ಶಾಂತಿ ಪರ್ವ: ರಾಜಧರ್ಮ ಪರ್ವ

೪೦

12040001 ವೈಶಂಪಾಯನ ಉವಾಚ

12040001a ತತಃ ಕುಂತೀಸುತೋ ರಾಜಾ ಗತಮನ್ಯುರ್ಗತಜ್ವರಃ|

12040001c ಕಾಂಚನೇ ಪ್ರಾಙ್ಮುಖೋ ಹೃಷ್ಟೋ ನ್ಯಷೀದತ್ಪರಮಾಸನೇ||

ವೈಶಂಪಾಯನನು ಹೇಳಿದನು: “ಆಗ ರಾಜಾ ಕುಂತೀಸುತನು ಕೋಪ-ವ್ಯಸನಗಳನ್ನು ತೊರೆದು ಹೃಷ್ಟನಾಗಿ ಉತ್ತರಾಭಿಮುಖವಾಗಿ ಕಾಂಚನದ ಪರಮಾಸನದಲ್ಲಿ ಕುಳಿತುಕೊಂಡನು.

12040002a ತಮೇವಾಭಿಮುಖೌ ಪೀಠೇ ಸೇವ್ಯಾಸ್ತರಣಸಂವೃತೇ|

12040002c ಸಾತ್ಯಕಿರ್ವಾಸುದೇವಶ್ಚ ನಿಷೀದತುರರಿಂದಮೌ||

ಅವನಿಗೆ ಅಭಿಮುಖವಾಗಿ ಪ್ರಜ್ವಲಿಸುತ್ತಿದ್ದ ಸುವರ್ಣಸಿಂಹಾಸನಗಳಲ್ಲಿ ಅರಿಂದಮ ಸಾತ್ಯಕಿ-ವಾಸುದೇವರು ಕುಳಿತುಕೊಂಡರು.

12040003a ಮಧ್ಯೇ ಕೃತ್ವಾ ತು ರಾಜಾನಂ ಭೀಮಸೇನಾರ್ಜುನಾವುಭೌ|

12040003c ನಿಷೀದತುರ್ಮಹಾತ್ಮಾನೌ ಶ್ಲಕ್ಷ್ಣಯೋರ್ಮಣಿಪೀಠಯೋಃ||

ರಾಜನನ್ನು ಮಧ್ಯದಲ್ಲಿರಿಸಿಕೊಂಡು ಮಹಾತ್ಮ ಭೀಮಸೇನ-ಅರ್ಜುನರಿಬ್ಬರೂ ಎರಡೂ ಕಡೆಗಳಲ್ಲಿ ಸುಂದರ ಮಣಿಮಯ ಪೀಠಗಳಲ್ಲಿ ಕುಳಿತುಕೊಂಡರು.

12040004a ದಾಂತೇ ಶಯ್ಯಾಸನೇ ಶುಭ್ರೇ ಜಾಂಬೂನದವಿಭೂಷಿತೇ|

12040004c ಪೃಥಾಪಿ ಸಹದೇವೇನ ಸಹಾಸ್ತೇ ನಕುಲೇನ ಚ||

ಕುಂತಿಯು ಸುವರ್ಣದಿಂದ ಸಮಲಂಕೃತವಾಗಿದ್ದ ಶುಭ್ರ ದಂತಸಿಂಹಾಸನದಲ್ಲಿ ನಕುಲ-ಸಹದೇವರೊಡನೆ ಕುಳಿತುಕೊಂಡಳು.

12040005a ಸುಧರ್ಮಾ ವಿದುರೋ ಧೌಮ್ಯೋ ಧೃತರಾಷ್ಟ್ರಶ್ಚ ಕೌರವಃ|

12040005c ನಿಷೇದುರ್ಜ್ವಲನಾಕಾರೇಷ್ವಾಸನೇಷು ಪೃಥಕ್ ಪೃಥಕ್||

ಸುಧರ್ಮ, ವಿದುರ, ಧೌಮ್ಯ ಮತ್ತು ಕೌರವ ಧೃತರಾಷ್ಟ್ರರು ಯಜ್ಞೇಶ್ವರನಂತೆ ಪ್ರಕಾಶಿಸುತ್ತಿದ್ದ ಸಿಂಹಾಸನಗಳಲ್ಲಿ ಪ್ರತ್ಯೇಕ-ಪ್ರತ್ಯೇಕವಾಗಿ ಕುಳಿತುಕೊಂಡರು.

12040006a ಯುಯುತ್ಸುಃ ಸಂಜಯಶ್ಚೈವ ಗಾಂಧಾರೀ ಚ ಯಶಸ್ವಿನೀ|

12040006c ಧೃತರಾಷ್ಟ್ರೋ ಯತೋ ರಾಜಾ ತತಃ ಸರ್ವ ಉಪಾವಿಶನ್||

ರಾಜಾ ಧೃತರಾಷ್ಟ್ರನು ಕುಳಿತಿದ್ದಲ್ಲಿಯೇ ಯುಯುತ್ಸು, ಸಂಜಯ ಮತ್ತು ಯಶಸ್ವಿನೀ ಗಾಂಧಾರಿಯರೆಲ್ಲರೂ ಕುಳಿತುಕೊಂಡರು.

12040007a ತತ್ರೋಪವಿಷ್ಟೋ ಧರ್ಮಾತ್ಮಾ ಶ್ವೇತಾಃ ಸುಮನಸೋಽಸ್ಪೃಶತ್|

12040007c ಸ್ವಸ್ತಿಕಾನಕ್ಷತಾನ್ಭೂಮಿಂ ಸುವರ್ಣಂ ರಜತಂ ಮಣೀನ್||

ಅಲ್ಲಿ ಕುಳಿತಿದ್ದ ಧರ್ಮಾತ್ಮ ಯುಧಿಷ್ಠಿರನು ಸುಮನಸ್ಕನಾಗಿ ಶ್ವೇತಪುಷ್ಪಗಳನ್ನೂ, ಸ್ವಸ್ತಿಕಗಳನ್ನೂ, ಅಕ್ಷತೆಗಳನ್ನೂ, ಭೂಮಿಯನ್ನೂ, ಸುವರ್ಣವನ್ನೂ, ಬೆಳ್ಳಿಯನ್ನೂ, ಮಣಿಗಳನ್ನೂ ಸ್ಪರ್ಷಿಸಿದನು.

12040008a ತತಃ ಪ್ರಕೃತಯಃ ಸರ್ವಾಃ ಪುರಸ್ಕೃತ್ಯ ಪುರೋಹಿತಮ್|

12040008c ದದೃಶುರ್ಧರ್ಮರಾಜಾನಮಾದಾಯ ಬಹು ಮಂಗಲಮ್||

12040009a ಪೃಥಿವೀಂ ಚ ಸುವರ್ಣಂ ಚ ರತ್ನಾನಿ ವಿವಿಧಾನಿ ಚ|

12040009c ಆಭಿಷೇಚನಿಕಂ ಭಾಂಡಂ ಸರ್ವಸಂಭಾರಸಂಭೃತಮ್||

12040010a ಕಾಂಚನೌದುಂಬರಾಸ್ತತ್ರ ರಾಜತಾಃ ಪೃಥಿವೀಮಯಾಃ|

12040010c ಪೂರ್ಣಕುಂಭಾಃ ಸುಮನಸೋ ಲಾಜಾ ಬರ್ಹೀಂಷಿ ಗೋರಸಾಃ||

12040011a ಶಮೀಪಲಾಶಪುಂನಾಗಾಃ ಸಮಿಧೋ ಮಧುಸರ್ಪಿಷೀ|

12040011c ಸ್ರುವ ಔದುಂಬರಃ ಶಂಖಾಸ್ತಥಾ ಹೇಮವಿಭೂಷಿತಾಃ||

ಬಳಿಕ ಅಮಾತ್ಯ-ಸೇನಾಪತಿಗಳೇ ಮೊದಲಾದ ಪ್ರಕೃತಿವರ್ಗದವರೆಲ್ಲರೂ ಪುರೋಹಿತ ಧೌಮ್ಯನನ್ನು ಮುಂದೆಮಾಡಿಕೊಂಡು ಅನೇಕವಿಧದ ಮಂಗಲ ದ್ರವ್ಯಗಳನ್ನು - ಮೃತ್ತಿಕೆ, ಚಿನ್ನ, ವಿವಿಧ ರತ್ನಗಳು, ಅಭಿಷೇಕಕ್ಕಾಗಿ ತಂದ ಚಿನ್ನ, ತಾಮ್ರ ಮತ್ತು ಬೆಳ್ಳಿಯ ಕಲಶಗಳು, ಮತ್ತು ನೀರು ತುಂಬಿದ ಬೆಳ್ಳಿಯ ಪೂರ್ಣಕುಂಭಗಳು, ಪುಷ್ಪಗಳು, ಬತ್ತದರಳು, ದರ್ಭೆ, ಗೋರಸ, ಬನ್ನಿ, ಅರಳಿ ಮತ್ತು ಮುತ್ತುಗದ ಸಮಿತ್ತುಗಳು, ಜೇನುತುಪ್ಪ, ತುಪ್ಪ, ಅತ್ತಿಯ ಮರದಿಂದ ಮಾಡಿದ ಸ್ರುವ, ಸುವರ್ಣ ಭೂಷಿತ ಶಂಖ – ಇವುಗಳನ್ನು ತಂದು ರಾಜನಿಗೆ ದರ್ಶಿಸಿದರು.

12040012a ದಾಶಾರ್ಹೇಣಾಭ್ಯನುಜ್ಞಾತಸ್ತತ್ರ ಧೌಮ್ಯಃ ಪುರೋಹಿತಃ|

12040012c ಪ್ರಾಗುದಕ್ಪ್ರವಣಾಂ ವೇದೀಂ ಲಕ್ಷಣೇನೋಪಲಿಪ್ಯ ಹ||

ಅನಂತರ ದಾಶಾರ್ಹನ ಅನುಮತಿಯನ್ನು ಪಡೆದು ಪುರೋಹಿತ ಧೌಮ್ಯನು ಪೂರ್ವೋತ್ತರ ದಿಕ್ಕುಗಳ (ಈಶಾನ್ಯ) ಕಡೆಗೆ ಸ್ವಲ್ಪ ಇಳಿಜಾರಾಗಿದ್ದ ಒಂದು ವೇದಿಯನ್ನು ಸಿದ್ಧಗೊಳಿಸಿದನು.

12040013a ವ್ಯಾಘ್ರಚರ್ಮೋತ್ತರೇ ಶ್ಲಕ್ಷ್ಣೇ ಸರ್ವತೋಭದ್ರ ಆಸನೇ|

12040013c ದೃಢಪಾದಪ್ರತಿಷ್ಠಾನೇ ಹುತಾಶನಸಮತ್ವಿಷಿ||

12040014a ಉಪವೇಶ್ಯ ಮಹಾತ್ಮಾನಂ ಕೃಷ್ಣಾಂ ಚ ದ್ರುಪದಾತ್ಮಜಾಮ್|

12040014c ಜುಹಾವ ಪಾವಕಂ ಧೀಮಾನ್ವಿಧಿಮಂತ್ರಪುರಸ್ಕೃತಮ್||

ಆ ವೇದಿಯನ್ನು ಗೋಮಯದಿಂದ ಸಾರಿಸಿ, ಲಕ್ಷಣಯುಕ್ತವಾಗುವಂತೆ ಮಾಡಿ, ದೃಢಪಾದಗಳಿದ್ದ ಯಜ್ಞೇಶ್ವರನ ಜ್ವಾಲೆಗೆ ಸಮಾನ ಕಾಂತಿಯುಕ್ತವಾದ ಸರ್ವತೋಭದ್ರವೆಂಬ ಆಸನದ ಮೇಲೆ ವ್ಯಾಘ್ರಚರ್ಮವನ್ನೂ ಅದರ ಮೇಲೆ ಬಿಳಿಯ ವಸ್ತ್ರವನ್ನೂ ಹೊದಿಸಿ ಮಹಾತ್ಮ ಯುಧಿಷ್ಠಿರನನ್ನೂ, ದೃಪದಾತ್ಮಜೆ ಕೃಷ್ಣೆಯನ್ನೂ ಕುಳ್ಳಿರಿಸಿದನು. ಅನಂತರ ಧೀಮಂತ ಧೌಮ್ಯನು ಅಗ್ನಿಯನ್ನು ಪ್ರತಿಷ್ಠಾಪಿಸಿ ವಿಧಿಮಂತ್ರ ಪೂರ್ವಕವಾಗಿ ಪಟ್ಟಾಭಿಷೇಕಕ್ಕೆ ಸಂಬಂಧಿಸಿದಂತೆ ಯಜ್ಞೇಶ್ವರನಲ್ಲಿ ಆಜ್ಯಾಹುತಿಗಳನ್ನು ಸಮರ್ಪಿಸಿದನು.

12040015a ಅಭ್ಯಷಿಂಚತ್ಪತಿಂ ಪೃಥ್ವ್ಯಾಃ ಕುಂತೀಪುತ್ರಂ ಯುಧಿಷ್ಠಿರಮ್|

12040015c ಧೃತರಾಷ್ಟ್ರಶ್ಚ ರಾಜರ್ಷಿಃ ಸರ್ವಾಃ ಪ್ರಕೃತಯಸ್ತಥಾ||

ಅನಂತರ ರಾಜರ್ಷಿ ಧೃತರಾಷ್ಟ್ರನೂ ಸರ್ವಪ್ರಜೆಗಳೂ ಕುಂತೀಪುತ್ರ ಯುಧಿಷ್ಠಿರನನ್ನು ಪೃಥ್ವೀಪತಿಯನ್ನಾಗಿ ಅಭಿಷೇಕಿಸಿದರು.

12040016a ತತೋಽನುವಾದಯಾಮಾಸುಃ ಪಣವಾನಕದುಂದುಭೀಃ|

12040016c ಧರ್ಮರಾಜೋಽಪಿ ತತ್ಸರ್ವಂ ಪ್ರತಿಜಗ್ರಾಹ ಧರ್ಮತಃ||

ಬಳಿಕ ಪಣವ-ಅನಕ-ದುಂದುಭಿಗಳನ್ನು ಬಾರಿಸಲಾಯಿತು. ಧರ್ಮರಾಜನಾದರೋ ಅವೆಲ್ಲವನ್ನೂ ಧರ್ಮಪೂರ್ವಕವಾಗಿ ಸ್ವೀಕರಿಸಿದನು.

12040017a ಪೂಜಯಾಮಾಸ ತಾಂಶ್ಚಾಪಿ ವಿಧಿವದ್ಭೂರಿದಕ್ಷಿಣಃ|

12040017c ತತೋ ನಿಷ್ಕಸಹಸ್ರೇಣ ಬ್ರಾಹ್ಮಣಾನ್ಸ್ವಸ್ತಿ ವಾಚಯತ್|

12040017e ವೇದಾಧ್ಯಯನಸಂಪನ್ನಾನ್ಶೀಲವೃತ್ತಸಮನ್ವಿತಾನ್||

ಭೂರಿದಕ್ಷಿಣ ಯುಧಿಷ್ಠಿರನು ಸ್ವಸ್ತಿವಾಚನ ಮಾಡಿದ ವೇದಾಧ್ಯಯನ ಸಂಪನ್ನರೂ ಶೀಲವರ್ತನ ಸಮನ್ವಿತರೂ ಆದ ಬ್ರಾಹ್ಮಣರನ್ನು ಸಹಸ್ರಾರು ನಿಷ್ಕಗಳನ್ನಿತ್ತು ವಿಧಿವತ್ತಾಗಿ ಪೂಜಿಸಿದನು.

12040018a ತೇ ಪ್ರೀತಾ ಬ್ರಾಹ್ಮಣಾ ರಾಜನ್ಸ್ವಸ್ತ್ಯ ಊಚುರ್ಜಯಮೇವ ಚ|

12040018c ಹಂಸಾ ಇವ ಚ ನರ್ದಂತಃ ಪ್ರಶಶಂಸುರ್ಯುಧಿಷ್ಠಿರಮ್||

ರಾಜನ್! ಪ್ರೀತರಾದ ಬ್ರಾಹ್ಮಣರು ಹಂಸಗಳಂತೆ ಉಚ್ಛಸ್ವರಗಳಲ್ಲಿ ಯುಧಿಷ್ಠಿರನಿಗೆ ಜಯಕಾರಗಳನ್ನೂ ಸ್ವಸ್ತಿಮಂತ್ರಗಳನ್ನೂ ಹೇಳಿದರು.

12040019a ಯುಧಿಷ್ಠಿರ ಮಹಾಬಾಹೋ ದಿಷ್ಟ್ಯಾ ಜಯಸಿ ಪಾಂಡವ|

12040019c ದಿಷ್ಟ್ಯಾ ಸ್ವಧರ್ಮಂ ಪ್ರಾಪ್ತೋಽಸಿ ವಿಕ್ರಮೇಣ ಮಹಾದ್ಯುತೇ||

“ಯುಧಿಷ್ಠಿರ! ಮಹಾಬಾಹೋ! ಪಾಂಡವ! ಮಹಾದ್ಯುತೇ! ಅದೃಷ್ಟವಶಾತ್ ನೀನು ನಿನ್ನ ವಿಕ್ರಮದಿಂದ ವಿಜಯಿಯಾಗಿರುವೆ. ಅದೃಷ್ಟವಶಾತ್ ಸ್ವಧರ್ಮವನ್ನು ಪಾಲಿಸಿರುವೆ!

12040020a ದಿಷ್ಟ್ಯಾ ಗಾಂಡೀವಧನ್ವಾ ಚ ಭೀಮಸೇನಶ್ಚ ಪಾಂಡವಃ|

12040020c ತ್ವಂ ಚಾಪಿ ಕುಶಲೀ ರಾಜನ್ಮಾದ್ರೀಪುತ್ರೌ ಚ ಪಾಂಡವೌ||

ರಾಜನ್! ಅದೃಷ್ಟದಿಂದಲೇ ನೀನು, ಗಾಂಡೀವಧನ್ವಿ ಪಾಂಡವ, ಭೀಮಸೇನ ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಕುಶಲಿಗಳಾಗಿರುವಿರಿ!

12040021a ಮುಕ್ತಾ ವೀರಕ್ಷಯಾದಸ್ಮಾತ್ಸಂಗ್ರಾಮಾನ್ನಿಹತದ್ವಿಷಃ|

12040021c ಕ್ಷಿಪ್ರಮುತ್ತರಕಾಲಾನಿ ಕುರು ಕಾರ್ಯಾಣಿ ಪಾಂಡವ||

ಪಾಂಡವ! ಈ ವೀರಕ್ಷಯಕಾರಕ ಯುದ್ಧದಲ್ಲಿ ಹೋರಾಡಿ ಶತ್ರುಗಳಿಂದ ಮುಕ್ತರಾಗಿರುವಿರಿ! ಈಗ ಕ್ಷಿಪ್ರವಾಗಿ ಮುಂದೆ ಮಾಡಬೇಕಾದ ಕಾರ್ಯಗಳನ್ನು ಮಾಡು!”

12040022a ತತಃ ಪ್ರತ್ಯರ್ಚಿತಃ ಸದ್ಭಿರ್ಧರ್ಮರಾಜೋ ಯುಧಿಷ್ಠಿರಃ|

12040022c ಪ್ರತಿಪೇದೇ ಮಹದ್ರಾಜ್ಯಂ ಸುಹೃದ್ಭಿಃ ಸಹ ಭಾರತ||

ಭಾರತ! ಅನಂತರ ಪುನಃ ಸತ್ಪುರುಷರಿಂದ ಅರ್ಚಿತನಾದ ಯುಧಿಷ್ಠಿರನು ಸುಹೃದಯರೊಂದಿಗೆ ಆ ಮಹಾ ರಾಜ್ಯವನ್ನು ಪಡೆದುಕೊಂಡನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾಭಿಷೇಕೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾಭಿಷೇಕ ಎನ್ನುವ ನಲ್ವತ್ತನೇ ಅಧ್ಯಾಯವು.

Premium Photo | Tiger lily close-up in front of a white background

Comments are closed.