Drona Parva: Chapter 55

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೫

ಸುಭದ್ರೆಯ ವಿಲಾಪ (೧-೩೩). ಕೃಷ್ಣನು ತಂಗಿಯನ್ನು ಪುನಃ ಸಂತವಿಸಿದುದು (೩೪-೪೦).

07055001 ಸಂಜಯ ಉವಾಚ|

07055001a ಏತಚ್ಚ್ರುತ್ವಾ ವಚಸ್ತಸ್ಯ ಕೇಶವಸ್ಯ ಮಹಾತ್ಮನಃ|

07055001c ಸುಭದ್ರಾ ಪುತ್ರಶೋಕಾರ್ತಾ ವಿಲಲಾಪ ಸುದುಃಖಿತಾ||

ಸಂಜಯನು ಹೇಳಿದನು: “ಮಹಾತ್ಮ ಕೇಶವನ ಈ ಮಾತನ್ನು ಕೇಳಿದ ಸುಭದ್ರೆಯು ಪುತ್ರಶೋಕಾರ್ತಳಾಗಿ, ಬಹಳ ದುಃಖಿತಳಾಗಿ ವಿಲಪಿಸಿದಳು.

07055002a ಹಾ ಪುತ್ರ ಮಮ ಮಂದಾಯಾಃ ಕಥಂ ಸಂಯುಗಮೇತ್ಯ ಹ|

07055002c ನಿಧನಂ ಪ್ರಾಪ್ತವಾಂಸ್ತಾತ ಪಿತೃತುಲ್ಯಪರಾಕ್ರಮಃ||

“ಹಾ ಪುತ್ರ! ಮಂದಭಾಗ್ಯಳಾದ ನನ್ನಲ್ಲಿ ಹುಟ್ಟಿ ತಂದೆಯ ಸಮನಾದ ಪರಾಕ್ರಮವನ್ನು ಪಡೆದು ನೀನು ಹೇಗೆ ತಾನೇ ಯುದ್ಧದಲ್ಲಿ ನಿಧನಹೊಂದಿದೆ?

07055003a ಕಥಮಿಂದೀವರಶ್ಯಾಮಂ ಸುದಂಷ್ಟ್ರಂ ಚಾರುಲೋಚನಂ|

07055003c ಮುಖಂ ತೇ ದೃಶ್ಯತೇ ವತ್ಸ ಗುಂಠಿತಂ ರಣರೇಣುನಾ||

ಕನ್ನೈದಿಲೆಯಂತೆ ಶ್ಯಾಮವರ್ಣದ, ಸುಂದರ ಹಲ್ಲಿನ, ಸುಂದರ ಕಣ್ಣುಗಳ ನಿನ್ನ ಮುಖವು ರಣ ಧೂಳಿನಿಂದ ಆಚ್ಛಾದಿತವಾಗಿ ಹೇಗೆ ಕಾಣುತ್ತಿದೆಯೋ!

07055004a ನೂನಂ ಶೂರಂ ನಿಪತಿತಂ ತ್ವಾಂ ಪಶ್ಯಂತ್ಯನಿವರ್ತಿನಂ|

07055004c ಸುಶಿರೋಗ್ರೀವಬಾಹ್ವಂಸಂ ವ್ಯೂಢೋರಸ್ಕಂ ನಿರೂದರಂ||

07055005a ಚಾರೂಪಚಿತಸರ್ವಾಂಗಂ ಸ್ವಕ್ಷಂ ಶಸ್ತ್ರಕ್ಷತಾಚಿತಂ|

07055005c ಭೂತಾನಿ ತ್ವಾ ನಿರೀಕ್ಷಂತೇ ನೂನಂ ಚಂದ್ರಮಿವೋದಿತಂ||

ಯುದ್ಧದಿಂದ ಹಿಮ್ಮೆಟ್ಟದ, ಸುಂದರ ಶಿರಸ್ಸಿನಿಂದಲೂ, ಕಂಬುಕಂಠದಿಂದಲೂ, ನೀಳ ಬಾಹುಗಳಿಂದಲೂ, ಉನ್ನತ ಹೆಗಲುಗಳಿಂದಲೂ, ವಿಸ್ತಾರ ಎದೆಯಿಂದಲೂ, ಆಳ ಹೊಟ್ಟೆಯಿಂದಲೂ, ಸುಂದರ ದಷ್ಟಪುಷ್ಟ ಸರ್ವಾಂಗಗಳಿಂದಲೂ, ಸುಂದರ ಕಣ್ಣುಗಳಿಂದಲೂ ಕೂಡಿ ಉದಯಿಸುತ್ತಿರುವ ಚಂದ್ರನಂತೆ ಕಾಣುತ್ತಿದ್ದ ಶೂರನಾದ ನೀನು ಶಸ್ತ್ರಗಳಿಂದ ಗಾಯಗೊಂಡು ಬಿದ್ದುರುವುದನ್ನು ಭೂತಗಳು ನೋಡುತ್ತಿವೆಯೇ?

07055006a ಶಯನೀಯಂ ಪುರಾ ಯಸ್ಯ ಸ್ಪರ್ಧ್ಯಾಸ್ತರಣಸಂವೃತಂ|

07055006c ಭೂಮಾವದ್ಯ ಕಥಂ ಶೇಷೇ ವಿಪ್ರವಿದ್ಧಃ ಸುಖೋಚಿತಃ||

ಹಿಂದೆ ರತ್ನಗಂಬಳಿಗಳಿಂದ ಅಚ್ಛಾದಿತ ಶಯನದಲ್ಲಿ ಮಲಗುತ್ತಿದ್ದ ನೀನು ಸುಖೋಚಿತ ಎಳೆಯ ವಯಸ್ಸಿನಲ್ಲಿ ಹೇಗೆ ತಾನೇ ಇಂದು ಭೂಮಿಯಲ್ಲಿ ಮಲಗಿರುವೆ?

07055007a ಯೋಽನ್ವಾಸ್ಯತ ಪುರಾ ವೀರೋ ವರಸ್ತ್ರೀಭಿರ್ಮಹಾಭುಜಃ|

07055007c ಕಥಮನ್ವಾಸ್ಯತೇ ಸೋಽದ್ಯ ಶಿವಾಭಿಃ ಪತಿತೋ ಮೃಧೇ||

ಮಹಾಭುಜ! ವೀರ! ಹಿಂದೆ ಶ್ರೇಷ್ಠ ಸ್ತ್ರೀಯರಿಂದ ಸೇವೆಮಾಡಿಸಿಕೊಳ್ಳುತ್ತಿದ್ದ ನೀನು ಇಂದು ನರಿಗಳ ಮಧ್ಯೆ ರಣದಲ್ಲಿ ಬಿದ್ದು ಹೇಗೆ ತಾನೆ ಸೇವೆಗಳನ್ನು ಪಡೆಯುತ್ತಿದ್ದೀಯೆ?

07055008a ಯೋಽಸ್ತೂಯತ ಪುರಾ ಹೃಷ್ಟೈಃ ಸೂತಮಾಗಧಬಂದಿಭಿಃ|

07055008c ಸೋಽದ್ಯ ಕ್ರವ್ಯಾದ್ಗಣೈರ್ಘೋರೈರ್ವಿನದದ್ಭಿರುಪಾಸ್ಯತೇ||

ಹಿಂದೆ ಸಂತೋಷದಿಂದ ಸೂತ-ಮಾಗದ-ಬಂಧಿಗಳಿಂದ ಸ್ತುತಿಸಲ್ಪಡುತ್ತಿದ್ದ ನೀನು ಇಂದು ಕ್ರವ್ಯಾದಗಣಗಳ ಘೋರ ಕಿರುಚಾಟಗಳ ಉಪಾಸನೆಯಲ್ಲಿದ್ದೀಯೆ!

07055009a ಪಾಂಡವೇಷು ಚ ನಾಥೇಷು ವೃಷ್ಣಿವೀರೇಷು ಚಾಭಿಭೋ|

07055009c ಪಾಂಚಾಲೇಷು ಚ ವೀರೇಷು ಹತಃ ಕೇನಾಸ್ಯನಾಥವತ್||

ಪಾಂಡವರನ್ನು, ವೃಷ್ಣಿವೀರರನ್ನು ಮತ್ತು ವೀರ ಪಾಂಚಾಲರನ್ನು ನಾಥರನ್ನಾಗಿ ಪಡೆದಿದ್ದ ನೀನು ಅನಾಥನಂತೆ ಯಾರಿಂದ ಹತನಾದೆ?

07055010a ಅತೃಪ್ತದರ್ಶನಾ ಪುತ್ರ ದರ್ಶನಸ್ಯ ತವಾನಘ|

07055010c ಮಂದಭಾಗ್ಯಾ ಗಮಿಷ್ಯಾಮಿ ವ್ಯಕ್ತಮದ್ಯ ಯಮಕ್ಷಯಂ||

ಅನಘ! ಮಗನೇ! ನಿನ್ನನ್ನು ನೋಡಿ ತೃಪ್ತಳಾಗದ ಮಂದಭಾಗ್ಯಳಾದ ನಾನು ಇಂದು ನಿಜವಾಗಿಯೂ ಯಮಲೋಕಕ್ಕೆ ಹೋಗುವವಳಿದ್ದೇನೆ!

07055011a ವಿಶಾಲಾಕ್ಷಂ ಸುಕೇಶಾಂತಂ ಚಾರುವಾಕ್ಯಂ ಸುಗಂಧಿ ಚ|

07055011c ತವ ಪುತ್ರ ಕದಾ ಭೂಯೋ ಮುಖಂ ದ್ರಕ್ಷ್ಯಾಮಿ ನಿರ್ವ್ರಣಂ||

ವಿಶಾಲಾಕ್ಷ, ಸುಂದರ ಗುಂಗುರುಕೂದಲುಳ್ಳ, ಇಂಪಾಗಿ ಮಾತನಾಡುವ, ಸುಗಂಧಯುಕ್ತವಾದ, ಗಾಯಗಳಿಲ್ಲದ ನಿನ್ನ ಮುಖವನ್ನು ಪುನಃ ಎಂದು ನೋಡುತ್ತೇನೆ?

07055012a ಧಿಗ್ಬಲಂ ಭೀಮಸೇನಸ್ಯ ಧಿಕ್ಪಾರ್ಥಸ್ಯ ಧನುಷ್ಮತಾಂ|

07055012c ಧಿಗ್ವೀರ್ಯಂ ವೃಷ್ಣಿವೀರಾಣಾಂ ಪಾಂಚಾಲಾನಾಂ ಚ ಧಿಗ್ಬಲಂ||

ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಬಿಲ್ಲುಗಾರಿಕೆಗೆ ಧಿಕ್ಕಾರ! ವೃಷ್ಣಿವೀರರ ವೀರ್ಯಕ್ಕೆ ಧಿಕ್ಕಾರ! ಪಾಂಚಾಲರ ಬಲಕ್ಕೆ ಧಿಕ್ಕಾರ!

07055013a ದಿಕ್ಕೇಕಯಾಂಸ್ತಥಾ ಚೇದೀನ್ಮತ್ಸ್ಯಾಂಶ್ಚೈವಾಥ ಸೃಂಜಯಾನ್|

07055013c ಯೇ ತ್ವಾ ರಣೇ ಗತಂ ವೀರಂ ನ ಜಾನಂತಿ ನಿಪಾತಿತಂ||

ಕೇಕಯರಿಗೂ, ಚೇದಿಗಳಿಗೂ, ಮತ್ಸ್ಯರಿಗೂ, ಸೃಂಜಯರಿಗೂ ಧಿಕ್ಕಾರ! ಅವರು ನಿನ್ನಂತಹ ವೀರನನ್ನು ರಣಕ್ಕೆ ಕಳುಹಿಸಿ ಜೀವಸಹಿತ ಕೆಡವಿಸಿದರು.

07055014a ಅದ್ಯ ಪಶ್ಯಾಮಿ ಪೃಥಿವೀಂ ಶೂನ್ಯಾಮಿವ ಹತತ್ವಿಷಂ|

07055014c ಅಭಿಮನ್ಯುಮಪಶ್ಯಂತೀ ಶೋಕವ್ಯಾಕುಲಲೋಚನಾ||

ಶತ್ರುಗಳಿಂದ ಹತನಾಗಿರುವ ಅಭಿಮನ್ಯುವನ್ನು ಕಾಣದೇ ಶೋಕವ್ಯಾಕುಲಲೋಚನಳಾಗಿ ಇಂದು ಇಡೀ ಭೂಮಿಯೇ ಶೂನ್ಯವಾಗಿದೆಯೆಂದು ಕಾಣುತ್ತಿದ್ದೇನೆ.

07055015a ಸ್ವಸ್ರೀಯಂ ವಾಸುದೇವಸ್ಯ ಪುತ್ರಂ ಗಾಂಡೀವಧನ್ವನಃ|

07055015c ಕಥಂ ತ್ವಾ ವಿರಥಂ ವೀರಂ ದ್ರಕ್ಷ್ಯಾಮ್ಯನ್ಯೈರ್ನಿಪಾತಿತಂ||

ವಾಸುದೇವನ ಅಳಿಯ ಮತ್ತು ಗಾಂಡೀವಧನ್ವಿಯ ವೀರ ಮಗನಾದ ನಿನ್ನನ್ನು ವಿರಥನಾಗಿ ಅನ್ಯರಿಂದ ಬೀಳಿಸಲ್ಪಟ್ಟಿರುವುದನ್ನು ಹೇಗೆ ತಾನೇ ನೋಡುತ್ತಿರುವೆ?

07055016a ಹಾ ವೀರ ದೃಷ್ಟೋ ನಷ್ಟಶ್ಚ ಧನಂ ಸ್ವಪ್ನ ಇವಾಸಿ ಮೇ|

07055016c ಅಹೋ ಹ್ಯನಿತ್ಯಂ ಮಾನುಷ್ಯಂ ಜಲಬುದ್ಬುದಚಂಚಲಂ||

ಹಾ ವೀರ! ಸ್ವಪ್ನದಲ್ಲಿ ಕಂಡ ಧನದಂತೆ ನೀನು ನನಗೆ ಕಾಣಿಸಿಕೊಂಡು ಮರೆಯಾಗಿಬಿಟ್ಟೆಯಲ್ಲ! ಅಯ್ಯೋ! ನೀರಿನ ಗುಳ್ಳೆಯಂತೆ ಈ ಮನುಷ್ಯ ಜನ್ಮವು ಚಂಚಲ ಮತ್ತು ಅನಿತ್ಯ.

07055017a ಇಮಾಂ ತೇ ತರುಣೀಂ ಭಾರ್ಯಾಂ ತ್ವದಾಧಿಭಿರಭಿಪ್ಲುತಾಂ|

07055017c ಕಥಂ ಸಂಧಾರಯಿಷ್ಯಾಮಿ ವಿವತ್ಸಾಮಿವ ಧೇನುಕಾಂ||

ಕರುವನ್ನು ಕಳೆದುಕೊಂಡ ಹಸುವಿನಂತೆ ವಿರಹ ಶೋಕದಲ್ಲಿ ಮುಳುಗಿಹೋಗಿರುವ ಈ ತರುಣೀ ನಿನ್ನ ಭಾರ್ಯೆಯನ್ನು ನಾನು ಹೇಗೆ ಸಂತವಿಸಲಿ?

07055018a ಅಹೋ ಹ್ಯಕಾಲೇ ಪ್ರಸ್ಥಾನಂ ಕೃತವಾನಸಿ ಪುತ್ರಕ|

07055018c ವಿಹಾಯ ಫಲಕಾಲೇ ಮಾಂ ಸುಗೃದ್ಧಾಂ ತವ ದರ್ಶನೇ||

ಪುತ್ರಕ! ನಿನಗೆ ಪುತ್ರಪ್ರಾಪ್ತಿಯಾಗಲಿದ್ದ ಈ ಸಮಯದಲ್ಲಿ ನಿನ್ನ ದರ್ಶನಕ್ಕೆ ಕಾತುರಳಾಗಿರುವ ನನ್ನನ್ನು ನೋಡದೇ ಅಕಾಲದಲ್ಲಿ ಏಕೆ ಹೊರಟುಹೋದೆ?

07055019a ನೂನಂ ಗತಿಃ ಕೃತಾಂತಸ್ಯ ಪ್ರಾಜ್ಞೈರಪಿ ಸುದುರ್ವಿದಾ|

07055019c ಯತ್ರ ತ್ವಂ ಕೇಶವೇ ನಾಥೇ ಸಂಗ್ರಾಮೇಽನಾಥವದ್ಧತಃ||

ಕೇಶವನನ್ನೇ ನಾಥನನ್ನಾಗಿ ಪಡೆದ ನೀನೂ ಕೂಡ ಸಂಗ್ರಾಮದಲ್ಲಿ ಅನಾಥನಂತೆ ಹತನಾದೆನೆಂದರೆ ಪ್ರಾಜ್ಞರಿಗೂ ಕೂಡ ಕೃತಾಂತನ ಬಹುವಿಧದ ಗತಿಯು ತಿಳಿದಿರಲು ಅಸಾಧ್ಯ ಎಂದೆನಿಸುತ್ತದೆ.

07055020a ಯಜ್ವನಾಂ ದಾನಶೀಲಾನಾಂ ಬ್ರಾಹ್ಮಣಾನಾಂ ಕೃತಾತ್ಮನಾಂ|

07055020c ಚರಿತಬ್ರಹ್ಮಚರ್ಯಾಣಾಂ ಪುಣ್ಯತೀರ್ಥಾವಗಾಹಿನಾಂ||

07055021a ಕೃತಜ್ಞಾನಾಂ ವದಾನ್ಯಾನಾಂ ಗುರುಶುಶ್ರೂಷಿಣಾಮಪಿ|

07055021c ಸಹಸ್ರದಕ್ಷಿಣಾನಾಂ ಚ ಯಾ ಗತಿಸ್ತಾಮವಾಪ್ನುಹಿ||

ಯಜ್ಞಮಾಡಿದವರಿಗೆ, ದಾನಶೀಲರಿಗೆ, ಬ್ರಾಹ್ಮಣರಿಗೆ, ಕೃತಾತ್ಮರಿಗೆ, ಬ್ರಹ್ಮಚರ್ಯವನ್ನು ಪಾಲಿಸುವವರಿಗೆ, ಪುಣ್ಯತೀರ್ಥಗಳಿಗೆ ಹೋಗಿರುವವರಿಗೆ, ಕೃತಜ್ಞರಿಗೆ, ಉದಾರಿಗಳಿಗೆ, ಗುರುಶುಶ್ರೂಷಿಣಿಗಳಿಗೆ, ಸಹಸ್ರ ದಕ್ಷಿಣೆಗಳನ್ನಿತ್ತವರಿಗೆ ಯಾವ ಗತಿಯು ದೊರೆಯುತ್ತದೆಯೋ ಆ ಸದ್ಗತಿಯನ್ನು ನೀನು ಪಡೆಯುವವನಾಗು.

07055022a ಯಾ ಗತಿರ್ಯುಧ್ಯಮಾನಾನಾಂ ಶೂರಾಣಾಮನಿವರ್ತಿನಾಂ|

07055022c ಹತ್ವಾರೀನ್ನಿಹತಾನಾಂ ಚ ಸಂಗ್ರಾಮೇ ತಾಂ ಗತಿಂ ವ್ರಜ||

ಯುದ್ಧದಿಂದ ಹಿಮ್ಮೆಟ್ಟದೇ ಹೋರಾಡಿ ಸಂಗ್ರಾಮದಲ್ಲಿ ಆಯುಧಗಳಿಂದ ಮಡಿಯುವ ಶೂರರಿಗೆ ದೊರೆಯುವ ಗತಿಯು ನಿನಗೂ ದೊರೆಯಲಿ.

07055023a ಗೋಸಹಸ್ರಪ್ರದಾತೄಣಾಂ ಕ್ರತುದಾನಾಂ ಚ ಯಾ ಗತಿಃ|

07055023c ನೈವೇಶಿಕಂ ಚಾಭಿಮತಂ ದದತಾಂ ಯಾ ಗತಿಃ ಶುಭಾ||

07055024a ಬ್ರಹ್ಮಚರ್ಯೇಣ ಯಾಂ ಯಾಂತಿ ಮುನಯಃ ಸಂಶಿತವ್ರತಾ|

07055024c ಏಕಪತ್ನ್ಯಶ್ಚ ಯಾಂ ಯಾಂತಿ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ಸಾವಿರ ಗೋವುಗಳನ್ನು ದಾನಮಾಡುವವರಿಗೆ, ಯಜ್ಞಸಾಮಾಗ್ರಿಗಳನ್ನು ದಾನಮಾಡುವವರಿಗೆ, ಸುಸಜ್ಜಿತ ವಾಸಸ್ಥಾನಗಳನ್ನು ದಾನಮಾಡುವವರಿಗೆ ದೊರೆಯುವ ಶುಭ ಗತಿಯೂ; ಸಂಶಿತವ್ರತ ಮುನಿಗಳು ಬ್ರಹ್ಮಚರ್ಯದ ಮೂಲಕ ಪಡೆಯುವ ಗತಿಯೂ; ಏಕಪತ್ನಿಯನ್ನು ಹೊಂದಿರುವವರಿಗೆ ದೊರೆಯುವ ಗತಿಯೂ ನಿನಗೆ ದೊರೆಯುವಂತಾಗಲಿ!

07055025a ರಾಜ್ಞಾಂ ಸುಚರಿತೈರ್ಯಾ ಚ ಗತಿರ್ಭವತಿ ಶಾಶ್ವತೀ|

07055025c ಚತುರಾಶ್ರಮಿಣಾಂ ಪುಣ್ಯೈಃ ಪಾವಿತಾನಾಂ ಸುರಕ್ಷಿತೈಃ||

07055026a ದೀನಾನುಕಂಪಿನಾಂ ಯಾ ಚ ಸತತಂ ಸಂವಿಭಾಗಿನಾಂ|

07055026c ಪೈಶುನ್ಯಾಚ್ಚ ನಿವೃತ್ತಾನಾಂ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ಸುಚರಿತ ರಾಜರಿಗೆ ದೊರೆಯುವ ಶಾಶ್ವತ ಗತಿ, ಪವಿತ್ರ ಪುಣ್ಯಗಳಿಂದ ನಾಲ್ಕು ಆಶ್ರಮಗಳಲ್ಲಿ ಸುರಕ್ಷಿತರಾಗಿರುವವರಿಗೆ, ದೀನಾನುಕಂಪಿಗಳಿಗೆ, ಸತತವೂ ಹಂಚಿಕೊಳ್ಳುವವರಿಗೆ, ಬೇರೆಯವರ ವಿಷಯದಲ್ಲಿ ದೋಷವನ್ನು ತೋರಿಸಿಕೊಡದವರಿಗೆ ಯಾವ ಗತಿಯುತ್ತದೆಯೋ ಆ ಗತಿಯನ್ನು ನೀನೂ ಪಡೆ.

07055027a ವ್ರತಿನಾಂ ಧರ್ಮಶೀಲಾನಾಂ ಗುರುಶುಶ್ರೂಷಿಣಾಮಪಿ|

07055027c ಅಮೋಘಾತಿಥಿನಾಂ ಯಾ ಚ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ವ್ರತಪರಾಯಣರಿಗೆ, ಧರ್ಮಶೀಲರಿಗೆ, ಗುರುಶುಶ್ರೂಷಿಣಿಗಳಿಗೆ, ಅತಿಥಿಗಳಿಗೆ ನಿರಾಶೆಯನ್ನುಂಟುಮಾಡದವರಿಗೆ ಯಾವ ಗತಿಯೋ ಆ ಗತಿಯು ನಿನ್ನದಾಗಲಿ!

07055028a ಋತುಕಾಲೇ ಸ್ವಕಾಂ ಪತ್ನೀಂ ಗಚ್ಚತಾಂ ಯಾ ಮನಸ್ವಿನಾಂ|

07055028c ನ ಚಾನ್ಯದಾರಸೇವೀನಾಂ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ಋತುಕಾಲದಲ್ಲಿ ತನ್ನ ಪತ್ನಿಯನ್ನು ಕೂಡುವ ಮನಸ್ವಿಗೆ ಮತ್ತು ಅನ್ಯರ ಪತ್ನಿಯರನ್ನು ಕೂಡದೇ ಇರುವವರಿಗೆ ದೊರೆಯುವ ಗತಿಯು ನಿನ್ನದಾಗಲಿ!

07055029a ಸಾಮ್ನಾ ಯೇ ಸರ್ವಭೂತಾನಿ ಗಚ್ಚಂತಿ ಗತಮತ್ಸರಾಃ|

07055029c ನಾರುಂತುದಾನಾಂ ಕ್ಷಮಿಣಾಂ ಯಾ ಗತಿಸ್ತಾಮವಾಪ್ನುಹಿ||

ಇರುವ ಎಲ್ಲವನ್ನೂ ಸಮಭಾವದಿಂದ ಕಾಣುವವರಿಗೆ, ಮಾತ್ಸರ್ಯವನ್ನು ಕಳೆದುಕೊಂಡವರಿಗೆ, ಯಾರನ್ನೂ ಮಾತಿನಿಂದ ನಿಂದಿಸದವರಿಗೆ, ಕ್ಷಮಾವಂತರಿಗೆ ಯಾವ ಸದ್ಗತಿಯು ದೊರೆಯುತ್ತದೆಯೋ ಅದು ನಿನಗೂ ದೊರೆಯಲಿ.

07055030a ಮಧುಮಾಂಸನಿವೃತ್ತಾನಾಂ ಮದಾದ್ದಂಭಾತ್ತಥಾನೃತಾತ್|

07055030c ಪರೋಪತಾಪತ್ಯಕ್ತಾನಾಂ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ಮದ್ಯ-ಮಾಂಸಗಳಿಂದ ಮತ್ತು ಹಾಗೆಯೇ ಮದ, ದಂಭ ಮತ್ತು ಸುಳ್ಳುಗಳಿಂದ ದೂರವಿರುವವರಿಗೆ, ಇನ್ನೊಬ್ಬರನ್ನು ನೋಯಿಸುವುದನ್ನು ಬಿಟ್ಟವರಿಗೆ ದೊರೆಯುವ ಗತಿಯು ನಿನಗೂ ದೊರೆಯಲಿ.

07055031a ಹ್ರೀಮಂತಃ ಸರ್ವಶಾಸ್ತ್ರಜ್ಞಾ ಜ್ಞಾನತೃಪ್ತಾ ಜಿತೇಂದ್ರಿಯಾಃ|

07055031c ಯಾಂ ಗತಿಂ ಸಾಧವೋ ಯಾಂತಿ ತಾಂ ಗತಿಂ ವ್ರಜ ಪುತ್ರಕ||

ಪುತ್ರಕ! ಸಕಲ ಶಾಸ್ತ್ರಗಳನ್ನೂ ತಿಳಿದಿರುವ, ಆದರೆ ಲಜ್ಜಾಶೀಲರಾದ, ಜ್ಞಾನದಿಂದ ತೃಪ್ತಿಹೊಂದಿರುವ, ಜಿತೇಂದ್ರಿಯರಾದ ಸಾಧುಗಳು ಯಾವ ಗತಿಗೆ ಹೋಗುತ್ತಾರೋ ಆ ಗತಿಗೆ ನೀನೂ ಹೋಗುವವನಾಗು!”

07055032a ಏವಂ ವಿಲಪತೀಂ ದೀನಾಂ ಸುಭದ್ರಾಂ ಶೋಕಕರ್ಶಿತಾಂ|

07055032c ಅಭ್ಯಪದ್ಯತ ಪಾಂಚಾಲೀ ವೈರಾಟೀಸಹಿತಾ ತದಾ||

ಹೀಗೆ ವಿಲಪಿಸುತ್ತಿರುವ ದೀನಳಾದ ಶೋಕಕರ್ಶಿತಳಾದ ಸುಭದ್ರೆಯ ಬಳಿ ವೈರಾಟೀ ಉತ್ತರೆಯ ಸಹಿತ ಪಾಂಚಾಲಿಯು ಬಂದಳು.

07055033a ತಾಃ ಪ್ರಕಾಮಂ ರುದಿತ್ವಾ ಚ ವಿಲಪ್ಯ ಚ ಸುದುಃಖಿತಾಃ|

07055033c ಉನ್ಮತ್ತವತ್ತದಾ ರಾಜನ್ವಿಸಂಜ್ಞಾ ನ್ಯಪತನ್ ಕ್ಷಿತೌ||

ರಾಜನ್! ಅವರು ಅವನನ್ನು ಬಯಸಿ ರೋದಿಸಿ, ವಿಲಪಿಸಿ ಸುದುಃಖಿತರಾಗಿ, ಹುಚ್ಚುಹಿಡಿದವರಂತಾಗಿ, ಮೂರ್ಛೆತಪ್ಪಿ ಭೂಮಿಯ ಮೇಲೆ ಬಿದ್ದರು.

07055034a ಸೋಪಚಾರಸ್ತು ಕೃಷ್ಣಸ್ತಾಂ ದುಃಖಿತಾಂ ಭೃಶದುಃಖಿತಃ|

07055034c ಸಿಕ್ತ್ವಾಂಭಸಾ ಸಮಾಶ್ವಾಸ್ಯ ತತ್ತದುಕ್ತ್ವಾ ಹಿತಂ ವಚಃ||

ಆಗ ತುಂಬಾ ದುಃಖಿತನಾದ ಕೃಷ್ಣನು ದುಃಖಿತಳಾದ ಅವಳನ್ನು ಉಪಚರಿಸಿ, ನೀರನ್ನು ಚುಮುಕಿಸಿ ಹಿತವಚನಗಳನ್ನು ಹೇಳಿ ಸಂತವಿಸಿದನು.

07055035a ವಿಸಂಜ್ಞಕಲ್ಪಾಂ ರುದತೀಮಪವಿದ್ಧಾಂ ಪ್ರವೇಪತೀಂ|

07055035c ಭಗಿನೀಂ ಪುಂಡರೀಕಾಕ್ಷ ಇದಂ ವಚನಮಬ್ರವೀತ್||

ಮೂರ್ಛಿತಳಾಗಿದ್ದಂತೆ ಅಳುತ್ತಿದ್ದ, ಮತ್ತು ತರತರನೆ ನಡುಗುತ್ತಿದ್ದ ಭಗಿನಿಗೆ ಪುಂಡರೀಕಾಕ್ಷನು ಈ ಮಾತನ್ನಾಡಿದನು:

07055036a ಸುಭದ್ರೇ ಮಾ ಶುಚಃ ಪುತ್ರಂ ಪಾಂಚಾಲ್ಯಾಶ್ವಾಸಯೋತ್ತರಾಂ|

07055036c ಗತೋಽಭಿಮನ್ಯುಃ ಪ್ರಥಿತಾಂ ಗತಿಂ ಕ್ಷತ್ರಿಯಪುಂಗವಃ||

“ಸುಭದ್ರೇ! ಮಗನ ಕುರಿತು ಶೋಕಿಸಬೇಡ!” ಪಾಂಚಾಲಿ ಮತ್ತು ಉತ್ತರೆಯನ್ನು ಸಂತವಿಸುತ್ತಾ ಹೇಳಿದನು: “ಅಭಿಮನ್ಯು ಕ್ಷತ್ರಿಯಪುಂಗವನು ಸರ್ವಶ್ರೇಷ್ಠ ಸದ್ಗತಿಯನ್ನು ಹೊಂದಿರುವನು.

07055037a ಯೇ ಚಾನ್ಯೇಽಪಿ ಕುಲೇ ಸಂತಿ ಪುರುಷಾ ನೋ ವರಾನನೇ|

07055037c ಸರ್ವೇ ತೇ ವೈ ಗತಿಂ ಯಾಂತು ಅಭಿಮನ್ಯೋರ್ಯಶಸ್ವಿನಃ||

ವರಾನನೇ! ನಮ್ಮ ಕುಲದಲ್ಲಿ ಇನ್ನು ಇತರ ಪುರುಷರು ಯಾರು ಇರುವರೋ ಅವರೆಲ್ಲರೂ ಯಶಸ್ವಿ ಅಭಿಮನ್ಯುವಿನ ಗತಿಯನ್ನೇ ಪಡೆಯುವಂಥವರಾಗಲಿ.

07055038a ಕುರ್ಯಾಮ ತದ್ವಯಂ ಕರ್ಮ ಕ್ರಿಯಾಸುಃ ಸುಹೃದಶ್ಚ ನಃ|

07055038c ಕೃತವಾನ್ಯಾದೃಗದ್ಯೈಕಸ್ತವ ಪುತ್ರೋ ಮಹಾರಥಃ||

ನಿನ್ನ ಮಹಾರಥ ಮಗನು ಏಕಾಂಗಿಯಾಗಿ ಇಂದು ಯಾವ ಪರಾಕ್ರಮವನ್ನು ಮಾಡಿ ತೋರಿಸಿದನೋ ಅದನ್ನು ನಾವೂ ಮತ್ತು ನಮ್ಮ ಸುಹೃದಯರೂ ಕಾರ್ಯರೂಪದಲ್ಲಿ ಮಾಡಿ ತೋರಿಸಬೇಕಾಗಿದೆ.”

07055039a ಏವಮಾಶ್ವಾಸ್ಯ ಭಗಿನೀಂ ದ್ರೌಪದೀಮಪಿ ಚೋತ್ತರಾಂ|

07055039c ಪಾರ್ಥಸ್ಯೈವ ಮಹಾಬಾಹುಃ ಪಾರ್ಶ್ವಮಾಗಾದರಿಂದಮಃ||

ಹೀಗೆ ತಂಗಿಯನ್ನೂ, ದ್ರೌಪದಿ-ಉತ್ತರೆಯರನ್ನೂ ಸಂತವಿಸಿ ಆ ಅರಿಂದಮ ಮಹಾಬಾಹುವು ಪಾರ್ಥನ ಬಳಿಗೇ ಬಂದನು.

07055040a ತತೋಽಭ್ಯನುಜ್ಞಾಯ ನೃಪಾನ್ ಕೃಷ್ಣೋ ಬಂಧೂಂಸ್ತಥಾಭಿಭೂಃ|

07055040c ವಿವೇಶಾಂತಃಪುರಂ ರಾಜಂಸ್ತೇಽನ್ಯೇ ಜಗ್ಮುರ್ಯಥಾಲಯಂ||

ರಾಜನ್! ಅನಂತರ ನೃಪರನ್ನೂ ಬಂಧುಗಳನ್ನೂ ಕಳುಹಿಸಿಕೊಟ್ಟು ಕೃಷ್ಣನು ಅಂತಃಪುರವನ್ನು ಪ್ರವೇಶಿಸಲು ಅನ್ಯರೂ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಸುಭದ್ರಾಪ್ರವಿಲಾಪೇ ಪಂಚಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಸುಭದ್ರಾವಿಲಾಪ ಎನ್ನುವ ಐವತ್ತೈದನೇ ಅಧ್ಯಾಯವು.

Image result for night against white background

Comments are closed.