Drona Parva: Chapter 75

ದ್ರೋಣ ಪರ್ವ: ಜಯದ್ರಥವಧ ಪರ್ವ

೭೫

ಅರ್ಜುನನು ಸರೋವರವನ್ನು ನಿರ್ಮಿಸಿ ಶತ್ರುಸೇನೆಗಳನ್ನು ತಡೆಗಟ್ಟಲು ಕೃಷ್ಣನು ಕುದುರೆಗಳನ್ನು ಬಿಚ್ಚಿ, ನಾಟಿಕೊಂಡಿದ್ದ ಬಾಣಗಳನ್ನು ಕಿತ್ತು, ಸ್ನಾನಮಾಡಿಸಿ, ನೀರಿಕುಡಿಸಿ, ಉಪಚರಿಸಿದುದು (೧-೧೭). ಕೌರವ ಸೇನೆಯ ವಿಸ್ಮಯ (೧೮-೩೬).

07075001 ಸಂಜಯ ಉವಾಚ|

07075001a ಸಲಿಲೇ ಜನಿತೇ ತಸ್ಮಿನ್ಕೌಂತೇಯೇನ ಮಹಾತ್ಮನಾ|

07075001c ನಿವಾರಿತೇ ದ್ವಿಷತ್ಸೈನ್ಯೇ ಕೃತೇ ಚ ಶರವೇಶ್ಮನಿ||

07075002a ವಾಸುದೇವೋ ರಥಾತ್ತೂರ್ಣಮವತೀರ್ಯ ಮಹಾದ್ಯುತಿಃ|

07075002c ಮೋಚಯಾಮಾಸ ತುರಗಾನ್ವಿತುನ್ನಾನ್ಕಂಕಪತ್ರಿಭಿಃ||

ಸಂಜಯನು ಹೇಳಿದನು: “ಮಹಾತ್ಮ ಕೌಂತೇಯನು ನೀರನ್ನು ಹುಟ್ಟಿಸಿ, ಶತ್ರುಸೇನೆಯನ್ನು ತಡೆಗಟ್ಟಿ, ಶರಗೃಹವನ್ನು ನಿರ್ಮಿಸಲು ಮಹಾದ್ಯುತಿ ವಾಸುದೇವನು ತಕ್ಷಣವೇ ರಥದಿಂದ ಇಳಿದು ಕಂಕಪತ್ರಿಗಳಿಂದ ಗಾಯಗೊಂಡಿದ್ದ ಕುದುರೆಗಳನ್ನು ಬಿಚ್ಚಿದನು.

07075003a ಅದೃಷ್ಟಪೂರ್ವಂ ತದ್ದೃಷ್ಟ್ವಾ ಸಿಂಹನಾದೋ ಮಹಾನಭೂತ್|

07075003c ಸಿದ್ಧಚಾರಣಸಂಘಾನಾಂ ಸೈನಿಕಾನಾಂ ಚ ಸರ್ವಶಃ||

ಹಿಂದೆ ಎಂದೂ ನೋಡಿರದ ಅದನ್ನು ನೋಡಿ ಎಲ್ಲಕಡೆಗಳಲ್ಲಿ ಸಿದ್ಧಚಾರಣರ ಸಮೂಹಗಳ ಮತ್ತು ಸೈನಿಕರ ಮಹಾ ಸಿಂಹನಾದವು ಕೇಳಿಬಂದಿತು.

07075004a ಪದಾತಿನಂ ತು ಕೌಂತೇಯಂ ಯುಧ್ಯಮಾನಂ ನರರ್ಷಭಾಃ|

07075004c ನಾಶಕ್ನುವನ್ವಾರಯಿತುಂ ತದದ್ಭುತಮಿವಾಭವತ್||

ಪದಾತಿಯಾಗಿ ಯುದ್ಧಮಾಡುತ್ತಿದ್ದ ಕೌಂತೇಯನನ್ನು ತಡೆಯಲು ನರರ್ಷಭರಿಗೆ ಸಾಧ್ಯವಾಗಲಿಲ್ಲ. ಅದೊಂದು ಅದ್ಭುತವಾಗಿತ್ತು.

07075005a ಆಪತತ್ಸು ರಥೌಘೇಷು ಪ್ರಭೂತಗಜವಾಜಿಷು|

07075005c ನಾಸಂಭ್ರಮತ್ತದಾ ಪಾರ್ಥಸ್ತದಸ್ಯ ಪುರುಷಾನತಿ||

ರಥಸೇನೆಗಳು, ಅನೇಕ ಆನೆ-ಕುದುರೆಗಳು ಮೇಲೆ ಬಂದು ಎರಗಿದರೂ ಅತಿಪುರುಷನಾದ ಪಾರ್ಥನು ಕಿಂಚಿತ್ತೂ ಗಾಬರಿಗೊಳ್ಳಲಿಲ್ಲ.

07075006a ವ್ಯಸೃಜಂತ ಶರೌಘಾಂಸ್ತೇ ಪಾಂಡವಂ ಪ್ರತಿ ಪಾರ್ಥಿವಾಃ|

07075006c ನ ಚಾವ್ಯಥತ ಧರ್ಮಾತ್ಮಾ ವಾಸವಿಃ ಪರವೀರಹಾ||

ಪಾಂಡವನ ಮೇಲೆ ಪಾರ್ಥಿವರು ಶರೌಘಗಳನ್ನು ಪ್ರಯೋಗಿಸುತ್ತಿದ್ದರೂ ಪರವೀರಹ ಧರ್ಮಾತ್ಮ ವಾಸವಿಯು ವ್ಯಥಿತನಾಗಲಿಲ್ಲ.

07075007a ಸ ತಾನಿ ಶರಜಾಲಾನಿ ಗದಾಃ ಪ್ರಾಸಾಂಶ್ಚ ವೀರ್ಯವಾನ್|

07075007c ಆಗತಾನಗ್ರಸತ್ಪಾರ್ಥಃ ಸರಿತಃ ಸಾಗರೋ ಯಥಾ||

ಆ ಶರಜಾಲಗಳನ್ನೂ, ಗದೆಗಳನ್ನೂ ಮತ್ತು ಪ್ರಾಸಗಳನ್ನೂ ವೀರ್ಯವಾನ್ ಪಾರ್ಥನು ಸಾಗರವು ಹೇಗೆ ನದಿಗಳನ್ನು ಬರಮಾಡಿಕೊಳ್ಳುತ್ತದೆಯೋ ಹಾಗೆ ಬಂದವುಗಳನ್ನು ನಿರಸನಗೊಳಿಸಿದನು.

07075008a ಅಸ್ತ್ರವೇಗೇನ ಮಹತಾ ಪಾರ್ಥೋ ಬಾಹುಬಲೇನ ಚ|

07075008c ಸರ್ವೇಷಾಂ ಪಾರ್ಥಿವೇಂದ್ರಾಣಾಮಗ್ರಸತ್ತಾಂ ಶರೋತ್ತಮಾನ್||

ಮಹಾ ಅಸ್ತ್ರವೇಗದಿಂದ ಮತ್ತು ಬಾಹುಬಲದಿಂದ ಪಾರ್ಥನು ಎಲ್ಲ ಪಾರ್ಥಿವೇಂದ್ರರೂ ಕಳುಹಿಸುತ್ತಿದ್ದ ಉತ್ತಮ ಬಾಣಗಳನ್ನೂ ನಾಶಗೊಳಿಸಿದನು.

07075009a ತತ್ತು ಪಾರ್ಥಸ್ಯ ವಿಕ್ರಾಂತಂ ವಾಸುದೇವಸ್ಯ ಚೋಭಯೋಃ|

07075009c ಅಪೂಜಯನ್ಮಹಾರಾಜ ಕೌರವಾಃ ಪರಮಾದ್ಭುತಂ||

ಆದರೆ ಮಹಾರಾಜ! ಪಾರ್ಥ ಮತ್ತು ವಾಸುದೇವ ಈ ಇಬ್ಬರ ವಿಕ್ರಾಂತವನ್ನು ಪರಮಾದ್ಭುತವನ್ನು ಕೌರವರು ಹೊಗಳಿದರು.

07075010a ಕಿಮದ್ಭುತತರಂ ಲೋಕೇ ಭವಿತಾಪ್ಯಥ ವಾಪ್ಯಭೂತ್|

07075010c ಯದಶ್ವಾನ್ಪಾರ್ಥಗೋವಿಂದೌ ಮೋಚಯಾಮಾಸತೂ ರಣೇ||

“ರಣದ ಮಧ್ಯದಲ್ಲಿ ಪಾರ್ಥ-ಗೋವಿಂದರು ಕುದುರೆಗಳನ್ನು ಬಿಚ್ಚಿದರು! ಇದಕ್ಕಿಂತಲೂ ಪರಮ ಅದ್ಭುತವಾದುದು ಲೋಕದಲ್ಲಿ ಯಾವುದಿದೆ? ಇಂತಹುದು ಹಿಂದೆ ನಡೆಯಲೂ ಇಲ್ಲ. ಮುಂದೆ ನಡೆಯುವುದೂ ಇಲ್ಲ.”

07075011a ಭಯಂ ವಿಪುಲಮಸ್ಮಾಸು ತಾವಧತ್ತಾಂ ನರೋತ್ತಮೌ|

07075011c ತೇಜೋ ವಿದಧತುಶ್ಚೋಗ್ರಂ ವಿಸ್ರಬ್ಧೌ ರಣಮೂರ್ಧನಿ||

ರಣಮೂರ್ದನಿಯಲ್ಲಿ ಅತ್ಯುಗ್ರವಾದ ತೇಜಸ್ಸನ್ನು ಪ್ರದರ್ಶಿಸಿ ಆ ನರೋತ್ತಮರು ನಮ್ಮವರಲ್ಲಿ ಅತಿಯಾದ ಭಯವನ್ನು ಉಂಟುಮಾಡಿದರು.

07075012a ಅಥೋತ್ಸ್ಮಯನ್ ಹೃಷೀಕೇಶಃ ಸ್ತ್ರೀಮಧ್ಯ ಇವ ಭಾರತ|

07075012c ಅರ್ಜುನೇನ ಕೃತೇ ಸಂಖ್ಯೇ ಶರಗರ್ಭಗೃಹೇ ತದಾ||

ಭಾರತ! ಅರ್ಜುನನು ರಣದಲ್ಲಿ ಶರಗಳಿಂದ ನಿರ್ಮಿಸಿದ ಗರ್ಭಗೃಹದಲ್ಲಿ ಹೃಷೀಕೇಶನು ಸ್ತ್ರೀಗಳ ಮಧ್ಯದಲ್ಲಿಯೋ ಎಂಬಂತೆ ನಸುನಗುತ್ತಾ ಇದ್ದನು.

07075013a ಉಪಾವರ್ತಯದವ್ಯಗ್ರಸ್ತಾನಶ್ವಾನ್ ಪುಷ್ಕರೇಕ್ಷಣಃ|

07075013c ಮಿಷತಾಂ ಸರ್ವಸೈನ್ಯಾನಾಂ ತ್ವದೀಯಾನಾಂ ವಿಶಾಂ ಪತೇ||

ವಿಶಾಂಪತೇ! ಪುಷ್ಕರೇಕ್ಷಣನು ನಿನ್ನಕಡೆಯ ಎಲ್ಲ ಸೇನೆಗಳೂ ನೋಡುತ್ತಿದ್ದಂತೆಯೇ ಸ್ವಲ್ವವೂ ಉದ್ವೇಗಗೊಳ್ಳದೇ ಕುದುರೆಗಳನ್ನು ಅಡ್ಡಾಡಿಸಿದನು.

07075014a ತೇಷಾಂ ಶ್ರಮಂ ಚ ಗ್ಲಾನಿಂ ಚ ವೇಪಥುಂ ವಮಥುಂ ವ್ರಣಾನ್|

07075014c ಸರ್ವಂ ವ್ಯಪಾನುದತ್ಕೃಷ್ಣಃ ಕುಶಲೋ ಹ್ಯಶ್ವಕರ್ಮಣಿ||

ಕುದುರೆಗಳ ಕೆಲಸದಲ್ಲಿ ಕುಶಲನಾಗಿದ್ದ ಕೃಷ್ಣನು ಅವುಗಳ ಪರಿಶ್ರಮ, ಬಳಲಿಕೆ, ವೇಪನ-ಕಂಪನಗಳನ್ನೂ ಗಾಯಗಳನ್ನೂ ಸಂಪೂರ್ಣವಾಗಿ ಹೋಗಲಾಡಿಸಿದನು.

07075015a ಶಲ್ಯಾನುದ್ಧೃತ್ಯ ಪಾಣಿಭ್ಯಾಂ ಪರಿಮೃಜ್ಯ ಚ ತಾನ್ ಹಯಾನ್|

07075015c ಉಪಾವೃತ್ಯ ಯಥಾನ್ಯಾಯಂ ಪಾಯಯಾಮಾಸ ವಾರಿ ಸಃ||

ಬಾಣಗಳನ್ನು ಎರಡೂ ಕೈಗಳಿಂದ ನಿಧಾನವಾಗಿ ಕಿತ್ತು, ಮೈತೊಳೆಯಿಸಿ, ನೆಲದ ಮೇಲೆ ಹೊರಳಾಡಿಸಿ, ಯಥಾನ್ಯಾಯವಾಗಿ ನೀರು ಕುಡಿಸಿದನು.

07075016a ಸ ತಾಽಲ್ಲಬ್ಧೋದಕಾನ್ಸ್ನಾತಾಂ ಜಗ್ಧಾನ್ನಾನ್ವಿಗತಕ್ಲಮಾನ್|

07075016c ಯೋಜಯಾಮಾಸ ಸಂಹೃಷ್ಟಃ ಪುನರೇವ ರಥೋತ್ತಮೇ||

ನೀರನ್ನು ಕುಡಿದು, ಸ್ನಾನಮಾಡಿ, ಮೇಯ್ದು, ಆಯಾಸವನ್ನು ಕಳೆದುಕೊಂಡ ಅವುಗಳನ್ನು ಸಂಹೃಷ್ಟನಾಗಿ ಪುನಃ ಆ ಉತ್ತಮ ರಥಕ್ಕೆ ಕಟ್ಟಿದನು.

07075017a ಸ ತಂ ರಥವರಂ ಶೌರಿಃ ಸರ್ವಶಸ್ತ್ರಭೃತಾಂ ವರಃ|

07075017c ಸಮಾಸ್ಥಾಯ ಮಹಾತೇಜಾಃ ಸಾರ್ಜುನಃ ಪ್ರಯಯೌ ದ್ರುತಂ||

ಆ ಶ್ರೇಷ್ಠ ರಥವನ್ನು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ಶೌರಿಯು ಮಹಾತೇಜಸ್ವಿ ಅರ್ಜುನನೊಂದಿಗೆ ಏರಿ ವೇಗವಾಗಿ ಹೊರಟನು.

07075018a ರಥಂ ರಥವರಸ್ಯಾಜೌ ಯುಕ್ತಂ ಲಬ್ಧೋದಕೈರ್ಹಯೈಃ|

07075018c ದೃಷ್ಟ್ವಾ ಕುರುಬಲಶ್ರೇಷ್ಠಾಃ ಪುನರ್ವಿಮನಸೋಽಭವನ್||

ನೀರು ಕುಡಿಸಿದ ಕುದುರೆಗಳಿಂದ ಯುಕ್ತವಾದ ರಥದಲ್ಲಿ ಆ ರಥವರರಿಬ್ಬರೂ ಹೋಗುತ್ತಿರುವುದನ್ನು ನೋಡಿ ಕುರುಬಲಶ್ರೇಷ್ಠರು ಪುನಃ ವಿಮನಸ್ಕರಾದರು.

07075019a ವಿನಿಃಶ್ವಸಂತಸ್ತೇ ರಾಜನ್ಭಗ್ನದಂಷ್ಟ್ರಾ ಇವೋರಗಾಃ|

07075019c ಧಿಗಹೋ ಧಿಗ್ಗತಃ ಪಾರ್ಥಃ ಕೃಷ್ಣಶ್ಚೇತ್ಯಬ್ರುವನ್ಪೃಥಕ್||

ರಾಜನ್! ಹಲ್ಲುಮುರಿದ ಉರಗಗಳಂತೆ ನಿಟ್ಟುಸಿರು ಬಿಡುತ್ತಿದ್ದ ಅವರು ಮತ್ತೆ ಮತ್ತೆ “ನಮಗೆ ಧಿಕ್ಕಾರ! ಧಿಕ್ಕಾರ! ಪಾರ್ಥ ಕೃಷ್ಣರು ಹೊರಟೇ ಹೋದರಲ್ಲ!” ಎಂದು ಅಂದುಕೊಳ್ಳುತ್ತಿದ್ದರು.

07075020a ಸರ್ವಕ್ಷತ್ರಸ್ಯ ಮಿಷತೋ ರಥೇನೈಕೇನ ದಂಶಿತೌ|

07075020c ಬಾಲಕ್ರೀಡನಕೇನೇವ ಕದರ್ಥೀಕೃತ್ಯ ನೋ ಬಲಂ||

ಎಲ್ಲ ಕ್ಷತ್ರಿಯರೂ ನೋಡುತ್ತಿದ್ದಂತೆ ಒಂದೇ ರಥದಲ್ಲಿ ಕುಳಿತು ಕವಚಧಾರಿಗಳಾದ ಅವರಿಬ್ಬರು ನಮ್ಮ ಸೇನೆಯನ್ನು ಬಾಲಕ್ರೀಡೆಯಂತೆ ತಿರಸ್ಕರಿಸಿ ಮುಂದುವರೆದರು.

07075021a ಕ್ರೋಶತಾಂ ಯತಮಾನಾನಾಮಸಂಸಕ್ತೌ ಪರಂತಪೌ|

07075021c ದರ್ಶಯಿತ್ವಾತ್ಮನೋ ವೀರ್ಯಂ ಪ್ರಯಾತೌ ಸರ್ವರಾಜಸು||

ಕೂಗಿಕೊಳ್ಳುತ್ತಿದ್ದರೂ ಪ್ರಯತ್ನಿಸುತ್ತಿದ್ದರೂ ಅವರೊಡನೆ ಯುದ್ಧಮಾಡದೇ ಆ ಪರಂತಪರು ಎಲ್ಲರಾಜರಿಗೆ ತಮ್ಮ ವೀರ್ಯವನ್ನು ತೋರಿಸುತ್ತಾ ಮುಂದುವರೆದರು.

07075022a ತೌ ಪ್ರಯಾತೌ ಪುನರ್ದೃಷ್ಟ್ವಾ ತದಾನ್ಯೇ ಸೈನಿಕಾಬ್ರುವನ್|

07075022c ತ್ವರಧ್ವಂ ಕುರವಃ ಸರ್ವೇ ವಧೇ ಕೃಷ್ಣಕಿರೀಟಿನೋಃ||

ಅವರು ಹೋಗುತ್ತಿರುವುದನ್ನು ನೋಡಿ ಅನ್ಯ ಸೈನಿಕರು ಪುನಃ ಹೇಳಿದರು: “ತತ್ವರೆಮಾಡಿ! ಎಲ್ಲರೂ ಸೇರಿ ಕೃಷ್ಣ-ಕಿರೀಟಿಯರನ್ನು ವಧಿಸೋಣ!

07075023a ರಥಂ ಯುಕ್ತ್ವಾ ಹಿ ದಾಶಾರ್ಹೋ ಮಿಷತಾಂ ಸರ್ವಧನ್ವಿನಾಂ|

07075023c ಜಯದ್ರಥಾಯ ಯಾತ್ಯೇಷ ಕದರ್ಥೀಕೃತ್ಯ ನೋ ರಣೇ||

ಸರ್ವಧನ್ವಿಗಳು ನೋಡುತ್ತಿದ್ದಂತೆಯೇ ದಾಶಾರ್ಹನು ರಥವನ್ನು ಕಟ್ಟಿ ರಣದಲ್ಲಿ ನಮ್ಮನ್ನು ತಿರಸ್ಕರಿಸಿ ಜಯದ್ರಥನ ಕಡೆ ಹೋಗುತ್ತಿದ್ದಾನೆ!”

07075024a ತತ್ರ ಕೇ ಚಿನ್ಮಿಥೋ ರಾಜನ್ಸಮಭಾಷಂತ ಭೂಮಿಪಾಃ|

07075024c ಅದೃಷ್ಟಪೂರ್ವಂ ಸಂಗ್ರಾಮೇ ತದ್ದೃಷ್ಟ್ವಾ ಮಹದದ್ಭುತಂ||

ರಾಜನ್! ಸಂಗ್ರಾಮದಲ್ಲಿ ಹಿಂದೆಂದೂ ನೋಡಿರದ ಆ ಮಹಾ ಅದ್ಭುತವನ್ನು ನೋಡಿ ಅಲ್ಲಿದ್ದ ಕೆಲವು ಭೂಮಿಪರು ಯೋಚಿಸುತ್ತಿದ್ದರು.

07075025a ಸರ್ವಸೈನ್ಯಾನಿ ರಾಜಾ ಚ ಧೃತರಾಷ್ಟ್ರೋಽತ್ಯಯಂ ಗತಃ|

07075025c ದುರ್ಯೋಧನಾಪರಾಧೇನ ಕ್ಷತ್ರಂ ಕೃತ್ಸ್ನಾ ಚ ಮೇದಿನೀ||

“ದುರ್ಯೋಧನನ ಅಪರಾಧದಿಂದ ರಾಜಾ ಧೃತರಾಷ್ಟ್ರನೂ ಅವನ ಸಂಪೂರ್ಣ ಸೇನೆಗಳೂ ಮತ್ತು ಮೇದಿನಿಯ ಸರ್ವ ಕ್ಷತ್ರಿಯರೂ ಮಹಾ ವಿಪತ್ತಿಗೆ ಒಳಗಾಗಿದ್ದಾರೆ!

07075026a ವಿಲಯಂ ಸಮನುಪ್ರಾಪ್ತಾ ತಚ್ಚ ರಾಜಾ ನ ಬುಧ್ಯತೇ|

07075026c ಇತ್ಯೇವಂ ಕ್ಷತ್ರಿಯಾಸ್ತತ್ರ ಬ್ರುವಂತ್ಯನ್ಯೇ ಚ ಭಾರತ||

ಇವರು ವಿಲಯವನ್ನು ಹೊಂದುತ್ತಿದ್ದಾರೆ ಎನ್ನುವುದು ರಾಜನಿಗೆ ತಿಳಿದಿಲ್ಲ!” ಭಾರತ! ಅಲ್ಲಿರುವ ಅನ್ಯ ಕ್ಷತ್ರಿಯರು ಹೀಗೆ ಹೇಳಿಕೊಳ್ಳುತ್ತಿದ್ದರು.

07075027a ಸಿಂಧುರಾಜಸ್ಯ ಯತ್ಕೃತ್ಯಂ ಗತಸ್ಯ ಯಮಸಾದನಂ|

07075027c ತತ್ಕರೋತು ವೃಥಾದೃಷ್ಟಿರ್ಧಾರ್ತರಾಷ್ಟ್ರೋಽನುಪಾಯವಿತ್||

“ದೃಷ್ಟಿಯಿಲ್ಲದ ಧಾರ್ತರಾಷ್ಟ್ರನು ಸಿಂಧುರಾಜನು ಯಮಸಾದನಕ್ಕೆ ಹೋದನಂತರ ಮಾಡಬೇಕಾದ ಕಾರ್ಯಗಳ ಕುರಿತು ಉಪಾಯಗಳನ್ನು ಮಾಡಲಿ!”

07075028a ತತಃ ಶೀಘ್ರತರಂ ಪ್ರಾಯಾತ್ಪಾಂಡವಃ ಸೈಂಧವಂ ಪ್ರತಿ|

07075028c ನಿವರ್ತಮಾನೇ ತಿಗ್ಮಾಂಶೌ ಹೃಷ್ಟೈಃ ಪೀತೋದಕೈರ್ಹಯೈಃ||

ಸೂರ್ಯನು ಇಳಿಮುಖನಾಗಿರಲು ಪಾಂಡವನು ನೀರನ್ನು ಕುಡಿದು ಹರ್ಷಿತಗೊಂಡಿದ್ದ ಕುದುರೆಗಳೊಂದಿಗೆ ಅತ್ಯಂತ ಶೀಘ್ರವಾಗಿ ಸೈಂಧವನ ಕಡೆ ಹೋದನು.

07075029a ತಂ ಪ್ರಯಾಂತಂ ಮಹಾಬಾಹುಂ ಸರ್ವಶಸ್ತ್ರಭೃತಾಂ ವರಂ|

07075029c ನಾಶಕ್ನುವನ್ವಾರಯಿತುಂ ಯೋಧಾಃ ಕ್ರುದ್ಧಮಿವಾಂತಕಂ||

ಅಂತಕನಂತೆ ಕ್ರುದ್ಧನಾಗಿ ಹೋಗುತ್ತಿರುವ ಆ ಮಹಾಬಾಹು ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನನ್ನು ಯೋಧರು ತಡೆಯಲು ಶಕ್ತರಾಗಲಿಲ್ಲ.

07075030a ವಿದ್ರಾವ್ಯ ತು ತತಃ ಸೈನ್ಯಂ ಪಾಂಡವಃ ಶತ್ರುತಾಪನಃ|

07075030c ಯಥಾ ಮೃಗಗಣಾನ್ಸಿಂಹಃ ಸೈಂಧವಾರ್ಥೇ ವ್ಯಲೋಡಯತ್||

ಸಿಂಹವು ಜಿಂಕೆಗಳ ಗುಂಪನ್ನು ಮಥಿಸಿಬಿಡುವಂತೆ ಶತ್ರುತಾಪನ ಪಾಂಡವನು ಸೈಂಧವನಿಗಾಗಿ ನಿನ್ನ ಸೇನೆಯನ್ನು ತರುಬಿ ಓಡಿಸಿದನು.

07075031a ಗಾಹಮಾನಸ್ತ್ವನೀಕಾನಿ ತೂರ್ಣಮಶ್ವಾನಚೋದಯತ್|

07075031c ಬಲಾಕವರ್ಣಾನ್ದಾಶಾರ್ಹಃ ಪಾಂಚಜನ್ಯಂ ವ್ಯನಾದಯತ್||

ಸೇನೆಗಳ ಮಧ್ಯದಲ್ಲಿ ಬಲಾಕವರ್ಣದ ಕುದುರೆಗಳನ್ನು ಇನ್ನೂ ಜೋರಾಗಿ ಚಪ್ಪರಿಸಿ ಓಡಿಸುತ್ತಾ ದಾಶಾರ್ಹನು ಪಾಂಚಜನ್ಯವನ್ನು ಊದಿದನು.

07075032a ಕೌಂತೇಯೇನಾಗ್ರತಃ ಸೃಷ್ಟಾ ನ್ಯಪತನ್ಪೃಷ್ಠತಃ ಶರಾಃ|

07075032c ತೂರ್ಣಾತ್ತೂರ್ಣತರಂ ಹ್ಯಶ್ವಾಸ್ತೇಽವಹನ್ವಾತರಂಹಸಃ||

ಕೌಂತೇಯನು ಬಿಟ್ಟ ಬಾಣಗಳೆಲ್ಲವೂ ಅವನ ಹಿಂದೆ ಬೀಳುತ್ತಿದ್ದವು. ಬಾಣಗಳ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆ ಗಾಳಿಯ ವೇಗವುಳ್ಳ ಕುದುರೆಗಳು ಓಡುತ್ತಿದ್ದವು.

07075033a ವಾತೋದ್ಧೂತಪತಾಕಾಂತಂ ರಥಂ ಜಲದನಿಸ್ವನಂ|

07075033c ಘೋರಂ ಕಪಿಧ್ವಜಂ ದೃಷ್ಟ್ವಾ ವಿಷಣ್ಣಾ ರಥಿನೋಽಭವನ್||

ಗಾಳಿಯಲ್ಲಿ ಹಾರಾಡುತ್ತಿದ್ದ ಪತಾಕೆಗಳನ್ನೂ, ರಥದ ಗುಡುಗಿನ ಶಬ್ಧವನ್ನೂ, ಘೋರವಾದ ಕಪಿಧ್ವಜವನ್ನೂ ನೋಡಿ ರಥಿಗಳು ವಿಷಣ್ಣರಾದರು.

07075034a ದಿವಾಕರೇಽಥ ರಜಸಾ ಸರ್ವತಃ ಸಂವೃತೇ ಭೃಶಂ|

07075034c ಶರಾರ್ತಾಶ್ಚ ರಣೇ ಯೋಧಾ ನ ಕೃಷ್ಣೌ ಶೇಕುರೀಕ್ಷಿತುಂ||

ಎಲ್ಲಕಡೆಗಳಲ್ಲಿ ಮುಸುಕಿತ ಧೂಳಿನಿಂದ ದಿವಾಕರನೂ ಕಾಣದಿರಲಾಗಿ, ರಣದಲ್ಲಿ ಶರಗಳಿಂದ ಆರ್ತರಾದ ಯೋಧರು ಕೃಷ್ಣರೀರ್ವರನ್ನೂ ನೋಡಲೂ ಶಕ್ಯರಾಗಿರಲಿಲ್ಲ.

07075035a ತತೋ ನೃಪತಯಃ ಕ್ರುದ್ಧಾಃ ಪರಿವವ್ರುರ್ಧನಂಜಯಂ|

07075035c ಕ್ಷತ್ರಿಯಾ ಬಹವಶ್ಚಾನ್ಯೇ ಜಯದ್ರಥವಧೈಷಿಣಂ||

ಆಗ ಕ್ರುದ್ಧರಾದ ನೃಪತಿಗಳೂ ಅನೇಕ ಅನ್ಯ ಕ್ಷತ್ರಿಯರೂ ಜಯದ್ರಥನನ್ನು ವಧಿಸಲು ಇಚ್ಛಿಸಿದ್ದ ಧನಂಜಯನನ್ನು ಸುತ್ತುಗಟ್ಟಿದರು.

07075036a ಅಪನೀಯತ್ಸು ಶಲ್ಯೇಷು ಧಿಷ್ಠಿತಂ ಪುರುಷರ್ಷಭಂ|

07075036c ದುರ್ಯೋಧನಸ್ತ್ವಗಾತ್ಪಾರ್ಥಂ ತ್ವರಮಾಣೋ ಮಹಾಹವೇ||

ಅವರು ಪ್ರಯೋಗಿಸುತ್ತಿದ್ದ ಬಾಣಗಳಿಂದ ಆ ಪುರುಷರ್ಷಭನ ಗಮನವು ಕುಂಠಿತವಾಗಲು ದುರ್ಯೋಧನನು ಪಾರ್ಥನನ್ನು ಮಹಾಹವದಲ್ಲಿ ತ್ವರೆಮಾಡಿ ಹಿಂಬಾಲಿಸಿ ಬರುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸೈನ್ಯವಿಸ್ಮಯೇ ಪಂಚಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸೈನ್ಯವಿಸ್ಮಯ ಎನ್ನುವ ಎಪ್ಪತ್ತೈದನೇ ಅಧ್ಯಾಯವು.

Image result for flowers against white background

Comments are closed.