Shalya Parva: Chapter 61

ಶಲ್ಯಪರ್ವ: ಗದಾಯುದ್ಧ ಪರ್ವ

೬೧

ಪಾಂಡವರೈವರು, ಸಾತ್ಯಕಿ, ಕೃಷ್ಣ ಮತ್ತು ಯುಯುತ್ಸು ಇವರು ಕೌರವ ಶಿಬಿರವನನ್ನು ತಲುಪಲು ಅರ್ಜುನ-ಕೃಷ್ಣರು ಕೆಳಗಿಳಿಯುತ್ತಲೇ ಅರ್ಜುನನ ರಥವು ಸುಟ್ಟು ಭಸ್ಮವಾದುದು; ಕೃಷ್ಣನು ಅದಕ್ಕೆ ಕಾರಣವನ್ನು ತಿಳಿಸುವುದು (೧-೧೯). ವಾಸುದೇವ-ಯುಧಿಷ್ಠಿರ ಸಂವಾದ (೨೦-೩೦). ಶಿಬಿರದಲ್ಲಿದ್ದ ಕೌರವರ ಸಂಪತ್ತೆಲ್ಲವನ್ನೂ ತಮ್ಮದಾಗಿಸಿಕೊಂಡು ಯುಧಿಷ್ಠಿರಾದಿಗಳು ಕೃಷ್ಣನ ಸೂಚನೆಯಂತೆ ಶಿಬಿರದ ಹೊರಗೆ ಓಘವತೀ ತೀರದಲ್ಲಿ ರಾತ್ರಿ ತಂಗಿದುದು (೩೧-೩೭). ಕೃಷ್ಣನು ಗಾಂಧಾರಿಯನ್ನು ಸಂತವಿಸಲು ಅವಳಲ್ಲಿಗೆ ಹೋದುದು (೩೮-೪೦).

Image result for dhritarashtra embraces bhima09061001 ಸಂಜಯ ಉವಾಚ

09061001a ತತಸ್ತೇ ಪ್ರಯಯುಃ ಸರ್ವೇ ನಿವಾಸಾಯ ಮಹೀಕ್ಷಿತಃ|

09061001c ಶಂಖಾನ್ಪ್ರಧ್ಮಾಪಯಂತೋ ವೈ ಹೃಷ್ಟಾಃ ಪರಿಘಬಾಹವಃ||

ಸಂಜಯನು ಹೇಳಿದನು: “ಅನಂತರ ಪರಿಘಾಯುಧಗಳಂತಹ ತೋಳುಗಳುಳ್ಳ ಮಹೀಕ್ಷಿತರು ಎಲ್ಲರೂ ಪ್ರಹೃಷ್ಟರಾಗಿ ಶಂಖಗಳನ್ನು ಊದುತ್ತಾ ನಿವಾಸಗಳಿಗೆ ತೆರಳಿದರು.

09061002a ಪಾಂಡವಾನ್ಗಚ್ಚತಶ್ಚಾಪಿ ಶಿಬಿರಂ ನೋ ವಿಶಾಂ ಪತೇ|

09061002c ಮಹೇಷ್ವಾಸೋಽನ್ವಗಾತ್ಪಶ್ಚಾದ್ಯುಯುತ್ಸುಃ ಸಾತ್ಯಕಿಸ್ತಥಾ||

ವಿಶಾಂಪತೇ! ನಮ್ಮ ಶಿಬಿರದ ಕಡೆ ಬರುತ್ತಿದ್ದ ಪಾಂಡವರನ್ನು ಮಹೇಷ್ವಾಸ ಯುಯುತ್ಸು ಮತ್ತು ಸಾತ್ಯಕಿಯರು ಹಿಂಬಾಲಿಸಿ ಬಂದರು.

09061003a ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಶ್ಚ ಸರ್ವಶಃ|

09061003c ಸರ್ವೇ ಚಾನ್ಯೇ ಮಹೇಷ್ವಾಸಾ ಯಯುಃ ಸ್ವಶಿಬಿರಾಣ್ಯುತ||

ಧೃಷ್ಟದ್ಯುಮ್ನ, ಶಿಖಂಡೀ, ಸರ್ವ ದ್ರೌಪದೇಯರು ಮತ್ತು ಅನ್ಯ ಮಹೇಷ್ವಾಸರೆಲ್ಲರೂ ತಮ್ಮ ಶಿಬಿರಗಳಿಗೆ ತೆರಳಿದರು.

09061004a ತತಸ್ತೇ ಪ್ರಾವಿಶನ್ಪಾರ್ಥಾ ಹತತ್ವಿಟ್ಕಂ ಹತೇಶ್ವರಂ|

09061004c ದುರ್ಯೋಧನಸ್ಯ ಶಿಬಿರಂ ರಂಗವದ್ವಿಸೃತೇ ಜನೇ||

ನಾಟಕವು ಮುಗಿದನಂತರ ಜನರೆಲ್ಲರೂ ಹೊರಟುಹೋಗಿರುವ ರಂಗಮಂಟಪದಂತಿದ್ದ, ಸ್ವಾಮಿಯನ್ನು ಕಳೆದುಕೊಂಡ ದುರ್ಯೋಧನನ ಶಿಬಿರವನ್ನು ಪಾರ್ಥರು ಪ್ರವೇಶಿಸಿದರು.

09061005a ಗತೋತ್ಸವಂ ಪುರಮಿವ ಹೃತನಾಗಮಿವ ಹ್ರದಂ|

09061005c ಸ್ತ್ರೀವರ್ಷವರಭೂಯಿಷ್ಠಂ ವೃದ್ಧಾಮಾತ್ಯೈರಧಿಷ್ಠಿತಂ||

ಉತ್ಸವವು ಮುಗಿದ ಪಟ್ಟಣದಂತೆಯೂ, ಸಲಗವಿಲ್ಲದ ಸರೋವರದಂತೆಯೂ ಆ ಶಿಬಿರವು ಸ್ತ್ರೀಯರು, ನಪುಂಸಕರು ಮತ್ತು ವೃದ್ಧ‌ ಅಮಾತ್ಯರಿಂದ ಕೂಡಿತ್ತು.

09061006a ತತ್ರೈತಾನ್ಪರ್ಯುಪಾತಿಷ್ಠನ್ದುರ್ಯೋಧನಪುರಃಸರಾಃ|

09061006c ಕೃತಾಂಜಲಿಪುಟಾ ರಾಜನ್ಕಾಷಾಯಮಲಿನಾಂಬರಾಃ||

ರಾಜನ್! ಮೊದಲು ದುರ್ಯೋಧನನ ಎದಿರು ಹೋಗುತ್ತಿದ್ದ ಸೇವಕರು ಈಗ ಮಲಿನ ಕಾಷಾಯವಸ್ತ್ರಗಳನ್ನುಟ್ಟು ಕೈಮುಗಿದು ಅಲ್ಲಿಗೆ ಬರುತ್ತಿದ್ದ ಪಾಂಡವರನ್ನು ಎದುರಿಸಿದರು.

09061007a ಶಿಬಿರಂ ಸಮನುಪ್ರಾಪ್ಯ ಕುರುರಾಜಸ್ಯ ಪಾಂಡವಾಃ|

09061007c ಅವತೇರುರ್ಮಹಾರಾಜ ರಥೇಭ್ಯೋ ರಥಸತ್ತಮಾಃ||

ಮಹಾರಾಜ! ಕುರುರಾಜನ ಶಿಬಿರವನ್ನು ತಲುಪಿ ರಥಸತ್ತಮ ಪಾಂಡವರು ರಥಗಳಿಂದ ಕೆಳಗಿಳಿದರು.

09061008a ತತೋ ಗಾಂಡೀವಧನ್ವಾನಮಭ್ಯಭಾಷತ ಕೇಶವಃ|

09061008c ಸ್ಥಿತಃ ಪ್ರಿಯಹಿತೇ ನಿತ್ಯಮತೀವ ಭರತರ್ಷಭ||

ಭರತರ್ಷಭ! ಆಗ ಕೇಶವನು ನಿತ್ಯವೂ ಯಾರ ಪ್ರಿಯ ಮತ್ತು ಹಿತಗಳಲ್ಲಿ ನಿರತನಾಗಿದ್ದನೋ ಆ ಗಾಂಡೀವಧನ್ವಿಗೆ ನುಡಿದನು:

09061009a ಅವರೋಪಯ ಗಾಂಡೀವಮಕ್ಷಯ್ಯೌ ಚ ಮಹೇಷುಧೀ|

09061009c ಅಥಾಹಮವರೋಕ್ಷ್ಯಾಮಿ ಪಶ್ಚಾದ್ಭರತಸತ್ತಮ||

09061010a ಸ್ವಯಂ ಚೈವಾವರೋಹ ತ್ವಮೇತಚ್ಚ್ರೇಯಸ್ತವಾನಘ|

“ಭರತಸತ್ತಮ! ನೀನು ಮೊದಲು ಗಾಂಡೀವವನ್ನೂ ಅಕ್ಷಯ ತೂಣೀರಗಳನ್ನೂ ಕೆಳಗಿಳಿಸು. ನಂತರ ನೀನೂ ಇಳಿ. ನಿನ್ನ ನಂತರ ನಾನು ಕೆಳಗಿಳಿಯುತ್ತೇನೆ. ಅನಘ! ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ.”

09061010c ತಚ್ಚಾಕರೋತ್ತಥಾ ವೀರಃ ಪಾಂಡುಪುತ್ರೋ ಧನಂಜಯಃ||

09061011a ಅಥ ಪಶ್ಚಾತ್ತತಃ ಕೃಷ್ಣೋ ರಶ್ಮೀನುತ್ಸೃಜ್ಯ ವಾಜಿನಾಂ|

09061011c ಅವಾರೋಹತ ಮೇಧಾವೀ ರಥಾದ್ಗಾಂಡೀವಧನ್ವನಃ||

ವೀರ ಪಾಂಡುಪುತ್ರ ಧನಂಜಯನು ಅದರಂತೆಯೇ ಮಾಡಿದನು. ಅನಂತರ ಮೇಧಾವೀ ಕೃಷ್ಣನು ಕುದುರೆಗಳ ಕಡಿವಾಣಗಳನ್ನು ಬಿಸುಟು ಗಾಂಡೀವಧನ್ವಿಯ ರಥದಿಂದ ಕೆಳಗಿಳಿದನು.

09061012a ಅಥಾವತೀರ್ಣೇ ಭೂತಾನಾಮೀಶ್ವರೇ ಸುಮಹಾತ್ಮನಿ|

09061012c ಕಪಿರಂತರ್ದಧೇ ದಿವ್ಯೋ ಧ್ವಜೋ ಗಾಂಡೀವಧನ್ವನಃ||

ಆ ಸುಮಹಾತ್ಮ ಭೂತಗಳ ಈಶ್ವರನು ಕೆಳಗಿಳಿಯುತ್ತಲೇ ಗಾಂಡೀವಧನ್ವಿಯ ದಿವ್ಯ ಧ್ವಜದಿಂದ ಕಪಿಯು ಅಂತರ್ಧಾನನಾದನು.

09061013a ಸ ದಗ್ಧೋ ದ್ರೋಣಕರ್ಣಾಭ್ಯಾಂ ದಿವ್ಯೈರಸ್ತ್ರೈರ್ಮಹಾರಥಃ|

09061013c ಅಥ ದೀಪ್ತೋಽಗ್ನಿನಾ ಹ್ಯಾಶು ಪ್ರಜಜ್ವಾಲ ಮಹೀಪತೇ||

ಮಹೀಪತೇ! ದ್ರೋಣ-ಕರ್ಣಾದಿಗಳ ದಿವ್ಯಾಸ್ತ್ರಗಳಿಂದ ದಹಿಸಲ್ಪಟ್ಟಿದ್ದ ಆ ಮಹಾರಥವು ಈಗ ಅಗ್ನಿಯಿಂದ ಪ್ರತೀಪ್ತವಾಗಿ ಪ್ರಜ್ವಲಿಸಿ ಉರಿಯತೊಡಗಿತು.

09061014a ಸೋಪಾಸಂಘಃ ಸರಶ್ಮಿಶ್ಚ ಸಾಶ್ವಃ ಸಯುಗಬಂಧುರಃ|

09061014c ಭಸ್ಮೀಭೂತೋಽಪತದ್ಭೂಮೌ ರಥೋ ಗಾಂಡೀವಧನ್ವನಃ||

ಗಾಂಡೀವಧನ್ವಿಯ ಆ ರಥವು ಬತ್ತಳಿಕೆ, ಕಡಿವಾಣ, ಕುದುರೆಗಳು, ನೊಗ, ಮೂಕಿಗಳ ಸಮೇತವಾಗಿ ಭಸ್ಮೀಭೂತವಾಗಿ ಭೂಮಿಯ ಮೇಲೆ ಬಿದ್ದಿತು.

09061015a ತಂ ತಥಾ ಭಸ್ಮಭೂತಂ ತು ದೃಷ್ಟ್ವಾ ಪಾಂಡುಸುತಾಃ ಪ್ರಭೋ|

09061015c ಅಭವನ್ವಿಸ್ಮಿತಾ ರಾಜನ್ನರ್ಜುನಶ್ಚೇದಮಬ್ರವೀತ್||

09061016a ಕೃತಾಂಜಲಿಃ ಸಪ್ರಣಯಂ ಪ್ರಣಿಪತ್ಯಾಭಿವಾದ್ಯ ಚ|

ರಾಜನ್! ಪ್ರಭೋ! ಹೀಗೆ ಅದು ಭಸ್ಮೀಭೂತವಾದುದನ್ನು ನೋಡಿ ಪಾಂಡುಸುತರು ವಿಸ್ಮಿತರಾದರು. ಅರ್ಜುನನು ಕೈಮುಗಿದು ಪ್ರಣಯಪೂರ್ವಕವಾಗಿ ಕೃಷ್ಣನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಹೇಳಿದನು:

09061016c ಗೋವಿಂದ ಕಸ್ಮಾದ್ಭಗವನ್ರಥೋ ದಗ್ಧೋಽಯಮಗ್ನಿನಾ||

09061017a ಕಿಮೇತನ್ಮಹದಾಶ್ಚರ್ಯಮಭವದ್ಯದುನಂದನ|

09061017c ತನ್ಮೇ ಬ್ರೂಹಿ ಮಹಾಬಾಹೋ ಶ್ರೋತವ್ಯಂ ಯದಿ ಮನ್ಯಸೇ||

“ಗೋವಿಂದ! ಭಗವನ್! ಈ ರಥವು ಹೇಗೆ ಬೆಂಕಿಹತ್ತಿ ಭಸ್ಮವಾಗಿಹೋಯಿತು? ಯದುನಂದನ! ಈ ಮಹದಾಶ್ಚರ್ಯವು ಹೇಗೆ ನಡೆಯಿತು? ಮಹಾಬಾಹೋ! ಇದನ್ನು ನಾನು ಕೇಳಬಹುದೆಂದು ನಿನಗನ್ನಿಸಿದರೆ ನನಗೆ ಹೇಳು!”

09061018 ವಾಸುದೇವ ಉವಾಚ

09061018a ಅಸ್ತ್ರೈರ್ಬಹುವಿಧೈರ್ದಗ್ಧಃ ಪೂರ್ವಮೇವಾಯಮರ್ಜುನ|

09061018c ಮದಧಿಷ್ಠಿತತ್ವಾತ್ಸಮರೇ ನ ವಿಶೀರ್ಣಃ ಪರಂತಪ||

ವಾಸುದೇವನು ಹೇಳಿದನು: “ಅರ್ಜುನ! ಪರಂತಪ! ಇದರ ಮೊದಲೇ ಇದು ಅನೇಕ ವಿಧದ ಅಸ್ತ್ರಗಳಿಂದ ಸುಡಲ್ಪಟ್ಟಿತ್ತು. ಆದರೆ ಸಮರದಲ್ಲಿ ನಾನು ಕುಳಿತುಕೊಂಡಿದ್ದುದರಿಂದ ಅದು ಭಸ್ಮವಾಗಿರಲಿಲ್ಲ.

09061019a ಇದಾನೀಂ ತು ವಿಶೀರ್ಣೋಽಯಂ ದಗ್ಧೋ ಬ್ರಹ್ಮಾಸ್ತ್ರತೇಜಸಾ|

09061019c ಮಯಾ ವಿಮುಕ್ತಃ ಕೌಂತೇಯ ತ್ವಯ್ಯದ್ಯ ಕೃತಕರ್ಮಣಿ||

ಕೌಂತೇಯ! ನೀನು ಕೃತಕೃತ್ಯನಾದುದರಿಂದ ಇಂದು ಇದನ್ನು ನಾನು ವಿಮುಕ್ತಗೊಳಿಸಿದ್ದೇನೆ. ಬ್ರಹ್ಮಾಸ್ತ್ರದಿಂದ ಮೊದಲೇ ಸುಟ್ಟುಹೋಗಿದ್ದ ಇದು ಈಗ ಭಸ್ಮೀಭೂತವಾಯಿತು!””

09061020 ಸಂಜಯ ಉವಾಚ

09061020a ಈಷದುತ್ಸ್ಮಯಮಾನಶ್ಚ ಭಗವಾನ್ಕೇಶವೋಽರಿಹಾ|

09061020c ಪರಿಷ್ವಜ್ಯ ಚ ರಾಜಾನಂ ಯುಧಿಷ್ಠಿರಮಭಾಷತ||

ಸಂಜಯನು ಹೇಳಿದನು: “ಬಳಿಕ ಭಗವಾನ್ ಅರಿಹಂತಕ ಕೇಶವನು ಮುಗುಳ್ನಗುತ್ತಾ ರಾಜ ಯುಧಿಷ್ಠಿರನನ್ನು ಆಲಂಗಿಸಿ ಹೇಳಿದನು:

09061021a ದಿಷ್ಟ್ಯಾ ಜಯಸಿ ಕೌಂತೇಯ ದಿಷ್ಟ್ಯಾ ತೇ ಶತ್ರವೋ ಜಿತಾಃ|

09061021c ದಿಷ್ಟ್ಯಾ ಗಾಂಡೀವಧನ್ವಾ ಚ ಭೀಮಸೇನಶ್ಚ ಪಾಂಡವಃ||

09061022a ತ್ವಂ ಚಾಪಿ ಕುಶಲೀ ರಾಜನ್ಮಾದ್ರೀಪುತ್ರೌ ಚ ಪಾಂಡವೌ|

09061022c ಮುಕ್ತಾ ವೀರಕ್ಷಯಾದಸ್ಮಾತ್ಸಂಗ್ರಾಮಾನ್ನಿಹತದ್ವಿಷಃ||

“ಕೌಂತೇಯ! ದೈವವಶಾತ್ ನೀನು ವಿಜಯಿಯಾಗಿರುವೆ! ದೈವವಶದಿಂದ ನಿನ್ನ ಶತ್ರುಗಳು ಸೋತಿದ್ದಾರೆ! ರಾಜನ್! ದೈವವಶದಿಂದ ಗಾಂಡೀವಧನ್ವಿ, ಪಾಂಡವ ಭೀಮಸೇನ, ನೀನು ಮತ್ತು ಪಾಂಡವ ಮಾದ್ರೀಪುತ್ರರೀರ್ವರೂ ಕುಶಲಿಗಳಾಗಿರುವಿರಿ! ವೀರರಿಗೆ ಕ್ಷಯಕಾರಕವಾಗಿದ್ದ ಈ ಸಂಗ್ರಾಮದಲ್ಲಿ ದ್ವೇಷಿಗಳನ್ನು ಸಂಹರಿಸಿ ಮುಕ್ತರಾಗಿರುವಿರಿ!

09061022e ಕ್ಷಿಪ್ರಮುತ್ತರಕಾಲಾನಿ ಕುರು ಕಾರ್ಯಾಣಿ ಭಾರತ||

09061023a ಉಪಯಾತಮುಪಪ್ಲವ್ಯಂ ಸಹ ಗಾಂಡೀವಧನ್ವನಾ|

09061023c ಆನೀಯ ಮಧುಪರ್ಕಂ ಮಾಂ ಯತ್ಪುರಾ ತ್ವಮವೋಚಥಾಃ||

ಭಾರತ! ಮುಂದೆಮಾಡಬೇಕಾದ ಕಾರ್ಯಗಳನ್ನು ಶೀಘ್ರವಾಗಿ ಮಾಡು! ಹಿಂದೆ ಗಾಂಡೀವಧನ್ವಿಯೊಂದಿಗೆ ನಾನು ಉಪಪ್ಲವ್ಯಕ್ಕೆ ಬಂದಿದ್ದಾಗ ಮಧುಪರ್ಕವನ್ನಿತ್ತು ನೀನು ನನಗೆ ಹೀಗೆ ಹೇಳಿದ್ದೆಯಲ್ಲವೇ?

09061024a ಏಷ ಭ್ರಾತಾ ಸಖಾ ಚೈವ ತವ ಕೃಷ್ಣ ಧನಂಜಯಃ|

09061024c ರಕ್ಷಿತವ್ಯೋ ಮಹಾಬಾಹೋ ಸರ್ವಾಸ್ವಾಪತ್ಸ್ವಿತಿ ಪ್ರಭೋ||

“ಕೃಷ್ಣ! ಮಹಾಬಾಹೋ! ಪ್ರಭೋ! ಈ ಭ್ರಾತಾ ಧನಂಜಯನು ನಿನ್ನ ಸಖನೂ ಹೌದು. ಸರ್ವ ಆಪತ್ತುಗಳಿಂದ ಇವನನ್ನು ರಕ್ಷಿಸಬೇಕು!” ಎಂದು.

09061024e ತವ ಚೈವಂ ಬ್ರುವಾಣಸ್ಯ ತಥೇತ್ಯೇವಾಹಮಬ್ರುವಂ||

09061025a ಸ ಸವ್ಯಸಾಚೀ ಗುಪ್ತಸ್ತೇ ವಿಜಯೀ ಚ ನರೇಶ್ವರ|

09061025c ಭ್ರಾತೃಭಿಃ ಸಹ ರಾಜೇಂದ್ರ ಶೂರಃ ಸತ್ಯಪರಾಕ್ರಮಃ||

09061025e ಮುಕ್ತೋ ವೀರಕ್ಷಯಾದಸ್ಮಾತ್ಸಂಗ್ರಾಮಾದ್ರೋಮಹರ್ಷಣಾತ್|

ನಿನ್ನ ಮಾತಿಗೆ ಹಾಗೆಯೇ ಆಗಲೆಂದೂ ನಾನು ನಿನಗೆ ಹೇಳಿದ್ದೆ. ನರೇಶ್ವರ! ರಾಜೇಂದ್ರ! ಈ ಶೂರ ಸತ್ಯಪರಾಕ್ರಮಿ ಸವ್ಯಸಾಚಿಯು ಸಹೋದರರೊಂದಿಗೆ ವಿಜಯಿಯೂ ಸುರಕ್ಷಿತನೂ ಆಗಿದ್ದಾನೆ ಮತ್ತು ಈ ರೋಮಾಂಚಕಾರೀ ವೀರಕ್ಷಯ ಸಂಗ್ರಾಮದಿಂದ ಮುಕ್ತನಾಗಿದ್ದಾನೆ.”

09061026a ಏವಮುಕ್ತಸ್ತು ಕೃಷ್ಣೇನ ಧರ್ಮರಾಜೋ ಯುಧಿಷ್ಠಿರಃ|

09061026c ಹೃಷ್ಟರೋಮಾ ಮಹಾರಾಜ ಪ್ರತ್ಯುವಾಚ ಜನಾರ್ದನಂ||

ಮಹಾರಾಜ! ಕೃಷ್ಣನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ರೋಮರೋಮಗಳಲ್ಲಿಯೂ ಹರ್ಷತುಂದಿಲನಾಗಿ ಜನಾರ್ದನನಿಗೆ ಉತ್ತರಿಸಿದನು:

09061027a ಪ್ರಮುಕ್ತಂ ದ್ರೋಣಕರ್ಣಾಭ್ಯಾಂ ಬ್ರಹ್ಮಾಸ್ತ್ರಮರಿಮರ್ದನ|

09061027c ಕಸ್ತ್ವದನ್ಯಃ ಸಹೇತ್ಸಾಕ್ಷಾದಪಿ ವಜ್ರೀ ಪುರಂದರಃ||

“ಅರಿಮರ್ದನ! ದ್ರೋಣ-ಕರ್ಣರ ಬ್ರಹ್ಮಾಸ್ತ್ರಗಳನ್ನು ನೀನಲ್ಲದೇ ಬೇರೆ ಯಾರೂ ಸಾಕ್ಷಾತ್ ವಜ್ರೀ ಪುರಂದರನೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ!

09061028a ಭವತಸ್ತು ಪ್ರಸಾದೇನ ಸಂಗ್ರಾಮೇ ಬಹವೋ ಜಿತಾಃ|

09061028c ಮಹಾರಣಗತಃ ಪಾರ್ಥೋ ಯಚ್ಚ ನಾಸೀತ್ಪರಾಙ್ಮುಖಃ||

ನಿನ್ನ ಪ್ರಸಾದದಿಂದ ಸಂಗ್ರಾಮದಲ್ಲಿ ಅನೇಕರನ್ನು ನಾವು ಜಯಿಸಿದೆವು ಮತ್ತು ಮಹಾರಣವನ್ನು ಹೊಕ್ಕಿದ ಪಾರ್ಥನು ಎಂದೂ ಪಾರಾಙ್ಮುಖನಾಗಲಿಲ್ಲ!

09061029a ತಥೈವ ಚ ಮಹಾಬಾಹೋ ಪರ್ಯಾಯೈರ್ಬಹುಭಿರ್ಮಯಾ|

09061029c ಕರ್ಮಣಾಮನುಸಂತಾನಂ ತೇಜಸಶ್ಚ ಗತಿಃ ಶುಭಾ||

ಮಹಾಬಾಹೋ! ಹಾಗೆಯೇ ನಿನ್ನ ಶುಭ ತೇಜಸ್ಸಿನ ಗತಿಯಿಂದಾಗಿ ನಾನು ಅನೇಕ ಕರ್ಮಗಳ ಶುಭಫಲಗಳನ್ನು ಮತ್ತೆ ಮತ್ತೆ ಪಡೆಯುತ್ತಿದ್ದೇನೆ.

09061030a ಉಪಪ್ಲವ್ಯೇ ಮಹರ್ಷಿರ್ಮೇ ಕೃಷ್ಣದ್ವೈಪಾಯನೋಽಬ್ರವೀತ್|

09061030c ಯತೋ ಧರ್ಮಸ್ತತಃ ಕೃಷ್ಣೋ ಯತಃ ಕೃಷ್ಣಸ್ತತೋ ಜಯಃ||

ಉಪಪ್ಲವ್ಯದಲ್ಲಿ ನನಗೆ ಮಹರ್ಷಿ ಕೃಷ್ಣದ್ವೈಪಾಯನನು “ಧರ್ಮವೆಲ್ಲಿರುವುದೋ ಅಲ್ಲಿ ಕೃಷ್ಣನಿರುವನು ಮತ್ತು ಎಲ್ಲಿ ಕೃಷ್ಣನಿರುವನೋ ಅಲ್ಲಿ ಜಯವಿದೆ!” ಎಂದು ಹೇಳಿದ್ದನು.”

09061031a ಇತ್ಯೇವಮುಕ್ತೇ ತೇ ವೀರಾಃ ಶಿಬಿರಂ ತವ ಭಾರತ|

09061031c ಪ್ರವಿಶ್ಯ ಪ್ರತ್ಯಪದ್ಯಂತ ಕೋಶರತ್ನರ್ದ್ಧಿಸಂಚಯಾನ್||

ಭಾರತ! ಹೀಗೆ ಮಾತನಾಡಿಕೊಳ್ಳುತ್ತಾ ಆ ವೀರರು ನಿನ್ನ ಶಿಬಿರವನ್ನು ಪ್ರವೇಶಿಸಿದರು. ಪ್ರವೇಶಿಸಿ ಕೋಶಗಳನ್ನೂ ರತ್ನಸಂಚಯಗಳನ್ನೂ ತಮ್ಮದಾಗಿಸಿಕೊಂಡರು.

09061032a ರಜತಂ ಜಾತರೂಪಂ ಚ ಮಣೀನಥ ಚ ಮೌಕ್ತಿಕಾನ್|

09061032c ಭೂಷಣಾನ್ಯಥ ಮುಖ್ಯಾನಿ ಕಂಬಲಾನ್ಯಜಿನಾನಿ ಚ||

09061032e ದಾಸೀದಾಸಮಸಂಖ್ಯೇಯಂ ರಾಜ್ಯೋಪಕರಣಾನಿ ಚ

09061033a ತೇ ಪ್ರಾಪ್ಯ ಧನಮಕ್ಷಯ್ಯಂ ತ್ವದೀಯಂ ಭರತರ್ಷಭ|

09061033c ಉದಕ್ರೋಶನ್ಮಹೇಷ್ವಾಸಾ ನರೇಂದ್ರ ವಿಜಿತಾರಯಃ||

ಭರತರ್ಷಭ! ನರೇಂದ್ರ! ಅಲ್ಲಿದ್ದ ನಿನ್ನ ಬೆಳ್ಳಿ, ಬಂಗಾರ, ಮಣಿ-ಮೌಕ್ತಿಕಗಳು, ಆಭೂಷಣಗಳು, ಮುಖ್ಯ ಕಂಬಳಿ ಮತ್ತು ಜಿನಗಳು, ಅಸಂಖ್ಯ ದಾಸೀ-ದಾಸರು, ರಾಜ್ಯೋಪಕರಣಗಳು, ಮತ್ತು ಅಕ್ಷಯ ಧನವನ್ನು ಪಡೆದು ಆ ಮಹೇಷ್ವಾಸರು ಹರ್ಷೋದ್ಗಾರಗೈದರು.

09061034a ತೇ ತು ವೀರಾಃ ಸಮಾಶ್ವಸ್ಯ ವಾಹನಾನ್ಯವಮುಚ್ಯ ಚ|

09061034c ಅತಿಷ್ಠಂತ ಮುಹುಃ ಸರ್ವೇ ಪಾಂಡವಾಃ ಸಾತ್ಯಕಿಸ್ತಥಾ||

ಆ ವೀರ ಪಾಂಡವರೆಲ್ಲರೂ ಸಾತ್ಯಕಿಯೊಂದಿಗೆ ರಥಗಳಿಂದ ಕುದುರೆಗಳನ್ನು ಬಿಚ್ಚಿ ಅವುಗಳನ್ನು ಸಂತೈಸಿ ಒಂದೆಡೆ ಕುಳಿತುಕೊಂಡರು.

09061035a ಅಥಾಬ್ರವೀನ್ಮಹಾರಾಜ ವಾಸುದೇವೋ ಮಹಾಯಶಾಃ|

09061035c ಅಸ್ಮಾಭಿರ್ಮಂಗಲಾರ್ಥಾಯ ವಸ್ತವ್ಯಂ ಶಿಬಿರಾದ್ಬಹಿಃ||

ಮಹಾರಾಜ! ಆಗ ಮಹಾಯಶಸ್ವಿ ವಾಸುದೇವನು “ನಮ್ಮ ಮಂಗಲಾರ್ಥವಾಗಿ ನಾವು ಶಿಬಿರದ ಹೊರಗೆ ರಾತ್ರಿಯನ್ನು ಕಳೆಯಬೇಕು!” ಎಂದನು.

09061036a ತಥೇತ್ಯುಕ್ತ್ವಾ ಚ ತೇ ಸರ್ವೇ ಪಾಂಡವಾಃ ಸಾತ್ಯಕಿಸ್ತಥಾ|

09061036c ವಾಸುದೇವೇನ ಸಹಿತಾ ಮಂಗಲಾರ್ಥಂ ಯಯುರ್ಬಹಿಃ||

ಹಾಗೆಯೇ ಆಗಲೆಂದು ಹೇಳಿ ಸಾತ್ಯಕಿಯೊಡನೆ ಸರ್ವ ಪಾಂಡವರೂ ವಾಸುದೇವನ ಸಹಿತ ಮಂಗಲಾರ್ಥವಾಗಿ ಶಿಬಿರದಿಂದ ಹೊರ ಬಂದರು.

09061037a ತೇ ಸಮಾಸಾದ್ಯ ಸರಿತಂ ಪುಣ್ಯಾಮೋಘವತೀಂ ನೃಪ|

09061037c ನ್ಯವಸನ್ನಥ ತಾಂ ರಾತ್ರಿಂ ಪಾಂಡವಾ ಹತಶತ್ರವಃ||

ನೃಪ! ಶತ್ರುಗಳನ್ನು ಸಂಹರಿಸಿದ್ದ ಪಾಂಡವರು ಪುಣ್ಯ ಓಘವತೀ ನದಿಯನ್ನು ತಲುಪಿ ಅದರ ದಡದಲ್ಲಿ ಆ ರಾತ್ರಿಯನ್ನು ಕಳೆಯಲು ತಂಗಿದರು.

09061038a ತತಃ ಸಂಪ್ರೇಷಯಾಮಾಸುರ್ಯಾದವಂ ನಾಗಸಾಹ್ವಯಂ|

09061038c ಸ ಚ ಪ್ರಾಯಾಜ್ಜವೇನಾಶು ವಾಸುದೇವಃ ಪ್ರತಾಪವಾನ್||

09061038e ದಾರುಕಂ ರಥಮಾರೋಪ್ಯ ಯೇನ ರಾಜಾಂಬಿಕಾಸುತಃ||

ಆಗ ಯಾದವನನ್ನು ಹಸ್ತಿನಾಪುರಕ್ಕೆ ಕಳುಹಿಸಲಾಯಿತು. ಪ್ರತಾಪವಾನ್ ವಾಸುದೇವನು ಶೀಘ್ರವಾಗಿ ದಾರುಕನೊಡನೆ ರಥವನ್ನೇರಿ ರಾಜಾ ಅಂಬಿಕಾಸುತನಿದ್ದಲ್ಲಿಗೆ ಹೊರಟನು.

09061039a ತಮೂಚುಃ ಸಂಪ್ರಯಾಸ್ಯಂತಂ ಸೈನ್ಯಸುಗ್ರೀವವಾಹನಂ|

09061039c ಪ್ರತ್ಯಾಶ್ವಾಸಯ ಗಾಂಧಾರೀಂ ಹತಪುತ್ರಾಂ ಯಶಸ್ವಿನೀಂ||

ಸೈನ್ಯಸುಗ್ರೀವರನ್ನು ಕಟ್ಟಿದ್ದ ರಥದಲ್ಲಿ ಹೊರಟಿದ್ದ ಅವನಿಗೆ “ಪುತ್ರರನ್ನು ಕಳೆದುಕೊಂಡ ಯಶಸ್ವಿನೀ ಗಾಂಧಾರಿಯನ್ನು ಸಮಾಧಾನಗೊಳಿಸು! ಎಂದು ಪಾಂಡವರು ಕೇಳಿಕೊಂಡರು.

09061040a ಸ ಪ್ರಾಯಾತ್ಪಾಂಡವೈರುಕ್ತಸ್ತತ್ಪುರಂ ಸಾತ್ವತಾಂ ವರಃ|

09061040c ಆಸಸಾದಯಿಷುಃ ಕ್ಷಿಪ್ರಂ ಗಾಂಧಾರೀಂ ನಿಹತಾತ್ಮಜಾಂ||

ಪಾಂಡವರಿಂದ ಆ ಸಲಹೆಯನ್ನು ಪಡೆದು ಸಾತ್ವತ ಶ್ರೇಷ್ಠ ಕೃಷ್ಣನು ಬಹಳಬೇಗ ಹತಪುತ್ರಳಾಗಿದ್ದ ಗಾಂಧಾರಿಯ ಬಳಿ ಬಂದನು.””

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ವಾಸುದೇವಪ್ರೇಷಣೇ ಏಕಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ವಾಸುದೇವಪ್ರೇಷಣ ಎನ್ನುವ ಅರವತ್ತೊಂದನೇ ಅಧ್ಯಾಯವು.

Comments are closed.