Bhishma Parva: Chapter 89

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೯

ಘಟೋತ್ಕಚನ ಸಹಾಯಕ್ಕೆ ಭೀಮಸೇನ ಮೊದಲಾದವರು ಬಂದುದು (೧-೧೭). ಸಂಕುಲಯುದ್ಧ (೧೮-೪೧).

06089001 ಸಂಜಯ ಉವಾಚ|

06089001a ವಿಮುಖೀಕೃತ್ಯ ತಾನ್ಸರ್ವಾಂಸ್ತಾವಕಾನ್ಯುಧಿ ರಾಕ್ಷಸಃ|

06089001c ಜಿಘಾಂಸುರ್ಭರತಶ್ರೇಷ್ಠ ದುರ್ಯೋಧನಮುಪಾದ್ರವತ್||

ಸಂಜಯನು ಹೇಳಿದನು: “ಭರತಶ್ರೇಷ್ಠ! ಯುದ್ಧದಲ್ಲಿ ಅವರೆಲ್ಲರನ್ನೂ ವಿಮುಖರನ್ನಾಗಿ ಮಾಡಿ ರಾಕ್ಷಸನು ಕೊಲ್ಲಲು ಬಯಸಿ ದುರ್ಯೋಧನನನ್ನು ಆಕ್ರಮಣಿಸಿದನು.

06089002a ತಮಾಪತಂತಂ ಸಂಪ್ರೇಕ್ಷ್ಯ ರಾಜಾನಂ ಪ್ರತಿ ವೇಗಿತಂ|

06089002c ಅಭ್ಯಧಾವಜ್ಜಿಘಾಂಸಂತಸ್ತಾವಕಾ ಯುದ್ಧದುರ್ಮದಾಃ||

ರಾಜನ ಮೇಲೆ ವೇಗದಿಂದ ಬೀಳುತ್ತಿದ್ದ ಅವನನ್ನು ನೋಡಿ ಯುದ್ಧದುರ್ಮದರಾದ ನಿನ್ನವರು ಅವನನ್ನು ಸಂಹರಿಸುವ ಸಲುವಾಗಿ ಧಾವಿಸಿ ಬಂದರು.

06089003a ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾಬಲಾಃ|

06089003c ತಮೇಕಮಭ್ಯಧಾವಂತ ನದಂತಃ ಸಿಂಹಸಂಘವತ್||

ತಾಲಪ್ರಮಾಣದ (ಸುಮಾರು ನಾಲ್ಕು ಮೊಳ ಉದ್ದದ) ಬಿಲ್ಲುಗಳನ್ನು ಎಳೆಯುತ್ತಾ ಮತ್ತು ಸಿಂಹಗಳ ಹಿಂಡಿನಂತೆ ಗರ್ಜಿಸುತ್ತಾ ಆ ಮಹಾಬಲರು ಅವನೊಬ್ಬನನ್ನೇ ಆಕ್ರಮಣಿಸಿದರು.

06089004a ಅಥೈನಂ ಶರವರ್ಷೇಣ ಸಮಂತಾತ್ಪರ್ಯವಾರಯನ್|

06089004c ಪರ್ವತಂ ವಾರಿಧಾರಾಭಿಃ ಶರದೀವ ಬಲಾಹಕಾಃ||

ಆಗ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಮೋಡಗಳು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಬಾಣಗಳ ಮಳೆಯಿಂದ ಮುಚ್ಚಿದರು.

06089005a ಸ ಗಾಢವಿದ್ಧೋ ವ್ಯಥಿತಸ್ತೋತ್ತ್ರಾರ್ದಿತ ಇವ ದ್ವಿಪಃ|

06089005c ಉತ್ಪಪಾತ ತದಾಕಾಶಂ ಸಮಂತಾದ್ವೈನತೇಯವತ್||

ಗಾಢವಾಗಿ ಗಾಯಗೊಂಡು ಅಂಕುಶಗಳಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಥಿತನಾಗಿ ಅವನು ಎಲ್ಲಕಡೆ ಹಾರಬಲ್ಲ ವೈನತೇಯನಂತೆ ಆಕಾಶಕ್ಕೆ ಹಾರಿದನು.

06089006a ವ್ಯನದತ್ಸುಮಹಾನಾದಂ ಜೀಮೂತ ಇವ ಶಾರದಃ|

06089006c ದಿಶಃ ಖಂ ಪ್ರದಿಶಶ್ಚೈವ ನಾದಯನ್ಭೈರವಸ್ವನಃ||

ಕರ್ಕಶಧ್ವನಿಯಿದ್ದ ಅವನು ಶರದೃತುವಿನ ಮೇಘದಂತೆ ದಿಕ್ಕುಗಳನ್ನೂ, ಆಕಾಶವನ್ನೂ, ಉಪದಿಕ್ಕುಗಳನ್ನೂ ಮೊಳಗಿಸುವಂತೆ ಜೋರಾಗಿ ಗರ್ಜಿಸಿದನು.

06089007a ರಾಕ್ಷಸಸ್ಯ ತು ತಂ ಶಬ್ದಂ ಶ್ರುತ್ವಾ ರಾಜಾ ಯುಧಿಷ್ಠಿರಃ|

06089007c ಉವಾಚ ಭರತಶ್ರೇಷ್ಠೋ ಭೀಮಸೇನಮಿದಂ ವಚಃ||

ರಾಕ್ಷಸನ ಆ ಶಬ್ಧವನ್ನು ಕೇಳಿ ಭರತಶ್ರೇಷ್ಠ ರಾಜಾ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು:

06089008a ಯುಧ್ಯತೇ ರಾಕ್ಷಸೋ ನೂನಂ ಧಾರ್ತರಾಷ್ಟ್ರೈರ್ಮಹಾರಥೈಃ|

06089008c ಯಥಾಸ್ಯ ಶ್ರೂಯತೇ ಶಬ್ದೋ ನದತೋ ಭೈರವಂ ಸ್ವನಂ|

06089008e ಅತಿಭಾರಂ ಚ ಪಶ್ಯಾಮಿ ತತ್ರ ತಾತ ಸಮಾಹಿತಂ||

“ಅಯ್ಯಾ! ಭೈರವ ಸ್ವರದಲ್ಲಿ ಕೂಗುತ್ತಿರುವುದನ್ನು ಕೇಳಿದರೆ ರಾಕ್ಷಸನು ಮಹಾರಥ ಧಾರ್ತರಾಷ್ಟ್ರರೊಂದಿಗೆ ಯುದ್ಧ ಮಾಡುತ್ತಿರುವನೆಂದು ತೋರುತ್ತಿದೆ. ಅಲ್ಲಿ ಅವನು ಅತಿ ಭಾರವಾದ ಕೆಲಸವನ್ನೇ ಮಾಡುತ್ತಿದ್ದಾನೆ.

06089009a ಪಿತಾಮಹಶ್ಚ ಸಂಕ್ರುದ್ಧಃ ಪಾಂಚಾಲಾನ್ ಹಂತುಮುದ್ಯತಃ|

06089009c ತೇಷಾಂ ಚ ರಕ್ಷಣಾರ್ಥಾಯ ಯುಧ್ಯತೇ ಫಲ್ಗುನಃ ಪರೈಃ||

ಪಿತಾಮಹನೂ ಕೂಡ ಸಂಕ್ರುದ್ಧನಾಗಿ ಪಾಂಚಾಲರನ್ನು ಕೊಲ್ಲಲು ತೊಡಗಿದ್ದಾನೆ. ಅವರನ್ನು ರಕ್ಷಿಸಲೋಸುಗ ಫಲ್ಗುನನು ಶತ್ರುಗಳೊಂದಿಗೆ ಯುದ್ಧಮಾಡುತ್ತಿದ್ದಾನೆ.

06089010a ಏತಚ್ಚ್ರುತ್ವಾ ಮಹಾಬಾಹೋ ಕಾರ್ಯದ್ವಯಮುಪಸ್ಥಿತಂ|

06089010c ಗಚ್ಛ ರಕ್ಷಸ್ವ ಹೈಡಿಂಬಂ ಸಂಶಯಂ ಪರಮಂ ಗತಂ||

ಮಹಾಬಾಹೋ! ಇದನ್ನು ಕೇಳಿದರೆ ಎರಡು ಕಾರ್ಯಗಳು ಬಂದೊದಗಿವೆ. ಹೋಗು! ಪರಮ ಸಂಶಯದಲ್ಲಿರುವ ಹೈಡಿಂಬಿಯನ್ನು ರಕ್ಷಿಸು!”

06089011a ಭ್ರಾತುರ್ವಚನಮಾಜ್ಞಾಯ ತ್ವರಮಾಣೋ ವೃಕೋದರಃ|

06089011c ಪ್ರಯಯೌ ಸಿಂಹನಾದೇನ ತ್ರಾಸಯನ್ಸರ್ವಪಾರ್ಥಿವಾನ್|

06089011e ವೇಗೇನ ಮಹತಾ ರಾಜನ್ಪರ್ವಕಾಲೇ ಯಥೋದಧಿಃ||

ರಾಜನ್! ಅಣ್ಣನ ಮಾತನ್ನು ತಿಳಿದುಕೊಂಡು ವೃಕೋದರನು ತ್ವರೆಮಾಡಿ ಸಿಂಹನಾದದಿಂದ ಸರ್ವ ಪಾರ್ಥಿವರನ್ನು ನಡುಗಿಸುತ್ತಾ, ಪರ್ವಕಾಲದಲ್ಲಿ ಸಾಗರವು ಹೇಗೋ ಹಾಗೆ ಮಹಾ ವೇಗದಿಂದ ಆಗಮಿಸಿದನು.

06089012a ತಮನ್ವಯಾತ್ಸತ್ಯಧೃತಿಃ ಸೌಚಿತ್ತಿರ್ಯುದ್ಧದುರ್ಮದಃ|

06089012c ಶ್ರೇಣಿಮಾನ್ವಸುದಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭೂಃ||

06089013a ಅಭಿಮನ್ಯುಮುಖಾಶ್ಚೈವ ದ್ರೌಪದೇಯಾ ಮಹಾರಥಾಃ|

06089013c ಕ್ಷತ್ರದೇವಶ್ಚ ವಿಕ್ರಾಂತಃ ಕ್ಷತ್ರಧರ್ಮಾ ತಥೈವ ಚ||

06089014a ಅನೂಪಾಧಿಪತಿಶ್ಚೈವ ನೀಲಃ ಸ್ವಬಲಮಾಸ್ಥಿತಃ|

06089014c ಮಹತಾ ರಥವಂಶೇನ ಹೈಡಿಂಬಂ ಪರ್ಯವಾರಯನ್||

ಅವನನ್ನೇ ಹಿಂಬಾಲಿಸಿ ಸತ್ಯಧೃತಿ, ಯುದ್ಧದುರ್ಮದ ಸೌಚಿತ್ತಿ, ಶ್ರೇಣಿಮಾನ್, ವಸುದಾನ, ಕಾಶಿರಾಜನ ಮಗ ಅಭಿಭೂ, ಅಭಿಮನ್ಯುವಿನ ನಾಯಕತ್ವದಲ್ಲಿ ಮಹಾರಥ ದ್ರೌಪದೇಯರು, ಪರಾಕ್ರಮಿ ಕ್ಷತ್ರದೇವ, ಕ್ಷತ್ರಧರ್ಮ, ಹಾಗೆಯೇ ಅನೂಪಾಧಿಪ ಸ್ವಬಲಾಶ್ರಯಿ ನೀಲ ಇವರು ಮಹಾ ರಥಗುಂಪುಗಳಿಂದ ಬಂದು ಹೈಡಿಂಬನನ್ನು ಸುತ್ತುವರೆದರು.

06089015a ಕುಂಜರೈಶ್ಚ ಸದಾ ಮತ್ತೈಃ ಷಟ್ಸಹಸ್ರೈಃ ಪ್ರಹಾರಿಭಿಃ|

06089015c ಅಭ್ಯರಕ್ಷಂತ ಸಹಿತಾ ರಾಕ್ಷಸೇಂದ್ರಂ ಘಟೋತ್ಕಚಂ||

ಆರು ಸಾವಿರ ಸದಾ ಮತ್ತಿನಲ್ಲಿರುವ ಆನೆಗಳು ಮತ್ತು ಪ್ರಹಾರಿಗಳು ಒಟ್ಟಿಗೇ ರಾಕ್ಷಸೇಂದ್ರ ಘಟೋತ್ಕಚನನ್ನು ರಕ್ಷಿಸುತ್ತಿದ್ದವು.

06089016a ಸಿಂಹನಾದೇನ ಮಹತಾ ನೇಮಿಘೋಷೇಣ ಚೈವ ಹಿ|

06089016c ಖುರಶಬ್ದನಿನಾದೈಶ್ಚ ಕಂಪಯಂತೋ ವಸುಂಧರಾಂ||

ಮಹಾಸಿಂಹನಾದದಿಂದ, ರಥದ ಗಾಲಿಗಳ ಘೋಷದಿಂದ, ಕುದುರೆಗಳ ಖುರಪುಟಗಳ ಶಬ್ಧಗಳಿಂದ ಅವರು ಭೂಮಿಯನ್ನೇ ನಡುಗಿಸಿದರು.

06089017a ತೇಷಾಮಾಪತತಾಂ ಶ್ರುತ್ವಾ ಶಬ್ದಂ ತಂ ತಾವಕಂ ಬಲಂ|

06089017c ಭೀಮಸೇನಭಯೋದ್ವಿಗ್ನಂ ವಿವರ್ಣವದನಂ ತಥಾ|

06089017e ಪರಿವೃತ್ತಂ ಮಹಾರಾಜ ಪರಿತ್ಯಜ್ಯ ಘಟೋತ್ಕಚಂ||

ಮಹಾರಾಜ! ಅವರು ಹೀಗೆ ಮೇಲೆ ಎರಗಿ ಬರುವ ಶಬ್ಧವನ್ನು ಕೇಳಿ ನಿನ್ನ ಸೇನೆಯು ಭೀಮಸೇನನ ಭಯದಿಂದ ಉದ್ವಿಗ್ನವಾಗಿ ಮುಖದ ಕಳೆಯನ್ನು ಕಳೆದುಕೊಂಡು ಘಟೋತ್ಕಚನನ್ನು ಮುತ್ತಿಗೆ ಹಾಕುವುದನ್ನು ನಿಲ್ಲಿಸಿತು.

06089018a ತತಃ ಪ್ರವವೃತೇ ಯುದ್ಧಂ ತತ್ರ ತತ್ರ ಮಹಾತ್ಮನಾಂ|

06089018c ತಾವಕಾನಾಂ ಪರೇಷಾಂ ಚ ಸಂಗ್ರಾಮೇಷ್ವನಿವರ್ತಿನಾಂ||

ಆಗ ಅಲ್ಲಲ್ಲಿ ಸಂಗ್ರಾಮದಿಂದ ಹಿಂದೆಸರಿಯದೇ ಇದ್ದ ಮಹಾತ್ಮರಾದ ನಿನ್ನವರ ಶತ್ರುಗಳವರ ನಡುವೆ ಯುದ್ಧವು ಪ್ರಾರಂಭವಾಯಿತು.

06089019a ನಾನಾರೂಪಾಣಿ ಶಸ್ತ್ರಾಣಿ ವಿಸೃಜಂತೋ ಮಹಾರಥಾಃ|

06089019c ಅನ್ಯೋನ್ಯಮಭಿಧಾವಂತಃ ಸಂಪ್ರಹಾರಂ ಪ್ರಚಕ್ರಿರೇ|

06089019e ವ್ಯತಿಷಕ್ತಂ ಮಹಾರೌದ್ರಂ ಯುದ್ಧಂ ಭೀರುಭಯಾವಹಂ||

ನಾನಾ ರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಆ ಮಹಾರಥರು ಅನ್ಯೋನ್ಯರ ಮೇಲೆ ಎರಗಿ ಪ್ರಹಾರಮಾಡ ತೊಡಗಿದರು. ಭೀರುಗಳಿಗೆ ಭಯವನ್ನುಂಟುಮಾಡುವ ಮಹಾರೌದ್ರ ಸಂಕುಲ ಯುದ್ಧವು ಅಲ್ಲಿ ನಡೆಯಿತು.

06089020a ಹಯಾ ಗಜೈಃ ಸಮಾಜಗ್ಮುಃ ಪಾದಾತಾ ರಥಿಭಿಃ ಸಹ|

06089020c ಅನ್ಯೋನ್ಯಂ ಸಮರೇ ರಾಜನ್ಪ್ರಾರ್ಥಯಾನಾ ಮಹದ್ಯಶಃ||

ರಾಜನ್! ಮಹಾಯಶಸನ್ನು ಬಯಸಿದ ಕುದುರೆಗಳು ಆನೆಗಳನ್ನು ಮತ್ತು ಪದಾತಿಗಳು ರಥಿಗಳನ್ನು ಎದುರಿಸಿ ಸಮರದಲ್ಲಿ ಅನ್ಯೋನ್ಯರನ್ನು ಆಕ್ರಮಣಿಸಿದರು.

06089021a ಸಹಸಾ ಚಾಭವತ್ತೀವ್ರಂ ಸಮ್ನಿಪಾತಾನ್ಮಹದ್ರಜಃ|

06089021c ರಥಾಶ್ವಗಜಪತ್ತೀನಾಂ ಪದನೇಮಿಸಮುದ್ಧತಂ||

ಗಜಾಶ್ವರಥಪದಾತಿಗಳ ಪದಸಂಘಟ್ಟನೆಯಿಂದ ಮತ್ತು ರಥಚಕ್ರಗಳಿಂದ ಮಹಾ ಧೂಳು ತೀವ್ರವಾಗಿ ಹುಟ್ಟಿತು.

06089022a ಧೂಮ್ರಾರುಣಂ ರಜಸ್ತೀವ್ರಂ ರಣಭೂಮಿಂ ಸಮಾವೃಣೋತ್|

06089022c ನೈವ ಸ್ವೇ ನ ಪರೇ ರಾಜನ್ಸಮಜಾನನ್ಪರಸ್ಪರಂ||

ರಾಜನ್! ಹುಟ್ಟಿದ ಧೂಳು ಸ್ವಲ್ಪ ಹೊತ್ತಿನಲ್ಲಿಯೇ ರಣಾಂಗಣವನ್ನು ಆವರಿಸಿತು. ಅಲ್ಲಿ ನಿನ್ನ ಕಡೆಯವರಾಗಲೀ ಶತ್ರುಗಳ ಕಡೆಯವರಾಗಲೀ ಯಾರು ಯಾರೆಂಬುದನ್ನು ತಿಳಿಯಲೂ ಸಾಧ್ಯವಾಗುತ್ತಿರಲಿಲ್ಲ.

06089023a ಪಿತಾ ಪುತ್ರಂ ನ ಜಾನೀತೇ ಪುತ್ರೋ ವಾ ಪಿತರಂ ತಥಾ|

06089023c ನಿರ್ಮರ್ಯಾದೇ ತಥಾ ಭೂತೇ ವೈಶಸೇ ಲೋಮಹರ್ಷಣ||

ಮರ್ಯಾದೆಯೇ ಇಲ್ಲದ, ರೋಮಾಂಚಕಾರಿಯಾದ, ಜೀವಿಗಳ ಸಂಹಾರಕಾರಿಯಾದ ಆ ಯುದ್ಧದಲ್ಲಿ ತಂದೆಯು ಮಗನನ್ನಾಗಲೀ ಮಗನು ತಂದೆಯನ್ನಾಗಲೀ ಗುರುತಿಸಲಾಗುತ್ತಿರಲಿಲ್ಲ.

06089024a ಶಸ್ತ್ರಾಣಾಂ ಭರತಶ್ರೇಷ್ಠ ಮನುಷ್ಯಾಣಾಂ ಚ ಗರ್ಜತಾಂ|

06089024c ಸುಮಹಾನಭವಚ್ಚಬ್ದೋ ವಂಶಾನಾಂ ಇವ ದಹ್ಯತಾಂ||

ಭರತಶ್ರೇಷ್ಠ! ಶಸ್ತ್ರಗಳ ಮತ್ತು ಮನುಷ್ಯರ ಗರ್ಜನೆಯಿಂದ ಬಿದುರುಮೆಳೆಗಳು ಸುಡುತ್ತಿರುವಂತೆ ಮಹಾ ಶಬ್ಧವು ಉಂಟಾಯಿತು.

06089025a ಗಜವಾಜಿಮನುಷ್ಯಾಣಾಂ ಶೋಣಿತಾಂತ್ರತರಂಗಿಣೀ|

06089025c ಪ್ರಾವರ್ತತ ನದೀ ತತ್ರ ಕೇಶಶೈವಲಶಾದ್ವಲಾ||

ಆನೆ-ಕುದುರೆ-ಮನುಷ್ಯರ ರಕ್ತವೇ ನೀರಾಗಿ, ಕರುಳುಗಳೇ ಪ್ರವಾಹವಾಗಿದ್ದ, ತಲೆಗೂದಲುಗಳೇ ಪಾಚಿ ಹುಲ್ಲುಗಳಾಗಿದ್ದ ನದಿಯು ಅಲ್ಲಿ ಹರಿಯಿತು.

06089026a ನರಾಣಾಂ ಚೈವ ಕಾಯೇಭ್ಯಃ ಶಿರಸಾಂ ಪತತಾಂ ರಣೇ|

06089026c ಶುಶ್ರುವೇ ಸುಮಹಾಂ ಶಬ್ದಃ ಪತತಾಮಶ್ಮನಾಮಿವ||

ರಣದಲ್ಲಿ ಮನುಷ್ಯರ ದೇಹದಿಂದ ಬೀಳುತ್ತಿರುವ ತಲೆಗಳಿಂದ ಕಲ್ಲುಗಳು ಬೀಳುವಂತೆ ಮಹಾ ಶಬ್ಧವು ಕೇಳಿಬರುತ್ತಿತ್ತು.

06089027a ವಿಶಿರಸ್ಕೈರ್ಮನುಷ್ಯೈಶ್ಚ ಚಿನ್ನಗಾತ್ರೈಶ್ಚ ವಾರಣೈಃ|

06089027c ಅಶ್ವೈಃ ಸಂಭಿನ್ನದೇಹೈಶ್ಚ ಸಂಕೀರ್ಣಾಭೂದ್ವಸುಂಧರಾ||

ಶಿರಗಳಿಲ್ಲದ ಮನುಷ್ಯರಿಂದಲೂ, ಛಿನ್ನ-ಭಿನ್ನವಾದ ಆನೆಗಳ ದೇಹಗಳಿಂದಲೂ, ಕತ್ತರಿಸಲ್ಪಟ್ಟ ಕುದುರೆಗಳ ದೇಹಗಳಿಂದಲೂ ವಸುಂಧರೆಯು ತುಂಬಿಹೋಯಿತು.

06089028a ನಾನಾವಿಧಾನಿ ಶಸ್ತ್ರಾಣಿ ವಿಸೃಜಂತೋ ಮಹಾರಥಾಃ|

06089028c ಅನ್ಯೋನ್ಯಮಭಿಧಾವಂತಃ ಸಂಪ್ರಹಾರಂ ಪ್ರಚಕ್ರಿರೇ||

ನಾನಾವಿಧದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಮಹಾರಥರು ಅನ್ಯೋನ್ಯರನ್ನು ಆಕ್ರಮಣಿಸಿ ಹೊಡೆಯ ತೊಡಗಿದರು.

06089029a ಹಯಾ ಹಯಾನ್ಸಮಾಸಾದ್ಯ ಪ್ರೇಷಿತಾ ಹಯಸಾದಿಭಿಃ|

06089029c ಸಮಾಹತ್ಯ ರಣೇಽನ್ಯೋನ್ಯಂ ನಿಪೇತರ್ಗತಜೀವಿತಾಃ||

ಅಶ್ವಾರೋಹಿಗಳಿಂದ ಕಳುಹಿಸಲ್ಪಟ್ಟ ಕುದುರೆಗಳು ಅನ್ಯೋನ್ಯ ಕುದುರೆಗಳೊಡನೆ ಹೋರಾಡಿ ರಣದಲ್ಲಿ ಜೀವವನ್ನು ತೊರೆದು ಬೀಳುತ್ತಿದ್ದವು.

06089030a ನರಾ ನರಾನ್ಸಮಾಸಾದ್ಯ ಕ್ರೋಧರಕ್ತೇಕ್ಷಣಾ ಭೃಶಂ|

06089030c ಉರಾಂಸ್ಯುರೋಭಿರನ್ಯೋನ್ಯಂ ಸಮಾಶ್ಲಿಷ್ಯ ನಿಜಘ್ನಿರೇ||

ತುಂಬಾ ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಮನುಷ್ಯರು ಅನ್ಯೋನ್ಯ ಮನುಷ್ಯರನ್ನು ಬಿಗಿದಪ್ಪಿ ಹಿಗ್ಗಾಮುಗ್ಗಾಗಿ ಸೆಳೆದಾಡಿ ಬೀಳಿಸಿ ಸಂಹರಿಸುತ್ತಿದ್ದರು.

06089031a ಪ್ರೇಷಿತಾಶ್ಚ ಮಹಾಮಾತ್ರೈರ್ವಾರಣಾಃ ಪರವಾರಣಾಃ|

06089031c ಅಭಿಘ್ನಂತಿ ವಿಷಾಣಾಗ್ರೈರ್ವಾರಣಾನೇವ ಸಂಯುಮ್ಯುಗೇ||

ಕಳುಹಿಸಲ್ಪಟ್ಟ ಮಹಾಗಾತ್ರದ ಆನೆಗಳು ಶತ್ರುಗಳ ಆನೆಗಳನ್ನು ಸೊಂಡಿಲುಗಳಿಂದ ಹಿಡಿದೆಳೆದು ಸಂಯುಗದಲ್ಲಿ ದಂತಗಳಿಂದ ತಿವಿದು ಗಾಯಗೊಳಿಸುತ್ತಿದ್ದವು.

06089032a ತೇ ಜಾತರುಧಿರಾಪೀಡಾಃ ಪತಾಕಾಭಿರಲಂಕೃತಾಃ|

06089032c ಸಂಸಕ್ತಾಃ ಪ್ರತ್ಯದೃಶ್ಯಂತ ಮೇಘಾ ಇವ ಸವಿದ್ಯುತಃ||

ಪತಾಕೆಗಳಿಂದ ಅಲಂಕೃತವಾಗಿದ್ದ ಅವುಗಳು ರಕ್ತಮಯವಾಗಿ ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ತೋರುತ್ತಿದ್ದವು.

06089033a ಕೇ ಚಿದ್ಭಿನ್ನಾ ವಿಷಾಣಾಗ್ರೈರ್ಭಿನ್ನಕುಂಭಾಶ್ಚ ತೋಮರೈಃ|

06089033c ವಿನದಂತೋಽಭ್ಯಧಾವಂತ ಗರ್ಜಂತೋ ಜಲದಾ ಇವ||

ಕೆಲವುಗಳ ಅಗ್ರಭಾಗಗಳು ಒಡೆದಿದ್ದವು. ಕೆಲವುಗಳ ಕುಂಭಗಳು ತೋಮರಗಳಿಂದ ಒಡೆದುಹೋಗಿದ್ದವು. ಅವು ಮೋಡಗಳಂತೆ ಗರ್ಜಿಸುತ್ತಾ ಓಡಿ ಹೋಗುತ್ತಿದ್ದವು.

06089034a ಕೇ ಚಿದ್ಧಸ್ತೈರ್ದ್ವಿಧಾ ಚಿನ್ನೈಶ್ಚಿನ್ನಗಾತ್ರಾಸ್ತಥಾಪರೇ|

06089034c ನಿಪೇತುಸ್ತುಮುಲೇ ತಸ್ಮಿಂಶ್ಚಿನ್ನಪಕ್ಷಾ ಇವಾದ್ರಯಃ||

ಕೆಲವುಗಳ ಸೊಂಡಿಲುಗಳು ತುಂಡಾಗಿದ್ದವು. ಇನ್ನು ಕೆಲವುಗಳ ಶರೀರವೇ ತುಂಡಾಗಿತ್ತು. ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಂತೆ ಅವು ರಣಾಂಗಣದಲ್ಲಿ ಬಿದ್ದಿದ್ದವು.

06089035a ಪಾರ್ಶ್ವೈಸ್ತು ದಾರಿತೈರನ್ಯೇ ವಾರಣೈರ್ವರವಾರಣಾಃ|

06089035c ಮುಮುಚುಃ ಶೋಣಿತಂ ಭೂರಿ ಧಾತೂನಿವ ಮಹೀಧರಾಃ||

ಇತರ ಶ್ರೇಷ್ಠ ಆನೆಗಳ ಪಕ್ಕೆಗಳನ್ನು ಇತರ ಆನೆಗಳು ಇರಿದು ಅವು ಖನಿಜವನ್ನು ಸುರಿಸುವ ಪರ್ವತಗಳಂತೆ ರಕ್ತವನ್ನು ಸುರಿಸುತ್ತಿದ್ದವು.

06089036a ನಾರಾಚಾಭಿಹತಾಸ್ತ್ವನ್ಯೇ ತಥಾ ವಿದ್ಧಾಶ್ಚ ತೋಮರೈಃ|

06089036c ಹತಾರೋಹಾ ವ್ಯದೃಶ್ಯಂತ ವಿಶೃಂಗಾ ಇವ ಪರ್ವತಾಃ||

ಕೆಲವು ನಾರಾಚಗಳಿಂದ ಹತವಾಗಿದ್ದವು. ಕೆಲವು ತೋಮರಗಳಿಂದ ಹೊಡೆಯಲ್ಪಟ್ಟಿದ್ದವು. ಆರೋಹಿಗಳು ಹತರಾಗಿ ಅವು ಶೃಂಗಗಳಿಲ್ಲದ ಪರ್ವತಗಳಂತೆ ತೋರುತ್ತಿದ್ದವು.

06089037a ಕೇ ಚಿತ್ಕ್ರೋಧಸಮಾವಿಷ್ಟಾ ಮದಾಂಧಾ ನಿರವಗ್ರಹಾಃ|

06089037c ರಥಾನ್ಹಯಾನ್ಪದಾತಾಂಶ್ಚ ಮಮೃದುಃ ಶತಶೋ ರಣೇ||

ಕೆಲವು ಮದಾಂಧರಾಗಿ ಕ್ರೋಧಸಮಾವಿಷ್ಟಗೊಂಡು, ನಿಯಂತ್ರಣವಿಲ್ಲದೇ ರಣದಲ್ಲಿ ನೂರಾರು ರಥ-ಕುದುರೆ-ಪದಾತಿಗಳನ್ನು ತುಳಿದು ನಾಶಪಡಿಸಿದವು.

06089038a ತಥಾ ಹಯಾ ಹಯಾರೋಹೈಸ್ತಾಡಿತಾಃ ಪ್ರಾಸತೋಮರೈಃ|

06089038c ತೇನ ತೇನಾಭ್ಯವರ್ತಂತ ಕುರ್ವಂತೋ ವ್ಯಾಕುಲಾ ದಿಶಃ||

ಹಾಗೆಯೇ ಪ್ರಾಸತೋಮರಗಳಿಂದ ಹಯಾರೋಹಿಗಳಿಂದ ಹೊಡೆಯಲ್ಪಟ್ಟ ಕುದುರೆಗಳು ದಿಕ್ಕುಗೆಟ್ಟು ಓಡುತ್ತಾ ವ್ಯಾಕುಲವನ್ನುಂಟುಮಾಡುತ್ತಾ ಓಡಿ ಹೋಗುತ್ತಿದ್ದವು.

06089039a ರಥಿನೋ ರಥಿಭಿಃ ಸಾರ್ಧಂ ಕುಲಪುತ್ರಾಸ್ತನುತ್ಯಜಃ|

06089039c ಪರಾಂ ಶಕ್ತಿಂ ಸಮಾಸ್ಥಾಯ ಚಕ್ರುಃ ಕರ್ಮಾಣ್ಯಭೀತವತ್||

ಕುಲಪುತ್ರರಾದ ರಥಿಗಳು ದೇಹವನ್ನು ತ್ಯಜಿಸಿ ಭೀತಿಯಿಲ್ಲದೆ ಇತರ ರಥಿಗಳೊಂದಿಗೆ ಪರಮ ಶಕ್ತಿಯನ್ನು ಉಪಯೋಗಿಸಿ ಹೋರಾಡಿದರು.

06089040a ಸ್ವಯಂವರ ಇವಾಮರ್ದೇ ಪ್ರಜಹ್ರುರಿತರೇತರಂ|

06089040c ಪ್ರಾರ್ಥಯಾನಾ ಯಶೋ ರಾಜನ್ಸ್ವರ್ಗಂ ವಾ ಯುದ್ಧಶಾಲಿನಃ||

ರಾಜನ್! ಯಶಸ್ಸು ಅಥವಾ ಸ್ವರ್ಗವನ್ನು ಬಯಸಿದ ಆ ಯುದ್ಧಶಾಲಿಗಳು ಸ್ವಯಂವರದಂತೆ ಪರಸ್ಪರರನ್ನು ಆರಿಸಿಕೊಂಡು ಪ್ರಹರಿಸುತ್ತಿದ್ದರು.

06089041a ತಸ್ಮಿಂಸ್ತಥಾ ವರ್ತಮಾನೇ ಸಂಗ್ರಾಮೇ ಲೋಮಹರ್ಷಣೇ|

06089041c ಧಾರ್ತರಾಷ್ಟ್ರಂ ಮಹತ್ಸೈನ್ಯಂ ಪ್ರಾಯಶೋ ವಿಮುಖೀಕೃತಂ||

ಹಾಗೆ ನಡೆಯುತ್ತಿದ್ದ ರೋಮಾಂಚಕಾರೀ ಸಂಗ್ರಾಮದಲ್ಲಿ ಧಾರ್ತರಾಷ್ಟ್ರನ ಮಹಾ ಸೈನ್ಯದ ಹೆಚ್ಚು ಭಾಗವು ಯುದ್ಧದಿಂದ ಹಿಂದೆ ಸರಿಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಏಕೋನನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.

Image result for indian motifs against white background

Comments are closed.