿಗೆ ಅಸುರರಿಂದ ಹುಟ್ಟಿದ ಘೋರ ಭಯದಿಂದ ದಿವೌಕಸರು ಮಹಾತ್ಮ ನರ-ನಾರಾಯಣರಲ್ಲಿ ವರವನ್ನು ಬೇಡಿದರು.

05048012a ತಾವಬ್ರೂತಾಂ ವೃಣೀಷ್ವೇತಿ ತದಾ ಭರತಸತ್ತಮ|

05048012c ಅಥೈತಾವಬ್ರವೀಚ್ಚಕ್ರಃ ಸಾಹ್ಯಂ ನಃ ಕ್ರಿಯತಾಮಿತಿ||

ಭರತಸತ್ತಮ! ಅವರು ಕೇಳು ಎಂದು ಹೇಳಲು ಶಕ್ರನು ಸಹಾಯ ಮಾಡಬೇಕು ಎಂದು ಅವರಲ್ಲಿ ಕೇಳಿಕೊಂಡನು.

05048013a ತತಸ್ತೌ ಶಕ್ರಮಬ್ರೂತಾಂ ಕರಿಷ್ಯಾವೋ ಯದಿಚ್ಚಸಿ|

05048013c ತಾಭ್ಯಾಂ ಚ ಸಹಿತಃ ಶಕ್ರೋ ವಿಜಿಗ್ಯೇ ದೈತ್ಯದಾನವಾನ್||

ಆಗ ಅವರಿಬ್ಬರೂ ಶಕ್ರನಿಗೆ ನೀನು ಬಯಸಿದುದನ್ನು ಮಾಡುತ್ತೇವೆ ಎಂದರು. ಅವರಿಬ್ಬರ ಸಹಾಯದಿಂದ ಶಕ್ರನು ದೈತ್ಯದಾನವರನ್ನು ಜಯಿಸಿದನು.

05048014a ನರ ಇಂದ್ರಸ್ಯ ಸಂಗ್ರಾಮೇ ಹತ್ವಾ ಶತ್ರೂನ್ಪರಂತಪಃ|

05048014c ಪೌಲೋಮಾನ್ಕಾಲಖಂಜಾಂಶ್ಚ ಸಹಸ್ರಾಣಿ ಶತಾನಿ ಚ||

ಪರಂತಪ ನರನು ಸಂಗ್ರಾಮದಲ್ಲಿ ಇಂದ್ರನ ಶತ್ರುಗಳಾದ ಪೌಲೋಮರನ್ನೂ ಕಾಲಖಂಜರನ್ನೂ ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಸಂಹರಿಸಿದನು.

05048015a ಏಷ ಭ್ರಾಂತೇ ರಥೇ ತಿಷ್ಠನ್ಭಲ್ಲೇನಾಪಹರಚ್ಚಿರಃ|

05048015c ಜಂಭಸ್ಯ ಗ್ರಸಮಾನಸ್ಯ ಯಜ್ಞಾಮರ್ಜುನ ಆಹವೇ||

ಇದೇ ಅರ್ಜುನನು ರಣದಲ್ಲಿ ತಿರುಗುತ್ತಿರುವ ರಥದಲ್ಲಿ ನಿಂತು ನುಂಗಲು ಬರುತ್ತಿದ್ದ ಜಂಭನ ಶಿರವನ್ನು ಭಲ್ಲೆಯಿಂದ ಕತ್ತರಿಸಿದನು.

05048016a ಏಷ ಪಾರೇ ಸಮುದ್ರಸ್ಯ ಹಿರಣ್ಯಪುರಮಾರುಜತ್|

05048016c ಹತ್ವಾ ಷಷ್ಟಿಸಹಸ್ರಾಣಿ ನಿವಾತಕವಚಾನ್ರಣೇ||

ಇವನೇ ಸಮುದ್ರದ ಆಚೆಯಿರುವ ಹಿರಣ್ಯಪುರದಲ್ಲಿ ವಾಸಿಸುತ್ತಿರುವ ಅರವತ್ತು ಸಾವಿರ ನಿವಾತಕವಚರನ್ನು ರಣದಲ್ಲಿ ಸಂಹರಿಸಿದನು.

05048017a ಏಷ ದೇವಾನ್ಸಹೇಂದ್ರೇಣ ಜಿತ್ವಾ ಪರಪುರಂಜಯಃ|

05048017c ಅತರ್ಪಯನ್ ಮಹಾಬಾಹುರರ್ಜುನೋ ಜಾತವೇದಸಂ|

05048017e ನಾರಾಯಣಸ್ತಥೈವಾತ್ರ ಭೂಯಸೋಽನ್ಯಾಂ ಜಘಾನ ಹ||

ಈ ಪರಪುರಂಜಯ ಮಹಾಬಾಹು ಅರ್ಜುನನೇ ಇಂದ್ರನೊಡನೆ ದೇವತೆಗಳನ್ನು ಗೆದ್ದು ಜಾತವೇದಸನನ್ನು ತೃಪ್ತಿಗೊಳಿಸಿದನು. ನಾರಾಯಣನೂ ಕೂಡ ಅಲ್ಲಿ ಇನ್ನೂ ಹೆಚ್ಚಿನ ಅನ್ಯರನ್ನು ಸಂಹರಿಸಿದನು.

05048018a ಏವಮೇತೌ ಮಹಾವೀರ್ಯೌ ತೌ ಪಶ್ಯತ ಸಮಾಗತೌ|

05048018c ವಾಸುದೇವಾರ್ಜುನೌ ವೀರೌ ಸಮವೇತೌ ಮಹಾರಥೌ||

ಆ ಈರ್ವರು ಮಹಾವೀರ್ಯರು ಒಂದಾಗಿದ್ದುದನ್ನು ನೋಡು. ಮಹಾರಥಿ ವೀರ ವಾಸುದೇವ-ಅರ್ಜುನರು ಒಂದಾಗಿದ್ದಾರೆ.

05048019a ನರನಾರಾಯಣೌ ದೇವೌ ಪೂರ್ವದೇವಾವಿತಿ ಶ್ರುತಿಃ|

05048019c ಅಜೇಯೌ ಮಾನುಷೇ ಲೋಕೇ ಸೇಂದ್ರೈರಪಿ ಸುರಾಸುರೈಃ||

ಅವರೇ ಪೂರ್ವದೇವರಾದ ನರ-ನಾರಾಯಣದೇವರೆಂದು ಕೇಳಿದ್ದೇವೆ. ಮಾನುಷಲೋಕದಲ್ಲಿ ಅವರು ಇಂದ್ರನೂ ಸೇರಿ ಸುರಾಸುರರಿಗೆ ಅಜೇಯರು.

05048020a ಏಷ ನಾರಾಯಣಃ ಕೃಷ್ಣಃ ಫಲ್ಗುನಸ್ತು ನರಃ ಸ್ಮೃತಃ|

05048020c ನಾರಾಯಣೋ ನರಶ್ಚೈವ ಸತ್ತ್ವಮೇಕಂ ದ್ವಿಧಾಕೃತಂ||

ಆ ನಾರಾಯಣನೇ ಕೃಷ್ಣ. ಫಲ್ಗುನನನು ನರನೆಂದು ಹೇಳುತ್ತಾರೆ. ನಾರಾಯಣ ಮತ್ತು ನರರ ಸತ್ವ ಒಂದೇ. ಆಕೃತಿ ಮಾತ್ರ ಎರಡು.

05048021a ಏತೌ ಹಿ ಕರ್ಮಣಾ ಲೋಕಾನಶ್ನುವಾತೇಽಕ್ಷಯಾನ್ಧ್ರುವಾನ್|

05048021c ತತ್ರ ತತ್ರೈವ ಜಾಯೇತೇ ಯುದ್ಧಕಾಲೇ ಪುನಃ ಪುನಃ||

ಅವರ ಕರ್ಮಗಳಿಂದ ಇಬ್ಬರೂ ಅಕ್ಷಯ ಲೋಕಗಳನ್ನು ಪಡೆದಿದ್ದಾರೆ. ಯುದ್ಧದ ಕಾಲವು ಬಂದಾಗಲೆಲ್ಲಾ ಪುನಃ ಪುನಃ ಜನ್ಮ ತಾಳುತ್ತಾರೆ.

05048022a ತಸ್ಮಾತ್ಕರ್ಮೈವ ಕರ್ತವ್ಯಮಿತಿ ಹೋವಾಚ ನಾರದ|

05048022c ಏತದ್ಧಿ ಸರ್ವಮಾಚಷ್ಟ ವೃಷ್ಣಿಚಕ್ರಸ್ಯ ವೇದವಿತ್||

ಆದುದರಿಂದ ಅವರ ಕರ್ಮವೇ ಹೋರಾಡುವುದು. ಇದನ್ನು ವೇದವಿದು ನಾರದನು ವೃಷ್ಣಿಗಳೆಲ್ಲರಿಗೆ ಹೇಳಿ ತಿಳಿಸಿದ್ದಾನೆ.

05048023a ಶಂಖಚಕ್ರಗದಾಹಸ್ತಂ ಯದಾ ದ್ರಕ್ಷ್ಯಸಿ ಕೇಶವಂ|

05048023c ಪರ್ಯಾದದಾನಂ ಚಾಸ್ತ್ರಾಣಿ ಭೀಮಧನ್ವಾನಮರ್ಜುನಂ||

05048024a ಸನಾತನೌ ಮಹಾತ್ಮಾನೌ ಕೃಷ್ಣಾವೇಕರಥೇ ಸ್ಥಿತೌ|

05048024c ದುರ್ಯೋಧನ ತದಾ ತಾತ ಸ್ಮರ್ತಾಸಿ ವಚನಂ ಮಮ||

ಮಗೂ! ದುರ್ಯೋಧನ! ಎಂದು ನೀನು ಶಂಖ-ಚಕ್ರ-ಗದಾಪಾಣಿಯಾದ ಕೇಶವನನ್ನು, ಮತ್ತು ಅಸ್ತ್ರಗಳನ್ನು ಹಿಡಿದಿರುವ ಭೀಮಧನ್ವಿ ಅರ್ಜುನನನ್ನು, ಆ ಸನಾತನ ಮಹಾವೀರ ಕೃಷ್ಣರಿಬ್ಬರೂ ಒಂದೇ ರಥದಲ್ಲಿ ನೋಡುತ್ತೀಯೋ ಅಂದು ನೀನು ನನ್ನ ಮಾತನ್ನು ನೆನಪಿಸಿಕೊಳ್ಳುತ್ತೀಯೆ.

05048025a ನೋ ಚೇದಯಮಭಾವಃ ಸ್ಯಾತ್ಕುರೂಣಾಂ ಪ್ರತ್ಯುಪಸ್ಥಿತಃ|

05048025c ಅರ್ಥಾಚ್ಚ ತಾತ ಧರ್ಮಾಚ್ಚ ತವ ಬುದ್ಧಿರುಪಪ್ಲುತಾ||

ಬಹುಷಃ ಕುರುಗಳ ವಿನಾಶವು ಇನ್ನೂ ಬಂದಿಲ್ಲ; ಆದರೆ ಮಗೂ! ನಿನ್ನ ಬುದ್ಧಿಯು ಧರ್ಮ-ಅರ್ಥಗಳಿಂದ ತಪ್ಪಿರಬಹುದೇ?

05048026a ನ ಚೇದ್ಗ್ರಹೀಷ್ಯಸೇ ವಾಕ್ಯಂ ಶ್ರೋತಾಸಿ ಸುಬಹೂನ್ ಹತಾನ್|

05048026c ತವೈವ ಹಿ ಮತಂ ಸರ್ವೇ ಕುರವಃ ಪರ್ಯುಪಾಸತೇ||

ಈಗ ನನ್ನ ಮಾತುಗಳನ್ನು ನೀನು ತಿಳಿದುಕೊಳ್ಳದೇ ಇದ್ದರೆ ಇದನ್ನೇ ಬಹಳಷ್ಟು ಜನರು ಹತರಾದ ಮೇಲೆ ಕೇಳುತ್ತೀಯೆ. ಎಲ್ಲ ಕುರುಗಳೂ ನಿನ್ನ ಮಾತುಗಳನ್ನೇ ಮನ್ನಿಸುತ್ತಾರೆ.

05048027a ತ್ರಯಾಣಾಮೇವ ಚ ಮತಂ ತತ್ತ್ವಮೇಕೋಽನುಮನ್ಯಸೇ|

05048027c ರಾಮೇಣ ಚೈವ ಶಪ್ತಸ್ಯ ಕರ್ಣಸ್ಯ ಭರತರ್ಷಭ||

05048028a ದುರ್ಜಾತೇಃ ಸೂತಪುತ್ರಸ್ಯ ಶಕುನೇಃ ಸೌಬಲಸ್ಯ ಚ|

05048028c ತಥಾ ಕ್ಷುದ್ರಸ್ಯ ಪಾಪಸ್ಯ ಭ್ರಾತುರ್ದುಃಶಾಸನಸ್ಯ ಚ||

ಭರತರ್ಷಭ! ಕೇವಲ ಮೂರು ಮಂದಿಗಳ ಅಭಿಪ್ರಾಯಗಳನ್ನು ನೀನು ಸ್ವೀಕರಿಸುತ್ತೀಯೆ - ರಾಮನಿಂದ ಶಪಿತನಾದ[1] ಆ ದುರ್ಜಾತ ಸೂತಪುತ್ರ ಕರ್ಣ, ಸೌಬಲ ಶಕುನಿ ಮತ್ತು ಆ ನಿನ್ನ ನೀಚ ಪಾಪಿ ತಮ್ಮ ದುಃಶಾಸನ.”

05048029 ಕರ್ಣ ಉವಾಚ|

05048029a ನೈವಮಾಯುಷ್ಮತಾ ವಾಚ್ಯಂ ಯನ್ಮಾಮಾತ್ಥ ಪಿತಾಮಹ|

05048029c ಕ್ಷತ್ರಧರ್ಮೇ ಸ್ಥಿತೋ ಹ್ಯಸ್ಮಿ ಸ್ವಧರ್ಮಾದನಪೇಯಿವಾನ್||

ಕರ್ಣನು ಹೇಳಿದನು: “ಬಹುವರ್ಷ ಬಾಳಿದ ಪಿತಾಮಹ! ನನ್ನ ಕುರಿತು ಆ ರೀತಿ ಮಾತನಾಡಬೇಡ! ಸ್ವಧರ್ಮವನ್ನು ತ್ಯಜಿಸದೇ ಕ್ಷತ್ರಧರ್ಮವನ್ನು ನಾನು ಪಾಲಿಸುತ್ತಿದ್ದೇನೆ.

05048030a ಕಿಂ ಚಾನ್ಯನ್ಮಯಿ ದುರ್ವೃತ್ತಂ ಯೇನ ಮಾಂ ಪರಿಗರ್ಹಸೇ|

05048030c ನ ಹಿ ಮೇ ವೃಜಿನಂ ಕಿಂ ಚಿದ್ಧಾರ್ತರಾಷ್ಟ್ರಾ ವಿದುಃ ಕ್ವ ಚಿತ್||

ಎಲ್ಲಿ ನಾನು ಕೆಟ್ಟದಾಗಿ ನಡೆದುಕೊಂಡಿದ್ದೇನೆಂದು ನೀನು ನನ್ನನ್ನು ಈ ರೀತಿ ಹೀಯಾಳಿಸುತ್ತಿದ್ದೀಯೆ? ನಾನು ಎಂದಾದರೂ ತಪ್ಪು ಮಾಡಿದ್ದುದು ಧಾರ್ತರಾಷ್ಟ್ರನಿಗೆ ತಿಳಿದಿಲ್ಲವಲ್ಲ?

05048031a ರಾಜ್ಞೋ ಹಿ ಧೃತರಾಷ್ಟ್ರಸ್ಯ ಸರ್ವಂ ಕಾರ್ಯಂ ಪ್ರಿಯಂ ಮಯಾ|

05048031c ತಥಾ ದುರ್ಯೋಧನಸ್ಯಾಪಿ ಸ ಹಿ ರಾಜ್ಯೇ ಸಮಾಹಿತಃ||

ನನ್ನ ಎಲ್ಲ ಕಾರ್ಯಗಳೂ ರಾಜ ಧೃತರಾಷ್ಟ್ರನಿಗೆ ಮತ್ತು ಹಾಗೆಯೇ ದುರ್ಯೋಧನನಿಗೆ ಕೂಡ ಒಳ್ಳೆಯದಾಗಲೆಂದೇ. ಅವನೇ ರಾಜ್ಯವನ್ನು ನಡೆಸುತ್ತಿದ್ದಾನಲ್ಲ!””

05048032 ವೈಶಂಪಾಯನ ಉವಾಚ|

05048032a ಕರ್ಣಸ್ಯ ತು ವಚಃ ಶ್ರುತ್ವಾ ಭೀಷ್ಮಃ ಶಾಂತನವಃ ಪುನಃ|

05048032c ಧೃತರಾಷ್ಟ್ರಂ ಮಹಾರಾಜಮಾಭಾಷ್ಯೇದಂ ವಚೋಽಬ್ರವೀತ್||

ವೈಶಂಪಾಯನನು ಹೇಳಿದನು: “ಕರ್ಣನ ಆ ಮಾತುಗಳನ್ನು ಕೇಳಿ ಶಾಂತನವ ಭೀಷ್ಮನು ಮಹಾರಾಜ ಧೃತರಾಷ್ಟ್ರನಿಗೆ ಪುನಃ ಈ ಮಾತುಗಳನ್ನಾಡಿದನು:

05048033a ಯದಯಂ ಕತ್ಥತೇ ನಿತ್ಯಂ ಹಂತಾಹಂ ಪಾಂಡವಾನಿತಿ|

05048033c ನಾಯಂ ಕಲಾಪಿ ಸಂಪೂರ್ಣಾ ಪಾಂಡವಾನಾಂ ಮಹಾತ್ಮನಾಂ||

“ಪಾಂಡವರನ್ನು ನಾನು ಕೊಲ್ಲುತ್ತೇನೆ ಎಂದು ನಿತ್ಯವೂ ಕೊಚ್ಚಿಕೊಳ್ಳುವ ಇವನು ಮಹಾತ್ಮ ಪಾಂಡವರ ಒಂದು ಕಾಲು ಭಾಗಕ್ಕೂ ಸಮನಲ್ಲ.

05048034a ಅನಯೋ ಯೋಽಯಮಾಗಂತಾ ಪುತ್ರಾಣಾಂ ತೇ ದುರಾತ್ಮನಾಂ|

05048034c ತದಸ್ಯ ಕರ್ಮ ಜಾನೀಹಿ ಸೂತಪುತ್ರಸ್ಯ ದುರ್ಮತೇಃ||

ನಿನ್ನ ದುರಾತ್ಮ ಮಕ್ಕಳಿಗೆ ಬರಲಿರುವ ಗಂಡಾಂತರವು ಈ ದುರ್ಮತಿ ಸೂತಪುತ್ರನ ಕೆಲಸ ಎನ್ನುವುದನ್ನು ತಿಳಿದುಕೋ.

05048035a ಏನಮಾಶ್ರಿತ್ಯ ಪುತ್ರಸ್ತೇ ಮಂದಬುದ್ಧಿಃ ಸುಯೋಧನಃ|

05048035c ಅವಮನ್ಯತ ತಾನ್ವೀರಾನ್ದೇವಪುತ್ರಾನರಿಂದಮಾನ್||

ಇವನನ್ನು ಆಶ್ರಯಿಸಿ ನಿನ್ನ ಮಗ ಮಂದಬುದ್ಧಿ ಸುಯೋಧನನು ಆ ವೀರ ಅರಿಂದಮ ದೇವಪುತ್ರರನ್ನು ಅಪಮಾನಿಸುತ್ತಿದ್ದಾನೆ.

05048036a ಕಿಂ ಚಾಪ್ಯನೇನ ತತ್ಕರ್ಮ ಕೃತಂ ಪೂರ್ವಂ ಸುದುಷ್ಕರಂ|

05048036c ತೈರ್ಯಥಾ ಪಾಂಡವೈಃ ಸರ್ವೈರೇಕೈಕೇನ ಕೃತಂ ಪುರಾ||

ಒಬ್ಬೊಬ್ಬರಾಗಿ ಪಾಂಡವರೆಲ್ಲರೂ ಈ ಹಿಂದೆ ಮಾಡಿದಂತಹ ಯಾವ ದುಷ್ಕರ ಕರ್ಮವನ್ನು ಇವನು ಈ ಹಿಂದೆ ಮಾಡಿದ್ದಾನೆ?

05048037a ದೃಷ್ಟ್ವಾ ವಿರಾಟನಗರೇ ಭ್ರಾತರಂ ನಿಹತಂ ಪ್ರಿಯಂ|

05048037c ಧನಂಜಯೇನ ವಿಕ್ರಮ್ಯ ಕಿಮನೇನ ತದಾ ಕೃತಂ||

ವಿರಾಟನಗರದಲ್ಲಿ ತನ್ನ ಪ್ರಿಯ ತಮ್ಮನೇ ವಿಕ್ರಮಿ ಧನಂಜಯನಿಂದ ಹತನಾಗಲು ಇವನೇನು ಮಾಡಿದ[2]?

05048038a ಸಹಿತಾನ್ ಹಿ ಕುರೂನ್ಸರ್ವಾನಭಿಯಾತೋ ಧನಂಜಯಃ|

05048038c ಪ್ರಮಥ್ಯ ಚಾಚ್ಚಿನದ್ಗಾವಃ ಕಿಮಯಂ ಪ್ರೋಷಿತಸ್ತದಾ||

ಕುರುಗಳೆಲ್ಲರನ್ನೂ ಒಟ್ಟಿಗೇ ಧನಂಜಯನು ಆಕ್ರಮಣಿಸಿ, ಸೋಲಿಸಿ ಗೋವುಗಳನ್ನು ಕಸಿದುಕೊಂಡು ಹೋದನು. ಆಗ ಇವನು ಪ್ರವಾಸದಲ್ಲಿದ್ದನೇ?

05048039a ಗಂಧರ್ವೈರ್ಘೋಷಯಾತ್ರಾಯಾಂ ಹ್ರಿಯತೇ ಯತ್ಸುತಸ್ತವ|

05048039c ಕ್ವ ತದಾ ಸೂತಪುತ್ರೋಽಭೂದ್ಯ ಇದಾನೀಂ ವೃಷಾಯತೇ||

ಘೋಷಯಾತ್ರೆಯಲ್ಲಿ ನಿನ್ನ ಮಗನನ್ನು ಗಂಧರ್ವರು ಎತ್ತಿಕೊಂಡು ಹೋದಾಗ ಈಗ ಗೂಳಿಯಂತೆ ಸೊಕ್ಕಿ ಉರಿಯುತ್ತಿರುವ ಈ ಸೂತಪುತ್ರನು ಎಲ್ಲಿದ್ದ[3]?

05048040a ನನು ತತ್ರಾಪಿ ಪಾರ್ಥೇನ ಭೀಮೇನ ಚ ಮಹಾತ್ಮನಾ|

05048040c ಯಮಾಭ್ಯಾಮೇವ ಚಾಗಮ್ಯ ಗಂಧರ್ವಾಸ್ತೇ ಪರಾಜಿತಾಃ||

ಅಲ್ಲಿ ಕೂಡ ಮಹಾತ್ಮ ಪಾರ್ಥ-ಭೀಮರು ಮತ್ತು ಯಮಳರೀರ್ವರು ಬಂದು ಗಂಧರ್ವರನ್ನು ಪರಾಜಿತಗೊಳಿಸಲಿಲ್ಲವೇ?

05048041a ಏತಾನ್ಯಸ್ಯ ಮೃಷೋಕ್ತಾನಿ ಬಹೂನಿ ಭರತರ್ಷಭ|

05048041c ವಿಕತ್ಥನಸ್ಯ ಭದ್ರಂ ತೇ ಸದಾ ಧರ್ಮಾರ್ಥಲೋಪಿನಃ||

ಭರತರ್ಷಭ! ಈ ಧರ್ಮಾರ್ಥಲೋಪಿ ಆತ್ಮಶ್ಲಾಘಿಯು ಹೇಳುವ ಸುಳ್ಳುಗಳು ಬಹಳಷ್ಟಿವೆ. ನಿನಗೆ ಮಂಗಳವಾಗಲಿ!”

05048042a ಭೀಷ್ಮಸ್ಯ ತು ವಚಃ ಶ್ರುತ್ವಾ ಭಾರದ್ವಾಜೋ ಮಹಾಮನಾಃ|

05048042c ಧೃತರಾಷ್ಟ್ರಮುವಾಚೇದಂ ರಾಜಮಧ್ಯೇಽಭಿಪೂಜಯನ್||

ಭೀಷ್ಮನ ಆ ಮಾತುಗಳನ್ನು ಕೇಳಿ ಮಹಾಮನಸ್ವಿ ಭಾರದ್ವಾಜನು ರಾಜರ ಮಧ್ಯದಲ್ಲಿ ಧೃತರಾಷ್ಟ್ರನನ್ನು ಗೌರವಿಸಿ ಹೇಳಿದನು:

05048043a ಯದಾಹ ಭರತಶ್ರೇಷ್ಠೋ ಭೀಷ್ಮಸ್ತತ್ಕ್ರಿಯತಾಂ ನೃಪ|

05048043c ನ ಕಾಮಮರ್ಥಲಿಪ್ಸೂನಾಂ ವಚನಂ ಕರ್ತುಮರ್ಹಸಿ||

“ಭರತಶ್ರೇಷ್ಠ! ನೃಪ! ಭೀಷ್ಮನು ಏನು ಹೇಳುತ್ತಿದ್ದಾನೋ ಅದನ್ನು ಮಾಡುವಂಥವನಾಗು. ತಮ್ಮದೇ ಬಯಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಆಡುವವರ ಮಾತುಗಳನ್ನು ಕೇಳಬಾರದು.

05048044a ಪುರಾ ಯುದ್ಧಾತ್ಸಾಧು ಮನ್ಯೇ ಪಾಂಡವೈಃ ಸಹ ಸಂಗಮಂ|

05048044c ಯದ್ವಾಕ್ಯಮರ್ಜುನೇನೋಕ್ತಂ ಸಂಜಯೇನ ನಿವೇದಿತಂ||

05048045a ಸರ್ವಂ ತದಭಿಜಾನಾಮಿ ಕರಿಷ್ಯತಿ ಚ ಪಾಂಡವಃ|

05048045c ನ ಹ್ಯಸ್ಯ ತ್ರಿಷು ಲೋಕೇಷು ಸದೃಶೋಽಸ್ತಿ ಧನುರ್ಧರಃ||

ಯುದ್ಧಕ್ಕಿಂತ ಮೊದಲು ಪಾಂಡವರೊಂದಿಗೆ ಕೂಡುವುದು ಸಾಧುವೆಂದು ನನಗನ್ನಿಸುತ್ತದೆ. ಸಂಜಯನು ಅರ್ಜುನನ ಯಾವ ಮಾತುಗಳನ್ನು ಬಂದು ತಿಳಿಸಿದನೋ ಅವೆಲ್ಲವನ್ನೂ ಆ ಪಾಂಡವನು ಮಾಡುತ್ತಾನೆಂದು ನಾನು ಬಲ್ಲೆ. ಈ ಮೂರು ಲೋಕಗಳಲ್ಲಿಯೂ ಅವನಂತಹ ಧನುರ್ಧರನಿಲ್ಲ.”

05048046a ಅನಾದೃತ್ಯ ತು ತದ್ವಾಕ್ಯಮರ್ಥವದ್ದ್ರೋಣಭೀಷ್ಮಯೋಃ|

05048046c ತತಃ ಸ ಸಂಜಯಂ ರಾಜಾ ಪರ್ಯಪೃಚ್ಚತ ಪಾಂಡವಂ||

ಆದರೆ ದ್ರೋಣ-ಭೀಷ್ಮರ ಆ ಮಾತುಗಳನ್ನು ಅನಾದರಿಸಿ ರಾಜನು ಪಾಂಡವರ ಕುರಿತು ಸಂಜಯನನ್ನು ಪುನಃ ಪಶ್ನಿಸಿದನು.

05048047a ತದೈವ ಕುರವಃ ಸರ್ವೇ ನಿರಾಶಾ ಜೀವಿತೇಽಭವನ್|

05048047c ಭೀಷ್ಮದ್ರೋಣೌ ಯದಾ ರಾಜಾ ನ ಸಮ್ಯಗನುಭಾಷತೇ||

ಯಾವಾಗ ರಾಜನು ಭೀಷ್ಮ-ದ್ರೋಣರಿಗೆ ಉತ್ತರವಾಗಿ ಮಾತನಾಡಲಿಲ್ಲವೋ ಆಗಲೇ ಎಲ್ಲ ಕುರುಗಳೂ ಜೀವಿತದ ನಿರಾಶರಾದರು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಭೀಷ್ಮದ್ರೋಣವಾಕ್ಯೇ ಅಷ್ಟಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಭೀಷ್ಮದ್ರೋಣವಾಕ್ಯದಲ್ಲಿ ನಲ್ವತ್ತೆಂಟನೆಯ ಅಧ್ಯಾಯವು.

Related image

[1] ಮುಂದೆ ಶಾಂತಿ ಪರ್ವದ ೨ನೇ ಅಧ್ಯಾಯದಲ್ಲಿ ಕರ್ಣನು ಪರಶುರಾಮನಿಂದ ಶಪಿತನಾದ ಕಥೆಯನ್ನು ನಾರದನು ಯುಧಿಷ್ಠಿರನಿಗೆ ಹೇಳುವ ಪ್ರಸಂಗವು ಬರುತ್ತದೆ.

[2] ಕರ್ಣನ ಸೋದರ ಸಂಗ್ರಾಮಜಿತುವನ್ನು ಅರ್ಜುನನು ಸಂಹರಿಸಿದ ವಿಷಯವು ವಿರಾಟಪರ್ವದ ಅಧ್ಯಾಯ ೪೯ ರ ಶ್ಲೋಕ ೧೮ರಲ್ಲಿ ಬಂದಿದೆ.

[3] ಘೋಷಯಾತ್ರೆಯ ಸಮಯದಲ್ಲಿ ಗಂಧರ್ವರಾಜ ಚಿತ್ರಸೇನನಿಗೆ ಸೋತು ಕರ್ಣನು ಪಲಾಯನ ಮಾಡಿದ ವಿಷಯವು ಆರಣ್ಯಕ ಪರ್ವದ ಅಧ್ಯಾಯ ೨೩೦ರಲ್ಲಿ ಬಂದಿದೆ.

Comments are closed.