Shanti Parva: Chapter 84

ಶಾಂತಿ ಪರ್ವ: ರಾಜಧರ್ಮ ಪರ್ವ

೮೪

ಸಭಾಸದರೇ ಮೊದಲಾದವರ ಲಕ್ಷಣ; ಗುಪ್ತಸಮಾಲೋಚನೆಗೆ ಅರ್ಹ ಮತ್ತು ಅನರ್ಹ ಅಧಿಕಾರಿಗಳ ವರ್ಣನೆ; ಗುಪ್ರಸಮಾಲೋಚನೆಯ ವಿಧಿ ಮತ್ತು ಸ್ಥಾನ (೧-೫೭).

[1]12084001 ಭೀಷ್ಮ ಉವಾಚ|

12084001a ಹ್ರೀನಿಷೇಧಾಃ ಸದಾ ಸಂತಃ ಸತ್ಯಾರ್ಜವಸಮನ್ವಿತಾಃ|

12084001c ಶಕ್ತಾಃ ಕಥಯಿತುಂ ಸಮ್ಯಕ್ತೇ ತವ ಸ್ಯುಃ ಸಭಾಸದಃ||

ಭೀಷ್ಮನು ಹೇಳಿದನು: “ಲಜ್ಜಾಶೀಲರೂ, ಜಿತೇಂದ್ರಿಯರೂ, ಸತ್ಯನಿಷ್ಟರೂ, ಸರಳ ಸ್ವಭಾವದವರೂ, ವಿಷಯಗಳನ್ನು ಚೆನ್ನಾಗಿ ಪ್ರತಿಪಾದಿಸಿ ಹೇಳಲು ಸಮರ್ಥರೂ ಆದವರೇ ನಿನ್ನ ಸಭಾಸದರಾಗಿರಬೇಕು.

12084002a ಅತ್ಯಾಢ್ಯಾಂಶ್ಚಾತಿಶೂರಾಂಶ್ಚ ಬ್ರಾಹ್ಮಣಾಂಶ್ಚ ಬಹುಶ್ರುತಾನ್|

12084002c ಸುಸಂತುಷ್ಟಾಂಶ್ಚ ಕೌಂತೇಯ ಮಹೋತ್ಸಾಹಾಂಶ್ಚ ಕರ್ಮಸು||

12084003a ಏತಾನ್ಸಹಾಯಾಽಲ್ಲಿಪ್ಸೇಥಾಃ ಸರ್ವಾಸ್ವಾಪತ್ಸು ಭಾರತ|

ಕೌಂತೇಯ! ಭಾರತ! ಅಮಾತ್ಯರು, ಮಹಾಶೂರರು, ಬಹುಶ್ರುತ ಬ್ರಾಹ್ಮಣರು, ನಿತ್ಯಸಂತುಷ್ಟರು, ಮತ್ತು ಕಾರ್ಯಗಳಲ್ಲಿ ಮಹೋತ್ಸಾಹವಿರುವವರು – ಇವರನ್ನು ಎಲ್ಲ ಆಪತ್ತುಗಳಲ್ಲಿ ಸಹಾಯಕರನ್ನಾಗಿ ಅಪೇಕ್ಷಿಸಬೇಕು.

12084003c ಕುಲೀನಃ ಪೂಜಿತೋ ನಿತ್ಯಂ ನ ಹಿ ಶಕ್ತಿಂ ನಿಗೂಹತಿ||

12084004a ಪ್ರಸನ್ನಂ ಹ್ಯಪ್ರಸನ್ನಂ ವಾ ಪೀಡಿತಂ ಹೃತಮೇವ ವಾ|

12084004c ಆವರ್ತಯತಿ ಭೂಯಿಷ್ಠಂ ತದೇಕೋ ಹ್ಯನುಪಾಲಿತಃ||

ನಿತ್ಯವೂ ಪೂಜಿತನಾದ ಕುಲೀನನು ತನ್ನ ಶಕ್ತಿಯನ್ನು ಮರೆಮಾಚುವುದಿಲ್ಲ. ರಾಜನು ಪ್ರಸನ್ನನಾಗಿರಲಿ, ಅಪ್ರಸನ್ನನಾಗಿರಲಿ, ಪೀಡಿತನಾಗಿರಲಿ ಅಥವಾ ಆಹತನೇ ಆಗಿರಲಿ – ಅವನು ರಾಜನ ಅನುಸರಣೆಯನ್ನೇ ಮಾಡುತ್ತಿರುತ್ತಾನೆ. ಅಂಥವನೇ ಸುಹೃದನಾಗಲು ಯೋಗ್ಯನು.

12084005a ಕುಲೀನಾ ದೇಶಜಾಃ ಪ್ರಾಜ್ಞಾ ರೂಪವಂತೋ ಬಹುಶ್ರುತಾಃ|

12084005c ಪ್ರಗಲ್ಭಾಶ್ಚಾನುರಕ್ತಾಶ್ಚ ತೇ ತವ ಸ್ಯುಃ ಪರಿಚ್ಚದಾಃ||

ನಿನ್ನ ಪರಿಚ್ಚದರು (ಸೇನಾಪತಿಯ ಮೊದಲಾದವರು) ಸತ್ಕುಲ ಪ್ರಸೂತರಾಗಿರಬೇಕು. ನಿನ್ನ ದೇಶದಲ್ಲಿಯೇ ಹುಟ್ಟಿದವರಾಗಿರಬೇಕು. ಪ್ರಾಜ್ಞರೂ, ರೂಪವಂತರೂ, ಬಹುಶ್ರುತರೂ ಆಗಿರಬೇಕು. ಪ್ರತಿಭಾನ್ವಿತರಾಗಿರಬೇಕು ಮತ್ತು ನಿನ್ನಲ್ಲಿ ಅನುರಕ್ತರಾಗಿರಬೇಕು.

12084006a ದೌಷ್ಕುಲೇಯಾಶ್ಚ ಲುಬ್ಧಾಶ್ಚ ನೃಶಂಸಾ ನಿರಪತ್ರಪಾಃ|

12084006c ತೇ ತ್ವಾಂ ತಾತ ನಿಷೇವೇಯುರ್ಯಾವದಾರ್ದ್ರಕಪಾಣಯಃ||

ಮಗೂ! ದುಷ್ಟ ಕುಲದಲ್ಲಿ ಹುಟ್ಟಿದವರು, ಲುಬ್ಧರು, ಕ್ರೂರರು ಮತ್ತು ನಾಚಿಕೆಯಿಲ್ಲದವರು ಊಟಮಾಡಿ ಕೈತೊಳೆದನಂತರ ಕೈ ಒದ್ದೆಯಾಗಿರುವವರೆಗೆ ಮಾತ್ರ ನಿನ್ನ ಸೇವೆಮಾಡುತ್ತಾರೆ.

12084007a ಅರ್ಥಮಾನಾರ್ಘ್ಯಸತ್ಕಾರೈರ್ಭೋಗೈರುಚ್ಚಾವಚೈಃ ಪ್ರಿಯಾನ್|

12084007c ಯಾನರ್ಥಭಾಜೋ ಮನ್ಯೇಥಾಸ್ತೇ ತೇ ಸ್ಯುಃ ಸುಖಭಾಗಿನಃ||

ನಿನ್ನ ಪ್ರಿಯರೆಂದು ಯಾರನ್ನು ನೀನು ತಿಳಿದುಕೊಂಡಿರುವೆಯೋ ಅವರನ್ನು ಸನ್ಮಾನ-ಅರ್ಘ್ಯ-ಸತ್ಕಾರಗಳಿಂದಲೂ ನಾನಾವಿಧದ ಭೋಗಗಳಿಂದಲೂ ಸಂತುಷ್ಟಿಗೊಳಿಸಬೇಕು. ನಿನ್ನ ಪ್ರಿಯ ಜನರು ಧನ-ಸುಖಗಳಲ್ಲಿ ನಿನ್ನ ಸಹಭಾಗಿಗಳಾಗಿರಬೇಕು.

12084008a ಅಭಿನ್ನವೃತ್ತಾ ವಿದ್ವಾಂಸಃ ಸದ್ವೃತ್ತಾಶ್ಚರಿತವ್ರತಾಃ|

12084008c ನ ತ್ವಾಂ ನಿತ್ಯಾರ್ಥಿನೋ ಜಹ್ಯುರಕ್ಷುದ್ರಾಃ ಸತ್ಯವಾದಿನಃ||

ಒಂದೇ ತರನೆ ನಡೆದುಕೊಳ್ಳುವ, ವಿದ್ವಾಂಸ, ಉತ್ತಮ ನಡೆತೆಯುಳ್ಳ, ವ್ರತಾನುಷ್ಠಾನಗಳನ್ನು ಮಾಡುವ ಸತ್ಯವಾದೀ ಅಕ್ಷುದ್ರರು ನಿತ್ಯವೂ ನಿನ್ನನ್ನು ಯಾವ ಕಾರಣಕ್ಕೂ ಬಿಟ್ಟುಹೋಗುವುದಿಲ್ಲ.

12084009a ಅನಾರ್ಯಾ ಯೇ ನ ಜಾನಂತಿ ಸಮಯಂ ಮಂದಚೇತಸಃ|

12084009c ತೇಭ್ಯಃ ಪ್ರತಿಜುಗುಪ್ಸೇಥಾ ಜಾನೀಯಾಃ ಸಮಯಚ್ಯುತಾನ್||

ಅನಾರ್ಯರೂ, ಪ್ರತಿಜ್ಞಾಪಾಲನೆಯನ್ನು ತಿಳಿಯದ ಮಂದಚೇತಸರು, ಪ್ರತಿಜ್ಞಾಪಾಲನೆಯನ್ನು ಉಲ್ಲಂಘಿಸುವವರು - ಇವರಿಂದ ನೀನು ನಿನ್ನನ್ನು ರಕ್ಷಿಸಿಕೊಳ್ಳಬೇಕು.

12084010a ನೈಕಮಿಚ್ಚೇದ್ಗಣಂ ಹಿತ್ವಾ ಸ್ಯಾಚ್ಚೇದನ್ಯತರಗ್ರಹಃ|

12084010c ಯಸ್ತ್ವೇಕೋ ಬಹುಭಿಃ ಶ್ರೇಯಾನ್ಕಾಮಂ ತೇನ ಗಣಂ ತ್ಯಜೇತ್||

ಒಬ್ಬನೇ ಇರುವ ಪಕ್ಷವನ್ನು ಬಿಟ್ಟು ಬಹುಜನರಿರುವ ಪಕ್ಷವನ್ನು ಆರಿಸಿಕೊಳ್ಳಬೇಕು. ಆದರೆ ಅವನೊಬ್ಬನೇ ಅನೇಕರಿಗಿಂತ ಉತ್ತಮನಾಗಿದ್ದರೆ ಅವನ ಪಕ್ಷವನ್ನು ಆರಿಸಿ ಬಹುಜನರ ಪಕ್ಷವನ್ನು ತ್ಯಜಿಸಬೇಕು.

12084011a ಶ್ರೇಯಸೋ ಲಕ್ಷಣಂ ಹ್ಯೇತದ್ವಿಕ್ರಮೋ ಯಸ್ಯ ದೃಶ್ಯತೇ|

12084011c ಕೀರ್ತಿಪ್ರಧಾನೋ ಯಶ್ಚ ಸ್ಯಾತ್ಸಮಯೇ ಯಶ್ಚ ತಿಷ್ಠತಿ||

12084012a ಸಮರ್ಥಾನ್ಪೂಜಯೇದ್ಯಶ್ಚ ನಾಸ್ಪರ್ಧ್ಯೈಃ ಸ್ಪರ್ಧತೇ ಚ ಯಃ|

12084012c ನ ಚ ಕಾಮಾದ್ಭಯಾತ್ಕ್ರೋಧಾಲ್ಲೋಭಾದ್ವಾ ಧರ್ಮಮುತ್ಸೃಜೇತ್||

12084013a ಅಮಾನೀ ಸತ್ಯವಾಕ್ ಶಕ್ತೋ ಜಿತಾತ್ಮಾ ಮಾನ್ಯಮಾನಿತಾ|

12084013c ಸ ತೇ ಮಂತ್ರಸಹಾಯಃ ಸ್ಯಾತ್ಸರ್ವಾವಸ್ಥಂ ಪರೀಕ್ಷಿತಃ||

ಯಾರ ಪರಾಕ್ರಮವು ಪ್ರತ್ಯಕ್ಷಪ್ರಮಾಣದಿಂದ ಸಿದ್ಧವಾಗಿದೆಯೋ, ಯಾರಿಗೆ ಕೀರ್ತಿಯೇ ಪ್ರಧಾನವಾಗಿರುವುದೋ, ಯಾರು ಪ್ರತಿಜ್ಞೆಯನ್ನು ಪರಿಪಾಲಿಸುವನೋ, ಯಾರು ಸಮರ್ಥರನ್ನು ಗೌರವಿಸುವನೋ, ತನಗೆ ಸಮಾನರಲ್ಲದವರೊಡನೆ ಯಾರು ಸ್ಪರ್ಧಿಸುವುದಿಲ್ಲವೋ, ಕಾಮ-ಭಯ-ಕ್ರೋಧ-ಲೋಭಗಳಿಂದ ಯಾರು ಧರ್ಮವನ್ನು ತ್ಯಜಿಸುವುದಿಲ್ಲವೋ, ಯಾರಲ್ಲಿ ದುರಭಿಮಾನವಿಲ್ಲವೋ ಅಂಥಹ ಸತ್ಯನಿಷ್ಠ, ಕ್ಷಮಾವಂತ, ಜಿತೇಂದ್ರಿಯ ಮತ್ತು ಮಾನಿಷ್ಠನು ಸರ್ವಾವಸ್ಥೆಗಳಲ್ಲಿ ಪರೀಕ್ಷೆಗೊಳಗಾದ ನಂತರ ರಾಜನೊಂದಿಗೆ ಮಂತ್ರಾಲೋಚನೆಗೆ ಅರ್ಹನಾಗುತ್ತಾನೆ.

12084014a ಕುಲೀನಃ ಸತ್ಯಸಂಪನ್ನಸ್ತಿತಿಕ್ಷುರ್ದಕ್ಷ ಆತ್ಮವಾನ್|

12084014c ಶೂರಃ ಕೃತಜ್ಞಃ ಸತ್ಯಶ್ಚ ಶ್ರೇಯಸಃ ಪಾರ್ಥ ಲಕ್ಷಣಮ್||

ಪಾರ್ಥ! ಕುಲೀನ, ಸತ್ಯಸಂಪನ್ನ, ಸಹನಶೀಲ, ದಕ್ಷ, ಜಿತೇಂದ್ರಿಯ, ಶೂರ, ಕೃತಜ್ಞ, ಸತ್ಯವಂತ ಇವು ಶ್ರೇಷ್ಠ ಪುರುಷನ ಲಕ್ಷಣವು.

12084015a ತಸ್ಯೈವಂ ವರ್ತಮಾನಸ್ಯ ಪುರುಷಸ್ಯ ವಿಜಾನತಃ|

12084015c ಅಮಿತ್ರಾಃ ಸಂಪ್ರಸೀದಂತಿ ತತೋ ಮಿತ್ರೀಭವಂತ್ಯಪಿ||

ಇಂತಹ ಸದ್ಗುಣಸಂಪನ್ನ ವಿದ್ವಾಂಸ ಪುರುಷನೊಂದಿಗೆ ಶತ್ರುಗಳೂ ಪ್ರಸನ್ನಾರಾಗಿ ಅವನೊಡನೆ ಮೈತ್ರಿಯನ್ನು ಬೆಳೆಸುತ್ತಾರೆ.

12084016a ಅತ ಊರ್ಧ್ವಮಮಾತ್ಯಾನಾಂ ಪರೀಕ್ಷೇತ ಗುಣಾಗುಣಾನ್|

12084016c ಸಂಯತಾತ್ಮಾ ಕೃತಪ್ರಜ್ಞೋ ಭೂತಿಕಾಮಶ್ಚ ಭೂಮಿಪಃ||

ಇದರ ನಂತರ ಸಂಯತಾತ್ಮ ಕೃತಪ್ರಜ್ಞ ಐಶ್ವರ್ಯಕಾಮೀ ಭೂಮಿಪನು ಅಮಾತ್ಯರ ಗುಣಾಗುಣಗಳನ್ನು ಪರೀಕ್ಷಿಸಬೇಕು.

12084017a ಸಂಬದ್ಧಾಃ ಪುರುಷೈರಾಪ್ತೈರಭಿಜಾತೈಃ ಸ್ವದೇಶಜೈಃ|

12084017c ಅಹಾರ್ಯೈರವ್ಯಭೀಚಾರೈಃ ಸರ್ವತಃ ಸುಪರೀಕ್ಷಿತೈಃ||

ಸಂಬಂಧಿಗಳೂ, ಆಪ್ತರೂ, ಸತ್ಕುಲಪ್ರಸೂತರೂ, ಸ್ವದೇಶದಲ್ಲಿ ಹುಟ್ಟಿದವರೂ ಮತ್ತು ಲಂಚತೆಗೆದುಕೊಳ್ಳುವವರೂ ವ್ಯಭಿಚಾರವಿಲ್ಲದವರೂ ಆದವರ ಮೂಲಕ ಮಂತ್ರಿಯಾಗುವವನನ್ನು ಸರ್ವತಃ ಚೆನ್ನಾಗಿ ಪರೀಕ್ಷಿಸಬೇಕು.

12084018a ಯೋಧಾಃ ಸ್ರೌವಾಸ್ತಥಾ ಮೌಲಾಸ್ತಥೈವಾನ್ಯೇಽಪ್ಯವಸ್ಕೃತಾಃ|

12084018c ಕರ್ತವ್ಯಾ ಭೂತಿಕಾಮೇನ ಪುರುಷೇಣ ಬುಭೂಷತಾ||

ಯೋಧರೂ, ವೇದಗಳನ್ನು ಪಾಲಿಸುವವರೂ, ಉತ್ತಮ ಪರಂಪರೆಯುಳ್ಳವರೂ, ಅಹಂಕಾರ ರಹಿತರೂ ಆಗಿರುವವರನ್ನು ಐಶ್ವರ್ಯಕಾಮೀ ರಾಜನು ಮಂತ್ರಿಗಳನ್ನಾಗಿ ಮಾಡಿಕೊಳ್ಳಬೇಕು.

12084019a ಯೇಷಾಂ ವೈನಯಿಕೀ ಬುದ್ಧಿಃ ಪ್ರಕೃತಾ ಚೈವ ಶೋಭನಾ|

12084019c ತೇಜೋ ಧೈರ್ಯಂ ಕ್ಷಮಾ ಶೌಚಮನುರಾಗ ಸ್ಥಿತಿರ್ಧೃತಿಃ||

12084020a ಪರೀಕ್ಷಿತಗುಣಾನ್ನಿತ್ಯಂ ಪ್ರೌಢಭಾವಾನ್ಧುರಂಧರಾನ್|

12084020c ಪಂಚೋಪಧಾವ್ಯತೀತಾಂಶ್ಚ ಕುರ್ಯಾದ್ರಾಜಾರ್ಥಕಾರಿಣಃ||

ನಿತ್ಯ ಪರೀಕ್ಷೆಗಳಿಂದ ಸ್ಥಿರಪಡಿಸಿಕೊಂಡು ರಾಜನ ಕಾರ್ಯನಿರ್ವಹಣೆಯಲ್ಲಿ ಪ್ರೌಢರಾಗಿರುವ, ರಾಜ್ಯಭಾರವನ್ನು ಹೊರಲು ಸಮರ್ಥರಾಗಿರುವ, ಮತ್ತು ನಿಷ್ಕಪಟಿಗಳಾದ, ವಿನಯಬುದ್ಧಿಯಿರುವ, ಸರಳಸ್ವಭಾವವಿರುವ, ತೇಜಸ್ಸು-ಧೈರ್ಯ-ಕ್ಷಮೆ-ಪವಿತ್ರತೆ-ಪ್ರೇಮ-ಸ್ಥಿರಬುದ್ಧಿಗಳಿರುವವನನ್ನು ರಾಜನು ಅರ್ಥಸಚಿವನನ್ನಾಗಿ ನಿಯಮಿಸಿಕೊಳ್ಳಬೇಕು.

12084021a ಪರ್ಯಾಪ್ತವಚನಾನ್ವೀರಾನ್ಪ್ರತಿಪತ್ತಿವಿಶಾರದಾನ್|

12084021c ಕುಲೀನಾನ್ಸತ್ಯಸಂಪನ್ನಾನಿಂಗಿತಜ್ಞಾನನಿಷ್ಠುರಾನ್||

12084022a ದೇಶಕಾಲವಿಧಾನಜ್ಞಾನ್ಭರ್ತೃಕಾರ್ಯಹಿತೈಷಿಣಃ|

12084022c ನಿತ್ಯಮರ್ಥೇಷು ಸರ್ವೇಷು ರಾಜಾ ಕುರ್ವೀತ ಮಂತ್ರಿಣಃ||

ಮಾತಿನಲ್ಲಿ ಕುಶಲರಾಗಿರುವ, ವೀರ, ಕಾರ್ಯನಿರ್ವಹಣಾವಿಶಾರದರಾಗಿರುವ, ಕುಲೀನ, ಸತ್ಯಸಂಪನ್ನ, ಇಂಗಿತಜ್ಞ, ದಯಾಳು, ದೇಶ-ಕಾಲವಿಧಾನಗಳನ್ನು ತಿಳಿದಿರುವ, ಒಡೆಯನ ಹಿತೈಷಿಗಳೂ ಕಾರ್ಯಕರ್ತರೂ ಆಗಿರುವವರನ್ನು ಸರ್ವಾರ್ಥಸಿದ್ಧಿಗಾಗಿ ಮಂತ್ರಿಗಳನ್ನಾಗಿ ನಿಯೋಜಿಸಿಕೊಳ್ಳಬೇಕು.

12084023a ಹೀನತೇಜಾ ಹ್ಯಸಂಹೃಷ್ಟೋ ನೈವ ಜಾತು ವ್ಯವಸ್ಯತಿ|

12084023c ಅವಶ್ಯಂ ಜನಯತ್ಯೇವ ಸರ್ವಕರ್ಮಸು ಸಂಶಯಾನ್||

ತೇಜೋಹೀನ ಮಂತ್ರಿಯ ಸಹವಾಸದಿಂದ ರಾಜನು ಸಂತೋಷದಿಂದಿರುವುದಿಲ್ಲ. ಅಂಥಹ ಮಂತ್ರಿಯು ಅವಶ್ಯವಾಗಿಯೂ ಸರ್ವಕರ್ಮಗಳಲ್ಲಿ ಸಂಶಯವನ್ನೇ ಉಂಟುಮಾಡುತ್ತಾನೆ.

12084024a ಏವಮಲ್ಪಶ್ರುತೋ ಮಂತ್ರೀ ಕಲ್ಯಾಣಾಭಿಜನೋಽಪ್ಯುತ|

12084024c ಧರ್ಮಾರ್ಥಕಾಮಯುಕ್ತೋಽಪಿ ನಾಲಂ ಮಂತ್ರಂ ಪರೀಕ್ಷಿತುಮ್||

ಹೀಗೆ ಅಲ್ಪಶ್ರುತ ಮಂತ್ರಿಯು ಸತ್ಕುಲಪ್ರಸೂತನಾಗಿದ್ದರೂ, ಧರ್ಮಾರ್ಥಕಾಮಗಳನ್ನು ತಿಳಿದವನಾಗಿದ್ದರೂ ರಹಸ್ಯವಿಷಯಗಳನ್ನು ಪರಿಶೀಲಿಸಲು ಸಮರ್ಥನಾಗುವುದಿಲ್ಲ.

12084025a ತಥೈವಾನಭಿಜಾತೋಽಪಿ ಕಾಮಮಸ್ತು ಬಹುಶ್ರುತಃ|

12084025c ಅನಾಯಕ ಇವಾಚಕ್ಷುರ್ಮುಹ್ಯತ್ಯೂಹ್ಯೇಷು ಕರ್ಮಸು||

ಹಾಗೆಯೇ ಸತ್ಕುಲಪ್ರಸೂತನಾಗಿರದಿದ್ದರೂ ಬಹುಶ್ರುತನು ಮಂತ್ರಿಯಾಗಬಲ್ಲನೇ? ಇಲ್ಲ. ಏಕೆಂದರೆ ಕೈಹಿಡಿದು ನಡೆಸುವವರಿಲ್ಲದೆ ಕುರುಡುನಂತೆ ಅವನು ಸಣ್ಣಪುಟ್ಟ ಕಾರ್ಯಗಳಲ್ಲಿಯೂ ಮೋಹಗೊಂಡು ಭ್ರಾಂತನಾಗುತ್ತಾನೆ.

12084026a ಯೋ ವಾ ಹ್ಯಸ್ಥಿರಸಂಕಲ್ಪೋ ಬುದ್ಧಿಮಾನಾಗತಾಗಮಃ|

12084026c ಉಪಾಯಜ್ಞೋಽಪಿ ನಾಲಂ ಸ ಕರ್ಮ ಯಾಪಯಿತುಂ ಚಿರಮ್||

ಸ್ಥಿರಸಂಕಲ್ಪವಿಲ್ಲದಿರುವುದೂ ಮಂತ್ರಿಯಾದವನಿಗೆ ಮಹಾದೋಷವೇ ಸರಿ. ಅಸ್ಥಿರಸಂಕಲ್ಪನು ಉಪಾಯಜ್ಞನೂ ಬುದ್ಧಿವಂತನೂ ಶಾಸ್ತ್ರಜ್ಞನೇ ಆಗಿರಲಿ ಅವನು ಯಾವುದೇ ಕೆಲಸವನ್ನು ಮಾಡಿಮುಗಿಸಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾನೆ.

12084027a ಕೇವಲಾತ್ಪುನರಾಚಾರಾತ್ಕರ್ಮಣೋ ನೋಪಪದ್ಯತೇ|

12084027c ಪರಿಮರ್ಶೋ ವಿಶೇಷಾಣಾಮಶ್ರುತಸ್ಯೇಹ ದುರ್ಮತೇಃ||

ದುರ್ಮತಿಯೂ ಅಶ್ರುತನೂ ಆಗಿರುವವನು ವಿಶೇಷಕಾರ್ಯಗಳ ನಿರ್ವಹಣೆಯಲ್ಲಿ ಮಾಡುವ ಪರಾಮರ್ಶೆಯು ಯುಕ್ತಿಸಂಗತವಾಗಿರುವುದಿಲ್ಲ.

12084028a ಮಂತ್ರಿಣ್ಯನನುರಕ್ತೇ ತು ವಿಶ್ವಾಸೋ ನ ಹಿ ವಿದ್ಯತೇ|

12084028c ತಸ್ಮಾದನನುರಕ್ತಾಯ ನೈವ ಮಂತ್ರಂ ಪ್ರಕಾಶಯೇತ್||

ರಾಜನಲ್ಲಿ ಅನುರಕ್ತನಾಗಿರದ ಮಂತ್ರಿಯು ವಿಶ್ವಸನೀಯನಾಗಿರುವುದಿಲ್ಲ. ಆದುದರಿಂದ ಅನುರಕ್ತನಾಗಿಲ್ಲದಿರುವವನಲ್ಲಿ ರಹಸ್ಯಗಳನ್ನು ಹೊರಗೆಡಹಬಾರದು.

12084029a ವ್ಯಥಯೇದ್ಧಿ ಸ ರಾಜಾನಂ ಮಂತ್ರಿಭಿಃ ಸಹಿತೋಽನೃಜುಃ|

12084029c ಮಾರುತೋಪಹತಚ್ಚಿದ್ರೈಃ ಪ್ರವಿಶ್ಯಾಗ್ನಿರಿವ ದ್ರುಮಮ್||

ಕಪಟ ಮಂತ್ರಿಯು ರಾಜರಹಸ್ಯವನ್ನು ತಿಳಿದುಕೊಂಡರೆ ಇತರ ಮಂತ್ರಿಗಳೊಡನೆ ಕೂಡಿಕೊಂಡು ಮರದ ಪೊಟರೆಯಲ್ಲಿದ್ದ ಅಗ್ನಿಯು ಗಾಳಿಯ ಸಹಾಯದಿಂದ ಆ ಮರವನ್ನೇ ಸುಟ್ಟುಬಿಡುವಂತೆ ರಾಜನನ್ನು ಬಹಳವಾಗಿ ಪೀಡಿಸುತ್ತಾನೆ.

12084030a ಸಂಕ್ರುಧ್ಯತ್ಯೇಕದಾ ಸ್ವಾಮೀ ಸ್ಥಾನಾಚ್ಚೈವಾಪಕರ್ಷತಿ|

12084030c ವಾಚಾ ಕ್ಷಿಪತಿ ಸಂರಬ್ಧಸ್ತತಃ ಪಶ್ಚಾತ್ಪ್ರಸೀದತಿ||

ಒಮ್ಮೆ ರಾಜನು ಕ್ರುದ್ಧನಾಗಿ ಮಂತ್ರಿಯನ್ನು ಅವನ ಸ್ಥಾನದಿಂದ ತೆಗೆದುಹಾಕಬಹುದು. ರೋಷಪೂರಿತನಾಗಿ ನಿಂದಿಸಬಹುದು. ಕಡೆಯಲ್ಲಿ ಪ್ರಸನ್ನನೂ ಆಗಬಹುದು.

12084031a ತಾನಿ ತಾನ್ಯನುರಕ್ತೇನ ಶಕ್ಯಾನ್ಯನುತಿತಿಕ್ಷಿತುಮ್|

12084031c ಮಂತ್ರಿಣಾಂ ಚ ಭವೇತ್ಕ್ರೋಧೋ ವಿಸ್ಫೂರ್ಜಿತಮಿವಾಶನೇಃ||

ರಾಜನ ಅಂತಹ ಸ್ವಭಾವವನ್ನು ಅವನಲ್ಲಿ ಅನುರಕ್ತನಾಗಿರುವ ಮಂತ್ರಿಯೇ ಸಹಿಸಿಕೊಳ್ಳಬಲ್ಲನು. ಅನುರಾಗವಿಲ್ಲದ ಮಂತ್ರಿಯ ಕೋಪವು ಅಂಥಹ ಸಂದರ್ಭಗಳಲ್ಲಿ ಸಿಡಿಲಿಗೆ ಸಮಾನವಾಗಿ ಭಯಂಕರವಾಗಿರುತ್ತದೆ.

12084032a ಯಸ್ತು ಸಂಹರತೇ[2] ತಾನಿ ಭರ್ತುಃ ಪ್ರಿಯಚಿಕೀರ್ಷಯಾ|

12084032c ಸಮಾನಸುಖದುಃಖಂ ತಂ ಪೃಚ್ಚೇದರ್ಥೇಷು ಮಾನವಮ್||

ಒಡೆಯನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ರಾಜನ ಕ್ಷಣರುಷ್ಟ-ಕ್ಷಣತುಷ್ಟ ಸ್ವಭಾವವನ್ನು ಸಹಿಸಿಕೊಳ್ಳುವವನು ರಾಜನಲ್ಲಿ ಅನುರಕ್ತನಾಗಿರುವವನೆಂದು ತಿಳಿದುಕೊಳ್ಳಬೇಕು. ರಾಜನ ಸುಖ-ದುಃಕಗಳನ್ನು ತನ್ನ ಸುಖ-ದುಃಖಗಳಿಗೆ ಸಮಾನವೆಂದು ಭಾವಿಸುವ ಮನುಷ್ಯನೊಡನೆ ಎಲ್ಲ ವಿಷಯಗಳಲ್ಲಿಯೂ ಸಮಾಲೋಚನೆ ಮಾಡಬೇಕು.

12084033a ಅನೃಜುಸ್ತ್ವನುರಕ್ತೋಽಪಿ ಸಂಪನ್ನಶ್ಚೇತರೈರ್ಗುಣೈಃ|

12084033c ರಾಜ್ಞಃ ಪ್ರಜ್ಞಾನಯುಕ್ತೋಽಪಿ ನ ಮಂತ್ರಂ ಶ್ರೋತುಮರ್ಹತಿ||

ರಾಜನಲ್ಲಿ ಅನುರಕ್ತನಾಗಿದ್ದರೂ, ಇತರ ಗುಣಗಳಿಂದ ಸಂಪನ್ನನಾಗಿದ್ದರೂ, ಪ್ರಜ್ಞಾನಯುಕ್ತನಾಗಿದ್ದರೂ ಮಂತ್ರಿಯು ಕಪಟಿಯಾಗಿದ್ದರೆ ಅವನು ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

12084034a ಯೋಽಮಿತ್ರೈಃ ಸಹ ಸಂಬದ್ಧೋ ನ ಪೌರಾನ್ಬಹು ಮನ್ಯತೇ|

12084034c ಸ ಸುಹೃತ್ತಾದೃಶೋ ರಾಜ್ಞೋ ನ ಮಂತ್ರಂ ಶ್ರೋತುಮರ್ಹತಿ||

ಯಾರಿಗೆ ಶತ್ರುಗಳೊಡನೆ ಸಂಬಂಧವಿರುವುದೋ, ಪ್ರಜೆಗಳ ಯೋಗ-ಕ್ಷೇಮಗಳು ಮುಖ್ಯವೆಂದು ಭಾವಿಸುವುದಿಲ್ಲವೊ ಅಂಥವರು ರಾಜರಹಸ್ಯಗಳನ್ನು ಕೇಳಲು ಅನರ್ಹರಾಗುತ್ತಾರೆ.

12084035a ಅವಿದ್ವಾನಶುಚಿಃ ಸ್ತಬ್ಧಃ ಶತ್ರುಸೇವೀ ವಿಕತ್ಥನಃ|

12084035c ಸ ಸುಹೃತ್ಕ್ರೋಧನೋ ಲುಬ್ಧೋ ನ ಮಂತ್ರಂ ಶ್ರೋತುಮರ್ಹತಿ||

ವಿದ್ವಾಂಸನಲ್ಲದ, ಅಶುಚಿ, ಸ್ತಬ್ಧ, ಶತ್ರುಸೇವೀ, ಆತ್ಮಶ್ಲಾಘೀ, ಕ್ರೋಧನ ಮತ್ತು ಲುಬ್ಧನು ರಾಜರಹಸ್ಯಗಳನ್ನು ಕೇಳಲು ಅನರ್ಹರಾಗುತ್ತಾರೆ.

12084036a ಆಗಂತುಶ್ಚಾನುರಕ್ತೋಽಪಿ ಕಾಮಮಸ್ತು ಬಹುಶ್ರುತಃ|

12084036c ಸತ್ಕೃತಃ ಸಂವಿಭಕ್ತೋ ವಾ ನ ಮಂತ್ರಂ ಶ್ರೋತುಮರ್ಹತಿ||

ರಾಜನಲ್ಲಿ ಅನುರಕ್ತನಾಗಿದ್ದರೂ, ಬಹುಶ್ರುತನಾಗಿದ್ದರೂ, ಸತ್ಕೃತನೂ ಸಂವಿಭಕ್ತನೂ ಆಗಿದ್ದರೂ ಹೊರದೇಶದಿಂದ ಬಂದವನಾಗಿದ್ದರೆ ಅವನು ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

[3]12084037a ಯಸ್ತ್ವಲ್ಪೇನಾಪಿ ಕಾರ್ಯೇಣ ಸಕೃದಾಕ್ಷಾರಿತೋ ಭವೇತ್|

12084037c ಪುನರನ್ಯೈರ್ಗುಣೈರ್ಯುಕ್ತೋ ನ ಮಂತ್ರಂ ಶ್ರೋತುಮರ್ಹತಿ||

ಅತ್ಯಲ್ಪ ಅನುಚಿತ ಕಾರ್ಯಕ್ಕಾಗಿಯಾದರೂ ದಂಡನೆಗೀಡಾಗಿ ನಿರ್ಧನನಾದವನು ಮಿತ್ರನೇ ಆಗಿದ್ದರೂ ಮತ್ತು ಸಕಲಗುಣಸಂಪನ್ನನೇ ಆಗಿದ್ದರೂ ರಾಜರಹಸ್ಯಗಳನ್ನು ಕೇಳಲು ಅನರ್ಹನಾಗುತ್ತಾನೆ.

12084038a ಕೃತಪ್ರಜ್ಞಶ್ಚ ಮೇಧಾವೀ ಬುಧೋ ಜಾನಪದಃ ಶುಚಿಃ|

12084038c ಸರ್ವಕರ್ಮಸು ಯಃ ಶುದ್ಧಃ ಸ ಮಂತ್ರಂ ಶ್ರೋತುಮರ್ಹತಿ||

ಕೃತಪ್ರಜ್ಞನೂ, ಮೇಧಾವಿಯೂ, ಬುದ್ಧಿವಂತನೋ, ಸ್ವದೇಶದವನೋ, ಶುಚಿಯೋ, ಸರ್ವಕರ್ಮಗಳಲ್ಲಿ ಶುದ್ಧನೋ ಅವನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084039a ಜ್ಞಾನವಿಜ್ಞಾನಸಂಪನ್ನಃ ಪ್ರಕೃತಿಜ್ಞಃ ಪರಾತ್ಮನೋಃ|

12084039c ಸುಹೃದಾತ್ಮಸಮೋ ರಾಜ್ಞಃ ಸ ಮಂತ್ರಂ ಶ್ರೋತುಮರ್ಹತಿ||

ಜ್ಞಾನವಿಜ್ಞಾನಸಂಪನ್ನ, ತನ್ನ ಕಡೆಯ ಮತ್ತು ಶತ್ರುಗಳ ಕಡೆಯವರ ಸ್ವಭಾವವನ್ನು ತಿಳಿದಿರುವ, ರಾಜನ ಆತ್ಮಸಮ ಸುಹೃದನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084040a ಸತ್ಯವಾಕ್ ಶೀಲಸಂಪನ್ನೋ ಗಂಭೀರಃ ಸತ್ರಪೋ ಮೃದುಃ|

12084040c ಪಿತೃಪೈತಾಮಹೋ ಯಃ ಸ್ಯಾತ್ಸ ಮಂತ್ರಂ ಶ್ರೋತುಮರ್ಹತಿ||

ಸತ್ಯವಾಗ್ಮಿ, ಶೀಲಸಂಪನ್ನ, ಗಂಭಿರ, ಲಜ್ಜಾಶೀಲ, ಮೃದು, ಮತ್ತು ಯಾರ ತಂದೆ-ತಾತಂದಿರೂ ರಾಜಸೇವೆಯಲ್ಲಿ ನಿರತರಾಗಿದ್ದರೋ ಅವನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084041a ಸಂತುಷ್ಟಃ ಸಂಮತಃ ಸತ್ಯಃ ಶೌಟೀರೋ ದ್ವೇಷ್ಯಪಾಪಕಃ|

12084041c ಮಂತ್ರವಿತ್ಕಾಲವಿಚ್ಚೂರಃ ಸ ಮಂತ್ರಂ ಶ್ರೋತುಮರ್ಹತಿ||

ಸಂತುಷ್ಟನೂ, ಸಮ್ಮತನೂ, ಸತ್ಯನೂ, ಶೂರನೂ, ಪಾಪವನ್ನು ದ್ವೇಷಿಸುವವನೂ, ಮಂತ್ರಾಲೋಚನೆಮಾಡಲು ತಿಳಿದಿರುವ, ಕಾಲವನ್ನು ತಿಳಿದಿರುವ, ಶೂರನು ರಾಜರಹಸ್ಯಗಳನ್ನು ಕೇಳಲು ಅರ್ಹನಾಗುತ್ತಾನೆ.

12084042a ಸರ್ವಲೋಕಂ ಸಮಂ ಶಕ್ತಃ ಸಾಂತ್ವೇನ ಕುರುತೇ ವಶೇ|

12084042c ತಸ್ಮೈ ಮಂತ್ರಃ ಪ್ರಯೋಕ್ತವ್ಯೋ ದಂಡಮಾಧಿತ್ಸತಾ ನೃಪ||

ದಂಡಧಾರಿಯಾಗಿ ಪ್ರಜಾಪಾಲನೆಯಲ್ಲಿ ನಿರತನಾದ ನೃಪನು ಸರ್ವಲೋಕಗಳನ್ನೂ ಸಾಂತ್ವನದಿಂದಲೇ ವಶೀಕರಿಸಬಲ್ಲವನಲ್ಲಿ ಮಂತ್ರಾಲೋಚನೆ ಮಾಡಬೇಕು.

12084043a ಪೌರಜಾನಪದಾ ಯಸ್ಮಿನ್ವಿಶ್ವಾಸಂ ಧರ್ಮತೋ ಗತಾಃ|

12084043c ಯೋದ್ಧಾ ನಯವಿಪಶ್ಚಿಚ್ಚ ಸ ಮಂತ್ರಂ ಶ್ರೋತುಮರ್ಹತಿ||

ಪುರ-ಗ್ರಾಮೀಣಜನರು ಯಾರಲ್ಲಿ ಧರ್ಮತಃ ವಿಶ್ವಾಸವನ್ನಿಟ್ಟಿರುವರೋ, ಯಾರು ಯುದ್ಧದಲ್ಲಿ ಕುಶಲನಾಗಿರುವನೋ ಮತ್ತು ನೀತಿ ಶಾಸ್ತ್ರವನ್ನು ತಿಳಿದಿರುವನೋ ಅವನು ರಾಜರಹಸ್ಯವನ್ನು ಕೇಳಲು ಅರ್ಹನಾಗುತ್ತಾನೆ.

12084044a ತಸ್ಮಾತ್ಸರ್ವೈರ್ಗುಣೈರ್ಏತೈರುಪಪನ್ನಾಃ ಸುಪೂಜಿತಾಃ|

12084044c ಮಂತ್ರಿಣಃ ಪ್ರಕೃತಿಜ್ಞಾಃ ಸ್ಯುಸ್ತ್ರ್ಯವರಾ ಮಹದೀಪ್ಸವಃ||

ಆದುದರಿಂದ ಈ ಸರ್ವಗುಣಸಂಪನ್ನರಾದ ಸುಪೂಜಿತರಾದ, ಪ್ರಜೆಗಳ ಸ್ವಭಾವ-ಗುಣಗಳನ್ನು ತಿಳಿದುಕೊಂಡಿರುವ, ಮಹಾತ್ವಾಕಾಂಕ್ಷಿಗಳಾದ ಕನಿಷ್ಠ ಮೂರಾದರೂ ಮಂತ್ರಿಗಳನ್ನಾಗಿ ಮಾಡಿಕೊಂಡಿರಬೇಕು.

12084045a ಸ್ವಾಸು ಪ್ರಕೃತಿಷು ಚಿದ್ರಂ ಲಕ್ಷಯೇರನ್ಪರಸ್ಯ ಚ|

12084045c ಮಂತ್ರಿಣೋ ಮಂತ್ರಮೂಲಂ ಹಿ ರಾಜ್ಞೋ ರಾಷ್ಟ್ರಂ ವಿವರ್ಧತೇ||

ತಮ್ಮ ಮತ್ತು ಶತ್ರುಗಳ ಪ್ರಕೃತಿಗಳಲ್ಲಿ ದೋಷಗಳನ್ನು ಹುಡುಕುತ್ತಿರಬೇಕು. ಅಂಥಹ ಮಂತ್ರಿಗಳ ಸಲಹೆಗಳೇ ರಾಜನ ರಾಷ್ಟ್ರವನ್ನು ವರ್ಧಿಸುತ್ತದೆ.

12084046a ನಾಸ್ಯ ಚಿದ್ರಂ ಪರಃ ಪಶ್ಯೇಚ್ಚಿದ್ರೇಷು ಪರಮನ್ವಿಯಾತ್|

12084046c ಗೂಹೇತ್ಕೂರ್ಮ ಇವಾಂಗಾನಿ ರಕ್ಷೇದ್ವಿವರಮಾತ್ಮನಃ||

ತಮ್ಮಲ್ಲಿರುವ ದೋಷಗಳನ್ನು ಶತ್ರುಗಳಿಗೆ ಕಾಣದಂತೆ ಆಮೆಯು ತನ್ನ ಅವಯವಗಳನ್ನು ಒಳಕ್ಕೆ ಸೆಳೆದುಕೊಂಡು ಮುಚ್ಚಿಕೊಳ್ಳುವಂತೆ ಮುಚ್ಚಿಕೊಂಡಿರಬೇಕು.

12084047a ಮಂತ್ರಗ್ರಾಹಾ[4] ಹಿ ರಾಜ್ಯಸ್ಯ ಮಂತ್ರಿಣೋ ಯೇ ಮನೀಷಿಣಃ|

12084047c ಮಂತ್ರಸಂಹನನೋ ರಾಜಾ ಮಂತ್ರಾಂಗಾನೀತರೋ ಜನಃ||

ಬುದ್ಧಿವಂತ ಮಂತ್ರಿಗಳೇ ರಾಜನ ರಹಸ್ಯಗಳನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಮಂತ್ರಾಲೋಚನೆಯೇ ರಾಜನ ದೇಹ. ಇತರ ಜನರು ಅದರ ಅಂಗಗಳು.

12084048a ರಾಜ್ಯಂ ಪ್ರಣಿಧಿಮೂಲಂ ಹಿ ಮಂತ್ರಸಾರಂ ಪ್ರಚಕ್ಷತೇ|

12084048c ಸ್ವಾಮಿನಂ ತ್ವನುವರ್ತಂತಿ ವೃತ್ತ್ಯರ್ಥಮಿಹ ಮಂತ್ರಿಣಃ||

ಗುಪ್ತಚಾರರೇ ರಾಜ್ಯದ ಅಭಿವೃದ್ದಿಗೆ ಮೂಲಕಾರಣರೆಂದು ಹೇಳುತ್ತಾರೆ. ಮಂತ್ರಿಗಳಾದರೋ ತಮ್ಮ ಜೀವಿಕೆಗಾಗಿ ರಾಜನನ್ನೇ ಅವಲಂಬಿಸಿರುತ್ತಾರೆ.

12084049a ಸ ವಿನೀಯ ಮದಕ್ರೋಧೌ ಮಾನಮೀರ್ಷ್ಯಾಂ ಚ ನಿರ್ವೃತಃ|

12084049c ನಿತ್ಯಂ ಪಂಚೋಪಧಾತೀತೈರ್ಮಂತ್ರಯೇತ್ಸಹ ಮಂತ್ರಿಭಿಃ||

ಮದ-ಕ್ರೋಧಗಳನ್ನು ತೊರೆದು, ಮಾನ-ಈರ್ಷ್ಯೆಗಳಿಂದ ನಿರ್ವೃತ್ತನಾಗಿ ನಿತ್ಯವೂ ಐದು ವಿಷಯಗಳನ್ನು[5] ಪರೀಕ್ಷಿಸಿ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಬೇಕು.

12084050a ತೇಷಾಂ ತ್ರಯಾಣಾಂ ವಿವಿಧಂ ವಿಮರ್ಶಂ

ಬುಧ್ಯೇತ ಚಿತ್ತಂ ವಿನಿವೇಶ್ಯ ತತ್ರ|

12084050c ಸ್ವನಿಶ್ಚಯಂ ತಂ ಪರನಿಶ್ಚಯಂ ಚ

ನಿವೇದಯೇದುತ್ತರಮಂತ್ರಕಾಲೇ||

ಮಂತ್ರಾಲೋಚನೆಯಲ್ಲಿರುವ ಮೂರು ಮಂತ್ರಿಗಳ ಪ್ರತ್ಯೇಕ ಸಲಹೆಗಳನ್ನು ಕೇಳಿ, ತಾನೂ ಸಹ ಆ ವಿಷಯವನ್ನು ಚೆನ್ನಾಗಿ ಮಥಿಸಿ, ತನ್ನ ಮತ್ತು ಮಂತ್ರಿಗಳಿತ್ತಿರುವ ಸಲಹೆಗಳನ್ನು ಕ್ರೋಢೀಕರಿಸಿ, ಆಚಾರ್ಯ ಅಥವಾ ಪುರೋಹಿತನೊಂದಿಗೆ ಸಮಾಲೋಚನೆ ಮಾಡುವಾಗ ಅವರ ಮುಂದಿಡಬೇಕು.

12084051a ಧರ್ಮಾರ್ಥಕಾಮಜ್ಞಮುಪೇತ್ಯ ಪೃಚ್ಚೇದ್

ಯುಕ್ತೋ ಗುರುಂ ಬ್ರಾಹ್ಮಣಮುತ್ತಮಾರ್ಥಮ್|

12084051c ನಿಷ್ಠಾ ಕೃತಾ ತೇನ ಯದಾ ಸಹ ಸ್ಯಾತ್

ತಂ ತತ್ರ ಮಾರ್ಗಂ ಪ್ರಣಯೇದಸಕ್ತಮ್||

ಸಾವಧಾನಚಿತ್ತನಾಗಿ ಧರ್ಮಾರ್ಥಕಾಮಗಳಲ್ಲಿ ನಿಷ್ಣಾತ ಬ್ರಾಹ್ಮಣಗುರುವಿನ ಬಳಿಹೋಗಿ ಉತ್ತರಾರ್ಥವಾಗಿ ಪ್ರಶ್ನಿಸಬೇಕು. ಗುರುವಿನ ಅಂತ್ಯನಿರ್ಧಾರವು ನಾಲ್ವರ ಅಭಿಪ್ರಾಯಗಳಿಗೂ ಹೊಂದಿಕೊಂಡಿದ್ದರೆ ಕೂಡಲೇ ಆ ಮಂತ್ರಾಲೋಚನೆಯ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕು.

12084052a ಏವಂ ಸದಾ ಮಂತ್ರಯಿತವ್ಯಮಾಹುರ್

ಯೇ ಮಂತ್ರತತ್ತ್ವಾರ್ಥವಿನಿಶ್ಚಯಜ್ಞಾಃ|

12084052c ತಸ್ಮಾತ್ತ್ವಮೇವಂ ಪ್ರಣಯೇಃ ಸದೈವ

ಮಂತ್ರಂ ಪ್ರಜಾಸಂಗ್ರಹಣೇ ಸಮರ್ಥಮ್||

ಸದಾ ಹೀಗೆಯೇ ಮಂತ್ರಾಲೋಚನೆ ಮಾಡಬೇಕೆಂದು ಮಂತ್ರತತ್ವಾರ್ಥವಿನಿಶ್ಚಯ ತಜ್ಞರು ಹೇಳುತ್ತಾರೆ. ಪ್ರಜಾಸಂಗ್ರಹಣೆಗೆ ಸಮರ್ಥವಾದ ವಿಷಯಗಳನ್ನೇ ಸದಾ ಮಂತ್ರಾಲೋಚನೆಯ ವಿಷಯವನ್ನಾಗಿ ಆರಿಸಿಕೊಳ್ಳಬೇಕು.

12084053a ನ ವಾಮನಾಃ ಕುಬ್ಜಕೃಶಾ ನ ಖಂಜಾ

ನಾಂಧಾ ಜಡಾಃ ಸ್ತ್ರೀ ನ ನಪುಂಸಕಂ ಚ|

12084053c ನ ಚಾತ್ರ ತಿರ್ಯಘ್ನ ಪುರೋ ನ ಪಶ್ಚಾನ್

ನೋರ್ಧ್ವಂ ನ ಚಾಧಃ ಪ್ರಚರೇತ ಕಶ್ಚಿತ್||

ರಹಸ್ಯ ಮಂತ್ರಾಲೋಚನೆ ನಡೆಯುವಾಗ ಅದರ ಹಿಂದೆ-ಮುಂದೆ, ಎಡ-ಬಲಭಾಗಗಳಲ್ಲಿ, ಮೇಲೆ-ಕೆಳಗೆ – ವಾಮನರೂ, ಕುಬ್ಜರೂ, ಕೃಶರೂ, ಕುಂಟರೂ, ಕುರುಡರೂ, ಜಡರೂ, ಸ್ತ್ರೀಯರೂ, ನಪುಂಸಕರೂ ಸುಳಿದಾಡಬಾರದು.

12084054a ಆರುಹ್ಯ ವಾತಾಯನಮೇವ ಶೂನ್ಯಂ

ಸ್ಥಲಂ ಪ್ರಕಾಶಂ ಕುಶಕಾಶಹೀನಮ್|

12084054c ವಾಗಂಗದೋಷಾನ್ಪರಿಹೃತ್ಯ ಮಂತ್ರಂ

ಸಂಮಂತ್ರಯೇತ್ಕಾರ್ಯಮಹೀನಕಾಲಮ್||

ಅರಮನೆಯ ಉಪ್ಪರಿಗೆಯ ಮೇಲೆ, ಅಥವಾ ನಿರ್ಜನ ವಿಶಾಲಬೆಳಕಿರುವ, ಜಂಡುಹುಲ್ಲು-ದರ್ಭೆ-ಗರಿಕೆಗಳಿಲ್ಲದಿರುವ ಬಯಲು ಪ್ರದೇಶದಲ್ಲಿಯಾದರೂ ಕುಳಿತು ಕೆಲಸಕ್ಕೆ ಬಾರದ ಅಂಗಚೇಷ್ಟೆಗಳನ್ನು ಬಿಟ್ಟು ಮುಂದಿನ ಕಾರ್ಯಗಳ ವಿಷಯವಾಗಿ ರಾಜನು ಮಂತ್ರಿಗಳೊಡನೆ ಸಮಾಲೋಚಿಸಬೇಕು.

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸಭ್ಯಾದಿಲಕ್ಷಣಕಥನೇ ಚತುರಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಸಭ್ಯಾದಿಲಕ್ಷಣಕಥನ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.

Two Orange Lily. Isolated On White Background Stock Photo, Picture ...

[1] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಅಧಿಕ ಶ್ಲೋಕವಿದೆ: ಯುಧಿಷ್ಠಿರ ಉವಾಚ| ಸಭಾಸದಃ ಸಹಾಯಾಶ್ಚ ಸುಹೃದಶ್ಚ ವಿಶಾಂಪತೇ| ಪರಿಚ್ಛದಾಸ್ತಥಾಮಾತ್ಯಾಃ ಕೀದೃಶಾಃ ಸ್ಯುಃ ಪಿತಾಮಹ|| ಅರ್ಥಾತ್ ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ಪಿತಾಮಹ! ರಾಜನ ಸಭಾಸದರೂ, ಸಹಾಯಕರೂ, ಸುಹೃದರೂ, ಪರಿಚ್ಛದರೂ, ಅಮಾತ್ಯರೂ ಎಂಥವರಾಗಿರಬೇಕು?”

[2] ಸಂಸಹತೇ ಎಂಬ ಪಾಠಾಂತರವಿದೆ.

[3] ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಶ್ಲೋಕವಿದೆ: ವಿಧರ್ಮತೋ ವಿಪ್ರಕೃತಃ ಪಿತಾ ಯಸ್ಯಾಭವತ್ಪುರಾ| ಸತ್ಕೃತಃ ಸ್ಥಾಪಿತಃ ಸೋಽಪಿ ನ ಮಂತ್ರಃ ಶ್ರೋತುಮರ್ಹತಿ||

[4] ಮಂತ್ರಗೂಢಾ ಹಿ ಎಂಬ ಪಾಠಾಂತರವಿದೆ.

[5] ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ – ಇವು ಆ ಐದು ವಿಷಯಗಳು.

Comments are closed.