Drona Parva: Chapter 116

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೬

ಅರ್ಜುನನು ಸಾತ್ಯಕಿಯನ್ನೂ ಅವನನ್ನು ಆಕ್ರಮಣಿಸಲು ಬರುತ್ತಿದ್ದ ಭೂರಿಶ್ರವನನ್ನೂ ನೋಡಿ ಯುಧಿಷ್ಠಿರನ ಮತ್ತು ಸಾತ್ಯಕಿಯ ರಕ್ಷಣೆಯ ಕುರಿತು ಚಿಂತಿಸಿದುದು (೧-೩೬).

07116001 ಸಂಜಯ ಉವಾಚ|

07116001a ತಮುದ್ಯತಂ ಮಹಾಬಾಹುಂ ದುಃಶಾಸನರಥಂ ಪ್ರತಿ|

07116001c ತ್ವರಿತಂ ತ್ವರಣೀಯೇಷು ಧನಂಜಯಹಿತೈಷಿಣಂ||

07116002a ತ್ರಿಗರ್ತಾನಾಂ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ|

07116002c ಸೇನಾಸಮುದ್ರಮಾವಿಷ್ಟಮಾನರ್ತಂ ಪರ್ಯವಾರಯನ್||

ಸಂಜಯನು ಹೇಳಿದನು: “ದುಃಶಾಸನನ ರಥದ ಮೇಲೆ ಆಕ್ರಮಣಿಸಲು ಸಿದ್ಧನಾಗಿದ್ದ, ಸೇನಾಸಮುದ್ರವನ್ನು ಧೈರ್ಯದಿಂದ ಪ್ರವೇಶಿದ, ಅವಸರದಲ್ಲಿದ್ದವರಲ್ಲಿಯೇ ಹೆಚ್ಚು ತ್ವರೆಮಾಡುತ್ತಿದ್ದ, ಧನಂಜಯನ ಹಿತೈಷಿಯಾದ ಆ ಮಹಾಬಾಹುವನ್ನು ಸುವರ್ಣವಿಕೃತ ಧ್ವಜರಾದ ಮಹೇಷ್ವಾಸ ತ್ರಿಗರ್ತರು ಸುತ್ತುವರೆದರು.

07116003a ಅಥೈನಂ ರಥವಂಶೇನ ಸರ್ವತಃ ಸನ್ನಿವಾರ್ಯ ತೇ|

07116003c ಅವಾಕಿರಂ ಶರವ್ರಾತೈಃ ಕ್ರುದ್ಧಾಃ ಪರಮಧನ್ವಿನಃ||

ಆ ಕ್ರುದ್ಧ ಪರಮಧನ್ವಿಗಳು ರಥಗುಂಪುಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ಶರವ್ರಾತಗಳಿಂದ ಮುಚ್ಚಿ ತಡೆದರು.

07116004a ಅಜಯದ್ರಾಜಪುತ್ರಾಂಸ್ತಾನ್ಯತಮಾನಾನ್ಮಹಾರಣೇ|

07116004c ಏಕಃ ಪಂಚಾಶತಂ ಶತ್ರೂನ್ಸಾತ್ಯಕಿಃ ಸತ್ಯವಿಕ್ರಮಃ||

ರಾಜನ್! ಮಹಾರಣದಲ್ಲಿ ಪ್ರಯತ್ನಿಸುತ್ತಿದ್ದ ಆ ಐನೂರು ಶತ್ರು ರಾಜಪುತ್ರರನ್ನು ಸತ್ಯವಿಕ್ರಮಿ ಸಾತ್ಯಕಿಯೊಬ್ಬನೇ ಸೋಲಿಸಿದನು.

07116005a ಸಂಪ್ರಾಪ್ಯ ಭಾರತೀಮಧ್ಯಂ ತಲಘೋಷಸಮಾಕುಲಂ|

07116005c ಅಸಿಶಕ್ತಿಗದಾಪೂರ್ಣಮಪ್ಲವಂ ಸಲಿಲಂ ಯಥಾ||

07116006a ತತ್ರಾದ್ಭುತಮಪಶ್ಯಾಮ ಶೈನೇಯಚರಿತಂ ರಣೇ|

ಚಪ್ಪಾಳೆ ಘೋಷಗಳಿಂದ ತುಂಬಿಹೋಗಿದ್ದ, ಖಡ್ಗ-ಶಕ್ತಿ-ಗದೆಗಳಿಂದ ತುಂಬಿಹೋಗಿದ್ದ, ನೌಕೆಯೇ ಇಲ್ಲದ ಸಮುದ್ರದಂತಿದ್ದ ಭಾರತೀ ಸೇನೆಯ ಮಧ್ಯದಲ್ಲಿ ಪ್ರವೇಶಿಸಿದ ಶೈನೇಯನು ರಣದಲ್ಲಿ ನಡೆಸಿದ ಅದ್ಭುತವನ್ನು ನೋಡಿದೆವು.

07116006c ಪ್ರತೀಚ್ಯಾಂ ದಿಶಿ ತಂ ದೃಷ್ಟ್ವಾ ಪ್ರಾಚ್ಯಾಂ ಪಶ್ಯಾಮ ಲಾಘವಾತ್||

07116007a ಉದೀಚೀಂ ದಕ್ಷಿಣಾಂ ಪ್ರಾಚೀಂ ಪ್ರತೀಚೀಂ ಪ್ರಸೃತಸ್ತಥಾ|

07116007c ನೃತ್ಯನ್ನಿವಾಚರಚ್ಚೂರೋ ಯಥಾ ರಥಶತಂ ತಥಾ||

ಅವನ ಲಾಘವವು ಎಷ್ಟಿತ್ತೆಂದರೆ ಪಶ್ಚಿಮದಲ್ಲಿ ಅವನನ್ನು ನೋಡಿದರೆ ಪೂರ್ವದಲ್ಲಿಯೂ ನೋಡುತ್ತಿದ್ದೆವು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳಲ್ಲಿ ಮತ್ತು ಇತರ ದಿಕ್ಕುಗಳಲ್ಲಿ ನೂರು ರಥಗಳೂ ಒಂದರಲ್ಲಿಯೇ ಇವೆಯೋ ಎನ್ನುವಂತೆ ಆ ಶೂರನು ಸಂಚರಿಸಿ ಕಾಣಿಸಿಕೊಳ್ಳುತ್ತಿದ್ದನು.

07116008a ತದ್ದೃಷ್ಟ್ವಾ ಚರಿತಂ ತಸ್ಯ ಸಿಂಹವಿಕ್ರಾಂತಗಾಮಿನಃ|

07116008c ತ್ರಿಗರ್ತಾಃ ಸಂನ್ಯವರ್ತಂತ ಸಂತಪ್ತಾಃ ಸ್ವಜನಂ ಪ್ರತಿ||

ಸಿಂಹದಂತೆ ನಡೆಯುತ್ತಿದ್ದ ಆ ವಿಕ್ರಾಂತನ ಚರಿತವನ್ನು ನೋಡಿ ಸಂತಪ್ತ ತ್ರಿಗರ್ತರು ತಮ್ಮವರ ಕಡೆ ಪಲಾಯನಮಾಡಿದರು.

07116009a ತಮನ್ಯೇ ಶೂರಸೇನಾನಾಂ ಶೂರಾಃ ಸಂಖ್ಯೇ ನ್ಯವಾರಯನ್|

07116009c ನಿಯಚ್ಚಂತಃ ಶರವ್ರಾತೈರ್ಮತ್ತಂ ದ್ವಿಪಮಿವಾಂಕುಶೈಃ||

ಆಗ ಶೂರಸೇನರ ಇತರ ಶೂರರು ರಣದಲ್ಲಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ಅವನನ್ನು ಶರವ್ರಾತಗಳಿಂದ ತಡೆದರು.

07116010a ತಾನ್ನ್ಯವಾರಯದಾಯಸ್ತಾನ್ಮುಹೂರ್ತಮಿವ ಸಾತ್ಯಕಿಃ|

07116010c ತತಃ ಕಲಿಂಗೈರ್ಯುಯುಧೇ ಸೋಽಚಿಂತ್ಯಬಲವಿಕ್ರಮಃ||

ಮುಹೂರ್ತದಲ್ಲಿಯೇ ಅವರನ್ನು ಹಿಂದೆಸರಿಸಿ ಅಚಿಂತ್ಯಬಲವಿಕ್ರಮಿ ಸಾತ್ಯಕಿಯು ಕಲಿಂಗರೊಂದಿಗೆ ಯುದ್ಧಮಾಡಿದನು.

07116011a ತಾಂ ಚ ಸೇನಾಮತಿಕ್ರಮ್ಯ ಕಲಿಂಗಾನಾಂ ದುರತ್ಯಯಾಂ|

07116011c ಅಥ ಪಾರ್ಥಂ ಮಹಾಬಾಹುರ್ಧನಂಜಯಮುಪಾಸದತ್||

ಸೋಲಿಸಲು ಕಷ್ಟವಾದ ಕಲಿಂಗರ ಆ ಸೇನೆಯನ್ನೂ ಅತಿಕ್ರಮಿಸಿ ಆ ಮಹಾಬಾಹುವು ಪಾರ್ಥ ಧನಂಜಯನ ಬಳಿ ಬಂದನು.

07116012a ತರನ್ನಿವ ಜಲೇ ಶ್ರಾಂತೋ ಯಥಾ ಸ್ಥಲಮುಪೇಯಿವಾನ್|

07116012c ತಂ ದೃಷ್ಟ್ವಾ ಪುರುಷವ್ಯಾಘ್ರಂ ಯುಯುಧಾನಃ ಸಮಾಶ್ವಸತ್||

ನೀರಿನಲ್ಲಿ ಈಸಿ ಬಳಲಿದ ಈಜುಗಾರನು ದಡವನ್ನು ಸೇರಿದವನಂತೆ ಆ ಪುರುಷವ್ಯಾಘ್ರನನ್ನು ಕಂಡು ಯುಯುಧಾನನು ಆಶ್ವಾಸಿತನಾದನು.

07116013a ತಮಾಯಾಂತಮಭಿಪ್ರೇಕ್ಷ್ಯ ಕೇಶವೋಽರ್ಜುನಮಬ್ರವೀತ್|

07116013c ಅಸಾವಾಯಾತಿ ಶೈನೇಯಸ್ತವ ಪಾರ್ಥ ಪದಾನುಗಃ||

ಬರುತ್ತಿರುವ ಅವನನ್ನು ನೋಡಿ ಕೇಶವನು ಅರ್ಜುನನಿಗೆ ಹೇಳಿದನು: “ಪಾರ್ಥ! ಇಗೋ ನಿನ್ನನ್ನೇ ಅನುಸರಿಸಿ ಶೈನೇಯನು ಇಲ್ಲಿಗೆ ಬಂದಿದ್ದಾನೆ.

07116014a ಏಷ ಶಿಷ್ಯಃ ಸಖಾ ಚೈವ ತವ ಸತ್ಯಪರಾಕ್ರಮಃ|

07116014c ಸರ್ವಾನ್ಯೋಧಾಂಸ್ತೃಣೀಕೃತ್ಯ ವಿಜಿಗ್ಯೇ ಪುರುಷರ್ಷಭಃ||

ಇವನು ನಿನ್ನ ಶಿಷ್ಯ. ಸಖನೂ ಕೂಡ. ಈ ಸತ್ಯಪರಾಕ್ರಮೀ ಪುರುಷರ್ಷಭನು ಸರ್ವಯೋಧರನ್ನೂ ತೃಣೀಕರಿಸಿ ಜಯಿಸಿದ್ದಾನೆ.

07116015a ಏಷ ಕೌರವಯೋಧಾನಾಂ ಕೃತ್ವಾ ಘೋರಮುಪದ್ರವಂ|

07116015c ತವ ಪ್ರಾಣೈಃ ಪ್ರಿಯತರಃ ಕಿರೀಟಿನ್ನೇತಿ ಸಾತ್ಯಕಿಃ||

ಕಿರೀಟೀ! ನಿನ್ನ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯ ಸಾತ್ಯಕಿಯು ಕೌರವಯೋಧರಿಗೆ ಘೋರ ಉಪದ್ರವವನ್ನು ನೀಡಿ ಇಲ್ಲಿಗೆ ಬಂದಿದ್ದಾನೆ.

07116016a ಏಷ ದ್ರೋಣಂ ತಥಾ ಭೋಜಂ ಕೃತವರ್ಮಾಣಮೇವ ಚ|

07116016c ಕದರ್ಥೀಕೃತ್ಯ ವಿಶಿಖೈಃ ಫಲ್ಗುನಾಭ್ಯೇತಿ ಸಾತ್ಯಕಿಃ||

ಇಗೋ! ಸಾತ್ಯಕಿಯು ದ್ರೋಣ ಮತ್ತು ಭೋಜ ಕೃತವರ್ಮನನ್ನೂ ವಿಶಿಖಗಳಿಂದ ಅಲ್ಲಗಾಣಿಸಿ ಫಲ್ಗುನನ ಬಳಿಗೆಂದು ಬಂದಿದ್ದಾನೆ.

07116017a ಧರ್ಮರಾಜಪ್ರಿಯಾನ್ವೇಷೀ ಹತ್ವಾ ಯೋಧಾನ್ವರಾನ್ವರಾನ್|

07116017c ಶೂರಶ್ಚೈವ ಕೃತಾಸ್ತ್ರಶ್ಚ ಫಲ್ಗುನಾಭ್ಯೇತಿ ಸಾತ್ಯಕಿಃ||

ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಬಯಸಿ, ಶ್ರೇಷ್ಠರಲ್ಲಿ ಶ್ರೇಷ್ಠ ಯೋಧರನ್ನು ಸಂಹರಿಸಿ ಕೃತಾಸ್ತ್ರ ಸಾತ್ಯಕಿಯು ಫಲ್ಗುನನ ಬಳಿಗೆಂದು ಬಂದಿದ್ದಾನೆ.

07116018a ಕೃತ್ವಾ ಸುದುಷ್ಕರಂ ಕರ್ಮ ಸೈನ್ಯಮಧ್ಯೇ ಮಹಾಬಲಃ|

07116018c ತವ ದರ್ಶನಮನ್ವಿಚ್ಚನ್ಪಾಂಡವಾಭ್ಯೇತಿ ಸಾತ್ಯಕಿಃ||

ಪಾಂಡವ! ಸೇನೆಯ ಮಧ್ಯದಲ್ಲಿ ಸುದುಷ್ಕರ ಕರ್ಮಗಳನ್ನು ಮಾಡಿ ನಿನ್ನ ದರ್ಶನವನ್ನು ಬಯಸಿ ಮಹಾಬಲ ಸಾತ್ಯಕಿಯು ಬಂದಿದ್ದಾನೆ.

07116019a ಬಹೂನೇಕರಥೇನಾಜೌ ಯೋಧಯಿತ್ವಾ ಮಹಾರಥಾನ್|

07116019c ಆಚಾರ್ಯಪ್ರಮುಖಾನ್ಪಾರ್ಥ ಆಯಾತ್ಯೇಷ ಹಿ ಸಾತ್ಯಕಿಃ||

ಪಾರ್ಥ! ಏಕರಥನಾಗಿ ಆಚಾರ್ಯನೇ ಮೊದಲಾದ ಮಹಾರಥರೊಡನೆ ಯುದ್ಧಮಾಡಿ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ.

07116020a ಸ್ವಬಾಹುಬಲಮಾಶ್ರಿತ್ಯ ವಿದಾರ್ಯ ಚ ವರೂಥಿನೀಂ|

07116020c ಪ್ರೇಷಿತೋ ಧರ್ಮಪುತ್ರೇಣ ಪರ್ಥೈಷೋಽಭ್ಯೇತಿ ಸಾತ್ಯಕಿಃ||

ಧರ್ಮಪುತ್ರನಿಂದ ಕಳುಹಿಸಲ್ಪಟ್ಟ ಸಾತ್ಯಕಿಯು ಸ್ವಬಾಹುಬಲವನ್ನೇ ಆಶ್ರಯಿಸಿ ಸೇನೆಯನ್ನು ಭೇದಿಸಿ ನಿನ್ನ ಬಳಿ ಬಂದಿದ್ದಾನೆ.

07116021a ಯಸ್ಯ ನಾಸ್ತಿ ಸಮೋ ಯೋಧಃ ಕೌರವೇಷು ಕಥಂ ಚನ|

07116021c ಸೋಽಯಮಾಯಾತಿ ಕೌಂತೇಯ ಸಾತ್ಯಕಿಃ ಸತ್ಯವಿಕ್ರಮಃ||

ಕೌಂತೇಯ! ಇಲ್ಲಿಗೆ ಬಂದ ಸತ್ಯವಿಕ್ರಮಿ ಸಾತ್ಯಕಿಯ ಸಮನಾದ ಯೋಧನು ಕೌರವರಲ್ಲಿ ಯಾರೂ ಇಲ್ಲ.

07116022a ಕುರುಸೈನ್ಯಾದ್ವಿಮುಕ್ತೋ ವೈ ಸಿಂಹೋ ಮಧ್ಯಾದ್ಗವಾಮಿವ|

07116022c ನಿಹತ್ಯ ಬಹುಲಾಃ ಸೇನಾಃ ಪಾರ್ಥೈಷೋಽಭ್ಯೇತಿ ಸಾತ್ಯಕಿಃ||

ಪಾರ್ಥ! ಗೋವುಗಳ ಮಧ್ಯದಿಂದ ಬರುವ ಸಿಂಹದಂತೆ ಸಾತ್ಯಕಿಯು ಬಹಳ ಸೇನೆಗಳನ್ನು ಸಂಹರಿಸಿ ಇಲ್ಲಿಗೆ ಬಂದಿದ್ದಾನೆ.

07116023a ಏಷ ರಾಜಸಹಸ್ರಾಣಾಂ ವಕ್ತ್ರೈಃ ಪಂಕಜಸನ್ನಿಭೈಃ|

07116023c ಆಸ್ತೀರ್ಯ ವಸುಧಾಂ ಪಾರ್ಥ ಕ್ಷಿಪ್ರಮಾಯಾತಿ ಸಾತ್ಯಕಿಃ||

ಪಾರ್ಥ! ಸಹಸ್ರಾರು ರಾಜರ ಕಮಲಗಳಂತಿದ್ದ ಶಿರಗಳನ್ನು ಕತ್ತರಿಸಿ ಭೂಮಿಯ ಮೇಲೆ ಚೆಲ್ಲಿ ಬೇಗನೇ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ.

07116024a ಏಷ ದುರ್ಯೋಧನಂ ಜಿತ್ವಾ ಭ್ರಾತೃಭಿಃ ಸಹಿತಂ ರಣೇ|

07116024c ನಿಹತ್ಯ ಜಲಸಂಧಂ ಚ ಕ್ಷಿಪ್ರಮಾಯಾತಿ ಸಾತ್ಯಕಿಃ||

ಈ ಸಾತ್ಯಕಿಯು ರಣದಲ್ಲಿ ಸಹೋದರರೊಂದಿಗೆ ದುರ್ಯೋದನನನ್ನು ಸೋಲಿಸಿ, ಜಲಸಂಧನನ್ನೂ ಸಂಹರಿಸಿ ಬೇಗನೆ ಇಲ್ಲಿಗೆ ಬಂದಿದ್ದಾನೆ.

07116025a ರುಧಿರೌಘವತೀಂ ಕೃತ್ವಾ ನದೀಂ ಶೋಣಿತಕರ್ದಮಾಂ|

07116025c ತೃಣವನ್ನ್ಯಸ್ಯ ಕೌರವ್ಯಾನೇಷ ಆಯಾತಿ ಸಾತ್ಯಕಿಃ||

ರಕ್ತ-ಮಾಂಸಗಳ ನದಿಯು ರಕ್ತದ ಪ್ರವಾಹದಿಂದ ಹರಿಯುವಂತೆ ಮಾಡಿ, ಕೌರವರನ್ನು ಹುಲ್ಲುಗಳಂತೆ ಮಾಡಿ ಸಾತ್ಯಕಿಯು ಬರುತ್ತಿದ್ದಾನೆ.”

07116026a ತತೋಽಪ್ರಹೃಷ್ಟಃ ಕೌಂತೇಯಃ ಕೇಶವಂ ವಾಕ್ಯಮಬ್ರವೀತ್|

07116026c ನ ಮೇ ಪ್ರಿಯಂ ಮಹಾಬಾಹೋ ಯನ್ಮಾಮಭ್ಯೇತಿ ಸಾತ್ಯಕಿಃ||

ಆಗ ಅಸಂತೋಷದಿಂದ ಕೌಂತೇಯನು ಕೇಶವನಿಗೆ ಹೇಳಿದನು: “ಮಹಾಬಾಹೋ! ಸಾತ್ಯಕಿಯು ನನ್ನ ಬಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿಲ್ಲ.

07116027a ನ ಹಿ ಜಾನಾಮಿ ವೃತ್ತಾಂತಂ ಧರ್ಮರಾಜಸ್ಯ ಕೇಶವ|

07116027c ಸಾತ್ವತೇನ ವಿಹೀನಃ ಸ ಯದಿ ಜೀವತಿ ವಾ ನ ವಾ||

ಕೇಶವ! ಸಾತ್ವತನಿಲ್ಲದೇ ಧರ್ಮರಾಜನು ಜೀವಂತವಾಗಿದ್ದಾನೋ ಅಥವಾ ಇಲ್ಲವೋ ಎಂಬ ವೃತ್ತಾಂತವನ್ನು ನಾನು ಅರಿತಿಲ್ಲ.

07116028a ಏತೇನ ಹಿ ಮಹಾಬಾಹೋ ರಕ್ಷಿತವ್ಯಃ ಸ ಪಾರ್ಥಿವಃ|

07116028c ತಮೇಷ ಕಥಮುತ್ಸೃಜ್ಯ ಮಮ ಕೃಷ್ಣ ಪದಾನುಗಃ||

ಮಹಾಬಾಹೋ! ಇವನೇ ಪಾರ್ಥಿವನನ್ನು ರಕ್ಷಿಸಬೇಕಾಗಿತ್ತು. ಹಾಗಿರುವಾಗ ಕೃಷ್ಣ! ಅವನನ್ನು ಬಿಟ್ಟು ಇವನು ಏಕೆ ನನ್ನನ್ನು ಅನುಸರಿಸಿ ಬಂದಿದ್ದಾನೆ?

07116029a ರಾಜಾ ದ್ರೋಣಾಯ ಚೋತ್ಸೃಷ್ಟಃ ಸೈಂಧವಶ್ಚಾನಿಪಾತಿತಃ|

07116029c ಪ್ರತ್ಯುದ್ಯಾತಶ್ಚ ಶೈನೇಯಮೇಷ ಭೂರಿಶ್ರವಾ ರಣೇ||

ರಾಜನನ್ನು ದ್ರೋಣನಿಗಾಗಿ ಬಿಟ್ಟು ಬಿಟ್ಟಿದ್ದಾನೆ. ಸೈಂಧವನ ಪತನವಿನ್ನೂ ಆಗಿಲ್ಲ. ರಣದಲ್ಲಿ ಭೂರಿಶ್ರವನು ಶೈನೇಯನನ್ನು ಆಕ್ರಮಣಿಸಲು ಮುಂದೆ ಬರುತ್ತಿದ್ದಾನೆ.

07116030a ಸೋಽಯಂ ಗುರುತರೋ ಭಾರಃ ಸೈಂಧವಾನ್ಮೇ ಸಮಾಹಿತಃ|

07116030c ಜ್ಞಾತವ್ಯಶ್ಚ ಹಿ ಮೇ ರಾಜಾ ರಕ್ಷಿತವ್ಯಶ್ಚ ಸಾತ್ಯಕಿಃ||

ಸೈಂಧವನ ಕುರಿತಾದ ಈ ಗುರುತರ ಭಾರವನ್ನು ಹೊತ್ತಿರುವ ನಾನು ರಾಜನ ಕುರಿತೂ ಚಿಂತಿಸಬೇಕು ಮತ್ತು ಸಾತ್ಯಕಿಯನ್ನೂ ರಕ್ಷಿಸಬೇಕಾಗಿದೆ.

07116031a ಜಯದ್ರಥಶ್ಚ ಹಂತವ್ಯೋ ಲಂಬತೇ ಚ ದಿವಾಕರಃ|

07116031c ಶ್ರಾಂತಶ್ಚೈಷ ಮಹಾಬಾಹುರಲ್ಪಪ್ರಾಣಶ್ಚ ಸಾಂಪ್ರತಂ||

ದಿವಾಕರನು ಇಳಿಯುತ್ತಿದ್ದಾನೆ. ಜಯದ್ರಥನನ್ನೂ ಕೊಲ್ಲಬೇಕಾಗಿದೆ. ಮಹಾಬಾಹು ಸಾತ್ಯಕಿಯಾದರೋ ಬಳಲಿದ್ದಾನೆ. ಆಯುಧಗಳು ಕಡಿಮೆಯಾಗಿವೆ.

07116032a ಪರಿಶ್ರಾಂತಾ ಹಯಾಶ್ಚಾಸ್ಯ ಹಯಯಂತಾ ಚ ಮಾಧವ|

07116032c ನ ಚ ಭೂರಿಶ್ರವಾಃ ಶ್ರಾಂತಃ ಸಸಹಾಯಶ್ಚ ಕೇಶವ||

ಮಾಧವ! ಕೇಶವ! ಅವನ ಕುದುರೆಗಳೂ ಸಾರಥಿಯೂ ಬಳಲಿದ್ದಾರೆ. ಸಹಾಯವುಳ್ಳ ಭೂರಿಶ್ರವನು ಬಳಲಿಲ್ಲ.

07116033a ಅಪೀದಾನೀಂ ಭವೇದಸ್ಯ ಕ್ಷೇಮಮಸ್ಮಿನ್ಸಮಾಗಮೇ|

07116033c ಕಚ್ಚಿನ್ನ ಸಾಗರಂ ತೀರ್ತ್ವಾ ಸಾತ್ಯಕಿಃ ಸತ್ಯವಿಕ್ರಮಃ|

07116033e ಗೋಷ್ಪದಂ ಪ್ರಾಪ್ಯ ಸೀದೇತ ಮಹೌಜಾಃ ಶಿನಿಪುಂಗವಃ||

ಈ ಸಮಾಗಮದಲ್ಲಿ ಅವನು ಸುರಕ್ಷಿತನಾಗಿರಬಲ್ಲನೇ? ಸಾಗರವನ್ನು ಈಸಿಬಂದಿರುವ ಸತ್ಯವಿಕ್ರಮಿ ಸಾತ್ಯಕಿ ಮಹೋಜಸ ಶಿನಿಪುಂಗವನು ಈಗ ಗೋವಿನ ಪಾದದ ಗುಳಿಯನ್ನು ತಲುಪಿ ಎಡವಿ ಬೀಳಬಲ್ಲನೇ?

07116034a ಅಪಿ ಕೌರವಮುಖ್ಯೇನ ಕೃತಾಸ್ತ್ರೇಣ ಮಹಾತ್ಮನಾ|

07116034c ಸಮೇತ್ಯ ಭೂರಿಶ್ರವಸಾ ಸ್ವಸ್ತಿಮಾನ್ಸಾತ್ಯಕಿರ್ಭವೇತ್||

ಕೌರವ ಮುಖ್ಯ ಕೃತಾಸ್ತ್ರ ಮಹಾತ್ಮ ಭೂರಿಶ್ರವನನ್ನು ಎದುರಿಸಿ ಸಾತ್ಯಕಿಯು ಕ್ಷೇಮದಿಂದಿರಬಲ್ಲನೇ?

07116035a ವ್ಯತಿಕ್ರಮಮಿಮಂ ಮನ್ಯೇ ಧರ್ಮರಾಜಸ್ಯ ಕೇಶವ|

07116035c ಆಚಾರ್ಯಾದ್ಭಯಮುತ್ಸೃಜ್ಯ ಯಃ ಪ್ರೇಷಯತಿ ಸಾತ್ಯಕಿಂ||

ಕೇಶವ! ಆಚಾರ್ಯನ ಭಯವನ್ನು ಕಡೆಗಣಿಸಿ ಸಾತ್ಯಕಿಯನ್ನು ಕಳುಹಿಸಿರುವುದು ಧರ್ಮರಾಜನ ಒಂದು ದೊಡ್ಡ ತಪ್ಪೆಂದು ಭಾವಿಸುತ್ತೇನೆ.

07116036a ಗ್ರಹಣಂ ಧರ್ಮರಾಜಸ್ಯ ಖಗಃ ಶ್ಯೇನ ಇವಾಮಿಷಂ|

07116036c ನಿತ್ಯಮಾಶಂಸತೇ ದ್ರೋಣಃ ಕಚ್ಚಿತ್ಸ್ಯಾತ್ಕುಶಲೀ ನೃಪಃ||

ಪಕ್ಷಿ ಗಿಡುಗವು ಮಾಂಸವನ್ನು ಹೇಗೋ ಹಾಗೆ ದ್ರೋಣನು ಧರ್ಮರಾಜನನ್ನು ಹಿಡಿಯಲು ಸದಾ ಬಯಸುತ್ತಿರುತ್ತಾನೆ. ನೃಪನು ಕುಶಲನಾಗಿರುವನೋ ಎನೋ!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕರ್ಜುನದರ್ಶನೇ ಷೋಡಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕರ್ಜುನದರ್ಶನ ಎನ್ನುವ ನೂರಾಹದಿನಾರನೇ ಅಧ್ಯಾಯವು.

Image result for lotus against white background

Comments are closed.