Shanti Parva: Chapter 107

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೭

ಕಾಲಕವೃಕ್ಷೀಯನು ಕೋಸಲರಾಜನಿಗೆ ವಿದೇಹರಾಜನನ್ನು ಭೇಟಿ ಮಾಡಿಸಿದುದು; ವಿದೇಹರಾಜನು ಕೋಸಲರಾಜನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡಿದುದು (1-27).

12107001 ರಾಜಪುತ್ರ ಉವಾಚ|

12107001a ನ ನಿಕೃತ್ಯಾ ನ ದಂಭೇನ ಬ್ರಹ್ಮನ್ನಿಚ್ಚಾಮಿ ಜೀವಿತುಮ್|

12107001c ನಾಧರ್ಮಯುಕ್ತಾನಿಚ್ಚೇಯಮರ್ಥಾನ್ಸುಮಹತೋಽಪ್ಯಹಮ್||

ರಾಜಪುತ್ರನು ಹೇಳಿದನು: “ಬ್ರಹ್ಮನ್! ನಾನು ಮೋಸದಿಂದ ಮತ್ತು ದಂಭದಿಂದ ಜೀವಿಸಲು ಇಚ್ಛಿಸುವುದಿಲ್ಲ. ಅಧರ್ಮವನ್ನು ಬಳಸಿ ನನಗೆ ಮಹಾ ಸಂಪತ್ತೇ ದೊರೆಯುವ ಹಾಗಿದ್ದರೂ ಅದನ್ನು ನಾನು ಬಯಸುವುದಿಲ್ಲ.

12107002a ಪುರಸ್ತಾದೇವ ಭಗವನ್ಮಯೈತದಪವರ್ಜಿತಮ್|

12107002c ಯೇನ ಮಾಂ ನಾಭಿಶಂಕೇತ ಯದ್ವಾ ಕೃತ್ಸ್ನಂ ಹಿತಂ ಭವೇತ್||

ಭಗವನ್! ಈ ಎಲ್ಲ ದುರ್ಗುಣಗಳನ್ನೂ ಮೊದಲೇ ನಾನು ಪರಿತ್ಯಜಿಸಿದ್ದೇನೆ. ಯಾರೂ ನನ್ನ ಮೇಲೆ ಶಂಕಿಸದ ಹಾಗೆ ಇರುವಂತಹ ಮತ್ತು ಯಾವುದರಿಂದ ಎಲ್ಲವಕ್ಕೂ ಹಿತವಾಗುವುದೋ ಅದರ ಕುರಿತು ಹೇಳಬೇಕು.

12107003a ಆನೃಶಂಸ್ಯೇನ ಧರ್ಮೇಣ ಲೋಕೇ ಹ್ಯಸ್ಮಿಂಜಿಜೀವಿಷುಃ|

12107003c ನಾಹಮೇತದಲಂ ಕರ್ತುಂ ನೈತನ್ಮಯ್ಯುಪಪದ್ಯತೇ||

ಅಹಿಂಸಾ ಧರ್ಮವನ್ನೇ ಆಶ್ರಯಿಸಿ ಲೋಕದಲ್ಲಿ ಜೀವಿಸಿರಲು ಬಯಸುತ್ತಿರುವ ನಾನು ನೀವು ಹೇಳಿದಂತೆ ಮಾಡಲಾರೆ. ಇಂತಹ ಅಧರ್ಮಮಾರ್ಗಗಳನ್ನು ಉಪದೇಶಿಸುವುದೂ ನಿನ್ನಂಥವರಿಗೆ ತಕ್ಕುದಲ್ಲ.”

12107004 ಮುನಿರುವಾಚ|

12107004a ಉಪಪನ್ನಸ್ತ್ವಮೇತೇನ ಯಥಾ ಕ್ಷತ್ರಿಯ ಭಾಷಸೇ|

12107004c ಪ್ರಕೃತ್ಯಾ ಹ್ಯುಪಪನ್ನೋಽಸಿ ಬುದ್ಧ್ಯಾ ಚಾದ್ಭುತದರ್ಶನ||

ಮುನಿಯು ಹೇಳಿದನು: “ಕ್ಷತ್ರಿಯನಾಡುವಂತೆ ನಿನ್ನ ಗುಣಸಂಪನ್ನತೆಗೆ ಅನುರೂಪವಾಗಿಯೇ ಮಾತನಾಡಿರುವೆ. ಸ್ವಭಾವತಃ ನೀನು ಗುಣಸಂಪನ್ನನಾಗಿದ್ದೀಯೆ. ಬುದ್ಧಿಯಿಂದ ನೀನು ಅದ್ಭುತವನ್ನು ಕಂಡಿರುವೆ.

12107005a ಉಭಯೋರೇವ ವಾಮರ್ಥೇ ಯತಿಷ್ಯೇ ತವ ತಸ್ಯ ಚ|

12107005c ಸಂಶ್ಲೇಷಂ ವಾ ಕರಿಷ್ಯಾಮಿ ಶಾಶ್ವತಂ ಹ್ಯನಪಾಯಿನಮ್||

ನೀನು ಮತ್ತು ವಿದೇಹರಾಜ ಇಬ್ಬರ ಹಿತಾರ್ಥವಾಗಿ ನಾನೀಗಲೇ ಪ್ರಯತ್ನಿಸುತ್ತೇನೆ. ನಿಮ್ಮಿಬ್ಬರ ನಡುವೆ ಶಾಶ್ವತವಾದ ಮತ್ತು ಬಿಟ್ಟುಹೋಗದ ಸಂಬಂಧವನ್ನು ಕಲ್ಪಿಸುತ್ತೇನೆ.

12107006a ತ್ವಾದೃಶಂ ಹಿ ಕುಲೇ ಜಾತಮನೃಶಂಸಂ ಬಹುಶ್ರುತಮ್|

12107006c ಅಮಾತ್ಯಂ ಕೋ ನ ಕುರ್ವೀತ ರಾಜ್ಯಪ್ರಣಯಕೋವಿದಮ್||

ನಿನ್ನಂಥಹ ಉತ್ತಮ ಕುಲಪ್ರಸೂತ, ದಯಾಳು, ವಿದ್ವಾಂಸ, ರಾಜ್ಯವ್ಯವಹಾರಗಳಲ್ಲಿ ಕೋವಿದನನ್ನು ಯಾರು ತಾನೇ ಅಮಾತ್ಯನನ್ನಾಗಿ ಮಾಡಿಕೊಳ್ಳುವುದಿಲ್ಲ?

12107007a ಯಸ್ತ್ವಂ ಪ್ರವ್ರಜಿತೋ ರಾಜ್ಯಾದ್ವ್ಯಸನಂ ಚೋತ್ತಮಂ ಗತಃ|

12107007c ಆನೃಶಂಸ್ಯೇನ ವೃತ್ತೇನ ಕ್ಷತ್ರಿಯೇಚ್ಚಸಿ ಜೀವಿತುಮ್||

ರಾಜ್ಯವನ್ನು ಕಳೆದುಕೊಂಡು ಮಹಾ ವ್ಯಸನದಲ್ಲಿ ಸಿಲುಕಿರುವ ನೀನು ದಯಾಪೂರ್ಣವಾದ ಕ್ಷತ್ರಿಯ ವೃತ್ತಿಯಿಂದ ಜೀವಿಸಲು ಬಯಸುತ್ತಿರುವೆ.

12107008a ಆಗಂತಾ ಮದ್ಗೃಹಂ ತಾತ ವೈದೇಹಃ ಸತ್ಯಸಂಗರಃ|

12107008c ಯಥಾಹಂ ತಂ ನಿಯೋಕ್ಷ್ಯಾಮಿ ತತ್ಕರಿಷ್ಯತ್ಯಸಂಶಯಮ್||

ಅಯ್ಯಾ! ಸತ್ಯಸಂಗರ ವೈದೇಹನು ನನ್ನ ಆಶ್ರಮಕ್ಕೆ ಬರುವವನಿದ್ದಾನೆ. ನಾನು ಹೇಳಿದಂತೆಯೇ ಅವನು ಮಾಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.””

12107009 ಭೀಷ್ಮ ಉವಾಚ|

12107009a ತತ ಆಹೂಯ ವೈದೇಹಂ ಮುನಿರ್ವಚನಮಬ್ರವೀತ್|

12107009c ಅಯಂ ರಾಜಕುಲೇ ಜಾತೋ ವಿದಿತಾಭ್ಯಂತರೋ ಮಮ||

ಭೀಷ್ಮನು ಹೇಳಿದನು: “ಅನಂತರ ಮುನಿಯು ವೈದೇಹನನ್ನು ಕರೆದು ಹೇಳಿದನು: “ಇವನು ರಾಜಕುಲದಲ್ಲಿ ಹುಟ್ಟಿದವನು. ಇವನ ಆಂತರಿಕ ವ್ಯವಹಾರಗಳೆಲ್ಲವೂ ನನಗೆ ತಿಳಿದಿವೆ.

12107010a ಆದರ್ಶ ಇವ ಶುದ್ಧಾತ್ಮಾ ಶಾರದಶ್ಚಂದ್ರಮಾ ಇವ|

12107010c ನಾಸ್ಮಿನ್ ಪಶ್ಯಾಮಿ ವೃಜಿನಂ ಸರ್ವತೋ ಮೇ ಪರೀಕ್ಷಿತಃ||

ಕನ್ನಡಿಯಂತೆ ಇವನು ಶುದ್ಧಾತ್ಮನು. ಶರದೃತುವಿನ ಚಂದ್ರನಂತೆ ಇದ್ದಾನೆ. ನನ್ನಿಂದ ಸರ್ವಪ್ರಕಾರದಲ್ಲಿಯೂ ಪರೀಕ್ಷಿಸಲ್ಪಟ್ಟ ಇವನಲ್ಲಿ ಸ್ವಲ್ಪವೂ ದೋಷವನ್ನು ನಾನು ಕಾಣುತ್ತಿಲ್ಲ.

12107011a ತೇನ ತೇ ಸಂಧಿರೇವಾಸ್ತು ವಿಶ್ವಸಾಸ್ಮಿನ್ಯಥಾ ಮಯಿ|

12107011c ನ ರಾಜ್ಯಮನಮಾತ್ಯೇನ ಶಕ್ಯಂ ಶಾಸ್ತುಮಮಿತ್ರಹನ್||

ಅವನೊಂದಿಗೆ ನಿನ್ನ ಸಂಧಿಯಾಗಬೇಕು. ನನ್ನಲ್ಲಿ ಇಟ್ಟಿರುವ ವಿಶ್ವಾಸವನ್ನೇ ಅವನಲ್ಲಿಯೂ ನೀನು ಇಡಬೇಕು. ಅಮಿತ್ರಹನ್! ಅಮಾತ್ಯನಿಲ್ಲದೇ ರಾಜ್ಯಶಾಸನವನ್ನು ಮಾಡಲು ಶಕ್ಯವಿಲ್ಲ.

12107012a ಅಮಾತ್ಯಃ ಶೂರ ಏವ ಸ್ಯಾದ್ಬುದ್ಧಿಸಂಪನ್ನ ಏವ ಚ|

12107012c ತಾಭ್ಯಾಂ ಚೈವ ಭಯಂ ರಾಜ್ಞಃ ಪಶ್ಯ ರಾಜ್ಯಸ್ಯ ಯೋಜನಮ್|

12107012e ಧರ್ಮಾತ್ಮನಾಂ ಕ್ವ ಚಿಲ್ಲೋಕೇ ನಾನ್ಯಾಸ್ತಿ ಗತಿರೀದೃಶೀ||

ಅಮಾತ್ಯನು ಶೂರನೂ ಬುದ್ಧಿಸಂಪನ್ನನ್ನೂ ಆಗಿರಬೇಕು. ಅಂಥವರಿಂದಲೇ ರಾಜನು ಭಯಪಡಬೇಕು ಮತ್ತು ಅಂಥವನನ್ನು ನೋಡಿ ರಾಜ್ಯದಲ್ಲಿ ಬಳಸಬೇಕು. ಲೋಕದಲ್ಲಿ ಧರ್ಮಾತ್ಮರಿಗೆ ಇವರಲ್ಲದೇ ಬೇರೆ ಯಾರು ಗತಿ?

12107013a ಕೃತಾತ್ಮಾ ರಾಜಪುತ್ರೋಽಯಂ ಸತಾಂ ಮಾರ್ಗಮನುಷ್ಠಿತಃ|

12107013c ಸುಸಂಗೃಹೀತಸ್ತ್ವೇವೈಷ ತ್ವಯಾ ಧರ್ಮಪುರೋಗಮಃ|

12107013e ಸಂಸೇವ್ಯಮಾನಃ ಶತ್ರೂಂಸ್ತೇ ಗೃಹ್ಣೀಯಾನ್ಮಹತೋ ಗಣಾನ್||

ಈ ರಾಜಪುತ್ರನು ಕೃತಾತ್ಮನು. ಸಂತರ ಮಾರ್ಗದಲ್ಲಿ ನಡೆಯುವವನು. ಧರ್ಮವನ್ನೇ ಪ್ರಧಾನವನ್ನಾಗಿಟ್ಟುಕೊಂಡು ಇವನನ್ನು ಸನ್ಮಾನಪೂರ್ವಕವಾಗಿ ನಿಯಮಿಸಿಕೊಂಡರೆ ಇವನು ನಿನ್ನ ಸೇವೆಮಾಡಿ ನಿನ್ನ ಶತ್ರುಗಳ ಮಹಾಸೇನೆಯನ್ನು ಸ್ವಾಧೀಪಡಿಸಿಕೊಳ್ಳುತ್ತಾನೆ.

12107014a ಯದ್ಯಯಂ ಪ್ರತಿಯುಧ್ಯೇತ್ತ್ವಾಂ ಸ್ವಕರ್ಮ ಕ್ಷತ್ರಿಯಸ್ಯ ತತ್|

12107014c ಜಿಗೀಷಮಾಣಸ್ತ್ವಾಂ ಯುದ್ಧೇ ಪಿತೃಪೈತಾಮಹೇ ಪದೇ||

ಒಂದು ವೇಳೆ ಇವನು ತನ್ನ ಪಿತೃ-ಪಿತಾಮಹರ ರಾಜ್ಯದ ಸಲುವಾಗಿ ಯುದ್ಧದಲ್ಲಿ ನಿನ್ನನ್ನು ಗೆಲ್ಲುವ ಇಚ್ಛೆಯಿಂದ ನಿನ್ನೊಡನೆ ಯುದ್ಧವನ್ನು ಮಾಡಿದರೂ ಅದು ಕ್ಷತ್ರಿಯನಾದ ಇವನ ಸ್ವಕರ್ಮವಾಗುತ್ತದೆ.

12107015a ತ್ವಂ ಚಾಪಿ ಪ್ರತಿಯುಧ್ಯೇಥಾ ವಿಜಿಗೀಷುವ್ರತೇ ಸ್ಥಿತಃ|

12107015c ಅಯುದ್ಧ್ವೈವ ನಿಯೋಗಾನ್ಮೇ ವಶೇ ವೈದೇಹ ತೇ ಸ್ಥಿತಃ||

ವೈದೇಹ! ಗೆಲ್ಲುವ ವ್ರತವನ್ನೇ ಕೈಗೊಂಡಿರುವ ನೀನೂ ಕೂಡ ಇವನೊಡನೆ ಯುದ್ಧಮಾಡಬಹುದು. ಆದರೆ ನನ್ನ ನಿಯೋಗದಂತೆ ಯುದ್ಧಮಾಡದೇ ಇವನನ್ನು ನಿನ್ನ ವಶದಲ್ಲಿ ತೆಗೆದುಕೋ.

12107016a ಸ ತ್ವಂ ಧರ್ಮಮವೇಕ್ಷಸ್ವ ತ್ಯಕ್ತ್ವಾಧರ್ಮಮಸಾಂಪ್ರತಮ್|

12107016c ನ ಹಿ ಕಾಮಾನ್ನ ಚ ದ್ರೋಹಾತ್ಸ್ವಧರ್ಮಂ ಹಾತುಮರ್ಹಸಿ||

ಅಸಾಂಪ್ರತ ಧರ್ಮವನ್ನು ತ್ಯಜಿಸಿ ಧರ್ಮದ ಮೇಲೆ ದೃಷ್ಟಿಯನ್ನಿಡು. ಕಾಮದಿಂದಾಗಲೀ ದ್ರೋಹದಿಂದಾಗಲೀ ಸ್ವಧರ್ಮವನ್ನು ತ್ಯಜಿಸಬಾರದು.

12107017a ನೈವ ನಿತ್ಯಂ ಜಯಸ್ತಾತ ನೈವ ನಿತ್ಯಂ ಪರಾಜಯಃ|

12107017c ತಸ್ಮಾದ್ಭೋಜಯಿತವ್ಯಶ್ಚ ಭೋಕ್ತವ್ಯಶ್ಚ ಪರೋ ಜನಃ||

ಅಯ್ಯಾ! ನಿರಂತರ ಜಯವೂ ಇರುವುದಿಲ್ಲ. ನಿರಂತರ ಪರಾಜಯವೂ ಇರುವುದಿಲ್ಲ. ಇತರರನ್ನು ಜಯಿಸಿ ಅವರ ಸಂಪತ್ತನ್ನು ಉಪಭೋಗಿಸುವಂತೆ ರಾಜನಾದವನು ಇತರರಿಗೂ ತನ್ನ ಸಂಪತ್ತನ್ನು ಹಂಚಿಕೊಡಬೇಕು.

12107018a ಆತ್ಮನ್ಯೇವ ಹಿ ಸಂದೃಶ್ಯಾವುಭೌ ಜಯಪರಾಜಯೌ|

12107018c ನಿಃಶೇಷಕಾರಿಣಾಂ ತಾತ ನಿಃಶೇಷಕರಣಾದ್ಭಯಮ್||

ಜಯ-ಅಪಜಯ ಎರಡನ್ನೂ ತನ್ನಲ್ಲಿಯೇ ಕಂಡುಕೊಳ್ಳಬೇಕು. ಮಗೂ! ಸರ್ವವನ್ನೂ ಅಪಹರಿಸಿದವನಿಗೆ ಸರ್ವವೂ ಅಪಹೃತವಾಗುವ ಭಯವಿರುತ್ತದೆ.”

12107019a ಇತ್ಯುಕ್ತಃ ಪ್ರತ್ಯುವಾಚೇದಂ ವಚನಂ ಬ್ರಾಹ್ಮಣರ್ಷಭಮ್|

12107019c ಅಭಿಪೂಜ್ಯಾಭಿಸತ್ಕೃತ್ಯ ಪೂಜಾರ್ಹಮನುಮಾನ್ಯ ಚ||

ಹೀಗೆ ಹೇಳಿದ ಪೂಜಾರ್ಹನೂ ಮಾನ್ಯನೂ ಆದ ಆ ಬ್ರಾಹ್ಮಣರ್ಷಭನನ್ನು ಪೂಜಿಸಿ ಸತ್ಕರಿಸಿ ವಿದೇಹರಾಜನು ಉತ್ತರಿಸಿದನು:

12107020a ಯಥಾ ಬ್ರೂಯಾನ್ಮಹಾಪ್ರಾಜ್ಞೋ ಯಥಾ ಬ್ರೂಯಾದ್ಬಹುಶ್ರುತಃ|

12107020c ಶ್ರೇಯಸ್ಕಾಮೋ ಯಥಾ ಬ್ರೂಯಾದುಭಯೋರ್ಯತ್ಕ್ಷಮಂ ಭವೇತ್||

ಮಹಾಪ್ರಾಜ್ಞನು ಆಡುವ, ಬಹುಶ್ರುತನು ಆಡುವ ಮತ್ತು ಶ್ರೇಯಸ್ಸನ್ನು ಬಯಸುವವರು ಹೇಳುವ ಮಾತುಗಳನ್ನೇ ನೀನೂ ಆಡಿದ್ದೀಯೆ. ನೀನು ಹೇಳಿದಂತೆ ನಾವಿಬ್ಬರೂ ಮಾಡುವುದು ಸರಿಯಾಗಿಯೇ ಇದೆ.

12107021a ತಥಾ ವಚನಮುಕ್ತೋಽಸ್ಮಿ ಕರಿಷ್ಯಾಮಿ ಚ ತತ್ತಥಾ|

12107021c ಏತದ್ಧಿ ಪರಮಂ ಶ್ರೇಯೋ ನ ಮೇಽತ್ರಾಸ್ತಿ ವಿಚಾರಣಾ||

ನೀನು ಹೇಳಿದಂತೆಯೇ ಮಾಡುತ್ತೇನೆ. ಇದೇ ನನಗೆ ಪರಮ ಶ್ರೇಯಸ್ಕರವಾದುದು. ಇದರಲ್ಲಿ ವಿಚಾರಮಾಡುವುದೇನೂ ಇಲ್ಲ.”

12107022a ತತಃ ಕೌಶಲ್ಯಮಾಹೂಯ ವೈದೇಹೋ ವಾಕ್ಯಮಬ್ರವೀತ್|

12107022c ಧರ್ಮತೋ ನೀತಿತಶ್ಚೈವ ಬಲೇನ ಚ[1] ಜಿತೋ ಮಯಾ||

ಅನಂತರ ವೈದೇಹನು ಕೌಶಲ್ಯನನ್ನು ಕರೆದು ಈ ಮಾತನ್ನಾಡಿದನು: “ಧರ್ಮ, ನೀತಿ ಮತ್ತು ಬಲಗಳಿಂದ ನಾನು ಗೆದ್ದಿದ್ದೇನೆ.

12107023a ಸೋಽಹಂ ತ್ವಯಾ ತ್ವಾತ್ಮಗುಣೈರ್ಜಿತಃ ಪಾರ್ಥಿವಸತ್ತಮ|

12107023c ಆತ್ಮಾನಮನವಜ್ಞಾಯ ಜಿತವದ್ವರ್ತತಾಂ ಭವಾನ್||

ಪಾರ್ಥಿವಸತ್ತಮ! ಆದರೆ ಈಗ ನೀನು ನಿನ್ನ ಆತ್ಮಗುಣಗಳಿಂದಲೇ ನನ್ನನ್ನು ಗೆದ್ದಿರುವೆ. ಆದುದರಿಂದ ನೀನು ಸೋತವನೆಂದು ತಿಳಿಯದೇ ಗೆದ್ದವನಂತೆಯೇ ನಡೆದುಕೋ.

12107024a ನಾವಮನ್ಯೇ ಚ ತೇ ಬುದ್ಧಿಂ ನಾವಮನ್ಯೇ ಚ ಪೌರುಷಮ್|

12107024c ನಾವಮನ್ಯೇ ಜಯಾಮೀತಿ ಜಿತವದ್ವರ್ತತಾಂ ಭವಾನ್||

ನಿನ್ನ ಬುದ್ಧಿಯನ್ನು ಅಪಮಾನಿಸುವುದಿಲ್ಲ. ನಿನ್ನ ಪೌರುಷವನ್ನೂ ಅಪಮಾನಿಸುವುದಿಲ್ಲ. ನಾನೇ ಗೆದ್ದವನೆಂದು ನಿನ್ನನ್ನು ಅಪಮಾನಿಸುವುದಿಲ್ಲ. ನೀನು ಗೆದ್ದವನಂತೆಯೇ ವ್ಯವಹರಿಸು.

12107025a ಯಥಾವತ್ಪೂಜಿತೋ ರಾಜನ್ಗೃಹಂ ಗಂತಾಸಿ ಮೇ ಗೃಹಾತ್|

12107025c ತತಃ ಸಂಪೂಜ್ಯ ತೌ ವಿಪ್ರಂ ವಿಶ್ವಸ್ತೌ ಜಗ್ಮತುರ್ಗೃಹಾನ್||

ರಾಜನ್! ಯಥಾವತ್ತಾಗಿ ಪೂಜಿತನಾಗಿ ನೀನು ನನ್ನ ಮನೆಗೆ ಆಗಮಿಸು.” ಅನಂತರ ಅವರಿಬ್ಬರೂ ವಿಪ್ರನನ್ನು ಸಂಪೂಜಿಸಿ ಪರಸ್ಪರರರಲ್ಲಿ ವಿಶ್ವಾಸವನ್ನಿಟ್ಟು ಅರಮನೆಗೆ ತೆರಳಿದರು.

12107026a ವೈದೇಹಸ್ತ್ವಥ ಕೌಸಲ್ಯಂ ಪ್ರವೇಶ್ಯ ಗೃಹಮಂಜಸಾ|

12107026c ಪಾದ್ಯಾರ್ಘ್ಯಮಧುಪರ್ಕೈಸ್ತಂ ಪೂಜಾರ್ಹಂ ಪ್ರತ್ಯಪೂಜಯತ್||

ಆಗ ವೈದೇಹನು ಕೌಸಲ್ಯನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಪಾದ್ಯ-ಅರ್ಘ್ಯ-ಮಧುಪರ್ಕಗಳಿಂದ ಆ ಪೂಜಾರ್ಹನನ್ನು ಪೂಜಿಸಿದನು.

12107027a ದದೌ ದುಹಿತರಂ ಚಾಸ್ಮೈ ರತ್ನಾನಿ ವಿವಿಧಾನಿ ಚ|

12107027c ಏಷ ರಾಜ್ಞಾಂ ಪರೋ ಧರ್ಮಃ ಸಹ್ಯೌ ಜಯಪರಾಜಯೌ||

ಮತ್ತು ಅವನಿಗೆ ತನ್ನ ಮಗಳನ್ನೂ ವಿವಿಧ ರತ್ನಗಳನ್ನೂ ನೀಡಿದನು. ಜಯಾಪಜಯಗಳಲ್ಲಿ ಇದೇ ರಾಜರ ಪರಮ ಧರ್ಮವು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮಪರ್ವಣಿ ಕಾಲಕವೃಕ್ಷೀಯೇ ಸಪ್ತಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಏಳನೇ ಅಧ್ಯಾಯವು.

Flower Pink White Dahlia Isolated White Background Close Element Design ⬇  Stock Photo, Image by © afefelov68 #210908688

[1] ಲೋಕಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.