Drona Parva: Chapter 140

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೦

ಪಾಂಡವ-ಕೌರವ ಮಹಾರಥರು ಪರಸ್ಪರರನ್ನು ತಡೆದುದು (೧-೨೨). ಯುಧಿಷ್ಠಿರನು ಕೃತವರ್ಮನಿಂದ ಪರಾಜಯಗೊಂಡಿದುದು (೨೩-೪೧).

07140001 ಸಂಜಯ ಉವಾಚ|

07140001a ವರ್ತಮಾನೇ ತಥಾ ರೌದ್ರೇ ರಾತ್ರಿಯುದ್ಧೇ ವಿಶಾಂ ಪತೇ|

07140001c ಸರ್ವಭೂತಕ್ಷಯಕರೇ ಧರ್ಮಪುತ್ರೋ ಯುಧಿಷ್ಠಿರಃ||

07140002a ಅಬ್ರವೀತ್ಪಾಂಡವಾಂಶ್ಚೈವ ಪಾಂಚಾಲಾಂಶ್ಚ ಸಸೋಮಕಾನ್|

07140002c ಅಭ್ಯದ್ರವತ ಗಚ್ಚಧ್ವಂ ದ್ರೋಣಮೇವ ಜಿಘಾಂಸಯಾ||

ಸಂಜಯನು ಹೇಳಿದನು: “ವಿಶಾಂಪತೇ! ಆ ರೌದ್ರ ಸರ್ವಭೂತಕ್ಷಯಕರ ರಾತ್ರಿಯುದ್ಧವು ನಡೆಯುತ್ತಿರಲು ಧರ್ಮಪುತ್ರ ಯುಧಿಷ್ಠಿರನು ಪಾಂಡವ-ಪಾಂಚಾಲ-ಸೋಮಕರನ್ನುದ್ದೇಶಿಸಿ “ದ್ರೋಣನನ್ನೇ ಸಂಹರಿಸುವ ಉದ್ದೇಶದಿಂದ ಹೋಗಿ ಆಕ್ರಮಣ ಮಾಡಿ!” ಎಂದು ಹೇಳಿದನು.

07140003a ರಾಜ್ಞಸ್ತೇ ವಚನಾದ್ರಾಜನ್ಪಾಂಚಾಲಾಃ ಸೋಮಕಾಸ್ತಥಾ|

07140003c ದ್ರೋಣಮೇವಾಭ್ಯವರ್ತಂತ ನದಂತೋ ಭೈರವಾನ್ರವಾನ್||

ರಾಜನ್! ರಾಜನ ಆ ಮಾತುಗಳಂತೆ ಪಾಂಚಾಲ-ಸೋಮಕರು ಭೈರವ ಗರ್ಜನೆಯನ್ನು ಗರ್ಜಿಸುತ್ತಾ ದ್ರೋಣನನ್ನೇ ಆಕ್ರಮಣಿಸಿದರು.

07140004a ತಾನ್ವಯಂ ಪ್ರತಿಗರ್ಜಂತಃ ಪ್ರತ್ಯುದ್ಯಾತಾಸ್ತ್ವಮರ್ಷಿತಾಃ|

07140004c ಯಥಾಶಕ್ತಿ ಯಥೋತ್ಸಾಹಂ ಯಥಾಸತ್ತ್ವಂ ಚ ಸಮ್ಯುಗೇ||

ಪ್ರತಿಯಾಗಿ ಗರ್ಜಿಸುತ್ತಾ ಕೋಪದಿಂದ ನಾವು ಅವರನ್ನು ಎದುರಿಸಿ ಯಥಾಶಕ್ತಿಯಾಗಿ, ಯಥೋತ್ಸಾಹದಿಂದ ಮತ್ತು ಯಥಾಸತ್ತ್ವದೊಂದಿಗೆ ರಣದಲ್ಲಿ ಯುದ್ಧಮಾಡಿದೆವು.

07140005a ಕೃತವರ್ಮಾ ಚ ಹಾರ್ದಿಕ್ಯೋ ಯುಧಿಷ್ಠಿರಮುಪಾದ್ರವತ್|

07140005c ದ್ರೋಣಂ ಪ್ರತಿ ಜಿಘಾಂಸಂತಂ ಮತ್ತೋ ಮತ್ತಮಿವ ದ್ವಿಪಂ||

ಸಂಹರಿಸಲು ದ್ರೋಣನ ಕಡೆ ಬರುತ್ತಿದ್ದ ಯುಧಿಷ್ಠಿರನನ್ನು ಮದಿಸಿದ ಆನೆಯೊಂದನ್ನು ಇನ್ನೊಂದು ಮದಿಸಿದ ಆನೆಯು ತಡೆಯುವಂತೆ ಹಾರ್ದಿಕ್ಯ ಕೃತವರ್ಮನು ತಡೆದು ಆಕ್ರಮಣಿಸಿದನು.

07140006a ಶೈನೇಯಂ ಶರವರ್ಷಾಣಿ ವಿಕಿರಂತಂ ಸಮಂತತಃ|

07140006c ಅಭ್ಯಯಾತ್ಕೌರವೋ ರಾಜನ್ಭೂರಿಃ ಸಂಗ್ರಾಮಮೂರ್ಧನಿ||

ರಾಜನ್! ಸುತ್ತಲೂ ಶರಗಳ ಮಳೆಯನ್ನು ಸುರಿಸುತ್ತಿದ್ದ ಶೈನೇಯ ಸಾತ್ಯಕಿಯನ್ನು ಸಂಗ್ರಾಮದ ನಡುವಿನಲ್ಲಿ ಕೌರವ ಭೂರಿಯು ಎದುರಿಸಿದನು.

07140007a ಸಹದೇವಮಥಾಯಾಂತಂ ದ್ರೋಣಪ್ರೇಪ್ಸುಂ ಮಹಾರಥಂ|

07140007c ಕರ್ಣೋ ವೈಕರ್ತನೋ ರಾಜನ್ವಾರಯಾಮಾಸ ಪಾಂಡವಂ||

ರಾಜನ್! ದ್ರೋಣನ ಬಳಿಹೋಗಲು ಬರುತ್ತಿದ್ದ ಮಹಾರಥ ಪಾಂಡವ ಸಹದೇವನನ್ನು ವೈಕರ್ತನ ಕರ್ಣನು ತಡೆದನು.

07140008a ಭೀಮಸೇನಮಥಾಯಾಂತಂ ವ್ಯಾದಿತಾಸ್ಯಮಿವಾಂತಕಂ|

07140008c ಸ್ವಯಂ ದುರ್ಯೋಧನೋ ಯುದ್ಧೇ ಪ್ರತೀಪಂ ಮೃತ್ಯುಮಾವ್ರಜತ್||

ಬಾಯಿಕಳೆದ ಅಂತಕನಂತೆ ಬರುತ್ತಿದ್ದ ಮತ್ತು ಮೃತ್ಯುವಂತೆ ಬೆಳಗುತ್ತಿದ್ದ ಭೀಮಸೇನನನ್ನು ಸ್ವಯಂ ದುರ್ಯೋಧನನೇ ಯುದ್ಧದಲ್ಲಿ ಎದುರಿಸಿದನು.

07140009a ನಕುಲಂ ಚ ಯುಧಾಂ ಶ್ರೇಷ್ಠಂ ಸರ್ವಯುದ್ಧವಿಶಾರದಂ|

07140009c ಶಕುನಿಃ ಸೌಬಲೋ ರಾಜನ್ವಾರಯಾಮಾಸ ಸತ್ವರಃ||

ರಾಜನ್! ಯೋಧರಲ್ಲಿ ಶ್ರೇಷ್ಠ ಸರ್ವಯುದ್ಧವಿಶಾರದ ನಕುಲನನ್ನು ತ್ವರೆಮಾಡಿ ಸೌಬಲ ಶಕುನಿಯು ತಡೆದನು.

07140010a ಶಿಖಂಡಿನಮಥಾಯಾಂತಂ ರಥೇನ ರಥಿನಾಂ ವರಂ|

07140010c ಕೃಪೋ ಶಾರದ್ವತೋ ರಾಜನ್ವಾರಯಾಮಾಸ ಸಮ್ಯುಗೇ||

ರಾಜನ್! ಸಂಯುಗದಲ್ಲಿ ರಥದಲ್ಲಿ ಮುಂದುವರೆದು ಬರುತ್ತಿದ್ದ ರಥಿಗಳಲ್ಲಿ ಶ್ರೇಷ್ಠ ಶಿಖಂಡಿಯನ್ನು ಶಾರದ್ವತ ಕೃಪನು ತಡೆದನು.

07140011a ಪ್ರತಿವಿಂಧ್ಯಮಥಾಯಾಂತಂ ಮಯೂರಸದೃಶೈರ್ಹಯೈಃ|

07140011c ದುಃಶಾಸನೋ ಮಹಾರಾಜ ಯತ್ತೋ ಯತ್ತಮವಾರಯತ್||

ಮಹಾರಾಜ! ನವಿಲಿನ ಬಣ್ಣದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಬರುತ್ತಿದ್ದ ಪ್ರತಿವಿಂದ್ಯನನ್ನು ಪ್ರಯತ್ನಮಾಡಿ ದುಃಶಾಸನನು ತಡೆದನು.

07140012a ಭೈಮಸೇನಿಮಥಾಯಾಂತಂ ಮಾಯಾಶತವಿಶಾರದಂ|

07140012c ಅಶ್ವತ್ಥಾಮಾ ಪಿತುರ್ಮಾನಂ ಕುರ್ವಾಣಃ ಪ್ರತ್ಯಷೇಧಯತ್||

ಬರುತ್ತಿದ್ದ ಮಾಯಾಶತವಿಶಾರದ ಭೈಮಸೇನಿ ಘಟೋತ್ಕಚನನ್ನು ತಂದೆಯ ಮಾನವನ್ನು ಕಾಯುತ್ತಾ ಅಶ್ವತ್ಥಾಮನು ಎದುರಿಸಿ ಯುದ್ಧಮಾಡಿದನು.

07140013a ದ್ರುಪದಂ ವೃಷಸೇನಸ್ತು ಸಸೈನ್ಯಂ ಸಪದಾನುಗಂ|

07140013c ವಾರಯಾಮಾಸ ಸಮರೇ ದ್ರೋಣಪ್ರೇಪ್ಸುಂ ಮಹಾರಥಂ||

ದ್ರೋಣನನ್ನು ತಲುಪಲು ಪ್ರಯತ್ನಿಸುತ್ತಿದ್ದ ಮಹಾರಥ ದ್ರುಪದನನ್ನು, ಅವನ ಸೇನೆ ಅನುಯಾಯಿಗಳೊಂದಿಗೆ ಸಮರದಲ್ಲಿ ವೃಷಸೇನನು ತಡೆದನು.

07140014a ವಿರಾಟಂ ದ್ರುತಮಾಯಾಂತಂ ದ್ರೋಣಸ್ಯ ನಿಧನಂ ಪ್ರತಿ|

07140014c ಮದ್ರರಾಜಃ ಸುಸಂಕ್ರುದ್ಧೋ ವಾರಯಾಮಾಸ ಭಾರತ||

ಭಾರತ! ದ್ರೋಣನ ಸಾವನ್ನು ಬಯಸಿ ಬರುತ್ತಿದ್ದ ವಿರಾಟನನ್ನು ಸಂಕ್ರುದ್ಧ ಮದ್ರರಾಜ ಶಲ್ಯನು ತಡೆದನು.

07140015a ಶತಾನೀಕಮಥಾಯಾಂತಂ ನಾಕುಲಿಂ ರಭಸಂ ರಣೇ|

07140015c ಚಿತ್ರಸೇನೋ ರುರೋಧಾಶು ಶರೈರ್ದ್ರೋಣವಧೇಪ್ಸಯಾ||

ಶರಗಳಿಂದ ದ್ರೋಣನನ್ನು ವಧಿಸಲು ಬಯಸಿ ರಭಸದಿಂದ ರಣದಲ್ಲಿ ಬರುತ್ತಿರುವ ನಕುಲನ ಮಗ ಶತಾನೀಕನನ್ನು ಚಿತ್ರಸೇನನು ತಡೆಹಿಡಿದನು.

07140016a ಅರ್ಜುನಂ ಚ ಯುಧಾಂ ಶ್ರೇಷ್ಠಂ ಪ್ರಾದ್ರವಂತಂ ಮಹಾರಥಂ|

07140016c ಅಲಂಬುಸೋ ಮಹಾರಾಜ ರಾಕ್ಷಸೇಂದ್ರೋ ನ್ಯವಾರಯತ್||

ಮಹಾರಾಜ! ಧಾವಿಸಿಬರುತ್ತಿದ್ದ ಯೋಧರಲ್ಲಿ ಶ್ರೇಷ್ಠ ಮಹಾರಥ ಅರ್ಜುನನನ್ನು ರಾಕ್ಷಸೇಂದ್ರ ಅಲಂಬುಸನು ತಡೆದನು.

07140017a ತಥಾ ದ್ರೋಣಂ ಮಹೇಷ್ವಾಸಂ ನಿಘ್ನಂತಂ ಶಾತ್ರವಾನ್ರಣೇ|

07140017c ಧೃಷ್ಟದ್ಯುಮ್ನೋಽಥ ಪಾಂಚಾಲ್ಯೋ ಹೃಷ್ಟರೂಪಮವಾರಯತ್||

ಹಾಗೆಯೇ ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದ ಹೃಷ್ಟರೂಪ ಮಹೇಷ್ವಾಸ ದ್ರೋಣನನ್ನು ಪಾಂಚಾಲ್ಯ ಧೃಷ್ಟದ್ಯುಮ್ನನು ತಡೆದನು.

07140018a ತಥಾನ್ಯಾನ್ಪಾಂಡುಪುತ್ರಾಣಾಂ ಸಮಾಯಾತಾನ್ಮಹಾರಥಾನ್|

07140018c ತಾವಕಾ ರಥಿನೋ ರಾಜನ್ವಾರಯಾಮಾಸುರೋಜಸಾ||

ರಾಜನ್! ಹಾಗೆ ಒಟ್ಟಾಗಿ ಬರುತ್ತಿದ್ದ ಪಾಂಡುಪುತ್ರ ಮಹಾರಥರನ್ನು ನಿನ್ನವರಾದ ರಥಿಗಳು ಬಹಳ ತೇಜಸ್ಸಿನಿಂದ ತಡೆದರು.

07140019a ಗಜಾರೋಹಾ ಗಜೈಸ್ತೂರ್ಣಂ ಸಮ್ನಿಪತ್ಯ ಮಹಾಮೃಧೇ|

07140019c ಯೋಧಯಂತಃ ಸ್ಮ ದೃಶ್ಯಂತೇ ಶತಶೋಽಥ ಸಹಸ್ರಶಃ||

ಆ ಮಹಾಯುದ್ಧದಲ್ಲಿ ತಕ್ಷಣವೇ ನೂರಾರು ಸಹಸ್ರಾರು ಗಜಾರೋಹಿಗಳು ಅನೇಕ ಗಜಾರೋಹಿಗಳನ್ನು ಎದುರಿಸಿ ಯುದ್ಧಮಾಡುತ್ತಿರುವುದು ಕಂಡುಬಂದಿತು.

07140020a ನಿಶೀಥೇ ತುರಗಾ ರಾಜನ್ನಾದ್ರವಂತಃ ಪರಸ್ಪರಂ|

07140020c ಸಮದೃಶ್ಯಂತ ವೇಗೇನ ಪಕ್ಷವಂತ ಇವಾದ್ರಯಃ||

ರಾಜನ್! ಆ ರಾತ್ರಿಯಲ್ಲಿ ಪರಸ್ಪರರನ್ನು ಆಕ್ರಮಣಿಸುತ್ತಿದ್ದ ಕುದುರೆಗಳು ರೆಕ್ಕೆಗಳುಳ್ಳ ಪರ್ವತಗಳು ವೇಗದಿಂದ ಚಲಿಸುತ್ತಿರುವಂತೆ ತೋರುತ್ತಿದ್ದವು.

07140021a ಸಾದಿನಃ ಸಾದಿಭಿಃ ಸಾರ್ಧಂ ಪ್ರಾಸಶಕ್ತ್ಯೃಷ್ಟಿಪಾಣಯಃ|

07140021c ಸಮಾಗಚ್ಚನ್ಮಹಾರಾಜ ವಿನದಂತಃ ಪೃಥಕ್ ಪೃಥಕ್||

ಮಹಾರಾಜ! ಅಶ್ವಾರೋಹಿಗಳು ಅಶ್ವಾರೋಹಿಗಳೊಡನೆ ಪ್ರಾಸ-ಶಕ್ತಿ-ಋಷ್ಟಿಗಳನ್ನು ಹಿಡಿದು ಗರ್ಜಿಸುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಎದುರಿಸಿ ಯುದ್ಧಮಾಡಿದರು.

07140022a ನರಾಸ್ತು ಬಹವಸ್ತತ್ರ ಸಮಾಜಗ್ಮುಃ ಪರಸ್ಪರಂ|

07140022c ಗದಾಭಿರ್ಮುಸಲೈಶ್ಚೈವ ನಾನಾಶಸ್ತ್ರೈಶ್ಚ ಸಂಘಶಃ||

ಅಲ್ಲಿ ಅನೇಕ ಪದಾತಿಗಳು ಗದೆ-ಮುಸಲ ಮತ್ತು ನಾನಾ ಶಸ್ತ್ರಗಳಿಂದ ಗುಂಪು ಗುಂಪಾಗಿ ಪರಸ್ಪರರನ್ನು ಎದುರಿಸಿ ಯುದ್ಧಮಾಡತೊಡಗಿದರು.

07140023a ಕೃತವರ್ಮಾ ತು ಹಾರ್ದಿಕ್ಯೋ ಧರ್ಮಪುತ್ರಂ ಯುಧಿಷ್ಠಿರಂ|

07140023c ವಾರಯಾಮಾಸ ಸಂಕ್ರುದ್ಧೋ ವೇಲೇವೋದ್ವೃತ್ತಮರ್ಣವಂ||

ಹಾರ್ದಿಕ್ಯ ಕೃತವರ್ಮನಾದರೋ ಉಕ್ಕಿಬರುತ್ತಿರುವ ಸಾಗರವನ್ನು ದಡವು ತಡೆಯುವಂತೆ ಸಂಕ್ರುದ್ಧನಾಗಿ ಧರ್ಮಪುತ್ರ ಯುಧಿಷ್ಠಿರನನ್ನು ತಡೆದನು.

07140024a ಯುಧಿಷ್ಠಿರಸ್ತು ಹಾರ್ದಿಕ್ಯಂ ವಿದ್ಧ್ವಾ ಪಂಚಭಿರಾಶುಗೈಃ|

07140024c ಪುನರ್ವಿವ್ಯಾಧ ವಿಂಶತ್ಯಾ ತಿಷ್ಠ ತಿಷ್ಠೇತಿ ಚಾಬ್ರವೀತ್||

ಯುಧಿಷ್ಠಿರನಾದರೋ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಮತ್ತು ಪುನಃ ಇಪ್ಪತ್ತು ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.

07140025a ಕೃತವರ್ಮಾ ತು ಸಂಕ್ರುದ್ಧೋ ಧರ್ಮಪುತ್ರಸ್ಯ ಮಾರಿಷ|

07140025c ಧನುಶ್ಚಿಚ್ಚೇದ ಭಲ್ಲೇನ ತಂ ಚ ವಿವ್ಯಾಧ ಸಪ್ತಭಿಃ||

ಮಾರಿಷ! ಕೃತವರ್ಮನಾದರೋ ಸಂಕ್ರುದ್ಧನಾಗಿ ಧರ್ಮಪುತ್ರನ ಧನುಸ್ಸನ್ನು ಭಲ್ಲದಿಂದ ತುಂಡರಿಸಿ ಅವನನ್ನು ಏಳು ಭಲ್ಲಗಳಿಂದ ಹೊಡೆದನು.

07140026a ಅಥಾನ್ಯದ್ಧನುರಾದಾಯ ಧರ್ಮಪುತ್ರೋ ಯುಧಿಷ್ಠಿರಃ|

07140026c ಹಾರ್ದಿಕ್ಯಂ ದಶಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

ಆಗ ಧರ್ಮಪುತ್ರ ಯುಧಿಷ್ಠಿರನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹತ್ತು ಬಾಣಗಳಿಂದ ಹಾರ್ದಿಕ್ಯನ ಎದೆಗೆ ಹೊಡೆದನು.

07140027a ಮಾಧವಸ್ತು ರಣೇ ವಿದ್ಧೋ ಧರ್ಮಪುತ್ರೇಣ ಮಾರಿಷ|

07140027c ಪ್ರಾಕಂಪತ ಚ ರೋಷೇಣ ಸಪ್ತಭಿಶ್ಚಾರ್ದಯಚ್ಚರೈಃ||

ಮಾರಿಷ! ಧರ್ಮಪುತ್ರನಿಂದ ಹೊಡೆಯಲ್ಪಟ್ಟ ಮಾಧವ ಕೃತವರ್ಮನಾದರೋ ರಣದಲ್ಲಿ ನಡುಗಿದನು ಮತ್ತು ರೋಷದಿಂದ ಅವನನ್ನು ಏಳು ಶರಗಳಿಂದ ಹೊಡೆದನು.

07140028a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಹಸ್ತಾವಾಪಂ ನಿಕೃತ್ಯ ಚ|

07140028c ಪ್ರಾಹಿಣೋನ್ನಿಶಿತಾನ್ಬಾಣಾನ್ಪಂಚ ರಾಜಂ ಶಿಲಾಶಿತಾನ್||

ರಾಜನ್! ಪಾರ್ಥ ಯುಧಿಷ್ಠಿರನು ಅವನ ಧನುಸ್ಸನ್ನು ಕತ್ತರಿಸಿ, ಹಸ್ತಾವಾಪವನ್ನು ಕಳಚುವಂತೆ ಮಾಡಿ, ಅವನ ಮೇಲೆ ಐದು ಶಿಲಾಶಿತ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

07140029a ತೇ ತಸ್ಯ ಕವಚಂ ಭಿತ್ತ್ವಾ ಹೇಮಚಿತ್ರಂ ಮಹಾಧನಂ|

07140029c ಪ್ರಾವಿಶನ್ಧರಣೀಮುಗ್ರಾ ವಲ್ಮೀಕಮಿವ ಪನ್ನಗಾಃ||

ಆ ಉಗ್ರ ಬಾಣಗಳು ಕೃತವರ್ಮನ ಮಹಾಬೆಲೆಯ ಬಂಗಾರದ ಚಿತ್ರಗಳ ಕವಚವನ್ನು ಸೀಳಿ ಸರ್ಪವು ಬಿಲವನ್ನು ಪ್ರವೇಶಿಸುವಂತೆ ಧರಣಿಯನ್ನು ಕೊರೆದು ಪ್ರವೇಶಿಸಿದವು.

07140030a ಅಕ್ಷ್ಣೋರ್ನಿಮೇಷಮಾತ್ರೇಣ ಸೋಽನ್ಯದಾದಾಯ ಕಾರ್ಮುಕಂ|

07140030c ವಿವ್ಯಾಧ ಪಾಂಡವಂ ಷಷ್ಟ್ಯಾ ಸೂತಂ ಚ ನವಭಿಃ ಶರೈಃ||

ರೆಪ್ಪೆ ಹೊಡೆಯುವುದರೊಳಗೆ ಕೃತವರ್ಮನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪಾಂಡವ ಯುಧಿಷ್ಠಿರನನ್ನು ಅರವತ್ತು ಬಾಣಗಳಿಂದಲೂ ಅವನ ಸಾರಥಿಯನ್ನು ಒಂಬತ್ತು ಬಾಣಗಳಿಂದಲೂ ಹೊಡೆದನು.

07140031a ತಸ್ಯ ಶಕ್ತಿಮಮೇಯಾತ್ಮಾ ಪಾಂಡವೋ ಭುಜಗೋಪಮಾಂ|

07140031c ಚಿಕ್ಷೇಪ ಭರತಶ್ರೇಷ್ಠ ರಥೇ ನ್ಯಸ್ಯ ಮಹದ್ಧನುಃ||

ಭರತಶ್ರೇಷ್ಠ! ಆಗ ಅಮೇಯಾತ್ಮ ಪಾಂಡವನು ತನ್ನ ಧನುಸ್ಸನ್ನು ರಥದಲ್ಲಿರಿಸಿ ಸರ್ಪದಂತಿದ್ದ ಶಕ್ತ್ಯಾಯುಧವನ್ನು ಕೃತವರ್ಮನ ಮೇಲೆ ಎಸೆದನು.

07140032a ಸಾ ಹೇಮಚಿತ್ರಾ ಮಹತೀ ಪಾಂಡವೇನ ಪ್ರವೇರಿತಾ|

07140032c ನಿರ್ಭಿದ್ಯ ದಕ್ಷಿಣಂ ಬಾಹುಂ ಪ್ರಾವಿಶದ್ಧರಣೀತಲಂ||

ಪಾಂಡವನಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಚಿತ್ರಗಳಿದ್ದ ಆ ಮಹಾ ಶಕ್ತಿಯು ಕೃತವರ್ಮನ ಬಲತೋಳನ್ನು ಭೇದಿಸಿ ಭೂಮಿಯನ್ನು ಪ್ರವೇಶಿಸಿತು.

07140033a ಏತಸ್ಮಿನ್ನೇವ ಕಾಲೇ ತು ಗೃಹ್ಯ ಪಾರ್ಥಃ ಪುನರ್ಧನುಃ|

07140033c ಹಾರ್ದಿಕ್ಯಂ ಚಾದಯಾಮಾಸ ಶರೈಃ ಸಮ್ನತಪರ್ವಭಿಃ||

ಅಷ್ಟೇ ಸಮಯದಲ್ಲಿ ಪಾರ್ಥನು ಪುನಃ ಧನುಸ್ಸನ್ನು ಹಿಡಿದು ಸನ್ನತಪರ್ವ ಶರಗಳಿಂದ ಹಾರ್ದಿಕ್ಯನನ್ನು ಮುಚ್ಚಿದನು.

07140034a ತತಸ್ತು ಸಮರೇ ಶೂರೋ ವೃಷ್ಣೀನಾಂ ಪ್ರವರೋ ರಥೀ|

07140034c ವ್ಯಶ್ವಸೂತರಥಂ ಚಕ್ರೇ ನಿಮೇಷಾರ್ಧಾದ್ಯುಧಿಷ್ಠಿರಂ||

ಆಗ ಸಮರ ಶೂರ ವೃಷ್ಣಿಗಳ ಪ್ರವರ ರಥೀ ಕೃತವರ್ಮನು ನಿಮಿಷಾರ್ಧದಲ್ಲಿ ಯುಧಿಷ್ಠಿರನನ್ನು ಅಶ್ವ-ಸೂತರಹಿತನನ್ನಾಗಿ ಮಾಡಿದನು.

07140035a ತತಸ್ತು ಪಾಂಡವೋ ಜ್ಯೇಷ್ಠಃ ಖಡ್ಗಚರ್ಮ ಸಮಾದದೇ|

07140035c ತದಸ್ಯ ನಿಶಿತೈರ್ಬಾಣೈರ್ವ್ಯಧಮನ್ಮಾಧವೋ ರಣೇ||

ಆಗ ಜ್ಯೇಷ್ಠ ಪಾಂಡವನು ಖಡ್ಗ ಗುರಾಣಿಗಳನ್ನು ತೆಗೆದುಕೊಳ್ಳಲು ಅವುಗಳನ್ನು ಕೂಡ ರಣದಲ್ಲಿ ಮಾಧವನು ನಿಶಿತಬಾಣಗಳಿಂದ ಕತ್ತರಿಸಿದನು.

07140036a ತೋಮರಂ ತು ತತೋ ಗೃಹ್ಯ ಸ್ವರ್ಣದಂಡಂ ದುರಾಸದಂ|

07140036c ಪ್ರೇಷಯತ್ಸಮರೇ ತೂರ್ಣಂ ಹಾರ್ದಿಕ್ಯಸ್ಯ ಯುಧಿಷ್ಠಿರಃ||

ಆಗ ತಕ್ಷಣವೇ ಯುಧಿಷ್ಠಿರನು ಸಮರದಲ್ಲಿ ಸ್ವರ್ಣದಂಡದ ದುರಾಸದ ತೋಮರವನ್ನು ಹಿಡಿದು ಅದನ್ನು ಹಾರ್ದಿಕ್ಯನ ಮೇಲೆ ಎಸೆದನು.

07140037a ತಮಾಪತಂತಂ ಸಹಸಾ ಧರ್ಮರಾಜಭುಜಚ್ಯುತಂ|

07140037c ದ್ವಿಧಾ ಚಿಚ್ಚೇದ ಹಾರ್ದಿಕ್ಯಃ ಕೃತಹಸ್ತಃ ಸ್ಮಯನ್ನಿವ||

ಧರ್ಮರಾಜನಿಂದ ಹೊರಟು ತನ್ನ ಮೇಲೆ ಒಮ್ಮೆಲೇ ಬೀಳುತ್ತಿದ್ದ ಅದನ್ನು ಕೃತಹಸ್ತ ಹಾರ್ದಿಕ್ಯನು ಮುಗುಳ್ನಗುತ್ತಾ ಎರಡಾಗಿ ಕತ್ತರಿಸಿದನು.

07140038a ತತಃ ಶರಶತೇನಾಜೌ ಧರ್ಮಪುತ್ರಮವಾಕಿರತ್|

07140038c ಕವಚಂ ಚಾಸ್ಯ ಸಂಕ್ರುದ್ಧಃ ಶರೈಸ್ತೀಕ್ಷ್ಣೈರದಾರಯತ್||

ಅನಂತರ ನೂರಾರು ಶರಗಳಿಂದ ಧರ್ಮಪುತ್ರನನ್ನು ಮುಚ್ಚಿ, ಸಂಕ್ರುದ್ಧನಾಗಿ ತೀಕ್ಷ್ಣ ಶರಗಳಿಂದ ಅವನ ಕವಚವನ್ನೂ ಸೀಳಿದನು.

07140039a ಹಾರ್ದಿಕ್ಯಶರಸಂಚಿನ್ನಂ ಕವಚಂ ತನ್ಮಹಾತ್ಮನಃ|

07140039c ವ್ಯಶೀರ್ಯತ ರಣೇ ರಾಜಂಸ್ತಾರಾಜಾಲಮಿವಾಂಬರಾತ್||

ರಾಜನ್! ಹಾರ್ದಿಕ್ಯನ ಶರಗಳಿಂದ ತುಂಡಾದ ಆ ಮಹಾತ್ಮನ ಕವಚವು ತುಂಡು ತುಂಡಾಗಿ ಆಕಾಶದಿಂದ ನಕ್ಷತ್ರಗಳು ಉದುರುವಂತೆ ರಣದಲ್ಲಿ ಉದುರಿ ಬಿದ್ದವು.

07140040a ಸ ಚಿನ್ನಧನ್ವಾ ವಿರಥಃ ಶೀರ್ಣವರ್ಮಾ ಶರಾರ್ದಿತಃ|

07140040c ಅಪಾಯಾಸೀದ್ರಣಾತ್ತೂರ್ಣಂ ಧರ್ಮಪುತ್ರೋ ಯುಧಿಷ್ಠಿರಃ||

ಹಾಗೆ ಧನುಸ್ಸನ್ನು ಕತ್ತರಿಸಿಕೊಂಡು, ವಿರಥನಾಗಿ, ಕವಚವನ್ನು ತುಂಡರಿಸಿಕೊಂಡು, ಶರಗಳಿಂದ ಗಾಯಗೊಂಡು ಧರ್ಮಪುತ್ರ ಯುಧಿಷ್ಠಿರನು ತಕ್ಷಣವೇ ರಣಭೂಮಿಯಿಂದ ಪಲಾಯನಮಾಡಿದನು.

07140041a ಕೃತವರ್ಮಾ ತು ನಿರ್ಜಿತ್ಯ ಧರ್ಮಪುತ್ರಂ ಯುಧಿಷ್ಠಿರಂ|

07140041c ಪುನರ್ದ್ರೋಣಸ್ಯ ಜುಗುಪೇ ಚಕ್ರಮೇವ ಮಹಾಬಲಃ||

ಮಹಾರಾಜ! ಹೀಗೆ ಧರ್ಮಪುತ್ರ ಯುಧಿಷ್ಠಿರನನ್ನು ಪರಾಜಯಗೊಳಿಸಿ ಕೃತವರ್ಮನು ಮಹಾತ್ಮ ದ್ರೋಣನ ರಥಚಕ್ರದ ರಕ್ಷಣೆಯಲ್ಲಿ ನಿರತನಾದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಯುಧಿಷ್ಠಿರಾಪಯಾನೇ ಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಯುಧಿಷ್ಠಿರಾಪಯಾನ ಎನ್ನುವ ನೂರಾನಲ್ವತ್ತನೇ ಅಧ್ಯಾಯವು.

Related image

Comments are closed.