ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ
Contents
Toggle೧೯೩
ಕನ್ಯೆ ಶಿಖಂಡಿನಿಗೆ ಪುರುಷತ್ವ ಪ್ರಾಪ್ತಿ
ಕೆಲವು ಸಮಯದ ವರೆಗೆ ತನ್ನ ಪುರುಷಲಿಂಗವನ್ನು ಕೊಡುತ್ತೇನೆಂದೂ ನಂತರ ಅದನ್ನು ಪುನಃ ಹಿಂದಿರುಗಿಸಬಲ್ಲಳೆಂದೂ ಯಕ್ಷನು ಶಿಖಂಡಿಗೆ ಹೇಳಲು, ಅದರಂತೆಯೇ ಅವಳು ಪುರುಷತ್ವವನ್ನು ಪಡೆದು ನಗರಕ್ಕೆ ಮರಳಿದುದು (೧-೯). ತನ್ನ ಅಳಿಯನು ಗಂಡು ಎಂದು ಖಾತ್ರಿ ಮಾಡಿಕೊಂಡ ದಾಶಾರ್ಣಕನು ಸೇನೆಯೊಂದಿಗೆ ಹಿಂದಿರುಗಿದುದು (೧೦-೨೯). ಸ್ಥೂಣಕರ್ಣನನ್ನು ಭೇಟಿಯಾಗಲು ಬಂದಿದ್ದ ಕುಬೇರನನ್ನು ಹೊರಬಂದು ಸ್ವಾಗತಿಸದೇ ಇದ್ದ ಅವನ ನಾಚಿಕೆಯ ಕಾರಣವನ್ನು ತಿಳಿದ ಕುಬೇರನು ಅವನಿಗೆ ಶಿಖಂಡಿಯು ಯುದ್ಧದಲ್ಲಿ ಸಾಯುವವರೆಗೆ ನೀನು ಹೆಣ್ಣಾಗಿಯೇ ಇರುತ್ತೀಯೆ ಎಂದು ಶಪಿಸಿದುದು (೩೦-೪೭). ಲಿಂಗವನ್ನು ಹಿಂದಿರುಗಿಸಲು ಬಂದಿದ್ದ ಶಿಖಂಡಿಯು ವಿಷಯವನ್ನು ತಿಳಿದು ಸಂತೋಷದಿಂದ ಹಿಂದಿರುಗಿದುದು (೪೮-೫೯). ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ಶಿಖಂಡಿಯನ್ನು ತಾನು ಸಂಹರಿಸುವುದಿಲ್ಲವೆಂದು ದುರ್ಯೋಧನನಿಗೆ ಹೇಳಿ ಭೀಷ್ಮನು ಅಂಬೆಯ ಕಥೆಯನ್ನು ಪೂರ್ಣಗೊಳಿಸಿದುದು (೬೦-೬೬).
05193001 ಭೀಷ್ಮ ಉವಾಚ|
05193001a ಶಿಖಂಡಿವಾಕ್ಯಂ ಶ್ರುತ್ವಾಥ ಸ ಯಕ್ಷೋ ಭರತರ್ಷಭ|
05193001c ಪ್ರೋವಾಚ ಮನಸಾ ಚಿಂತ್ಯ ದೈವೇನೋಪನಿಪೀಡಿತಃ|
05193001e ಭವಿತವ್ಯಂ ತಥಾ ತದ್ಧಿ ಮಮ ದುಃಖಾಯ ಕೌರವ||
ಭೀಷ್ಮನು ಹೇಳಿದನು: “ಭರತರ್ಷಭ! ಕೌರವ! ಶಿಖಂಡಿಯ ಮಾತನ್ನು ಕೇಳಿ ದೈವದಿಂದ ಪೀಡಿತನಾದ ಯಕ್ಷನು ಮನಸ್ಸಿನಲ್ಲಿಯೇ ಚಿಂತಿಸಿ ಉತ್ತರಿಸಿದನು. ಕೌರವ! ನನ್ನ ದುಃಖಕ್ಕೆ ಅದು ಹಾಗೆಯೇ ಆಗಬೇಕಿತ್ತು.
05193002a ಭದ್ರೇ ಕಾಮಂ ಕರಿಷ್ಯಾಮಿ ಸಮಯಂ ತು ನಿಬೋಧ ಮೇ|
05193002c ಕಿಂ ಚಿತ್ಕಾಲಾಂತರಂ ದಾಸ್ಯೇ ಪುಂಲಿಂಗಂ ಸ್ವಮಿದಂ ತವ|
05193002e ಆಗಂತವ್ಯಂ ತ್ವಯಾ ಕಾಲೇ ಸತ್ಯಮೇತದ್ಬ್ರವೀಮಿ ತೇ||
“ಭದ್ರೇ! ನಿನಗಿಷ್ಟವಾದುದನ್ನು ಮಾಡುತ್ತೇನೆ. ಆದರೆ ನನ್ನ ಕರಾರನ್ನು ಕೇಳು. ಕೆಲವೇ ಕಾಲದವರೆಗೆ ನಾನು ನಿನಗೆ ನನ್ನ ಈ ಪುರುಷನ ಲಿಂಗವನ್ನು ನೀಡುತ್ತೇನೆ. ನಂತರ ನೀನು ಬರಬೇಕು. ಸತ್ಯವನ್ನು ಹೇಳುತ್ತಿದ್ದೇನೆ.
05193003a ಪ್ರಭುಃ ಸಂಕಲ್ಪಸಿದ್ಧೋಽಸ್ಮಿ ಕಾಮರೂಪೀ ವಿಹಂಗಮಃ|
05193003c ಮತ್ಪ್ರಸಾದಾತ್ಪುರಂ ಚೈವ ತ್ರಾಹಿ ಬಂಧೂಂಶ್ಚ ಕೇವಲಾನ್||
ಸಂಕಲ್ಪಿಸಿದುದನ್ನು ಸಿದ್ಧಿಯಾಗಿಸುವುದರಲ್ಲಿ ನಾನು ಪ್ರಭು. ಕಾಮರೂಪಿ ವಿಹಂಗಮ. ನನ್ನ ಪ್ರಸಾದದಿಂದ ನಿನ್ನ ಬಂಧುಗಳನ್ನೂ ಪುರವನ್ನೂ ಉಳಿಸುತ್ತಿದ್ದೇನೆ.
05193004a ಸ್ತ್ರೀಲಿಂಗಂ ಧಾರಯಿಷ್ಯಾಮಿ ತ್ವದೀಯಂ ಪಾರ್ಥಿವಾತ್ಮಜೇ|
05193004c ಸತ್ಯಂ ಮೇ ಪ್ರತಿಜಾನೀಹಿ ಕರಿಷ್ಯಾಮಿ ಪ್ರಿಯಂ ತವ||
ಪಾರ್ಥಿವಾತ್ಮಜೇ! ನಿನ್ನ ಈ ಸ್ತ್ರೀಲಿಂಗವನ್ನು ಧರಿಸುತ್ತೇನೆ. ಸತ್ಯವಾಗಿ ಭರವಸೆಯನ್ನು ನೀಡು. ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ.”
05193005 ಶಿಖಂಡ್ಯುವಾಚ|
05193005a ಪ್ರತಿದಾಸ್ಯಾಮಿ ಭಗವಽಲ್ಲಿಂಗಂ ಪುನರಿದಂ ತವ|
05193005c ಕಿಂ ಚಿತ್ಕಾಲಾಂತರಂ ಸ್ತ್ರೀತ್ವಂ ಧಾರಯಸ್ವ ನಿಶಾಚರ||
ಶಿಖಂಡಿಯು ಹೇಳಿದಳು: “ನಿನ್ನ ಈ ಲಿಂಗವನ್ನು ಪುನಃ ನಿನಗೆ ಕೊಡುತ್ತೇನೆ. ನಿಶಾಚರ! ಕೆಲವು ಕಾಲದ ಸ್ತ್ರೀತ್ವವನ್ನು ಧರಿಸು.
05193006a ಪ್ರತಿಪ್ರಯಾತೇ ದಾಶಾರ್ಣೇ ಪಾರ್ಥಿವೇ ಹೇಮವರ್ಮಣಿ|
05193006c ಕನ್ಯೈವಾಹಂ ಭವಿಷ್ಯಾಮಿ ಪುರುಷಸ್ತ್ವಂ ಭವಿಷ್ಯಸಿ||
ಪಾರ್ಥಿವ ಹೇಮವರ್ಮಣಿ ದಾಶಾರ್ಣನು ಹಿಂದಿರುಗಿದ ನಂತರ ನಾನು ಕನ್ಯೆಯಾಗುತ್ತೇನೆ. ನೀನು ಪುರುಷನಾಗುತ್ತೀಯೆ.””
05193007 ಭೀಷ್ಮ ಉವಾಚ|
05193007a ಇತ್ಯುಕ್ತ್ವಾ ಸಮಯಂ ತತ್ರ ಚಕ್ರಾತೇ ತಾವುಭೌ ನೃಪ|
05193007c ಅನ್ಯೋನ್ಯಸ್ಯಾನಭಿದ್ರೋಹೇ ತೌ ಸಂಕ್ರಾಮಯತಾಂ ತತಃ||
ಭೀಷ್ಮನು ಹೇಳಿದನು: “ನೃಪ! ಹೀಗೆ ಹೇಳಿ ಅವರಿಬ್ಬರೂ ಅಲ್ಲಿ ಒಪ್ಪಂದವನ್ನು ಮಾಡಿಕೊಂಡರು. ಅನ್ಯೋನ್ಯರ ಲಿಂಗಗಳನ್ನು ಬದಲಾಯಿಸಿಕೊಂಡರು.
05193008a ಸ್ತ್ರೀಲಿಂಗಂ ಧಾರಯಾಮಾಸ ಸ್ಥೂಣೋ ಯಕ್ಷೋ ನರಾಧಿಪ|
05193008c ಯಕ್ಷರೂಪಂ ಚ ತದ್ದೀಪ್ತಂ ಶಿಖಂಡೀ ಪ್ರತ್ಯಪದ್ಯತ||
ನರಾಧಿಪ! ಯಕ್ಷ ಸ್ಥೂಣನು ಸ್ತ್ರೀಲಿಂಗವನ್ನು ಧರಿಸಿದನು. ಶಿಖಂಡಿಯು ಯಕ್ಷನ ದೀಪ್ತ ರೂಪವನ್ನು ಪಡೆದನು.
05193009a ತತಃ ಶಿಖಂಡೀ ಪಾಂಚಾಲ್ಯಃ ಪುಂಸ್ತ್ವಮಾಸಾದ್ಯ ಪಾರ್ಥಿವ|
05193009c ವಿವೇಶ ನಗರಂ ಹೃಷ್ಟಃ ಪಿತರಂ ಚ ಸಮಾಸದತ್|
05193009e ಯಥಾವೃತ್ತಂ ತು ತತ್ಸರ್ವಮಾಚಖ್ಯೌ ದ್ರುಪದಸ್ಯ ಚ||
ಪಾರ್ಥಿವ! ಆಗ ಪಾಂಚಾಲ್ಯ ಶಿಖಂಡಿಯು ಪುಂಸತ್ವವನ್ನು ಪಡೆದು ಹೃಷ್ಟನಾಗಿ ನಗರವನ್ನು ಪ್ರವೇಶಿಸಿ ತಂದೆಯ ಬಳಿ ಹೋದನು. ನಡೆದುದೆಲ್ಲವನ್ನೂ ದ್ರುಪದನಿಗೆ ಹೇಳಿದನು.
05193010a ದ್ರುಪದಸ್ತಸ್ಯ ತಚ್ಚ್ರುತ್ವಾ ಹರ್ಷಮಾಹಾರಯತ್ಪರಂ|
05193010c ಸಭಾರ್ಯಸ್ತಚ್ಚ ಸಸ್ಮಾರ ಮಹೇಶ್ವರವಚಸ್ತದಾ||
ಅದನ್ನು ಕೇಳಿ ದ್ರುಪದನು ಪರಮ ಹರ್ಷವನ್ನು ತಾಳಿದನು. ಪತ್ನಿಯೊಂದಿಗೆ ಮಹೇಶ್ವರನ ಮಾತನ್ನು ಸ್ಮರಿಸಿಕೊಂಡನು.
05193011a ತತಃ ಸಂಪ್ರೇಷಯಾಮಾಸ ದಶಾರ್ಣಾಧಿಪತೇರ್ನೃಪ|
05193011c ಪುರುಷೋಽಯಂ ಮಮ ಸುತಃ ಶ್ರದ್ಧತ್ತಾಂ ಮೇ ಭವಾನಿತಿ||
ಆಗ ನೃಪನು ದಶಾರ್ಣಾಧಿಪತಿಗೆ “ನನ್ನ ಈ ಮಗನು ಪುರುಷನೇ. ನನ್ನನ್ನು ನೀನು ನಂಬಬೇಕು!” ಎಂದು ಹೇಳಿ ಕಳುಹಿಸಿದನು.
05193012a ಅಥ ದಾಶಾರ್ಣಕೋ ರಾಜಾ ಸಹಸಾಭ್ಯಾಗಮತ್ತದಾ|
05193012c ಪಾಂಚಾಲರಾಜಂ ದ್ರುಪದಂ ದುಃಖಾಮರ್ಷಸಮನ್ವಿತಃ||
ಅಷ್ಟರಲ್ಲಿಯೇ ದುಃಖ ಮತ್ತು ಕೋಪ ಸಮನ್ವಿತ ದಾಶಾರ್ಣಕ ರಾಜನು ಪಾಂಚಾಲರಾಜ ದ್ರುಪದನಲ್ಲಿಗೆ ಬಂದುಬಿಟ್ಟಿದ್ದನು.
05193013a ತತಃ ಕಾಂಪಿಲ್ಯಮಾಸಾದ್ಯ ದಶಾರ್ಣಾಧಿಪತಿಸ್ತದಾ|
05193013c ಪ್ರೇಷಯಾಮಾಸ ಸತ್ಕೃತ್ಯ ದೂತಂ ಬ್ರಹ್ಮವಿದಾಂ ವರಂ||
ಕಾಂಪಿಲ್ಯವನ್ನು ಸೇರಿ ದಶರ್ಣಾಧಿಪತಿಯು ಬ್ರಹ್ಮವಿದರಲ್ಲಿ ಶ್ರೇಷ್ಠನೋರ್ವನನ್ನು ಸತ್ಕರಿಸಿ ದೂತನನ್ನಾಗಿ ಕಳುಹಿಸಿದನು.
05193014a ಬ್ರೂಹಿ ಮದ್ವಚನಾದ್ದೂತ ಪಾಂಚಾಲ್ಯಂ ತಂ ನೃಪಾಧಮಂ|
05193014c ಯದ್ವೈ ಕನ್ಯಾಂ ಸ್ವಕನ್ಯಾರ್ಥೇ ವೃತವಾನಸಿ ದುರ್ಮತೇ||
05193014e ಫಲಂ ತಸ್ಯಾವಲೇಪಸ್ಯ ದ್ರಕ್ಷ್ಯಸ್ಯದ್ಯ ನ ಸಂಶಯಃ||
“ನನ್ನ ವಚನದಂತೆ ದೂತ! ನೃಪಾಧಮ ಪಾಂಚಾಲ್ಯನಿಗೆ ಹೇಳು. “ದುರ್ಮತೇ! ನನ್ನ ಕನ್ಯೆಯನ್ನು ನಿನ್ನ ಕನ್ಯೆಗೆ ತೆಗೆದುಕೊಂಡಿರುವೆಯಲ್ಲ ಅದರ ಫಲವನ್ನು ಇಂದು ನೀನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.”
05193015a ಏವಮುಕ್ತಸ್ತು ತೇನಾಸೌ ಬ್ರಾಹ್ಮಣೋ ರಾಜಸತ್ತಮ|
05193015c ದೂತಃ ಪ್ರಯಾತೋ ನಗರಂ ದಾಶಾರ್ಣನೃಪಚೋದಿತಃ||
ರಾಜಸತ್ತಮ! ಹೀಗೆ ಹೇಳಲು ದಾಶಾರ್ಣನೃಪತಿಯ ಹೇಳಿಕೆಯಂತೆ ಆ ದೂತನು ನಗರಕ್ಕೆ ಹೊರಟನು.
05193016a ತತ ಆಸಾದಯಾಮಾಸ ಪುರೋಧಾ ದ್ರುಪದಂ ಪುರೇ|
05193016c ತಸ್ಮೈ ಪಾಂಚಾಲಕೋ ರಾಜಾ ಗಾಮರ್ಘ್ಯಂ ಚ ಸುಸತ್ಕೃತಂ|
05193016e ಪ್ರಾಪಯಾಮಾಸ ರಾಜೇಂದ್ರ ಸಹ ತೇನ ಶಿಖಂಡಿನಾ||
ಆ ಪುರೋಹಿತನು ದ್ರುಪದನ ಪುರವನ್ನು ಸೇರಿದನು. ಆಗ ರಾಜಾ ಪಾಂಚಾಲಕನು ಶಿಖಂಡಿಯೊಡನೆ ಅವನನ್ನು ಗೋವು-ಅರ್ಘ್ಯಗಳನ್ನಿತ್ತು ಸತ್ಕರಿಸತೊಡಗಿದನು.
05193017a ತಾಂ ಪೂಜಾಂ ನಾಭ್ಯನಂದತ್ಸ ವಾಕ್ಯಂ ಚೇದಮುವಾಚ ಹ|
05193017c ಯದುಕ್ತಂ ತೇನ ವೀರೇಣ ರಾಜ್ಞಾ ಕಾಂಚನವರ್ಮಣಾ||
ಆ ಪೂಜೆಗಳನ್ನು ಸ್ವೀಕರಿಸದೇ ಅವನು ಇದನ್ನು ಹೇಳಿದನು: “ವೀರ ರಾಜ ಕಾಂಚನವರ್ಮನು ನಿನಗೆ ಇದನ್ನು ಹೇಳಿ ಕಳುಹಿಸಿದ್ದಾನೆ.
05193018a ಯತ್ತೇಽಹಮಧಮಾಚಾರ ದುಹಿತ್ರರ್ಥೇಽಸ್ಮಿ ವಂಚಿತಃ|
05193018c ತಸ್ಯ ಪಾಪಸ್ಯ ಕರಣಾತ್ಫಲಂ ಪ್ರಾಪ್ನುಹಿ ದುರ್ಮತೇ||
“ದುರ್ಮತೇ! ನಿನ್ನ ಮಗಳಿಗಾಗಿ ನೀನು ನಡೆಸಿದ ಈ ಅಧಮಾಚಾರ ವಂಚನೆಗಳ ಪಾಪಗಳನ್ನು ಮಾಡಿದ್ದುದರ ಫಲವನ್ನು ಹೊಂದುತ್ತೀಯೆ.
05193019a ದೇಹಿ ಯುದ್ಧಂ ನರಪತೇ ಮಮಾದ್ಯ ರಣಮೂರ್ಧನಿ|
05193019c ಉದ್ಧರಿಷ್ಯಾಮಿ ತೇ ಸದ್ಯಃ ಸಾಮಾತ್ಯಸುತಬಾಂಧವಂ||
ನರಪತೇ! ಇಂದು ರಣಮೂರ್ಧನಿಯಲ್ಲಿ ನನಗೆ ಯುದ್ಧವನ್ನು ನೀಡು. ಸದ್ಯ ನಿನ್ನನ್ನು ಅಮಾತ್ಯ-ಸುತ-ಬಾಂಧವರೊಂದಿಗೆ ಮುಗಿಸುತ್ತೇನೆ.”
05193020a ತದುಪಾಲಂಭಸಮ್ಯುಕ್ತಂ ಶ್ರಾವಿತಃ ಕಿಲ ಪಾರ್ಥಿವಃ|
05193020c ದಶಾರ್ಣಪತಿದೂತೇನ ಮಂತ್ರಿಮಧ್ಯೇ ಪುರೋಧಸಾ||
ದಶಾರ್ಣಪತಿಯ ದೂತನು ಮಂತ್ರಿಗಳ ಮಧ್ಯದಲ್ಲಿ ಹೇಳಿದ ಆ ನಿಂದನೆಯ ಮಾತುಗಳನ್ನು ಪಾರ್ಥಿವನು ಬಲಾತ್ಕಾರವಾಗಿ ಕೇಳಬೇಕಾಯಿತು.
05193021a ಅಬ್ರವೀದ್ಭರತಶ್ರೇಷ್ಠ ದ್ರುಪದಃ ಪ್ರಣಯಾನತಃ|
05193021c ಯದಾಹ ಮಾಂ ಭವಾನ್ಬ್ರಹ್ಮನ್ಸಂಬಂಧಿವಚನಾದ್ವಚಃ|
05193021e ತಸ್ಯೋತ್ತರಂ ಪ್ರತಿವಚೋ ದೂತ ಏವ ವದಿಷ್ಯತಿ||
ಭರತಶ್ರೇಷ್ಠ! ಆಗ ದ್ರುಪದನು ಶಿರಬಾಗಿ ಹೇಳಿದನು: “ಬ್ರಹ್ಮನ್! ನೀನು ಹೇಳಿದ ನನ್ನ ಸಂಬಂಧಿಯ ಮಾತುಗಳಿಗೆ ಉತ್ತರವನ್ನು ನಮ್ಮ ದೂತನೇ ಪ್ರತಿಯಾಗಿ ಹೇಳುತ್ತಾನೆ.”
05193022a ತತಃ ಸಂಪ್ರೇಷಯಾಮಾಸ ದ್ರುಪದೋಽಪಿ ಮಹಾತ್ಮನೇ|
05193022c ಹಿರಣ್ಯವರ್ಮಣೇ ದೂತಂ ಬ್ರಾಹ್ಮಣಂ ವೇದಪಾರಗಂ||
ಆಗ ದ್ರುಪದನೂ ಕೂಡ ಮಹಾತ್ಮ ಹಿರಣ್ಯವರ್ಮಣನಲ್ಲಿಗೆ ವೇದಪಾರಂಗತ ಬ್ರಾಹ್ಮಣನನ್ನು ದೂತನನ್ನಾಗಿ ಕಳುಹಿಸಿದನು.
05193023a ಸಮಾಗಮ್ಯ ತು ರಾಜ್ಞಾ ಸ ದಶಾರ್ಣಪತಿನಾ ತದಾ|
05193023c ತದ್ವಾಕ್ಯಮಾದದೇ ರಾಜನ್ಯದುಕ್ತಂ ದ್ರುಪದೇನ ಹ||
ರಾಜನ್! ಅವನು ರಾಜ ದಶಾರ್ಣಪತಿಯ ಬಳಿ ಬಂದು ದ್ರುಪದನು ಹೇಳಿ ಕಳುಹಿಸಿದುದನ್ನು ಹೇಳಿದನು.
05193024a ಆಗಮಃ ಕ್ರಿಯತಾಂ ವ್ಯಕ್ತಂ ಕುಮಾರೋ ವೈ ಸುತೋ ಮಮ|
05193024c ಮಿಥ್ಯೈತದುಕ್ತಂ ಕೇನಾಪಿ ತನ್ನ ಶ್ರದ್ಧೇಯಮಿತ್ಯುತ||
“ನನ್ನ ಮಗನು ನಿಜವಾಗಿಯೂ ಕುಮಾರನು. ಶೋಧನೆಯಾಗಲಿ. ಯಾರೋ ಸುಳ್ಳುಹೇಳಿದ್ದಾರೆ. ಅವರು ಹೇಳಿದುದನ್ನು ನಂಬಬಾರದು.”
05193025a ತತಃ ಸ ರಾಜಾ ದ್ರುಪದಸ್ಯ ಶ್ರುತ್ವಾ
ವಿಮರ್ಶಯುಕ್ತೋ ಯುವತೀರ್ವರಿಷ್ಠಾಃ|
05193025c ಸಂಪ್ರೇಷಯಾಮಾಸ ಸುಚಾರುರೂಪಾಃ
ಶಿಖಂಡಿನಂ ಸ್ತ್ರೀ ಪುಮಾನ್ವೇತಿ ವೇತ್ತುಂ||
ದ್ರುಪದನನ್ನು ಕೇಳಿ ಆ ರಾಜನು ವಿಮರ್ಶಿಸಿ ಸುಂದರ ರೂಪಿನ ಉತ್ತಮ ಯುವತಿಯರನ್ನು ಶಿಖಂಡಿಯು ಸ್ತ್ರೀಯೋ ಪುರುಷನೋ ಎಂದು ತಿಳಿಯಲು ಕಳುಹಿಸಿದನು.
05193026a ತಾಃ ಪ್ರೇಷಿತಾಸ್ತತ್ತ್ವಭಾವಂ ವಿದಿತ್ವಾ
ಪ್ರೀತ್ಯಾ ರಾಜ್ಞೇ ತಚ್ಚಶಂಸುರ್ಹಿ ಸರ್ವಂ|
05193026c ಶಿಖಂಡಿನಂ ಪುರುಷಂ ಕೌರವೇಂದ್ರ
ದಶಾರ್ಣರಾಜಾಯ ಮಹಾನುಭಾವಂ||
ಕೌರವೇಂದ್ರ! ಕಳುಹಿಸಲ್ಪಟ್ಟ ಅವರು ಸತ್ಯವೇನೆಂದು ತಿಳಿದು ಸಂತೋಷದಿಂದ ಅವೆಲ್ಲವನ್ನೂ – ಶಿಖಂಡಿಯು ಪುರುಷನೆಂದು- ಮಹಾನುಭಾವ ದಶಾರ್ಣರಾಜ ರಾಜನಿಗೆ ವರದಿಮಾಡಿದರು.
05193027a ತತಃ ಕೃತ್ವಾ ತು ರಾಜಾ ಸ ಆಗಮಂ ಪ್ರೀತಿಮಾನಥ|
05193027c ಸಂಬಂಧಿನಾ ಸಮಾಗಮ್ಯ ಹೃಷ್ಟೋ ವಾಸಮುವಾಸ ಹ||
ಇದನ್ನು ಕೇಳಿ ರಾಜನು ಅತ್ಯಂತ ಹರ್ಷಿತನಾದನು. ತನ್ನ ಸಂಬಂಧಿಯನ್ನು ಭೇಟಿಮಾಡಿ ಸಂತೋಷದಲ್ಲಿ ಅಲ್ಲಿ ತಂಗಿದನು.
05193028a ಶಿಖಂಡಿನೇ ಚ ಮುದಿತಃ ಪ್ರಾದಾದ್ವಿತ್ತಂ ಜನೇಶ್ವರಃ|
05193028c ಹಸ್ತಿನೋಽಶ್ವಾಂಶ್ಚ ಗಾಶ್ಚೈವ ದಾಸ್ಯೋ ಬಹುಶತಾಸ್ತಥಾ|
05193028e ಪೂಜಿತಶ್ಚ ಪ್ರತಿಯಯೌ ನಿವರ್ತ್ಯ ತನಯಾಂ ಕಿಲ||
ಆ ಜನೇಶ್ವರನು ಸಂತೋಷದಿಂದ ಶಿಖಂಡಿಗೆ ಬಹು ಸಂಪತ್ತನ್ನು-ಆನೆಗಳು, ಕುದುರೆಗಳು, ಗೋವುಗಳು ಮತ್ತು ದಾಸಿಯರನ್ನು ಬಹು ನೂರು ಸಂಖ್ಯೆಗಳಲ್ಲಿ ಕೊಟ್ಟು, ಗೌರವಿಸಲ್ಪಟ್ಟು, ತನ್ನ ಮಗಳನ್ನು ಹಿಂದಿರುಗಿಸಿ, ಮರಳಿದನು.
05193029a ವಿನೀತಕಿಲ್ಬಿಷೇ ಪ್ರೀತೇ ಹೇಮವರ್ಮಣಿ ಪಾರ್ಥಿವೇ|
05193029c ಪ್ರತಿಯಾತೇ ತು ದಾಶಾರ್ಣೇ ಹೃಷ್ಟರೂಪಾ ಶಿಖಂಡಿನೀ||
ತನ್ನ ಮೇಲಿದ್ದ ಆರೋಪವನ್ನು ಕಳೆದುಕೊಂಡ ಶಿಖಂಡಿಯು ಪಾರ್ಥಿವ ಹೇಮವರ್ಮ ದಾಶಾರ್ಣನು ಹಿಂದಿರುಗಲು ಸಂತೋಷಗೊಂಡನು.
05193030a ಕಸ್ಯ ಚಿತ್ತ್ವಥ ಕಾಲಸ್ಯ ಕುಬೇರೋ ನರವಾಹನಃ|
05193030c ಲೋಕಾನುಯಾತ್ರಾಂ ಕುರ್ವಾಣಃ ಸ್ಥೂಣಸ್ಯಾಗಾನ್ನಿವೇಶನಂ||
ಅಷ್ಟರಲ್ಲಿಯೇ ಸ್ವಲ್ಪ ಕಾಲದ ನಂತರ ಲೋಕಾನುಯಾತ್ರೆಯನ್ನು ಮಾಡುತ್ತಾ ನರವಾಹನ ಕುಬೇರನು ಸ್ಥೂಣನ ಮನೆಗೆ ಬಂದನು.
05193031a ಸ ತದ್ಗೃಹಸ್ಯೋಪರಿ ವರ್ತಮಾನ
ಆಲೋಕಯಾಮಾಸ ಧನಾಧಿಗೋಪ್ತಾ|
05193031c ಸ್ಥೂಣಸ್ಯ ಯಕ್ಷಸ್ಯ ನಿಶಾಮ್ಯ ವೇಶ್ಮ
ಸ್ವಲಂಕೃತಂ ಮಾಲ್ಯಗುಣೈರ್ವಿಚಿತ್ರಂ||
ಅವನ ಮನೆಯ ಮೇಲೆ ಹಾರಾಡುತ್ತಾ ಆ ಧನಾಧಿಗೋಪ್ತನು ಅವಲೋಕಿಸಿದನು. ಈ ಸ್ವಲಂಕೃತವಾದ ವಿಚಿತ್ರ ಮಾಲೆಗಳಿಂದ ಕೂಡಿದ ಇದು ಯಕ್ಷ ಸ್ಥೂಣನ ಮನೆಯೆಂದು ಗುರುತಿಸಿದನು.
05193032a ಲಾಜೈಶ್ಚ ಗಂಧೈಶ್ಚ ತಥಾ ವಿತಾನೈರ್
ಅಭ್ಯರ್ಚಿತಂ ಧೂಪನಧೂಪಿತಂ ಚ|
05193032c ಧ್ವಜೈಃ ಪತಾಕಾಭಿರಲಂಕೃತಂ ಚ
ಭಕ್ಷ್ಯಾನ್ನಪೇಯಾಮಿಷದತ್ತಹೋಮಂ||
ಲಾಜ, ಗಂಧ, ಚಪ್ಪರಗಳಿಂದ, ಅಭ್ಯರ್ಚಿಸಿದ ಧೂಪದ ಕಂಪಿನಿಂದ ತುಂಬಿದ, ಧ್ವಜ-ಪತಾಕೆಗಳಿಂದ ಅಲಂಕೃತವಾದ ಆ ಭವನದಲ್ಲಿ ಭಕ್ಷಾನ್ನ, ಪಾನೀಯಗಳ ಹೊಳೆಯೇ ಹರಿದಿತ್ತು.
05193033a ತತ್ಸ್ಥಾನಂ ತಸ್ಯ ದೃಷ್ಟ್ವಾ ತು ಸರ್ವತಃ ಸಮಲಂಕೃತಂ|
05193033c ಅಥಾಬ್ರವೀದ್ಯಕ್ಷಪತಿಸ್ತಾನ್ಯಕ್ಷಾನನುಗಾಂಸ್ತದಾ||
ಸರ್ವತವೂ ಸಮಲಂಕೃತವಾದ ಅವನ ಆ ಸ್ಥಾನವನ್ನು ನೋಡಿ ಯಕ್ಷಪತಿಯು ಅನುಸರಿಸಿ ಬಂದ ಯಕ್ಷರಿಗೆ ಹೇಳಿದನು:
05193034a ಸ್ವಲಂಕೃತಮಿದಂ ವೇಶ್ಮ ಸ್ಥೂಣಸ್ಯಾಮಿತವಿಕ್ರಮಾಃ|
05193034c ನೋಪಸರ್ಪತಿ ಮಾಂ ಚಾಪಿ ಕಸ್ಮಾದದ್ಯ ಸುಮಂದಧೀಃ||
“ಅಮಿತವಿಕ್ರಮಿಗಳೇ! ಈ ಸ್ವಲಂಕೃತ ಮನೆಯು ಸ್ಥೂಣನದು. ಆದರೆ ಆ ಮಹಾಮಂದಬುದ್ಧಿಯು ಹೊರಬಂದು ನನ್ನ ಮುಂದೆ ಹೊರಳುವುದಿಲ್ಲವಲ್ಲ?
05193035a ಯಸ್ಮಾಜ್ಜಾನನ್ಸುಮಂದಾತ್ಮಾ ಮಾಮಸೌ ನೋಪಸರ್ಪತಿ|
05193035c ತಸ್ಮಾತ್ತಸ್ಮೈ ಮಹಾದಂಡೋ ಧಾರ್ಯಃ ಸ್ಯಾದಿತಿ ಮೇ ಮತಿಃ||
ನಾನು ಇಲ್ಲಿದ್ದೇನೆಂದು ತಿಳಿದೂ ಆ ಸುಮಂದಾತ್ಮನು ನನ್ನ ಮುಂದೆ ಹರಿದು ಬರುತ್ತಿಲ್ಲ. ಆದುದರಿಂದ ಅವನಿಗೆ ಮಹಾದಂಡವನ್ನು ವಿಧಿಸಬೇಕೆಂದು ನನಗನ್ನಿಸುತ್ತದೆ.”
05193036 ಯಕ್ಷಾ ಊಚುಃ|
05193036a ದ್ರುಪದಸ್ಯ ಸುತಾ ರಾಜನ್ರಾಜ್ಞೋ ಜಾತಾ ಶಿಖಂಡಿನೀ|
05193036c ತಸ್ಯೈ ನಿಮಿತ್ತೇ ಕಸ್ಮಿಂಶ್ಚಿತ್ಪ್ರಾದಾತ್ಪುರುಷಲಕ್ಷಣಂ||
ಯಕ್ಷರು ಹೇಳಿದರು: “ರಾಜನ್! ರಾಜ ದ್ರುಪದನಿಗೆ ಶಿಖಂಡಿನೀ ಎಂಬ ಮಗಳು ಜನಿಸಿದ್ದಳು. ಯಾವುದೋ ಕಾರಣದಿಂದ ಇವನು ಅವಳಿಗೆ ತನ್ನ ಪುರುಷಲಕ್ಷಣವನ್ನು ಕೊಟ್ಟಿದ್ದಾನೆ.
05193037a ಅಗ್ರಹೀಲ್ಲಕ್ಷಣಂ ಸ್ತ್ರೀಣಾಂ ಸ್ತ್ರೀಭೂತಸ್ತಿಷ್ಠತೇ ಗೃಹೇ|
05193037c ನೋಪಸರ್ಪತಿ ತೇನಾಸೌ ಸವ್ರೀಡಃ ಸ್ತ್ರೀಸ್ವರೂಪವಾನ್||
ಅವಳ ಸ್ತ್ರೀಲಕ್ಷಣವನ್ನು ಸ್ವೀಕರಿಸಿ ಸ್ತ್ರೀಯಂತೆ ಅವನು ಮನೆಯ ಒಳಗೆಯೇ ಇರುತ್ತಾನೆ. ಸ್ತ್ರೀರೂಪವನ್ನು ಧರಿಸಿರುವ ಅವನು ನಾಚಿಕೊಂಡು ನಿನ್ನ ಎದಿರು ಬರುತ್ತಿಲ್ಲ.
05193038a ಏತಸ್ಮಾತ್ಕಾರಣಾದ್ರಾಜನ್ ಸ್ಥೂಣೋ ನ ತ್ವಾದ್ಯ ಪಶ್ಯತಿ|
05193038c ಶ್ರುತ್ವಾ ಕುರು ಯಥಾನ್ಯಾಯಂ ವಿಮಾನಮಿಹ ತಿಷ್ಠತಾಂ||
ರಾಜನ್! ಇದೇ ಕಾರಣದಿಂದ ಸ್ಥೂಣನು ಇಂದು ನಿನಗೆ ಕಾಣುತ್ತಿಲ್ಲ. ಇದನ್ನು ಕೇಳಿ ವಿಮಾನದಲ್ಲಿದ್ದುಕೊಂಡೇ ನ್ಯಾಯವಾದುದನ್ನು ಮಾಡು.””
05193039 ಭೀಷ್ಮ ಉವಾಚ|
05193039a ಆನೀಯತಾಂ ಸ್ಥೂಣ ಇತಿ ತತೋ ಯಕ್ಷಾಧಿಪೋಽಬ್ರವೀತ್|
05193039c ಕರ್ತಾಸ್ಮಿ ನಿಗ್ರಹಂ ತಸ್ಯೇತ್ಯುವಾಚ ಸ ಪುನಃ ಪುನಃ||
ಭೀಷ್ಮನು ಹೇಳಿದನು: ““ಸ್ಥೂಣನನ್ನು ಕರೆತನ್ನಿ! ಅವನನ್ನು ಶಿಕ್ಷಿಸುತ್ತೇನೆ!” ಎಂದು ಯಕ್ಷಾಧಿಪನು ಪುನಃ ಪುನಃ ಹೇಳಿದನು.
05193040a ಸೋಽಭ್ಯಗಚ್ಚತ ಯಕ್ಷೇಂದ್ರಮಾಹೂತಃ ಪೃಥಿವೀಪತೇ|
05193040c ಸ್ತ್ರೀಸ್ವರೂಪೋ ಮಹಾರಾಜ ತಸ್ಥೌ ವ್ರೀಡಾಸಮನ್ವಿತಃ||
ಮಹಾರಾಜ! ಪೃಥಿವೀಪತೇ! ಯಕ್ಷೇಂದ್ರನು ಕರೆಯಿಸಿಕೊಳ್ಳಲು ಅವನು ಸ್ತ್ರೀಸ್ವರೂಪದಲ್ಲಿ ಬಂದು ಬಹುನಾಚಿಕೆಯಿಂದ ನಿಂತುಕೊಂಡನು.
05193041a ತಂ ಶಶಾಪ ಸುಸಂಕ್ರುದ್ಧೋ ಧನದಃ ಕುರುನಂದನ|
05193041c ಏವಮೇವ ಭವತ್ವಸ್ಯ ಸ್ತ್ರೀತ್ವಂ ಪಾಪಸ್ಯ ಗುಹ್ಯಕಾಃ||
ಕುರುನಂದನ! ಸಂಕೃದ್ಧನಾದ ಧನದನು ಅವನಿಗೆ ಶಪಿಸಿದನು: “ಗುಹ್ಯಕರೇ! ಈ ಪಾಪಿಯು ಸ್ತ್ರೀಯಾಗಿಯೇ ಇರಲಿ!”
05193042a ತತೋಽಬ್ರವೀದ್ಯಕ್ಷಪತಿರ್ಮಹಾತ್ಮಾ
ಯಸ್ಮಾದದಾಸ್ತ್ವವಮನ್ಯೇಹ ಯಕ್ಷಾನ್|
05193042c ಶಿಖಂಡಿನೇ ಲಕ್ಷಣಂ ಪಾಪಬುದ್ಧೇ
ಸ್ತ್ರೀಲಕ್ಷಣಂ ಚಾಗ್ರಹೀಃ ಪಾಪಕರ್ಮನ್||
ಆಗ ಮಹಾತ್ಮ ಯಕ್ಷಪತಿಯು ಹೀಗೆ ಹೇಳಿದನು: “ಪಾಪಬುದ್ಧೆ! ಪಾಪಕರ್ಮಿ! ಶಿಖಂಡಿಯಿಂದ ಸ್ತ್ರೀಲಕ್ಷಣವನ್ನು ತೆಗೆದುಕೊಂಡು ನೀನು ಯಕ್ಷರನ್ನು ಅಪಮಾನಿಸಿರುವೆ.
05193043a ಅಪ್ರವೃತ್ತಂ ಸುದುರ್ಬುದ್ಧೇ ಯಸ್ಮಾದೇತತ್ಕೃತಂ ತ್ವಯಾ|
05193043c ತಸ್ಮಾದದ್ಯ ಪ್ರಭೃತ್ಯೇವ ತ್ವಂ ಸ್ತ್ರೀ ಸ ಪುರುಷಸ್ತಥಾ||
ಸುದುರ್ಬುದ್ಧೇ! ಇದೂವರೆಗೂ ಯಾರೂ ಮಾಡದಿರುವುದನ್ನು ನೀನು ಮಾಡಿದ್ದೀಯೆ. ಆದುದರಿಂದ ಇಂದಿನಿಂದ ನೀನು ಸ್ತ್ರೀಯಾಗಿಯೂ ಅವನು ಪುರುಷನಾಗಿಯೂ ಇರುತ್ತೀರಿ.”
05193044a ತತಃ ಪ್ರಸಾದಯಾಮಾಸುರ್ಯಕ್ಷಾ ವೈಶ್ರವಣಂ ಕಿಲ|
05193044c ಸ್ಥೂಣಸ್ಯಾರ್ಥೇ ಕುರುಷ್ವಾಂತಂ ಶಾಪಸ್ಯೇತಿ ಪುನಃ ಪುನಃ||
ಆಗ ಅವನ ಶಾಪಕ್ಕೆ ಅಂತ್ಯವನ್ನು ಮಾಡಬೇಕೆಂದು ಸ್ಥೂಣನ ಪರವಾಗಿ ಯಕ್ಷರು ಪುನಃ ಪುನಃ ವೈಶ್ರವಣನನ್ನು ಬೇಡಿಕೊಂಡರು.
05193045a ತತೋ ಮಹಾತ್ಮಾ ಯಕ್ಷೇಂದ್ರಃ ಪ್ರತ್ಯುವಾಚಾನುಗಾಮಿನಃ|
05193045c ಸರ್ವಾನ್ಯಕ್ಷಗಣಾಂಸ್ತಾತ ಶಾಪಸ್ಯಾಂತಚಿಕೀರ್ಷಯಾ||
ಆಗ ಮಹಾತ್ಮ ಯಕ್ಷೇಂದ್ರನು ತನ್ನ ಅನುಗಾಮಿ ಎಲ್ಲ ಯಕ್ಷಗಣಗಳಿಗೆ ಶಾಪದ ಅಂತ್ಯದ ಕುರಿತು ಹೇಳಿದನು:
05193046a ಹತೇ ಶಿಖಂಡಿನಿ ರಣೇ ಸ್ವರೂಪಂ ಪ್ರತಿಪತ್ಸ್ಯತೇ|
05193046c ಸ್ಥೂಣೋ ಯಕ್ಷೋ ನಿರುದ್ವೇಗೋ ಭವತ್ವಿತಿ ಮಹಾಮನಾಃ||
“ರಣದಲ್ಲಿ ಶಿಖಂಡಿನಿಯು ಸತ್ತ ನಂತರ ಯಕ್ಷ ಸ್ಥೂಣನು ಸ್ವರೂಪವನ್ನು ಪಡೆಯುತ್ತಾನೆ. ಮಹಾಮನಸ್ವಿ ಸ್ಥೂಣನು ಉದ್ವೇಗಪಡದಿರಲಿ.”
05193047a ಇತ್ಯುಕ್ತ್ವಾ ಭಗವಾನ್ದೇವೋ ಯಕ್ಷರಾಕ್ಷಸಪೂಜಿತಃ|
05193047c ಪ್ರಯಯೌ ಸಹ ತೈಃ ಸರ್ವೈರ್ನಿಮೇಷಾಂತರಚಾರಿಭಿಃ||
ಹೀಗೆ ಹೇಳಿ ಭಗವಾನ ದೇವ ಯಕ್ಷಪೂಜಿತನು ಆ ಎಲ್ಲ ನಿಮೇಷಾಂತರಚಾರಿಗಳೊಂದಿಗೆ ಹೊರಟು ಹೋದನು.
05193048a ಸ್ಥೂಣಸ್ತು ಶಾಪಂ ಸಂಪ್ರಾಪ್ಯ ತತ್ರೈವ ನ್ಯವಸತ್ತದಾ|
05193048c ಸಮಯೇ ಚಾಗಮತ್ತಂ ವೈ ಶಿಖಂಡೀ ಸ ಕ್ಷಪಾಚರಂ||
ಸ್ಥೂಣನಾದರೋ ಶಾಪವನ್ನು ಪಡೆದು ಅಲ್ಲಿಯೇ ವಾಸಿಸಿದನು. ಸ್ವಲ್ಪ ಸಮಯದಲ್ಲಿಯೇ ಶಿಖಂಡಿಯು ಆ ಕ್ಷಪಾಚರನಲ್ಲಿಗೆ ಬಂದನು.
05193049a ಸೋಽಭಿಗಮ್ಯಾಬ್ರವೀದ್ವಾಕ್ಯಂ ಪ್ರಾಪ್ತೋಽಸ್ಮಿ ಭಗವನ್ನಿತಿ|
05193049c ತಮಬ್ರವೀತ್ತತಃ ಸ್ಥೂಣಃ ಪ್ರೀತೋಽಸ್ಮೀತಿ ಪುನಃ ಪುನಃ||
ಅವನ ಬಳಿಬಂದು “ಭಗವನ್! ಬಂದಿದ್ದೇನೆ!” ಎಂದು ಹೇಳಿದನು. ಅವನಿಗೆ ಸ್ಥೂಣನು “ಸಂತೋಷವಾಯಿತು!” ಎಂದು ಪುನಃ ಪುನಃ ಹೇಳಿದನು.
05193050a ಆರ್ಜವೇನಾಗತಂ ದೃಷ್ಟ್ವಾ ರಾಜಪುತ್ರಂ ಶಿಖಂಡಿನಂ|
05193050c ಸರ್ವಮೇವ ಯಥಾವೃತ್ತಮಾಚಚಕ್ಷೇ ಶಿಖಂಡಿನೇ||
ಪ್ರಾಮಾಣಿಕನಾಗಿ ಬಂದಿರುವ ರಾಜಪುತ್ರ ಶಿಖಂಡಿಯನ್ನು ನೋಡಿ ಅವನು ನಡೆದ ವೃತ್ತಾಂತವೆಲ್ಲವನ್ನೂ ಶಿಖಂಡಿಗೆ ಹೇಳಿದನು.
05193051 ಯಕ್ಷ ಉವಾಚ|
05193051a ಶಪ್ತೋ ವೈಶ್ರವಣೇನಾಸ್ಮಿ ತ್ವತ್ಕೃತೇ ಪಾರ್ಥಿವಾತ್ಮಜ|
05193051c ಗಚ್ಚೇದಾನೀಂ ಯಥಾಕಾಮಂ ಚರ ಲೋಕಾನ್ಯಥಾಸುಖಂ||
ಯಕ್ಷನು ಹೇಳಿದನು: “ಪಾರ್ಥಿವಾತ್ಮಜ! ನಿನ್ನಿಂದಾಗಿ ನಾನು ವೈಶ್ರವಣನಿಂದ ಶಪಿಸಲ್ಪಟ್ಟಿದ್ದೇನೆ. ಹೊರಟು ಹೋಗು! ನಿನಗಿಚ್ಛೆಬಂದಂತೆ ಸುಖವಾಗುವ ಹಾಗೆ ಲೋಕಗಳನ್ನು ಸಂಚರಿಸು.
05193052a ದಿಷ್ಟಮೇತತ್ಪುರಾ ಮನ್ಯೇ ನ ಶಕ್ಯಮತಿವರ್ತಿತುಂ|
05193052c ಗಮನಂ ತವ ಚೇತೋ ಹಿ ಪೌಲಸ್ತ್ಯಸ್ಯ ಚ ದರ್ಶನಂ||
ಇಲ್ಲಿಗೆ ನೀನು ಬಂದಿರುವುದು ಮತ್ತು ಪೌಲಸ್ತ್ಯನ ದರ್ಶನ ಎಲ್ಲವೂ ಹಿಂದೆ ವಿಧಿ ನಿರ್ಮಿತವಾದುದೆಂದು ಅನಿಸುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ.””
05193053 ಭೀಷ್ಮ ಉವಾಚ|
05193053a ಏವಮುಕ್ತಃ ಶಿಖಂಡೀ ತು ಸ್ಥೂಣಯಕ್ಷೇಣ ಭಾರತ|
05193053c ಪ್ರತ್ಯಾಜಗಾಮ ನಗರಂ ಹರ್ಷೇಣ ಮಹತಾನ್ವಿತಃ||
ಭೀಷ್ಮನು ಹೇಳಿದನು: “ಭಾರತ! ಯಕ್ಷ ಸ್ಥೂಣನು ಹೀಗೆ ಹೇಳಲು ಶಿಖಂಡಿಯು ಮಹಾಹರ್ಷದಿಂದ ನಗರಕ್ಕೆ ಹಿಂದಿರುಗಿದನು.
05193054a ಪೂಜಯಾಮಾಸ ವಿವಿಧೈರ್ಗಂಧಮಾಲ್ಯೈರ್ಮಹಾಧನೈಃ|
05193054c ದ್ವಿಜಾತೀನ್ದೇವತಾಶ್ಚಾಪಿ ಚೈತ್ಯಾನಥ ಚತುಷ್ಪಥಾನ್||
ವಿವಿಧ ಗಂಧ-ಮಾಲೆ-ಮಹಾಧನಗಳಿಂದ ದ್ವಿಜಾತಿಯವರನ್ನೂ, ದೇವತೆಗಳನ್ನೂ ಚೈತ್ಯಗಳಲ್ಲಿಯೂ ಚೌರಾಹಗಳಲ್ಲಿಯೂ ಪೂಜಿಸಿದನು.
05193055a ದ್ರುಪದಃ ಸಹ ಪುತ್ರೇಣ ಸಿದ್ಧಾರ್ಥೇನ ಶಿಖಂಡಿನಾ|
05193055c ಮುದಂ ಚ ಪರಮಾಂ ಲೇಭೇ ಪಾಂಚಾಲ್ಯಃ ಸಹ ಬಾಂಧವೈಃ||
ಪಾಂಚಾಲ್ಯ ದ್ರುಪದನೂ ಸಹ ಬಾಂಧವರೊಂದಿಗೆ ಶಿಖಂಡಿಯ ಸಿದ್ಧಿ-ಏಳಿಗೆಗಳಿಂದ ಪರಮ ಸಂತೋಷವನ್ನು ಹೊಂದಿದನು.
05193056a ಶಿಷ್ಯಾರ್ಥಂ ಪ್ರದದೌ ಚಾಪಿ ದ್ರೋಣಾಯ ಕುರುಪುಂಗವ|
05193056c ಶಿಖಂಡಿನಂ ಮಹಾರಾಜ ಪುತ್ರಂ ಸ್ತ್ರೀಪೂರ್ವಿಣಂ ತಥಾ||
ಕುರುಪುಂಗವ! ಮಹಾರಾಜ! ಮೊದಲು ಸ್ತ್ರೀಯಾಗಿದ್ದ ಪುತ್ರ ಶಿಖಂಡಿಯನ್ನು ಅವನು ಶಿಷ್ಯನನ್ನಾಗಿ ದ್ರೋಣನಿಗೆ ಕೊಟ್ಟನು.
05193057a ಪ್ರತಿಪೇದೇ ಚತುಷ್ಪಾದಂ ಧನುರ್ವೇದಂ ನೃಪಾತ್ಮಜಃ|
05193057c ಶಿಖಂಡೀ ಸಹ ಯುಷ್ಮಾಭಿರ್ಧೃಷ್ಟದ್ಯುಮ್ನಶ್ಚ ಪಾರ್ಷತಃ||
ನಿಮ್ಮೊಂದಿಗೆ ನೃಪಾತ್ಮಜ ಶಿಖಂಡಿಯೂ ಪಾರ್ಷತ ಧೃಷ್ಟದ್ಯುಮ್ನನೂ ನಾಲ್ಕು ಭಾಗಗಳ ಧನುರ್ವೇದವನ್ನು ಕಲಿತರು.
05193058a ಮಮ ತ್ವೇತಚ್ಚರಾಸ್ತಾತ ಯಥಾವತ್ಪ್ರತ್ಯವೇದಯನ್|
05193058c ಜಡಾಂಧಬಧಿರಾಕಾರಾ ಯೇ ಯುಕ್ತಾ ದ್ರುಪದೇ ಮಯಾ||
ಮಗೂ! ನಾನು ದ್ರುಪದನಲ್ಲಿ ನಿಯೋಜಿಸಿದ್ದ ಜಡ, ಕುರುಡ, ಕಿವುಡರಂತೆ ನಟಿಸುತ್ತಿದ್ದ ಚಾರರು ನನಗೆ ನಡೆದ ಇವೆಲ್ಲವನ್ನೂ ಹೇಳಿದರು.
05193059a ಏವಮೇಷ ಮಹಾರಾಜ ಸ್ತ್ರೀಪುಮಾನ್ದ್ರುಪದಾತ್ಮಜಃ|
05193059c ಸಂಭೂತಃ ಕೌರವಶ್ರೇಷ್ಠ ಶಿಖಂಡೀ ರಥಸತ್ತಮಃ||
ಮಹಾರಾಜ! ಕೌರವಶ್ರೇಷ್ಠ! ಹೀಗೆ ದ್ರುಪದಾತ್ಮಜ ಶಿಖಂಡೀ ರಥಸತ್ತಮನು ಹೆಣ್ಣಾಗಿದ್ದು ಗಂಡಾದನು.
05193060a ಜ್ಯೇಷ್ಠಾ ಕಾಶಿಪತೇಃ ಕನ್ಯಾ ಅಂಬಾ ನಾಮೇತಿ ವಿಶ್ರುತಾ|
05193060c ದ್ರುಪದಸ್ಯ ಕುಲೇ ಜಾತಾ ಶಿಖಂಡೀ ಭರತರ್ಷಭ||
ಭರತರ್ಷಭ! ಅಂಬಾ ಎಂಬ ಹೆಸರಿನಿಂದ ವಿಶ್ರುತಳಾದ ಕಾಶಿಪತಿಯ ಜೇಷ್ಠ ಕನ್ಯೆಯು ದ್ರುಪದನ ಕುಲದಲ್ಲಿ ಶಿಖಂಡಿಯಾಗಿ ಹುಟ್ಟಿದಳು.
05193061a ನಾಹಮೇನಂ ಧನುಷ್ಪಾಣಿಂ ಯುಯುತ್ಸುಂ ಸಮುಪಸ್ಥಿತಂ|
05193061c ಮುಹೂರ್ತಮಪಿ ಪಶ್ಯೇಯಂ ಪ್ರಹರೇಯಂ ನ ಚಾಪ್ಯುತ||
ಅವನು ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಮಾಡಲು ಬಂದರೆ ನಾನು ಅವನನ್ನು ಒಂದು ಕ್ಷಣವೂ ನೋಡುವುದಿಲ್ಲ, ಅವನನ್ನು ಹೊಡೆಯುವುದೂ ಇಲ್ಲ.
05193062a ವ್ರತಮೇತನ್ಮಮ ಸದಾ ಪೃಥಿವ್ಯಾಮಪಿ ವಿಶ್ರುತಂ|
05193062c ಸ್ತ್ರಿಯಾಂ ಸ್ತ್ರೀಪೂರ್ವಕೇ ಚಾಪಿ ಸ್ತ್ರೀನಾಮ್ನಿ ಸ್ತ್ರೀಸ್ವರೂಪಿಣಿ||
05193063a ನ ಮುಂಚೇಯಮಹಂ ಬಾಣಾನಿತಿ ಕೌರವನಂದನ|
ಕೌರವನಂದನ! ಸ್ತ್ರೀಯರ, ಹಿಂದೆ ಸ್ತ್ರೀಯಾಗಿದ್ದವರ, ಸ್ತ್ರೀಯರ ಹೆಸರಿದ್ದವರ, ಸ್ತ್ರೀಯರ ರೂಪದಲ್ಲಿದ್ದವರ ಮೇಲೆ ನಾನು ಬಾಣಪ್ರಯೋಗ ಮಾಡುವುದಿಲ್ಲ ಎನ್ನುವ, ಸದಾ ನಡೆಸಿಕೊಂಡು ಬರುತ್ತಿರುವ ನನ್ನ ಈ ವ್ರತವು ಭೂಮಿಯಲ್ಲಿಯೇ ವಿಶ್ರುತವಾಗಿದೆ[1].
05193063c ನ ಹನ್ಯಾಮಹಮೇತೇನ ಕಾರಣೇನ ಶಿಖಂಡಿನಂ||
05193064a ಏತತ್ತತ್ತ್ವಮಹಂ ವೇದ ಜನ್ಮ ತಾತ ಶಿಖಂಡಿನಃ|
ಈ ಕಾರಣದಿಂದಲೇ ನಾನು ಶಿಖಂಡಿಯನ್ನು ಹೊಡೆಯುವುದಿಲ್ಲ. ಮಗೂ! ಶಿಖಂಡಿಯ ಮಹಾ ಜನ್ಮವೇನೆಂದು ನಿನಗೆ ತಿಳಿಸಿದ್ದೇನೆ.
05193064c ತತೋ ನೈನಂ ಹನಿಷ್ಯಾಮಿ ಸಮರೇಷ್ವಾತತಾಯಿನಂ||
05193065a ಯದಿ ಭೀಷ್ಮಃ ಸ್ತ್ರಿಯಂ ಹನ್ಯಾದ್ಧನ್ಯಾದಾತ್ಮಾನಮಪ್ಯುತ|
05193065c ನೈನಂ ತಸ್ಮಾದ್ಧನಿಷ್ಯಾಮಿ ದೃಷ್ಟ್ವಾಪಿ ಸಮರೇ ಸ್ಥಿತಂ||
ಸಮರದಲ್ಲಿ ಆ ಆತತಾಯಿಯನ್ನು ನಾನು ಸಂಹರಿಸುವುದಿಲ್ಲ. ಸ್ತ್ರೀಯನ್ನು ಕೊಲ್ಲುವುದರ ಮೊದಲು ಭೀಷ್ಮನು ತನ್ನನ್ನು ಕೊಂದುಕೊಳ್ಳುತ್ತಾನೆ. ಆದುದರಿಂದ ಅವನು ಸಮರದಲ್ಲಿ ನಿಂತಿರುವುದನ್ನು ನೋಡಿಯೂ ನಾನು ಅವನನ್ನು ಕೊಲ್ಲುವುದಿಲ್ಲ.””
05193066 ಸಂಜಯ ಉವಾಚ|
05193066a ಏತಚ್ಚ್ರುತ್ವಾ ತು ಕೌರವ್ಯೋ ರಾಜಾ ದುರ್ಯೋಧನಸ್ತದಾ|
05193066c ಮುಹೂರ್ತಮಿವ ಸ ಧ್ಯಾತ್ವಾ ಭೀಷ್ಮೇ ಯುಕ್ತಮಮನ್ಯತ||
ಸಂಜಯನು ಹೇಳಿದನು: “ಇದನ್ನು ಕೇಳಿದ ಕೌರವ್ಯ ರಾಜಾ ದುರ್ಯೋಧನನು ಒಂದು ಕ್ಷಣ ಯೋಚಿಸಿ ಅದು ಭೀಷ್ಮನಿಗೆ ಯುಕ್ತವಾದುದು ಎಂದು ತೀರ್ಮಾನಿಸಿದನು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಶಿಖಂಡಿಪುಂಸಪ್ರಾಪ್ತೌ ತ್ರಿನವತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಶಿಖಂಡಿಪುಂಸಪ್ರಾಪ್ತಿಯಲ್ಲಿ ನೂರಾತೊಂಭತ್ಮೂರನೆಯ ಅಧ್ಯಾಯವು.

[1] ಭೀಷ್ಮನು ಈ ವ್ರತವನ್ನು ಯಾವ ಸಂದರ್ಭದಲ್ಲಿ ತೆಗೆದುಕೊಂಡಿದ್ದನು ಎನ್ನುವುದು ಸ್ಪಷ್ಟವಾಗುತ್ತಿಲ್ಲ.