Bhishma Parva: Chapter 88

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೮

ಘಟೋತ್ಕಚನ ಯುದ್ಧಪರಾಕ್ರಮ (೧-೩೮).

06088001 ಸಂಜಯ ಉವಾಚ|

06088001a ತತಸ್ತದ್ಬಾಣವರ್ಷಂ ತು ದುಃಸಹಂ ದಾನವೈರಪಿ|

06088001c ದಧಾರ ಯುಧಿ ರಾಜೇಂದ್ರೋ ಯಥಾ ವರ್ಷಂ ಮಹಾದ್ವಿಪಃ||

ಸಂಜಯನು ಹೇಳಿದನು: “ರಾಜೇಂದ್ರನು ದಾನವರಿಗೂ ಸಹಿಸಲಸಾಧ್ಯವಾದ ಅವನ ಆ ಬಾಣಗಳ ಮಳೆಯನ್ನು ಆನೆಯು ಹೇಗೆ ಮಳೆಯನ್ನು ಸಹಿಸಿಕೊಳ್ಳುತ್ತದೆಯೋ ಹಾಗೆ ಸಹಿಸಿಕೊಂಡನು.

06088002a ತತಃ ಕ್ರೋಧಸಮಾವಿಷ್ಟೋ ನಿಃಶ್ವಸನ್ನಿವ ಪನ್ನಗಃ|

06088002c ಸಂಶಯಂ ಪರಮಂ ಪ್ರಾಪ್ತಃ ಪುತ್ರಸ್ತೇ ಭರತರ್ಷಭ||

ಭರತರ್ಷಭ! ಆಗ ಕ್ರೋಧಸಮಾವಿಷ್ಟನಾಗಿ, ಹಾವಿನಂತೆ ನಿಟ್ಟುಸಿರುಬಿಡುತ್ತಾ ನಿನ್ನ ಮಗನು ಪರಮ ಸಂಶಯವನ್ನು ತಾಳಿದನು.

06088003a ಮುಮೋಚ ನಿಶಿತಾಂಸ್ತೀಕ್ಷ್ಣಾನ್ನಾರಾಚಾನ್ಪಂಚವಿಂಶತಿಂ|

06088003c ತೇಽಪತನ್ಸಹಸಾ ರಾಜಂಸ್ತಸ್ಮಿನ್ರಾಕ್ಷಸಪುಂಗವೇ|

06088003e ಆಶೀವಿಷಾ ಇವ ಕ್ರುದ್ಧಾಃ ಪರ್ವತೇ ಗಂಧಮಾದನೇ||

ರಾಜನ್! ಅವನು ಇಪ್ಪತ್ತೈದು ನಿಶಿತ ತೀಕ್ಷ್ಣ ನಾರಾಚಗಳನ್ನು ಪ್ರಯೋಗಿಸಿದನು. ತಕ್ಷಣವೇ ಅವು ಕೋಪಗೊಂಡ ಸರ್ಪಗಳು ಗಂಧಮಾದನ ಪರ್ವತವನ್ನು ಹೇಗೋ ಹಾಗೆ ಆ ರಾಕ್ಷಸ ಪುಂಗವನ ಮೇಲೆ ಬಿದ್ದವು.

06088004a ಸ ತೈರ್ವಿದ್ಧಃ ಸ್ರವನ್ರಕ್ತಂ ಪ್ರಭಿನ್ನ ಇವ ಕುಂಜರಃ|

06088004c ದಧ್ರೇ ಮತಿಂ ವಿನಾಶಾಯ ರಾಜ್ಞಃ ಸ ಪಿಶಿತಾಶನಃ|

06088004e ಜಗ್ರಾಹ ಚ ಮಹಾಶಕ್ತಿಂ ಗಿರೀಣಾಮಪಿ ದಾರಣೀಂ||

ಅವುಗಳಿಂದ ಗಾಯಗೊಂಡು ಕುಂಭಸ್ಥಳವು ಒಡೆದು ಆನೆಯಂತೆ ರಕ್ತವನ್ನು ಸುರಿಸುತ್ತಾ ಅವನು ರಾಜನ ವಿನಾಶವನ್ನು ನಿಶ್ಚಯಿಸಿದನು. ಆಗ ಪರ್ವತವನ್ನೂ ಸೀಳಬಲ್ಲ, ರಕ್ತವನ್ನು ಕುಡಿಯುವ ಮಹಾ ಶಕ್ತಿಯನ್ನು ಹಿಡಿದುಕೊಂಡನು.

06088005a ಸಂಪ್ರದೀಪ್ತಾಂ ಮಹೋಲ್ಕಾಭಾಮಶನೀಂ ಮಘವಾನಿವ|

06088005c ಸಮುದ್ಯಚ್ಛನ್ಮಹಾಬಾಹುರ್ಜಿಘಾಂಸುಸ್ತನಯಂ ತವ||

ಮಹಾ‌ಉಲ್ಕೆಯಂತೆ ಉರಿಯುತ್ತಿದ್ದ, ಮಘವತನ ವಜ್ರದಂತಿದ್ದ ಅದನ್ನು ಮಹಾಬಾಹುವು ನಿನ್ನ ಮಗನನ್ನು ಕೊಲ್ಲಲೋಸುಗ ಪ್ರಯೋಗಿಸಿದನು.

06088006a ತಾಮುದ್ಯತಾಮಭಿಪ್ರೇಕ್ಷ್ಯ ವಂಗಾನಾಮಧಿಪಸ್ತ್ವರನ್|

06088006c ಕುಂಜರಂ ಗಿರಿಸಂಕಾಶಂ ರಾಕ್ಷಸಂ ಪ್ರತ್ಯಚೋದಯತ್||

ಅದು ಬೀಳುತ್ತಿರುವುದನ್ನು ನೋಡಿ ವಂಗದ ಅಧಿಪತಿಯು ತ್ವರೆಮಾಡಿ ಪರ್ವತದಂತಿರುವ ಆನೆಯೊಂದನ್ನು ರಾಕ್ಷಸನ ಕಡೆ ಓಡಿಸಿದನು.

06088007a ಸ ನಾಗಪ್ರವರೇಣಾಜೌ ಬಲಿನಾ ಶೀಘ್ರಗಾಮಿನಾ|

06088007c ಯತೋ ದುರ್ಯೋಧನರಥಸ್ತಂ ಮಾರ್ಗಂ ಪ್ರತ್ಯಪದ್ಯತ|

06088007e ರಥಂ ಚ ವಾರಯಾಮಾಸ ಕುಂಜರೇಣ ಸುತಸ್ಯ ತೇ||

ಅವನು ವೇಗವಾಗಿ ಹೋಗಬಲ್ಲ ಶ್ರೇಷ್ಠ ಬಲಶಾಲಿ ಆನೆಯ ಮೇಲೆ ಕುಳಿತು ದುರ್ಯೋಧನನ ರಥದ ಮಾರ್ಗಕ್ಕೆ ಅಡ್ಡಬಂದು ಆ ಆನೆಯಿಂದ ನಿನ್ನ ಮಗನ ರಥವನ್ನು ತಡೆದನು.

06088008a ಮಾರ್ಗಮಾವಾರಿತಂ ದೃಷ್ಟ್ವಾ ರಾಜ್ಞಾ ವಂಗೇನ ಧೀಮತಾ|

06088008c ಘಟೋತ್ಕಚೋ ಮಹಾರಾಜ ಕ್ರೋಧಸಂರಕ್ತಲೋಚನಃ|

06088008e ಉದ್ಯತಾಂ ತಾಂ ಮಹಾಶಕ್ತಿಂ ತಸ್ಮಿಂಶ್ಚಿಕ್ಷೇಪ ವಾರಣೇ||

ಮಹಾರಾಜ! ಧೀಮತ ವಂಗರಾಜನು ಮಾರ್ಗವನ್ನು ತಡೆದುದನ್ನು ನೋಡಿ ಕ್ರೋಧದಿಂದ ಕಣ್ಣುಗಳನ್ನು ಕೆಂಪಾಗಿಸಿಕೊಂಡು ಘಟೋತ್ಕಚನು ಎತ್ತಿ ಹಿಡಿದಿದ್ದ ಆ ಮಹಾಶಕ್ತಿಯನ್ನು ಆ ಆನೆಯ ಮೇಲೆ ಎಸೆದನು.

06088009a ಸ ತಯಾಭಿಹತೋ ರಾಜಂಸ್ತೇನ ಬಾಹುವಿಮುಕ್ತಯಾ|

06088009c ಸಂಜಾತರುಧಿರೋತ್ಪೀಡಃ ಪಪಾತ ಚ ಮಮಾರ ಚ||

ರಾಜನ್! ಅವನ ಬಾಹುಗಳಿಂದ ಹೊರಟ ಅದರಿಂದ ಹತವಾದ ಆನೆಯು ರಕ್ತವನ್ನು ಸುರಿಸಿ ನೋವಿನಿಂದ ಬಿದ್ದು ಸತ್ತುಹೋಯಿತು.

06088010a ಪತತ್ಯಥ ಗಜೇ ಚಾಪಿ ವಂಗಾನಾಮೀಶ್ವರೋ ಬಲೀ|

06088010c ಜವೇನ ಸಮಭಿದ್ರುತ್ಯ ಜಗಾಮ ಧರಣೀತಲಂ||

ಆನೆಯು ಕೆಳಗೆ ಬೀಳುತ್ತಿದ್ದರೂ ಬಲಶಾಲೀ ವಂಗರಾಜನು ವೇಗದಿಂದ ಭೂಮಿಯ ಮೇಲೆ ಹಾರಿ ಇಳಿದನು.

06088011a ದುರ್ಯೋಧನೋಽಪಿ ಸಂಪ್ರೇಕ್ಷ್ಯ ಪಾತಿತಂ ವರವಾರಣಂ|

06088011c ಪ್ರಭಗ್ನಂ ಚ ಬಲಂ ದೃಷ್ಟ್ವಾ ಜಗಾಮ ಪರಮಾಂ ವ್ಯಥಾಂ||

ದುರ್ಯೋಧನನೂ ಕೂಡ ಶ್ರೇಷ್ಠ ಆನೆಯು ಬಿದ್ದುದನ್ನು ನೋಡಿ ಮತ್ತು ತನ್ನ ಸೇನೆಯು ಭಗ್ನವಾದುದನ್ನು ನೋಡಿ ಪರಮ ವ್ಯಥಿತನಾದನು.

06088012a ಕ್ಷತ್ರಧರ್ಮಂ ಪುರಸ್ಕೃತ್ಯ ಆತ್ಮನಶ್ಚಾಭಿಮಾನಿತಾಂ|

06088012c ಪ್ರಾಪ್ತೇಽಪಕ್ರಮಣೇ ರಾಜಾ ತಸ್ಥೌ ಗಿರಿರಿವಾಚಲಃ||

ಕ್ಷತ್ರಧರ್ಮವನ್ನು ಗೌರವಿಸಿ, ಆತ್ಮಾಭಿಮಾನದಿಂದ ಪಲಾಯನಕ್ಕೆ ಸಂದರ್ಭವಾಗಿದ್ದರೂ ರಾಜನು ಪರ್ವತದಂತೆ ಅಚಲವಾಗಿದ್ದನು.

06088013a ಸಂಧಾಯ ಚ ಶಿತಂ ಬಾಣಂ ಕಾಲಾಗ್ನಿಸಮತೇಜಸಂ|

06088013c ಮುಮೋಚ ಪರಮಕ್ರುದ್ಧಸ್ತಸ್ಮಿನ್ಘೋರೇ ನಿಶಾಚರೇ||

ಪರಮ ಕ್ರುದ್ಧನಾಗಿ ಕಾಲಾಗ್ನಿತೇಜಸ್ಸಿನಿಂದ ಕೂಡಿದ್ದ ಹರಿತ ಬಾಣವನ್ನು ಹೂಡಿ ಅದನ್ನು ಘೋರ ನಿಶಾಚರನ ಮೇಲೆ ಪ್ರಯೋಗಿಸಿದನು.

06088014a ತಮಾಪತಂತಂ ಸಂಪ್ರೇಕ್ಷ್ಯ ಬಾಣಮಿಂದ್ರಾಶನಿಪ್ರಭಂ|

06088014c ಲಾಘವಾದ್ವಂಚಯಾಮಾಸ ಮಹಾಕಾಯೋ ಘಟೋತ್ಕಚಃ||

ಇಂದ್ರನ ವಜ್ರದ ಪ್ರಭೆಯುಳ್ಳ ಆ ಬಾಣವು ಬೀಳುತ್ತಿರುವುದನ್ನು ನೋಡಿ ಮಹಾಕಾಯ ಘಟೋತ್ಕಚನು ಲಾಘವದಿಂದ ಅದನ್ನು ತಪ್ಪಿಸಿಕೊಂಡನು.

06088015a ಭೂಯ ಏವ ನನಾದೋಗ್ರಃ ಕ್ರೋಧಸಂರಕ್ತಲೋಚನಃ|

06088015c ತ್ರಾಸಯನ್ಸರ್ವಭೂತಾನಿ ಯುಗಾಂತೇ ಜಲದೋ ಯಥಾ||

ಇನ್ನೊಮ್ಮೆ ಅವನು ಕ್ರೋಧಸಂರಕ್ತಲೋಚನನಾಗಿ ಯುಗಾಂತದಲ್ಲಿ ಮೋಡಗಳು ಹೇಗೋ ಹಾಗೆ ಸರ್ವಭೂತಗಳನ್ನೂ ನಡುಗಿಸುತ್ತಾ ಜೋರಾಗಿ ಗರ್ಜಿಸಿದನು.

06088016a ತಂ ಶ್ರುತ್ವಾ ನಿನದಂ ಘೋರಂ ತಸ್ಯ ಭೀಷ್ಮಸ್ಯ ರಕ್ಷಸಃ|

06088016c ಆಚಾರ್ಯಮುಪಸಂಗಮ್ಯ ಭೀಷ್ಮಃ ಶಾಂತನವೋಽಬ್ರವೀತ್||

ರಾಕ್ಷಸನ ಆ ಭಯಂಕರ ಘೋರ ಕೂಗನ್ನು ಕೇಳಿ ಭೀಷ್ಮ ಶಾಂತನವನು ಆಚಾರ್ಯನ ಬಳಿಬಂದು ಹೇಳಿದನು:

06088017a ಯಥೈಷ ನಿನದೋ ಘೋರಃ ಶ್ರೂಯತೇ ರಾಕ್ಷಸೇರಿತಃ|

06088017c ಹೈಡಿಂಬೋ ಯುಧ್ಯತೇ ನೂನಂ ರಾಜ್ಞಾ ದುರ್ಯೋಧನೇನ ಹ||

“ರಾಕ್ಷಸನ ಈ ಘೋರ ಗರ್ಜನೆಯು ಕೇಳಿಬರುತ್ತಿದೆಯಲ್ಲವೇ? ಹೈಡಿಂಬಿಯು ರಾಜಾ ದುರ್ಯೋಧನನೊಡನೆ ನೇರ ಯುದ್ಧವನ್ನು ಮಾಡುತ್ತಿರುವಂತಿದೆ.

06088018a ನೈಷ ಶಕ್ಯೋ ಹಿ ಸಂಗ್ರಾಮೇ ಜೇತುಂ ಭೂತೇನ ಕೇನ ಚಿತ್|

06088018c ತತ್ರ ಗಚ್ಛತ ಭದ್ರಂ ವೋ ರಾಜಾನಂ ಪರಿರಕ್ಷತ||

ಇವನನ್ನು ಸಂಗ್ರಾಮದಲ್ಲಿ ಯಾವ ಜೀವಿಯೂ ಗೆಲ್ಲಲು ಶಕ್ಯವಿಲ್ಲ. ನೀವು ಅಲ್ಲಿಗೆ ಹೋಗಿ ರಾಜನನ್ನು ರಕ್ಷಿಸಿರಿ!

06088019a ಅಭಿದ್ರುತಂ ಮಹಾಭಾಗಂ ರಾಕ್ಷಸೇನ ದುರಾತ್ಮನಾ|

06088019c ಏತದ್ಧಿ ಪರಮಂ ಕೃತ್ಯಂ ಸರ್ವೇಷಾಂ ನಃ ಪರಂತಪಾಃ||

ದುರಾತ್ಮ ರಾಕ್ಷಸನು ಮಹಾಭಾಗನನ್ನು ಆಕ್ರಮಣಿಸಿದ್ದಾನೆ. ಪರಂತಪರೇ! ಅವನನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ!”

06088020a ಪಿತಾಮಹವಚಃ ಶ್ರುತ್ವಾ ತ್ವರಮಾಣಾ ಮಹಾರಥಾಃ|

06088020c ಉತ್ತಮಂ ಜವಮಾಸ್ಥಾಯ ಪ್ರಯಯುರ್ಯತ್ರ ಕೌರವಃ||

ಪಿತಾಮಹನ ಮಾತನ್ನು ಕೇಳಿ ಮಹಾರಥರು ತ್ವರೆಮಾಡಿ ಉತ್ತಮ ವೇಗದಿಂದ ಕೌರವನಿದ್ದಲ್ಲಿಗೆ ಹೊರಟರು.

06088021a ದ್ರೋಣಶ್ಚ ಸೋಮದತ್ತಶ್ಚ ಬಾಹ್ಲಿಕಶ್ಚ ಜಯದ್ರಥಃ|

06088021c ಕೃಪೋ ಭೂರಿಶ್ರವಾಃ ಶಲ್ಯಶ್ಚಿತ್ರಸೇನೋ ವಿವಿಂಶತಿಃ||

06088022a ಅಶ್ವತ್ಥಾಮಾ ವಿಕರ್ಣಶ್ಚ ಆವಂತ್ಯಶ್ಚ ಬೃಹದ್ಬಲಃ|

06088022c ರಥಾಶ್ಚಾನೇಕಸಾಹಸ್ರಾ ಯೇ ತೇಷಾಮನುಯಾಯಿನಃ|

06088022e ಅಭಿದ್ರುತಂ ಪರೀಪ್ಸಂತಃ ಪುತ್ರಂ ದುರ್ಯೋಧನಂ ತವ||

ದ್ರೋಣ, ಸೋಮದತ್ತ, ಬಾಹ್ಲಿಕ, ಜಯದ್ರಥ, ಕೃಪ, ಭೂರಿಶ್ರವ, ಶಲ್ಯ, ಚಿತ್ರಸೇನ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಅವಂತಿಯವರು, ಬೃಹದ್ಬಲ, ಮತ್ತು ಅವರನ್ನು ಹಿಂಬಾಲಿಸಿ ಅನೇಕ ಸಹಸ್ರ ರಥಗಳು ನಿನ್ನ ಮಗ ದುರ್ಯೋಧನನನ್ನು ರಕ್ಷಿಸಲು ಧಾವಿಸಿ ಬಂದರು.

06088023a ತದನೀಕಮನಾಧೃಷ್ಯಂ ಪಾಲಿತಂ ಲೋಕಸತ್ತಮೈಃ|

06088023c ಆತತಾಯಿನಮಾಯಾಂತಂ ಪ್ರೇಕ್ಷ್ಯ ರಾಕ್ಷಸಸತ್ತಮಃ|

06088023e ನಾಕಂಪತ ಮಹಾಬಾಹುರ್ಮೈನಾಕ ಇವ ಪರ್ವತಃ||

ಲೋಕ ಸತ್ತಮರಿಂದ ಪಾಲಿತವಾದ ಆ ಅನಾಧೃಷ್ಠ ಸೇನೆಯೊಂದಿಗೆ ಬರುತ್ತಿದ್ದ ಆ ಆತತಾಯಿಯನ್ನು ನೋಡಿ ರಾಕ್ಷಸ ಸತ್ತಮ ಮಹಾಬಾಹುವು ಮೈನಾಕ ಪರ್ವತದಂತೆ ಅಲುಗಾಡಲಿಲ್ಲ.

06088024a ಪ್ರಗೃಹ್ಯ ವಿಪುಲಂ ಚಾಪಂ ಜ್ಞಾತಿಭಿಃ ಪರಿವಾರಿತಃ|

06088024c ಶೂಲಮುದ್ಗರಹಸ್ತೈಶ್ಚ ನಾನಾಪ್ರಹರಣೈರಪಿ||

ಶೂಲ-ಮುದ್ಗರಗಳನ್ನೂ ನಾನಾ ಪ್ರಹರಣಗಳನ್ನೂ ಹಿಡಿದ ಜ್ಞಾತಿಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ವಿಪುಲ ಧನುಸ್ಸನ್ನು ಎತ್ತಿಕೊಂಡನು.

06088025a ತತಃ ಸಮಭವದ್ಯುದ್ಧಂ ತುಮುಲಂ ಲೋಮಹರ್ಷಣ|

06088025c ರಾಕ್ಷಸಾನಾಂ ಚ ಮುಖ್ಯಸ್ಯ ದುರ್ಯೋಧನಬಲಸ್ಯ ಚ||

ಆಗ ರಾಕ್ಷಸ ಮುಖ್ಯ ಮತ್ತು ದುರ್ಯೋಧನನ ಸೇನೆಯ ನಡುವೆ ರೋಮಾಂಚಕಾರಿಯಾದ ತುಮುಲ ಯುದ್ಧವು ನಡೆಯಿತು.

06088026a ಧನುಷಾಂ ಕೂಜತಾಂ ಶಬ್ದಃ ಸರ್ವತಸ್ತುಮುಲೋಽಭವತ್|

06088026c ಅಶ್ರೂಯತ ಮಹಾರಾಜ ವಂಶಾನಾಂ ದಹ್ಯತಾಮಿವ||

ಮಹಾರಾಜ! ಧನುಸ್ಸುಗಳ ಟೇಂಕಾರದ ಶಬ್ಧವು ಎಲ್ಲಕಡೆ ಜೋರಾಗಿ ಬಿದಿರು ಮೆಳೆಗಳು ಸುಡುತ್ತಿರುವಂತೆ ಕೇಳಿ ಬರುತ್ತಿತ್ತು.

06088027a ಶಸ್ತ್ರಾಣಾಂ ಪಾತ್ಯಮಾನಾನಾಂ ಕವಚೇಷು ಶರೀರಿಣಾಂ|

06088027c ಶಬ್ದಃ ಸಮಭವದ್ರಾಜನ್ನದ್ರೀಣಾಮಿವ ದೀರ್ಯತಾಂ||

ರಾಜನ್! ಶರೀರಗಳ ಕವಚಗಳ ಮೇಲೆ ಬೀಳುತ್ತಿದ್ದ ಶಸ್ತ್ರಗಳ ಶಬ್ಧವು ಪರ್ವತಗಳು ಸೀಳುತ್ತಿವೆಯೋ ಎಂಬಂತೆ ಕೇಳಿಬರುತ್ತಿತ್ತು.

06088028a ವೀರಬಾಹುವಿಸೃಷ್ಟಾನಾಂ ತೋಮರಾಣಾಂ ವಿಶಾಂ ಪತೇ|

06088028c ರೂಪಮಾಸೀದ್ವಿಯತ್ಸ್ಥಾನಾಂ ಸರ್ಪಾಣಾಂ ಸರ್ಪತಾಮಿವ||

ವಿಶಾಂಪತೇ! ವೀರಬಾಹುಗಳು ಪ್ರಯೋಗಿಸಿದ ತೋಮರಗಳು ಆಕಾಶದಲ್ಲಿ ತೀವ್ರಗತಿಯಲ್ಲಿ ಚಲಿಸುವ ಸರ್ಪಗಳಂತಿದ್ದವು.

06088029a ತತಃ ಪರಮಸಂಕ್ರುದ್ಧೋ ವಿಸ್ಫಾರ್ಯ ಸುಮಹದ್ಧನುಃ|

06088029c ರಾಕ್ಷಸೇಂದ್ರೋ ಮಹಾಬಾಹುರ್ವಿನದನ್ಭೈರವಂ ರವಂ||

ಆಗ ಮಹಾಬಾಹು ರಾಕ್ಷಸೇಂದ್ರನು ಮಹಾ ಧನುಸ್ಸನ್ನು ಟೇಂಕರಿಸಿ ಭೈರವ ಕೂಗನ್ನು ಕೂಗಿದನು.

06088030a ಆಚಾರ್ಯಸ್ಯಾರ್ಧಚಂದ್ರೇಣ ಕ್ರುದ್ಧಶ್ಚಿಚ್ಛೇದ ಕಾರ್ಮುಕಂ|

06088030c ಸೋಮದತ್ತಸ್ಯ ಭಲ್ಲೇನ ಧ್ವಜಮುನ್ಮಥ್ಯ ಚಾನದತ್||

ಅವನು ಕ್ರುದ್ಧನಾಗಿ ಆಚಾರ್ಯನ ಧನುಸ್ಸನ್ನು ಅರ್ಧಚಂದ್ರ ಬಾಣದಿಂದ ಕತ್ತರಿಸಿದನು. ಭಲ್ಲದಿಂದ ಸೋಮದತ್ತನ ಧ್ವಜವನ್ನು ಹಾರಿಸಿ ಗರ್ಜಿಸಿದನು.

06088031a ಬಾಹ್ಲಿಕಂ ಚ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ|

06088031c ಕೃಪಮೇಕೇನ ವಿವ್ಯಾಧ ಚಿತ್ರಸೇನಂ ತ್ರಿಭಿಃ ಶರೈಃ||

ಮೂರು ಬಾಣಗಳಿಂದ ಬಾಹ್ಲಿಕನ ಎದೆಗೆ ಹೊಡೆದನು. ಒಂದರಿಂದ ಕೃಪನನ್ನೂ ಮೂರು ಶರಗಳಿಂದ ಚಿತ್ರಸೇನನನ್ನೂ ಹೊಡೆದನು.

06088032a ಪೂರ್ಣಾಯತವಿಸೃಷ್ಟೇನ ಸಮ್ಯಕ್ಪ್ರಣಿಹಿತೇನ ಚ|

06088032c ಜತ್ರುದೇಶೇ ಸಮಾಸಾದ್ಯ ವಿಕರ್ಣಂ ಸಮತಾಡಯತ್|

06088032e ನ್ಯಷೀದತ್ಸ ರಥೋಪಸ್ಥೇ ಶೋಣಿತೇನ ಪರಿಪ್ಲುತಃ||

ಚೆನ್ನಾಗಿ ಸಂಪೂರ್ಣವಾಗಿ ಧನುಸ್ಸನ್ನು ಎಳೆದು ವಿಕರ್ಣನ ಜತ್ರುದೇಶಕ್ಕೆ ಗುರಿಯಿಟ್ಟು ಹೊಡೆದನು. ಅವನು ರಕ್ತದಿಂದ ರಥದಲ್ಲಿಯೇ ಕುಸಿದು ಬಿದ್ದನು.

06088033a ತತಃ ಪುನರಮೇಯಾತ್ಮಾ ನಾರಾಚಾನ್ದಶ ಪಂಚ ಚ|

06088033c ಭೂರಿಶ್ರವಸಿ ಸಂಕ್ರುದ್ಧಃ ಪ್ರಾಹಿಣೋದ್ಭರತರ್ಷಭ||

06088033e ತೇ ವರ್ಮ ಭಿತ್ತ್ವಾ ತಸ್ಯಾಶು ಪ್ರಾವಿಶನ್ಮೇದಿನೀತಲಂ||

ಭರತರ್ಷಭ! ಪುನಃ ಆ ಅಮೇಯಾತ್ಮನು ಸಂಕ್ರುದ್ಧನಾಗಿ ಹದಿನೈದು ಬಾಣಗಳನ್ನು ಭೂರಿಶ್ರವನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚವನ್ನು ಭೇದಿಸಿ ಶೀಘ್ರವಾಗಿ ಭೂಮಿಯ ಒಳಹೊಕ್ಕವು.

06088034a ವಿವಿಂಶತೇಶ್ಚ ದ್ರೌಣೇಶ್ಚ ಯಂತಾರೌ ಸಮತಾಡಯತ್|

06088034c ತೌ ಪೇತತೂ ರಥೋಪಸ್ಥೇ ರಶ್ಮೀನುತ್ಸೃಜ್ಯ ವಾಜಿನಾಂ||

ವಿವಿಂಶತಿ ಮತ್ತು ದ್ರೌಣಿಯರ ಸಾರಥಿಗಳನ್ನು ಹೊಡೆಯಲು ಅವರಿಬ್ಬರೂ ಕುದುರೆಗಳ ಕಡಿವಾಣಗಳನ್ನು ಬಿಟ್ಟು ರಥದಿಂದ ಕೆಳಕ್ಕೆ ಬಿದ್ದರು.

06088035a ಸಿಂಧುರಾಜ್ಞೋಽರ್ಧಚಂದ್ರೇಣ ವಾರಾಹಂ ಸ್ವರ್ಣಭೂಷಿತಂ|

06088035c ಉನ್ಮಮಾಥ ಮಹಾರಾಜ ದ್ವಿತೀಯೇನಾಚ್ಛಿನದ್ಧನುಃ||

ಮಹಾರಾಜ! ಅರ್ಧಚಂದ್ರ ಬಾಣದಿಂದ ಸಿಂಧುರಾಜನ ವಾರಾಹ ಚಿಹ್ನೆಯ ಸ್ವರ್ಣಭೂಷಿತ ಧ್ವಜವನ್ನು ಕತ್ತರಿಸಿ ಕೆಡವಿದನು. ಎರಡನೆಯದರಿಂದ ಅವನ ಬಿಲ್ಲನ್ನು ತುಂಡರಿಸಿದನು.

06088036a ಚತುರ್ಭಿರಥ ನಾರಾಚೈರಾವಂತ್ಯಸ್ಯ ಮಹಾತ್ಮನಃ|

06088036c ಜಘಾನ ಚತುರೋ ವಾಹಾನ್ಕ್ರೋಧಸಂರಕ್ತಲೋಚನಃ||

ಆಗ ಕ್ರೋಧಸಂರಕ್ತಲೋಚನನಾದ ಆ ಮಹಾತ್ಮನು ಅವಂತಿಯವನ ನಾಲ್ಕು ಕುದುರೆಗಳನ್ನು ನಾಲ್ಕು ನಾರಾಚಗಳಿಂದ ಸಂಹರಿಸಿದನು.

06088037a ಪೂರ್ಣಾಯತವಿಸೃಷ್ಟೇನ ಪೀತೇನ ನಿಶಿತೇನ ಚ|

06088037c ನಿರ್ಬಿಭೇದ ಮಹಾರಾಜ ರಾಜಪುತ್ರಂ ಬೃಹದ್ಬಲಂ|

06088037e ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್||

ಮಹಾರಾಜ! ಸಂಪೂರ್ಣವಾಗಿ ಎಳೆದು ಬಿಟ್ಟ ನಿಶಿತ ಬಾಣದಿಂದ ರಾಜಪುತ್ರ ಬೃಹದ್ಬಲನನ್ನು ಹೊಡೆದನು. ಆಳವಾಗಿ ಗಾಯಗೊಂಡ ಅವನು ವ್ಯಥಿತನಾಗಿ ರಥದಲ್ಲಿಯೇ ಕುಳಿತುಕೊಂಡನು.

06088038a ಭೃಶಂ ಕ್ರೋಧೇನ ಚಾವಿಷ್ಟೋ ರಥಸ್ಥೋ ರಾಕ್ಷಸಾಧಿಪಃ|

06088038c ಚಿಕ್ಷೇಪ ನಿಶಿತಾಂಸ್ತೀಕ್ಷ್ಣಾಂ ಶರಾನಾಶೀವಿಷೋಪಮಾನ್|

06088038e ಬಿಭಿದುಸ್ತೇ ಮಹಾರಾಜ ಶಲ್ಯಂ ಯುದ್ಧವಿಶಾರದಂ||

ಬಹಳ ಕೋಪದಿಂದ ಆವಿಷ್ಟನಾಗಿ ರಥದಲ್ಲಿ ನಿಂತಿದ್ದ ರಾಕ್ಷಸಾಧಿಪನು ಸರ್ಪಗಳ ವಿಷಕ್ಕೆ ಸಮಾನವಾದ ನಿಶಿತ ತೀಕ್ಷ್ಣ ಶರಗಳನ್ನು ಯುದ್ಧವಿಶಾರದ ಶಲ್ಯನ ಮೇಲೆ ಎಸೆಯಲು ಅವು ಅವನ ಶರೀರವನ್ನು ಭೇದಿಸಿದವು.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೀಷ್ಮವಧಪರ್ವಣಿ ಹೈಡಿಂಬಯುದ್ಧೇ ಅಷ್ಟಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧಪರ್ವದಲ್ಲಿ ಹೈಡಿಂಬಯುದ್ಧ ಎನ್ನುವ ಎಂಭತ್ತೆಂಟನೇ ಅಧ್ಯಾಯವು.

Image result for indian motifs against white background

Comments are closed.