Karna Parva: Chapter 42

ಕರ್ಣ ಪರ್ವ

೪೨

ಕರ್ಣ-ಧೃಷ್ಟದ್ಯುಮ್ನರ ಯುದ್ಧ (೧-೧೨). ಕರ್ಣ-ಸಾತ್ಯಕಿಯರ ಯುದ್ಧ (೧೩-೧೭). ಅಶ್ವತ್ಥಾಮ-ಧೃಷ್ಟದ್ಯುಮ್ನರ ಯುದ್ಧ (೧೮-೩೯). ಧೃಷ್ಟದ್ಯುಮ್ನನನ್ನು ಕೊಲ್ಲಲು ಉದ್ಯುಕ್ತನಾಗಿದ್ದ ಅಶ್ವತ್ಥಾಮನನ್ನು ಅರ್ಜುನನು ಎದುರಿಸಿ, ಮೂರ್ಛೆಗೊಳಿಸಿದುದು (೪೦-೫೭).

08042001 ಸಂಜಯ ಉವಾಚ|

08042001a ತತಃ ಪುನಃ ಸಮಾಜಗ್ಮುರಭೀತಾಃ ಕುರುಸೃಂಜಯಾಃ|

08042001c ಯುಧಿಷ್ಠಿರಮುಖಾಃ ಪಾರ್ಥಾ ವೈಕರ್ತನಮುಖಾ ವಯಂ||

ಸಂಜಯನು ಹೇಳಿದನು: “ಅನಂತರ ಪುನಃ ಅಭೀತ ಕುರು-ಸೃಂಜಯರು ಯುದ್ಧದಲ್ಲಿ ತೊಡಗಿದರು. ಪಾರ್ಥರು ಯುಧಿಷ್ಠಿರನನ್ನು ಮುಂದೆಮಾಡಿಕೊಂಡು ಮತ್ತು ನಾವು ವೈಕರ್ತನ ಕರ್ಣನನ್ನು ಮುಂದೆಮಾಡಿಕೊಂಡು ಯುದ್ಧಮಾಡುತ್ತಿದ್ದೆವು.

08042002a ತತಃ ಪ್ರವವೃತೇ ಭೀಮಃ ಸಂಗ್ರಾಮೋ ಲೋಮಹರ್ಷಣ|

08042002c ಕರ್ಣಸ್ಯ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ||

ಆಗ ಕರ್ಣ ಮತ್ತು ಪಾಂಡವರ ನಡುವೆ ಯಮರಾಷ್ಟ್ರವನ್ನು ವಿವರ್ಧಿಸುವಂತಹ ಭಯಂಕರ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಯಿತು.

08042003a ತಸ್ಮಿನ್ಪ್ರವೃತ್ತೇ ಸಂಗ್ರಾಮೇ ತುಮುಲೇ ಶೋಣಿತೋದಕೇ|

08042003c ಸಂಶಪ್ತಕೇಷು ಶೂರೇಷು ಕಿಂಚಿಚ್ಚಿಷ್ಟೇಷು ಭಾರತ||

ಭಾರತ! ಆ ತುಮುಲ ಸಂಗ್ರಾಮದಲ್ಲಿ ರಕ್ತವು ನೀರಿನಂತೆ ಹರಿಯುತ್ತಿತ್ತು. ಶೂರ ಸಂಶಪ್ತಕರು ಸ್ವಲ್ಪಮಾತ್ರವೇ ಉಳಿದುಕೊಂಡಿದ್ದರು.

08042004a ಧೃಷ್ಟದ್ಯುಮ್ನೋ ಮಹಾರಾಜ ಸಹಿತಃ ಸರ್ವರಾಜಭಿಃ|

08042004c ಕರ್ಣಮೇವಾಭಿದುದ್ರಾವ ಪಾಂಡವಾಶ್ಚ ಮಹಾರಥಾಃ||

ಮಹಾರಾಜ! ಆಗ ಮಹಾರಥ ಪಾಂಡವರು ಮತ್ತು ಧೃಷ್ಟದ್ಯುಮ್ನನು ಸರ್ವರಾಜರೊಂದಿಗೆ ಕರ್ಣನನ್ನೇ ಆಕ್ರಮಣಿಸಿದರು.

08042005a ಆಗಚ್ಚಮಾನಾಂಸ್ತಾನ್ಸಂಖ್ಯೇ ಪ್ರಹೃಷ್ಟಾನ್ವಿಜಯೈಷಿಣಃ|

08042005c ದಧಾರೈಕೋ ರಣೇ ಕರ್ಣೋ ಜಲೌಘಾನಿವ ಪರ್ವತಃ||

ಯುದ್ಧದಲ್ಲಿ ಪ್ರಹೃಷ್ಟರಾಗಿ ಬರುತ್ತಿರುವ ಆ ವಿಜಯಾಕಾಂಕ್ಷಿಗಳನ್ನು ರಣದಲ್ಲಿ ಕರ್ಣನೊಬ್ಬನೇ ಮೋಡಗಳನ್ನು ಪರ್ವತವು ಹೇಗೋ ಹಾಗೆ ಸಹಿಸಿಕೊಂಡನು.

08042006a ತಮಾಸಾದ್ಯ ತು ತೇ ಕರ್ಣಂ ವ್ಯಶೀರ್ಯಂತ ಮಹಾರಥಾಃ|

08042006c ಯಥಾಚಲಂ ಸಮಾಸಾದ್ಯ ಜಲೌಘಾಃ ಸರ್ವತೋದಿಶಂ|

08042006e ತಯೋರಾಸೀನ್ಮಹಾರಾಜ ಸಂಗ್ರಾಮೋ ಲೋಮಹರ್ಷಣಃ||

ಕರ್ಣನನ್ನು ಎದುರಿಸಿ ಆ ಮಹಾರಥರು ಮೋಡಗಳು ಪರ್ವತವನ್ನು ಸಮೀಪಿಸಿ ಮಳೆಸುರಿಸುವಂತೆ ಅವನ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು. ಮಹಾರಾಜ! ಆವರ ಮಧ್ಯೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯಿತು.

08042007a ಧೃಷ್ಟದ್ಯುಮ್ನಸ್ತು ರಾಧೇಯಂ ಶರೇಣ ನತಪರ್ವಣಾ|

08042007c ತಾಡಯಾಮಾಸ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಧೃಷ್ಟದ್ಯುಮ್ನನಾದರೋ ರಾಧೇಯನನ್ನು ನತಪರ್ವಣ ಶರಗಳಿಂದ ಹೊಡೆಯುತ್ತಾ ಸಂಕ್ರುದ್ಧನಾಗಿ ನಿಲ್ಲು ನಿಲ್ಲೆಂದು ಹೇಳಿದನು.

08042008a ವಿಜಯಂ ತು ಧನುಃಶ್ರೇಷ್ಠಂ ವಿಧುನ್ವಾನೋ ಮಹಾರಥಃ|

08042008c ಪಾರ್ಷತಸ್ಯ ಧನುಶ್ಚಿತ್ತ್ವಾ ಶರಾನಾಶೀವಿಷೋಪಮಾನ್|

08042008e ತಾಡಯಾಮಾಸ ಸಂಕ್ರುದ್ಧಃ ಪಾರ್ಷತಂ ನವಭಿಃ ಶರೈಃ||

ಮಹಾರಥ ಕರ್ಣನಾದರೋ ಶ್ರೇಷ್ಠ ವಿಜಯ ಧನುಸ್ಸನ್ನು ಟೇಂಕರಿಸುತ್ತಾ ಪಾರ್ಷತನ ಧನುಸ್ಸನ್ನು ಸರ್ಪವಿಷಗಳಂತಿದ್ದ ಬಾಣಗಳಿಂದ ತುಂಡರಿಸಿ, ಸಂಕ್ರುದ್ಧನಾಗಿ ಪಾರ್ಷತನನ್ನು ಒಂಭತ್ತು ಶರಗಳಿಂದ ಹೊಡೆದನು.

08042009a ತೇ ವರ್ಮ ಹೇಮವಿಕೃತಂ ಭಿತ್ತ್ವಾ ತಸ್ಯ ಮಹಾತ್ಮನಃ|

08042009c ಶೋಣಿತಾಕ್ತಾ ವ್ಯರಾಜಂತ ಶಕ್ರಗೋಪಾ ಇವಾನಘ||

ಅನಘ! ಅವುಗಳು ಆ ಮಹಾತ್ಮನ ಹೇಮಮಯ ಕವಚವನ್ನು ಭೇದಿಸಿ ರಕ್ತದಿಂದ ತೋಯ್ದು ಇಂದ್ರಗೋಪಗಳಂತೆ ಹೊಳೆಯುತ್ತಿದ್ದವು.

08042010a ತದಪಾಸ್ಯ ಧನುಶ್ಚಿನ್ನಂ ಧೃಷ್ಟದ್ಯುಮ್ನೋ ಮಹಾರಥಃ|

08042010c ಅನ್ಯದ್ಧನುರುಪಾದಾಯ ಶರಾಂಶ್ಚಾಶೀವಿಷೋಪಮಾನ್|

08042010e ಕರ್ಣಂ ವಿವ್ಯಾಧ ಸಪ್ತತ್ಯಾ ಶರೈಃ ಸಂನತಪರ್ವಭಿಃ||

ತುಂಡಾದ ಧನುಸ್ಸನ್ನೆಸೆದು ಮಹಾರಥ ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸರ್ಪವಿಷದಂತಿದ್ದ ಶರಗಳಿಂದ ಮತ್ತು ಎಪ್ಪತ್ತು ಸನ್ನತಪರ್ವ ಶರಗಳಿಂದ ಕರ್ಣನನ್ನು ಹೊಡೆದನು.

08042011a ತಥೈವ ರಾಜನ್ಕರ್ಣೋಽಪಿ ಪಾರ್ಷತಂ ಶತ್ರುತಾಪನಂ|

08042011c ದ್ರೋಣಶತ್ರುಂ ಮಹೇಷ್ವಾಸೋ ವಿವ್ಯಾಧ ನಿಶಿತೈಃ ಶರೈಃ||

ರಾಜನ್! ಮಹೇಷ್ವಾಸ ಕರ್ಣನೂ ಕೂಡ ದ್ರೋಣಶತ್ರು ಶತ್ರುತಾಪನ ಪಾರ್ಷತನನ್ನು ನಿಶಿತ ಶರಗಳಿಂದ ಹೊಡೆದನು.

08042012a ತಸ್ಯ ಕರ್ಣೋ ಮಹಾರಾಜ ಶರಂ ಕನಕಭೂಷಣಂ|

08042012c ಪ್ರೇಷಯಾಮಾಸ ಸಂಕ್ರುದ್ಧೋ ಮೃತ್ಯುದಂಡಮಿವಾಪರಂ||

ಮಹಾರಾಜ! ಅವನ ಮೇಲೆ ಕರ್ಣನು ಸಂಕ್ರುದ್ಧನಾಗಿ ಮೃತ್ಯುದಂಡದಂತಿರುವ ಇನ್ನೊಂದು ಕನಕಭೂಷಣ ಶರವನ್ನು ಪ್ರಯೋಗಿಸಿದನು.

08042013a ತಮಾಪತಂತಂ ಸಹಸಾ ಘೋರರೂಪಂ ವಿಶಾಂ ಪತೇ|

08042013c ಚಿಚ್ಚೇದ ಸಪ್ತಧಾ ರಾಜಂ ಶೈನೇಯಃ ಕೃತಹಸ್ತವತ್||

ವಿಶಾಂಪತೇ! ರಾಜನ್! ಅತಿವೇಗದಲ್ಲಿ ಅವನ ಮೇಲೆ ಬೀಳುತ್ತಿದ್ದ ಆ ಘೋರರೂಪದ ಶರವನ್ನು ಶೈನೇಯನು ಕೈಚಳಕದಿಂದ ಏಳು ಭಾಗಗಳನ್ನಾಗಿ ತುಂಡರಿಸಿದನು.

08042014a ದೃಷ್ಟ್ವಾ ವಿನಿಹಿತಂ ಬಾಣಂ ಶರೈಃ ಕರ್ಣೋ ವಿಶಾಂ ಪತೇ|

08042014c ಸಾತ್ಯಕಿಂ ಶರವರ್ಷೇಣ ಸಮಂತಾತ್ಪರ್ಯವಾರಯತ್||

ವಿಶಾಂಪತೇ! ತನ್ನ ಬಾಣವನ್ನು ಶರಗಳಿಂದ ನಿರಸನಗೊಳಿಸಿದುದನ್ನು ನೋಡಿ ಕರ್ಣನು ಸಾತ್ಯಕಿಯನ್ನು ಶರವರ್ಷಗಳಿಂದ ಎಲ್ಲಕಡೆಗಳಿಂದಲೂ ತಡೆದನು.

08042015a ವಿವ್ಯಾಧ ಚೈನಂ ಸಮರೇ ನಾರಾಚೈಸ್ತತ್ರ ಸಪ್ತಭಿಃ|

08042015c ತಂ ಪ್ರತ್ಯವಿಧ್ಯಚ್ಚೈನೇಯಃ ಶರೈರ್ಹೇಮವಿಭೂಷಿತೈಃ||

ಬಳಿಕ ಸಮರದಲ್ಲಿ ಏಳು ನಾರಾಚಗಳಿಂದ ಅವನನ್ನು ಹೊಡೆಯಲು ಅದಕ್ಕೆ ಪ್ರತಿಯಾಗಿ ಶೈನೇಯನು ಹೇಮಭೂಷಿತ ಶರಗಳಿಂದ ಕರ್ಣನನ್ನು ಪ್ರಹರಿಸಿದನು.

08042016a ತತೋ ಯುದ್ಧಮತೀವಾಸೀಚ್ಚಕ್ಷುಃಶ್ರೋತ್ರಭಯಾವಹಂ|

08042016c ರಾಜನ್ಘೋರಂ ಚ ಚಿತ್ರಂ ಚ ಪ್ರೇಕ್ಷಣೀಯಂ ಸಮಂತತಃ||

ರಾಜನ್! ಆಗ ಕಣ್ಣುಗಳಿಂದ ನೋಡಲೂ ಕಿವಿಗಳಿಂದ ಕೇಳಲೂ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ಅದು ಘೋರವೂ ವಿಚಿತ್ರವೂ ಎಲ್ಲರೀತಿಗಳಲ್ಲಿ ಪ್ರೇಕ್ಷಣೀಯವೂ ಆಗಿತ್ತು.

08042017a ಸರ್ವೇಷಾಂ ತತ್ರ ಭೂತಾನಾಂ ಲೋಮಹರ್ಷೋ ವ್ಯಜಾಯತ|

08042017c ತದ್ದೃಷ್ಟ್ವಾ ಸಮರೇ ಕರ್ಮ ಕರ್ಣಶೈನೇಯಯೋರ್ನೃಪ||

ನೃಪ! ಸಮರದಲ್ಲಿ ಕರ್ಣ-ಶೈನೇಯರ ಆ ಕರ್ಮಗಳನ್ನು ನೋಡಿ ಅಲ್ಲಿದ್ದ ಸರ್ವ ಭೂತಗಳಲ್ಲಿಯೂ ಲೋಮಹರ್ಷವುಂಟಾಯಿತು.

08042018a ಏತಸ್ಮಿನ್ನಂತರೇ ದ್ರೌಣಿರಭ್ಯಯಾತ್ಸುಮಹಾಬಲಂ|

08042018c ಪಾರ್ಷತಂ ಶತ್ರುದಮನಂ ಶತ್ರುವೀರ್ಯಾಸುನಾಶನಂ||

ಇದರ ಮಧ್ಯದಲ್ಲಿ ದ್ರೌಣಿಯು ಸುಮಹಾಬಲ ಶತ್ರುದಮನ ಶತ್ರುವೀರ್ಯಸುನಾಶನ ಪಾರ್ಷತನನ್ನು ಆಕ್ರಮಣಿಸಿದನು.

08042019a ಅಭ್ಯಭಾಷತ ಸಂಕ್ರುದ್ಧೋ ದ್ರೌಣಿರ್ದೂರೇ ಧನಂಜಯೇ|

08042019c ತಿಷ್ಠ ತಿಷ್ಠಾದ್ಯ ಬ್ರಹ್ಮಘ್ನ ನ ಮೇ ಜೀವನ್ವಿಮೋಕ್ಷ್ಯಸೇ||

ಸಂಕ್ರುದ್ಧನಾದ ದ್ರೌಣಿಯು ಧನಂಜಯ ಧೃಷ್ಟದ್ಯುಮ್ನನನ್ನು ದೂರದಿಂದಲೇ ಸಂಬೋಧಿಸಿ “ಬ್ರಹ್ಮಘ್ನ! ನಿಲ್ಲು! ನಿಲ್ಲು! ಇಂದು ನೀನು ನನ್ನಿಂದ ಜೀವಸಹಿತವಾಗಿ ಹೋಗುವುದಿಲ್ಲ!” ಎಂದನು.

08042020a ಇತ್ಯುಕ್ತ್ವಾ ಸುಭೃಶಂ ವೀರಃ ಶೀಘ್ರಕೃನ್ನಿಶಿತೈಃ ಶರೈಃ|

08042020c ಪಾರ್ಷತಂ ಚಾದಯಾಮಾಸ ಘೋರರೂಪೈಃ ಸುತೇಜನೈಃ|

08042020e ಯತಮಾನಂ ಪರಂ ಶಕ್ತ್ಯಾ ಯತಮಾನೋ ಮಹಾರಥಃ||

ಹೀಗೆ ಹೇಳಿ ವೀರ ಶೀಘ್ರಕರ್ಮಿ ಮಹಾರಥ ಅಶ್ವತ್ಥಾಮನು ಪ್ರಯತ್ನಪಡುತ್ತಿದ್ದ ಪಾರ್ಷತನನ್ನು ಘೋರರೂಪದ ತೇಜಸ್ಸುಳ್ಳ ನಿಶಿತ ಶರಗಳಿಂದ ಪರಮ ಶಕ್ತಿಯನ್ನುಪಯೋಗಿಸಿ ಪ್ರಯತ್ನಪಟ್ಟು ಪ್ರಹರಿಸಿದನು.

08042021a ಯಥಾ ಹಿ ಸಮರೇ ದ್ರೌಣಿಃ ಪಾರ್ಷತಂ ವೀಕ್ಷ್ಯ ಮಾರಿಷ|

08042021c ತಥಾ ದ್ರೌಣಿಂ ರಣೇ ದೃಷ್ಟ್ವಾ ಪಾರ್ಷತಃ ಪರವೀರಹಾ|

08042021e ನಾತಿಹೃಷ್ಟಮನಾ ಭೂತ್ವಾ ಮನ್ಯತೇ ಮೃತ್ಯುಮಾತ್ಮನಃ||

ಮಾರಿಷ! ಸಮರದಲ್ಲಿ ಹೇಗೆ ದ್ರೌಣಿಯು ಪಾರ್ಷತನನ್ನು ನೋಡಿ ಅವನೇ ತನ್ನ ಮೃತ್ಯುವೆಂದು ತಿಳಿದು ಖಿನ್ನಮನಸ್ಕನಾದನೋ ಹಾಗೆ ರಣದಲ್ಲಿ ದ್ರೌಣಿಯನ್ನು ನೋಡಿದ ಪರವೀರಹ ಪಾರ್ಶತನೂ ಖಿನ್ನಮನಸ್ಕನಾದನು.

08042022a ದ್ರೌಣಿಸ್ತು ದೃಷ್ಟ್ವಾ ರಾಜೇಂದ್ರ ಧೃಷ್ಟದ್ಯುಮ್ನಂ ರಣೇ ಸ್ಥಿತಂ|

08042022c ಕ್ರೋಧೇನ ನಿಃಶ್ವಸನ್ವೀರಃ ಪಾರ್ಷತಂ ಸಮುಪಾದ್ರವತ್|

ರಾಜೇಂದ್ರ! ರಣದಲ್ಲಿ ನಿಂತಿದ್ದ ಧೃಷ್ಟದ್ಯುಮ್ನನನ್ನು ನೋಡಿ ವೀರ ದ್ರೌಣಿಯು ಕ್ರೋಧದಿಂದ ಭುಸುಗುಟ್ಟುತ್ತಾ ಪಾರ್ಷತನನ್ನು ಆಕ್ರಮಣಿಸಿದನು.

08042022e ತಾವನ್ಯೋನ್ಯಂ ತು ದೃಷ್ಟ್ವೈವ ಸಂರಂಭಂ ಜಗ್ಮತುಃ ಪರಂ||

08042023a ಅಥಾಬ್ರವೀನ್ಮಹಾರಾಜ ದ್ರೋಣಪುತ್ರಃ ಪ್ರತಾಪವಾನ್|

08042023c ಧೃಷ್ಟದ್ಯುಮ್ನಂ ಸಮೀಪಸ್ಥಂ ತ್ವರಮಾಣೋ ವಿಶಾಂ ಪತೇ|

08042023e ಪಾಂಚಾಲಾಪಸದಾದ್ಯ ತ್ವಾಂ ಪ್ರೇಷಯಿಷ್ಯಾಮಿ ಮೃತ್ಯವೇ||

ಅನ್ಯೋನ್ಯರನ್ನು ಕಂಡೊಡನೆಯೇ ಅವರಿಬ್ಬರೂ ಪರಮ ಕ್ರುದ್ಧರಾದರು. ಮಹಾರಾಜ! ವಿಶಾಂಪತೇ! ಆಗ ಪ್ರತಾಪವಾನ್ ದ್ರೋಣಪುತ್ರನು ತ್ವರೆಮಾಡಿ ಸಮೀಪದಲ್ಲಿದ್ದ ಧೃಷ್ಟದ್ಯುಮ್ನನನಿಗೆ ಹೇಳಿದನು: “ಪಾಂಚಾಲಕುಲಕಳಂಕನೇ! ಇಂದು ನಾನು ನಿನ್ನನ್ನು ಮೃತ್ಯುವಿಗೆ ಒಪ್ಪಿಸುತ್ತೇನೆ!

08042024a ಪಾಪಂ ಹಿ ಯತ್ತ್ವಯಾ ಕರ್ಮ ಘ್ನತಾ ದ್ರೋಣಂ ಪುರಾ ಕೃತಂ|

08042024c ಅದ್ಯ ತ್ವಾ ಪತ್ಸ್ಯತೇ ತದ್ವೈ ಯಥಾ ಹ್ಯಕುಶಲಂ ತಥಾ||

ಹಿಂದೆ ನೀನು ಎಸಗಿದ ದ್ರೋಣವಧೆಯು ಪಾಪ ಕರ್ಮವಾಗಿತ್ತು. ಅದೇ ಇಂದು ನಿನ್ನನ್ನು, ಎಷ್ಟು ಪಾಪಿಷ್ಟವಾಗಿತ್ತೋ ಅಷ್ಟು ಸಂತಾಪಗೊಳಿಸುತ್ತದೆ!

08042025a ಅರಕ್ಷ್ಯಮಾಣಃ ಪಾರ್ಥೇನ ಯದಿ ತಿಷ್ಠಸಿ ಸಂಯುಗೇ|

08042025c ನಾಪಕ್ರಮಸಿ ವಾ ಮೂಢ ಸತ್ಯಮೇತದ್ಬ್ರವೀಮಿ ತೇ||

ಮೂಢ! ಯುದ್ಧದಲ್ಲಿ ಪಾರ್ಥನು ನಿನ್ನನ್ನು ರಕ್ಷಿಸಲು ನಿಲ್ಲದಿದ್ದರೆ ಅಥವಾ ನೀನು ಪಲಾಯನ ಮಾಡದಿದ್ದರೆ ನಿನ್ನನ್ನು ಸಂಹರಿಸುತ್ತೇನೆ. ಸತ್ಯವನ್ನೇ ಹೇಳುತ್ತಿದ್ದೇನೆ!”

08042026a ಏವಮುಕ್ತಃ ಪ್ರತ್ಯುವಾಚ ಧೃಷ್ಟದ್ಯುಮ್ನಃ ಪ್ರತಾಪವಾನ್|

08042026c ಪ್ರತಿವಾಕ್ಯಂ ಸ ಏವಾಸಿರ್ಮಾಮಕೋ ದಾಸ್ಯತೇ ತವ|

08042026e ಯೇನೈವ ತೇ ಪಿತುರ್ದತ್ತಂ ಯತಮಾನಸ್ಯ ಸಂಯುಗೇ||

ಇದನ್ನು ಕೇಳಿ ಪ್ರತಾಪವಾನ್ ಧೃಷ್ಟದ್ಯುಮ್ನನು ಉತ್ತರಿಸಿದನು: “ನಿನಗೆ ಸರಿಯಾದ ಉತ್ತರವನ್ನು ನನ್ನ ಈ ಖಡ್ಗವೇ ಕೊಡಲಿದೆ! ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ನಿನ್ನ ತಂದೆಗೂ ಇದೇ ಉತ್ತರವನ್ನು ಕೊಟ್ಟಿತ್ತು!

08042027a ಯದಿ ತಾವನ್ಮಯಾ ದ್ರೋಣೋ ನಿಹತೋ ಬ್ರಾಹ್ಮಣಬ್ರುವಃ|

08042027c ತ್ವಾಮಿದಾನೀಂ ಕಥಂ ಯುದ್ಧೇ ನ ಹನಿಷ್ಯಾಮಿ ವಿಕ್ರಮಾತ್||

ಬ್ರಾಹ್ಮಣನೆಂದು ಕೇವಲ ಕರೆಯಿಸಿಕೊಳ್ಳುತ್ತಿದ್ದ ನಿನ್ನ ಆ ದ್ರೋಣನನ್ನು ನಾನು ಸಂಹರಿಸಿರುವಾಗ ಈ ಯುದ್ಧದಲ್ಲಿ ನಿನ್ನನ್ನು ನಾನು ವಿಕ್ರಮದಿಂದ ಏಕೆ ಕೊಲ್ಲಬಾರದು?”

08042028a ಏವಮುಕ್ತ್ವಾ ಮಹಾರಾಜ ಸೇನಾಪತಿರಮರ್ಷಣಃ|

08042028c ನಿಶಿತೇನಾಥ ಬಾಣೇನ ದ್ರೌಣಿಂ ವಿವ್ಯಾಧ ಪಾರ್ಷತಃ||

ಮಹಾರಾಜ! ಹೀಗೆ ಹೇಳಿ ಅಮರ್ಷಣ ಸೇನಾಪತಿ ಪಾರ್ಷತನು ನಿಶಿತ ಬಾಣಗಳಿಂದ ದ್ರೌಣಿಯನ್ನು ಪ್ರಹರಿಸಿದನು.

08042029a ತತೋ ದ್ರೌಣಿಃ ಸುಸಂಕ್ರುದ್ಧಃ ಶರೈಃ ಸಂನತಪರ್ವಭಿಃ|

08042029c ಪ್ರಾಚ್ಚಾದಯದ್ದಿಶೋ ರಾಜನ್ ಧೃಷ್ಟದ್ಯುಮ್ನಸ್ಯ ಸಂಯುಗೇ||

ರಾಜನ್! ಆಗ ಸಂಕ್ರುದ್ಧನಾದ ದ್ರೌಣಿಯು ಸನ್ನತಪರ್ವ ಶರಗಳಿಂದ ರಣದಲ್ಲಿ ಎಲ್ಲಕಡೆಗಳಿಂದ ಧೃಷ್ಟದ್ಯುಮ್ನನನ್ನು ಮುಚ್ಚಿಬಿಟ್ಟನು.

08042030a ನೈವಾಂತರಿಕ್ಷಂ ನ ದಿಶೋ ನೈವ ಯೋಧಾಃ ಸಮಂತತಃ|

08042030c ದೃಶ್ಯಂತೇ ವೈ ಮಹಾರಾಜ ಶರೈಶ್ಚನ್ನಾಃ ಸಹಸ್ರಶಃ||

ಮಹಾರಾಜ! ಸಹಸ್ರಾರು ಶರಗಳಿಂದ ಮುಚ್ಚಿಹೋಗಿದ್ದುದರಿಂದ ಯೋಧರಿಗೆ ಸುತ್ತಲೂ ಅಂತರಿಕ್ಷವಾಗಲೀ ದಿಕ್ಕುಗಳಾಗಲೀ ಕಾಣದಂತಾಯಿತು.

08042031a ತಥೈವ ಪಾರ್ಷತೋ ರಾಜನ್ದ್ರೌಣಿಮಾಹವಶೋಭಿನಂ|

08042031c ಶರೈಃ ಸಂಚಾದಯಾಮಾಸ ಸೂತಪುತ್ರಸ್ಯ ಪಶ್ಯತಃ||

ರಾಜನ್! ಹಾಗೆ ಪಾರ್ಷತನೂ ಕೂಡ ಸೂತಪುತ್ರನು ನೋಡುತ್ತಿದ್ದಂತೆಯೇ ಯುದ್ಧಶೋಭೀ ದ್ರೌಣಿಯನ್ನು ಶರಗಳಿಂದ ಮುಚ್ಚಿಬಿಟ್ಟನು.

08042032a ರಾಧೇಯೋಽಪಿ ಮಹಾರಾಜ ಪಾಂಚಾಲಾನ್ಸಹ ಪಾಂಡವೈಃ|

08042032c ದ್ರೌಪದೇಯಾನ್ಯುಧಾಮನ್ಯುಂ ಸಾತ್ಯಕಿಂ ಚ ಮಹಾರಥಂ|

08042032e ಏಕಃ ಸ ವಾರಯಾಮಾಸ ಪ್ರೇಕ್ಷಣೀಯಃ ಸಮಂತತಃ||

ಮಹಾರಾಜ! ಎಲ್ಲಕಡೆಗಳಿಂದಲೂ ಪ್ರೇಕ್ಷಣೀಯನಾಗಿದ್ದ ರಾಧೇಯನಾದರೋ ಒಬ್ಬನೇ ಪಾಂಡವರೊಂದಿಗೆ ಪಾಂಚಾಲರನ್ನೂ, ದ್ರೌಪದೇಯರನ್ನೂ, ಮಹಾರಥ ಯುಧಾಮನ್ಯು ಸಾತ್ಯಕಿಯನ್ನೂ ತಡೆಯುತ್ತಿದ್ದನು.

08042033a ಧೃಷ್ಟದ್ಯುಮ್ನೋಽಪಿ ಸಮರೇ ದ್ರೌಣೇಶ್ಚಿಚ್ಚೇದ ಕಾರ್ಮುಕಂ|

08042033c ತದಪಾಸ್ಯ ಧನುಶ್ಚಿನ್ನಮನ್ಯದಾದತ್ತ ಕಾರ್ಮುಕಂ|

08042033e ವೇಗವತ್ಸಮರೇ ಘೋರಂ ಶರಾಂಶ್ಚಾಶೀವಿಷೋಪಮಾನ್||

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದ್ರೌಣಿಯ ಬಿಲ್ಲನ್ನು ತುಂಡರಿಸಿದನು. ಆಗ ಸಮರದಲ್ಲಿ ವೇಗವಂತ ಅಶ್ವತ್ಥಾಮನು ತುಂಡಾದ ಬಿಲ್ಲನ್ನು ಎಸೆದು ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸರ್ಪವಿಷಗಳಂತಿದ್ದ ಘೋರ ಬಾಣಗಳನ್ನು ಹೂಡಿದನು.

08042034a ಸ ಪಾರ್ಷತಸ್ಯ ರಾಜೇಂದ್ರ ಧನುಃ ಶಕ್ತಿಂ ಗದಾಂ ಧ್ವಜಂ|

08042034c ಹಯಾನ್ಸೂತಂ ರಥಂ ಚೈವ ನಿಮೇಷಾದ್ವ್ಯಧಮಚ್ಚರೈಃ||

ರಾಜೇಂದ್ರ! ಅವನು ನಿಮಿಷಮಾತ್ರದಲ್ಲಿ ಆ ಶರಗಳಿಂದ ಪಾರ್ಷತನ ಧನುಸ್ಸು-ಶಕ್ತಿ-ಗದೆ-ಧ್ವಜ-ಕುದುರೆಗಳು-ಸಾರಥಿ ಮತ್ತು ರಥವನ್ನೂ ನಾಶಗೊಳಿಸಿದನು.

08042035a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

08042035c ಖಡ್ಗಮಾದತ್ತ ವಿಪುಲಂ ಶತಚಂದ್ರಂ ಚ ಭಾನುಮತ್||

ಧನುಸ್ಸು ತುಂಡಾಗಿದ್ದ ವಿರಥನೂ, ಹತಾಶ್ವನೂ, ಹತಸಾರಥಿಯೂ ಆಗಿದ್ದ ಧೃಷ್ಟದ್ಯುಮ್ನನು ಶತಚಂದ್ರಗಳಂತೆ ಹೊಳೆಯುತ್ತಿದ್ದ ವಿಪುಲ ಖಡ್ಗವನ್ನು ತೆಗೆದುಕೊಂಡನು.

08042036a ದ್ರೌಣಿಸ್ತದಪಿ ರಾಜೇಂದ್ರ ಭಲ್ಲೈಃ ಕ್ಷಿಪ್ರಂ ಮಹಾರಥಃ|

08042036c ಚಿಚ್ಛೇದ ಸಮರೇ ವೀರಃ ಕ್ಷಿಪ್ರಹಸ್ತೋ ದೃಢಾಯುಧಃ|

08042036e ರಥಾದನವರೂಢಸ್ಯ ತದದ್ಭುತಮಿವಾಭವತ್||

ರಾಜೇಂದ್ರ! ಸಮರದಲ್ಲಿ ಅವನು ರಥದಿಂದ ಕೆಳಗಿಳಿಯುವುದರೊಳಗೇ ದೃಢಾಯುಧ ಕ್ಷಿಪ್ರಹಸ್ತ ವೀರ ಮಹಾರಥ ದ್ರೌಣಿಯು ಬೇಗನೇ ಭಲ್ಲಗಳಿಂದ ಖಡ್ಗವನ್ನು ಕತ್ತರಿಸಿದನು. ಅದೊಂದು ಅದ್ಭುತವೇ ಆಗಿತ್ತು!

08042037a ಧೃಷ್ಟದ್ಯುಮ್ನಂ ತು ವಿರಥಂ ಹತಾಶ್ವಂ ಚಿನ್ನಕಾರ್ಮುಕಂ|

08042037c ಶರೈಶ್ಚ ಬಹುಧಾ ವಿದ್ಧಮಸ್ತ್ರೈಶ್ಚ ಶಕಲೀಕೃತಂ|

08042037e ನಾತರದ್ಭರತಶ್ರೇಷ್ಠ ಯತಮಾನೋ ಮಹಾರಥಃ||

ಭರತಶ್ರೇಷ್ಠ! ವಿರಥನಾಗಿದ್ದ, ಅಶ್ವಗಳನ್ನು ಕಳೆದುಕೊಂಡಿದ್ದ, ಧನುಸ್ಸುತುಂಡಾಗಿದ್ದ ಧೃಷ್ಟದ್ಯುಮ್ನನನ್ನು ಅಶ್ವತ್ಥಾಮನು ಅನೇಕ ಶರಸಮೂಹಗಳಿಂದ ಗಾಯಗೊಳಿಸಿದನು. ಆದರೆ ಮಹಾರಥ ದ್ರೌಣಿಯು ಎಷ್ಟು ಪ್ರಯತ್ನಪಟ್ಟರೂ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಸಂಹರಿಸಲು ಆಗಲಿಲ್ಲ.

08042038a ತಸ್ಯಾಂತಮಿಷುಭೀ ರಾಜನ್ಯದಾ ದ್ರೌಣಿರ್ನ ಜಗ್ಮಿವಾನ್|

08042038c ಅಥ ತ್ಯಕ್ತ್ವಾ ಧನುರ್ವೀರಃ ಪಾರ್ಷತಂ ತ್ವರಿತೋಽನ್ವಗಾತ್||

ರಾಜನ್! ಅವನನ್ನು ಬಾಣಗಳಿಂದ ಸಂಹರಿಸಲು ಆಗದಿರಲು ಧನುರ್ವೀರ ದ್ರೌಣಿಯು ಬಿಲ್ಲ-ಬಾಣಗಳನ್ನು ಬಿಸುಟು ತ್ವರೆಮಾಡಿ ಪಾರ್ಷತನ ಕಡೆ ನುಗ್ಗಿದನು.

08042039a ಆಸೀದಾದ್ರವತೋ ರಾಜನ್ವೇಗಸ್ತಸ್ಯ ಮಹಾತ್ಮನಃ|

08042039c ಗರುಡಸ್ಯೇವ ಪತತೋ ಜಿಘೃಕ್ಷೋಃ ಪನ್ನಗೋತ್ತಮಂ||

ರಾಜನ್! ಓಡಿ ಬರುತ್ತಿದ್ದ ಅವನ ವೇಗವು ಹರಿದಾಡುವ ಸರ್ಪಗಳನ್ನು ಭಕ್ಷಿಸಲು ಅಂತರಿಕ್ಷದಿಂದ ಕೆಳಕ್ಕೆ ಎರಗುವ ಗರುಡಪಕ್ಷಿಯ ವೇಗಕ್ಕೆ ಸಮನಾಗಿತ್ತು.

08042040a ಏತಸ್ಮಿನ್ನೇವ ಕಾಲೇ ತು ಮಾಧವೋಽರ್ಜುನಮಬ್ರವೀತ್|

08042040c ಪಶ್ಯ ಪಾರ್ಥ ಯಥಾ ದ್ರೌಣಿಃ ಪಾರ್ಷತಸ್ಯ ವಧಂ ಪ್ರತಿ|

08042040e ಯತ್ನಂ ಕರೋತಿ ವಿಪುಲಂ ಹನ್ಯಾಚ್ಚೈನಮಸಂಶಯಂ||

ಇದೇ ಸಮಯದಲ್ಲಿ ಮಾಧವನು ಅರ್ಜುನನಿಗೆ ಇಂತೆಂದನು: “ಪಾರ್ಥ! ನೋಡು! ದ್ರೌಣಿಯು ಪಾರ್ಷತನ ವಧೆಗೆ ವಿಪುಲ ಪ್ರಯತ್ನಪಡುತ್ತಿರುವುದನ್ನು ನೋಡು. ನಿಸ್ಸಂಶಯವಾಗಿಯೂ ಅವನನ್ನು ಕೊಂದೇಬಿಡುತ್ತಾನೆ!

08042041a ತಂ ಮೋಚಯ ಮಹಾಬಾಹೋ ಪಾರ್ಷತಂ ಶತ್ರುತಾಪನಂ|

08042041c ದ್ರೌಣೇರಾಸ್ಯಮನುಪ್ರಾಪ್ತಂ ಮೃತ್ಯೋರಾಸ್ಯಗತಂ ಯಥಾ||

ಮಹಾಬಾಹೋ! ಸಾವಿನ ದವಡೆಯಂತಿರುವ ದ್ರೌಣಿಯ ಕೈಯಲ್ಲಿ ಸಿಲುಕಿರುವ ಶತ್ರುತಾಪನ ಪಾರ್ಷತನನ್ನು ವಿಮೋಚಿಸು!”

08042042a ಏವಮುಕ್ತ್ವಾ ಮಹಾರಾಜ ವಾಸುದೇವಃ ಪ್ರತಾಪವಾನ್|

08042042c ಪ್ರೈಷಯತ್ತತ್ರ ತುರಗಾನ್ಯತ್ರ ದ್ರೌಣಿರ್ವ್ಯವಸ್ಥಿತಃ||

ಮಹಾರಾಜ! ಹೀಗೆ ಹೇಳಿ ಪ್ರತಾಪವಾನ್ ವಾಸುದೇವನು ದ್ರೌಣಿಯಿದ್ದಲ್ಲಿಗೆ ಕುದುರೆಗಳನ್ನು ಓಡಿಸಿದನು.

08042043a ತೇ ಹಯಾಶ್ಚಂದ್ರಸಂಕಾಶಾಃ ಕೇಶವೇನ ಪ್ರಚೋದಿತಾಃ|

08042043c ಪಿಬಂತ ಇವ ತದ್ವ್ಯೋಮ ಜಗ್ಮುರ್ದ್ರೌಣಿರಥಂ ಪ್ರತಿ||

ಚಂದ್ರಸಂಕಾಶ ಆ ಕುದುರೆಗಳು ಕೇಶವನಿಂದ ಪ್ರಚೋದಿತಗೊಂಡು ಆಕಾಶವನ್ನೇ ಕುಡಿದುಬಿಡುವವೋ ಎನ್ನುವಂತೆ ವೇಗವಾಗಿ ದ್ರೌಣಿರಥದ ಬಳಿ ಬಂದವು.

08042044a ದೃಷ್ಟ್ವಾಯಾಂತೌ ಮಹಾವೀರ್ಯಾವುಭೌ ಕೃಷ್ಣಧನಂಜಯೌ|

08042044c ಧೃಷ್ಟದ್ಯುಮ್ನವಧೇ ರಾಜಂಶ್ಚಕ್ರೇ ಯತ್ನಂ ಮಹಾಬಲಃ||

ರಾಜನ್! ಮಹಾವೀರ್ಯರಾದ ಕೃಷ್ಣ-ಧನಂಜಯರಿಬ್ಬರೂ ಬಂದಮೇಲೂ ಮಹಾಬಲ ದ್ರೌಣಿಯು ಧೃಷ್ಟದ್ಯುಮ್ನನ ವಧೆಯ ಪ್ರಯತ್ನವನ್ನು ಮಾಡುತ್ತಲೇ ಇದ್ದನು.

08042045a ವಿಕೃಷ್ಯಮಾಣಂ ದೃಷ್ಟ್ವೈವ ಧೃಷ್ಟದ್ಯುಮ್ನಂ ಜನೇಶ್ವರ|

08042045c ಶರಾಂಶ್ಚಿಕ್ಷೇಪ ವೈ ಪಾರ್ಥೋ ದ್ರೌಣಿಂ ಪ್ರತಿ ಮಹಾಬಲಃ||

ಜನೇಶ್ವರ! ಧೃಷ್ಟದ್ಯುಮ್ನನನ್ನು ಎಳೆದಾಡುತ್ತಿರುವುದನ್ನು ನೋಡಿ ಮಹಾಬಲ ಪಾರ್ಥನು ದ್ರೌಣಿಯ ಮೇಲೆ ಶರಗಳನ್ನು ಪ್ರಯೋಗಿಸಿದನು.

08042046a ತೇ ಶರಾ ಹೇಮವಿಕೃತಾ ಗಾಂಡೀವಪ್ರೇಷಿತಾ ಭೃಶಂ|

08042046c ದ್ರೌಣಿಮಾಸಾದ್ಯ ವಿವಿಶುರ್ವಲ್ಮೀಕಮಿವ ಪನ್ನಗಾಃ||

ಗಾಂಡೀವದಿಂದ ಪ್ರಹರಿಸಲ್ಪಟ್ಟ ಆ ಹೇಮವಿಕೃತ ಶರಗಳು ಹಾವುಗಳು ಬಿಲವನ್ನು ಹೊಗುವಂತೆ ದ್ರೌಣಿಯ ಶರೀರವನ್ನು ಹೊಕ್ಕವು.

08042047a ಸ ವಿಧ್ವಸ್ತೈಃ ಶರೈರ್ಘೋರೈರ್ದ್ರೋಣಪುತ್ರಃ ಪ್ರತಾಪವಾನ್|

08042047c ರಥಮಾರುರುಹೇ ವೀರೋ ಧನಂಜಯಶರಾರ್ದಿತಃ|

08042047e ಪ್ರಗೃಹ್ಯ ಚ ಧನುಃ ಶ್ರೇಷ್ಠಂ ಪಾರ್ಥಂ ವಿವ್ಯಾಧ ಸಾಯಕೈಃ||

ಆ ಘೋರ ಶರಗಳಿಂದ ಗಾಯಗೊಂಡ ಪ್ರತಾಪವಾನ್ ವೀರ ದ್ರೋಣಪುತ್ರನು ತನ್ನ ರಥವನ್ನೇರಿದನು. ಧನಂಜಯನ ಶರಗಳಿಂದ ಪೀಡಿತನಾದ ಅವನು ಶ್ರೇಷ್ಠ ಧನುಸ್ಸನ್ನು ಹಿಡಿದು ಪಾರ್ಥನನ್ನು ಸಾಯಕಗಳಿಂದ ಹೊಡೆದನು.

08042048a ಏತಸ್ಮಿನ್ನಂತರೇ ವೀರಃ ಸಹದೇವೋ ಜನಾಧಿಪ|

08042048c ಅಪೋವಾಹ ರಥೇನಾಜೌ ಪಾರ್ಷತಂ ಶತ್ರುತಾಪನಂ||

ಜನಾಧಿಪ! ಇದರ ಮಧ್ಯದಲ್ಲಿ ವೀರ ಸಹದೇವನು ಶತ್ರುತಾಪನ ಪಾರ್ಷತನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ದೂರಕರೆದುಕೊಂಡು ಹೋದನು.

08042049a ಅರ್ಜುನೋಽಪಿ ಮಹಾರಾಜ ದ್ರೌಣಿಂ ವಿವ್ಯಾಧ ಪತ್ರಿಭಿಃ|

08042049c ತಂ ದ್ರೋಣಪುತ್ರಃ ಸಂಕ್ರುದ್ಧೋ ಬಾಹ್ವೋರುರಸಿ ಚಾರ್ದಯತ್||

ಮಹಾರಾಜ! ಅರ್ಜುನನೂ ಕೂಡ ದ್ರೌಣಿಯನ್ನು ಪತ್ರಿಗಳಿಂದ ಹೊಡೆದನು. ಅವನನ್ನು ಸಂಕ್ರುದ್ಧನಾದ ದ್ರೋಣಪುತ್ರನು ಬಾಹುಗಳು ಮತ್ತು ಎದೆಗೆ ಹೊಡೆದನು.

08042050a ಕ್ರೋಧಿತಸ್ತು ರಣೇ ಪಾರ್ಥೋ ನಾರಾಚಂ ಕಾಲಸಮ್ಮಿತಂ|

08042050c ದ್ರೋಣಪುತ್ರಾಯ ಚಿಕ್ಷೇಪ ಕಾಲದಂಡಮಿವಾಪರಂ|

08042050e ಸ ಬ್ರಾಹ್ಮಣಸ್ಯಾಂಸದೇಶೇ ನಿಪಪಾತ ಮಹಾದ್ಯುತಿಃ||

ರಣದಲ್ಲಿ ಕ್ರೋಧಿತನಾದ ಪಾರ್ಥನು ಇನ್ನೊಂದು ಕಾಲದಂಡದಂತಿರುವ ಕಾಲಸಮ್ಮಿತ ನಾರಾಚವನ್ನು ದ್ರೋಣಪುತ್ರನ ಮೇಲೆ ಪ್ರಯೋಗಿಸಿದನು. ಆ ಮಹಾದ್ಯುತಿ ಬಾಣವು ಬ್ರಾಹ್ಮಣನ ಹೆಗಲಿನ ಮೇಲೆ ಬಿದ್ದಿತು.

08042051a ಸ ವಿಹ್ವಲೋ ಮಹಾರಾಜ ಶರವೇಗೇನ ಸಂಯುಗೇ|

08042051c ನಿಷಸಾದ ರಥೋಪಸ್ಥೇ ವೈಕ್ಲವ್ಯಂ ಚ ಪರಂ ಯಯೌ||

ಮಹಾರಾಜ! ಸಂಯುಗದಲ್ಲಿ ಶರವೇಗದಿಂದ ವಿಹ್ವಲನಾದ ಅಶ್ವತ್ಥಾಮನು ಪೀಠಕ್ಕೆ ಒರಗಿ ಮೂರ್ಛಿತನಾದನು.

08042052a ತತಃ ಕರ್ಣೋ ಮಹಾರಾಜ ವ್ಯಾಕ್ಷಿಪದ್ವಿಜಯಂ ಧನುಃ|

08042052c ಅರ್ಜುನಂ ಸಮರೇ ಕ್ರುದ್ಧಃ ಪ್ರೇಕ್ಷಮಾಣೋ ಮುಹುರ್ಮುಹುಃ|

08042052e ದ್ವೈರಥಂ ಚಾಪಿ ಪಾರ್ಥೇನ ಕಾಮಯಾನೋ ಮಹಾರಣೇ||

ಮಹಾರಾಜ! ಆಗ ಮಹಾರಣದಲ್ಲಿ ಪಾರ್ಥನೊಂದಿಗೆ ದ್ವೈರಥ ಯುದ್ಧವನ್ನು ಬಯಸುತ್ತಿದ್ದ ಕರ್ಣನು ಕ್ರುದ್ಧನಾಗಿ ಸಮರದಲ್ಲಿ ವಿಜಯ ಧನುಸ್ಸನ್ನು ಸೆಳೆಯುತ್ತಾ ಅರ್ಜುನನನ್ನು ಬಾರಿ ಬಾರಿಗೂ ನೋಡುತ್ತಿದ್ದನು.

08042053a ತಂ ತು ಹಿತ್ವಾ ಹತಂ ವೀರಂ ಸಾರಥಿಃ ಶತ್ರುಕರ್ಶನಂ|

08042053c ಅಪೋವಾಹ ರಥೇನಾಜೌ ತ್ವರಮಾಣೋ ರಣಾಜಿರಾತ್||

ಅಶ್ವತ್ಥಾಮನು ಮೂರ್ಛೆಹೋದುದನ್ನು ನೋಡಿದ ಸಾರಥಿಯು ತ್ವರೆಮಾಡಿ ಆ ಶತ್ರುಕರ್ಶನ ವೀರನನ್ನು ರಣರಂಗದಿಂದ ಕೊಂಡೊಯ್ದನು.

08042054a ಅಥೋತ್ಕ್ರುಷ್ಟಂ ಮಹಾರಾಜ ಪಾಂಚಾಲೈರ್ಜಿತಕಾಶಿಭಿಃ|

08042054c ಮೋಕ್ಷಿತಂ ಪಾರ್ಷತಂ ದೃಷ್ಟ್ವಾ ದ್ರೋಣಪುತ್ರಂ ಚ ಪೀಡಿತಂ||

ಮಹಾರಾಜ! ಪಾರ್ಷತನು ಬಿಡುಗಡೆ ಹೊಂದಿದುದನ್ನೂ ದ್ರೋಣಪುತ್ರನು ಪೀಡಿತನಾದುದನ್ನೂ ನೋಡಿ ವಿಜಯೋತ್ಸಾಹೀ ಪಾಂಚಾಲರು ಜೋರಾಗಿ ಗರ್ಜಿಸಿದರು.

08042055a ವಾದಿತ್ರಾಣಿ ಚ ದಿವ್ಯಾನಿ ಪ್ರಾವಾದ್ಯಂತ ಸಹಸ್ರಶಃ|

08042055c ಸಿಂಹನಾದಶ್ಚ ಸಂಜಜ್ಞೇ ದೃಷ್ಟ್ವಾ ಘೋರಂ ಮಹಾದ್ಭುತಂ||

ಸಾವಿರಾರು ದಿವ್ಯ ವಾದ್ಯಗಳು ಮೊಳಗಿದವು. ಆ ಘೋರ ಮಹಾದ್ಭುತವನ್ನು ನೋಡಿ ಸಿಂಹನಾದಗಳಾದವು.

08042056a ಏವಂ ಕೃತ್ವಾಬ್ರವೀತ್ಪಾರ್ಥೋ ವಾಸುದೇವಂ ಧನಂಜಯಃ|

08042056c ಯಾಹಿ ಸಂಶಪ್ತಕಾನ್ ಕೃಷ್ಣ ಕಾರ್ಯಮೇತತ್ಪರಂ ಮಮ||

ಹೀಗೆ ಮಾಡಿ ಪಾರ್ಥ ಧನಂಜಯನು ವಾಸುದೇವನಿಗೆ “ಕೃಷ್ಣ! ಸಂಶಪ್ತಕರಲ್ಲಿಗೆ ಕೊಂಡೊಯ್ಯಿ! ಅದೊಂದು ನನ್ನ ಪರಮ ಕಾರ್ಯವುಳಿದಿದೆ!” ಎಂದನು.

08042057a ತತಃ ಪ್ರಯಾತೋ ದಾಶಾರ್ಹಃ ಶ್ರುತ್ವಾ ಪಾಂಡವಭಾಷಿತಂ|

08042057c ರಥೇನಾತಿಪತಾಕೇನ ಮನೋಮಾರುತರಂಹಸಾ||

ಪಾಂಡವನಾಡಿದ ಮಾತನ್ನು ಕೇಳಿ ದಾಶಾರ್ಹನು ಎತ್ತರ ಪತಾಕೆಯುಳ್ಳ ಮನೋವೇಗ ರಥವನ್ನು ನಡೆಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದ್ರೌಣ್ಯಪಯಾನೇ ದ್ವಾಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದ್ರೌಣ್ಯಪಯಾನ ಎನ್ನುವ ನಲ್ವತ್ತೆರಡನೇ ಅಧ್ಯಾಯವು.

Related image

Comments are closed.