Bhishma Parva: Chapter 87

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೭

ಘಟೋತ್ಕಚ-ದುರ್ಯೋಧನರ ಯುದ್ಧ (೧-೩೦).

06087001 ಧೃತರಾಷ್ಟ್ರ ಉವಾಚ|

06087001a ಇರಾವಂತಂ ತು ನಿಹತಂ ದೃಷ್ಟ್ವಾ ಪಾರ್ಥಾ ಮಹಾರಥಾಃ|

06087001c ಸಂಗ್ರಾಮೇ ಕಿಮಕುರ್ವಂತ ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಇರಾವಂತನು ಹತನಾದುದನ್ನು ನೋಡಿ ಮಹಾರಥ ಪಾರ್ಥರು ಸಂಗ್ರಾಮದಲ್ಲಿ ಏನು ಮಾಡಿದರು ಅದನ್ನು ನನಗೆ ಹೇಳು.”

06087002 ಸಂಜಯ ಉವಾಚ|

06087002a ಇರಾವಂತಂ ತು ನಿಹತಂ ಸಂಗ್ರಾಮೇ ವೀಕ್ಷ್ಯ ರಾಕ್ಷಸಃ|

06087002c ವ್ಯನದತ್ಸುಮಹಾನಾದಂ ಭೈಮಸೇನಿರ್ಘಟೋತ್ಕಚಃ||

ಸಂಜಯನು ಹೇಳಿದನು: “ಇರಾವಂತನು ಸಂಗಮದಲ್ಲಿ ಹತನಾದುದನ್ನು ನೋಡಿ ರಾಕ್ಷಸ ಭೈಮಸೇನಿ ಘಟೋತ್ಕಚನು ಮಹಾಗರ್ಜನೆಯನ್ನು ಗರ್ಜಿಸಿದನು.

06087003a ನದತಸ್ತಸ್ಯ ಶಬ್ದೇನ ಪೃಥಿವೀ ಸಾಗರಾಂಬರಾ|

06087003c ಸಪರ್ವತವನಾ ರಾಜಂಶ್ಚಚಾಲ ಸುಭೃಶಂ ತದಾ|

06087003e ಅಂತರಿಕ್ಷಂ ದಿಶಶ್ಚೈವ ಸರ್ವಾಶ್ಚ ಪ್ರದಿಶಸ್ತಥಾ||

ರಾಜನ್! ಅವನ ಕೂಗಿನ ಶಬ್ಧದಿಂದ ಪೃಥ್ವಿ, ಸಾಗರ, ಆಕಾಶ, ಪರ್ವತ-ವನಗಳು, ಅಂತರಿಕ್ಷ, ದಿಕ್ಕುಗಳು, ಉಪದಿಕ್ಕುಗಳು ಎಲ್ಲವೂ ನಡುಗಿದವು.

06087004a ತಂ ಶ್ರುತ್ವಾ ಸುಮಹಾನಾದಂ ತವ ಸೈನ್ಯಸ್ಯ ಭಾರತ|

06087004c ಊರುಸ್ತಂಭಃ ಸಮಭವದ್ವೇಪಥುಃ ಸ್ವೇದ ಏವ ಚ||

ಭಾರತ! ಆ ಮಹಾನಾದವನ್ನು ಕೇಳಿ ನಿನ್ನ ಸೇನೆಯಲ್ಲಿರುವವರ ತೊಡೆಗಳು ಕಂಭಗಳಂತಾದವು ಮತ್ತು ಅವರ ಬೆವರಿಳಿಯಿತು.

06087005a ಸರ್ವ ಏವ ಚ ರಾಜೇಂದ್ರ ತಾವಕಾ ದೀನಚೇತಸಃ|

06087005c ಸರ್ಪವತ್ಸಮವೇಷ್ಟಂತ ಸಿಂಹಭೀತಾ ಗಜಾ ಇವ||

ರಾಜೇಂದ್ರ! ನಿನ್ನವರೆಲ್ಲರೂ ದೀನ ಚೇತಸರಾಗಿ ಸರ್ಪಗಳಂತೆ ಸುರುಳಿಸುತ್ತಿಕೊಂಡರು ಮತ್ತು ಸಿಂಹಕ್ಕೆ ಹೆದರಿದ ಆನೆಗಳಂತಾದರು.

06087006a ನಿನದತ್ಸುಮಹಾನಾದಂ ನಿರ್ಘಾತಮಿವ ರಾಕ್ಷಸಃ|

06087006c ಜ್ವಲಿತಂ ಶೂಲಮುದ್ಯಮ್ಯ ರೂಪಂ ಕೃತ್ವಾ ವಿಭೀಷಣಂ||

06087007a ನಾನಾಪ್ರಹರಣೈರ್ಘೋರೈರ್ವೃತೋ ರಾಕ್ಷಸಪುಂಗವೈಃ|

06087007c ಆಜಗಾಮ ಸುಸಂಕ್ರುದ್ಧಃ ಕಾಲಾಂತಕಯಮೋಪಮಃ||

ಆ ಮಹಾ ಗರ್ಜನೆಯನ್ನು ಗರ್ಜಿಸಿ ರಾಕ್ಷಸನು ವಿಭೀಷಣ ರೂಪವನ್ನು ಮಾಡಿಕೊಂಡು, ಪ್ರಜ್ವಲಿಸುತ್ತಿರುವ ಶೂಲವನ್ನು ಎತ್ತಿಕೊಂಡು ನಾನಾ ಪ್ರಹರಣಗಳನ್ನು ಹಿಡಿದ ಘೋರ ರಾಕ್ಷಸಪುಂಗವರಿಂದ ಆವೃತನಾಗಿ ಕಾಲಾಂತಕ ಯಮನಂತೆ ಸಂಕ್ರುದ್ಧನಾಗಿ ಬಂದನು.

06087008a ತಮಾಪತಂತಂ ಸಂಪ್ರೇಕ್ಷ್ಯ ಸಂಕ್ರುದ್ಧಂ ಭೀಮದರ್ಶನಂ|

06087008c ಸ್ವಬಲಂ ಚ ಭಯಾತ್ತಸ್ಯ ಪ್ರಾಯಶೋ ವಿಮುಖೀಕೃತಂ||

ಸಂಕ್ರುದ್ಧನಾದ ಭೀಮದರ್ಶನನಾದ ಅವನು ಮೇಲೆ ಬೀಳುವುದನ್ನು ನೋಡಿ ಅವನ ಭಯದಿಂದ ನಿನ್ನ ಸೇನೆಯ ಹೆಚ್ಚು ಭಾಗವು ಪಲಾಯನ ಮಾಡಿತು.

06087009a ತತೋ ದುರ್ಯೋಧನೋ ರಾಜಾ ಘಟೋತ್ಕಚಮುಪಾದ್ರವತ್|

06087009c ಪ್ರಗೃಹ್ಯ ವಿಪುಲಂ ಚಾಪಂ ಸಿಂಹವದ್ವಿನದನ್ಮುಹುಃ||

ಆಗ ರಾಜಾ ದುರ್ಯೋಧನನು ವಿಪುಲ ಚಾಪವನ್ನು ಹಿಡಿದು ಸಿಂಹದಂತೆ ಪುನಃ ಪುನಃ ಗರ್ಜಿಸುತ್ತಾ ಘಟೋತ್ಕಚನ ಮೇಲೆ ಎರಗಿದನು.

06087010a ಪೃಷ್ಠತೋಽನುಯಯೌ ಚೈನಂ ಸ್ರವದ್ಭಿಃ ಪರ್ವತೋಪಮೈಃ|

06087010c ಕುಂಜರೈರ್ದಶಸಾಹಸ್ರೈರ್ವಂಗಾನಾಮಧಿಪಃ ಸ್ವಯಂ||

ಅವನನ್ನು ಅನುಸರಿಸಿ ಪರ್ವತಗಳಂತಿರುವ ಹತ್ತು ಸಾವಿರ ಮದೋದಕವನ್ನು ಸ್ರವಿಸುತ್ತಿದ್ದ ಆನೆಗಳೊಂದಿಗೆ ಸ್ವಯಂ ವಂಗರಾಜನು ಹೋದನು.

06087011a ತಮಾಪತಂತಂ ಸಂಪ್ರೇಕ್ಷ್ಯ ಗಜಾನೀಕೇನ ಸಂವೃತಂ|

06087011c ಪುತ್ರಂ ತವ ಮಹಾರಾಜ ಚುಕೋಪ ಸ ನಿಶಾಚರಃ||

ಮಹಾರಾಜ! ಗಜಸೇನೆಯೊಂದಿಗೆ ಆವೃತನಾಗಿ ಆಕ್ರಮಣಿಸುತ್ತಿರುವ ನಿನ್ನ ಮಗನನ್ನು ನೋಡಿ ನಿಶಾಚರನು ಕುಪಿತನಾದನು.

06087012a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ|

06087012c ರಾಕ್ಷಸಾನಾಂ ಚ ರಾಜೇಂದ್ರ ದುರ್ಯೋಧನಬಲಸ್ಯ ಚ||

ರಾಜೇಂದ್ರ! ಆಗ ರಾಕ್ಷಸರ ಮತ್ತು ದುರ್ಯೋಧನನ ಸೇನೆಗಳ ನಡುವೆ ರೋಮಾಂಚಕಾರೀ ತುಮುಲ ಯುದ್ಧವು ನಡೆಯಿತು.

06087013a ಗಜಾನೀಕಂ ಚ ಸಂಪ್ರೇಕ್ಷ್ಯ ಮೇಘವೃಂದಮಿವೋದ್ಯತಂ|

06087013c ಅಭ್ಯಧಾವಂತ ಸಂಕ್ರುದ್ಧಾ ರಾಕ್ಷಸಾಃ ಶಸ್ತ್ರಪಾಣಯಃ||

ಮೋಡಗಳ ಗುಂಪಿನಂತೆ ಮೇಲೇರಿ ಬರುತ್ತಿದ್ದ ಆ ಗಜಸೇನೆಯನ್ನು ನೋಡಿ ಶಸ್ತ್ರಗಳನ್ನು ಹಿಡಿದಿದ್ದ ಸಂಕ್ರುದ್ಧ ರಾಕ್ಷಸರು ಮುಂದೆ ಧಾವಿಸಿದರು.

06087014a ನದಂತೋ ವಿವಿಧಾನ್ನಾದಾನ್ಮೇಘಾ ಇವ ಸವಿದ್ಯುತಃ|

06087014c ಶರಶಕ್ತ್ಯೃಷ್ಟಿನಾರಾಚೈರ್ನಿಘ್ನಂತೋ ಗಜಯೋಧಿನಃ||

ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ವಿವಿಧ ಗರ್ಜನೆಗಳನ್ನು ಮಾಡುತ್ತಾ ಅವರು ಬಾಣ-ಶಕ್ತಿ-ಋಷ್ಟಿ-ನಾರಾಚಗಳಿಂದ ಗಜಯೋಧಿಗಳನ್ನು ಸಂಹರಿಸಿದರು.

06087015a ಭಿಂಡಿಪಾಲೈಸ್ತಥಾ ಶೂಲೈರ್ಮುದ್ಗರೈಃ ಸಪರಶ್ವಧೈಃ|

06087015c ಪರ್ವತಾಗ್ರೈಶ್ಚ ವೃಕ್ಷೈಶ್ಚ ನಿಜಘ್ನುಸ್ತೇ ಮಹಾಗಜಾನ್||

ಭಿಂಡಿಪಾಲ, ಶೂಲ, ಮುದ್ಗರ, ಪರಶಾಯುಧ, ಪರ್ವತ ಶಿಖರಗಳು ಮತ್ತು ಮರಗಳಿಂದ ಆ ಮಹಾಗಜಗಳನ್ನು ಸಂಹರಿಸಿದರು.

06087016a ಭಿನ್ನಕುಂಭಾನ್ವಿರುಧಿರಾನ್ಭಿನ್ನಗಾತ್ರಾಂಶ್ಚ ವಾರಣಾನ್|

06087016c ಅಪಶ್ಯಾಮ ಮಹಾರಾಜ ವಧ್ಯಮಾನಾನ್ನಿಶಾಚರೈಃ||

ಮಹಾರಾಜ! ನಿಶಾಚರರಿಂದ ವಧಿಸಲ್ಪಟ್ಟ ಕುಂಭಗಳು ಒಡೆದುಹೋಗಿರುವ, ಶರೀರಗಳು ರಕ್ತದಲ್ಲಿ ತೋಯ್ದು ಹೋಗಿರುವ, ಒಡೆದು ಹೋಗಿರುವ ಆನೆಗಳನ್ನು ನೋಡಿದೆವು.

06087017a ತೇಷು ಪ್ರಕ್ಷೀಯಮಾಣೇಷು ಭಗ್ನೇಷು ಗಜಯೋಧಿಷು|

06087017c ದುರ್ಯೋಧನೋ ಮಹಾರಾಜ ರಾಕ್ಷಸಾನ್ಸಮುಪಾದ್ರವತ್||

ಮಹಾರಾಜ! ಆ ಗಜಯೋಧಿಗಳು ಭಗ್ನರಾಗಿ ಕಡಿಮೆಯಾಗಲು ದುರ್ಯೋಧನನು ರಾಕ್ಷಸರನ್ನು ಆಕ್ರಮಣಿಸಿದನು.

06087018a ಅಮರ್ಷವಶಮಾಪನ್ನಸ್ತ್ಯಕ್ತ್ವಾ ಜೀವಿತಮಾತ್ಮನಃ|

06087018c ಮುಮೋಚ ನಿಶಿತಾನ್ಬಾಣಾನ್ರಾಕ್ಷಸೇಷು ಮಹಾಬಲಃ||

ಕೋಪದ ವಶದಲ್ಲಿ ಬಂದು, ತನ್ನ ಜೀವಿತವನ್ನೇ ತ್ಯಜಿಸಿ ಆ ಮಹಾಬಲನು ರಾಕ್ಷಸರ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

06087019a ಜಘಾನ ಚ ಮಹೇಷ್ವಾಸಃ ಪ್ರಧಾನಾಂಸ್ತತ್ರ ರಾಕ್ಷಸಾನ್|

06087019c ಸಂಕ್ರುದ್ಧೋ ಭರತಶ್ರೇಷ್ಠ ಪುತ್ರೋ ದುರ್ಯೋಧನಸ್ತವ||

ಭರತಶ್ರೇಷ್ಠ! ನಿನ್ನ ಪುತ್ರ ಮಹೇಷ್ವಾಸ ದುರ್ಯೋಧನನು ಅಲ್ಲಿ ಸಂಕ್ರುದ್ಧನಾಗಿ ಪ್ರಧಾನ ರಾಕ್ಷಸರನ್ನು ಸಂಹರಿಸಿದನು.

06087020a ವೇಗವಂತಂ ಮಹಾರೌದ್ರಂ ವಿದ್ಯುಜ್ಜಿಹ್ವಂ ಪ್ರಮಾಥಿನಂ|

06087020c ಶರೈಶ್ಚತುರ್ಭಿಶ್ಚತುರೋ ನಿಜಘಾನ ಮಹಾರಥಃ||

ಆ ಮಹಾರಥನು ವೇಗವಂತ, ಮಹಾರೌದ್ರ, ವಿದ್ಯುಜ್ಜಿಹ್ವ ಮತ್ತು ಪ್ರಮಾಥಿ ಈ ನಾಲ್ವರನ್ನು ನಾಲ್ಕು ಶರಗಳಿಂದ ಸಂಹರಿಸಿದನು.

06087021a ತತಃ ಪುನರಮೇಯಾತ್ಮಾ ಶರವರ್ಷಂ ದುರಾಸದಂ|

06087021c ಮುಮೋಚ ಭರತಶ್ರೇಷ್ಠ ನಿಶಾಚರಬಲಂ ಪ್ರತಿ||

ಭರತಶ್ರೇಷ್ಠ! ಆಗ ಪುನಃ ಆ ಅಮೇಯಾತ್ಮನು ದುರಾಸದ ಶರವೃಷ್ಟಿಯನ್ನು ನಿಶಾಚರಸೇನೆಯ ಮೇಲೆ ಪ್ರಯೋಗಿಸಿದನು.

06087022a ತತ್ತು ದೃಷ್ಟ್ವಾ ಮಹತ್ಕರ್ಮ ಪುತ್ರಸ್ಯ ತವ ಮಾರಿಷ|

06087022c ಕ್ರೋಧೇನಾಭಿಪ್ರಜಜ್ವಾಲ ಭೈಮಸೇನಿರ್ಮಹಾಬಲಃ||

ಮಾರಿಷ! ನಿನ್ನ ಮಗನ ಆ ಮಹತ್ಕಾರ್ಯವನ್ನು ನೋಡಿ ಮಹಾಬಲ ಭೈಮಸೇನಿಯು ಕ್ರೋಧದಿಂದ ಭುಗಿಲೆದ್ದನು.

06087023a ವಿಸ್ಫಾರ್ಯ ಚ ಮಹಚ್ಚಾಪಂ ಇಂದ್ರಾಶನಿಸಮಸ್ವನಂ|

06087023c ಅಭಿದುದ್ರಾವ ವೇಗೇನ ದುರ್ಯೋಧನಮರಿಂದಮಂ||

ಇಂದ್ರನ ವಜ್ರದ ಧ್ವನಿಯಿರುವ ಮಹಾ ಧನುಸ್ಸನ್ನು ಟೇಂಕರಿಸಿ ಅರಿಂದಮ ದುರ್ಯೋಧನನನ್ನು ವೇಗದಿಂದ ಆಕ್ರಮಣಿಸಿದನು.

06087024a ತಮಾಪತಂತಮುದ್ವೀಕ್ಷ್ಯ ಕಾಲಸೃಷ್ಟಮಿವಾಂತಕಂ|

06087024c ನ ವಿವ್ಯಥೇ ಮಹಾರಾಜ ಪುತ್ರೋ ದುರ್ಯೋಧನಸ್ತವ||

ಮಹಾರಾಜ! ಕಾಲನಿಂದ ಬಿಡಲ್ಪಟ್ಟ ಅಂತಕನಂತಿರುವ ಅವನು ಮೇಲೆ ಬೀಳುವುದನ್ನು ನೋಡಿ ನಿನ್ನ ಪುತ್ರ ದುರ್ಯೋಧನನು ವ್ಯಥಿತನಾಗಲಿಲ್ಲ.

06087025a ಅಥೈನಮಬ್ರವೀತ್ಕ್ರುದ್ಧಃ ಕ್ರೂರಃ ಸಂರಕ್ತಲೋಚನಃ|

06087025c ಯೇ ತ್ವಯಾ ಸುನೃಶಂಸೇನ ದೀರ್ಘಕಾಲಂ ಪ್ರವಾಸಿತಾಃ|

06087025e ಯಚ್ಚ ತೇ ಪಾಂಡವಾ ರಾಜಂಶ್ಚಲದ್ಯೂತೇ ಪರಾಜಿತಾಃ||

06087026a ಯಚ್ಚೈವ ದ್ರೌಪದೀ ಕೃಷ್ಣಾ ಏಕವಸ್ತ್ರಾ ರಜಸ್ವಲಾ|

06087026c ಸಭಾಮಾನೀಯ ದುರ್ಬುದ್ಧೇ ಬಹುಧಾ ಕ್ಲೇಶಿತಾ ತ್ವಯಾ||

06087027a ತವ ಚ ಪ್ರಿಯಕಾಮೇನ ಆಶ್ರಮಸ್ಥಾ ದುರಾತ್ಮನಾ|

06087027c ಸೈಂಧವೇನ ಪರಿಕ್ಲಿಷ್ಟಾ ಪರಿಭೂಯ ಪಿತೄನ್ಮಮ||

06087028a ಏತೇಷಾಮವಮಾನಾನಾಮನ್ಯೇಷಾಂ ಚ ಕುಲಾಧಮ|

06087028c ಅಂತಮದ್ಯ ಗಮಿಷ್ಯಾಮಿ ಯದಿ ನೋತ್ಸೃಜಸೇ ರಣಂ||

ಆಗ ಆ ಕ್ರೂರನು ಕ್ರೋಧದಿಂದ ಸಂರಕ್ತಲೋಚನನಾಗಿ ಹೇಳಿದನು: “ರಾಜನ್! ದುರ್ಬುದ್ಧೇ! ಕುಲಾಧಮ! ಪಾಂಡವರನ್ನು ಮೋಸದಿಂದ ಸೋಲಿಸಿ ಕ್ರೂರತನದಿಂದ ದೀರ್ಘಕಾಲ ಹೊರಗಟ್ಟಿದುದರ, ರಜಸ್ವಲೆಯಾಗಿ ಏಕವಸ್ತ್ರವನ್ನು ಧರಿಸಿದ್ದ ಕೃಷ್ಣೆ ದ್ರೌಪದಿಯನ್ನು ಸಭೆಗೆ ಎಳೆದುತಂದು ಬಹುರೀತಿಯಾಗಿ ಕಷ್ಟಕೊಟ್ಟಿದುದರ, ನಿನಗೆ ಪ್ರಿಯವಾದುದನ್ನು ಬಯಸಿ ಆಶ್ರಮಸ್ಥರಾಗಿದ್ದ ನನ್ನ ತಂದೆಯಂದಿರನ್ನು ಆ ದುರಾತ್ಮ ಸೈಂಧವನು ಕಾಡಿದುದರ ಈ ಎಲ್ಲ ಮತ್ತು ಇತರ ಅನ್ಯಾಯಗಳನ್ನು ಇಂದು, ರಣವನ್ನು ಬಿಟ್ಟು ನೀನು ಹೋಗದೇ ಇದ್ದರೆ, ಅಂತ್ಯಗೊಳಿಸಿಯೇ ಹೋಗುತ್ತೇನೆ.”

06087029a ಏವಮುಕ್ತ್ವಾ ತು ಹೈಡಿಂಬೋ ಮಹದ್ವಿಸ್ಫಾರ್ಯ ಕಾರ್ಮುಕಂ|

06087029c ಸಂದಶ್ಯ ದಶನೈರೋಷ್ಠಂ ಸೃಕ್ಕಿಣೀ ಪರಿಸಂಲಿಹನ್||

06087030a ಶರವರ್ಷೇಣ ಮಹತಾ ದುರ್ಯೋಧನಮವಾಕಿರತ್|

06087030c ಪರ್ವತಂ ವಾರಿಧಾರಾಭಿಃ ಪ್ರಾವೃಷೀವ ಬಲಾಹಕಃ||

ಹೀಗೆ ಹೇಳಿ ಹೈಡಿಂಬಿಯು ಧನುಸ್ಸನ್ನು ಜೋರಾಗಿ ಎಳೆದು ಹತ್ತು ಬಾಣಗಳನ್ನು ಹೂಡಿ ತುಟಿಕಚ್ಚಿ, ಕಟವಾಯಿಗಳನ್ನು ನೆಕ್ಕುತ್ತಾ, ಮೋಡಗಳು ಮಳೆಯ ನೀರಿನಿಂದ ಪರ್ವತವನ್ನು ಹೇಗೋ ಹಾಗೆ ಮಹಾ ಶರವರ್ಷದಿಂದ ದುರ್ಯೋಧನನನ್ನು ಮುಚ್ಚಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಹೈಡಿಂಬಯುದ್ಧೇ ಸಪ್ತಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಹೈಡಿಂಬಯುದ್ಧ ಎನ್ನುವ ಎಂಭತ್ತೇಳನೇ ಅಧ್ಯಾಯವು.

Image result for flowers against white background

Comments are closed.