Drona Parva: Chapter 160

ದ್ರೋಣ ಪರ್ವ: ದ್ರೋಣವಧ ಪರ್ವ

೧೬೦

“ನೀವು ಪಾಂಡವರೊಂದಿಗೆ ವಿಶೇಷ ಸಹನೆಯನ್ನು ತೋರಿಸುತ್ತಿದ್ದೀರಿ!” ಎಂದು ದುರ್ಯೋಧನನು ದ್ರೋಣನನ್ನು ನಿಂದಿಸಿದುದು (೧-೮). ಸರ್ವಪಾಂಚಾಲರನ್ನು ಸಂಹರಿಸಿದ ನಂತರವೇ ತನ್ನ ಕವಚವನ್ನು ಬಿಚ್ಚುತ್ತೇನೆಂದು ಹೇಳಿ ದ್ರೋಣನು ದುರ್ಯೋಧನನಿಗೆ ಅರ್ಜುನನ ಪರಾಕ್ರಮಗಳನ್ನು ವರ್ಣಿಸಿದುದು (೯-೨೦). ಕರ್ಣ-ದುಃಶಾಸನ-ಶಕುನಿಯರೊಡನೆ ಸೇರಿಕೊಂಡು ತಾನೇ ಅರ್ಜುನನನ್ನು ಸಂಹರಿಸುತ್ತೇನೆಂದು ದುರ್ಯೋಧನನು ಹೇಳಲು ದ್ರೋಣನು ವ್ಯಂಗ್ಯಮಾತುಗಳನ್ನಾಡಿ ಕಳುಹಿಸಿದುದು (೨೧-೩೭).

07160001 ಸಂಜಯ ಉವಾಚ|

07160001a ತತೋ ದುರ್ಯೋಧನೋ ದ್ರೋಣಮಭಿಗಮ್ಯೇದಮಬ್ರವೀತ್|

07160001c ಅಮರ್ಷವಶಮಾಪನ್ನೋ ಜನಯನ್ ಹರ್ಷತೇಜಸೀ||

ಸಂಜಯನು ಹೇಳಿದನು: “ಅನಂತರ ಕ್ರೋಧಾವಿಷ್ಟ ದುರ್ಯೋಧನನು ದ್ರೋಣನ ಬಳಿಬಂದು ಹರ್ಷವನ್ನೂ ತೇಜಸ್ಸನ್ನೂ ಹುಟ್ಟಿಸುತ್ತಾ ಈ ಮಾತನ್ನಾಡಿದನು:

07160002a ನ ಮರ್ಷಣೀಯಾಃ ಸಂಗ್ರಾಮೇ ವಿಶ್ರಮಂತಃ ಶ್ರಮಾನ್ವಿತಾಃ|

07160002c ಸಪತ್ನಾ ಗ್ಲಾನಮನಸೋ ಲಬ್ಧಲಕ್ಷ್ಯಾ ವಿಶೇಷತಃ||

“ಸಂಗ್ರಾಮದಲ್ಲಿ ಬಳಲಿ ವಿಶ್ರಮಿಸುತ್ತಿರುವ, ಉತ್ಸಾಹಹೀನರಾಗಿರುವವರ ಮೇಲೆ – ಅದರಲ್ಲೂ ವಿಶೇಷವಾಗಿ ಲಕ್ಷ್ಯವನ್ನು ಭೇದಿಸಬಲ್ಲ ಶತ್ರುಗಳ ಮೇಲೆ - ಕ್ಷಮೆಯನ್ನು ತೋರಿಸಲೇ ಬಾರದು.

07160003a ತತ್ತು ಮರ್ಷಿತಮಸ್ಮಾಭಿರ್ಭವತಃ ಪ್ರಿಯಕಾಮ್ಯಯಾ|

07160003c ತ ಏತೇ ಪರಿವಿಶ್ರಾಂತಾಃ ಪಾಂಡವಾ ಬಲವತ್ತರಾಃ||

ನಿಮಗೆ ಪ್ರಿಯವಾದುದನ್ನು ಮಾಡಲೋಸುಗವೇ ನಾವು ಈಗ ತಾಳ್ಮೆಯಿಂದ ಇದ್ದೇವೆ. ನಿಶ್ಚಿಂತರಾಗಿ ವಿಶ್ರಾಂತಿಯನ್ನು ಪಡೆದ ಈ ಪಾಂಡವರು ಈಗ ಇನ್ನೂ ಹೆಚ್ಚಿನ ಬಲವುಳ್ಳವರಾಗಿದ್ದಾರೆ.

07160004a ಸರ್ವಥಾ ಪರಿಹೀನಾಃ ಸ್ಮ ತೇಜಸಾ ಚ ಬಲೇನ ಚ|

07160004c ಭವತಾ ಪಾಲ್ಯಮಾನಾಸ್ತೇ ವಿವರ್ಧಂತೇ ಪುನಃ ಪುನಃ||

ನಾವಾದರೋ ತೇಜಸ್ಸು ಬಲಗಳಲ್ಲಿ ಸರ್ವಥಾ ಹೀನರಾಗುತ್ತಿದ್ದೇವೆ. ನಿಮ್ಮಿಂದ ಪರಿಪಾಲಿಸಲ್ಪಟ್ಟಿರುವ ಅವರು ಪುನಃ ಪುನಃ ವರ್ಧಿಸುತ್ತಲೇ ಇದ್ದಾರೆ.

07160005a ದಿವ್ಯಾನ್ಯಸ್ತ್ರಾಣಿ ಸರ್ವಾಣಿ ಬ್ರಹ್ಮಾಸ್ತ್ರಾದೀನಿ ಯಾನ್ಯಪಿ|

07160005c ತಾನಿ ಸರ್ವಾಣಿ ತಿಷ್ಠಂತಿ ಭವತ್ಯೇವ ವಿಶೇಷತಃ||

ಬ್ರಹ್ಮಾಸ್ತ್ರವೇ ಮೊದಲಾದ ಎಲ್ಲ ದಿವ್ಯಾಸ್ತ್ರಗಳೂ ವಿಶೇಷವಾಗಿ ನಿಮ್ಮಲ್ಲಿಯೇ ಪ್ರತಿಷ್ಠಿತವಾಗಿವೆ.

07160006a ನ ಪಾಂಡವೇಯಾ ನ ವಯಂ ನಾನ್ಯೇ ಲೋಕೇ ಧನುರ್ಧರಾಃ|

07160006c ಯುಧ್ಯಮಾನಸ್ಯ ತೇ ತುಲ್ಯಾಃ ಸತ್ಯಮೇತದ್ಬ್ರವೀಮಿ ತೇ||

ಪಾಂಡವರಾಗಲೀ, ನಾವಾಗಲೀ ಮತ್ತು ಲೋಕದಲ್ಲಿನ ಅನ್ಯ ಧನುರ್ಧರರಾಗಲೀ ಯುದ್ಧದಲ್ಲಿ ತೊಡಗಿರುವ ನಿಮಗೆ ಸಮಾನರಾಗುವುದಿಲ್ಲ. ನಿಮಗೆ ಈ ಮಾತನ್ನು ನಾನು ಸತ್ಯವಾಗಿ ಹೇಳುತ್ತಿದ್ದೇನೆ.

07160007a ಸಸುರಾಸುರಗಂಧರ್ವಾನಿಮಾಽಲ್ಲೋಕಾನ್ದ್ವಿಜೋತ್ತಮ|

07160007c ಸರ್ವಾಸ್ತ್ರವಿದ್ಭವಾನ್ ಹನ್ಯಾದ್ದಿವ್ಯೈರಸ್ತ್ರೈರ್ನ ಸಂಶಯಃ||

ದ್ವಿಜೋತ್ತಮ! ಸರ್ವಾಸ್ತ್ರಗಳನ್ನು ತಿಳಿದುಕೊಂಡಿರುವ ನೀವು ಸುರಾಸುರಗಂಧರ್ವರಿಂದ ಕೂಡಿದ ಈ ಸರ್ವ ಲೋಕಗಳನ್ನೂ ದಿವ್ಯಾಸ್ತ್ರಗಳಿಂದ ನಾಶಗೊಳಿಸಬಲ್ಲಿರಿ. ಅದರಲ್ಲಿ ಸಂಶಯವೇ ಇಲ್ಲ.

07160008a ಸ ಭವಾನ್ಮರ್ಷಯತ್ಯೇನಾಂಸ್ತ್ವತ್ತೋ ಭೀತಾನ್ವಿಶೇಷತಃ|

07160008c ಶಿಷ್ಯತ್ವಂ ವಾ ಪುರಸ್ಕೃತ್ಯ ಮಮ ವಾ ಮಂದಭಾಗ್ಯತಾಂ||

ಅವರು ನಿಮಗೆ ಹೆದರಿದ್ದರೂ ಅವರ ಶಿಷ್ಯತ್ವವನ್ನು ಮುಂದಿರಿಸಿಕೊಂಡೋ ಅಥವಾ ನನ್ನ ಮಂದಭಾಗ್ಯದಿಂದಲೋ ನೀವು ಅವರಲ್ಲಿ ವಿಶೇಷ ಸಹನೆಯನ್ನೇ ತೋರಿಸುತ್ತಿರುವಿರಿ!”

07160009a ಏವಮುದ್ಧರ್ಷಿತೋ ದ್ರೋಣಃ ಕೋಪಿತಶ್ಚಾತ್ಮಜೇನ ತೇ|

07160009c ಸಮನ್ಯುರಬ್ರವೀದ್ರಾಜನ್ದುರ್ಯೋಧನಮಿದಂ ವಚಃ||

ರಾಜನ್! ಯುದ್ಧೋತ್ಸಾಹವನ್ನು ತುಂಬಬೇಕೆಂದು ಬಯಸಿ ನಿನ್ನ ಮಗನು ಹೇಳಿದ ಈ ಮಾತಿನಿಂದ ಕುಪಿತನಾದ ದ್ರೋಣನು ಕೋಪವಶನಾಗಿ ದುರ್ಯೋಧನನಿಗೆ ಹೀಗೆ ಹೇಳಿದನು:

07160010a ಸ್ಥವಿರಃ ಸನ್ಪರಂ ಶಕ್ತ್ಯಾ ಘಟೇ ದುರ್ಯೋಧನಾಹವೇ|

07160010c ಅತಃ ಪರಂ ಮಯಾ ಕಾರ್ಯಂ ಕ್ಷುದ್ರಂ ವಿಜಯಗೃದ್ಧಿನಾ|

07160010e ಅನಸ್ತ್ರವಿದಯಂ ಸರ್ವೋ ಹಂತವ್ಯೋಽಸ್ತ್ರವಿದಾ ಜನಃ||

“ದುರ್ಯೋಧನ! ವೃದ್ಧನಾಗಿದ್ದರೂ ನಾನು ನನ್ನ ಪರಮ ಶಕ್ತಿಯನ್ನುಪಯೋಗಿಸಿ ಯುದ್ಧದಲ್ಲಿ ಹೋರಾಡುತ್ತಿದ್ದೇನೆ. ವಿಜಯದ ಆಸೆಯಿಂದ ನಾನು ನೀಚಕಾರ್ಯವನ್ನು ಮಾಡಬೇಕೇ? ಇಲ್ಲಿರುವ ಎಲ್ಲರಿಗೂ ಅಸ್ತ್ರಗಳು ತಿಳಿದಿಲ್ಲ ಎಂದು ಅಂದುಕೊಂಡು ಅಸ್ತ್ರವಿದನಾದ ನಾನು ಎಲ್ಲರನ್ನೂ ಸಂಹರಿಸಬೇಕೇ?

07160011a ಯದ್ಭವಾನ್ಮನ್ಯತೇ ಚಾಪಿ ಶುಭಂ ವಾ ಯದಿ ವಾಶುಭಂ|

07160011c ತದ್ವೈ ಕರ್ತಾಸ್ಮಿ ಕೌರವ್ಯ ವಚನಾತ್ತವ ನಾನ್ಯಥಾ||

ಕೌರವ್ಯ! ಶುಭವೋ ಅಶುಭವೋ ನೀನು ಹೇಳಿದಂತೆಯೇ ನಾನು ಮಾಡುತ್ತೇನೆ. ನಿನ್ನ ಮಾತಿಗೆ ಹೊರತಾಗಿ ನಾನು ಏನನ್ನೂ ಮಾಡುವುದಿಲ್ಲ.

07160012a ನಿಹತ್ಯ ಸರ್ವಪಾಂಚಾಲಾನ್ಯುದ್ಧೇ ಕೃತ್ವಾ ಪರಾಕ್ರಮಂ|

07160012c ವಿಮೋಕ್ಷ್ಯೇ ಕವಚಂ ರಾಜನ್ಸತ್ಯೇನಾಯುಧಮಾಲಭೇ||

ರಾಜನ್! ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ಸರ್ವ ಪಾಂಚಾಲರನ್ನೂ ಸಂಹರಿಸಿದ ನಂತರವೇ ನಾನು ಈ ಕವಚವನ್ನು ಕಳಚುತ್ತೇನೆ. ಈ ಮಾತನ್ನು ನಾನು ನನ್ನ ಆಯುಧಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.

07160013a ಮನ್ಯಸೇ ಯಚ್ಚ ಕೌಂತೇಯಮರ್ಜುನಂ ಶ್ರಾಂತಮಾಹವೇ|

07160013c ತಸ್ಯ ವೀರ್ಯಂ ಮಹಾಬಾಹೋ ಶೃಣು ಸತ್ಯೇನ ಕೌರವ||

ಮಹಾಬಾಹೋ! ಕೌರವ! ಯುದ್ಧದಲ್ಲಿ ಬಳಲಿರುವ ಅರ್ಜುನನನ್ನು ಸಂಹರಿಸಿಬಿಡಬಹುದೆಂದು ನಿನಗನ್ನಿಸುತ್ತದೆಯಲ್ಲವೇ? ಅವನ ವೀರ್ಯದ ಕುರಿತಾದ ಸತ್ಯವನ್ನು ನಿನಗೆ ಹೇಳುತ್ತೇನೆ. ಕೇಳು!

07160014a ತಂ ನ ದೇವಾ ನ ಗಂಧರ್ವಾ ನ ಯಕ್ಷಾ ನ ಚ ರಾಕ್ಷಸಾಃ|

07160014c ಉತ್ಸಹಂತೇ ರಣೇ ಸೋಢುಂ ಕುಪಿತಂ ಸವ್ಯಸಾಚಿನಂ||

ರಣದಲ್ಲಿ ಕುಪಿತ ಸವ್ಯಸಾಚಿಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷರಾಗಲೀ ಮತ್ತು ರಾಕ್ಷಸರಾಗಲೀ ಎದುರಿಸಲು ಉತ್ಸಾಹಿಸುವುದಿಲ್ಲ.

07160015a ಖಾಂಡವೇ ಯೇನ ಭಗವಾನ್ಪ್ರತ್ಯುದ್ಯಾತಃ ಸುರೇಶ್ವರಃ|

07160015c ಸಾಯಕೈರ್ವಾರಿತಶ್ಚಾಪಿ ವರ್ಷಮಾಣೋ ಮಹಾತ್ಮನಾ||

ಖಾಂಡವದಲ್ಲಿ ಅದ್ಭುತ ಮಳೆಸುರಿಸುತ್ತಿದ್ದ ಭಗವಾನ್ ಸುರೇಶ್ವರನನ್ನೇ ಮಹಾತ್ಮ ಅರ್ಜುನನು ಸಾಯಕಗಳಿಂದ ನಿಲ್ಲಿಸಿದನು.

07160016a ಯಕ್ಷಾ ನಾಗಾಸ್ತಥಾ ದೈತ್ಯಾ ಯೇ ಚಾನ್ಯೇ ಬಲಗರ್ವಿತಾಃ|

07160016c ನಿಹತಾಃ ಪುರುಷೇಂದ್ರೇಣ ತಚ್ಚಾಪಿ ವಿದಿತಂ ತವ||

ಬಲಗರ್ವಿತ ಯಕ್ಷರು, ನಾಗರು, ದೈತ್ಯರು ಮತ್ತು ಅನ್ಯರು ಈ ಪುರುಷೇಂದ್ರನಿಂದ ನಾಶಗೊಂಡಿರುವುದು ನಿನಗೆ ತಿಳಿದೇ ಇದೆ.

07160017a ಗಂಧರ್ವಾ ಘೋಷಯಾತ್ರಾಯಾಂ ಚಿತ್ರಸೇನಾದಯೋ ಜಿತಾಃ|

07160017c ಯೂಯಂ ತೈರ್ಹ್ರಿಯಮಾಣಾಶ್ಚ ಮೋಕ್ಷಿತಾ ದೃಢಧನ್ವನಾ||

ಘೋಷಯಾತ್ರೆಯ ಸಮಯದಲ್ಲಿ ಗಂಧರ್ವ ಚಿತ್ರಸೇನನೇ ಮೊದಲಾದವರನ್ನು ಗೆದ್ದು ಈ ದೃಢಧನ್ವಿಯು ನಿನ್ನನ್ನು ಬಿಡುಗಡೆಗೊಳಿಸಿ ನಾಚಿಕೆಗೀಡುಮಾಡಲಿಲ್ಲವೇ?

07160018a ನಿವಾತಕವಚಾಶ್ಚಾಪಿ ದೇವಾನಾಂ ಶತ್ರವಸ್ತಥಾ|

07160018c ಸುರೈರವಧ್ಯಾಃ ಸಂಗ್ರಾಮೇ ತೇನ ವೀರೇಣ ನಿರ್ಜಿತಾಃ||

ಈ ವೀರನು ಸಂಗ್ರಾಮದಲ್ಲಿ ದೇವತೆಗಳ ಶತ್ರುಗಳಾದ ಸುರರಿಗೂ ಅವಧ್ಯ ನಿವಾತಕವಚರನ್ನೂ ಸೋಲಿಸಿದನು.

07160019a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ|

07160019c ವಿಜಿಗ್ಯೇ ಪುರುಷವ್ಯಾಘ್ರಃ ಸ ಶಕ್ಯೋ ಮಾನುಷೈಃ ಕಥಂ||

ಸಹಸ್ರಾರು ಹಿರಣ್ಯಪುರವಾಸಿ ದಾನವರನ್ನು ಈ ಪುರುಷವ್ಯಾಘ್ರನು ಗೆದ್ದನು. ಇದು ಮನುಷ್ಯರಿಗೆ ಹೇಗೆ ಸಾಧ್ಯ?

07160020a ಪ್ರತ್ಯಕ್ಷಂ ಚೈವ ತೇ ಸರ್ವಂ ಯಥಾ ಬಲಮಿದಂ ತವ|

07160020c ಕ್ಷಪಿತಂ ಪಾಂಡುಪುತ್ರೇಣ ಚೇಷ್ಟತಾಂ ನೋ ವಿಶಾಂ ಪತೇ||

ವಿಶಾಂಪತೇ! ನಾವೆಷ್ಟೇ ಪ್ರಯತ್ನಪಟ್ಟು ಹೋರಾಡುತ್ತಿದ್ದರೂ ನಿನ್ನ ಈ ಸೇನೆಯು ನಿನ್ನ ಕಣ್ಣುಮುಂದೇ ಪಾಂಡುಪುತ್ರನಿಂದ ನಾಶವಾಗುತ್ತಿಲ್ಲವೇ?”

07160021a ತಂ ತಥಾಭಿಪ್ರಶಂಸಂತಮರ್ಜುನಂ ಕುಪಿತಸ್ತದಾ|

07160021c ದ್ರೋಣಂ ತವ ಸುತೋ ರಾಜನ್ಪುನರೇವೇದಮಬ್ರವೀತ್||

ರಾಜನ್! ಹೀಗೆ ಅರ್ಜುನನನ್ನು ಪ್ರಶಂಸಿಸುತ್ತಿದ್ದ ದ್ರೋಣನಿಗೆ ಕುಪಿತನಾದ ನಿನ್ನ ಮಗನು ಪುನಃ ಹೀಗೆ ಹೇಳಿದನು:

07160022a ಅಹಂ ದುಃಶಾಸನಃ ಕರ್ಣಃ ಶಕುನಿರ್ಮಾತುಲಶ್ಚ ಮೇ|

07160022c ಹನಿಷ್ಯಾಮೋಽರ್ಜುನಂ ಸಂಖ್ಯೇ ದ್ವೈಧೀಕೃತ್ಯಾದ್ಯ ಭಾರತೀಂ||

“ಯುದ್ಧದಲ್ಲಿ ಇಂದು ಭಾರತೀಸೇನೆಯನ್ನು ಎರಡು ಭಾಗಗಳನ್ನಾಗಿಸಿಕೊಂಡು ನಾನು, ದುಃಶಾಸನ, ಕರ್ಣ ಮತ್ತು ಸೋದರಮಾವ ಶಕುನಿ – ಅರ್ಜುನನನ್ನು ಸಂಹರಿಸುತ್ತೇವೆ.”

07160023a ತಸ್ಯ ತದ್ವಚನಂ ಶ್ರುತ್ವಾ ಭಾರದ್ವಾಜೋ ಹಸನ್ನಿವ|

07160023c ಅನ್ವವರ್ತತ ರಾಜಾನಂ ಸ್ವಸ್ತಿ ತೇಽಸ್ತ್ವಿತಿ ಚಾಬ್ರವೀತ್||

ಅವನ ಆ ಮಾತನ್ನು ಕೇಳಿ ನಸುನಗುತ್ತಾ ಭಾರದ್ವಾಜನು “ನಿನಗೆ ಮಂಗಳವಾಗಲಿ!” ಎಂದು ಹೇಳಿ ರಾಜನನ್ನು ಕಳುಹಿಸಿಕೊಡುತ್ತಾ ಇನ್ನೂ ಹೇಳಿದನು:

07160024a ಕೋ ಹಿ ಗಾಂಡೀವಧನ್ವಾನಂ ಜ್ವಲಂತಮಿವ ತೇಜಸಾ|

07160024c ಅಕ್ಷಯಂ ಕ್ಷಪಯೇತ್ಕಶ್ಚಿತ್ ಕ್ಷತ್ರಿಯಃ ಕ್ಷತ್ರಿಯರ್ಷಭಂ||

“ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಅಕ್ಷಯ ಕ್ಷತ್ರಿಯರ್ಷಭ ಗಾಂಡೀವಧನ್ವಿಯನ್ನು ಯಾವ ಕ್ಷತ್ರಿಯನು ವಿನಾಶಮಾಡಬಲ್ಲನು?

07160025a ತಂ ನ ವಿತ್ತಪತಿರ್ನೇಂದ್ರೋ ನ ಯಮೋ ನ ಜಲೇಶ್ವರಃ|

07160025c ನಾಸುರೋರಗರಕ್ಷಾಂಸಿ ಕ್ಷಪಯೇಯುಃ ಸಹಾಯುಧಂ||

ದಿಕ್ಪಾಲಕ ವಿತ್ತಪತಿ ಕುಬೇರನಾಗಲೀ, ಇಂದ್ರನಾಗಲೀ, ಯಮನಾಗಲೀ, ಜಲೇಶ್ವರ ವರುಣನಾಗಲೀ ಅಥವಾ ಅಸುರ-ಉರಗ-ರಾಕ್ಷಸರೂ ಕೂಡ ಆಯುಧಪಾಣಿ ಅರ್ಜುನನನ್ನು ನಾಶಗೊಳಿಸಲಾರರು.

07160026a ಮೂಢಾಸ್ತ್ವೇತಾನಿ ಭಾಷಂತೇ ಯಾನೀಮಾನ್ಯಾತ್ಥ ಭಾರತ|

07160026c ಯುದ್ಧೇ ಹ್ಯರ್ಜುನಮಾಸಾದ್ಯ ಸ್ವಸ್ತಿಮಾನ್ಕೋ ವ್ರಜೇದ್ಗೃಹಾನ್||

ಭಾರತ! ನೀನಾಡಿದ ಈ ಮಾತುಗಳನ್ನು ಕೇವಲು ಮೂಢರು ಆಡುತ್ತಾರೆ. ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದ ಯಾರು ತಾನೇ ಕುಶಲಿಗಳಾಗಿ ಮನೆಗೆ ಹಿಂದಿರುಗುತ್ತಾರೆ?

07160027a ತ್ವಂ ತು ಸರ್ವಾತಿಶಂಕಿತ್ವಾನ್ನಿಷ್ಠುರಃ ಪಾಪನಿಶ್ಚಯಃ|

07160027c ಶ್ರೇಯಸಸ್ತ್ವದ್ಧಿತೇ ಯುಕ್ತಾಂಸ್ತತ್ತದ್ವಕ್ತುಮಿಹೇಚ್ಚಸಿ||

ನೀನಾದರೋ ಎಲ್ಲರನ್ನೂ ಅತಿಯಾಗಿ ಶಂಕಿಸುವವನು. ನಿಷ್ಠುರವಾಗಿ ಮಾತನಾಡುತ್ತೀಯೆ. ಪಾಪಭರಿತ ನಿಶ್ಚಯಗಳನ್ನು ಕೈಗೊಳ್ಳುತ್ತೀಯೆ. ನಿನಗೆ ಶ್ರೇಯಸ್ಕರರಾದವರ ಮತ್ತು ನಿನ್ನ ಹಿತದಲ್ಲಿಯೇ ನಿರತರಾದವರ ಮೇಲೆ ಕೂಡ ನೀನು ನಿಷ್ಠುರವಾಗಿ ಮಾತನಾಡಬಯಸುತ್ತೀಯೆ!

07160028a ಗಚ್ಚ ತ್ವಮಪಿ ಕೌಂತೇಯಮಾತ್ಮಾರ್ಥೇಭ್ಯೋ ಹಿ ಮಾಚಿರಂ|

07160028c ತ್ವಮಪ್ಯಾಶಂಸಸೇ ಯೋದ್ಧುಂ ಕುಲಜಃ ಕ್ಷತ್ರಿಯೋ ಹ್ಯಸಿ||

ಕೌಂತೇಯನ ಸಮೀಪಕ್ಕೆ ನೀನೇ ಹೋಗು! ನಿನಗೋಸ್ಕರವಾಗಿ ಬೇಗನೆ ಅವನನ್ನು ಸಂಹರಿಸು! ಕುಲಜನೂ ಕ್ಷತ್ರಿಯನೂ ಆಗಿರುವ ನೀನು ಯುದ್ಧಮಾಡಲು ಏಕೆ ಶಂಕಿಸುತ್ತಿರುವೆ?

07160029a ಇಮಾನ್ಕಿಂ ಪಾರ್ಥಿವಾನ್ಸರ್ವಾನ್ಘಾತಯಿಷ್ಯಸ್ಯನಾಗಸಃ|

07160029c ತ್ವಮಸ್ಯ ಮೂಲಂ ವೈರಸ್ಯ ತಸ್ಮಾದಾಸಾದಯಾರ್ಜುನಂ||

ನಿರಪರಾಧಿ ಈ ಪಾರ್ಥಿವಸರ್ವರನ್ನೂ ಏಕೆ ಸುಮ್ಮನೇ ನಾಶಗೊಳಿಸುತ್ತಿರುವೆ? ಈ ವೈರತ್ವಕ್ಕೆ ಮೂಲಕಾರಣನಾದ ನೀನೇ ಅರ್ಜುನನನ್ನು ಎದುರಿಸುವುದು ಸರಿಯಾಗಿದೆ.

07160030a ಏಷ ತೇ ಮಾತುಲಃ ಪ್ರಾಜ್ಞಃ ಕ್ಷತ್ರಧರ್ಮಮನುವ್ರತಃ|

07160030c ದೂರ್ದ್ಯೂತದೇವೀ ಗಾಂಧಾರಿಃ ಪ್ರಯಾತ್ವರ್ಜುನಮಾಹವೇ||

ತಿಳಿದವನಾದ, ಕ್ಷತ್ರಧರ್ಮವನ್ನು ಅನುಸರಿಸುವ, ಮೋಸದ ದ್ಯೂತದಲ್ಲಿ ನಿಪುಣನಾಗಿರುವ ಗಾಂಧಾರದೇಶದ ಈ ನಿನ್ನ ಸೋದರಮಾವನನ್ನೂ ಅರ್ಜುನನೊಡನೆ ಯುದ್ಧಮಾಡಲು ಕಳುಹಿಸು.

07160031a ಏಷೋಽಕ್ಷಕುಶಲೋ ಜಿಹ್ಮೋ ದ್ಯೂತಕೃತ್ಕಿತವಃ ಶಠಃ|

07160031c ದೇವಿತಾ ನಿಕೃತಿಪ್ರಜ್ಞೋ ಯುಧಿ ಜೇಷ್ಯತಿ ಪಾಂಡವಾನ್||

ಅಕ್ಷವಿದ್ಯೆಯಲ್ಲಿ ಮಹಾಕುಶಲನಾಗಿರುವ, ವಕ್ರಬುದ್ಧಿಯುಳ್ಳ, ಜೂಜಿನ ಜಾಲವನ್ನು ವ್ಯವಸ್ಥಾಪಿಸುವ, ಶಠ, ಜೂಜುಕೋರ, ಮೋಸದಲ್ಲಿ ಮಹಾಪ್ರಾಜ್ಞನಾದ ಇವನು ಯುದ್ಧದಲ್ಲಿ ಪಾಂಡವರನ್ನು ಜಯಿಸುತ್ತಾನೆ.

07160032a ತ್ವಯಾ ಕಥಿತಮತ್ಯಂತಂ ಕರ್ಣೇನ ಸಹ ಹೃಷ್ಟವತ್|

07160032c ಅಸಕೃಚ್ಚೂನ್ಯವನ್ಮೋಹಾದ್ಧೃತರಾಷ್ಟ್ರಸ್ಯ ಶೃಣ್ವತಃ||

ಕರ್ಣನೊಡನೆ ಸೇರಿಕೊಂಡು ಅತ್ಯಂತ ಸಂತೋಷಗೊಂಡವನಂತೆ ಮೋಹದಿಂದ ನೀನು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಕೊಚ್ಚಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ:

07160033a ಅಹಂ ಚ ತಾತ ಕರ್ಣಶ್ಚ ಭ್ರಾತಾ ದುಃಶಾಸನಶ್ಚ ಮೇ|

07160033c ಪಾಂಡುಪುತ್ರಾನ್ ಹನಿಷ್ಯಾಮಃ ಸಹಿತಾಃ ಸಮರೇ ತ್ರಯಃ||

“ಅಪ್ಪಾ! ನಾನು, ಕರ್ಣ, ಭ್ರಾತ ದುಃಶಾಸನ ಈ ಮೂವರೇ ಸೇರಿ ಪಾಂಡುಪುತ್ರರನ್ನು ಸಮರದಲ್ಲಿ ಸಂಹರಿಸಬಲ್ಲೆವು!”

07160034a ಇತಿ ತೇ ಕತ್ಥಮಾನಸ್ಯ ಶ್ರುತಂ ಸಂಸದಿ ಸಂಸದಿ|

07160034c ಅನುತಿಷ್ಠ ಪ್ರತಿಜ್ಞಾಂ ತಾಂ ಸತ್ಯವಾಗ್ಭವ ತೈಃ ಸಹ||

ಹೀಗೆ ನೀನು ಗಳಹುತ್ತಿರುವುದನ್ನು ಪ್ರತಿ ಸಭೆಯಲ್ಲಿಯೂ ಕೇಳುತ್ತಲೇ ಬಂದಿದ್ದೇವೆ. ಆ ಪ್ರತಿಜ್ಞೆಗಳು ಸತ್ಯವಾಗುವಂತೆ ಅವರೊಂದಿಗೆ ನೀನು ನಡೆದುಕೋ!

07160035a ಏಷ ತೇ ಪಾಂಡವಃ ಶತ್ರುರವಿಷಹ್ಯೋಽಗ್ರತಃ ಸ್ಥಿತಃ|

07160035c ಕ್ಷತ್ರಧರ್ಮಮವೇಕ್ಷಸ್ವ ಶ್ಲಾಘ್ಯಸ್ತವ ವಧೋ ಜಯಾತ್||

ಆ ನಿನ್ನ ಶತ್ರು ಅರ್ಜುನನು ಯಾವ ಶಂಕೆಯೂ ಇಲ್ಲದೇ ನಿನ್ನ ಮುಂದೆ ನಿಂತಿದ್ದಾನೆ. ಕ್ಷತ್ರಿಯಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಯುದ್ಧಮಾಡು. ವಿಜಯಿಯಾದರೂ ವಧಿಸಲ್ಪಟ್ಟರೂ ನೀನು ಶ್ಲಾಘನೀಯನಾಗುತ್ತೀಯೆ.

07160036a ದತ್ತಂ ಭುಕ್ತಮಧೀತಂ ಚ ಪ್ರಾಪ್ತಮೈಶ್ವರ್ಯಮೀಪ್ಸಿತಂ|

07160036c ಕೃತಕೃತ್ಯೋಽನೃಣಶ್ಚಾಸಿ ಮಾ ಭೈರ್ಯುಧ್ಯಸ್ವ ಪಾಂಡವಂ||

ದಾನಗಳನ್ನಿತ್ತಿದ್ದೀಯೆ. ಚೆನ್ನಾಗಿ ಭೋಗಿಸಿರುವೆ. ವೇದಾಧ್ಯಯನ ಮಾಡಿರುವೆ. ಬಯಸಿದಷ್ಟು ಐಶ್ವರ್ಯವನ್ನು ಹೊಂದಿರುವೆ. ಋಣಗಳಿಂದ ಮುಕ್ತನಾಗಿರುವೆ. ಪಾಂಡವನೊಡನೆ ಯುದ್ಧಮಾಡು. ಭಯಪಡಬೇಡ!”

07160037a ಇತ್ಯುಕ್ತ್ವಾ ಸಮರೇ ದ್ರೋಣೋ ನ್ಯವರ್ತತ ಯತಃ ಪರೇ|

07160037c ದ್ವೈಧೀಕೃತ್ಯ ತತಃ ಸೇನಾಂ ಯುದ್ಧಂ ಸಮಭವತ್ತದಾ||

ಸಮರದಲ್ಲಿ ಹೀಗೆ ಹೇಳಿ ದ್ರೋಣನು ಶತ್ರುಗಳಿರುವಲ್ಲಿಗೆ ತೆರಳಿದನು. ಅನಂತರ ಸೇನೆಯು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟು ಯುದ್ಧವು ಪ್ರಾರಂಭವಾಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ದ್ರೋಣದುರ್ಯೋಧನಭಾಷಣೇ ಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ದ್ರೋಣದುರ್ಯೋಧನಭಾಷಣ ಎನ್ನುವ ನೂರಾಅರವತ್ತನೇ ಅಧ್ಯಾಯವು.

Related image

Comments are closed.