Bhishma Parva: Chapter 82

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೨

ಯುಧಿಷ್ಠಿರ-ಭೀಷ್ಮರ ಯುದ್ಧ (೧-೧೪). ಸಂಕುಲ ಯುದ್ಧ (೧೫-೪೦). ಏಳನೆಯ ದಿವಸದ ಯುದ್ಧ ಸಮಾಪ್ತಿ (೪೧-೫೬).

06082001 ಸಂಜಯ ಉವಾಚ|

06082001a ವಿರಥಂ ತಂ ಸಮಾಸಾದ್ಯ ಚಿತ್ರಸೇನಂ ಮನಸ್ವಿನಂ|

06082001c ರಥಮಾರೋಪಯಾಮಾಸ ವಿಕರ್ಣಸ್ತನಯಸ್ತವ||

ಸಂಜಯನು ಹೇಳಿದನು: “ವಿರಥನಾಗಿದ್ದ ಮನಸ್ವಿ ಚಿತ್ರಸೇನನ ಬಳಿಬಂದು ನಿನ್ನ ಮಗ ವಿಕರ್ಣನು ಅವನನ್ನು ತನ್ನ ರಥದ ಮೇಲೆ ಏರಿಸಿಕೊಂಡನು.

06082002a ತಸ್ಮಿಂಸ್ತಥಾ ವರ್ತಮಾನೇ ತುಮುಲೇ ಸಂಕುಲೇ ಭೃಶಂ|

06082002c ಭೀಷ್ಮಃ ಶಾಂತನವಸ್ತೂರ್ಣಂ ಯುಧಿಷ್ಠಿರಮುಪಾದ್ರವತ್||

ಹೀಗೆ ತುಂಬಾ ತುಮುಲವಾಗಿದ್ದ ಸಂಕುಲ ಯುದ್ಧವು ನಡೆಯತ್ತಿರಲು ಶಾಂತನವ ಭೀಷ್ಮನು ಕೂಡಲೇ ಯುಧಿಷ್ಠಿರನ ಮೇಲೆ ಧಾಳಿ ಮಾಡಿದನು.

06082003a ತತಃ ಸರಥನಾಗಾಶ್ವಾಃ ಸಮಕಂಪಂತ ಸೃಂಜಯಾಃ|

06082003c ಮೃತ್ಯೋರಾಸ್ಯಮನುಪ್ರಾಪ್ತಂ ಮೇನಿರೇ ಚ ಯುಧಿಷ್ಠಿರಂ||

ಆಗ ರಥ-ಆನೆ-ಕುದುರೆಗಳೊಂದಿಗೆ ಸೃಂಜಯರು ನಡುಗಿದರು. ಮತ್ತು ಯುಧಿಷ್ಠಿರನು ಮೃತ್ಯುವಿನ ದವಡೆಗೆ ಬಂದೇಬಿಟ್ಟನೆಂದು ಭಾವಿಸಿದರು.

06082004a ಯಿಧಿಷ್ಠಿರೋಽಪಿ ಕೌರವ್ಯೋ ಯಮಾಭ್ಯಾಂ ಸಹಿತಃ ಪ್ರಭುಃ|

06082004c ಮಹೇಷ್ವಾಸಂ ನರವ್ಯಾಘ್ರಂ ಭೀಷ್ಮಂ ಶಾಂತನವಂ ಯಯೌ||

ಕೌರವ್ಯ ಪ್ರಭು ಯುಧಿಷ್ಠಿರನಾದರೋ ಯಮಳರಿಬ್ಬರನ್ನೊಡಗೂಡಿ ಮಹೇಷ್ವಾಸ ನರವ್ಯಾಘ್ರ ಭೀಷ್ಮ ಶಾಂತನವನನ್ನು ಎದುರಿಸಿದನು.

06082005a ತತಃ ಶರಸಹಸ್ರಾಣಿ ಪ್ರಮುಂಚನ್ಪಾಂಡವೋ ಯುಧಿ|

06082005c ಭೀಷ್ಮಂ ಸಂಚಾದಯಾಮಾಸ ಯಥಾ ಮೇಘೋ ದಿವಾಕರಂ||

ಆಗ ಪಾಂಡವನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಷ್ಮನನ್ನು ಮರೆಮಾಡಿದನು.

06082006a ತೇನ ಸಮ್ಯಕ್ಪ್ರಣೀತಾನಿ ಶರಜಾಲಾನಿ ಭಾರತ|

06082006c ಪತಿಜಗ್ರಾಹ ಗಾಂಗೇಯಃ ಶತಶೋಽಥ ಸಹಸ್ರಶಃ||

ಭಾರತ! ಅವನಿಂದ ಬೀಳುತ್ತಿರುವ ನೂರಾರು ಸಹಸ್ರಾರು ಶರಜಾಲಗಳೆಲ್ಲವನ್ನೂ ಗಾಂಗೇಯನು ಸ್ವೀಕರಿಸಿದನು.

06082007a ತಥೈವ ಶರಜಾಲಾನಿ ಭೀಷ್ಮೇಣಾಸ್ತಾನಿ ಮಾರಿಷ|

06082007c ಆಕಾಶೇ ಸಮದೃಶ್ಯಂತ ಖಗಮಾನಾಂ ವ್ರಜಾ ಇವ||

ಮಾರಿಷ! ಹಾಗೆಯೇ ಭೀಷ್ಮನು ಬಿಟ್ಟ ಶರಶಾಲಗಳು ಆಕಾಶದಲ್ಲಿ ಹಾರಾಡುವ ಬೆಳ್ಳಕ್ಕಿಯ ಸಾಲುಗಳಂತೆ ಕಂಡವು.

06082008a ನಿಮೇಷಾರ್ಧಾಚ್ಚ ಕೌಂತೇಯಂ ಭೀಷ್ಮಃ ಶಾಂತನವೋ ಯುಧಿ|

06082008c ಅದೃಶ್ಯಂ ಸಮರೇ ಚಕ್ರೇ ಶರಜಾಲೇನ ಭಾಗಶಃ||

ನಿಮಿಷಾರ್ಧದಲ್ಲಿ ಭೀಷ್ಮ ಶಾಂತನವನು ಯುದ್ಧದಲ್ಲಿ ಶರಜಾಲಗಳಿಂದ ಕೌಂತೇಯನು ಕಾಣದಂತಾಗಿಸಿದನು.

06082009a ತತೋ ಯುಧಿಷ್ಠಿರೋ ರಾಜಾ ಕೌರವ್ಯಸ್ಯ ಮಹಾತ್ಮನಃ|

06082009c ನಾರಾಚಂ ಪ್ರೇಷಯಾಮಾಸ ಕ್ರುದ್ಧ ಆಶೀವಿಷೋಪಮಂ||

ಆಗ ಮಹಾತ್ಮ ರಾಜಾ ಯುಧಿಷ್ಠಿರನು ಕೌರವ್ಯನ ಮೇಲೆ ಕ್ರುದ್ಧ ಸರ್ಪಗಳ ವಿಷಗಳಂತಿರುವ ನಾರಾಚಗಳನ್ನು ಪ್ರಯೋಗಿಸಿದನು.

06082010a ಅಸಂಪ್ರಾಪ್ತಂ ತತಸ್ತಂ ತು ಕ್ಷುರಪ್ರೇಣ ಮಹಾರಥಃ|

06082010c ಚಿಚ್ಛೇದ ಸಮರೇ ರಾಜನ್ಭೀಷ್ಮಸ್ತಸ್ಯ ಧನುಶ್ಚ್ಯುತಂ||

ರಾಜನ್! ಅವನ ಧನುಸ್ಸನ್ನು ಬಿಟ್ಟು ತಲುಪುವುದರೊಳಗೇ ಮಹಾರಥ ಭೀಷ್ಮನು ಸಮರದಲ್ಲಿ ಅದನ್ನು ಕ್ಷುರಪ್ರದಿಂದ ತುಂಡರಿಸಿದನು.

06082011a ತಂ ತು ಚಿತ್ತ್ವಾ ರಣೇ ಭೀಷ್ಮೋ ನಾರಾಚಂ ಕಾಲಸಮ್ಮಿತಂ|

06082011c ನಿಜಘ್ನೇ ಕೌರವೇಂದ್ರಸ್ಯ ಹಯಾನ್ಕಾಂಚನಭೂಷಣಾನ್||

ರಣದಲ್ಲಿ ಅದನ್ನು ತುಂಡರಿಸಿ ಭೀಷ್ಮನು ಕಾಲಸಮ್ಮಿತ ನಾರಾಚದಿಂದ ಕೌರವೇಂದ್ರನ ಕಾಂಚನಭೂಷಿತ ಕುದುರೆಗಳನ್ನು ಸಂಹರಿಸಿದನು.

06082012a ಹತಾಶ್ವಂ ತು ರಥಂ ತ್ಯಕ್ತ್ವಾ ಧರ್ಮಪುತ್ರೋ ಯುಧಿಷ್ಠಿರಃ|

06082012c ಆರುರೋಹ ರಥಂ ತೂರ್ಣಂ ನಕುಲಸ್ಯ ಮಹಾತ್ಮನಃ||

ಒಡನೆಯೇ ಕುದುರೆಗಳು ಹತವಾದ ರಥವನ್ನು ತ್ಯಜಿಸಿ ಧರ್ಮಪುತ್ರ ಯುಧಿಷ್ಠಿರನು ಮಹಾತ್ಮ ನಕುಲನ ರಥವನ್ನೇರಿದನು.

06082013a ಯಮಾವಪಿ ಸುಸಂಕ್ರುದ್ಧಃ ಸಮಾಸಾದ್ಯ ರಣೇ ತದಾ|

06082013c ಶರೈಃ ಸಂಚಾದಯಾಮಾಸ ಭೀಷ್ಮಃ ಪರಪುರಂಜಯಃ||

ಆಗ ಪರಪುರಂಜಯ ಭೀಷ್ಮನು ರಣದಲ್ಲಿ ಎದುರಾದ ಯಮಳರನ್ನೂ ಕೂಡ ಸಂಕ್ರುದ್ಧನಾಗಿ ಶರಗಳಿಂದ ಮುಚ್ಚಿದನು.

06082014a ತೌ ತು ದೃಷ್ಟ್ವಾ ಮಹಾರಾಜ ಭೀಷ್ಮಬಾಣಪ್ರಪೀಡಿತೌ|

06082014c ಜಗಾಮಾಥ ಪರಾಂ ಚಿಂತಾಂ ಭೀಷ್ಮಸ್ಯ ವಧಕಾಂಕ್ಷಯಾ||

ಮಹಾರಾಜ! ಅವರಿಬ್ಬರೂ ಭೀಷ್ಮನ ಬಾಣಗಳಿಂದ ಪೀಡಿತರಾದುದನ್ನು ನೋಡಿ ಭೀಷ್ಮನ ವಧೆಯನ್ನು ಬಯಸಿ ಯುಧಿಷ್ಠಿರನು ಪರಮ ಚಿಂತೆಗೊಳಗಾದನು.

06082015a ತತೋ ಯುಧಿಷ್ಠಿರೋ ವಶ್ಯಾನ್ರಾಜ್ಞಸ್ತಾನ್ಸಮಚೋದಯತ್|

06082015c ಭೀಷ್ಮಂ ಶಾಂತನವಂ ಸರ್ವೇ ನಿಹತೇತಿ ಸುಹೃದ್ಗಣಾನ್||

ಆಗ ಯುಧಿಷ್ಠಿರನು ತನ್ನ ವಶದಲ್ಲಿದ್ದ ರಾಜರನ್ನು ಸ್ನೇಹಿತ ಗಣಗಳನ್ನು “ಎಲ್ಲರೂ ಭೀಷ್ಮ ಶಾಂತನವನನ್ನು ಸಂಹರಿಸಿರಿ!” ಎಂದು ಕೂಗಿ ಹುರಿದುಂಬಿಸಿದನು.

06082016a ತತಸ್ತೇ ಪಾರ್ಥಿವಾಃ ಸರ್ವೇ ಶ್ರುತ್ವಾ ಪಾರ್ಥಸ್ಯ ಭಾಷಿತಂ|

06082016c ಮಹತಾ ರಥವಂಶೇನ ಪರಿವವ್ರುಃ ಪಿತಾಮಹಂ||

ಆಗ ಪಾರ್ಥನಾಡಿದುದನ್ನು ಕೇಳಿ ಸರ್ವ ಪಾರ್ಥಿವರೂ ಮಹಾ ರಥಸಮೂಹಗಳಿಂದ ಪಿತಾಮಹನನ್ನು ಸುತ್ತುವರೆದರು.

06082017a ಸ ಸಮಂತಾತ್ಪರಿವೃತಃ ಪಿತಾ ದೇವವ್ರತಸ್ತವ|

06082017c ಚಿಕ್ರೀದ ಧನುಷಾ ರಾಜನ್ಪಾತಯಾನೋ ಮಹಾರಥಾನ್||

ರಾಜನ್! ಅವರಿಂದ ಎಲ್ಲಕಡೆಗಳಿಂದಲೂ ಸುತ್ತುವರೆಯಲ್ಪಟ್ಟಿದ್ದ ನಿನ್ನ ತಂದೆ ದೇವವ್ರತನು ಧನುಸ್ಸಿನೊಂದಿಗೆ ಆಟವಾಡುತ್ತಾ ಮಹಾರಥರನ್ನು ಉರುಳಿಸತೊಡಗಿದನು.

06082018a ತಂ ಚರಂತಂ ರಣೇ ಪಾರ್ಥಾ ದದೃಶುಃ ಕೌರವಂ ಯುಧಿ|

06082018c ಮೃಗಮಧ್ಯಂ ಪ್ರವಿಶ್ಯೇವ ಯಥಾ ಸಿಂಹಶಿಶುಂ ವನೇ||

ವನದಲ್ಲಿ ಮೃಗಗಳ ಮಧ್ಯೆ ಪ್ರವೇಸಿಸಿದ ಸಿಂಹದ ಮರಿಯಂತೆ ರಣದಲ್ಲಿ ಸಂಚರಿಸಿ ಯುದ್ಧಮಾಡುತ್ತಿದ್ದ ಕೌರವನನ್ನು ಪಾರ್ಥರು ನೋಡಿದರು.

06082019a ತರ್ಜಯಾನಂ ರಣೇ ಶೂರಾಂಸ್ತ್ರಾಸಯಾನಂ ಚ ಸಾಯಕೈಃ|

06082019c ದೃಷ್ಟ್ವಾ ತ್ರೇಸುರ್ಮಹಾರಾಜ ಸಿಂಹಂ ಮೃಗಗಣಾ ಇವ||

ಮಹಾರಾಜ! ಸಿಂಹವನ್ನು ನೋಡಿದ ಮೃಗಗಣವು ಭಯಪಡುವಂತೆ ಆ ಶೂರರು ರಣದಲ್ಲಿ ಅವನ ಸಾಯಕಗಳಿಂದ ಭಯಪಟ್ಟರು.

06082020a ರಣೇ ಭರತಸಿಂಹಸ್ಯ ದದೃಶುಃ ಕ್ಷತ್ರಿಯಾ ಗತಿಂ|

06082020c ಅಗ್ನೇರ್ವಾಯುಸಹಾಯಸ್ಯ ಯಥಾ ಕಕ್ಷಂ ದಿಧಕ್ಷತಃ||

ವಾಯುವಿನ ಸಹಾಯದಿಂದ ಅಗ್ನಿಯು ಹೇಗೆ ಒಣಹುಲ್ಲನ್ನು ದಹಿಸುತ್ತದೆಯೋ ಹಾಗೆ ರಣದಲ್ಲಿ ಭರತಸಿಂಹನು ಮಾಡುತ್ತಿರುವುದನ್ನು ಕ್ಷತ್ರಿಯರು ನೋಡಿದರು.

06082021a ಶಿರಾಂಸಿ ರಥಿನಾಂ ಭೀಷ್ಮಃ ಪಾತಯಾಮಾಸ ಸಂಯುಗೇ|

06082021c ತಾಲೇಭ್ಯ ಇವ ಪಕ್ವಾನಿ ಫಲಾನಿ ಕುಶಲೋ ನರ||

ಕುಶಲ ನರ ಭೀಷ್ಮನು ಗಳಿತ ಹಣ್ಣುಗಳನ್ನು ತಾಳೆ ಮರದಿಂದ ಉದುರಿಸುವಂತೆ ರಥಿಗಳ ಶಿರಗಳನ್ನು ರಣದಲ್ಲಿ ಬೀಳಿಸಿದನು.

06082022a ಪತದ್ಭಿಶ್ಚ ಮಹಾರಾಜ ಶಿರೋಭಿರ್ಧರಣೀತಲೇ|

06082022c ಬಭೂವ ತುಮುಲಃ ಶಬ್ದಃ ಪತತಾಮಶ್ಮನಾಮಿವ||

ಮಹಾರಾಜ! ಭೂಮಿಯ ಮೇಲೆ ಶಿರಗಳು ಬೀಳುತ್ತಿರಲು ಕಲ್ಲುಗಳು ಉರುಳಿ ಬೀಳುವಂತೆ ತುಮುಲ ಶಬ್ಧವುಂಟಾಯಿತು.

06082023a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಸುದಾರುಣೇ|

06082023c ಸರ್ವೇಷಾಮೇವ ಸೈನ್ಯಾನಾಮಾಸೀದ್ವ್ಯತಿಕರೋ ಮಹಾನ್||

ಹೀಗೆ ಸುದಾರುಣ ತುಮುಲ ಯುದ್ಧವು ನಡೆಯುತ್ತಿರಲು ಎಲ್ಲ ಸೈನ್ಯಗಳಲ್ಲಿಯೂ ಮಹಾ ಸಂಘರ್ಷಣೆಯು ಪ್ರಾರಂಭವಾಯಿತು.

06082024a ಭಿನ್ನೇಷು ತೇಷು ವ್ಯೂಹೇಷು ಕ್ಷತ್ರಿಯಾ ಇತರೇತರಂ|

06082024c ಏಕಮೇಕಂ ಸಮಾಹೂಯ ಯುದ್ಧಾಯೈವೋಪತಸ್ಥಿರೇ||

ಎರಡೂ ಪಕ್ಷಗಳ ವ್ಯೂಹಗಳು ಭಗ್ನವಾದ ನಂತರ ಕ್ಷತ್ರಿಯರು ಒಬ್ಬರನ್ನೊಬ್ಬರನ್ನು ಕರೆದು ಪರಸ್ಪರ ಯುದ್ಧಮಾಡತೊಡಗಿದರು.

06082025a ಶಿಖಂಡೀ ತು ಸಮಾಸಾದ್ಯ ಭರತಾನಾಂ ಪಿತಾಮಹಂ|

06082025c ಅಭಿದುದ್ರಾವ ವೇಗೇನ ತಿಷ್ಠ ತಿಷ್ಠೇತಿ ಚಾಬ್ರವೀತ್||

ಶಿಖಂಡಿಯಾದರೋ ಭಾರತರ ಪಿತಾಮಹನ ಬಳಿಸಾರಿ ವೇಗದಿಂದ ಆಕ್ರಮಣಿಸಿ “ನಿಲ್ಲು! ನಿಲ್ಲು!” ಎಂದು ಹೇಳಿದನು.

06082026a ಅನಾದೃತ್ಯ ತತೋ ಭೀಷ್ಮಸ್ತಂ ಶಿಖಂಡಿನಮಾಹವೇ|

06082026c ಪ್ರಯಯೌ ಸೃಂಜಯಾನ್ಕ್ರುದ್ಧಃ ಸ್ತ್ರೀತ್ವಂ ಚಿಂತ್ಯ ಶಿಖಂಡಿನಃ||

ಆಗ ಭೀಷ್ಮನು ಆಹವದಲ್ಲಿ ಶಿಖಂಡಿಯ ಸ್ತ್ರೀತ್ವವನ್ನು ಆಲೋಚಿಸಿ ಶಿಖಂಡಿಯನ್ನು ಅನಾದರಿಸಿ ಕ್ರುದ್ಧನಾಗಿ ಸೃಂಜಯರ ಮೇಲೆ ಯುದ್ಧಕ್ಕೆ ಹೋದನು.

06082027a ಸೃಂಜಯಾಸ್ತು ತತೋ ಹೃಷ್ಟಾ ದೃಷ್ಟ್ವಾ ಭೀಷ್ಮಂ ಮಹಾರಥಂ|

06082027c ಸಿಂಹನಾದಾನ್ಬಹುವಿಧಾಂಶ್ಚಕ್ರುಃ ಶಂಖವಿಮಿಶ್ರಿತಾನ್||

ಆಗ ಮಹಾರಥ ಭೀಷ್ಮನನ್ನು ನೋಡಿ ಹೃಷ್ಟರಾದ ಸೃಂಜಯರು ಅನೇಕ ಶಂಖನಾದ ಮಿಶ್ರಿತ ವಿವಿಧ ಸಿಂಹನಾದಗೈದರು,

06082028a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ|

06082028c ಅಪರಾಂ ದಿಶಮಾಸ್ಥಾಯ ಸ್ಥಿತೇ ಸವಿತರಿ ಪ್ರಭೋ||

ಪ್ರಭೋ! ಸೂರ್ಯನು ಅಪರ ದಿಕ್ಕನ್ನನುಸರಿಸಿ ಹೋಗುತ್ತಿರಲು ರಥಸಮೂಹಗಳ ಸಮ್ಮಿಶ್ರಣ ಯುದ್ಧವು ಪ್ರಾರಂಭವಾಯಿತು.

06082029a ಧೃಷ್ಟದ್ಯುಮ್ನೋಽಥ ಪಾಂಚಾಲ್ಯಃ ಸಾತ್ಯಕಿಶ್ಚ ಮಹಾರಥಃ|

06082029c ಪೀಡಯಂತೌ ಭೃಶಂ ಸೈನ್ಯಂ ಶಕ್ತಿತೋಮರವೃಷ್ಟಿಭಿಃ|

06082029e ಶಸ್ತ್ರೈಶ್ಚ ಬಹುಭೀ ರಾಜಂ ಜಘ್ನತುಸ್ತಾವಕಾನ್ರಣೇ||

ರಾಜನ್! ಆಗ ಪಾಂಚಾಲ್ಯ ಧೃಷ್ಟದ್ಯುಮ್ನ ಮತ್ತು ಮಹಾರಥ ಸಾತ್ಯಕಿಯರು ಶಕ್ತಿ-ತೋಮರ-ಋಷ್ಟಿಗಳಿಂದ ಸೈನ್ಯವನ್ನು ಬಹಳವಾಗಿ ಪೀಡಿಸುತ್ತಾ ಶಸ್ತ್ರಗಳಿಂದ ಅನೇಕ ನಿನ್ನವರನ್ನು ರಣದಲ್ಲಿ ಸಂಹರಿಸಿದರು.

06082030a ತೇ ಹನ್ಯಮಾನಾಃ ಸಮರೇ ತಾವಕಾಃ ಪುರುಷರ್ಷಭ|

06082030c ಆರ್ಯಾಂ ಯುದ್ಧೇ ಮತಿಂ ಕೃತ್ವಾ ನ ತ್ಯಜಂತಿ ಸ್ಮ ಸಂಯುಗಂ|

06082030e ಯಥೋತ್ಸಾಹಂ ಚ ಸಮರೇ ಜಘ್ನುರ್ಲೋಕಂ ಮಹಾರಥಾಃ||

ಪುರುಷರ್ಷಭ! ಸಮರದಲ್ಲಿ ಅವರು ಸಂಹರಿಸುತ್ತಿದ್ದರೂ ಆರ್ಯರಾದ ನಿನ್ನವರು ಯುದ್ಧದಲ್ಲಿ ಮತಿಯನ್ನಿರಿಸಿ ರಣರಂಗವನ್ನು ಬಿಟ್ಟು ಹೋಗಲಿಲ್ಲ. ಆ ಮಹಾರಥರು ಉತ್ಸಾಹದಿಂದಲೇ ಸಮರದಲ್ಲಿ ಯೋಧರನ್ನು ಸಂಹರಿಸಿದರು.

06082031a ತತ್ರಾಕ್ರಂದೋ ಮಹಾನಾಸೀತ್ತಾವಕಾನಾಂ ಮಹಾತ್ಮನಾಂ|

06082031c ವಧ್ಯತಾಂ ಸಮರೇ ರಾಜನ್ಪಾರ್ಷತೇನ ಮಹಾತ್ಮನಾ||

ರಾಜನ್! ಸಮರದಲ್ಲಿ ಮಹಾತ್ಮ ಪಾರ್ಷತನಿಂದ ವಧಿಸಲ್ಪಡುತ್ತಿದ್ದ ನಿನ್ನವರಾದ ಮಹಾತ್ಮರಿಂದ ಮಹಾ ಆಕ್ರಂದನವು ಕೇಳಿಬರುತ್ತಿತ್ತು.

06082032a ತಂ ಶ್ರುತ್ವಾ ನಿನದಂ ಘೋರಂ ತಾವಕಾನಾಂ ಮಹಾರಥೌ|

06082032c ವಿಂದಾನುವಿಂದಾವಾವಂತ್ಯೌ ಪಾರ್ಷತಂ ಪತ್ಯುಪಸ್ಥಿತೌ||

ನಿನ್ನವರ ಆ ಘೋರ ನಿನಾದವನ್ನು ಕೇಳಿ ಮಹಾರಥರಾದ ಅವಂತಿಯ ವಿಂದಾನುವಿಂದರು ಪಾರ್ಷತನನ್ನು ಎದುರಿಸಿದರು.

06082033a ತೌ ತಸ್ಯ ತುರಗಾನ್ ಹತ್ವಾ ತ್ವರಮಾಣೌ ಮಹಾರಥೌ|

06082033c ಚಾದಯಾಮಾಸತುರುಭೌ ಶರವರ್ಷೇಣ ಪಾರ್ಷತಂ||

ಆ ಮಹಾರಥರು ಅವನ ಕುದುರೆಗಳನ್ನು ಸಂಹರಿಸಿ ಒಡನೆಯೇ ಶರವರ್ಷದಿಂದ ಪಾರ್ಷತನನ್ನು ಮುಚ್ಚಿದರು.

06082034a ಅವಪ್ಲುತ್ಯಾಥ ಪಾಂಚಾಲ್ಯೋ ರಥಾತ್ತೂರ್ಣಂ ಮಹಾಬಲಃ|

06082034c ಆರುರೋಹ ರಥಂ ತೂರ್ಣಂ ಸಾತ್ಯಕೇಃ ಸುಮಹಾತ್ಮನಃ||

ಕೂಡಲೇ ಮಹಾಬಲ ಪಾಂಚಾಲ್ಯನು ರಥದಿಂದ ಹಾರಿ ವೇಗವಾಗಿ ಮಹಾತ್ಮ ಸಾತ್ಯಕಿಯ ರಥವನ್ನೇರಿದನು.

06082035a ತತೋ ಯುಧಿಷ್ಠಿರೋ ರಾಜಾ ಮಹತ್ಯಾ ಸೇನಯಾ ವೃತಃ|

06082035c ಆವಂತ್ಯೌ ಸಮರೇ ಕ್ರುದ್ಧಾವಭ್ಯಯಾತ್ಸ ಪರಂತಪೌ||

ಆಗ ರಾಜಾ ಯುಧಿಷ್ಠಿರನು ಮಹಾ ಸೇನೆಯಿಂದ ಆವೃತನಾಗಿ ಕ್ರುದ್ಧನಾಗಿ ಪರಂತಪರಾದ ಅವಂತಿಯವರ ಮೇಲೆ ಧಾಳಿನಡೆಸಿದನು.

06082036a ತಥೈವ ತವ ಪುತ್ರೋಽಪಿ ಸರ್ವೋದ್ಯೋಗೇನ ಮಾರಿಷ|

06082036c ವಿಂದಾನುವಿಂದಾವಾವಂತ್ಯೌ ಪರಿವಾರ್ಯೋಪತಸ್ಥಿವಾನ್||

ಮಾರಿಷ! ಹಾಗೆಯೇ ನಿನ್ನ ಪುತ್ರರೂ ಕೂಡ ಎಲ್ಲರೂ ಒಟ್ಟಾಗಿ ಅವಂತಿಯ ವಿಂದಾನುವಿಂದರನ್ನು ಸುತ್ತುವರೆದು ನಿಂತರು.

06082037a ಅರ್ಜುನಶ್ಚಾಪಿ ಸಂಕ್ರುದ್ಧಃ ಕ್ಷತ್ರಿಯಾನ್ ಕ್ಷತ್ರಿಯರ್ಷಭ|

06082037c ಅಯೋಧಯತ ಸಂಗ್ರಾಮೇ ವಜ್ರಪಾಣಿರಿವಾಸುರಾನ್||

ಕ್ಷತ್ರಿಯರ್ಷಭ! ಅರ್ಜುನನೂ ಕೂಡ ಸಂಕ್ರುದ್ಧನಾಗಿ ಸಮರದಲ್ಲಿ ವಜ್ರಪಾಣಿಯು ಅಸುರರೊಂದಿಗೆ ಹೇಗೋ ಹಾಗೆ ಕ್ಷತ್ರಿಯರೊಂದಿಗೆ ಯುದ್ಧಮಾಡಿದನು.

06082038a ದ್ರೋಣಶ್ಚ ಸಮರೇ ಕ್ರುದ್ಧಃ ಪುತ್ರಸ್ಯ ಪ್ರಿಯಕೃತ್ತವ|

06082038c ವ್ಯಧಮತ್ಸರ್ವಪಾಂಚಾಲಾಂಸ್ತೂಲರಾಶಿಮಿವಾನಲಃ||

ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡುತ್ತಾ ಕ್ರುದ್ಧನಾದ ದ್ರೋಣನೂ ಕೂಡ ಸಮರದಲ್ಲಿ ಅಗ್ನಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಸರ್ವ ಪಾಂಚಾಲರನ್ನು ವಧಿಸುತ್ತಿದ್ದನು.

06082039a ದುರ್ಯೋಧನಪುರೋಗಾಸ್ತು ಪುತ್ರಾಸ್ತವ ವಿಶಾಂ ಪತೇ|

06082039c ಪರಿವಾರ್ಯ ರಣೇ ಭೀಷ್ಮಂ ಯುಯುಧುಃ ಪಾಂಡವೈಃ ಸಹ||

ವಿಶಾಂಪತೇ! ದುರ್ಯೋಧನನನ್ನು ಮುಂದಿಟ್ಟುಕೊಂಡು ನಿನ್ನ ಪುತ್ರರು ರಣದಲ್ಲಿ ಭೀಷ್ಮನನ್ನು ಸುತ್ತುವರೆದು ಪಾಂಡವರೊಂದಿಗೆ ಯುದ್ಧಮಾಡಿದರು.

06082040a ತತೋ ದುರ್ಯೋಧನೋ ರಾಜಾ ಲೋಹಿತಾಯತಿ ಭಾಸ್ಕರೇ|

06082040c ಅಬ್ರವೀತ್ತಾವಕಾನ್ಸರ್ವಾಂಸ್ತ್ವರಧ್ವಮಿತಿ ಭಾರತ||

ಭಾರತ! ಸೂರ್ಯನು ಕೆಂಪುಬಣ್ಣಕ್ಕೆ ತಿರುಗುತ್ತಿರಲಾಗಿ ರಾಜಾ ದುರ್ಯೋಧನನು ನಿನ್ನವರೆಲ್ಲರಿಗೆ “ಬೇಗ ಮುಗಿಸಿ!” ಎಂದು ಹೇಳಿದನು.

06082041a ಯುಧ್ಯತಾಂ ತು ತಥಾ ತೇಷಾಂ ಕುರ್ವತಾಂ ಕರ್ಮ ದುಷ್ಕರಂ|

06082041c ಅಸ್ತಂ ಗಿರಿಮಥಾರೂಢೇ ನಪ್ರಕಾಶತಿ ಭಾಸ್ಕರೇ||

ಆಗ ಅವರು ದುಷ್ಕರ ಕರ್ಮಮಾಡುತ್ತಾ ಯುದ್ಧಮಾಡುತ್ತಿರಲು ಭಾಸ್ಕರನು ಗಿರಿಯನ್ನೇರಿ ಅಸ್ತನಾಗಲು ಬೆಳಕೇ ಇಲ್ಲದಾಯಿತು.

06082042a ಪ್ರಾವರ್ತತ ನದೀ ಘೋರಾ ಶೋಣಿತೌಘತರಂಗಿಣೀ|

06082042c ಗೋಮಾಯುಗಣಸಂಕೀರ್ಣಾ ಕ್ಷಣೇನ ರಜನೀಮುಖೇ||

ಸಾಯಂಕಾಲದ ಹೊತ್ತಿಗೆ ಕ್ಷಣದಲ್ಲಿ ರಕ್ತವೇ ಪ್ರವಾಹವಾಗಿದ್ದ ನರಿಗಳ ಸಮೂದಿಂದ ಕೂಡಿದ್ದ ಘೋರ ನದಿಯೇ ಹರಿಯತೊಡಗಿತು.

06082043a ಶಿವಾಭಿರಶಿವಾಭಿಶ್ಚ ರುವದ್ಭಿರ್ಭೈರವಂ ರವಂ|

06082043c ಘೋರಮಾಯೋಧನಂ ಜಜ್ಞೇ ಭೂತಸಂಘಸಮಾಕುಲಂ||

ಮಂಗಳಕರವಾಗಿ ಭೈರವ ಸ್ವರದಲ್ಲಿ ಕೂಗುತ್ತಿದ್ದ ನರಿಗಳಿಂದ ಮತ್ತು ಭೂತಸಮೂಗಳಿಂದ ತುಂಬಿಹೋಗಿದ್ದ ರಣರಂಗವು ಘೋರವಾಗಿತ್ತು.

06082044a ರಾಕ್ಷಸಾಶ್ಚ ಪಿಶಾಚಾಶ್ಚ ತಥಾನ್ಯೇ ಪಿಶಿತಾಶನಾಃ|

06082044c ಸಮಂತತೋ ವ್ಯದೃಶ್ಯಂತ ಶತಶೋಽಥ ಸಹಸ್ರಶಃ||

ರಾಕ್ಷಸರು ಪಿಶಾಚಿಗಳು ಮತ್ತು ಇನ್ನೂ ಇತರ ಮಾಂಸಾಹಾರಿಗಳು ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಎಲ್ಲಾಕಡೆ ಕಾಣಿಸಿಕೊಂಡವು.

06082045a ಅರ್ಜುನೋಽಥ ಸುಶರ್ಮಾದೀನ್ರಾಜ್ಞಸ್ತಾನ್ಸಪದಾನುಗಾನ್|

06082045c ವಿಜಿತ್ಯ ಪೃತನಾಮಧ್ಯೇ ಯಯೌ ಸ್ವಶಿಬಿರಂ ಪ್ರತಿ||

ಆಗ ಅರ್ಜುನನು ಸಮರಮಧ್ಯದಲ್ಲಿ ಅನುಯಾಯಿ ರಾಜರೊಂqದಿಗೆ ಸುಶರ್ಮನನ್ನು ಸೋಲಿಸಿ ತನ್ನ ಶಿಬಿರದ ಕಡೆ ನಡೆದನು.

06082046a ಯುಧಿಷ್ಠಿರೋಽಪಿ ಕೌರವ್ಯೋ ಭ್ರಾತೃಭ್ಯಾಂ ಸಹಿತಸ್ತದಾ|

06082046c ಯಯೌ ಸ್ವಶಿಬಿರಂ ರಾಜಾ ನಿಶಾಯಾಂ ಸೇನಯಾ ವೃತಃ||

ಕೌರವ್ಯ ರಾಜಾ ಯುಧಿಷ್ಠಿರನೂ ಕೂಡ ರಾತ್ರಿಯಾಗಲು ತನ್ನ ಸಹೋದರರೊಂದಿಗೆ ಸೇನೆಗಳಿಂದ ಆವೃತನಾಗಿ ತನ್ನ ಶಿಬಿರಕ್ಕೆ ತೆರಳಿದನು.

06082047a ಭೀಮಸೇನೋಽಪಿ ರಾಜೇಂದ್ರ ದುರ್ಯೋಧನಮುಖಾನ್ರಥಾನ್|

06082047c ಅವಜಿತ್ಯ ತತಃ ಸಂಖ್ಯೇ ಯಯೌ ಸ್ವಶಿಬಿರಂ ಪ್ರತಿ||

ರಾಜೇಂದ್ರ! ಭೀಮಸೇನನೂ ಕೂಡ ದುರ್ಯೋಧನ ಪ್ರಮುಖ ರಥರನ್ನು ಯುದ್ಧದಲ್ಲಿ ಸೋಲಿಸಿ ತನ್ನ ಶಿಬಿರದ ಕಡೆ ನಡೆದನು.

06082048a ದುರ್ಯೋಧನೋಽಪಿ ನೃಪತಿಃ ಪರಿವಾರ್ಯ ಮಹಾರಣೇ|

06082048c ಭೀಷ್ಮಂ ಶಾಂತನವಂ ತೂರ್ಣಂ ಪ್ರಯಾತಃ ಶಿಬಿರಂ ಪ್ರತಿ||

ನೃಪತಿ ದುರ್ಯೋಧನನೂ ಕೂಡ ಮಹಾರಣದಲ್ಲಿ ಶಾಂತನವ ಭೀಷ್ಮನನ್ನು ಸುತ್ತುವರೆದು ವೇಗವಾಗಿ ಶಿಬಿರದ ಕಡೆ ಹೊರಟನು.

06082049a ದ್ರೋಣೋ ದ್ರೌಣಿಃ ಕೃಪಃ ಶಲ್ಯಃ ಕೃತವರ್ಮಾ ಚ ಸಾತ್ವತಃ|

06082049c ಪರಿವಾರ್ಯ ಚಮೂಂ ಸರ್ವಾಂ ಪ್ರಯಯುಃ ಶಿಬಿರಂ ಪ್ರತಿ||

ದ್ರೋಣ, ದ್ರೌಣಿ, ಕೃಪ, ಶಲ್ಯ ಮತ್ತು ಸಾತ್ವತ ಕೃತವರ್ಮ ಎಲ್ಲರೂ ಸೇನೆಗಳಿಂದ ಪರಿವೃತರಾಗಿ ಶಿಬಿರದ ಕಡೆ ತೆರಳಿದರು.

06082050a ತಥೈವ ಸಾತ್ಯಕೀ ರಾಜನ್ಧೃಷ್ಟದ್ಯುಮ್ನಶ್ಚ ಪಾರ್ಷತಃ|

06082050c ಪರಿವಾರ್ಯ ರಣೇ ಯೋಧಾನ್ಯಯತುಃ ಶಿಬಿರಂ ಪ್ರತಿ||

ರಾಜನ್! ಅದೇ ರೀತಿ ಸಾತ್ಯಕಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ರಣದಲ್ಲಿ ಯೋಧರಿಂದೊಡಗೂಡಿ ಶಿಬಿರದ ಕಡೆ ನಡೆದರು.

06082051a ಏವಮೇತೇ ಮಹಾರಾಜ ತಾವಕಾಃ ಪಾಂಡವೈಃ ಸಹ|

06082051c ಪರ್ಯವರ್ತಂತ ಸಹಿತಾ ನಿಶಾಕಾಲೇ ಪರಂತಪಾಃ||

ಮಹಾರಾಜ! ಹೀಗೆ ಪರಂತಪರಾದ ನಿನ್ನವರು ಮತ್ತು ಪಾಂಡವರು ಒಟ್ಟಿಗೇ ನಿಶಾಕಾಲದಲ್ಲಿ ಹಿಂದಿರುಗಿದರು.

06082052a ತತಃ ಸ್ವಶಿಬಿರಂ ಗತ್ವಾ ಪಾಂಡವಾಃ ಕುರವಸ್ತಥಾ|

06082052c ನ್ಯವಿಶಂತ ಮಹಾರಾಜ ಪೂಜಯಂತಃ ಪರಸ್ಪರಂ||

ಮಹಾರಾಜ! ತಮ್ಮ ಶಿಬಿರಗಳಿಗೆ ತೆರಳಿ ಪಾಂಡವರು ಮತ್ತು ಕುರುಗಳು ಪರಸ್ಪರರನ್ನು ಹೊಗಳಿಕೊಳ್ಳುತ್ತಾ ವಿಶ್ರಾಂತಿಪಡೆದರು.

06082053a ರಕ್ಷಾಂ ಕೃತ್ವಾತ್ಮನಃ ಶೂರಾ ನ್ಯಸ್ಯ ಗುಲ್ಮಾನ್ಯಥಾವಿಧಿ|

06082053c ಅಪನೀಯ ಚ ಶಲ್ಯಾಂಸ್ತೇ ಸ್ನಾತ್ವಾ ಚ ವಿವಿಧೈರ್ಜಲೈಃ||

ಆ ಶೂರರು ಯಥಾವಿಧಿಯಾಗಿ ತಮ್ಮ ತಮ್ಮ ಗುಲ್ಮಗಳನ್ನಿರಿಸಿ, ತಮಗೆ ಚುಚ್ಚಿಕೊಂಡಿದ್ದ ಬಾಣಗಳ ತುಂಡುಗಳನ್ನು ಕಿತ್ತು ತೆಗೆದುಹಾಕಿ ವಿವಿಧ ಜಲಗಳಿಂದ ಸ್ನಾನಮಾಡಿದರು.

06082054a ಕೃತಸ್ವಸ್ತ್ಯಯನಾಃ ಸರ್ವೇ ಸಂಸ್ತೂಯಂತಶ್ಚ ಬಂದಿಭಿಃ|

06082054c ಗೀತವಾದಿತ್ರಶಬ್ದೇನ ವ್ಯಕ್ರೀಡಂತ ಯಶಸ್ವಿನಃ||

ಆಗ ಎಲ್ಲರೂ ಯಶಸ್ವಿಗಳು ಸ್ವಸ್ತಿಗಳನ್ನು ಮಾಡಿಸಿಕೊಂಡು, ವಂದಿಗಳು ಸ್ತುತಿಸಲು ಗೀತವಾದ್ಯಗಳ ಶಬ್ಧಗಳೊಂದಿಗೆ ರಮಿಸಿದರು.

06082055a ಮುಹೂರ್ತಮಿವ ತತ್ಸರ್ವಮಭವತ್ಸ್ವರ್ಗಸನ್ನಿಭಂ|

06082055c ನ ಹಿ ಯುದ್ಧಕಥಾಂ ಕಾಂ ಚಿತ್ತತ್ರ ಚಕ್ರುರ್ಮಹಾರಥಾಃ||

ಮುಹೂರ್ತಕಾಲ ಅಲ್ಲಿ ಎಲ್ಲವೂ ಸ್ವರ್ಗಸನ್ನಿಭವಾಗಿತ್ತು. ಆಗ ಅಲ್ಲಿ ಮಹಾರಥರು ಯುದ್ಧದ ಕುರಿತು ಏನನ್ನೂ ಮಾತನಾಡಿಕೊಳ್ಳಲಿಲ್ಲ.

06082056a ತೇ ಪ್ರಸುಪ್ತೇ ಬಲೇ ತತ್ರ ಪರಿಶ್ರಾಂತಜನೇ ನೃಪ|

06082056c ಹಸ್ತ್ಯಶ್ವಬಹುಲೇ ರಾಜನ್ಪ್ರೇಕ್ಷಣೀಯೇ ಬಭೂವತುಃ||

ನೃಪ! ರಾಜನ್! ಅನೇಕ ಆನೆ-ಕುದುರೆಗಳಿಂದ ಕೂಡಿದ್ದ ಆ ಸೇನೆಗಳಲ್ಲಿ ಆಯಾಸಗೊಂಡ ಜನರು ಅಲ್ಲಿ ಮಲಗಿರಲು ಅದು ಪ್ರೇಕ್ಷಣೀಯವಾಗಿ ಕಂಡಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮದಿವಸಯುದ್ಧಾವಹಾರೇ ದ್ವಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮದಿವಸಯುದ್ಧಾವಹಾರ ಎನ್ನುವ ಎಂಭತ್ತೆರಡನೇ ಅಧ್ಯಾಯವು.

Image result for flowers against white background

Comments are closed.