Drona Parva: Chapter 84

ದ್ರೋಣ ಪರ್ವ: ಜಯದ್ರಥವಧ ಪರ್ವ

೮೪

ಘಟೋತ್ಕಚನಿಂದ ಅಲಂಬುಸನ ವಧೆ (೧-೩೦).

07084001 ಸಂಜಯ ಉವಾಚ|

07084001a ಅಲಂಬುಸಂ ತಥಾ ಯುದ್ಧೇ ವಿಚರಂತಮಭೀತವತ್|

07084001c ಹೈಡಿಂಬಃ ಪ್ರಯಯೌ ತೂರ್ಣಂ ವಿವ್ಯಾಧ ಚ ಶಿತೈಃ ಶರೈಃ||

ಸಂಜಯನು ಹೇಳಿದನು: “ಹೀಗೆ ಅಲಂಬುಸನು ಯುದ್ಧದಲ್ಲಿ ಭೀತಿಯಿಲ್ಲದವನಂತೆ ಸಂಚರಿಸುತ್ತಿರಲು ಹೈಡಿಂಬನು ಬೇಗನೆ ಬಂದು ನಿಶಿತ ಶರಗಳಿಂದ ಹೊಡೆದನು.

07084002a ತಯೋಃ ಪ್ರತಿಭಯಂ ಯುದ್ಧಮಾಸೀದ್ರಾಕ್ಷಸಸಿಂಹಯೋಃ|

07084002c ಕುರ್ವತೋರ್ವಿವಿಧಾ ಮಾಯಾಃ ಶಕ್ರಶಂಬರಯೋರಿವ||

ಆ ಇಬ್ಬರು ರಾಕ್ಷಸಸಿಂಹರ ನಡುವೆ ಪರಸ್ಪರರಿಗೆ ಭಯವನ್ನುಂಟುಮಾಡುವ ಯುದ್ಧವು ನಡೆಯಿತು. ಶಕ್ರ-ಶಂಬರರಂತೆ ಅವರು ವಿವಿಧ ಮಾಯೆಗಳನ್ನು ನಿರ್ಮಿಸಿದರು.

07084003a ಅಲಂಬುಸೋ ಭೃಶಂ ಕ್ರುದ್ಧೋ ಘಟೋತ್ಕಚಮತಾಡಯತ್|

07084003c ಘಟೋತ್ಕಚಸ್ತು ವಿಂಶತ್ಯಾ ನಾರಾಚಾನಾಂ ಸ್ತನಾಂತರೇ|

07084003e ಅಲಂಬುಸಮಥೋ ವಿದ್ಧ್ವಾ ಸಿಂಹವದ್ವ್ಯನದನ್ಮುಹುಃ||

ಅಲಂಬುಸನು ತುಂಬಾ ಕ್ರುದ್ಧನಾಗಿ ಘಟೋತ್ಕಚನನ್ನು ಹೊಡೆದನು. ಘಟೋತ್ಕಚನಾದರೋ ಅಲಂಬುಸನ ಎದೆಗೆ ಇಪ್ಪತ್ತು ನಾರಾಚಗಳಿಂದ ಹೊಡೆದು ಮತ್ತೆ ಮತ್ತೆ ಸಿಂಹನಾದಗೈದನು.

07084004a ತಥೈವಾಲಂಬುಸೋ ರಾಜನ್ ಹೈಡಿಂಬಂ ಯುದ್ಧದುರ್ಮದಂ|

07084004c ವಿದ್ಧ್ವಾ ವಿದ್ಧ್ವಾನದದ್ಧೃಷ್ಟಃ ಪೂರಯನ್ಖಂ ಸಮಂತತಃ||

ರಾಜನ್! ಹಾಗೆಯೇ ಅಲಂಬುಸನು ಯುದ್ಧದುರ್ಮದ ಹೈಡಿಂಬನನ್ನು ಹೊಡೆದು ಆಕಾಶವನ್ನು ಎಲ್ಲಕಡೆ ತುಂಬುವಂತೆ ಜೋರಾಗಿ ಗರ್ಜಿಸಿದನು.

07084005a ತಥಾ ತೌ ಭೃಶಸಂಕ್ರುದ್ಧೌ ರಾಕ್ಷಸೇಂದ್ರೌ ಮಹಾಬಲೌ|

07084005c ನಿರ್ವಿಶೇಷಮಯುಧ್ಯೇತಾಂ ಮಾಯಾಭಿರಿತರೇತರಂ||

ಹಾಗೆ ತುಂಬಾ ಸಂಕ್ರುದ್ಧರಾಗಿದ್ದ ಆ ಇಬ್ಬರು ಮಹಾಬಲ ರಾಕ್ಷಸೇಂದ್ರರು ಮಾಯಾಯುದ್ಧದಲ್ಲಿ ತೊಡಗಿದರು. ಆದರೆ ಅವರಿಬ್ಬರಲ್ಲಿ ಯಾರೂ ಒಬ್ಬರನ್ನೊಬ್ಬರು ಮೀರಿಸುವಂತಿರಲಿಲ್ಲ.

07084006a ಮಾಯಾಶತಸೃಜೌ ದೃಪ್ತೌ ಮೋಹಯಂತೌ ಪರಸ್ಪರಂ|

07084006c ಮಾಯಾಯುದ್ಧೇ ಸುಕುಶಲೌ ಮಾಯಾಯುದ್ಧಮಯುಧ್ಯತಾಂ||

ನೂರಾರು ಮಾಯೆಗಳನ್ನು ಸೃಷ್ಟಿಸಿ ಪರಸ್ಪರರನ್ನು ಮರುಳುಮಾಡಿದರು. ಮಾಯಾಯುದ್ಧದಲ್ಲಿ ಕುಶಲರಾದ ಅವಬ್ಬರೂ ಮಾಯಾಯುದ್ಧವನ್ನಾಡಿದರು.

07084007a ಯಾಂ ಯಾಂ ಘಟೋತ್ಕಚೋ ಯುದ್ಧೇ ಮಾಯಾಂ ದರ್ಶಯತೇ ನೃಪ|

07084007c ತಾಂ ತಾಮಲಂಬುಸೋ ರಾಜನ್ಮಾಯಯೈವ ನಿಜಘ್ನಿವಾನ್|

ನೃಪ! ರಾಜನ್! ಘಟೋತ್ಕಚನು ಯುದ್ಧದಲ್ಲಿ ಏನೇನು ಮಾಯೆಗಳನ್ನು ತೋರಿಸುತ್ತಿದ್ದನೋ ಅವುಗಳನ್ನು ಅಲಂಬುಸನು ಮಾಯೆಯಿಂದಲೇ ನಾಶಗೊಳಿಸುತ್ತಿದ್ದನು.

07084008a ತಂ ತಥಾ ಯುಧ್ಯಮಾನಂ ತು ಮಾಯಾಯುದ್ಧವಿಶಾರದಂ|

07084008c ಅಲಂಬುಸಂ ರಾಕ್ಷಸೇಂದ್ರಂ ದೃಷ್ಟ್ವಾಕ್ರುಧ್ಯಂತ ಪಾಂಡವಾಃ||

ಹಾಗೆ ಯುದ್ಧಮಾಡುತ್ತಿದ್ದ ಆ ಮಾಯಾಯುದ್ಧವಿಶಾರದ ರಾಕ್ಷಸೇಂದ್ರ ಅಲಂಬುಸನನ್ನು ನೋಡಿ ಪಾಂಡವರು ಕ್ರುದ್ಧರಾದರು.

07084009a ತ ಏನಂ ಭೃಶಸಂಕ್ರುದ್ಧಾಃ ಸರ್ವತಃ ಪ್ರವರಾ ರಥೈಃ|

07084009c ಅಭ್ಯದ್ರವಂತ ಸಂಕ್ರುದ್ಧಾ ಭೀಮಸೇನಾದಯೋ ನೃಪ||

ನೃಪ! ಆಗ ತುಂಬಾ ಸಂಕ್ರುದ್ಧರಾದ ಭೀಮಸೇನಾದಿ ರಥಪ್ರವರರು ಸಂಕ್ರುದ್ಧರಾಗಿ ಧಾವಿಸಿ ಬಂದು ಅವನನ್ನು ಸುತ್ತುವರೆದರು.

07084010a ತ ಏನಂ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ|

07084010c ಸರ್ವತೋ ವ್ಯಕಿರನ್ಬಾಣೈರುಲ್ಕಾಭಿರಿವ ಕುಂಜರಂ||

ಮಾರಿಷ! ಅವನನ್ನು ರಥಸಮೂಹಗಳಿಂದ ಸುತ್ತುವರೆದು ಎಲ್ಲಕಡೆಗಳಿಂದಲೂ ಆನೆಯನ್ನು ಉಲ್ಕೆಗಳಿಂದಲೋ ಎಂಬಂತೆ ಬಾಣಗಳಿಂದ ಮುಚ್ಚಿದರು.

07084011a ಸ ತೇಷಾಮಸ್ತ್ರವೇಗಂ ತಂ ಪ್ರತಿಹತ್ಯಾಸ್ತ್ರಮಾಯಯಾ|

07084011c ತಸ್ಮಾದ್ರಥವ್ರಜಾನ್ಮುಕ್ತೋ ವನದಾಹಾದಿವ ದ್ವಿಪಃ||

ಅವನು ಅವರ ಅಸ್ತ್ರವೇಗವನ್ನು ತನ್ನ ಅಸ್ತ್ರಮಾಯೆಯಿಂದ ನಾಶಗೊಳಿಸಿ ಕಾಡ್ಗಿಚ್ಚಿನಿಂದ ಆನೆಯು ಬಿಡಿಸಿಕೊಳ್ಳುವಂತೆ ಆ ರಥಸಮೂಹಗಳಿಂದ ಮುಕ್ತನಾದನು.

07084012a ಸ ವಿಸ್ಫಾರ್ಯ ಧನುರ್ಘೋರಮಿಂದ್ರಾಶನಿಸಮಸ್ವನಂ|

07084012c ಮಾರುತಿಂ ಪಂಚವಿಂಶತ್ಯಾ ಭೈಮಸೇನಿಂ ಚ ಪಂಚಭಿಃ|

07084012e ಯುಧಿಷ್ಠಿರಂ ತ್ರಿಭಿರ್ವಿದ್ಧ್ವಾ ಸಹದೇವಂ ಚ ಸಪ್ತಭಿಃ||

07084013a ನಕುಲಂ ಚ ತ್ರಿಸಪ್ತತ್ಯಾ ದ್ರುಪದೇಯಾಂಶ್ಚ ಮಾರಿಷ|

07084013c ಪಂಚಭಿಃ ಪಂಚಭಿರ್ವಿದ್ಧ್ವಾ ಘೋರಂ ನಾದಂ ನನಾದ ಹ||

ಮಾರಿಷ! ಅವನು ಇಂದ್ರನ ವಜ್ರಾಯುಧದಂತ ಧ್ವನಿಯುಳ್ಳ ಘೋರ ಧನುಸ್ಸನ್ನು ಟೇಂಕರಿಸಿ ಮಾರುತಿಯನ್ನು ಇಪ್ಪತ್ತೈದು, ಭೈಮಸೇನಿಯನ್ನು ಐದು, ಮತ್ತು ಯುಧಿಷ್ಠಿರನನ್ನು ಮೂರರಿಂದ ಹೊಡೆದು, ಸಹದೇವನನ್ನು ಏಳರಿಂದ, ನಕುಲನನ್ನು ಇಪ್ಪತ್ತೊಂದರಿಂದ, ಮತ್ತು ಐವರು ದ್ರೌಪದೇಯರನ್ನು ಐದೈದು ಶರಗಳಿಂದ ಹೊಡೆದು ಘೋರವಾಗಿ ಸಿಂಹನಾದಗೈದನು.

07084014a ತಂ ಭೀಮಸೇನೋ ನವಭಿಃ ಸಹದೇವಶ್ಚ ಪಂಚಭಿಃ|

07084014c ಯುಧಿಷ್ಠಿರಃ ಶತೇನೈವ ರಾಕ್ಷಸಂ ಪ್ರತ್ಯವಿಧ್ಯತ|

07084014e ನಕುಲಶ್ಚ ಚತುಃಷಷ್ಟ್ಯಾ ದ್ರೌಪದೇಯಾಸ್ತ್ರಿಭಿಸ್ತ್ರಿಭಿಃ||

ಅದಕ್ಕೆ ಪ್ರತಿಯಾಗಿ ಆ ರಾಕ್ಷಸನನ್ನು ಭೀಮಸೇನನು ಒಂಭತ್ತು, ಸಹದೇವನು ಐದು, ನಕುಲನು ಅರವತ್ನಾಲ್ಕು, ದ್ರೌಪದೇಯರು ತಲಾ ಮೂರು ಮತ್ತು ಯುಧಿಷ್ಠಿರನು ನೂರರಿಂದ ಹೊಡೆದರು.

07084015a ಹೈಡಿಂಬೋ ರಾಕ್ಷಸಂ ವಿದ್ಧ್ವಾ ಯುದ್ಧೇ ಪಂಚಾಶತಾ ಶರೈಃ|

07084015c ಪುನರ್ವಿವ್ಯಾಧ ಸಪ್ತತ್ಯಾ ನನಾದ ಚ ಮಹಾಬಲಃ||

ಮಹಾಬಲ ಹೈಡಿಂಬನು ರಾಕ್ಷಸನನ್ನು ಐನೂರು ಶರಗಳಿಂದ ಹೊಡೆದು ಪುನಃ ಎಪ್ಪತ್ತರಿಂದ ಹೊಡೆದು ಗರ್ಜಿಸಿದನು.

07084016a ಸೋಽತಿವಿದ್ಧೋ ಮಹೇಷ್ವಾಸಃ ಸರ್ವತಸ್ತೈರ್ಮಹಾರಥೈಃ|

07084016c ಪ್ರತಿವಿವ್ಯಾಧ ತಾನ್ಸರ್ವಾನ್ಪಂಚಭಿಃ ಪಂಚಭಿಃ ಶರೈಃ||

ಎಲ್ಲ ಮಹಾರಥರಿಂದ ಎಲ್ಲಕಡೆಗಳಿಂದ ಹಾಗೆ ಪ್ರಹರಿಸಲ್ಪಟ್ಟ ಆ ಮಹೇಷ್ವಾಸನು ಅವರೆಲ್ಲರನ್ನೂ ಐದೈದು ಶರಗಳಿಂದ ತಿರುಗಿ ಹೊಡೆದನು.

07084017a ತಂ ಕ್ರುದ್ಧಂ ರಾಕ್ಷಸಂ ಯುದ್ಧೇ ಪ್ರತಿಕ್ರುದ್ಧಸ್ತು ರಾಕ್ಷಸಃ|

07084017c ಹೈಡಿಂಬೋ ಭರತಶ್ರೇಷ್ಠ ಶರೈರ್ವಿವ್ಯಾಧ ಸಪ್ತಭಿಃ||

ಭರತಶ್ರೇಷ್ಠ! ಯುದ್ಧದಲ್ಲಿ ಕ್ರುದ್ಧನಾಗಿರುವ ಆ ರಾಕ್ಷಸನನ್ನು ತಿರುಗಿ ಕ್ರುದ್ಧನಾದ ಹೈಡಿಂಬನು ಏಳು ಶರಗಳಿಂದ ಹೊಡೆದನು.

07084018a ಸೋಽತಿವಿದ್ಧೋ ಬಲವತಾ ರಾಕ್ಷಸೇಂದ್ರೋ ಮಹಾಬಲಃ|

07084018c ವ್ಯಸೃಜತ್ಸಾಯಕಾಂಸ್ತೂರ್ಣಂ ಸ್ವರ್ಣಪುಂಖಾಂ ಶಿಲಾಶಿತಾನ್||

ಅತಿಯಾಗಿ ಗಾಯಗೊಂಡ ಆ ಮಹಾಬಲ ರಾಕ್ಷಸೇಂದ್ರನು ತಕ್ಷಣವೇ ಬಲವನ್ನು ಉಪಯೋಗಿಸಿ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳನ್ನು ಪ್ರಯೋಗಿಸಿದನು.

07084019a ತೇ ಶರಾ ನತಪರ್ವಾಣೋ ವಿವಿಶೂ ರಾಕ್ಷಸಂ ತದಾ|

07084019c ರುಷಿತಾಃ ಪನ್ನಗಾ ಯದ್ವದ್ಗಿರಿಮುಗ್ರಾ ಮಹಾಬಲಾಃ||

ಆ ನತಪರ್ವ ಶರಗಳು ರೋಷಗೊಂಡ ಮಹಾಬಲಶಾಲಿ ಉಗ್ರ ಸರ್ಪಗಳು ಗಿರಿಗಳನ್ನು ಹೊಗುವಂತೆ ರಾಕ್ಷಸನನ್ನು ಪ್ರವೇಶಿಸಿದವು.

07084020a ತತಸ್ತೇ ಪಾಂಡವಾ ರಾಜನ್ಸಮಂತಾನ್ನಿಶಿತಾಂ ಶರಾನ್|

07084020c ಪ್ರೇಷಯಾಮಾಸುರುದ್ವಿಗ್ನಾ ಹೈಡಿಂಬಶ್ಚ ಘಟೋತ್ಕಚಃ||

ರಾಜನ್! ಆಗ ಆ ಪಾಂಡವರು ಮತ್ತು ಹೈಡಿಂಬ ಘಟೋತ್ಕಚರು ಉದ್ವಿಗ್ನರಾಗಿ ಎಲ್ಲಕಡೆಗಳಿಂದ ನಿಶಿತ ಶರಗಳನ್ನು ಪ್ರಯೋಗಿಸಿದರು.

07084021a ಸ ವಧ್ಯಮಾನಃ ಸಮರೇ ಪಾಂಡವೈರ್ಜಿತಕಾಶಿಭಿಃ|

07084021c ದಗ್ಧಾದ್ರಿಕೂಟಶೃಂಗಾಭಂ ಭಿನ್ನಾಂಜನಚಯೋಪಮಂ||

ಸಮರದಲ್ಲಿ ವಿಜಯಾಕಾಂಕ್ಷಿಗಳಾದ ಪಾಂಡವರಿಂದ ಪ್ರಹರಿಸಲ್ಪಡುತ್ತಿರುವ ಅವನು ಸುಟ್ಟುಹೋದ ಪರ್ವತ ಶಿಖರದಂತೆ ಮತ್ತು ಒಡೆದುಹೋದ ಕಾಡಿಗೆಯ ರಾಶಿಯಂತೆ ಹೊಳೆಯುತ್ತಿದ್ದನು.

07084022a ಸಮುತ್ಕ್ಷಿಪ್ಯ ಚ ಬಾಹುಭ್ಯಾಮಾವಿಧ್ಯ ಚ ಪುನಃ ಪುನಃ|

07084022c ನಿಷ್ಪಿಪೇಷ ಕ್ಷಿತೌ ಕ್ಷಿಪ್ರಂ ಪೂರ್ಣಕುಂಭಮಿವಾಶ್ಮನಿ||

ಘಟೋತ್ಕಚನು ಅವನನ್ನು ಎರಡೂ ಬಾಹುಗಳಿಂದ ಮೇಲಕ್ಕೆತ್ತಿ, ಪುನಃ ಪುನಃ ಹೊಡೆದು, ತುಂಬಿದ ಕೊಡವನ್ನು ಕಲ್ಲಮೇಲೆ ಅಪ್ಪಳಿಸಿ ಒಡೆಯುವಂತೆ ಬೇಗನೇ ನೆಲಕ್ಕೆ ಕುಕ್ಕಿದನು.

07084023a ಬಲಲಾಘವಸಂಪನ್ನಃ ಸಂಪನ್ನೋ ವಿಕ್ರಮೇಣ ಚ|

07084023c ಭೈಮಸೇನೀ ರಣೇ ಕ್ರುದ್ಧಃ ಸರ್ವಸೈನ್ಯಾನ್ಯಭೀಷಯತ್||

ಬಲ ಮತ್ತು ಲಘುತ್ವಗಳ ಸಂಪನ್ನನಾಗಿದ್ದ, ವಿಕ್ರಮದಿಂದಲೂ ಸಂಪನ್ನನಾದ ಭೈಮಸೇನಿಯು ರಣದಲ್ಲಿ ಕ್ರುದ್ಧನಾಗಿ ಸರ್ವಸೇನೆಗಳನ್ನೂ ಹೆದರಿಸಿದನು.

07084024a ಸ ವಿಸ್ಫುಟಿತಸರ್ವಾಂಗಶ್ಚೂರ್ಣಿತಾಸ್ಥಿವಿಭೂಷಣಃ|

07084024c ಘಟೋತ್ಕಚೇನ ವೀರೇಣ ಹತಃ ಸಾಲಕಟಂಕಟಃ||

ಸರ್ವಾಂಗಗಳೂ ಒಡೆದುಹೋಗಿರುವ, ಮಾಂಸ-ಎಲುಬುಗಳಿಂದ ವಿಭೂಷಿತನಾಗಿದ್ದ, ಘಟೋತ್ಕಚನಿಂದ ಹತನಾದ ಆ ವೀರನು ಮುರಿದು ಬಿದ್ದ ಸಾಲವೃಕ್ಷದಂತೆ ತೋರಿದನು.

07084025a ತತಃ ಸುಮನಸಃ ಪಾರ್ಥಾ ಹತೇ ತಸ್ಮಿನ್ನಿಶಾಚರೇ|

07084025c ಚುಕ್ರುಶುಃ ಸಿಂಹನಾದಾಂಶ್ಚ ವಾಸಾಂಸ್ಯಾದುಧುವುಶ್ಚ ಹ||

ಆ ನಿಶಾಚರನು ಹತನಾಗಲು ಸುಮನಸ್ಕರಾದ ಪಾರ್ಥರು ಸಿಂಹನಾದ ಮಾಡಿದರು ಮತ್ತು ಉತ್ತರೀಯಗಳನ್ನು ಮೇಲೆ ಹಾರಿಸಿದರು.

07084026a ತಾವಕಾಶ್ಚ ಹತಂ ದೃಷ್ಟ್ವಾ ರಾಕ್ಷಸೇಂದ್ರಂ ಮಹಾಬಲಂ|

07084026c ಅಲಂಬುಸಂ ಭೀಮರೂಪಂ ವಿಶೀರ್ಣಮಿವ ಪರ್ವತಂ|

07084026e ಹಾಹಾಕಾರಮಕುರ್ವಂತ ಸೈನ್ಯಾನಿ ಭರತರ್ಷಭ||

ಭರತರ್ಷಭ! ಆ ಭೀಮರೂಪ ಮಹಾಬಲ ರಾಕ್ಷಸೇಂದ್ರ ಅಲಂಬುಸನು ಸೀಳಿಹೋದ ಪರ್ವತದಂತೆ ಹತನಾದುದನ್ನು ಕಂಡು ನಿನ್ನ ಸೇನೆಗಳು ಹಾಹಾಕಾರಗೈದವು.

07084027a ಜನಾಶ್ಚ ತದ್ದದೃಶಿರೇ ರಕ್ಷಃ ಕೌತೂಹಲಾನ್ವಿತಾಃ|

07084027c ಯದೃಚ್ಚಯಾ ನಿಪತಿತಂ ಭೂಮಾವಂಗಾರಕಂ ಯಥಾ||

ಕುತೂಹಲವಿದ್ದ ಜನರು ಭೂಮಿಯ ಮೇಲೆ ಅಂಗಾರಕನಂತೆ (ಇದ್ದಿಲಿನಂತೆ) ಬಿದ್ದಿರುವ ಆ ರಾಕ್ಷಸನನ್ನು ನೋಡಲಿಕ್ಕೇ ಬಂದರು.

07084028a ಘಟೋತ್ಕಚಸ್ತು ತದ್ಧತ್ವಾ ರಕ್ಷೋ ಬಲವತಾಂ ವರಂ|

07084028c ಮುಮೋಚ ಬಲವನ್ನಾದಂ ಬಲಂ ಹತ್ವೇವ ವಾಸವಃ||

ಘಟೋತ್ಕಚನಾದರೋ ಬಲವಂತರಲ್ಲಿ ಶ್ರೇಷ್ಠನಾದ ಆ ರಾಕ್ಷಸನನ್ನು ಕೊಂದು ಬಲನನ್ನು ಸಂಹರಿಸಿದ ವಾಸವನಂತೆ ಬಲವತ್ತಾಗಿ ಕೂಗಿದನು.

07084029a ಸ ಪೂಜ್ಯಮಾನಃ ಪಿತೃಭಿಃ ಸಬಾಂಧವೈರ್

         ಘಟೋತ್ಕಚಃ ಕರ್ಮಣಿ ದುಷ್ಕರೇ ಕೃತೇ|

07084029c ರಿಪುಂ ನಿಹತ್ಯಾಭಿನನಂದ ವೈ ತದಾ

         ಅಲಂಬುಸಂ ಪಕ್ವಮಲಂಬುಸಂ ಯಥಾ||

ಆ ದುಷ್ಕರ ಕರ್ಮವನ್ನೆಸಗಿದ ಘಟೋತ್ಕಚನನ್ನು ಅವನ ಪಿತೃಗಳು ಬಾಂಧವರು ಗೌರವಿಸಿದರು. ಗಳಿತ ಅಲಂಬುಸ ಹಣ್ಣನ್ನು ಹೇಗೋ ಹಾಗೆ ಶತ್ರು ಅಲಂಬುಸನನ್ನು ಸಂಹರಿಸಿದ ಅವನು ಬಹಳವಾಗಿ ಆನಂದಿಸಿದನು.

07084030a ತತೋ ನಿನಾದಃ ಸುಮಹಾನ್ಸಮುತ್ಥಿತಃ

         ಸಶಂಖನಾನಾವಿಧಬಾಣಘೋಷವಾನ್|

07084030c ನಿಶಮ್ಯ ತಂ ಪ್ರತ್ಯನದಂಸ್ತು ಕೌರವಾಸ್

         ತತೋ ಧ್ವನಿರ್ಭುವನಮಥಾಸ್ಪೃಶದ್ಭೃಶಂ||

ಆಗ ಮಹಾ ಶಬ್ಧವು - ಶಂಖ ಮತ್ತು ನಾನಾ ವಿಧದ ಬಾಣಗಳ ಘೋಷವು ಉಂಟಾಯಿತು. ಅದನ್ನು ಕೇಳಿ ಕೌರವರು ಪ್ರತಿಯಾಗಿ ಕೂಗಲು, ಅವರ ಧ್ವನಿಯು ಭುವನಗಳನ್ನೂ ಮುಟ್ಟುವಂತಿತ್ತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷವಧೇ ಚತುರಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷವಧೆ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.

Related image

Comments are closed.