Drona Parva: Chapter 135

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೫

ಅಶ್ವತ್ಥಾಮನ ಮಾತು (೧-೧೪). ಅಶ್ವತ್ಥಾಮನನ್ನು ಧೃಷ್ಟದ್ಯುಮ್ನನು ಎದುರಿಸಿದುದು; ಪಾಂಚಾಲರ ಪರಾಜಯ (೧೫-೫೪).

07135001 ಸಂಜಯ ಉವಾಚ|

07135001a ದುರ್ಯೋಧನೇನೈವಮುಕ್ತೋ ದ್ರೌಣಿರಾಹವದುರ್ಮದಃ|

07135001c ಪ್ರತ್ಯುವಾಚ ಮಹಾಬಾಹೋ ಯಥಾ ವದಸಿ ಕೌರವ||

07135002a ಪ್ರಿಯಾ ಹಿ ಪಾಂಡವಾ ನಿತ್ಯಂ ಮಮ ಚಾಪಿ ಪಿತುಶ್ಚ ಮೇ|

07135002c ತಥೈವಾವಾಂ ಪ್ರಿಯೌ ತೇಷಾಂ ನ ತು ಯುದ್ಧೇ ಕುರೂದ್ವಹ|

07135002e ಶಕ್ತಿತಸ್ತಾತ ಯುಧ್ಯಾಮಸ್ತ್ಯಕ್ತ್ವಾ ಪ್ರಾಣಾನಭೀತವತ್||

ಸಂಜಯನು ಹೇಳಿದನು: “ದುರ್ಯೋಧನನು ಹೀಗೆ ಹೇಳಲು ಯುದ್ಧದುರ್ಮದ ದ್ರೌಣಿಯು ಉತ್ತರಿಸಿದನು: “ಮಹಾಬಾಹೋ! ಕೌರವ! ನೀನು ಹೇಳಿದುದು ಸತ್ಯ. ನನಗೆ ಮತ್ತು ನನ್ನ ತಂದೆಗೆ ಕೂಡ ನಿತ್ಯವೂ ಪಾಂಡವರು ಪ್ರಿಯರು. ನಾವೂ ಕೂಡ ಅವರಿಗೆ ಪ್ರಿಯರೇ. ಆದರೆ ಯುದ್ಧದಲ್ಲಿ ಅಲ್ಲ. ಕುರೂದ್ವಹ! ಅಯ್ಯಾ! ಪ್ರಾಣವನ್ನೂ ತೊರೆದು ಸ್ವಲ್ಪವೂ ಭಯಪಡದೇ ಎಲ್ಲ ಶಕ್ತಿಯನ್ನುಪಯೋಗಿಸಿ ನಾವು ಯುದ್ಧಮಾಡುತ್ತಿದ್ದೇವೆ.

07135003a ಅಹಂ ಕರ್ಣಶ್ಚ ಶಲ್ಯಶ್ಚ ಕೃಪೋ ಹಾರ್ದಿಕ್ಯ ಏವ ಚ|

07135003c ನಿಮೇಷಾತ್ಪಾಂಡವೀಂ ಸೇನಾಂ ಕ್ಷಪಯೇಮ ನೃಪೋತ್ತಮ||

ನೃಪೋತ್ತಮ! ನಾನು, ಕರ್ಣ, ಶಲ್ಯ, ಕೃಪ ಮತ್ತು ಹಾರ್ದಿಕ್ಯರು ನಿಮಿಷಮಾತ್ರದಲ್ಲಿ ಪಾಂಡವೀ ಸೇನೆಯನ್ನು ನಾಶಗೊಳಿಸಬಲ್ಲೆವು.

07135004a ತೇ ಚಾಪಿ ಕೌರವೀಂ ಸೇನಾಂ ನಿಮೇಷಾರ್ಧಾತ್ಕುರೂದ್ವಹ|

07135004c ಕ್ಷಪಯೇಯುರ್ಮಹಾಬಾಹೋ ನ ಸ್ಯಾಮ ಯದಿ ಸಮ್ಯುಗೇ||

ಕುರೂದ್ವಹ! ಮಹಾಬಾಹೋ! ಯುದ್ಧ ಸನ್ನದ್ಧರಾಗಿರದಿದ್ದರೆ ಅವರೂ ಕೂಡ ನಮ್ಮ ಈ ಕೌರವೀ ಸೇನೆಯನ್ನು ಅರ್ಧ ನಿಮಿಷದಲ್ಲಿಯೇ ಸಂಹರಿಸಬಲ್ಲರು.

07135005a ಯುಧ್ಯತಾಂ ಪಾಂಡವಾಂ ಶಕ್ತ್ಯಾ ತೇಷಾಂ ಚಾಸ್ಮಾನ್ಯುಯುತ್ಸತಾಂ|

07135005c ತೇಜಸ್ತು ತೇಜ ಆಸಾದ್ಯ ಪ್ರಶಮಂ ಯಾತಿ ಭಾರತ||

ಪರಮ ಶಕ್ತಿಯನ್ನುಪಯೋಗಿಸಿ ಪಾಂಡವರು ನಮ್ಮನ್ನು ಮತ್ತು ನಾವು ಅವರನ್ನು ಎದುರಿಸಿ ಯುದ್ಧಮಾಡುತ್ತಿದ್ದೇವೆ. ಭಾರತ! ತೇಜಸ್ಸು ಇನ್ನೊಂದು ತೇಜಸ್ಸನ್ನು ಎದುರಿಸಿ ಪ್ರಶಮನಗೊಳ್ಳುತ್ತಿದೆ.

07135006a ಅಶಕ್ಯಾ ತರಸಾ ಜೇತುಂ ಪಾಂಡವಾನಾಮನೀಕಿನೀ|

07135006c ಜೀವತ್ಸು ಪಾಂಡುಪುತ್ರೇಷು ತದ್ಧಿ ಸತ್ಯಂ ಬ್ರವೀಮಿ ತೇ||

ಪಾಂಡುಪುತ್ರರು ಜೀವಂತವಿರುವವರೆಗೆ ಪಾಂಡವರ ಸೇನೆಯನ್ನು ಗೆಲ್ಲಲು ನಾವು ಅಶಕ್ತರಾಗಿರುತ್ತೇವೆ. ಇದು ನಾನು ಹೇಳುವ ಸತ್ಯ!

07135007a ಆತ್ಮಾರ್ಥಂ ಯುಧ್ಯಮಾನಾಸ್ತೇ ಸಮರ್ಥಾಃ ಪಾಂಡುನಂದನಾಃ|

07135007c ಕಿಮರ್ಥಂ ತವ ಸೈನ್ಯಾನಿ ನ ಹನಿಷ್ಯಂತಿ ಭಾರತ||

ಆ ಸಮರ್ಥ ಪಾಂಡುನಂದನರು ತಮಗಾಗಿ ನಿನ್ನೊಡನೆ ಯುದ್ಧಮಾಡುತ್ತಿದ್ದಾರೆ. ಭಾರತ! ಅವರು ಏಕೆ ನಿನ್ನ ಸೈನ್ಯವನ್ನು ಸಂಹರಿಸುವುದಿಲ್ಲ?

07135008a ತ್ವಂ ಹಿ ಲುಬ್ಧತಮೋ ರಾಜನ್ನಿಕೃತಿಜ್ಞಶ್ಚ ಕೌರವ|

07135008c ಸರ್ವಾತಿಶಂಕೀ ಮಾನೀ ಚ ತತೋಽಸ್ಮಾನತಿಶಂಕಸೇ||

ಕೌರವ! ರಾಜನ್! ನೀನು ಅತಿ ಆಸೆಬುರುಕನಾಗಿರುವುಧರಿಂದ ಮತ್ತು ಮೋಸದಲ್ಲಿ ಪಳಗಿರುವುದರಿಂದ ಮತ್ತು ಜಂಬದವನಾಗಿರುವುದರಿಂದಲೇ ನಮ್ಮನ್ನು ಅತಿಯಾಗಿ ಶಂಕಿಸುತ್ತಿರುವೆ!

07135009a ಅಹಂ ತು ಯತ್ನಮಾಸ್ಥಾಯ ತ್ವದರ್ಥೇ ತ್ಯಕ್ತಜೀವಿತಃ|

07135009c ಏಷ ಗಚ್ಚಾಮಿ ಸಂಗ್ರಾಮಂ ತ್ವತ್ಕೃತೇ ಕುರುನಂದನ||

ಕುರುನಂದನ! ಇಗೋ! ನಾನಾದರೋ ನಿನಗೋಸ್ಕರ ಜೀವವನ್ನೂ ತೊರೆದು ಪ್ರಯತ್ನಪಟ್ಟು ನೀನು ನಡೆಸಿರುವ ಸಂಗ್ರಾಮಕ್ಕೆ ಹೋಗುತ್ತಿದ್ದೇನೆ.

07135010a ಯೋತ್ಸ್ಯೇಽಹಂ ಶತ್ರುಭಿಃ ಸಾರ್ಧಂ ಜೇಷ್ಯಾಮಿ ಚ ವರಾನ್ವರಾನ್|

07135010c ಪಾಂಚಾಲೈಃ ಸಹ ಯೋತ್ಸ್ಯಾಮಿ ಸೋಮಕೈಃ ಕೇಕಯೈಸ್ತಥಾ|

07135010e ಪಾಂಡವೇಯೈಶ್ಚ ಸಂಗ್ರಾಮೇ ತ್ವತ್ಪ್ರಿಯಾರ್ಥಮರಿಂದಮ||

ಅರಿಂದಮ! ನಿನ್ನ ಒಳಿತಿಗಾಗಿ ನಾನು ಸಂಗ್ರಾಮದಲ್ಲಿ ಶತ್ರುಗಳೊಂದಿಗೆ ಹೋರಾಡಿ ಶ್ರೇಷ್ಠ ಶ್ರೇಷ್ಠರಾದವರನ್ನು ಗೆಲ್ಲುತ್ತೇನೆ. ಪಾಂಚಾಲರೊಂದಿಗೆ, ಸೋಮಕರೊಂದಿಗೆ, ಹಾಗೆಯೇ ಕೇಕಯ ಮತ್ತು ಪಾಂಡವರೊಂದಿಗೆ ಹೋರಾಡುತ್ತೇನೆ.

07135011a ಅದ್ಯ ಮದ್ಬಾಣನಿರ್ದಗ್ಧಾಃ ಪಾಂಚಾಲಾಃ ಸೋಮಕಾಸ್ತಥಾ|

07135011c ಸಿಂಹೇನೇವಾರ್ದಿತಾ ಗಾವೋ ವಿದ್ರವಿಷ್ಯಂತಿ ಸರ್ವತಃ||

ಇಂದು ನನ್ನ ಬಾಣಗಳಿಂದ ಸುಡಲ್ಪಟ್ಟ ಪಾಂಚಾಲರು ಮತ್ತು ಸೋಮಕರು ಸಿಂಹದಿಂದ ಪೀಡಿತ ಗೋವುಗಳಂತೆ ಎಲ್ಲಕಡೆ ಓಡಿಹೋಗಲಿದ್ದಾರೆ!

07135012a ಅದ್ಯ ಧರ್ಮಸುತೋ ರಾಜಾ ದೃಷ್ಟ್ವಾ ಮಮ ಪರಾಕ್ರಮಂ|

07135012c ಅಶ್ವತ್ಥಾಮಮಯಂ ಲೋಕಂ ಮಂಸ್ಯತೇ ಸಹ ಸೋಮಕೈಃ||

ರಾಜಾ ಧರ್ಮಸುತನು ಇಂದು ನನ್ನ ಪರಾಕ್ರಮವನ್ನು ನೋಡಿ ಸೋಮಕರೊಂದಿಗೆ ಈ ಲೋಕವು ಅಶ್ವತ್ಥಾಮಮಯವೇನೋ ಎಂದು ಭಾವಿಸುವವನಿದ್ದಾನೆ.

07135013a ಆಗಮಿಷ್ಯತಿ ನಿರ್ವೇದಂ ಧರ್ಮಪುತ್ರೋ ಯುಧಿಷ್ಠಿರಃ|

07135013c ದೃಷ್ಟ್ವಾ ವಿನಿಹತಾನ್ಸಂಖ್ಯೇ ಪಾಂಚಾಲಾನ್ಸೋಮಕೈಃ ಸಹ||

ಯುದ್ಧದಲ್ಲಿ ಸೋಮಕರೊಂದಿಗೆ ಪಾಂಚಾಲರು ಸಂಹರಿಸಲ್ಪಟ್ಟಿದುದನ್ನು ನೋಡಿ ಧರ್ಮಪುತ್ರ ಯುಧಿಷ್ಠಿರನು ದುಃಖಹೊಂದುವವನಿದ್ದಾನೆ!

07135014a ಯೇ ಮಾಂ ಯುದ್ಧೇಽಭಿಯೋತ್ಸ್ಯಂತಿ ತಾನ್ ಹನಿಷ್ಯಾಮಿ ಭಾರತ|

07135014c ನ ಹಿ ತೇ ವೀರ ಮುಚ್ಯೇರನ್ಮದ್ಬಾಹ್ವಂತರಮಾಗತಾಃ||

ಭಾರತ! ಯಾರು ನನ್ನನ್ನು ಎದುರಿಸುತ್ತಾರೋ ಅವರನ್ನು ನಾನು ಸಂಹರಿಸುತ್ತೇನೆ. ವೀರ! ನನ್ನ ಬಾಹುಗಳ ಮಧ್ಯದಲ್ಲಿ ಬರುವವರನ್ನು ಬಿಡುವುದಿಲ್ಲ!”

07135015a ಏವಮುಕ್ತ್ವಾ ಮಹಾಬಾಹುಃ ಪುತ್ರಂ ದುರ್ಯೋಧನಂ ತವ|

07135015c ಅಭ್ಯವರ್ತತ ಯುದ್ಧಾಯ ದ್ರಾವಯನ್ಸರ್ವಧನ್ವಿನಃ|

07135015e ಚಿಕೀರ್ಷುಸ್ತವ ಪುತ್ರಾಣಾಂ ಪ್ರಿಯಂ ಪ್ರಾಣಭೃತಾಂ ವರಃ||

ನಿನ್ನ ಮಗನಿಗೆ ಹೀಗೆ ಹೇಳಿ ಆ ಪ್ರಾಣಭೃತರಲ್ಲಿ ಶ್ರೇಷ್ಠ ಮಹಾಬಾಹುವು ನಿನ್ನ ಪುತ್ರರಿಗೆ ಒಳ್ಳೆಯದನ್ನು ಮಾಡಲು ಬಯಸಿ ಸರ್ವ ಧನ್ವಿಗಳನ್ನೂ ಓಡಿಸುತ್ತಾ ಯುದ್ಧದಲ್ಲಿ ಧುಮುಕಿದನು.

07135016a ತತೋಽಬ್ರವೀತ್ಸಕೈಕೇಯಾನ್ಪಾಂಚಾಲಾನ್ಗೌತಮೀಸುತಃ|

07135016c ಪ್ರಹರಧ್ವಮಿತಃ ಸರ್ವೇ ಮಮ ಗಾತ್ರೇ ಮಹಾರಥಾಃ|

07135016e ಸ್ಥಿರೀಭೂತಾಶ್ಚ ಯುಧ್ಯಧ್ವಂ ದರ್ಶಯಂತೋಽಸ್ತ್ರಲಾಘವಂ||

ಆಗ ಗೌತಮೀಸುತನು ಕೇಕಯರೊಂದಿಗಿದ್ದ ಪಾಂಚಾಲರಿಗೆ ಹೇಳಿದನು: “ಮಹಾರಥರೇ! ಎಲ್ಲರೂ ನನ್ನ ಈ ದೇಹದ ಮೇಲೆ ಬಾಣಗಳನ್ನು ಪ್ರಯೋಗಿಸಿರಿ. ನಿಮ್ಮ ಅಸ್ತ್ರಲಾಘವವನ್ನು ಪ್ರದರ್ಶಿಸುತ್ತಾ ನನ್ನೊಡನೆ ಸ್ಥಿರವಾಗಿ ನಿಂತು ಯುದ್ಧಮಾಡಿರಿ!”

07135017a ಏವಮುಕ್ತಾಸ್ತು ತೇ ಸರ್ವೇ ಶಸ್ತ್ರವೃಷ್ಟಿಮಪಾತಯನ್|

07135017c ದ್ರೌಣಿಂ ಪ್ರತಿ ಮಹಾರಾಜ ಜಲಂ ಜಲಧರಾ ಇವ||

ಮಹಾರಾಜ! ಹೀಗೆ ಹೇಳಲು ಅವರೆಲ್ಲರೂ ದ್ರೌಣಿಯ ಮೇಲೆ ಮೋಡಗಳು ಮಳೆಯನ್ನು ಸುರಿಸುವಂತೆ ಶಸ್ತ್ರಗಳ ಮಳೆಯನ್ನು ಕರೆದರು.

07135018a ತಾನ್ನಿಹತ್ಯ ಶರಾನ್ದ್ರೌಣಿರ್ದಶ ವೀರಾನಪೋಥಯತ್|

07135018c ಪ್ರಮುಖೇ ಪಾಂಡುಪುತ್ರಾಣಾಂ ಧೃಷ್ಟದ್ಯುಮ್ನಸ್ಯ ಚಾಭಿಭೋ||

ವಿಭೋ! ಆ ಶರಗಳನ್ನು ನಿರಸನಗೊಳಿಸಿ ದ್ರೌಣಿಯು ಪಾಂಡುಪುತ್ರರು ಮತ್ತು ಧೃಷ್ಟದ್ಯುಮ್ನನ ಸಮ್ಮುಖದಲ್ಲಿಯೇ ಹತ್ತು ವೀರರನ್ನು ಕೆಳಗುರುಳಿಸಿದನು.

07135019a ತೇ ಹನ್ಯಮಾನಾಃ ಸಮರೇ ಪಾಂಚಾಲಾಃ ಸೃಂಜಯಾಸ್ತಥಾ|

07135019c ಪರಿತ್ಯಜ್ಯ ರಣೇ ದ್ರೌಣಿಂ ವ್ಯದ್ರವಂತ ದಿಶೋ ದಶ||

ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಮತ್ತು ಸೃಂಜಯರು ರಣದಲ್ಲಿ ದ್ರೌಣಿಯನ್ನು ಬಿಟ್ಟು ದಿಕ್ಕು ದಿಕ್ಕುಗಳಿಗೆ ಪಲಾಯನಗೈದರು.

07135020a ತಾನ್ದೃಷ್ಟ್ವಾ ದ್ರವತಃ ಶೂರಾನ್ಪಾಂಚಾಲಾನ್ಸಹಸೋಮಕಾನ್|

07135020c ಧೃಷ್ಟದ್ಯುಮ್ನೋ ಮಹಾರಾಜ ದ್ರೌಣಿಮಭ್ಯದ್ರವದ್ಯುಧಿ||

ಮಹಾರಾಜ! ಸೋಮಕರೊಂದಿಗೆ ಪಾಂಚಾಲ ಶೂರರು ಓಡಿಹೋಗುತ್ತಿರುವುದನ್ನು ನೋಡಿ ಧೃಷ್ಟದ್ಯುಮ್ನನು ಯುದ್ಧದಲ್ಲಿ ದ್ರೌಣಿಯನ್ನು ಎದುರಿಸಿದನು.

07135021a ತತಃ ಕಾಂಚನಚಿತ್ರಾಣಾಂ ಸಜಲಾಂಬುದನಾದಿನಾಂ|

07135021c ವೃತಃ ಶತೇನ ಶೂರಾಣಾಂ ರಥಾನಾಮನಿವರ್ತಿನಾಂ||

07135022a ಪುತ್ರಃ ಪಾಂಚಾಲರಾಜಸ್ಯ ಧೃಷ್ಟದ್ಯುಮ್ನೋ ಮಹಾರಥಃ|

07135022c ದ್ರೌಣಿಮಿತ್ಯಬ್ರವೀದ್ವಾಕ್ಯಂ ದೃಷ್ಟ್ವಾ ಯೋಧಾನ್ನಿಪಾತಿತಾನ್||

ಆಗ ಬಂಗಾರದ ಚಿತ್ರಗಳನ್ನುಳ್ಳ, ಮಳೆಗಾಲದ ಮೋಡದಂತೆ ಗರ್ಜಿಸುತ್ತಿದ್ದ, ಯುದ್ಧದಿಂದ ಹಿಂದಿರುಗದಿದ್ದ ನೂರಾರು ಶೂರರ ರಥಗಳಿಂದ ಸುತ್ತುವರೆಯಲ್ಪಟ್ಟ ಪಾಂಚಾಲರಾಜನ ಮಗ ಮಹಾರಥ ಧೃಷ್ಟದ್ಯುಮ್ನನು ಕೆಳಗುರುಳಿಸಲ್ಪಟ್ಟ ಯೋಧರನ್ನು ನೋಡಿ ದ್ರೌಣಿಗೆ ಈ ಮಾತುಗಳನ್ನಾಡಿದನು:

07135023a ಆಚಾರ್ಯಪುತ್ರ ದುರ್ಬುದ್ಧೇ ಕಿಮನ್ಯೈರ್ನಿಹತೈಸ್ತವ|

07135023c ಸಮಾಗಚ್ಚ ಮಯಾ ಸಾರ್ಧಂ ಯದಿ ಶೂರೋಽಸಿ ಸಮ್ಯುಗೇ|

07135023e ಅಹಂ ತ್ವಾಂ ನಿಹನಿಷ್ಯಾಮಿ ತಿಷ್ಠೇದಾನೀಂ ಮಮಾಗ್ರತಃ||

“ಆಚಾರ್ಯಪುತ್ರ! ದುರ್ಬುದ್ಧೇ! ಅನ್ಯರನ್ನು ಏಕೆ ಸಂಹರಿಸುತ್ತಿರುವೆ? ಶೂರನಾಗಿದ್ದರೆ ಸಂಯುಗದಲ್ಲಿ ನನ್ನೊಡನೆ ಯುದ್ಧಮಾಡಲು ಬಾ! ನನ್ನ ಎದುರಿನಲ್ಲಿ ನಿಲ್ಲು! ನಾನು ನಿನ್ನನ್ನು ಈಗಲೇ ಸಂಹರಿಸುತ್ತೇನೆ!”

07135024a ತತಸ್ತಮಾಚಾರ್ಯಸುತಂ ಧೃಷ್ಟದ್ಯುಮ್ನಃ ಪ್ರತಾಪವಾನ್|

07135024c ಮರ್ಮಭಿದ್ಭಿಃ ಶರೈಸ್ತೀಕ್ಷ್ಣೈರ್ಜಘಾನ ಭರತರ್ಷಭ||

ಭರತರ್ಷಭ! ಆಗ ಪ್ರತಾಪವಾನ್ ಧೃಷ್ಟದ್ಯುಮ್ನನು ಆಚಾರ್ಯಸುತನನ್ನು ಮರ್ಮಭೇದಿ ತೀಕ್ಷ್ಣಶರಗಳಿಂದ ಹೊಡೆದನು.

07135025a ತೇ ತು ಪಂಕ್ತೀಕೃತಾ ದ್ರೌಣಿಂ ಶರಾ ವಿವಿಶುರಾಶುಗಾಃ|

07135025c ರುಕ್ಮಪುಂಖಾಃ ಪ್ರಸನ್ನಾಗ್ರಾಃ ಸರ್ವಕಾಯಾವದಾರಣಾಃ|

07135025e ಮಧ್ವರ್ಥಿನ ಇವೋದ್ದಾಮಾ ಭ್ರಮರಾಃ ಪುಷ್ಪಿತಂ ದ್ರುಮಂ||

ಚಿನ್ನದ ರೆಕ್ಕೆಗಳುಳ್ಳ, ಚೂಪಾದ ಮೊನೆಗಳುಳ್ಳ, ಶರೀರವನ್ನು ಭೇದಿಸಬಲ್ಲ, ವೇಗವಾಗಿ ಹೋಗುವ ಆ ಬಾಣಗಳು ಸಾಲುಸಾಲಾಗಿ ಜೇನುದುಂಬಿಗಳು ಹೂಬಿಟ್ಟಿರುವ ಮರವನ್ನು ಪ್ರವೇಶಿಸುವಂತೆ ಅಶ್ವತ್ಥಾಮನನ್ನು ಪ್ರವೇಶಿಸಿದವು.

07135026a ಸೋಽತಿವಿದ್ಧೋ ಭೃಶಂ ಕ್ರುದ್ಧಃ ಪದಾಕ್ರಾಂತ ಇವೋರಗಃ|

07135026c ಮಾನೀ ದ್ರೌಣಿರಸಂಭ್ರಾಂತೋ ಬಾಣಪಾಣಿರಭಾಷತ||

ಬಹಳವಾಗಿ ಗಾಯಗೊಂಡು ಕಾಲಿನಿಂದ ತುಳಿಯಲ್ಪಟ್ಟ ಸರ್ಪದಂತೆ ಕುಪಿತನಾದ ಮಾನಿನಿ ದ್ರೌಣಿಯು ಸ್ವಲ್ಪವಾದರೂ ಗಾಬರಿಗೊಳ್ಳದೆ ಬಾಣವನ್ನು ಕೈಯಲ್ಲಿ ಹಿಡಿದು ಹೇಳಿದನು:

07135027a ಧೃಷ್ಟದ್ಯುಮ್ನ ಸ್ಥಿರೋ ಭೂತ್ವಾ ಮುಹೂರ್ತಂ ಪ್ರತಿಪಾಲಯ|

07135027c ಯಾವತ್ತ್ವಾಂ ನಿಶಿತೈರ್ಬಾಣೈಃ ಪ್ರೇಷಯಾಮಿ ಯಮಕ್ಷಯಂ||

“ಧೃಷ್ಟದ್ಯುಮ್ನ! ಸ್ಥಿರವಾಗಿ ನಿಂತು ಒಂದು ಕ್ಷಣ ತಾಳಿಕೋ! ಅಷ್ಟರೊಳಗೆ ನಿಶಿತಬಾಣಗಳಿಂದ ನಿನ್ನನ್ನು ಯಮಸದನಕ್ಕೆ ಕಳುಹಿಸುತ್ತೇನೆ!”

07135028a ದ್ರೌಣಿರೇವಮಥಾಭಾಷ್ಯ ಪಾರ್ಷತಂ ಪರವೀರಹಾ|

07135028c ಚಾದಯಾಮಾಸ ಬಾಣೌಘೈಃ ಸಮಂತಾಲ್ಲಘುಹಸ್ತವತ್||

ಪರವೀರಹ ದ್ರೌಣಿಯು ಪಾರ್ಷತನಿಗೆ ಹೀಗೆ ಹೇಳಿ ಹಸ್ತಲಾಘವದಿಂದ ಬಾಣಗಳ ಮಳೆಗಳಿಂದ ಎಲ್ಲ ಕಡೆಗಳಿಂದ ಅವನನ್ನು ಮುಚ್ಚಿಬಿಟ್ಟನು.

07135029a ಸ ಚಾದ್ಯಮಾನಃ ಸಮರೇ ದ್ರೌಣಿನಾ ಯುದ್ಧದುರ್ಮದಃ|

07135029c ದ್ರೌಣಿಂ ಪಾಂಚಾಲತನಯೋ ವಾಗ್ಭಿರಾತರ್ಜಯತ್ತದಾ||

ದ್ರೌಣಿಯಿಂದ ಸಮರದಲ್ಲಿ ಪೀಡಿಸಲ್ಪಟ್ಟ ಯುದ್ಧದುರ್ಮದ ಪಾಂಚಾಲತನಯನು ದ್ರೌಣಿಯನ್ನು ಮಾತುಗಳಿಂದ ಗದರಿಸಿದನು:

07135030a ನ ಜಾನೀಷೇ ಪ್ರತಿಜ್ಞಾಂ ಮೇ ವಿಪ್ರೋತ್ಪತ್ತಿಂ ತಥೈವ ಚ|

07135030c ದ್ರೋಣಂ ಹತ್ವಾ ಕಿಲ ಮಯಾ ಹಂತವ್ಯಸ್ತ್ವಂ ಸುದುರ್ಮತೇ|

07135030e ತತಸ್ತ್ವಾಹಂ ನ ಹನ್ಮ್ಯದ್ಯ ದ್ರೋಣೇ ಜೀವತಿ ಸಮ್ಯುಗೇ||

“ವಿಪ್ರ! ದುರ್ಬುದ್ಧೇ! ನನ್ನ ಪ್ರತಿಜ್ಞೆಯ ಕುರಿತು ಮತ್ತು ನನ್ನ ಹುಟ್ಟಿನ ಕುರಿತು ನಿನಗೆ ತಿಳಿದಿಲ್ಲವೇ? ದ್ರೋಣನನ್ನು ಸಂಹರಿಸಿದ ನಂತರವೇ ನಾನು ನಿನ್ನನ್ನು ಕೊಲ್ಲುವವನಿದ್ದೆ! ದ್ರೋಣನು ಜೀವಿಸಿರುವಾಗ ನಾನು ನಿನ್ನನ್ನು ಸಂಹರಿಸುವುದಿಲ್ಲ!

07135031a ಇಮಾಂ ತು ರಜನೀಂ ಪ್ರಾಪ್ತಾಮಪ್ರಭಾತಾಂ ಸುದುರ್ಮತೇ|

07135031c ನಿಹತ್ಯ ಪಿತರಂ ತೇಽದ್ಯ ತತಸ್ತ್ವಾಮಪಿ ಸಮ್ಯುಗೇ|

07135031e ನೇಷ್ಯಾಮಿ ಮೃತ್ಯುಲೋಕಾಯೇತ್ಯೇವಂ ಮೇ ಮನಸಿ ಸ್ಥಿತಂ||

ಸುದುರ್ಮತೇ! ಇದೇ ರಾತ್ರಿ ಅಥವಾ ಬೆಳಗಾಗುವುದರೊಳಗೆ ನಿನ್ನ ತಂದೆಯನ್ನು ಸಂಹರಿಸಿ ಅನಂತರ ಯುದ್ಧದಲ್ಲಿ ನಿನ್ನನ್ನೂ ಸಹ ಮೃತ್ಯುಲೋಕಕ್ಕೆ ಕಳುಹಿಸುತ್ತೇನೆ. ಇದು ನನ್ನ ಮನಸ್ಸಿನಲ್ಲಿ ನೆಲೆಸಿಬಿಟ್ಟಿದೆ!

07135032a ಯಸ್ತೇ ಪಾರ್ಥೇಷು ವಿದ್ವೇಷೋ ಯಾ ಭಕ್ತಿಃ ಕೌರವೇಷು ಚ|

07135032c ತಾಂ ದರ್ಶಯ ಸ್ಥಿರೋ ಭೂತ್ವಾ ನ ಮೇ ಜೀವನ್ವಿಮೋಕ್ಷ್ಯಸೇ||

ಪಾರ್ಥರ ಮೇಲಿರುವ ನಿನ್ನ ದ್ವೇಷವನ್ನೂ ಕೌರವರ ಮೇಲೆ ನಿನಗಿರುವ ಭಕ್ತಿಯನ್ನೂ ಸ್ಥಿರನಾಗಿ ನಿಂತು ಪ್ರದರ್ಶಿಸು! ಜೀವಸಹಿತನಾಗಿ ನೀನು ನನ್ನಿಂದ ತಪ್ಪಿಸಿಕೊಳ್ಳಲಾರೆ!

07135033a ಯೋ ಹಿ ಬ್ರಾಹ್ಮಣ್ಯಮುತ್ಸೃಜ್ಯ ಕ್ಷತ್ರಧರ್ಮರತೋ ದ್ವಿಜಃ|

07135033c ಸ ವಧ್ಯಃ ಸರ್ವಲೋಕಸ್ಯ ಯಥಾ ತ್ವಂ ಪುರುಷಾಧಮ||

ದ್ವಿಜ! ಪುರುಷಾಧಮ! ಯಾರು ನಿನ್ನಂತೆ ಬ್ರಾಹ್ಮಣಧರ್ಮವನ್ನು ಬಿಟ್ಟು ಕ್ಷತ್ರಧರ್ಮದಲ್ಲಿ ನಿರತನಾಗಿರುವನೋ ಅವನು ಸರ್ವಲೋಕಗಳ ದೃಷ್ಟಿಯಿಂದ ವಧ್ಯನೇ ಆಗುತ್ತಾನೆ!”

07135034a ಇತ್ಯುಕ್ತಃ ಪರುಷಂ ವಾಕ್ಯಂ ಪಾರ್ಷತೇನ ದ್ವಿಜೋತ್ತಮಃ|

07135034c ಕ್ರೋಧಮಾಹಾರಯತ್ತೀವ್ರಂ ತಿಷ್ಠ ತಿಷ್ಠೇತಿ ಚಾಬ್ರವೀತ್||

ಪಾರ್ಷತನಿಂದ ಈ ರೀತಿ ಕಟುವಾಕ್ಯಗಳನ್ನು ಕೇಳಿದ ದ್ವಿಜೋತ್ತಮನು ತೀವ್ರವಾಗಿ ಕ್ರೋಧಗೊಂಡು ನಿಲ್ಲು ನಿಲ್ಲೆಂದು ಕೂಗಿ ಹೇಳಿದನು.

07135035a ನಿರ್ದಹನ್ನಿವ ಚಕ್ಷುರ್ಭ್ಯಾಂ ಪಾರ್ಷತಂ ಸೋಽಭ್ಯವೈಕ್ಷತ|

07135035c ಚಾದಯಾಮಾಸ ಚ ಶರೈರ್ನಿಃಶ್ವಸನ್ಪನ್ನಗೋ ಯಥಾ||

ಕಣ್ಣುಗಳಿಂದಲೇ ದಹಿಸಿಬಿಡುವನೋ ಎನ್ನುವಂತೆ ಪಾರ್ಷತನನ್ನು ನೋಡುತ್ತಾ ಸರ್ಪದಂತೆ ಭುಸುಗುಟ್ಟುತ್ತಾ ಅವನು ಶರಗಳಿಂದ ಮುಚ್ಚಿದನು.

07135036a ಸ ಚಾದ್ಯಮಾನಃ ಸಮರೇ ದ್ರೌಣಿನಾ ರಾಜಸತ್ತಮ|

07135036c ಸರ್ವಪಾಂಚಾಲಸೇನಾಭಿಃ ಸಂವೃತೋ ರಥಸತ್ತಮಃ||

ರಾಜಸತ್ತಮ! ಸಮರದಲ್ಲಿ ಆ ರೀತಿ ದ್ರೌಣಿಯಿಂದ ಮುಚ್ಚಲ್ಪಟ್ಟ ರಥಸತ್ತಮನನ್ನು ಸರ್ವ ಪಾಂಚಾಲಸೇನೆಗಳೂ ಸುತ್ತುವರೆದವು.

07135037a ನಾಕಂಪತ ಮಹಾಬಾಹುಃ ಸ್ವಧೈರ್ಯಂ ಸಮುಪಾಶ್ರಿತಃ|

07135037c ಸಾಯಕಾಂಶ್ಚೈವ ವಿವಿಧಾನಶ್ವತ್ಥಾಮ್ನಿ ಮುಮೋಚ ಹ||

ಸ್ವಧೈರ್ಯವನ್ನು ಆಶ್ರಯಿಸಿದ ಮಹಾಬಾಹು ಧೃಷ್ಟದ್ಯುಮ್ನನು ವಿಚಲಿತನಾಗದೇ ಅಶ್ವತ್ಥಾಮನ ಮೇಲೆ ವಿವಿಧ ಸಾಯಕಗಳನ್ನು ಪ್ರಯೋಗಿಸಿದನು.

07135038a ತೌ ಪುನಃ ಸಮ್ನ್ಯವರ್ತೇತಾಂ ಪ್ರಾಣದ್ಯೂತಪರೇ ರಣೇ|

07135038c ನಿವಾರಯಂತೌ ಬಾಣೌಘೈಃ ಪರಸ್ಪರಮಮರ್ಷಿಣೌ|

07135038e ಉತ್ಸೃಜಂತೌ ಮಹೇಷ್ವಾಸೌ ಶರವೃಷ್ಟೀಃ ಸಮಂತತಃ||

ಆ ಇಬ್ಬರು ಅಸಹನಶೀಲ ಮಹೇಷ್ವಾಸರು ಪರಸ್ಪರರನ್ನು ಬಾಣಗಳ ಗುಂಪುಗಳಿಂದ ತಡೆಯುತ್ತಾ ಎಲ್ಲಕಡೆ ಶರವೃಷ್ಟಿಯನ್ನು ಸುರಿಸುತ್ತಾ ಪ್ರಾಣಗಳನ್ನು ಪಣವನ್ನಾಗಿಟ್ಟುಕೊಂಡು ರಣದಲ್ಲಿ ಪುನಃ ಯುದ್ಧಮಾಡತೊಡಗಿದರು.

07135039a ದ್ರೌಣಿಪಾರ್ಷತಯೋರ್ಯುದ್ಧಂ ಘೋರರೂಪಂ ಭಯಾನಕಂ|

07135039c ದೃಷ್ಟ್ವಾ ಸಂಪೂಜಯಾಮಾಸುಃ ಸಿದ್ಧಚಾರಣವಾತಿಕಾಃ||

ದ್ರೌಣಿ ಮತ್ತು ಪಾರ್ಷತರ ಆ ಭಯಾನಕ ಘೋರರೂಪೀ ಯುದ್ಧವನ್ನು ನೋಡಿ ಸಿದ್ಧ-ಚಾರಣ-ವಾತಿಕರು ಬಹಳವಾಗಿ ಪ್ರಶಂಸಿಸಿದರು.

07135040a ಶರೌಘೈಃ ಪೂರಯಂತೌ ತಾವಾಕಾಶಂ ಪ್ರದಿಶಸ್ತಥಾ|

07135040c ಅಲಕ್ಷ್ಯೌ ಸಮಯುಧ್ಯೇತಾಂ ಮಹತ್ಕೃತ್ವಾ ಶರೈಸ್ತಮಃ||

ಅವರಿಬ್ಬರೂ ಶರೌಘಗಳಿಂದ ಆಕಾಶವನ್ನೂ ದಿಕ್ಕುಗಳನ್ನೂ ತುಂಬುತ್ತಾ ಶರಗಳಿಂದ ಘೋರ ಕತ್ತಲೆಯನ್ನೇ ನಿರ್ಮಿಸಿ ಒಬ್ಬರು ಮತ್ತೊಬ್ಬರಿಗೆ ಅಗೋಚರರಾಗಿಯೇ ಯುದ್ಧಮಾಡುತ್ತಿದ್ದರು.

07135041a ನೃತ್ಯಮಾನಾವಿವ ರಣೇ ಮಂಡಲೀಕೃತಕಾರ್ಮುಕೌ|

07135041c ಪರಸ್ಪರವಧೇ ಯತ್ತೌ ಪರಸ್ಪರಜಯೈಷಿಣೌ||

ಪರಸ್ಪರರ ವಧೆಗೆ ಪ್ರಯತ್ನಿಸುತ್ತಿದ್ದ ಪರಸ್ಪರರಿಂದ ಜಯವನ್ನು ಬಯಸುತ್ತಿದ್ದ ಅವರಿಬ್ಬರೂ ಧನುಸ್ಸುಗಳನ್ನು ಮಂಡಲಾಕಾರವಾಗಿ ತಿರುಗಿಸುತ್ತಾ ರಣದಲ್ಲಿ ನೃತ್ಯಮಾಡುತ್ತಿರುವರೋ ಎಂಬಂತೆ ತೋರುತ್ತಿದ್ದರು.

07135042a ಅಯುಧ್ಯೇತಾಂ ಮಹಾಬಾಹೂ ಚಿತ್ರಂ ಲಘು ಚ ಸುಷ್ಠು ಚ|

07135042c ಸಂಪೂಜ್ಯಮಾನೌ ಸಮರೇ ಯೋಧಮುಖ್ಯೈಃ ಸಹಸ್ರಶಃ||

ವಿಚಿತ್ರ ಲಘುತ್ವದಿಂದ ಚೆನ್ನಾಗಿ ಯುದ್ಧಮಾಡುತ್ತಿದ್ದ ಅವರಿಬ್ಬರು ಮಹಾಬಾಹುಗಳನ್ನು ಸಮರದಲ್ಲಿ ಸಹಸ್ರಾರು ಯೋಧಪ್ರಮುಖರು ಪ್ರಶಂಸಿಸಿದರು.

07135043a ತೌ ಪ್ರಯುದ್ಧೌ ರಣೇ ದೃಷ್ಟ್ವಾ ವನೇ ವನ್ಯೌ ಗಜಾವಿವ|

07135043c ಉಭಯೋಃ ಸೇನಯೋರ್ಹರ್ಷಸ್ತುಮುಲಃ ಸಮಪದ್ಯತ||

ವನದಲ್ಲಿ ವನ್ಯ ಗಜಗಳಂತೆ ರಣದಲ್ಲಿ ಯುದ್ಧಮಾಡುತ್ತಿದ್ದ ಅವರನ್ನು ನೋಡಿ ಎರಡೂ ಸೇನೆಗಳಲ್ಲಿ ಹರ್ಷದಿಂದ ತುಮುಲ ಶಬ್ಧಗಳು ಕೇಳಿಬರುತ್ತಿದ್ದವು.

07135044a ಸಿಂಹನಾದರವಾಶ್ಚಾಸನ್ದಧ್ಮುಃ ಶಂಖಾಂಶ್ಚ ಮಾರಿಷ|

07135044c ವಾದಿತ್ರಾಣ್ಯಭ್ಯವಾದ್ಯಂತ ಶತಶೋಽಥ ಸಹಸ್ರಶಃ||

ಮಾರಿಷ! ಸಿಂಹನಾದದ ಕೂಗುಗಳು ಕೇಳಿಬಂದವು. ಶಂಖಗಳು ಮೊಳಗಿದವು. ನೂರಾರು ಸಹಸ್ರಾರು ವಾದ್ಯಗಳನ್ನು ಬಾರಿಸಲಾಯಿತು.

07135045a ತಸ್ಮಿಂಸ್ತು ತುಮುಲೇ ಯುದ್ಧೇ ಭೀರೂಣಾಂ ಭಯವರ್ಧನೇ|

07135045c ಮುಹೂರ್ತಮಿವ ತದ್ಯುದ್ಧಂ ಸಮರೂಪಂ ತದಾಭವತ್||

ಹೇಡಿಗಳಿಗೆ ಭಯವನ್ನುಂಟು ಮಾಡುತ್ತಿದ್ದ ಆ ತುಮುಲಯುದ್ಧವು ಒಂದು ಮುಹೂರ್ತ ಸಮ-ಸಮವಾಗಿಯೇ ನಡೆಯುತ್ತಿತ್ತು.

07135046a ತತೋ ದ್ರೌಣಿರ್ಮಹಾರಾಜ ಪಾರ್ಷತಸ್ಯ ಮಹಾತ್ಮನಃ|

07135046c ಧ್ವಜಂ ಧನುಸ್ತಥಾ ಚತ್ರಮುಭೌ ಚ ಪಾರ್ಷ್ಣಿಸಾರಥೀ|

07135046e ಸೂತಮಶ್ವಾಂಶ್ಚ ಚತುರೋ ನಿಹತ್ಯಾಭ್ಯದ್ರವದ್ರಣೇ||

ಮಹಾರಾಜ! ಆಗ ರಣದಲ್ಲಿ ದ್ರೌಣಿಯು ಮಹಾತ್ಮ ಪಾರ್ಷತನ ಧ್ವಜವನ್ನೂ, ಧನುಸ್ಸನ್ನೂ, ಚತ್ರವನ್ನೂ, ಎರಡು ಪಾರ್ಷ್ಣಿಸಾರಥಿಗಳನ್ನೂ, ಸಾರಥಿ ಮತ್ತು ನಾಲ್ಕು ಕುದುರೆಗಳನ್ನೂ ನಾಶಗೊಳಿಸಿದನು.

07135047a ಪಾಂಚಾಲಾಂಶ್ಚೈವ ತಾನ್ಸರ್ವಾನ್ಬಾಣೈಃ ಸಮ್ನತಪರ್ವಭಿಃ|

07135047c ವ್ಯದ್ರಾವಯದಮೇಯಾತ್ಮಾ ಶತಶೋಽಥ ಸಹಸ್ರಶಃ||

ಆ ಅಮೇಯಾತ್ಮನು ನೂರಾರು ಸಹಸ್ರಾರು ಸನ್ನತಪರ್ವ ಬಾಣಗಳಿಂದ ಆ ಎಲ್ಲ ಪಾಂಚಾಲರನ್ನೂ ಹೊಡೆದು ಓಡಿಸಿದನು.

07135048a ತತಃ ಪ್ರವಿವ್ಯಥೇ ಸೇನಾ ಪಾಂಡವೀ ಭರತರ್ಷಭ|

07135048c ದೃಷ್ಟ್ವಾ ದ್ರೌಣೇರ್ಮಹತ್ಕರ್ಮ ವಾಸವಸ್ಯೇವ ಸಮ್ಯುಗೇ||

ಭರತರ್ಷಭ! ಆಗ ಸಂಯುಗದಲ್ಲಿ ವಾಸವನಂಥಹ ದ್ರೌಣಿಯ ಆ ಮಹಾಕರ್ಮವನ್ನು ನೋಡಿ ಪಾಂಡವೀ ಸೇನೆಯು ವ್ಯಥೆಗೊಂಡಿತು.

07135049a ಶತೇನ ಚ ಶತಂ ಹತ್ವಾ ಪಾಂಚಾಲಾನಾಂ ಮಹಾರಥಃ|

07135049c ತ್ರಿಭಿಶ್ಚ ನಿಶಿತೈರ್ಬಾಣೈರ್ಹತ್ವಾ ತ್ರೀನ್ವೈ ಮಹಾರಥಾನ್||

ಆ ಮಹಾರಥನು ನೂರುಬಾಣಗಳಿಂದ ನೂರು ಪಾಂಚಾಲ ಮಹಾರಥರನ್ನು ಸಂಹರಿಸಿ, ಪ್ರತ್ಯೇಕ ಮೂರು ನಿಶಿತ ಬಾಣಗಳಿಂದ ಮೂರು ಮಹಾರಥರನ್ನು ಸಂಹರಿಸಿದನು.

07135050a ದ್ರೌಣಿರ್ದ್ರುಪದಪುತ್ರಸ್ಯ ಫಲ್ಗುನಸ್ಯ ಚ ಪಶ್ಯತಃ|

07135050c ನಾಶಯಾಮಾಸ ಪಾಂಚಾಲಾನ್ಭೂಯಿಷ್ಠಂ ಯೇ ವ್ಯವಸ್ಥಿತಾಃ||

ದ್ರುಪದ ಪುತ್ರ ಮತ್ತು ಫಲ್ಗುನರು ನೋಡುತ್ತಿದ್ದಂತೆಯೇ ದ್ರೌಣಿಯು ಪುನಃ ವ್ಯವಸ್ಥಿತರಾಗಿದ್ದ ಪಾಂಚಾಲರನ್ನು ನಾಶಗೊಳಿಸಿದನು.

07135051a ತೇ ವಧ್ಯಮಾನಾಃ ಪಾಂಚಾಲಾಃ ಸಮರೇ ಸಹ ಸೃಂಜಯೈಃ|

07135051c ಅಗಚ್ಚನ್ದ್ರೌಣಿಮುತ್ಸೃಜ್ಯ ವಿಪ್ರಕೀರ್ಣರಥಧ್ವಜಾಃ||

ಸಮರದಲ್ಲಿ ಆ ರೀತಿ ಅವನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಸೃಂಜಯರೊಂದಿಗೆ ರಥ-ಧ್ವಜಗಳು ಹರಡಿ ಬಿದ್ದಿರಲು ದ್ರೌಣಿಯನ್ನು ಬಿಟ್ಟು ಓಡಿ ಹೋದರು.

07135052a ಸ ಜಿತ್ವಾ ಸಮರೇ ಶತ್ರೂನ್ದ್ರೋಣಪುತ್ರೋ ಮಹಾರಥಃ|

07135052c ನನಾದ ಸುಮಹಾನಾದಂ ತಪಾಂತೇ ಜಲದೋ ಯಥಾ||

ಸಮರದಲ್ಲಿ ಶತ್ರುಗಳನ್ನು ಜಯಿಸಿ ಮಹಾರಥ ದ್ರೋಣಪುತ್ರನು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಮಹಾನಾದವನ್ನು ಕೂಗಿದನು.

07135053a ಸ ನಿಹತ್ಯ ಬಹೂಂ ಶೂರಾನಶ್ವತ್ಥಾಮಾ ವ್ಯರೋಚತ|

07135053c ಯುಗಾಂತೇ ಸರ್ವಭೂತಾನಿ ಭಸ್ಮ ಕೃತ್ವೇವ ಪಾವಕಃ||

ಬಹಳಷ್ಟು ಶೂರರನ್ನು ಸಂಹರಿಸಿ ಅಶ್ವತ್ಥಾಮನು ಯುಗಾಂತದಲ್ಲಿ ಸರ್ವಭೂತಗಳನ್ನು ಭಸ್ಮಗೊಳಿಸಿದ ಪಾವಕನಂತೆ ವಿರಾಜಿಸಿದನು.

07135054a ಸಂಪೂಜ್ಯಮಾನೋ ಯುಧಿ ಕೌರವೇಯೈರ್

        ವಿಜಿತ್ಯ ಸಂಖ್ಯೇಽರಿಗಣಾನ್ಸಹಸ್ರಶಃ|

07135054c ವ್ಯರೋಚತ ದ್ರೋಣಸುತಃ ಪ್ರತಾಪವಾನ್

        ಯಥಾ ಸುರೇಂದ್ರೋಽರಿಗಣಾನ್ನಿಹತ್ಯ||

ಯುದ್ಧದಲ್ಲಿ ಸಹಸ್ರಾರು ಶತ್ರುಸೇನೆಗಳನ್ನು ಗೆದ್ದು ಕೌರವೇಯರಿಂದ ಗೌರವಿಸಲ್ಪಟ್ಟ ದ್ರೋಣಸುತ ಪ್ರತಾಪವಾನನು ಅರಿಗಣಗಳನ್ನು ಸಂಹರಿಸಿದ ಸುರೇಂದ್ರನಂತೆ ಪ್ರಕಾಶಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಅಶ್ವತ್ಥಾಮಪರಾಕ್ರಮೇ ಪಂಚತ್ರಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಅಶ್ವತ್ಥಾಮಪರಾಕ್ರಮ ಎನ್ನುವ ನೂರಾಮೂವತ್ತೈದನೇ ಅಧ್ಯಾಯವು.

Related image

Comments are closed.