Drona Parva: Chapter 28

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೮

ಭಗದತ್ತವಧೆ (೧-೪೪).

Image result for bhagadatta vadha07028001 ಧೃತರಾಷ್ಟ್ರ ಉವಾಚ|

07028001a ತಥಾ ಕ್ರುದ್ಧಃ ಕಿಮಕರೋದ್ಭಗದತ್ತಸ್ಯ ಪಾಂಡವಃ|

07028001c ಪ್ರಾಗ್ಜ್ಯೋತಿಷೋ ವಾ ಪಾರ್ಥಸ್ಯ ತನ್ಮೇ ಶಂಸ ಯಥಾತಥಂ||

ಧೃತರಾಷ್ಟ್ರನು ಹೇಳಿದನು: “ಆಗ ಕ್ರುದ್ಧ ಪಾಂಡವನು ಭಗದತ್ತನಿಗೆ ಏನು ಮಾಡಿದನು? ಅಥವಾ ಪ್ರಾಗ್ಜ್ಯೋತಿಷನು ಪಾರ್ಥನಿಗೆ ಏನು ಮಾಡಿದನು? ಅದನ್ನು ನನಗೆ ನಡೆದಹಾಗೆ ಹೇಳು.”

07028002 ಸಂಜಯ ಉವಾಚ|

07028002a ಪ್ರಾಗ್ಜ್ಯೋತಿಷೇಣ ಸಂಸಕ್ತಾವುಭೌ ದಾಶಾರ್ಹಪಾಂಡವೌ|

07028002c ಮೃತ್ಯೋರಿವಾಂತಿಕಂ ಪ್ರಾಪ್ತೌ ಸರ್ವಭೂತಾನಿ ಮೇನಿರೇ||

ಸಂಜಯನು ಹೇಳಿದನು: “ಪ್ರಾಗ್ಜ್ಯೋತಿಷನೊಡನೆ ಯುದ್ಧಮಾಡುತ್ತಿದ್ದ ದಾಶಾರ್ಹ-ಪಾಂಡವರಿಬ್ಬರೂ ಮೃತ್ಯುವಿನ ಬಳಿ ಹೋಗುತ್ತಿದ್ದಾರೆಂದು ಸರ್ವ ಭೂತಗಳೂ ಅಂದುಕೊಂಡವು.

07028003a ತಥಾ ಹಿ ಶರವರ್ಷಾಣಿ ಪಾತಯತ್ಯನಿಶಂ ಪ್ರಭೋ|

07028003c ಭಗದತ್ತೋ ಗಜಸ್ಕಂಧಾತ್ಕೃಷ್ಣಯೋಃ ಸ್ಯಂದನಸ್ಥಯೋಃ||

ಹಾಗೆಯೇ ಪ್ರಭು ಭಗದತ್ತನು ಆನೆಯ ಭುಜದ ಮೇಲಿಂದ ರಥದಲ್ಲಿ ಕುಳಿತಿದ್ದ ಇಬ್ಬರು ಕೃಷ್ಣರ ಮೇಲೂ ತಡೆಯಿಲ್ಲದೇ ಶರವರ್ಷವನ್ನು ಸುರಿಸಿದನು.

07028004a ಅಥ ಕಾರ್ಷ್ಣಾಯಸೈರ್ಬಾಣೈಃ ಪೂರ್ಣಕಾರ್ಮುಕನಿಃಸೃತೈಃ|

07028004c ಅವಿಧ್ಯದ್ದೇವಕೀಪುತ್ರಂ ಹೇಮಪುಂಖೈಃ ಶಿಲಾಶಿತೈಃ||

ಆಗ ಕಪ್ಪು ಉಕ್ಕಿನ ಹೇಮಪುಂಖದ ಶಿಲಾಶಿತ ಬಾಣವನ್ನು ಹೂಡಿ ಬಿಲ್ಲನ್ನು ಅಕರ್ಣಾಂತವಾಗಿ ಎಳೆದು ದೇವಕೀಪುತ್ರನನ್ನು ಹೊಡೆದನು.

07028005a ಅಗ್ನಿಸ್ಪರ್ಶಸಮಾಸ್ತೀಕ್ಷ್ಣಾ ಭಗದತ್ತೇನ ಚೋದಿತಾಃ|

07028005c ನಿರ್ಭಿದ್ಯ ದೇವಕೀಪುತ್ರಂ ಕ್ಷಿತಿಂ ಜಗ್ಮುಃ ಶರಾಸ್ತತಃ||

ಭಗದತ್ತನು ಪ್ರಯೋಗಿಸಿದ, ಮುಟ್ಟಲು ಅಗ್ನಿಯಂತೆ ತೀಕ್ಷ್ಣವಾಗಿದ್ದ ಆ ಬಾಣವು ದೇವಕೀಪುತ್ರನನ್ನು ಬೇಧಿಸಿ ಭೂಮಿಯನ್ನು ಪ್ರವೇಶಿಸಿತು.

07028006a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಶರಾವಾಪಂ ನಿಹತ್ಯ ಚ|

07028006c ಲಾಡಯನ್ನಿವ ರಾಜಾನಂ ಭಗದತ್ತಮಯೋಧಯತ್||

ಆಗ ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ, ಅಂಗರಕ್ಷಕರನ್ನೂ ಸಂಹರಿಸಿ, ರಾಜಾ ಭಗದತ್ತನನ್ನು ಅಣಗಿಸುವ ರೀತಿಯಲ್ಲಿ ಹೊಡೆದನು.

07028007a ಸೋಽರ್ಕರಶ್ಮಿನಿಭಾಂಸ್ತೀಕ್ಷ್ಣಾಂಸ್ತೋಮರಾನ್ವೈ ಚತುರ್ದಶ|

07028007c ಪ್ರೇರಯತ್ಸವ್ಯಸಾಚೀ ತಾಂಸ್ತ್ರಿಧೈಕೈಕಮಥಾಚ್ಚಿನತ್||

ಅನಂತರ ಅವನು ಹದಿನಾಲ್ಕು ತೀಕ್ಷ್ಣ ಸೂರ್ಯನ ರಶ್ಮಿಗಳಂತಹ ತೋಮರಗಳನ್ನು ಪ್ರಯೋಗಿಸಲು, ಸವ್ಯಸಾಚಿಯು ಆ ಒಂದೊಂದನ್ನೂ ಎರೆಡೆರೆಡನ್ನಾಗಿ ಮಾಡಿ ಕತ್ತರಿಸಿದನು.

07028008a ತತೋ ನಾಗಸ್ಯ ತದ್ವರ್ಮ ವ್ಯಧಮತ್ಪಾಕಶಾಸನಿಃ|

07028008c ಶರಜಾಲೇನ ಸ ಬಭೌ ವ್ಯಭ್ರಃ ಪರ್ವತರಾಡಿವ||

ಆಗ ಪಾಕಶಾಸನಿಯು ಶರಜಾಲದಿಂದ ಆನೆಯ ಕವಚವನ್ನು ಬೇಧಿಸಿದನು. ಅದು ಮೋಡಗಳಿಲ್ಲದ ಪರ್ವತದಂತೆ ಕಂಡಿತು.

07028009a ತತಃ ಪ್ರಾಗ್ಜ್ಯೋತಿಷಃ ಶಕ್ತಿಂ ಹೇಮದಂಡಾಮಯಸ್ಮಯೀಂ|

07028009c ವ್ಯಸೃಜದ್ವಾಸುದೇವಾಯ ದ್ವಿಧಾ ತಾಮರ್ಜುನೋಽಚ್ಚಿನತ್||

ಆಗ ಪ್ರಾಗ್ಜ್ಯೋತಿಷನು ಉಕ್ಕಿನಿಂದ ರಚಿತವಾದ ಹೇಮದಂಡದ ಶಕ್ತಿಯನ್ನು ವಾಸುದೇವನ ಮೇಲೆ ಎಸೆಯಲು ಅರ್ಜುನನು ಅದನ್ನು ಎರಡಾಗಿ ತುಂಡರಿಸಿದನು.

07028010a ತತಶ್ಚತ್ರಂ ಧ್ವಜಂ ಚೈವ ಚಿತ್ತ್ವಾ ರಾಜ್ಞೋಽರ್ಜುನಃ ಶರೈಃ|

07028010c ವಿವ್ಯಾಧ ದಶಭಿಸ್ತೂರ್ಣಮುತ್ಸ್ಮಯನ್ಪರ್ವತಾಧಿಪಂ||

ಆಗ ಅರ್ಜುನನು ಶರಗಳಿಂದ ರಾಜನ ಚತ್ರ-ಧ್ವಜಗಳನ್ನು ಕತ್ತರಿಸಿ, ತಕ್ಷಣವೇ ನಸುನಗುತ್ತಾ ಹತ್ತು ಬಾಣಗಳಿಂದ ಪರ್ವತಾಧಿಪನನ್ನು ಗಾಯಗೊಳಿಸಿದನು.

07028011a ಸೋಽತಿವಿದ್ಧೋಽರ್ಜುನಶರೈಃ ಸುಪುಂಖೈಃ ಕಂಕಪತ್ರಿಭಿಃ|

07028011c ಭಗದತ್ತಸ್ತತಃ ಕ್ರುದ್ಧಃ ಪಾಂಡವಸ್ಯ ಮಹಾತ್ಮನಃ||

07028012a ವ್ಯಸೃಜತ್ತೋಮರಾನ್ಮೂರ್ಧ್ನಿ ಶ್ವೇತಾಶ್ವಸ್ಯೋನ್ನನಾದ ಚ|

ಅರ್ಜುನನ ಆ ಸುಂದರ ಪುಂಖಗಳ ಕಂಕಪತ್ರಿಗಳಿಂದ ಗಾಯಗೊಂಡು ಕ್ರುದ್ಧನಾದ ಭಗದತ್ತನು ಮಹಾತ್ಮ ಶ್ವೇತಾಶ್ವ ಅರ್ಜುನನ ತಲೆಗೆ ಗುರಿಯಿಟ್ಟು ತೋಮರಗಳನ್ನು ಎಸೆದು ಜೋರಾಗಿ ಗರ್ಜಿಸಿದನು.

07028012c ತೈರರ್ಜುನಸ್ಯ ಸಮರೇ ಕಿರೀಟಂ ಪರಿವರ್ತಿತಂ||

07028013a ಪರಿವೃತ್ತಂ ಕಿರೀಟಂ ತಂ ಯಮಯನ್ನೇವ ಫಲ್ಗುನಃ|

07028013c ಸುದೃಷ್ಟಃ ಕ್ರಿಯತಾಂ ಲೋಕ ಇತಿ ರಾಜಾನಮಬ್ರವೀತ್||

ಅವು ಅರ್ಜುನನ ಕಿರೀಟವನ್ನು ತಲೆಕೆಳಗೆ ಮಾಡಿದವು. ಕಿರೀಟವನ್ನು ಸರಿಮಾಡಿಕೊಳ್ಳುತ್ತಾ ಫಲ್ಗುನನು ರಾಜನಿಗೆ “ಲೋಕವೆಲ್ಲವನ್ನೂ ಒಮ್ಮೆ ನೋಡಿಕೊಂಡುಬಿಡು!” ಎಂದು ಹೇಳಿದನು.

07028014a ಏವಮುಕ್ತಸ್ತು ಸಂಕ್ರುದ್ಧಃ ಶರವರ್ಷೇಣ ಪಾಂಡವಂ|

07028014c ಅಭ್ಯವರ್ಷತ್ಸಗೋವಿಂದಂ ಧನುರಾದಾಯ ಭಾಸ್ವರಂ||

ಹೀಗೆ ಹೇಳಲು ಸಂಕ್ರುದ್ಧನಾಗಿ ಪ್ರಕಾಶಮಾನವಾದ ಧನುಸ್ಸನ್ನು ಎತ್ತಿಕೊಂಡು ಗೋವಿಂದನೊಂದಿಗೆ ಪಾಂಡವನ ಮೇಲೆ ಶರವರ್ಷವನ್ನು ಸುರಿಸಿದನು.

07028015a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ತೂಣೀರಾನ್ಸನ್ನಿಕೃತ್ಯ ಚ|

07028015c ತ್ವರಮಾಣೋ ದ್ವಿಸಪ್ತತ್ಯಾ ಸರ್ವಮರ್ಮಸ್ವತಾಡಯತ್||

ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಭತ್ತಳಿಕೆಯನ್ನು ಪುಡಿಮಾಡಿದನು. ತ್ವರೆಮಾಡಿ ಇಪ್ಪತ್ತೆರಡು ಬಾಣಗಳಿಂದ ಅವನ ಸರ್ವ ಮರ್ಮಗಳಿಗೂ ಹೊಡೆದನು.

07028016a ವಿದ್ಧಸ್ತಥಾಪ್ಯವ್ಯಥಿತೋ ವೈಷ್ಣವಾಸ್ತ್ರಮುದೀರಯನ್|

07028016c ಅಭಿಮಂತ್ರ್ಯಾಂಕುಶಂ ಕ್ರುದ್ಧೋ ವ್ಯಸೃಜತ್ಪಾಂಡವೋರಸಿ||

ಅದರಿಂದ ಗಾಯಗೊಂಡು ವ್ಯಥಿತನಾದ ಅವನು ಕ್ರುದ್ಧನಾಗಿ ವೈಷ್ಣವಾಸ್ತ್ರವನ್ನು ಸ್ಮರಿಸಿಕೊಂಡು ಅಂಕುಶವನ್ನು ಅಭಿಮಂತ್ರಿಸಿ ಪಾಂಡವನ ಎದೆಗೆ ಗುರಿಯಿಟ್ಟು ಎಸೆದನು.

07028017a ವಿಸೃಷ್ಟಂ ಭಗದತ್ತೇನ ತದಸ್ತ್ರಂ ಸರ್ವಘಾತಕಂ|

07028017c ಉರಸಾ ಪ್ರತಿಜಗ್ರಾಹ ಪಾರ್ಥಂ ಸಂಚಾದ್ಯ ಕೇಶವಃ||

ಭಗದತ್ತನಿಂದ ಪ್ರಯೋಗಿಸಲ್ಪಟ್ಟ ಆ ಸರ್ವಘಾತಕ ಅಸ್ತ್ರವನ್ನು ಕೇಶವನು ಪಾರ್ಥನಿಗೆ ಆವರಣವಾಗಿ ನಿಂತು ತನ್ನ ವಕ್ಷಃಸ್ಥಳದಲ್ಲಿ ಧರಿಸಿದನು.

07028018a ವೈಜಯಂತ್ಯಭವನ್ಮಾಲಾ ತದಸ್ತ್ರಂ ಕೇಶವೋರಸಿ|

07028018c ತತೋಽರ್ಜುನಃ ಕ್ಲಾಂತಮನಾಃ ಕೇಶವಂ ಪ್ರತ್ಯಭಾಷತ||

ಆ ಅಸ್ತ್ರವು ಕೇಶವನ ಎದೆಯಮೇಲೆ ವೈಜಯಂತಿ ಮಾಲೆಯಾಯಿತು. ಆಗ ಅರ್ಜುನನು ಆಯಾಸಗೊಂಡ ಮನಸ್ಸಿನಿಂದ ಕೇಶವನಿಗೆ ಹೇಳಿದನು:

07028019a ಅಯುಧ್ಯಮಾನಸ್ತುರಗಾನ್ಸಮ್ಯಂತಾಸ್ಮಿ ಜನಾರ್ದನ|

07028019c ಇತ್ಯುಕ್ತ್ವಾ ಪುಂಡರೀಕಾಕ್ಷ ಪ್ರತಿಜ್ಞಾಂ ಸ್ವಾಂ ನ ರಕ್ಷಸಿ||

“ಪುಂಡರೀಕಾಕ್ಷ! ಜನಾರ್ದನ! ಯುದ್ಧವನ್ನು ಮಾಡದೇ ಕುದುರೆಗಳನ್ನು ಮಾತ್ರ ನಡೆಸುತ್ತೇನೆ ಎಂದು ಮಾಡಿದ್ದ ಪ್ರತಿಜ್ಞೆಯನ್ನು ನೀನು ರಕ್ಷಿಸುತ್ತಿಲ್ಲ.

07028020a ಯದ್ಯಹಂ ವ್ಯಸನೀ ವಾ ಸ್ಯಾಮಶಕ್ತೋ ವಾ ನಿವಾರಣೇ|

07028020c ತತಸ್ತ್ವಯೈವಂ ಕಾರ್ಯಂ ಸ್ಯಾನ್ನ ತು ಕಾರ್ಯಂ ಮಯಿ ಸ್ಥಿತೇ||

ಒಂದುವೇಳೆ ನಾನು ವ್ಯಸನದಿಂದಿದ್ದರೆ ಅಥವಾ ಇದನ್ನು ನಿವಾರಿಸಲು ಅಶಕ್ತನಾಗಿದ್ದರೆ ನೀನು ಇದನ್ನು ಮಾಡಬಹುದಾಗಿತ್ತು. ಆದರೆ ನಾನು ಇಲ್ಲಿ ಶಕ್ಯನಾಗಿರುವಾಗ ನೀನು ಹೀಗೆ ಮಾಡಬಾರದಾಗಿತ್ತು.

07028021a ಸಬಾಣಃ ಸಧನುಶ್ಚಾಹಂ ಸಸುರಾಸುರಮಾನವಾನ್|

07028021c ಶಕ್ತೋ ಲೋಕಾನಿಮಾಂ ಜೇತುಂ ತಚ್ಚಾಪಿ ವಿದಿತಂ ತವ||

ಧನುರ್ಬಾಣಸಹಿತನಾದ ನಾನು ಸುರಾಸುರ ಮಾನವರೊಂದಿಗೆ ಈ ಲೋಕವನ್ನು ಗೆಲ್ಲನು ಶಕ್ಯ ಎನ್ನುವುದೂ ಕೂಡ ನಿನಗೆ ತಿಳಿದೇ ಇದೆ.”

07028022a ತತೋಽರ್ಜುನಂ ವಾಸುದೇವಃ ಪ್ರತ್ಯುವಾಚಾರ್ಥವದ್ವಚಃ|

07028022c ಶೃಣು ಗುಹ್ಯಮಿದಂ ಪಾರ್ಥ ಯಥಾ ವೃತ್ತಂ ಪುರಾನಘ||

ಆಗ ವಾಸುದೇವನು ಅರ್ಜುನನಿಗೆ ಅರ್ಥವತ್ತಾದ ಮಾತುಗಳಿಂದ ಉತ್ತರಿಸಿದನು: “ಅನಘ! ಪಾರ್ಥ! ಹಿಂದೆ ನಡೆದ ಈ ಗುಹ್ಯ ವೃತ್ತಾಂತವನ್ನು ಕೇಳು.

07028023a ಚತುರ್ಮೂರ್ತಿರಹಂ ಶಶ್ವಲ್ಲೋಕತ್ರಾಣಾರ್ಥಮುದ್ಯತಃ|

07028023c ಆತ್ಮಾನಂ ಪ್ರವಿಭಜ್ಯೇಹ ಲೋಕಾನಾಂ ಹಿತಮಾದಧೇ||

ಚತುರ್ಮೂರ್ತಿಯಾದ ನಾನು ಶಾಶ್ವತವಾಗಿ ಲೋಕೋದ್ಧಾರದಲ್ಲಿ ತೊಡಗಿದ್ದೇನೆ. ಲೋಕಗಳ ಹಿತಕ್ಕಾಗಿ ನನ್ನನ್ನು ನಾನೇ ವಿಭಜನ ಮಾಡಿಕೊಂಡಿದ್ದೇನೆ.

07028024a ಏಕಾ ಮೂರ್ತಿಸ್ತಪಶ್ಚರ್ಯಾಂ ಕುರುತೇ ಮೇ ಭುವಿ ಸ್ಥಿತಾ|

07028024c ಅಪರಾ ಪಶ್ಯತಿ ಜಗತ್ಕುರ್ವಾಣಂ ಸಾಧ್ವಸಾಧುನೀ||

ನನ್ನ ಒಂದು ಮೂರ್ತಿಯು ಭೂಮಿಯ ಮೇಲಿದ್ದುಕೊಂಡು ತಪಶ್ಚರ್ಯವನ್ನು ಮಾಡುತ್ತಿದೆ. ಇನ್ನೊಂದು ಜಗತ್ತಿನಲ್ಲಿ ನಡೆಯುವ ಒಳ್ಳೆಯದು-ಕೆಟ್ಟವುಗಳನ್ನು ನೋಡುತ್ತಿರುತ್ತದೆ.

07028025a ಅಪರಾ ಕುರುತೇ ಕರ್ಮ ಮಾನುಷಂ ಲೋಕಮಾಶ್ರಿತಾ|

07028025c ಶೇತೇ ಚತುರ್ಥೀ ತ್ವಪರಾ ನಿದ್ರಾಂ ವರ್ಷಸಹಸ್ರಿಕಾಂ||

ಇನ್ನೊಂದು ಮನುಷ್ಯ ಲೋಕವನ್ನಾಶ್ರಯಿಸಿ ಕರ್ಮಗಳನ್ನು ಮಾಡುತ್ತಿರುತ್ತದೆ. ನಾಲ್ಕನೆಯ ಇನ್ನೊಂದು ಸಹಸ್ರವರ್ಷಗಳ ಪರ್ಯಂತ ನಿದ್ರಾವಸ್ಥೆಯಲ್ಲಿ ಮಲಗಿರುತ್ತದೆ.

07028026a ಯಾಸೌ ವರ್ಷಸಹಸ್ರಾಂತೇ ಮೂರ್ತಿರುತ್ತಿಷ್ಠತೇ ಮಮ|

07028026c ವರಾರ್ಹೇಭ್ಯೋ ವರಾಂ ಶ್ರೇಷ್ಠಾಂಸ್ತಸ್ಮಿನ್ಕಾಲೇ ದದಾತಿ ಸಾ||

ನನ್ನ ಈ ಮೂರ್ತಿಯು ಸಹಸ್ರ ವರ್ಷಗಳ ಅಂತ್ಯದಲ್ಲಿ ಏಳುತ್ತದೆ. ಆ ಕಾಲದಲ್ಲಿ ವರಗಳಿಗೆ ಅರ್ಹರಾದವರು ಕೇಳಿದ ಶ್ರೇಷ್ಠ ವರಗಳನ್ನು ಅದು ಕರುಣಿಸುತ್ತದೆ.

07028027a ತಂ ತು ಕಾಲಮನುಪ್ರಾಪ್ತಂ ವಿದಿತ್ವಾ ಪೃಥಿವೀ ತದಾ|

07028027c ಪ್ರಾಯಾಚತ ವರಂ ಯಂ ಮಾಂ ನರಕಾರ್ಥಾಯ ತಂ ಶೃಣು||

ಅಂತಹ ಒಂದು ಕಾಲವು ಬಂದೊದಗಿದಾಗ ತಿಳಿದು ಪೃಥ್ವಿಯು ನರಕನಿಗಾಗಿ ನನ್ನಿಂದ ಒಂದು ವರವನ್ನು ಕೇಳಿದ್ದಳು. ಅದನ್ನು ಕೇಳು.

07028028a ದೇವಾನಾಮಸುರಾಣಾಂ ಚ ಅವಧ್ಯಸ್ತನಯೋಽಸ್ತು ಮೇ|

07028028c ಉಪೇತೋ ವೈಷ್ಣವಾಸ್ತ್ರೇಣ ತನ್ಮೇ ತ್ವಂ ದಾತುಮರ್ಹಸಿ||

“ನನ್ನ ಮಗನು ದೇವ ಮತ್ತು ಅಸುರರಿಂದ ಅವಧ್ಯನಾಗಲಿ. ಅವನು ವೈಷ್ಣವಾಸ್ತ್ರವನ್ನು ಹೊಂದಿರಬೇಕು. ನನಗೆ ಇದನ್ನು ದಯಪಾಲಿಸಬೇಕು.”

07028029a ಏವಂ ವರಮಹಂ ಶ್ರುತ್ವಾ ಜಗತ್ಯಾಸ್ತನಯೇ ತದಾ|

07028029c ಅಮೋಘಮಸ್ತ್ರಮದದಂ ವೈಷ್ಣವಂ ತದಹಂ ಪುರಾ||

ಈ ರೀತಿಯ ವರವನ್ನು ಕೇಳಿ ನಾನು ಭೂಮಿಯ ತನಯನಿಗೆ ಅಮೋಘವಾದ ಈ ವೈಷ್ಣವಾಸ್ತ್ರವನ್ನು ಹಿಂದೆ ನೀಡಿದ್ದೆ.

07028030a ಅವೋಚಂ ಚೈತದಸ್ತ್ರಂ ವೈ ಹ್ಯಮೋಘಂ ಭವತು ಕ್ಷಮೇ|

07028030c ನರಕಸ್ಯಾಭಿರಕ್ಷಾರ್ಥಂ ನೈನಂ ಕಶ್ಚಿದ್ವಧಿಷ್ಯತಿ||

ಅವಳಿಗೆ ಹೇಳಿದ್ದೆ: “ಈ ಅಮೋಘ ಅಸ್ತ್ರವು ನರಕನನ್ನು ರಕ್ಷಿಸುತ್ತದೆ. ಇದು ಅವನಲ್ಲಿ ಇರುವಾಗ ಯಾರೂ ಅವನನ್ನು ವಧಿಸಲಾರರು.

07028031a ಅನೇನಾಸ್ತ್ರೇಣ ತೇ ಗುಪ್ತಃ ಸುತಃ ಪರಬಲಾರ್ದನಃ|

07028031c ಭವಿಷ್ಯತಿ ದುರಾಧರ್ಷಃ ಸರ್ವಲೋಕೇಷು ಸರ್ವದಾ||

ಈ ಅಸ್ತ್ರದಿಂದ ನಿನ್ನ ಮಗ ಪರಬಲಾರ್ದನನು ಸರ್ವಲೋಕಗಳಲ್ಲಿ ಸರ್ವರಿಂದ ಜಯಿಸಲಸಾಧ್ಯನಾಗಿರುತ್ತಾನೆ.”

07028032a ತಥೇತ್ಯುಕ್ತ್ವಾ ಗತಾ ದೇವೀ ಕೃತಕಾಮಾ ಮನಸ್ವಿನೀ|

07028032c ಸ ಚಾಪ್ಯಾಸೀದ್ದುರಾಧರ್ಷೋ ನರಕಃ ಶತ್ರುತಾಪನಃ||

ಹಾಗೆಯೇ ಆಗಲೆಂದು ಹೇಳಿ ಬಯಸಿದುದನ್ನು ಪಡೆದು ಆ ಮನಸ್ವಿನೀ ದೇವಿಯು ಹೋದಳು. ಶತ್ರುತಾಪನ ನರಕನಾದರೋ ಅದರಿಂದಾಗಿ ದುರಾಧರ್ಷನಾಗಿದ್ದನು.

07028033a ತಸ್ಮಾತ್ಪ್ರಾಗ್ಜ್ಯೋತಿಷಂ ಪ್ರಾಪ್ತಂ ತದಸ್ತ್ರಂ ಪಾರ್ಥ ಮಾಮಕಂ|

07028033c ನಾಸ್ಯಾವಧ್ಯೋಽಸ್ತಿ ಲೋಕೇಷು ಸೇಂದ್ರರುದ್ರೇಷು ಮಾರಿಷ||

ಪಾರ್ಥ! ಅವನಿಂದ ನನ್ನ ಆ ಅಸ್ತ್ರವನ್ನು ಪ್ರಾಗ್ಜ್ಯೋತಿಷನು ಪಡೆದನು. ಮಾರಿಷ! ಅದರಿಂದ ಇವನು ಲೋಕದಲ್ಲಿ ಇಂದ್ರ ರುದ್ರರಿಗೂ ಅವಧ್ಯನು.

07028034a ತನ್ಮಯಾ ತ್ವತ್ಕೃತೇನೈತದನ್ಯಥಾ ವ್ಯಪನಾಶಿತಂ|

07028034c ವಿಯುಕ್ತಂ ಪರಮಾಸ್ತ್ರೇಣ ಜಹಿ ಪಾರ್ಥ ಮಹಾಸುರಂ||

07028035a ವೈರಿಣಂ ಯುಧಿ ದುರ್ಧರ್ಷಂ ಭಗದತ್ತಂ ಸುರದ್ವಿಷಂ|

07028035c ಯಥಾಹಂ ಜಘ್ನಿವಾನ್ಪೂರ್ವಂ ಹಿತಾರ್ಥಂ ನರಕಂ ತಥಾ||

ನಿನಗಾಗಿಯೇ ಹೊರತು ಬೇರೆ ಯಾವ ಕಾರಣದಿಂದಲೂ ನಾನು ಅದನ್ನು ನಾಶಗೊಳಿಸಲಿಲ್ಲ. ಪಾರ್ಥ! ಹಿಂದೆ ನಾನು ಲೋಕ ಹಿತಾರ್ಥಕ್ಕಾಗಿ ಹೇಗೆ ನರಕನನ್ನು ಸಂಹರಿಸಿದೆನೋ ಹಾಗೆ ಪರಮಾಸ್ತ್ರವನ್ನು ಪ್ರಯೋಗಿಸಿ ಯುದ್ಧದಲ್ಲಿ ವೈರಿ ದುರ್ಧರ್ಷ ಸುರದ್ವೇಷೀ ಭಗದತ್ತನನ್ನು ಸಂಹರಿಸು.”

07028036a ಏವಮುಕ್ತಸ್ತತಃ ಪಾರ್ಥಃ ಕೇಶವೇನ ಮಹಾತ್ಮನಾ|

07028036c ಭಗದತ್ತಂ ಶಿತೈರ್ಬಾಣೈಃ ಸಹಸಾ ಸಮವಾಕಿರತ್||

ಮಹಾತ್ಮ ಕೇಶವನು ಹೀಗೆ ಹೇಳಲು ಪಾರ್ಥನು ತಕ್ಷಣವೇ ಭಗದತ್ತನನ್ನು ನಿಶಿತ ಬಾಣಗಳಿಂದ ಮುಚ್ಚಿದನು.

07028037a ತತಃ ಪಾರ್ಥೋ ಮಹಾಬಾಹುರಸಂಭ್ರಾಂತೋ ಮಹಾಮನಾಃ|

07028037c ಕುಂಭಯೋರಂತರೇ ನಾಗಂ ನಾರಾಚೇನ ಸಮಾರ್ಪಯತ್||

ಆಗ ಮಹಾಮನ ಮಹಾಬಾಹು ಪಾರ್ಥನು ಅಸಂಭ್ರಾಂತನಾಗಿ ನಾರಾಚದಿಂದ ಆನೆಯ ಕುಂಭಸ್ಥಳದ ಮಧ್ಯದಲ್ಲಿ ಹೊಡೆದನು.

07028038a ಸಮಾಸಾದ್ಯ ತು ತಂ ನಾಗಂ ಬಾಣೋ ವಜ್ರ ಇವಾಚಲಂ|

07028038c ಅಭ್ಯಗಾತ್ಸಹ ಪುಂಖೇನ ವಲ್ಮೀಕಮಿವ ಪನ್ನಗಃ||

ಆ ಬಾಣವು ವಜ್ರವು ಪರ್ವತವನ್ನು ಹೊಗುವಂತೆ ಮತ್ತು ಸರ್ಪವು ಬಿಲವನ್ನು ಹೊಗುವಂತೆ ಪುಂಖಗಳೊಂದಿಗೆ ಆನೆಯ ಒಳ ಹೊಕ್ಕಿತು.

07028039a ಸ ತು ವಿಷ್ಟಭ್ಯ ಗಾತ್ರಾಣಿ ದಂತಾಭ್ಯಾಮವನಿಂ ಯಯೌ|

07028039c ನದನ್ನಾರ್ತಸ್ವರಂ ಪ್ರಾಣಾನುತ್ಸಸರ್ಜ ಮಹಾದ್ವಿಪಃ||

ಆ ಮಹಾಗಜವು ತನ್ನ ಅಂಗಾಂಗಗಳನ್ನು ನಿಷ್ಕ್ರಿಯಗೊಳಿಸಿ ಎರಡೂ ದಂತಗಳನ್ನು ಭೂಮಿಗೆ ಊರಿಕೊಂಡು, ಆರ್ತಸ್ವರದಲ್ಲಿ ಕೂಗಿ ಪ್ರಾಣಗಳನ್ನು ತೊರೆಯಿತು.

07028040a ತತಶ್ಚಂದ್ರಾರ್ಧಬಿಂಬೇನ ಶರೇಣ ನತಪರ್ವಣಾ|

07028040c ಬಿಭೇದ ಹೃದಯಂ ರಾಜ್ಞೋ ಭಗದತ್ತಸ್ಯ ಪಾಂಡವಃ||

ಆಗ ಪಾಂಡವನು ಅರ್ಧಚಂದ್ರದ ಬಿಂಬವುಳ್ಳ ನತಪರ್ವ ಶರದಿಂದ ರಾಜಾ ಭಗದತ್ತನ ಹೃದಯವನ್ನು ಭೇದಿಸಿದನು.

07028041a ಸ ಭಿನ್ನಹೃದಯೋ ರಾಜಾ ಭಗದತ್ತಃ ಕಿರೀಟಿನಾ|

07028041c ಶರಾಸನಂ ಶರಾಂಶ್ಚೈವ ಗತಾಸುಃ ಪ್ರಮುಮೋಚ ಹ||

ಕಿರೀಟಿಯಿಂದ ಭಿನ್ನಹೃದಯನಾದ ರಾಜಾ ಭಗದತ್ತನು ಒಡನೆಯೇ ಅಸು ನೀಗಿದನು. ಅವನ ಕೈಯಲ್ಲಿದ್ದ ಬಾಣ ಭತ್ತಳಿಕೆಗಳು ಕೆಳಗೆ ಬಿದ್ದವು.

07028042a ಶಿರಸಸ್ತಸ್ಯ ವಿಭ್ರಷ್ಟಃ ಪಪಾತ ಚ ವರಾಂಕುಶಃ|

07028042c ನಾಲತಾಡನವಿಭ್ರಷ್ಟಂ ಪಲಾಶಂ ನಲಿನಾದಿವ||

ಕಮಲದ ನಾಳವನ್ನು ಹೊಡೆದರೆ ಕಮಲವು ಬೀಳುವಂತೆ ಅವನ ಶಿರಸ್ತ್ರಾಣ ಮತ್ತು ಶ್ರೇಷ್ಠ ಅಂಕುಶಗಳು ಕೆಳಗೆ ಉರುಳಿದವು.

07028043a ಸ ಹೇಮಮಾಲೀ ತಪನೀಯಭಾಂಡಾತ್

         ಪಪಾತ ನಾಗಾದ್ಗಿರಿಸನ್ನಿಕಾಶಾತ್|

07028043c ಸುಪುಷ್ಪಿತೋ ಮಾರುತವೇಗರುಗ್ಣೋ

         ಮಹೀಧರಾಗ್ರಾದಿವ ಕರ್ಣಿಕಾರಃ||

ಹೂಗಳಿಂದ ಸಮೃದ್ಧ ಬೆಟ್ಟದ ಕಣಗಿಲೆ ಮರವು ಭಿರುಗಾಳಿಯ ಬಡಿತಕ್ಕೆ ಸಿಲುಕಿ ಬುಡಮೇಲಾಗಿ ಬೆಟ್ಟದ ತುದಿಯಿಂದ ಕೆಳಕ್ಕೆ ಬೀಳುವಂತೆ ಸುವರ್ಣಮಾಲೆಯಿಂದ ಸಮಲಂಕೃತನಾಗಿದ್ದ ಭಗದತ್ತನು ಸುವರ್ಣಾಭರಣ ವಿಭೂಷಿತ ಪರ್ವತೋಪಮ ಆನೆಯ ಮೇಲಿಂದ ಕೆಳಗೆ ಬಿದ್ದನು.

07028044a ನಿಹತ್ಯ ತಂ ನರಪತಿಮಿಂದ್ರವಿಕ್ರಮಂ

         ಸಖಾಯಮಿಂದ್ರಸ್ಯ ತಥೈಂದ್ರಿರಾಹವೇ|

07028044c ತತೋಽಪರಾಂಸ್ತವ ಜಯಕಾಂಕ್ಷಿಣೋ ನರಾನ್

         ಬಭಂಜ ವಾಯುರ್ಬಲವಾನ್ದ್ರುಮಾನಿವ||

ಈ ರೀತಿ ನರಪತಿ ಇಂದ್ರವಿಕ್ರಮಿ ಇಂದ್ರನ ಸಖನನ್ನು ಆಹವದಲ್ಲಿ ಸಂಹರಿಸಿ ಐಂದ್ರಿಯು ವಿಜಯದ ಆಕಾಂಕ್ಷೆಯಿಂದಿದ್ದ ನಿನ್ನ ಕಡೆಯ ಯೋಧರನ್ನು ಚಂಡಮಾರುತವು ವೃಕ್ಷಗಳನ್ನು ಧ್ವಂಸಮಾಡುವಂತೆ ಧ್ವಂಸಮಾಡಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಭಗದತ್ತವದೇ ಅಷ್ಟವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಭಗದತ್ತವಧ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.

Image result for indian motifs against white background

Comments are closed.