Drona Parva: Chapter 123

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೩

ಕರ್ಣನಿಂದ ತನಗಾದ ಅಪಮಾನವನ್ನು ಭೀಮಸೇನನು ಹೇಳಿಕೊಳ್ಳಲು ಅರ್ಜುನನು ಕರ್ಣವಧೆಯ ಮತ್ತು ವೃಷಸೇನನನ್ನು ವಧಿಸುವ ಪ್ರತಿಜ್ಞೆಮಾಡಿದುದು (೧-೧೯). ಪ್ರತಿಜ್ಞೆಯನ್ನು ಪೂರೈಸಿದ ಅರ್ಜುನನೊಂದಿಗೆ ಕೃಷ್ಣನ ಸಂವಾದ (೨೦-೩೦). ಕೃಷ್ಣನು ಅರ್ಜುನನಿಗೆ ರಣಭೂಮಿಯನ್ನು ತೋರಿಸಿ ವರ್ಣಿಸಿದುದು (೩೧-೪೧).

07123001 ಧೃತರಾಷ್ಟ್ರ ಉವಾಚ|

07123001a ತಥಾ ಗತೇಷು ಶೂರೇಷು ತೇಷಾಂ ಮಮ ಚ ಸಂಜಯ|

07123001c ಕಿಂ ವೈ ಭೀಮಸ್ತದಾಕಾರ್ಷೀತ್ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಹೀಗೆ ನನ್ನವರ ಮತ್ತು ಅವರ ಶೂರರು ಹೋಗಲು ಭೀಮನು ಏನು ಮಾಡುತ್ತಿದ್ದನೆನ್ನುವುದನ್ನು ನನಗೆ ಹೇಳು.”

07123002 ಸಂಜಯ ಉವಾಚ|

07123002a ವಿರಥೋ ಭೀಮಸೇನೋ ವೈ ಕರ್ಣವಾಕ್ಶಲ್ಯಪೀಡಿತಃ|

07123002c ಅಮರ್ಷವಶಮಾಪನ್ನಃ ಫಲ್ಗುನಂ ವಾಕ್ಯಮಬ್ರವೀತ್||

ಸಂಜಯನು ಹೇಳಿದನು: “ವಿರಥನಾದ ಭಿಮಸೇನನು ಕರ್ಣನ ಮಾತಿನ ಈಟಿಯಿಂದ ಪೀಡಿತನಾಗಿ, ಕೋಪಾವಿಷ್ಟನಾಗಿ ಫಲ್ಗುನನಿಗೆ ಈ ಮಾತನ್ನಾಡಿದನು:

07123003a ಪುನಃ ಪುನಸ್ತೂಬರಕ ಮೂಢ ಔದರಿಕೇತಿ ಚ|

07123003c ಅಕೃತಾಸ್ತ್ರಕ ಮಾ ಯೋಧೀರ್ಬಾಲ ಸಂಗ್ರಾಮಕಾತರ||

07123004a ಇತಿ ಮಾಮಬ್ರವೀತ್ಕರ್ಣಃ ಪಶ್ಯತಸ್ತೇ ಧನಂಜಯ|

“ಧನಂಜಯ! ನೀನು ನೋಡುತ್ತಿದ್ದಂತೆಯೇ ಕರ್ಣನು ನನಗೆ ಪುನಃ ಪುನಃ “ಗಡ್ಡಮೀಸೆಗಳಿಲ್ಲದವನೇ! ಮೂಢನೇ! ಹೊಟ್ಟೆಬಾಕ!” ಎಂದೂ “ಅಸ್ತ್ರವಿದ್ಯೆಯಲ್ಲಿ ಪರಿಣಿತಿಯಿಲ್ಲದವನೇ! ಬಾಲಕನಂತೆ ಯುದ್ಧಮಾಡುವವನೇ! ಸಂಗ್ರಾಮಭೀರೋ!” ಎಂದೂ ಹೇಳಿದನು.

07123004c ಏವಂ ವಕ್ತಾ ಚ ಮೇ ವಧ್ಯಸ್ತೇನ ಚೋಕ್ತೋಽಸ್ಮಿ ಭಾರತ||

07123005a ಏತದ್ವ್ರತಂ ಮಹಾಬಾಹೋ ತ್ವಯಾ ಸಹ ಕೃತಂ ಮಯಾ|

07123005c ಯಥೈತನ್ಮಮ ಕೌಂತೇಯ ತಥಾ ತವ ನ ಸಂಶಯಃ||

ಭಾರತ! ಹೀಗೆ ನನ್ನನ್ನು ನಿಂದಿಸುವವನನ್ನು ವಧಿಸುತ್ತೇನೆ ಎಂದು ಹೇಳಿದ್ದೆ. ಮಹಾಬಾಹೋ! ಆ ವ್ರತವನ್ನು ನನ್ನೊಂದಿಗೆ ನೀನೂ ಕೂಡ ಕೈಗೊಂಡಿದ್ದೆ. ಕೌಂತೇಯ! ಆದುದರಿಂದ ಇದು ನನ್ನ ಕರ್ತವ್ಯದಂತೆ ನಿನ್ನದೂ ಆಗಿದೆ. ಅದರಲ್ಲಿ ಸಂಶಯವಿಲ್ಲ.

07123006a ತದ್ವಧಾಯ ನರಶ್ರೇಷ್ಠ ಸ್ಮರೈತದ್ವಚನಂ ಮಮ|

07123006c ಯಥಾ ಭವತಿ ತತ್ಸತ್ಯಂ ತಥಾ ಕುರು ಧನಂಜಯ||

ನರಶ್ರೇಷ್ಠ! ಅವನ ವಧೆಯ ಕುರಿತು ನನ್ನ ವಚನವನ್ನು ಸ್ಮರಿಸಿಕೋ. ಧನಂಜಯ! ಅದು ಸತ್ಯವಾಗುವಹಾಗೆ ಮಾಡು!”

07123007a ತಚ್ಚ್ರುತ್ವಾ ವಚನಂ ತಸ್ಯ ಭೀಮಸ್ಯಾಮಿತವಿಕ್ರಮಃ|

07123007c ತತೋಽರ್ಜುನೋಽಬ್ರವೀತ್ಕರ್ಣಂ ಕಿಂ ಚಿದಭ್ಯೇತ್ಯ ಸಂಯುಗೇ||

ಭೀಮನ ಆ ಮಾತನ್ನು ಕೇಳಿ ಅಮಿತವಿಕ್ರಮ ಅರ್ಜುನನು ಸಂಯುಗದಲ್ಲಿ ಕರ್ಣನ ಬಳಿ ಹೋಗಿ ಹೇಳಿದನು:

07123008a ಕರ್ಣ ಕರ್ಣ ವೃಥಾದೃಷ್ಟೇ ಸೂತಪುತ್ರಾತ್ಮಸಂಸ್ತುತ|

07123008c ಅಧರ್ಮಬುದ್ಧೇ ಶೃಣು ಮೇ ಯತ್ತ್ವಾ ವಕ್ಷ್ಯಾಮಿ ಸಾಂಪ್ರತಂ||

“ಕರ್ಣ! ಕರ್ಣ! ವ್ಯರ್ಥ ದೃಷ್ಟಿಯುಳ್ಳವನೇ! ಸೂತಪುತ್ರ! ಆತ್ಮಸಂಸ್ತುತನೇ! ಅಧರ್ಮಬುದ್ಧೇ! ನಾನು ಈಗ ಹೇಳುವುದನ್ನು ಕೇಳು!

07123009a ದ್ವಿವಿಧಂ ಕರ್ಮ ಶೂರಾಣಾಂ ಯುದ್ಧೇ ಜಯಪರಾಜಯೌ|

07123009c ತೌ ಚಾಪ್ಯನಿತ್ಯೌ ರಾಧೇಯ ವಾಸವಸ್ಯಾಪಿ ಯುಧ್ಯತಃ||

ರಾಧೇಯ! ಯುದ್ಧದಲ್ಲಿ ಶೂರರ ಎರಡು ರೀತಿಯ ಕರ್ಮಗಳು: ಜಯ ಮತ್ತು ಪರಾಜಯ. ಯುದ್ಧಮಾಡುವ ವಾಸವನಿಗೆ ಕೂಡ ಇವೆರಡೂ ಅನಿತ್ಯ.

07123010a ಮುಮೂರ್ಷುರ್ಯುಯುಧಾನೇನ ವಿರಥೋಽಸಿ ವಿಸರ್ಜಿತಃ|

07123010c ಯದೃಚ್ಚಯಾ ಭೀಮಸೇನಂ ವಿರಥಂ ಕೃತವಾನಸಿ||

ಯುಯುಧಾನನಿಂದ ವಿರಥನಾಗಿ, ಮೂರ್ಛಿತನಾಗಿ ವಿಸರ್ಜಿಸಲ್ಪಟ್ಟ ನೀನು ಕಷ್ಟಪಟ್ಟು ಭೀಮಸೇನನನ್ನು ವಿರಥನನ್ನಾಗಿ ಮಾಡಿದೆ.

07123011a ಅಧರ್ಮಸ್ತ್ವೇಷ ರಾಧೇಯ ಯತ್ತ್ವಂ ಭೀಮಮವೋಚಥಾಃ|

07123011c ಯುದ್ಧಧರ್ಮಂ ವಿಜಾನನ್ವೈ ಯುಧ್ಯಂತಮಪಲಾಯಿನಂ||

07123011e ಪೂರಯಂತಂ ಯಥಾಶಕ್ತಿ ಶೂರಕರ್ಮಾಹವೇ ತಥಾ|

07123012a ಪಶ್ಯತಾಂ ಸರ್ವಸೈನ್ಯಾನಾಂ ಕೇಶವಸ್ಯ ಮಮೈವ ಚ||

07123012c ವಿರಥೋ ಭೀಮಸೇನೇನ ಕೃತೋಽಸಿ ಬಹುಶೋ ರಣೇ|

07123012e ನ ಚ ತ್ವಾಂ ಪರುಷಂ ಕಿಂ ಚಿದುಕ್ತವಾನ್ಪಾಂಡುನಂದನಃ||

ರಾಧೇಯ! ಅನಂತರ ನೀನು ಭೀಮನಿಗೆ ಮಾತನಾಡಿದ ರೀತಿಯು ಅಧರ್ಮವಾದುದು. ಯುದ್ಧದರ್ಮವನ್ನು ತಿಳಿದು ಪಲಾಯನ ಮಾಡದೇ ಯುದ್ಧಮಾಡುತ್ತಿರುವ, ಯಥಾಶಕ್ತಿಯಾಗಿ ಯುದ್ಧದಲ್ಲಿ ಹೋರಾಡುತ್ತಾ ಸರ್ವ ಸೇನೆಗಳು, ಕೇಶವ ಮತ್ತು ನಾನು ನೋಡುತ್ತಿರುವಂತೆ ಭೀಮಸೇನನು ನಿನ್ನನ್ನು ರಣದಲ್ಲಿ ಅನೇಕ ಬಾರಿ ವಿರಥನನ್ನಾಗಿ ಮಾಡಿದ್ದಾನೆ. ಆದರೆ ಆ ಪಾಂಡುನಂದನನು ಕಠೋರವಾದ ಏನನ್ನೂ ನಿನಗೆ ಹೇಳಿರಲಿಲ್ಲ.

07123013a ಯಸ್ಮಾತ್ತು ಬಹು ರೂಕ್ಷಂ ಚ ಶ್ರಾವಿತಸ್ತೇ ವೃಕೋದರಃ|

07123013c ಪರೋಕ್ಷಂ ಯಚ್ಚ ಸೌಭದ್ರೋ ಯುಷ್ಮಾಭಿರ್ನಿಹತೋ ಮಮ||

ಆದರೆ ನೀನು ಬಹಳ ಕಠೋರವಾಗಿ ವೃಕೋದರನಿಗೆ ಮಾತನಾಡಿದ್ದೀಯೆ. ಮತ್ತು ನನ್ನ ಪರೋಕ್ಷದಲ್ಲಿ ನೀವು ಸೌಭದ್ರನನ್ನು ಸಂಹರಿಸಿದಿರಲ್ಲವೇ!

07123014a ತಸ್ಮಾದಸ್ಯಾವಲೇಪಸ್ಯ ಸದ್ಯಃ ಫಲಮವಾಪ್ನುಹಿ|

07123014c ತ್ವಯಾ ತಸ್ಯ ಧನುಶ್ಚಿನ್ನಮಾತ್ಮನಾಶಾಯ ದುರ್ಮತೇ||

ಆದುದರಿಂದ ಈ ನಿನ್ನ ಅವಹೇಳನೆಗೆ ಸಧ್ಯವೇ ಫಲವನ್ನು ಹೊಂದುತ್ತೀಯೆ. ದುರ್ಮತೇ! ನೀನು ಅವನ ಧನುಸ್ಸನ್ನು ತುಂಡರಿಸಿ ನಿನ್ನದೇ ನಾಶವನ್ನು ನಿಶ್ಚಯಿಸಿರುವೆ.

07123015a ತಸ್ಮಾದ್ವಧ್ಯೋಽಸಿ ಮೇ ಮೂಢ ಸಭೃತ್ಯಬಲವಾಹನಃ|

07123015c ಕುರು ತ್ವಂ ಸರ್ವಕೃತ್ಯಾನಿ ಮಹತ್ತೇ ಭಯಮಾಗತಂ||

ಆದುದರಿಂದ ಮೂಢ! ನಿನ್ನನ್ನು ನಾನು ಸೇವಕ-ಸೇನೆ-ವಾಹನಗಳೊಂದಿಗೆ ವಧಿಸುತ್ತೇನೆ. ನಿನ್ನ ಎಲ್ಲ ಕೆಲಸಗಳನ್ನೂ ಮಾಡಿಕೋ! ಮಹಾ ಭಯವು ಬರಲಿದೆ.

07123016a ಹಂತಾಸ್ಮಿ ವೃಷಸೇನಂ ತೇ ಪ್ರೇಕ್ಷಮಾಣಸ್ಯ ಸಂಯುಗೇ|

07123016c ಯೇ ಚಾನ್ಯೇಽಪ್ಯುಪಯಾಸ್ಯಂತಿ ಬುದ್ಧಿಮೋಹೇನ ಮಾಂ ನೃಪಾಃ|

07123016e ತಾಂಶ್ಚ ಸರ್ವಾನ್ ಹನಿಷ್ಯಾಮಿ ಸತ್ಯೇನಾಯುಧಮಾಲಭೇ||

ಸಂಯುಗದಲ್ಲಿ ನೀನು ನೋಡುತ್ತಿರುವಂತೆಯೇ ವೃಷಸೇನನನ್ನು ಸಂಹರಿಸುತ್ತೇನೆ. ಬುದ್ಧಿಮೋಹದಿಂದ ಬೇರೆ ಯಾವನೃಪರು ನನ್ನೊಡನೆ ಯುದ್ಧಮಾಡುತ್ತಾರೋ ಅವರೆಲ್ಲರನ್ನೂ ಸಂಹರಿಸುತ್ತೇನೆ. ಹಿಡಿದಿರುವ ಆಯುಧದ ಮೇಲೆ ಆಣೆಯಿಡುತ್ತೇನೆ.

07123017a ತ್ವಾಂ ಚ ಮೂಢಾಕೃತಪ್ರಜ್ಞಮತಿಮಾನಿನಮಾಹವೇ|

07123017c ದೃಷ್ಟ್ವಾ ದುರ್ಯೋಧನೋ ಮಂದೋ ಭೃಶಂ ತಪ್ಸ್ಯತಿ ಪಾತಿತಂ||

ಮೂಢ! ಕೃತಜ್ಞನಾದ, ಅತಿಮಾನಿನಿಯಾದ ನೀನೂ ಕೂಡ ಯುದ್ಧದಲ್ಲಿ ಬೀಳುವುದನ್ನು ನೋಡಿ ಮಂದ ದುರ್ಯೋಧನನು ತಪಿಸುತ್ತಾನೆ!”

07123018a ಅರ್ಜುನೇನ ಪ್ರತಿಜ್ಞಾತೇ ವಧೇ ಕರ್ಣಸುತಸ್ಯ ತು|

07123018c ಮಹಾನ್ಸುತುಮುಲಃ ಶಬ್ದೋ ಬಭೂವ ರಥಿನಾಂ ತದಾ||

ಅರ್ಜುನನು ಕರ್ಣನ ಮಗನ ವಧೆಯ ಪ್ರತಿಜ್ಞೆಯನ್ನು ಮಾಡಲು ರಥಿಗಳ ಮಹಾ ತುಮುಲ ಶಬ್ಧವು ಉಂಟಾಯಿತು.

07123019a ತಸ್ಮಿನ್ನಾಕುಲಸಂಗ್ರಾಮೇ ವರ್ತಮಾನೇ ಮಹಾಭಯೇ|

07123019c ಮಂದರಶ್ಮಿಃ ಸಹಸ್ರಾಂಶುರಸ್ತಂ ಗಿರಿಮುಪಾಗಮತ್||

ಮಹಾಭಯಂಕರ ಯುದ್ಧವು ಎಲ್ಲಕಡೆ ನಡೆಯುತ್ತಿರಲು, ಮಂದರಶ್ಮಿ ಸಹಸ್ರಾಂಶುವು ಅಸ್ತಾಚಲವನ್ನು ಸೇರಿದನು.

07123020a ತತೋ ರಾಜನ್ ಹೃಷೀಕೇಶಃ ಸಂಗ್ರಾಮಶಿರಸಿ ಸ್ಥಿತಂ|

07123020c ತೀರ್ಣಪ್ರತಿಜ್ಞಂ ಬೀಭತ್ಸುಂ ಪರಿಷ್ವಜ್ಯೇದಮಬ್ರವೀತ್||

ರಾಜನ್! ಆಗ ಹೃಷೀಕೇಶನು ಪ್ರತಿಜ್ಞೆಯನ್ನು ಪೂರೈಸಿ ಸಂಗ್ರಾಮದ ಶಿರಸ್ಸಿನ ಭಾಗದಲ್ಲಿ ನಿಂತಿದ್ದ ಬೀಭತ್ಸುವನ್ನು ಬಿಗಿದಪ್ಪಿ ಹೇಳಿದನು:

07123021a ದಿಷ್ಟ್ಯಾ ಸಂಪಾದಿತಾ ಜಿಷ್ಣೋ ಪ್ರತಿಜ್ಞಾ ಮಹತೀ ತ್ವಯಾ|

07123021c ದಿಷ್ಟ್ಯಾ ಚ ನಿಹತಃ ಪಾಪೋ ವೃದ್ಧಕ್ಷತ್ರಃ ಸಹಾತ್ಮಜಃ||

“ಒಳ್ಳೆಯದಾಯಿತು ಜಿಷ್ಣೋ! ನಿನ್ನ ಮಹಾ ಪ್ರತಿಜ್ಞೆಯನ್ನು ಪೂರೈಸಿದೆ! ಒಳ್ಳೆಯದಾಯಿತು ವೃದ್ಧಕ್ಷತ್ರನು ಪಾಪಿ ಮಗನೊಂದಿಗೆ ಹತನಾದನು.

07123022a ಧಾರ್ತರಾಷ್ಟ್ರಬಲಂ ಪ್ರಾಪ್ಯ ದೇವಸೇನಾಪಿ ಭಾರತ|

07123022c ಸೀದೇತ ಸಮರೇ ಜಿಷ್ಣೋ ನಾತ್ರ ಕಾರ್ಯಾ ವಿಚಾರಣಾ||

ಜಿಷ್ಣೋ! ಭಾರತ! ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಿ ಸಮರದಲ್ಲಿ ದೇವಸೇನೆಯೂ ಕೂಡ ಕುಸಿಯುತ್ತದೆ. ಅದರಲ್ಲಿ ವಿಚಾರಮಾಡಬೇಕಾಗಿಯೇ ಇಲ್ಲ.

07123023a ನ ತಂ ಪಶ್ಯಾಮಿ ಲೋಕೇಷು ಚಿಂತಯನ್ಪುರುಷಂ ಕ್ವ ಚಿತ್|

07123023c ತ್ವದೃತೇ ಪುರುಷವ್ಯಾಘ್ರ ಯ ಏತದ್ಯೋಧಯೇದ್ಬಲಂ||

ಪುರುಷವ್ಯಾಘ್ರ! ನಾನು ಎಷ್ಟೇ ಯೋಚಿಸಿದರೂ, ನಿನ್ನನ್ನು ಬಿಟ್ಟು ಈ ಸೇನೆಯೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾವ ಪುರುಷನನ್ನೂ ನಾನು ಕಾಣುತ್ತಿಲ್ಲ.

07123024a ಮಹಾಪ್ರಭಾವಾ ಬಹವಸ್ತ್ವಯಾ ತುಲ್ಯಾಧಿಕಾಪಿ ವಾ|

07123024c ಸಮೇತಾಃ ಪೃಥಿವೀಪಾಲಾ ಧಾರ್ತರಾಷ್ಟ್ರಸ್ಯ ಕಾರಣಾತ್|

07123024e ತೇ ತ್ವಾಂ ಪ್ರಾಪ್ಯ ರಣೇ ಕ್ರುದ್ಧಂ ನಾಭ್ಯವರ್ತಂತ ದಂಶಿತಾಃ||

ಮಹಾಪ್ರಭಾವುಳ್ಳ, ನಿನ್ನ ಸಮನಾದ ಅಥವಾ ಅಧಿಕರಾದ ಪೃಥಿವೀಪಾಲರು ಧಾರ್ತರಾಷ್ಟ್ರನ ಕಾರಣದಿಂದ ಒಂದುಗೂಡಿದ್ದಾರೆ. ಕವಚಧಾರಿಗಳಾದ ಅವರು ರಣದಲ್ಲಿ ಕ್ರುದ್ಧನಾದ ನಿನ್ನನ್ನು ಎದುರಿಸಲಾರರು.

07123025a ತವ ವೀರ್ಯಂ ಬಲಂ ಚೈವ ರುದ್ರಶಕ್ರಾಂತಕೋಪಮಂ|

07123025c ನೇದೃಶಂ ಶಕ್ನುಯಾತ್ ಕಶ್ಚಿದ್ರಣೇ ಕರ್ತುಂ ಪರಾಕ್ರಮಂ|

07123025e ಯಾದೃಶಂ ಕೃತವಾನದ್ಯ ತ್ವಮೇಕಃ ಶತ್ರುತಾಪನಃ||

ನಿನ್ನ ವೀರ್ಯ ಮತ್ತು ಬಲವು ರುದ್ರ-ಶಕ್ರರ ಸಮನಾಗಿದೆ. ಶತ್ರುತಾಪನನಾದ ನೀನೊಬ್ಬನೇ ಇಂದು ಮಾಡಿ ತೋರಿಸಿದ ಪರಾಕ್ರಮವನ್ನು ರಣದಲ್ಲಿ ಬೇರೆ ಯಾರೂ ತೋರಿಸಲು ಶಕ್ಯರಿಲ್ಲ.

07123026a ಏವಮೇವ ಹತೇ ಕರ್ಣೇ ಸಾನುಬಂಧೇ ದುರಾತ್ಮನಿ|

07123026c ವರ್ಧಯಿಷ್ಯಾಮಿ ಭೂಯಸ್ತ್ವಾಂ ವಿಜಿತಾರಿಂ ಹತದ್ವಿಷಂ||

ದುರಾತ್ಮ ಕರ್ಣನು ಅವನ ಅನುಯಾಯಿಗಳೊಂದಿಗೆ ಹತನಾದಾಗ ಪುನಃ ಶತ್ರುವನ್ನು ಗೆದ್ದ, ದ್ವೇಷಿಯನ್ನು ಸಂಹರಿಸಿದ ನಿನ್ನನ್ನು ಇನ್ನೂ ಹೊಗಳುತ್ತೇನೆ.”

07123027a ತಮರ್ಜುನಃ ಪ್ರತ್ಯುವಾಚ ಪ್ರಸಾದಾತ್ತವ ಮಾಧವ|

07123027c ಪ್ರತಿಜ್ಞೇಯಂ ಮಯೋತ್ತೀರ್ಣಾ ವಿಬುಧೈರಪಿ ದುಸ್ತರಾ||

ಅರ್ಜುನನು ಅವನಿಗೆ ಉತ್ತರಿಸಿದನು: “ಮಾಧವ! ನಿನ್ನ ಪ್ರಸಾದದಿಂದ ದೇವತೆಗಳಿಗೂ ದುಸ್ತರವಾದ ಈ ಪ್ರತಿಜ್ಞೆಯನ್ನು ನಾನು ಪೂರೈಸಿದ್ದೇನೆ.

07123028a ಅನಾಶ್ಚರ್ಯೋ ಜಯಸ್ತೇಷಾಂ ಯೇಷಾಂ ನಾಥೋಽಸಿ ಮಾಧವ|

07123028c ತ್ವತ್ಪ್ರಸಾದಾನ್ಮಹೀಂ ಕೃತ್ಸ್ನಾಂ ಸಂಪ್ರಾಪ್ಸ್ಯತಿ ಯುಧಿಷ್ಠಿರಃ||

ಮಾಧವ! ಯಾರ ನಾಥನು ನೀನೋ ಅವರ ಜಯವು ಆಶ್ಚರ್ಯವಾದುದೇನಲ್ಲ! ನಿನ್ನ ಪ್ರಸಾದದಿಂದ ಯುಧಿಷ್ಠಿರನು ಈ ಸಂಪೂರ್ಣ ಮಹಿಯನ್ನು ಪಡೆಯುತ್ತಾನೆ.

07123029a ತವೈವ ಭಾರೋ ವಾರ್ಷ್ಣೇಯ ತವೈವ ವಿಜಯಃ ಪ್ರಭೋ|

07123029c ವರ್ಧನೀಯಾಸ್ತವ ವಯಂ ಪ್ರೇಷ್ಯಾಶ್ಚ ಮಧುಸೂದನ||

ಪ್ರಭೋ! ವಾರ್ಷ್ಣೇಯ! ನೀನೇ ಪೊರೆಯುವವನು. ನೀನೇ ವಿಜಯ. ಮಧುಸೂದನ! ನಿನ್ನಿಂದ ನಾವು ವರ್ಧಿಸುತ್ತಿದ್ದೇವೆ. ನಾವು ನಿನ್ನ ಸೇವಕರು!”

07123030a ಏವಮುಕ್ತಃ ಸ್ಮಯನ್ ಕೃಷ್ಣಃ ಶನಕೈರ್ವಾಹಯನ್ ಹಯಾನ್|

07123030c ದರ್ಶಯಾಮಾಸ ಪಾರ್ಥಾಯ ಕ್ರೂರಮಾಯೋಧನಂ ಮಹತ್||

ಹೀಗೆ ಹೇಳಲು ಕೃಷ್ಣನು ಮುಗುಳ್ನಕ್ಕು, ಕುದುರೆಗಳನ್ನು ಮೆಲ್ಲನೆ ನಡೆಸುತ್ತಾ ಕ್ರೂರ ಮಹಾ ರಣವನ್ನು ಪಾರ್ಥನಿಗೆ ತೋರಿಸಿದನು.

07123031 ಶ್ರೀಕೃಷ್ಣ ಉವಾಚ|

07123031a ಪ್ರಾರ್ಥಯಂತೋ ಜಯಂ ಯುದ್ಧೇ ಪ್ರಥಿತಂ ಚ ಮಹದ್ಯಶಃ|

07123031c ಪೃಥಿವ್ಯಾಂ ಶೇರತೇ ಶೂರಾಃ ಪಾರ್ಥಿವಾಸ್ತ್ವಚ್ಚರೈರ್ಹತಾಃ||

ಶ್ರೀಕೃಷ್ಣನು ಹೇಳಿದನು: “ಯುದ್ಧದಲ್ಲಿ ಜಯವನ್ನು ಬಯಸಿ, ಮಹಾ ಯಶಸ್ಸನ್ನು ಕಾಣಲು ಈ ಶೂರ ಪಾರ್ಥಿವರು ನಿನ್ನ ಶರಗಳಿಂದ ಹತರಾಗಿ ಭೂಮಿಯ ಮೇಲೆ ಮಲಗಿದ್ದಾರೆ.

07123032a ವಿಕೀರ್ಣಶಸ್ತ್ರಾಭರಣಾ ವಿಪನ್ನಾಶ್ವರಥದ್ವಿಪಾಃ|

07123032c ಸಂಚಿನ್ನಭಿನ್ನವರ್ಮಾಣೋ ವೈಕ್ಲವ್ಯಂ ಪರಮಂ ಗತಾಃ||

ಶಸ್ತ್ರಾಭರಣಗಳು ಚೆಲ್ಲಿಬಿದ್ದಿವೆ. ಕುದುರೆ-ರಥ-ಆನೆಗಳು ಮುರಿದು ಬಿದ್ದಿವೆ. ಅವರ ಕವಚಗಳು ತುಂಡಾಗಿ ಅಥವಾ ಒಡೆದು ಪರಮ ದುಃಖವನ್ನು ಪಡೆದಿದ್ದಾರೆ.

07123033a ಸಸತ್ತ್ವಾ ಗತಸತ್ತ್ವಾಶ್ಚ ಪ್ರಭಯಾ ಪರಯಾ ಯುತಾಃ|

07123033c ಸಜೀವಾ ಇವ ಲಕ್ಷ್ಯಂತೇ ಗತಸತ್ತ್ವಾ ನರಾಧಿಪಾಃ||

ಕೆಲವರು ಇನ್ನೂ ಜೀವದಿಂದಿದ್ದಾರೆ. ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ. ತೀರಿಹೋದ ನರಾಧಿಪರೂ ಕೂಡ ಪರಮ ಪ್ರಭೆಯಿಂದ ಕೂಡಿದವರಾಗಿದ್ದು ಜೀವದಿಂದಿರುವರೋ ಎನ್ನುವಂತೆ ಕಾಣುತ್ತಿದ್ದಾರೆ.

07123034a ತೇಷಾಂ ಶರೈಃ ಸ್ವರ್ಣಪುಂಖೈಃ ಶಸ್ತ್ರೈಶ್ಚ ವಿವಿಧೈಃ ಶಿತೈಃ|

07123034c ವಾಹನೈರಾಯುಧೈಶ್ಚೈವ ಸಂಪೂರ್ಣಾಂ ಪಶ್ಯ ಮೇದಿನೀಂ||

ಅವರ ಸ್ವರ್ಣಪುಂಖ ಶರಗಳಿಂದ, ವಿವಿಧ ನಿಶಿತ ಶಸ್ತ್ರಗಳಿಂದ, ವಾಹನ-ಆಯುಧಗಳಿಂದ ಮೇದಿನಿಯು ತುಂಬಿಹೋಗಿರುವುದನ್ನು ನೋಡು!

07123035a ವರ್ಮಭಿಶ್ಚರ್ಮಭಿರ್ಹಾರೈಃ ಶಿರೋಭಿಶ್ಚ ಸಕುಂಡಲೈಃ|

07123035c ಉಷ್ಣೀಷೈರ್ಮುಕುಟೈಃ ಸ್ರಗ್ಭಿಶ್ಚೂಡಾಮಣಿಭಿರಂಬರೈಃ||

07123036a ಕಂಠಸೂತ್ರೈರಂಗದೈಶ್ಚ ನಿಷ್ಕೈರಪಿ ಚ ಸುಪ್ರಭೈಃ|

07123036c ಅನ್ಯೈಶ್ಚಾಭರಣೈಶ್ಚಿತ್ರೈರ್ಭಾತಿ ಭಾರತ ಮೇದಿನೀ||

ಭಾರತ! ಕವಚ-ಗುರಾಣಿ-ಹಾರಗಳಿಂದ, ಕುಂಡಲಯುಕ್ತ ಶಿರಗಳಿಂದ, ಶಿರಸ್ತ್ರಾಣ-ಮುಕುಟಗಳಿಂದ, ಮಾಲೆಗಳು-ಚೂಡಾಮಣಿಗಳು-ವಸ್ತ್ರಗಳಿಂದ, ಕಂಠಸೂತ್ರ-ಅಂಗದಗಳಿಂದ, ಪ್ರಭೆಯುಳ್ಳ ನಿಷ್ಕಗಳಿಂದ, ಅನ್ಯ ಬಣ್ಣದ ಆಭರಣಗಳಿಂದ ಮೇದಿನಿಯು ಥಳಥಳಿಸುತ್ತಿದೆ.

07123037a ಚಾಮರೈರ್ವ್ಯಜನೈಶ್ಚಿತ್ರೈರ್ಧ್ವಜೈಶ್ಚಾಶ್ವರಥದ್ವಿಪೈಃ|

07123037c ವಿವಿಧೈಶ್ಚ ಪರಿಸ್ತೋಮೈರಶ್ವಾನಾಂ ಚ ಪ್ರಕೀರ್ಣಕೈಃ||

07123038a ಕುಥಾಭಿಶ್ಚ ವಿಚಿತ್ರಾಭಿರ್ವರೂಥೈಶ್ಚ ಮಹಾಧನೈಃ|

07123038c ಸಂಸ್ತೀರ್ಣಾಂ ವಸುಧಾಂ ಪಶ್ಯ ಚಿತ್ರಪಟ್ಟೈರಿವಾವೃತಾಂ||

ಚಾಮರಗಳಿಂದ, ಬಣ್ಣದ ಕೇತುಗಳಿಂದ, ಧ್ವಜಗಳಿಂದ, ಕುದುರೆ-ರಥ-ಆನೆಗಳಿಂದ, ಕುದುರೆಗಳ ವಿವಿಧ ಪರಿಸ್ತೋಮ-ಪ್ರಕೀರ್ಣಕಗಳಿಂದ, ಕುಥಗಳಿಂದ, ಮಹಾಧನಗಳ ವಿಚಿತ್ರ ವರೂಥಗಳಿಂದ ತುಂಬಿರುವ ಈ ವಸುಧೆಯು ಚಿತ್ರಪಟವನ್ನು ಹೊಡೆದಂತೆ ಕಾಣುತ್ತಿದೆ ನೋಡು!

07123039a ನಾಗೇಭ್ಯಃ ಪತಿತಾನನ್ಯಾನ್ಕಲ್ಪಿತೇಭ್ಯೋ ದ್ವಿಪೈಃ ಸಹ|

07123039c ಸಿಂಹಾನ್ವಜ್ರಪ್ರಣುನ್ನೇಭ್ಯೋ ಗಿರ್ಯಗ್ರೇಭ್ಯ ಇವ ಚ್ಯುತಾನ್||

ಆನೆಗಳ ಮೇಲಿಂದ, ಅನ್ಯರು ಆನೆಗಳೊಡನೆ ಬಿದ್ದಿರುವವರು ಸಿಡಿಲುಬಡಿದ ಪರ್ವತದಿಂದ ಬಿದ್ದ ಸಿಂಹಗಳಂತೆ ತೋರುತ್ತಿದ್ದಾರೆ.

07123040a ಸಂಸ್ಯೂತಾನ್ವಾಜಿಭಿಃ ಸಾರ್ಧಂ ಧರಣ್ಯಾಂ ಪಶ್ಯ ಚಾಪರಾನ್|

07123040c ಪದಾತಿಸಾದಿಸಂಘಾಂಶ್ಚ ಕ್ಷತಜೌಘಪರಿಪ್ಲುತಾನ್||

ಸವಾರಿ ಮಾಡುತ್ತಿರುವ ಕುದುರೆಗಳೊಂದಿಗೆ ಧರಣಿಯ ಮೇಲೆ ಬಿದ್ದಿರುವ ಪದಾತಿ-ಅಶ್ವಾರೋಹಿಗಳು ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವುದನ್ನು ನೋಡು!””

07123041 ಸಂಜಯ ಉವಾಚ|

07123041a ಏವಂ ಸಂದರ್ಶಯನ್ ಕೃಷ್ಣೋ ರಣಭೂಮಿಂ ಕಿರೀಟಿನಃ|

07123041c ಸ್ವೈಃ ಸಮೇತಃ ಸ ಮುದಿತಃ ಪಾಂಚಜನ್ಯಂ ವ್ಯನಾದಯತ್||

ಸಂಜಯನು ಹೇಳಿದನು: “ಹೀಗೆ ರಣಭೂಮಿಯನ್ನು ಕಿರೀಟಿಗೆ ತೋರಿಸುತ್ತಾ ಕೃಷ್ಣನು ತನ್ನವರೊಂದಿಗೆ ಮುದಿತನಾಗಿ ಪಾಂಚಜನ್ಯವನ್ನು ಮೊಳಗಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ತ್ರಿವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ನೂರಾಇಪ್ಪತ್ಮೂರನೇ ಅಧ್ಯಾಯವು.

Image result for lotus against white background

Comments are closed.