Drona Parva: Chapter 29

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೯

ಸುಬಲನ ಮಕ್ಕಳಾದ ವೃಷಕ ಮತ್ತು ಅಚಲರನ್ನು ಅರ್ಜುನನು ವಧಿಸಿದುದು (೧-೧೩). ಅರ್ಜುನನೊಡನೆ ಶಕುನಿಯ ಮಾಯಾಯುದ್ಧ; ಶಕುನಿಯ ಪಲಾಯನ (೧೪-೪೧).

07029001 ಸಂಜಯ ಉವಾಚ|

07029001a ಪ್ರಿಯಮಿಂದ್ರಸ್ಯ ಸತತಂ ಸಖಾಯಮಮಿತೌಜಸಂ|

07029001c ಹತ್ವಾ ಪ್ರಾಗ್ಜ್ಯೋತಿಷಂ ಪಾರ್ಥಃ ಪ್ರದಕ್ಷಿಣಮವರ್ತತ||

ಸಂಜಯನು ಹೇಳಿದನು: “ಸತತವೂ ಇಂದ್ರನ ಪ್ರಿಯನಾಗಿದ್ದ ಸಖ ಅಮಿತೌಜಸ ಪ್ರಾಗ್ಜ್ಯೋತಿಷನನ್ನು ಸಂಹರಿಸಿ ಪಾರ್ಥನು ಪ್ರದಕ್ಷಿಣಾಕಾರವಾಗಿ ಹಿಂದಿರುಗಿದನು.

07029002a ತತೋ ಗಾಂಧಾರರಾಜಸ್ಯ ಸುತೌ ಪರಪುರಂಜಯೌ|

07029002c ಆರ್ಚೇತಾಮರ್ಜುನಂ ಸಂಖ್ಯೇ ಭ್ರಾತರೌ ವೃಷಕಾಚಲೌ||

ಆಗ ಗಾಂಧಾರರಾಜನ ಮಕ್ಕಳು, ಪರಪುರಂಜಯ ಸಹೋದರರಾದ ವೃಷಕ ಮತ್ತು ಅಚಲರಿಬ್ಬರೂ ರಣದಲ್ಲಿ ಅರ್ಜುನನ ಮೇಲೆ ಬಾಣಗಳನ್ನು ಪ್ರಯೋಗಿಸಿದರು.

07029003a ತೌ ಸಮೇತ್ಯಾರ್ಜುನಂ ವೀರೌ ಪುರಃ ಪಶ್ಚಾಚ್ಚ ಧನ್ವಿನೌ|

07029003c ಅವಿಧ್ಯೇತಾಂ ಮಹಾವೇಗೈರ್ನಿಶಿತೈರಾಶುಗೈರ್ಭೃಶಂ||

ಆ ಇಬ್ಬರು ವೀರ ಧನ್ವಿಗಳೂ ಅರ್ಜುನನ ಮುಂದೆ ಮತ್ತು ಹಿಂದಿನಿಂದ ಮಹಾವೇಗದಿಂದ ನಿಶಿತ ಆಶುಗಗಳಿಂದ ತುಂಬಾ ಹೊಡೆದು ಗಾಯಗೊಳಿಸಿದರು.

07029004a ವೃಷಕಸ್ಯ ಹಯಾನ್ಸೂತಂ ಧನುಶ್ಚತ್ರಂ ರಥಂ ಧ್ವಜಂ|

07029004c ತಿಲಶೋ ವ್ಯಧಮತ್ಪಾರ್ಥಃ ಸೌಬಲಸ್ಯ ಶಿತೈಃ ಶರೈಃ||

ಪಾರ್ಥನು ಹರಿತ ಬಾಣಗಳಿಂದ ಸೌಬಲನ ಮಗ ವೃಷಕನ ಕುದುರೆಗಳನ್ನೂ, ಸೂತನನ್ನೂ ಕೊಂದು ಧನುಸ್ಸನ್ನೂ, ಚತ್ರವನ್ನೂ, ರಥವನ್ನೂ, ಧ್ವಜವನ್ನೂ ಕತ್ತರಿಸಿದನು.

07029005a ತತೋಽರ್ಜುನಃ ಶರವ್ರಾತೈರ್ನಾನಾಪ್ರಹರಣೈರಪಿ|

07029005c ಗಾಂಧಾರಾನ್ವ್ಯಾಕುಲಾಂಶ್ಚಕ್ರೇ ಸೌಬಲಪ್ರಮುಖಾನ್ಪುನಃ||

ಆಗ ಅರ್ಜುನನು ಬಾಣಗಳ ಮಳೆಯಿಂದಲೂ ನಾನಾ ವಿಧದ ಶಸ್ತ್ರಪ್ರಹಾರಗಳಿಂದ ಪುನಃ ಪುನಃ ಸೌಬಲಪ್ರಮುಖ ಗಾಂಧಾರರನ್ನು ವ್ಯಾಕುಲಗೊಳಿಸಿದನು.

07029006a ತತಃ ಪಂಚಶತಾನ್ವೀರಾನ್ಗಾಂಧಾರಾನುದ್ಯತಾಯುಧಾನ್|

07029006c ಪ್ರಾಹಿಣೋನ್ಮೃತ್ಯುಲೋಕಾಯ ಕ್ರುದ್ಧೋ ಬಾಣೈರ್ಧನಂಜಯಃ||

ಆಗ ಆಯುಧಗಳನ್ನು ಹಿಡಿದು ಆಕ್ರಮಣ ಮಾಡುತ್ತಿದ್ದ ಐನೂರು ಗಾಂಧಾರವೀರರನ್ನು ಧನಂಜಯನು ಕ್ರುದ್ಧನಾಗಿ ಮೃತ್ಯುಲೋಕಕ್ಕೆ ಕಳುಹಿಸಿದನು.

07029007a ಹತಾಶ್ವಾತ್ತು ರಥಾತ್ತೂರ್ಣಮವತೀರ್ಯ ಮಹಾಭುಜಃ|

07029007c ಆರುರೋಹ ರಥಂ ಭ್ರಾತುರನ್ಯಚ್ಚ ಧನುರಾದದೇ||

ಕುದುರೆಗಳು ಹತವಾಗಲು ತಕ್ಷಣವೇ ಆ ಮಹಾಭುಜ ವೃಷಕನು ರಥದಿಂದ ಇಳಿದು ಸಹೋದರ ಅಚಲನ ರಥವನ್ನೇರಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.

07029008a ತಾವೇಕರಥಮಾರೂಢೌ ಭ್ರಾತರೌ ವೃಷಕಾಚಲೌ|

07029008c ಶರವರ್ಷೇಣ ಬೀಭತ್ಸುಮವಿಧ್ಯೇತಾಂ ಪುನಃ ಪುನಃ||

ಅವರಿಬ್ಬರು ಸಹೋದರ ವೃಷಕ-ಅಚಲರು ಶರವರ್ಷಗಳಿಂದ ಪುನಃ ಪುನಃ ಬೀಭತ್ಸುವನ್ನು ಆಕ್ರಮಣಿಸಿದರು.

07029009a ಸ್ಯಾಲೌ ತವ ಮಹಾತ್ಮಾನೌ ರಾಜಾನೌ ವೃಷಕಾಚಲೌ|

07029009c ಭೃಶಂ ನಿಜಘ್ನತುಃ ಪಾರ್ಥಮಿಂದ್ರಂ ವೃತ್ರಬಲಾವಿವ||

ಮಹಾತ್ಮರಾದ ನಿನ್ನ ಬಾವನ ಮಕ್ಕಳಾದ ರಾಜಕುಮಾರ ವೃಷಕ-ಅಚಲರಿಬ್ಬರೂ ವೃತ್ರ-ಬಲರು ಇಂದ್ರನನ್ನು ಹೇಗೋ ಹಾಗೆ ಪಾರ್ಥನನ್ನು ಚೆನ್ನಾಗಿ ಗಾಯಗೊಳಿಸಿದರು.

07029010a ಲಬ್ಧಲಕ್ಷ್ಯೌ ತು ಗಾಂಧಾರಾವಹತಾಂ ಪಾಂಡವಂ ಪುನಃ|

07029010c ನಿದಾಘವಾರ್ಷಿಕೌ ಮಾಸೌ ಲೋಕಂ ಘರ್ಮಾಂಬುಭಿರ್ಯಥಾ||

ಆಷಾಢ-ಶ್ರಾವಣ ಮಾಸಗಳು ಹೇಗೆ ಉರಿಯುವ ಕಿರಣಗಳಿಂದ ಲೋಕವನ್ನು ತಾಪಗೊಳಿಸುತ್ತವೆಯೋ ಹಾಗೆ ಲಕ್ಷ್ಯಭೇದದಲ್ಲಿ ಸಿದ್ಧಹಸ್ತರಾದ ಆ ಗಾಂಧಾರರು ಪಾಂಡವನನ್ನು ಪುನಃ ಪುನಃ ಬಾಣಗಳಿಂದ ಪ್ರಹರಿಸಿದರು.

07029011a ತೌ ರಥಸ್ಥೌ ನರವ್ಯಾಘ್ರೌ ರಾಜಾನೌ ವೃಷಕಾಚಲೌ|

07029011c ಸಂಶ್ಲಿಷ್ಟಾಂಗೌ ಸ್ಥಿತೌ ರಾಜನ್ಜಘಾನೈಕೇಷುಣಾರ್ಜುನಃ||

ರಾಜನ್! ರಥದಲ್ಲಿ ಒಬ್ಬರಿಗೊಬ್ಬರು ತಾಗಿಕೊಂಡೇ ನಿಂತಿದ್ದ ಆ ಇಬ್ಬರು ನರವ್ಯಾಘ್ರ ರಾಜಕುಮಾರ ವೃಷಕ-ಅಚಲರಿಬ್ಬರನ್ನೂ ಅರ್ಜುನನು ಒಂದೇ ಒಂದು ಬಾಣದಿಂದ ಪ್ರಹರಿಸಿದನು.

07029012a ತೌ ರಥಾತ್ ಸಿಂಹಸಂಕಾಶೌ ಲೋಹಿತಾಕ್ಷೌ ಮಹಾಭುಜೌ|

07029012c ಗತಾಸೂ ಪೇತತುರ್ವೀರೌ ಸೋದರ್ಯಾವೇಕಲಕ್ಷಣೌ||

ಸಿಂಹಗಳಂತಿದ್ದ, ಕೆಂಪುಗಣ್ಣುಳ್ಳವರಾಗಿದ್ದ, ಒಂದೇ ದೇಹಲಕ್ಷಣಗಳನ್ನು ಹೊಂದಿದ್ದ ಆ ಇಬ್ಬರು ವೀರ ಮಹಾಭುಜ ಸೋದರರಿಬ್ಬರೂ ಅಸುನೀಗಿ ರಥದಿಂದ ಕೆಳಗೆ ಬಿದ್ದರು.

07029013a ತಯೋರ್ದೇಹೌ ರಥಾದ್ಭೂಮಿಂ ಗತೌ ಬಂಧುಜನಪ್ರಿಯೌ|

07029013c ಯಶೋ ದಶ ದಿಶಃ ಪುಣ್ಯಂ ಗಮಯಿತ್ವಾ ವ್ಯವಸ್ಥಿತೌ||

ಬಂಧುಜನರಿಗೆ ಪ್ರಿಯರಾದ ಅವರ ದೇಹಗಳು ತಮ್ಮ ಪುಣ್ಯ ಯಶಸ್ಸನ್ನು ಹತ್ತು ದಿಕ್ಕ್ಕುಗಳಲ್ಲಿಯೂ ಪಸರಿಸಿ ರಥದಿಂದ ಭೂಮಿಯ ಮೇಲೆ ಬಿದ್ದು ಮಲಗಿದವು.

07029014a ದೃಷ್ಟ್ವಾ ವಿನಿಹತೌ ಸಂಖ್ಯೇ ಮಾತುಲಾವಪಲಾಯಿನೌ|

07029014c ಭೃಶಂ ಮುಮುಚುರಶ್ರೂಣಿ ಪುತ್ರಾಸ್ತವ ವಿಶಾಂ ಪತೇ||

ವಿಶಾಂಪತೇ! ಪಲಾಯನಗೈಯದೇ ರಣದಲ್ಲಿ ಹತರಾದ ಸೋದರ ಮಾವಂದಿರನ್ನು ನೋಡಿ ನಿನ್ನ ಮಕ್ಕಳು ಬಹಳವಾಗಿ ಕಣ್ಣೀರು ಸುರಿಸಿದರು.

07029015a ನಿಹತೌ ಭ್ರಾತರೌ ದೃಷ್ಟ್ವಾ ಮಾಯಾಶತವಿಶಾರದಃ|

07029015c ಕೃಷ್ಣೌ ಸಮ್ಮೋಹಯನ್ಮಾಯಾಂ ವಿದಧೇ ಶಕುನಿಸ್ತತಃ||

ಆಗ ತನ್ನ ಸಹೋದರರು ಹತರಾದುದನ್ನು ನೋಡಿ ನೂರಾರು ಮಾಯೆಗಳ ವಿಶಾರದ ಶಕುನಿಯು ಮಾಯೆಗಳನ್ನು ಬಳಸಿ ಕೃಷ್ಣರಿಬ್ಬರನ್ನೂ ಸಮ್ಮೋಹಗೊಳಿಸತೊಡಗಿದನು.

07029016a ಲಗುಡಾಯೋಗುಡಾಶ್ಮಾನಃ ಶತಘ್ನ್ಯಶ್ಚ ಸಶಕ್ತಯಃ|

07029016c ಗದಾಪರಿಘನಿಸ್ತ್ರಿಂಶಶೂಲಮುದ್ಗರಪಟ್ಟಿಶಾಃ||

07029017a ಸಕಂಪನರ್ಷ್ಟಿನಖರಾ ಮುಸಲಾನಿ ಪರಶ್ವಧಾಃ|

07029017c ಕ್ಷುರಾಃ ಕ್ಷುರಪ್ರನಾಲೀಕಾ ವತ್ಸದಂತಾಸ್ತ್ರಿಸಂಧಿನಃ||

07029018a ಚಕ್ರಾಣಿ ವಿಶಿಖಾಃ ಪ್ರಾಸಾ ವಿವಿಧಾನ್ಯಾಯುಧಾನಿ ಚ|

07029018c ಪ್ರಪೇತುಃ ಸರ್ವತೋ ದಿಗ್ಭ್ಯಃ ಪ್ರದಿಗ್ಭ್ಯಶ್ಚಾರ್ಜುನಂ ಪ್ರತಿ||

ದೊಣ್ಣೆಗಳು, ಕಬ್ಬಿಣದ ಸಲಾಕೆಗಳು, ಕಲ್ಲುಗಳು, ಶತಘ್ನಿಗಳು, ಶಕ್ತಿಗಳು, ಗದೆಗಳು, ಪರಿಘಗಳು, ಖಡ್ಗಗಳು, ಶೂಲಗಳು, ಮುದ್ಗರ-ಪಟ್ಟಿಷಗಳು, ಕಂಪನಗಳು, ಋಷ್ಟಿಗಳು, ನಖರಗಳು, ಮುಸಲಗಳು, ಪರಶುಗಳು, ಕ್ಷುರಗಳು, ಕ್ಷುರಪ್ರನಾಲೀಕಗಳು, ವತ್ಸದಂತಿಗಳು, ಅಸ್ಥಿಸಂಧಿಗಳು, ಚಕ್ರಗಳು, ಬಾಣಗಳು, ಪ್ರಾಸಗಳು, ಮತ್ತು ವಿವಿಧ ಆಯುಧಗಳು ಎಲ್ಲ ದಿಕ್ಕು-ಉಪ ದಿಕ್ಕ್ಕುಗಳಿಂದ ಅರ್ಜುನನ ಮೇಲೆ ಬಂದು ಬೀಳತೊಡಗಿದವು.

07029019a ಖರೋಷ್ಟ್ರಮಹಿಷಾಃ ಸಿಂಹಾ ವ್ಯಾಘ್ರಾಃ ಸೃಮರಚಿಲ್ಲಿಕಾಃ|

07029019c ಋಕ್ಷಾಃ ಸಾಲಾವೃಕಾ ಗೃಧ್ರಾಃ ಕಪಯೋಽಥ ಸರೀಸೃಪಾಃ||

07029020a ವಿವಿಧಾನಿ ಚ ರಕ್ಷಾಂಸಿ ಕ್ಷುಧಿತಾನ್ಯರ್ಜುನಂ ಪ್ರತಿ|

07029020c ಸಂಕ್ರುದ್ಧಾನ್ಯಭ್ಯಧಾವಂತ ವಿವಿಧಾನಿ ವಯಾಂಸಿ ಚ||

ಕತ್ತೆಗಳು, ಒಂಟೆಗಳು, ಕೋಣಗಳು, ಸಿಂಹಗಳು, ಹುಲಿಗಳು, ಬೆಟ್ಟದ ಹಸುಗಳು, ಚಿರತೆಗಳು, ಕರಡಿಗಳು, ಹದ್ದುಗಳು, ಕಪಿಗಳು, ಹಾವುಗಳು, ಮತ್ತು ವಿವಿಧ ಪಕ್ಷಿಗಳು ಹಸಿವಿನಿಂದ ಬಳಲಿ ಸಂಕ್ರುದ್ಧರಾಗಿ ಅರ್ಜುನನ ಕಡೆ ಧಾವಿಸಿ ಬಂದವು.

07029021a ತತೋ ದಿವ್ಯಾಸ್ತ್ರವಿಚ್ಚೂರಃ ಕುಂತೀಪುತ್ರೋ ಧನಂಜಯಃ|

07029021c ವಿಸೃಜನ್ನಿಷುಜಾಲಾನಿ ಸಹಸಾ ತಾನ್ಯತಾಡಯತ್||

ಆಗ ದಿವ್ಯಾಸ್ತ್ರಗಳನ್ನು ತಿಳಿದಿದ್ದ ಶೂರ ಕುಂತೀಪುತ್ರ ಧನಂಜಯನು ತಕ್ಷಣವೇ ಬಾಣಗಳ ಜಾಲಗಳನ್ನು ಪ್ರಯೋಗಿಸಿ ಅವುಗಳನ್ನು ನಾಶಗೊಳಿಸಿದನು.

07029022a ತೇ ಹನ್ಯಮಾನಾಃ ಶೂರೇಣ ಪ್ರವರೈಃ ಸಾಯಕೈರ್ದೃಢೈಃ|

07029022c ವಿರುವಂತೋ ಮಹಾರಾವಾನ್ವಿನೇಶುಃ ಸರ್ವತೋ ಹತಾಃ||

ಆ ಶೂರನ ಪ್ರವರ ದೃಢ ಸಾಯಕಗಳಿಂದ ಗಾಯಗೊಂಡ ಅವುಗಳೆಲ್ಲವೂ ಮಹಾರವದಲ್ಲಿ ಕೂಗುತ್ತಾ ಹತಗೊಂಡು ಬಿದ್ದು ನಾಶಗೊಂಡವು.

07029023a ತತಸ್ತಮಃ ಪ್ರಾದುರಭೂದರ್ಜುನಸ್ಯ ರಥಂ ಪ್ರತಿ|

07029023c ತಸ್ಮಾಚ್ಚ ತಮಸೋ ವಾಚಃ ಕ್ರೂರಾಃ ಪಾರ್ಥಮಭರ್ತ್ಸಯನ್||

ಆಗ ಅರ್ಜುನನ ರಥದ ಸುತ್ತಲೂ ಕತ್ತಲೆಯುಂಟಾಯಿತು. ಆ ಕತ್ತಲೆಯಲ್ಲಿ ಕ್ರೂರ ಮಾತುಗಳು ಪಾರ್ಥನನ್ನು ಬೆದರಿಸಿದವು.

07029024a ತತ್ತಮೋಽಸ್ತ್ರೇಣ ಮಹತಾ ಜ್ಯೋತಿಷೇಣಾರ್ಜುನೋಽವಧೀತ್|

07029024c ಹತೇ ತಸ್ಮಿನ್ಜಲೌಘಾಸ್ತು ಪ್ರಾದುರಾಸನ್ಭಯಾನಕಾಃ||

ಆಗ ಅರ್ಜುನನು ಆ ಮಹಾ ಕತ್ತಲೆಯನ್ನು ಜ್ಯೋತಿಷಾಸ್ತ್ರದಿಂದ ನಿರಸನಗೊಳಿಸಿದನು. ಅದು ನಾಶಗೊಳ್ಳಲು ಭಯಾನಕವಾದ ಜಲರಾಶಿಯು ಅವನನ್ನು ಆವರಿಸಿತು.

07029025a ಅಂಭಸಸ್ತಸ್ಯ ನಾಶಾರ್ಥಮಾದಿತ್ಯಾಸ್ತ್ರಮಥಾರ್ಜುನಃ|

07029025c ಪ್ರಾಯುಂಕ್ತಾಂಭಸ್ತತಸ್ತೇನ ಪ್ರಾಯಶೋಽಸ್ತ್ರೇಣ ಶೋಷಿತಂ||

ಆ ನೀರಿನ ವಿನಾಶಕ್ಕಾಗಿ ಅರ್ಜುನನು ಆದಿತ್ಯಾಸ್ತ್ರವನ್ನು ಪ್ರಯೋಗಿಸಿದನು. ಆ ಅಸ್ತ್ರದಿಂದ ಜಲರಾಶಿಯೆಲ್ಲವೂ ಶೋಷಿತವಾಯಿತು.

07029026a ಏವಂ ಬಹುವಿಧಾ ಮಾಯಾಃ ಸೌಬಲಸ್ಯ ಕೃತಾಃ ಕೃತಾಃ|

07029026c ಜಘಾನಾಸ್ತ್ರಬಲೇನಾಶು ಪ್ರಹಸನ್ನರ್ಜುನಸ್ತದಾ||

ಹೀಗೆ ಸೌಬಲನು ಮಾಡಿದ ಬಹುವಿಧದ ಮಾಯೆಗಳನ್ನು ಅರ್ಜುನನು ನಗುತ್ತಾ ಅಸ್ತ್ರಬಲದಿಂದ ನಾಶಪಡಿಸಿದನು.

07029027a ತಥಾ ಹತಾಸು ಮಾಯಾಸು ತ್ರಸ್ತೋಽರ್ಜುನಶರಾಹತಃ|

07029027c ಅಪಾಯಾಜ್ಜವನೈರಶ್ವೈಃ ಶಕುನಿಃ ಪ್ರಾಕೃತೋ ಯಥಾ||

ಹಾಗೆ ಮಾಯೆಗಳು ನಾಶಗೊಳ್ಳಲು, ಅರ್ಜುನನ ಶರಗಳ ಪೆಟ್ಟಿನಿಂದ ತ್ರಸ್ತನಾದ ಶಕುನಿಯು ಪ್ರಾಕೃತನಂತೆ ವೇಗ ಕುದುರೆಗಳೊಂದಿಗೆ ಪಲಾಯನಗೈದನು.

07029028a ತತೋಽರ್ಜುನೋಽಸ್ತ್ರವಿಚ್ಚ್ರೈಷ್ಠ್ಯಂ ದರ್ಶಯನ್ನಾತ್ಮನೋಽರಿಷು|

07029028c ಅಭ್ಯವರ್ಷಚ್ಚರೌಘೇಣ ಕೌರವಾಣಾಮನೀಕಿನೀಂ||

ಆಗ ಅರ್ಜುನನು ಅರಿಗಳ ಮಧ್ಯೆ ತನ್ನಲ್ಲಿದ್ದ ಅಸ್ತ್ರಗಳ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಾ ಕೌರವರ ಸೇನೆಗಳನ್ನು ಶರೌಘಗಳಿಂದ ಮುಚ್ಚಿದನು.

07029029a ಸಾ ಹನ್ಯಮಾನಾ ಪಾರ್ಥೇನ ಪುತ್ರಸ್ಯ ತವ ವಾಹಿನೀ|

07029029c ದ್ವೈಧೀಭೂತಾ ಮಹಾರಾಜ ಗಂಗೇವಾಸಾದ್ಯ ಪರ್ವತಂ||

ಮಹಾರಾಜ! ಪಾರ್ಥನಿಂದ ನಾಶಗೊಳ್ಳುತ್ತಿದ್ದ ನಿನ್ನ ಮಗನ ಸೇನೆಯು ಗಂಗಾನದಿಯು ಪರ್ವತವನ್ನು ಸಮೀಪಿಸಿದಾಗ ಎರಡಾಗಿ ಕವಲೊಡೆಯುವಂತೆ ಇಬ್ಬಾಗಗೊಂಡಿತು.

07029030a ದ್ರೋಣಂ ಏವಾನ್ವಪದ್ಯಂತ ಕೇ ಚಿತ್ತತ್ರ ಮಹಾರಥಾಃ|

07029030c ಕೇ ಚಿದ್ದುರ್ಯೋಧನಂ ರಾಜನ್ನರ್ದ್ಯಮಾನಾಃ ಕಿರೀಟಿನಾ||

ರಾಜನ್! ಕಿರೀಟಿಯಿಂದ ಪೀಡಿತರಾದ ಕೆಲವರು ದ್ರೋಣನನ್ನು ಮೊರೆಹೊಕ್ಕರು. ಇನ್ನು ಕೆಲವರು ದುರ್ಯೋಧನನನ್ನು ಮೊರೆಹೊಕ್ಕರು.

07029031a ನಾಪಶ್ಯಾಮ ತತಸ್ತ್ವೇತತ್ಸೈನ್ಯಂ ವೈ ತಮಸಾವೃತಂ|

07029031c ಗಾಂಡೀವಸ್ಯ ಚ ನಿರ್ಘೋಷಃ ಶ್ರುತೋ ದಕ್ಷಿಣತೋ ಮಯಾ||

ಅಲ್ಲಿಂದಿಲ್ಲಿಗೆ ಓಡುವುದರಿಂದುಂಟಾದ ಧೂಳಿನಿಂದ ಸೈನ್ಯದಲ್ಲಿ ಕತ್ತಲೆಯು ಕವಿದು ಅರ್ಜುನನೇ ಕಾಣದಂತಾದನು. ಆದರೆ ನಾನು ಗಾಂಡೀವದ ನಿರ್ಘೋಷವನ್ನು ಪದೇ ಪದೇ ಕೇಳುತ್ತಿದ್ದೆನು.

07029032a ಶಂಖದುಂದುಭಿನಿರ್ಘೋಷಂ ವಾದಿತ್ರಾಣಾಂ ಚ ನಿಸ್ವನಂ|

07029032c ಗಾಂಡೀವಸ್ಯ ಚ ನಿರ್ಘೋಷೋ ವ್ಯತಿಕ್ರಮ್ಯಾಸ್ಪೃಶದ್ದಿವಂ||

ಶಂಖದುಂದುಭಿಗಳ ನಿರ್ಘೋಷ ಮತ್ತು ವಾದ್ಯಗಳ ಸ್ವರಗಳನ್ನೂ ಮೀರಿಸಿ ಗಾಂಡೀವದ ನಿರ್ಘೋಷವು ದಿವಿಯನ್ನು ತಲುಪಿತು.

07029033a ತತಃ ಪುನರ್ದಕ್ಷಿಣತಃ ಸಂಗ್ರಾಮಶ್ಚಿತ್ರಯೋಧಿನಾಂ|

07029033c ಸುಯುದ್ಧಮರ್ಜುನಸ್ಯಾಸೀದಹಂ ತು ದ್ರೋಣಮನ್ವಗಾಂ||

ಆಗ ಪುನಃ ದಕ್ಷಿಣಭಾಗದಲ್ಲಿ ದ್ರೋಣನನ್ನು ಅನುಸರಿಸುತ್ತಿದ್ದ ಚಿತ್ರ ಯೋಧಿಗಳೊಂದಿಗೆ ಅರ್ಜುನನ ಉತ್ತಮ ಸಂಗ್ರಾಮವು ನಡೆಯಿತು.

07029034a ನಾನಾವಿಧಾನ್ಯನೀಕಾನಿ ಪುತ್ರಾಣಾಂ ತವ ಭಾರತ|

07029034c ಅರ್ಜುನೋ ವ್ಯಧಮತ್ಕಾಲೇ ದಿವೀವಾಭ್ರಾಣಿ ಮಾರುತಃ||

ಭಾರತ! ನಿನ್ನ ಪುತ್ರರ ನಾನಾ ವಿಧದ ಸೇನೆಗಳನ್ನು ಭಿರುಗಾಳಿಯು ಆಕಾಶದಲ್ಲಿ ಮೋಡಗಳನ್ನು ಚದುರಿಸುವಂತೆ ಅರ್ಜುನನು ನಾಶಗೊಳಿಸಿದನು.

07029035a ತಂ ವಾಸವಮಿವಾಯಾಂತಂ ಭೂರಿವರ್ಷಶರೌಘಿಣಂ|

07029035c ಮಹೇಷ್ವಾಸಂ ನರವ್ಯಾಘ್ರಂ ನೋಗ್ರಂ ಕಶ್ಚಿದವಾರಯತ್||

ಅಂತಕನಂತೆ ಜೋರಾಗಿ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಆ ವಾಸವ ಮಹೇಷ್ವಾಸ ನರವ್ಯಾಘ್ರ ಉಗ್ರನನ್ನು ಯಾರೂ ತಡೆಯಲಿಲ್ಲ.

07029036a ತೇ ಹನ್ಯಮಾನಾಃ ಪಾರ್ಥೇನ ತ್ವದೀಯಾ ವ್ಯಥಿತಾ ಭೃಶಂ|

07029036c ಸ್ವಾನೇವ ಬಹವೋ ಜಘ್ನುರ್ವಿದ್ರವಂತಸ್ತತಸ್ತತಃ||

ಪಾರ್ಥರಿಂದ ಹತರಾದ ನಿನ್ನವರು ತುಂಬಾ ವ್ಯಥಿತರಾದರು. ಪಲಾಯನ ಮಾಡುತ್ತಿದ್ದವರು ಬಹಳಷ್ಟು ತಮ್ಮವರನ್ನೇ ನಾಶಗೊಳಿಸಿದರು.

07029037a ತೇಽರ್ಜುನೇನ ಶರಾ ಮುಕ್ತಾಃ ಕಂಕಪತ್ರಾಸ್ತನುಚ್ಚಿದಃ|

07029037c ಶಲಭಾ ಇವ ಸಂಪೇತುಃ ಸಂವೃಣ್ವಾನಾ ದಿಶೋ ದಶ||

ಅರ್ಜುನನಿಂದ ಬಿಡಲ್ಪಟ್ಟು ದೇಹಗಳನ್ನು ತುಂಡರಿಸುತ್ತಿದ್ದ ಕಂಕಪತ್ರಗಳು ಮಿಡತೆಗಳೋಪಾದಿಯಲ್ಲಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಬೀಳುತ್ತಿದ್ದವು.

07029038a ತುರಗಂ ರಥಿನಂ ನಾಗಂ ಪದಾತಿಮಪಿ ಮಾರಿಷ|

07029038c ವಿನಿರ್ಭಿದ್ಯ ಕ್ಷಿತಿಂ ಜಗ್ಮುರ್ವಲ್ಮೀಕಮಿವ ಪನ್ನಗಾಃ||

ಮಾರಿಷ! ಅವುಗಳು ಆನೆ-ಕುದುರೆ-ಪದಾತಿ-ರಥಿಗಳನ್ನು ಭೇದಿಸಿ ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ನೆಲವನ್ನು ಹೊಗುತ್ತಿದ್ದವು.

07029039a ನ ಚ ದ್ವಿತೀಯಂ ವ್ಯಸೃಜತ್ಕುಂಜರಾಶ್ವನರೇಷು ಸಃ|

07029039c ಪೃಥಗೇಕಶರಾರುಗ್ಣಾ ನಿಪೇತುಸ್ತೇ ಗತಾಸವಃ||

ಅವನು ಆನೆ-ಕುದುರೆ-ಮನುಷ್ಯರ ಮೇಲೆ ಎರಡನೆಯ ಬಾಣವನ್ನು ಬಿಡುತ್ತಿರಲಿಲ್ಲ. ಅವನ ಒಂದೊಂದು ಬಾಣದಿಂದಲೂ ಗಾಯಗೊಂಡು ಅಸುನೀಗಿ ಬೀಳುತ್ತಿದ್ದರು.

07029040a ಹತೈರ್ಮನುಷ್ಯೈಸ್ತುರಗೈಶ್ಚ ಸರ್ವತಃ

         ಶರಾಭಿವೃಷ್ಟೈರ್ ದ್ವಿರದೈಶ್ಚ ಪಾತಿತೈಃ|

07029040c ತದಾ ಶ್ವಗೋಮಾಯುಬಡಾಭಿನಾದಿತಂ

         ವಿಚಿತ್ರಮಾಯೋಧಶಿರೋ ಬಭೂವ ಹ||

ಶರವೃಷ್ಟಿಯಿಂದ ಹತರಾದ ಮನುಷ್ಯ-ಕುದುರೆ-ಆನೆಗಳು ಬಿದ್ದು ರಣರಂಗವು ತುಂಬಿಹೋಯಿತು. ಹೆಣಗಳನ್ನು ತಿನ್ನಲು ಬಂದ ನಾಯಿ ಗುಳ್ಳೇನರಿಗಳ ಕೂಗಿನಿಂದ ರಣರಂಗದ ಮಧ್ಯಭಾಗವು ವಿಚಿತ್ರವಾಗಿ ತೋರಿತು.

07029041a ಪಿತಾ ಸುತಂ ತ್ಯಜತಿ ಸುಹೃದ್ವರಂ ಸುಹೃತ್

         ತಥೈವ ಪುತ್ರಃ ಪಿತರಂ ಶರಾತುರಃ|

07029041c ಸ್ವರಕ್ಷಣೇ ಕೃತಮತಯಸ್ತದಾ ಜನಾಸ್

         ತ್ಯಜಂತಿ ವಾಹಾನಪಿ ಪಾರ್ಥಪೀಡಿತಾಃ||

ಶರಾತುರರಾಗಿ ತಂದೆಯು ಮಗನನ್ನು ತೊರೆಯುತ್ತಿದ್ದನು. ಸ್ನೇಹಿತರು ಸ್ನೇಹಿತರನ್ನು ತೊರೆಯುತ್ತಿದ್ದರು. ಮತ್ತು ಹಾಗೆಯೇ ಪುತ್ರರು ಪಿತ್ರುಗಳನ್ನು ತೊರೆಯುತ್ತಿದ್ದರು. ಪಾರ್ಥನಿಂದ ಪೀಡಿತರಾದ ಕೃತಮತರು ತಮ್ಮ ತಮ್ಮ ರಕ್ಷಣೆಯಲ್ಲಿ ವಾಹನಗಳನ್ನೂ ಬಿಟ್ಟು ಓಡುತ್ತಿದ್ದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಶಕುನಿಪಲಾಯನೇ ಏಕೋನತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಶಕುನಿಪಲಾಯನ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.

Image result for indian motifs against white background

Comments are closed.