Drona Parva: Chapter 118

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೮

ಇನ್ನೊಬ್ಬನೊಡನೆ ಯುದ್ಧಮಾಡುತ್ತಿದ್ದಾಗಿ ಅದೃಶ್ಯನಾಗಿ ಬಾಹುವನ್ನು ತುಂಡರಿಸಿದ ಅರ್ಜುನನನ್ನು ನಿಂದಿಸಿ ಭೂರಿಶ್ರವನು ಪ್ರಾಯೋಪವೇಶ ಮಾಡಿದುದು (೧-೧೯). ಅರ್ಜುನನು ಭೂರಿಶ್ರವನಿಗೆ ಉತ್ತರಿಸಿದುದು (೨೦-೩೦). ಪ್ರಾಯೋಪವೇಶ ಮಾಡಿದ್ದ ಭೂರಿಶ್ರವನನ್ನು ಸಾತ್ಯಕಿಯು ವಧಿಸಿದುದು (೩೧-೫೨).

07118001 ಸಂಜಯ ಉವಾಚ|

07118001a ಸ ಬಾಹುರಪತದ್ಭೂಮೌ ಸಖಡ್ಗಃ ಸಶುಭಾಂಗದಃ|

07118001c ಆದಧಜ್ಜೀವಲೋಕಸ್ಯ ದುಃಖಮುತ್ತಮಮುತ್ತಮಃ||

ಸಂಜಯನು ಹೇಳಿದನು: “ಖಡ್ಗವನ್ನು ಹಿಡಿದಿದ್ದ ಅವನ ಅಂಗದ ಸುಶೋಭಿತ ಉತ್ತಮ ಬಾಹುವು ಜೀವಲೋಕಗಳಿಗೆ ತುಂಬಾ ದುಃಖವನ್ನು ನೀಡುತ್ತಾ ಭೂಮಿಯ ಮೇಲೆ ಬಿದ್ದಿತು.

07118002a ಪ್ರಹರಿಷ್ಯನ್ ಹೃತೋ ಬಾಹುರದೃಶ್ಯೇನ ಕಿರೀಟಿನಾ|

07118002c ವೇಗೇನಾಭ್ಯಪತದ್ಭೂಮೌ ಪಂಚಾಸ್ಯ ಇವ ಪನ್ನಗಃ||

ಅದೃಶ್ಯನಾಗಿದ್ದ ಕಿರೀಟಿಯಿಂದ ಹೊಡೆಯಲ್ಪಟ್ಟು ಕತ್ತರಿಸಲ್ಪಟ್ಟ ಆ ಬಾಹುವು ಐದು ಹೆಡೆಗಳುಳ್ಳ ಸರ್ಪದಂತೆ ವೇಗದಿಂದ ಭೂಮಿಯ ಮೇಲೆ ಬಿದ್ದಿತು.

07118003a ಸ ಮೋಘಂ ಕೃತಮಾತ್ಮಾನಂ ದೃಷ್ಟ್ವಾ ಪಾರ್ಥೇನ ಕೌರವಃ|

07118003c ಉತ್ಸೃಜ್ಯ ಸಾತ್ಯಕಿಂ ಕ್ರೋಧಾದ್ಗರ್ಹಯಾಮಾಸ ಪಾಂಡವಂ||

ತನ್ನ ಕೆಲಸವನ್ನು ಪಾರ್ಥನು ವ್ಯರ್ಥಗೊಳಿಸಿದುದನ್ನು ನೋಡಿ ಕೌರವನು ಸಾತ್ಯಕಿಯನ್ನು ಬಿಟ್ಟು ಕ್ರೋಧದಿಂದ ಪಾಂಡವನನ್ನು ನಿಂದಿಸತೊಡಗಿದನು.

07118004a ನೃಶಂಸಂ ಬತ ಕೌಂತೇಯ ಕರ್ಮೇದಂ ಕೃತವಾನಸಿ|

07118004c ಅಪಶ್ಯತೋ ವಿಷಕ್ತಸ್ಯ ಯನ್ಮೇ ಬಾಹುಮಚಿಚ್ಚಿದಃ||

“ಕೌಂತೇಯ! ಕಾಣಿಸಿಕೊಳ್ಳದೇ, ನಿನ್ನೊಡನೇ ಯುದ್ಧಮಾಡುತ್ತಿರದಿದ್ದ ನನ್ನ ಬಾಹುವನ್ನು ಕತ್ತರಿಸಿ ನೀನು ಈಗ ಅತ್ಯಂತ ಕ್ರೂರಕರ್ಮವನ್ನು ಮಾಡಿರುವೆ!

07118005a ಕಿಂ ನು ವಕ್ಷ್ಯಸಿ ರಾಜಾನಂ ಧರ್ಮಪುತ್ರಂ ಯುಧಿಷ್ಠಿರಂ|

07118005c ಕಿಂ ಕುರ್ವಾಣೋ ಮಯಾ ಸಂಖ್ಯೇ ಹತೋ ಭೂರಿಶ್ರವಾ ಇತಿ||

ರಾಜ ಧರ್ಮಪುತ್ರ ಯುಧಿಷ್ಠಿರನಿಗೆ ಏನೆಂದು ಹೇಳುವೆ? ರಣದಲ್ಲಿ ನನ್ನಿಂದಾಗಿ ಭೂರಿಶ್ರವನು ಹತನಾದನು. ಏನು ಮಾಡಲಿ ಎಂದೇ?

07118006a ಇದಮಿಂದ್ರೇಣ ತೇ ಸಾಕ್ಷಾದುಪದಿಷ್ಟಂ ಮಹಾತ್ಮನಾ|

07118006c ಅಸ್ತ್ರಂ ರುದ್ರೇಣ ವಾ ಪಾರ್ಥ ದ್ರೋಣೇನಾಥ ಕೃಪೇಣ ವಾ||

ಮಹಾತ್ಮ ಸಾಕ್ಷಾತ್ ಇಂದ್ರನು ಇದನ್ನೇ ನಿನಗೆ ಉಪದೇಶಿಸಿದ್ದನೇ? ಪಾರ್ಥ! ರುದ್ರ ಅಥವಾ ದ್ರೋಣ ಅಥವಾ ಕೃಪರು ಈ ಅಸ್ತ್ರವಿದ್ಯೆಯನ್ನೇ ನಿನಗೆ ನೀಡಿದರೇ?

07118007a ನನು ನಾಮ ಸ್ವಧರ್ಮಜ್ಞಸ್ತ್ವಂ ಲೋಕೇಽಭ್ಯಧಿಕಃ ಪರೈಃ|

07118007c ಅಯುಧ್ಯಮಾನಸ್ಯ ಕಥಂ ರಣೇ ಪ್ರಹೃತವಾನಸಿ||

ನೀನು ನಿನ್ನದಾದ ಕ್ಷತ್ರಿಯಧರ್ಮವನ್ನು ಲೋಕದಲ್ಲಿ ಇತರರಿಗಿಂತ ಅಧಿಕವಾಗಿ ತಿಳಿದುಕೊಂಡಿದ್ದೀಯೆ. ರಣದಲ್ಲಿ ನಿನ್ನೊಡನೆ ಯುದ್ಧಮಾಡುತ್ತಿರದವನನ್ನು ನೀನು ಹೇಗೆ ಪ್ರಹರಿಸಿದೆ?

07118008a ನ ಪ್ರಮತ್ತಾಯ ಭೀತಾಯ ವಿರಥಾಯ ಪ್ರಯಾಚತೇ|

07118008c ವ್ಯಸನೇ ವರ್ತಮಾನಾಯ ಪ್ರಹರಂತಿ ಮನಸ್ವಿನಃ||

ಅಜಾಗರೂಕತೆಯಿಂದ ಇರುವವರನ್ನು, ಭೀತರಾದವರನ್ನು, ವಿರಥರಾದವರನ್ನು, ಯಾಚಿಸುತ್ತಿರುವವರನ್ನು, ವ್ಯಸನದಲ್ಲಿರುವವರನ್ನು ಮನಸ್ವಿಗಳು ಪ್ರಹರಿಸುವುದಿಲ್ಲ.

07118009a ಇದಂ ತು ನೀಚಾಚರಿತಮಸತ್ಪುರುಷಸೇವಿತಂ|

07118009c ಕಥಮಾಚರಿತಂ ಪಾರ್ಥ ತ್ವಯಾ ಕರ್ಮ ಸುದುಷ್ಕರಂ||

ನೀಚರು ಆಚರಿಸುವ, ಅಸತ್ಪುರುಷರು ತಮ್ಮದಾಗಿಸಿಕೊಳ್ಳುವಂತ ಈ ಸುದುಷ್ಕರ್ಮ ಕರ್ಮವನ್ನು ಪಾರ್ಥ! ನೀನು ಹೇಗೆ ಮಾಡಿಬಿಟ್ಟೆ?

07118010a ಆರ್ಯೇಣ ಸುಕರಂ ಹ್ಯಾಹುರಾರ್ಯಕರ್ಮ ಧನಂಜಯ|

07118010c ಅನಾರ್ಯಕರ್ಮ ತ್ವಾರ್ಯೇಣ ಸುದುಷ್ಕರತರಂ ಭುವಿ||

ಧನಂಜಯ! ಆರ್ಯರಿಗೆ ಒಳ್ಳೆಯದನ್ನು ಮಾಡುವುದು ತುಂಬಾ ಸುಲಭವೆಂದು ಹೇಳುತ್ತಾರೆ. ಅಂತೆಯೇ ಭುವಿಯಲ್ಲಿ ಆರ್ಯರಿಗೆ ಅನಾರ್ಯಕರ್ಮವನ್ನು ಮಾಡುವುದು ಅಷ್ಟೇ ಕಷ್ಟವಾದುದು.

07118011a ಯೇಷು ಯೇಷು ನರಃ ಪಾರ್ಥ ಯತ್ರ ಯತ್ರ ಚ ವರ್ತತೇ|

07118011c ಆಶು ತಚ್ಚೀಲತಾಮೇತಿ ತದಿದಂ ತ್ವಯಿ ದೃಶ್ಯತೇ||

ಪಾರ್ಥ! ಮನುಷ್ಯನು ಯಾರು ಯಾರೊಡನೆ ಎಲ್ಲೆಲ್ಲಿ ನಡೆದುಕೊಳ್ಳುತ್ತಾನೋ ಅವರ ನಡತೆಗಳನ್ನೇ ತನ್ನದಾಗಿಸಿಕೊಳ್ಳುತ್ತಾನೆ ಎನ್ನುವುದು ನನಗೆ ನಿನ್ನಲ್ಲಿ ಕಾಣುತ್ತಿದೆ.

07118012a ಕಥಂ ಹಿ ರಾಜವಂಶ್ಯಸ್ತ್ವಂ ಕೌರವೇಯೋ ವಿಶೇಷತಃ|

07118012c ಕ್ಷತ್ರಧರ್ಮಾದಪಕ್ರಾಂತಃ ಸುವೃತ್ತಶ್ಚರಿತವ್ರತಃ||

ರಾಜವಂಶದಲ್ಲಿ, ಅದರಲ್ಲೂ ವಿಶೇಷವಾಗಿ, ಕೌರವರಲ್ಲಿ ಜನಿಸಿದ, ಉತ್ತಮವಾಗಿ ನಡೆದುಕೊಂಡು ಬಂದಿರುವ ನೀನು ಹೇಗೆ ತಾನೇ ಕ್ಷತ್ರಧರ್ಮವನ್ನು ಮೀರಿ ವರ್ತಿಸಿದೆ?

07118013a ಇದಂ ತು ಯದತಿಕ್ಷುದ್ರಂ ವಾರ್ಷ್ಣೇಯಾರ್ಥೇ ಕೃತಂ ತ್ವಯಾ|

07118013c ವಾಸುದೇವಮತಂ ನೂನಂ ನೈತತ್ತ್ವಯ್ಯುಪಪದ್ಯತೇ||

ವಾರ್ಷ್ಣೇಯನಿಗೋಸ್ಕರ ನೀನು ಮಾಡಿದ ಈ ಅತಿ ಕ್ಷುದ್ರ ಕಾರ್ಯದಲ್ಲಿ ವಸುದೇವನ ಅಭಿಪ್ರಾಯವು ಇದ್ದೇ ಇದೆ. ನೀನಾಗಿಯೇ ಇದನ್ನು ಮಾಡಿರಲಿಕ್ಕಿಲ್ಲ.

07118014a ಕೋ ಹಿ ನಾಮ ಪ್ರಮತ್ತಾಯ ಪರೇಣ ಸಹ ಯುಧ್ಯತೇ|

07118014c ಈದೃಶಂ ವ್ಯಸನಂ ದದ್ಯಾದ್ಯೋ ನ ಕೃಷ್ಣಸಖೋ ಭವೇತ್||

ಅಜಾಗರುಕನಾಗಿರುವ, ಇನ್ನೊಬ್ಬನೊಡನೆ ಯುದ್ಧಮಾಡುತ್ತಿರುವವನಿಗೆ ಈ ರೀತಿಯ ವ್ಯಸನವನ್ನು ಕೃಷ್ಣಸಖನಲ್ಲದೇ ಬೇರೆ ಯಾರುತಾನೇ ಇಂದು ಕೊಡಬಲ್ಲರು?

07118015a ವ್ರಾತ್ಯಾಃ ಸಂಶ್ಲಿಷ್ಟಕರ್ಮಾಣಃ ಪ್ರಕೃತ್ಯೈವ ವಿಗರ್ಹಿತಾಃ|

07118015c ವೃಷ್ಣ್ಯಂಧಕಾಃ ಕಥಂ ಪಾರ್ಥ ಪ್ರಮಾಣಂ ಭವತಾ ಕೃತಾಃ||

ಪಾರ್ಥ! ವೃಷ್ಣಿ-ಅಂಧಕರು ಸಂಸ್ಕಾರಹೀನರು. ಹಿಂಸೆಯನ್ನೇ ಮಾಡುವವರು. ಸ್ವಭಾವದಲ್ಲಿ ನಿಂದ್ಯರು. ಅವರನ್ನು ನೀನು ಹೇಗೆ ತಾನೇ ಪ್ರಮಾಣಭೂತರೆಂದು ಮಾಡಿಕೊಂಡೆ?”

07118016a ಏವಮುಕ್ತ್ವಾ ಮಹಾಬಾಹುರ್ಯೂಪಕೇತುರ್ಮಹಾಯಶಾಃ|

07118016c ಯುಯುಧಾನಂ ಪರಿತ್ಯಜ್ಯ ರಣೇ ಪ್ರಾಯಮುಪಾವಿಶತ್||

ಹೀಗೆ ಹೇಳಿ ಮಹಾಬಾಹು ಮಹಾಯಶಸ್ವಿ ಯೂಪಕೇತುವು ಯುಯುಧಾನನನ್ನು ಬಿಟ್ಟು ರಣದಲ್ಲಿ ಪ್ರಾಯೋಪವೇಶಮಾಡಿದನು[1].

07118017a ಶರಾನಾಸ್ತೀರ್ಯ ಸವ್ಯೇನ ಪಾಣಿನಾ ಪುಣ್ಯಲಕ್ಷಣಃ|

07118017c ಯಿಯಾಸುರ್ಬ್ರಹ್ಮಲೋಕಾಯ ಪ್ರಾಣಾನ್ಪ್ರಾಣೇಷ್ವಥಾಜುಹೋತ್||

ಆ ಪುಣ್ಯಲಕ್ಷಣನು ತನ್ನ ಎಡಗೈಯಿಂದ ಬಾಣಗಳನ್ನು ಹರಡಿ, ಬ್ರಹ್ಮಲೋಕವನ್ನು ಪಡೆದುಕೊಳ್ಳಬೇಕೆಂಬ ಇಚ್ಛೆಯಿಂದ ಪ್ರಾಣಗಳನ್ನು ಪ್ರಾಣಗಳಲ್ಲಿ ಆಹುತಿಯನ್ನಾಗಿತ್ತನು.

07118018a ಸೂರ್ಯೇ ಚಕ್ಷುಃ ಸಮಾಧಾಯ ಪ್ರಸನ್ನಂ ಸಲಿಲೇ ಮನಃ|

07118018c ಧ್ಯಾಯನ್ಮಹೋಪನಿಷದಂ ಯೋಗಯುಕ್ತೋಽಭವನ್ಮುನಿಃ||

ಅವನು ಯೋಗಯುಕ್ತ ಮುನಿಯಾಗಿ ಸೂರ್ಯನಲ್ಲಿ ದೃಷ್ಟಿಯನ್ನಿರಿಸಿ ಪ್ರಸನ್ನ ಶುಭ್ರ ಮನಸ್ಸಿನಲ್ಲಿ ಮಹಾ ಉಪನಿಷತ್ತನ್ನು ಧ್ಯಾನಿಸತೊಡಗಿದನು.

07118019a ತತಃ ಸ ಸರ್ವಸೇನಾಯಾಂ ಜನಃ ಕೃಷ್ಣಧನಂಜಯೌ|

07118019c ಗರ್ಹಯಾಮಾಸ ತಂ ಚಾಪಿ ಶಶಂಸ ಪುರುಷರ್ಷಭಂ||

ಆಗ ಆ ಸರ್ವ ಸೇನೆಗಳ ಜನರೂ ಕೃಷ್ಣ-ಧನಂಜಯರನ್ನು ನಿಂದಿಸತೊಡಗಿದರು ಮತ್ತು ಆ ಪುರುಷರ್ಷಭನನ್ನು ಪ್ರಶಂಸಿಸಿದರು.

07118020a ನಿಂದ್ಯಮಾನೌ ತಥಾ ಕೃಷ್ಣೌ ನೋಚತುಃ ಕಿಂ ಚಿದಪ್ರಿಯಂ|

07118020c ಪ್ರಶಸ್ಯಮಾನಶ್ಚ ತಥಾ ನಾಹೃಷ್ಯದ್ಯೂಪಕೇತನಃ||

ಹಾಗೆ ನಿಂದಿಸಲ್ಪಟ್ಟರೂ ಕೃಷ್ಣರೀರ್ವರು ಏನೊಂದು ಅಪ್ರಿಯವಾದುದನ್ನೂ ಹೇಳಲಿಲ್ಲ. ಹಾಗೆ ಅವರು ಪ್ರಶಂಸಿಸುತ್ತಿದ್ದರೂ ಯೂಪಕೇತನನು ಹರ್ಷಗೊಳ್ಳಲಿಲ್ಲ.

07118021a ತಾಂಸ್ತಥಾ ವಾದಿನೋ ರಾಜನ್ಪುತ್ರಾಂಸ್ತವ ಧನಂಜಯಃ|

07118021c ಅಮೃಷ್ಯಮಾಣೋ ಮನಸಾ ತೇಷಾಂ ತಸ್ಯ ಚ ಭಾಷಿತಂ||

ರಾಜನ್! ನಿನ್ನ ಪುತ್ರರು ಹಾಗೆ ಮಾತನಾಡುತ್ತಿರಲು ಮತ್ತು ಭೂರಿಶ್ರವಸನು ಹಾಗೆ ಮಾತನಾಡಿದುದನ್ನೂ ಧನಂಜಯನು ಮನಸ್ಸಿನಲ್ಲಿ ಸಹಿಸಿಕೊಳ್ಳಲಿಲ್ಲ.

07118022a ಅಸಂಕ್ರುದ್ಧಮನಾ ವಾಚಾ ಸ್ಮಾರಯನ್ನಿವ ಭಾರತ|

07118022c ಉವಾಚ ಪಾಂಡುತನಯಃ ಸಾಕ್ಷೇಪಮಿವ ಫಲ್ಗುನಃ||

ಭಾರತ! ಆದರೆ ಮನಸ್ಸಿನಿಂದ ಕ್ರುದ್ಧನಾಗದೇ, ಹಿಂದಿನ ಮಾತುಗಳನ್ನು ಸ್ಮರಿಸಿಕೊಳ್ಳುತ್ತಿರುವಂತೆ ಪಾಂಡುತನಯ ಫಲ್ಗುನನು ಆಕ್ಷೇಪಿಸುವಂತೆ ಹೇಳಿದನು:

07118023a ಮಮ ಸರ್ವೇಽಪಿ ರಾಜಾನೋ ಜಾನಂತ್ಯೇತನ್ಮಹಾವ್ರತಂ|

07118023c ನ ಶಕ್ಯೋ ಮಾಮಕೋ ಹಂತುಂ ಯೋ ಮೇ ಸ್ಯಾದ್ಬಾಣಗೋಚರೇ||

“ನನ್ನ ಈ ಮಹಾವ್ರತವು ಎಲ್ಲ ರಾಜರಿಗೂ ತಿಳಿದೇ ಇದೆ. ನನ್ನ ಬಾಣವು ಹೋಗಬಲ್ಲಷ್ಟು ದೂರದವರೆಗೆ ನನ್ನವರನ್ನು ಕೊಲ್ಲಲು ಯಾರಿಗೂ ಶಕ್ಯವಿಲ್ಲ.

07118024a ಯೂಪಕೇತೋ ಸಮೀಕ್ಷ್ಯ ತ್ವಂ ನ ಮಾಂ ಗರ್ಹಿತುಮರ್ಹಸಿ|

07118024c ನ ಹಿ ಧರ್ಮಮವಿಜ್ಞಾಯ ಯುಕ್ತಂ ಗರ್ಹಯಿತುಂ ಪರಂ||

ಯೂಪಕೇತುವೇ! ನನ್ನ ಇದನ್ನು ತಿಳಿದುಕೊಂಡೂ ನನ್ನನ್ನು ನೀನು ನಿಂದಿಸಬಾರದು. ಧರ್ಮವನ್ನು ತಿಳಿಯದೆಯೇ ಇತರರನ್ನು ನಿಂದಿಸುವುದು ಯುಕ್ತವಲ್ಲ.

07118025a ಆತ್ತಶಸ್ತ್ರಸ್ಯ ಹಿ ರಣೇ ವೃಷ್ಣಿವೀರಂ ಜಿಘಾಂಸತಃ|

07118025c ಯದಹಂ ಬಾಹುಮಚ್ಚೈತ್ಸಂ ನ ಸ ಧರ್ಮೋ ವಿಗರ್ಹಿತಃ||

ರಣದಲ್ಲಿ ಖಡ್ಗವನ್ನು ಮೇಲೆತ್ತಿ ವೃಷ್ಣಿವೀರನನ್ನು ಕೊಲ್ಲಲು ಬಂದವನ ಬಾಹುಗಳನ್ನು ನಾನು ಕತ್ತರಿಸುವುದು ನನ್ನ ಧರ್ಮ. ನಿಂದನೀಯವಾದುದಲ್ಲ.

07118026a ನ್ಯಸ್ತಶಸ್ತ್ರಸ್ಯ ಬಾಲಸ್ಯ ವಿರಥಸ್ಯ ವಿವರ್ಮಣಃ|

07118026c ಅಭಿಮನ್ಯೋರ್ವಧಂ ತಾತ ಧಾರ್ಮಿಕಃ ಕೋ ನ ಪೂಜಯೇತ್||

ಅಯ್ಯಾ! ಶಸ್ತ್ರಗಳನ್ನು ಕಳೆದುಕೊಂಡಿದ್ದ, ವಿರಥನಾಗಿದ್ದ, ಕವಚವನ್ನು ಕಳೆದುಕೊಂಡಿದ್ದ ಅಭಿಮನ್ಯುವನ್ನು ವಧಿಸಿದುದು ಯಾವ ಧಾರ್ಮಿಕವಾದುದೆಂದು ಗೌರವಿಸಬೇಕು?”

07118027a ಏವಮುಕ್ತಸ್ತು ಪಾರ್ಥೇನ ಶಿರಸಾ ಭೂಮಿಮಸ್ಪೃಶತ್|

07118027c ಪಾಣಿನಾ ಚೈವ ಸವ್ಯೇನ ಪ್ರಾಹಿಣೋದಸ್ಯ ದಕ್ಷಿಣಂ||

ಪಾರ್ಥನು ಹೀಗೆ ಹೇಳಲು ಭೂರಿಶ್ರವನು ತನ್ನ ತಲೆಯಿಂದ ಭೂಮಿಯನ್ನು ಸ್ಪರ್ಷಿಸಿ ಬಲಗೈಯನ್ನು ಎಡಗೈಯನ್ನು ಎತ್ತಿಕೊಂಡನು.

07118028a ಏತತ್ಪಾರ್ಥಸ್ಯ ತು ವಚಸ್ತತಃ ಶ್ರುತ್ವಾ ಮಹಾದ್ಯುತಿಃ|

07118028c ಯೂಪಕೇತುರ್ಮಹಾರಾಜ ತೂಷ್ಣೀಮಾಸೀದವಾಮ್ಮುಖಃ||

ಮಹಾರಾಜ! ಪಾರ್ಥನ ಈ ಮಾತನ್ನು ಕೇಳಿ ಮಹಾದ್ಯುತಿ ಯೂಪಕೇತುವು ಮುಖಕೆಳಗೆ ಮಾಡಿಕೊಂಡು ಸುಮ್ಮನಾದನು.

07118029 ಅರ್ಜುನ ಉವಾಚ|

07118029a ಯಾ ಪ್ರೀತಿರ್ಧರ್ಮರಾಜೇ ಮೇ ಭೀಮೇ ಚ ವದತಾಂ ವರೇ|

07118029c ನಕುಲೇ ಸಹದೇವೇ ಚ ಸಾ ಮೇ ತ್ವಯಿ ಶಲಾಗ್ರಜ||

ಅರ್ಜುನನು ಹೇಳಿದನು: “ಶಲಾಗ್ರಜ! ಧರ್ಮರಾಜ, ಮಾತನಾಡುವವರಲ್ಲಿ ಶ್ರೇಷ್ಠ ಭೀಮ, ಮತ್ತು ನಕುಲ-ಸಹದೇವರಲ್ಲಿ ಎಷ್ಟು ಪ್ರೀತಿಯಿದೆಯೋ ಅಷ್ಟೇ ಪ್ರೀತಿಯು ನನಗೆ ನಿನ್ನ ಮೇಲೂ ಇದೆ.

07118030a ಮಯಾ ತು ಸಮನುಜ್ಞಾತಃ ಕೃಷ್ಣೇನ ಚ ಮಹಾತ್ಮನಾ|

07118030c ಗಚ್ಚ ಪುಣ್ಯಕೃತಾಽಲ್ಲೋಕಾಂ ಶಿಬಿರೌಶೀನರೋ ಯಥಾ||

ಮಹಾತ್ಮ ಕೃಷ್ಣನ ಮತ್ತು ನನ್ನ ಅನುಜ್ಞಾತನಾಗಿ ಶಿಬಿ-ಔಶೀನರರು ಹೋಗಿರುವ ಪುಣ್ಯಕೃತರ ಲೋಕಗಳಿಗೆ ಹೋಗು!””

07118031 ಸಂಜಯ ಉವಾಚ|

07118031a ತತ ಉತ್ಥಾಯ ಶೈನೇಯೋ ವಿಮುಕ್ತಃ ಸೌಮದತ್ತಿನಾ|

07118031c ಖಡ್ಗಮಾದಾಯ ಚಿಚ್ಚಿತ್ಸುಃ ಶಿರಸ್ತಸ್ಯ ಮಹಾತ್ಮನಃ||

ಸಂಜಯನು ಹೇಳಿದನು: “ಆಗ ಸೌಮದತ್ತಿಯಿಂದ ವಿಮುಕ್ತನಾದ ಶೈನೇಯನು ಖಡ್ಗವನ್ನೆಳೆದು ಆ ಮಹಾತ್ಮನ ಶಿರಸ್ಸನ್ನು ಕತ್ತರಿಸಲು ನಿರ್ಧರಿಸಿದನು.

07118032a ನಿಹತಂ ಪಾಂಡುಪುತ್ರೇಣ ಪ್ರಮತ್ತಂ ಭೂರಿದಕ್ಷಿಣಂ|

07118032c ಇಯೇಷ ಸಾತ್ಯಕಿರ್ಹಂತುಂ ಶಲಾಗ್ರಜಮಕಲ್ಮಷಂ||

ಪಾಂಡುಪುತ್ರನಿಂದ ಹೊಡೆಯಲ್ಪಟ್ಟ, ಪ್ರಮತ್ತನಾಗಿದ್ದ ಭೂರಿದಕ್ಷಿಣ, ಶಲಾಗ್ರಜ ಅಕಲ್ಮಶನನ್ನು ಸಂಹರಿಸಲು ಸಾತ್ಯಕಿಯು ಇಚ್ಛಿಸಿದನು.

07118033a ನಿಕೃತ್ತಭುಜಮಾಸೀನಂ ಚಿನ್ನಹಸ್ತಮಿವ ದ್ವಿಪಂ|

07118033c ಕ್ರೋಶತಾಂ ಸರ್ವಸೈನ್ಯಾನಾಂ ನಿಂದ್ಯಮಾನಃ ಸುದುರ್ಮನಾಃ||

07118034a ವಾರ್ಯಮಾಣಃ ಸ ಕೃಷ್ಣೇನ ಪಾರ್ಥೇನ ಚ ಮಹಾತ್ಮನಾ|

07118034c ಭೀಮೇನ ಚಕ್ರರಕ್ಷಾಭ್ಯಾಮಶ್ವತ್ಥಾಮ್ನಾ ಕೃಪೇಣ ಚ||

07118035a ಕರ್ಣೇನ ವೃಷಸೇನೇನ ಸೈಂಧವೇನ ತಥೈವ ಚ|

07118035c ವಿಕ್ರೋಶತಾಂ ಚ ಸೈನ್ಯಾನಾಮವಧೀತ್ತಂ ಯತವ್ರತಂ||

07118036a ಪ್ರಾಯೋಪವಿಷ್ಟಾಯ ರಣೇ ಪಾರ್ಥೇನ ಚಿನ್ನಬಾಹವೇ|

07118036c ಸಾತ್ಯಕಿಃ ಕೌರವೇಂದ್ರಾಯ ಖಡ್ಗೇನಾಪಾಹರಚ್ಚಿರಃ||

ಸೊಂಡಿಲುಕತ್ತರಿಸಲ್ಪಟ್ಟ ಆನೆಯಂತೆ ಭುಜವು ತುಂಡಾಗಿ ಕುಳಿತಿದ್ದ, ರಣದಲ್ಲಿ ಪಾರ್ಥನಿಂದ ಬಾಹುವು ಕತ್ತರಿಸಲ್ಪಡಲು ಪ್ರಾಯೋಪವಿಷ್ಟನಾಗಿದ್ದ ಕೌರವೇಂದ್ರನ ಶಿರವನ್ನು ಸಾತ್ಕಕಿಯು, ಸರ್ವಸೇನೆಗಳೂ ದುರ್ಮನಸ್ಸುಗಳಿಂದ ಕೂಗಿ ನಿಂದಿಸುತ್ತಿರಲು, ಮಹಾತ್ಮ ಕೃಷ್ಣ ಮತ್ತು ಪಾರ್ಥರು ತಡೆಯುತ್ತಿದ್ದರೂ, ಭೀಮ, ಚಕ್ರರಕ್ಷಕರಿಬ್ಬರು, ಅಶ್ವತ್ಥಾಮ, ಕೃಪ, ಕರ್ಣ, ವೃಷಸೇನ, ಸೈಂಧವನೂ ಕೂಡ ಕೂಗಿ ತಡೆಯುತ್ತಿದ್ದರೂ, ಖಡ್ಗದಿಂದ ಕತ್ತರಿಸಿದನು.

07118037a ನಾಭ್ಯನಂದಂತ ತತ್ಸೈನ್ಯಾಃ ಸಾತ್ಯಕಿಂ ತೇನ ಕರ್ಮಣಾ|

07118037c ಅರ್ಜುನೇನ ಹತಂ ಪೂರ್ವಂ ಯಜ್ಜಘಾನ ಕುರೂದ್ವಹಂ||

ಅರ್ಜುನನಿಂದ ಮೊದಲೇ ಹತನಾದ ಕುರೂದ್ವಹನನ್ನು ಕೊಂದ ಸಾತ್ಯಕಿಯ ಆ ಕರ್ಮವನ್ನು ಸೇನೆಗಳು ಗೌರವಿಸಲಿಲ್ಲ.

07118038a ಸಹಸ್ರಾಕ್ಷಸಮಂ ತತ್ರ ಸಿದ್ಧಚಾರಣಮಾನವಾಃ|

07118038c ಭೂರಿಶ್ರವಸಮಾಲೋಕ್ಯ ಯುದ್ಧೇ ಪ್ರಾಯಗತಂ ಹತಂ||

07118039a ಅಪೂಜಯಂತ ತಂ ದೇವಾ ವಿಸ್ಮಿತಾಸ್ತಸ್ಯ ಕರ್ಮಭಿಃ|

ಅಲ್ಲಿ ಸಿದ್ಧ-ಚಾರಣ-ಮಾನವರು ಯುದ್ಧದಲ್ಲಿ ಪ್ರಾಯಗತನಾಗಿ ಹತನಾದ ಸಹಸ್ರಾಕ್ಷನ ಸಮ ಭೂರಿಶ್ರವಸನನ್ನು ನೋಡಿ ಪೂಜಿಸಿದರು. ಅವನ ಕರ್ಮಗಳ ಕುರಿತು ದೇವತೆಗಳೂ ವಿಸ್ಮಿತರಾದರು.

07118039c ಪಕ್ಷವಾದಾಂಶ್ಚ ಬಹುಶಃ ಪ್ರಾವದಂಸ್ತಸ್ಯ ಸೈನಿಕಾಃ||

07118040a ನ ವಾರ್ಷ್ಣೇಯಸ್ಯಾಪರಾಧೋ ಭವಿತವ್ಯಂ ಹಿ ತತ್ತಥಾ|

07118040c ತಸ್ಮಾನ್ಮನ್ಯುರ್ನ ವಃ ಕಾರ್ಯಃ ಕ್ರೋಧೋ ದುಃಖಕರೋ ನೃಣಾಂ||

ಇದರ ಕುರಿತು ಸೈನಿಕರಲ್ಲಿ ಅನೇಕ ಪಕ್ಷವಾದಗಳು ನಡೆದವು. “ಇದು ವಾರ್ಷ್ಣೇಯನ ಅಪರಾಧವಲ್ಲ. ಹೇಗೆ ಆಗಬೇಕಿತ್ತೋ ಹಾಗೆಯೇ ಆಯಿತು. ಆದುದರಿಂದ ಈ ವಿಷಯದಲ್ಲಿ ಯಾರೂ ಕೋಪಗೊಳ್ಳುವ ಕಾರಣವಿಲ್ಲ. ಕ್ರೋಧವು ಮನುಷ್ಯರ ದುಃಖವನ್ನು ಹೆಚ್ಚಿಸುತ್ತದೆ.

07118041a ಹಂತವ್ಯಶ್ಚೈಷ ವೀರೇಣ ನಾತ್ರ ಕಾರ್ಯಾ ವಿಚಾರಣಾ|

07118041c ವಿಹಿತೋ ಹ್ಯಸ್ಯ ಧಾತ್ರೈವ ಮೃತ್ಯುಃ ಸಾತ್ಯಕಿರಾಹವೇ||

ವೀರನಾದನು ಹತನಾಗಲೇ ಬೇಕು. ಅದರಲ್ಲಿ ವಿಚಾರ ಮಾಡುವುದೇನಿದೆ? ಧಾತ್ರುವೇ ಇವನ ಮೃತ್ಯುವನ್ನು ಆಹವದಲ್ಲಿ ಸಾತ್ಯಕಿಗೆ ವಹಿಸಿದ್ದಿರಬಹುದು.”

07118042 ಸಾತ್ಯಕಿರುವಾಚ|

07118042a ನ ಹಂತವ್ಯೋ ನ ಹಂತವ್ಯ ಇತಿ ಯನ್ಮಾಂ ಪ್ರಭಾಷಥ|

07118042c ಧರ್ಮವಾದೈರಧರ್ಮಿಷ್ಠಾ ಧರ್ಮಕಂಚುಕಮಾಸ್ಥಿತಾಃ||

ಸಾತ್ಯಕಿಯು ಹೇಳಿದನು: “ಕೊಲ್ಲಬೇಡ! ಕೊಲ್ಲಬೇಡ! ಎಂದು ಯಾರೆಲ್ಲ ಹೇಳುತ್ತಿದ್ದೀರೋ ನೀವು ಅಧರ್ಮಿಷ್ಠರಾಗಿದ್ದುಕೊಂಡು ಧರ್ಮದ ಕುರಿತು ವಾದಮಾಡುವವರು. ಧರ್ಮದ ಸೋಗಿನಲ್ಲಿರುವವರು.

07118043a ಯದಾ ಬಾಲಃ ಸುಭದ್ರಾಯಾಃ ಸುತಃ ಶಸ್ತ್ರವಿನಾಕೃತಃ|

07118043c ಯುಷ್ಮಾಭಿರ್ನಿಹತೋ ಯುದ್ಧೇ ತದಾ ಧರ್ಮಃ ಕ್ವ ವೋ ಗತಃ||

ಸುಭದ್ರೆಯ ಮಗ ಬಾಲಕನು ಶಸ್ತ್ರಗಳನ್ನು ಕಳೆದುಕೊಂಡಿದ್ದಾಗ ಯುದ್ಧದಲ್ಲಿ ನಿಮ್ಮಿಂದ ಹತನಾದನಲ್ಲ! ಆಗ ನಿಮ್ಮ ಧರ್ಮವು ಎಲ್ಲಿ ಹೋಗಿತ್ತು?

07118044a ಮಯಾ ತ್ವೇತತ್ಪ್ರತಿಜ್ಞಾತಂ ಕ್ಷೇಪೇ ಕಸ್ಮಿಂಶ್ಚಿದೇವ ಹಿ|

07118044c ಯೋ ಮಾಂ ನಿಷ್ಪಿಷ್ಯ ಸಂಗ್ರಾಮೇ ಜೀವನ್ಹನ್ಯಾತ್ಪದಾ ರುಷಾ|

07118044e ಸ ಮೇ ವಧ್ಯೋ ಭವೇಚ್ಚತ್ರುರ್ಯದ್ಯಪಿ ಸ್ಯಾನ್ಮುನಿವ್ರತಃ||

ನನ್ನನ್ನು ಸಂಗ್ರಾಮದಲ್ಲಿ ಬಹಳವಾಗಿ ಪೀಡಿಸಿ ಜೀವಿಸಿರುವಾಗಲೇ ಕೋಪದಿಂದ ಒದೆಯುವವನನ್ನು ಯಾರೇ ಆಗಿರಲಿ - ಮುನಿಯ ವ್ರತದಲ್ಲಿದ್ದರೂ - ಸಂಹರಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡಿದ್ದೆ.

07118045a ಚೇಷ್ಟಮಾನಂ ಪ್ರತೀಘಾತೇ ಸಭುಜಂ ಮಾಂ ಸಚಕ್ಷುಷಃ|

07118045c ಮನ್ಯಧ್ವಂ ಮೃತಮಿತ್ಯೇವಮೇತದ್ವೋ ಬುದ್ಧಿಲಾಘವಂ|

07118045e ಯುಕ್ತೋ ಹ್ಯಸ್ಯ ಪ್ರತೀಘಾತಃ ಕೃತೋ ಮೇ ಕುರುಪುಂಗವಾಃ||

ಭುಜವನ್ನೆತ್ತಿ ನನ್ನನ್ನು ಸಂಹರಿಸಲು ಅವನು ಬರಲು ನೋಡುತ್ತಿದ್ದರೂ ಕೂಡ ನಾನು ಮೃತನಾದೆನೆಂದೇ ನೀವು ತಿಳಿದುಕೊಂಡಿರಿ. ಇದು ನಿಮ್ಮ ಬುದ್ಧಿಯ ಚಾಕಚಕ್ಯತೆಯಿರಬಹುದು. ಕುರುಪುಂಗವರೇ! ಅವನಿಗೆ ನಾನು ಪ್ರತೀಕಾರವನ್ನು ಮಾಡಿರುವುದು ಯುಕ್ತವೇ ಆಗಿದೆ.

07118046a ಯತ್ತು ಪಾರ್ಥೇನ ಮತ್ಸ್ನೇಹಾತ್ಸ್ವಾಂ ಪ್ರತಿಜ್ಞಾಂ ಚ ರಕ್ಷತಾ|

07118046c ಸಖಡ್ಗೋಽಸ್ಯ ಹೃತೋ ಬಾಹುರೇತೇನೈವಾಸ್ಮಿ ವಂಚಿತಃ||

ಪಾರ್ಥನು ನನ್ನ ಮೇಲಿನ ಸ್ನೇಹದಿಂದ ತನ್ನ ಪ್ರತಿಜ್ಞೆಯನ್ನು ರಕ್ಷಿಸಿ ಖಡ್ಗದಿಂದಿದ್ದ ಅವನ ಬಾಹುವನ್ನು ಕತ್ತರಿಸಿದನು. ಇದರಿಂದ ನಾನು ವಂಚಿತನಾಗಿದ್ದೇನೆ.

07118047a ಭವಿತವ್ಯಂ ಚ ಯದ್ಭಾವಿ ದೈವಂ ಚೇಷ್ಟಯತೀವ ಚ|

07118047c ಸೋಽಯಂ ಹತೋ ವಿಮರ್ದೇಽಸ್ಮಿನ್ಕಿಮತ್ರಾಧರ್ಮಚೇಷ್ಟಿತಂ||

ಆಗುವಂಥಹುದು ಹಾಗೆಯೇ ಆಗುತ್ತದೆ. ದೈವವೇ ಅದನ್ನು ಹಾಗೆ ಮಾಡಿಸುತ್ತದೆ. ಈ ಸಂಗ್ರಾಮದಲ್ಲಿ ಇವನು ಹತನಾದನು. ಇದರಲ್ಲಿ ಅಧರ್ಮವಾದದ್ದಾದರೂ ಏನಿದೆ?

07118048a ಅಪಿ ಚಾಯಂ ಪುರಾ ಗೀತಃ ಶ್ಲೋಕೋ ವಾಲ್ಮೀಕಿನಾ ಭುವಿ|

07118048c ಪೀಡಾಕರಮಮಿತ್ರಾಣಾಂ ಯತ್ಸ್ಯಾತ್ಕರ್ತವ್ಯಮೇವ ತತ್||

ಹಿಂದೆ ಭುವಿಯಲ್ಲಿ ವಾಲ್ಮೀಕಿಯು ಈ ಗೀತವನ್ನು ಶ್ಲೋಕದಲ್ಲಿ ಹೇಳಿದ್ದನು: ಅಮಿತ್ರರನ್ನು ಪೀಡಿಸುವ ಕರ್ತವ್ಯವೇ ಸರಿಯೆಂದು[2]!””

07118049 ಸಂಜಯ ಉವಾಚ|

07118049a ಏವಮುಕ್ತೇ ಮಹಾರಾಜ ಸರ್ವೇ ಕೌರವಪಾಂಡವಾಃ|

07118049c ನ ಸ್ಮ ಕಿಂ ಚಿದಭಾಷಂತ ಮನಸಾ ಸಮಪೂಜಯನ್||

ಸಂಜಯನು ಹೇಳಿದನು: “ಮಹಾರಾಜ! ಹೀಗೆ ಹೇಳಲು ಸರ್ವ ಕೌರವ ಪಾಂಡವರೂ ಏನನ್ನೂ ಹೇಳದೇ ಮನಸ್ಸಿನಲ್ಲಿಯೇ ಅವನನ್ನು ಗೌರವಿಸಿದರು.

07118050a ಮಂತ್ರೈರ್ಹಿ ಪೂತಸ್ಯ ಮಹಾಧ್ವರೇಷು

         ಯಶಸ್ವಿನೋ ಭೂರಿಸಹಸ್ರದಸ್ಯ|

07118050c ಮುನೇರಿವಾರಣ್ಯಗತಸ್ಯ ತಸ್ಯ

         ನ ತತ್ರ ಕಶ್ಚಿದ್ವಧಮಭ್ಯನಂದತ್||

ಮಹಾ ಯಾಗಗಳಲ್ಲಿ ಮಂತ್ರಗಳಿಂದ ಪೂತನಾಗಿದ್ದ ಆ ಯಶಸ್ವಿ ಭೂರಿಸಹಸ್ರದನ, ಅರಣ್ಯಕ್ಕೆ ಹೋದ ಮುನಿಯಂತೆ ಕುಳಿತಿದ್ದ ಅವನ ವಧೆಯನ್ನು ಅಲ್ಲಿದ್ದ ಯಾರೂ ಅಭಿನಂದಿಸಲಿಲ್ಲ.

07118051a ಸುನೀಲಕೇಶಂ ವರದಸ್ಯ ತಸ್ಯ

         ಶೂರಸ್ಯ ಪಾರಾವತಲೋಹಿತಾಕ್ಷಂ|

07118051c ಅಶ್ವಸ್ಯ ಮೇಧ್ಯಸ್ಯ ಶಿರೋ ನಿಕೃತ್ತಂ

         ನ್ಯಸ್ತಂ ಹವಿರ್ಧಾನಮಿವೋತ್ತರೇಣ||

ಆ ವರದ ಶೂರನ ನೀಲಕೇಶವುಳ್ಳ, ಪಾರಿವಾಳದಂತೆ ಕೆಂಪಾದ ಕಣ್ಣುಳ್ಳ ಶಿರವನ್ನು ಅಶ್ವಮೇಧದ ಕುದುರೆಯ ಶಿರವನ್ನು ಕತ್ತರಿಸಿ ಹವಿರ್ಧಾನನದ ನಡುವೆ ಇಡುವಂತೆ ಇಡಲಾಯಿತು.

07118052a ಸ ತೇಜಸಾ ಶಸ್ತ್ರಹತೇನ ಪೂತೋ

         ಮಹಾಹವೇ ದೇಹವರಂ ವಿಸೃಜ್ಯ|

07118052c ಆಕ್ರಾಮದೂರ್ಧ್ವಂ ವರದೋ ವರಾರ್ಹೋ

         ವ್ಯಾವೃತ್ಯ ಧರ್ಮೇಣ ಪರೇಣ ರೋದಸೀ||

ಮಹಾಹವದಲ್ಲಿ ಶಸ್ತ್ರದ ತೇಜಸ್ಸಿನಿಂದ ಹತನಾಗಿ ಪೂತನಾದ ಆ ವರದ ವರಾರ್ಹನು ಶ್ರೇಷ್ಠ ದೇಹವನ್ನು ತೊರೆದು ಧರ್ಮದಿಂದ ಪೃಥ್ವಿಯನ್ನೂ ಆಕಾಶವನ್ನೂ ಅತಿಕ್ರಮಿಸಿ ಊರ್ಧ್ವಲೋಕಕ್ಕೆ ಪ್ರಯಾಣಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೂರಿಶ್ರವೋವಧೇ ಅಷ್ಠದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೂರಿಶ್ರವವಧ ಎನ್ನುವ ನೂರಾಹದಿನೆಂಟನೇ ಅಧ್ಯಾಯವು.

Image result for lotus against white background

[1] ಪ್ರಾಯೋಪವೇಶವೆಂದರೆ ಮರಣಪರ್ಯಂತ ನಿರಶನವ್ರತವನ್ನು ಕೈಗೊಂಡು ಕುಳಿತುಕೊಳ್ಳುವುದು. ಪ್ರಾಯೇಣ ಮರಣಪರ್ಯಂತಮನಶೇನ ಉಪವೇಶಃ - ಪ್ರಾಯೋಪವೇಶಃ

[2] ರಣಾಂಗಣದಲ್ಲಿ ರಾಮನ ಸೇನೆಯನ್ನು ಮೋಹಗೊಳಿಸಲು ಇಂದ್ರಜಿತುವು ಮಾಯಾಸೀತೆಯನ್ನು ನಿರ್ಮಿಸಿ ಅವಳನ್ನು ಸಂಹರಿಸಲು ತೊಡಗಿದಾಗ, ಆಕ್ಷೇಪಿಸಿದ ಹನುಮಂತನಿಗೆ ಅವನು ಹೇಳುತ್ತಾನೆ: “ನ ಹಂತವ್ಯಾಃ ಸ್ತ್ರಿಯ ಇತಿ ಯದ್ಬ್ರವೀಷಿ ಪ್ಲವಂಗಮ| ಸರ್ವಕಾಲಂ ಮನುಷ್ಯೇಣ ವ್ಯವಸಾಯವತಾ ಸದಾ| ಪೀಡಾಕರಮುಮಿತ್ರಾಣಾಂ ಯತ್ಸ್ಯಾತ್ಕರ್ತವ್ಯಮೇವ ತತ್||” ಅರ್ಥಾತ್ “ವಾನರ! ಸ್ತ್ರೀಯರ ವಧೆಯನ್ನು ಮಾಡಕೂಡದೆಂದು ನೀನೇನೋ ಹೇಳುವೆ! ಉದ್ಯೋಗಶೀಲನಾದ ಮನುಷ್ಯನು ಎಲ್ಲ ಕಾಲಗಳಲ್ಲಿ ಶತ್ರುವಿಗೆ ತೊಂದರೆಯನ್ನು ಕೊಡುತ್ತಲೇ ಇರಬೇಕು. ವೀರಪುರುಷನ ಕರ್ತವ್ಯವೇ ಇದು!” [ವಾಲ್ಮೀಕೀ ರಾಮಾಯಣ-ಯುದ್ಧಕಾಂಡ-ಸರ್ಗ ೮೧]

Comments are closed.