Udyoga Parva: Chapter 21

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೨೧

ದೂತನು ಹೇಳಿದುದೆಲ್ಲವೂ ಸತ್ಯವಾಗಿದ್ದರೂ ಅವನು ಬ್ರಾಹ್ಮಣನಾಗಿರುವುದರಿಂದ ಮಾತು ತೀಕ್ಷ್ಣವಾಗಿದೆಯೆಂದೂ, ಅರ್ಜುನನನ್ನು ಎದುರಿಸುವ ಸಮರ್ಥರು ಯಾರೂ ಇಲ್ಲವೆಂದು ಭೀಷ್ಮನು ಸಭೆಯಲ್ಲಿ ನುಡಿದುದು (೧-೭). ಅಷ್ಟರಲ್ಲಿಯೇ ಕರ್ಣನು ಮಧ್ಯ ಮಾತನಾಡುತ್ತಾ ಒಪ್ಪಂದವನ್ನು ಆದರಿಸದೇ ಪಾಂಡವರು ಬಲವನ್ನು ಒಟ್ಟುಗೂಡಿಸಿ ರಾಜ್ಯವನ್ನು ಕೇಳುತ್ತಿದ್ದಾರೆಂದೂ, ಆದರೆ ದುರ್ಯೋಧನನು ಬೆದರಿಕೆಗೆ ಒಳಗಾಗಿ ಒಂದಡಿ ಭೂಮಿಯನ್ನೂ ಕೊಡುವುದಿಲ್ಲವೆಂದೂ ಹೇಳುವುದು (೮-೧೫). ಭೀಷ್ಮನು ರಾಧೇಯನನ್ನು ಅಲ್ಲಗಳೆದು ದೂತನು ಹೇಳಿದುದನ್ನು ಸಮರ್ಥಿಸಲು ಧೃತರಾಷ್ಟ್ರನು ಆಲೋಚಿಸಿ ಸಂಜಯನನ್ನು ಪಾಂಡವರ ಬಳಿ ಕಳುಹಿಸುತ್ತೇನೆಂದು ಹೇಳಿ ದೂತನನ್ನು ಸತ್ಕರಿಸಿ ಕಳುಹಿಸಿದುದು (೧೬-೨೧).

05021001 ವೈಶಂಪಾಯನ ಉವಾಚ|

05021001a ತಸ್ಯ ತದ್ವಚನಂ ಶ್ರುತ್ವಾ ಪ್ರಜ್ಞಾವೃದ್ಧೋ ಮಹಾದ್ಯುತಿಃ|

05021001c ಸಂಪೂಜ್ಯೈನಂ ಯಥಾಕಾಲಭೀಷ್ಮೋ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಪ್ರಜ್ಞಾವೃದ್ಧ, ಮಹಾದ್ಯುತಿ ಭೀಷ್ಮನು ಅವನನ್ನು ಗೌರವಿಸಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು:

05021002a ದಿಷ್ಟ್ಯಾ ಕುಶಲಿನಃ ಸರ್ವೇ ಪಾಂಡವಾಃ ಸಹ ಬಾಂಧವೈಃ|

05021002c ದಿಷ್ಟ್ಯಾ ಸಹಾಯವಂತಶ್ಚ ದಿಷ್ಟ್ಯಾ ಧರ್ಮೇ ಚ ತೇ ರತಾಃ||

“ಪಾಂಡವರೆಲ್ಲರೂ ಬಾಂಧವರೊಂದಿಗೆ ಕುಶಲರಾಗಿದ್ದಾರೆಂದರೆ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಅವರಿಗೆ ಸಹಾಯವು ದೊರಕಿದೆ. ಮತ್ತು ಅವರು ಧರ್ಮನಿರತರಾಗಿದ್ದಾರೆ.

05021003a ದಿಷ್ಟ್ಯಾ ಚ ಸಂಧಿಕಾಮಾಸ್ತೇ ಭ್ರಾತರಃ ಕುರುನಂದನಾಃ|

05021003c ದಿಷ್ಟ್ಯಾ ನ ಯುದ್ಧಮನಸಃ ಸಹ ದಾಮೋದರೇಣ ತೇ||

ಒಳ್ಳೆಯದಾಯಿತು ಆ ಕುರುನಂದರು ತಮ್ಮ ಭ್ರಾತೃಗಳೊಂದಿಗೆ ಸಂಧಿಯನ್ನು ಬಯಸುತ್ತಿದ್ದಾರೆ. ಒಳ್ಳೆಯದಾಯಿತು ದಾಮೋದರನನ್ನೂ ಸೇರಿ ಅವರು ಯುದ್ಧದ ಮನಸ್ಸು ಮಾಡುತ್ತಿಲ್ಲ.

05021004a ಭವತಾ ಸತ್ಯಮುಕ್ತಂ ಚ ಸರ್ವಮೇತನ್ನ ಸಂಶಯಃ|

05021004c ಅತಿತೀಕ್ಷ್ಣಂ ತು ತೇ ವಾಕ್ಯಂ ಬ್ರಾಹ್ಮಣ್ಯಾದಿತಿ ಮೇ ಮತಿಃ||

ನೀನು ಹೇಳಿದುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಿನ್ನ ಮಾತುಗಳು ಅತಿ ತೀಕ್ಷ್ಣವಾಗಿವೆ. ನೀನು ಬ್ರಾಹ್ಮಣನಾಗಿರುವುದೇ ಇದಕ್ಕೆ ಕಾರಣವಾಗಿರಬಹುದೆಂದು ನನಗನ್ನಿಸುತ್ತದೆ.

05021005a ಅಸಂಶಯಂ ಕ್ಲೇಶಿತಾಸ್ತೇ ವನೇ ಚೇಹ ಚ ಪಾಂಡವಾಃ|

05021005c ಪ್ರಾಪ್ತಾಶ್ಚ ಧರ್ಮತಃ ಸರ್ವಂ ಪಿತುರ್ಧನಮಸಂಶಯಂ||

ಪಾಂಡವರು ಇಲ್ಲಿ ಮತ್ತು ವನದಲ್ಲಿ ಕಷ್ಟಗಳನ್ನನುಭವಿಸಿದರು ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮತಃ ಅವರು ಸರ್ವ ಪಿತುರ್ಧನವನ್ನೂ ಪಡೆಯಬೇಕು ಎನ್ನುವುದರಲ್ಲೂ ಸಂಶಯವಿಲ್ಲ.

05021006a ಕಿರೀಟೀ ಬಲವಾನ್ಪಾರ್ಥಃ ಕೃತಾಸ್ತ್ರಶ್ಚ ಮಹಾಬಲಃ|

05021006c ಕೋ ಹಿ ಪಾಂಡುಸುತಂ ಯುದ್ಧೇ ವಿಷಹೇತ ಧನಂಜಯಂ||

ಕಿರೀಟೀ ಪಾರ್ಥನು ಮಹಾಬಲಶಾಲಿ, ಬಲವಂತ ಮತ್ತು ಕೃತಾಸ್ತ್ರ. ಯಾರುತಾನೇ ಪಾಂಡುಸುತ ಧನಂಜಯನನ್ನು ಯುದ್ಧದಲ್ಲಿ ಎದುರಿಸಿಯಾರು?

05021007a ಅಪಿ ವಜ್ರಧರಃ ಸಾಕ್ಷಾತ್ಕಿಮುತಾನ್ಯೇ ಧನುರ್ಭೃತಃ|

05021007c ತ್ರಯಾಣಾಮಪಿ ಲೋಕಾನಾಂ ಸಮರ್ಥ ಇತಿ ಮೇ ಮತಿಃ||

ಸಾಕ್ಷಾತ್ ವಜ್ರಧರನಿಗೇ ಸಾಧ್ಯವಿಲ್ಲದಿರುವಾಗ ಇನ್ನು ಇತರ ಧನುಷ್ಪಾಣಿಗಳೇನು? ಮೂರು ಲೋಕಗಳಲ್ಲಿಯೂ ಸಮರ್ಥರಿಲ್ಲ ಎಂದು ನನ್ನ ಅಭಿಪ್ರಾಯ.”

05021008a ಭೀಷ್ಮೇ ಬ್ರುವತಿ ತದ್ವಾಕ್ಯಂ ಧೃಷ್ಟಮಾಕ್ಷಿಪ್ಯ ಮನ್ಯುಮಾನ್|

05021008c ದುರ್ಯೋಧನಂ ಸಮಾಲೋಕ್ಯ ಕರ್ಣೋ ವಚನಮಬ್ರವೀತ್||

ಭೀಷ್ಮನು ಹೀಗೆ ಮಾತನ್ನಾಡುತ್ತಿರುವಾಗಲೇ ಸಿಟ್ಟಿಗೆದ್ದ ಕರ್ಣನು ದುರ್ಯೋಧನನನ್ನು ನೋಡುತ್ತಾ ಮಧ್ಯ ಮಾತನಾಡಿದನು:

05021009a ನ ತನ್ನ ವಿದಿತಂ ಬ್ರಹ್ಮನ್ಲ್ಲೋಕೇ ಭೂತೇನ ಕೇನ ಚಿತ್|

05021009c ಪುನರುಕ್ತೇನ ಕಿಂ ತೇನ ಭಾಷಿತೇನ ಪುನಃ ಪುನಃ||

“ಬ್ರಹ್ಮನ್! ಈ ಲೋಕದಲ್ಲಿ ಇದನ್ನು ತಿಳಿಯದೇ ಇರುವವರು ಯಾರೂ ಇಲ್ಲ. ಪುನಃ ಪುನಃ ನೀನು ಅದನ್ನೇ ಏಕೆ ಹೇಳುತ್ತಿರುವೆ?

05021010a ದುರ್ಯೋಧನಾರ್ಥೇ ಶಕುನಿರ್ದ್ಯೂತೇ ನಿರ್ಜಿತವಾನ್ಪುರಾ|

05021010c ಸಮಯೇನ ಗತೋಽರಣ್ಯಂ ಪಾಂಡುಪುತ್ರೋ ಯುಧಿಷ್ಠಿರಃ||

ಹಿಂದೆ ದುರ್ಯೋಧನನಿಗಾಗಿ ಶಕುನಿಯು ದ್ಯೂತದಲ್ಲಿ ಗೆದ್ದನು. ಒಪ್ಪಂದದಂತೆ ಪಾಂಡುಪುತ್ರ ಯುಧಿಷ್ಠಿರನು ಅರಣ್ಯಕ್ಕೆ ಹೋದನು.

05021011a ನ ತಂ ಸಮಯಮಾದೃತ್ಯ ರಾಜ್ಯಮಿಚ್ಚತಿ ಪೈತೃಕಂ|

05021011c ಬಲಮಾಶ್ರಿತ್ಯ ಮತ್ಸ್ಯಾನಾಂ ಪಾಂಚಾಲಾನಾಂ ಚ ಪಾರ್ಥಿವಃ||

ಆ ಪಾರ್ಥಿವನು ಈಗ ಆ ಒಪ್ಪಂದವನ್ನು ಆದರಿಸದೇ[1], ಮತ್ಸ್ಯ ಮತ್ತು ಪಾಂಚಾಲರ ಬಲವನ್ನು ಆಶ್ರಯಿಸಿ ಪಿತ್ರಾರ್ಜಿತ ರಾಜ್ಯವನ್ನು ಇಚ್ಛಿಸುತ್ತಾನೆ.

05021012a ದುರ್ಯೋಧನೋ ಭಯಾದ್ವಿದ್ವನ್ನ ದದ್ಯಾತ್ಪದಮಂತತಃ|

05021012c ಧರ್ಮತಸ್ತು ಮಹೀಂ ಕೃತ್ಸ್ನಾಂ ಪ್ರದದ್ಯಾಚ್ಚತ್ರವೇಽಪಿ ಚ||

ದುರ್ಯೋಧನನು ಬೆದರಿಕೆಗೊಳಗಾಗಿ ಒಂದಡಿ ಭೂಮಿಯನ್ನೂ ಕೊಡುವುದಿಲ್ಲ. ಆದರೆ ಧರ್ಮದಂತಾದರೆ ಅವನು ಶತ್ರುವಿಗೆ ಕೂಡ ಇಡೀ ಮಹಿಯನ್ನು ಕೊಟ್ಟಾನು.

05021013a ಯದಿ ಕಾಂಕ್ಷಂತಿ ತೇ ರಾಜ್ಯಂ ಪಿತೃಪೈತಾಮಹಂ ಪುನಃ|

05021013c ಯಥಾಪ್ರತಿಜ್ಞಾಂ ಕಾಲಂ ತಂ ಚರಂತು ವನಮಾಶ್ರಿತಾಃ||

ಒಂದುವೇಳೆ ಅವರು ಪಿತೃಪಿತಾಮಹರ ರಾಜ್ಯವನ್ನು ಬಯಸುವರಾದರೆ, ಪ್ರತಿಜ್ಞೆಮಾಡಿದಷ್ಟು ಸಮಯ ಪುನಃ ವನವಾಸವನ್ನು ನಡೆಸಲಿ.

05021014a ತತೋ ದುರ್ಯೋಧನಸ್ಯಾಂಕೇ ವರ್ತಂತಾಮಕುತೋಭಯಾಃ|

05021014c ಅಧಾರ್ಮಿಕಾಮಿಮಾಂ ಬುದ್ಧಿಂ ಕುರ್ಯುರ್ಮೌರ್ಖ್ಯಾದ್ಧಿ ಕೇವಲಂ||

ಆಗ ದುರ್ಯೋಧನನ ಆಳ್ವಿಕೆಯಲ್ಲಿ ನಿರ್ಭಯರಾಗಿ ವಾಸಿಸಲಿ. ಕೇವಲ ಮೂರ್ಖತನದಿಂದ ಅಧರ್ಮಕಾರ್ಯವನ್ನೆಸಗುತ್ತಿದ್ದಾರೆ.

05021015a ಅಥ ತೇ ಧರ್ಮಮುತ್ಸೃಜ್ಯ ಯುದ್ಧಮಿಚ್ಚಂತಿ ಪಾಂಡವಾಃ|

05021015c ಆಸಾದ್ಯೇಮಾನ್ಕುರುಶ್ರೇಷ್ಠಾನ್ಸ್ಮರಿಷ್ಯಂತಿ ವಚೋ ಮಮ||

ಈಗ ಆ ಪಾಂಡವರು ಧರ್ಮವನ್ನು ತೊರೆದು ಯುದ್ಧವನ್ನು ಬಯಸುತ್ತಿದ್ದಾರೆ. ಈ ಕುರುಶ್ರೇಷ್ಠರನ್ನು ಎದುರಿಸುವಾಗ ನನ್ನ ಈ ಮಾತನ್ನು ಸ್ಮರಿಸಿಕೊಳ್ಳುತ್ತಾರೆ.”

05021016 ಭೀಷ್ಮ ಉವಾಚ|

05021016a ಕಿಂ ನು ರಾಧೇಯ ವಾಚಾ ತೇ ಕರ್ಮ ತತ್ಸ್ಮರ್ತುಮರ್ಹಸಿ|

05021016c ಏಕ ಏವ ಯದಾ ಪಾರ್ಥಃ ಷಡ್ರಥಾಂ ಜಿತವಾನ್ಯುಧಿ||

ಭೀಷ್ಮನು ಹೇಳಿದನು: “ರಾಧೇಯ! ನಿನ್ನ ಮಾತಿನ ಪ್ರಯೋಜನವೇನು? ಯುದ್ಧದಲ್ಲಿ ಪಾರ್ಥನು ಒಬ್ಬನೇ ನಮ್ಮ ಷಡ್ರಥರನ್ನು ಗೆದ್ದುದನ್ನು ನೀನು ಸ್ಮರಿಸಿಕೊಳ್ಳಬೇಕು.

05021017a ನ ಚೇದೇವಂ ಕರಿಷ್ಯಾಮೋ ಯದಯಂ ಬ್ರಾಹ್ಮಣೋಽಬ್ರವೀತ್|

05021017c ಧ್ರುವಂ ಯುಧಿ ಹತಾಸ್ತೇನ ಭಕ್ಷಯಿಷ್ಯಾಮ ಪಾಂಸುಕಾನ್||

ಈ ಬ್ರಾಹ್ಮಣನು ಹೇಳಿದಂತೆ ನಾವು ಮಾಡದೇ ಇದ್ದರೆ ಯುದ್ಧದಲ್ಲಿ ಅವನಿಂದ ಹತರಾಗುತ್ತೇವೆ ಎನ್ನುವುದು ನಿಶ್ಚಿತ.””

05021018 ವೈಶಂಪಾಯನ ಉವಾಚ|

05021018a ಧೃತರಾಷ್ಟ್ರಸ್ತತೋ ಭೀಷ್ಮಮನುಮಾನ್ಯ ಪ್ರಸಾದ್ಯ ಚ|

05021018c ಅವಭರ್ತ್ಸ್ಯ ಚ ರಾಧೇಯಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಆಗ ಧೃತರಾಷ್ಟ್ರನು ಭೀಷ್ಮನನ್ನು ಮೆಚ್ಚಿಸಿ ರಾಧೇಯನನ್ನು ಹಳಿದು ಸಂಧಿಯ ಈ ಮಾತನ್ನಾಡಿದನು:

05021019a ಅಸ್ಮದ್ಧಿತಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್|

05021019c ಪಾಂಡವಾನಾಂ ಹಿತಂ ಚೈವ ಸರ್ವಸ್ಯ ಜಗತಸ್ತಥಾ||

“ಶಾಂತನವ ಭೀಷ್ಮನು ಹೇಳಿದ ಮಾತು ನಮಗೆ ಮತ್ತು ಪಾಂಡವರಿಗೆ ನಮಸ್ಕೃತ್ಯವಾದುದು. ಸರ್ವ ಜಗತ್ತಿಗೂ ಕೂಡ ಇದು ಹಿತವಾದುದು.

05021020a ಚಿಂತಯಿತ್ವಾ ತು ಪಾರ್ಥೇಭ್ಯಃ ಪ್ರೇಷಯಿಷ್ಯಾಮಿ ಸಂಜಯ|

05021020c ಸ ಭವಾನ್ಪ್ರತಿಯಾತ್ವದ್ಯ ಪಾಂಡವಾನೇವ ಮಾಚಿರಂ||

ಆದರೆ ಆಲೋಚಿಸಿ ನಾನು ಸಂಜಯನನ್ನು ಪಾಂಡವರ ಬಳಿ ಕಳುಹಿಸುತ್ತೇನೆ. ನೀನು ಇಂದೇ ತಡಮಾಡದೇ ಪಾಂಡವರಲ್ಲಿಗೆ ಹಿಂದಿರುಗು.”

05021021a ಸ ತಂ ಸತ್ಕೃತ್ಯ ಕೌರವ್ಯಃ ಪ್ರೇಷಯಾಮಾಸ ಪಾಂಡವಾನ್|

05021021c ಸಭಾಮಧ್ಯೇ ಸಮಾಹೂಯ ಸಂಜಯಂ ವಾಕ್ಯಮಬ್ರವೀತ್||

ಕೌರವ್ಯನು ಅವನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು. ಸಭಾಮಧ್ಯದಲ್ಲಿ ಸಂಜಯನನ್ನು ಕರೆಯಿಸಿ ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಯಾನೇ ಏಕವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಯಾನದಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೪೯/೧೦೦, ಅಧ್ಯಾಯಗಳು-೬೮೪/೧೯೯೫, ಶ್ಲೋಕಗಳು-೨೨೨೮೬/೭೩೭೮೪

Related image

[1] ಅಜ್ಞಾತವಾಸವು ಮುಗಿಯುವುದರೊಳಗೇ ಅರ್ಜುನನನ್ನು ಕೌರವರು ಗುರುತಿಸಿದುದರಿಂದ ಪಾಂಡವರು ಪುನಃ ೧೨ ವರ್ಷ ವನವಾಸ ಮತ್ತು ೧ ವರ್ಷ ಅಜ್ಞಾತವಾಸವನ್ನು ಮಾಡಬೇಕೆಂಬ ಒಪ್ಪಂದವನ್ನು ಅವರು ಮುರಿದರೆಂಬ ಕರ್ಣನ ವಾದವೇ ಇದು?

Comments are closed.