Drona Parva: Chapter 18

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೧೮

ಸಂಶಪ್ತಕರೊಡನೆ ಅರ್ಜುನನ ಯುದ್ಧ (೧-೩೯).

Image result for mahabharata07018001 ಸಂಜಯ ಉವಾಚ|

07018001a ದೃಷ್ಟ್ವಾ ತು ಸನ್ನಿವೃತ್ತಾಂಸ್ತಾನ್ಸಂಶಪ್ತಕಗಣಾನ್ಪುನಃ|

07018001c ವಾಸುದೇವಂ ಮಹಾತ್ಮಾನಮರ್ಜುನಃ ಸಮಭಾಷತ||

ಸಂಜಯನು ಹೇಳಿದನು: “ಆ ಸಂಶಪ್ತಕಗಣಗಳು ಪುನಃ ಹಿಂದಿರುಗಿದುದನ್ನು ನೋಡಿ ಅರ್ಜುನನು ಮಹಾತ್ಮ ವಾಸುದೇವನಿಗೆ ಹೇಳಿದನು:

07018002a ಚೋದಯಾಶ್ವಾನ್ ಹೃಷೀಕೇಶ ಸಂಶಪ್ತಕಗಣಾನ್ಪ್ರತಿ|

07018002c ನೈತೇ ಹಾಸ್ಯಂತಿ ಸಂಗ್ರಾಮಂ ಜೀವಂತ ಇತಿ ಮೇ ಮತಿಃ||

“ಹೃಷೀಕೇಶ! ಸಂಶಪ್ತಕಗಣಗಳ ಕಡೆ ಕುದುರೆಗಳನ್ನು ಓಡಿಸು. ಜೀವಂತವಿರುವವರೆಗೂ ಇವರು ಯುದ್ಧಮಾಡುವುದನ್ನು ಬಿಡುವುದಿಲ್ಲವೆಂದು ನನಗನ್ನಿಸುತ್ತಿದೆ.

07018003a ಪಶ್ಯ ಮೇಽಸ್ತ್ರಬಲಂ ಘೋರಂ ಬಾಹ್ವೋರಿಷ್ವಸನಸ್ಯ ಚ|

07018003c ಅದ್ಯೈತಾನ್ಪಾತಯಿಷ್ಯಾಮಿ ಕ್ರುದ್ಧೋ ರುದ್ರಃ ಪಶೂನಿವ||

ನನ್ನ ಘೋರ ಅಸ್ತ್ರಬಲವನ್ನು ಮತ್ತು ಬಾಹು-ಧನುಸ್ಸುಗಳ ಬಲವನ್ನು ನೋಡು! ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಇಂದು ಇವರನ್ನು ಉರುಳಿಸುತ್ತೇನೆ.”

07018004a ತತಃ ಕೃಷ್ಣಃ ಸ್ಮಿತಂ ಕೃತ್ವಾ ಪರಿಣಂದ್ಯ ಶಿವೇನ ತಂ|

07018004c ಪ್ರಾವೇಶಯತ ದುರ್ಧರ್ಷೋ ಯತ್ರ ಯತ್ರೈಚ್ಚದರ್ಜುನಃ||

ಆಗ ಕೃಷ್ಣನು ನಸುನಕ್ಕು ಶುಭಾಶಂಸನೆಗೆಳಿಂದ ಅವನನ್ನು ಅಭಿನಂದಿಸಿ ದುರ್ಧರ್ಷ ಅರ್ಜುನನು ಎಲ್ಲಿಗೆ ಹೋಗಬಯಸಿದನೋ ಅಲ್ಲಿಗೆ ಪ್ರವೇಶಿಸಿದನು.

07018005a ಬಭ್ರಾಜೇ ಸ ರಥೋಽತ್ಯರ್ಥಮುಹ್ಯಮಾನೋ ರಣೇ ತದಾ|

07018005c ಉಹ್ಯಮಾನಮಿವಾಕಾಶೇ ವಿಮಾನಂ ಪಾಂಡುರೈರ್ಹಯೈಃ||

ರಣರಂಗದಲ್ಲಿ ಬಿಳಿಯ ಕುದುರುಗಳು ಎಳೆದುಕೊಂಡು ಹೋಗುತ್ತಿದ್ದ ಆ ಬಿಳೀ ರಥವು ಆಕಾಶದಲ್ಲಿ ಹಾರಿಕೊಂಡು ಹೋಗುತ್ತಿದ್ದ ವಿಮಾನದಂತೆ ವಿಜೃಂಭಿಸಿತು.

07018006a ಮಂಡಲಾನಿ ತತಶ್ಚಕ್ರೇ ಗತಪ್ರತ್ಯಾಗತಾನಿ ಚ|

07018006c ಯಥಾ ಶಕ್ರರಥೋ ರಾಜನ್ಯುದ್ಧೇ ದೇವಾಸುರೇ ಪುರಾ||

ರಾಜನ್! ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನ ರಥವು ಹೇಗೋ ಹಾಗೆ ಇವರ ರಥವೂ ಕೂಡ ಮಂಡಲಾಕಾರದಲ್ಲಿ, ಮುಂದೆ ಮತ್ತು ಹಿಂದೆ ಚಲಿಸುತ್ತಿತ್ತು.

07018007a ಅಥ ನಾರಾಯಣಾಃ ಕ್ರುದ್ಧಾ ವಿವಿಧಾಯುಧಪಾಣಯಃ|

07018007c ಚಾದಯಂತಃ ಶರವ್ರಾತೈಃ ಪರಿವವ್ರುರ್ಧನಂಜಯಂ||

ಆಗ ನಾರಾಯಣರು ಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ಧನಂಜಯನನ್ನು ಬಾಣಗಳ ಮಳೆಯಿಂದ ಮುಚ್ಚಿ ಸುತ್ತುವರೆದರು.

07018008a ಅದೃಶ್ಯಂ ಚ ಮುಹೂರ್ತೇನ ಚಕ್ರುಸ್ತೇ ಭರತರ್ಷಭ|

07018008c ಕೃಷ್ಣೇನ ಸಹಿತಂ ಯುದ್ಧೇ ಕುಂತೀಪುತ್ರಂ ಧನಂಜಯಂ||

ಭರತರ್ಷಭ! ಅವರು ಯುದ್ಧದಲ್ಲಿ ಕೃಷ್ಣನ ಸಹಿತ ಕುಂತೀಪುತ್ರ ಧನಂಜಯನನ್ನು ಮುಹೂರ್ತಕಾಲ ಅದೃಶ್ಯನನ್ನಾಗಿ ಮಾಡಿಬಿಟ್ಟರು.

07018009a ಕ್ರುದ್ಧಸ್ತು ಫಲ್ಗುನಃ ಸಂಖ್ಯೇ ದ್ವಿಗುಣೀಕೃತವಿಕ್ರಮಃ|

07018009c ಗಾಂಡೀವಮುಪಸಮ್ಮೃಜ್ಯ ತೂರ್ಣಂ ಜಗ್ರಾಹ ಸಂಯುಗೇ||

ಕ್ರುದ್ಧ ಫಲ್ಗುನನ ವಿಕ್ರಮವು ರಣದಲ್ಲಿ ಇಮ್ಮಡಿಯಾಯಿತು. ತಕ್ಷಣವೇ ಸಂಯುಗದಲ್ಲಿ ಅವನು ಗಾಂಡೀವವನ್ನು ಹಿಡಿದು ಶಿಂಜಿನಿಯನ್ನು ಮೀಟಿದನು.

07018010a ಬದ್ಧ್ವಾ ಚ ಭೃಕುಟೀಂ ವಕ್ತ್ರೇ ಕ್ರೋಧಸ್ಯ ಪ್ರತಿಲಕ್ಷಣಂ|

07018010c ದೇವದತ್ತಂ ಮಹಾಶಂಖಂ ಪೂರಯಾಮಾಸ ಪಾಂಡವಃ||

ಕ್ರೋಧದ ಪ್ರತಿಲಕ್ಷಣವಾದ ಹುಬ್ಬು-ಮುಖಗಳನ್ನು ಗಂಟಿಕ್ಕಿ ಪಾಂಡವನು ಮಹಾಶಂಖ ದೇವದತ್ತವನ್ನು ಜೋರಾಗಿ ಊದಿದನು.

07018011a ಅಥಾಸ್ತ್ರಮರಿಸಂಘಘ್ನಂ ತ್ವಾಷ್ಟ್ರಮಭ್ಯಸ್ಯದರ್ಜುನಃ|

07018011c ತತೋ ರೂಪಸಹಸ್ರಾಣಿ ಪ್ರಾದುರಾಸನ್ ಪೃಥಕ್ ಪೃಥಕ್||

ಆಗ ಅರ್ಜುನನು ಅರಿಸಂಹಾರಕ ತ್ವಾಷ್ಟ್ರವೆಂಬ ಮಹಾ‌ ಅಸ್ತ್ರವನ್ನು ಪ್ರಯೋಗಿಸಲು ಅದರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಹಸ್ರಾರು ರೂಪಗಳು ಹೊರಹೊಮ್ಮಿದವು.

07018012a ಆತ್ಮನಃ ಪ್ರತಿರೂಪೈಸ್ತೈರ್ನಾನಾರೂಪೈರ್ವಿಮೋಹಿತಾಃ|

07018012c ಅನ್ಯೋನ್ಯಮರ್ಜುನಂ ಮತ್ವಾ ಸ್ವಮಾತ್ಮಾನಂ ಚ ಜಘ್ನಿರೇ||

ಅರ್ಜುನನ ರೂಪದಂತೆಯೇ ಇದ್ದ ಸಾವಿರಾರು ಆಕೃತಿಗಳು ಆ ಸೈನಿಕರನ್ನು ಸೇರಿಕೊಳ್ಳಲು ಅವರು ಮೋಹಿತರಾಗಿ ಅನ್ಯೋನ್ಯರನ್ನೇ ಅರ್ಜುನನೆಂದು ತಿಳಿದುಕೊಂಡು ತಾವೇ ತಮ್ಮವರನ್ನು ಸಂಹರಿಸಿದರು.

07018013a ಅಯಮರ್ಜುನೋಽಯಂ ಗೋವಿಂದ ಇಮೌ ಯಾದವಪಾಂಡವೌ|

07018013c ಇತಿ ಬ್ರುವಾಣಾಃ ಸಮ್ಮೂಢಾ ಜಘ್ನುರನ್ಯೋನ್ಯಮಾಹವೇ||

“ಇವನು ಅರ್ಜುನ! ಇವನು ಗೋವಿಂದ! ಇವರಿಬ್ಬರು ಯಾದವ-ಪಾಂಡವರು!” ಎಂದು ಹೇಳುತ್ತಾ, ಸಮ್ಮೂಢರಾಗಿ, ಆಹವದಲ್ಲಿ ಅವರು ಅನ್ಯೋನ್ಯರನ್ನು ಸಂಹರಿಸಿದರು.

07018014a ಮೋಹಿತಾಃ ಪರಮಾಸ್ತ್ರೇಣ ಕ್ಷಯಂ ಜಗ್ಮುಃ ಪರಸ್ಪರಂ|

07018014c ಅಶೋಭಂತ ರಣೇ ಯೋಧಾಃ ಪುಷ್ಪಿತಾ ಇವ ಕಿಂಶುಕಾಃ||

ಪರಮಾಸ್ತ್ರದ ಪ್ರಭಾವದಿಂದ ಮೋಹಿತರಾದ ಅವರು ಪರಸ್ಪರರೊಂದಿಗೆ ಹೊಡೆದಾಡಿ ಕ್ಷಯವನ್ನು ಹೊಂದಿದರು. ರಣದಲ್ಲಿ ಆ ಯೋಧರು ಪುಷ್ಪಭರಿತ ಕಿಂಶುಕಗಳಂತೆ (ಮುತ್ತುಗದ ಮರಗಳಂತೆ) ಶೋಭಿಸಿದರು.

07018015a ತತಃ ಶರಸಹಸ್ರಾಣಿ ತೈರ್ವಿಮುಕ್ತಾನಿ ಭಸ್ಮಸಾತ್|

07018015c ಕೃತ್ವಾ ತದಸ್ತ್ರಂ ತಾನ್ವೀರಾನನಯದ್ಯಮಸಾದನಂ||

ಆಗ ಆ ಅಸ್ತ್ರವು ಆ ವೀರರು ಬಿಟ್ಟ ಸಹಸ್ರಾರು ಬಾಣಗಳನ್ನು ಭಸ್ಮೀಭೂತವಾಗಿಸಿ ಅವರನ್ನು ಯಮಸದನಕ್ಕೆ ಕಳುಹಿಸಿತು.

07018016a ಅಥ ಪ್ರಹಸ್ಯ ಬೀಭತ್ಸುರ್ಲಲಿತ್ಥಾನ್ಮಾಲವಾನಪಿ|

07018016c ಮಾಚೇಲ್ಲಕಾಂಸ್ತ್ರಿಗರ್ತಾಂಶ್ಚ ಯೌಧೇಯಾಂಶ್ಚಾರ್ದಯಚ್ಚರೈಃ||

ಆಗ ಬೀಭತ್ಸುವು ಜೋರಾಗಿ ನಕ್ಕು ಲಲಿತ್ಥ-ಮಾಲವ-ಮಾಚೇಲ್ಲ ಮತ್ತು ತ್ರಿಗರ್ತಯೋಧರನ್ನು  ಶರಗಳಿಂದ ಹೊಡೆದು ಚದುರಿಸಿ ಬೇರೆ ಬೇರೆ ಮಾಡಿದನು.

07018017a ತೇ ವಧ್ಯಮಾನಾ ವೀರೇಣ ಕ್ಷತ್ರಿಯಾಃ ಕಾಲಚೋದಿತಾಃ|

07018017c ವ್ಯಸೃಜಂ ಶರವರ್ಷಾಣಿ ಪಾರ್ಥೇ ನಾನಾವಿಧಾನಿ ಚ||

ಆ ವೀರನು ವಧಿಸುತ್ತಿದ್ದ ಕಾಲಚೋದಿತ ಆ ಕ್ಷತ್ರಿಯರು ಪಾರ್ಥನ ಮೇಲೆ ನಾನಾವಿಧದ ಬಾಣಗಳ ಮಳೆಯನ್ನು ಸುರಿಸಿದರು.

07018018a ತತೋ ನೈವಾರ್ಜುನಸ್ತತ್ರ ನ ರಥೋ ನ ಚ ಕೇಶವಃ|

07018018c ಪ್ರತ್ಯದೃಶ್ಯತ ಘೋರೇಣ ಶರವರ್ಷೇಣ ಸಂವೃತಃ||

ಘೋರ ಶರವರ್ಷದಿಂದ ತುಂಬಿಹೋಗಿರಲು ಅಲ್ಲಿ ಅರ್ಜುನನಾಗಲೀ, ರಥವಾಗಲೀ, ಕೇಶವನಾಗಲೀ ಕಾಣಿಸಲಿಲ್ಲ.

07018019a ತತಸ್ತೇ ಲಬ್ಧಲಕ್ಷ್ಯತ್ವಾದನ್ಯೋನ್ಯಮಭಿಚುಕ್ರುಶುಃ|

07018019c ಹತೌ ಕೃಷ್ಣಾವಿತಿ ಪ್ರೀತಾ ವಾಸಾಂಸ್ಯಾದುಧುವುಸ್ತದಾ||

ಆಗ ಅವರು ಅನ್ಯೋನ್ಯರಲ್ಲಿ “ಗುರಿಗೆ ಸಿಲುಕಿ ಇಬ್ಬರೂ ಕೃಷ್ಣರೂ ಹತರಾದರು!” ಎಂದು ಹೇಳಿಕೊಳ್ಳುತ್ತಾ ಸಂತೋಷದಿಂದ ಅಂಗವಸ್ತ್ರಗಳನ್ನು ಮೇಲಕ್ಕೆತ್ತಿ ಕೂಗಿದರು.

07018020a ಭೇರೀಮೃದಂಗಶಂಖಾಂಶ್ಚ ದಧ್ಮುರ್ವೀರಾಃ ಸಹಸ್ರಶಃ|

07018020c ಸಿಂಹನಾದರವಾಂಶ್ಚೋಗ್ರಾಂಶ್ಚಕ್ರಿರೇ ತತ್ರ ಮಾರಿಷ||

ಮಾರಿಷ! ಅಲ್ಲಿ ಸಹಸ್ರಾರು ವೀರರು ಭೇರಿ-ಮೃದಂಗ-ಶಂಖಗಳನ್ನು ಮೊಳಗಿಸಿದರು ಮತ್ತು ಉಗ್ರವಾಗಿ ಸಿಂಹನಾದಗೈದರು.

07018021a ತತಃ ಪ್ರಸಿಷ್ವಿದೇ ಕೃಷ್ಣಃ ಖಿನ್ನಶ್ಚಾರ್ಜುನಮಬ್ರವೀತ್|

07018021c ಕ್ವಾಸಿ ಪಾರ್ಥ ನ ಪಶ್ಯೇ ತ್ವಾಂ ಕಚಿವಿಜ್ಜೀವಸಿ ಶತ್ರುಹನ್||

ಆಗ ಬೆವತುಹೋದ ಕೃಷ್ಣನು ಖಿನ್ನನಾಗಿ ಅರ್ಜುನನಿಗೆ ಹೇಳಿದನು: “ಪಾರ್ಥ! ಎಲ್ಲಿರುವೆ? ನಿನ್ನನ್ನು ಕಾಣುತ್ತಿಲ್ಲವಲ್ಲ! ಶತ್ರುಹನ್! ಜೀವಂತವಿದ್ದೀಯೆ ತಾನೇ?”

07018022a ತಸ್ಯ ತಂ ಮಾನುಷಂ ಭಾವಂ ಭಾವಜ್ಞೋಽಽಜ್ಞಾಯ ಪಾಂಡವಃ|

07018022c ವಾಯವ್ಯಾಸ್ತ್ರೇಣ ತೈರಸ್ತಾಂ ಶರವೃಷ್ಟಿಮಪಾಹರತ್||

ಅವನ ಆ ಮಾನುಷ ಭಾವವನ್ನು ಅರಿತ ಭಾವಜ್ಞ ಪಾಂಡವನು ಕೂಡಲೇ ವಾಯುವ್ಯಾಸ್ತ್ರದಿಂದ ಆ ಶರವೃಷ್ಠಿಯನ್ನು ಹೋಗಲಾಡಿಸಿದನು.

07018023a ತತಃ ಸಂಶಪ್ತಕವ್ರಾತಾನ್ಸಾಶ್ವದ್ವಿಪರಥಾಯುಧಾನ್|

07018023c ಉವಾಹ ಭಗವಾನ್ವಾಯುಃ ಶುಷ್ಕಪರ್ಣಚಯಾನಿವ||

ಆಗ ಭಗವಾನ್ ವಾಯುವು ಒಣಗಿದ ತರಗೆಲೆಗಳನ್ನು ಹಾರಿಸಿಕೊಂಡು ಹೋಗುವಂತೆ ಆ ಸಂಶಪ್ತಕ ಸಮೂಹವನ್ನು ಕುದುರೆ-ಆನೆ-ರಥ-ಆಯುಧಗಳೊಂದಿಗೆ ಹಾರಿಸಿಕೊಂಡು ಹೋದನು.

07018024a ಉಹ್ಯಮಾನಾಸ್ತು ತೇ ರಾಜನ್ಬಹ್ವಶೋಭಂತ ವಾಯುನಾ|

07018024c ಪ್ರಡೀನಾಃ ಪಕ್ಷಿಣಃ ಕಾಲೇ ವೃಕ್ಷೇಭ್ಯ ಇವ ಮಾರಿಷ||

ರಾಜನ್! ಮಾರಿಷ! ವಾಯುವಿನಿಂದ ಹಾರಿಸಿಕೊಂಡು ಹೋಗುತ್ತಿದ್ದ ಆ ಸೇನೆಯು ಮರದಲ್ಲಿರುವ ಪಕ್ಷಿಗಳು ಸಮಯಬಂದಾಗ ಒಟ್ಟಿಗೇ ಹಾರಿಹೋಗುತ್ತಿರುವಂತೆ ಕಂಡಿತು.

07018025a ತಾಂಸ್ತಥಾ ವ್ಯಾಕುಲೀಕೃತ್ಯ ತ್ವರಮಾಣೋ ಧನಂಜಯಃ|

07018025c ಜಘಾನ ನಿಶಿತೈರ್ಬಾಣೈಃ ಸಹಸ್ರಾಣಿ ಶತಾನಿ ಚ||

ಅವರನ್ನು ಹೀಗೆ ವ್ಯಾಕುಲರನ್ನಾಗಿಸಿ ಧನಂಜಯನು ತ್ವರೆಮಾಡಿ ನಿಶಿತಬಾಣಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು.

07018026a ಶಿರಾಂಸಿ ಭಲ್ಲೈರಹರದ್ಬಾಹೂನಪಿ ಚ ಸಾಯುಧಾನ್|

07018026c ಹಸ್ತಿಹಸ್ತೋಪಮಾಂಶ್ಚೋರೂಂ ಶರೈರುರ್ವ್ಯಾಮಪಾತಯತ್||

ನಿಶಿತ ಭಲ್ಲಗಳೆಂಬ ಶರಗಳಿಂದ ಶಿರಗಳನ್ನೂ, ಆಯುಧಗಳೊಂದಿಗೆ ಬಾಹುಗಳನ್ನೂ, ಆನೆಗಳ ಸೊಂಡಿಲುಗಳಂತಿದ್ದ ಯೋಧರ ತೊಡೆಗಳನ್ನೂ ಉರುಳಿಸಿದನು.

07018027a ಪೃಷ್ಠಚ್ಚಿನ್ನಾನ್ವಿಚರಣಾನ್ವಿಮಸ್ತಿಷ್ಕೇಕ್ಷಣಾಂಗುಲೀನ್|

07018027c ನಾನಾಂಗಾವಯವೈರ್ಹೀನಾಂಶ್ಚಕಾರಾರೀನ್ಧನಂಜಯಃ||

ಕೆಲವರ ಪೃಷ್ಟಭಾಗವು ಕತ್ತರಿಸಿ ಹೋಗಿತ್ತು. ಕೆಲವರು ಕಾಲುಗಳನ್ನು ಕಳೆದುಕೊಂಡಿದ್ದರು. ತೋಳುಗಳನ್ನು ಕಳೆದುಕೊಂಡಿದ್ದರು. ಕೆಲವರ ದೇಹದ ಅರ್ಧಭಾಗವೇ ಕತ್ತರಿಸಿ ಹೋಗಿತ್ತು. ಹೀಗೆ ಧನಂಜಯನು ಅವರನ್ನು ನಾನಾ ಅಂಗಾಂಗಗಳಿಂದ ವಿಹೀನರನ್ನಾಗಿ ಮಾಡಿದನು.

07018028a ಗಂಧರ್ವನಗರಾಕಾರಾನ್ವಿಧಿವತ್ಕಲ್ಪಿತಾನ್ರಥಾನ್|

07018028c ಶರೈರ್ವಿಶಕಲೀಕುರ್ವಂಶ್ಚಕ್ರೇ ವ್ಯಶ್ವರಥದ್ವಿಪಾನ್||

ಅವನು ಗಂಧರ್ವನಗರಗಳ ಆಕಾರದಲ್ಲಿ ವಿಧಿವತ್ತಾಗಿ ಕಲ್ಪಿಸಿದ್ದ ರಥಗಳನ್ನು ಶರಗಳಿಂದ ಛಿನ್ನ-ಭಿನ್ನಗಳನ್ನಾಗಿ ಮಾಡಿ ಅವರನ್ನು ಅಶ್ವ-ರಥ-ಗಜಗಳಿಂದ ವಿಹೀನರನ್ನಾಗಿ ಮಾಡಿದನು.

07018029a ಮುಂಡತಾಲವನಾನೀವ ತತ್ರ ತತ್ರ ಚಕಾಶಿರೇ|

07018029c ಚಿನ್ನಧ್ವಜರಥವ್ರಾತಾಃ ಕೇ ಚಿತ್ಕೇ ಚಿತ್ಕ್ವ ಚಿತ್ಕ್ವ ಚಿತ್||

ಅಲ್ಲಲ್ಲಿ ಧ್ವಜಗಳು ತುಂಡಾಗಿದ್ದ ರಥಗಳ ಗುಂಪುಗಳು ತಲೆಯನ್ನು ಕತ್ತರಿಸಿದ ತಾಳೆಯ ಮರಗಳಂತೆ ಕಾಣುತ್ತಿದ್ದವು.

07018030a ಸೋತ್ತರಾಯುಧಿನೋ ನಾಗಾಃ ಸಪತಾಕಾಂಕುಶಾಯುಧಾಃ|

07018030c ಪೇತುಃ ಶಕ್ರಾಶನಿಹತಾ ದ್ರುಮವಂತ ಇವಾಚಲಾಃ||

ಪತಾಕ-ಅಂಕುಶ-ಆಯುಧಗಳನ್ನು ಕಳೆದುಕೊಂಡ ಮಾವುತರನ್ನು ಕಳೆದುಕೊಂಡ ಆನೆಗಳು ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟ ಪರ್ವತಗಳು ವೃಕ್ಷಸಹಿತ ಕೆಳಗುರುಳಿರುವಂತೆ ಬಿದ್ದಿದ್ದವು.

07018031a ಚಾಮರಾಪೀಡಕವಚಾಃ ಸ್ರಸ್ತಾಂತ್ರನಯನಾಸವಃ|

07018031c ಸಾರೋಹಾಸ್ತುರಗಾಃ ಪೇತುಃ ಪಾರ್ಥಬಾಣಹತಾಃ ಕ್ಷಿತೌ||

ಚಾಮರಗಳಿಂದಲೂ ಮಾಲೆಗಳಿಂದಲೂ, ಕವಚಗಳಿಂದಲೂ ಸವಾರರಿಂದಲೂ ಕೂಡಿದ್ದ ಅನೇಕ ಕುದುರೆಗಳು ಪಾರ್ಥನ ಬಾಣಗಳಿಂದ ಹತವಾಗಿ ಭೂಮಿಯ ಮೇಲೆ ಬಿದ್ದವು.

07018032a ವಿಪ್ರವಿದ್ಧಾಸಿನಖರಾಶ್ಚಿನ್ನವರ್ಮರ್ಷ್ಟಿಶಕ್ತಯಃ|

07018032c ಪತ್ತಯಶ್ಚಿನ್ನವರ್ಮಾಣಃ ಕೃಪಣಂ ಶೇರತೇ ಹತಾಃ||

ತುಂಡಾದ ಖಡ್ಗಗಳು ಮತ್ತು ನಖರುಗಳು, ತುಂಡಾಗಿದ್ದ ಕವಚಗಳು, ಋಷ್ಟಿಗಳು ಮತ್ತು ಶಕ್ತಿಗಳೊಂದಿಗೆ ಪದಾತಿಗಳು ಕವಚಗಳು ಹರಿದುಹೋಗಿ ಬಡಪಾಯಿಗಳಂತೆ ಸತ್ತು ಮಲಗಿದರು.

07018033a ತೈರ್ಹತೈರ್ಹನ್ಯಮಾನೈಶ್ಚ ಪತದ್ಭಿಃ ಪತಿತೈರಪಿ|

07018033c ಭ್ರಮದ್ಭಿರ್ನಿಷ್ಟನದ್ಭಿಶ್ಚ ಘೋರಮಾಯೋಧನಂ ಬಭೌ||

ಅವರಲ್ಲಿ ಸತ್ತುಹೋಗಿದ್ದ, ಸಾಯುತ್ತಿದ್ದ, ಬಿದ್ದಿದ್ದ, ಬೀಳುತ್ತಿದ್ದ, ಭ್ರಮೆಯಿಂದ ತಿರುಗುತ್ತಿದ್ದ, ಕೂಗಿಕೊಳ್ಳುತ್ತಿದ್ದವರಿಂದ ತುಂಬಿಹೋಗಿ ರಣಾಂಗಣವು ಬಹಳ ಭಯಂಕರವಾಗಿ ಕಾಣುತ್ತಿತ್ತು.

07018034a ರಜಶ್ಚ ಮಹದುದ್ಭೂತಂ ಶಾಂತಂ ರುಧಿರವೃಷ್ಟಿಭಿಃ|

07018034c ಮಹೀ ಚಾಪ್ಯಭವದ್ದುರ್ಗಾ ಕಬಂಧಶತಸಂಕುಲಾ||

ಮೇಲೆದ್ದಿದ್ದ ಅತಿದೊಡ್ಡ ಧೂಳು ರಕ್ತದ ಮಳೆಸುರಿದು ಶಾಂತವಾದವು. ನೂರಾರು ಮುಂಡಗಳ ರಾಶಿಯಿಂದ ತುಂಬಿಹೋಗಿದ್ದ ರಣಾಂಗಣವು ಪ್ರವೇಶಕ್ಕೂ ಬಹಳ ದುರ್ಗಮವಾಗಿತ್ತು.

07018035a ತದ್ಬಭೌ ರೌದ್ರಬೀಭತ್ಸಂ ಬೀಭತ್ಸೋರ್ಯಾನಮಾಹವೇ|

07018035c ಆಕ್ರೀಡ ಇವ ರುದ್ರಸ್ಯ ಘ್ನತಃ ಕಾಲಾತ್ಯಯೇ ಪಶೂನ್||

ಆಗ ಆಹವದಲ್ಲಿ ಬೀಭತ್ಸುವಿನ ರಥವು ರೌದ್ರವೂ ಬೀಭತ್ಸವೂ ಆಗಿತ್ತು. ಕಾಲಾಂತ್ಯದಲ್ಲಿ ಪ್ರಾಣಿಗಳನ್ನು ಕೊಲ್ಲುವ ರುದ್ರನ ಕ್ರೀಡಾಂಗಣದಂತೆ ತೋರಿತು.

07018036a ತೇ ವಧ್ಯಮಾನಾಃ ಪಾರ್ಥೇನ ವ್ಯಾಕುಲಾಶ್ವರಥದ್ವಿಪಾಃ|

07018036c ತಮೇವಾಭಿಮುಖಾಃ ಕ್ಷೀಣಾಃ ಶಕ್ರಸ್ಯಾತಿಥಿತಾಂ ಗತಾಃ||

ಪಾರ್ಥನಿಂದ ವಧಿಸಲ್ಪಟ್ಟು ವ್ಯಾಕುಲಗೊಂಡ ಅಶ್ವ-ರಥ-ಗಜಗಳು ಅವನ ಎದುರಾಗಿಯೇ ಯುದ್ಧಮಾಡಿ ಶಕ್ರನ ಅತಿಥಿಗಳಾಗಿ ಹೋಗಿ ಕ್ಷೀಣವಾಗುತ್ತಿದ್ದವು.

07018037a ಸಾ ಭೂಮಿರ್ಭರತಶ್ರೇಷ್ಠ ನಿಹತೈಸ್ತೈರ್ಮಹಾರಥೈಃ|

07018037c ಆಸ್ತೀರ್ಣಾ ಸಂಬಭೌ ಸರ್ವಾ ಪ್ರೇತೀಭೂತೈಃ ಸಮಂತತಃ||

ಭರತಶ್ರೇಷ್ಠ! ಆ ಮಹಾರಥರು ಹತರಾಗಿ ಬಿದ್ದಿದ್ದ ಭೂಮಿಯು ಎಲ್ಲ ಕಡೆ ಪ್ರೇತಗಳಿಂದ ತುಂಬಿಕೊಂಡಿದೆಯೋ ಎನ್ನುವಂತೆ ತೋರಿತು.

07018038a ಏತಸ್ಮಿನ್ನಂತರೇ ಚೈವ ಪ್ರಮತ್ತೇ ಸವ್ಯಸಾಚಿನಿ|

07018038c ವ್ಯೂಢಾನೀಕಸ್ತತೋ ದ್ರೋಣೋ ಯುಧಿಷ್ಠಿರಮುಪಾದ್ರವತ್||

ಈ ರೀತಿ ಸವ್ಯಸಾಚಿಯು ಯುದ್ಧದಲ್ಲಿ ತಲ್ಲೀನನಾಗಿರಲು ದ್ರೋಣನು ವ್ಯೂಹದೊಂದಿಗೆ ಯುಧಿಷ್ಠಿರನನ್ನು ಆಕ್ರಮಣಿಸಿದನು.

07018039a ತಂ ಪ್ರತ್ಯಗೃಹ್ಣಂಸ್ತ್ವರಿತಾ ವ್ಯೂಢಾನೀಕಾಃ ಪ್ರಹಾರಿಣಃ|

07018039c ಯುಧಿಷ್ಠಿರಂ ಪರೀಪ್ಸಂತಸ್ತದಾಸೀತ್ತುಮುಲಂ ಮಹತ್||

ಯುಧಿಷ್ಠಿರನನ್ನು ಬಂಧಿಸಲು ವ್ಯೂಹವನ್ನು ರಚಿಸಿಕೊಂಡು ಪ್ರಹಾರ ಮಾಡಲು ಆಗ ಮಹಾ ತುಮುಲಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಅರ್ಜುನಸಂಶಪ್ತಕಯುದ್ಧೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಅರ್ಜುನಸಂಶಪ್ತಕಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.

Image result for indian motifs against white background

Comments are closed.