Drona Parva: Chapter 141

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೧

ಸಾತ್ಯಕಿಯಿಂದ ಭೂರಿಯ ವಧೆ (೧-೧೨); ಘಟೋತ್ಕಚ-ಅಶ್ವಾತ್ಥಾಮರ ಘೋರ ಯುದ್ಧ (೧೩-೩೯); ದುರ್ಯೋಧನನು ಭೀಮಸೇನನಿಂದ ಪರಾಜಿತಗೊಂಡಿದುದು (೪೦-೬೧).

07141001 ಸಂಜಯ ಉವಾಚ|

07141001a ಭೂರಿಸ್ತು ಸಮರೇ ರಾಜಂ ಶೈನೇಯಂ ರಥಿನಾಂ ವರಂ|

07141001c ಆಪತಂತಮಪಾಸೇಧತ್ ಪ್ರಪಾನಾದಿವ ಕುಂಜರಂ||

ಸಂಜಯನು ಹೇಳಿದನು: “ರಾಜನ್! ಸಮರದಲ್ಲಿ ಮುಂದುವರೆದು ಬರುತ್ತಿರುವ ಆನೆಯೊಂದನ್ನು ತಡೆಹಿಡಿಯುವಂತೆ ರಥಿಗಳಲ್ಲಿ ಶ್ರೇಷ್ಠ ಶೈನೇಯ ಸಾತ್ಯಕಿಯನ್ನು ಭೂರಿಯು ತಡೆದು ಯುದ್ಧಮಾಡಿದನು.

07141002a ಅಥೈನಂ ಸಾತ್ಯಕಿಃ ಕ್ರುದ್ಧಃ ಪಂಚಭಿರ್ನಿಶಿತೈಃ ಶರೈಃ|

07141002c ವಿವ್ಯಾಧ ಹೃದಯೇ ತೂರ್ಣಂ ಪ್ರಾಸ್ರವತ್ತಸ್ಯ ಶೋಣಿತಂ||

ಆಗ ಕ್ರುದ್ಧ ಸಾತ್ಯಕಿಯು ಐದು ನಿಶಿತ ಶರಗಳಿಂದ ಭೂರಿಯ ಹೃದಯಕ್ಕೆ ಪ್ರಯೋಗಿಸಲು, ಅಲ್ಲಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು.

07141003a ತಥೈವ ಕೌರವೋ ಯುದ್ಧೇ ಶೈನೇಯಂ ಯುದ್ಧದುರ್ಮದಂ|

07141003c ದಶಭಿರ್ವಿಶಿಖೈಸ್ತೀಕ್ಷ್ಣೈರವಿಧ್ಯತ ಭುಜಾಂತರೇ||

ಹಾಗೆಯೇ ಯುದ್ಧದಲ್ಲಿ ಕೌರವ ಭೂರಿಯೂ ಕೂಡ ಯುದ್ಧದುರ್ಮದ ಶೈನೇಯನ ಭುಜಾಂತರಕ್ಕೆ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

07141004a ತಾವನ್ಯೋನ್ಯಂ ಮಹಾರಾಜ ತತಕ್ಷಾತೇ ಶರೈರ್ಭೃಶಂ|

07141004c ಕ್ರೋಧಸಂರಕ್ತನಯನೌ ಕ್ರೋಧಾದ್ವಿಸ್ಫಾರ್ಯ ಕಾರ್ಮುಕೇ||

ಮಹಾರಾಜ! ಅವರಿಬ್ಬರೂ ಕ್ರೋಧದಿಂದ ಕೆಂಗಣ್ಣುಗಳುಳ್ಳವರಾಗಿ ಧನುಸ್ಸುಗಳನ್ನು ಟೇಂಕರಿಸುತ್ತಾ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

07141005a ತಯೋರಾಸೀನ್ಮಹಾರಾಜ ಶಸ್ತ್ರವೃಷ್ಟಿಃ ಸುದಾರುಣಾ|

07141005c ಕ್ರುದ್ಧಯೋಃ ಸಾಯಕಮುಚೋರ್ಯಮಾಂತಕನಿಕಾಶಯೋಃ||

ಮಹಾರಾಜ! ಯಮಾಂತಕರಂತೆ ಕ್ರುದ್ಧರಾಗಿದ್ದ ಅವರಿಬ್ಬರ ನಡುವಿನ ಸಾಯಕಗಳ ಶರವೃಷ್ಟಿಯು ಸುದಾರುಣವಾಗಿತ್ತು.

07141006a ತಾವನ್ಯೋನ್ಯಂ ಶರೈ ರಾಜನ್ಪ್ರಚ್ಚಾದ್ಯ ಸಮರೇ ಸ್ಥಿತೌ|

07141006c ಮುಹೂರ್ತಂ ಚೈವ ತದ್ಯುದ್ಧಂ ಸಮರೂಪಮಿವಾಭವತ್||

ರಾಜನ್! ಅವರಿಬ್ಬರೂ ಅನ್ಯೋನ್ಯರನ್ನು ಸಮರದಲ್ಲಿ ಶರಗಳಿಂದ ಮುಚ್ಚಿ ನಿಂತರು. ಮುಹೂರ್ತಕಾಲ ಆ ಯುದ್ಧವು ಸಮರೂಪವಾಗಿದ್ದಿತು.

07141007a ತತಃ ಕ್ರುದ್ಧೋ ಮಹಾರಾಜ ಶೈನೇಯಃ ಪ್ರಹಸನ್ನಿವ|

07141007c ಧನುಶ್ಚಿಚ್ಚೇದ ಸಮರೇ ಕೌರವ್ಯಸ್ಯ ಮಹಾತ್ಮನಃ||

ಮಹಾರಾಜ! ಆಗ ಸಮರದಲ್ಲಿ ಕ್ರುದ್ಧನಾದ ಶೈನೇಯನು ನಗುತ್ತಾ ಮಹಾತ್ಮ ಕೌರವನ ಧನುಸ್ಸನ್ನು ಕತ್ತರಿಸಿದನು.

07141008a ಅಥೈನಂ ಚಿನ್ನಧನ್ವಾನಂ ನವಭಿರ್ನಿಶಿತೈಃ ಶರೈಃ|

07141008c ವಿವ್ಯಾಧ ಹೃದಯೇ ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್||

ಅವನ ಧನುಸ್ಸನ್ನು ತುಂಡರಿಸಿದ ನಂತರ ತಕ್ಷಣವೇ ಒಂಭತ್ತು ನಿಶಿತ ಶರಗಳಿಂದ ಅವನ ಹೃದಯಕ್ಕೆ ಹೊಡೆದು ನಿಲ್ಲುನಿಲ್ಲೆಂದು ಕೂಗಿದನು.

07141009a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುತಾಪನಃ|

07141009c ಧನುರನ್ಯತ್ಸಮಾದಾಯ ಸಾತ್ವತಂ ಪ್ರತ್ಯವಿಧ್ಯತ||

ಹಾಗೆ ಶತ್ರುವಿನಿಂದ ಅತಿ ಬಲವಾಗಿ ಹೊಡೆಯಲ್ಪಟ್ಟ ಆ ಶತ್ರುತಾಪನ ಭೂರಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಾತ್ವತನನ್ನು ಪ್ರತಿಯಾಗಿ ಹೊಡೆದನು.

07141010a ಸ ವಿದ್ಧ್ವಾ ಸಾತ್ವತಂ ಬಾಣೈಸ್ತ್ರಿಬಿÃರೇವ ವಿಶಾಂ ಪತೇ|

07141010c ಧನುಶ್ಚಿಚ್ಚೇದ ಭಲ್ಲೇನ ಸುತೀಕ್ಷ್ಣೇನ ಹಸನ್ನಿವ||

ವಿಶಾಂಪತೇ! ಅವನು ಸಾತ್ವತನನ್ನು ಮೂರು ಬಾಣಗಳಿಂದ ಹೊಡೆದು ತೀಕ್ಷ್ಣ ಭಲ್ಲದಿಂದ ಅವನ ಧನುಸ್ಸನ್ನು ಕತ್ತರಿಸಿ ನಕ್ಕನು.

07141011a ಚಿನ್ನಧನ್ವಾ ಮಹಾರಾಜ ಸಾತ್ಯಕಿಃ ಕ್ರೋಧಮೂರ್ಚಿತಃ|

07141011c ಪ್ರಜಹಾರ ಮಹಾವೇಗಾಂ ಶಕ್ತಿಂ ತಸ್ಯ ಮಹೋರಸಿ||

ಮಹಾರಾಜ! ಧನುಸ್ಸು ತುಂಡಾಗಲು ಕ್ರೋಧಮೂರ್ಚಿತ ಸಾತ್ಯಕಿಯು ಅವನ ಎದೆಗೆ ಗುರಿಯಿಟ್ಟು ಮಹಾವೇಗವುಳ್ಳ ಶಕ್ತಿಯನ್ನು ಪ್ರಯೋಗಿಸಿದನು.

07141012a ಸ ತು ಶಕ್ತ್ಯಾ ವಿಭಿನ್ನಾಂಗೋ ನಿಪಪಾತ ರಥೋತ್ತಮಾತ್|

07141012c ಲೋಹಿತಾಂಗ ಇವಾಕಾಶಾದ್ದೀಪ್ತರಶ್ಮಿರ್ಯದೃಚ್ಚಯಾ||

ಆ ಶಕ್ತಿಯಿಂದ ಭಿನ್ನಾಂಗನಾದ ಭೂರಿಯು ಉರಿಯುತ್ತಿರುವ ಕಿರಣಗಳ ಲೋಹಿತಾಂಗ ಅಂಗಾರಕನು ಆಕಾಶದಿಂದ ಬೀಳುವಂತೆ ರಥದಿಂದ ಕೆಳಗೆ ಬಿದ್ದನು.

07141013a ತಂ ತು ದೃಷ್ಟ್ವಾ ಹತಂ ಶೂರಮಶ್ವತ್ಥಾಮಾ ಮಹಾರಥಃ|

07141013c ಅಭ್ಯಧಾವತ ವೇಗೇನ ಶೈನೇಯಂ ಪ್ರತಿ ಸಮ್ಯುಗೇ|

07141013e ಅಭ್ಯವರ್ಷಚ್ಚರೌಘೇಣ ಮೇರುಂ ವೃಷ್ಟ್ಯಾ ಯಥಾಂಬುದಃ|

ರಣಾಂಗಣದಲ್ಲಿ ಶೂರ ಭೂರಿಯು ಹತನಾದುದನ್ನು ನೋಡಿ ಮಹಾರಥ ಅಶ್ವತ್ಥಾಮನು ವೇಗದಿಂದ ಶೈನೇಯನ ಕಡೆ ಧಾವಿಸಿ ಬಂದು ಮೋಡಗಳು ಮೇರುಪರ್ವತದ ಮೇಲೆ ಮಳೆಗರೆಯುವಂತೆ ಸಾತ್ಯಕಿಯ ಮೇಲೆ ಶರೌಘಗಳ ಮಳೆಗರೆದನು.

07141014a ತಮಾಪತಂತಂ ಸಂರಬ್ಧಂ ಶೈನೇಯಸ್ಯ ರಥಂ ಪ್ರತಿ|

07141014c ಘಟೋತ್ಕಚೋಽಬ್ರವೀದ್ರಾಜನ್ನಾದಮ್ಮುಕ್ತ್ವಾ ಮಹಾರಥಃ||

ರಾಜನ್! ಅವನು ಶೈನೇಯನ ರಥದ ಕಡೆ ಅವಸರದಿಂದ ಹೋಗುತ್ತಿರುವುದನ್ನು ನೋಡಿ ಮಹಾರಥ ಘಟೋತ್ಕಚನು ಸಿಂಹನಾದಗೈಯುತ್ತಾ ಅಶ್ವತ್ಥಾಮನಿಗೆ ಹೇಳಿದನು:

07141015a ತಿಷ್ಠ ತಿಷ್ಠ ನ ಮೇ ಜೀವನ್ದ್ರೋಣಪುತ್ರ ಗಮಿಷ್ಯಸಿ|

07141015c ಏಷ ತ್ವಾದ್ಯ ಹನಿಷ್ಯಾಮಿ ಮಹಿಷಂ ಸ್ಕಂದರಾಡಿವ|

07141015e ಯುದ್ಧಶ್ರದ್ಧಾಮಹಂ ತೇಽದ್ಯ ವಿನೇಷ್ಯಾಮಿ ರಣಾಜಿರೇ||

“ದ್ರೋಣಪುತ್ರ! ನಿಲ್ಲು ನಿಲ್ಲು! ನನ್ನಿಂದ ಜೀವಂತವಾಗಿ ಹೋಗಲಾರೆ! ಇಂದು ನಾನು ನಿನ್ನನ್ನು ರಾಜಾ ಸ್ಕಂದನು ಮಹಿಷನನ್ನು ಸಂಹರಿಸಿದಂತೆ ಸಂಹರಿಸುತ್ತೇನೆ. ಇಂದು ರಣಾಂಗಣದಲ್ಲಿ ಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ನಾಶಗೊಳಿಸುತ್ತೇನೆ!”

07141016a ಇತ್ಯುಕ್ತ್ವಾ ರೋಷತಾಮ್ರಾಕ್ಷೋ ರಾಕ್ಷಸಃ ಪರವೀರಹಾ|

07141016c ದ್ರೌಣಿಮಭ್ಯದ್ರವತ್ಕ್ರುದ್ಧೋ ಗಜೇಂದ್ರಮಿವ ಕೇಸರೀ||

ರೋಷದಿಂದ ಕೆಂಗಣ್ಣನಾಗಿದ್ದ ಪರವೀರಹ ರಾಕ್ಷಸನು ಹೀಗೆ ಹೇಳಿ ಕ್ರುದ್ಧ ಕೇಸರಿಯು ಗಜೇಂದ್ರನನ್ನು ಹೇಗೋ ಹಾಗೆ ದ್ರೌಣಿಯನ್ನು ಆಕ್ರಮಣಿಸಿದನು.

07141017a ರಥಾಕ್ಷಮಾತ್ರೈರಿಷುಭಿರಭ್ಯವರ್ಷದ್ ಘಟೋತ್ಕಚಃ|

07141017c ರಥಿನಾಂ ಋಷಭಂ ದ್ರೌಣಿಂ ಧಾರಾಭಿರಿವ ತೋಯದಃ||

ಮೋಡಗಳ ಮಳೆಯಂತೆ ರಥದ ಅಚ್ಚುಗಳ ಗಾತ್ರದ ಬಾಣಗಳ ಮಳೆಯನ್ನು ಘಟೋತ್ಕಚನು ರಥಿಗಳಲ್ಲಿ ಋಷಭ ದ್ರೌಣಿಯ ಮೇಲೆ ಸುರಿಸಿದನು.

07141018a ಶರವೃಷ್ಟಿಂ ತು ತಾಂ ಪ್ರಾಪ್ತಾಂ ಶರೈರಾಶೀವಿಷೋಪಮೈಃ|

07141018c ಶಾತಯಾಮಾಸ ಸಮರೇ ತರಸಾ ದ್ರೌಣಿರುತ್ಸ್ಮಯನ್||

ಮೇಲೆ ಬೀಳುತ್ತಿರುವ ಆ ಶರವೃಷ್ಟಿಯನ್ನು ದ್ರೌಣಿಯು ಅಲ್ಲಗಳೆಯುತ್ತಾ ಸಮರದಲ್ಲಿ ತಕ್ಷಣವೇ ಸರ್ಪಗಳ ವಿಷದಂತಿರುವ ಶರಗಳಿಂದ ನಾಶಗೊಳಿಸಿದನು.

07141019a ತತಃ ಶರಶತೈಸ್ತೀಕ್ಷ್ಣೈರ್ಮರ್ಮಭೇದಿಭಿರಾಶುಗೈಃ|

07141019c ಸಮಾಚಿನೋದ್ರಾಕ್ಷಸೇಂದ್ರಂ ಘಟೋತ್ಕಚಮರಿಂದಮ||

ಅನಂತರ ಆ ಅರಿಂದಮ ಅಶ್ವತ್ಥಾಮನು ನೂರು ಮರ್ಮಭೇದೀ ತೀಕ್ಷ್ಣ ಆಶುಗ ಶರಗಳಿಂದ ರಾಕ್ಷಸೇಂದ್ರ ಘಟೋತ್ಕಚನನ್ನು ಮುಚ್ಚಿದನು.

07141020a ಸ ಶರೈರಾಚಿತಸ್ತೇನ ರಾಕ್ಷಸೋ ರಣಮೂರ್ಧನಿ|

07141020c ವ್ಯಕಾಶತ ಮಹಾರಾಜ ಶ್ವಾವಿಚ್ಚಲಲಿತೋ ಯಥಾ||

ಮಹಾರಾಜ! ಹಾಗೆ ರಣಮೂರ್ಧನಿಯಲ್ಲಿ ಶರಗಳಿಂದ ಚುಚ್ಚಲ್ಪಟ್ಟ ರಾಕ್ಷಸನು ಮುಳ್ಳುಹಂದಿಯಂತೆಯೇ ಪ್ರಕಾಶಿಸಿದನು.

07141021a ತತಃ ಕ್ರೋಧಸಮಾವಿಷ್ಟೋ ಭೈಮಸೇನಿಃ ಪ್ರತಾಪವಾನ್|

07141021c ಶರೈರವಚಕರ್ತೋಗ್ರೈರ್ದ್ರೌಣಿಂ ವಜ್ರಾಶನಿಸ್ವನೈಃ||

07141022a ಕ್ಷುರಪ್ರೈರರ್ಧಚಂದ್ರೈಶ್ಚ ನಾರಾಚೈಃ ಸಶಿಲೀಮುಖೈಃ|

07141022c ವರಾಹಕರ್ಣೈರ್ನಾಲೀಕೈಸ್ತೀಕ್ಷ್ಣೈಶ್ಚಾಪಿ ವಿಕರ್ಣಿಭಿಃ||

ಆಗ ಕ್ರೋಧಸಮಾವಿಷ್ಟ ಪ್ರತಾಪವಾನ್ ಭೈಮಸೇನಿಯು ವಜ್ರಾಯುಧದ ಮತ್ತು ಸಿಡಿಲಿನ ಪ್ರಭೆಗೆ ಸಮಾನ ಪ್ರಭೆಯುಳ್ಳ ಉಗ್ರ ಕ್ಷುರಪ್ರ, ಅರ್ಧಚಂದ್ರ, ನಾರಾಚ, ಶಿಲೀಮುಖ, ವರಾಹಕರ್ಣ, ನಾಲೀಕ ಮತ್ತು ವಿಕರ್ಣ ಇವೇ ಮೊದಲಾದ ಬಾಣಗಳಿಂದ ದ್ರೌಣಿಯನ್ನು ಬಹಳವಾಗಿ ಗಾಯಗೊಳಿಸಿದನು.

07141023a ತಾಂ ಶಸ್ತ್ರವೃಷ್ಟಿಮತುಲಾಂ ವಜ್ರಾಶನಿಸಮಸ್ವನಾಂ|

07141023c ಪತಂತೀಮುಪರಿ ಕ್ರುದ್ಧೋ ದ್ರೌಣಿರವ್ಯಥಿತೇಂದ್ರಿಯಃ||

07141024a ಸುದುಃಸಹಾಂ ಶರೈರ್ಘೋರೈರ್ದಿವ್ಯಾಸ್ತ್ರಪ್ರತಿಮಂತ್ರಿತೈಃ|

07141024c ವ್ಯಧಮತ್ಸ ಮಹಾತೇಜಾ ಮಹಾಭ್ರಾಣೀವ ಮಾರುತಃ||

ಮಹಾತೇಜಸ್ವಿ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ಕ್ರುದ್ಧನಾಗಿ ಸಿಡಿಲಿನಂತೆ ಘೋರಶಬ್ಧಮಾಡುತ್ತಾ ತನ್ನ ಮೇಲೆ ಬೀಳುತ್ತಿದ್ದ ಸಹಿಸಲಸಾಧ್ಯ ಆ ಅತುಲ ಶಸ್ತ್ರವೃಷ್ಟಿಯನ್ನು ಮಂತ್ರಿಸಿದ ದಿವ್ಯಾಸ್ತ್ರಗಳಿಂದ ಕೂಡಿದ ಘೋರ ಶರಗಳಿಂದ ಚಂಡಮಾರುತವು ಮೋಡಗಳನ್ನು ಹೇಗೋ ಹಾಗೆ ನಾಶಗೊಳಿಸಿದನು.

07141025a ತತೋಽಂತರಿಕ್ಷೇ ಬಾಣಾನಾಂ ಸಂಗ್ರಾಮೋಽನ್ಯ ಇವಾಭವತ್|

07141025c ಘೋರರೂಪೋ ಮಹಾರಾಜ ಯೋಧಾನಾಂ ಹರ್ಷವರ್ಧನಃ||

ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗ್ರಾಮವೇ ನಡೆಯುತ್ತಿದೆಯೋ ಎಂದು ಅನ್ನಿಸುತ್ತಿತ್ತು. ಮಹಾರಾಜ! ಆ ಘೋರದೃಶ್ಯವು ಯೋಧರ ಹರ್ಷವನ್ನು ಹೆಚ್ಚಿಸುತ್ತಿತ್ತು.

07141026a ತತೋಽಸ್ತ್ರಸಂಘರ್ಷಕೃತೈರ್ವಿಸ್ಫುಲಿಂಗೈಃ ಸಮಂತತಃ|

07141026c ಬಭೌ ನಿಶಾಮುಖೇ ವ್ಯೋಮ ಖದ್ಯೋತೈರಿವ ಸಂವೃತಂ||

ಅಸ್ತ್ರಗಳ ಪರಸ್ಪರ ಸಂಘರ್ಷಣೆಯಿಂದ ಹುಟ್ಟಿದ ಕಿಡಿಗಳಿಂದ ವ್ಯಾಪ್ತವಾದ ಆಕಾಶವು ಸಾಯಂಕಾಲ ಮಿಂಚುಹುಳುಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು.

07141027a ಸ ಮಾರ್ಗಣಗಣೈರ್ದ್ರೌಣಿರ್ದಿಶಃ ಪ್ರಚ್ಚಾದ್ಯ ಸರ್ವತಃ|

07141027c ಪ್ರಿಯಾರ್ಥಂ ತವ ಪುತ್ರಾಣಾಂ ರಾಕ್ಷಸಂ ಸಮವಾಕಿರತ್||

ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡಲೋಸುಗ ದ್ರೌಣಿಯು ಮಾರ್ಗಣಗಳ ರಾಶಿಯಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ, ರಾಕ್ಷಸನನ್ನೂ ಮುಚ್ಚಿದನು.

07141028a ತತಃ ಪ್ರವವೃತೇ ಯುದ್ಧಂ ದ್ರೌಣಿರಾಕ್ಷಸಯೋರ್ಮೃಧೇ|

07141028c ವಿಗಾಢೇ ರಜನೀಮಧ್ಯೇ ಶಕ್ರಪ್ರಹ್ರಾದಯೋರಿವ||

ಆಗ ಆ ಗಾಢ ರಾತ್ರಿಯಲ್ಲಿ ರಣದಲ್ಲಿ ದ್ರೌಣಿ-ರಾಕ್ಷಸರ ನಡುವೆ ಶಕ್ರ-ಪ್ರಹ್ರಾದರ ನಡುವೆ ನಡೆದಂತೆ ಯುದ್ಧವು ನಡೆಯಿತು.

07141029a ತತೋ ಘಟೋತ್ಕಚೋ ಬಾಣೈರ್ದಶಭಿರ್ದ್ರೌಣಿಮಾಹವೇ|

07141029c ಜಘಾನೋರಸಿ ಸಂಕ್ರುದ್ಧಃ ಕಾಲಜ್ವಲನಸಮ್ನಿಭೈಃ||

ಆಗ ಘಟೋತ್ಕಚನು ರಣದಲ್ಲಿ ಸಂಕ್ರುದ್ಧನಾಗಿ ಕಾಲಜ್ವಲನ ಪ್ರಕಾಶವುಳ್ಳ ಹತ್ತು ಬಾಣಗಳಿಂದ ದ್ರೌಣಿಯ ಎದೆಗೆ ಹೊಡೆದನು.

07141030a ಸ ತೈರಭ್ಯಾಯತೈರ್ವಿದ್ಧೋ ರಾಕ್ಷಸೇನ ಮಹಾಬಲಃ|

07141030c ಚಚಾಲ ಸಮರೇ ದ್ರೌಣಿರ್ವಾತನುನ್ನ ಇವ ದ್ರುಮಃ|

07141030e ಸ ಮೋಹಮನುಸಂಪ್ರಾಪ್ತೋ ಧ್ವಜಯಷ್ಟಿಂ ಸಮಾಶ್ರಿತಃ||

ರಾಕ್ಷಸನ ಆ ಉದ್ದ ಬಾಣಗಳಿಂದ ಗಾಯಗೊಂಡ ಮಹಾಬಲ ದ್ರೌಣಿಯು ಸಮರದಲ್ಲಿ ಚಂಡಮಾರುತಕ್ಕೆ ಸಿಲುಕಿದ ವೃಕ್ಷದಂತೆ ಅಳ್ಳಾಡಿ ಹೋದನು. ಅವನು ಮೂರ್ಛೆಹೊಂದಿ ಧ್ವಜದಂಡವನ್ನು ಹಿಡಿದು ಕುಳಿತನು.

07141031a ತತೋ ಹಾಹಾಕೃತಂ ಸೈನ್ಯಂ ತವ ಸರ್ವಂ ಜನಾಧಿಪ|

07141031c ಹತಂ ಸ್ಮ ಮೇನಿರೇ ಸರ್ವೇ ತಾವಕಾಸ್ತಂ ವಿಶಾಂ ಪತೇ||

ಜನಾಧಿಪ! ವಿಶಾಂಪತೇ! ಆಗ ನಿನ್ನ ಸೈನ್ಯದಲ್ಲಿ ಎಲ್ಲರೂ ಹಾಹಾಕಾರಮಾಡಿದರು. ನಿನ್ನವರೆಲ್ಲರೂ ಅವನು ಹತನಾದನೆಂದೇ ಅಂದುಕೊಂಡರು.

07141032a ತಂ ತು ದೃಷ್ಟ್ವಾ ತಥಾವಸ್ಥಮಶ್ವತ್ಥಾಮಾನಮಾಹವೇ|

07141032c ಪಾಂಚಾಲಾಃ ಸೃಂಜಯಾಶ್ಚೈವ ಸಿಂಹನಾದಂ ಪ್ರಚಕ್ರಿರೇ||

ಯುದ್ಧದಲ್ಲಿ ಅಶ್ವತ್ಥಾಮನ ಆ ಅವಸ್ಥೆಯನ್ನು ನೋಡಿ ಪಾಂಚಾಲರು ಮತ್ತು ಸೃಂಜಯರು ಸಿಂಹನಾದಗೈದರು.

07141033a ಪ್ರತಿಲಭ್ಯ ತತಃ ಸಂಜ್ಞಾಮಶ್ವತ್ಥಾಮಾ ಮಹಾಬಲಃ|

07141033c ಧನುಃ ಪ್ರಪೀಡ್ಯ ವಾಮೇನ ಕರೇಣಾಮಿತ್ರಕರ್ಶನಃ||

07141034a ಮುಮೋಚಾಕರ್ಣಪೂರ್ಣೇನ ಧನುಷಾ ಶರಮುತ್ತಮಂ|

07141034c ಯಮದಂಡೋಪಮಂ ಘೋರಮುದ್ದಿಶ್ಯಾಶು ಘಟೋತ್ಕಚಂ||

ಆಗ ಸ್ವಲ್ಪಹೊತ್ತಿನಲ್ಲಿಯೇ ಎಚ್ಚೆತ್ತ ಅಮಿತ್ರಕರ್ಶನ ಮಹಾಬಲ ಅಶ್ವತ್ಥಾಮನು ಎಡಗೈಯಿಂದ ಧನುಸ್ಸನ್ನು ಮೀಟಿ ಧನುಸ್ಸನ್ನು ಆಕರ್ಣಾಂತವಾಗಿ ಸೆಳೆದು ಯಮದಂಡದಂತಿರುವ ಘೋರ ಉತ್ತಮ ಶರವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದನು.

07141035a ಸ ಭಿತ್ತ್ವಾ ಹೃದಯಂ ತಸ್ಯ ರಾಕ್ಷಸಸ್ಯ ಶರೋತ್ತಮಃ|

07141035c ವಿವೇಶ ವಸುಧಾಮುಗ್ರಃ ಸುಪುಂಖಃ ಪೃಥಿವೀಪತೇ||

ಪೃಥಿವೀಪತೇ! ಪುಂಖಗಳುಳ್ಳ ಆ ಉಗ್ರ ಉತ್ತಮ ಶರವು ರಾಕ್ಷಸನ ಹೃದಯವನ್ನು ಭೇದಿಸಿ ವಸುಧೆಯನ್ನು ಸೇರಿತು.

07141036a ಸೋಽತಿವಿದ್ಧೋ ಮಹಾರಾಜ ರಥೋಪಸ್ಥ ಉಪಾವಿಶತ್|

07141036c ರಾಕ್ಷಸೇಂದ್ರಃ ಸುಬಲವಾನ್ದ್ರೌಣಿನಾ ರಣಮಾನಿನಾ||

ಮಹಾರಾಜ! ರಣಮಾನಿನಿ ದ್ರೌಣಿಯಿಂದ ಅತಿಯಾಗಿ ಗಾಯಗೊಂಡ ಬಲವಾನ್ ರಾಕ್ಷಸೇಂದ್ರನು ರಥದಲ್ಲಿಯೇ ಕುಸಿದು ಕುಳಿತುಕೊಂಡನು.

07141037a ದೃಷ್ಟ್ವಾ ವಿಮೂಢಂ ಹೈಡಿಂಬಂ ಸಾರಥಿಸ್ತಂ ರಣಾಜಿರಾತ್|

07141037c ದ್ರೌಣೇಃ ಸಕಾಶಾತ್ಸಂಭ್ರಾಂತಸ್ತ್ವಪನಿನ್ಯೇ ತ್ವರಾನ್ವಿತಃ||

ಹೈಡಿಂಬನು ವಿಮೂಢನಾಗಿದ್ದುದನ್ನು ಕಂಡು ಅವನ ಸಾರಥಿಯು ತಕ್ಷಣವೇ ಗಾಬರಿಗೊಂಡು ಅವನನ್ನು ದ್ರೌಣಿಯ ಸಮೀಪದಿಂದ ದೂರಕ್ಕೆ ಕೊಂಡೊಯ್ದನು.

07141038a ತಥಾ ತು ಸಮರೇ ವಿದ್ಧ್ವಾ ರಾಕ್ಷಸೇಂದ್ರಂ ಘಟೋತ್ಕಚಂ|

07141038c ನನಾದ ಸುಮಹಾನಾದಂ ದ್ರೋಣಪುತ್ರೋ ಮಹಾಬಲಃ||

ಹಾಗೆ ಸಮರದಲ್ಲಿ ರಾಕ್ಷಸೇಂದ್ರ ಘಟೋತ್ಕಚನನ್ನು ಗಾಯಗೊಳಿಸಿ ಮಹಾಬಲ ದ್ರೋಣಪುತ್ರನು ಜೋರಾಗಿ ಗರ್ಜಿಸಿದನು.

07141039a ಪೂಜಿತಸ್ತವ ಪುತ್ರೈಶ್ಚ ಸರ್ವಯೋಧೈಶ್ಚ ಭಾರತ|

07141039c ವಪುಷಾ ಪ್ರತಿಜಜ್ವಾಲ ಮಧ್ಯಾಹ್ನ ಇವ ಭಾಸ್ಕರಃ||

ಭಾರತ! ನಿನ್ನ ಮಕ್ಕಳಿಂದ ಮತ್ತು ಸರ್ವಯೋಧರಿಂದ ಪ್ರಶಂಸಿಸಲ್ಪಟ್ಟ ಅಶ್ವತ್ಥಾಮನ ಮುಖವು ಮಧ್ಯಾಹ್ನದ ಭಾಸ್ಕರನಂತೆ ಬೆಳಗಿತು.

07141040a ಭೀಮಸೇನಂ ತು ಯುಧ್ಯಂತಂ ಭಾರದ್ವಾಜರಥಂ ಪ್ರತಿ|

07141040c ಸ್ವಯಂ ದುರ್ಯೋಧನೋ ರಾಜಾ ಪ್ರತ್ಯವಿಧ್ಯಚ್ಚಿತೈಃ ಶರೈಃ||

ಭಾರದ್ವಾಜನ ರಥದ ಬಳಿ ಯುದ್ಧಮಾಡುತ್ತಿದ್ದ ಭೀಮಸೇನನನ್ನು ಸ್ವಯಂ ರಾಜಾ ದುರ್ಯೋಧನನು ನಿಶಿತ ಶರಗಳಿಂದ ಎದುರಿಸಿದನು.

07141041a ತಂ ಭೀಮಸೇನೋ ನವಭಿಃ ಶರೈರ್ವಿವ್ಯಾಧ ಮಾರಿಷ|

07141041c ದುರ್ಯೋಧನೋಽಪಿ ವಿಂಶತ್ಯಾ ಶರಾಣಾಂ ಪ್ರತ್ಯವಿಧ್ಯತ||

ಮಾರಿಷ! ಭೀಮಸೇನನು ಅವನನ್ನು ಒಂಭತ್ತು ಶರಗಳಿಂದ ಹೊಡೆಯಲು, ದುರ್ಯೋಧನನೂ ಕೂಡ ಇಪ್ಪತ್ತು ಬಾಣಗಳಿಂದ ಅವನನ್ನು ಪ್ರತಿಯಾಗಿ ಹೊಡೆದನು.

07141042a ತೌ ಸಾಯಕೈರವಚ್ಚನ್ನಾವದೃಶ್ಯೇತಾಂ ರಣಾಜಿರೇ|

07141042c ಮೇಘಜಾಲಸಮಾಚ್ಚನ್ನೌ ನಭಸೀವೇಂದುಭಾಸ್ಕರೌ||

ರಣಭೂಮಿಯಲ್ಲಿ ಸಾಯಕಗಳಿಂದ ಮುಚ್ಚಿಹೋಗಿದ್ದ ಅವರಿಬ್ಬರೂ ಆಕಾಶದಲ್ಲಿ ಮೇಘಗಳಿಂದ ಮುಚ್ಚಲ್ಪಟ್ಟ ಸೂರ್ಯ-ಚಂದ್ರರಂತೆ ಕಾಣುತ್ತಿದ್ದರು.

07141043a ಅಥ ದುರ್ಯೋಧನೋ ರಾಜಾ ಭೀಮಂ ವಿವ್ಯಾಧ ಪತ್ರಿಭಿಃ|

07141043c ಪಂಚಭಿರ್ಭರತಶ್ರೇಷ್ಠ ತಿಷ್ಠ ತಿಷ್ಠೇತಿ ಚಾಬ್ರವೀತ್||

ಭರತಶ್ರೇಷ್ಠ! ಆಗ ರಾಜಾ ದುರ್ಯೋಧನನು ಭೀಮನನ್ನು ಐದು ಪತ್ರಿಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು.

07141044a ತಸ್ಯ ಭೀಮೋ ಧನುಶ್ಚಿತ್ತ್ವಾ ಧ್ವಜಂ ಚ ನವಭಿಃ ಶರೈಃ|

07141044c ವಿವ್ಯಾಧ ಕೌರವಶ್ರೇಷ್ಠಂ ನವತ್ಯಾ ನತಪರ್ವಣಾಂ||

ಭೀಮನು ಅವನ ಧನುಸ್ಸು ಧ್ವಜಗಳನ್ನು ಒಂಬತ್ತು ಬಾಣಗಳಿಂದ ತುಂಡರಿಸಿ ಆ ಕೌರವಶ್ರೇಷ್ಠನನ್ನು ತೊಂಭತ್ತು ನತಪರ್ವಣಗಳಿಂದ ಗಾಯಗೊಳಿಸಿದನು.

07141045a ತತೋ ದುರ್ಯೋಧನಃ ಕ್ರುದ್ಧೋ ಭೀಮಸೇನಸ್ಯ ಮಾರಿಷ|

07141045c ಚಿಕ್ಷೇಪ ಸ ಶರಾನ್ರಾಜನ್ಪಶ್ಯತಾಂ ಸರ್ವಧನ್ವಿನಾಂ||

ರಾಜನ್! ಮಾರಿಷ! ಆಗ ಕ್ರುದ್ಧ ದುರ್ಯೋಧನನು ಭೀಮಸೇನನ ಮೇಲೆ ಸರ್ವಧನ್ವಿಗಳೂ ನೋಡುತ್ತಿರುವಂತೆ ಬಾಣಗಳನ್ನು ಪ್ರಯೋಗಿಸಿದನು.

07141046a ತಾನ್ನಿಹತ್ಯ ಶರಾನ್ಭೀಮೋ ದುರ್ಯೋಧನಧನುಶ್ಚ್ಯುತಾನ್|

07141046c ಕೌರವಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ಪಯತ್||

ದುರ್ಯೋಧನನು ಬಿಟ್ಟ ಆ ಶರಗಳನ್ನು ನಾಶಗೊಳಿಸಿ ಭೀಮಸೇನನು ಕೌರವನ ಮೇಲೆ ಇಪ್ಪತ್ತೈದು ಕ್ಷುದ್ರಕಗಳನ್ನು ಪ್ರಯೋಗಿಸಿದನು.

07141047a ದುರ್ಯೋಧನಸ್ತು ಸಂಕ್ರುದ್ಧೋ ಭೀಮಸೇನಸ್ಯ ಮಾರಿಷ|

07141047c ಕ್ಷುರಪ್ರೇಣ ಧನುಶ್ಚಿತ್ತ್ವಾ ದಶಭಿಃ ಪ್ರತ್ಯವಿಧ್ಯತ||

ಮಾರಿಷ! ದುರ್ಯೋಧನನಾದರೋ ಸಂಕ್ರುದ್ಧನಾಗಿ ಕ್ಷುರಪ್ರದಿಂದ ಭೀಮಸೇನನ ಧನುಸ್ಸನ್ನು ತುಂಡರಿಸಿ ಹತ್ತರಿಂದ ಅವನನ್ನು ಹೊಡೆದನು.

07141048a ಅಥಾನ್ಯದ್ಧನುರಾದಾಯ ಭೀಮಸೇನೋ ಮಹಾಬಲಃ|

07141048c ವಿವ್ಯಾಧ ನೃಪತಿಂ ತೂರ್ಣಂ ಸಪ್ತಭಿರ್ನಿಶಿತೈಃ ಶರೈಃ||

ಆಗ ಮಹಾಬಲ ಭೀಮಸೇನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ಏಳು ನಿಶಿತ ಶರಗಳಿಂದ ನೃಪತಿಯನ್ನು ಹೊಡೆದನು.

07141049a ತದಪ್ಯಸ್ಯ ಧನುಃ ಕ್ಷಿಪ್ರಂ ಚಿಚ್ಚೇದ ಲಘುಹಸ್ತವತ್|

07141049c ದ್ವಿತೀಯಂ ಚ ತೃತೀಯಂ ಚ ಚತುರ್ಥಂ ಪಂಚಮಂ ತಥಾ||

07141050a ಆತ್ತಮಾತ್ತಂ ಮಹಾರಾಜ ಭೀಮಸ್ಯ ಧನುರಾಚ್ಚಿನತ್|

07141050c ತವ ಪುತ್ರೋ ಮಹಾರಾಜ ಜಿತಕಾಶೀ ಮದೋತ್ಕಟಃ||

ಮಹಾರಾಜ! ಆಗ ಲಘುಹಸ್ತ ದುರ್ಯೋಧನನು ಅವನ ಆ ಧನುಸ್ಸನ್ನೂ ಬೇಗನೆ ಕತ್ತರಿಸಿದನು. ಮಹಾರಾಜ! ಹಾಗೆಯೇ ಮದೋತ್ಕಟ, ವಿಜಯವನ್ನು ಬಯಸಿದ ನಿನ್ನ ಮಗನು ಭೀಮನ ಎರಡನೆಯ, ಮೂರನೆಯ, ನಾಲ್ಕನೆಯ ಮತ್ತು ಐದನೆಯ ಧನುಸ್ಸುಗಳನ್ನೂ ಕ್ಷಣಮಾತ್ರದಲ್ಲಿ ಕತ್ತರಿಸಿದನು.

07141051a ಸ ತದಾ ಚಿದ್ಯಮಾನೇಷು ಕಾರ್ಮುಕೇಷು ಪುನಃ ಪುನಃ|

07141051c ಶಕ್ತಿಂ ಚಿಕ್ಷೇಪ ಸಮರೇ ಸರ್ವಪಾರಶವೀಂ ಶುಭಾಂ||

ಹಾಗೆ ತನ್ನ ಧನ್ನುಸ್ಸನ್ನು ಪುನಃ ಪುನಃ ತುಂಡರಿಸುತ್ತಿರಲು ಭೀಮಸೇನನು ಸಮರದಲ್ಲಿ ಸಂಪೂರ್ಣವಾಗಿ ಉಕ್ಕಿನಿಂದ ಮಾಡಲ್ಪಟ್ಟಿದ್ದ ಶುಭ ಶಕ್ತಿಯನ್ನು ದುರ್ಯೋಧನನ ಮೇಲೆ ಎಸೆದನು.

07141052a ಅಪ್ರಾಪ್ತಾಮೇವ ತಾಂ ಶಕ್ತಿಂ ತ್ರಿಧಾ ಚಿಚ್ಚೇದ ಕೌರವಃ|

07141052c ಪಶ್ಯತಃ ಸರ್ವಲೋಕಸ್ಯ ಭೀಮಸ್ಯ ಚ ಮಹಾತ್ಮನಃ||

ಆ ಶಕ್ತಿಯು ಬಂದು ತಲುಪುವುದರೊಳಗೇ ಭೀಮ ಮತ್ತು ಸರ್ವಲೋಕಗಳೂ ನೋಡುತ್ತಿರುವಂತೆಯೇ ಮಹಾತ್ಮ ಕೌರವನು ಅದನ್ನು ಮೂರು ಭಾಗಗಳಾಗಿ ತುಂಡರಿಸಿದನು.

07141053a ತತೋ ಭೀಮೋ ಮಹಾರಾಜ ಗದಾಂ ಗುರ್ವೀಂ ಮಹಾಪ್ರಭಾಂ|

07141053c ಚಿಕ್ಷೇಪಾವಿಧ್ಯ ವೇಗೇನ ದುರ್ಯೋಧನರಥಂ ಪ್ರತಿ||

ಮಹಾರಾಜ! ಆಗ ಭೀಮನು ಮಹಾಪ್ರಭೆಯುಳ್ಳ ಭಾರ ಗದೆಯನ್ನು ವೇಗದಿಂದ ದುರ್ಯೋಧನನ ರಥದ ಮೇಲೆ ಎಸೆದನು.

07141054a ತತಃ ಸಾ ಸಹಸಾ ವಾಹಾಂಸ್ತವ ಪುತ್ರಸ್ಯ ಸಮ್ಯುಗೇ|

07141054c ಸಾರಥಿಂ ಚ ಗದಾ ಗುರ್ವೀ ಮಮರ್ದ ಭರತರ್ಷಭ||

ಭರತರ್ಷಭ! ಆಗ ಆ ಭಾರ ಗದೆಯು ಒಮ್ಮೆಲೇ ರಣದಲ್ಲಿ ನಿನ್ನ ಮಗನ ವಾಹನ ಮತ್ತು ಸಾರಥಿಯನ್ನು ಧ್ವಂಸಮಾಡಿತು.

07141055a ಪುತ್ರಸ್ತು ತವ ರಾಜೇಂದ್ರ ರಥಾದ್ಧೇಮಪರಿಷ್ಕೃತಾತ್|

07141055c ಆಪ್ಲುತಃ ಸಹಸಾ ಯಾನಂ ನಂದಕಸ್ಯ ಮಹಾತ್ಮನಃ||

ರಾಜೇಂದ್ರ! ನಿನ್ನ ಮಗನಾದರೋ ಆ ಹೇಮಪರಿಷ್ಕೃತ ರಥದಿಂದ ಕೆಳಕ್ಕೆ ಹಾರಿ ಒಮ್ಮೆಲೇ ಮಹಾತ್ಮ ನಂದಕನ ರಥಕ್ಕೆ ಹಾರಿದನು.

07141056a ತತೋ ಭೀಮೋ ಹತಂ ಮತ್ವಾ ತವ ಪುತ್ರಂ ಮಹಾರಥಂ|

07141056c ಸಿಂಹನಾದಂ ಮಹಚ್ಚಕ್ರೇ ತರ್ಜಯನ್ನಿವ ಕೌರವಾನ್||

ಆಗ ಮಹಾರಥ ನಿನ್ನ ಮಗನು ಹತನಾದನೆಂದು ತಿಳಿದು ಭೀಮನು ಕೌರವರನ್ನು ಬೆದರಿಸುತ್ತಾ ಮಹಾ ಸಿಂಹನಾದವನ್ನು ಮಾಡಿದನು.

07141057a ತಾವಕಾಃ ಸೈನಿಕಾಶ್ಚಾಪಿ ಮೇನಿರೇ ನಿಹತಂ ನೃಪಂ|

07141057c ತತೋ ವಿಚುಕ್ರುಶುಃ ಸರ್ವೇ ಹಾ ಹೇತಿ ಚ ಸಮಂತತಃ||

ನಿನ್ನ ಸೈನಿಕರು ಕೂಡ ನೃಪನು ಹತನಾದನೆಂದೇ ಅಂದುಕೊಂಡರು. ಎಲ್ಲ ಕಡೆ ಎಲ್ಲರೂ ಹಾ ಹಾ ಕಾರಮಾಡಿದರು.

07141058a ತೇಷಾಂ ತು ನಿನದಂ ಶ್ರುತ್ವಾ ತ್ರಸ್ತಾನಾಂ ಸರ್ವಯೋಧಿನಾಂ|

07141058c ಭೀಮಸೇನಸ್ಯ ನಾದಂ ಚ ಶ್ರುತ್ವಾ ರಾಜನ್ಮಹಾತ್ಮನಃ||

07141059a ತತೋ ಯುಧಿಷ್ಠಿರೋ ರಾಜಾ ಹತಂ ಮತ್ವಾ ಸುಯೋಧನಂ|

07141059c ಅಭ್ಯವರ್ತತ ವೇಗೇನ ಯತ್ರ ಪಾರ್ಥೋ ವೃಕೋದರಃ||

ರಾಜನ್! ಆ ಎಲ್ಲ ನಡುಗುತ್ತಿದ್ದ ಸರ್ವಯೋಧರ ನಿನಾದವನ್ನು ಕೇಳಿ, ಮಹಾತ್ಮ ಭೀಮಸೇನನ ನಾದವನ್ನೂ ಕೇಳಿ ರಾಜಾ ಯುಧಿಷ್ಠಿರನೂ ಕೂಡ ಸುಯೋಧನನು ಹತನಾದನೆಂದೇ ತಿಳಿದು ವೇಗವಾಗಿ ಪಾರ್ಥ ವೃಕೋದರನಿದ್ದಲ್ಲಿಗೆ ಧಾವಿಸಿದನು.

07141060a ಪಾಂಚಾಲಾಃ ಕೇಕಯಾ ಮತ್ಸ್ಯಾಃ ಸೃಂಜಯಾಶ್ಚ ವಿಶಾಂ ಪತೇ|

07141060c ಸರ್ವೋದ್ಯೋಗೇನಾಭಿಜಗ್ಮುರ್ದ್ರೋಣಮೇವ ಯುಯುತ್ಸಯಾ||

ವಿಶಾಂಪತೇ! ದ್ರೋಣನೊಡನೆಯೇ ಯುದ್ಧಮಾಡಬೇಕೆಂದು ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸೃಂಜಯರು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದರು.

07141061a ತತ್ರಾಸೀತ್ಸುಮಹದ್ಯುದ್ಧಂ ದ್ರೋಣಸ್ಯಾಥ ಪರೈಃ ಸಹ|

07141061c ಘೋರೇ ತಮಸಿ ಮಗ್ನಾನಾಂ ನಿಘ್ನತಾಮಿತರೇತರಂ||

ಆ ಘೋರ ಕತ್ತಲೆಯಲ್ಲಿ ಪರಸ್ಪರರನ್ನು ಸಂಹರಿಸುವುದರಲ್ಲಿ ಮಗ್ನರಾಗಿದ್ದ ದ್ರೋಣ ಮತ್ತು ಶತ್ರುಗಳ ನಡುವೆ ಮಹಾ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದುರ್ಯೋಧನಾಪಯಾನೇ ಏಕಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನಾಪಯಾನ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.

Image result for flowers against white background

Comments are closed.