Drona Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ಧೃತರಾಷ್ಟ್ರನ ಪ್ರಶ್ನೆ (೧-೪೯).

07001001 ಜನಮೇಜಯ ಉವಾಚ|

07001001a ತಮಪ್ರತಿಮಸತ್ತ್ವೌಜೋಬಲವೀರ್ಯಪರಾಕ್ರಮಂ|

07001001c ಹತಂ ದೇವವ್ರತಂ ಶ್ರುತ್ವಾ ಪಾಂಚಾಲ್ಯೇನ ಶಿಖಂಡಿನಾ||

07001002a ಧೃತರಾಷ್ಟ್ರಸ್ತದಾ ರಾಜಾ ಶೋಕವ್ಯಾಕುಲಚೇತನಃ|

07001002c ಕಿಮಚೇಷ್ಟತ ವಿಪ್ರರ್ಷೇ ಹತೇ ಪಿತರಿ ವೀರ್ಯವಾನ್||

ಜನಮೇಜಯನು ಹೇಳಿದನು: “ವಿಪ್ರರ್ಷೇ! ಪಾಂಚಾಲ್ಯ ಶಿಖಂಡಿಯಿಂದ ತನ್ನ ತಂದೆ ಆ ಅಪ್ರತಿಮ ಸತ್ತ್ವ ತೇಜೋಬಲವೀರ್ಯಪರಾಕ್ರಮಿ ವೀರ್ಯವಾನ ದೇವವ್ರತನು ಹತನಾದನೆಂದು ಕೇಳಿ ಶೋಕವ್ಯಾಕುಲಚೇತಸ ರಾಜ ಧೃತರಾಷ್ಟ್ರನು ಏನು ಮಾಡಿದನು?

07001003a ತಸ್ಯ ಪುತ್ರೋ ಹಿ ಭಗವನ್ಭೀಷ್ಮದ್ರೋಣಮುಖೈ ರಥೈಃ|

07001003c ಪರಾಜಿತ್ಯ ಮಹೇಷ್ವಾಸಾನ್ಪಾಂಡವಾನ್ರಾಜ್ಯಮಿಚ್ಚತಿ||

ಭಗವನ್! ಅವನ ಮಗನು ಭೀಷ್ಮದ್ರೋಣಪ್ರಮುಖ ರಥಿಗಳಿಂದ ಮಹೇಷ್ವಾಸ ಪಾಂಡವರನ್ನು ಪರಾಜಯಗೊಳಿಸಿ ರಾಜ್ಯವನ್ನು ಬಯಸಿದ್ದನು.

07001004a ತಸ್ಮಿನ್ ಹತೇ ತು ಭಗವನ್ಕೇತೌ ಸರ್ವಧನುಷ್ಮತಾಂ|

07001004c ಯದಚೇಷ್ಟತ ಕೌರವ್ಯಸ್ತನ್ಮೇ ಬ್ರೂಹಿ ದ್ವಿಜೋತ್ತಮ||

ಭಗವನ್! ದ್ವಿಜೋತ್ತಮ! ಸರ್ವಧನುಷ್ಮತರಿಗೆ ಕೇತುಪ್ರಾಯನಾದ ಅವನು ಹತನಾಗಲು ಕೌರವ್ಯನು ಏನು ಮಾಡಿದನು ಎಂದು ನನಗೆ ಹೇಳು.”

07001005 ವೈಶಂಪಾಯನ ಉವಾಚ|

07001005a ನಿಹತಂ ಪಿತರಂ ಶ್ರುತ್ವಾ ಧೃತರಾಷ್ಟ್ರೋ ಜನಾಧಿಪಃ|

07001005c ಲೇಭೇ ನ ಶಾಂತಿಂ ಕೌರವ್ಯಶ್ಚಿಂತಾಶೋಕಪರಾಯಣಃ||

ವೈಶಂಪಾಯನನು ಹೇಳಿದನು: “ತಂದೆಯ ಮರಣವನ್ನು ಕೇಳಿ ಜನಾಧಿಪ ಕೌರವ್ಯ ಧೃತರಾಷ್ಟ್ರನು ಚಿಂತಾಶೋಕಪರಾಯಣನಾಗಿ ಶಾಂತಿಯನ್ನು ಪಡೆಯಲಿಲ್ಲ.

07001006a ತಸ್ಯ ಚಿಂತಯತೋ ದುಃಖಮನಿಶಂ ಪಾರ್ಥಿವಸ್ಯ ತತ್|

07001006c ಆಜಗಾಮ ವಿಶುದ್ಧಾತ್ಮಾ ಪುನರ್ಗಾವಲ್ಗಣಿಸ್ತದಾ||

ಹೀಗೆ ಯಾವಾಗಲೂ ಭೀಷ್ಮನ ಕುರಿತು ಚಿಂತಿಸಿ ದುಃಖಿಸುತ್ತಿದ್ದ ಆ ಪಾರ್ಥಿವನ ಬಳಿ ವಿಶುದ್ಧಾತ್ಮಾ ಗಾವಲ್ಗಣಿಯು ಪುನಃ ಬಂದನು.

07001007a ಶಿಬಿರಾತ್ಸಂಜಯಂ ಪ್ರಾಪ್ತಂ ನಿಶಿ ನಾಗಾಹ್ವಯಂ ಪುರಂ|

07001007c ಆಂಬಿಕೇಯೋ ಮಹಾರಾಜ ಧೃತರಾಷ್ಟ್ರೋಽನ್ವಪೃಚ್ಚತ||

ರಾತ್ರಿಯಲ್ಲಿ ಶಿಬಿರದಿಂದ ನಾಗಾಹ್ವಯ ಪುರವನ್ನು ಪ್ರವೇಶಿಸಿದ ಸಂಜಯನನ್ನು ಮಹಾರಾಜ ಆಂಬಿಕೇಯ ಧೃತರಾಷ್ಟ್ರನು ಪ್ರಶ್ನಿಸಿದನು.

07001008a ಶ್ರುತ್ವಾ ಭೀಷ್ಮಸ್ಯ ನಿಧನಮಪ್ರಹೃಷ್ಟಮನಾ ಭೃಶಂ|

07001008c ಪುತ್ರಾಣಾಂ ಜಯಮಾಕಾಂಕ್ಷನ್ವಿಲಲಾಪಾತುರೋ ಯಥಾ||

ಭೀಷ್ಮನ ನಿಧನದ ಕುರಿತು ಕೇಳಿ ತುಂಬಾ ಅಪ್ರಹೃಷ್ಟಮನಸ್ಕನಾಗಿದ್ದ ಅವನು ಪುತ್ರರ ಜಯವನ್ನೇ ಬಯಸಿ ಆತುರನಾಗಿ ವಿಲಪಿಸುತ್ತಿದ್ದನು.

07001009 ಧೃತರಾಷ್ಟ್ರ ಉವಾಚ|

07001009a ಸಂಸಾಧ್ಯ ತು ಮಹಾತ್ಮಾನಂ ಭೀಷ್ಮಂ ಭೀಮಪರಾಕ್ರಮಂ|

07001009c ಕಿಮಕಾರ್ಷುಃ ಪರಂ ತಾತ ಕುರವಃ ಕಾಲಚೋದಿತಾಃ||

ಧೃತರಾಷ್ಟ್ರನು ಹೇಳಿದನು: “ಅಯ್ಯಾ! ಭೀಮಪರಾಕ್ರಮಿ ಮಹಾತ್ಮ ಭೀಷ್ಮನನ್ನು ಕಳೆದುಕೊಂಡು ಶೋಕಿತರಾಗಿ ಕಾಲಚೋದಿತ ಕೌರವರು ಏನು ಮಾಡಿದರು?

07001010a ತಸ್ಮಿನ್ವಿನಿಹತೇ ಶೂರೇ ದುರಾಧರ್ಷೇ ಮಹೌಜಸಿ|

07001010c ಕಿಂ ನು ಸ್ವಿತ್ಕುರವೋಽಕಾರ್ಷುರ್ನಿಮಗ್ನಾಃ ಶೋಕಸಾಗರೇ||

ಆ ಶೂರ ದುರಾಧರ್ಷ ಮಹೌಜಸನು ಹತನಾಗಲು ಶೋಕಸಾಗರದಲ್ಲಿ ಮುಳುಗಿಹೋದ ಕುರುಗಳು ಏನು ಮಾಡಿದರು?

07001011a ತದುದೀರ್ಣಂ ಮಹತ್ಸೈನ್ಯಂ ತ್ರೈಲೋಕ್ಯಸ್ಯಾಪಿ ಸಂಜಯ|

07001011c ಭಯಮುತ್ಪಾದಯೇತ್ತೀವ್ರಂ ಪಾಂಡವಾನಾಂ ಮಹಾತ್ಮನಾಂ||

07001012a ದೇವವ್ರತೇ ತು ನಿಹತೇ ಕುರೂಣಾಂ ಋಷಭೇ ತದಾ|

07001012c ಯದಕಾರ್ಷುರ್ನೃಪತಯಸ್ತನ್ಮಮಾಚಕ್ಷ್ವ ಸಂಜಯ||

ಸಂಜಯ! ತ್ರೈಲೋಕ್ಯಗಳಿಗೂ ಭಯವನ್ನುಂಟುಮಾಡುವ ಆ ಮಹಾತ್ಮ ಪಾಂಡವರ ಮಹಾಸೇನೆಯನ್ನು ನಾಶಗೊಳಿಸಿ ಕುರುಗಳ ಋಷಭ ದೇವವ್ರತನು ಹತನಾಗಲು ನೃಪತಿಗಳು ಏನು ಮಾಡಿದರೆನ್ನುವುದನ್ನು ನನಗೆ ಹೇಳು.”

07001013 ಸಂಜಯ ಉವಾಚ|

07001013a ಶೃಣು ರಾಜನ್ನೇಕಮನಾ ವಚನಂ ಬ್ರುವತೋ ಮಮ|

07001013c ಯತ್ತೇ ಪುತ್ರಾಸ್ತದಾಕಾರ್ಷುರ್ಹತೇ ದೇವವ್ರತೇ ಮೃಧೇ||

ಸಂಜಯನು ಹೇಳಿದನು: “ರಾಜನ್! ದೇವವ್ರತನು ಮೃತನಾಗಲು ನಿನ್ನ ಪುತ್ರರು ಏನು ಮಾಡಿದರೆಂದು ನಾನು ಹೇಳುವುದನ್ನು ಒಂದೇ ಮನಸ್ಸಿನಿಂದ ಕೇಳು.

07001014a ನಿಹತೇ ತು ತದಾ ಭೀಷ್ಮೇ ರಾಜನ್ಸತ್ಯಪರಾಕ್ರಮೇ|

07001014c ತಾವಕಾಃ ಪಾಂಡವೇಯಾಶ್ಚ ಪ್ರಾಧ್ಯಾಯಂತ ಪೃಥಕ್ ಪೃಥಕ್||

ರಾಜನ್! ಆ ಸತ್ಯಪರಾಕ್ರಮಿ ಭೀಷ್ಮನು ಹತನಾಗಲು ನಿನ್ನವರು ಮತ್ತು ಪಾಂಡವೇಯರು ಪ್ರತ್ಯೇಕ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು.

07001015a ವಿಸ್ಮಿತಾಶ್ಚ ಪ್ರಹೃಷ್ಟಾಶ್ಚ ಕ್ಷತ್ರಧರ್ಮಂ ನಿಶಾಮ್ಯ ತೇ|

07001015c ಸ್ವಧರ್ಮಂ ನಿಂದಮಾನಾಶ್ಚ ಪ್ರಣಿಪತ್ಯ ಮಹಾತ್ಮನೇ||

07001016a ಶಯನಂ ಕಲ್ಪಯಾಮಾಸುರ್ಭೀಷ್ಮಾಯಾಮಿತತೇಜಸೇ|

07001016c ಸೋಪಧಾನಂ ನರವ್ಯಾಘ್ರ ಶರೈಃ ಸನ್ನತಪರ್ವಭಿಃ||

ನರವ್ಯಾಘ್ರ! ಕ್ಷತ್ರಧರ್ಮವನ್ನು ವಿಮರ್ಶಿಸಿ ವಿಸ್ಮಿತರೂ ಪ್ರಹೃಷ್ಟರೂ ಆದ ಅವರು ಸ್ವಧರ್ಮವನ್ನು ನಿಂದಿಸುತ್ತಾ ಆ ಮಹಾತ್ಮ ಅಮಿತತೇಜಸ್ವಿ ಭೀಷ್ಮನಿಗೆ ನಮಸ್ಕರಿಸಿ ಸನ್ನತಪರ್ವ ಶರಗಳಿಂದ ಅವನಿಗೆ ಶಯನವನ್ನೂ ತಲೆದಿಂಬನ್ನೂ ಮಾಡಿದರು.

07001017a ವಿಧಾಯ ರಕ್ಷಾಂ ಭೀಷ್ಮಾಯ ಸಮಾಭಾಷ್ಯ ಪರಸ್ಪರಂ|

07001017c ಅನುಮಾನ್ಯ ಚ ಗಾಂಗೇಯಂ ಕೃತ್ವಾ ಚಾಪಿ ಪ್ರದಕ್ಷಿಣಂ||

07001018a ಕ್ರೋಧಸಂರಕ್ತನಯನಾಃ ಸಮವೇಕ್ಷ್ಯ ಪರಸ್ಪರಂ|

07001018c ಪುನರ್ಯುದ್ಧಾಯ ನಿರ್ಜಗ್ಮುಃ ಕ್ಷತ್ರಿಯಾಃ ಕಾಲಚೋದಿತಾಃ||

ಕಾಲಚೋದಿತ ಕ್ಷತ್ರಿಯರು ಪರಸ್ಪರ ಮಾತನಾಡಿಕೊಂಡು ಗಾಂಗೇಯ ಭೀಷ್ಮನಿಗೆ ರಕ್ಷಣಾವ್ಯವಸ್ಥೆಯನ್ನು ಏರ್ಪಡಿಸಿ, ಪ್ರದಕ್ಷಿಣೆಮಾಡಿ ಅವನ ಅನುಮತಿಯನ್ನು ಪಡೆದು, ಕ್ರೋಧದಿಂದ ಕೆಂಪಾದ ಕಣ್ಣುಗಳಿಂದ ಪರಸ್ಪರ ನೋಡುತ್ತಾ ಪುನಃ ಯುದ್ಧಮಾಡಲು ತೆರಳಿದರು.

07001019a ತತಸ್ತೂರ್ಯನಿನಾದೈಶ್ಚ ಭೇರೀಣಾಂ ಚ ಮಹಾಸ್ವನೈಃ|

07001019c ತಾವಕಾನಾಮನೀಕಾನಿ ಪರೇಷಾಂ ಚಾಪಿ ನಿರ್ಯಯುಃ||

ಆಗ ತೂರ್ಯ-ಭೇರಿ ನಿನಾದದ ಮಹಾಸ್ವನಗಳೊಂದಿಗೆ ನಿನ್ನವರ ಮತ್ತು ಶತ್ರುಗಳ ಸೇನೆಗಳು ಹಿಂದಿರುಗಿದವು.

07001020a ವ್ಯಾವೃತ್ತೇಽಹನಿ ರಾಜೇಂದ್ರ ಪತಿತೇ ಜಾಹ್ನವೀಸುತೇ|

07001020c ಅಮರ್ಷವಶಮಾಪನ್ನಾಃ ಕಾಲೋಪಹತಚೇತಸಃ||

07001021a ಅನಾದೃತ್ಯ ವಚಃ ಪಥ್ಯಂ ಗಾಂಗೇಯಸ್ಯ ಮಹಾತ್ಮನಃ|

07001021c ನಿರ್ಯಯುರ್ಭರತಶ್ರೇಷ್ಠಾಃ ಶಸ್ತ್ರಾಣ್ಯಾದಾಯ ಸರ್ವಶಃ||

ರಾಜೇಂದ್ರ! ಜಾಹ್ನವೀ ಸುತನ ಪತನದ ಮರುದಿನ ಕಾಲಪ್ರಭಾವದಿಂದ ಹತ ಚೇತಸರಾಗಿದ್ದ ಆ ಎಲ್ಲ ಭರತಶ್ರೇಷ್ಠರೂ ಮಹಾತ್ಮ ಗಾಂಗೇಯನ ವಚನವನ್ನು ಅನಾದರಿಸಿ ಕೋಪಾವೇಶಗೊಂಡು ಶಸ್ತ್ರಗಳೊಂದಿಗೆ ಹಿಂದಿರುಗಿದರು.

07001022a ಮೋಹಾತ್ತವ ಸಪುತ್ರಸ್ಯ ವಧಾಚ್ಚಾಂತನವಸ್ಯ ಚ|

07001022c ಕೌರವ್ಯಾ ಮೃತ್ಯುಸಾದ್ಭೂತಾಃ ಸಹಿತಾಃ ಸರ್ವರಾಜಭಿಃ||

ನಿನ್ನ ಮತ್ತು ನಿನ್ನ ಮಗನ ಮೋಹದಿಂದಾಗಿ ಮತ್ತು ಶಾಂತನವನ ವಧೆಯಿಂದಾಗಿ ಎಲ್ಲ ರಾಜರೊಂದಿಗೆ ಕೌರವ್ಯರು ಮೃತರಾದಂತೆಯೇ ತೋರಿದರು.

07001023a ಅಜಾವಯ ಇವಾಗೋಪಾ ವನೇ ಶ್ವಾಪದಸಂಕುಲೇ|

07001023c ಭೃಶಮುದ್ವಿಗ್ನಮನಸೋ ಹೀನಾ ದೇವವ್ರತೇನ ತೇ||

ದೇವವ್ರತನಿಲ್ಲದೇ ಅವರು ವನದಲ್ಲಿ ಹಿಂಸಮೃಗಗಳ ಮಧ್ಯದಲ್ಲಿ ರಕ್ಷಣೆಯೇ ಇಲ್ಲದ ಗೋವುಗಳಂತೆ ತುಂಬಾ ಉದ್ವಿಗ್ನಮನಸ್ಕರಾಗಿದ್ದರು.

07001024a ಪತಿತೇ ಭರತಶ್ರೇಷ್ಠೇ ಬಭೂವ ಕುರುವಾಹಿನೀ|

07001024c ದ್ಯೌರಿವಾಪೇತನಕ್ಷತ್ರಾ ಹೀನಂ ಖಮಿವ ವಾಯುನಾ||

07001025a ವಿಪನ್ನಸಸ್ಯೇವ ಮಹೀ ವಾಕ್ಚೈವಾಸಂಸ್ಕೃತಾ ಯಥಾ|

07001025c ಆಸುರೀವ ಯಥಾ ಸೇನಾ ನಿಗೃಹೀತೇ ಪುರಾ ಬಲೌ||

07001026a ವಿಧವೇವ ವರಾರೋಹಾ ಶುಷ್ಕತೋಯೇವ ನಿಮ್ನಗಾ|

07001026c ವೃಕೈರಿವ ವನೇ ರುದ್ಧಾ ಪೃಷತೀ ಹತಯೂಥಪಾ||

ಭರತಶ್ರೇಷ್ಠನು ಕೆಳಗುರುಳಲು ಕುರುವಾಹಿನಿಯು ನಕ್ಷತ್ರವಿಲ್ಲದ ಆಕಾಶದಂತಾಯಿತು. ಗಾಳಿಯೇ ಇಲ್ಲದ ಅಂತರಿಕ್ಷದಂತಾಯಿತು. ಸಸ್ಯಗಳು ನಾಶವಾದ ಭೂಮಿಯಂತಾಯಿತು. ಅಸಂಸ್ಕೃತ ಮಾತಿನಂತಾಯಿತು. ಹಿಂದೆ ಬಲಿಯಿಲ್ಲದೇ ಅಸ್ತವ್ಯಸ್ತವಾಗಿದ್ದ ಅಸುರೀ ಸೇನೆಯಂತಾಯಿತು. ವಿಧವೆಯಾದ ಸುಂದರಿಯಂತೆ, ಒಣಗಿದ ನದಿಯಂತೆ, ವನದಲ್ಲಿ ಗಂಡುಜಿಂಕೆಯನ್ನು ಕಳೆದುಕೊಂಡು ತೋಳಗಳಿಂದ ಸುತ್ತುವರೆಯಲ್ಪಟ್ಟ ಹೆಣ್ಣುಜಿಂಕೆಯಂತೆ ಕಂಡಿತು.

07001027a ಸ್ವಾಧರ್ಷಾ ಹತಸಿಂಹೇವ ಮಹತೀ ಗಿರಿಕಂದರಾ|

07001027c ಭಾರತೀ ಭರತಶ್ರೇಷ್ಠ ಪತಿತೇ ಜಾಹ್ನವೀಸುತೇ||

ಭರತಶ್ರೇಷ್ಠ! ಜಾಹ್ನವೀಸುತನು ಬೀಳಲು ಭಾರತ ಸೇನೆಯು ಸಿಂಹವನ್ನು ಕಳೆದುಕೊಂಡ ಗಿರಿಕಂದರದ ಮಹಾ ಗುಹೆಯಂತಾಯಿತು.

07001028a ವಿಷ್ವಗ್ವಾತಹತಾ ರುಗ್ಣಾ ನೌರಿವಾಸೀನ್ಮಹಾರ್ಣವೇ|

07001028c ಬಲಿಭಿಃ ಪಾಂಡವೈರ್ವೀರೈರ್ಲಬ್ಧಲಕ್ಷೈರ್ಭೃಶಾರ್ದಿತಾ||

ಬಲಶಾಲಿ ವೀರ ಪಾಂಡವರಿಂದ ಮರ್ದಿತವಾದ ನಿನ್ನ ಸೈನ್ಯವು ನಾಲ್ಕೂ ಕಡೆಗಳಿಂದ ಬೀಸುವ ಭಿರುಗಾಳಿಗೆ ಸಿಲುಕಿ ಮಹಾಸಾಗರದಲ್ಲಿ ಮುರಿಯುತ್ತಿರುವ ನೌಕೆಯಂತಾಗಿತ್ತು.

07001029a ಸಾ ತದಾಸೀದ್ಭೃಶಂ ಸೇನಾ ವ್ಯಾಕುಲಾಶ್ವರಥದ್ವಿಪಾ|

07001029c ವಿಷಣ್ಣಭೂಯಿಷ್ಠನರಾ ಕೃಪಣಾ ದ್ರಷ್ಟುಮಾಬಭೌ||

ಆ ಸೇನೆಯಲ್ಲಿದ್ದ ಅಶ್ವ-ರಥ-ಪದಾತಿಗಳು ತುಂಬಾ ವ್ಯಾಕುಲಗೊಂಡಿದ್ದವು. ಸೈನಿಕರು ವಿಷಣ್ಣರಾಗಿದ್ದರು. ದೀನರಾಗಿ ಕಾಣುತ್ತಿದ್ದರು.

07001030a ತಸ್ಯಾಂ ತ್ರಸ್ತಾ ನೃಪತಯಃ ಸೈನಿಕಾಶ್ಚ ಪೃಥಗ್ವಿಧಾಃ|

07001030c ಪಾತಾಲ ಇವ ಮಜ್ಜಂತೋ ಹೀನಾ ದೇವವ್ರತೇನ ತೇ||

07001030e ಕರ್ಣಂ ಹಿ ಕುರವೋಽಸ್ಮಾರ್ಷುಃ ಸ ಹಿ ದೇವವ್ರತೋಪಮಃ|

ದೇವವ್ರತನಿಲ್ಲದೇ ತ್ರಸ್ತರಾದ ನೃಪತಿ-ಸೈನಿಕರು ಪಾತಾಳದಲ್ಲಿ ಮುಳುಗಿ ಹೋಗುತ್ತಿರುವಂತಿರಲು ಕುರುಗಳು ದೇವವ್ರತನಂತಿರುವ ಕರ್ಣನನ್ನೇ ಸ್ಮರಿಸಿಕೊಂಡರು.

07001031a ಸರ್ವಶಸ್ತ್ರಭೃತಾಂ ಶ್ರೇಷ್ಠಂ ರೋಚಮಾನಮಿವಾತಿಥಿಂ||

07001031c ಬಂಧುಮಾಪದ್ಗತಸ್ಯೇವ ತಂ ಏವೋಪಾಗಮನ್ಮನಃ|

ಮಧ್ಯಾಹ್ನದ ಸಮಯದಲ್ಲಿ ಸದ್ಗೃಹಸ್ತನು ಅತಿಥಿಯನ್ನು ಹೇಗೋ ಹಾಗೆ ಮತ್ತು ಆಪತ್ತಿನಲ್ಲಿರುವವರು ಬಂಧು-ಮಿತ್ರರನ್ನು ಹೇಗೋ ಹಾಗೆ ಅವರು ಆ ಸರ್ವಶಸ್ತ್ರಭೃತಶ್ರೇಷ್ಠನನ್ನು ಮನಸ್ಸಿನಲ್ಲಿ ಧ್ಯಾನಿಸಿದರು.

07001032a ಚುಕ್ರುಶುಃ ಕರ್ಣ ಕರ್ಣೇತಿ ತತ್ರ ಭಾರತ ಪಾರ್ಥಿವಾಃ||

07001032c ರಾಧೇಯಂ ಹಿತಮಸ್ಮಾಕಂ ಸೂತಪುತ್ರಂ ತನುತ್ಯಜಂ|

07001033a ಸ ಹಿ ನಾಯುಧ್ಯತ ತದಾ ದಶಾಹಾನಿ ಮಹಾಯಶಾಃ||

07001033c ಸಾಮಾತ್ಯಬಂಧುಃ ಕರ್ಣೋ ವೈ ತಮಾಹ್ವಯತ ಮಾಚಿರಂ|

ಭಾರತ! ಪಾರ್ಥಿವರು ಅಲ್ಲಿ “ಕರ್ಣ! ಕರ್ಣ!” ಎಂದು ಕೂಗಿಕೊಂಡರು. “ನಮ್ಮ ಹಿತಕ್ಕಾಗಿ ದೇಹವನ್ನೇ ಮುಡುಪಾಗಿಸಿರುವ ಸೂತಪುತ್ರ ರಾಧೇಯ ಕರ್ಣನನ್ನು ಅಮಾತ್ಯಬಂಧುಗಳೊಂದಿಗೆ ಬೇಗನೇ ಕರೆತನ್ನಿರಿ! ಆ ಮಹಾಯಶಸ್ವಿಯು ತನ್ನದೇ ಮಾತಿನಂತೆ ಈ ಹತ್ತು ದಿವಸ ಯುದ್ಧ ಮಾಡಲಿಲ್ಲ.

07001034a ಭೀಷ್ಮೇಣ ಹಿ ಮಹಾಬಾಹುಃ ಸರ್ವಕ್ಷತ್ರಸ್ಯ ಪಶ್ಯತಃ||

07001034c ರಥೇಷು ಗಣ್ಯಮಾನೇಷು ಬಲವಿಕ್ರಮಶಾಲಿಷು|

07001034e ಸಂಖ್ಯಾತೋಽರ್ಧರಥಃ ಕರ್ಣೋ ದ್ವಿಗುಣಃ ಸನ್ನರರ್ಷಭಃ||

ಏಕೆಂದರೆ ಮಹಾಬಾಹು ಭೀಷ್ಮನು ಸರ್ವ ಕ್ಷತ್ರಿಯರೂ ನೋಡುತ್ತಿದ್ದಂತೆ ಬಲವಿಕ್ರಮಶಾಲಿ ರಥಿಗಳನ್ನು ಗಣಿಸುವಾಗ ಕರ್ಣನನ್ನು ಅರ್ಧರಥನೆಂದು ಗಣಿಸಿದ್ದನು. ಆದರೆ ನರರ್ಷಭ ಕರ್ಣನು ಅದಕ್ಕಿಂತಲೂ ದ್ವಿಗುಣನು.

07001035a ರಥಾತಿರಥಸಂಖ್ಯಾಯಾಂ ಯೋಽಗ್ರಣೀಃ ಶೂರಸಮ್ಮತಃ|

07001035c ಪಿತೃವಿತ್ತಾಂಬುದೇವೇಶಾನಪಿ ಯೋ ಯೋದ್ಧುಮುತ್ಸಹೇತ್||

ಪಿತೃವಿತ್ತಾಂಬು ದೇವೇಶನೊಡನೆಯೂ ಯುದ್ಧಮಾಡಲು ಉತ್ಸುಕನಾಗಿರುವ ಆ ಶೂರಸಮ್ಮತನು ರಥಾತಿರಥರ ಗಣನೆಯಲ್ಲಿ ಅಗ್ರಣಿಯಷ್ಟೇ!”

07001036a ಸ ತು ತೇನೈವ ಕೋಪೇನ ರಾಜನ್ಗಾಂಗೇಯಮುಕ್ತವಾನ್|

07001036c ತ್ವಯಿ ಜೀವತಿ ಕೌರವ್ಯ ನಾಹಂ ಯೋತ್ಸ್ಯೇ ಕಥಂ ಚನ||

07001037a ತ್ವಯಾ ತು ಪಾಂಡವೇಯೇಷು ನಿಹತೇಷು ಮಹಾಮೃಧೇ|

07001037c ದುರ್ಯೋಧನಮನುಜ್ಞಾಪ್ಯ ವನಂ ಯಾಸ್ಯಾಮಿ ಕೌರವ||

ರಾಜನ್! ಆದುದರಿಂದಲೇ ಅವನು ಕೋಪದಿಂದ ಗಾಂಗೇಯನಿಗೆ ಹೇಳಿದ್ದನು: “ಕೌರವ್ಯ! ನೀನು ಜೀವಿಸಿರುವವರೆಗೆ ಎಂದೂ ನಾನು ಯುದ್ಧಮಾಡುವುದಿಲ್ಲ. ಕೌರವ! ಒಂದುವೇಳೆ ನೀನೇ ಪಾಂಡವರನ್ನು ಮಹಾಯುದ್ಧದಲ್ಲಿ ಸಂಹರಿಸಿಬಿಟ್ಟರೆ ದುರ್ಯೋಧನನ ಅನುಮತಿಯನ್ನು ಪಡೆದು ವನಕ್ಕೆ ಹೊರಟುಹೋಗುತ್ತೇನೆ.

07001038a ಪಾಂಡವೈರ್ವಾ ಹತೇ ಭೀಷ್ಮೇ ತ್ವಯಿ ಸ್ವರ್ಗಮುಪೇಯುಷಿ|

07001038c ಹಂತಾಸ್ಮ್ಯೇಕರಥೇನೈವ ಕೃತ್ಸ್ನಾನ್ಯಾನ್ಮನ್ಯಸೇ ರಥಾನ್||

ಭೀಷ್ಮ! ಒಂದುವೇಳೆ ನೀನೇ ಪಾಂಡವರಿಂದ ಹತನಾಗಿ ಸ್ವರ್ಗಕ್ಕೆ ಹೊರಟುಹೋದರೆ ನೀನು ಯಾರನ್ನು ರಥರೆಂದು ಭಾವಿಸಿರುವೆಯೋ ಅವರೆಲ್ಲರನ್ನೂ ಒಂದೇ ರಥದಲ್ಲಿ ನಾನು ಸಂಹಾರಮಾಡುತ್ತೇನೆ.”

07001039a ಏವಮುಕ್ತ್ವಾ ಮಹಾರಾಜ ದಶಾಹಾನಿ ಮಹಾಯಶಾಃ|

07001039c ನಾಯುಧ್ಯತ ತತಃ ಕರ್ಣಃ ಪುತ್ರಸ್ಯ ತವ ಸಮ್ಮತೇ||

ಮಹಾರಾಜ! ಹೀಗೆ ಹೇಳಿ ಮಹಾಯಶಸ್ವಿ ಕರ್ಣನು ನಿನ್ನ ಮಗನ ಸಮ್ಮತಿಯಂತೆ ಹತ್ತು ದಿವಸಗಳೂ ಯುದ್ಧ ಮಾಡಿರಲಿಲ್ಲ.

07001040a ಭೀಷ್ಮಃ ಸಮರವಿಕ್ರಾಂತಃ ಪಾಂಡವೇಯಸ್ಯ ಪಾರ್ಥಿವ|

07001040c ಜಘಾನ ಸಮರೇ ಯೋಧಾನಸಂಖ್ಯೇಯಪರಾಕ್ರಮಃ||

ಪಾರ್ಥಿವ! ಸಮರವಿಕ್ರಾಂತ ಪರಾಕ್ರಮಿ ಭೀಷ್ಮನು ಸಮರದಲ್ಲಿ ಪಾಂಡವೇಯನ ಅಸಂಖ್ಯಾತ ಯೋಧರನ್ನು ಸಂಹರಿಸಿದನು.

07001041a ತಸ್ಮಿಂಸ್ತು ನಿಹತೇ ಶೂರೇ ಸತ್ಯಸಂಧೇ ಮಹೌಜಸಿ|

07001041c ತ್ವತ್ಸುತಾಃ ಕರ್ಣಮಸ್ಮಾರ್ಷುಸ್ತರ್ತುಕಾಮಾ ಇವ ಪ್ಲವಂ||

ಆ ಶೂರ ಸತ್ಯಸಂಧ ಮಹೌಜಸನು ಹತನಾಗಲು ನಿನ್ನ ಮಕ್ಕಳು ನದಿಯನ್ನು ದಾಟಲು ಬಯಸುವವರು ದೋಣಿಯನ್ನು ಹೇಗೋ ಹಾಗೆ ಕರ್ಣನನ್ನು ಸ್ಮರಿಸಿಕೊಂಡರು.

07001042a ತಾವಕಾಸ್ತವ ಪುತ್ರಾಶ್ಚ ಸಹಿತಾಃ ಸರ್ವರಾಜಭಿಃ|

07001042c ಹಾ ಕರ್ಣ ಇತಿ ಚಾಕ್ರಂದನ್ಕಾಲೋಽಯಮಿತಿ ಚಾಬ್ರುವನ್||

ಎಲ್ಲರಾಜರೊಂದಿಗೆ ನಿನ್ನ ಪುತ್ರರು “ಹಾ ಕರ್ಣ! ಇದೋ ಸಮಯವೊದಗಿದೆ!” ಎಂದು ಕೂಗಿ ಹೇಳಿದರು.

07001043a ಜಾಮದಗ್ನ್ಯಾಭ್ಯನುಜ್ಞಾತಮಸ್ತ್ರೇ ದುರ್ವಾರಪೌರುಷಂ|

07001043c ಅಗಮನ್ನೋ ಮನಃ ಕರ್ಣಂ ಬಂಧುಮಾತ್ಯಯಿಕೇಷ್ವಿವ||

07001044a ಸ ಹಿ ಶಕ್ತೋ ರಣೇ ರಾಜಂಸ್ತ್ರಾತುಮಸ್ಮಾನ್ಮಹಾಭಯಾತ್|

07001044c ತ್ರಿದಶಾನಿವ ಗೋವಿಂದಃ ಸತತಂ ಸುಮಹಾಭಯಾತ್||

ಜಾಮದಗ್ನಿಯಿಂದ ಅಸ್ತ್ರಗಳನ್ನು ತಿಳಿದುಕೊಂಡಿದ್ದ ಮತ್ತು ಶತ್ರುಗಳನ್ನು ತಡೆಯಲು ಅಸಾಧ್ಯ ಪೌರುಷವನ್ನು ಪಡೆದಿದ್ದ ಕರ್ಣನು ಆಪತ್ತಿನಲ್ಲಿ ಬಂಧುಗಳನ್ನು ನೆನೆಯುವಂತಿದ್ದ ಅವರ ಮನಸ್ಸಿಗೆ ಬಂದನು. ರಾಜನ್! ಏಕೆಂದರೆ ತ್ರಿದಶರನ್ನು ಸತತವೂ ಮಹಾಭಯದಿಂದ ರಕ್ಷಿಸುವ ಗೋವಿಂದನಂತೆ ಅವನೇ ನಮ್ಮನ್ನು ರಣದಲ್ಲಿ ಮಹಾಭಯದಿಂದ ರಕ್ಷಿಸಲು ಶಕ್ತನಾಗಿದ್ದನು.””

07001045 ವೈಶಂಪಾಯನ ಉವಾಚ|

07001045a ತಥಾ ಕರ್ಣಂ ಯುಧಿ ವರಂ ಕೀರ್ತಯಂತಂ ಪುನಃ ಪುನಃ|

07001045c ಆಶೀವಿಷವದುಚ್ಚ್ವಸ್ಯ ಧೃತರಾಷ್ಟ್ರೋಽಬ್ರವೀದಿದಂ||

ವೈಶಂಪಾಯನನು ಹೇಳಿದನು: “ಯುದ್ಧದಲ್ಲಿ ಶ್ರೇಷ್ಠ ಕರ್ಣನನ್ನು ಹೀಗೆ ಪುನಃ ಪುನಃ ಹೊಗಳುತ್ತಿರಲು ವಿಷಸರ್ಪದಂತೆ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಧೃತರಾಷ್ಟ್ರನು ಹೇಳಿದನು:

07001046a ಯತ್ತದ್ವೈಕರ್ತನಂ ಕರ್ಣಮಗಮದ್ವೋ ಮನಸ್ತದಾ|

07001046c ಅಪ್ಯಪಶ್ಯತ ರಾಧೇಯಂ ಸೂತಪುತ್ರಂ ತನುತ್ಯಜಂ||

07001047a ಅಪಿ ತನ್ನ ಮೃಷಾಕಾರ್ಷೀದ್ಯುಧಿ ಸತ್ಯಪರಾಕ್ರಮಃ|

07001047c ಸಂಭ್ರಾಂತಾನಾಂ ತದಾರ್ತಾನಾಂ ತ್ರಸ್ತಾನಾಂ ತ್ರಾಣಮಿಚ್ಚತಾಂ||

“ಆಗ ನಿಮ್ಮ ಮನಸ್ಸು ವೈಕರ್ತನ ಕರ್ಣನ ಕಡೆ ಹೋಯಿತು. ಆದರೆ ತನುವನ್ನು ತ್ಯಜಿಸಲು ಸಿದ್ಧನಾಗಿದ್ದ ರಾಧೇಯ ಸೂತಪುತ್ರನನ್ನು ನೀವು ನೋಡಿದಿರೇ? ಸಂಭ್ರಾಂತರೂ ಆರ್ತರೂ ಆಗಿ ಭಯಗೊಂಡಿರುವವರಿಗೆ ಸಹಾಯಮಾಡಲು ಬಯಸಿ ಯುದ್ಧದಲ್ಲಿ ಸೇಡನ್ನು ಬಯಸಿ ಆ ಸತ್ಯಪರಾಕ್ರಮಿಯು ಅಲ್ಲಿಗೆ ಬಂದನೇ?

07001048a ಅಪಿ ತತ್ಪೂರಯಾಂ ಚಕ್ರೇ ಧನುರ್ಧರವರೋ ಯುಧಿ|

07001048c ಯತ್ತದ್ವಿನಿಹತೇ ಭೀಷ್ಮೇ ಕೌರವಾಣಾಮಪಾವೃತಂ||

07001049a ತತ್ಖಂಡಂ ಪೂರಯಾಮಾಸ ಪರೇಷಾಮಾದಧದ್ಭಯಂ|

07001049c ಕೃತವಾನ್ಮಮ ಪುತ್ರಾಣಾಂ ಜಯಾಶಾಂ ಸಫಲಾಮಪಿ||

ಭೀಷ್ಮನ ಸಂಹಾರದಿಂದ ಕೌರವರ ಯುದ್ಧದಲ್ಲಿ ಉಂಟಾದ ದೊಡ್ಡ ಕೊರತೆಯನ್ನು ಆ ಧನುರ್ಧರ ಶ್ರೇಷ್ಠನು ತುಂಬಿದನೇ? ಶತ್ರುಗಳಿಂದುಂಟಾದ ಭಯವನ್ನು ಹೋಗಲಾಡಿಸಿದನೇ? ನನ್ನ ಮಕ್ಕಳ ಜಯದ ಆಸೆಯನ್ನು ಸಫಲಗೊಳಿಸಿದನೇ?”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ದ್ರೋಣಾಭಿಷೇಕಪರ್ವಣಿ ಧೃತರಾಷ್ಟ್ರಪ್ರಶ್ನೇ ಪ್ರಥಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ದ್ರೋಣಾಭಿಷೇಕಪರ್ವದಲ್ಲಿ ಧೃತರಾಷ್ಟ್ರಪ್ರಶ್ನೆ ಎನ್ನುವ ಮೊದಲನೇ ಅಧ್ಯಾಯವು.

Comments are closed.