Drona Parva: Chapter 132

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೨

ಸಾತ್ಯಕಿಯು ಸೋಮದತ್ತನನ್ನು ಮೂರ್ಛೆಗೊಳಿಸಿದುದು (೧-೧೦). ಭೀಮನಿಂದ ಬಾಹ್ಲೀಕನ, ಹತ್ತು ಧಾರ್ತರಾಷ್ಟ್ರರ ಮತ್ತು ಶಕುನಿಯ ಸಹೋದರರ ವಧೆ (೧೧-೨೧). ದ್ರೋಣ-ಯುಧಿಷ್ಠಿರರ ಯುದ್ಧ (೨೨-೩೬). ಅರ್ಜುನ-ಭೀಮಸೇನರು ತಮ್ಮ ಸೇನೆಗಳನ್ನು ದ್ರೋಣನ ಅಕ್ರಮಣದಿಂದ ರಕ್ಷಿಸಿದುದು (೩೭-೪೨).

07132001 ಸಂಜಯ ಉವಾಚ|

07132001a ದ್ರುಪದಸ್ಯಾತ್ಮಜಾನ್ದೃಷ್ಟ್ವಾ ಕುಂತಿಭೋಜಸುತಾಂಸ್ತಥಾ|

07132001c ದ್ರೋಣಪುತ್ರೇಣ ನಿಹತಾನ್ರಾಕ್ಷಸಾಂಶ್ಚ ಸಹಸ್ರಶಃ||

07132002a ಯುಧಿಷ್ಠಿರೋ ಭೀಮಸೇನೋ ಧೃಷ್ಟದ್ಯುಮ್ನಶ್ಚ ಪಾರ್ಷತಃ|

07132002c ಯುಯುಧಾನಶ್ಚ ಸಮ್ಯತ್ತಾ ಯುದ್ಧಾಯೈವ ಮನೋ ದಧುಃ||

ಸಂಜಯನು ಹೇಳಿದನು: “ದ್ರುಪದನ ಮಕ್ಕಳು, ಕುಂತಿಭೋಜನ ಮಕ್ಕಳು, ಮತ್ತು ಸಹಸ್ರಾರು ರಾಕ್ಷಸರು ದ್ರೋಣಪುತ್ರನಿಂದ ನಿಹತರಾದುದನ್ನು ಕಂಡು ಯುಧಿಷ್ಠಿರ, ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ಮತ್ತು ಯುಯುಧಾನ ಸಾತ್ಯಕಿಯರು ಒಟ್ಟಾಗಿ ಯುದ್ಧಮಾಡುವ ಮನಸ್ಸು ಮಾಡಿದರು.

07132003a ಸೋಮದತ್ತಃ ಪುನಃ ಕ್ರುದ್ಧೋ ದೃಷ್ಟ್ವಾ ಸಾತ್ಯಕಿಮಾಹವೇ|

07132003c ಮಹತಾ ಶರವರ್ಷೇಣ ಚಾದಯಾಮಾಸ ಸರ್ವತಃ||

ರಣದಲ್ಲಿ ಪುನಃ ಸಾತ್ಯಕಿಯನ್ನು ನೋಡಿ ಕ್ರುದ್ಧನಾದ ಸೋಮದತ್ತನು ಅವನನ್ನು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.

07132004a ತತಃ ಸಮಭವದ್ಯುದ್ಧಮತೀವ ಭಯವರ್ಧನಂ|

07132004c ತ್ವದೀಯಾನಾಂ ಪರೇಷಾಂ ಚ ಘೋರಂ ವಿಜಯಕಾಂಕ್ಷಿಣಾಂ||

ಆಗ ವಿಜಯಾಕಾಂಕ್ಷಿ ನಿಮ್ಮವರು ಮತ್ತು ಶತ್ರುಗಳ ನಡುವೆ ಭಯವನ್ನು ಹೆಚ್ಚಿಸುವ, ಅತೀವ ಘೋರ ಯುದ್ಧವು ಪ್ರಾರಂಭವಾಯಿತು.

07132005a ದಶಭಿಃ ಸಾತ್ವತಸ್ಯಾರ್ಥೇ ಭೀಮೋ ವಿವ್ಯಾಧ ಕೌರವಂ|

07132005c ಸೋಮದತ್ತೋಽಪಿ ತಂ ವೀರಂ ಶತೇನ ಪ್ರತ್ಯವಿಧ್ಯತ||

ಸಾತ್ವತನಿಗೋಸ್ಕರ ಭೀಮನು ಕೌರವ ಸೋಮದತ್ತನನ್ನು ಹತ್ತು ಬಾಣಗಳಿಂದ ಹೊಡೆಯಲು ಸೋಮದತ್ತನೂ ಕೂಡ ಆ ವೀರನನ್ನು ನೂರರಿಂದ ತಿರುಗಿ ಹೊಡೆದನು.

07132006a ಸಾತ್ವತಸ್ತ್ವಭಿಸಂಕ್ರುದ್ಧಃ ಪುತ್ರಾಧಿಭಿರಭಿಪ್ಲುತಂ|

07132006c ವೃದ್ಧಂ ಋದ್ಧಂ ಗುಣೈಃ ಸರ್ವೈರ್ಯಯಾತಿಮಿವ ನಾಹುಷಂ||

07132007a ವಿವ್ಯಾಧ ದಶಭಿಸ್ತೀಕ್ಷ್ಣೈಃ ಶರೈರ್ವಜ್ರನಿಪಾತಿಭಿಃ|

07132007c ಶಕ್ತ್ಯಾ ಚೈನಮಥಾಹತ್ಯ ಪುನರ್ವಿವ್ಯಾಧ ಸಪ್ತಭಿಃ||

ಅನಂತರ ಪರಮಕ್ರುದ್ಧ ಸಾತ್ವತನು ಪುತ್ರಶೋಕದ ಮನೋರೋಗದಲ್ಲಿ ಮುಳುಗಿಹೋಗಿದ್ದ, ಸರ್ವಗುಣಗಳಲ್ಲಿ ನಹುಷನ ಮಗ ಯಯಾತಿಯಂತಿದ್ದ ವೃದ್ಧ ಸೋಮದತ್ತನನ್ನು ವಜ್ರಾಯುಧದಂತೆ ಬೀಳುವ ಹತ್ತು ತೀಕ್ಷ್ಣ ಬಾಣಗಳಿಂದ ಪ್ರಹರಿಸಿದನು. ಪ್ರತಿಯಾಗಿ ಸೋಮದತ್ತನು ಶಕ್ತ್ಯಾಯುಧದಿಂದ ಸಾತ್ಯಕಿಯನ್ನು ಗಾಯಗೊಳಿಸಿ ಪುನಃ ಏಳು ಬಾಣಗಳಿಂದ ಪ್ರಹರಿಸಿದನು.

07132008a ತತಸ್ತು ಸಾತ್ಯಕೇರರ್ಥೇ ಭೀಮಸೇನೋ ನವಂ ದೃಢಂ|

07132008c ಮುಮೋಚ ಪರಿಘಂ ಘೋರಂ ಸೋಮದತ್ತಸ್ಯ ಮೂರ್ಧನಿ||

ಆಗ ಸಾತ್ಯಕಿಗಾಗಿ ಭೀಮಸೇನನು ದೃಢ ನೂತನ ಘೋರ ಪರಿಘವನ್ನು ಸೋಮದತ್ತನ ತಲೆಯ ಮೇಲೆ ಪ್ರಹರಿಸಿದನು.

07132009a ಸಾತ್ಯಕಿಶ್ಚಾಗ್ನಿಸಂಕಾಶಂ ಮುಮೋಚ ಶರಮುತ್ತಮಂ|

07132009c ಸೋಮದತ್ತೋರಸಿ ಕ್ರುದ್ಧಃ ಸುಪತ್ರಂ ನಿಶಿತಂ ಯುಧಿ||

ಸಾತ್ಯಕಿಯು ಯುದ್ಧದಲ್ಲಿ ಕ್ರುದ್ಧನಾಗಿ ಸುಂದರ ಪುಕ್ಕಗಳುಳ್ಳ ನಿಶಿತ ಅಗ್ನಿಸಂಕಾಶ ಉತ್ತಮ ಶರವನ್ನು ಸೋಮದತ್ತನ ಎದೆಗೆ ಗುರಿಯಿಟ್ಟು ಹೊಡೆದನು.

07132010a ಯುಗಪತ್ಪೇತತುರಥ ಘೋರೌ ಪರಿಘಮಾರ್ಗಣೌ|

07132010c ಶರೀರೇ ಸೋಮದತ್ತಸ್ಯ ಸ ಪಪಾತ ಮಹಾರಥಃ||

ಘೋರವಾದ ಆ ಪರಿಘ-ಮಾರ್ಗಣಗಳೆರಡು ಒಟ್ಟಿಗೇ ಸೋಮದತ್ತನ ಶರೀರವನ್ನು ಹೊಗಲು, ಆ ಮಹಾರಥನು ಬಿದ್ದನು.

07132011a ವ್ಯಾಮೋಹಿತೇ ತು ತನಯೇ ಬಾಹ್ಲೀಕಃ ಸಮುಪಾದ್ರವತ್|

07132011c ವಿಸೃಜಂ ಶರವರ್ಷಾಣಿ ಕಾಲವರ್ಷೀವ ತೋಯದಃ||

ತನ್ನ ಮಗನು ಮೂರ್ಛಿತನಾಗಿ ಬಿದ್ದುನನ್ನು ಕಂಡು ಬಾಹ್ಲೀಕನು ಧಾವಿಸಿ ಬಂದು ವರ್ಷಾಕಾಲದಲ್ಲಿಯ ಮೋಡದಂತೆ ಶರವರ್ಷಗಳನ್ನು ಸೃಷ್ಟಿಸಿದನು.

07132012a ಭೀಮೋಽಥ ಸಾತ್ವತಸ್ಯಾರ್ಥೇ ಬಾಹ್ಲೀಕಂ ನವಭಿಃ ಶರೈಃ|

07132012c ಪೀಡಯನ್ವೈ ಮಹಾತ್ಮಾನಂ ವಿವ್ಯಾಧ ರಣಮೂರ್ಧನಿ||

ಆಗ ಭೀಮನು ಸಾತ್ವತನನ್ನು ರಕ್ಷಿಸಲೋಸುಗ ರಣರಂಗದಲ್ಲಿ ಮಹಾತ್ಮ ಬಾಹ್ಲೀಕನನ್ನು ಪೀಡಿಸುತ್ತಾ ಒಂಭತ್ತು ಶರಗಳಿಂದ ಗಾಯಗೊಳಿಸಿದನು.

07132013a ಪ್ರಾತಿಪೀಯಸ್ತು ಸಂಕ್ರುದ್ಧಃ ಶಕ್ತಿಂ ಭೀಮಸ್ಯ ವಕ್ಷಸಿ|

07132013c ನಿಚಖಾನ ಮಹಾಬಾಹುಃ ಪುರಂದರ ಇವಾಶನಿಂ||

ಪ್ರತೀಪನ ಮಗ ಮಹಾಬಾಹು ಬಾಹ್ಲೀಕನು ಸಂಕ್ರುದ್ಧನಾಗಿ ಭೀಮನ ಎದೆಗೆ ಪುರಂದರ ವಜ್ರದಂತಿರುವ ಶಕ್ತಿಯನ್ನು ನೆಟ್ಟಿದನು.

07132014a ಸ ತಯಾಭಿಹತೋ ಭೀಮಶ್ಚಕಂಪೇ ಚ ಮುಮೋಹ ಚ|

07132014c ಪ್ರಾಪ್ಯ ಚೇತಶ್ಚ ಬಲವಾನ್ಗದಾಮಸ್ಮೈ ಸಸರ್ಜ ಹ||

ಹಾಗೆ ಪ್ರಹೃತನಾದ ಭೀಮನು ಕಂಪಿಸಿದನು ಮತ್ತು ಮೂರ್ಛಿತನಾದನು ಕೂಡ. ಆ ಬಲವಾನನು ಚೇತರಿಸಿಕೊಂಡು ಬಲವಾನ್ ಗದೆಯನ್ನು ಬಾಹ್ಲೀಕನ ಮೇಲೆ ಪ್ರಯೋಗಿಸಿದನು.

07132015a ಸಾ ಪಾಂಡವೇನ ಪ್ರಹಿತಾ ಬಾಹ್ಲೀಕಸ್ಯ ಶಿರೋಽಹರತ್|

07132015c ಸ ಪಪಾತ ಹತಃ ಪೃಥ್ವ್ಯಾಂ ವಜ್ರಾಹತ ಇವಾದ್ರಿರಾಟ್||

ಪಾಂಡವನಿಂದ ಪ್ರಯೋಗಿಸಲ್ಪಟ್ಟ ಆ ಗದೆಯು ಬಾಹ್ಲೀಕನ ಶಿರವನ್ನು ತುಂಡರಿಸಿತು. ಅವನು ವಜ್ರದಿಂದ ಹೊಡೆಯಲ್ಪಟ್ಟ ಪರ್ವತರಾಜನಂತೆ ಹತನಾಗಿ ಬಿದ್ದನು.

07132016a ತಸ್ಮಿನ್ವಿನಿಹತೇ ವೀರೇ ಬಾಹ್ಲೀಕೇ ಪುರುಷರ್ಷಭೇ|

07132016c ಪುತ್ರಾಸ್ತೇಽಭ್ಯರ್ದಯನ್ಭೀಮಂ ದಶ ದಾಶರಥೇಃ ಸಮಾಃ||

ಆ ಪುರುಷರ್ಷಭ ವೀರ ಬಾಹ್ಲೀಕನು ಹತನಾಗಲು ದಾಶರಥಿ ರಾಮನಿಗೆ ಸಮಾನರಾದ ನಿನ್ನ ಹತ್ತು ಮಕ್ಕಳು ಭೀಮನನ್ನು ಆಕ್ರಮಿಸಿದರು.

07132017a ನಾರಾಚೈರ್ದಶಭಿರ್ಭೀಮಸ್ತಾನ್ನಿಹತ್ಯ ತವಾತ್ಮಜಾನ್|

07132017c ಕರ್ಣಸ್ಯ ದಯಿತಂ ಪುತ್ರಂ ವೃಷಸೇನಮವಾಕಿರತ್||

ನಿನ್ನ ಹತ್ತು ಪುತ್ರರನ್ನು ಹತ್ತು ನಾರಾಚಗಳಿಂದ ಸಂಹರಿಸಿದ ಭೀಮನು ಕರ್ಣನ ಪ್ರಿಯ ಪುತ್ರ ವೃಷಸೇನನನ್ನು ಬಾಣಗಳಿಂದ ಮುಸುಕಿದನು.

07132018a ತತೋ ವೃಷರಥೋ ನಾಮ ಭ್ರಾತಾ ಕರ್ಣಸ್ಯ ವಿಶ್ರುತಃ|

07132018c ಜಘಾನ ಭೀಮಂ ನಾರಾಚೈಸ್ತಮಪ್ಯಭ್ಯವಧೀದ್ಬಲೀ||

ಆಗ ವೃಷರಥನೆಂಬ ಹೆಸರಿನ ಕರ್ಣನ ಪ್ರಖ್ಯಾತ ಬಲಶಾಲಿ ಸಹೋದರನು ಭೀಮನನ್ನು ನಾರಾಚಗಳಿಂದ ಪ್ರಹರಿಸಿ ಗಾಯಗೊಳಿಸಿದನು.

07132019a ತತಃ ಸಪ್ತ ರಥಾನ್ವೀರಃ ಸ್ಯಾಲಾನಾಂ ತವ ಭಾರತ|

07132019c ನಿಹತ್ಯ ಭೀಮೋ ನಾರಾಚೈಃ ಶತಚಂದ್ರಮಪೋಥಯತ್||

ಭಾರತ! ಆಗ ವೀರ ಭೀಮನು ನಿನ್ನ ಬಾವಂದಿರಾದ ಏಳು ಮಂದಿ ರಥರನ್ನು ನಾರಾಚಗಳಿಂದ ಸಂಹರಿಸಿ ಶತಚಂದ್ರನನ್ನೂ ಸಂಹರಿಸಿದನು.

07132020a ಅಮರ್ಷಯಂತೋ ನಿಹತಂ ಶತಚಂದ್ರಂ ಮಹಾರಥಂ|

07132020c ಶಕುನೇರ್ಭ್ರಾತರೋ ವೀರಾ ಗಜಾಕ್ಷಃ ಶರಭೋ ವಿಭುಃ|

07132020e ಅಭಿದ್ರುತ್ಯ ಶರೈಸ್ತೀಕ್ಷ್ಣೈರ್ಭೀಮಸೇನಮತಾಡಯನ್||

ಮಹಾರಥ ಶತಚಂದ್ರನು ಹತನಾದುದನ್ನು ಸಹಿಸಿಕೊಳ್ಳಲಾರದೇ ಶಕುನಿಯ ವೀರ ಸಹೋದರರು - ಗಜಾಕ್ಷ, ಶರಭ ಮತ್ತು ವಿಭು - ಧಾವಿಸಿ ಬಂದು ತೀಕ್ಷ್ಣ ಶರಗಳಿಂದ ಭೀಮಸೇನನನ್ನು ಹೊಡೆದರು.

07132021a ಸ ತುದ್ಯಮಾನೋ ನಾರಾಚೈರ್ವೃಷ್ಟಿವೇಗೈರಿವರ್ಷಭಃ|

07132021c ಜಘಾನ ಪಂಚಭಿರ್ಬಾಣೈಃ ಪಂಚೈವಾತಿಬಲೋ ರಥಾನ್|

07132021e ತಾನ್ದೃಷ್ಟ್ವಾ ನಿಹತಾನ್ವೀರಾನ್ವಿಚೇಲುರ್ನೃಪಸತ್ತಮಾಃ||

ವೃಷ್ಟಿವೇಗದಿಂದ ಪರ್ವತವು ಸ್ವಲ್ಪವೂ ಕಂಪಿಸದಂತೆ ನಾರಾಚಗಳಿಂದ ಹೊಡೆಯಲ್ಪಟ್ಟು ಸ್ವಲ್ಪವೂ ವಿಚಲಿತನಾಗದೇ ಭೀಮಸೇನನು ಐದು ಬಾಣಗಳಿಂದ ಆ ಐವರು ಅತಿಬಲ ರಥರನ್ನು ಸಂಹರಿಸಿದನು. ಆ ವೀರರು ಹತರಾದದನ್ನು ನೋಡಿ ನಿನ್ನ ಕಡೆಯ ರಾಜರು ತತ್ತರಿಸಿದರು.

07132022a ತತೋ ಯುಧಿಷ್ಠಿರಃ ಕ್ರುದ್ಧಸ್ತವಾನೀಕಮಶಾತಯತ್|

07132022c ಮಿಷತಃ ಕುಂಭಯೋನೇಶ್ಚ ಪುತ್ರಾಣಾಂ ಚ ತವಾನಘ||

ಅನಘ! ಆಗ ಕ್ರುದ್ಧ ಯುಧಿಷ್ಠಿರನು ಕುಂಭಯೋನಿ ದ್ರೋಣ ಮತ್ತು ನಿನ್ನ ಮಕ್ಕಳು ನೋಡುತ್ತಿದ್ದಂತೆಯೇ ನಿನ್ನ ಸೇನೆಯನ್ನು ನಾಶಗೊಳಿಸಲು ಉಪಕ್ರಮಿಸಿದನು.

07132023a ಅಂಬಷ್ಠಾನ್ಮಾಲವಾಂ ಶೂರಾಂಸ್ತ್ರಿಗರ್ತಾನ್ಸಶಿಬೀನಪಿ|

07132023c ಪ್ರಾಹಿಣೋನ್ಮೃತ್ಯುಲೋಕಾಯ ಗಣಾನ್ಯುದ್ಧೇ ಯುಧಿಷ್ಠಿರಃ||

ಯುಧಿಷ್ಠಿರನು ಯುದ್ಧದಲ್ಲಿ ಅಂಬಷ್ಠರನ್ನು, ಮಾಲವರನ್ನು, ಶೂರ ತ್ರಿಗರ್ತರನ್ನೂ ಶಿಬಿಯರೊಂದಿಗೆ ಗುಂಪು ಗುಂಪಾಗಿ ಮೃತ್ಯುಲೋಕಕ್ಕೆ ಕಳುಹಿಸಿದನು.

07132024a ಅಭೀಷಾಹಾಂ ಶೂರಸೇನಾನ್ಬಾಹ್ಲೀಕಾನ್ಸವಸಾತಿಕಾನ್|

07132024c ನಿಕೃತ್ಯ ಪೃಥಿವೀಂ ರಾಜಾ ಚಕ್ರೇ ಶೋಣಿತಕರ್ದಮಾಂ||

ಅಭಿಷಾಹಸರನ್ನೂ, ಶೂರಸೇನರನ್ನೂ, ಬಾಹ್ಲೀಕರನ್ನೂ, ಸವಸಾತಿಕಾನರನ್ನೂ ಸಂಹರಿಸಿ ರಾಜನು ಪೃಥಿವಿಯಲ್ಲಿ ರಕ್ತ-ಮಾಂಸಗಳ ಕೆಸರನ್ನುಂಟು ಮಾಡಿದನು.

07132025a ಯೌಧೇಯಾರಟ್ಟರಾಜನ್ಯಮದ್ರಕಾಣಾಂ ಗಣಾನ್ಯುಧಿ|

07132025c ಪ್ರಾಹಿಣೋನ್ಮೃತ್ಯುಲೋಕಾಯ ಶೂರಾನ್ಬಾಣೈರ್ಯುಧಿಷ್ಠಿರಃ||

ಯುದ್ಧದಲ್ಲಿ ಯುಧಿಷ್ಠಿರನು ಶೂರ ಯೌಧೇಯರನ್ನೂ ಅಟ್ಟರನ್ನೂ, ಮದ್ರಕ ಗಣಗಳನ್ನೂ ಬಾಣಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು.

07132026a ಹತಾಹರತ ಗೃಹ್ಣೀತ ವಿಧ್ಯತ ವ್ಯವಕೃಂತತ|

07132026c ಇತ್ಯಾಸೀತ್ತುಮುಲಃ ಶಬ್ದೋ ಯುಧಿಷ್ಠಿರರಥಂ ಪ್ರತಿ||

“ಕೊಲ್ಲರಿ!”, “ಅಪಹರಿಸಿರಿ!”, “ಹಿಡಿಯಿರಿ!”, “ಗಾಯಗೊಳಿಸಿ!”, “ಚೂರು ಚೂರು ಮಾಡಿ!” ಇವೇ ಮುಂತಾದ ಭಯಂಕರ ಶಬ್ಧಗಳು ಯುಧಿಷ್ಠಿರನ ರಥದ ಬಳಿ ಕೇಳಿಬರುತ್ತಿದ್ದವು.

07132027a ಸೈನ್ಯಾನಿ ದ್ರಾವಯಂತಂ ತಂ ದ್ರೋಣೋ ದೃಷ್ಟ್ವಾ ಯುಧಿಷ್ಠಿರಂ|

07132027c ಚೋದಿತಸ್ತವ ಪುತ್ರೇಣ ಸಾಯಕೈರಭ್ಯವಾಕಿರತ್||

ಸೇನೆಗಳನ್ನು ಓಡಿಸುತ್ತಿರುವ ಯುಧಿಷ್ಠಿರನನ್ನು ನೋಡಿ ನಿನ್ನ ಪುತ್ರರಿಂದ ಪ್ರಚೋದಿತ ದ್ರೋಣನು ಅವನನ್ನು ಸಾಯಕಗಳಿಂದ ಮುಚ್ಚಿಬಿಟ್ಟನು.

07132028a ದ್ರೋಣಸ್ತು ಪರಮಕ್ರುದ್ಧೋ ವಾಯವ್ಯಾಸ್ತ್ರೇಣ ಪಾರ್ಥಿವಂ|

07132028c ವಿವ್ಯಾಧ ಸೋಽಸ್ಯ ತದ್ದಿವ್ಯಮಸ್ತ್ರಮಸ್ತ್ರೇಣ ಜಘ್ನಿವಾನ್||

ದ್ರೋಣನಾದರೋ ಪರಮಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ರಾಜನನ್ನು ಹೊಡೆದನು. ಯುಧಿಷ್ಠಿರನೂ ಕೂಡ ಆ ದಿವ್ಯಾಸ್ತ್ರವನ್ನು ದಿವ್ಯಾಸ್ತ್ರದಿಂದಲೇ ನಿರಸನಗೊಳಿಸಿದನು.

07132029a ತಸ್ಮಿನ್ವಿನಿಹತೇ ಚಾಸ್ತ್ರೇ ಭಾರದ್ವಾಜೋ ಯುಧಿಷ್ಠಿರೇ|

07132029c ವಾರುಣಂ ಯಾಮ್ಯಮಾಗ್ನೇಯಂ ತ್ವಾಷ್ಟ್ರಂ ಸಾವಿತ್ರಮೇವ ಚ|

07132029e ಚಿಕ್ಷೇಪ ಪರಮಕ್ರುದ್ಧೋ ಜಿಘಾಂಸುಃ ಪಾಂಡುನಂದನಂ||

ಆ ಅಸ್ತ್ರವು ಹತವಾಗಲು ಪರಮಕ್ರುದ್ಧನಾದ ಭಾರದ್ವಾಜನು ಪಾಂಡುನಂದನ ಯುಧಿಷ್ಠಿರನನ್ನು ಕೊಲ್ಲಲು ಬಯಸಿ ವಾರುಣ, ಯಾಮ್ಯ, ಆಗ್ನೇಯ, ತ್ವಾಷ್ಟ, ಸಾವಿತ್ರಗಳೆಂಬ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು.

07132030a ಕ್ಷಿಪ್ತಾನಿ ಕ್ಷಿಪ್ಯಮಾಣಾನಿ ತಾನಿ ಚಾಸ್ತ್ರಾಣಿ ಧರ್ಮಜಃ|

07132030c ಜಘಾನಾಸ್ತ್ರೈರ್ಮಹಾಬಾಹುಃ ಕುಂಭಯೋನೇರವಿತ್ರಸನ್||

ಸ್ವಲ್ಪವೂ ಭಯಗೊಳ್ಳದೇ ಮಹಾಬಾಹು ಧರ್ಮಜನು ಕುಂಭಯೋನಿಯು ಬಿಟ್ಟ ಮತ್ತು ಬಿಡಲಿರುವ ಎಲ್ಲ ಅಸ್ತ್ರಗಳನ್ನೂ ಪ್ರತಿ ಅಸ್ತ್ರಗಳಿಂದ ನಿರಸನಗೊಳಿಸಿದನು.

07132031a ಸತ್ಯಾಂ ಚಿಕೀರ್ಷಮಾಣಸ್ತು ಪ್ರತಿಜ್ಞಾಂ ಕುಂಭಸಂಭವಃ|

07132031c ಪ್ರಾದುಶ್ಚಕ್ರೇಽಸ್ತ್ರಮೈಂದ್ರಂ ವೈ ಪ್ರಾಜಾಪತ್ಯಂ ಚ ಭಾರತ|

07132031e ಜಿಘಾಂಸುರ್ಧರ್ಮತನಯಂ ತವ ಪುತ್ರಹಿತೇ ರತಃ||

ಭಾರತ! ಧರ್ಮತನಯನನ್ನು ಸಂಹರಿಸುತ್ತೇನೆ ಎನ್ನುವ ತನ್ನ ಪ್ರತಿಜ್ಞೆಯನ್ನು ಸತ್ಯಮಾಡಲೋಸುಗ ನಿನ್ನ ಪುತ್ರರ ಹಿತದಲ್ಲಿಯೇ ನಿರತನಾಗಿದ್ದ ಕುಂಭಸಂಭವನು ಐಂದ್ರ ಮತ್ತು ಪ್ರಾಜಪತ್ಯ ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು.

07132032a ಪತಿಃ ಕುರೂಣಾಂ ಗಜಸಿಂಹಗಾಮೀ

        ವಿಶಾಲವಕ್ಷಾಃ ಪೃಥುಲೋಹಿತಾಕ್ಷಃ|

07132032c ಪ್ರಾದುಶ್ಚಕಾರಾಸ್ತ್ರಮಹೀನತೇಜಾ

        ಮಾಹೇಂದ್ರಮನ್ಯತ್ಸ ಜಘಾನ ತೇಽಸ್ತ್ರೇ||

ಆನೆ-ಸಿಂಹಗಳ ನಡುಗೆಯುಳ್ಳ, ವಿಶಾಲವಕ್ಷ, ವಿಶಾಲ ಕೆಂಪು ಕಣ್ಣುಗಳಿದ್ದ, ಕುರುಗಳ ಪತಿ ಯುಧಿಷ್ಠಿರನು ಮತ್ತೊಂದು ಮಹೇಂದ್ರಾಸ್ತ್ರವನ್ನು ಪ್ರಕಟಿಸಿ ಅವನ ಅಸ್ತ್ರದ ತೇಜಸ್ಸನ್ನು ಕುಂದಿಸಿದನು.

07132033a ವಿಹನ್ಯಮಾನೇಷ್ವಸ್ತ್ರೇಷು ದ್ರೋಣಃ ಕ್ರೋಧಸಮನ್ವಿತಃ|

07132033c ಯುಧಿಷ್ಠಿರವಧಪ್ರೇಪ್ಸುರ್ಬ್ರಾಹ್ಮಮಸ್ತ್ರಮುದೈರಯತ್||

ಪ್ರಯೋಗಿಸಿದ ಅಸ್ತ್ರಗಳೆಲ್ಲವೂ ನಿರಸನಗೊಳ್ಳಲು ಕ್ರೋಧಸಮನ್ವಿತನಾದ ದ್ರೋಣನು ಯುಧಿಷ್ಠಿರನ ವಧೆಗೋಸ್ಕರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು.

07132034a ತತೋ ನಾಜ್ಞಾಸಿಷಂ ಕಿಂ ಚಿದ್ಘೋರೇಣ ತಮಸಾವೃತೇ|

07132034c ಸರ್ವಭೂತಾನಿ ಚ ಪರಂ ತ್ರಾಸಂ ಜಗ್ಮುರ್ಮಹೀಪತೇ||

ಮಹೀಪತೇ! ಆಗ ರಣರಂಗವು ಘೋರ ಕತ್ತಲೆಯಿಂದ ಆವೃತವಾಗಿ ಎಲ್ಲಿ ಏನಿದೆಯೆನ್ನುವುದೇ ತಿಳಿಯಲಾಗಲಿಲ್ಲ. ಸರ್ವಭೂತಗಳೂ ಪರಮ ಭಯೋದ್ವಿಗ್ನಗೊಂಡವು.

07132035a ಬ್ರಹ್ಮಾಸ್ತ್ರಮುದ್ಯತಂ ದೃಷ್ಟ್ವಾ ಕುಂತೀಪುತ್ರೋ ಯುಧಿಷ್ಠಿರಃ|

07132035c ಬಹ್ಮಾಸ್ತ್ರೇಣೈವ ರಾಜೇಂದ್ರ ತದಸ್ತ್ರಂ ಪ್ರತ್ಯವಾರಯತ್||

ರಾಜೇಂದ್ರ! ಬ್ರಹ್ಮಾಸ್ತ್ರವು ಪ್ರಯೋಗಿಸಲ್ಪಟ್ಟುದುದನ್ನು ನೋಡಿ ಕುಂತೀಪುತ್ರ ಯುಧಿಷ್ಠಿರನು ಬ್ರಹ್ಮಾಸ್ತ್ರದಿಂದಲೇ ಆ ಅಸ್ತ್ರವನ್ನು ನಿಷ್ಫಲಗೊಳಿಸಿದನು.

07132036a ತತಃ ಸೈನಿಕಮುಖ್ಯಾಸ್ತೇ ಪ್ರಶಶಂಸುರ್ನರರ್ಷಭೌ|

07132036c ದ್ರೋಣಪಾರ್ಥೌ ಮಹೇಷ್ವಾಸೌ ಸರ್ವಯುದ್ಧವಿಶಾರದೌ||

ಆಗ ಅಲ್ಲಿದ್ದ ಸೈನಿಕಮುಖ್ಯರು ಆ ಇಬ್ಬರು ನರರ್ಷಭ ಮಹೇಷ್ವಾಸ ಸರ್ವಯುದ್ಧವಿಶಾರದ ದ್ರೋಣ-ಪಾರ್ಥರನ್ನು ಬಹಳವಾಗಿ ಪ್ರಶಂಸಿಸಿದರು.

07132037a ತತಃ ಪ್ರಮುಚ್ಯ ಕೌಂತೇಯಂ ದ್ರೋಣೋ ದ್ರುಪದವಾಹಿನೀಂ|

07132037c ವ್ಯಧಮದ್ರೋಷತಾಮ್ರಾಕ್ಷೋ ವಾಯವ್ಯಾಸ್ತ್ರೇಣ ಭಾರತ||

ಭಾರತ! ಆಗ ರೋಷದಿಂದ ರಕ್ತಾಕ್ಷನಾದ ದ್ರೋಣನು ಕೌಂತೇಯನನ್ನು ಬಿಟ್ಟು ವಾಯವ್ಯಾಸ್ತ್ರದಿಂದ ದ್ರುಪದನ ಸೇನೆಯನ್ನು ಧ್ವಂಸಮಾಡತೊಡಗಿದನು.

07132038a ತೇ ಹನ್ಯಮಾನಾ ದ್ರೋಣೇನ ಪಾಂಚಾಲಾಃ ಪ್ರಾದ್ರವನ್ಭಯಾತ್|

07132038c ಪಶ್ಯತೋ ಭೀಮಸೇನಸ್ಯ ಪಾರ್ಥಸ್ಯ ಚ ಮಹಾತ್ಮನಃ||

ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಮಹಾತ್ಮ ಭೀಮಸೇನ ಮತ್ತು ಪಾರ್ಥನು ನೋಡುತ್ತಿದ್ದಂತೆಯೇ ಭಯದಿಂದ ಪಲಾಯನಮಾಡಿದರು.

07132039a ತತಃ ಕಿರೀಟೀ ಭೀಮಶ್ಚ ಸಹಸಾ ಸಮ್ನ್ಯವರ್ತತಾಂ|

07132039c ಮಹದ್ಭ್ಯಾಂ ರಥವಂಶಾಭ್ಯಾಂ ಪರಿಗೃಹ್ಯ ಬಲಂ ತವ||

ಆಗ ಕಿರೀಟೀ ಮತ್ತು ಭೀಮರು ಒಮ್ಮೆಲೇ ಮಹಾ ರಥಸೇನೆಗಳ ಮಧ್ಯದಿಂದ ಓಡಿಹೋಗುತ್ತಿದ್ದ ಅವರನ್ನು ತಡೆದು ನಿಲ್ಲಿಸಿ ನಿನ್ನ ಸೇನೆಯನ್ನು ಮುತ್ತಿಗೆ ಹಾಕಿದರು.

07132040a ಬೀಭತ್ಸುರ್ದಕ್ಷಿಣಂ ಪಾರ್ಶ್ವಮುತ್ತರಂ ತು ವೃಕೋದರಃ|

07132040c ಭಾರದ್ವಾಜಂ ಶರೌಘಾಭ್ಯಾಂ ಮಹದ್ಭ್ಯಾಮಭ್ಯವರ್ಷತಾಂ||

ಬೀಭತ್ಸುವು ದಕ್ಷಿಣ ಪಾರ್ಶ್ವದಿಂದಲೂ ವೃಕೋದರನು ಉತ್ತರ ಪಾರ್ಶ್ವದಿಂದಲೂ ಭಾರದ್ವಾಜನ ಮೇಲೆ ಮಹಾ ಶರೌಘಗಳನ್ನು ಸುರಿಸಿದರು.

07132041a ತೌ ತದಾ ಸೃಂಜಯಾಶ್ಚೈವ ಪಾಂಚಾಲಾಶ್ಚ ಮಹೌಜಸಃ|

07132041c ಅನ್ವಗಚ್ಚನ್ಮಹಾರಾಜ ಮತ್ಸ್ಯಾಶ್ಚ ಸಹ ಸಾತ್ವತೈಃ||

ಮಹಾರಾಜ! ಆಗ ಸೃಂಜಯರೂ, ಮಹೌಜಸ ಪಾಂಚಾಲರೂ, ಸಾತ್ವತರೊಂದಿಗೆ ಮತ್ಸ್ಯರೂ ಅವರಿಬ್ಬರನ್ನು ಅನುಸರಿಸಿ ಹೋದರು.

07132042a ತತಃ ಸಾ ಭಾರತೀ ಸೇನಾ ವಧ್ಯಮಾನಾ ಕಿರೀಟಿನಾ|

07132042c ದ್ರೋಣೇನ ವಾರ್ಯಮಾಣಾಸ್ತೇ ಸ್ವಯಂ ತವ ಸುತೇನ ಚ|

07132042e ನಾಶಕ್ಯಂತ ಮಹಾರಾಜ ಯೋಧಾ ವಾರಯಿತುಂ ತದಾ||

ಮಹಾರಾಜ! ಆಗ ಕಿರೀಟಿಯಿಂದ ವಧಿಸಲ್ಪಟ್ಟು ಓಡಿ ಹೋಗುತ್ತಿದ್ದ ಆ ಭಾರತೀ ಸೇನೆಯ ಯೋಧರನ್ನು ದ್ರೋಣನಾಗಲೀ ಸ್ವಯಂ ನಿನ್ನ ಮಗನಾಗಲೀ ನಿಲ್ಲಿಸಲು ಶಕ್ಯರಾಗಲಿಲ್ಲ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದ್ರೋಣಯುಧಿಷ್ಠಿರಯುದ್ಧೇ ದ್ವಾತ್ರಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದ್ರೋಣಯುಧಿಷ್ಠಿರಯುದ್ಧ ಎನ್ನುವ ನೂರಾಮೂವತ್ತೆರಡನೇ ಅಧ್ಯಾಯವು.

Related image

Comments are closed.