Drona Parva: Chapter 98

ದ್ರೋಣ ಪರ್ವ: ಜಯದ್ರಥವಧ ಪರ್ವ

೯೮

ಪಲಾಯನ ಮಾಡಿಬಂದ ದುಃಶಾಸನನನ್ನು ಟೀಕಿಸಿ ದ್ರೋಣನು ಹಿಂದಿರುಗಿ ಸಾತ್ಯಕಿಯೊಡನೆ ಯುದ್ಧಮಾಡಲು ಹೇಳಿ ಕಳುಹಿಸಿದುದು (೧-೨೩). ದ್ರೋಣನು ವೀರಕೇತುವೇ ಮೊದಲಾದ ಪಾಂಚಾಲರನ್ನು ಸಂಹರಿಸಿದುದು (೨೪-೪೧). ದ್ರೋಣ-ಧೃಷ್ಟದ್ಯುಮ್ನರ ಯುದ್ಧ (೪೨-೫೮).

07098001 ಸಂಜಯ ಉವಾಚ|

07098001a ದುಃಶಾಸನರಥಂ ದೃಷ್ಟ್ವಾ ಸಮೀಪೇ ಪರ್ಯವಸ್ಥಿತಂ|

07098001c ಭಾರದ್ವಾಜಸ್ತತೋ ವಾಕ್ಯಂ ದುಃಶಾಸನಮಥಾಬ್ರವೀತ್||

ಸಂಜಯನು ಹೇಳಿದನು: “ದುಃಶಾಸನನ ರಥವು ಸಮೀಪದಲ್ಲಿಯೇ ನಿಂತಿರುವುದನ್ನು ನೋಡಿ ಭಾರದ್ವಾಜನು ದುಃಶಾಸನನಿಗೆ ಈ ಮಾತುಗಳನ್ನಾಡಿದನು:

07098002a ದುಃಶಾಸನ ರಥಾಃ ಸರ್ವೇ ಕಸ್ಮಾದೇತೇ ಪ್ರವಿದ್ರುತಾಃ|

07098002c ಕಚ್ಚಿತ್ ಕ್ಷೇಮಂ ತು ನೃಪತೇಃ ಕಚಿವಿಜ್ಜೀವತಿ ಸೈಂಧವಃ||

“ದುಃಶಾಸನ! ಈ ಮಹಾರಥರೆಲ್ಲರೂ ಏಕೆ ಇಲ್ಲಿಗೆ ಓಡಿ ಧಾವಿಸಿ ಬರುತ್ತಿದ್ದಾರೆ? ನೃಪತಿ ದುರ್ಯೋಧನನು ಕ್ಷೇಮದಿಂದಿರುವನೇ? ಸೈಂಧವನು ಬದುಕಿದ್ದಾನೆಯೇ?

07098003a ರಾಜಪುತ್ರೋ ಭವಾನತ್ರ ರಾಜಭ್ರಾತಾ ಮಹಾರಥಃ|

07098003c ಕಿಮರ್ಥಂ ದ್ರವಸೇ ಯುದ್ಧೇ ಯೌವರಾಜ್ಯಮವಾಪ್ಯ ಹಿ||

ನೀನು ರಾಜಪುತ್ರ. ರಾಜನ ಸಹೋದರ. ಮಹಾರಥ. ಯುವರಾಜತ್ವವನ್ನು ಪಡೆದು ಹೀಗೆ ಏಕೆ ಯುದ್ಧದಿಂದ ಓಡಿ ಬಂದಿರುವೆ?

07098004a ಸ್ವಯಂ ವೈರಂ ಮಹತ್ಕೃತ್ವಾ ಪಾಂಚಾಲೈಃ ಪಾಂಡವೈಃ ಸಹ|

07098004c ಏಕಂ ಸಾತ್ಯಕಿಮಾಸಾದ್ಯ ಕಥಂ ಭೀತೋಽಸಿ ಸಂಯುಗೇ||

ಪಾಂಚಾಲರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಸ್ವಯಂ ನೀನೇ ಕಟ್ಟಿಕೊಂಡು ಈಗ ಏಕೆ ಯುದ್ಧದಲ್ಲಿ ಸಾತ್ಯಕಿಯೊಬ್ಬನನ್ನೇ ಎದುರಿಸಿ ಭಯಪಟ್ಟಿರುವೆ?

07098005a ನ ಜಾನೀಷೇ ಪುರಾ ತ್ವಂ ತು ಗೃಹ್ಣನ್ನಕ್ಷಾನ್ದುರೋದರೇ|

07098005c ಶರಾ ಹ್ಯೇತೇ ಭವಿಷ್ಯಂತಿ ದಾರುಣಾಶೀವಿಷೋಪಮಾಃ||

ಹಿಡಿದಿದ್ದ ದಾಳಗಳೇ ಮುಂದೆ ಯುದ್ಧದಲ್ಲಿ ದಾರುಣ ಸರ್ಪವಿಷದಂತಿರುವ ಬಾಣಗಳಾಗುತ್ತವೆ ಎಂದು ನಿನಗೆ ಹಿಂದೆ ತಿಳಿದಿರಲಿಲ್ಲವೇ?

07098006a ಅಪ್ರಿಯಾಣಾಂ ಚ ವಚನಂ ಪಾಂಡವೇಷು ವಿಶೇಷತಃ|

07098006c ದ್ರೌಪದ್ಯಾಶ್ಚ ಪರಿಕ್ಲೇಶಸ್ತ್ವನ್ಮೂಲೋ ಹ್ಯಭವತ್ಪುರಾ||

ಹಿಂದೆ ನೀನು ಪಾಂಡವರಿಗೆ ಅಪ್ರಿಯ ಮಾತುಗಳನ್ನಾಡಿದೆ[1]. ಅದರಲ್ಲೂ ವಿಶೇಷವಾಗಿ ದ್ರೌಪದಿಯ ಕಷ್ಟಗಳಿಗೆ ಕಾರಣನಾದೆ.

07098007a ಕ್ವ ತೇ ಮಾನಶ್ಚ ದರ್ಪಶ್ಚ ಕ್ವ ಚ ತದ್ವೀರ ಗರ್ಜಿತಂ|

07098007c ಆಶೀವಿಷಸಮಾನ್ಪಾರ್ಥಾನ್ಕೋಪಯಿತ್ವಾ ಕ್ವ ಯಾಸ್ಯಸಿ||

ಅಂದಿನ ನಿನ್ನ ಅಭಿಮಾನವು ಈಗ ಎಲ್ಲಿ ಹೋಯಿತು? ದರ್ಪವೆಲ್ಲಿ ಹೋಯಿತು? ವೀರ್ಯವೆಲ್ಲಿ ಅಡಗಿಹೋಯಿತು? ಅಂದಿನ ಗರ್ಜನೆಯು ಈಗ ಎಲ್ಲಿ ಹೋಯಿತು? ವಿಷಸರ್ಪಸದೃಶ ಪಾರ್ಥರನ್ನು ಈ ರೀತಿ ಕೋಪಗೊಳಿಸಿ ಈಗ ಎಲ್ಲಿ ಹೋಗುತ್ತಿರುವೆ?

07098008a ಶೋಚ್ಯೇಯಂ ಭಾರತೀ ಸೇನಾ ರಾಜಾ ಚೈವ ಸುಯೋಧನಃ|

07098008c ಯಸ್ಯ ತ್ವಂ ಕರ್ಕಶೋ ಭ್ರಾತಾ ಪಲಾಯನಪರಾಯಣಃ||

ಈಗ ಭಾರತೀಸೇನೆಗಾಗಿ ಶೋಕಿಸಬೇಕಾಗಿದೆ. ರಾಜಾ ಸುಯೋಧನನಿಗಾಗಿ ಶೋಕಿಸಬೇಕಾಗಿದೆ. ಏಕೆಂದರೆ ಅವನ ತಮ್ಮನಾದ ಕರ್ಕಶ ನೀನು ಯುದ್ಧದಿಂದ ಪಲಾಯನಮಾಡುತ್ತಿರುವೆ!

07098009a ನನು ನಾಮ ತ್ವಯಾ ವೀರ ದೀರ್ಯಮಾಣಾ ಭಯಾರ್ದಿತಾ|

07098009c ಸ್ವಬಾಹುಬಲಮಾಸ್ಥಾಯ ರಕ್ಷಿತವ್ಯಾ ಹ್ಯನೀಕಿನೀ|

07098009e ಸ ತ್ವಮದ್ಯ ರಣಂ ತ್ಯಕ್ತ್ವಾ ಭೀತೋ ಹರ್ಷಯಸೇ ಪರಾನ್||

ವೀರ! ಸೀಳಿಹೋಗಿರುವ ಭಯಾರ್ದಿತರ ಈ ಸೇನೆಗಳನ್ನು ಸ್ವಬಾಹುಬಲವನ್ನುಪಯೋಗಿಸಿ ನೀನು ರಕ್ಷಿಸಬೇಕಲ್ಲವೇ? ಭೀತನಾಗಿ ರಣವನ್ನು ತೊರೆದು ನೀನು ಶತ್ರುಗಳಿಗೆ ಆನಂದವನ್ನುಂಟುಮಾಡುತ್ತಿದ್ದೀಯೆ.

07098010a ವಿದ್ರುತೇ ತ್ವಯಿ ಸೈನ್ಯಸ್ಯ ನಾಯಕೇ ಶತ್ರುಸೂದನ|

07098010c ಕೋಽನ್ಯಃ ಸ್ಥಾಸ್ಯತಿ ಸಂಗ್ರಾಮೇ ಭೀತೋ ಭೀತೇ ವ್ಯಪಾಶ್ರಯೇ||

ಶತ್ರುಸೂದನ! ಸೈನ್ಯದ ನಾಯಕನಾಗಿರುವ ನೀನೇ ಓಡಿಹೋದರೆ ಬೇರೆ ಯಾರುತಾನೇ ಸಂಗ್ರಾಮದಲ್ಲಿ ಉಳಿದಾರು? ಯಾರ ಆಶ್ರಯದಲ್ಲಿರುವರೋ ಅವರೇ ಭೀತರಾದರೆ ಇಡೀ ಸೇನೆಯೇ ಭೀತಿಗೊಳ್ಳುವುದಿಲ್ಲವೇ?

07098011a ಏಕೇನ ಸಾತ್ವತೇನಾದ್ಯ ಯುಧ್ಯಮಾನಸ್ಯ ಚಾನಘ|

07098011c ಪಲಾಯನೇ ತವ ಮತಿಃ ಸಂಗ್ರಾಮಾದ್ಧಿ ಪ್ರವರ್ತತೇ||

ಅನಘ! ಇಂದು ಸಾತ್ವತನೊಬ್ಬನೊಡನೆ ಯುದ್ಧಮಾಡುವಾಗಲೇ ನೀನು ಸಂಗ್ರಾಮದಿಂದ ಪಲಾಯನದ ಕುರಿತು ಮನಸ್ಸು ಮಾಡಿದೆ.

07098012a ಯದಾ ಗಾಂಡೀವಧನ್ವಾನಂ ಭೀಮಸೇನಂ ಚ ಕೌರವ|

07098012c ಯಮೌ ಚ ಯುಧಿ ದ್ರಷ್ಟಾಸಿ ತದಾ ತ್ವಂ ಕಿಂ ಕರಿಷ್ಯಸಿ||

ಕೌರವ! ಇನ್ನು ಗಾಂಡೀವ ಧನ್ವಿ ಅರ್ಜುನ, ಭೀಮಸೇನ ಮತ್ತು ಯಮಳರಾದ ನಕುಲ-ಸಹದೇವರನ್ನು ಯುದ್ಧದಲ್ಲಿ ಎದುರಿಸಿದರೆ ಆಗ ನೀನು ಏನು ಮಾಡುವೆ?

07098013a ಯುಧಿ ಫಲ್ಗುನಬಾಣಾನಾಂ ಸೂರ್ಯಾಗ್ನಿಸಮತೇಜಸಾಂ|

07098013c ನ ತುಲ್ಯಾಃ ಸಾತ್ಯಕಿಶರಾ ಯೇಷಾಂ ಭೀತಃ ಪಲಾಯಸೇ||

ಯಾವುದರಿಂದ ನೀನು ಭೀತನಾಗಿ ಪಲಾಯನಮಾಡುತ್ತಿರುವೆಯೋ ಆ ಸಾತ್ಯಕಿಯ ಶರಗಳು ಯುದ್ಧದಲ್ಲಿ ಸೂರ್ಯಾಗ್ನಿಸಮ ತೇಜಸ್ಸುಳ್ಳ ಫಲ್ಗುನನ ಬಾಣಗಳ ತುಲನೆಗೆ ಸಮನಾದವುಗಳಲ್ಲ.

[2]07098014a ಯದಿ ತಾವತ್ಕೃತಾ ಬುದ್ಧಿಃ ಪಲಾಯನಪರಾಯಣಾ|

07098014c ಪೃಥಿವೀ ಧರ್ಮರಾಜಸ್ಯ ಶಮೇನೈವ ಪ್ರದೀಯತಾಂ||

ಒಂದುವೇಳೆ ನೀನು ಪಲಾಯನ ಮಾಡುವ ನಿರ್ಧಾರವನ್ನೇ ಮಾಡಿದ್ದರೆ ಈ ಭೂಮಿಯನ್ನು ಧರ್ಮರಾಜನಿಗೆ ಶಾಂತಿಯಿಂದ ನೀಡಬೇಕು.

07098015a ಯಾವತ್ಫಲ್ಗುನನಾರಾಚಾ ನಿರ್ಮುಕ್ತೋರಗಸನ್ನಿಭಾಃ|

07098015c ನಾವಿಶಂತಿ ಶರೀರಂ ತೇ ತಾವತ್ಸಂಶಾಮ್ಯ ಪಾಂಡವೈಃ||

ಫಲ್ಗುನನು ಬಿಟ್ಟ ಉರಗಸನ್ನಿಭ ನಾರಾಚಗಳು ನಿನ್ನ ಶರೀರವನ್ನು ಹೊಗುವ ಮೊದಲೇ ಪಾಂಡವರೊಂದಿಗೆ ಸಂಧಿಮಾಡಿಕೋ!

07098016a ಯಾವತ್ತೇ ಪೃಥಿವೀಂ ಪಾರ್ಥಾ ಹತ್ವಾ ಭ್ರಾತೃಶತಂ ರಣೇ|

07098016c ನಾಕ್ಷಿಪಂತಿ ಮಹಾತ್ಮಾನಸ್ತಾವತ್ಸಂಶಾಮ್ಯ ಪಾಂಡವೈಃ||

ರಣದಲ್ಲಿ ನೂರು ಸಹೋದರರನ್ನೂ ಕೊಂದು ಆ ಮಹಾತ್ಮರು ಈ ಭೂಮಿಯನ್ನು ಕಿತ್ತುಕೊಳ್ಳುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ!

07098017a ಯಾವನ್ನ ಕ್ರುಧ್ಯತೇ ರಾಜಾ ಧರ್ಮಪುತ್ರೋ ಯುಧಿಷ್ಠಿರಃ|

07098017c ಕೃಷ್ಣಶ್ಚ ಸಮರಶ್ಲಾಘೀ ತಾವತ್ಸಂಶಾಮ್ಯ ಪಾಂಡವೈಃ||

ಧರ್ಮಪುತ್ರ ರಾಜಾ ಯುಧಿಷ್ಠಿರ ಮತ್ತು ಸಮರಶ್ಲಾಘೀ ಕೃಷ್ಣರು ಕ್ರುದ್ಧರಾಗುವ ಮೊದಲೇ ಪಾಂಡವರೊಡನೆ ಸಂಧಿಮಾಡಿಕೋ!

07098018a ಯಾವದ್ಭೀಮೋ ಮಹಾಬಾಹುರ್ವಿಗಾಹ್ಯ ಮಹತೀಂ ಚಮೂಂ|

07098018c ಸೋದರಾಂಸ್ತೇ ನ ಮೃದ್ನಾತಿ ತಾವತ್ಸಂಶಾಮ್ಯ ಪಾಂಡವೈಃ||

ಮಹಾಬಾಹು ಭೀಮನು ಈ ಮಹಾಸೇನೆಯನ್ನು ಒಳಹೊಕ್ಕಿ ನಿನ್ನ ಸೋದರರನ್ನು ಸದೆಬಡಿಯುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ!

07098019a ಪೂರ್ವಮುಕ್ತಶ್ಚ ತೇ ಭ್ರಾತಾ ಭೀಷ್ಮೇಣ ಸ ಸುಯೋಧನಃ|

07098019c ಅಜೇಯಾಃ ಪಾಂಡವಾಃ ಸಂಖ್ಯೇ ಸೌಮ್ಯ ಸಂಶಾಮ್ಯ ಪಾಂಡವೈಃ|

07098019e ನ ಚ ತತ್ಕೃತವಾನ್ಮಂದಸ್ತವ ಭ್ರಾತಾ ಸುಯೋಧನಃ||

ಹಿಂದೆ ನಿನ್ನ ಅಣ್ಣ ಸುಯೋಧನನಿಗೆ ಭೀಷ್ಮನು “ಸೌಮ್ಯ! ಯುದ್ಧದಲ್ಲಿ ಪಾಂಡವರು ಅಜೇಯರು. ಪಾಂಡವರೊಂದಿಗೆ ಸಂಧಿಮಾಡಿಕೋ!” ಎಂದು ಹೇಳಿದ್ದನು. ಆದರೆ ನಿನ್ನ ಅಣ್ಣ ಮೂಢ ಸುಯೋಧನನು ಹಾಗೆ ಮಾಡಲಿಲ್ಲ!

07098020a ಸ ಯುದ್ಧೇ ಧೃತಿಮಾಸ್ಥಾಯ ಯತ್ತೋ ಯುಧ್ಯಸ್ವ ಪಾಂಡವೈಃ|

07098020c ಗಚ್ಚ ತೂರ್ಣಂ ರಥೇನೈವ ತತ್ರ ತಿಷ್ಠತಿ ಸಾತ್ಯಕಿಃ||

ಆದುದರಿಂದ ಯುದ್ಧದಲ್ಲಿ ಧೈರ್ಯವನ್ನು ತಂದುಕೊಂಡು ಪ್ರಯತ್ನಪಟ್ಟು ಪಾಂಡವರೊಂದಿಗೆ ಯುದ್ಧಮಾಡು. ಬೇಗನೇ ಇದೇ ರಥದಲ್ಲಿ ಸಾತ್ಯಕಿಯೆಲ್ಲಿ ನಿಂತಿರುವನೋ ಅಲ್ಲಿಗೆ ಹೋಗು!

07098021a ತ್ವಯಾ ಹೀನಂ ಬಲಂ ಹ್ಯೇತದ್ವಿದ್ರವಿಷ್ಯತಿ ಭಾರತ|

07098021c ಆತ್ಮಾರ್ಥಂ ಯೋಧಯ ರಣೇ ಸಾತ್ಯಕಿಂ ಸತ್ಯವಿಕ್ರಮಂ||

ಭಾರತ! ನೀನಿಲ್ಲದೇ ನಮ್ಮ ಸೇನೆಯು ದಿಕ್ಕಾಪಾಲಾಗಿ ಓಡಿಹೋಗುತ್ತಿದೆ. ನಿನಗಾಗಿಯಾದರೂ[3] ರಣದಲ್ಲಿ ಸತ್ಯವಿಕ್ರಮಿ ಸಾತ್ಯಕಿಯೊಂದಿಗೆ ಯುದ್ಧಮಾಡು!”

07098022a ಏವಮುಕ್ತಸ್ತವ ಸುತೋ ನಾಬ್ರವೀತ್ಕಿಂ ಚಿದಪ್ಯಸೌ|

07098022c ಶ್ರುತಂ ಚಾಶ್ರುತವತ್ಕೃತ್ವಾ ಪ್ರಾಯಾದ್ಯೇನ ಸ ಸಾತ್ಯಕಿಃ||

ಇಷ್ಟು ಹೇಳಿದರೂ ನಿನ್ನ ಮಗನು ಏನನ್ನೂ ಮಾತನಾಡಲಿಲ್ಲ. ಕೇಳಿದರೂ ಕೇಳದಂತೆ ಮಾಡಿ ಸಾತ್ಯಕಿಯು ಹೋದ ದಾರಿಯಲ್ಲಿ ಹೊರಟು ಹೋದನು.

07098023a ಸೈನ್ಯೇನ ಮಹತಾ ಯುಕ್ತೋ ಮ್ಲೇಚ್ಚಾನಾಮನಿವರ್ತಿನಾಂ|

07098023c ಆಸಾದ್ಯ ಚ ರಣೇ ಯತ್ತೋ ಯುಯುಧಾನಮಯೋಧಯತ್||

ಯುದ್ಧದಿಂದ ಹಿಮ್ಮೆಟ್ಟದಿದ್ದ ಮ್ಲೇಚ್ಛರ ಮಹಾ ಸೇನೆಯನ್ನು ಕೂಡಿಕೊಂಡು ದುಃಶಾಸನನು ಯುಯುಧಾನ ಸಾತ್ಯಕಿಯೊಡನೆ ಯುದ್ಧಮಾಡತೊಡಗಿದನು.

07098024a ದ್ರೋಣೋಽಪಿ ರಥಿನಾಂ ಶ್ರೇಷ್ಠಃ ಪಾಂಚಾಲಾನ್ಪಾಂಡವಾಂಸ್ತಥಾ|

07098024c ಅಭ್ಯದ್ರವತ ಸಂಕ್ರುದ್ಧೋ ಜವಮಾಸ್ಥಾಯ ಮಧ್ಯಮಂ||

ರಥಿಗಳಲ್ಲಿ ಶ್ರೇಷ್ಠ ದ್ರೋಣನೂ ಕೂಡ ಮಧ್ಯಮ ವೇಗವನ್ನು ಬಳಸಿ ಸಂಕ್ರುದ್ಧನಾಗಿ ಪಾಂಚಾಲ-ಪಾಂಡವರನ್ನು ಆಕ್ರಮಣಿಸಿದನು.

07098025a ಪ್ರವಿಶ್ಯ ಚ ರಣೇ ದ್ರೋಣಃ ಪಾಂಚಾಲಾನಾಂ ವರೂಥಿನೀಂ|

07098025c ದ್ರಾವಯಾಮಾಸ ಯೋಧಾನ್ವೈ ಶತಶೋಽಥ ಸಹಸ್ರಶಃ||

ರಣದಲ್ಲಿ ಪಾಂಚಾಲರ ಸೇನೆಯನ್ನು ಪ್ರವೇಶಿಸಿ ದ್ರೋಣನು ನೂರಾರು ಸಾವಿರಾರು ಯೋಧರನ್ನು ಪಲಾಯನಗೊಳಿಸಿದನು.

07098026a ತತೋ ದ್ರೋಣೋ ಮಹಾರಾಜ ನಾಮ ವಿಶ್ರಾವ್ಯ ಸಂಯುಗೇ|

07098026c ಪಾಂಡುಪಾಂಚಾಲಮತ್ಸ್ಯಾನಾಂ ಪ್ರಚಕ್ರೇ ಕದನಂ ಮಹತ್||

ಆಗ ಮಹಾರಾಜ! ದ್ರೋಣನು ಸಂಯುಗದಲ್ಲಿ ತನ್ನ ಹೆಸರನ್ನು ಕೂಗಿ ಹೇಳಿಕೊಳ್ಳುತ್ತಾ ಪಾಂಡವ-ಪಾಂಚಾಲ-ಮತ್ಸ್ಯರೊಂದಿಗೆ ಮಹಾ ಕದನವನ್ನು ನಡೆಸಿದನು.

07098027a ತಂ ಜಯಂತಮನೀಕಾನಿ ಭಾರದ್ವಾಜಂ ತತಸ್ತತಃ|

07098027c ಪಾಂಚಾಲಪುತ್ರೋ ದ್ಯುತಿಮಾನ್ವೀರಕೇತುಃ ಸಮಭ್ಯಯಾತ್||

ಅಲ್ಲಲ್ಲಿ ಸೇನೆಗಳನ್ನು ಸೋಲಿಸುತ್ತಿದ್ದ ಭಾರದ್ವಾಜನನ್ನು ಪಾಂಚಾಲಪುತ್ರ ದ್ಯುತಿಮಾನ ವೀರಕೇತುವು ಎದುರಿಸಿದನು.

07098028a ಸ ದ್ರೋಣಂ ಪಂಚಭಿರ್ವಿದ್ಧ್ವಾ ಶರೈಃ ಸನ್ನತಪರ್ವಭಿಃ|

07098028c ಧ್ವಜಮೇಕೇನ ವಿವ್ಯಾಧ ಸಾರಥಿಂ ಚಾಸ್ಯ ಸಪ್ತಭಿಃ||

ಅವನು ದ್ರೋಣನನ್ನು ಐದು ಸನ್ನತಪರ್ವಶರಗಳಿಂದ ಹೊಡೆದು ಒಂದರಿಂದ ಅವನ ಧ್ವಜವನ್ನೂ ಏಳರಿಂದ ಸಾರಥಿಯನ್ನೂ ಹೊಡೆದನು.

07098029a ತತ್ರಾದ್ಭುತಂ ಮಹಾರಾಜ ದೃಷ್ಟವಾನಸ್ಮಿ ಸಂಯುಗೇ|

07098029c ಯದ್ದ್ರೋಣೋ ರಭಸಂ ಯುದ್ಧೇ ಪಾಂಚಾಲ್ಯಂ ನಾಭ್ಯವರ್ತತ||

ಮಹಾರಾಜ! ಅವರ ಯುದ್ಧದಲ್ಲಿ ನಾನು ಅದ್ಭುತವನ್ನು ಕಂಡೆ. ದ್ರೋಣನಿಗೆ ರಭಸವಾಗಿ ಯುದ್ಧಮಾಡುತ್ತಿದ್ದ ಆ ಪಾಂಚಾಲ್ಯನನ್ನು ಅತಿಕ್ರಮಿಸಿ ಹೋಗಲಾಗಲಿಲ್ಲ.

07098030a ಸನ್ನಿರುದ್ಧಂ ರಣೇ ದ್ರೋಣಂ ಪಾಂಚಾಲಾ ವೀಕ್ಷ್ಯ ಮಾರಿಷ|

07098030c ಆವವ್ರುಃ ಸರ್ವತೋ ರಾಜನ್ಧರ್ಮಪುತ್ರಜಯೈಷಿಣಃ||

ಮಾರಿಷ! ರಾಜನ್! ರಣದಲ್ಲಿ ದ್ರೋಣನನ್ನು ಪಾಂಚಾಲನು ತಡೆದುದನ್ನು ನೋಡಿ ಧರ್ಮಪುತ್ರನ ಹಿತೈಷಿಗಳು ದ್ರೋಣನನ್ನು ಸುತ್ತಲಿನಿಂದ ಆಕ್ರಮಣಿಸಿದರು.

07098031a ತೇ ಶರೈರಗ್ನಿಸಂಕಾಶೈಸ್ತೋಮರೈಶ್ಚ ಮಹಾಧನೈಃ|

07098031c ಶಸ್ತ್ರೈಶ್ಚ ವಿವಿಧೈ ರಾಜನ್ದ್ರೋಣಮೇಕಮವಾಕಿರನ್||

ರಾಜನ್! ಅವರು ಅಗ್ನಿಸಂಕಾಶ ಶರಗಳಿಂದಲೂ, ಬಹು ಮೂಲ್ಯ ತೋಮರಗಳಿಂದಲೂ, ವಿವಿಧ ಶಸ್ತ್ರಗಳಿಂದಲೂ ದ್ರೋಣನೊಬ್ಬನನ್ನೇ ಮುಚ್ಚಿಬಿಟ್ಟರು.

07098032a ನಿಹತ್ಯ ತಾನ್ಬಾಣಗಣಾನ್ದ್ರೋಣೋ ರಾಜನ್ಸಮಂತತಃ|

07098032c ಮಹಾಜಲಧರಾನ್ವ್ಯೋಮ್ನಿ ಮಾತರಿಶ್ವಾ ವಿವಾನಿವ||

ರಾಜನ್! ದ್ರೋಣನು ಆಕಾಶದಲ್ಲಿ ಅಪಾರ ಮಳೆನೀರಿನಿಂದ ತುಂಬಿದ ಮೋಡಗಳನ್ನು ಚದುರಿಸುವ ವಾಯುದೇವನಂತೆ ಎಲ್ಲೆಡೆಯಿಂದ ಮುಸುಕಿದ ಆ ಬಾಣಗಣಗಳನ್ನು ನಾಶಗೊಳಿಸಿದನು.

07098033a ತತಃ ಶರಂ ಮಹಾಘೋರಂ ಸೂರ್ಯಪಾವಕಸನ್ನಿಭಂ|

07098033c ಸಂದಧೇ ಪರವೀರಘ್ನೋ ವೀರಕೇತುರಥಂ ಪ್ರತಿ||

ಅನಂತರ ಪರವೀರಘ್ನ ದ್ರೋಣನು ಸೂರ್ಯ-ಪಾವಕರಂತಿರುವ ಮಹಾಘೋರ ಬಾಣವನ್ನು ವೀರಕೇತುವಿನ ರಥದ ಕಡೆ ಹೂಡಿ ಹೊಡೆದನು.

07098034a ಸ ಭಿತ್ತ್ವಾ ತು ಶರೋ ರಾಜನ್ಪಾಂಚಾಲ್ಯಂ ಕುಲನಂದನಂ|

07098034c ಅಭ್ಯಗಾದ್ಧರಣೀಂ ತೂರ್ಣಂ ಲೋಹಿತಾರ್ದ್ರೋ ಜ್ವಲನ್ನಿವ||

ರಾಜನ್! ಆ ಶರವು ಪಾಂಚಾಲ್ಯ ಕುಲನಂದನನನ್ನು ಭೇದಿಸಿ ಕೂಡಲೇ ರಕ್ತದಿಂದ ತೋಯ್ದು ಪ್ರಜ್ವಲಿಸುತ್ತಿರುವಂತೆ ಭೂಮಿಯ ಮೇಲೆ ಬಿದ್ದಿತು.

07098035a ತತೋಽಪತದ್ರಥಾತ್ತೂರ್ಣಂ ಪಾಂಚಾಲ್ಯಃ ಕುಲನಂದನಃ|

07098035c ಪರ್ವತಾಗ್ರಾದಿವ ಮಹಾಂಶ್ಚಂಪಕೋ ವಾಯುಪೀಡಿತಃ||

ಆಗ ಕೂಡಲೇ ಪಾಂಚಾಲರ ಕುಲನಂದನ ವೀರಕೇತುವು ಚಂಡಮಾರುತದಿಂದ ಹೊಡೆಯಲ್ಪಟ್ಟ ದೊಡ್ಡ ಸಂಪಿಗೆಯ ಮರವು ಪರ್ವತದ ಮೇಲಿಂದ ಕೆಳಕ್ಕೆ ಬೀಳುವಂತೆ ರಥದಿಂದ ಬಿದ್ದನು.

07098036a ತಸ್ಮಿನ್ ಹತೇ ಮಹೇಷ್ವಾಸೇ ರಾಜಪುತ್ರೇ ಮಹಾಬಲೇ|

07098036c ಪಾಂಚಾಲಾಸ್ತ್ವರಿತಾ ದ್ರೋಣಂ ಸಮಂತಾತ್ಪರ್ಯವಾರಯನ್||

ಆ ಮಹೇಷ್ವಾಸ ಮಹಾಬಲಿ ರಾಜಪುತ್ರನು ಹತನಾಗಲು ಪಾಂಚಾಲರು ತ್ವರೆಮಾಡಿ ದ್ರೋಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

07098037a ಚಿತ್ರಕೇತುಃ ಸುಧನ್ವಾ ಚ ಚಿತ್ರವರ್ಮಾ ಚ ಭಾರತ|

07098037c ತಥಾ ಚಿತ್ರರಥಶ್ಚೈವ ಭ್ರಾತೃವ್ಯಸನಕರ್ಷಿತಾಃ||

07098038a ಅಭ್ಯದ್ರವಂತ ಸಹಿತಾ ಭಾರದ್ವಾಜಂ ಯುಯುತ್ಸವಃ|

07098038c ಮುಂಚಂತಃ ಶರವರ್ಷಾಣಿ ತಪಾಂತೇ ಜಲದಾ ಇವ||

ಭ್ರಾತೃವ್ಯಸನದಿಂದ ದುಃಖಿತರಾದ ಚಿತ್ರಕೇತು, ಸುಧನ್ವಾ, ಚಿತ್ರವರ್ಮ ಮತ್ತು ಚಿತ್ರರಥರು ಸಂಘಟಿತರಾಗಿ ಭಾರದ್ವಾಜನೊಂದಿಗೆ ಯುದ್ಧಮಾಡಲು ಉತ್ಸುಕರಾಗಿ ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಗರೆಯುವಂತೆ ಬಾಣಗಳ ಮಳೆಗರೆಯುತ್ತಾ ದ್ರೋಣನನ್ನು ಆಕ್ರಮಣಿಸಿದರು.

07098039a ಸ ವಧ್ಯಮಾನೋ ಬಹುಧಾ ರಾಜಪುತ್ರೈರ್ಮಹಾರಥೈಃ|

07098039c ವ್ಯಶ್ವಸೂತರಥಾಂಶ್ಚಕ್ರೇ ಕುಮಾರಾನ್ಕುಪಿತೋ ರಣೇ||

ಆ ಮಹಾರಥ ರಾಜಪುತ್ರರಿಂದ ಬಹಳವಾಗಿ ಪೀಡಿಸಲ್ಪಟ್ಟ ದ್ರೋಣನು ರಣದಲ್ಲಿ ಕುಪಿತನಾಗಿ ಆ ಕುಮಾರರನ್ನು ಅಶ್ವ-ಸೂತ-ರಥ ವಿಹೀನರನ್ನಾಗಿ ಮಾಡಿದನು.

07098040a ತಥಾಪರೈಃ ಸುನಿಶಿತೈರ್ಭಲ್ಲೈಸ್ತೇಷಾಂ ಮಹಾಯಶಾಃ|

07098040c ಪುಷ್ಪಾಣೀವ ವಿಚಿನ್ವನ್ ಹಿ ಸೋತ್ತಮಾಂಗಾನ್ಯಪಾತಯತ್||

ಮಹಾಯಶಸ್ವಿ ದ್ರೋಣನು ಸುನಿಶ್ಚಿತವಾದ ಇತರ ಭಲ್ಲಗಳಿಂದ ಗಿಡಗಳಿಂದ ಹೂವನ್ನು ಕೊಯ್ಯುವಂತೆ ಅವರ ಉತ್ತಮಾಂಗ (ತಲೆ) ಗಳನ್ನು ಕತ್ತರಿಸಿ ಬೀಳಿಸಿದನು.

07098041a ತೇ ರಥೇಭ್ಯೋ ಹತಾಃ ಪೇತುಃ ಕ್ಷಿತೌ ರಾಜನ್ಸುವರ್ಚಸಃ|

07098041c ದೇವಾಸುರೇ ಪುರಾ ಯುದ್ಧೇ ಯಥಾ ದೈತೇಯದಾನವಾಃ||

ರಾಜನ್! ಹಿಂದೆ ದೇವಾಸುರರ ಯುದ್ಧದಲ್ಲಿ ದೈತ್ಯ-ದಾನವರು ರಥಗಳಿಂದ ಕೆಳಗುರುಳಿದಂತೆ ಆ ಸುವರ್ಚಸ ಪಂಚಾಲರಾಜಕುಮಾರರು ಹತರಾಗಿ ರಥಗಳಿಂದ ಭೂಮಿಯ ಮೇಲೆ ಬಿದ್ದರು.

07098042a ತಾನ್ನಿಹತ್ಯ ರಣೇ ರಾಜನ್ಭಾರದ್ವಾಜಃ ಪ್ರತಾಪವಾನ್|

07098042c ಕಾರ್ಮುಕಂ ಭ್ರಾಮಯಾಮಾಸ ಹೇಮಪೃಷ್ಠಂ ದುರಾಸದಂ||

ರಾಜನ್! ರಣದಲ್ಲಿ ಅವರನ್ನು ಸಂಹರಿಸಿ ಪ್ರತಾಪವಾನ್ ಭಾರದ್ವಾಜನು ಬಂಗಾರದ ಬೆನ್ನುಳ್ಳ ತನ್ನ ದುರಾಸದ ಧನುಸ್ಸನ್ನು ತಿರುಗಿಸತೊಡಗಿದನು.

07098043a ಪಾಂಚಾಲಾನ್ನಿಹತಾನ್ದೃಷ್ಟ್ವಾ ದೇವಕಲ್ಪಾನ್ಮಹಾರಥಾನ್|

07098043c ಧೃಷ್ಟದ್ಯುಮ್ನೋ ಭೃಶಂ ಕ್ರುದ್ಧೋ ನೇತ್ರಾಭ್ಯಾಂ ಪಾತಯಂ ಜಲಂ|

07098043e ಅಭ್ಯವರ್ತತ ಸಂಗ್ರಾಮೇ ಕ್ರುದ್ಧೋ ದ್ರೋಣರಥಂ ಪ್ರತಿ||

ದೇವತೆಗಳಿಗೆ ಸಮಾನರಾದ ಆ ಮಹಾರಥ ಪಾಂಚಾಲರು ಹತರಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ, ನೇತ್ರಗಳೆರಡರಿಂದ ನೀರನ್ನು ಸುರಿಸುತ್ತಾ ಧೃಷ್ಟದ್ಯುಮ್ನನು ಸಂಗ್ರಾಮದಲ್ಲಿ ದ್ರೋಣನ ರಥದ ಮೇಲೆ ಆಕ್ರಮಣಿಸಿದನು.

07098044a ತತೋ ಹಾ ಹೇತಿ ಸಹಸಾ ನಾದಃ ಸಮಭವನ್ನೃಪ|

07098044c ಪಾಂಚಾಲ್ಯೇನ ರಣೇ ದೃಷ್ಟ್ವಾ ದ್ರೋಣಮಾವಾರಿತಂ ಶರೈಃ||

ನೃಪ! ರಣದಲ್ಲಿ ಪಾಂಚಾಲ್ಯನು ದ್ರೋಣನನ್ನು ಶರಗಳಿಂದ ಮುಸುಕಿದುದನ್ನು ನೋಡಿ ಒಮ್ಮೆಲೇ ಹಾಹಾಕಾರವುಂಟಾಯಿತು.

07098045a ಸಂಚಾದ್ಯಮಾನೋ ಬಹುಧಾ ಪಾರ್ಷತೇನ ಮಹಾತ್ಮನಾ|

07098045c ನ ವಿವ್ಯಥೇ ತತೋ ದ್ರೋಣಃ ಸ್ಮಯನ್ನೇವಾನ್ವಯುಧ್ಯತ||

ಮಹಾತ್ಮ ಪಾರ್ಷತನಿಂದ ಬಹಳವಾಗಿ ಮುಚ್ಚಲ್ಪಟ್ಟರೂ ದ್ರೋಣನು ವ್ಯಥಿತನಾಗಲಿಲ್ಲ. ನಗುತ್ತಲೇ ಅವನೊಡನೆ ಯುದ್ಧಮಾಡತೊಡಗಿದನು.

07098046a ತತೋ ದ್ರೋಣಂ ಮಹಾರಾಜ ಪಾಂಚಾಲ್ಯಃ ಕ್ರೋಧಮೂರ್ಚಿತಃ|

07098046c ಆಜಘಾನೋರಸಿ ಕ್ರುದ್ಧೋ ನವತ್ಯಾ ನತಪರ್ವಣಾಂ||

ಆಗ ಮಹಾರಾಜ! ಕ್ರೋಧಮೂರ್ಛಿತ ಪಾಂಚಾಲ್ಯನು ದ್ರೋಣನನ್ನು ಕ್ರುದ್ಧನಾಗಿ ತೊಂಭತ್ತು ನತಪರ್ವಣ ಶರಗಳಿಂದ ಎದೆಯ ಮೇಲೆ ಪ್ರಹರಿಸಿದನು.

07098047a ಸ ಗಾಢವಿದ್ಧೋ ಬಲಿನಾ ಭಾರದ್ವಾಜೋ ಮಹಾಯಶಾಃ|

07098047c ನಿಷಸಾದ ರಥೋಪಸ್ಥೇ ಕಶ್ಮಲಂ ಚ ಜಗಾಮ ಹ||

ಬಲಶಾಲಿ ಧೃಷ್ಟದ್ಯುಮ್ನನಿಂದ ಗಾಢವಾಗಿ ಹೊಡೆಯಲ್ಪಟ್ಟ ಮಹಾಯಶಸ್ವಿ ದ್ರೋಣನು ರಥಪೀಠದ ಪಕ್ಕಕ್ಕೆ ಸರಿದು ಕುಳಿತು ಮೂರ್ಛೆಹೋದನು.

07098048a ತಂ ವೈ ತಥಾಗತಂ ದೃಷ್ಟ್ವಾ ಧೃಷ್ಟದ್ಯುಮ್ನಃ ಪರಾಕ್ರಮೀ|

07098048c ಸಮುತ್ಸೃಜ್ಯ ಧನುಸ್ತೂರ್ಣಮಸಿಂ ಜಗ್ರಾಹ ವೀರ್ಯವಾನ್||

ಅವನು ಹಾಗಾದುದನ್ನು ನೋಡಿ ವೀರ್ಯವಾನ್ ಪರಾಕ್ರಮೀ ಧೃಷ್ಟದ್ಯುಮ್ನನು ಕೂಡಲೇ ಧನುಸ್ಸನ್ನು ಬಿಸುಟು ಖಡ್ಗವನ್ನು ಕೈಗೆತ್ತಿಕೊಂಡನು.

07098049a ಅವಪ್ಲುತ್ಯ ರಥಾಚ್ಚಾಪಿ ತ್ವರಿತಃ ಸ ಮಹಾರಥಃ|

07098049c ಆರುರೋಹ ರಥಂ ತೂರ್ಣಂ ಭಾರದ್ವಾಜಸ್ಯ ಮಾರಿಷ|

07098049e ಹರ್ತುಮೈಚ್ಚಚ್ಚಿರಃ ಕಾಯಾತ್ಕ್ರೋಧಸಂರಕ್ತಲೋಚನಃ||

ಮಾರಿಷ! ಬೇಗನೇ ತನ್ನ ರಥದಿಂದ ಹಾರಿ ತ್ವರೆಮಾಡಿ ಕ್ರೋಧದಿಂದ ಕೆಂಗಣ್ಣನಾಗಿದ್ದ ಆ ಮಹಾರಥ ಧೃಷ್ಟದ್ಯುಮ್ನನು ದ್ರೋಣನ ಶಿರವನ್ನು ದೇಹದಿಂದ ಅಪಹರಿಸಲು ಬಯಸಿ ಭಾರದ್ವಾಜನ ರಥವನ್ನೇರಿದನು.

07098050a ಪ್ರತ್ಯಾಶ್ವಸ್ತಸ್ತತೋ ದ್ರೋಣೋ ಧನುರ್ಗೃಹ್ಯ ಮಹಾಬಲಃ|

07098050c ಶರೈರ್ವೈತಸ್ತಿಕೈ ರಾಜನ್ನಿತ್ಯಮಾಸನ್ನಯೋಧಿಭಿಃ|

07098050e ಯೋಧಯಾಮಾಸ ಸಮರೇ ಧೃಷ್ಟದ್ಯುಮ್ನಂ ಮಹಾರಥಂ||

ರಾಜನ್! ಅಷ್ಟರಲ್ಲಿಯೇ ಮಹಾಬಲ ದ್ರೋಣನು ಸುಧಾರಿಸಿಕೊಂಡು ಧನುಸ್ಸನ್ನೆತ್ತಿಕೊಂಡು ಹತ್ತಿರದ ಲಕ್ಷ್ಯವನ್ನು ಭೇದಿಸುವ ವೈತಸ್ತಿಕ ಬಾಣಗಳಿಂದ ಸಮರದಲ್ಲಿ ಮಹಾರಥ ಧೃಷ್ಟದ್ಯುಮ್ನನೊಂದಿಗೆ ಯುದ್ಧಮಾಡತೊಡಗಿದನು.

07098051a ತೇ ಹಿ ವೈತಸ್ತಿಕಾ ನಾಮ ಶರಾ ಆಸನ್ನಯೋಧಿನಃ|

07098051c ದ್ರೋಣಸ್ಯ ವಿದಿತಾ ರಾಜನ್ಧೃಷ್ಟದ್ಯುಮ್ನಮವಾಕ್ಷಿಪನ್||

ರಾಜನ್! ದೃಷ್ಟದ್ಯುಮ್ನನ ಮೇಲೆ ಬಿಟ್ಟ, ಹತ್ತಿರದಲ್ಲಿರುವ ಯೋಧರನ್ನು ಭೇದಿಸಬಲ್ಲ ಆ ವೈತಸ್ತಿಕ ಎಂಬ ಹೆಸರಿನ ಬಾಣಗಳನ್ನು ದ್ರೋಣನೇ ನಿರ್ಮಿಸಿದ್ದನು.

07098052a ಸ ವಧ್ಯಮಾನೋ ಬಹುಭಿಃ ಸಾಯಕೈಸ್ತೈರ್ಮಹಾಬಲಃ|

07098052c ಅವಪ್ಲುತ್ಯ ರಥಾತ್ತೂರ್ಣಂ ಭಗ್ನವೇಗಃ ಪರಾಕ್ರಮೀ||

ಅನೇಕ ಸಾಯಕಗಳಿಂದ ಪ್ರಹರಿಸಲ್ಪಟ್ಟು ಭಗ್ನವೇಗನಾದ ಮಹಾಬಲ ಪರಾಕ್ರಮೀ ಧೃಷ್ಟದ್ಯುಮ್ನನು ಬೇಗನೇ ದ್ರೋಣನ ರಥದಿಂದ ಧುಮುಕಿದನು.

07098053a ಆರುಹ್ಯ ಸ್ವರಥಂ ವೀರಃ ಪ್ರಗೃಹ್ಯ ಚ ಮಹದ್ಧನುಃ|

07098053c ವಿವ್ಯಾಧ ಸಮರೇ ದ್ರೋಣಂ ಧೃಷ್ಟದ್ಯುಮ್ನೋ ಮಹಾರಥಃ||

ಆ ವೀರ ಮಹಾರಥ ಧೃಷ್ಟದ್ಯುಮ್ನನು ತನ್ನದೇ ರಥವನ್ನೇರಿ ಮಹಾಧನುಸ್ಸನ್ನು ಹಿಡಿದು ಸಮರದಲ್ಲಿ ದ್ರೋಣನನ್ನು ಹೊಡೆದನು.

07098054a ತದದ್ಭುತಂ ತಯೋರ್ಯುದ್ಧಂ ಭೂತಸಂಘಾ ಹ್ಯಪೂಜಯನ್|

07098054c ಕ್ಷತ್ರಿಯಾಶ್ಚ ಮಹಾರಾಜ ಯೇ ಚಾನ್ಯೇ ತತ್ರ ಸೈನಿಕಾಃ||

ಮಹಾರಾಜ! ಅವರಿಬ್ಬರ ಅದ್ಭುತ ಯುದ್ಧವನ್ನು ಪ್ರಾಣಿಗಣಗಳೆಲ್ಲವೂ, ಕ್ಷತ್ರಿಯರೂ ಮತ್ತು ಅಲ್ಲಿದ್ದ ಇತರ ಸೈನಿಕರೂ ಪ್ರಶಂಸಿಸಿದರು.

07098055a ಅವಶ್ಯಂ ಸಮರೇ ದ್ರೋಣೋ ಧೃಷ್ಟದ್ಯುಮ್ನೇನ ಸಂಗತಃ|

07098055c ವಶಮೇಷ್ಯತಿ ನೋ ರಾಜ್ಞಃ ಪಾಂಚಾಲಾ ಇತಿ ಚುಕ್ರುಶುಃ||

“ಧೃಷ್ಟದ್ಯುಮ್ನನೊಡನೆ ಯುದ್ಧಮಾಡುತ್ತಿರುವ ದ್ರೋಣನು ಅವಶ್ಯವಾಗಿಯೂ ನಮ್ಮ ರಾಜನ ವಶನಾಗಿದ್ದಾನೆ!” ಎಂದು ಪಾಂಚಾಲರು ಕೂಗಿಕೊಳ್ಳುತ್ತಿದ್ದರು.

07098056a ದ್ರೋಣಸ್ತು ತ್ವರಿತೋ ಯುದ್ಧೇ ಧೃಷ್ಟದ್ಯುಮ್ನಸ್ಯ ಸಾರಥೇಃ|

07098056c ಶಿರಃ ಪ್ರಚ್ಯಾವಯಾಮಾಸ ಫಲಂ ಪಕ್ವಂ ತರೋರಿವ|

07098056e ತತಸ್ತೇ ಪ್ರದ್ರುತಾ ವಾಹಾ ರಾಜಂಸ್ತಸ್ಯ ಮಹಾತ್ಮನಃ||

ಆಗ ದ್ರೋಣನಾದರೋ ತಡಮಾಡದೇ ಯುದ್ಧದಲ್ಲಿ ಧೃಷ್ಟದ್ಯುಮ್ನನ ಸಾರಥಿಯ ಶಿರವನ್ನು ಮರದಲ್ಲಿರುವ ಹಣ್ಣನ್ನು ಕೆಳಗೆ ಬೀಳಿಸುವಂತೆ - ದೇಹದಿಂದ ಕೆಳಕ್ಕೆ ಕೆಡವಿದನು. ರಾಜನ್! ಆಗ ಮಹಾತ್ಮ ಧೃಷ್ಟದ್ಯುಮ್ನನ ಕುದುರೆಗಳು ದಿಕ್ಕಾಪಾಲಾಗಿ ಓಡಿಹೋದವು.

07098057a ತೇಷು ಪ್ರದ್ರವಮಾಣೇಷು ಪಾಂಚಾಲಾನ್ಸೃಂಜಯಾಂಸ್ತಥಾ|

07098057c ವ್ಯದ್ರಾವಯದ್ರಣೇ ದ್ರೋಣಸ್ತತ್ರ ತತ್ರ ಪರಾಕ್ರಮೀ||

ಅವುಗಳು ಓಡಿಹೋಗಲು ಪರಾಕ್ರಮೀ ದ್ರೋಣನು ರಣದಲ್ಲಿದ್ದ ಪಾಂಚಾಲ ಸೃಂಜಯರೊಡನೆ ಅಲ್ಲಲ್ಲಿ ಯುದ್ಧಮಾಡತೊಡಗಿದನು.

07098058a ವಿಜಿತ್ಯ ಪಾಂಡುಪಾಂಚಾಲಾನ್ಭಾರದ್ವಾಜಃ ಪ್ರತಾಪವಾನ್|

07098058c ಸ್ವಂ ವ್ಯೂಹಂ ಪುನರಾಸ್ಥಾಯ ಸ್ಥಿರೋಽಭವದರಿಂದಮಃ|

07098058e ನ ಚೈನಂ ಪಾಂಡವಾ ಯುದ್ಧೇ ಜೇತುಮುತ್ಸಹಿರೇ ಪ್ರಭೋ||

ಪಾಂಡವ-ಪಾಂಚಾಲರನ್ನು ಗೆದ್ದು ಪ್ರತಾಪವಾನ್ ಭಾರದ್ವಾಜ ಅರಿಂದಮನು ತನ್ನ ವ್ಯೂಹವನ್ನು ಪುನಃ ಸ್ಥಿರವಾಗಿರುವಂತೆ ಮಾಡಿದರು. ಪ್ರಭೋ! ಆಗ ಪಾಂಡವರು ಅವನೊಡನೆ ಯುದ್ಧಮಾಡಲು ಉತ್ಸಾಹಿತರಾಗಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದ್ರೋಣಪರಾಕ್ರಮೇ ಅಷ್ಠನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದ್ರೋಣಪರಾಕ್ರಮ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.

Image result for flowers against white background

[1] ದಾಸೀ ಜಿತಾಸಿ ದ್ಯೂತೇ ತ್ವಂ ಯಥಾಕಾಮಚರೀ ಭವ! ವಾಸಸಾಂ ವಾಹಿಕಾ ರಾಜ್ಞಾ ಭ್ರಾತುರ್ಜೇಷ್ಠಸ್ಯ ಮೇ ಭವ! ನ ಸಂತಿ ಪತಯಃ ಸರ್ವೇ ತೇಽದ್ಯ ಷಂಡತಿಲೈಃ ಸಮಾಃ|| ದ್ಯೂತದಲ್ಲಿ ನೀನು ನಮ್ಮಿಂದ ಜಯಿಸಲ್ಪಟ್ಟು ಈಗ ನಮ್ಮ ದಾಸಿಯಾಗಿರುವೆ. ಇನ್ನು ಮುಂದೆ ನೀನು ನಮ್ಮ ಇಚ್ಛಾನುವರ್ತಿಯಾಗಿ ಕೆಲಸಮಾಡಿಕೊಂಡಿರು. ನನ್ನ ಜ್ಯೇಷ್ಠಭ್ರಾತ ದುರ್ಯೋಧನ ರಾಜನ ವಸ್ತ್ರಗಳನ್ನು ತಂಡುಕೊಡುವ ದಾಸಿಯಾಗು. ಎಣ್ಣೆಯನ್ನು ತೆಗೆದ ಜಳ್ಳಾದ ಎಳ್ಳಿನ ಸಮನಾಗಿರುವ ಪಾಂಡವರು ಈಗ ನಿನ್ನ ಪತಿಗಳಾಗಿ ಉಳಿದಿರುವುದಿಲ್ಲ!”

[2] ಇಲ್ಲಿ ಇನ್ನೊಂದು ಶ್ಲೋಕವು ಇದೆ: ತ್ವರಿತೋ ವೀರ ಗಚ್ಛ ತ್ವಂ ಗಾಂಧಾರ್ಯುದರಮಾವಿಶ! ಪೃಥಿವ್ಯಾಂ ಧಾವಮಾನಸ್ಯ ನಾನ್ಯತ್ಪಶ್ಯಾಮಿ ಜೀವಿತಂ|| “ಬೇಗನೇ ಹೋಗಿ ನೀನು ಗಾಂಧಾರಿಯ ಹೊಟ್ಟೆಯಲ್ಲಿ ಅಡಗಿಕೊಂಡುಬಿಡು! ಓಡಿಹೋಗುತ್ತಿರುವ ನಿನಗೆ ಅದೊಂದನ್ನು ಬಿಟ್ಟರೆ ಬೇರೆ ಯಾವ ಸುರಕ್ಷಿತ ಸ್ಥಳವನ್ನೂ ಈ ಭೂಮಿಯಲ್ಲೇ ನಾನು ಕಾಣೆ!”

[3] ನಿನ್ನ ಯಶಸ್ಸಿಗಾಗಿಯಾದರೂ

Comments are closed.