Drona Parva: Chapter 86

ದ್ರೋಣ ಪರ್ವ: ಜಯದ್ರಥವಧ ಪರ್ವ

೮೬

ಅರ್ಜುನನು ಯುಧಿಷ್ಠಿರನನ್ನು ರಕ್ಷಿಸು ಎಂದು ಹೇಳಿ ಒಪ್ಪಿಸಿ ಹೋಗಿದುದರಿಂದ ತಾನು ಅವನನ್ನು ಬಿಟ್ಟು ಅರ್ಜುನನ ಹಿಂದೆ ಹೋಗುವುದು ಸರಿಯೆನಿಸುವುದಿಲ್ಲವೆಂದು ಸಾತ್ಯಕಿಯು ಯುಧಿಷ್ಠಿರನಿಗೆ ಹೇಳಿದುದು (೧-೩೮). ಭೀಮಸೇನ-ಧೃಷ್ಟದ್ಯುಮ್ನ ಮೊದಲಾದವರು ತನ್ನನ್ನು ದ್ರೋಣನಿಂದ ರಕ್ಷಿಸುತ್ತಾರೆ ಎಂದು ಹೇಳಿ ಯುಧಿಷ್ಠಿರನು ಸಾತ್ಕಕಿಗೆ ಅರ್ಜುನನ ಸಹಾಯಕ್ಕೆ ಹೋಗೆಂದು ಹೇಳಿದುದು (೩೯-೫೦).

07086001 ಸಂಜಯ ಉವಾಚ|

07086001a ಪ್ರೀತಿಯುಕ್ತಂ ಚ ಹೃದ್ಯಂ ಚ ಮಧುರಾಕ್ಷರಮೇವ ಚ|

07086001c ಕಾಲಯುಕ್ತಂ ಚ ಚಿತ್ರಂ ಚ ಸ್ವತಯಾ ಚಾಭಿಭಾಷಿತಂ||

07086002a ಧರ್ಮರಾಜಸ್ಯ ತದ್ವಾಕ್ಯಂ ನಿಶಮ್ಯ ಶಿನಿಪುಂಗವಃ|

07086002c ಸಾತ್ಯಕಿರ್ಭರತಶ್ರೇಷ್ಠ ಪ್ರತ್ಯುವಾಚ ಯುಧಿಷ್ಠಿರಂ||

ಸಂಜಯನು ಹೇಳಿದನು: “ಭರತಶ್ರೇಷ್ಠ! ಪ್ರೀತಿಯುಕ್ತವಾದ, ಹೃದಯಂಗಮವಾದ, ಮಧುರ ಅಕ್ಷರಗಳಿಂದ ಕೂಡಿದ, ಕಾಲಕ್ಕೆ ಸರಿಯಾದ, ವಿಚಿತ್ರವಾಗಿ ಮತ್ತು ಸ್ವತಃ ತಾನೇ ಮಾತನಾಡಿದ ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವ ಸಾತ್ಯಕಿಯು ಯುಧಿಷ್ಠಿರನಿಗೆ ಉತ್ತರಿಸಿದನು:

07086003a ಶ್ರುತಂ ತೇ ಗದತೋ ವಾಕ್ಯಂ ಸರ್ವಮೇತನ್ಮಯಾಚ್ಯುತ|

07086003c ನ್ಯಾಯಯುಕ್ತಂ ಚ ಚಿತ್ರಂ ಚ ಫಲ್ಗುನಾರ್ಥೇ ಯಶಸ್ಕರಂ||

“ಅಚ್ಯುತ! ನೀನು ಹೇಳಿದ ನ್ಯಾಯಯುಕ್ತವಾದ, ವಿಚಿತ್ರವಾದ, ಫಲ್ಗುನನಿಗೆ ಯಶಸ್ಸನ್ನುಂಟುಮಾಡುವಂತಹ ಎಲ್ಲ ಮಾತುಗಳನ್ನೂ ನಾನು ಕೇಳಿದೆ.

07086004a ಏವಂವಿಧೇ ತಥಾ ಕಾಲೇ ಮದೃಶಂ ಪ್ರೇಕ್ಷ್ಯ ಸಮ್ಮತಂ|

07086004c ವಕ್ತುಮರ್ಹಸಿ ರಾಜೇಂದ್ರ ಯಥಾ ಪಾರ್ಥಂ ತಥೈವ ಮಾಂ||

ರಾಜೇಂದ್ರ! ಇಂಥಹ ಸಮಯದಲ್ಲಿ ನನ್ನಂತವನು ಪಾರ್ಥ ಮತ್ತು ನನಗೆ ಸಮ್ಮತವಾಗಿರುವುದೇನೆಂದು ನೋಡಿ ಹೇಳಬೇಕಾಗುತ್ತದೆ.

07086005a ನ ಮೇ ಧನಂಜಯಸ್ಯಾರ್ಥೇ ಪ್ರಾಣಾ ರಕ್ಷ್ಯಾಃ ಕಥಂ ಚನ|

07086005c ತ್ವತ್ಪ್ರಯುಕ್ತಃ ಪುನರಹಂ ಕಿಂ ನ ಕುರ್ಯಾಂ ಮಹಾಹವೇ||

ಧನಂಜಯನಿಗಾಗಿ ನಾನು ನನ್ನ ಪ್ರಾಣಗಳನ್ನು ಎಂದೂ ರಕ್ಷಿಸಿಕೊಳ್ಳುವುದಿಲ್ಲ. ಹೀಗಿರುವಾಗ ಮಹಾಹವದಲ್ಲಿ ನಾನು ನಿನಗಾಗಿ ಏನನ್ನು ಮಾಡದೇ ಇರಬಲ್ಲೆ?

07086006a ಲೋಕತ್ರಯಂ ಯೋಧಯೇಯಂ ಸದೇವಾಸುರಮಾನುಷಂ|

07086006c ತ್ವತ್ಪ್ರಯುಕ್ತೋ ನರೇಂದ್ರೇಹ ಕಿಮುತೈತತ್ಸುದುರ್ಬಲಂ||

ನರೇಂದ್ರ! ನಿನಗೋಸ್ಕರವಾಗಿ ದೇವಾಸುರಮಾನುಷ ಈ ಮೂರುಲೋಕಗಳೊಡನೆಯೂ ಯುದ್ಧಮಾಡಬಲ್ಲೆ. ಈ ಸುದುರ್ಬಲರೊಂದಿಗೆ ಇನ್ನೇನು?

07086007a ಸುಯೋಧನಬಲಂ ತ್ವದ್ಯ ಯೋಧಯಿಷ್ಯೇ ಸಮಂತತಃ|

07086007c ವಿಜೇಷ್ಯೇ ಚ ರಣೇ ರಾಜನ್ಸತ್ಯಮೇತದ್ಬ್ರವೀಮಿ ತೇ||

ರಾಜನ್! ಇಂದು ರಣದಲ್ಲಿ ಎಲ್ಲಕಡೆಗಳಿಂದ ಸುಯೋಧನನ ಸೇನೆಯೊಂದಿಗೆ ಯುದ್ಧಮಾಡಿ ಜಯಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

07086008a ಕುಶಲ್ಯಹಂ ಕುಶಲಿನಂ ಸಮಾಸಾದ್ಯ ಧನಂಜಯಂ|

07086008c ಹತೇ ಜಯದ್ರಥೇ ರಾಜನ್ಪುನರೇಷ್ಯಾಮಿ ತೇಽಂತಿಕಂ||

ರಾಜನ್! ಕುಶಲಿ ನಾನು ಕುಶಲಿ ಧನಂಜಯನ ಬಳಿಸಾರಿ ಜಯದ್ರಥನನು ಹತನಾದನಂತರವೇ ಹಿಂದಿರುಗುತ್ತೇನೆ.

07086009a ಅವಶ್ಯಂ ತು ಮಯಾ ಸರ್ವಂ ವಿಜ್ಞಾಪ್ಯಸ್ತ್ವಂ ನರಾಧಿಪ|

07086009c ವಾಸುದೇವಸ್ಯ ಯದ್ವಾಕ್ಯಂ ಫಲ್ಗುನಸ್ಯ ಚ ಧೀಮತಃ||

ಆದರೆ ನರಾಧಿಪ! ನಾನು ನಿನಗೆ ವಾಸುದೇವನ ಮತ್ತು ಧೀಮತ ಫಲ್ಗುನನ ಮಾತುಗಳೆಲ್ಲವನ್ನೂ ವಿಜ್ಞಾಪಿಸುವುದು ಅವಶ್ಯವಾಗಿದೆ.

07086010a ದೃಢಂ ತ್ವಭಿಪರೀತೋಽಹಮರ್ಜುನೇನ ಪುನಃ ಪುನಃ|

07086010c ಮಧ್ಯೇ ಸರ್ವಸ್ಯ ಸೈನ್ಯಸ್ಯ ವಾಸುದೇವಸ್ಯ ಶೃಣ್ವತಃ||

ಸರ್ವ ಸೇನೆಗಳ ಮಧ್ಯೆ ವಾಸುದೇವನು ಕೇಳುವಂತೆ ಅರ್ಜುನನು ನನಗೆ ಪುನಃ ಪುನಃ ದೃಢವಾಗಿ ಆದೇಶವನ್ನಿತ್ತಿದ್ದನು:

07086011a ಅದ್ಯ ಮಾಧವ ರಾಜಾನಮಪ್ರಮತ್ತೋಽನುಪಾಲಯ|

07086011c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಯಾವದ್ಧನ್ಮಿ ಜಯದ್ರಥಂ||

“ಮಾಧವ! ಇಂದು ನಾನು ಜಯದ್ರಥನನ್ನು ಕೊಂದು ಬರುವವರೆಗೂ ರಾಜನನ್ನು ಅಪ್ರಮತ್ತನಾಗಿ ಆರ್ಯನಂತೆ ಯುದ್ಧದಲ್ಲಿ ಬುದ್ಧಿಯನ್ನಿರಿಸಿ ಪರಿಪಾಲಿಸು.

07086012a ತ್ವಯಿ ವಾಹಂ ಮಹಾಬಾಹೋ ಪ್ರದ್ಯುಮ್ನೇ ವಾ ಮಹಾರಥೇ|

07086012c ನೃಪಂ ನಿಕ್ಷಿಪ್ಯ ಗಚ್ಚೇಯಂ ನಿರಪೇಕ್ಷೋ ಜಯದ್ರಥಂ||

ಮಹಾಬಾಹೋ! ನಿನ್ನಲ್ಲಿ ಅಥವಾ ಮಹಾರಥ ಪ್ರದ್ಯುಮ್ನನ ಬಳಿ ನೃಪನನ್ನಿಟ್ಟು ನಾನು ನಿರಪೇಕ್ಷನಾಗಿ ಜಯದ್ರಥನಿದ್ದಲ್ಲಿಗೆ ಹೋಗಬಹುದು.

07086013a ಜಾನೀಷೇ ಹಿ ರಣೇ ದ್ರೋಣಂ ರಭಸಂ ಶ್ರೇಷ್ಠಸಮ್ಮತಂ|

07086013c ಪ್ರತಿಜ್ಞಾ ಚಾಪಿ ತೇ ನಿತ್ಯಂ ಶ್ರುತಾ ದ್ರೋಣಸ್ಯ ಮಾಧವ||

ಮಾಧವ! ರಣದಲ್ಲಿ ಶ್ರೇಷ್ಠಸಮ್ಮತ ದ್ರೋಣನ ರಭಸವನ್ನು ತಿಳಿದಿದ್ದೀಯೆ. ಹಾಗೆಯೇ ನಿತ್ಯವೂ ಅವನು ಮಾಡಿಕೊಂಡು ಬಂದಿರುವ ಪ್ರತಿಜ್ಞೆಯನ್ನೂ ಕೇಳಿದ್ದೀಯೆ.

07086014a ಗ್ರಹಣಂ ಧರ್ಮರಾಜಸ್ಯ ಭಾರದ್ವಾಜೋಽನುಗೃಧ್ಯತಿ|

07086014c ಶಕ್ತಶ್ಚಾಪಿ ರಣೇ ದ್ರೋಣೋ ನಿಗೃಹೀತುಂ ಯುಧಿಷ್ಠಿರಂ||

ಭಾರದ್ವಾಜನು ಧರ್ಮರಾಜನನ್ನು ಸೆರೆಹಿಡಿಯಲು ನೋಡುತ್ತಿದ್ದಾನೆ. ರಣದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ದ್ರೋಣನು ಶಕ್ತನೂ ಕೂಡ.

07086015a ಏವಂ ತ್ವಯಿ ಸಮಾಧಾಯ ಧರ್ಮರಾಜಂ ನರೋತ್ತಮಂ|

07086015c ಅಹಮದ್ಯ ಗಮಿಷ್ಯಾಮಿ ಸೈಂಧವಸ್ಯ ವಧಾಯ ಹಿ||

ನರೋತ್ತಮ! ಹೀಗಿದ್ದಾಗ ನಾನು ಧರ್ಮರಾಜನನ್ನು ಇಂದು ನಿನಗೆ ಒಪ್ಪಿಸಿ ಸೈಂಧವನ ವಧೆಗಾಗಿ ಹೋಗುತ್ತಿದ್ದೇನೆ.

07086016a ಜಯದ್ರಥಮಹಂ ಹತ್ವಾ ಧ್ರುವಮೇಷ್ಯಾಮಿ ಮಾಧವ|

07086016c ಧರ್ಮರಾಜಂ ಯಥಾ ದ್ರೋಣೋ ನಿಗೃಹ್ಣೀಯಾದ್ರಣೇ ಬಲಾತ್||

ಮಾಧವ! ಒಂದುವೇಳೆ ದ್ರೋಣನು ಧರ್ಮರಾಜನನ್ನು ಬಲಾತ್ಕಾರವಾಗಿ ಸೆರೆಹಿಡಿಯದಿದ್ದರೆ ಖಂಡಿತವಾಗಿಯೂ ನಾನು ಜಯದ್ರಥನನ್ನು ಸಂಹರಿಸಿ ಹಿಂದಿರುಗುತ್ತೇನೆ.

07086017a ನಿಗೃಹೀತೇ ನರಶ್ರೇಷ್ಠೇ ಭಾರದ್ವಾಜೇನ ಮಾಧವ|

07086017c ಸೈಂಧವಸ್ಯ ವಧೋ ನ ಸ್ಯಾನ್ಮಮಾಪ್ರೀತಿಸ್ತಥಾ ಭವೇತ್||

ಮಾಧವ! ನರಶ್ರೇಷ್ಠನು ಭಾರದ್ವಾಜನಿಂದ ಸೆರೆಹಿಡಿಯಲ್ಪಟ್ಟರೆ ಸೈಂಧವನ ವಧೆಯು ನಡೆಯುವುದಿಲ್ಲ. ನನಗೆ ಒಳ್ಳೆಯದಾಗದಿರುವುದು ನಡೆದುಹೋಗುತ್ತದೆ.

07086018a ಏವಂ ಗತೇ ನರಶ್ರೇಷ್ಠ ಪಾಂಡವೇ ಸತ್ಯವಾದಿನಿ|

07086018c ಅಸ್ಮಾಕಂ ಗಮನಂ ವ್ಯಕ್ತಂ ವನಂ ಪ್ರತಿ ಭವೇತ್ಪುನಃ||

ಈ ನರಶ್ರೇಷ್ಠ ಸತ್ಯವಾದಿ ಪಾಂಡವನು ಹೊರಟುಹೋದರೆ ನಾವು ಪುನಃ ವನಕ್ಕೆ ಹೋಗಬೇಕಾಗುತ್ತದೆ.

07086019a ಸೋಽಯಂ ಮಮ ಜಯೋ ವ್ಯಕ್ತಂ ವ್ಯರ್ಥ ಏವ ಭವಿಷ್ಯತಿ|

07086019c ಯದಿ ದ್ರೋಣೋ ರಣೇ ಕ್ರುದ್ಧೋ ನಿಗೃಹ್ಣೀಯಾದ್ಯುಧಿಷ್ಠಿರಂ||

ಒಂದುವೇಳೆ ರಣದಲ್ಲಿ ಕ್ರುದ್ಧ ದ್ರೋಣನು ಯುಧಿಷ್ಠಿರನನ್ನು ಹಿಡಿದಿದ್ದೇ ಆದರೆ ನನ್ನ ವಿಜಯವೂ ಕೂಡ ವ್ಯರ್ಥವೇ ಆಗಿಬಿಡುತ್ತದೆ.

07086020a ಸ ತ್ವಮದ್ಯ ಮಹಾಬಾಹೋ ಪ್ರಿಯಾರ್ಥಂ ಮಮ ಮಾಧವ|

07086020c ಜಯಾರ್ಥಂ ಚ ಯಶೋರ್ಥಂ ಚ ರಕ್ಷ ರಾಜಾನಮಾಹವೇ||

ಆದುದರಿಂದ ಮಾಧವ! ಮಹಾಬಾಹೋ! ನನಗೆ ಬೇಕಾಗಿ, ಜಯ ಮತ್ತು ಯಶಸ್ಸಿಗಾಗಿ ರಾಜನನ್ನು ಯುದ್ಧದಲ್ಲಿ ರಕ್ಷಿಸು!”

07086021a ಸ ಭವಾನ್ಮಯಿ ನಿಕ್ಷೇಪೋ ನಿಕ್ಷಿಪ್ತಃ ಸವ್ಯಸಾಚಿನಾ|

07086021c ಭಾರದ್ವಾಜಾದ್ಭಯಂ ನಿತ್ಯಂ ಪಶ್ಯಮಾನೇನ ತೇ ಪ್ರಭೋ||

ಪ್ರಭೋ! ಭಾರದ್ವಾಜನಿಂದ ನಿತ್ಯವೂ ನಿನಗಿರುವ ಭಯವನ್ನು ನೋಡಿಯೇ ಸವ್ಯಸಾಚಿಯು ನಿನ್ನನ್ನು ನ್ಯಾಸರೂಪದಲ್ಲಿ ನನ್ನ ಬಳಿ ಇರಿಸಿದ್ದಾನೆ.

07086022a ತಸ್ಯಾಪಿ ಚ ಮಹಾಬಾಹೋ ನಿತ್ಯಂ ಪಶ್ಯತಿ ಸಂಯುಗೇ|

07086022c ನಾನ್ಯಂ ಹಿ ಪ್ರತಿಯೋದ್ಧಾರಂ ರೌಕ್ಮಿಣೇಯಾದೃತೇ ಪ್ರಭೋ|

07086022e ಮಾಂ ವಾಪಿ ಮನ್ಯತೇ ಯುದ್ಧೇ ಭಾರದ್ವಾಜಸ್ಯ ಧೀಮತಃ||

ಮಹಾಬಾಹೋ! ಪ್ರಭೋ! ಯುದ್ಧದಲ್ಲಿ ಧೀಮತ ಭಾರದ್ವಾಜನೊಡನೆ ಪ್ರತಿಯಾಗಿ ಯುದ್ಧಮಾಡುವವನು ರೌಕ್ಮಿಣೇಯನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ನಾನು ನಿತ್ಯವೂ ಕಾಣುತ್ತೇನೆ. ಅವನಂತೆ ನನ್ನನ್ನೂ ಪರಿಗಣಿಸುತ್ತಾರೆ.

07086023a ಸೋಽಹಂ ಸಂಭಾವನಾಂ ಚೈತಾಮಾಚಾರ್ಯವಚನಂ ಚ ತತ್|

07086023c ಪೃಷ್ಠತೋ ನೋತ್ಸಹೇ ಕರ್ತುಂ ತ್ವಾಂ ವಾ ತ್ಯಕ್ತುಂ ಮಹೀಪತೇ||

ಆದುದರಿಂದ ನಾನು ಆಚಾರ್ಯನ ವಚನದಂತೆ ಮಾಡುವುದು ಲೇಸು. ಮಹೀಪತೇ! ನಿನ್ನನ್ನು ಹಿಂದೆಮಾಡುವ ಅಥವಾ ಬಿಟ್ಟುಹೋಗುವ ಕೆಲಸವನ್ನು ಮಾಡಲು ಬಯಸುವುದಿಲ್ಲ.

07086024a ಆಚಾರ್ಯೋ ಲಘುಹಸ್ತತ್ವಾದಭೇದ್ಯಕವಚಾವೃತಃ|

07086024c ಉಪಲಭ್ಯ ರಣೇ ಕ್ರೀಡೇದ್ಯಥಾ ಶಕುನಿನಾ ಶಿಶುಃ||

ಆಚಾರ್ಯನು ಅಭೇದ್ಯ ಕವಚದಿಂದ ಮತ್ತು ಕೈಚಳಕದಿಂದ ನಿನ್ನನ್ನು ರಣದಲ್ಲಿ ಹಿಡಿದು ಬಾಲಕನು ದಾರಕ್ಕೆ ಕಟ್ಟಿದ ಪಕ್ಷಿಯೊಡನೆ ಹೇಗೋ ಹಾಗೆ ಆಡುತ್ತಾನೆ.

07086025a ಯದಿ ಕಾರ್ಷ್ಣಿರ್ಧನುಷ್ಪಾಣಿರಿಹ ಸ್ಯಾನ್ಮಕರಧ್ವಜಃ|

07086025c ತಸ್ಮೈ ತ್ವಾಂ ವಿಸೃಜೇಯಂ ವೈ ಸ ತ್ವಾಂ ರಕ್ಷೇದ್ಯಥಾರ್ಜುನಃ||

ಒಂದುವೇಳೆ ಕಾರ್ಷ್ಣಿ ಮಕರಧ್ವಜನು ಇಲ್ಲಿ ಇರುತ್ತಿದ್ದರೆ ನಾನು ರಕ್ಷಣೆಗೆ ನಿನ್ನನ್ನು ಅವನಿಗೆ ಒಪ್ಪಿಸಿ ಅರ್ಜುನನ ರಕ್ಷಣೆಗೆ ಹೋಗುತ್ತಿದ್ದೆ.

07086026a ಕುರು ತ್ವಮಾತ್ಮನೋ ಗುಪ್ತಿಂ ಕಸ್ತೇ ಗೋಪ್ತಾ ಗತೇ ಮಯಿ|

07086026c ಯಃ ಪ್ರತೀಯಾದ್ರಣೇ ದ್ರೋಣಂ ಯಾವದ್ಗಚ್ಚಾಮಿ ಪಾಂಡವಂ||

ನೀನು ನಿನ್ನನ್ನು ರಕ್ಷಿಸಿಕೊಳ್ಳಬೇಕು. ನಾನು ಪಾಂಡವನ ಕಡೆ ಹೋದರೆ ರಣದಲ್ಲಿ ದ್ರೋಣನನ್ನು ಎದುರಿಸಿ ಯುದ್ಧಮಾಡಿ ನಿನ್ನನ್ನು ರಕ್ಷಿಸುವವರು ಯಾರು?

07086027a ಮಾ ಚ ತೇ ಭಯಮದ್ಯಾಸ್ತು ರಾಜನ್ನರ್ಜುನಸಂಭವಂ|

07086027c ನ ಸ ಜಾತು ಮಹಾಬಾಹುರ್ಭಾರಮುದ್ಯಮ್ಯ ಸೀದತಿ||

ರಾಜನ್! ಅರ್ಜುನನ ಕಾರಣದಿಂದಾಗಿ ನಿನಗೆ ಇಂದು ಯಾವ ಭಯವೂ ಬೇಕಾಗಿಲ್ಲ. ಆ ಮಹಾಬಾಹುವು ಎಂತಹ ಕಷ್ಟದಲ್ಲಿಯೂ ಕುಸಿಯುವುದಿಲ್ಲ.

07086028a ಯೇ ಚ ಸೌವೀರಕಾ ಯೋಧಾಸ್ತಥಾ ಸೈಂಧವಪೌರವಾಃ|

07086028c ಉದೀಚ್ಯಾ ದಾಕ್ಷಿಣಾತ್ಯಾಶ್ಚ ಯೇ ಚಾನ್ಯೇಽಪಿ ಮಹಾರಥಾಃ||

07086029a ಯೇ ಚ ಕರ್ಣಮುಖಾ ರಾಜನ್ರಥೋದಾರಾಃ ಪ್ರಕೀರ್ತಿತಾಃ|

07086029c ಏತೇಽರ್ಜುನಸ್ಯ ಕ್ರುದ್ಧಸ್ಯ ಕಲಾಂ ನಾರ್ಹಂತಿ ಷೋಡಶೀಂ||

ಈ ಸೌವೀರಕ ಯೋಧರು, ಹಾಗೆಯೇ ಸೈಂಧವ-ಪೌರವರು, ಉತ್ತರದವರು, ದಕ್ಷಿಣದವರು, ಅನ್ಯ ಮಹಾರಥರು, ಕರ್ಣನೇ ಮೊದಲಾದ ರಥೋದಾರರೆಂದು ಹೇಳಿಸಿಕೊಂಡವರು ಕ್ರುದ್ಧನಾದ ಈ ಅರ್ಜುನನ ಹದಿನಾರರಲ್ಲಿ ಒಂದಂಶಕ್ಕೂ ಸಮರಲ್ಲ.

07086030a ಉದ್ಯುಕ್ತಾ ಪೃಥಿವೀ ಸರ್ವಾ ಸಸುರಾಸುರಮಾನುಷಾ|

07086030c ಸರಾಕ್ಷಸಗಣಾ ರಾಜನ್ಸಕಿನ್ನರಮಹೋರಗಾ||

07086031a ಜಂಗಮಾಃ ಸ್ಥಾವರೈಃ ಸಾರ್ಧಂ ನಾಲಂ ಪಾರ್ಥಸ್ಯ ಸಂಯುಗೇ|

07086031c ಏವಂ ಜ್ಞಾತ್ವಾ ಮಹಾರಾಜ ವ್ಯೇತು ತೇ ಭೀರ್ಧನಂಜಯೇ||

ಭೂಮಿಯ ಎಲ್ಲರೂ ಮೇಲೆದ್ದು, ಸುರಾಸುರಮನುಷ್ಯರೊಂದಿಗೆ ರಾಕ್ಷಸಗಣಗಳೂ, ಕಿನ್ನರ ಮಹೋರಗಗಳೂ, ಸ್ಥಾವರ ಜಂಗಮಗಳೂ ಸೇರಿ ಒಟ್ಟಾದರೂ ಅವರು ಸಂಯುಗದಲ್ಲಿ ಪಾರ್ಥನನ್ನು ಮೀರಿಸಲಾರರು. ಮಹಾರಾಜ! ಇದನ್ನು ತಿಳಿದು ಧನಂಜಯನಿಗಾಗಿ ನೀನು ಹೆದರಿ ಕಂಪಿಸಬೇಕಾಗಿಲ್ಲ.

07086032a ಯತ್ರ ವೀರೌ ಮಹೇಷ್ವಾಸೌ ಕೃಷ್ಣೌ ಸತ್ಯಪರಾಕ್ರಮೌ|

07086032c ನ ತತ್ರ ಕರ್ಮಣೋ ವ್ಯಾಪತ್ಕಥಂ ಚಿದಪಿ ವಿದ್ಯತೇ||

ಎಲ್ಲಿ ವೀರ ಮಹೇಷ್ವಾಸ ಸತ್ಯಪರಾಕ್ರಮಿ ಕೃಷ್ಣರೀರ್ವರು ಇರುವರೋ ಅಲ್ಲಿ ಎಂದೂ ಆಪತ್ತಿನ ವಿಷಯವು ಬರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.

07086033a ದೈವಂ ಕೃತಾಸ್ತ್ರತಾಂ ಯೋಗಮಮರ್ಷಮಪಿ ಚಾಹವೇ|

07086033c ಕೃತಜ್ಞತಾಂ ದಯಾಂ ಚೈವ ಭ್ರಾತುಸ್ತ್ವಮನುಚಿಂತಯ||

ನಿನ್ನ ತಮ್ಮನ ದೈವತ್ವವನ್ನೂ, ಅಸ್ತ್ರಗಳಲ್ಲಿ ಪರಿಣಿತಿಯನ್ನೂ,  ಯುದ್ಧದಲ್ಲಿ ಅವನ ಯೋಗತ್ವ ಮತ್ತು ಅಸಹನೆ, ಕೃತಜ್ಞತೆ, ದಯೆಗಳನ್ನು ಜ್ಞಾಪಿಸಿಕೋ!

07086034a ಮಯಿ ಚಾಪ್ಯಪಯಾತೇ ವೈ ಗಚ್ಚಮಾನೇಽರ್ಜುನಂ ಪ್ರತಿ|

07086034c ದ್ರೋಣೇ ಚಿತ್ರಾಸ್ತ್ರತಾಂ ಸಂಖ್ಯೇ ರಾಜಂಸ್ತ್ವಮನುಚಿಂತಯ||

ರಾಜನ್! ಒಂದುವೇಳೆ ನಾನು ಅರ್ಜುನನಿದ್ದಲ್ಲಿಗೆ ಹೋದರೆ ದ್ರೋಣನು ರಣದಲ್ಲಿ ಪ್ರಯೋಗಿಸುವ ಚಿತ್ರಾಸ್ತ್ರಗಳ ಕುರಿತು ಯೋಚಿಸು!

07086035a ಆಚಾರ್ಯೋ ಹಿ ಭೃಶಂ ರಾಜನ್ನಿಗ್ರಹೇ ತವ ಗೃಧ್ಯತಿ|

07086035c ಪ್ರತಿಜ್ಞಾಮಾತ್ಮನೋ ರಕ್ಷನ್ಸತ್ಯಾಂ ಕರ್ತುಂ ಚ ಭಾರತ||

ಭಾರತ! ರಾಜನ್! ಆಚಾರ್ಯನು ನಿನ್ನನ್ನು ಹಿಡಿಯಲು ತುಂಬಾ ಆತುರನಾಗಿದ್ದಾನೆ. ತನ್ನನ್ನು ರಕ್ಷಿಸಿಕೊಂಡು ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಪ್ರಯತ್ನಿಸುತ್ತಾನೆ.

07086036a ಕುರುಷ್ವಾದ್ಯಾತ್ಮನೋ ಗುಪ್ತಿಂ ಕಸ್ತೇ ಗೋಪ್ತಾ ಗತೇ ಮಯಿ|

07086036c ಯಸ್ಯಾಹಂ ಪ್ರತ್ಯಯಾತ್ಪಾರ್ಥ ಗಚ್ಚೇಯಂ ಫಲ್ಗುನಂ ಪ್ರತಿ||

ನಿನ್ನನ್ನು ನೀನು ರಕ್ಷಿತನನ್ನಾಗಿ ಮಾಡಿಕೋ! ನಾನು ಹೋದರೆ ನಿನ್ನನ್ನು ಯಾರು ರಕ್ಷಿಸುತ್ತಾರೆ? ಪಾರ್ಥ! ನಿನ್ನನ್ನು ಯಾರಿಗೆ ಒಪ್ಪಿಸಿ ನಾನು ಫಲ್ಗುನನಿದ್ದಲ್ಲಿಗೆ ಹೋಗಲಿ?

07086037a ನ ಹ್ಯಹಂ ತ್ವಾ ಮಹಾರಾಜ ಅನಿಕ್ಷಿಪ್ಯ ಮಹಾಹವೇ|

07086037c ಕ್ವ ಚಿದ್ಯಾಸ್ಯಾಮಿ ಕೌರವ್ಯ ಸತ್ಯಮೇತದ್ಬ್ರವೀಮಿ ತೇ||

ಮಹಾರಾಜ! ಕೌರವ್ಯ! ಈ ಮಹಾಹವದಲ್ಲಿ ನಿನ್ನನ್ನು ಬೇರೆ ಯಾರಿಗಾದರೂ ಒಪ್ಪಿಸದೇ ನಾನು ಹೋಗುವುದಿಲ್ಲ. ನಾನು ನಿಜವಾದುದನ್ನೇ ನಿನಗೆ ಹೇಳುತ್ತಿದ್ದೇನೆ.

07086038a ಏತದ್ವಿಚಾರ್ಯ ಬಹುಶೋ ಬುದ್ಧ್ಯಾ ಬುದ್ಧಿಮತಾಂ ವರ|

07086038c ದೃಷ್ಟ್ವಾ ಶ್ರೇಯಃ ಪರಂ ಬುದ್ಧ್ಯಾ ತತೋ ರಾಜನ್ಪ್ರಶಾಧಿ ಮಾಂ||

ಬುದ್ಧಿವಂತರಲ್ಲಿ ಶ್ರೇಷ್ಠ! ಇವೆಲ್ಲವನ್ನು ಬಹಳಬಾರಿ ಬುದ್ಧಿಯನ್ನುಪಯೋಗಿಸಿ ಯೋಚಿಸು! ರಾಜನ್! ಪರಮ ಶ್ರೇಯಸ್ಕರವಾದು ಏನೆಂದು ಬುದ್ಧಿಯಿಂದ ಕಂಡುಕೊಂಡು ನನಗೆ ಆದೇಶವನ್ನು ನೀಡು!”

07086039 ಯುಧಿಷ್ಠಿರ ಉವಾಚ|

07086039a ಏವಮೇತನ್ಮಹಾಬಾಹೋ ಯಥಾ ವದಸಿ ಮಾಧವ|

07086039c ನ ತು ಮೇ ಶುಧ್ಯತೇ ಭಾವಃ ಶ್ವೇತಾಶ್ವಂ ಪ್ರತಿ ಮಾರಿಷ||

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಮಾಧವ! ಮಾರಿಷ! ನೀನು ಹೇಳಿದುದೆಲ್ಲವೂ ಸರಿಯೇ! ಆದರೆ ಶ್ವೇತಾಶ್ವ ಅರ್ಜುನನ ಕುರಿತು ನನ್ನ ಭಾವವು ಅಳುಕದೇ ಇರುವುದಿಲ್ಲ.

07086040a ಕರಿಷ್ಯೇ ಪರಮಂ ಯತ್ನಮಾತ್ಮನೋ ರಕ್ಷಣಂ ಪ್ರತಿ|

07086040c ಗಚ್ಚ ತ್ವಂ ಸಮನುಜ್ಞಾತೋ ಯತ್ರ ಯಾತೋ ಧನಂಜಯಃ||

ನನ್ನ ರಕ್ಷಣೆಯ ಕುರಿತು ಪರಮ ಯತ್ನವನ್ನು ಮಾಡುತ್ತೇನೆ. ನೀನು ಅಪ್ಪಣೆಯಂತೆ ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗು.

07086041a ಆತ್ಮಸಂರಕ್ಷಣಂ ಸಂಖ್ಯೇ ಗಮನಂ ಚಾರ್ಜುನಂ ಪ್ರತಿ|

07086041c ವಿಚಾರ್ಯೈತದ್ದ್ವಯಂ ಬುದ್ಧ್ಯಾ ಗಮನಂ ತತ್ರ ರೋಚಯೇ||

ರಣದಲ್ಲಿ ನನ್ನ ಆತ್ಮರಕ್ಷಣೆ ಮತ್ತು ಅರ್ಜುನನ ಬಳಿ ಹೋಗುವುದು - ಈ ಎರಡನ್ನೂ ಬುದ್ಧಿಯಿಂದ ವಿಚಾರಿಸಿ, ಅಲ್ಲಿಗೆ ಹೋಗುವುದೇ ಸರಿಯೆಂದು ಬಯಸಿದ್ದೇನೆ.

07086042a ಸ ತ್ವಮಾತಿಷ್ಠ ಯಾನಾಯ ಯತ್ರ ಯಾತೋ ಧನಂಜಯಃ|

07086042c ಮಮಾಪಿ ರಕ್ಷಣಂ ಭೀಮಃ ಕರಿಷ್ಯತಿ ಮಹಾಬಲಃ||

ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗಲು ಸಿದ್ಧನಾಗು. ಮಹಾಬಲ ಭೀಮನು ನನ್ನ ರಕ್ಷಣೆಯನ್ನು ಮಾಡುತ್ತಾನೆ.

07086043a ಪಾರ್ಷತಶ್ಚ ಸಸೋದರ್ಯಃ ಪಾರ್ಥಿವಾಶ್ಚ ಮಹಾಬಲಾಃ|

07086043c ದ್ರೌಪದೇಯಾಶ್ಚ ಮಾಂ ತಾತ ರಕ್ಷಿಷ್ಯಂತಿ ನ ಸಂಶಯಃ||

ಅಯ್ಯಾ! ಸೋದರರೊಂದಿಗೆ ಪಾರ್ಷತ, ಮಹಾಬಲ ಪಾರ್ಥಿವರು ಮತ್ತು ದ್ರೌಪದೇಯರೂ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ.

07086044a ಕೇಕಯಾ ಭ್ರಾತರಃ ಪಂಚ ರಾಕ್ಷಸಶ್ಚ ಘಟೋತ್ಕಚಃ|

07086044c ವಿರಾಟೋ ದ್ರುಪದಶ್ಚೈವ ಶಿಖಂಡೀ ಚ ಮಹಾರಥಃ||

07086045a ಧೃಷ್ಟಕೇತುಶ್ಚ ಬಲವಾನ್ಕುಂತಿಭೋಜಶ್ಚ ಮಾರಿಷ|

07086045c ನಕುಲಃ ಸಹದೇವಶ್ಚ ಪಾಂಚಾಲಾಃ ಸೃಂಜಯಾಸ್ತಥಾ|

07086045e ಏತೇ ಸಮಾಹಿತಾಸ್ತಾತ ರಕ್ಷಿಷ್ಯಂತಿ ನ ಸಂಶಯಃ||

ಮಾರಿಷ! ಅಯ್ಯಾ! ಐವರು ಕೇಕಯ ಸಹೋದರರು, ರಾಕ್ಷಸ ಘಟೋತ್ಕಚ, ವಿರಾಟ, ದ್ರುಪದ, ಮಹಾರಥ ಶಿಖಂಡೀ, ಬಲವಾನ್ ಧೃಷ್ಟಕೇತು, ಕುಂತಿಭೋಜ, ನಕುಲ, ಸಹದೇವ ಮತ್ತು ಪಾಂಚಾಲ-ಸೃಂಜಯರು ಒಟ್ಟಾಗಿ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ.

07086046a ನ ದ್ರೋಣಃ ಸಹ ಸೈನ್ಯೇನ ಕೃತವರ್ಮಾ ಚ ಸಂಯುಗೇ|

07086046c ಸಮಾಸಾದಯಿತುಂ ಶಕ್ತೋ ನ ಚ ಮಾಂ ಧರ್ಷಯಿಷ್ಯತಿ||

ಸೈನ್ಯಸಮೇತ ದ್ರೋಣನಾಗಲೀ ಕೃತವರ್ಮನಾಗಲೀ ಸಂಯುಗದಲ್ಲಿ ನನ್ನ ಬಳಿ ಬರಲೂ ಶಕ್ತರಾಗುವುದಿಲ್ಲ. ನನ್ನನ್ನು ಸೋಲಿಸುವುದು ಹೇಗೆ?

07086047a ಧೃಷ್ಟದ್ಯುಮ್ನಶ್ಚ ಸಮರೇ ದ್ರೋಣಂ ಕ್ರುದ್ಧಂ ಪರಂತಪಃ|

07086047c ವಾರಯಿಷ್ಯತಿ ವಿಕ್ರಮ್ಯ ವೇಲೇವ ಮಕರಾಲಯಂ||

ಪರಂತಪ ಧೃಷ್ಟದ್ಯುಮ್ನನು ಕ್ರುದ್ಧ ದ್ರೋಣನನ್ನು ವಿಕ್ರಮದಿಂದ ತೀರವು ಸಮುದ್ರವನ್ನು ತಡೆಯುವಂತೆ ನಿಲ್ಲಿಸುವನು.

07086048a ಯತ್ರ ಸ್ಥಾಸ್ಯತಿ ಸಂಗ್ರಾಮೇ ಪಾರ್ಷತಃ ಪರವೀರಹಾ|

07086048c ನ ದ್ರೋಣಸೈನ್ಯಂ ಬಲವತ್ಕ್ರಾಮೇತ್ತತ್ರ ಕಥಂ ಚನ||

ರಣರಂಗದಲ್ಲಿ ಎಲ್ಲಿ ಪರವೀರಹ ಪಾರ್ಷತನು ನಿಲ್ಲುತ್ತಾನೋ ಅಲ್ಲಿ ಎಂದೂ ದ್ರೋಣ ಸೇನೆಯು ಬಲಾತ್ಕಾರವಾಗಿ ಅತಿಕ್ರಮಿಸಲು ಸಾಧ್ಯವಿಲ್ಲ.

07086049a ಏಷ ದ್ರೋಣವಿನಾಶಾಯ ಸಮುತ್ಪನ್ನೋ ಹುತಾಶನಾತ್|

07086049c ಕವಚೀ ಸ ಶರೀ ಖಡ್ಗೀ ಧನ್ವೀ ಚ ವರಭೂಷಣಃ||

ಇವನು ದ್ರೋಣನ ವಿನಾಶಕ್ಕಾಗಿಯೇ ಕವಚ, ಧನುರ್ಬಾಣಗಳು, ಖಡ್ಗ ಮತ್ತು ಶ್ರೇಷ್ಠ ಭೂಷಣಗಳನ್ನು ದರಿಸಿ ಅಗ್ನಿಯಿಂದ ಸಮುತ್ಪನ್ನನಾದನು.

07086050a ವಿಶ್ರಬ್ಧೋ ಗಚ್ಚ ಶೈನೇಯ ಮಾ ಕಾರ್ಷೀರ್ಮಯಿ ಸಂಭ್ರಮಂ|

07086050c ಧೃಷ್ಟದ್ಯುಮ್ನೋ ರಣೇ ಕ್ರುದ್ಧೋ ದ್ರೋಣಮಾವಾರಯಿಷ್ಯತಿ||

ಶೈನೇಯ! ವಿಶ್ವಾಸದಿಂದ ಹೋಗು. ನಾನಿಲ್ಲದಿದ್ದರೆ ಇಲ್ಲಿ ಹೇಗೋ ಎಂದು ಭ್ರಾಂತನಾಗದಿರು. ಕ್ರುದ್ಧನಾದ ಧೃಷ್ಟದ್ಯುಮ್ನನು ರಣದಲ್ಲಿ ದ್ರೋಣರನ್ನು ತಡೆಯುತ್ತಾನೆ.””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಸಾತ್ಯಕಿವಾಕ್ಯೇ ಷಷ್ಠಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಸಾತ್ಯಕಿವಾಕ್ಯ ಎನ್ನುವ ಎಂಭತ್ತಾರನೇ ಅಧ್ಯಾಯವು.

Related image

Comments are closed.