Udyoga Parva: Chapter 134

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೪

“ರಾಜನಾದವನು ಎಂತಹುದೇ ಆಪತ್ತು ಬಂದರೂ ಎಂದೂ ಭಯಪಡಬಾರದು. ಒಂದುವೇಳೆ ಹೆದರಿದರೂ ಹೆದರಿದವನಂತೆ ನಡೆದುಕೊಳ್ಳಬಾರದು” ಎಂದು ತನ್ನ ಮಗನನ್ನು ವಿದುಲೆಯು ಪ್ರಚೋದಿಸಿದುದು (೧-೨೧).

05134001 ಮಾತೋವಾಚ|

05134001a ನೈವ ರಾಜ್ಞಾ ದರಃ ಕಾರ್ಯೋ ಜಾತು ಕಸ್ಯಾಂ ಚಿದಾಪದಿ|

05134001c ಅಥ ಚೇದಪಿ ದೀರ್ಣಃ ಸ್ಯಾನ್ನೈವ ವರ್ತೇತ ದೀರ್ಣವತ್||

ಮಾತೆಯು ಹೇಳಿದಳು: “ರಾಜನಾದವನು ಎಂತಹುದೇ ಆಪತ್ತು ಬಂದರೂ ಎಂದೂ ಭಯಪಡಬಾರದು. ಒಂದುವೇಳೆ ಹೆದರಿದರೂ ಹೆದರಿದವನಂತೆ ನಡೆದುಕೊಳ್ಳಬಾರದು.

05134002a ದೀರ್ಣಂ ಹಿ ದೃಷ್ಟ್ವಾ ರಾಜಾನಂ ಸರ್ವಮೇವಾನುದೀರ್ಯತೇ|

05134002c ರಾಷ್ಟ್ರಂ ಬಲಮಮಾತ್ಯಾಶ್ಚ ಪೃಥಕ್ಕುರ್ವಂತಿ ತೇ ಮತಿಂ||

ರಾಜನು ಹೆದರಿದುದನ್ನು ನೋಡಿ ಎಲ್ಲರೂ ಹೆದರುತ್ತಾರೆ. ರಾಷ್ಟ್ರ, ಸೇನೆ, ಮತ್ತು ಅಮಾತ್ಯರು ನಿನಗೆ ವಿರುದ್ಧವಾಗಿಯೇ ಮಾಡುತ್ತಾರೆ.

05134003a ಶತ್ರೂನೇಕೇ ಪ್ರಪದ್ಯಂತೇ ಪ್ರಜಹತ್ಯಪರೇ ಪುನಃ|

05134003c ಅನ್ವೇಕೇ ಪ್ರಜಿಹೀರ್ಷಂತಿ ಯೇ ಪುರಸ್ತಾದ್ವಿಮಾನಿತಾಃ||

ಕೆಲವರು ಶತ್ರುಗಳೊಡನೆ ಒಂದಾಗುತ್ತಾರೆ. ಇತರರು ರಾಜ್ಯವನ್ನು ತ್ಯಜಿಸುತ್ತಾರೆ. ಹಿಂದೆ ಅಪಮಾನಿತರಾದವರು ಅವನನ್ನು ಕೊಲ್ಲಲೂ ಪ್ರಯತ್ನಿಸುತ್ತಾರೆ.

05134004a ಯ ಏವಾತ್ಯಂತಸುಹೃದಸ್ತ ಏನಂ ಪರ್ಯುಪಾಸತೇ|

05134004c ಅಶಕ್ತಯಃ ಸ್ವಸ್ತಿಕಾಮಾ ಬದ್ಧವತ್ಸಾ ಇಡಾ ಇವ||

ಆದರೆ ಅತ್ಯಂತ ಆತ್ಮೀಯರಾದವರು ಮಾತ್ರ ಅವನ ಸೇವೆ ಮಾಡುತ್ತಿರುತ್ತಾರೆ. ಕಟ್ಟಿಹಾಕಿದ ಕರುವಿನೊಡನಿರುವ ಹಸುವಿನಂತೆ ಆ ಅಶಕ್ತರು ಒಳ್ಳೆಯದನ್ನೇ ಆಶಿಸುತ್ತಿರುತ್ತಾರೆ.

05134004e ಶೋಚಂತಮನುಶೋಚಂತಿ ಪ್ರತೀತಾನಿವ ಬಾಂಧವಾನ್||

05134005a ಅಪಿ ತೇ ಪೂಜಿತಾಃ ಪೂರ್ವಮಪಿ ತೇ ಸುಹೃದೋ ಮತಾಃ|

ಶೋಕಿಸುವ ಬಾಂಧವರಂತೆ ಅವರೂ ಕೂಡ ಜೊತೆಗೆ ಶೋಕಿಸುತ್ತಾರೆ. ಅಂತಹ ಸುಹೃದಯರು, ಹಿಂದೆ ಗೌರವಿಸಲ್ಪಟ್ಟವರು, ನಿನಗೆ ಯಾರಾದರೂ ಇದ್ದಾರೆಯೇ?

05134005c ಯೇ ರಾಷ್ಟ್ರಮಭಿಮನ್ಯಂತೇ ರಾಜ್ಞೋ ವ್ಯಸನಮೀಯುಷಃ||

05134005e ಮಾ ದೀದರಸ್ತ್ವಂ ಸುಹೃದೋ ಮಾ ತ್ವಾಂ ದೀರ್ಣಂ ಪ್ರಹಾಸಿಷುಃ||

ಯಾರು ರಾಷ್ಟ್ರದ ಅಭಿಮಾನಿಗಳೋ, ಯಾರು ರಾಜನು ವ್ಯಸನದಲ್ಲಿರುವಾಗ ಸಹಾಯಮಾಡಲು ಬಯಸುತ್ತಾರೋ ಅಂಥಹ ಸುಹೃದಯರನ್ನು ದೂರಮಾಡಬೇಡ. ಅವರೂ ನಿನ್ನನ್ನು ಅಗಲದಿರಲಿ.

05134006a ಪ್ರಭಾವಂ ಪೌರುಷಂ ಬುದ್ಧಿಂ ಜಿಜ್ಞಾಸಂತ್ಯಾ ಮಯಾ ತವ|

05134006c ಉಲ್ಲಪಂತ್ಯಾ ಸಮಾಶ್ವಾಸಂ ಬಲವಾನಿವ ದುರ್ಬಲಂ||

ನಿನ್ನ ಪ್ರಭಾವ, ಪೌರುಷ ಮತ್ತು ಬುದ್ಧಿಯನ್ನು ತಿಳಿದುಕೊಂಡೇ ದುರ್ಬಲನಂತಿರುವ ನಿನ್ನನ್ನು ಬಲವಂತನಾಗಿ ಎಬ್ಬಿಸಿ ಆಶ್ವಾಸನೆ ನೀಡುವುದಕ್ಕಾಗಿಯೇ ನಾನು ನಿನಗೆ ಈ ರೀತಿ ಮಾತನಾಡಿದೆ.

05134007a ಯದ್ಯೇತತ್ಸಂವಿಜಾನಾಸಿ ಯದಿ ಸಮ್ಯಗ್ಬ್ರವೀಮ್ಯಹಂ|

05134007c ಕೃತ್ವಾಸೌಮ್ಯಮಿವಾತ್ಮಾನಂ ಜಯಾಯೋತ್ತಿಷ್ಠ ಸಂಜಯ||

ಸಂಜಯ! ನಾನು ಹೇಳಿದುದೆಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿರುವೆಯಾದರೆ ನಿನ್ನ ಸೌಮ್ಯ ಸ್ವಭಾವವನ್ನು ಬದಲಾಯಿಸಿ ಜಯಕ್ಕಾಗಿ ಎದ್ದು ನಿಲ್ಲು!

05134008a ಅಸ್ತಿ ನಃ ಕೋಶನಿಚಯೋ ಮಹಾನವಿದಿತಸ್ತವ|

05134008c ತಮಹಂ ವೇದ ನಾನ್ಯಸ್ತಮುಪಸಂಪಾದಯಾಮಿ ತೇ||

ನಮ್ಮಲ್ಲಿ ಇನ್ನೂ ಅಪಾರ ಧನವಿದೆ. ಅದು ನಿನಗೆ ತಿಳಿಯದು. ಬೇರೆಯಾರಿಗೂ ಅಲ್ಲದೇ ನನಗೊಬ್ಬಳಿಗೇ ತಿಳಿದಿರುವ ಅದನ್ನು ನಾನು ನಿನಗೆ ಕೊಡುತ್ತೇನೆ.

05134009a ಸಂತಿ ನೈಕಶತಾ ಭೂಯಃ ಸುಹೃದಸ್ತವ ಸಂಜಯ|

05134009c ಸುಖದುಃಖಸಹಾ ವೀರ ಶತಾರ್ಹಾ ಅನಿವರ್ತಿನಃ||

ಸಂಜಯ! ವೀರ! ಒಬ್ಬರಲ್ಲ ನಿನ್ನ ನೂರಾರು ಸುಹೃದಯರು, ಸುಖ-ದುಃಖಗಳಲ್ಲಿ ಜೊತೆಗಿರುವ, ಯುದ್ಧದಿಂದ ಪಲಾಯನ ಮಾಡದಿರುವವರು ಇದ್ದಾರೆ.

05134010a ತಾದೃಶಾ ಹಿ ಸಹಾಯಾ ವೈ ಪುರುಷಸ್ಯ ಬುಭೂಷತಃ|

05134010c ಈಷದುಜ್ಜಿಹತಃ ಕಿಂ ಚಿತ್ಸಚಿವಾಃ ಶತ್ರುಕರ್ಶನಾಃ||

ಶತ್ರುಕರ್ಶನ! ನಿನ್ನ ಒಳಿತನ್ನೇ ಬಯಸುವ, ಯುದ್ಧಮಾಡಿಯಾದರೂ ನಿನ್ನ ಶತ್ರುವಿನಿಂದ ನಿನಗಿಷ್ಟವಾದುದನ್ನು ಕಿತ್ತು ತರಲು ಸಮರ್ಥರಾದವರು ನಿನ್ನ ಸಚಿವರಾಗಬೇಕು.”

05134011 ಪುತ್ರ ಉವಾಚ|

05134011a ಕಸ್ಯ ತ್ವೀದೃಶಕಂ ವಾಕ್ಯಂ ಶ್ರುತ್ವಾಪಿ ಸ್ವಲ್ಪಚೇತಸಃ|

05134011c ತಮೋ ನ ವ್ಯಪಹನ್ಯೇತ ಸುಚಿತ್ರಾರ್ಥಪದಾಕ್ಷರಂ||

ಮಗನು ಹೇಳಿದನು: “ಸುಚಿತ್ರಾರ್ಥ ಪದಾಕ್ಷರಗಳಿಂದ ಕೂಡಿದ, ಕತ್ತಲೆಯನ್ನು ಕಳೆಯುವ ಈ ವಾಕ್ಯವನ್ನು ಕೇಳಿ ಯಾವ ಸ್ವಲ್ಪಚೇತಸನು ತಾನೇ ಮೇಲೇಳುವುದಿಲ್ಲ?

05134012a ಉದಕೇ ಧೂರಿಯಂ ಧಾರ್ಯಾ ಸರ್ತವ್ಯಂ ಪ್ರವಣೇ ಮಯಾ|

05134012c ಯಸ್ಯ ಮೇ ಭವತೀ ನೇತ್ರೀ ಭವಿಷ್ಯದ್ಭೂತದರ್ಶಿನೀ||

ಶತ್ರುವೆಂಬ ನೀರಿನಲ್ಲಿ ಮುಳುಗಿ ಹೋಗಿರುವ ನನ್ನ ರಾಜ್ಯವನ್ನು ಉದ್ಧರಿಸಬೇಕು ಅಥವಾ ಯುದ್ಧರೂಪದ ಪ್ರಪಾತದಲ್ಲಿ ಬಿದ್ದು ಪ್ರಾಣವನ್ನು ನೀಗಬೇಕೆಂದು ಹೇಳಿ ನನಗೆ ಶಿಕ್ಷಕಿಯಾಗಿರುವೆ.

05134013a ಅಹಂ ಹಿ ವಚನಂ ತ್ವತ್ತಃ ಶುಶ್ರೂಷುರಪರಾಪರಂ|

05134013c ಕಿಂ ಚಿತ್ಕಿಂ ಚಿತ್ಪ್ರತಿವದಂಸ್ತೂಷ್ಣೀಮಾಸಂ ಮುಹುರ್ಮುಹುಃ||

ನಾನು ನಿನ್ನ ಮಾತನ್ನು ಅರ್ಥಮಾಡಿಕೊಂಡರೂ ಇನ್ನೂ ಹೆಚ್ಚು ಕೇಳುವ ಆಸೆಯಿಂದ ನೀನು ಹೇಳಿದುದಕ್ಕೆ ಮತ್ತೆ ಮತ್ತೆ ಏನಾದರೂ ವಿರೋಧವಾಗಿ ಮಾತನಾಡಿ ಸುಮ್ಮನಾಗುತ್ತಿದ್ದೆ.

05134014a ಅತೃಪ್ಯನ್ನಮೃತಸ್ಯೇವ ಕೃಚ್ಚ್ರಾಲ್ಲಬ್ಧಸ್ಯ ಬಾಂಧವಾತ್|

05134014c ಉದ್ಯಚ್ಚಾಮ್ಯೇಷ ಶತ್ರೂಣಾಂ ನಿಯಮಾಯ ಜಯಾಯ ಚ||

ಕಷ್ಟವನ್ನು ಅನುಭವಿಸಿದ್ದುದರಿಂದಲೇ ಅಮೃತೋಪಮವಾದ ಈ ಮಾತುಗಳನ್ನು ಕೇಳಲು ಅವಕಾಶವಾಯಿತು. ಕೇಳುತ್ತಿದ್ದರೂ ಇನ್ನಷ್ಟು ಕೇಳಬೇಕೆನ್ನಿಸುತ್ತದೆ. ಈಗ ನಾನು ಶತ್ರುಗಳ ದಮನಕ್ಕೂ ನಮ್ಮ ವಿಜಯಕ್ಕೂ ಬಾಂಧವರೊಡನೆ ಕಾರ್ಯಗತನಾಗುತ್ತೇನೆ.””

05134015 ಕುಂತ್ಯುವಾಚ|

05134015a ಸದಶ್ವ ಇವ ಸ ಕ್ಷಿಪ್ತಃ ಪ್ರಣುನ್ನೋ ವಾಕ್ಯಸಾಯಕೈಃ|

05134015c ತಚ್ಚಕಾರ ತಥಾ ಸರ್ವಂ ಯಥಾವದನುಶಾಸನಂ||

ಕುಂತಿಯು ಹೇಳಿದಳು: “ಮಾತಿನ ಬಾಣಗಳಿಂದ ಚುಚ್ಚಲ್ಪಟ್ಟವನಾಗಿ ಚಾವಟಿಯಿಂದ ಹೊಡೆಯಲ್ಪಟ್ಟ ಉತ್ತಮ ಕುದುರೆಯಂತೆ ಅವನು ಅವಳು ಹೇಳಿದುದೆಲ್ಲವನ್ನೂ ಹಾಗೆಯೇ ಮಾಡಿದನು.

05134016a ಇದಮುದ್ಧರ್ಷಣಂ ಭೀಮಂ ತೇಜೋವರ್ಧನಮುತ್ತಮಂ|

05134016c ರಾಜಾನಂ ಶ್ರಾವಯೇನ್ಮಂತ್ರೀ ಸೀದಂತಂ ಶತ್ರುಪೀಡಿತಂ||

ಹೇಡಿಗಳಿಗೆ ಭಯಂಕರವೂ ಉತ್ತಮರಿಗೆ ತೇಜೋವರ್ಧನವೂ ಆದ ಇದನ್ನು ಶತ್ರುಪೀಡಿತನಾಗಿ ಹತಾಶನಾಗಿರುವ ರಾಜನಿಗೆ ಮಂತ್ರಿಗಳು ಇದನ್ನು ಹೇಳಬೇಕು.

05134017a ಜಯೋ ನಾಮೇತಿಹಾಸೋಽಯಂ ಶ್ರೋತವ್ಯೋ ವಿಜಿಗೀಷುಣಾ|

05134017c ಮಹೀಂ ವಿಜಯತೇ ಕ್ಷಿಪ್ರಂ ಶ್ರುತ್ವಾ ಶತ್ರೂಂಶ್ಚ ಮರ್ದತಿ||

ಜಯ ಎಂಬ ಹೆಸರಿನ ಈ ಇತಿಹಾಸವನ್ನು ಜಯವನ್ನು ಬಯಸುವವರು ಕೇಳಬೇಕು. ಇದನ್ನು ಕೇಳಿ ಮಹಿಯನ್ನು ಜಯಿಸುತ್ತಾನೆ ಮತ್ತು ಬೇಗನೇ ಕ್ಷತ್ರುಗಳನ್ನು ಮರ್ದಿಸುತ್ತಾನೆ.

05134018a ಇದಂ ಪುಂಸವನಂ ಚೈವ ವೀರಾಜನನಮೇವ ಚ|

05134018c ಅಭೀಕ್ಷ್ಣಂ ಗರ್ಭಿಣೀ ಶ್ರುತ್ವಾ ಧ್ರುವಂ ವೀರಂ ಪ್ರಜಾಯತೇ||

ಗರ್ಭಿಣಿಯರು ಇದನ್ನು ಕೇಳಿದರೆ ವೀರ ಗಂಡುಮಕ್ಕಳನ್ನು ಪಡೆಯುತ್ತಾರೆ. ಸಾಮಾನ್ಯರು ಕೇಳಿದರೂ ವೀರರಾಗುತ್ತಾರೆ ಎನ್ನುವುದು ನಿಶ್ಚಯ.

05134019a ವಿದ್ಯಾಶೂರಂ ತಪಃಶೂರಂ ದಮಶೂರಂ ತಪಸ್ವಿನಂ|

05134019c ಬ್ರಾಹ್ಮ್ಯಾ ಶ್ರಿಯಾ ದೀಪ್ಯಮಾನಂ ಸಾಧುವಾದೇನ ಸಮ್ಮತಂ||

05134020a ಅರ್ಚಿಷ್ಮಂತಂ ಬಲೋಪೇತಂ ಮಹಾಭಾಗಂ ಮಹಾರಥಂ|

05134020c ಧೃಷ್ಟವಂತಮನಾಧೃಷ್ಯಂ ಜೇತಾರಮಪರಾಜಿತಂ||

05134021a ನಿಯಂತಾರಮಸಾಧೂನಾಂ ಗೋಪ್ತಾರಂ ಧರ್ಮಚಾರಿಣಾಂ|

05134021c ತದರ್ಥಂ ಕ್ಷತ್ರಿಯಾ ಸೂತೇ ವೀರಂ ಸತ್ಯಪರಾಕ್ರಮಂ||

ಗರ್ಭಿಣಿ ಕ್ಷತ್ರಿಣಿಯು ಇದನ್ನು ಕೇಳಿದರೆ ವಿದ್ಯಾಶೂರ, ತಪಃಶೂರ, ದಮಶೂರ, ತಪಸ್ವಿನಿ, ಬ್ರಾಹ್ಮ್ಯದ ಶ್ರೀಯಿಂದ ಬೆಳಗುವ, ಸಾಧುವಾದದಿಂದ ಸಮ್ಮತನಾಗಿರುವ, ಪ್ರಕಾಶಮಾನನಾದ, ಬಲೋಪೇತನಾದ, ಮಹಾಭಾಗ, ಮಹಾರಥ, ಧೃಷ್ಟವಂತ, ಅನಾಧೃಷ್ಠ, ಜೇತಾರ, ಅಪರಾಜಿತ, ದುಷ್ಟರ ನಿಯಂತಾರ, ಧರ್ಮಚಾರಿಗಳ ಗೋಪ್ತಾರ, ವೀರ, ಸತ್ಯಪರಾಕ್ರಮಿಗೆ ಜನ್ಮ ನೀಡುತ್ತಾಳೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನಸಮಾಪ್ತೌ ಚತುಸ್ತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನಸಮಾಪ್ತಿಯಲ್ಲಿ ನೂರಾಮೂವತ್ನಾಲ್ಕನೆಯ ಅಧ್ಯಾಯವು.

Image result for flowers against white background"

Comments are closed.