Drona Parva: Chapter 99

ದ್ರೋಣ ಪರ್ವ: ಜಯದ್ರಥವಧ ಪರ್ವ

೯೯

ಸಾತ್ಯಕಿಯಿಂದ ದುಃಶಾಸನನ ಪರಾಜಯ (೧-೨೮).

07099001 ಸಂಜಯ ಉವಾಚ|

07099001a ತತೋ ದುಃಶಾಸನೋ ರಾಜನ್ ಶೈನೇಯಂ ಸಮುಪಾದ್ರವತ್|

07099001c ಕಿರಂ ಶರಸಹಸ್ರಾಣಿ ಪರ್ಜನ್ಯ ಇವ ವೃಷ್ಟಿಮಾನ್||

ಸಂಜಯನು ಹೇಳಿದನು: “ರಾಜನ್! ಅನಂತರ ದುಃಶಾಸನನು ಮಳೆಗರೆಯುತ್ತಿರುವ ಮೋಡದಂತೆ ಸಹಸ್ರಾರು ಬಾಣಗಳನ್ನು ಸುರಿಸುತ್ತಾ ಶೈನೇಯ ಸಾತ್ಯಕಿಯನ್ನು ಆಕ್ರಮಣಿಸಿದನು.

07099002a ಸ ವಿದ್ಧ್ವಾ ಸಾತ್ಯಕಿಂ ಷಷ್ಟ್ಯಾ ತಥಾ ಷೋಡಶಭಿಃ ಶರೈಃ|

07099002c ನಾಕಂಪಯತ್ ಸ್ಥಿತಂ ಯುದ್ಧೇ ಮೈನಾಕಮಿವ ಪರ್ವತಂ||

ಸಾತ್ಯಕಿಯನ್ನು ಅರವತ್ತು ಮತ್ತು ಹಾಗೆಯೇ ಹದಿನಾರು ಶರಗಳಿಂದ ಹೊಡೆದರೂ ಯುದ್ಧದಲ್ಲಿ ಮೈನಾಕಪರ್ವತದಂತೆ ಸ್ಥಿರನಾಗಿ ನಿಂತಿದ್ದ ಅವನನ್ನು ಅಲುಗಾಡಿಸಲೂ ಆಗಲಿಲ್ಲ.

07099003a ಸ ತು ದುಃಶಾಸನಂ ವೀರಃ ಸಾಯಕೈರಾವೃಣೋದ್ಭೃಶಂ|

07099003c ಮಶಕಂ ಸಮನುಪ್ರಾಪ್ತಮೂರ್ಣನಾಭಿರಿವೋರ್ಣಯಾ||

ಆ ವೀರನು ಉಕ್ಕಿಬರುತ್ತಿರುವ ಸಾಗರದಂತೆ ಆಕ್ರಮಣಿಸುತ್ತಿರುವ ದುಃಶಾಸನನನ್ನು ಸಾಯಕಗಳಿಂದ ತುಂಬಾ ಗಾಯಗೊಳಿಸಿದನು.

07099004a ದೃಷ್ಟ್ವಾ ದುಃಶಾಸನಂ ರಾಜಾ ತಥಾ ಶರಶತಾಚಿತಂ|

07099004c ತ್ರಿಗರ್ತಾಂಶ್ಚೋದಯಾಮಾಸ ಯುಯುಧಾನರಥಂ ಪ್ರತಿ||

ದುಃಶಾಸನನು ಹಾಗೆ ಬಾಣಗಳಿಂದ ಪೀಡಿತನಾದುದನ್ನು ನೋಡಿ ರಾಜಾ ದುರ್ಯೋಧನನು ಯುಯುಧಾನ ಸಾತ್ಯಕಿಯ ರಥದ ಕಡೆ ಧಾವಿಸುವಂತೆ ತ್ರಿಗರ್ತರನ್ನು ಪ್ರಚೋದಿಸಿದನು.

07099005a ತೇಽಗಚ್ಚನ್ಯುಯುಧಾನಸ್ಯ ಸಮೀಪಂ ಕ್ರೂರಕಾರಿಣಃ|

07099005c ತ್ರಿಗರ್ತಾನಾಂ ತ್ರಿಸಾಹಸ್ರಾ ರಥಾ ಯುದ್ಧವಿಶಾರದಾಃ||

ಆ ಕ್ರೂರಕರಿಣೀ ಯುದ್ಧವಿಶಾರದ ತ್ರಿಗರ್ತರು ಮೂರು ಸಾವಿರ ರಥಗಳನ್ನು ಕೂಡಿಕೊಂಡು ಯುಯುಧಾನನ ಬಳಿ ಹೋದರು.

07099006a ತೇ ತು ತಂ ರಥವಂಶೇನ ಮಹತಾ ಪರ್ಯವಾರಯನ್|

07099006c ಸ್ಥಿರಾಂ ಕೃತ್ವಾ ಮತಿಂ ಯುದ್ಧೇ ಭೂತ್ವಾ ಸಂಶಪ್ತಕಾ ಮಿಥಃ||

ಅವರು ಯುದ್ಧದಲ್ಲಿ ಸ್ಥಿರಬುದ್ಧಿಯನ್ನಿರಿಸಿಕೊಂಡು ಪಲಾಯನಮಾಡುವುದಿಲ್ಲವೆಂದು ಶಪಥವನ್ನು ತೊಟ್ಟು ಆ ಮಹಾ ರಥಗುಂಪಿನಿಂದ ಸಾತ್ಯಕಿಯನ್ನು ಸುತ್ತುವರೆದರು.

07099007a ತೇಷಾಂ ಪ್ರಯತತಾಂ ಯುದ್ಧೇ ಶರವರ್ಷಾಣಿ ಮುಂಚತಾಂ|

07099007c ಯೋಧಾನ್ಪಂಚಶತಾನ್ಮುಖ್ಯಾನಗ್ರಾನೀಕೇ ವ್ಯಪೋಥಯತ್||

ಬಾಣಗಳ ಮಳೆಯನ್ನು ಸುರಿಸುತ್ತಾ ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ಅವರ ಸೇನೆಗಳ ಎದುರಿರುವ ಐನೂರು ಯೋಧರನ್ನು ಸಾತ್ಯಕಿಯು ಉರುಳಿಸಿಬಿಟ್ಟನು.

07099008a ತೇಽಪತಂತ ಹತಾಸ್ತೂರ್ಣಂ ಶಿನಿಪ್ರವರಸಾಯಕೈಃ|

07099008c ಮಹಾಮಾರುತವೇಗೇನ ರುಗ್ಣಾ ಇವ ಮಹಾದ್ರುಮಾಃ||

ಕೂಡಲೇ ಅವರು ವೇಗವಾಗಿ ಬೀಸುತ್ತಿದ್ದ ಮಹಾಚಂಡಮಾರುತಕ್ಕೆ ಸಿಲುಕಿ ಮುರಿದುಬಿದ್ದ ಮಹಾಮರಗಳಂತೆ ಶಿನಿಪ್ರವರನ ಸಾಯಕಗಳಿಗೆ ಸಿಲುಕಿ ಹತರಾಗಿ ಬಿದ್ದರು.

07099009a ರಥೈಶ್ಚ ಬಹುಧಾ ಚಿನ್ನೈರ್ಧ್ವಜೈಶ್ಚೈವ ವಿಶಾಂ ಪತೇ|

07099009c ಹಯೈಶ್ಚ ಕನಕಾಪೀಡೈಃ ಪತಿತೈಸ್ತತ್ರ ಮೇದಿನೀ||

ವಿಶಾಂಪತೇ! ಅನೇಕ ರಥಗಳು ಮತ್ತು ಧ್ವಜಗಳೂ ತುಂಡಾಗಿ ಮತ್ತು ಬಂಗಾರದಿಂದ ಅಲಂಕೃತ ಕುದುರೆಗಳು ಹತವಾಗಿ ರಣಭೂಮಿಯಮೇಲೆ ಬಿದ್ದಿದ್ದವು.

07099010a ಶೈನೇಯಶರಸಂಕೃತ್ತೈಃ ಶೋಣಿತೌಘಪರಿಪ್ಲುತೈಃ|

07099010c ಅಶೋಭತ ಮಹಾರಾಜ ಕಿಂಶುಕೈರಿವ ಪುಷ್ಪಿತೈಃ||

ಮಹಾರಾಜ! ಶೈನೇಯನ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಅವು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಶೋಭಿಸಿದವು.

07099011a ತೇ ವಧ್ಯಮಾನಾಃ ಸಮರೇ ಯುಯುಧಾನೇನ ತಾವಕಾಃ|

07099011c ತ್ರಾತಾರಂ ನಾಧ್ಯಗಚ್ಚಂತ ಪಂಕಮಗ್ನಾ ಇವ ದ್ವಿಪಾಃ||

ಸಮರದಲ್ಲಿ ಯುಯುಧಾನನಿಂದ ವಧಿಸಲ್ಪಡುತ್ತಿದ್ದ ನಿನ್ನವರು ಕೆಸರಿನಲ್ಲಿ ಸಿಲುಕಿದ್ದ ಆನೆಗಳಂತೆ ತ್ರಾತಾರನ್ಯಾರನ್ನೂ ಪಡೆಯಲಿಲ್ಲ.

07099012a ತತಸ್ತೇ ಪರ್ಯವರ್ತಂತ ಸರ್ವೇ ದ್ರೋಣರಥಂ ಪ್ರತಿ|

07099012c ಭಯಾತ್ಪತಗರಾಜಸ್ಯ ಗರ್ತಾನೀವ ಮಹೋರಗಾಃ||

ಆಗ ಅವರೆಲ್ಲರೂ ಪತಗರಾಜನ ಭಯದಿಂದ ಬಿಲಗಳನ್ನು ಸೇರುವ ಮಹೋರಗಗಳಂತೆ ದ್ರೋಣನ ರಥದ ಬಳಿ ಸೇರಿದರು.

07099013a ಹತ್ವಾ ಪಂಚಶತಾನ್ಯೋಧಾನ್ ಶರೈರಾಶೀವಿಷೋಪಮೈಃ|

07099013c ಪ್ರಾಯಾತ್ಸ ಶನಕೈರ್ವೀರೋ ಧನಂಜಯರಥಂ ಪ್ರತಿ||

ವಿಷಸರ್ಪಗಳಂತಿರುವ ಶರಗಳಿಂದ ಆ ಐನೂರು ಯೋಧರನ್ನು ಸಂಹರಿಸಿ ವೀರ ಸಾತ್ಯಕಿಯು ನಿಧಾನವಾಗಿ ಧನಂಜಯನ ರಥದ ಕಡೆ ಪ್ರಯಾಣಿಸಿದನು.

07099014a ತಂ ಪ್ರಯಾಂತಂ ನರಶ್ರೇಷ್ಠಂ ಪುತ್ರೋ ದುಃಶಾಸನಸ್ತವ|

07099014c ವಿವ್ಯಾಧ ನವಭಿಸ್ತೂರ್ಣಂ ಶರೈಃ ಸನ್ನತಪರ್ವಭಿಃ||

ಮುಂದೆ ಸಾಗುತ್ತಿದ್ದ ಆ ನರಶ್ರೇಷ್ಠನನ್ನು ನಿನ್ನ ಮಗ ದುಶಾಸನನು ಕೂಡಲೇ ಒಂಭತ್ತು ಸನ್ನತಪರ್ವ ಶರಗಳಿಂದ ಹೊಡೆದನು.

07099015a ಸ ತು ತಂ ಪ್ರತಿವಿವ್ಯಾಧ ಪಂಚಭಿರ್ನಿಶಿತೈಃ ಶರೈಃ|

07099015c ರುಕ್ಮಪುಂಖೈರ್ಮಹೇಷ್ವಾಸೋ ಗಾರ್ಧ್ರಪತ್ರೈರಜಿಹ್ಮಗೈಃ||

ಮಹೇಷ್ವಾಸ ಸಾತ್ಯಕಿಯಾದರೋ ಅವನನ್ನು ಐದು ರುಕ್ಮಪುಂಖಗಳ, ಹದ್ದಿನ ಗರಿಗಳ ನಿಶಿತ ಜಿಹ್ಮಗ ಶರಗಳಿಂದ ತಿರುಗಿ ಹೊಡೆದನು.

07099016a ಸಾತ್ಯಕಿಂ ತು ಮಹಾರಾಜ ಪ್ರಹಸನ್ನಿವ ಭಾರತ|

07099016c ದುಃಶಾಸನಸ್ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ||

ಮಹಾರಾಜ! ಭಾರತ! ದುಃಶಾಸನನಾದರೋ ನಗುತ್ತಿರುವನೋ ಎನ್ನುವಂತೆ ಸಾತ್ಯಕಿಯನ್ನು ಮೂರರಿಂದ ಹೊಡೆದು ಪುನಃ ಐದರಿಂದ ಹೊಡೆದನು.

07099017a ಶೈನೇಯಸ್ತವ ಪುತ್ರಂ ತು ವಿದ್ಧ್ವಾ ಪಂಚಭಿರಾಶುಗೈಃ|

07099017c ಧನುಶ್ಚಾಸ್ಯ ರಣೇ ಚಿತ್ತ್ವಾ ವಿಸ್ಮಯನ್ನರ್ಜುನಂ ಯಯೌ||

ಶೈನೇಯನು ನಿನ್ನ ಮಗನನ್ನು ಐದು ಆಶುಗಗಳಿಂದ ಹೊಡೆದು ಮತ್ತು ರಣದಲ್ಲಿ ಅವನ ಧನುಸ್ಸನ್ನು ಕತ್ತರಿಸಿ ವಿಸ್ಮಯನನ್ನಾಗಿಸಿ ಅರ್ಜುನನ ಕಡೆ ಹೋದನು.

07099018a ತತೋ ದುಃಶಾಸನಃ ಕ್ರುದ್ಧೋ ವೃಷ್ಣಿವೀರಾಯ ಗಚ್ಚತೇ|

07099018c ಸರ್ವಪಾರಶವೀಂ ಶಕ್ತಿಂ ವಿಸಸರ್ಜ ಜಿಘಾಂಸಯಾ||

ವೃಷ್ಣಿವೀರನು ಹಾಗೆ ಹೋಗಲು ಕ್ರುದ್ಧನಾದ ದುಃಶಾಸನನು ಅವನನ್ನು ಕೊಲ್ಲಲು ಬಯಸಿ ಸರ್ವವೂ ಉಕ್ಕಿನ ಮಯವಾಗಿದ್ದ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು.

07099019a ತಾಂ ತು ಶಕ್ತಿಂ ತದಾ ಘೋರಾಂ ತವ ಪುತ್ರಸ್ಯ ಸಾತ್ಯಕಿಃ|

07099019c ಚಿಚ್ಚೇದ ಶತಧಾ ರಾಜನ್ನಿಶಿತೈಃ ಕಂಕಪತ್ರಿಭಿಃ||

ರಾಜನ್! ನಿನ್ನ ಮಗನ ಆ ಘೋರ ಶಕ್ತಿಯನ್ನಾದರೋ ಸಾತ್ಯಕಿಯು ನಿಶಿತ ಕಂಕಪತ್ರಿಗಳಿಂದ ನೂರುತುಂಡುಗಳನ್ನಾಗಿ ಕತ್ತರಿಸಿದನು.

07099020a ಅಥಾನ್ಯದ್ಧನುರಾದಾಯ ಪುತ್ರಸ್ತವ ಜನೇಶ್ವರ|

07099020c ಸಾತ್ಯಕಿಂ ದಶಭಿರ್ವಿದ್ಧ್ವಾ ಸಿಂಹನಾದಂ ನನಾದ ಹ||

ಜನೇಶ್ವರ! ಆಗ ನಿನ್ನ ಮಗನು ಇನ್ನೊಂದು ಧನುಸ್ಸೆನ್ನೆತ್ತಿಕೊಂಡು ಸಾತ್ಯಕಿಯನ್ನು ಹತ್ತು ಬಾಣಗಳಿಂದ ಹೊಡೆದು ಸಿಂಹನಾದಗೈದನು.

07099021a ಸಾತ್ಯಕಿಸ್ತು ರಣೇ ಕ್ರುದ್ಧೋ ಮೋಹಯಿತ್ವಾ ಸುತಂ ತವ|

07099021c ಶರೈರಗ್ನಿಶಿಖಾಕಾರೈರಾಜಘಾನ ಸ್ತನಾಂತರೇ|

07099021e ಸರ್ವಾಯಸೈಸ್ತೀಕ್ಷ್ಣವಕ್ತ್ರೈರಷ್ಟಾಭಿರ್ವಿವ್ಯಧೇ ಪುನಃ||

ರಣದಲ್ಲಿ ಕ್ರುದ್ಧನಾದ ಸಾತ್ಯಕಿಯಾದರೋ ನಿನ್ನ ಮಗನನ್ನು ಮೂರ್ಛೆಗೊಳಿಸುತ್ತಾ ಅಗ್ನಿಶಿಖೆಗಳ ಆಕಾರದಲ್ಲಿದ್ದ ಶರಗಳನ್ನು ಅವನ ಎದೆಗೆ ಗುರಿಯಿಟ್ಟು ಹೊಡೆದನು. ಪುನಃ ಎಂಟು ತೀಕ್ಷ್ಣಮುಖಗಳುಳ್ಳ ಉಕ್ಕಿನ ಬಾಣಗಳಿಂದ ಹೊಡೆದನು.

07099022a ದುಃಶಾಸನಸ್ತು ವಿಂಶತ್ಯಾ ಸಾತ್ಯಕಿಂ ಪ್ರತ್ಯವಿಧ್ಯತ|

07099022c ಸಾತ್ವತೋಽಪಿ ಮಹಾರಾಜ ತಂ ವಿವ್ಯಾಧ ಸ್ತನಾಂತರೇ|

07099022e ತ್ರಿಭಿರೇವ ಮಹಾವೇಗೈಃ ಶರೈಃ ಸನ್ನತಪರ್ವಭಿಃ||

ಅದಕ್ಕೆ ಪ್ರತಿಯಾಗಿ ದುಃಶಾಸನನೂ ಕೂಡ ಸಾತ್ಯಕಿಯನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಮಹಾರಾಜ! ತಿರುಗಿ ಸಾತ್ವತನೂ ಕೂಡ ಮಹಾವೇಗದಿಂದ ಅವನ ಎದೆಗೆ ಮೂರು ಸನ್ನತಪರ್ವ ಶರಗಳಿಂದ ಹೊಡೆದನು.

07099023a ತತೋಽಸ್ಯ ವಾಹಾನ್ನಿಶಿತೈಃ ಶರೈರ್ಜಘ್ನೇ ಮಹಾರಥಃ|

07099023c ಸಾರಥಿಂ ಚ ಸುಸಂಕ್ರುದ್ಧಃ ಶರೈಃ ಸನ್ನತಪರ್ವಭಿಃ||

ಆಗ ತುಂಬಾ ಕ್ರೋಧಿತನಾದ ಮಹಾರಥ ಸಾತ್ಯಕಿಯು ದುಃಶಾಸನನ ಕುದುರೆಗಳನ್ನು ನಿಶಿತ ಬಾಣಗಳಿಂದ ಮತ್ತು ಸಾರಥಿಯನ್ನು ಕೂಡ ಸನ್ನತ ಪರ್ವ ಶರಗಳಿಂದ ಹೊಡೆದು ಸಂಹರಿಸಿದನು.

07099024a ಧನುರೇಕೇನ ಭಲ್ಲೇನ ಹಸ್ತಾವಾಪಂ ಚ ಪಂಚಭಿಃ|

07099024c ಧ್ವಜಂ ಚ ರಥಶಕ್ತಿಂ ಚ ಭಲ್ಲಾಭ್ಯಾಂ ಪರಮಾಸ್ತ್ರವಿತ್|

07099024e ಚಿಚ್ಚೇದ ವಿಶಿಖೈಸ್ತೀಕ್ಷ್ಣೈಸ್ತಥೋಭೌ ಪಾರ್ಷ್ಣಿಸಾರಥೀ||

ಒಂದೇ ಭಲ್ಲದಿಂದ ಅವನ ಧನುಸ್ಸನ್ನೂ, ಹಸ್ತಾವಾಪವನ್ನೂ ಕತ್ತರಿಸಿ, ಎರಡು ಭಲ್ಲಗಳಿಂದ ಧ್ವಜವನ್ನೂ ರಥಶಕ್ತಿಯನ್ನೂ ತುಂಡರಿಸಿ ಆ ಪರಮಾಸ್ತ್ರವಿದುವು ತೀಕ್ಷ್ಣ ವಿಶಿಖಗಳಿಂದ ಅವನ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.

07099025a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

07099025c ತ್ರಿಗರ್ತಸೇನಾಪತಿನಾ ಸ್ವರಥೇನಾಪವಾಹಿತಃ||

ಧನುಸ್ಸು ಮುರಿದು ವಿರಥನಾದ, ಕುದುರೆ-ಸಾರಥಿಗಳನ್ನು ಕಳೆದುಕೊಂಡ ದುಃಶಾಸನನನ್ನು ತ್ರಿಗರ್ತಸೇನಾಪತಿಯು ತನ್ನ ರಥದಲ್ಲಿ ಏರಿಸಿಕೊಂಡನು.

07099026a ತಮಭಿದ್ರುತ್ಯ ಶೈನೇಯೋ ಮುಹೂರ್ತಮಿವ ಭಾರತ|

07099026c ನ ಜಘಾನ ಮಹಾಬಾಹುರ್ಭೀಮಸೇನವಚಃ ಸ್ಮರನ್||

ಭಾರತ! ಮಹಾಬಾಹು ಭೀಮಸೇನನ ಮಾತನ್ನು ನೆನಪಿಸಿಕೊಂಡು ಒಂದು ಕ್ಷಣ ದೊರಕಿದ್ದರೂ ಶೈನೇಯನು ದುಃಶಾಸನನನ್ನು ಕೊಲ್ಲಲಿಲ್ಲ.

07099027a ಭೀಮಸೇನೇನ ಹಿ ವಧಃ ಸುತಾನಾಂ ತವ ಭಾರತ|

07099027c ಪ್ರತಿಜ್ಞಾತಃ ಸಭಾಮಧ್ಯೇ ಸರ್ವೇಷಾಮೇವ ಸಂಯುಗೇ||

ಭಾರತ! ಸಂಯುಗದಲ್ಲಿ ನಿನ್ನ ಎಲ್ಲ ಮಕ್ಕಳ ವಧೆಯನ್ನೂ ತಾನೇ ಮಾಡುತ್ತೇನೆಂದು ಸಭಾಮಧ್ಯದಲ್ಲಿ ಭೀಮಸೇನನು ಪ್ರತಿಜ್ಞೆಮಾಡಿದ್ದನು.

07099028a ತಥಾ ದುಃಶಾಸನಂ ಜಿತ್ವಾ ಸಾತ್ಯಕಿಃ ಸಂಯುಗೇ ಪ್ರಭೋ|

07099028c ಜಗಾಮ ತ್ವರಿತೋ ರಾಜನ್ಯೇನ ಯಾತೋ ಧನಂಜಯಃ||

ಪ್ರಭೋ! ರಾಜನ್! ಹಾಗೆ ಸಂಯುಗದಲ್ಲಿ ದುಃಶಾಸನನನ್ನು ಗೆದ್ದ ಸಾತ್ಯಕಿಯು ತ್ವರೆಮಾಡಿ ಧನಂಜಯನು ಹೋಗಿರುವಲ್ಲಿಗೆ ಹೋದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುಃಶಾಸನಪರಾಜಯೇ ಏಕೋನಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುಃಶಾಸನಪರಾಜಯ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.

Image result for jasmin against white background

Comments are closed.