Bhishma Parva: Chapter 83

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೩

ಎಂಟನೆಯ ದಿವಸದ ಯುದ್ಧ

ಕುರುಸೇನಾವ್ಯೂಹ (೧-೧೪). ಪಾಂಡವಸೇನಾವ್ಯೂಹ (೧೫-೨೨). ಯುದ್ಧಾರಂಭ (೨೩-೩೯).

06083001 ಸಂಜಯ ಉವಾಚ|

06083001a ಪರಿಣಾಮ್ಯ ನಿಶಾಂ ತಾಂ ತು ಸುಖಸುಪ್ತಾ ಜನೇಶ್ವರಾಃ|

06083001c ಕುರವಃ ಪಾಂಡವಾಶ್ಚೈವ ಪುನರ್ಯುದ್ಧಾಯ ನಿರ್ಯಯುಃ||

ಸಂಜಯನು ಹೇಳಿದನು: “ಕೌರವರ ಮತ್ತು ಪಾಂಡವರ ಕಡೆಯ ಜನೇಶ್ವರರು ಆ ರಾತ್ರಿಯಲ್ಲಿ ಸುಖವಾಗಿ ಮಲಗಿ ಬೆಳಗಾಗುತ್ತಲೇ ಪುನಃ ಯುದ್ಧಕ್ಕೆ ತೆರಳಿದರು.

06083002a ತತಃ ಶಬ್ದೋ ಮಹಾನಾಸೀತ್ಸೇನಯೋರುಭಯೋರಪಿ|

06083002c ನಿರ್ಗಚ್ಛಮಾನಯೋಃ ಸಂಖ್ಯೇ ಸಾಗರಪ್ರತಿಮೋ ಮಹಾನ್||

ಯುದ್ಧಕ್ಕೆ ಹೊರಡುವ ಆ ಎರಡೂ ಸೇನೆಗಳಲ್ಲಿ ಮಹಾಸಾಗರದ ಭೋರ್ಗರೆತದಂತೆ ಮಹಾ ಶಬ್ಧವುಂಟಾಯಿತು.

06083003a ತತೋ ದುರ್ಯೋಧನೋ ರಾಜಾ ಚಿತ್ರಸೇನೋ ವಿವಿಂಶತಿಃ|

06083003c ಭೀಷ್ಮಶ್ಚ ರಥಿನಾಂ ಶ್ರೇಷ್ಠೋ ಭಾರದ್ವಾಜಶ್ಚ ವೈ ದ್ವಿಜಃ||

06083004a ಏಕೀಭೂತಾಃ ಸುಸಮ್ಯತ್ತಾಃ ಕೌರವಾಣಾಂ ಮಹಾಚಮೂಃ|

06083004c ವ್ಯೂಹಾಯ ವಿದಧೂ ರಾಜನ್ಪಾಂಡವಾನ್ಪ್ರತಿ ದಂಶಿತಾಃ||

ರಾಜನ್! ಆಗ ಕೌರವರ ಮಹಾಸೇನೆಯ ರಾಜ ದುರ್ಯೋಧನ, ಚಿತ್ರಸೇನ, ವಿವಿಂಶತಿ, ರಥಿಗಳಲ್ಲಿ ಶ್ರೇಷ್ಠ ಭೀಷ್ಮ, ದ್ವಿಜ ಭಾರದ್ವಾಜ ಇವರೆಲ್ಲರೂ ಸಂಘಟಿತರಾಗಿ ಸುಸನ್ನದ್ಧರಾಗಿ ಪಾಂಡವರೊಂದಿಗೆ ಯುದ್ಧಮಾಡಲು ಕವಚಗಳನ್ನು ಧರಿಸಿ ವ್ಯೂಹವನ್ನು ರಚಿಸಿದರು.

06083005a ಭೀಷ್ಮಃ ಕೃತ್ವಾ ಮಹಾವ್ಯೂಹಂ ಪಿತಾ ತವ ವಿಶಾಂ ಪತೇ|

06083005c ಸಾಗರಪ್ರತಿಮಂ ಘೋರಂ ವಾಹನೋರ್ಮಿತರಂಗಿಣಂ||

ವಿಶಾಂಪತೇ! ನಿನ್ನ ತಂದೆ ಭೀಷ್ಮನು ಸಾಗರದಂತೆ ಘೋರವಾಗಿರುವ ವಾಹನಗಳೇ ಅಲೆಗಳಾಗಿರುವ ಮಹಾವ್ಯೂಹವನ್ನು ರಚಿಸಿದನು.

06083006a ಅಗ್ರತಃ ಸರ್ವಸೈನ್ಯಾನಾಂ ಭೀಷ್ಮಃ ಶಾಂತನವೋ ಯಯೌ|

06083006c ಮಾಲವೈರ್ದಾಕ್ಷಿಣಾತ್ಯೈಶ್ಚ ಆವಂತ್ಯೈಶ್ಚ ಸಮನ್ವಿತಃ||

ಸರ್ವ ಸೇನೆಗಳ ಅಗ್ರಭಾಗದಲ್ಲಿ ಭೀಷ್ಮ ಶಾಂತನವನು ಮಾಲವ, ದಾಕ್ಷಿಣಾತ್ಯರು, ಮತ್ತು ಅವಂತಿಯವರಿಂದ ಸುತ್ತುವರೆಯಲ್ಪಟ್ಟು ಹೊರಟನು.

06083007a ತತೋಽನಂತರಮೇವಾಸೀದ್ಭಾರದ್ವಾಜಃ ಪ್ರತಾಪವಾನ್|

06083007c ಪುಲಿಂದೈಃ ಪಾರದೈಶ್ಚೈವ ತಥಾ ಕ್ಷುದ್ರಕಮಾಲವೈಃ||

ಅವನ ನಂತರದಲ್ಲಿ ಪುಲಿಂದರು, ಪಾರದರು ಮತ್ತು ಕ್ಷುದ್ರಕಮಾಲರೊಂದಿಗೆ ಪ್ರತಾಪವಾನ್ ಭಾರದ್ವಾಜನಿದ್ದನು.

06083008a ದ್ರೋಣಾದನಂತರಂ ಯತ್ತೋ ಭಗದತ್ತಃ ಪ್ರತಾಪವಾನ್|

06083008c ಮಾಗಧೈಶ್ಚ ಕಲಿಂಗೈಶ್ಚ ಪಿಶಾಚೈಶ್ಚ ವಿಶಾಂ ಪತೇ||

ವಿಶಾಂಪತೇ! ದ್ರೋಣನ ನಂತರದಲ್ಲಿ ಪ್ರತಾಪವಾನ್ ಭಗದತ್ತನು ಮಾಗಧ, ಕಲಿಂಗ ಮತ್ತು ಪಿಶಾಚರೊಂದಿಗೆ ಹೊರಟನು.

06083009a ಪ್ರಾಗ್ಜ್ಯೋತಿಷಾದನು ನೃಪಃ ಕೌಸಲ್ಯೋಽಥ ಬೃಹದ್ಬಲಃ|

06083009c ಮೇಕಲೈಸ್ತ್ರೈಪುರೈಶ್ಚೈವ ಚಿಚ್ಛಿಲೈಶ್ಚ ಸಮನ್ವಿತಃ||

ಪ್ರಾಗ್ಜ್ಯೋತಿಷರಾಜನನ್ನು ಅನುಸರಿಸಿ ಕೋಸಲದ ರಾಜ ಬೃಹದ್ಬಲನು ಮೇಕಲ, ತ್ರಿಪುರ ಮತ್ತು ಚಿಚ್ಛಿಲರಿಂದ ಕೂಡಿಕೊಂಡು ಹೋದನು.

06083010a ಬೃಹದ್ಬಲಾತ್ತತಃ ಶೂರಸ್ತ್ರಿಗರ್ತಃ ಪ್ರಸ್ಥಲಾಧಿಪಃ|

06083010c ಕಾಂಬೋಜೈರ್ಬಹುಭಿಃ ಸಾರ್ಧಂ ಯವನೈಶ್ಚ ಸಹಸ್ರಶಃ||

ಬೃಹದ್ಬಲನ ನಂತರ ಪ್ರಸ್ಥಲಾಧಿಪ ಶೂರ ತ್ರಿಗರ್ತನು ಅನೇಕ ಕಾಂಬೋಜರಿಂದ ಮತ್ತು ಸಹಸ್ರಾರು ಯವನರಿಂದ ಕೂಡಿಕೊಂಡು ಹೊರಟನು.

06083011a ದ್ರೌಣಿಸ್ತು ರಭಸಃ ಶೂರಸ್ತ್ರಿಗರ್ತಾದನು ಭಾರತ|

06083011c ಪ್ರಯಯೌ ಸಿಂಹನಾದೇನ ನಾದಯಾನೋ ಧರಾತಲಂ||

ಭಾರತ! ತ್ರಿಗರ್ತನನ್ನು ಅನುಸರಿಸಿ ಶೂರ ದ್ರೌಣಿಯು ರಭಸದಿಂದ ಸಿಂಹನಾದದಿಂದ ಧರಾತಲವನ್ನು ಮೊಳಗಿಸುತ್ತಾ ನಡೆದನು.

06083012a ತಥಾ ಸರ್ವೇಣ ಸೈನ್ಯೇನ ರಾಜಾ ದುರ್ಯೋಧನಸ್ತದಾ|

06083012c ದ್ರೌಣೇರನಂತರಂ ಪ್ರಾಯಾತ್ಸೋದರ್ಯೈಃ ಪರಿವಾರಿತಃ||

ಹಾಗೆಯೇ ದ್ರೌಣಿಯ ನಂತರ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ಸರ್ವ ಸೈನ್ಯದೊಂದಿಗೆ ಹೊರಟನು.

06083013a ದುರ್ಯೋಧನಾದನು ಕೃಪಸ್ತತಃ ಶಾರದ್ವತೋ ಯಯೌ|

06083013c ಏವಮೇಷ ಮಹಾವ್ಯೂಹಃ ಪ್ರಯಯೌ ಸಾಗರೋಪಮಃ||

ದುರ್ಯೋಧನನನ್ನು ಅನುಸರಿಸಿ ಶಾರದ್ವತ ಕೃಪನು ಹೊರಟನು. ಹೀಗೆ ಸಾಗರೋಪಮವಾಗಿದ್ದ ಮಹಾವ್ಯೂಹವು ಹೊರಟಿತು.

06083014a ರೇಜುಸ್ತತ್ರ ಪತಾಕಾಶ್ಚ ಶ್ವೇತಚ್ಛತ್ರಾಣಿ ಚಾಭಿಭೋ|

06083014c ಅಂಗದಾನ್ಯಥ ಚಿತ್ರಾಣಿ ಮಹಾರ್ಹಾಣಿ ಧನೂಂಷಿ ಚ||

ವಿಭೋ! ಅಲ್ಲಿ ಪತಾಕೆಗಳು ಶ್ವೇತ ಚತ್ರಗಳು, ಬಹುಮೂಲ್ಯದ ಚಿತ್ರ-ವಿಚಿತ್ರ ಭುಜಬಂದಿಗಳೂ, ಧನುಸ್ಸುಗಳೂ ಪ್ರಕಾಶಿಸಿದವು.

06083015a ತಂ ತು ದೃಷ್ಟ್ವಾ ಮಹಾವ್ಯೂಹಂ ತಾವಕಾನಾಂ ಮಹಾರಥಃ|

06083015c ಯುಧಿಷ್ಠಿರೋಽಬ್ರವೀತ್ತೂರ್ಣಂ ಪಾರ್ಷತಂ ಪೃತನಾಪತಿಂ||

ನಿನ್ನವರ ಆ ಮಹಾವ್ಯೂಹವನ್ನು ನೋಡಿ ಮಹಾರಥ ಯುಧಿಷ್ಠಿರನು ತಕ್ಷಣವೇ ಪೃತನಾಪತಿ ಪಾರ್ಷತನಿಗೆ ಹೇಳಿದನು:

06083016a ಪಶ್ಯ ವ್ಯೂಹಂ ಮಹೇಷ್ವಾಸ ನಿರ್ಮಿತಂ ಸಾಗರೋಪಮಂ|

06083016c ಪ್ರತಿವ್ಯೂಹಂ ತ್ವಮಪಿ ಹಿ ಕುರು ಪಾರ್ಷತ ಮಾಚಿರಂ||

“ಮಹೇಷ್ವಾಸ! ಸಾಗರದಂತೆ ನಿರ್ಮಿತವಾಗಿರುವ ವ್ಯೂಹವನ್ನು ನೋಡು! ಪಾರ್ಷತ! ತಡಮಾಡದೇ ನೀನೂ ಕೂಡ ಅದಕ್ಕೆ ಪ್ರತಿಯಾದ ವ್ಯೂಹವನ್ನು ರಚಿಸು.”

06083017a ತತಃ ಸ ಪಾರ್ಷತಃ ಶೂರೋ ವ್ಯೂಹಂ ಚಕ್ರೇ ಸುದಾರುಣಂ|

06083017c ಶೃಂಗಾಟಕಂ ಮಹಾರಾಜ ಪರವ್ಯೂಹವಿನಾಶನಂ||

ಮಹಾರಾಜ! ಆಗ ಶೂರ ಪಾರ್ಷತನು ಪರವ್ಯೂಹವನ್ನು ನಾಶಪಡಿಸಬಲ್ಲ ಸುದಾರುಣ ಶೃಂಗಾಟಕ ವ್ಯೂಹವನ್ನು ರಚಿಸಿದನು.

06083018a ಶೃಂಗೇಭ್ಯೋ ಭೀಮಸೇನಶ್ಚ ಸಾತ್ಯಕಿಶ್ಚ ಮಹಾರಥಃ|

06083018c ರಥೈರನೇಕಸಾಹಸ್ರೈಸ್ತಥಾ ಹಯಪದಾತಿಭಿಃ||

ಎರಡೂ ಶೃಂಗಗಳಲ್ಲಿ ಅನೇಕ ಸಹಸ್ರ ರಥಿಗಳಿಂದ ಮತ್ತು ಅಶ್ವಾರೋಹಿ-ಪದಾತಿಸೇನೆಗಳೊಂದಿಗೆ ಮಹಾರಥಿ ಭೀಮಸೇನ-ಸಾತ್ಯಕಿಯರಿದ್ದರು.

06083019a ನಾಭ್ಯಾಮಭೂನ್ನರಶ್ರೇಷ್ಠಃ ಶ್ವೇತಾಶ್ವೋ ವಾನರಧ್ವಜಃ|

06083019c ಮಧ್ಯೇ ಯುಧಿಷ್ಠಿರೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ||

ನಾಭಿಭಾಗದಲ್ಲಿ ನರಶ್ರೇಷ್ಠ ಶ್ವೇತಾಶ್ವ ವಾನರಧ್ವಜನಿದ್ದನು. ಮಧ್ಯದಲ್ಲಿ ರಾಜ ಯುಧಿಷ್ಠಿರ ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರಿದ್ದರು.

06083020a ಅಥೇತರೇ ಮಹೇಷ್ವಾಸಾಃ ಸಹಸೈನ್ಯಾ ನರಾಧಿಪಾಃ|

06083020c ವ್ಯೂಹಂ ತಂ ಪೂರಯಾಮಾಸುರ್ವ್ಯೂಹಶಾಸ್ತ್ರವಿಶಾರದಾಃ||

ಇತರ ಮಹೇಷ್ವಾಸ ವ್ಯೂಹಶಾಸ್ತ್ರ ವಿಶಾರದ ನರಾಧಿಪರು ವ್ಯೂಹವನ್ನು ಪೂರೈಸಿದರು.

06083021a ಅಭಿಮನ್ಯುಸ್ತತಃ ಪಶ್ಚಾದ್ವಿರಾಟಶ್ಚ ಮಹಾರಥಃ|

06083021c ದ್ರೌಪದೇಯಾಶ್ಚ ಸಂಹೃಷ್ಟಾ ರಾಕ್ಷಸಶ್ಚ ಘಟೋತ್ಕಚಃ||

ಅವರ ನಂತರ ಅಭಿಮನ್ಯು, ಮಹಾರಥ ವಿರಾಟ, ಸಂಹೃಷ್ಟರಾದ ದ್ರೌಪದೇಯರು ಮತ್ತು ರಾಕ್ಷಸ ಘಟೋತ್ಕಚರಿದ್ದರು.

06083022a ಏವಮೇತಂ ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ|

06083022c ಅತಿಷ್ಠನ್ಸಮರೇ ಶೂರಾ ಯೋದ್ಧುಕಾಮಾ ಜಯೈಷಿಣಃ||

ಭಾರತ! ಹೀಗೆ ಶೂರ ಪಾಂಡವರು ಮಹಾವ್ಯೂಹವನ್ನು ರಚಿಸಿಕೊಂಡು ಜಯವನ್ನು ಬಯಸಿ ಯುದ್ಧಮಾಡಲು ಇಚ್ಛಿಸಿ ಸಮರದಲ್ಲಿ ನಿಂತರು.

06083023a ಭೇರೀಶಬ್ದಾಶ್ಚ ತುಮುಲಾ ವಿಮಿಶ್ರಾಃ ಶಂಖನಿಸ್ವನೈಃ|

06083023c ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಃ ಸುಭೀಮಾಃ ಸರ್ವತೋದಿಶಂ||

ತುಮುಲ ಭೇರಿಶಬ್ಧವು ಶಂಖನಾದದಿಂದ ಮಿಶ್ರಿತವಾಗಿ, ಸಿಂಹನಾದ ಮತ್ತು ಭುಜಗಳನ್ನು ತಟ್ಟುವುದರಿಂದ ಎಲ್ಲ ಕಡೆಗಳಲ್ಲಿ ಭಯಂಕರ ಶಬ್ಧವುಂಟಾಯಿತು.

06083024a ತತಃ ಶೂರಾಃ ಸಮಾಸಾದ್ಯ ಸಮರೇ ತೇ ಪರಸ್ಪರಂ|

06083024c ನೇತ್ರೈರನಿಮಿಷೈ ರಾಜನ್ನವೈಕ್ಷಂತ ಪ್ರಕೋಪಿತಾಃ||

ರಾಜನ್! ಆಗ ಶೂರರು ಸಮರದಲ್ಲಿ ಎದುರಿಸಿ ಕೋಪದಿಂದ ಪರಸ್ಪರರನ್ನು ಎವೆಯಿಕ್ಕದೇ ನೋಡತೊಡಗಿದರು.

06083025a ಮನೋಭಿಸ್ತೇ ಮನುಷ್ಯೇಂದ್ರ ಪೂರ್ವಂ ಯೋಧಾಃ ಪರಸ್ಪರಂ|

06083025c ಯುದ್ಧಾಯ ಸಮವರ್ತಂತ ಸಮಾಹೂಯೇತರೇತರಂ||

ಮನುಷ್ಯೇಂದ್ರ! ಮೊದಲು ಆ ಯೋಧರು ತಮಗೆ ಅನುರೂಪರಾದವರನ್ನು ಪರಸ್ಪರ ಯುದ್ಧಕ್ಕೆ ಕರೆದು ಅವರೊಂದಿಗೆ ಯುದ್ಧಮಾಡುತ್ತಿದ್ದರು.

06083026a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾವಹಂ|

06083026c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ||

ಆಗ ಇತರೇತರನ್ನು ಸಂಹರಿಸುವ ನಿನ್ನವರ ಮತ್ತು ಶತ್ರುಗಳ ನಡುವೆ ಭಯವನ್ನುಂಟುಮಾಡುವ ಘೋರರೂಪದ ಯುದ್ಧವು ನಡೆಯಿತು.

06083027a ನಾರಾಚಾ ನಿಶಿತಾಃ ಸಂಖ್ಯೇ ಸಂಪತಂತಿ ಸ್ಮ ಭಾರತ|

06083027c ವ್ಯಾತ್ತಾನನಾ ಭಯಕರಾ ಉರಗಾ ಇವ ಸಂಘಶಃ||

ಭಾರತ! ಬಾಯ್ದೆರೆದ ಭಯಂಕರ ಸರ್ಪಗಳ ಗುಂಪಿನಂತೆ ನಿಶಿತ ನಾರಾಚಗಳು ಗುಂಪುಗುಂಪಾಗಿ ರಣಾಂಗಣದಲ್ಲಿ ಬೀಳುತ್ತಿದ್ದವು.

06083028a ನಿಷ್ಪೇತುರ್ವಿಮಲಾಃ ಶಕ್ತ್ಯಸ್ತೈಲಧೌತಾಃ ಸುತೇಜನಾಃ|

06083028c ಅಂಬುದೇಭ್ಯೋ ಯಥಾ ರಾಜನ್ಭ್ರಾಜಮಾನಾಃ ಶತಹ್ರದಾಃ||

ರಾಜನ್! ಮೋಡದಿಂದ ಹೊರಬರುವ ಹೊಳೆಯುತ್ತಿರುವ ಮಿಂಚುಗಳಂತೆ ತೈಲದಲ್ಲಿ ಅದ್ದಿದ್ದ ತೇಜಸ್ಸುಳ್ಳ ಹೊಳೆಯುವ ಶಕ್ತಿಗಳು ಬೀಳುತ್ತಿದ್ದವು.

06083029a ಗದಾಶ್ಚ ವಿಮಲೈಃ ಪಟ್ಟೈಃ ಪಿನದ್ಧಾಃ ಸ್ವರ್ಣಭೂಷಿತಾಃ|

06083029c ಪತಂತ್ಯಸ್ತತ್ರ ದೃಶ್ಯಂತೇ ಗಿರಿಶೃಂಗೋಪಮಾಃ ಶುಭಾಃ|

06083029e ನಿಸ್ತ್ರಿಂಶಾಶ್ಚ ವ್ಯರಾಜಂತ ವಿಮಲಾಂಬರಸನ್ನಿಭಾಃ||

ಸುವರ್ಣಭೂಷಿತ, ವಿಮಲ ಪಟ್ಟಿಗಳಿಂದ ಕಟ್ಟಲ್ಪಟ್ಟಿದ್ದ, ಪರ್ವತಶಿಖರಗಳಂತೆ ಚೂಪಾಗಿದ್ದ, ಶುಭ ಗದೆಗಳು ಅಲ್ಲಲ್ಲಿ ಬೀಳುತ್ತಿದ್ದುದು ಕಾಣುತ್ತಿತ್ತು. ನಿರ್ಮಲ ಆಕಾಶದಂತಹ ಖಡ್ಗಗಳೂ ವಿರಾಜಿಸುತ್ತಿದ್ದವು.

06083030a ಆರ್ಷಭಾಣಿ ಚ ಚರ್ಮಾಣಿ ಶತಚಂದ್ರಾಣಿ ಭಾರತ|

06083030c ಅಶೋಭಂತ ರಣೇ ರಾಜನ್ಪತಮಾನಾನಿ ಸರ್ವಶಃ||

ಭಾರತ! ರಾಜನ್! ಎತ್ತಿನ ಚರ್ಮಗಳಿಂದ ಮಾಡಲ್ಪಟ್ಟ ನೂರು ಚಂದ್ರರ ಕವಚಗಳು ರಣದಲ್ಲಿ ಎಲ್ಲಕಡೆ ಬಿದ್ದು ಶೋಭಿಸುತ್ತಿದ್ದವು.

06083031a ತೇಽನ್ಯೋನ್ಯಂ ಸಮರೇ ಸೇನೇ ಯುಧ್ಯಮಾನೇ ನರಾಧಿಪ|

06083031c ಅಶೋಭೇತಾಂ ಯಥಾ ದೈತ್ಯದೇವಸೇನೇ ಸಮುದ್ಯತೇ|

06083031e ಅಭ್ಯದ್ರವಂತ ಸಮರೇ ತೇಽನ್ಯೋನ್ಯಂ ವೈ ಸಮಂತತಃ||

ನರಾಧಿಪ! ಸಮರದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡುತ್ತಿದ್ದ ಆ ಸೇನೆಗಳು ಹೋರಾಡುತ್ತಿರುವ ದೈತ್ಯ-ದೇವ ಸೇನೆಗಳಂತೆ ಶೋಭಿಸಿದವು. ಅವರು ಸಮರದಲ್ಲಿ ಅನ್ಯೋನ್ಯರನ್ನು ಸುತ್ತುವರೆದು ಆಕ್ರಮಣಿಸುತ್ತಿದ್ದರು.

06083032a ರಥಾಸ್ತು ರಥಿಭಿಸ್ತೂರ್ಣಂ ಪ್ರೇಷಿತಾಃ ಪರಮಾಹವೇ|

06083032c ಯುಗೈರ್ಯುಗಾನಿ ಸಂಶ್ಲಿಷ್ಯ ಯುಯುಧುಃ ಪಾರ್ಥಿವರ್ಷಭಾಃ||

ಆ ಪರಮ ಯುದ್ಧದಲ್ಲಿ ರಥಿಗಳಿಂದ ಬೇಗನೇ ಕಳುಹಿಸಲ್ಪಟ್ಟ ಪಾರ್ಥಿವರ್ಷಭರು ನೂಕುಗಳಿಂದ ನೂಕುಗಳಿಗೆ ತಾಗಿಸಿ ಯುದ್ಧಮಾಡುತ್ತಿದ್ದರು.

06083033a ದಂತಿನಾಂ ಯುಧ್ಯಮಾನಾನಾಂ ಸಂಘರ್ಷಾತ್ಪಾವಕೋಽಭವತ್|

06083033c ದಂತೇಷು ಭರತಶ್ರೇಷ್ಠ ಸಧೂಮಃ ಸರ್ವತೋದಿಶಂ||

ಭರತಶ್ರೇಷ್ಠ! ದಂತಗಳಿಂದ ಹೊಡೆದಾಡುತ್ತಿದ್ದ ಆನೆಗಳ ಸಂಘರ್ಷದಿಂದ ಬೆಂಕಿಯು ಹುಟ್ಟಿ ಹೊಗೆಯೊಂದಿಗೆ ಅದು ಎಲ್ಲೆಡೆ ಹರಡಿತು.

06083034a ಪ್ರಾಸೈರಭಿಹತಾಃ ಕೇ ಚಿದ್ಗಜಯೋಧಾಃ ಸಮಂತತಃ|

06083034c ಪತಮಾನಾಃ ಸ್ಮ ದೃಶ್ಯಂತೇ ಗಿರಿಶೃಂಗಾನ್ನಗಾ ಇವ||

ಪ್ರಾಸಗಳಿಂದ ಹೊಡೆಯಲ್ಪಟ್ಟು ಕೆಲವು ಗಜಯೋಧರು ಗಿರಿಶೃಂಗಗಳಂತೆ ಆನೆಗಳ ಮೇಲಿಂದ ಬೀಳುತ್ತಿರುವುದು ಎಲ್ಲೆಡೆ ಕಂಡುಬಂದಿತು.

06083035a ಪಾದಾತಾಶ್ಚಾಪ್ಯದೃಶ್ಯಂತ ನಿಘ್ನಂತೋ ಹಿ ಪರಸ್ಪರಂ|

06083035c ಚಿತ್ರರೂಪಧರಾಃ ಶೂರಾ ನಖರಪ್ರಾಸಯೋಧಿನಃ||

ವಿಚಿತ್ರರೂಪಗಳನ್ನು ಧರಿಸಿದ್ದ, ನಖ-ಪ್ರಾಸಾಯುಧಗಳಿಂದ ಯುದ್ಧಮಾಡುತ್ತಿದ್ದ ಶೂರ ಪದಾತಿಗಳು ಪರಸ್ಪರರನ್ನು ಕೊಲ್ಲುತ್ತಿದ್ದುದು ಕಂಡುಬಂದಿತು.

06083036a ಅನ್ಯೋನ್ಯಂ ತೇ ಸಮಾಸಾದ್ಯ ಕುರುಪಾಂಡವಸೈನಿಕಾಃ|

06083036c ಶಸ್ತ್ರೈರ್ನಾನಾವಿಧೈರ್ಘೋರೈ ರಣೇ ನಿನ್ಯುರ್ಯಮಕ್ಷಯಂ||

ಆ ಕುರುಪಾಂಡವ ಸೈನಿಕರು ಅನ್ಯೋನ್ಯರನ್ನು ಎದುರಿಸಿ ನಾನಾವಿಧದ ಘೋರ ಶಸ್ತ್ರಗಳಿಂದ ರಣದಿಂದ ಯಮಾಲಯಕ್ಕೆ ಕಳುಹಿಸುತ್ತಿದ್ದರು.

06083037a ತತಃ ಶಾಂತನವೋ ಭೀಷ್ಮೋ ರಥಘೋಷೇಣ ನಾದಯನ್|

06083037c ಅಭ್ಯಾಗಮದ್ರಣೇ ಪಾಂಡೂನ್ಧನುಃಶಬ್ದೇನ ಮೋಹಯನ್||

ಆಗ ಶಾಂತನವ ಭೀಷ್ಮನು ರಥಘೋಷದಿಂದ ಗರ್ಜಿಸುತ್ತಾ ಧನುಸ್ಸಿನ ಶಬ್ಧದಿಂದ ಪಾಂಡವರನ್ನು ಮೋಹಿಸುತ್ತಾ ರಣರಂಗದಲ್ಲಿ ಆಕ್ರಮಣಿಸಿದನು.

06083038a ಪಾಂಡವಾನಾಂ ರಥಾಶ್ಚಾಪಿ ನದಂತೋ ಭೈರವಸ್ವನಂ|

06083038c ಅಭ್ಯದ್ರವಂತ ಸಮ್ಯತ್ತಾ ಧೃಷ್ಟದ್ಯುಮ್ನಪುರೋಗಮಾಃ||

ಪಾಂಡವರ ರಥರೂ ಕೂಡ ಭೈರವಸ್ವರದಲ್ಲಿ ಕೂಗುತ್ತಾ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಯುದ್ಧಸನ್ನದ್ಧರಾಗಿ ಆಕ್ರಮಣಿಸಿದರು.

06083039a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ|

06083039c ನರಾಶ್ವರಥನಾಗಾನಾಂ ವ್ಯತಿಷಕ್ತಂ ಪರಸ್ಪರಂ||

ಭಾರತ! ಆಗ ನಿನ್ನವರ ಮತ್ತು ಅವರ ನಡುವೆ ನರ-ಅಶ್ವ-ರಥ-ಆನೆಗಳ ಪರಸ್ಟರ ಘರ್ಷಣೆಯ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧಾರಂಭೇ ತ್ರ್ಯಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧಾರಂಭ ಎನ್ನುವ ಎಂಭತ್ಮೂರನೇ ಅಧ್ಯಾಯವು.

Image result for flowers against white background

Comments are closed.