ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೮೬
ಉಲೂಪಿಯಲ್ಲಿ ಅರ್ಜುನನನಿಗೆ ಹುಟ್ಟಿದ್ದ ಇರಾವಾನನು ತನ್ನ ಅಶ್ವಸೇನೆಯೊಂದಿಗೆ ರಣವನ್ನು ಪ್ರವೇಶಿಸಿದುದು (೧-೧೫). ಇರಾವಾನನು ಶಕುನಿಯ ಐವರು ಸಹೋದರರನ್ನು ವಧಿಸಿದುದು (೧೬-೪೨). ಆರ್ಶ್ಯಶೃಂಗಿ-ಇರಾವಾನರ ಮಾಯಾ ಯುದ್ಧ; ಇರಾವಾನನ ವಧೆ (೪೩-೭೧). ಸಂಕುಲಯುದ್ಧ (೭೨-೮೬).
06086001 ಸಂಜಯ ಉವಾಚ|
06086001a ವರ್ತಮಾನೇ ತಥಾ ರೌದ್ರೇ ರಾಜನ್ವೀರವರಕ್ಷಯೇ|
06086001c ಶಕುನಿಃ ಸೌಬಲಃ ಶ್ರೀಮಾನ್ಪಾಂಡವಾನ್ಸಮುಪಾದ್ರವತ್||
ಸಂಜಯನು ಹೇಳಿದನು: “ರಾಜನ್! ಹಾಗೆ ನಡೆಯುತ್ತಿರುವ ವೀರವರಕ್ಷಯ ರೌದ್ರ ಯುದ್ದದಲ್ಲಿ ಶ್ರೀಮಾನ್ ಸೌಬಲ ಶಕುನಿಯು ಪಾಂಡವರನ್ನು ಎದುರಿಸಿದನು.
06086002a ತಥೈವ ಸಾತ್ವತೋ ರಾಜನ್ ಹಾರ್ದಿಕ್ಯಃ ಪರವೀರಹಾ|
06086002c ಅಭ್ಯದ್ರವತ ಸಂಗ್ರಾಮೇ ಪಾಂಡವಾನಾಮನೀಕಿನೀಂ||
ರಾಜನ್! ಹಾಗೆಯೇ ಪರವೀರಹ ಸಾತ್ವತ ಹಾರ್ದಿಕ್ಯನೂ ಕೂಡ ಸಂಗ್ರಾಮದಲ್ಲಿ ಪಾಂಡವರ ಸೇನೆಯನ್ನು ಆಕ್ರಮಣಿಸಿದನು.
06086003a ತತಃ ಕಾಂಬೋಜಮುಖ್ಯಾನಾಂ ನದೀಜಾನಾಂ ಚ ವಾಜಿನಾಂ|
06086003c ಆರಟ್ಟಾನಾಂ ಮಹೀಜಾನಾಂ ಸಿಂಧುಜಾನಾಂ ಚ ಸರ್ವಶಃ||
06086004a ವನಾಯುಜಾನಾಂ ಶುಭ್ರಾಣಾಂ ತಥಾ ಪರ್ವತವಾಸಿನಾಂ|
06086004c ಯೇ ಚಾಪರೇ ತಿತ್ತಿರಜಾ ಜವನಾ ವಾತರಂಹಸಃ||
06086005a ಸುವರ್ಣಾಲಂಕೃತೈರೇತೈರ್ವರ್ಮವದ್ಭಿಃ ಸುಕಲ್ಪಿತೈಃ|
06086005c ಹಯೈರ್ವಾತಜವೈರ್ಮುಖ್ಯೈಃ ಪಾಂಡವಸ್ಯ ಸುತೋ ಬಲೀ||
06086005e ಅಭ್ಯವರ್ತತ ತತ್ಸೈನ್ಯಂ ಹೃಷ್ಟರೂಪಃ ಪರಂತಪಃ||
ಆಗ ಕಾಂಬೋಜಮುಖ್ಯ ಮತ್ತು ನದಿಗಳಲ್ಲಿ ಹುಟ್ಟಿದ ಕುದುರೆಗಳಿಂದ, ಅರಟ್ಟರು, ಮಹೀಜರು ಮತ್ತು ಸಿಂಧುಜರಿಂದ ಸುತ್ತುವರೆಯಲ್ಪಟ್ಟು, ವನಾಯುಜರು, ಶುಭ್ರರು ಮತ್ತು ಪರ್ವತವಾಸಿಗಳಿಂದ, ಮತ್ತು ಇತರ ತಿತ್ತಿರಜ ಮೊದಲಾದ ವಾಯುವೇಗವುಳ್ಳ ಸುವರ್ಣಾಲಂಕೃತಗೊಂಡ, ಕವಚಕಗಳನ್ನು ಧರಿಸಿದ್ದ ಸುಕಲ್ಪಿತವಾದ, ಹಯಗಳೊಡನೆ ಪಾಂಡವನ ಬಲಶಾಲೀ ಮಗ ಹೃಷ್ಟರೂಪ ಪರಂತಪನು ಆ ಸೈನ್ಯವನ್ನು ಎದುರಿಸಿದನು.
06086006a ಅರ್ಜುನಸ್ಯಾಥ ದಾಯಾದ ಇರಾವಾನ್ನಾಮ ವೀರ್ಯವಾನ್|
06086006c ಸುತಾಯಾಂ ನಾಗರಾಜಸ್ಯ ಜಾತಃ ಪಾರ್ಥೇನ ಧೀಮತಾ||
ಇವನು ಇರಾವನ್ ಎಂಬ ಹೆಸರಿನ ಅರ್ಜುನನ ವೀರ್ಯವಾನ್ ಮಗ. ನಾಗರಾಜನ ಮಗಳಲ್ಲಿ ಧೀಮತ ಪಾರ್ಥನಿಂದ ಹುಟ್ಟಿದವನು.
06086007a ಐರಾವತೇನ ಸಾ ದತ್ತಾ ಅನಪತ್ಯಾ ಮಹಾತ್ಮನಾ|
06086007c ಪತ್ಯೌ ಹತೇ ಸುಪರ್ಣೇನ ಕೃಪಣಾ ದೀನಚೇತನಾ||
ಗರುಡನಿಂದ ತನ್ನ ಪತಿಯನ್ನು ಕಳೆದುಕೊಂಡ ಮಕ್ಕಳಿರದ, ದೀನಚೇತನಳಾಗಿದ್ದ, ಕೃಪಣಳಾಗಿದ್ದ ಅವಳನ್ನು ಮಹಾತ್ಮ ಐರಾವತನು ಅವನಿಗೆ ಕೊಟ್ಟಿದ್ದನು.
06086008a ಭಾರ್ಯಾರ್ಥಂ ತಾಂ ಚ ಜಗ್ರಾಹ ಪಾರ್ಥಃ ಕಾಮವಶಾನುಗಾಂ|
06086008c ಏವಮೇಷ ಸಮುತ್ಪನ್ನಃ ಪರಕ್ಷೇತ್ರೇಽರ್ಜುನಾತ್ಮಜಃ||
ಕಾಮವಶಾನುಗಳಾಗಿದ್ದ ಅವಳನ್ನು ಪಾರ್ಥನು ಪತ್ನಿಯನ್ನಾಗಿ ಸ್ವೀಕರಿಸಿದ್ದನು. ಇವನೇ ಇನ್ನೊಬ್ಬನ ಹೆಂಡತಿಯಲ್ಲಿ (ಪರಕ್ಷೇತ್ರದಲ್ಲಿ) ಹುಟ್ಟಿದ ಅರ್ಜುನನ ಮಗ[1].
06086009a ಸ ನಾಗಲೋಕೇ ಸಂವೃದ್ಧೋ ಮಾತ್ರಾ ಚ ಪರಿರಕ್ಷಿತಃ|
06086009c ಪಿತೃವ್ಯೇಣ ಪರಿತ್ಯಕ್ತಃ ಪಾರ್ಥದ್ವೇಷಾದ್ದುರಾತ್ಮನಾ||
ಪಾರ್ಥನ ದ್ವೇಷದಿಂದಾಗಿ ಚಿಕ್ಕಪ್ಪನಿಂದ ಪರಿತ್ಯಕ್ತನಾದ ಅವನು ನಾಗಲೋಕದಲ್ಲಿ ತಾಯಿಯಿಂದ ಪರಿರಕ್ಷಿತನಾಗಿ ಬೆಳೆದನು[2].
06086010a ರೂಪವಾನ್ವೀರ್ಯಸಂಪನ್ನೋ ಗುಣವಾನ್ಸತ್ಯವಿಕ್ರಮಃ|
06086010c ಇಂದ್ರಲೋಕಂ ಜಗಾಮಾಶು ಶ್ರುತ್ವಾ ತತ್ರಾರ್ಜುನಂ ಗತಂ||
ರೂಪವಂತನೂ, ಗುಣವಂತನೂ, ವೀರ್ಯಸಂಪನ್ನನೂ, ಸತ್ಯವಿಕ್ರಮಿಯೂ ಆದ ಅವನು ಅಲ್ಲಿಗೆ ಅರ್ಜುನನು ಹೋಗಿದ್ದುದನ್ನು ಕೇಳಿ ಇಂದ್ರಲೋಕಕ್ಕೆ ಹೋಗಿದ್ದನು.
06086011a ಸೋಽಭಿಗಮ್ಯ ಮಹಾತ್ಮಾನಂ ಪಿತರಂ ಸತ್ಯವಿಕ್ರಮಂ|
06086011c ಅಭ್ಯವಾದಯದವ್ಯಗ್ರೋ ವಿನಯೇನ ಕೃತಾಂಜಲಿಃ|
06086011e ಇರಾವಾನಸ್ಮಿ ಭದ್ರಂ ತೇ ಪುತ್ರಶ್ಚಾಹಂ ತವಾಭಿಭೋ||
ಆ ಅವ್ಯಗ್ರನು ಅಲ್ಲಿಗೆ ಹೋಗಿ ತಂದೆ ಮಹಾತ್ಮ ಸತ್ಯವಿಕ್ರಮಿಗೆ ವಿನಯದಿಂದ ಕೈಮುಗಿದು ನಮಸ್ಕರಿಸಿ ಹೇಳಿದ್ದನು: “ಪ್ರಭೋ! ನಾನು ಇರಾವಾನ್. ನಿನ್ನ ಮಗ.”
06086012a ಮಾತುಃ ಸಮಾಗಮೋ ಯಶ್ಚ ತತ್ಸರ್ವಂ ಪ್ರತ್ಯವೇದಯತ್|
06086012c ತಚ್ಚ ಸರ್ವಂ ಯಥಾವೃತ್ತಮನುಸಸ್ಮಾರ ಪಾಂಡವಃ||
ಅವನು ತಾಯಿಯನ್ನು ಎಂದು ಭೇಟಿಯಾಗಿದ್ದನು ಎಲ್ಲವನ್ನೂ ಹೇಳಿಕೊಂಡನು. ಅವೆಲ್ಲವನ್ನು ನಡೆದ ಹಾಗೆಯೇ ಪಾಂಡವನು ನೆನಪಿಸಿಕೊಂಡನು.
06086013a ಪರಿಷ್ವಜ್ಯ ಸುತಂ ಚಾಪಿ ಸೋಽಆತ್ಮನಃ ಸದೃಶಂ ಗುಣೈಃ|
06086013c ಪ್ರೀತಿಮಾನಭವತ್ಪಾರ್ಥೋ ದೇವರಾಜನಿವೇಶನೇ||
ದೇವರಾಜ ನಿವೇಶನದಲ್ಲಿ ಪಾರ್ಥನು ತನ್ನದೇ ಸಮಾನ ಗುಣಗಳನ್ನು ಹೊಂದಿದ್ದ ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂತೋಷಭರಿತನಾಗಿದ್ದನು.
06086014a ಸೋಽರ್ಜುನೇನ ಸಮಾಜ್ಞಪ್ತೋ ದೇವಲೋಕೇ ತದಾ ನೃಪ|
06086014c ಪ್ರೀತಿಪೂರ್ವಂ ಮಹಾಬಾಹುಃ ಸ್ವಕಾರ್ಯಂ ಪ್ರತಿ ಭಾರತ|
06086014e ಯುದ್ಧಕಾಲೇ ತ್ವಯಾಸ್ಮಾಕಂ ಸಾಹ್ಯಂ ದೇಯಮಿತಿ ಪ್ರಭೋ||
ನೃಪ! ಪ್ರಭೋ! ಭಾರತ! ಆಗ ದೇವಲೋಕದಲ್ಲಿ ಮಹಾಬಾಹು ಅರ್ಜುನನು ಸ್ವಕಾರ್ಯಕ್ಕಾಗಿ ಪ್ರೀತಿಪೂರ್ವಕವಾಗಿ ಯುದ್ಧಕಾಲದಲ್ಲಿ ನಮಗೆ ನಿನ್ನ ಸಹಾಯವನ್ನು ನೀಡು ಎಂದು ಆಜ್ಞೆಯಿತ್ತಿದ್ದನು.
06086015a ಬಾಢಮಿತ್ಯೇವಮುಕ್ತ್ವಾ ಚ ಯುದ್ಧಕಾಲ ಉಪಾಗತಃ|
06086015c ಕಾಮವರ್ಣಜವೈರಶ್ವೈಃ ಸಂವೃತೋ ಬಹುಭಿರ್ನೃಪ||
ಒಳ್ಳೆಯದು ಎಂದು ಹೇಳಿ ಅವನು ಯುದ್ಧಕಾಲದಲ್ಲಿ ಅನೇಕ ಕಾಮವರ್ಣಗಳ, ವೇಗಶಾಲೀ ಕುದುರೆಗಳಿಂದ ಸಂವೃತನಾಗಿ ಬಂದನು.
06086016a ತೇ ಹಯಾಃ ಕಾಂಚನಾಪೀಡಾ ನಾನಾವರ್ಣಾ ಮನೋಜವಾಃ|
06086016c ಉತ್ಪೇತುಃ ಸಹಸಾ ರಾಜನ್ ಹಂಸಾ ಇವ ಮಹೋದಧೌ||
ರಾಜನ್! ಕಾಂಚನದೇಹದ, ನಾನಾವರ್ಣಗಳ, ಮನಸ್ಸಿನ ವೇಗವುಳ್ಳ ಆ ಕುದುರೆಗಳು ಒಮ್ಮಿಂದೊಮ್ಮೆಲೇ ಹಂಸಗಳಂತೆ ಮಹಾಸಾಗರದಿಂದ ಮೇಲೆದ್ದವು.
06086017a ತೇ ತ್ವದೀಯಾನ್ಸಮಾಸಾದ್ಯ ಹಯಸಂಘಾನ್ಮಹಾಜವಾನ್|
06086017c ಕ್ರೋಡೈಃ ಕ್ರೋಡಾನಭಿಘ್ನಂತೋ ಘೋಣಾಭಿಶ್ಚ ಪರಸ್ಪರಂ|
06086017e ನಿಪೇತುಃ ಸಹಸಾ ರಾಜನ್ಸುವೇಗಾಭಿಹತಾ ಭುವಿ||
ಅವು ನಿನ್ನ ಸೇನೆಯ ಕುದುರೆಗಳ ಗುಂಪನ್ನು ತಲುಪಿ ಮೂಗಿನಿಂದ ಮೂಗುಗಳನ್ನು, ಕುತ್ತಿಗೆಗಳನ್ನು ಪರಸ್ಪರ ಹೊಡೆಯಲು ನಿನ್ನವರ ಕುದುರೆಗಳು ತಕ್ಷಣವೇ ಭೂಮಿಯ ಮೇಲೆ ಬಿದ್ದವು.
06086018a ನಿಪತದ್ಭಿಸ್ತಥಾ ತೈಶ್ಚ ಹಯಸಂಘೈಃ ಪರಸ್ಪರಂ|
06086018c ಶುಶ್ರುವೇ ದಾರುಣಃ ಶಬ್ದಃ ಸುಪರ್ಣಪತನೇ ಯಥಾ||
ಆ ಕುದುರೆಗಳ ಸಮೂಹಗಳು ಪರಸ್ಪರರನ್ನು ಹೊಡೆದು ಬೀಳಿಸುವಾಗ ಗರುಡನು ಕೆಳಗಿಳಿಯುವಂತೆ ದಾರುಣ ಶಬ್ಧವು ಕೇಳಿಬಂದಿತು.
06086019a ತಥೈವ ಚ ಮಹಾರಾಜ ಸಮೇತ್ಯಾನ್ಯೋನ್ಯಮಾಹವೇ|
06086019c ಪರಸ್ಪರವಧಂ ಘೋರಂ ಚಕ್ರುಸ್ತೇ ಹಯಸಾದಿನಃ||
ಮಹಾರಾಜ! ಹಾಗೆಯೇ ಯುದ್ಧದಲ್ಲಿ ಅನ್ಯೋನ್ಯರನ್ನು ತಾಗಿ ಆ ಅಶ್ವಾರೋಹಿಗಳು ಘೋರ ಪರಸ್ಪರವಧೆಯಲ್ಲಿ ತೊಡಗಿದರು.
06086020a ತಸ್ಮಿಂಸ್ತಥಾ ವರ್ತಮಾನೇ ಸಂಕುಲೇ ತುಮುಲೇ ಭೃಶಂ|
06086020c ಉಭಯೋರಪಿ ಸಂಶಾಂತಾ ಹಯಸಂಘಾಃ ಸಮಂತತಃ||
ನಡೆಯುತ್ತಿದ್ದ ಆ ತುಮುಲ ಸಂಕುಲ ಯುದ್ಧದಲ್ಲಿ ಎರಡೂ ಕಡೆಯ ಕುದುರೆಗಳು ಗುಂಪು ಗುಂಪಾಗಿ ಎಲ್ಲ ಕಡೆ ಓಡುತ್ತಿದ್ದವು.
06086021a ಪ್ರಕ್ಷೀಣಸಾಯಕಾಃ ಶೂರಾ ನಿಹತಾಶ್ವಾಃ ಶ್ರಮಾತುರಾಃ|
06086021c ವಿಲಯಂ ಸಮನುಪ್ರಾಪ್ತಾಸ್ತಕ್ಷಮಾಣಾಃ ಪರಸ್ಪರಂ||
ಸಾಯಕಗಳಿಂದ ಗಾಯಗೊಂಡು, ಅಶ್ವಗಳನ್ನು ಕಳೆದುಕೊಂಡು ಆಯಾಸಗೊಂಡ ಶೂರರು ಪರಸ್ಪರರನ್ನು ಎದುರಿಸಿ ನಾಶ ಹೊಂದಿದರು.
06086022a ತತಃ ಕ್ಷೀಣೇ ಹಯಾನೀಕೇ ಕಿಂಚಿಚ್ಛೇಷೇ ಚ ಭಾರತ|
06086022c ಸೌಬಲಸ್ಯಾತ್ಮಜಾಃ[3] ಶೂರಾ ನಿರ್ಗತಾ ರಣಮೂರ್ಧನಿ||
ಭಾರತ! ಕುದುರೆಗಳ ಸೇನೆಗಳು ನಾಶವಾಗಿ ಸ್ವಲ್ಪವೇ ಉಳಿದಿರಲು ಸುಬಲನ ಶೂರ ಮಕ್ಕಳು ರಣಮೂರ್ಧನಿಗೆ ತೆರಳಿದರು.
06086023a ವಾಯುವೇಗಸಮಸ್ಪರ್ಶಾ ಜವೇ ವಾಯುಸಮಾಂಸ್ತಥಾ|
06086023c ಆರುಹ್ಯಯ ಶೀಲಸಂಪನ್ನಾನ್ವಯಃಸ್ಥಾಂಸ್ತುರಗೋತ್ತಮಾನ್||
06086024a ಗಜೋ ಗವಾಕ್ಷೋ ವೃಷಕಶ್ಚರ್ಮವಾನಾರ್ಜವಃ ಶುಕಃ|
06086024c ಷಡೇತೇ ಬಲಸಂಪನ್ನಾ ನಿರ್ಯಯುರ್ಮಹತೋ ಬಲಾತ್||
ಗಜ, ಗವಾಕ್ಷ, ವೃಷಕ, ಚರ್ಮವಾನ್, ಆರ್ಜವ ಮತ್ತು ಶುಕ ಈ ಆರು ಬಲಸಂಪನ್ನರು ಮುಟ್ಟಿದರೆ ವಾಯುವೇಗದಲ್ಲಿ ಹೋಗಬಲ್ಲ, ವೇಗದಲ್ಲಿ ವಾಯುವಿನ ಸಮನಾಗಿರುವ, ಶೀಲಸಂಪನ್ನ, ತರುಣ, ಉತ್ತಮ ಕುದುರೆಗಳನ್ನೇರಿ, ಮಹಾ ಸೇನೆಯೊಂದಿಗೆ ಬಂದರು.
06086025a ವಾರ್ಯಮಾಣಾಃ ಶಕುನಿನಾ ಸ್ವೈಶ್ಚ ಯೋಧೈರ್ಮಹಾಬಲೈಃ|
06086025c ಸನ್ನದ್ಧಾ ಯುದ್ಧಕುಶಲಾ ರೌದ್ರರೂಪಾ ಮಹಾಬಲಾಃ||
ಸ್ವಯಂ ಶಕುನಿಯಿಂದ ಮತ್ತು ಮಹಾಬಲ ಯೋಧರಿಂದ ತಡೆಯಲ್ಪಟ್ಟರೂ ಕೂಡ ಆ ರೌದ್ರರೂಪೀ ಯುದ್ಧ ಕುಶಲ ಮಹಾಬಲರು ಸನ್ನದ್ಧರಾದರು.
06086026a ತದನೀಕಂ ಮಹಾಬಾಹೋ ಭಿತ್ತ್ವಾ ಪರಮದುರ್ಜಯಂ|
06086026c ಬಲೇನ ಮಹತಾ ಯುಕ್ತಾಃ ಸ್ವರ್ಗಾಯ ವಿಜಯೈಷಿಣಃ|
06086026e ವಿವಿಶುಸ್ತೇ ತದಾ ಹೃಷ್ಟಾ ಗಾಂಧಾರಾ ಯುದ್ಧದುರ್ಮದಾಃ||
ಮಹಾಬಾಹೋ! ಯುದ್ಧ ದುರ್ಮದರಾಗಿದ್ದ ಹೃಷ್ಟರಾಗಿದ್ದ ಗಾಂಧಾರರು ಸ್ವರ್ಗ ಅಥವಾ ವಿಜಯವನ್ನು ಬಯಸಿ ಮಹಾ ಸೇನೆಯೊಡಗೂಡಿ ಆ ಪರಮ ದುರ್ಜಯ ಸೇನೆಯನ್ನು ಭೇದಿಸಿ ಒಳಹೊಕ್ಕರು.
06086027a ತಾನ್ಪ್ರವಿಷ್ಟಾಂಸ್ತದಾ ದೃಷ್ಟ್ವಾ ಇರಾವಾನಪಿ ವೀರ್ಯವಾನ್|
06086027c ಅಬ್ರವೀತ್ಸಮರೇ ಯೋಧಾನ್ವಿಚಿತ್ರಾಭರಣಾಯುಧಾನ್||
ಅವರು ಹಾಗೆ ಪ್ರವೇಶಿಸಿದನ್ನು ನೋಡಿ ವೀರ್ಯವಾನ್ ಇರಾವಾನನೂ ಕೂಡ ಸಮರದಲ್ಲಿ ವಿಚಿತ್ರ ಆಭರಣ ಆಯುಧಗಳನ್ನು ಧರಿಸಿದ್ದ ಯೋಧರಿಗೆ ಹೇಳಿದನು:
06086028a ಯಥೈತೇ ಧಾರ್ತರಾಷ್ಟ್ರಸ್ಯ ಯೋಧಾಃ ಸಾನುಗವಾಹನಾಃ|
06086028c ಹನ್ಯಂತೇ ಸಮರೇ ಸರ್ವೇ ತಥಾ ನೀತಿರ್ವಿಧೀಯತಾಂ||
“ಅನುಚರರು ಮತ್ತು ವಾಹನಗಳೊಂದಿಗೆ ಬಂದಿರುವ ಈ ಧಾರ್ತರಾಷ್ಟ್ರನ ಯೋಧರು ಎಲ್ಲರೂ ಸಮರದಲ್ಲಿ ಮೃತ್ಯುವನ್ನಪ್ಪುವಂಥಹ ನೀತಿಯನ್ನು ಕೈಗೊಳ್ಳಿರಿ!”
06086029a ಬಾಢಮಿತ್ಯೇವಮುಕ್ತ್ವಾ ತೇ ಸರ್ವೇ ಯೋಧಾ ಇರಾವತಃ|
06086029c ಜಘ್ನುಸ್ತೇ ವೈ ಪರಾನೀಕಂ ದುರ್ಜಯಂ ಸಮರೇ ಪರೈಃ||
ಒಳ್ಳೆಯದು ಎಂದು ಹೇಳಿ ಇರಾವತನ ಎಲ್ಲ ಯೋಧರೂ ಸಮರದಲ್ಲಿ ಶತ್ರುಗಳಿಗೆ ದುರ್ಜಯರಾದ ಆ ಶತ್ರುಸೇನೆಯನ್ನು ಸಂಹರಿಸಿದರು.
06086030a ತದನೀಕಮನೀಕೇನ ಸಮರೇ ವೀಕ್ಷ್ಯ ಪಾತಿತಂ|
06086030c ಅಮೃಷ್ಯಮಾಣಾಸ್ತೇ ಸರ್ವೇ ಸುಬಲಸ್ಯಾತ್ಮಜಾ ರಣೇ|
06086030e ಇರಾವಂತಮಭಿದ್ರುತ್ಯ ಸರ್ವತಃ ಪರ್ಯವಾರಯನ್||
ಅವನ ಸೇನೆಯಿಂದ ತಮ್ಮ ಸೇನೆಯು ಸಮರದಲ್ಲಿ ಬಿದ್ದುದನ್ನು ನೋಡಿ ರಣದಲ್ಲಿ ಉದ್ರಿಕ್ತರಾಗಿ ಸುಬಲನ ಮಕ್ಕಳೆಲ್ಲರೂ ಇರಾವಂತನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು.
06086031a ತಾಡಯಂತಃ ಶಿತೈಃ ಪ್ರಾಸೈಶ್ಚೋದಯಂತಃ ಪರಸ್ಪರಂ|
06086031c ತೇ ಶೂರಾಃ ಪರ್ಯಧಾವಂತ ಕುರ್ವಂತೋ ಮಹದಾಕುಲಂ||
ಹರಿತ ಪ್ರಾಸಗಳಿಂದ ಹೊಡೆಯುತ್ತಾ, ಪರಸ್ಪರರನ್ನು ಪ್ರಚೋದನೆಗೊಳಿಸುತ್ತಾ ಆ ಶೂರರು ಅವನನ್ನು ಸುತ್ತುವರೆದು ಮಹಾ ವ್ಯಾಕುಲವನ್ನುಂಟುಮಾಡಿದರು.
06086032a ಇರಾವಾನಥ ನಿರ್ಭಿನ್ನಃ ಪ್ರಾಸೈಸ್ತೀಕ್ಷ್ಣೈರ್ಮಹಾತ್ಮಭಿಃ|
06086032c ಸ್ರವತಾ ರುಧಿರೇಣಾಕ್ತಸ್ತೋತ್ತ್ರೈರ್ವಿದ್ಧ ಇವ ದ್ವಿಪಃ||
ಆ ಮಹಾತ್ಮರ ತೀಕ್ಷ್ಣ ಪ್ರಾಸಗಳಿಂದ ಗಾಯಗೊಂಡು ಇರಾವಾನನು ರಕ್ತದಿಂದ ತೋಯ್ದು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಾಕುಲಗೊಂಡನು.
06086033a ಉರಸ್ಯಪಿ ಚ ಪೃಷ್ಠೇ ಚ ಪಾರ್ಶ್ವಯೋಶ್ಚ ಭೃಶಾಹತಃ|
06086033c ಏಕೋ ಬಹುಭಿರತ್ಯರ್ಥಂ ಧೈರ್ಯಾದ್ರಾಜನ್ನ ವಿವ್ಯಥೇ||
ರಾಜನ್! ಒಬ್ಬನಾಗಿದ್ದರೂ ಅನೇಕರು ಎದುರಿನಿಂದ, ಹಿಂದಿನಿಂದ ಮತ್ತು ಪಕ್ಕಗಳಿಂದ ಚೆನ್ನಾಗಿ ಪ್ರಹರಿಸುತ್ತಿದ್ದರೂ ಅವನು ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
06086034a ಇರಾವಾನಥ ಸಂಕ್ರುದ್ಧಃ ಸರ್ವಾಂಸ್ತಾನ್ನಿಶಿತೈಃ ಶರೈಃ|
06086034c ಮೋಹಯಾಮಾಸ ಸಮರೇ ವಿದ್ಧ್ವಾ ಪರಪುರಂಜಯಃ||
ಆಗ ಸಂಕ್ರುದ್ಧನಾದ ಪರಪುರಂಜಯ ಇರಾವಾನನು ಸಮರದಲ್ಲಿ ಅವರೆಲ್ಲರನ್ನೂ ನಿಶಿತ ಶರಗಳಿಂದ ಹೊಡೆದು ಮೂರ್ಛೆಗೊಳಿಸಿದನು.
06086035a ಪ್ರಾಸಾನುದ್ಧೃತ್ಯ ಸರ್ವಾಂಶ್ಚ ಸ್ವಶರೀರಾದರಿಂದಮಃ|
06086035c ತೈರೇವ ತಾಡಯಾಮಾಸ ಸುಬಲಸ್ಯಾತ್ಮಜಾನ್ರಣೇ||
ತನ್ನ ಶರೀರರ ಸರ್ವಾಂಗಗಳಿಗೆ ಚುಚ್ಚಿಕೊಂಡಿದ್ದ ಪ್ರಾಸಗಳನ್ನು ಕಿತ್ತು ತೆಗೆದು ಅವುಗಳಿಂದಲೇ ರಣದಲ್ಲಿ ಸುಬಲನ ಮಕ್ಕಳನ್ನು ಪ್ರಹರಿಸಿದನು.
06086036a ನಿಕೃಷ್ಯ ನಿಶಿತಂ ಖಡ್ಗಂ ಗೃಹೀತ್ವಾ ಚ ಶರಾವರಂ|
06086036c ಪದಾತಿಸ್ತೂರ್ಣಮಾಗಚ್ಛಜ್ಜಿಘಾಂಸುಃ ಸೌಬಲಾನ್ಯುಧಿ||
ಅನಂತರ ನಿಶಿತ ಖಡ್ಗವನ್ನು ಎಳೆದು ತೆಗೆದುಕೊಂಡು ಗುರಾಣಿಯನ್ನೂ ಹಿಡಿದು ತಕ್ಷಣವೇ ಆ ಸೌಬಲರನ್ನು ಯುದ್ಧದಲ್ಲಿ ಸಂಹರಿಸಲು ಪದಾತಿಯಾಗಿಯೇ ನಡೆದನು.
06086037a ತತಃ ಪ್ರತ್ಯಾಗತಪ್ರಾಣಾಃ ಸರ್ವೇ ತೇ ಸುಬಲಾತ್ಮಜಾಃ|
06086037c ಭೂಯಃ ಕ್ರೋಧಸಮಾವಿಷ್ಟಾ ಇರಾವಂತಮಥಾದ್ರವನ್||
ಆಗ ಪುನಃ ಎಚ್ಚೆತ್ತಿದ್ದ ಆ ಎಲ್ಲ ಸುಬಲಾತ್ಮಜರು ಪುನಃ ಕ್ರೋಧಸಮಾವಿಷ್ಟರಾಗಿ ಇರವಂತನನ್ನು ಆಕ್ರಮಣಿಸಿದರು.
06086038a ಇರಾವಾನಪಿ ಖಡ್ಗೇನ ದರ್ಶಯನ್ಪಾಣಿಲಾಘವಂ|
06086038c ಅಭ್ಯವರ್ತತ ತಾನ್ಸರ್ವಾನ್ಸೌಬಲಾನ್ಬಲದರ್ಪಿತಃ||
ಬಲದರ್ಪಿತ ಇರವಾನನೂ ಕೂಡ ಖಡ್ಗದಲ್ಲಿ ತನ್ನ ಕೈಚಳಕವನ್ನು ತೋರಿಸುತ್ತಾ ಅವರೆಲ್ಲ ಸೌಬಲರನ್ನೂ ಎದುರಿಸಿದನು.
06086039a ಲಾಘವೇನಾಥ ಚರತಃ ಸರ್ವೇ ತೇ ಸುಬಲಾತ್ಮಜಾಃ|
06086039c ಅಂತರಂ ನಾಧ್ಯಗಚ್ಛಂತ ಚರಂತಃ ಶೀಘ್ರಗಾಮಿನಃ||
ಚಾಕಚಕ್ಯತೆಯಿಂದ ಓಡಾಡುತ್ತಿದ್ದ ಆ ಸುಬಲಾತ್ಮಜರೆಲ್ಲರೂ ಶೀಘ್ರವಾಗಿ ಚಲಿಸುತ್ತಿರುವ ಅವನನ್ನು ಹೊಡೆಯಲು ಅವಕಾಶವನ್ನೇ ಪಡೆಯಲಿಲ್ಲ.
06086040a ಭೂಮಿಷ್ಠಮಥ ತಂ ಸಂಖ್ಯೇ ಸಂಪ್ರದೃಶ್ಯ ತತಃ ಪುನಃ|
06086040c ಪರಿವಾರ್ಯ ಭೃಶಂ ಸರ್ವೇ ಗ್ರಹೀತುಮುಪಚಕ್ರಮುಃ||
ಯುದ್ಧದಲ್ಲಿ ನೆಲದ ಮೇಲೆ ನಿಂತಿದ್ದ ಅವನನ್ನು ನೋಡಿ ಅವರೆಲ್ಲರೂ ಅವನನ್ನು ಸುತ್ತುವರೆದು ಪುನಃ ಪುನಃ ಸೆರೆಹಿಡಿಯಲು ಪ್ರಯತ್ನಿಸಿದರು.
06086041a ಅಥಾಭ್ಯಾಶಗತಾನಾಂ ಸ ಖಡ್ಗೇನಾಮಿತ್ರಕರ್ಶನಃ|
06086041c ಉಪಹಸ್ತಾವಹಸ್ತಾಭ್ಯಾಂ ತೇಷಾಂ ಗಾತ್ರಾಣ್ಯಕೃಂತತ||
ಆಗ ಮೇಲೆ ಬೀಳುತ್ತಿದ್ದ ಆ ಅಮಿತ್ರಕರ್ಶನನು ಅವರ ಎರಡೂ ಹಸ್ತಗಳನ್ನು ಕತ್ತರಿಸಿ ಶರೀರಗಳನ್ನೂ ತುಂಡರಿಸಿದನು.
06086042a ಆಯುಧಾನಿ ಚ ಸರ್ವೇಷಾಂ ಬಾಹೂನಪಿ ಚ ಭೂಷಿತಾನ್|
06086042c ಅಪತಂತ ನಿಕೃತ್ತಾಂಗಾ ಗತಾ ಭೂಮಿಂ ಗತಾಸವಃ||
ಅವರೆಲ್ಲರ ಆಯುಧಗಳು ಮತ್ತು ಭೂಷಿತ ಬಾಹುಗಳು ಬಿದ್ದು ಅಂಗಗಳು ತುಂಡಾಗಿ ಅಸುನೀಗಿ ಅವರು ಭೂಮಿಯ ಮೇಲೆ ಬಿದ್ದರು.
06086043a ವೃಷಕಸ್ತು ಮಹಾರಾಜ ಬಹುಧಾ ಪರಿವಿಕ್ಷತಃ|
06086043c ಅಮುಚ್ಯತ ಮಹಾರೌದ್ರಾತ್ತಸ್ಮಾದ್ವೀರಾವಕರ್ತನಾತ್||
ಮಹಾರಾಜ! ವೃಷಕನು ಮಾತ್ರ ಹೆಚ್ಚಾಗಿ ಗಾಯಗೊಂಡು ವೀರರನ್ನು ತುಂಡರಿಸುವ ಆ ಮಹಾರೌದ್ರ ಯುದ್ಧದಿಂದ ತಪ್ಪಿಸಿಕೊಂಡನು.
06086044a ತಾನ್ಸರ್ವಾನ್ಪತಿತಾನ್ದೃಷ್ಟ್ವಾ ಭೀತೋ ದುರ್ಯೋಧನಸ್ತತಃ|
06086044c ಅಭ್ಯಭಾಷತ ಸಂಕ್ರುದ್ಧೋ ರಾಕ್ಷಸಂ ಘೋರದರ್ಶನಂ||
06086045a ಆರ್ಶ್ಯಶೃಂಗಿಂ ಮಹೇಷ್ವಾಸಂ ಮಾಯಾವಿನಮರಿಂದಮಂ|
06086045c ವೈರಿಣಂ ಭೀಮಸೇನಸ್ಯ ಪೂರ್ವಂ ಬಕವಧೇನ ವೈ||
ಅವರೆಲ್ಲರೂ ಬಿದ್ದುದನ್ನು ನೋಡಿ ಭೀತನಾದ ದುರ್ಯೋಧನನು ಸಂಕ್ರುದ್ಧನಾಗಿ ಘೋರದರ್ಶನ ಮಹೇಷ್ವಾಸ ಮಾಯಾವೀ ಅರಿಂದಮ ಬಕವಧದ ಕಾರಣದಿಂದ ಹಿಂದಿನಿಂದಲೇ ಭೀಮಸೇನನ ವೈರಿಯಾಗಿದ್ದ ರಾಕ್ಷಸ ಆರ್ಶ್ಯಶೃಂಗಿಗೆ ಹೇಳಿದನು:
06086046a ಪಶ್ಯ ವೀರ ಯಥಾ ಹ್ಯೇಷ ಫಲ್ಗುನಸ್ಯ ಸುತೋ ಬಲೀ|
06086046c ಮಾಯಾವೀ ವಿಪ್ರಿಯಂ ಘೋರಮಕಾರ್ಷೀನ್ಮೇ ಬಲಕ್ಷಯಂ||
“ವೀರ! ಹೇಗೆ ಈ ಫಲ್ಗುನನ ಬಲಶಾಲೀ ಮಾಯಾವೀ ಮಗನು ನನ್ನ ಸೇನೆಯನ್ನು ನಾಶಗೊಳಿಸಿ ವಿಪ್ರಿಯವಾದ ಘೋರ ಕೃತ್ಯವನ್ನೆಸಗಿದ್ದಾನೆ ನೋಡು!
06086047a ತ್ವಂ ಚ ಕಾಮಗಮಸ್ತಾತ ಮಾಯಾಸ್ತ್ರೇ ಚ ವಿಶಾರದಃ|
06086047c ಕೃತವೈರಶ್ಚ ಪಾರ್ಥೇನ ತಸ್ಮಾದೇನಂ ರಣೇ ಜಹಿ||
ಅಯ್ಯಾ! ನೀನೂ ಕೂಡ ಬಯಸಿದಲ್ಲಿಗೆ ಹೋಗಬಲ್ಲೆ. ಮಾಯಾಸ್ತ್ರಗಳಲ್ಲಿ ವಿಶಾರದನಾಗಿದ್ದೀಯೆ. ಪಾರ್ಥನೊಂದಿಗೆ ವೈರವನ್ನೂ ಸಾಧಿಸುತ್ತಿದ್ದೀಯೆ. ಆದುದರಿಂದ ರಣದಲ್ಲಿ ಇವನನ್ನು ಕೊಲ್ಲು!”
06086048a ಬಾಢಮಿತ್ಯೇವಮುಕ್ತ್ವಾ ತು ರಾಕ್ಷಸೋ ಘೋರದರ್ಶನಃ|
06086048c ಪ್ರಯಯೌ ಸಿಂಹನಾದೇನ ಯತ್ರಾರ್ಜುನಸುತೋ ಯುವಾ||
ಆಗಲೆಂದು ಹೇಳಿ ಘೋರದರ್ಶನ ರಾಕ್ಷಸನು ಸಿಂಹನಾದದೊಂದಿಗೆ ಅರ್ಜುನನ ಯುವ ಮಗನಿರುವಲ್ಲಿಗೆ ಹೊರಟನು.
06086049a ಸ್ವಾರೂಢೈರ್ಯುದ್ಧಕುಶಲೈರ್ವಿಮಲಪ್ರಾಸಯೋಧಿಭಿಃ|
06086049c ವೀರೈಃ ಪ್ರಹಾರಿಭಿರ್ಯುಕ್ತಃ ಸ್ವೈರನೀಕೈಃ ಸಮಾವೃತಃ|
06086049e ನಿಹಂತುಕಾಮಃ ಸಮರೇ ಇರಾವಂತಂ ಮಹಾಬಲಂ||
ಯುದ್ಧ ಕುಶಲರಾದ ಹರಿತ ಪ್ರಾಸಗಳನ್ನು ಹಿಡಿದ ಅಶ್ವಾರೋಹಿ ವೀರ ಯೋಧ ಪ್ರಹಾರೀ ತನ್ನದೇ ಸೈನಿಕರಿಂದ ಸುತ್ತುವರೆಯಲ್ಪಟ್ಟ ಅವನು ಸಮರದಲ್ಲಿ ಮಹಾಬಲ ಇರಾವಂತನನ್ನು ಸಂಹರಿಸಲು ಬಯಸಿದನು.
06086050a ಇರಾವಾನಪಿ ಸಂಕ್ರುದ್ಧಸ್ತ್ವರಮಾಣಃ ಪರಾಕ್ರಮೀ|
06086050c ಹಂತುಕಾಮಮಮಿತ್ರಘ್ನೋ ರಾಕ್ಷಸಂ ಪ್ರತ್ಯವಾರಯತ್||
ಪರಾಕ್ರಮೀ ಅಮಿತ್ರಘ್ನ ಇರಾವನನೂ ಕೂಡ ಸಂಕ್ರುದ್ಧನಾಗಿ ಆ ರಾಕ್ಷಸನನ್ನು ಕೊಲ್ಲಲು ಬಯಸಿ ತ್ವರೆಮಾಡಿ ಆಕ್ರಮಣಿಸಿದನು.
06086051a ತಮಾಪತಂತಂ ಸಂಪ್ರೇಕ್ಷ್ಯ ರಾಕ್ಷಸಃ ಸುಮಹಾಬಲಃ|
06086051c ತ್ವರಮಾಣಸ್ತತೋ ಮಾಯಾಂ ಪ್ರಯೋಕ್ತುಮುಪಚಕ್ರಮೇ||
ಮೇಲೆ ಬೀಳುತ್ತಿದ್ದ ಅವನನ್ನು ನೋಡಿ ಮಹಾಬಲ ರಾಕ್ಷಸನು ತ್ವರೆಮಾಡಿ ಮಾಯೆಯನ್ನುಪಯೋಗಿಸ ತೊಡಗಿದನು.
06086052a ತೇನ ಮಾಯಾಮಯಾಃ ಕ್ಲಪ್ತಾಹಯಾಸ್ತಾವಂತ ಏವ ಹಿ|
06086052c ಸ್ವಾರೂಢಾ ರಾಕ್ಷಸೈರ್ಘೋರೈಃ ಶೂಲಪಟ್ಟಿಶಪಾಣಿಭಿಃ||
ಆಗ ಅವನು ಇರಾವಾನನ ಅಶ್ವಾರೋಹಿಗಳಿಗೆ ಪ್ರತಿಯಾಗಿ ಮಾಯೆಯಿಂದ ಕುದುರೆಗಳನ್ನೇರಿದ ಶೂಲ-ಪಟ್ಟಿಶಗಳನ್ನು ಹಿಡಿದಿದ್ದ ಘೋರ ರಾಕ್ಷಸರ ಪಡೆಯನ್ನು ನಿರ್ಮಿಸಿದನು.
06086053a ತೇ ಸಂರಬ್ಧಾಃ ಸಮಾಗಮ್ಯ ದ್ವಿಸಾಹಸ್ರಾಃ ಪ್ರಹಾರಿಣಃ|
06086053c ಅಚಿರಾದ್ಗಮಯಾಮಾಸುಃ ಪ್ರೇತಲೋಕಂ ಪರಸ್ಪರಂ||
ಆ ಎರಡು ಸಾವಿರ ಪ್ರಹಾರಿಣರು ಎದುರಾಗಿ ಬೇಗನೇ ಪರಸ್ಪರರನ್ನು ಪ್ರೇತಲೋಕಗಳಿಗೆ ಕಳುಹಿಸಿದರು.
06086054a ತಸ್ಮಿಂಸ್ತು ನಿಹತೇ ಸೈನ್ಯೇ ತಾವುಭೌ ಯುದ್ಧದುರ್ಮದೌ|
06086054c ಸಂಗ್ರಾಮೇ ವ್ಯವತಿಷ್ಠೇತಾಂ ಯಥಾ ವೈ ವೃತ್ರವಾಸವೌ||
ಆ ಸೇನೆಗಳು ಹಾಗೆ ನಾಶವಾಗಲು ಅವರಿಬ್ಬರು ಯುದ್ಧ ದುರ್ಮದರೂ ಸಂಗ್ರಾಮದಲ್ಲಿ ವೃತ್ರ-ವಾಸವರಂತೆ ಎದುರಾಗಿ ನಿಂತರು.
06086055a ಆದ್ರವಂತಮಭಿಪ್ರೇಕ್ಷ್ಯ ರಾಕ್ಷಸಂ ಯುದ್ಧದುರ್ಮದಂ|
06086055c ಇರಾವಾನ್ಕ್ರೋಧಸಂರಬ್ಧಃ ಪ್ರತ್ಯಧಾವನ್ಮಹಾಬಲಃ||
ಯುದ್ಧದುರ್ಮದ ರಾಕ್ಷಸನು ಮುಂದೆ ಬಂದುದನ್ನು ನೋಡಿ ಕ್ರೋಧಸಂರಬ್ಧನಾದ ಮಹಾಬಲ ಇರಾವಾನನು ಎದುರಾದನು.
06086056a ಸಮಭ್ಯಾಶಗತಸ್ಯಾಜೌ ತಸ್ಯ ಖಡ್ಗೇನ ದುರ್ಮತೇಃ|
06086056c ಚಿಚ್ಛೇದ ಕಾರ್ಮುಕಂ ದೀಪ್ತಂ ಶರಾವಾಪಂ ಚ ಪಂಚಕಂ||
ತುಂಬಾ ಹತ್ತಿರಕ್ಕೆ ಬಂದಿದ್ದ ಆ ದುರ್ಮತಿಯ ಬಿಲ್ಲು ಭತ್ತಳಿಕೆಗಳನ್ನು ಖಡ್ಗದಿಂದ ಕತ್ತರಿಸಿದನು.
06086057a ಸ ನಿಕೃತ್ತಂ ಧನುರ್ದೃಷ್ಟ್ವಾ ಖಂ ಜವೇನ ಸಮಾವಿಶತ್|
06086057c ಇರಾವಂತಮಭಿಕ್ರುದ್ಧಂ ಮೋಹಯನ್ನಿವ ಮಾಯಯಾ||
ತನ್ನ ಧನುಸ್ಸು ತುಂಡಾಗಿದುದನ್ನು ನೋಡಿ ಅವನು ಕ್ರುದ್ಧನಾದ ಇರಾವಂತನನ್ನು ಮೋಹಗೊಳಿಸಲೋಸುಗ ಮಾಯೆಯಿಂದ ವೇಗದಿಂದ ಆಕಾಶವನ್ನು ಸೇರಿದನು.
06086058a ತತೋಽಂತರಿಕ್ಷಮುತ್ಪತ್ಯ ಇರಾವಾನಪಿ ರಾಕ್ಷಸಂ|
06086058c ವಿಮೋಹಯಿತ್ವಾ ಮಾಯಾಭಿಸ್ತಸ್ಯ ಗಾತ್ರಾಣಿ ಸಾಯಕೈಃ|
06086058e ಚಿಚ್ಛೇದ ಸರ್ವಮರ್ಮಜ್ಞಃ ಕಾಮರೂಪೋ ದುರಾಸದಃ||
ಆಗ ಸರ್ವಮರ್ಮಗಳನ್ನೂ ತಿಳಿದಿದ್ದ, ಕಾಮರೂಪೀ, ದುರಾಸದ ಇರಾವಾನನೂ ಕೂಡ ಅಂತರಿಕ್ಷಕ್ಕೆ ಹಾರಿ ರಾಕ್ಷಸನನ್ನು ತನ್ನ ಮಾಯೆಯಿಂದ ಭ್ರಾಂತಗೊಳಿಸಿ ಅವನ ಶರೀರವನ್ನು ಸಾಯಕಗಳಿಂದ ಗಾಯಗೊಳಿಸಿದನು.
06086059a ತಥಾ ಸ ರಾಕ್ಷಸಶ್ರೇಷ್ಠಃ ಶರೈಃ ಕೃತ್ತಃ ಪುನಃ ಪುನಃ|
06086059c ಸಂಬಭೂವ ಮಹಾರಾಜ ಸಮವಾಪ ಚ ಯೌವನಂ||
ಹಾಗೆ ಆ ರಾಕ್ಷಸ ಶ್ರೇಷ್ಠನನ್ನು ಪುನಃ ಪುನಃ ಶರಗಳಿಂದ ಗಾಯಗೊಳಿಸಿದ ಹಾಗೆಲ್ಲ ಅವನು ಹೊಸ ಹೊಸ ಶರೀರಗಳನ್ನು ಪಡೆಯುತ್ತಿದ್ದನು ಮತ್ತು ಯೌವನವನ್ನು ತಾಳುತ್ತಿದ್ದನು.
06086060a ಮಾಯಾ ಹಿ ಸಹಜಾ ತೇಷಾಂ ವಯೋ ರೂಪಂ ಚ ಕಾಮಜಂ|
06086060c ಏವಂ ತದ್ರಾಕ್ಷಸಸ್ಯಾಂಗಂ ಚಿನ್ನಂ ಚಿನ್ನಂ ವ್ಯರೋಹತ||
ಮಾಯಾವಿಗಳಿಗೆ ಸಹಜವಾಗಿ ಬೇಕಾದ ರೂಪ ವಯಸ್ಸು ದೊರೆಯುತ್ತವೆ. ಹೀಗೆ ಆ ರಾಕ್ಷಸನ ಅಂಗಗಳು ಕತ್ತರಿಸಿದಂತೆಲ್ಲಾ ಪುನಃ ಪುನಃ ಬೆಳೆಯುತ್ತಿದ್ದವು.
06086061a ಇರಾವಾನಪಿ ಸಂಕ್ರುದ್ಧೋ ರಾಕ್ಷಸಂ ತಂ ಮಹಾಬಲಂ|
06086061c ಪರಶ್ವಧೇನ ತೀಕ್ಷ್ಣೇನ ಚಿಚ್ಛೇದ ಚ ಪುನಃ ಪುನಃ||
ಇರಾವಾನನೂ ಕೂಡ ಸಂಕ್ರುದ್ಧನಾಗಿ ಆ ಮಹಾಬಲ ರಾಕ್ಷಸನನ್ನು ತೀಕ್ಷ್ಣ ಪರಶುವಿನಿಂದ ಪುನಃ ಪುನಃ ಕತ್ತರಿಸಿದನು.
06086062a ಸ ತೇನ ಬಲಿನಾ ವೀರಶ್ಚಿದ್ಯಮಾನ ಇವ ದ್ರುಮಃ|
06086062c ರಾಕ್ಷಸೋ ವ್ಯನದದ್ಘೋರಂ ಸ ಶಬ್ದಸ್ತುಮುಲೋಽಭವತ್||
ಮರದಂತೆ ಆ ವೀರನನ್ನು ಬಲಶಾಲಿಯು ಕಡಿಯುತ್ತಿದ್ದಂತಲೆಲ್ಲಾ ರಾಕ್ಷಸನು ಘೋರವಾಗಿ ಕೂಗುತ್ತಿದ್ದನು. ತುಮುಲ ಶಬ್ಧವು ಉಂಟಾಯಿತು.
06086063a ಪರಶ್ವಧಕ್ಷತಂ ರಕ್ಷಃ ಸುಸ್ರಾವ ರುಧಿರಂ ಬಹು|
06086063c ತತಶ್ಚುಕ್ರೋಧ ಬಲವಾಂಶ್ಚಕ್ರೇ ವೇಗಂ ಚ ಸಂಯುಗೇ||
ಪರಶುವಿನಿಂದ ಗಾಯಗೊಂಡ ರಾಕ್ಷಸನು ಬಹಳಷ್ಟು ರಕ್ತವನ್ನು ಸುರಿಸಿದನು. ಅದರಿಂದ ಕ್ರೋಧಗೊಂಡ ಬಲವಾನನು ವೇಗವಾಗಿ ಯುದ್ಧ ಮಾಡತೊಡಗಿದನು.
06086064a ಆರ್ಶ್ಯಶೃಂಗಿಸ್ತತೋ ದೃಷ್ಟ್ವಾ ಸಮರೇ ಶತ್ರುಮೂರ್ಜಿತಂ|
06086064c ಕೃತ್ವಾ ಘೋರಂ ಮಹದ್ರೂಪಂ ಗ್ರಹೀತುಮುಪಚಕ್ರಮೇ|
06086064e ಸಂಗ್ರಾಮಶಿರಸೋ ಮಧ್ಯೇ ಸರ್ವೇಷಾಂ ತತ್ರ ಪಶ್ಯತಾಂ||
ಸಮರದಲ್ಲಿ ತನ್ನ ಶತ್ರುವು ವರ್ಧಿಸುತ್ತಿರುವುದನ್ನು ನೋಡಿ ಆರ್ಶ್ಯಶೃಂಗಿಯು ಮಹಾ ಘೋರ ರೂಪವನ್ನು ತಾಳಿ ಸಂಗ್ರಾಮದ ಮಧ್ಯೆ ಎಲ್ಲರೂ ನೋಡುತ್ತಿರುವಂತೆಯೇ ಅವನನ್ನು ಹಿಡಿಯಲು ಮುಂದಾದನು.
06086065a ತಾಂ ದೃಷ್ಟ್ವಾ ತಾದೃಶೀಂ ಮಾಯಾಂ ರಾಕ್ಷಸಸ್ಯ ಮಹಾತ್ಮನಃ|
06086065c ಇರಾವಾನಪಿ ಸಂಕ್ರುದ್ಧೋ ಮಾಯಾಂ ಸ್ರಷ್ಟುಂ ಪ್ರಚಕ್ರಮೇ||
ಮಹಾತ್ಮ ರಾಕ್ಷಸನ ಆ ಮಾಯೆಯನ್ನು ನೋಡಿ ಇರಾವಾನನೂ ಕೂಡ ಸಂಕ್ರುದ್ಧನಾಗಿ ಅದರಂತಹ ಮಾಯೆಯನ್ನು ಸೃಷ್ಟಿಸಲು ತೊಡಗಿದನು.
06086066a ತಸ್ಯ ಕ್ರೋಧಾಭಿಭೂತಸ್ಯ ಸಂಯುಗೇಷ್ವನಿವರ್ತಿನಃ|
06086066c ಯೋಽನ್ವಯೋ ಮಾತೃಕಸ್ತಸ್ಯ ಸ ಏನಮಭಿಪೇದಿವಾನ್||
ಯುದ್ಧದಿಂದ ಹಿಂದೆಸರಿಯದ ಕ್ರೋಧಾಭಿಭೂತನಾದ ಇರಾವಾನನಿಗೆ ಅವನ ತಾಯಿಯ ಕಡೆಯವರು ನೆರವಾಗಲು ಬಂದರು.
06086067a ಸ ನಾಗೈರ್ಬಹುಶೋ ರಾಜನ್ಸರ್ವತಃ ಸಂವೃತೋ ರಣೇ|
06086067c ದಧಾರ ಸುಮಹದ್ರೂಪಮನಂತ ಇವ ಭೋಗವಾನ್|
06086067e ತತೋ ಬಹುವಿಧೈರ್ನಾಗೈಶ್ಚಾದಯಾಮಾಸ ರಾಕ್ಷಸಂ||
ರಾಜನ್! ಹೆಚ್ಚಾಗಿ ನಾಗಗಳಿಂದಲೇ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ಹೆಡೆಯುಳ್ಳ ಅನಂತನ ಮಹಾ ರೂಪವನ್ನೇ ತಾಳಿದನು. ಆಗ ಅವನು ಬಹುವಿಧದ ನಾಗಗಳಿಂದ ರಾಕ್ಷಸನನ್ನು ಮುಚ್ಚಿದನು.
06086068a ಚಾದ್ಯಮಾನಸ್ತು ನಾಗೈಃ ಸ ಧ್ಯಾತ್ವಾ ರಾಕ್ಷಸಪುಂಗವಃ|
06086068c ಸೌಪರ್ಣಂ ರೂಪಮಾಸ್ಥಾಯ ಭಕ್ಷಯಾಮಾಸ ಪನ್ನಗಾನ್||
ಸರ್ಪಗಳಿಂದ ಆಚ್ಛಾದಿತನಾದ ಆ ರಾಕ್ಷಸಪುಂಗವನು ಒಂದು ಕ್ಷಣ ಯೋಚಿಸಿ ಗರುಡನ ರೂಪವನ್ನು ತಾಳಿ ನಾಗಗಳನ್ನು ಭಕ್ಷಿಸತೊಡಗಿದನು.
06086069a ಮಾಯಯಾ ಭಕ್ಷಿತೇ ತಸ್ಮಿನ್ನನ್ವಯೇ ತಸ್ಯ ಮಾತೃಕೇ|
06086069c ವಿಮೋಹಿತಮಿರಾವಂತಮಸಿನಾ ರಾಕ್ಷಸೋಽವಧೀತ್||
ಅವನನ್ನು ಅನುಸರಿಸಿ ಬಂದಿದ್ದ ಅವನ ತಾಯಿಯ ಕಡೆಯವರನ್ನು ಮಾಯೆಯಿಂದ ಭಕ್ಷಿಸಿ, ಇರಾವಂತನನ್ನು ಮೋಹಗೊಳಿಸಿ ರಾಕ್ಷಸನು ಖಡ್ಗದಿಂದ ಅವನನ್ನು ವಧಿಸಿದನು.
06086070a ಸಕುಂಡಲಂ ಸಮುಕುಟಂ ಪದ್ಮೇಂದುಸದೃಶಪ್ರಭಂ|
06086070c ಇರಾವತಃ ಶಿರೋ ರಕ್ಷಃ ಪಾತಯಾಮಾಸ ಭೂತಲೇ||
ಕುಂಡಲ ಮುಕುಟಗಳಿಂದ ಕೂಡಿದ, ಪದ್ಮ ಮತ್ತು ಚಂದ್ರನ ಕಾಂತಿಯುಳ್ಳ ಇರಾವತನ ಶಿರವನ್ನು ರಾಕ್ಷಸನು ಭೂಮಿಯ ಮೇಲೆ ಕೆಡವಿದನು.
06086071a ತಸ್ಮಿಂಸ್ತು ನಿಹತೇ ವೀರೇ ರಾಕ್ಷಸೇನಾರ್ಜುನಾತ್ಮಜೇ|
06086071c ವಿಶೋಕಾಃ ಸಮಪದ್ಯಂತ ಧಾರ್ತರಾಷ್ಟ್ರಾಃ ಸರಾಜಕಾಃ||
ರಾಕ್ಷಸನಿಂದ ಅರ್ಜುನನನ ಆ ವೀರ ಮಗನು ಹತನಾಗಲು ಧಾರ್ತರಾಷ್ಟ್ರರು ಇತರ ರಾಜರೊಂದಿಗೆ ಶೋಕ ರಹಿತರಾದರು.
06086072a ತಸ್ಮಿನ್ಮಹತಿ ಸಂಗ್ರಾಮೇ ತಾದೃಶೇ ಭೈರವೇ ಪುನಃ|
06086072c ಮಹಾನ್ವ್ಯತಿಕರೋ ಘೋರಃ ಸೇನಯೋಃ ಸಮಪದ್ಯತ||
ಭಯಂಕರ ಸ್ವರೂಪವನ್ನು ತಾಳಿದ್ದ ಆ ಮಹಾ ಸಂಗ್ರಾಮದಲ್ಲಿ ಎರಡು ಸೇನೆಗಳ ನಡುವೆ ಪುನ ಮಹಾ ಘೋರ ಯುದ್ಧವು ಪ್ರಾರಂಭವಾಯಿತು.
06086073a ಹಯಾ ಗಜಾಃ ಪದಾತಾಶ್ಚ ವಿಮಿಶ್ರಾ ದಂತಿಭಿರ್ಹತಾಃ|
06086073c ರಥಾಶ್ಚ ದಂತಿನಶ್ಚೈವ ಪತ್ತಿಭಿಸ್ತತ್ರ ಸೂದಿತಾಃ||
ಕುದುರೆ, ಆನೆ ಮತ್ತು ಪದಾತಿಗಳು ಮಿಶ್ರಿತವಾಗಿ ಆನೆಗಳಿಂದ ಹತವಾದರು. ರಥಿಗಳು ಮತ್ತು ಆನೆಗಳು ಪದಾತಿಗಳಿಂದ ಸಂಹರಿಸಲ್ಪಟ್ಟರು.
06086074a ತಥಾ ಪತ್ತಿರಥೌಘಾಶ್ಚ ಹಯಾಶ್ಚ ಬಹವೋ ರಣೇ|
06086074c ರಥಿಭಿರ್ನಿಹತಾ ರಾಜಂಸ್ತವ ತೇಷಾಂ ಚ ಸಂಕುಲೇ||
ರಾಜನ್! ಹಾಗೆಯೇ ಪದಾತಿ-ರಥಸಮೂಹಗಳು ಮತ್ತು ಬಹಳಷ್ಟು ಕುದುರೆಗಳು ನಿನ್ನ ಮತ್ತು ಅವರ ಸಂಕುಲ ರಣದಲ್ಲಿ ರಥಿಗಳಿಂದ ಹತವಾದವು.
06086075a ಅಜಾನನ್ನರ್ಜುನಶ್ಚಾಪಿ ನಿಹತಂ ಪುತ್ರಮೌರಸಂ|
06086075c ಜಘಾನ ಸಮರೇ ಶೂರಾನ್ರಾಜ್ಞಸ್ತಾನ್ಭೀಷ್ಮರಕ್ಷಿಣಃ||
ಅರ್ಜುನನಾದರೋ ತನ್ನ ಹಿರಿಯ ಮಗನ ಸಾವನ್ನು ತಿಳಿಯದೆಯೇ ಭೀಷ್ಮನಿಂದ ರಕ್ಷಿತವಾದ ಶೂರರಾಜರನ್ನು ಸಮರದಲ್ಲಿ ಸಂಹರಿಸಿದನು.
06086076a ತಥೈವ ತಾವಕಾ ರಾಜನ್ಸೃಂಜಯಾಶ್ಚ ಮಹಾಬಲಾಃ|
06086076c ಜುಹ್ವತಃ ಸಮರೇ ಪ್ರಾಣಾನ್ನಿಜಘ್ನುರಿತರೇತರಂ||
ರಾಜನ್! ಹಾಗೆಯೇ ನಿನ್ನವರು ಮತ್ತು ಮಹಾಬಲ ಸೃಂಜಯರು ಸಮರವೆಂಬ ಅಗ್ನಿಯಲ್ಲಿ ಆಹುತಿಗಳನ್ನಾಗಿತ್ತು ಪರಸ್ಪರರ ಪ್ರಾಣಗಳನ್ನು ತೆಗೆದರು.
06086077a ಮುಕ್ತಕೇಶಾ ವಿಕವಚಾ ವಿರಥಾಶ್ಚಿನ್ನಕಾರ್ಮುಕಾಃ|
06086077c ಬಾಹುಭಿಃ ಸಮಯುಧ್ಯಂತ ಸಮವೇತಾಃ ಪರಸ್ಪರಂ||
ಕೂದಲು ಕೆದರಿ, ಕವಚಗಳಿಲ್ಲದೇ, ರಥಗಳನ್ನು ಕಳೆದುಕೊಂಡು, ಧನುಸ್ಸುಗಳು ತುಂಡಾಗಿರಲು ಪರಸ್ಪರರನ್ನು ಸೇರಿ ಬಾಹುಗಳಿಂದಲೇ ಯುದ್ಧ ಮಾಡುತ್ತಿದ್ದರು.
06086078a ತಥಾ ಮರ್ಮಾತಿಗೈರ್ಭೀಷ್ಮೋ ನಿಜಘಾನ ಮಹಾರಥಾನ್|
06086078c ಕಂಪಯನ್ಸಮರೇ ಸೇನಾಂ ಪಾಂಡವಾನಾಂ ಮಹಾಬಲಃ||
ಆಗ ಮಹಾಬಲ ಭೀಷ್ಮನು ಮರ್ಮಸ್ಥಳಗಳನ್ನು ಭೇದಿಸುವ ಬಾಣಗಳಿಂದ ಮಹಾರಥರನ್ನು ಸಂಹರಿಸಿ ಪಂಡವರ ಸೇನೆಯನ್ನು ಸಮರದಲ್ಲಿ ನಡುಗಿಸಿದನು.
06086079a ತೇನ ಯೌಧಿಷ್ಠಿರೇ ಸೈನ್ಯೇ ಬಹವೋ ಮಾನವಾ ಹತಾಃ|
06086079c ದಂತಿನಃ ಸಾದಿನಶ್ಚೈವ ರಥಿನೋಽಥ ಹಯಾಸ್ತಥಾ||
ಅವನು ಯುಧಿಷ್ಠಿರನ ಸೇನೆಯ ಬಹಳಷ್ಟು ಮನುಷ್ಯರು, ಆನೆಗಳು, ಅಶ್ವಾರೋಹಿಗಳು, ರಥಿಗಳು ಮತ್ತು ಕುದುರೆಗಳನ್ನು ಸಂಹರಿಸಿದನು.
06086080a ತತ್ರ ಭಾರತ ಭೀಷ್ಮಸ್ಯ ರಣೇ ದೃಷ್ಟ್ವಾ ಪರಾಕ್ರಮಂ|
06086080c ಅತ್ಯದ್ಭುತಮಪಶ್ಯಾಮ ಶಕ್ರಸ್ಯೇವ ಪರಾಕ್ರಮಂ||
ಭಾರತ! ಅಲ್ಲಿ ರಣದಲ್ಲಿ ಭೀಷ್ಮನ ಪರಾಕ್ರಮವನ್ನು ನೋಡಿ ಶಕ್ರನದೇ ಅತ್ಯದ್ಭುತ ಪರಾಕ್ರಮವನ್ನು ನೋಡಿದಂತಾಯಿತು.
06086081a ತಥೈವ ಭೀಮಸೇನಸ್ಯ ಪಾರ್ಷತಸ್ಯ ಚ ಭಾರತ|
06086081c ರೌದ್ರಮಾಸೀತ್ತದಾ ಯುದ್ಧಂ ಸಾತ್ವತಸ್ಯ ಚ ಧನ್ವಿನಃ||
ಭಾರತ! ಹಾಗೆಯೇ ಧನ್ವಿಗಳಾದ ಭೀಮಸೇನ, ಪಾರ್ಷತ ಮತ್ತು ಸಾತ್ತ್ವತರ ಯುದ್ಧವೂ ರೌದ್ರವಾಗಿತ್ತು.
06086082a ದೃಷ್ಟ್ವಾ ದ್ರೋಣಸ್ಯ ವಿಕ್ರಾಂತಂ ಪಾಂಡವಾನ್ಭಯಮಾವಿಶತ್|
06086082c ಏಕ ಏವ ರಣೇ ಶಕ್ತೋ ಹಂತುಮಸ್ಮಾನ್ಸಸೈನಿಕಾನ್||
06086083a ಕಿಂ ಪುನಃ ಪೃಥಿವೀಶೂರೈರ್ಯೋಧವ್ರಾತೈಃ ಸಮಾವೃತಃ|
06086083c ಇತ್ಯಬ್ರುವನ್ಮಹಾರಾಜ ರಣೇ ದ್ರೋಣೇನ ಪೀಡಿತಾಃ||
ಮಹಾರಾಜ! ದ್ರೋಣನ ವಿಕ್ರಾಂತವನ್ನು ನೋಡಿ ಪಾಂಡವರಿಗೆ ಭಯವು ತುಂಬಿಕೊಂಡಿತು. “ರಣದಲ್ಲಿ ಅವನೊಬ್ಬನೇ ಸೈನಿಕರೊಂದಿಗೆ ನಮ್ಮನ್ನು ಸಂಹರಿಸಲು ಶಕ್ತ. ಇನ್ನು ಇಲ್ಲಿ ಸೇರಿರುವ ಪೃಥ್ವಿಯ ಶೂರರೆಲ್ಲರದ್ದೇನು?” ಎಂದು ರಣದಲ್ಲಿ ದ್ರೋಣನಿಂದ ಪೀಡಿತರಾದವರು ಹೇಳಿಕೊಂಡರು.
06086084a ವರ್ತಮಾನೇ ತಥಾ ರೌದ್ರೇ ಸಂಗ್ರಾಮೇ ಭರತರ್ಷಭ|
06086084c ಉಭಯೋಃ ಸೇನಯೋಃ ಶೂರಾ ನಾಮೃಷ್ಯಂತ ಪರಸ್ಪರಂ||
ಭರತರ್ಷಭ! ಹಾಗೆ ನಡೆಯುತ್ತಿದ್ದ ರೌದ್ರ ಸಂಗ್ರಾಮದಲ್ಲಿ ಎರಡೂ ಸೇನೆಗಳ ಶೂರರು ಪರಸ್ಪರರನ್ನು ಸಹಿಸಿಕೊಳುತ್ತಿರಲಿಲ್ಲ.
06086085a ಆವಿಷ್ಟಾ ಇವ ಯುಧ್ಯಂತೇ ರಕ್ಷೋಭೂತಾ ಮಹಾಬಲಾಃ|
06086085c ತಾವಕಾಃ ಪಾಂಡವೇಯಾಶ್ಚ ಸಂರಬ್ಧಾಸ್ತಾತ ಧನ್ವಿನಃ||
ಅಯ್ಯಾ! ಆ ಮಹಾಬಲ ಧನ್ವಿಗಳು - ನಿನ್ನವರು ಮತ್ತು ಪಾಂಡವೇಯರು - ರಾಕ್ಷಸ ಭೂತಗಳಿಂದ ಆವಿಷ್ಟರಾದವರಂತೆ ಸಂರಬ್ಧರಾಗಿ ಯುದ್ಧ ಮಾಡುತ್ತಿದ್ದರು.
06086086a ನ ಸ್ಮ ಪಶ್ಯಾಮಹೇ ಕಂ ಚಿದ್ಯಃ ಪ್ರಾಣಾನ್ಪರಿರಕ್ಷತಿ|
06086086c ಸಂಗ್ರಾಮೇ ದೈತ್ಯಸಂಕಾಶೇ ತಸ್ಮಿನ್ಯೋದ್ಧಾ ನರಾಧಿಪ||
ನರಾಧಿಪ! ದೈತ್ಯರದ್ದಂತಿದ್ದ ಆ ಸಂಗ್ರಾಮದಲ್ಲಿ ಯಾವ ಯೋಧನೂ ತನ್ನ ಪ್ರಾಣಗಳನ್ನು ರಕ್ಷಿಸಿಕೊಳ್ಳುತ್ತಿರುವುದನ್ನು ನಾವು ನೋಡಲಿಲ್ಲ.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಇರಾವಾದ್ವಧೇ ಷಷ್ಠ್ಯಾಶೀತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಇರಾವಾದ್ವಧ ಎನ್ನುವ ಎಂಭತ್ತಾರನೇ ಅಧ್ಯಾಯವು.

[1] ದ್ರೌಪದಿಯ ಕುರಿತು ಸಹೋದರರು ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುದಕ್ಕಾಗಿ ಅರ್ಜುನನು ವನವಾಸವನ್ನು ಕೈಗೊಂಡು ಗಂಗಾದ್ವಾರದಲ್ಲಿ ಸ್ನಾನಕ್ಕೆಂದು ಗಂಗೆಯಲ್ಲಿ ಇಳಿದಾಗ ಕಾಮ ಮೂರ್ಛಿತಳಾದ ಉಲೂಪಿಯು ಅವನನ್ನು ನಾಗಲೋಕಕ್ಕೆ ಕೊಂಡೊಯ್ದು ಅವನೊಂದಿಗೆ ರಾತ್ರಿಯನ್ನು ಕಳೆದ ವಿಷಯವು ಆದಿಪರ್ವದ ಅಧ್ಯಾಯ ೨೦೬ರಲ್ಲಿ ಬಂದಿದೆ. ಆದರೆ ಈ ಅಧ್ಯಾಯದಲ್ಲಿ ಉಲೂಪಿಯು ವಿಧವೆ ಎಂಬ ವಿಷಯವು ಬಂದಿರುವುದಿಲ್ಲ. ವಿಧವೆಯಾಗಿದ್ದ ಉಲೂಪಿಯಲ್ಲಿ ಹುಟ್ಟಿದವನಾದುದರಿಂದ ಇರಾವಾನನು ಅರ್ಜುನನಿಗೆ ಪರಕ್ಷೇತ್ರದಲ್ಲಿ ಹುಟ್ಟಿದ ಮಗನೆಂದು ತಿಳಿಯಬೇಕು.
[2] ಆದರೆ ಇರಾವಾನನ ಚಿಕ್ಕಪ್ಪನ್ಯಾರು ಮತ್ತು ಅರ್ಜುನನೊಂದಿಗೆ ಅವನಿಗಿದ್ದ ದ್ವೇಷವು ಯಾವ ಕಾರಣಕ್ಕಾಗಿ ಎನ್ನುವುದು ಮಹಾಭಾರತದಲ್ಲಿ ವರ್ಣಿತವಾಗಿಲ್ಲ.
[3] ಇಲ್ಲಿ ಸೌಬಲಸ್ಯಾತ್ಮಜಾಃ ಎಂದರೆ ಸೌಬಲ ಶಕುನಿಯ ಮಕ್ಕಳೆಂದು ಇದ್ದರೂ ಸುಬಲಸ್ಯಾತ್ಮಜಾಃ ಎಂದು ಮುಂದಿನ ಶ್ಲೋಕಗಳಲ್ಲಿ ಇದೆ. ವೃಷಕಾದಿಗಳು ಶಕುನಿಯ ಸಹೋದರರೆಂದು ಮುಂದೆ ದ್ರೋಣಪರ್ವದ ಅಧ್ಯಾಯ ೨೯ರಲ್ಲಿ ಬಂದಿರುವುದರಿಂದ ನಾನು ಇಲ್ಲಿ ಇವರು ಸುಬಲನ ಮಕ್ಕಳು ಎಂದರೆ ಶಕುನಿಯ ಸಹೋದರರೆಂದೇ ಭಾಷಾಂತರಿಸಿದ್ದೇನೆ.