Sauptika Parva: Chapter 6

ಸೌಪ್ತಿಕಪರ್ವ

ಪಾಂಡವರ ಶಿಬಿರದ ದ್ವಾರದಲ್ಲಿ ಮಹಾಪುರುಷನೋರ್ವನನ್ನು ಕಂಡ ಅಶ್ವತ್ಥಾಮನು ಅವನ ಮೇಲೆ ತನ್ನ ಎಲ್ಲ ಆಯುಧಗಳನ್ನೂ ಪ್ರಹರಿಸಲು ಅವೆಲ್ಲವೂ ನಿಷ್ಪ್ರಯೋಜಕವಾದ ಅದ್ಭುತವನ್ನು ಎದುರಿಸಿದುದು (೧-೧೭). ಅಶ್ವತ್ಥಾಮನು ಮಹಾದೇವನನ್ನು ಶರಣುಹೋಗಲು ಯೋಚಿಸಿದುದು (೧೮-೩೪).

10006001 ಧೃತರಾಷ್ಟ್ರ ಉವಾಚ|

10006001a ದ್ವಾರದೇಶೇ ತತೋ ದ್ರೌಣಿಮವಸ್ಥಿತಮವೇಕ್ಷ್ಯ ತೌ|

10006001c ಅಕುರ್ವತಾಂ ಭೋಜಕೃಪೌ ಕಿಂ ಸಂಜಯ ವದಸ್ವ ಮೇ||

ಧೃತರಾಷ್ಟ್ರನು ಹೇಳಿದನು: “ಆಗ ದ್ವಾರಪ್ರದೇಶದಲ್ಲಿ ನಿಂತಿರುವ ದ್ರೌಣಿಯನ್ನು ನೋಡಿ ಭೋಜ ಮತ್ತು ಕೃಪರು ಏನು ಮಾಡಿದರು ಎನ್ನುವುದನ್ನು ನನಗೆ ಹೇಳು!”

10006002 ಸಂಜಯ ಉವಾಚ|

10006002a ಕೃತವರ್ಮಾಣಮಾಮಂತ್ರ್ಯ ಕೃಪಂ ಚ ಸ ಮಹಾರಥಂ|

10006002c ದ್ರೌಣಿರ್ಮನ್ಯುಪರೀತಾತ್ಮಾ ಶಿಬಿರದ್ವಾರಮಾಸದತ್||

ಸಂಜಯನು ಹೇಳಿದನು: “ಕೃತವರ್ಮನನ್ನೂ ಮತ್ತು ಮಹಾರಥ ಕೃಪನನ್ನೂ ಬರಹೇಳಿ ಕೋಪದಿಂದ ಪರೀತಾತ್ಮ ದ್ರೌಣಿಯು ಶಿಬಿರದ ದ್ವಾರವನ್ನು ತಲುಪಿದನು.

10006003a ತತ್ರ ಭೂತಂ ಮಹಾಕಾಯಂ ಚಂದ್ರಾರ್ಕಸದೃಶದ್ಯುತಿಂ|

10006003c ಸೋಽಪಶ್ಯದ್ದ್ವಾರಮಾವೃತ್ಯ ತಿಷ್ಠಂತಂ ಲೋಮಹರ್ಷಣ||

ಅಲ್ಲಿ ಅವನು ದ್ವಾರವನ್ನು ಆವರಿಸಿ ನಿಂತಿರುವ ಚಂದ್ರ-ಸೂರ್ಯರ ಸಮಾನ ಬೆಳಗುತ್ತಿರುವ ಮೈನವಿರೇಳಿಸುವ ಮಹಾಕಾಯದ ಭೂತವೊಂದನ್ನು ನೋಡಿದನು.

10006004a ವಸಾನಂ ಚರ್ಮ ವೈಯಾಘ್ರಂ ಮಹಾರುಧಿರವಿಸ್ರವಂ|

10006004c ಕೃಷ್ಣಾಜಿನೋತ್ತರಾಸಂಗಂ ನಾಗಯಜ್ಞೋಪವೀತಿನಂ||

ಅವನು ಮಹಾರಕ್ತವನ್ನು ಸುರಿಸುತ್ತಿರುವ ವ್ಯಾಘ್ರಚರ್ಮವನ್ನು ಉಟ್ಟಿದ್ದನು. ಕೃಷ್ಣಾಜಿನವನ್ನೇ ಉತ್ತರೀಯವನ್ನಾಗಿ ಹೊದ್ದಿದ್ದನು. ಸರ್ಪವೇ ಅವನ ಯಜ್ಞೋಪವೀತವಾಗಿತ್ತು.

10006005a ಬಾಹುಭಿಃ ಸ್ವಾಯತೈಃ ಪೀನೈರ್ನಾನಾಪ್ರಹರಣೋದ್ಯತೈಃ|

10006005c ಬದ್ಧಾಂಗದಮಹಾಸರ್ಪಂ ಜ್ವಾಲಾಮಾಲಾಕುಲಾನನಂ||

ಅವನ ನೀಳ ದಪ್ಪ ಬಾಹುಗಳು ನಾನಾಪ್ರಕಾರದ ಆಯುಧಗಳನ್ನು ಎತ್ತಿ ಹಿಡಿದಿದ್ದವು. ಮಹಾಸರ್ಪಗಳೇ ಅವನ ತೋಳ್ಬಂದಿಗಳಾಗಿದ್ದವು. ಮುಖದ ಸುತ್ತಲೂ ಜ್ವಾಲೆಗಳ ಮಾಲೆಯಿದ್ದಿತು.

10006006a ದಂಷ್ಟ್ರಾಕರಾಲವದನಂ ವ್ಯಾದಿತಾಸ್ಯಂ ಭಯಾವಹಂ|

10006006c ನಯನಾನಾಂ ಸಹಸ್ರೈಶ್ಚ ವಿಚಿತ್ರೈರಭಿಭೂಷಿತಂ||

ಕೋರೆದಾಡೆಗಳಿಂದ ಕೂಡಿದ್ದ ಅವನ ಕರಾಳ ವದನದಲ್ಲಿನ ತೆರೆದ ಬಾಯಿಯು ಭಯವನ್ನುಂಟುಮಾಡುತ್ತಿತ್ತು. ಸಹಸ್ರಾರು ವಿಚಿತ್ರ ಕಣ್ಣುಗಳಿಂದ ವಿಭೂಷಿತನಾಗಿದ್ದನು.

10006007a ನೈವ ತಸ್ಯ ವಪುಃ ಶಕ್ಯಂ ಪ್ರವಕ್ತುಂ ವೇಷ ಏವ ವಾ|

10006007c ಸರ್ವಥಾ ತು ತದಾಲಕ್ಷ್ಯ ಸ್ಫುಟೇಯುರಪಿ ಪರ್ವತಾಃ||

ಅವನ ಶರೀರವನ್ನೂ ವೇಷವನ್ನೂ ವರ್ಣಿಸಲು ಯಾರಿಗೂ ಶಕ್ಯವಾಗದಂತಿತ್ತು. ಅವನನ್ನು ನೋಡಿ ಪರ್ವತಗಳು ಕೂಡ ಭಯದಿಂದ ಸ್ಪೋಟಗೊಳ್ಳುತ್ತಿದ್ದವು!

10006008a ತಸ್ಯಾಸ್ಯಾನ್ನಾಸಿಕಾಭ್ಯಾಂ ಚ ಶ್ರವಣಾಭ್ಯಾಂ ಚ ಸರ್ವಶಃ|

10006008c ತೇಭ್ಯಶ್ಚಾಕ್ಷಿಸಹಸ್ರೇಭ್ಯಃ ಪ್ರಾದುರಾಸನ್ಮಹಾರ್ಚಿಷಃ||

ಅವನ ಮೂಗಿನ ಹೊಳ್ಳೆಗಳಿಂದಲೂ, ಕಿವಿಗಳಿಂದಲೂ, ಸಹಸ್ರ ಕಣ್ಣುಗಳಿಂದಲೂ ಮತ್ತು ಎಲ್ಲೆಡೆಗಳಿಂದಲೂ ಮಹಾಜ್ವಾಲೆಗಳು ಹೊರಹೊಮ್ಮುತ್ತಿದ್ದವು.

10006009a ತಥಾ ತೇಜೋಮರೀಚಿಭ್ಯಃ ಶಂಖಚಕ್ರಗದಾಧರಾಃ|

10006009c ಪ್ರಾದುರಾಸನ್ ಹೃಷೀಕೇಶಾಃ ಶತಶೋಽಥ ಸಹಸ್ರಶಃ||

ಅವನ ತೇಜಸ್ಸಿನ ಕಿರಣಗಳಿಂದ ನೂರಾರು ಸಹಸ್ರಾರು ಶಂಖ-ಚಕ್ರ-ಗದೆಗಳನ್ನು ಧರಿಸಿದ್ದ ಹೃಷೀಕೇಶರು ಪ್ರಕಟವಾಗುತ್ತಿದ್ದರು.

10006010a ತದತ್ಯದ್ಭುತಮಾಲೋಕ್ಯ ಭೂತಂ ಲೋಕಭಯಂಕರಂ|

10006010c ದ್ರೌಣಿರವ್ಯಥಿತೋ ದಿವ್ಯೈರಸ್ತ್ರವರ್ಷೈರವಾಕಿರತ್||

ಲೋಕಭಯಂಕರನಾದ ಆ ಅದ್ಭುತ ಭೂತನನ್ನು ನೋಡಿದ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ದಿವ್ಯಾಸ್ತ್ರಗಳಿಂದ ಅವನನ್ನು ಮುಸುಕಿದನು.

10006011a ದ್ರೌಣಿಮುಕ್ತಾಂಶರಾಂಸ್ತಾಂಸ್ತು ತದ್ಭೂತಂ ಮಹದಗ್ರಸತ್|

10006011c ಉದಧೇರಿವ ವಾರ್ಯೋಘಾನ್ಪಾವಕೋ ವಡವಾಮುಖಃ||

ಸಮುದ್ರದಲ್ಲಿರುವ ವಡವಾಗ್ನಿಯು ಜಲರಾಶಿಗಳನ್ನೇ ಕುಡಿದುಬಿಡುವಂತೆ ದ್ರೌಣಿಯು ಪ್ರಯೋಗಿಸಿದ ಶರಗಳೆಲ್ಲವನ್ನೂ ಆ ಮಹಾಭೂತನು ನುಂಗಿಬಿಟ್ಟನು.

10006012a ಅಶ್ವತ್ಥಾಮಾ ತು ಸಂಪ್ರೇಕ್ಷ್ಯ ತಾನ್ ಶರೌಘಾನ್ನಿರರ್ಥಕಾನ್|

10006012c ರಥಶಕ್ತಿಂ ಮುಮೋಚಾಸ್ಮೈ ದೀಪ್ತಾಮಗ್ನಿಶಿಖಾಮಿವ||

ಆ ಶರಸಮೂಹಗಳು ನಿರರ್ಥಕವಾದುದನ್ನು ನೋಡಿದ ಅಶ್ವತ್ಥಾಮನು ಉರಿಯುತ್ತಿದ್ದ ಅಗ್ನಿಯ ಶಿಖೆಯಂತಿರುವ ರಥಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು.

10006013a ಸಾ ತದಾಹತ್ಯ ದೀಪ್ತಾಗ್ರಾ ರಥಶಕ್ತಿರಶೀರ್ಯತ|

10006013c ಯುಗಾಂತೇ ಸೂರ್ಯಮಾಹತ್ಯ ಮಹೋಲ್ಕೇವ ದಿವಶ್ಚ್ಯುತಾ||

ಯುಗಾಂತದಲ್ಲಿ ಸೂರ್ಯನನ್ನು ಅಪ್ಪಳಿಸಿ ನುಚ್ಚುನೂರಾಗಿ ಆಕಾಶದಿಂದ ಕೆಳಕ್ಕೆ ಬೀಳುವ ಮಹಾ ಉಲ್ಕೆಯಂತೆ ದೀಪ್ತಾಗ್ರದ ಆ ರಥಶಕ್ತಿಯು ಆ ಮಹಾಪುರುಷನಿಗೆ ಬಡಿದು ಸೀಳಿ ಕೆಳಗೆ ಬಿದ್ದಿತು.

10006014a ಅಥ ಹೇಮತ್ಸರುಂ ದಿವ್ಯಂ ಖಡ್ಗಮಾಕಾಶವರ್ಚಸಂ|

10006014c ಕೋಶಾತ್ಸಮುದ್ಬಬರ್ಹಾಶು ಬಿಲಾದ್ದೀಪ್ತಮಿವೋರಗಂ||

ಆಗ ಅಶ್ವತ್ಥಾಮನು ಬಂಗಾರದ ಹಿಡಿಯಿದ್ದ ಆಕಾಶದಂತೆ ಹೊಳೆಯುತ್ತಿದ್ದ ದಿವ್ಯ ಖಡ್ಗವನ್ನು ಬಿಲದಲ್ಲಿದ್ದ ಬೆಳಗುವ ಸರ್ಪವನ್ನು ಹೊರಕ್ಕೆಳೆಯುವಂತೆ ಒರೆಯಿಂದ ಹೊರತೆಗೆದನು.

10006015a ತತಃ ಖಡ್ಗವರಂ ಧೀಮಾನ್ಭೂತಾಯ ಪ್ರಾಹಿಣೋತ್ತದಾ|

10006015c ಸ ತದಾಸಾದ್ಯ ಭೂತಂ ವೈ ವಿಲಯಂ ತೂಲವದ್ಯಯೌ||

ಆ ಧೀಮಂತನು ಶ್ರೇಷ್ಠ ಖಡ್ಗವನ್ನು ಮಹಾಪುರುಷನ ಮೇಲೆ ರಭಸದಿಂದ ಎಸೆಯಲು ಅದು ಮುಂಗುಸಿಯು ಬಿಲವನ್ನು ಸೇರುವಂತೆ ಆ ಮಹಾಪುರುಷನಲ್ಲಿ ಲೀನವಾಯಿತು.

10006016a ತತಃ ಸ ಕುಪಿತೋ ದ್ರೌಣಿರಿಂದ್ರಕೇತುನಿಭಾಂ ಗದಾಂ|

10006016c ಜ್ವಲಂತೀಂ ಪ್ರಾಹಿಣೋತ್ತಸ್ಮೈ ಭೂತಂ ತಾಮಪಿ ಚಾಗ್ರಸತ್||

ಆಗ ಕುಪಿತ ದ್ರೌಣಿಯು ಇಂದ್ರನ ಧ್ವಜದಂತೆ ಪ್ರಜ್ವಲಿಸುತ್ತಿದ್ದ ಗದೆಯನ್ನು ಅವನ ಮೇಲೆ ಎಸೆಯಲು, ಅದನ್ನೂ ಕೂಡ ಆ ಮಹಾಭೂತನು ನುಂಗಿಬಿಟ್ಟನು.

10006017a ತತಃ ಸರ್ವಾಯುಧಾಭಾವೇ ವೀಕ್ಷಮಾಣಸ್ತತಸ್ತತಃ|

10006017c ಅಪಶ್ಯತ್ಕೃತಮಾಕಾಶಮನಾಕಾಶಂ ಜನಾರ್ದನೈಃ||

ಆಯುಧಗಳೆಲ್ಲವೂ ಮುಗಿದು ಹೋಗಿ ದಿಕ್ಕುಕಾಣದೇ ಅತ್ತಿತ್ತ ಹುಡುಕುತ್ತಿರುವಾಗ ಅಶ್ವತ್ಥಾಮನು ಅಸಂಖ್ಯಾತ ಜನಾರ್ದನರಿಂದ ಆಕಾಶವು ತುಂಬಿಹೋಗಿರುವುದನ್ನು ನೋಡಿದನು.

10006018a ತದದ್ಭುತತಮಂ ದೃಷ್ಟ್ವಾ ದ್ರೋಣಪುತ್ರೋ ನಿರಾಯುಧಃ|

10006018c ಅಬ್ರವೀದಭಿಸಂತಪ್ತಃ ಕೃಪವಾಕ್ಯಮನುಸ್ಮರನ್||

ಆ ಮಹಾ ಅದ್ಭುತವನ್ನು ನೋಡಿ, ನಿರಾಯುಧನಾಗಿದ್ದ ದ್ರೋಣಪುತ್ರನು ಪರಿತಪಿಸುತ್ತಾ ಕೃಪನು ಹೇಳಿದ್ದ ಮಾತನ್ನು ನೆನಪಿಸಿಕೊಂಡು ತನ್ನಲ್ಲಿಯೇ ಹೀಗೆ ಹೇಳಿಕೊಂಡನು:

10006019a ಬ್ರುವತಾಮಪ್ರಿಯಂ ಪಥ್ಯಂ ಸುಹೃದಾಂ ನ ಶೃಣೋತಿ ಯಃ|

10006019c ಸ ಶೋಚತ್ಯಾಪದಂ ಪ್ರಾಪ್ಯ ಯಥಾಹಮತಿವರ್ತ್ಯ ತೌ||

“ಅಪ್ರಿಯವಾದರೂ ಹಿತವಾದುದನ್ನು ಹೇಳುವ ಸುಹೃದಯರನ್ನು ಕೇಳದವನು ಕೃಪ-ಕೃತವರ್ಮರನ್ನು ಮೀರಿ ನಡೆದ ನನ್ನಂತೆ ಕಷ್ಟವನ್ನು ಹೊಂದಿ ಪಶ್ಚಾತ್ತಾಪ ಪಡುತ್ತಾನೆ!

10006020a ಶಾಸ್ತ್ರದೃಷ್ಟಾನವಧ್ಯಾನ್ಯಃ ಸಮತೀತ್ಯ ಜಿಘಾಂಸತಿ|

10006020c ಸ ಪಥಃ ಪ್ರಚ್ಯುತೋ ಧರ್ಮ್ಯಾತ್ಕುಪಥಂ ಪ್ರತಿಪದ್ಯತೇ||

ಶಾಸ್ತ್ರಗಳು ಕಂಡು ಹೇಳಿರುವುದನ್ನು ಮೀರಿ ಅವಧ್ಯರನ್ನು ಸಂಹರಿಸಲು ಹೊರಟವನು ಧರ್ಮಮಾರ್ಗದಿಂದ ಭ್ರಷ್ಟನಾಗಿ ಕೆಟ್ಟಮಾರ್ಗದಲ್ಲಿಯೇ ಹೋಗಿ ನಾಶಹೊಂದುತ್ತಾನೆ!

10006021a ಗೋಬ್ರಾಹ್ಮಣನೃಪಸ್ತ್ರೀಷು ಸಖ್ಯುರ್ಮಾತುರ್ಗುರೋಸ್ತಥಾ|

10006021c ವೃದ್ಧಬಾಲಜಡಾಂಧೇಷು ಸುಪ್ತಭೀತೋತ್ಥಿತೇಷು ಚ||

10006022a ಮತ್ತೋನ್ಮತ್ತಪ್ರಮತ್ತೇಷು ನ ಶಸ್ತ್ರಾಣ್ಯುಪಧಾರಯೇತ್|

10006022c ಇತ್ಯೇವಂ ಗುರುಭಿಃ ಪೂರ್ವಮುಪದಿಷ್ಟಂ ನೃಣಾಂ ಸದಾ||

ಗೋವು, ಬ್ರಾಹ್ಮಣ, ನೃಪ, ಸ್ತ್ರೀ, ಸಖ, ತಾಯಿ, ಗುರು, ವೃದ್ಧ, ಬಾಲಕ, ಜಡ, ಅಂಧ, ಮಲಗಿರುವವನು, ಹೆದರಿದವನು, ಹಾಸಿಗೆಯಿಂದ ಮೇಲೆದ್ದವನು, ಉನ್ಮತ್ತನಾದವನು, ಮತ್ತು ಹುಚ್ಚ ಇವರ ಮೇಲೆ ಎಂದೂ ಶಸ್ತ್ರಗಳನ್ನು ಎತ್ತಿ ಪ್ರಹರಿಸಕೂಡದೆಂದು ಗುರುಗಳು ಈ ಮೊದಲೇ ಮನುಷ್ಯರಿಗೆ ಉಪದೇಶಿಸಿದ್ದಾರೆ.

10006023a ಸೋಽಹಮುತ್ಕ್ರಮ್ಯ ಪಂಥಾನಂ ಶಾಸ್ತ್ರದೃಷ್ಟಂ ಸನಾತನಂ|

10006023c ಅಮಾರ್ಗೇಣೈವಮಾರಭ್ಯ ಘೋರಾಮಾಪದಮಾಗತಃ||

ಶಾಸ್ತ್ರವು ತೋರಿಸಿಕೊಟ್ಟ ಸನಾತನ ಮಾರ್ಗವನ್ನು ಉಲ್ಲಂಘಿಸಿ ಕೆಟ್ಟ ಮಾರ್ಗವನ್ನು ಹಿಡಿದು ಮಾಡಬಾರದುದನ್ನು ಮಾಡಲು ಪ್ರಾರಂಭಿಸಿ ನಾನು ಇಂತಹ ಘೋರ ಆಪತ್ತಿಗೆ ಒಳಗಾಗಿದ್ದೇನೆ.

10006024a ತಾಂ ಚಾಪದಂ ಘೋರತರಾಂ ಪ್ರವದಂತಿ ಮನೀಷಿಣಃ|

10006024c ಯದುದ್ಯಮ್ಯ ಮಹತಕೃತ್ಯಂ ಭಯಾದಪಿ ನಿವರ್ತತೇ||

10006025a ಅಶಕ್ಯಂ ಚೈವ ಕಃ ಕರ್ತುಂ ಶಕ್ತಃ ಶಕ್ತಿಬಲಾದಿಹ|

ಮಹಾಕಾರ್ಯವನ್ನು ಮಾಡಲು ಹೋಗಿ ಭಯದಿಂದ ಅಥವಾ ಶಕ್ತಿ-ಬಲಗಳಿಲ್ಲದೇ ಅಶಕ್ಯನಾಗಿ ಹಿಂದಿರುಗುವುದು ಘೋರತರ ಆಪತ್ತೆಂದು ತಿಳಿದವರು ಹೇಳುತ್ತಾರೆ.

10006025c ನ ಹಿ ದೈವಾದ್ಗರೀಯೋ ವೈ ಮಾನುಷಂ ಕರ್ಮ ಕಥ್ಯತೇ||

10006026a ಮಾನುಷಂ ಕುರ್ವತಃ ಕರ್ಮ ಯದಿ ದೈವಾನ್ನ ಸಿಧ್ಯತಿ|

10006026c ಸ ಪಥಃ ಪ್ರಚ್ಯುತೋ ಧರ್ಮ್ಯಾದ್ ವಿಪದಂ ಪ್ರತಿಪದ್ಯತೇ||

ಮನುಷ್ಯಪ್ರಯತ್ನವು ದೈವಸಂಕಲ್ಪಕ್ಕಿಂತಲೂ ಹೆಚ್ಚಿನದಲ್ಲವೆಂದೂ ಹೇಳುತ್ತಾರೆ. ಮನುಷ್ಯನು ಮಾಡುವ ಕರ್ಮವು ಒಂದು ವೇಳೆ ದೈವಬಲದಿಂದ ಸಿದ್ಧಿಸದಿದ್ದರೆ ಅವನು ಧರ್ಮಮಾರ್ಗವನ್ನು ಬಿಟ್ಟು ಹೋದುದಕ್ಕಾಗಿ ವಿಪತ್ತನ್ನು ಎದುರಿಸಬೇಕಾಗುತ್ತದೆ.

10006027a ಪ್ರತಿಘಾತಂ ಹ್ಯವಿಜ್ಞಾತಂ ಪ್ರವದಂತಿ ಮನೀಷಿಣಃ|

10006027c ಯದಾರಭ್ಯ ಕ್ರಿಯಾಂ ಕಾಂ ಚಿದ್ಭಯಾದಿಹ ನಿವರ್ತತೇ||

ಭಯದ ಕಾರಣದಿಂದಾಗಿ ಆರಂಭಿಸಿದ ಕಾರ್ಯದಿಂದ ಹಿಂದೆ ಸರಿದರೆ ಆ ಪ್ರತಿಜ್ಞೆಯು ಅಜ್ಞಾನದಿಂದ ಮಾಡಿದುದು ಎಂದು ತಿಳಿದವರು ಹೇಳುತ್ತಾರೆ.

10006028a ತದಿದಂ ದುಷ್ಪ್ರಣೀತೇನ ಭಯಂ ಮಾಂ ಸಮುಪಸ್ಥಿತಂ|

10006028c ನ ಹಿ ದ್ರೋಣಸುತಃ ಸಂಖ್ಯೇ ನಿವರ್ತೇತ ಕಥಂ ಚನ||

ಕೆಟ್ಟ ಕಾರ್ಯವನ್ನು ಮಾಡಲು ಹೊರಟಿರುವುದರಿಂದಲೇ ನನಗೆ ಈ ಭಯವು ಆವರಿಸಿದೆ. ಆದರೆ ಈ ದ್ರೋಣ ಸುತನು ಎಂದೂ ಯುದ್ಧದಿಂದ ಹಿಂದಿರುಗುವವನಲ್ಲ!

10006029a ಇದಂ ಚ ಸುಮಹದ್ಭೂತಂ ದೈವದಂಡಮಿವೋದ್ಯತಂ|

10006029c ನ ಚೈತದಭಿಜಾನಾಮಿ ಚಿಂತಯನ್ನಪಿ ಸರ್ವಥಾ||

ಈ ಮಹಾಭೂತನಾದರೋ ದೈವದಂಡದಂತೆ ಎದ್ದು ನಿಂತಿದ್ದಾನೆ! ನಾನು ಎಷ್ಟೇ ಯೋಚಿಸಿದರೂ ಇವನು ಯಾರೆಂದು ನನಗೆ ತಿಳಿಯುತ್ತಿಲ್ಲ!

10006030a ಧ್ರುವಂ ಯೇಯಮಧರ್ಮೇ ಮೇ ಪ್ರವೃತ್ತಾ ಕಲುಷಾ ಮತಿಃ|

10006030c ತಸ್ಯಾಃ ಫಲಮಿದಂ ಘೋರಂ ಪ್ರತಿಘಾತಾಯ ದೃಶ್ಯತೇ||

ಕಲ್ಮಷ ಬುದ್ಧಿಯಿಂದ ನಾನು ಅಧರ್ಮಮಾರ್ಗದಲ್ಲಿ ಹೊರಟಿರುವುದರಿಂದಲೇ ಇದು ಆಗಿದೆಯೆನ್ನುವುದು ಖಂಡಿತ! ಅದನ್ನು ವಿರೋಧಿಸಿಯೇ ನನಗೆ ಈ ಘೋರ ಫಲವು ದೊರಕಿದೆಯೆಂದು ಕಾಣುತ್ತದೆ.

10006031a ತದಿದಂ ದೈವವಿಹಿತಂ ಮಮ ಸಂಖ್ಯೇ ನಿವರ್ತನಂ|

10006031c ನಾನ್ಯತ್ರ ದೈವಾದುದ್ಯಂತುಮಿಹ ಶಕ್ಯಂ ಕಥಂ ಚನ||

ನಾನು ಯುದ್ಧದಿಂದ ಹಿಂದೆಸರಿಯಬೇಕೆಂಬುದೇ ದೈವವಿಹಿತವಾಗಿರಬಹುದು. ದೈವಾನುಕೂಲವಿಲ್ಲದೇ ಎಂದೂ ನಾನು ಯುದ್ಧವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ!

10006032a ಸೋಽಹಮದ್ಯ ಮಹಾದೇವಂ ಪ್ರಪದ್ಯೇ ಶರಣಂ ಪ್ರಭುಂ|

10006032c ದೈವದಂಡಮಿಮಂ ಘೋರಂ ಸ ಹಿ ಮೇ ನಾಶಯಿಷ್ಯತಿ||

ಆದುದರಿಂದ ಇಂದು ನಾನು ಪ್ರಭು ಮಹಾದೇವನ ಶರಣು ಹೋಗುತ್ತೇನೆ. ಅವನೇ ಈ ಘೋರ ದೈವದಂಡವನ್ನು ನಾಶಗೊಳಿಸುತ್ತಾನೆ.

10006033a ಕಪರ್ದಿನಂ ಪ್ರಪದ್ಯಾಥ ದೇವದೇವಮುಮಾಪತಿಂ|

10006033c ಕಪಾಲಮಾಲಿನಂ ರುದ್ರಂ ಭಗನೇತ್ರಹರಂ ಹರಂ||

10006034a ಸ ಹಿ ದೇವೋಽತ್ಯಗಾದ್ದೇವಾಂಸ್ತಪಸಾ ವಿಕ್ರಮೇಣ ಚ|

10006034c ತಸ್ಮಾಚ್ಚರಣಮಭ್ಯೇಷ್ಯೇ ಗಿರಿಶಂ ಶೂಲಪಾಣಿನಂ||

ಈಗ ಕಪರ್ದಿ, ದೇವದೇವ, ಉಮಾಪತಿ, ಕಪಾಲಮಾಲಿ, ರುದ್ರ, ಭಗನೇತ್ರಹರ, ಹರನನ್ನು ಶರಣುಹೊಗುತ್ತೇನೆ. ಅವನೇ ತಪಸ್ಸು ಮತ್ತು ವಿಕ್ರಮಗಳಿಂದ ದೇವತೆಗಳನ್ನು ಅತಿಶಯಿಸಿದ್ದಾನೆ. ಆದುದರಿಂದ ಆ ಗಿರಿಶ, ಶೂಲಪಾಣಿಯ ಚರಣಗಳಿಗೆ ಬೀಳುತ್ತೇನೆ!””

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಚಿಂತಾಯಾಂ ಷಷ್ಟೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಚಿಂತಾ ಎನ್ನುವ ಆರನೇ ಅಧ್ಯಾಯವು.

Comments are closed.