ಶಾಂತಿ ಪರ್ವ: ರಾಜಧರ್ಮ ಪರ್ವ

೫೨

12052001 ವೈಶಂಪಾಯನ ಉವಾಚ

12052001a ತತಃ ಕೃಷ್ಣಸ್ಯ ತದ್ವಾಕ್ಯಂ ಧರ್ಮಾರ್ಥಸಹಿತಂ ಹಿತಮ್|

12052001c ಶ್ರುತ್ವಾ ಶಾಂತನವೋ ಭೀಷ್ಮಃ ಪ್ರತ್ಯುವಾಚ ಕೃತಾಂಜಲಿಃ||

ವೈಶಂಪಾಯನನು ಹೇಳಿದನು: “ಅನಂತರ ಕೃಷ್ಣನ ಆ ಧರ್ಮಾರ್ಥಸಂಹಿತ ಹಿತಕರ ಮಾತನ್ನು ಕೇಳಿ ಶಾಂತನವ ಭೀಷ್ಮನು ಕೈಮುಗಿದು ಉತ್ತರಿಸಿದನು:

12052002a ಲೋಕನಾಥ ಮಹಾಬಾಹೋ ಶಿವ ನಾರಾಯಣಾಚ್ಯುತ|

12052002c ತವ ವಾಕ್ಯಮಭಿಶ್ರುತ್ಯ ಹರ್ಷೇಣಾಸ್ಮಿ ಪರಿಪ್ಲುತಃ||

“ಲೋಕನಾಥ! ಮಹಾಬಾಹೋ! ಶಿವ! ನಾರಾಯಣ! ಅಚ್ಯುತ! ನಿನ್ನ ಮಾತನ್ನು ಕೇಳಿ ನಾನು ಹರ್ಷದಲ್ಲಿ ಮುಳುಗಿಹೋಗಿದ್ದೇನೆ!

12052003a ಕಿಂ ಚಾಹಮಭಿಧಾಸ್ಯಾಮಿ ವಾಕ್ಪತೇ ತವ ಸಂನಿಧೌ|

12052003c ಯದಾ ವಾಚೋಗತಂ ಸರ್ವಂ ತವ ವಾಚಿ ಸಮಾಹಿತಮ್||

ನಿನ್ನ ಸನ್ನಿಧಿಯಲ್ಲಿ ನಾನು ಏನನ್ನು ತಾನೇ ಹೇಳಬಲ್ಲೆ? ಮಾತಿನಿಂದ ತಿಳಿಸಬಹುದಾದ ಎಲ್ಲವೂ ನಿನ್ನ ಮಾತಿನಲ್ಲಿಯೇ ಅಡಗಿವೆ!

12052004a ಯದ್ಧಿ ಕಿಂ ಚಿತ್ಕೃತಂ ಲೋಕೇ ಕರ್ತವ್ಯಂ ಕ್ರಿಯತೇ ಚ ಯತ್|

12052004c ತ್ವತ್ತಸ್ತನ್ನಿಃಸೃತಂ ದೇವ ಲೋಕಾ ಬುದ್ಧಿಮಯಾ ಹಿ ತೇ||

ದೇವ! ಈ ಲೋಕದಲ್ಲಿ ಯತ್ಕಿಂಚಿತ್ ಏನಾದರೂ ನಡೆದರೆ ಮತ್ತು ಯಾರಾದರೂ ಕರ್ತವ್ಯಗಳನ್ನು ಮಾಡಿದರೆ ಅದು ನಿನ್ನಿಂದಲೇ ಮಾಡಿಸಲ್ಪಟ್ಟಿರುತ್ತವೆ. ಏಕೆಂದರೆ ನೀನು ಬುದ್ಧಿಮಯನಾಗಿರುವೆ.

12052005a ಕಥಯೇದ್ದೇವಲೋಕಂ ಯೋ ದೇವರಾಜಸಮೀಪತಃ|

12052005c ಧರ್ಮಕಾಮಾರ್ಥಶಾಸ್ತ್ರಾಣಾಂ ಸೋಽರ್ಥಾನ್ಬ್ರೂಯಾತ್ತವಾಗ್ರತಃ||

ನಿನ್ನ ಎದಿರು ಧರ್ಮ-ಕಾಮ-ಅರ್ಥಶಾಸ್ತ್ರಗಳ ಅರ್ಥಗಳನ್ನು ತಿಳಿಸುವವನು ದೇವರಾಜನ ಬಳಿಹೋಗಿ ದೇವಲೋಕದ ವರ್ಣನೆಯನ್ನು ಮಾಡುವವನಂತೆ!

12052006a ಶರಾಭಿಘಾತಾದ್ವ್ಯಥಿತಂ ಮನೋ ಮೇ ಮಧುಸೂದನ|

12052006c ಗಾತ್ರಾಣಿ ಚಾವಸೀದಂತಿ ನ ಚ ಬುದ್ಧಿಃ ಪ್ರಸೀದತಿ||

ಮಧುಸೂದನ! ಶರಸಮೂಹಗಳ ಘಾತದಿಂದ ನನ್ನ ಮನಸ್ಸು ವ್ಯಥಿತಗೊಂಡಿದೆ. ಅಂಗಾಂಗಗಳು ಶಿಥಿಲಗೊಂಡಿವೆ. ನನ್ನ ಬುದ್ಧಿಯೂ ಕುಸಿಯುತ್ತಿದೆ!

12052007a ನ ಚ ಮೇ ಪ್ರತಿಭಾ ಕಾ ಚಿದಸ್ತಿ ಕಿಂ ಚಿತ್ಪ್ರಭಾಷಿತುಮ್|

12052007c ಪೀಡ್ಯಮಾನಸ್ಯ ಗೋವಿಂದ ವಿಷಾನಲಸಮೈಃ ಶರೈಃ||

ಗೋವಿಂದ! ವಿಷ-ಅಗ್ನಿಗಳ ಸಮಾನ ಶರಗಳಿಂದ ಪೀಡಿತನಾದ ನನಗೆ ಏನನ್ನು ಮಾತನಾಡಲೂ ತೋಚುತ್ತಿಲ್ಲ!

12052008a ಬಲಂ ಮೇಧಾಃ ಪ್ರಜರತಿ ಪ್ರಾಣಾಃ ಸಂತ್ವರಯಂತಿ ಚ|

12052008c ಮರ್ಮಾಣಿ ಪರಿತಪ್ಯಂತೇ ಭ್ರಾಂತಂ ಚೇತಸ್ತಥೈವ ಚ||

ಬಲವು ಕುಂದುತ್ತಿದೆ. ಪ್ರಾಣಗಳು ಹೊರಟುಹೋಗಲು ತ್ವರೆಮಾಡುತ್ತಿವೆ. ಮರ್ಮಸ್ಥಳಗಳು ಪರಿತಪಿಸುತ್ತಿವೆ. ಜೇತನವು ಭ್ರಾಂತವಾಗಿದೆ!

12052009a ದೌರ್ಬಲ್ಯಾತ್ಸಜ್ಜತೇ ವಾಙ್ಮೇ ಸ ಕಥಂ ವಕ್ತುಮುತ್ಸಹೇ|

12052009c ಸಾಧು ಮೇ ತ್ವಂ ಪ್ರಸೀದಸ್ವ ದಾಶಾರ್ಹಕುಲನಂದನ||

ದಾಶಾರ್ಹಕುಲನಂದನ! ದೌರ್ಬಲ್ಯದಿಂದಾಗಿ ನನ್ನ ಮಾತು ತೊದಲುತ್ತಿದೆ. ಹೇಗೆ ತಾನೇ ನಾನು ಮಾತನಾಡಲಿ? ನನಗೆ ಒಳ್ಳೆಯದಾಗಲು ಅನುಗ್ರಹಿಸು!

12052010a ತತ್ಕ್ಷಮಸ್ವ ಮಹಾಬಾಹೋ ನ ಬ್ರೂಯಾಂ ಕಿಂ ಚಿದಚ್ಯುತ|

12052010c ತ್ವತ್ಸಂನಿಧೌ ಚ ಸೀದೇತ ವಾಚಸ್ಪತಿರಪಿ ಬ್ರುವನ್||

ಮಹಾಬಾಹೋ! ನನ್ನನ್ನು ಕ್ಷಮಿಸು! ಅಚ್ಯುತ! ನಿನ್ನ ಸನ್ನಿಧಿಯಲ್ಲಿ ಮಾತನಾಡಲು ಬೃಹಸ್ಪತಿಯೂ ಕೂಡ ಹಿಂಜರಿಯುತ್ತಾನೆ. ಇನ್ನು ನನ್ನ ಗತಿಯೇನು?

12052011a ನ ದಿಶಃ ಸಂಪ್ರಜಾನಾಮಿ ನಾಕಾಶಂ ನ ಚ ಮೇದಿನೀಮ್|

12052011c ಕೇವಲಂ ತವ ವೀರ್ಯೇಣ ತಿಷ್ಠಾಮಿ ಮಧುಸೂದನ||

ಮಧುಸೂದನ! ದಿಕ್ಕುಗಳು ತೋಚುತ್ತಿಲ್ಲ. ಆಕಾಶ-ಮೇದಿನಿಗಳೂ ತೋಚುತ್ತಿಲ್ಲ. ಕೇವಲ ನಿನ್ನ ವೀರ್ಯವನ್ನು ಅವಲಂಬಿಸಿದ್ದೇನೆ ಅಷ್ಟೇ!

12052012a ಸ್ವಯಮೇವ ಪ್ರಭೋ ತಸ್ಮಾದ್ಧರ್ಮರಾಜಸ್ಯ ಯದ್ಧಿತಮ್|

12052012c ತದ್ಬ್ರವೀಹ್ಯಾಶು ಸರ್ವೇಷಾಮಾಗಮಾನಾಂ ತ್ವಮಾಗಮಃ||

ಪ್ರಭೋ! ಆದುದರಿಂದ ಧರ್ಮರಾಜನಿಗೆ ಹಿತವಾದುದನ್ನು ಸ್ವಯಂ ನೀನೇ ಹೇಳು! ನೀನು ಯಾವ ಸರ್ವ ಆಗಮಗಳ ಸ್ಥಾನವಾಗಿರುವೆಯೋ ಅದನ್ನೇ ಹೇಳು!

12052013a ಕಥಂ ತ್ವಯಿ ಸ್ಥಿತೇ ಲೋಕೇ ಶಾಶ್ವತೇ ಲೋಕಕರ್ತರಿ|

12052013c ಪ್ರಬ್ರೂಯಾನ್ಮದ್ವಿಧಃ ಕಶ್ಚಿದ್ಗುರೌ ಶಿಷ್ಯ ಇವ ಸ್ಥಿತೇ||

ಲೋಕದಲ್ಲಿ ಶಾಶ್ವತನಾಗಿರುವ, ಲೋಕಗಳನ್ನು ನಿರ್ಮಿಸಿರುವ ನೀನೇ ಇಲ್ಲಿರುವಾಗ ಗುರುವಿನ ಎದಿರು ಶಿಷ್ಯನಂತಿರುವ ನನ್ನಂಥವನು ಹೇಗೆ ತಾನೇ ಬೋಧಿಸಬಲ್ಲನು?”

12052014 ವಾಸುದೇವ ಉವಾಚ

12052014a ಉಪಪನ್ನಮಿದಂ ವಾಕ್ಯಂ ಕೌರವಾಣಾಂ ಧುರಂಧರೇ|

12052014c ಮಹಾವೀರ್ಯೇ ಮಹಾಸತ್ತ್ವೇ ಸ್ಥಿತೇ ಸರ್ವಾರ್ಥದರ್ಶಿನಿ||

ವಾಸುದೇವನು ಹೇಳಿದನು: “ಕೌರವರ ಧುರಂಧರನೇ! ಮಹಾವೀರ್ಯದಲ್ಲಿ ಮತ್ತು ಮಹಾಸತ್ತ್ವದಲ್ಲಿ ನೆಲೆಸಿರುವ ಸರ್ವಾರ್ಥದರ್ಶಿನಿಯಾದ ನೀನು ಹೇಳಿದುದು ಯೋಗ್ಯವಾಗಿಯೇ ಇದೆ.

12052015a ಯಚ್ಚ ಮಾಮಾತ್ಥ ಗಾಂಗೇಯ ಬಾಣಘಾತರುಜಂ ಪ್ರತಿ|

12052015c ಗೃಹಾಣಾತ್ರ ವರಂ ಭೀಷ್ಮ ಮತ್ಪ್ರಸಾದಕೃತಂ ವಿಭೋ||

ಗಾಂಗೇಯ! ಭೀಷ್ಮ! ವಿಭೋ! ಬಾಣಾಘಾತದಿಂದ ಯಾತನೆಯನ್ನು ಅನುಭವಿಸುತ್ತಿರುವೆಯೆಂದು ನನಗೆ ಹೇಳಿದೆಯಲ್ಲವೇ? ಅದರ ಉಪಶಮನಕ್ಕಾಗಿ ಪ್ರಸನ್ನಚಿತ್ತನಾಗಿ ನಾನು ನೀಡುವ ಈ ವರವನ್ನು ಸ್ವೀಕರಿಸು!

12052016a ನ ತೇ ಗ್ಲಾನಿರ್ನ ತೇ ಮೂರ್ಚಾ ನ ದಾಹೋ ನ ಚ ತೇ ರುಜಾ|

12052016c ಪ್ರಭವಿಷ್ಯಂತಿ ಗಾಂಗೇಯ ಕ್ಷುತ್ಪಿಪಾಸೇ ನ ಚಾಪ್ಯುತ||

ಗಾಂಗೇಯ! ನಿನಗೆ ದಣಿವಾಗಲೀ, ಮೂರ್ಛೆಯಾಗಲೀ, ಉರಿಯಾಗಲೀ, ರೋಗ-ರುಜಿನಗಳಾಗಲೀ, ಹಸಿವು ಬಾಯಾರಿಕೆಗಳಾಗಲೀ ಆಗುವುದಿಲ್ಲ!

12052017a ಜ್ಞಾನಾನಿ ಚ ಸಮಗ್ರಾಣಿ ಪ್ರತಿಭಾಸ್ಯಂತಿ ತೇಽನಘ|

12052017c ನ ಚ ತೇ ಕ್ವ ಚಿದಾಸಕ್ತಿರ್ಬುದ್ಧೇಃ ಪ್ರಾದುರ್ಭವಿಷ್ಯತಿ||

ಅನಘ! ಸಮಗ್ರ ಜ್ಞಾನಗಳೂ ನಿನ್ನಲ್ಲಿ ಪ್ರಕಾಶಗೊಳ್ಳುತ್ತವೆ. ನಿನ್ನ ಬುದ್ಧಿಯು ಯಾವುದರಲ್ಲಿಯೂ ಆಸಕ್ತಿಯನ್ನು ಇಟ್ಟುಕೊಳ್ಳುವುದಿಲ್ಲ.

12052018a ಸತ್ತ್ವಸ್ಥಂ ಚ ಮನೋ ನಿತ್ಯಂ ತವ ಭೀಷ್ಮ ಭವಿಷ್ಯತಿ|

12052018c ರಜಸ್ತಮೋಭ್ಯಾಂ ರಹಿತಂ ಘನೈರ್ಮುಕ್ತ ಇವೋಡುರಾಟ್||

ಭೀಷ್ಮ! ನಿನ್ನ ಮನಸ್ಸು ನಿತ್ಯವೂ, ಮೋಡಗಳಿಂದ ಮುಕ್ತನಾದ ಚಂದ್ರನಂತೆ, ರಜಸ್ಸು-ತಮೋ ಗುಣಗಳಿಂದ ರಹಿತವಾಗಿ, ಸತ್ತ್ವದಲ್ಲಿಯೇ ನೆಲೆಸಿರುತ್ತದೆ.

12052019a ಯದ್ಯಚ್ಚ ಧರ್ಮಸಂಯುಕ್ತಮರ್ಥಯುಕ್ತಮಥಾಪಿ ವಾ|

12052019c ಚಿಂತಯಿಷ್ಯಸಿ ತತ್ರಾಗ್ರ್ಯಾ ಬುದ್ಧಿಸ್ತವ ಭವಿಷ್ಯತಿ||

ನೀನು ಯಾವ ಧರ್ಮಸಂಯುಕ್ತವಾದ ಅಥವಾ ಅರ್ಥಯುಕ್ತವಾದ ವಿಷಯಗಳ ಕುರಿತು ಯೋಚಿಸುತ್ತೀಯೋ ಅವುಗಳು ನಿನ್ನ ಬುದ್ಧಿಯ ಮುಂದೆ ಸ್ಫುರಿಸುತ್ತಿರುತ್ತವೆ.

12052020a ಇಮಂ ಚ ರಾಜಶಾರ್ದೂಲ ಭೂತಗ್ರಾಮಂ ಚತುರ್ವಿಧಮ್|

12052020c ಚಕ್ಷುರ್ದಿವ್ಯಂ ಸಮಾಶ್ರಿತ್ಯ ದ್ರಕ್ಷ್ಯಸ್ಯಮಿತವಿಕ್ರಮ||

ರಾಜಶಾರ್ದೂಲ! ಅಮಿತವಿಕ್ರಮಿ! ಈ ದಿವ್ಯದೃಷ್ಟಿಯನ್ನು ಪಡೆದು ಅದರಿಂದ ನೀನು ನಾಲ್ಕೂ[1] ವಿಧದ ಪ್ರಾಣಿಗಳ ನೈಜಸ್ವರೂಪಗಳನ್ನು ಕಾಣಲು ಶಕ್ತನಾಗುವೆ.

12052021a ಚತುರ್ವಿಧಂ ಪ್ರಜಾಜಾಲಂ ಸಂಯುಕ್ತೋ ಜ್ಞಾನಚಕ್ಷುಷಾ|

12052021c ಭೀಷ್ಮ ದ್ರಕ್ಷ್ಯಸಿ ತತ್ತ್ವೇನ ಜಲೇ ಮೀನ ಇವಾಮಲೇ||

ಭೀಷ್ಮ! ಜ್ಞಾನದೃಷ್ಟಿಯಿಂದ ಸಂಪನ್ನನಾದ ನಿನಗೆ ಸಂಸಾರಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಸಂಪೂರ್ಣ ಜೀವಸಮುದಾಯಗಳೂ ತಿಳಿನೀರಿನಲ್ಲಿರುವ ಮೀನುಗಳಂತೆ ಸ್ವಚ್ಛವಾಗಿ ಕಾಣುತ್ತವೆ!””

12052022 ವೈಶಂಪಾಯನ ಉವಾಚ

12052022a ತತಸ್ತೇ ವ್ಯಾಸಸಹಿತಾಃ ಸರ್ವ ಏವ ಮಹರ್ಷಯಃ|

12052022c ಋಗ್ಯಜುಃಸಾಮಸಂಯುಕ್ತೈರ್ವಚೋಭಿಃ ಕೃಷ್ಣಮರ್ಚಯನ್||

ವೈಶಂಪಾಯನನು ಹೇಳಿದನು: “ಆಗ ವ್ಯಾಸಸಹಿತರಾದ ಸರ್ವ ಮಹರ್ಷಿಗಳೂ ಋಗ್ಯಜುಃಸಾಮಸಂಯುಕ್ತ ಸ್ತೋತ್ರಗಳಿಂದ ಕೃಷ್ಣನನ್ನು ಅರ್ಚಿಸಿದರು.

12052023a ತತಃ ಸರ್ವಾರ್ತವಂ ದಿವ್ಯಂ ಪುಷ್ಪವರ್ಷಂ ನಭಸ್ತಲಾತ್|

12052023c ಪಪಾತ ಯತ್ರ ವಾರ್ಷ್ಣೇಯಃ ಸಗಾಂಗೇಯಃ ಸಪಾಂಡವಃ||

ಆಗ ವಾರ್ಷ್ಣೇಯ, ಗಾಂಗೇಯ ಮತ್ತು ಪಾಂಡವರಿರುವ ಸ್ಥಳದಲ್ಲಿ ನಭಸ್ತಲದಿಂದ ಸರ್ವಋತುಗಳ ದಿವ್ಯ ಪುಷ್ಪವೃಷ್ಟಿಯಾಯಿತು.

12052024a ವಾದಿತ್ರಾಣಿ ಚ ದಿವ್ಯಾನಿ ಜಗುಶ್ಚಾಪ್ಸರಸಾಂ ಗಣಾಃ|

12052024c ನ ಚಾಹಿತಮನಿಷ್ಟಂ ವಾ ಕಿಂ ಚಿತ್ತತ್ರ ವ್ಯದೃಶ್ಯತ||

ದಿವ್ಯವಾದ್ಯಗಳು ಮೊಳಗಿದವು. ಅಪ್ಸರಗಣಗಳು ಹಾಡಿದರು. ಅಲ್ಲಿ ಯಾವುದೇ ರೀತಿಯ ಅನಿಷ್ಟ ದೃಶ್ಯಗಳೂ ಕಾಣಿಸಲಿಲ್ಲ.

12052025a ವವೌ ಶಿವಃ ಸುಖೋ ವಾಯುಃ ಸರ್ವಗಂಧವಹಃ ಶುಚಿಃ|

12052025c ಶಾಂತಾಯಾಂ ದಿಶಿ ಶಾಂತಾಶ್ಚ ಪ್ರಾವದನ್ಮೃಗಪಕ್ಷಿಣಃ||

ಶೀತಲವಾದ, ಮಂಗಳಕರ, ಸುಖಕರ, ಪವಿತ್ರ ಸುಗಂಧಯುಕ್ತ ಗಾಳಿಯು ಬೀಸತೊಡಗಿತು. ದಿಕ್ಕುಗಳು ಪ್ರಶಾಂತವಾದವು. ಉತ್ತರದಿಕ್ಕಿನಲ್ಲಿ ಶಂತ ಮೃಗಪಕ್ಷಿಗಳು ಧ್ವನಿಗೈಯುತ್ತಿದ್ದವು.

12052026a ತತೋ ಮುಹೂರ್ತಾದ್ಭಗವಾನ್ಸಹಸ್ರಾಂಶುರ್ದಿವಾಕರಃ|

12052026c ದಹನ್ವನಮಿವೈಕಾಂತೇ ಪ್ರತೀಚ್ಯಾಂ ಪ್ರತ್ಯದೃಶ್ಯತ||

ಸ್ವಲ್ಪವೇ ಸಮಯದಲ್ಲಿ ಪಶ್ಚಿಮದಲ್ಲಿ ಸಹಸ್ರಾಂಶು ಭಗವಾನ್ ದಿವಾಕರನು ಏಕಾಂತದಲ್ಲಿ ವನವನ್ನು ದಹಿಸುತ್ತಿರುವನೋ ಎನ್ನುವಂತೆ ತೋರಿದನು.

12052027a ತತೋ ಮಹರ್ಷಯಃ ಸರ್ವೇ ಸಮುತ್ಥಾಯ ಜನಾರ್ದನಮ್|

12052027c ಭೀಷ್ಮಮಾಮಂತ್ರಯಾಂ ಚಕ್ರೂ ರಾಜಾನಂ ಚ ಯುಧಿಷ್ಠಿರಮ್||

ಆಗ ಎಲ್ಲ ಮಹರ್ಷಿಗಳೂ ಎದ್ದು ಜನಾರ್ದನ, ಭೀಷ್ಮ ಮತ್ತು ರಾಜಾ ಯುಧಿಷ್ಠಿರನ ಅನುಮತಿಯನ್ನು ಕೇಳಿದರು.

12052028a ತತಃ ಪ್ರಣಾಮಮಕರೋತ್ಕೇಶವಃ ಪಾಂಡವಸ್ತಥಾ|

12052028c ಸಾತ್ಯಕಿಃ ಸಂಜಯಶ್ಚೈವ ಸ ಚ ಶಾರದ್ವತಃ ಕೃಪಃ||

ಅನಂತರ ಕೇಶವ, ಪಾಂಡವ, ಸಾತ್ಯಕಿ, ಸಂಜಯ ಮತ್ತು ಶಾರದ್ವತ ಕೃಪರು ಅವರಿಗೆ ಪ್ರಣಾಮಗೈದರು.

12052029a ತತಸ್ತೇ ಧರ್ಮನಿರತಾಃ ಸಮ್ಯಕ್ತೈರಭಿಪೂಜಿತಾಃ|

12052029c ಶ್ವಃ ಸಮೇಷ್ಯಾಮ ಇತ್ಯುಕ್ತ್ವಾ ಯಥೇಷ್ಟಂ ತ್ವರಿತಾ ಯಯುಃ||

ಆಗ ಅವರಿಂದ ಅಭಿಪೂಜಿತರಾದ ಆ ಧರ್ಮನಿರತರು “ನಾಳೆ ಸೇರೋಣ!” ಎಂದು ಹೇಳಿ ಇಷ್ಟವಾದಲ್ಲಿಗೆ ತೆರಳಿದರು.

12052030a ತಥೈವಾಮಂತ್ರ್ಯ ಗಾಂಗೇಯಂ ಕೇಶವಸ್ತೇ ಚ ಪಾಂಡವಾಃ|

12052030c ಪ್ರದಕ್ಷಿಣಮುಪಾವೃತ್ಯ ರಥಾನಾರುರುಹುಃ ಶುಭಾನ್||

ಹಾಗೆಯೇ ಕೇಶವ ಮತ್ತು ಪಾಂಡವರು ಗಾಂಗೇಯನಿಂದ ಬೀಳ್ಕೊಂಡು ಅವನಿಗೆ ಪ್ರದಕ್ಷಿಣೆ ಮಾಡಿ ಶುಭ ರಥಗಳನ್ನೇರಿದರು.

12052031a ತತೋ ರಥೈಃ ಕಾಂಚನದಂತಕೂಬರೈರ್

ಮಹೀಧರಾಭೈಃ ಸಮದೈಶ್ಚ ದಂತಿಭಿಃ|

12052031c ಹಯೈಃ ಸುಪರ್ಣೈರಿವ ಚಾಶುಗಾಮಿಭಿಃ

ಪದಾತಿಭಿಶ್ಚಾತ್ತಶರಾಸನಾದಿಭಿಃ||

12052032a ಯಯೌ ರಥಾನಾಂ ಪುರತೋ ಹಿ ಸಾ ಚಮೂಸ್

ತಥೈವ ಪಶ್ಚಾದತಿಮಾತ್ರಸಾರಿಣೀ|

12052032c ಪುರಶ್ಚ ಪಶ್ಚಾಚ್ಚ ಯಥಾ ಮಹಾನದೀ

ಪುರರ್ಕ್ಷವಂತಂ ಗಿರಿಮೇತ್ಯ ನರ್ಮದಾ||

ಪರ್ವತಗಳಂತಿದ್ದ ಮದಿಸಿದ ಆನೆಗಳಿಂದಲೂ, ಪಕ್ಷಿಗಳಂತೆ ಶೀಘ್ರಗಾಮಿಗಳಾಗಿದ್ದ ಕುದುರೆಗಳಿಂದಲೂ, ಧನುಸ್ಸು ಮೊದಲಾದ ಆಯುಧಗಳನ್ನು ಹಿಡಿದಿದ್ದ ಪದಾತಿಗಳಿಂದಲೂ ಕೂಡಿದ್ದ ಸೇನೆಯು ಕಾಂಚನ-ದಂತಗಳ ನೂಕಿಗಳಿದ್ದ ರಥಗಳ ಮುಂದೆ ಮತ್ತು ಹಿಂದೆ ಬಹಳ ದೂರದವರೆಗೆ – ಮಹಾನದೀ ನರ್ಮದೆಯು ಋಕ್ಷಪರ್ವತದ ಸಮೀಪಕ್ಕೆ ಹೋಗಿ ಪೂರ್ವ-ಪಶ್ಚಿಮದಿಕ್ಕುಗಳಲ್ಲಿ ಹರಿದು ಹೋಗುವಂತೆ – ಸಾಗುತ್ತಿದ್ದಿತು.

12052033a ತತಃ ಪುರಸ್ತಾದ್ಭಗವಾನ್ನಿಶಾಕರಃ

ಸಮುತ್ಥಿತಸ್ತಾಮಭಿಹರ್ಷಯಂಶ್ಚಮೂಮ್|

12052033c ದಿವಾಕರಾಪೀತರಸಾಸ್ತಥೌಷಧೀಃ

ಪುನಃ ಸ್ವಕೇನೈವ ಗುಣೇನ ಯೋಜಯನ್||

ಆಗ ಪೂರ್ವ ದಿಕ್ಕಿನಲ್ಲಿ ಭಗವಾನ್ ನಿಶಾಕರ ಚಂದ್ರನು ಉದಯಿಸಿ ಆ ಸೇನೆಯಗಳಿಗೆ ಹರ್ಷವನ್ನಿತ್ತನು. ದಿವಾಕರನಿಂದ ಬಾಡಿಹೋಗಿದ್ದ ಔಷಧೀ ಲತೆಗಳನ್ನು ಚಂದ್ರನು ಪುನಃ ತನ್ನ ಕಿರಣಗಳಿಂದ ಗುಣಯುಕ್ತವನ್ನಾಗಿ ಮಾಡುತ್ತಿದ್ದನು.

12052034a ತತಃ ಪುರಂ ಸುರಪುರಸಂನಿಭದ್ಯುತಿ

ಪ್ರವಿಶ್ಯ ತೇ ಯದುವೃಷಪಾಂಡವಾಸ್ತದಾ|

12052034c ಯಥೋಚಿತಾನ್ಭವನವರಾನ್ಸಮಾವಿಶಝ್

ಶ್ರಮಾನ್ವಿತಾ ಮೃಗಪತಯೋ ಗುಹಾ ಇವ||

ಆಗ ಯದುವೃಷಭ-ಪಾಂಡವರು ಸುರಪುರದಂತೆ ಬೆಳಗುತ್ತಿದ್ದ ಪುರವನ್ನು ಪ್ರವೇಶಿಸಿ, ಬಳಲಿದ ಸಿಂಹಗಳು ಗುಹೆಯನ್ನು ಪ್ರವೇಶಿಸುವಂತೆ, ಯಥೋಚಿತ ಶ್ರೇಷ್ಠ ಭವನಗಳನ್ನು ಪ್ರವೇಶಿಸಿದರು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾದ್ಯಾಗಮನೇ ದ್ವಿಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾದಿಗಳ ಗಮನ ಎನ್ನುವ ಐವತ್ತೆರಡನೇ ಅಧ್ಯಾಯವು. 

[1] ಸ್ವೇದಜ, ಅಂಡಜ, ಉದ್ಭಿಜ್ಜ ಮತ್ತು ಜರಾಯುಜ

Comments are closed.