Drona Parva: Chapter 155

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೫

ಘಟೋತ್ಕಚನ ವಧೆಯಿಂದ ಕೃಷ್ಣನಿಗಾದ ಹರ್ಷ (೧-೪). ಹರ್ಷಕ್ಕೆ ಕಾರಣವನ್ನು ಕೇಳಲು ಅರ್ಜುನನಿಗೆ ಕೃಷ್ಣನು ಉತ್ತರಿಸಿದುದು (೫-೩೦).

07155001 ಸಂಜಯ ಉವಾಚ|

07155001a ಹೈಡಿಂಬಂ ನಿಹತಂ ದೃಷ್ಟ್ವಾ ವಿಕೀರ್ಣಮಿವ ಪರ್ವತಂ|

07155001c ಪಾಂಡವಾ ದೀನಮನಸಃ ಸರ್ವೇ ಬಾಷ್ಪಾಕುಲೇಕ್ಷಣಾಃ||

ಸಂಜಯನು ಹೇಳಿದನು: “ಕುಸಿದುಬಿದ್ದಿರುವ ಪರ್ವತದಂತೆ ಹತನಾಗಿ ಬಿದ್ದಿರುವ ಹೈಡಿಂಬನನ್ನು ನೋಡಿ ಪಾಂಡವರೆಲ್ಲರೂ ಕಣ್ಣೀರುತುಂಬಿದವರಾಗಿ ದೀನಮನಸ್ಕರಾದರು.

07155002a ವಾಸುದೇವಸ್ತು ಹರ್ಷೇಣ ಮಹತಾಭಿಪರಿಪ್ಲುತಃ|

07155002c ನನಾದ ಸಿಂಹವನ್ನಾದಂ ವ್ಯಥಯನ್ನಿವ ಭಾರತ|

07155002e ವಿನದ್ಯ ಚ ಮಹಾನಾದಂ ಪರ್ಯಷ್ವಜತ ಫಲ್ಗುನಂ||

ಭಾರತ! ವಾಸುದೇವನಾದರೋ ಮಹಾ ಹರ್ಷದಿಂದ ಕುಣಿದಾಡಿದನು. ಗೆದ್ದನೋ ಎನ್ನುವಂತೆ ಸಿಂಹನಾದವನ್ನು ಮಾಡಿದನು. ಫಲ್ಗುನನನ್ನು ಬಿಗಿದಪ್ಪಿ ಗಟ್ಟಿಯಾಗಿ ಕೂಗಿದನು.

07155003a ಸ ವಿನದ್ಯ ಮಹಾನಾದಮಭೀಶೂನ್ಸಮ್ನಿಯಮ್ಯ ಚ|

07155003c ನನರ್ತ ಹರ್ಷಸಂವೀತೋ ವಾತೋದ್ಧೂತ ಇವ ದ್ರುಮಃ||

ಇದಲ್ಲದೇ ಅವನು ಕುದುರೆಗಳ ಕಡಿವಾಣಗಳನ್ನೆಳೆದು ನಿಲ್ಲಿಸಿ ಜೋರಾಗಿ ಗರ್ಜಿಸುತ್ತಾ ಚಂಡಮಾರುತದಿಂದ ಬುಡಮೇಲಾದ ವೃಕ್ಷವು ಗಾಳಿಯಲ್ಲಿ ತೂರಿಕೊಂಡು ಓಲಾಡುವಂತೆ ಹರ್ಷೋದ್ವೇಗದಿಂದ ತೂರಾಡಿದನು.

07155004a ತತೋ ವಿನಿರ್ಭ್ರಾಮ್ಯ ಪುನಃ ಪಾರ್ಥಮಾಸ್ಫೋಟ್ಯ ಚಾಸಕೃತ್|

07155004c ರಥೋಪಸ್ಥಗತೋ ಭೀಮಂ ಪ್ರಾಣದತ್ಪುನರಚ್ಯುತಃ||

ಆಗ ಪುನಃ ಪಾರ್ಥನನ್ನು ಬಿಗಿದಪ್ಪಿ ಜೋರಾಗಿ ಅವನ ಬೆನ್ನು ತಟ್ಟಿದನು. ಪುನಃ ಅಚ್ಯುತನು ರಥವನ್ನೇರಿ ಜೋರಾಗಿ ಗರ್ಜಿಸಿದನು.

07155005a ಪ್ರಹೃಷ್ಟಮನಸಂ ಜ್ಞಾತ್ವಾ ವಾಸುದೇವಂ ಮಹಾಬಲಂ|

07155005c ಅಬ್ರವೀದರ್ಜುನೋ ರಾಜನ್ನಾತಿಹೃಷ್ಟಮನಾ ಇವ||

ರಾಜನ್! ಮಹಾಬಲ ವಾಸುದೇವನು ಅತ್ಯಂತ ಸಂತೋಷಗೊಂಡಿದ್ದಾನೆ ಎಂದು ತಿಳಿದ ಅರ್ಜುನನು ಅಸಮಾಧಾನ ಮನಸ್ಕನಾಗಿ ಹೇಳಿದನು:

07155006a ಅತಿಹರ್ಷೋಽಯಮಸ್ಥಾನೇ ತವಾದ್ಯ ಮಧುಸೂದನ|

07155006c ಶೋಕಸ್ಥಾನೇ ಪರೇ ಪ್ರಾಪ್ತೇ ಹೈಡಿಂಬಸ್ಯ ವಧೇನ ವೈ||

“ಮಧುಸೂದನ! ಇಂದು ಹೈಡಿಂಬಿಯ ವಧೆಯಿಂದಾಗಿ ಅತೀವ ಶೋಕಸ್ಥಾನದಲ್ಲಿರಬೇಕಾಗಿದ್ದ ನೀನು ಈ ರೀತಿ ಅತೀವ ಹರ್ಷಿತನಾಗಿರುವುದು ಸಮಯೋಚಿತವಾಗಿಲ್ಲ.

07155007a ವಿಮುಖಾನಿ ಚ ಸೈನ್ಯಾನಿ ಹತಂ ದೃಷ್ಟ್ವಾ ಘಟೋತ್ಕಚಂ|

07155007c ವಯಂ ಚ ಭೃಶಮಾವಿಗ್ನಾ ಹೈಡಿಂಬಸ್ಯ ನಿಪಾತನಾತ್||

ಘಟೋತ್ಕಚನು ಹತನಾದುದನ್ನು ಕಂಡು ನಮ್ಮ ಸೇನೆಗಳು ಪಲಾಯನಮಾಡುತ್ತಿದ್ದಾರೆ. ಹೈಡಿಂಬಿಯ ಪತನದಿಂದಾಗಿ ನಾವೂ ಕೂಡ ಅತ್ಯಂತ ದುಃಖಿತರಾಗಿದ್ದೇವೆ.

07155008a ನೈತತ್ಕಾರಣಮಲ್ಪಂ ಹಿ ಭವಿಷ್ಯತಿ ಜನಾರ್ದನ|

07155008c ತದದ್ಯ ಶಂಸ ಮೇ ಪೃಷ್ಟಃ ಸತ್ಯಂ ಸತ್ಯವತಾಂ ವರ||

ಆದರೆ ಜನಾರ್ದನ! ನೀನು ಹೀಗೆ ಸಂತೋಷಪಡುತ್ತಿರುವುದಕ್ಕೆ ಅತ್ಯಲ್ಪ ಕಾರಣವು ಇದ್ದಿರಲಾರದು. ಸತ್ಯವತರಲ್ಲಿ ಶ್ರೇಷ್ಠ! ಕೇಳುತ್ತಿರುವ ನನಗೆ ಸತ್ಯವನ್ನು ವಿವರಿಸು.

07155009a ಯದ್ಯೇತನ್ನ ರಹಸ್ಯಂ ತೇ ವಕ್ತುಮರ್ಹಸ್ಯರಿಂದಮ|

07155009c ಧೈರ್ಯಸ್ಯ ವೈಕೃತಂ ಬ್ರೂಹಿ ತ್ವಮದ್ಯ ಮಧುಸೂದನ||

ಅರಿಂದಮ! ಇದು ಅತಿ ರಹಸ್ಯವಲ್ಲದಿದ್ದರೆ ನನಗೆ ಹೇಳು. ಮಧುಸೂದನ! ಇಂದು ನಿನ್ನ ಧೈರ್ಯದ ವಿಕಾರ ರೂಪಕ್ಕೆ ಕಾರಣವೇನೆಂದು ಹೇಳು!

07155010a ಸಮುದ್ರಸ್ಯೇವ ಸಂಕ್ಷೋಭೋ ಮೇರೋರಿವ ವಿಸರ್ಪಣಂ|

07155010c ತಥೈತಲ್ಲಾಘವಂ ಮನ್ಯೇ ತವ ಕರ್ಮ ಜನಾರ್ದನ||

ಜನಾರ್ದನ! ಸಮುದ್ರವು ಬತ್ತಿಹೋದರೆ ಅಥವಾ ಮೇರು ಪರ್ವತವು ಸರಿದರೆ ಎಷ್ಟು ಆಶ್ಚರ್ಯವಾಗುವುದೋ ಅಷ್ಟೇ ಆಶ್ಚರ್ಯವು ನಿನ್ನ ಈ ಕೃತ್ಯವನ್ನು ಕಂಡು ನನಗಾಗುತ್ತಿದೆ!”

07155011 ವಾಸುದೇವ ಉವಾಚ|

07155011a ಅತಿಹರ್ಷಮಿಮಂ ಪ್ರಾಪ್ತಂ ಶೃಣು ಮೇ ತ್ವಂ ಧನಂಜಯ|

07155011c ಅತೀವ ಮನಸಃ ಸದ್ಯಃ ಪ್ರಸಾದಕರಮುತ್ತಮಂ||

ವಾಸುದೇವನು ಹೇಳಿದನು: “ಧನಂಜಯ! ನನಗೆ ಅತ್ಯಂತ ಹರ್ಷವುಂಟಾಗಿರುವುದು ಏಕೆನ್ನುವುದನ್ನು ನೀನು ಕೇಳು. ಸದ್ಯ ನನ್ನ ಮನಸ್ಸಿಗೆ ಉತ್ತಮ ಅತೀವ ಸಮಾಧಾನವುಂಟಾಗಿದೆ.

07155012a ಶಕ್ತಿಂ ಘಟೋತ್ಕಚೇನೇಮಾಂ ವ್ಯಂಸಯಿತ್ವಾ ಮಹಾದ್ಯುತೇ|

07155012c ಕರ್ಣಂ ನಿಹತಂ ಏವಾಜೌ ವಿದ್ಧಿ ಸದ್ಯೋ ಧನಂಜಯ||

ಮಹಾದ್ಯುತೇ! ಧನಂಜಯ! ಘಟೋತ್ಕಚನ ಮೇಲೆ ಈ ಶಕ್ತಿಯನ್ನು ಪ್ರಯೋಗಿಸಿದ ಕರ್ಣನು ಸದ್ಯ ಹತನಾದನೆಂದೇ ನೀನು ಭಾವಿಸಬಹುದು.

07155013a ಶಕ್ತಿಹಸ್ತಂ ಪುನಃ ಕರ್ಣಂ ಕೋ ಲೋಕೇಽಸ್ತಿ ಪುಮಾನಿಹ|

07155013c ಯ ಏನಮಭಿತಸ್ತಿಷ್ಠೇತ್ಕಾರ್ತ್ತಿಕೇಯಮಿವಾಹವೇ||

ಕಾರ್ತಿಕೇಯನಿಗೆ ಸಮಾನನಾಗಿ ಶಕ್ತಿಯನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಬರುವ ಕರ್ಣನನ್ನು ಎದುರಿಸಿ ನಿಲ್ಲುವ ಪುರುಷನು ಈ ಲೋಕದಲ್ಲಿ ಯಾವನಿದ್ದಾನೆ?

07155014a ದಿಷ್ಟ್ಯಾಪನೀತಕವಚೋ ದಿಷ್ಟ್ಯಾಪಹೃತಕುಂಡಲಃ|

07155014c ದಿಷ್ಟ್ಯಾ ಚ ವ್ಯಂಸಿತಾ ಶಕ್ತಿರಮೋಘಾಸ್ಯ ಘಟೋತ್ಕಚೇ||

ಒಳ್ಳೆಯದಾಯಿತು ಅವನು ಕವಚವನ್ನು ಕಳೆದುಕೊಂಡನು. ಒಳ್ಳೆಯದಾಯಿತು ಅವನು ಕುಂಡಲಗಳನ್ನು ಕಳೆದುಕೊಂಡನು. ಒಳ್ಳೆಯದಾಯಿತು ಅವನು ಘಟೋತ್ಕಚನ ಮೇಲೆ ಪ್ರಯೋಗಿಸಿ ತನ್ನ ಶಕ್ತಿಯನ್ನೂ ವಿರಸನಗೊಳಿಸಿಕೊಂಡನು.

07155015a ಯದಿ ಹಿ ಸ್ಯಾತ್ಸಕವಚಸ್ತಥೈವ ಚ ಸಕುಂಡಲಃ|

07155015c ಸಾಮರಾನಪಿ ಲೋಕಾಂಸ್ತ್ರೀನೇಕಃ ಕರ್ಣೋ ಜಯೇದ್ಬಲೀ||

ಒಂದು ವೇಳೆ ಅವನು ಕವಚ ಮತ್ತು ಕುಂಡಲಗಳ ಸಹಿತನಾಗಿಯೇ ಇದ್ದಿದ್ದರೆ ದೇವತೆಗಳೊಂದಿಗೆ ಮೂರು ಲೋಕಗಳನ್ನೂ ಬಲಶಾಲಿ ಕರ್ಣನು ಜಯಿಸುತ್ತಿದ್ದನು.

07155016a ವಾಸವೋ ವಾ ಕುಬೇರೋ ವಾ ವರುಣೋ ವಾ ಜಲೇಶ್ವರಃ|

07155016c ಯಮೋ ವಾ ನೋತ್ಸಹೇತ್ಕರ್ಣಂ ರಣೇ ಪ್ರತಿಸಮಾಸಿತುಂ||

ವಾಸವನಾಗಲೀ, ಕುಬೇರನಾಗಲೀ, ಜಲೇಶ್ವರ ವರುಣನಾಗಲೀ, ಯಮನಾಗಲೀ ಅಂತಹ ಕರ್ಣನನ್ನು ರಣದಲ್ಲಿ ಎದುರಿಸಲು ಶಕ್ತರಾಗುತ್ತಿರಲಿಲ್ಲ.

07155017a ಗಾಂಡೀವಮಾಯಮ್ಯ ಭವಾಂಶ್ಚಕ್ರಂ ವಾಹಂ ಸುದರ್ಶನಂ|

07155017c ನ ಶಕ್ತೌ ಸ್ವೋ ರಣೇ ಜೇತುಂ ತಥಾಯುಕ್ತಂ ನರರ್ಷಭಂ||

ಅವುಗಳಿಂದ ಯುಕ್ತನಾಗಿದ್ದ ಆ ನರರ್ಷಭನನ್ನು ಗಾಂಡಿವವನ್ನು ಧರಿಸಿದ ನೀನಾದರೋ ಅಥವಾ ಸುದರ್ಶನ ಚಕ್ರವನ್ನು ಹಿಡಿದ ನಾನಾದರೋ ರಣದಲ್ಲಿ ಜಯಿಸಲು ಶಕ್ತರಾಗಿದ್ದಿರಲಿಲ್ಲ.

07155018a ತ್ವದ್ಧಿತಾರ್ಥಂ ತು ಶಕ್ರೇಣ ಮಾಯಯಾ ಹೃತಕುಂಡಲಃ|

07155018c ವಿಹೀನಕವಚಶ್ಚಾಯಂ ಕೃತಃ ಪರಪುರಂಜಯಃ||

ನಿನ್ನ ಹಿತಕ್ಕಾಗಿಯೇ ಪರಪುರಂಜಯ ಶಕ್ರನು ಮಾಯೆಯಿಂದ ಅವನ ಕವಚಗಳನ್ನು ಅಪಹರಿಸಿದನು.

07155019a ಉತ್ಕೃತ್ಯ ಕವಚಂ ಯಸ್ಮಾತ್ಕುಂಡಲೇ ವಿಮಲೇ ಚ ತೇ|

07155019c ಪ್ರಾದಾಚ್ಚಕ್ರಾಯ ಕರ್ಣೋ ವೈ ತೇನ ವೈಕರ್ತನಃ ಸ್ಮೃತಃ||

ಕರ್ಣನು ಕವಚವನ್ನೂ ಶುಭ್ರ ಕುಂಡಲಗಳನ್ನೂ ಕತ್ತರಿಸಿ ತೆಗೆದು ಇಂದ್ರನಿಗೆ ಕೊಟ್ಟಿದುದರಿಂದಲೇ ವೈಕರ್ತನನೆನಿಸಿಕೊಂಡನು.

07155020a ಆಶೀವಿಷ ಇವ ಕ್ರುದ್ಧಃ ಸ್ತಂಭಿತೋ ಮಂತ್ರತೇಜಸಾ|

07155020c ತಥಾದ್ಯ ಭಾತಿ ಕರ್ಣೋ ಮೇ ಶಾಂತಜ್ವಾಲ ಇವಾನಲಃ||

ಕೋಪಗೊಂಡ ವಿಷಸರ್ಪವು ಮಂತ್ರತೇಜಸ್ಸಿನಿಂದ ಸ್ತಭ್ದವಾಗುವಂತೆ, ಜ್ವಾಲೆಗಳು ಆರಿಹೋದ ಅಗ್ನಿಯಂತೆ ಇಂದು ಕರ್ಣನು ನಿಸ್ತೇಜನಾಗಿ ಕಾಣುತ್ತಿದ್ದಾನೆ.

07155021a ಯದಾ ಪ್ರಭೃತಿ ಕರ್ಣಾಯ ಶಕ್ತಿರ್ದತ್ತಾ ಮಹಾತ್ಮನಾ|

07155021c ವಾಸವೇನ ಮಹಾಬಾಹೋ ಪ್ರಾಪ್ತಾ ಯಾಸೌ ಘಟೋತ್ಕಚೇ||

07155022a ಕುಂಡಲಾಭ್ಯಾಂ ನಿಮಾಯಾಥ ದಿವ್ಯೇನ ಕವಚೇನ ಚ|

07155022c ತಾಂ ಪ್ರಾಪ್ಯಾಮನ್ಯತ ವೃಷಾ ಸತತಂ ತ್ವಾಂ ಹತಂ ರಣೇ||

ಮಹಾಬಾಹೋ! ಎಂದಿನಿಂದ ದಿವ್ಯ ಕುಂಡಲ ಮತ್ತು ಕವಚಗಳ ವಿನಿಮಯವಾಗಿ ಘಟೋತ್ಕಚನ ಮೇಲೆ ಪ್ರಯೋಗಿಸಿದ ಈ ಶಕ್ತಿಯನ್ನು ಮಹಾತ್ಮ ವಾಸವನಿಂದ ಪಡೆದನೋ ಅಂದಿನಿಂದ ಸತತವಾಗಿ ನೀನು ರಣದಲ್ಲಿ ಹತನಾದಂತೆಯೇ ಎಂದು ಕರ್ಣನು ಯೋಚಿಸುತ್ತಿದ್ದನು.

07155023a ಏವಂ ಗತೇಽಪಿ ಶಕ್ಯೋಽಯಂ ಹಂತುಂ ನಾನ್ಯೇನ ಕೇನ ಚಿತ್|

07155023c ಋತೇ ತ್ವಾ ಪುರುಷವ್ಯಾಘ್ರ ಶಪೇ ಸತ್ಯೇನ ಚಾನಘ||

ಪುರುಷವ್ಯಾಘ್ರ! ಅನಘ! ಹೀಗೆ ಆ ಶಕ್ತಿಯನ್ನು ಕಳೆದುಕೊಂಡರೂ ನಿನ್ನನ್ನು ಬಿಟ್ಟು ಬೇರೆ ಯಾರೂ ಅವನನ್ನು ಸಂಹರಿಸಲು ಶಕ್ಯರಲ್ಲ. ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.

07155024a ಬ್ರಹ್ಮಣ್ಯಃ ಸತ್ಯವಾದೀ ಚ ತಪಸ್ವೀ ನಿಯತವ್ರತಃ|

07155024c ರಿಪುಷ್ವಪಿ ದಯಾವಾಂಶ್ಚ ತಸ್ಮಾತ್ಕರ್ಣೋ ವೃಷಾ ಸ್ಮೃತಃ||

ಬ್ರಹ್ಮಣ್ಯನೂ, ಸತ್ಯವಾದಿಯೂ, ತಪಸ್ವಿಯೂ, ನಿಯತವ್ರತನೂ, ಶತ್ರುಗಳ ಮೇಲೂ ದಯಾವಂತನೂ ಆದ ಕರ್ಣನು ವೃಷ (ಧರ್ಮಾತ್ಮ) ಎಂದೂ ಪ್ರಸಿದ್ಧನಾಗಿದ್ದಾನೆ.

07155025a ಯುದ್ಧಶೌಂಡೋ ಮಹಾಬಾಹುರ್ನಿತ್ಯೋದ್ಯತಶರಾಸನಃ|

07155025c ಕೇಸರೀವ ವನೇ ಮರ್ದನ್ಮತ್ತಮಾತಂಗಯೂಥಪಾನ್|

07155025e ವಿಮದಾನ್ರಥಶಾರ್ದೂಲಾನ್ಕುರುತೇ ರಣಮೂರ್ಧನಿ||

ಅವನು ಯುದ್ಧಕುಶಲನು. ನಿತ್ಯವೂ ಧನುಸ್ಸನ್ನು ಮೇಲಿತ್ತಿಕೊಂಡೇ ಇರತಕ್ಕವನು. ವನದಲ್ಲಿರುವ ಸಿಂಹದಂತೆ ಗರ್ಜಿಸುತ್ತಾನೆ. ಮದಿಸಿದ ಸಲಗವು ತನ್ನ ಹಿಂಡನ್ನು ಮದರಹಿತವನ್ನಾಗಿಸುವಂತೆ ಕರ್ಣನು ರಣದಲ್ಲಿ ರಥಶಾರ್ದೂಲರನ್ನು ಮದರಹಿತರನ್ನಾಗಿಸುತ್ತಾನೆ.

07155026a ಮಧ್ಯಂಗತ ಇವಾದಿತ್ಯೋ ಯೋ ನ ಶಕ್ಯೋ ನಿರೀಕ್ಷಿತುಂ|

07155026c ತ್ವದೀಯೈಃ ಪುರುಷವ್ಯಾಘ್ರ ಯೋಧಮುಖ್ಯೈರ್ಮಹಾತ್ಮಭಿಃ|

07155026e ಶರಜಾಲಸಹಸ್ರಾಂಶುಃ ಶರದೀವ ದಿವಾಕರಃ||

ಪುರುಷವ್ಯಾಘ್ರ! ನಡುನೆತ್ತಿಯ ಸೂರ್ಯನನ್ನು ನಿರೀಕ್ಷಿಸಲು ಹೇಗೆ ಶಕ್ಯವಾಗುವುದಿಲ್ಲವೋ ಹಾಗೆ ಶರತ್ಕಾಲದ ಅಂತ್ಯದಲ್ಲಿ ದಿವಾಕರನ ಸಹಸ್ರ ಕಿರಣಗಳಂತೆ ರಣದಲ್ಲಿ ಶರಜಾಲಗಳನ್ನು ಪ್ರಯೋಗಿಸುವ ಕರ್ಣನನ್ನು ನಿನ್ನ ಕಡೆಯ ಮಹಾತ್ಮ ಯೋಧಮುಖ್ಯರು ನಿರೀಕ್ಷಿಸಲು ಶಕ್ಯರಾಗಿಲ್ಲ.

07155027a ತಪಾಂತೇ ತೋಯದೋ ಯದ್ವಚ್ಚರಧಾರಾಃ ಕ್ಷರತ್ಯಸೌ|

07155027c ದಿವ್ಯಾಸ್ತ್ರಜಲದಃ ಕರ್ಣಃ ಪರ್ಜನ್ಯ ಇವ ವೃಷ್ಟಿಮಾನ್|

07155027e ಸೋಽದ್ಯ ಮಾನುಷತಾಂ ಪ್ರಾಪ್ತೋ ವಿಮುಕ್ತಃ ಶಕ್ರದತ್ತಯಾ||

ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಗರೆಯುವಂತೆ ಬಾಣಗಳ ಮಳೆಯನ್ನು ಮತ್ತೆ ಮತ್ತೆ ಸುರಿಸುವ, ಮೋಡಗಳಂತೆ ದಿವ್ಯ ಅಸ್ತ್ರಗಳ ಮಳೆಯನ್ನು ಸುರಿಸುವ ಮೋಡರೂಪೀ ಕರ್ಣನು ಇಂದು ಶಕ್ರನಿಂದ ಪಡೆದ ಶಕ್ತಿಯನ್ನು ಕಳೆದುಕೊಂಡು ಕೇವಲ ಮನುಷ್ಯತ್ವವನ್ನು ಉಳಿಸಿಕೊಂಡಿದ್ದಾನೆ.

07155028a ಏಕೋ ಹಿ ಯೋಗೋಽಸ್ಯ ಭವೇದ್ವಧಾಯ

         ಚಿದ್ರೇ ಹ್ಯೇನಂ ಸ್ವಪ್ರಮತ್ತಃ ಪ್ರಮತ್ತಂ|

07155028c ಕೃಚ್ಚ್ರಪ್ರಾಪ್ತಂ ರಥಚಕ್ರೇ ನಿಮಗ್ನೇ

         ಹನ್ಯಾಃ ಪೂರ್ವಂ ತ್ವಂ ತು ಸಂಜ್ಞಾಂ ವಿಚಾರ್ಯ||

ಇವನನ್ನು ವಧಿಸಲು ಒಂದೇ ಒಂದು ಅವಕಾಶವಿದೆ. ಇವನು ಅಪ್ರಮತ್ತನಾಗಿರುವ ಅವಕಾಶವನ್ನು ಬಳಸಿ ಪ್ರಮತ್ತನಾಗಿದ್ದುಕೊಂಡು ಈ ಕೆಲಸವನ್ನು ಮಾಡಬೇಕು. ರಥಚಕ್ರವು ಹುಗಿದುಹೋಗಿ ಕಷ್ಟದಲ್ಲಿರುವಾಗ, ಮೊದಲೇ ನಾನು ನೀಡುವ ಸೂಚನೆಯನ್ನು ಗಮನಿಸಿ, ನೀನು ಇವನನ್ನು ಸಂಹರಿಸಬೇಕು.

07155029a ಜರಾಸಂಧಶ್ಚೇದಿರಾಜೋ ಮಹಾತ್ಮಾ

         ಮಹಾಬಲಶ್ಚೈಕಲವ್ಯೋ ನಿಷಾದಃ|

07155029c ಏಕೈಕಶೋ ನಿಹತಾಃ ಸರ್ವ ಏವ

         ಯೋಗೈಸ್ತೈಸ್ತೈಸ್ತ್ವದ್ಧಿತಾರ್ಥಂ ಮಯೈವ||

ಜರಾಸಂಧ, ಮಹಾತ್ಮ ಚೇದಿರಾಜ, ಮಹಾಬಲ ನಿಷಾದ ಏಕಲವ್ಯ ಒಬ್ಬೊಬ್ಬರಾಗಿ ಈ ಎಲ್ಲರನ್ನೂ ಒಂದೊಂದು ಸಮಯದಲ್ಲಿ ಒಂದೊಂದು ಉಪಾಯವನ್ನು ಪ್ರಯೋಗಿಸಿ, ನಿನಗೋಸ್ಕರವಾಗಿ ನಾನೇ ಸಂಹರಿಸಿದ್ದೇನೆ.

07155030a ಅಥಾಪರೇ ನಿಹತಾ ರಾಕ್ಷಸೇಂದ್ರಾ

         ಹಿಡಿಂಬಕಿರ್ಮೀರಬಕಪ್ರಧಾನಾಃ|

07155030c ಅಲಾಯುಧಃ ಪರಸೈನ್ಯಾವಮರ್ದೀ

         ಘಟೋತ್ಕಚಶ್ಚೋಗ್ರಕರ್ಮಾ ತರಸ್ವೀ||

ಇನ್ನು ಹಿಡಿಂಬ, ಕಿರ್ಮೀರ, ಬಕರೇ ಮೊದಲಾದ ರಾಕ್ಷಸೇಂದ್ರರು ಶತ್ರುಸೇನೆಯನ್ನು ಮರ್ದಿಸುವ ಅಲಾಯುಧ, ಮತ್ತು ಉಗ್ರಕರ್ಮಿ ತರಸ್ವೀ ಘಟೋತ್ಕಚರೂ ಕೂಡ ಬೇರೆ ಬೇರೆ ಉಪಾಯಗಳಿಂದ ಪ್ರತ್ಯೇಕ ಸಮಯಗಳಲ್ಲಿ ಹತರಾಗಿದ್ದಾರೆ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಘಟೋತ್ಕಚವಧೇ ಶ್ರೀಕೃಷ್ಣಹರ್ಷೇ ಪಂಚಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಘಟೋತ್ಕಚವಧೇ ಶ್ರೀಕೃಷ್ಣಹರ್ಷ ಎನ್ನುವ ನೂರಾಐವತ್ತೈದನೇ ಅಧ್ಯಾಯವು.

Related image

Comments are closed.