Sauptika Parva: Chapter 3

ಸೌಪ್ತಿಕಪರ್ವ

ಅಶ್ವತ್ಥಾಮನು ಆ ರಾತ್ರಿ ಮಲಗಿರುವ ಪಾಂಚಾಲರನ್ನು ತಾನು ಸಂಹರಿಸುವೆನೆಂದು ಪುನಃ ಹೇಳಿಕೊಂಡಿದುದು (೧-೩೫).

10003001 ಸಂಜಯ ಉವಾಚ|

10003001a ಕೃಪಸ್ಯ ವಚನಂ ಶ್ರುತ್ವಾ ಧರ್ಮಾರ್ಥಸಹಿತಂ ಶುಭಂ|

10003001c ಅಶ್ವತ್ಥಾಮಾ ಮಹಾರಾಜ ದುಃಖಶೋಕಸಮನ್ವಿತಃ||

10003002a ದಹ್ಯಮಾನಸ್ತು ಶೋಕೇನ ಪ್ರದೀಪ್ತೇನಾಗ್ನಿನಾ ಯಥಾ|

10003002c ಕ್ರೂರಂ ಮನಸ್ತತಃ ಕೃತ್ವಾ ತಾವುಭೌ ಪ್ರತ್ಯಭಾಷತ||

ಸಂಜಯನು ಹೇಳಿದನು: “ಮಹಾರಾಜ! ಕೃಪನ ಆ ಧರ್ಮಾರ್ಥಸಂಹಿತ ಶುಭ ಮಾತುಗಳನ್ನು ಕೇಳಿ ದುಃಖಶೋಕಸಮನ್ವಿತನಾದ ಅಶ್ವತ್ಥಾಮನು ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಶೋಕದಿಂದ ದಹಿಸುತ್ತಾ ಮನಸ್ಸನ್ನು ಕ್ರೂರವನ್ನಾಗಿಸಿಕೊಂಡು ಅವರಿಬ್ಬರಿಗೂ ಉತ್ತರಿಸಿದನು:

10003003a ಪುರುಷೇ ಪುರುಷೇ ಬುದ್ಧಿಃ ಸಾ ಸಾ ಭವತಿ ಶೋಭನಾ|

10003003c ತುಷ್ಯಂತಿ ಚ ಪೃಥಕ್ ಸರ್ವೇ ಪ್ರಜ್ಞಯಾ ತೇ ಸ್ವಯಾ ಸ್ವಯಾ||

“ಪ್ರತಿಯೊಬ್ಬ ಪುರುಷನಿಗೂ ಅವನಿಗಿರುವ ಬುದ್ಧಿಯು ಉತ್ತಮವಾದುದೆಂದು ಅನ್ನಿಸುತ್ತದೆ. ಎಲ್ಲರೂ ತಮ್ಮ ತಮ್ಮ ಪ್ರತ್ಯೇಕ ಬುದ್ಧಿಗಳಿಂದ ತೃಪ್ತರಾಗಿರುತ್ತಾರೆ.

10003004a ಸರ್ವೋ ಹಿ ಮನ್ಯತೇ ಲೋಕ ಆತ್ಮಾನಂ ಬುದ್ಧಿಮತ್ತರಂ|

10003004c ಸರ್ವಸ್ಯಾತ್ಮಾ ಬಹುಮತಃ ಸರ್ವಾತ್ಮಾನಂ ಪ್ರಶಂಸತಿ||

ಲೋಕದಲ್ಲಿ ಎಲ್ಲರೂ ತಮ್ಮನ್ನು ತಾವೇ ಅತಿ ಬುದ್ಧಿವಂತರೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಮತವೇ ಬಹುಮತವೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಬುದ್ಧಿಯನ್ನೇ ಪ್ರಶಂಸೆಮಾಡಿಕೊಳ್ಳುತ್ತಾರೆ.

10003005a ಸರ್ವಸ್ಯ ಹಿ ಸ್ವಕಾ ಪ್ರಜ್ಞಾ ಸಾಧುವಾದೇ ಪ್ರತಿಷ್ಠಿತಾ|

10003005c ಪರಬುದ್ಧಿಂ ಚ ನಿಂದಂತಿ ಸ್ವಾಂ ಪ್ರಶಂಸಂತಿ ಚಾಸಕೃತ್||

ಎಲ್ಲರೂ ತಮ್ಮ ಪ್ರಜ್ಞೆಯೇ ಸಾಧುವಾದುದೆಂದೂ ಪ್ರತಿಷ್ಠಿತವಾದುದೆಂದೂ ಹೇಳಿಕೊಳ್ಳುತ್ತಿರುತ್ತಾರೆ. ಇತರರ ಬುದ್ಧಿಯನ್ನು ನಿಂದಿಸುತ್ತಾರೆ. ಮತ್ತು ತಮ್ಮದನ್ನು ಪ್ರಶಂಸಿಸಿಕೊಳ್ಳುತ್ತಿರುತ್ತಾರೆ.

10003006a ಕಾರಣಾಂತರಯೋಗೇನ ಯೋಗೇ ಯೇಷಾಂ ಸಮಾ ಮತಿಃ|

10003006c ತೇಽನ್ಯೋನ್ಯೇನ ಚ ತುಷ್ಯಂತಿ ಬಹು ಮನ್ಯಂತಿ ಚಾಸಕೃತ್||

ಕಾರಣಾಂತರದಿಂದ ಯೋಗವಶಾತ್ ಇಬ್ಬರ ಬುದ್ಧಿಯೂ ಹೊಂದಿಕೊಂಡರೆ ಆಗ ಅವರು ಅನ್ಯೋನ್ಯರಿಂದ ಸಂತುಷ್ಟರಾಗುತ್ತಾರೆ. ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾರೆ.

10003007a ತಸ್ಯೈವ ತು ಮನುಷ್ಯಸ್ಯ ಸಾ ಸಾ ಬುದ್ಧಿಸ್ತದಾ ತದಾ|

10003007c ಕಾಲಯೋಗವಿಪರ್ಯಾಸಂ ಪ್ರಾಪ್ಯಾನ್ಯೋನ್ಯಂ ವಿಪದ್ಯತೇ||

ಆದರೆ ಕಾಲಯೋಗದಿಂದ ಅದೇ ಮನುಷ್ಯರ ವಿಚಾರಗಳಲ್ಲಿ ವಿಪರ್ಯಾಸಗಳುಂಟಾದರೆ ಅನ್ಯೋನ್ಯರಲ್ಲಿ ಒಡಕು ಉಂಟಾಗುತ್ತದೆ.

10003008a ಅಚಿಂತ್ಯತ್ವಾದ್ಧಿ ಚಿತ್ತಾನಾಂ ಮನುಷ್ಯಾಣಾಂ ವಿಶೇಷತಃ|

10003008c ಚಿತ್ತವೈಕಲ್ಯಮಾಸಾದ್ಯ ಸಾ ಸಾ ಬುದ್ಧಿಃ ಪ್ರಜಾಯತೇ||

ವಿಶೇಷವಾಗಿ ಮನುಷ್ಯರ ಚಿತ್ತಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಚಿತ್ತಗಳ ವ್ಯತ್ಯಾಸಗಳಿಂದಾಗಿ ಒಬ್ಬೊಬ್ಬರಿಗೆ ಒಂದೊಂದುರೀತಿಯ ಯೋಚನೆಗಳುಂಟಾಗುತ್ತವೆ.

10003009a ಯಥಾ ಹಿ ವೈದ್ಯಃ ಕುಶಲೋ ಜ್ಞಾತ್ವಾ ವ್ಯಾಧಿಂ ಯಥಾವಿಧಿ|

10003009c ಭೇಷಜಂ ಕುರುತೇ ಯೋಗಾತ್ಪ್ರಶಮಾರ್ಥಮಿಹಾಭಿಭೋ||

10003010a ಏವಂ ಕಾರ್ಯಸ್ಯ ಯೋಗಾರ್ಥಂ ಬುದ್ಧಿಂ ಕುರ್ವಂತಿ ಮಾನವಾಃ|

10003010c ಪ್ರಜ್ಞಯಾ ಹಿ ಸ್ವಯಾ ಯುಕ್ತಾಸ್ತಾಂ ಚ ನಿಂದಂತಿ ಮಾನವಾಃ||

ಕುಶಲ ವೈದ್ಯನು ಯಥಾವಿಧಿಯಾಗಿ ವ್ಯಾಧಿಯನ್ನು ತಿಳಿದುಕೊಂಡು ಆ ರೋಗಕ್ಕೆ ತಕ್ಕುದಾದ ಚಿಕಿತ್ಸೆಯನ್ನು ಮಾಡುವ ಹಾಗೆ ಮನುಷ್ಯರು ಪ್ರತಿಯೊಂದು ಉದ್ದೇಶಕ್ಕೂ ಯೋಚನೆಮಾಡಿ ಕಾರ್ಯಗತರಾಗುತ್ತಾರೆ. ಆದರೆ ಸ್ವಯಂ ಬುದ್ಧಿಯನ್ನುಪಯೋಗಿಸುವವನನ್ನು ಇತರ ಮನುಷ್ಯರು ನಿಂದಿಸುತ್ತಾರೆ!

10003011a ಅನ್ಯಯಾ ಯೌವನೇ ಮರ್ತ್ಯೋ ಬುದ್ಧ್ಯಾ ಭವತಿ ಮೋಹಿತಃ|

10003011c ಮಧ್ಯೇಽನ್ಯಯಾ ಜರಾಯಾಂ ತು ಸೋಽನ್ಯಾಂ ರೋಚಯತೇ ಮತಿಂ||

ಮನುಷ್ಯನು ಯೌವನದಲ್ಲಿ ಬೇರೊಂದು ರೀತಿಯ ಬುದ್ಧಿಯಿಂದ ಮೋಹಿತನಾಗುತ್ತಾನೆ. ಮಧ್ಯವಯಸ್ಸಿನಲ್ಲಿ ಬೇರೊಂದರಿಂದ ಮತ್ತು ವೃದ್ಧಾಪ್ಯದಲ್ಲಿ ಇನ್ನೊಂದರಿಂದ ಅವನ ಬುದ್ಧಿಯು ಪ್ರಭಾವಿತಗೊಳ್ಳುತ್ತದೆ.

10003012a ವ್ಯಸನಂ ವಾ ಪುನರ್ಘೋರಂ ಸಮೃದ್ಧಿಂ ವಾಪಿ ತಾದೃಶೀಂ|

10003012c ಅವಾಪ್ಯ ಪುರುಷೋ ಭೋಜ ಕುರುತೇ ಬುದ್ಧಿವೈಕೃತಂ||

ಭೋಜ! ಮನುಷ್ಯನು ಘೋರ ವ್ಯಸನವನ್ನು ಅಥವಾ ಅಷ್ಟೇ ಮಹತ್ತರ ಸಮೃದ್ಧಿಯನ್ನು ಹೊಂದಿದಾಗ ಅವನ ಬುದ್ಧಿಯು ವಿಕೃತವಾಗುತ್ತದೆ.

10003013a ಏಕಸ್ಮಿನ್ನೇವ ಪುರುಷೇ ಸಾ ಸಾ ಬುದ್ಧಿಸ್ತದಾ ತದಾ|

10003013c ಭವತ್ಯನಿತ್ಯಪ್ರಜ್ಞತ್ವಾತ್ಸಾ ತಸ್ಯೈವ ನ ರೋಚತೇ||

ಹೀಗೆ ಒಬ್ಬನೇ ಮನುಷ್ಯನಲ್ಲಿ ವಯಸ್ಸಿಗೆ ತಕ್ಕಂತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬುದ್ಧಿಯು ಬದಲಾಗುತ್ತಾ ಇರುತ್ತದೆಯಾದುದರಿಂದ ಎಷ್ಟೋ ವೇಳೆ ಅವನ ನಿರ್ಧಾರಗಳು ಅವನಿಗೇ ಇಷ್ಟವಾಗುವುದಿಲ್ಲ.

10003014a ನಿಶ್ಚಿತ್ಯ ತು ಯಥಾಪ್ರಜ್ಞಂ ಯಾಂ ಮತಿಂ ಸಾಧು ಪಶ್ಯತಿ|

10003014c ತಸ್ಯಾಂ ಪ್ರಕುರುತೇ ಭಾವಂ ಸಾ ತಸ್ಯೋದ್ಯೋಗಕಾರಿಕಾ||

ತನಗೆ ತಿಳಿದಂತೆ ಯಾವುದು ಒಳ್ಳೆಯದೆಂದು ಕಾಣುತ್ತಾನೋ ಅದನ್ನೇ ನಿಶ್ಚಯಿಸುತ್ತಾನೆ. ಆ ಬುದ್ಧಿಯೇ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡುತ್ತದೆ.

10003015a ಸರ್ವೋ ಹಿ ಪುರುಷೋ ಭೋಜ ಸಾಧ್ವೇತದಿತಿ ನಿಶ್ಚಿತಃ|

10003015c ಕರ್ತುಮಾರಭತೇ ಪ್ರೀತೋ ಮರಣಾದಿಷು ಕರ್ಮಸು||

ಭೋಜ! ಆದುದರಿಂದ ಎಲ್ಲ ಮನುಷ್ಯರು ತಮಗೆ ಒಳ್ಳೆಯದೆಂದು ನಿಶ್ಚಯಿಸಿದುದನ್ನು ಅದು ಮರಣವನ್ನೇ ತರುವಂತಹುದಾದರೂ, ಸಂತೋಷದಿಂದ ಕೈಗೊಳ್ಳುತ್ತಾರೆ.

10003016a ಸರ್ವೇ ಹಿ ಯುಕ್ತಿಂ ವಿಜ್ಞಾಯ ಪ್ರಜ್ಞಾಂ ಚಾಪಿ ಸ್ವಕಾಂ ನರಾಃ|

10003016c ಚೇಷ್ಟಂತೇ ವಿವಿಧಾಶ್ಚೇಷ್ಟಾ ಹಿತಮಿತ್ಯೇವ ಜಾನತೇ||

ಹಾಗೆ ಎಲ್ಲರೂ ತಮ್ಮ ತಮ್ಮ ಯುಕ್ತಿ ಮತ್ತು ಪ್ರಜ್ಞೆಗೆ ತಕ್ಕಂತೆ ವಿವಿಧ ಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಅವು ತಮ್ಮ ಹಿತದಲ್ಲಿಯೇ ಇದೆ ಎಂದು ತಿಳಿಯುತ್ತಾರೆ.

10003017a ಉಪಜಾತಾ ವ್ಯಸನಜಾ ಯೇಯಮದ್ಯ ಮತಿರ್ಮಮ|

10003017c ಯುವಯೋಸ್ತಾಂ ಪ್ರವಕ್ಷ್ಯಾಮಿ ಮಮ ಶೋಕವಿನಾಶಿನೀಂ||

ಇಂದು ವ್ಯಸನದಿಂದ ನನ್ನ ಮತಿಯಲ್ಲಿ ಹುಟ್ಟಿದ, ಶೋಕವಿನಾಶಿನೀ ವಿಚಾರವನ್ನು ನಿಮಗೆ ಹೇಳುತ್ತೇನೆ.

10003018a ಪ್ರಜಾಪತಿಃ ಪ್ರಜಾಃ ಸೃಷ್ಟ್ವಾ ಕರ್ಮ ತಾಸು ವಿಧಾಯ ಚ|

10003018c ವರ್ಣೇ ವರ್ಣೇ ಸಮಾಧತ್ತ ಏಕೈಕಂ ಗುಣವತ್ತರಂ||

ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಅವುಗಳಿಗೆ ಕರ್ಮಗಳನ್ನು ವಿಭಜಿಸಿ ಕೊಟ್ಟನು. ಒಂದೊಂದು ವರ್ಣಕ್ಕೂ ವಿಶೇಷ ಗುಣಗಳನ್ನೂ ಕಲ್ಪಿಸಿದನು.

10003019a ಬ್ರಾಹ್ಮಣೇ ದಮಮವ್ಯಗ್ರಂ ಕ್ಷತ್ರಿಯೇ ತೇಜ ಉತ್ತಮಂ|

10003019c ದಾಕ್ಷ್ಯಂ ವೈಶ್ಯೇ ಚ ಶೂದ್ರೇ ಚ ಸರ್ವವರ್ಣಾನುಕೂಲತಾಂ||

ಬ್ರಾಹ್ಮಣನಿಗೆ ಅವ್ಯಗ್ರ ದಮವನ್ನೂ, ಕ್ಷತ್ರಿಯನಿಗೆ ಉತ್ತಮ ತೇಜಸ್ಸನ್ನೂ, ವೈಶ್ಯನಿಗೆ ದಕ್ಷತೆಯನ್ನೂ ಮತ್ತು ಶೂದ್ರನಿಗೆ ಸರ್ವವರ್ಣದವರಿಗೆ ಅನುಕೂಲವಾಗಿರುವಂಥಹ ಗುಣಗಳನ್ನಿತ್ತನು.

10003020a ಅದಾಂತೋ ಬ್ರಾಹ್ಮಣೋಽಸಾಧುರ್ನಿಸ್ತೇಜಾಃ ಕ್ಷತ್ರಿಯೋಽಧಮಃ|

10003020c ಅದಕ್ಷೋ ನಿಂದ್ಯತೇ ವೈಶ್ಯಃ ಶೂದ್ರಶ್ಚ ಪ್ರತಿಕೂಲವಾನ್||

ನಿಯಂತ್ರಣದಲ್ಲಿರದ ಬ್ರಾಹ್ಮಣನು ಒಳ್ಳೆಯವನಲ್ಲ. ತೇಜಸ್ಸಿಲ್ಲದ ಕ್ಷತ್ರಿಯನು ಅಧಮನು. ದಕ್ಷನಲ್ಲದ ವೈಶ್ಯ ಮತ್ತು ಪ್ರತಿಕೂಲನಾದ ಶೂದ್ರ ಇವರು ನಿಂದನೀಯರು.

10003021a ಸೋಽಸ್ಮಿ ಜಾತಃ ಕುಲೇ ಶ್ರೇಷ್ಠೇ ಬ್ರಾಹ್ಮಣಾನಾಂ ಸುಪೂಜಿತೇ|

10003021c ಮಂದಭಾಗ್ಯತಯಾಸ್ಮ್ಯೇತಂ ಕ್ಷತ್ರಧರ್ಮಮನು ಷ್ಠಿತಃ||

ನಾನು ಸುಪೂಜಿತ ಶೇಷ್ಠ ಬ್ರಾಹ್ಮಣರ ಕುಲದಲ್ಲಿ ಹುಟ್ಟಿದೆನು. ಆದರೆ ಮಂದಭಾಗ್ಯವು ನನ್ನನ್ನು ಕ್ಷತ್ರಧರ್ಮವನ್ನು ಅನುಸರಿಸುವಂತೆ ಮಾಡಿತು.

10003022a ಕ್ಷತ್ರಧರ್ಮಂ ವಿದಿತ್ವಾಹಂ ಯದಿ ಬ್ರಾಹ್ಮಣ್ಯಸಂಶ್ರಿತಂ|

10003022c ಪ್ರಕುರ್ಯಾಂ ಸುಮಹತ್ಕರ್ಮ ನ ಮೇ ತತ್ಸಾಧು ಸಂಮತಂ||

ಕ್ಷತ್ರಧರ್ಮವನ್ನು ಚೆನ್ನಾಗಿ ತಿಳಿದುಕೊಂಡಿರುವ ನಾನು ಒಂದು ವೇಳೆ ಬ್ರಾಹ್ಮಣ್ಯಧರ್ಮವನ್ನು ಅನುಸರಿಸಿ ಅತ್ಯಂತ ಮಹತ್ತರ ಕಾರ್ಯವನ್ನು ಮಾಡಿದರೂ ಅದು ಸತ್ಪುರುಷರ ಮಾನ್ಯತೆಯನ್ನು ಪಡೆಯುವುದಿಲ್ಲ.

10003023a ಧಾರಯಿತ್ವಾ ಧನುರ್ದಿವ್ಯಂ ದಿವ್ಯಾನ್ಯಸ್ತ್ರಾಣಿ ಚಾಹವೇ|

10003023c ಪಿತರಂ ನಿಹತಂ ದೃಷ್ಟ್ವಾ ಕಿಂ ನು ವಕ್ಷ್ಯಾಮಿ ಸಂಸದಿ||

ಯುದ್ಧದಲ್ಲಿ ದಿವ್ಯ ಧನುಸ್ಸನ್ನೂ ದಿವ್ಯ ಅಸ್ತ್ರಗಳನ್ನೂ ಧರಿಸಿದ ಮತ್ತು ತಂದೆಯ ಕೊಲೆಯನ್ನು ಪ್ರತ್ಯಕ್ಷ ಕಂಡ ನಾನು, ಈಗ ಹೇಗೆ ತಾನೇ ಯಾಗಗಳಲ್ಲಿ ಮಂತ್ರಗಳನ್ನು ಹೇಳಿಕೊಂಡಿರಲಿ?[1]

10003024a ಸೋಽಹಮದ್ಯ ಯಥಾಕಾಮಂ ಕ್ಷತ್ರಧರ್ಮಮುಪಾಸ್ಯ ತಂ|

10003024c ಗಂತಾಸ್ಮಿ ಪದವೀಂ ರಾಜ್ಞಃ ಪಿತುಶ್ಚಾಪಿ ಮಹಾದ್ಯುತೇಃ||

ಆದುದರಿಂದ ಇಂದು ನನಗಿಷ್ಟವಾದ ಕ್ಷತ್ರಧರ್ಮವನ್ನು ಗೌರವಿಸಿ ರಾಜ ದುರ್ಯೋಧನನ ಮತ್ತು ಮಹಾದ್ಯುತಿ ತಂದೆಯ ಹೆಜ್ಜೆಗಳಲ್ಲಿ ನಡೆಯುತ್ತೇನೆ.

10003025a ಅದ್ಯ ಸ್ವಪ್ಸ್ಯಂತಿ ಪಾಂಚಾಲಾ ವಿಶ್ವಸ್ತಾ ಜಿತಕಾಶಿನಃ|

10003025c ವಿಮುಕ್ತಯುಗ್ಯಕವಚಾ ಹರ್ಷೇಣ ಚ ಸಮನ್ವಿತಾಃ|

10003025e ವಯಂ ಜಿತಾ ಮತಾಶ್ಚೈಷಾಂ ಶ್ರಾಂತಾ ವ್ಯಾಯಮನೇನ ಚ||

ವಿಜಯದಿಂದ ಉಬ್ಬಿರುವ ಪಾಂಚಾಲರು ಇಂದು ನಮ್ಮನ್ನು ಗೆದ್ದೆವೆಂದು ತಿಳಿದು ಹರ್ಷಸಮನ್ವಿತರಾಗಿ ಮತ್ತು ಹೋರಾಟದಿಂದ ಬಳಲಿ ಕುದುರೆಗಳನ್ನೂ ಕವಚಗಳನ್ನೂ ಕಳಚಿ ಆತಂಕದ ಭಯವೇನೂ ಇಲ್ಲದೇ ನಿದ್ರಿಸುತ್ತಿದ್ದಾರೆ.

10003026a ತೇಷಾಂ ನಿಶಿ ಪ್ರಸುಪ್ತಾನಾಂ ಸ್ವಸ್ಥಾನಾಂ ಶಿಬಿರೇ ಸ್ವಕೇ|

10003026c ಅವಸ್ಕಂದಂ ಕರಿಷ್ಯಾಮಿ ಶಿಬಿರಸ್ಯಾದ್ಯ ದುಷ್ಕರಂ||

ರಾತ್ರಿಯಲ್ಲಿ ತಮ್ಮ ಶಿಬಿರಗಳಲ್ಲಿ ತಮ್ಮವರೊಂದಿಗೆ ಮಲಗಿರುವ ಅವರ ಶಿಬಿರಗಳ ಮೇಲೆ ಇಂದು ದುಷ್ಕರ ಮುತ್ತಿಗೆಯನ್ನು ಹಾಕಿ ಅವರನ್ನು ಸಂಹರಿಸುತ್ತೇನೆ.

10003027a ತಾನವಸ್ಕಂದ್ಯ ಶಿಬಿರೇ ಪ್ರೇತಭೂತಾನ್ವಿಚೇತಸಃ|

10003027c ಸೂದಯಿಷ್ಯಾಮಿ ವಿಕ್ರಮ್ಯ ಮಘವಾನಿವ ದಾನವಾನ್||

ಎಚ್ಚರವಿಲ್ಲದೆ ಪ್ರೇತಗಳಂತೆ ಮಲಗಿರುವ ಅವರನ್ನು ವಿಕ್ರಮದಿಂದ ಮಘವಾನ್ ಇಂದ್ರನು ದಾನವರನ್ನು ಹೇಗೋ ಹಾಗೆ ಸಂಹರಿಸುತ್ತೇನೆ.

10003028a ಅದ್ಯ ತಾನ್ಸಹಿತಾನ್ಸರ್ವಾನ್ಧೃಷ್ಟದ್ಯುಮ್ನಪುರೋಗಮಾನ್|

10003028c ಸೂದಯಿಷ್ಯಾಮಿ ವಿಕ್ರಮ್ಯ ಕಕ್ಷಂ ದೀಪ್ತ ಇವಾನಲಃ|

10003028e ನಿಹತ್ಯ ಚೈವ ಪಾಂಚಾಲಾನ್ ಶಾಂತಿಂ ಲಬ್ಧಾಸ್ಮಿ ಸತ್ತಮ||

ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ ಅವರೆಲ್ಲರನ್ನೂ ಒಟ್ಟಿಗೇ ಇಂದು ವಿಕ್ರಮದಿಂದ ಒಣಹುಲ್ಲಿನ ಮೆದೆಗಳನ್ನು ಬೆಂಕಿಯು ಭಸ್ಮಮಾಡುವಂತೆ ಸಂಹರಿಸುತ್ತೇನೆ. ಸತ್ತಮ! ಪಾಂಚಾಲರನ್ನು ಸಂಹರಿಸಿದ ನಂತರವೇ ನಾನು ಮನಃಶಾಂತಿಯನ್ನು ಪಡೆಯುತ್ತೇನೆ.

10003029a ಪಾಂಚಾಲೇಷು ಚರಿಷ್ಯಾಮಿ ಸೂದಯನ್ನದ್ಯ ಸಂಯುಗೇ|

10003029c ಪಿನಾಕಪಾಣಿಃ ಸಂಕ್ರುದ್ಧಃ ಸ್ವಯಂ ರುದ್ರಃ ಪಶುಷ್ವಿವ||

ಸಂಕ್ರುದ್ಧ ಸ್ವಯಂ ಪಿನಾಕಪಾಣಿ ರುದ್ರನು ಪ್ರಾಣಿಗಳ ಮಧ್ಯೆ ಸಂಚರಿಸುವಂತೆ ಇಂದು ನಾನು ರಣದಲ್ಲಿ ಪಾಂಚಾಲರನ್ನು ಸಂಹರಿಸುತ್ತಾ ಸಂಚರಿಸುತ್ತೇನೆ.

10003030a ಅದ್ಯಾಹಂ ಸರ್ವಪಾಂಚಾಲಾನ್ನಿಹತ್ಯ ಚ ನಿಕೃತ್ಯ ಚ|

10003030c ಅರ್ದಯಿಷ್ಯಾಮಿ ಸಂಕ್ರುದ್ಧೋ ರಣೇ ಪಾಂಡುಸುತಾಂಸ್ತಥಾ||

ಇಂದು ಸಂಕ್ರುದ್ಧನಾಗಿ ಪಾಂಚಾಲರೆಲ್ಲರನ್ನು ಕತ್ತರಿಸಿ ಕೊಂದು ರಣದಲ್ಲಿ ಪಾಂಡುಸುತರನ್ನು ಕಾಡುತ್ತೇನೆ.

10003031a ಅದ್ಯಾಹಂ ಸರ್ವಪಾಂಚಾಲೈಃ ಕೃತ್ವಾ ಭೂಮಿಂ ಶರೀರಿಣೀಂ|

10003031c ಪ್ರಹೃತ್ಯೈಕೈಕಶಸ್ತೇಭ್ಯೋ ಭವಿಷ್ಯಾಮ್ಯನೃಣಃ ಪಿತುಃ||

ಇಂದು ಅವರಲ್ಲಿ ಒಬ್ಬೊಬ್ಬರನ್ನೂ ಸಂಹರಿಸಿ, ಭೂಮಿಯು ಪಾಂಚಾಲರೆಲ್ಲರ ಮೃತಶರೀರಗಳನ್ನು ಹೊರುವಂತೆ ಮಾಡಿ ನನ್ನ ತಂದೆಯ ಋಣವನ್ನು ತೀರಿಸಿಕೊಳ್ಳುತ್ತೇನೆ.

10003032a ದುರ್ಯೋಧನಸ್ಯ ಕರ್ಣಸ್ಯ ಭೀಷ್ಮಸೈಂಧವಯೋರಪಿ|

10003032c ಗಮಯಿಷ್ಯಾಮಿ ಪಾಂಚಾಲಾನ್ಪದವೀಮದ್ಯ ದುರ್ಗಮಾಂ||

ದುರ್ಯೋಧನ, ಕರ್ಣ, ಭೀಷ್ಮ ಮತ್ತು ಸೈಂಧವರು ಹೋದ ದುರ್ಗಮ ಮಾರ್ಗದಲ್ಲಿ ಇಂದು ಪಾಂಚಾಲರನ್ನು ಕೂಡ ಕಳುಹಿಸುತ್ತೇನೆ.

10003033a ಅದ್ಯ ಪಾಂಚಾಲರಾಜಸ್ಯ ಧೃಷ್ಟದ್ಯುಮ್ನಸ್ಯ ವೈ ನಿಶಿ|

10003033c ವಿರಾತ್ರೇ ಪ್ರಮಥಿಷ್ಯಾಮಿ ಪಶೋರಿವ ಶಿರೋ ಬಲಾತ್||

ಇಂದಿನ ರಾತ್ರಿಯು ಕಳೆಯುವುದರಲ್ಲಿ ಕತ್ತಲೆಯಲ್ಲಿ ನಾನು ಪಾಂಚಾಲರಾಜ ಧೃಷ್ಟದ್ಯುಮ್ನನ ಶಿರವನ್ನು ಬಲವನ್ನುಪಯೋಗಿಸಿ ಪಶುವೊಂದರ ಶಿರದಂತೆ ಅರೆಯುತ್ತೇನೆ.

10003034a ಅದ್ಯ ಪಾಂಚಾಲಪಾಂಡೂನಾಂ ಶಯಿತಾನಾತ್ಮಜಾನ್ನಿಶಿ|

10003034c ಖಡ್ಗೇನ ನಿಶಿತೇನಾಜೌ ಪ್ರಮಥಿಷ್ಯಾಮಿ ಗೌತಮ||

ಗೌತಮ! ಇಂದಿನ ರಾತ್ರಿ ಮಲಗಿರುವ ಪಾಂಚಾಲ-ಪಾಂಡವರನ್ನು ನಾನು ಎಳೆದ ನಿಶಿತ ಖಡ್ಗದಿಂದ ತುಂಡರಿಸುತ್ತೇನೆ.

10003035a ಅದ್ಯ ಪಾಂಚಾಲಸೇನಾಂ ತಾಂ ನಿಹತ್ಯ ನಿಶಿ ಸೌಪ್ತಿಕೇ|

10003035c ಕೃತಕೃತ್ಯಃ ಸುಖೀ ಚೈವ ಭವಿಷ್ಯಾಮಿ ಮಹಾಮತೇ||

ಮಹಾಮತೇ! ಇಂದಿನ ರಾತ್ರಿ ಮಲಗಿರುವ ಆ ಪಾಂಚಾಲಸೇನೆಯನ್ನು ಸಂಹರಿಸಿ ನಾನು ಕೃತಕೃತ್ಯನೂ ಸುಖಿಯೂ ಆಗುತ್ತೇನೆ!”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದ್ರೌಣಿಮಂತ್ರಣಾಯಾಂ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದ್ರೌಣಿಮಂತ್ರಣ ಎನ್ನುವ ಮೂರನೇ ಅಧ್ಯಾಯವು.

[1] ಅಥವಾ ಜನರ ಮಧ್ಯೆ ಏನು ಮಾತನಾಡಲಿ? ಜನರಿಗೆ ಏನು ಹೇಳಲಿ?

Comments are closed.