Drona Parva: Chapter 47

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೭

ದ್ರೋಣನ ಸೂಚನೆಯಂತೆ ಷಣ್ಮಹಾರಥರು ಅಭಿಮನ್ಯುವಿನ ಧನುಸ್ಸನ್ನು ತುಂಡರಿಸಿ ವಿರಥನನ್ನಾಗಿಸಿದುದು (೧-೩೪). ಖಡ್ಗ-ಗುರಾಣಿಗಳನ್ನು ಹಿಡಿದು ಆಕಾಶವನ್ನೇರಿದ ಅಭಿಮನ್ಯುವಿನ ಆಯುಧಗಳನ್ನು ತುಂಡರಿಸಲು ಅವನು ಪುನಃ ಭೂಮಿಗಿಳಿದು ರಥಚಕ್ರವನ್ನು ಹಿಡಿದು ಪದಾತಿಯಾಗಿಯೇ ಯುದ್ಧವನ್ನು ಮುಂದುವರಿಸಿದುದು (೩೫-೪೦).

Image result for abhimanyu07047001 ಸಂಜಯ ಉವಾಚ|

07047001a ಸ ಕರ್ಣಂ ಕರ್ಣಿನಾ ಕರ್ಣೇ ಪುನರ್ವಿವ್ಯಾಧ ಫಾಲ್ಗುನಿಃ|

07047001c ಶರೈಃ ಪಂಚಾಶತಾ ಚೈನಮವಿಧ್ಯತ್ಕೋಪಯನ್ಭೃಶಂ||

ಸಂಜಯನು ಹೇಳಿದನು: “ಪುನಃ ಫಾಲ್ಗುನಿಯು ಕರ್ಣನ ಕಿವಿಗಳಿಗೆ ಡೊಂಕಾದ ಶರದಿಂದ ಹೊಡೆದನು. ಅವನು ಇನ್ನೂ ತುಂಬಾ ಕೋಪಗೊಂಡು ಐವತ್ತು ಶರಗಳಿಂದ ಅವನನ್ನು ಹೊಡೆದನು.

07047002a ಪ್ರತಿವಿವ್ಯಾಧ ರಾಧೇಯಸ್ತಾವದ್ಭಿರಥ ತಂ ಪುನಃ|

07047002c ಸ ತೈರಾಚಿತಸರ್ವಾಂಗೋ ಬಹ್ವಶೋಭತ ಭಾರತ||

ರಾಧೇಯನೂ ಅಷ್ಟೇ ಬಾಣಗಳಿಂದ ಅವನನ್ನು ಪ್ರಹರಿಸಿದನು. ಭಾರತ! ಸರ್ವಾಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅಭಿಮನ್ಯುವು ಆಗ ಬಹಳವಾಗಿ ಶೋಭಿಸಿದನು.

07047003a ಕರ್ಣಂ ಚಾಪ್ಯಕರೋತ್ಕ್ರುದ್ಧೋ ರುಧಿರೋತ್ಪೀಡವಾಹಿನಂ|

07047003c ಕರ್ಣೋಽಪಿ ವಿಬಭೌ ಶೂರಃ ಶರೈಶ್ಚಿತ್ರೋಽಸೃಗಾಪ್ಲುತಃ||

ಅವನೂ ಕೂಡ ಕ್ರುದ್ಧನಾಗಿ ಕರ್ಣನು ಗಾಯಗೊಂಡು ರಕ್ತವನ್ನು ಸುರಿಸುವಂತೆ ಮಾಡಿದನು. ಶೂರ ಕರ್ಣನೂ ಕೂಡ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಬಹಳವಾಗಿ ಶೋಭಿಸಿದನು.

07047004a ತಾವುಭೌ ಶರಚಿತ್ರಾಂಗೌ ರುಧಿರೇಣ ಸಮುಕ್ಷಿತೌ|

07047004c ಬಭೂವತುರ್ಮಹಾತ್ಮಾನೌ ಪುಷ್ಪಿತಾವಿವ ಕಿಂಶುಕ||

ಅವರಿಬ್ಬರು ಮಹಾತ್ಮರೂ ಶರಗಳಿಂದ ಚುಚ್ಚಲ್ಪಟ್ಟು, ರಕ್ತದಿಂದ ತೋಯ್ದು ಹೂಬಿಟ್ಟ ಮುತ್ತುಗದ ಮರಗಳಂತೆ ಕಂಡರು.

07047005a ಅಥ ಕರ್ಣಸ್ಯ ಸಚಿವಾನ್ಷಟ್ಶೂರಾಂಶ್ಚಿತ್ರಯೋಧಿನಃ|

07047005c ಸಾಶ್ವಸೂತಧ್ವಜರಥಾನ್ಸೌಭದ್ರೋ ನಿಜಘಾನ ಹ||

ಆಗ ಸೌಭದ್ರನು ಕರ್ಣನ ಶೂರರೂ ಚಿತ್ರಯೋಧಿಗಳೂ ಆದ ಆರು ಸಚಿರವರನ್ನು ಅವರ ಅಶ್ವ-ಸೂತ-ಧ್ವಜ-ರಥಗಳೊಂದಿಗೆ ಸಂಹರಿಸಿದನು.

07047006a ಅಥೇತರಾನ್ಮಹೇಷ್ವಾಸಾನ್ದಶಭಿರ್ದಶಭಿಃ ಶರೈಃ|

07047006c ಪ್ರತ್ಯವಿಧ್ಯದಸಂಭ್ರಾಂತಸ್ತದದ್ಭುತಮಿವಾಭವತ್||

ಮತ್ತೆ ಸಂಭ್ರಾಂತನಾಗದೇ ಇತರ ಮಹೇಷ್ವಾಸರನ್ನು ಹತ್ತು ಹತ್ತು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು.

07047007a ಮಾಗಧಸ್ಯ ಪುನಃ ಪುತ್ರಂ ಹತ್ವಾ ಷಡ್ಭಿರಜಿಹ್ಮಗೈಃ|

07047007c ಸಾಶ್ವಂ ಸಸೂತಂ ತರುಣಮಶ್ವಕೇತುಮಪಾತಯತ್||

ಪುನಃ ಅವನು ಆರು ಜಿಹ್ಮಗಗಳಿಂದ ಮಾಗಧನ ಮಗನನ್ನು ಹೊಡೆದು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಅಶ್ವಕೇತುವನ್ನು ಉರುಳಿಸಿದನು.

07047008a ಮಾರ್ತಿಕಾವತಕಂ ಭೋಜಂ ತತಃ ಕುಂಜರಕೇತನಂ|

07047008c ಕ್ಷುರಪ್ರೇಣ ಸಮುನ್ಮಥ್ಯ ನನಾದ ವಿಸೃಜಂ ಶರಾನ್||

ಅನಂತರ ಆನೆಯ ಧ್ವಜವನ್ನು ಹೊಂದಿದ್ದ ಮಾರ್ತಿಕಾವತದ ರಾಜ ಭೋಜನನ್ನು ಕ್ಷುರಪ್ರದಿಂದ ಸಂಹರಿಸಿ ಶರಗಳನ್ನು ಪ್ರಯೋಗಿಸುತ್ತಾ ಸಿಂಹನಾದಗೈದನು.

07047009a ತಸ್ಯ ದೌಃಶಾಸನಿರ್ವಿದ್ಧ್ವಾ ಚತುರ್ಭಿಶ್ಚತುರೋ ಹಯಾನ್|

07047009c ಸೂತಮೇಕೇನ ವಿವ್ಯಾಧ ದಶಭಿಶ್ಚಾರ್ಜುನಾತ್ಮಜಂ||

ದುಃಶಾಸನನ ಮಗನು ಅವನ ನಾಲ್ಕು ಕುದುರೆಗಳನ್ನು ನಾಲ್ಕರಿಂದ, ಸೂತನನ್ನು ಒಂದರಿಂದ ಮತ್ತು ಹತ್ತರಿಂದ ಅರ್ಜುನನ ಮಗನನ್ನು ಹೊಡೆದನು.

07047010a ತತೋ ದೌಃಶಾಸನಿಂ ಕಾರ್ಷ್ಣಿರ್ವಿದ್ಧ್ವಾ ಸಪ್ತಭಿರಾಶುಗೈಃ|

07047010c ಸಂರಂಭಾದ್ರಕ್ತನಯನೋ ವಾಕ್ಯಮುಚ್ಚೈರಥಾಬ್ರವೀತ್||

ಆಗ ಕಾರ್ಷ್ಣಿಯು ದೌಃಶಾಸನಿಯನ್ನು ಏಳು ಆಶುಗಗಳಿಂದ ಹೊಡೆದು ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಜೋರಾಗಿ ಕೂಗಿ ಹೇಳಿದನು:

07047011a ಪಿತಾ ತವಾಹವಂ ತ್ಯಕ್ತ್ವಾ ಗತಃ ಕಾಪುರುಷೋ ಯಥಾ|

07047011c ದಿಷ್ಟ್ಯಾ ತ್ವಮಪಿ ಜಾನೀಷೇ ಯೋದ್ಧುಂ ನ ತ್ವದ್ಯ ಮೋಕ್ಷ್ಯಸೇ||

“ನಿನ್ನ ತಂದೆಯು ಹೇಡಿಯಂತೆ ಹೇಗೆ ಯುದ್ಧವನ್ನು ಬಿಟ್ಟು ಹೋದನೋ ಹಾಗೆ ನೀನೂ ಸಹ ಯುದ್ಧಮಾಡಲು ಕಲಿತಿರುವೆಯಲ್ಲವೇ? ಆದರೆ ಇಂದು ನಿನ್ನನ್ನು ಜೀವಸಹಿತವಾಗಿ ಬಿಡುವುದಿಲ್ಲ!”

07047012a ಏತಾವದುಕ್ತ್ವಾ ವಚನಂ ಕರ್ಮಾರಪರಿಮಾರ್ಜಿತಂ|

07047012c ನಾರಾಚಂ ವಿಸಸರ್ಜಾಸ್ಮೈ ತಂ ದ್ರೌಣಿಸ್ತ್ರಿಭಿರಾಚ್ಚಿನತ್||

ಹೀಗೆ ಹೇಳಿ ಅವನು ಕಮ್ಮಾರನಿಂದ ಪರಿಷ್ಕೃತ ನಾರಾಚವನ್ನು ಅವನ ಮೇಲೆ ಪ್ರಯೋಗಿಸಲು ದ್ರೌಣಿಯು ಅದನ್ನು ಮೂರು ಬಾಣಗಳಿಂದ ಕತ್ತರಿಸಿದನು.

07047013a ತಸ್ಯಾರ್ಜುನಿರ್ಧ್ವಜಂ ಚಿತ್ತ್ವಾ ಶಲ್ಯಂ ತ್ರಿಭಿರತಾಡಯತ್|

07047013c ತಂ ಶಲ್ಯೋ ನವಭಿರ್ಬಾಣೈರ್ಗಾರ್ಧ್ರಪತ್ರೈರತಾಡಯತ್||

ಆರ್ಜುನಿಯು ಅವನ ಧ್ವಜವನ್ನು ಕತ್ತರಿಸಿ ಮೂರರಿಂದ ಶಲ್ಯನನ್ನು ಹೊಡೆದನು. ಅವನನ್ನು ಶಲ್ಯನು ಒಂಭತ್ತು ಹದ್ದಿನ ಗರಿಗಳನ್ನುಳ್ಳ ಶರಗಳಿಂದ ಹೊಡೆದನು.

07047014a ತಸ್ಯಾರ್ಜುನಿರ್ಧ್ವಜಂ ಚಿತ್ತ್ವಾ ಉಭೌ ಚ ಪಾರ್ಷ್ಣಿಸಾರಥೀ|

07047014c ತಂ ವಿವ್ಯಾಧಾಯಸೈಃ ಷಡ್ಭಿಃ ಸೋಽಪಕ್ರಾಮದ್ರಥಾಂತರಂ||

ಆರ್ಜುನಿಯು ಅವನ ಧ್ವಜವನ್ನು ತುಂಡರಿಸಿ, ಪಾರ್ಶ್ವರಕ್ಷಕರಿಬ್ಬರನ್ನೂ ಸಂಹರಿಸಿ, ಆರು ಲೋಹಮಯ ಬಾಣಗಳಿಂದ ಶಲ್ಯನನ್ನು ಪ್ರಹರಿಸಿದನು. ಅವನು ಬೇರೆಯೇ ರಥವನ್ನೇರಿದನು.

07047015a ಶತ್ರುಂಜಯಂ ಚಂದ್ರಕೇತುಂ ಮೇಘವೇಗಂ ಸುವರ್ಚಸಂ|

07047015c ಸೂರ್ಯಭಾಸಂ ಚ ಪಂಚೈತಾನ್ ಹತ್ವಾ ವಿವ್ಯಾಧ ಸೌಬಲಂ||

ಅನಂತರ ಶತ್ರುಂಜಯ, ಚಂದ್ರಕೇತು, ಮೇಘವೇಗ, ಸುವರ್ಚಸ ಮತ್ತು ಸೌರ್ಯಭಾಸ ಈ ಐವರನ್ನು ಸಂಹರಿಸಿ, ಸೌಬಲನನ್ನು ಹೊಡೆದನು.

07047016a ತಂ ಸೌಬಲಸ್ತ್ರಿಭಿರ್ವಿದ್ಧ್ವಾ ದುರ್ಯೋಧನಮಥಾಬ್ರವೀತ್|

07047016c ಸರ್ವ ಏನಂ ಪ್ರಮಥ್ನೀಮಃ ಪುರೈಕೈಕಂ ಹಿನಸ್ತಿ ನಃ||

ಸೌಬಲನು ಅವನನ್ನು ಮೂರು ಬಾಣಗಳಿಂದ ಹೊಡೆದು ದುರ್ಯೋಧನನಿಗೆ ಹೇಳಿದನು: “ಇವನು ನಮ್ಮಲ್ಲಿ ಒಬ್ಬೊಬ್ಬರನ್ನೇ ಆರಿಸಿಕೊಂಡು ಸಂಹರಿಸುವ ಮೊದಲು ನಾವೆಲ್ಲರೂ ಒಟ್ಟಾಗಿ ಸೇರಿ ಇವನನ್ನು ಸಂಹರಿಸೋಣ!”

07047017a ಅಥಾಬ್ರವೀತ್ತದಾ ದ್ರೋಣಂ ಕರ್ಣೋ ವೈಕರ್ತನೋ ವೃಷಾ|

07047017c ಪುರಾ ಸರ್ವಾನ್ಪ್ರಮಥ್ನಾತಿ ಬ್ರೂಹ್ಯಸ್ಯ ವಧಮಾಶು ನಃ||

ಆಗ ವೈಕರ್ತನ ಕರ್ಣನೂ ಕೂಡ ದ್ರೋಣನೊಡನೆ ಇದರ ಕುರಿತೇ ಕೇಳಿದನು: “ಇವನು ಸರ್ವರನ್ನೂ ಕೊಲ್ಲುವ ಮೊದಲೇ ಇವನನ್ನು ವಧಿಸುವ ಉಪಾಯವನ್ನು ಹೇಳಿ.”

07047018a ತತೋ ದ್ರೋಣೋ ಮಹೇಷ್ವಾಸಃ ಸರ್ವಾಂಸ್ತಾನ್ಪ್ರತ್ಯಭಾಷತ|

07047018c ಅಸ್ತಿ ವೋಽಸ್ಯಾಂತರಂ ಕಶ್ಚಿತ್ಕುಮಾರಸ್ಯ ಪ್ರಪಶ್ಯತಿ||

ಆಗ ಮಹೇಷ್ವಾಸ ದ್ರೋಣನು ಅವರೆಲ್ಲರಿಗೆ ಉತ್ತರಿಸಿದನು: “ಕುಮಾರನಲ್ಲಿ ಯಾವುದೇ ರೀತಿಯ ಸ್ವಲ್ಪ ದೋಷವೂ ಇಲ್ಲದಿರುವುದನ್ನು ನೀವು ನೋಡಿದಿರಿ.

07047019a ಅನ್ವಸ್ಯ ಪಿತರಂ ಹ್ಯದ್ಯ ಚರತಃ ಸರ್ವತೋದಿಶಂ|

07047019c ಶೀಘ್ರತಾಂ ನರಸಿಂಹಸ್ಯ ಪಾಂಡವೇಯಸ್ಯ ಪಶ್ಯತ||

ತನ್ನ ತಂದೆಯಂತೆ ಇಂದು ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿರುವ ಈ ಪಾಂಡವೇಯ ನರಸಿಂಹನ ಶೀಘ್ರತೆಯನ್ನು ನೋಡಿರಿ.

07047020a ಧನುರ್ಮಂಡಲಮೇವಾಸ್ಯ ರಥಮಾರ್ಗೇಷು ದೃಶ್ಯತೇ|

07047020c ಸಂದಧಾನಸ್ಯ ವಿಶಿಖಾಂ ಶೀಘ್ರಂ ಚೈವ ವಿಮುಂಚತಃ||

ರಥಮಾರ್ಗಗಳಲ್ಲಿ ಇವನ ಧನುರ್ಮಂಡಲವೇ ಕಾಣುತ್ತದೆ. ಇವನು ಶೀಘ್ರವಾಗಿ ವಿಶಿಖೆಗಳನ್ನು ಸಂಧಾನಮಾಡುತ್ತಾನೆ ಮತ್ತು ಬಿಡುತ್ತಾನೆ ಕೂಡ!

07047021a ಆರುಜನ್ನಿವ ಮೇ ಪ್ರಾಣಾನ್ಮೋಹಯನ್ನಪಿ ಸಾಯಕೈಃ|

07047021c ಪ್ರಹರ್ಷಯತಿ ಮಾ ಭೂಯಃ ಸೌಭದ್ರಃ ಪರವೀರಹಾ||

ಸಾಯಕಗಳಿಂದ ನನ್ನ ಪ್ರಾಣಗಳನ್ನು ಸಂಕಟಗೊಳಿಸಿ ಮೋಹಿತನನ್ನಾಗಿಸುತ್ತಿದ್ದರೂ ಪರವೀರಹ ಸೌಭದ್ರನು ಬಾರಿ ಬಾರಿಗೂ ನನಗೆ ಹರ್ಷವನ್ನು ನೀಡುತ್ತಿದ್ದಾನೆ.

07047022a ಅತಿ ಮಾ ನಂದಯತ್ಯೇಷ ಸೌಭದ್ರೋ ವಿಚರನ್ರಣೇ|

07047022c ಅಂತರಂ ಯಸ್ಯ ಸಂರಬ್ಧಾ ನ ಪಶ್ಯಂತಿ ಮಹಾರಥಾಃ||

ರಣದಲ್ಲಿ ಸಂಚರಿಸುತ್ತಿರುವ ಈ ಸೌಭದ್ರನು ನನಗೆ ಅತಿಯಾದ ಆನಂದವನ್ನು ನೀಡುತ್ತಿದ್ದಾನೆ. ಇವನಿಂದ ಗಾಯಗೊಂಡ ಮಹಾರಥರೂ ಕೂಡ ಇವನಲ್ಲಿ ದೋಷವನ್ನು ಕಾಣುವುದಿಲ್ಲ.

07047023a ಅಸ್ಯತೋ ಲಘುಹಸ್ತಸ್ಯ ದಿಶಃ ಸರ್ವಾ ಮಹೇಷುಭಿಃ|

07047023c ನ ವಿಶೇಷಂ ಪ್ರಪಶ್ಯಾಮಿ ರಣೇ ಗಾಂಡೀವಧನ್ವನಃ||

ರಣದಲ್ಲಿ ಹಸ್ತ ಲಾಘವದಿಂದ ಎಲ್ಲ ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚುತ್ತಿರುವ ಇವನು ಮತ್ತು ಗಾಂಡೀವಧನ್ವಿಯ ನಡುವೆ ಯಾವ ವ್ಯತ್ಯಾಸವನ್ನೂ ನಾನು ಕಾಣತ್ತಿಲ್ಲ!”

07047024a ಅಥ ಕರ್ಣಃ ಪುನರ್ದ್ರೋಣಮಾಹಾರ್ಜುನಿಶರಾರ್ದಿತಃ|

07047024c ಸ್ಥಾತವ್ಯಮಿತಿ ತಿಷ್ಠಾಮಿ ಪೀಡ್ಯಮಾನೋಽಭಿಮನ್ಯುನಾ||

ಆಗ ಆರ್ಜುನಿಯ ಶರಗಳಿಂದ ಪೀಡಿತನಾಗುತ್ತಿದ್ದ ಕರ್ಣನು ಪುನಃ ದ್ರೋಣನಿಗೆ ಹೇಳಿದನು: “ಅಭಿಮನ್ಯುವಿನಿಂದ ಪೀಡಿತನಾಗಿದ್ದರೂ ಓಡಿಹೋಗಬಾರದೆಂದು ನಿಂತಿದ್ದೇನೆ.

07047025a ತೇಜಸ್ವಿನಃ ಕುಮಾರಸ್ಯ ಶರಾಃ ಪರಮದಾರುಣಾಃ|

07047025c ಕ್ಷಿಣ್ವಂತಿ ಹೃದಯಂ ಮೇಽದ್ಯ ಘೋರಾಃ ಪಾವಕತೇಜಸಃ||

ಈ ತೇಜಸ್ವೀ ಕುಮಾರನ ಪರಮದಾರುಣ ಘೋರ ಪಾವಕನ ತೇಜಸ್ಸುಳ್ಳ ಶರಗಳು ಇಂದು ನನ್ನ ಹೃದಯವನ್ನು ಸೀಳುತ್ತಿವೆ.”

07047026a ತಮಾಚಾರ್ಯೋಽಬ್ರವೀತ್ಕರ್ಣಂ ಶನಕೈಃ ಪ್ರಹಸನ್ನಿವ|

07047026c ಅಭೇದ್ಯಮಸ್ಯ ಕವಚಂ ಯುವಾ ಚಾಶುಪರಾಕ್ರಮಃ||

ಕರ್ಣನಿಗೆ ಆಚಾರ್ಯನು ನಗುತ್ತಿರುವಂತೆ ಮೆಲ್ಲಗೆ ಹೇಳಿದನು: “ಇವನ ಕವಚವು ಅಭೇದ್ಯವಾದುದು. ಇವನಿನ್ನೂ ಯುವಕ. ತನ್ನ ಪರಾಕ್ರಮವನ್ನು ಬಹುಬೇಗ ಪ್ರಕಟಿಸುವ ಸಾಮರ್ಥ್ಯವುಳ್ಳವನು.

07047027a ಉಪದಿಷ್ಟಾ ಮಯಾ ಅಸ್ಯ ಪಿತುಃ ಕವಚಧಾರಣಾ|

07047027c ತಾಮೇಷ ನಿಖಿಲಾಂ ವೇತ್ತಿ ಧ್ರುವಂ ಪರಪುರಂಜಯಃ||

ಇವನ ತಂದೆಗೆ ನಾನು ಕವಚಧಾರಣವಿಧಿಯನ್ನು ಹೇಳಿಕೊಟ್ಟಿದ್ದೆನು. ಅದನ್ನೇ ಸಂಪೂರ್ಣವಾಗಿ ಈ ಪರಪುರಂಜಯನು ತಿಳಿದುಕೊಂಡಿದ್ದಾನೆ ಎನ್ನುವುದು ಸತ್ಯ.

07047028a ಶಕ್ಯಂ ತ್ವಸ್ಯ ಧನುಶ್ಚೇತ್ತುಂ ಜ್ಯಾಂ ಚ ಬಾಣೈಃ ಸಮಾಹಿತೈಃ|

07047028c ಅಭೀಶವೋ ಹಯಾಶ್ಚೈವ ತಥೋಭೌ ಪಾರ್ಷ್ಣಿಸಾರಥೀ||

ಆದರೆ ಏಕಾಗ್ರಚಿತ್ತವುಳ್ಳವರು ಇವನ ಧನುಸ್ಸನ್ನೂ ಶಿಂಜಿನಿಯನ್ನೂ ಬಾಣಗಳಿಂದ ಕತ್ತರಿಸಲು ಸಾಧ್ಯವಿದೆ. ಅನಂತರ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿ ಅವುಗಳನ್ನೂ ಪಾರ್ಶ್ವಸಾರಥಿಗಳನ್ನೂ ಸಂಹರಿಸಬಹುದು.

07047029a ಏತತ್ಕುರು ಮಹೇಷ್ವಾಸ ರಾಧೇಯ ಯದಿ ಶಕ್ಯತೇ|

07047029c ಅಥೈನಂ ವಿಮುಖೀಕೃತ್ಯ ಪಶ್ಚಾತ್ಪ್ರಹರಣಂ ಕುರು||

ಮಹೇಷ್ವಾಸ! ರಾಧೇಯ! ಸಧ್ಯವಾದರೆ ಇದನ್ನು ಮಾಡು! ಹೀಗೆ ಇವನನ್ನು ವಿಮುಖನಾಗುವಂತೆ ಮಾಡಿ ನಂತರ ಅವನ ಮೇಲೆ ಪ್ರಹರಣ ಮಾಡು.

07047030a ಸಧನುಷ್ಕೋ ನ ಶಕ್ಯೋಽಯಮಪಿ ಜೇತುಂ ಸುರಾಸುರೈಃ|

07047030c ವಿರಥಂ ವಿಧನುಷ್ಕಂ ಚ ಕುರುಷ್ವೈನಂ ಯದೀಚ್ಚಸಿ||

ಧನುಸ್ಸಿನೊಂದಿರುವ ಇವನನ್ನು ಗೆಲ್ಲಲು ಸುರಾಸುರರಿಗೂ ಶಕ್ಯವಿಲ್ಲ. ಆದುದರಿಂದ ಇಚ್ಛಿಸುವೆಯಾದರೆ ಇವನನ್ನು ವಿರಥನನ್ನಾಗಿಯೂ ಧನುಸ್ಸು ಇಲ್ಲದವನನ್ನಾಗಿಯೂ ಮಾಡು!”

07047031a ತದಾಚಾರ್ಯವಚಃ ಶ್ರುತ್ವಾ ಕರ್ಣೋ ವೈಕರ್ತನಸ್ತ್ವರನ್|

07047031c ಅಸ್ಯತೋ ಲಘುಹಸ್ತಸ್ಯ ಪೃಷತ್ಕೈರ್ಧನುರಾಚ್ಚಿನತ್||

ಆಚಾರ್ಯನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ತ್ವರೆಮಾಡಿ ಶೀಘ್ರ ಬಾಣಗಳಿಂದ ಆ ಲಘುಹಸ್ತನ ಧನುಸ್ಸನ್ನು ಕತ್ತರಿಸಿದನು.

07047032a ಅಶ್ವಾನಸ್ಯಾವಧೀದ್ಭೋಜೋ ಗೌತಮಃ ಪಾರ್ಷ್ಣಿಸಾರಥೀ|

07047032c ಶೇಷಾಸ್ತು ಚಿನ್ನಧನ್ವಾನಂ ಶರವರ್ಷೈರವಾಕಿರನ್||

ಆಗ ಭೋಜ ಕೃತವರ್ಮನು ಅವನ ಕುದುರೆಗಳನ್ನೂ, ಗೌತಮನು ಪಾರ್ಶ್ವಸಾರಥಿಗಳನ್ನು ಸಂಹರಿಸಿದರು. ಉಳಿದವರು ಧನುಸ್ಸನ್ನು ಕಳೆದುಕೊಂಡಿದ್ದ ಅವನನ್ನು ಶರವರ್ಷಗಳಿಂದ ಮುಚ್ಚಿದರು.

07047033a ತ್ವರಮಾಣಾಸ್ತ್ವರಾಕಾಲೇ ವಿರಥಂ ಷಣ್ಮಹಾರಥಾಃ|

07047033c ಶರವರ್ಷೈರಕರುಣಾ ಬಾಲಮೇಕಮವಾಕಿರನ್||

ಅವಸರ ಮಾಡಬೇಕಾಗಿದ್ದ ಆ ಸಮಯದಲ್ಲಿ ಷಣ್ಮಹಾರಥರು ತ್ವರೆಮಾಡಿ ವಿರಥನಾಗಿದ್ದ ಏಕಾಕಿಯಾಗಿದ್ದ ಬಾಲಕನನ್ನು ನಿಷ್ಕರುಣೆಯಿಂದ ಶರವರ್ಷಗಳಿಂದ ಮುಚ್ಚಿಬಿಟ್ಟರು.

07047034a ಸ ಚಿನ್ನಧನ್ವಾ ವಿರಥಃ ಸ್ವಧರ್ಮಮನುಪಾಲಯನ್|

07047034c ಖಡ್ಗಚರ್ಮಧರಃ ಶ್ರೀಮಾನುತ್ಪಪಾತ ವಿಹಾಯಸಂ||

ಆ ಚಿನ್ನಧನ್ವಿ ವಿರಥ ಶ್ರೀಮಾನನು ಸ್ವಧರ್ಮವನ್ನು ಅನುಸರಿಸಿ ಖಡ್ಗ-ಗುರಾಣಿಗಳನ್ನು ಹಿಡಿದು ಆಕಾಶಕ್ಕೆ ಹಾರಿದನು.

07047035a ಮಾರ್ಗೈಃ ಸ ಕೈಶಿಕಾದ್ಯೈಶ್ಚ ಲಾಘವೇನ ಬಲೇನ ಚ|

07047035c ಆರ್ಜುನಿರ್ವ್ಯಚರದ್ವ್ಯೋಮ್ನಿ ಭೃಶಂ ವೈ ಪಕ್ಷಿರಾಡಿವ||

ಕೈಶಿಕಾದಿ ಮಾರ್ಗಗಳಿಂದಲೂ ಲಘುತ್ವ ಮತ್ತು ಬಲದಿಂದ ಆರ್ಜುನಿಯು ಪಕ್ಷಿಯಂತೆ ಆಕಾಶದಲ್ಲಿ ಚೆನ್ನಾಗಿ ಸಂಚರಿಸಬಲ್ಲವನಾಗಿದ್ದನು.

07047036a ಮಯ್ಯೇವ ನಿಪತತ್ಯೇಷ ಸಾಸಿರಿತ್ಯೂರ್ಧ್ವದೃಷ್ಟಯಃ|

07047036c ವಿವ್ಯಧುಸ್ತಂ ಮಹೇಷ್ವಾಸಾಃ ಸಮರೇ ಚಿದ್ರದರ್ಶಿನಃ||

ಖಡ್ಗವನ್ನು ಹಿಡಿದಿರುವ ಅವನು ನನ್ನ ಮೇಲೆಯೇ ಬೀಳುತ್ತಾನೆ ಎಂದು ಸಮರದಲ್ಲಿ ಮಹೇಷ್ವಾಸರು ಭಾವಿಸಿಕೊಂಡು ಮೇಲೆ ನೋಡುತ್ತಿದ್ದರು.

07047037a ತಸ್ಯ ದ್ರೋಣೋಽಚ್ಚಿನನ್ಮುಷ್ಟೌ ಖಡ್ಗಂ ಮಣಿಮಯತ್ಸರುಂ|

07047037c ರಾಧೇಯೋ ನಿಶಿತೈರ್ಬಾಣೈರ್ವ್ಯಧಮಚ್ಚರ್ಮ ಚೋತ್ತಮಂ||

ದ್ರೋಣನು ಅವನ ಮುಷ್ಟಿಯಲ್ಲಿದ್ದ ಮಣಿಮಯ ಹಿಡಿಯಿದ್ದ ಖಡ್ಗವನ್ನು ಕತ್ತರಿಸಿದನು. ರಾಧೇಯನು ನಿಶಿತ ಬಾಣಗಳಿಂದ ಅವನ ಉತ್ತಮ ಗುರಾಣಿಯನ್ನು ಸೀಳಿದನು.

07047038a ವ್ಯಸಿಚರ್ಮೇಷುಪೂರ್ಣಾಂಗಃ ಸೋಽಂತರಿಕ್ಷಾತ್ಪುನಃ ಕ್ಷಿತಿಂ|

07047038c ಆಸ್ಥಿತಶ್ಚಕ್ರಮುದ್ಯಮ್ಯ ದ್ರೋಣಂ ಕ್ರುದ್ಧೋಽಭ್ಯಧಾವತ||

ಖಡ್ಗ-ಗುರಾಣಿಗಳನ್ನು ಕಳೆದುಕೊಂಡು, ಸಂಪೂರ್ಣ ಅಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅವನು ಪುನಃ ಭೂಮಿಗಿಳಿದನು. ಅಲ್ಲಿದ್ದ ಚಕ್ರವನ್ನೇ ಹಿಡಿದು ಕ್ರುದ್ಧನಾಗಿ ದ್ರೋಣನ ಕಡೆ ಧಾವಿಸಿದನು.

07047039a ಸ ಚಕ್ರರೇಣೂಜ್ಜ್ವಲಶೋಭಿತಾಂಗೋ

         ಬಭಾವತೀವೋನ್ನತಚಕ್ರಪಾಣಿಃ|

07047039c ರಣೇಽಭಿಮನ್ಯುಃ ಕ್ಷಣದಾಸುಭದ್ರಃ

         ಸ ವಾಸುಭದ್ರಾನುಕೃತಿಂ ಪ್ರಕುರ್ವನ್||

ಆಗ ಚಕ್ರದ ಧೂಳು ಮತ್ತು ಕಾಂತಿಯಿಂದ ಶೋಭಿತಾಂಗನಾಗಿದ್ದ ಅವನು ಚಕ್ರವನ್ನು ಎತ್ತಿ ಹಿಡಿತು ಅತೀವವಾಗಿ ಪ್ರಕಾಶಿಸುತ್ತಿದ್ದನು. ರಣದಲ್ಲಿ ವಾಸುದೇವನ ನಡುಗೆಯನ್ನೇ ಅನುಕರಿಸುತ್ತಿದ್ದ ಅಭಿಮನ್ಯುವು ಒಂದು ಕ್ಷಣ ಘೋರನಾಗಿ ಕಂಡನು.

07047040a ಸ್ರುತರುಧಿರಕೃತೈಕರಾಗವಕ್ತ್ರೋ

         ಭ್ರುಕುಟಿಪುಟಾಕುಟಿಲೋಽತಿಸಿಂಹನಾದಃ|

07047040c ಪ್ರಭುರಮಿತಬಲೋ ರಣೇಽಭಿಮನ್ಯುರ್

         ನೃಪವರಮಧ್ಯಗತೋ ಭೃಶಂ ವ್ಯರಾಜತ್||

ಸುರಿಯುತ್ತಿದ್ದ ರಕ್ತದಿಂದ ಅವನ ವಸ್ತ್ರಗಳು ಕೆಂಪಾಗಿದ್ದವು. ಗಂಟಿಕ್ಕಿಕೊಂಡಿದ್ದ ಅವನ ಹುಬ್ಬುಗಳ ಮಧ್ಯವು ಸ್ಪಷ್ಟವಾಗಿ ಕಾಣುತ್ತಿರಲು ಅವನು ಸಿಂಹನಾದಗೈದನು. ರಣದಲ್ಲಿ ನೃಪವರರ ಮಧ್ಯದಲ್ಲಿ ಆ ಪ್ರಭು, ಅಮಿತ ಬಲಶಾಲಿ, ಅಭಿಮನ್ಯುವು ತುಂಬಾ ವಿರಾಜಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುವಿರಥಕರಣೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುವಿರಥಕರಣ ಎನ್ನುವ ನಲ್ವತ್ತೇಳನೇ ಅಧ್ಯಾಯವು.

Image result for trees against white background

Comments are closed.