Bhishma Parva: Chapter 81

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೧

ಸಂಕುಲಯುದ್ಧ (೧-೩೭).

06081001 ಸಂಜಯ ಉವಾಚ|

06081001a ಸ ತುದ್ಯಮಾನಸ್ತು ಶರೈರ್ಧನಂಜಯಃ

         ಪದಾ ಹತೋ ನಾಗ ಇವ ಶ್ವಸನ್ಬಲೀ|

06081001c ಬಾಣೇನ ಬಾಣೇನ ಮಹಾರಥಾನಾಂ

         ಚಿಚ್ಛೇದ ಚಾಪಾನಿ ರಣೇ ಪ್ರಸಹ್ಯ||

ಸಂಜಯನು ಹೇಳಿದನು: “ಶರಗಳಿಂದ ಹೊಡೆಯಲ್ಪಟ್ಟ ಬಲಶಾಲಿ ಧನಂಜಯನು ಕಾಲಿನಿಂದ ತುಳಿಯಲ್ಪಟ್ಟ ನಾಗದಂತೆ ನಿಟ್ಟುಸಿರು ಬಿಡುತ್ತಾ ನಕ್ಕು ರಣದಲ್ಲಿ ಒಂದೊಂದೇ ಬಾಣಗಳಿಂದ ಮಹಾರಥರ ಚಾಪಗಳನ್ನು ಕತ್ತರಿಸಿದನು.

06081002a ಸಂಚಿದ್ಯ ಚಾಪಾನಿ ಚ ತಾನಿ ರಾಜ್ಞಾಂ

         ತೇಷಾಂ ರಣೇ ವೀರ್ಯವತಾಂ ಕ್ಷಣೇನ|

06081002c ವಿವ್ಯಾಧ ಬಾಣೈರ್ಯುಗಪನ್ಮಹಾತ್ಮಾ

         ನಿಃಶೇಷತಾಂ ತೇಷ್ವಥ ಮನ್ಯಮಾನಃ||

ರಣದಲ್ಲಿ ಆ ವೀರ್ಯವಂತ ರಾಜರ ಧನುಸ್ಸುಗಳನ್ನು ಕ್ಷಣಮಾತ್ರದಲ್ಲಿ ಕತ್ತರಿಸಿ ಅವರನ್ನು ಉಳಿಸಬಾರದೆಂದು ನಿಶ್ಚಯಿಸಿ ಬಾಣಗಳಿಂದ ಹೊಡೆದನು.

06081003a ನಿಪೇತುರಾಜೌ ರುಧಿರಪ್ರದಿಗ್ಧಾಸ್

         ತೇ ತಾಡಿತಾಃ ಶಕ್ರಸುತೇನ ರಾಜನ್|

06081003c ವಿಭಿನ್ನಗಾತ್ರಾಃ ಪತಿತೋತ್ತಮಾಂಗಾ

         ಗತಾಸವಶ್ಚಿನ್ನತನುತ್ರಕಾಯಾಃ||

ರಾಜನ್! ಶಕ್ರಸುತನಿಂದ ಹೊಡೆಯಲ್ಪಟ್ಟ ಅವರು ರಕ್ತದಿಂದ ತೋಯ್ದು, ಗಾಯಗೊಂಡ ಶರೀರವುಳ್ಳವರಾಗಿ, ಶಿರಗಳು ತುಂಡಾಗಿ, ಅಸುವನ್ನು ನೀಗಿ, ಕವಚಗಳು ಕಳಚಿ ಕೆಳಗೆ ಬಿದ್ದರು.

06081004a ಮಹೀಂ ಗತಾಃ ಪಾರ್ಥಬಲಾಭಿಭೂತಾ

         ವಿಚಿತ್ರರೂಪಾ ಯುಗಪದ್ವಿನೇಶುಃ|

06081004c ದೃಷ್ಟ್ವಾ ಹತಾಂಸ್ತಾನ್ಯುಧಿ ರಾಜಪುತ್ರಾಂಸ್

         ತ್ರಿಗರ್ತರಾಜಃ ಪ್ರಯಯೌ ಕ್ಷಣೇನ||

ಪಾರ್ಥನ ಬಲದಿದ ಪರಾಜಿತರಾಗಿ ಅವರು ವಿಚಿತ್ರರೂಪಗಳಲ್ಲಿ ನೆಲದ ಮೇಲೆ ಬಿದ್ದು ಒಂದೇ ಬಾರಿಗೆ ವಿನಾಶಹೊಂದಿದರು. ರಾಜಪುತ್ರರು ಯುದ್ಧದಲ್ಲಿ ಹತರಾದುದನ್ನು ನೋಡಿ ತ್ರಿಗರ್ತರಾಜನು ಕ್ಷಣದಲ್ಲಿ ಆಗಮಿಸಿದನು.

06081005a ತೇಷಾಂ ರಥಾನಾಮಥ ಪೃಷ್ಠಗೋಪಾ

         ದ್ವಾತ್ರಿಂಶದನ್ಯೇಽಬ್ಯಪತಂತ ಪಾರ್ಥಂ|

06081005c ತಥೈವ ತೇ ಸಂಪರಿವಾರ್ಯ ಪಾರ್ಥಂ

         ವಿಕೃಷ್ಯ ಚಾಪಾನಿ ಮಹಾರವಾಣಿ||

06081005e ಅವೀವೃಷನ್ಬಾಣಮಹೌಘವೃಷ್ಟ್ಯಾ

         ಯಥಾ ಗಿರಿಂ ತೋಯಧರಾ ಜಲೌಘೈಃ||

ಅವರ ರಥಗಳ ಹಿಂಬಾಗದಲ್ಲಿದ್ದ ಮೂವತ್ತೆರಡು ರಕ್ಷಕರೂ ಸೇರಿ ಪಾರ್ಥನ ಮೇಲೆ ಎರಗಿದರು. ಅವರು ಪಾರ್ಥನನ್ನು ಸುತ್ತುವರೆದು ಘೋರವಾಗಿ ಶಬ್ಧಮಾಡುವ ಚಾಪಗಳನ್ನು ಸೆಳೆದು ಮೋಡಗಳು ಮಳೆಯಿಂದ ಪರ್ವತವನ್ನು ಮುಚ್ಚುವಂತೆ ಬಾಣಗಳ ಮಳೆಯನ್ನು ಸುರಿಸಿ ಪಾರ್ಥನನ್ನು ಮುಚ್ಚಿದರು.

06081006a ಸಂಪೀಡ್ಯಮಾನಸ್ತು ಶರೌಘವೃಷ್ಟ್ಯಾ

         ಧನಂಜಯಸ್ತಾನ್ಯುಧಿ ಜಾತರೋಷಃ|

06081006c ಷಷ್ಟ್ಯಾ ಶರೈಃ ಸಮ್ಯತಿ ತೈಲಧೌತೈರ್

         ಜಘಾನ ತಾನಪ್ಯಥ ಪೃಷ್ಠಗೋಪಾನ್||

ಆ ಶರಗುಂಪುಗಳ ಮಳೆಯಿಂದ ಪೀಡಿತ ಧನಂಜಯನು ಯುದ್ಧದಲ್ಲಿ ರೋಷಗೊಂಡು ಎಣ್ಣೆಯಲ್ಲಿ ಅದ್ದಿದ್ದ ಅರವತ್ತು ಶರಗಳಿಂದ ಆ ರಥದ ಹಿಂಬಾಗದ ರಕ್ಷಕರನ್ನು ಹೊಡೆದು ಉರುಳಿಸಿದನು.

06081007a ಷಷ್ಟಿಂ ರಥಾಂಸ್ತಾನವಜಿತ್ಯ ಸಂಖ್ಯೇ

         ಧನಂಜಯಃ ಪ್ರೀತಮನಾ ಯಶಸ್ವೀ|

06081007c ಅಥಾತ್ವರದ್ಭೀಷ್ಮವಧಾಯ ಜಿಷ್ಣುರ್

         ಬಲಾನಿ ರಾಜ್ಞಾಂ ಸಮರೇ ನಿಹತ್ಯ||

ಯುದ್ಧದಲ್ಲಿ ಅರವತ್ತು ರಥರನ್ನು ಸೋಲಿಸಿ ಯಶಸ್ವೀ ಧನಂಜಯನು ಸಂತೋಷಗೊಂಡನು. ಜಿಷ್ಣುವು ಸಮರದಲ್ಲಿ ರಾಜರ ಸೇನೆಯನ್ನು ಸಂಹರಿಸಿ ಭೀಷ್ಮನ ವಧೆಗೆ ತ್ವರೆಮಾಡಿದನು.

06081008a ತ್ರಿಗರ್ತರಾಜೋ ನಿಹತಾನ್ಸಮೀಕ್ಷ್ಯ

         ಮಹಾರಥಾಂಸ್ತಾನಥ ಬಂಧುವರ್ಗಾನ್|

06081008c ರಣೇ ಪುರಸ್ಕೃತ್ಯ ನರಾಧಿಪಾಂಸ್ತಾಂ

         ಜಗಾಮ ಪಾರ್ಥಂ ತ್ವರಿತೋ ವಧಾಯ||

ತ್ರಿಗರ್ತರಾಜನು ತನ್ನ ಬಂಧುವರ್ಗದ ಮಹಾರಥರು ನಿಹತರಾದುದನ್ನು ನೋಡಿ ಉಳಿದ ನರಾಧಿಪರನ್ನು ಕರೆದುಕೊಂಡು ಪಾರ್ಥನ ವಧೆಗಾಗಿ ತ್ವರೆಮಾಡಿ ಧಾವಿಸಿದನು.

06081009a ಅಭಿದ್ರುತಂ ಚಾಸ್ತ್ರಭೃತಾಂ ವರಿಷ್ಠಂ

         ಧನಂಜಯಂ ವೀಕ್ಷ್ಯ ಶಿಖಂಡಿಮುಖ್ಯಾಃ|

06081009c ಅಭ್ಯುದ್ಯಯುಸ್ತೇ ಶಿತಶಸ್ತ್ರಹಸ್ತಾ

         ರಿರಕ್ಷಿಷಂತೋ ರಥಮರ್ಜುನಸ್ಯ||

ಅಸ್ತ್ರಭೃತರಲ್ಲಿ ವರಿಷ್ಠರು ಧನಂಜಯನನ್ನು ಆಕ್ರಮಣಿಸಿದುದನ್ನು ನೋಡಿ ಶಿಖಂಡಿಯೇ ಮೊದರಾದವರು ಹರಿತ ಶಸ್ತ್ರಗಳನ್ನು ಹಿಡಿದು ಅವನನ್ನು ರಕ್ಷಿಸಲು ಅರ್ಜುನನ ರಥದ ಬಳಿ ಬಂದರು.

06081010a ಪಾರ್ಥೋಽಪಿ ತಾನಾಪತತಃ ಸಮೀಕ್ಷ್ಯ

         ತ್ರಿಗರ್ತರಾಜ್ಞಾ ಸಹಿತಾನ್ನೃವೀರಾನ್|

06081010c ವಿಧ್ವಂಸಯಿತ್ವಾ ಸಮರೇ ಧನುಷ್ಮಾನ್

         ಗಾಂಡೀವಮುಕ್ತೈರ್ನಿಶಿತೈಃ ಪೃಷತ್ಕೈಃ|

06081010e ಭೀಷ್ಮಂ ಯಿಯಾಸುರ್ಯುಧಿ ಸಂದದರ್ಶ

         ದುರ್ಯೋಧನಂ ಸೈಂಧವಾದೀಂಶ್ಚ ರಾಜ್ಞಃ||

ಪಾರ್ಥನಾದರೋ ಮೇಲೆ ಬೀಳುತ್ತಿರುವ ತ್ರಿಗರ್ತರಾಜನೊಡನಿದ್ದ ನರವೀರರನ್ನು ನೋಡಿ, ಸಮರದಲ್ಲಿ ಗಾಂಡೀವದಿಂದ ಪ್ರಯೋಗಿಸಿದ ನಿಶಿತ ಶರಗಳಿಂದ ಆ ಧನುಷ್ಮಂತರನ್ನು ವಿಧ್ವಂಸಗೊಳಿಸಿ, ಭೀಷ್ಮನಿದ್ದಲ್ಲಿಗೆ ಹೋಗುವಾಗ ರಾಜ ದುರ್ಯೋಧನ ಮತ್ತು ಸೈಂಧವನೇ ಮೊದರಾದವರನ್ನು ನೋಡಿದನು.

06081011a ಆವಾರಯಿಷ್ಣೂನಭಿಸಂಪ್ರಯಾಯ

         ಮುಹೂರ್ತಮಾಯೋಧ್ಯ ಬಲೇನ ವೀರಃ|

06081011c ಉತ್ಸೃಜ್ಯ ರಾಜಾನಮನಂತವೀರ್ಯೋ

         ಜಯದ್ರಥಾದೀಂಶ್ಚ ನೃಪಾನ್ಮಹೌಜಾಃ|

06081011e ಯಯೌ ತತೋ ಭೀಮಬಲೋ ಮನಸ್ವೀ

         ಗಾಂಗೇಯಮಾಜೌ ಶರಚಾಪಪಾಣಿಃ||

ತನ್ನನ್ನು ತಡೆಯುತ್ತಿದ್ದ ಅವರೊಡನೆ ಮುಹೂರ್ತಕಾಲ ಬಲದಿಂದ ಹೋರಾಡಿ ಆ ವೀರ ಅನಂತವೀರ್ಯ ಭೀಮಬಲ ಮನಸ್ವಿಯು  ಜಯದ್ರಥಾದಿ ಮಹಾ ತೇಜಸ್ವಿ ನೃಪರನ್ನು ಅಲ್ಲಿಯೇ ಬಿಟ್ಟು, ಶರಚಾಪಗಳನ್ನು ಹಿಡಿದು ಗಾಂಗೇಯನಿದ್ದಲ್ಲಿಗೆ ಬಂದನು.

06081012a ಯುಧಿಷ್ಠಿರಶ್ಚೋಗ್ರಬಲೋ ಮಹಾತ್ಮಾ

         ಸಮಾಯಯೌ ತ್ವರಿತೋ ಜಾತಕೋಪಃ|

06081012c ಮದ್ರಾಧಿಪಂ ಸಮಭಿತ್ಯಜ್ಯ ಸಂಖ್ಯೇ

         ಸ್ವಭಾಗಮಾಪ್ತಂ ತಮನಂತಕೀರ್ತಿಃ|

06081012e ಸಾರ್ಧಂ ಸ ಮಾದ್ರೀಸುತಭೀಮಸೇನೈರ್

         ಭೀಷ್ಮಂ ಯಯೌ ಶಾಂತನವಂ ರಣಾಯ||

ಉಗ್ರಬಲ ಅನಂತಕೀರ್ತಿ ಮಹಾತ್ಮ ಯುಧಿಷ್ಠಿರನು ಯುದ್ಧದಲ್ಲಿ ತನ್ನ ಪಾಲಿಗೆ ಬಂದಿದ್ದ ಮದ್ರಾಧಿಪನನ್ನು ಅಲ್ಲಿಯೇ ಬಿಟ್ಟು ಕೋಪಗೊಂಡು ತ್ವರೆಮಾಡಿ ಮಾದ್ರೀಸುತರು ಮತ್ತು ಭೀಮಸೇನರನ್ನೊಡಗೂಡಿ ಭೀಷ್ಮ ಶಾಂತನವನೊಂದಿಗೆ ಯುದ್ಧಮಾಡಲು ಧಾವಿಸಿದನು.

06081013a ತೈಃ ಸಂಪ್ರಯುಕ್ತಃ ಸ ಮಹಾರಥಾಗ್ರ್ಯೈರ್

         ಗಂಗಾಸುತಃ ಸಮರೇ ಚಿತ್ರಯೋಧೀ|

06081013c ನ ವಿವ್ಯಥೇ ಶಾಂತನವೋ ಮಹಾತ್ಮಾ

         ಸಮಾಗತೈಃ ಪಾಂಡುಸುತೈಃ ಸಮಸ್ತೈಃ||

ಅವರೆಲ್ಲ ಮಹಾರಥ ಉಗ್ರ ಪಾಂಡುಸುತರು ಒಟ್ಟಾಗಿ ಏಕಕಾಲದಲ್ಲಿ ಸಮರಕ್ಕೆ ಬಂದರೂ ಕೂಡ ಚಿತ್ರಯೋಧಿ, ಮಹಾತ್ಮ ಗಂಗಾಸುತ ಶಾಂತನವನು ವಿವ್ಯಥನಾಗಲಿಲ್ಲ.

06081014a ಅಥೈತ್ಯ ರಾಜಾ ಯುಧಿ ಸತ್ಯಸಂಧೋ

         ಜಯದ್ರಥೋಽತ್ಯುಗ್ರಬಲೋ ಮನಸ್ವೀ|

06081014c ಚಿಚ್ಛೇದ ಚಾಪಾನಿ ಮಹಾರಥಾನಾಂ

         ಪ್ರಸಹ್ಯ ತೇಷಾಂ ಧನುಷಾ ವರೇಣ||

ಆಗ ಯುದ್ಧದಲ್ಲಿ ಸತ್ಯಸಂಧ, ಉಗ್ರಬಲ, ಮನಸ್ವೀ ರಾಜಾ ಜಯದ್ರಥನು ಉತ್ತಮ ಧನುಸ್ಸಿನಿಂದ ಆ ಮಹಾರಥರ ಚಾಪಗಳನ್ನು ಕತ್ತರಿಸಿ ಜೋರಾಗಿ ನಕ್ಕನು.

06081015a ಯುಧಿಷ್ಠಿರಂ ಭೀಮಸೇನಂ ಯಮೌ ಚ

         ಪಾರ್ಥಂ ತಥಾ ಯುಧಿ ಸಂಜಾತಕೋಪಃ|

06081015c ದುರ್ಯೋಧನಃ ಕ್ರೋಧವಿಷೋ ಮಹಾತ್ಮಾ

         ಜಘಾನ ಬಾಣೈರನಲಪ್ರಕಾಶೈಃ||

ಕ್ರೋಧವೆಂಬ ವಿಷವನ್ನೇ ಕಾರುತ್ತಿದ್ದ ಮಹಾತ್ಮಾ ದುರ್ಯೋಧನನು ಯುಧಿಷ್ಠಿರ, ಭೀಮಸೇನ, ಯಮಳರು ಮತ್ತು ಪಾರ್ಥನನ್ನು ಯುದ್ಧದಲ್ಲಿ ಅಗ್ನಿಯಂತೆ ಪ್ರಕಾಶಮಾನ ಬಾಣಗಳಿಂದ ಪ್ರಹರಿಸಿದನು.

06081016a ಕೃಪೇಣ ಶಲ್ಯೇನ ಶಲೇನ ಚೈವ

         ತಥಾ ವಿಭೋ ಚಿತ್ರಸೇನೇನ ಚಾಜೌ|

06081016c ವಿದ್ಧಾಃ ಶರೈಸ್ತೇಽತಿವಿವೃದ್ಧಕೋಪೈರ್

         ದೇವಾ ಯಥಾ ದೈತ್ಯಗಣೈಃ ಸಮೇತೈಃ||

ವಿಭೋ! ದೈತ್ಯಗಣಗಳಿಂದ ಒಟ್ಟಿಗೇ ಪ್ರಹೃತರಾದ ದೇವಗಣಗಳಂತೆ ಅವರು ಕೋಪಿಷ್ಟರಾಗಿದ್ದ ಕೃಪ, ಶಲ್ಯ, ಶಲ, ಮತ್ತು ಹಾಗೆಯೇ ಚಿತ್ರಸೇನರ ಶರಗಳಿಂದ ಪ್ರಹರಿತರಾದರು.

06081017a ಚಿನ್ನಾಯುಧಂ ಶಾಂತನವೇನ ರಾಜಾ

         ಶಿಖಂಡಿನಂ ಪ್ರೇಕ್ಷ್ಯ ಚ ಜಾತಕೋಪಃ|

06081017c ಅಜಾತಶತ್ರುಃ ಸಮರೇ ಮಹಾತ್ಮಾ

         ಶಿಖಂಡಿನಂ ಕ್ರುದ್ಧ ಉವಾಚ ವಾಕ್ಯಂ||

ಶಾಂತನವನಿಂದ ಶಿಖಂಡಿಯ ಆಯುಧವು ತುಂಡಾಗಿರುವುದನ್ನು ನೋಡಿ ಕೋಪಗೊಂಡ ಮಹಾತ್ಮ ಅಜಾತಶತ್ರುವು ಸಮರದಲ್ಲಿ ಶಿಖಂಡಿಗೆ ಈ ಕ್ರುದ್ಧ ಮಾತುಗಳನ್ನಾಡಿದನು:

06081018a ಉಕ್ತ್ವಾ ತಥಾ ತ್ವಂ ಪಿತುರಗ್ರತೋ ಮಾಂ

         ಅಹಂ ಹನಿಷ್ಯಾಮಿ ಮಹಾವ್ರತಂ ತಂ|

06081018c ಭೀಷ್ಮಂ ಶರೌಘೈರ್ವಿಮಲಾರ್ಕವರ್ಣೈಃ

         ಸತ್ಯಂ ವದಾಮೀತಿ ಕೃತಾ ಪ್ರತಿಜ್ಞಾ||

“ಆಗ ನೀನು ನಿನ್ನ ತಂದೆಯ ಎದಿರು “ಮಹಾವ್ರತ ಭೀಷ್ಮನನ್ನು ವಿಮಲಾರ್ಕವರ್ಣದ ಶರಸರಣಿಗಳಿಂದ ಕೊಲ್ಲುತ್ತೇನೆ. ಸತ್ಯವನ್ನೇ ಹೇಳುತ್ತೇನೆ” ಎಂದು ಪ್ರತಿಜ್ಞೆಯನ್ನು ಮಾಡಿದ್ದೆ.

06081019a ತ್ವಯಾ ನ ಚೈನಾಂ ಸಫಲಾಂ ಕರೋಷಿ

         ದೇವವ್ರತಂ ಯನ್ನ ನಿಹಂಸಿ ಯುದ್ಧೇ|

06081019c ಮಿಥ್ಯಾಪ್ರತಿಜ್ಞೋ ಭವ ಮಾ ನೃವೀರ

         ರಕ್ಷಸ್ವ ಧರ್ಮಂ ಚ ಕುಲಂ ಯಶಶ್ಚ||

ಆದರೆ ಇದನ್ನು ನೀನು ಇನ್ನೂ ಸಫಲಗೊಳಿಸಲಿಲ್ಲ. ದೇವವ್ರತನನ್ನು ಯುದ್ಧದಲ್ಲಿ ನೀನು ಕೊಲ್ಲುತ್ತಿಲ್ಲ. ನೃವೀರ! ಮಿಥ್ಯಾಪ್ರತಿಜ್ಞನಾಗಬೇಡ. ಧರ್ಮವನ್ನೂ ಕುಲದ ಕೀರ್ತಿಯನ್ನೂ ರಕ್ಷಿಸು.

06081020a ಪ್ರೇಕ್ಷಸ್ವ ಭೀಷ್ಮಂ ಯುಧಿ ಭೀಮವೇಗಂ

         ಸರ್ವಾಂಸ್ತಪಂತಂ ಮಮ ಸೈನ್ಯಸಂಘಾನ್|

06081020c ಶರೌಘಜಾಲೈರತಿತಿಗ್ಮತೇಜೈಃ

         ಕಾಲಂ ಯಥಾ ಮೃತ್ಯುಕೃತಂ ಕ್ಷಣೇನ||

ಭೀಮವೇಗದಿಂದ ಯುದ್ಧಮಾಡುತ್ತಿರುವ, ನನ್ನ ಸೈನ್ಯ ಸಂಘಗಳೆಲ್ಲವನ್ನೂ ಸುಡುತ್ತಿರುವ, ಕಾಲನಂತೆ ತಿಗ್ಮತೇಜಸ್ವೀ ಬಾಣಜಾಲಗಳಿಂದ ಕ್ಷಣದಲ್ಲಿ ಮೃತ್ಯುವನ್ನೀಡುತ್ತಿರುವ ಈ ಭೀಷ್ಮನನ್ನು ನೋಡು!

06081021a ನಿಕೃತ್ತಚಾಪಃ ಸಮರಾನಪೇಕ್ಷಃ

         ಪರಾಜಿತಃ ಶಾಂತನವೇನ ರಾಜ್ಞಾ|

06081021c ವಿಹಾಯ ಬಂಧೂನಥ ಸೋದರಾಂಶ್ಚ

         ಕ್ವ ಯಾಸ್ಯಸೇ ನಾನುರೂಪಂ ತವೇದಂ||

ರಾಜಾ ಶಾಂತನವನಿಂದ ಚಾಪವನ್ನು ತುಂಡರಿಸಿಕೊಂಡು, ಸಮರದಲ್ಲಿ ಅನಪೇಕ್ಷನಾಗಿ, ಪರಾಜಿತನಾಗಿ, ಬಂಧುಗಳು ಮತ್ತು ಸೋದರರನ್ನು ಬಿಟ್ಟು ನೀನು ಎಲ್ಲಿಗೆ ತಾನೆ ಹೋಗುವೆ? ಇದು ನಿನಗೆ ಅನುರೂಪವಾದುದೆಂದು ಅಂದುಕೊಳ್ಳುವುದಿಲ್ಲ.

06081022a ದೃಷ್ಟ್ವಾ ಹಿ ಭೀಷ್ಮಂ ತಮನಂತವೀರ್ಯಂ

         ಭಗ್ನಂ ಚ ಸೈನ್ಯಂ ದ್ರವಮಾಣಮೇವಂ|

06081022c ಭೀತೋಽಸಿ ನೂನಂ ದ್ರುಪದಸ್ಯ ಪುತ್ರ

         ತಥಾ ಹಿ ತೇ ಮುಖವರ್ಣೋಽಪ್ರಹೃಷ್ಟಃ||

ದ್ರುಪದನ ಮಗನೇ! ಅನಂತವೀರ್ಯ ಭೀಷ್ಮನು ಸೈನ್ಯವನ್ನು ಭಗ್ನಗೊಳಿಸಿ ಪಲಾಯನಗೊಳಿಸುತ್ತಿರುವುದನ್ನು ನೋಡಿ ನೀನೂ ಕೂಡ ಭಯಪಟ್ಟಿದ್ದೀಯೆ. ಆದುದರಿಂದ ನಿನ್ನ ಮುಖವು ಬಣ್ಣವನ್ನು ಕಳೆದುಕೊಂಡು ಅಪ್ರಹೃಷ್ಟನಾಗಿರುವೆ.

06081023a ಆಜ್ಞಾಯಮಾನೇಽಪಿ ಧನಂಜಯೇನ

         ಮಹಾಹವೇ ಸಂಪ್ರಸಕ್ತೇ ನೃವೀರ|

06081023c ಕಥಂ ಹಿ ಭೀಷ್ಮಾತ್ಪ್ರಥಿತಃ ಪೃಥಿವ್ಯಾಂ

         ಭಯಂ ತ್ವಮದ್ಯ ಪ್ರಕರೋಷಿ ವೀರ||

ನರವೀರ! ಮಹಾಹವದಲ್ಲಿ ತೊಡಗಿರುವ ಧನಂಜಯನು ಎಲ್ಲಿದ್ದಾನೆಂದು ತಿಳಿಯದೇ ಇರುವಾಗ ಬೀಷ್ಮನ ಸಂಹಾರಕನೆಂದು ಭುವಿಯಲ್ಲಿಯೇ ಪ್ರಸಿದ್ಧನಾಗಿರುವ ನೀನು ಇಂದು ಹೇಗೆ ತಾನೇ ಭಯಪಡುತ್ತಿರುವೆ?”

06081024a ಸ ಧರ್ಮರಾಜಸ್ಯ ವಚೋ ನಿಶಮ್ಯ

         ರೂಕ್ಷಾಕ್ಷರಂ ವಿಪ್ರಲಾಪಾನುಬದ್ಧಂ|

06081024c ಪ್ರತ್ಯಾದೇಶಂ ಮನ್ಯಮಾನೋ ಮಹಾತ್ಮಾ

         ಪ್ರತತ್ವರೇ ಭೀಷ್ಮವಧಾಯ ರಾಜನ್||

ರಾಜನ್! ಧರ್ಮರಾಜನ ಕಠೋರಶಬ್ಧಗಳನ್ನು ಕೂಡಿದ್ದ, ವಿರೋಧಿಸುವ ಭಾವದಿಂದ ಕೂಡಿದ್ದ ಆ ಮಾತನ್ನು ಕೇಳಿ ಅದನ್ನೇ ಆದೇಶವೆಂದು ತಿಳಿದು ಆ ಮಹಾತ್ಮನು ಭೀಷ್ಮನ ವಧೆಗೆ ತ್ವರೆಮಾಡಿದನು.

06081025a ತಮಾಪತಂತಂ ಮಹತಾ ಜವೇನ

         ಶಿಖಂಡಿನಂ ಭೀಷ್ಮಮಭಿದ್ರವಂತಂ|

06081025c ಆವಾರಯಾಮಾಸ ಹಿ ಶಲ್ಯ ಏನಂ

         ಶಸ್ತ್ರೇಣ ಘೋರೇಣ ಸುದುರ್ಜಯೇನ||

ಮಹಾವೇಗದಿಂದ ಭೀಷ್ಮನನ್ನು ಆಕ್ರಮಣಿಸಲು ಬರುತ್ತಿದ್ದ ಶಿಖಂಡಿಯನ್ನು ಶಲ್ಯನು ಸುದುರ್ಜಯ ಘೋರ ಶಸ್ತ್ರಗಳಿಂದ ತಡೆದನು.

06081026a ಸ ಚಾಪಿ ದೃಷ್ಟ್ವಾ ಸಮುದೀರ್ಯಮಾಣಂ

         ಅಸ್ತ್ರಂ ಯುಗಾಂತಾಗ್ನಿಸಮಪ್ರಭಾವಂ|

06081026c ನಾಸೌ ವ್ಯಮುಹ್ಯದ್ದ್ರುಪದಸ್ಯ ಪುತ್ರೋ

         ರಾಜನ್ಮಹೇಂದ್ರಪ್ರತಿಮಪ್ರಭಾವಃ||

ರಾಜನ್! ಯುಗಾಂತದ ಅಗ್ನಿಯ ಸಮನಾದ ಪ್ರಭೆಯನ್ನುಳ್ಳ ಉರಿಯುತ್ತಿರುವ ಅಸ್ತ್ರವನ್ನು ನೋಡಿಯೂ ಕೂಡ ಮಹೇಂದ್ರನಂತಹ ಪ್ರಭಾವವಿದ್ದ ದ್ರುಪದನ ಮಗನು ಭ್ರಾಂತಗೊಳ್ಳಲಿಲ್ಲ.

06081027a ತಸ್ಥೌ ಚ ತತ್ರೈವ ಮಹಾಧನುಷ್ಮಾಂ

         ಶರೈಸ್ತದಸ್ತ್ರಂ ಪ್ರತಿಬಾಧಮಾನಃ|

06081027c ಅಥಾದದೇ ವಾರುಣಮನ್ಯದಸ್ತ್ರಂ

         ಶಿಖಂಡ್ಯಥೋಗ್ರಂ ಪ್ರತಿಘಾತಾಯ ತಸ್ಯ|

06081027e ತದಸ್ತ್ರಮಸ್ತ್ರೇಣ ವಿದಾರ್ಯಮಾಣಂ

         ಖಸ್ಥಾಃ ಸುರಾ ದದೃಶುಃ ಪಾರ್ಥಿವಾಶ್ಚ||

ಮಹಾಧನುಷ್ಮಂತನು ಆ ಅಸ್ತ್ರಗಳನ್ನು ಪ್ರತಿಬಂಧಿಸುತ್ತಾ ಅಲ್ಲಿಯೇ ನಿಂತಿದ್ದನು. ಶಿಖಂಡಿಯು ಆ ಅಸ್ತ್ರವನ್ನು ಪ್ರತಿಘಾತಿಗೊಳಿಸಲು ಅನ್ಯ ವಾರುಣಾಸ್ತ್ರವನ್ನು ತೆಗೆದುಕೊಂಡು ಆ ಅಸ್ತ್ರದಿಂದ ಅದನ್ನು ನಿವಾರಿಸಿದುದನ್ನು ಪಾರ್ಥಿವರೂ ಆಕಾಶದಲ್ಲಿ ನಿಂತಿದ್ದ ಸುರರೂ ನೋಡಿದರು.

06081028a ಭೀಷ್ಮಸ್ತು ರಾಜನ್ಸಮರೇ ಮಹಾತ್ಮಾ

         ಧನುಃ ಸುಚಿತ್ರಂ ಧ್ವಜಮೇವ ಚಾಪಿ|

06081028c ಚಿತ್ತ್ವಾನದತ್ಪಾಂಡುಸುತಸ್ಯ ವೀರೋ

         ಯುಧಿಷ್ಠಿರಸ್ಯಾಜಮೀಢಸ್ಯ ರಾಜ್ಞಃ||

ರಾಜನ್! ಸಮರದಲ್ಲಿ ಭೀಷ್ಮನಾದರೋ ವೀರ ಪಾಂಡುಸುತ ಅಜಮೀಢ ರಾಜ ಯುಧಿಷ್ಠಿರನ ಸುಚಿತ್ರ ಧನುಸ್ಸನ್ನೂ ಧ್ವಜವನ್ನೂ ತುಂಡರಿಸಿ ಗರ್ಜಿಸಿದನು.

06081029a ತತಃ ಸಮುತ್ಸೃಜ್ಯ ಧನುಃ ಸಬಾಣಂ

         ಯುಧಿಷ್ಠಿರಂ ವೀಕ್ಷ್ಯ ಭಯಾಭಿಭೂತಂ|

06081029c ಗದಾಂ ಪ್ರಗೃಹ್ಯಾಭಿಪಪಾತ ಸಂಖ್ಯೇ

         ಜಯದ್ರಥಂ ಭೀಮಸೇನಃ ಪದಾತಿಃ||

ಆಗ ಬಾಣಗಳೊಂದಿಗೆ ಧನುಸ್ಸನ್ನು ಅಲ್ಲಿಯೇ ಬಿಸುಟು ಭಯಭೀತನಾದ ಯುಧಿಷ್ಠಿರನನ್ನು ನೋಡಿ ಭೀಮಸೇನನು ಗದೆಯನ್ನು ಹಿಡಿದು ರಣಕ್ಕೆ ಧುಮುಕಿ ಕಾಲ್ನಡುಗೆಯಲ್ಲಿಯೇ ಜಯದ್ರಥನನ್ನು ಆಕ್ರಮಣಿಸಿದನು.

06081030a ತಮಾಪತಂತಂ ಮಹತಾ ಜವೇನ

         ಜಯದ್ರಥಃ ಸಗದಂ ಭೀಮಸೇನಂ|

06081030c ವಿವ್ಯಾಧ ಘೋರೈರ್ಯಮದಂಡಕಲ್ಪೈಃ

         ಶಿತೈಃ ಶರೈಃ ಪಂಚಶತೈಃ ಸಮಂತಾತ್||

ಮಹಾವೇಗದಿಂದ ಗದೆಯೊಂದಿಗೆ ಬೀಳುತ್ತಿದ್ದ ಭೀಮಸೇನನನ್ನು ಜಯದ್ರಥನು ಯಮದಂಡಗಳಂತೆ ಘೋರವಾಗಿರುವ ಐದುನೂರು ನಿಶಿತ ಶರಗಳಿಂದ ಎಲ್ಲ ಕಡೆಗಳಲ್ಲಿ ಪ್ರಹರಿಸಿದನು.

06081031a ಅಚಿಂತಯಿತ್ವಾ ಸ ಶರಾಂಸ್ತರಸ್ವೀ

         ವೃಕೋದರಃ ಕ್ರೋಧಪರೀತಚೇತಾಃ|

06081031c ಜಘಾನ ವಾಹಾನ್ಸಮರೇ ಸಮಸ್ತಾನ್

         ಆರಟ್ಟಜಾನ್ಸಿಂಧುರಾಜಸ್ಯ ಸಂಖ್ಯೇ||

ಆ ಬಾಣಗಳ ಕುರಿತು ಚಿಂತಿಸದೇ ಕ್ರೊಧದಿಂದ ಚೇತನವನ್ನೇ ಕಳೆದುಕೊಂಡಿದ್ದ ತರಸ್ವೀ ವೃಕೋದರನು ಸಮರದಲ್ಲಿ ಸಿಂಧುರಾಜನ ರಥಕ್ಕೆ ಕಟ್ಟಿದ್ದ ಆರಟ್ಟದಲ್ಲಿ ಹುಟ್ಟಿದ್ದ ಸಮಸ್ತ ಕುದುರೆಗಳನ್ನೂ ಕೊಂದನು.

06081032a ತತೋಽಭಿವೀಕ್ಷ್ಯಾಪ್ರತಿಮಪ್ರಭಾವಸ್

         ತವಾತ್ಮಜಸ್ತ್ವರಮಾಣೋ ರಥೇನ|

06081032c ಅಭ್ಯಾಯಯೌ ಭೀಮಸೇನಂ ನಿಹಂತುಂ

         ಸಮುದ್ಯತಾಸ್ತ್ರಃ ಸುರರಾಜಕಲ್ಪಃ||

ಅದನ್ನು ನೋಡಿ ಸುರರಾಜನಂತೆ ಅಪ್ರತಿಮ ಪ್ರಭಾವಶಾಲಿಯಾದ ನಿನ್ನ ಮಗನು ಭೀಮಸೇನನನ್ನು ವಧಿಸುವ ಸಲುವಾಗಿ ತ್ವರೆಮಾಡಿ ರಥದಲ್ಲಿ ಕುಳಿತು ಅಸ್ತ್ರವನ್ನು ಹಿಡಿದು ಧಾವಿಸಿದನು.

06081033a ಭೀಮೋಽಪ್ಯಥೈನಂ ಸಹಸಾ ವಿನದ್ಯ

         ಪ್ರತ್ಯುದ್ಯಯೌ ಗದಯಾ ತರ್ಜಮಾನಃ|

06081033c ಸಮುದ್ಯತಾಂ ತಾಂ ಯಮದಂಡಕಲ್ಪಾಂ

         ದೃಷ್ಟ್ವಾ ಗದಾಂ ತೇ ಕುರವಃ ಸಮಂತಾತ್||

06081034a ವಿಹಾಯ ಸರ್ವೇ ತವ ಪುತ್ರಮುಗ್ರಂ

         ಪಾತಂ ಗದಾಯಾಃ ಪರಿಹರ್ತುಕಾಮಾಃ|

ಆಗ ಭೀಮಸೇನನು ಜೋರಾಗಿ ಕೂಗಿ ಯಮದಂಡದಂತಿರುವ ಆ ಗದೆಯನ್ನು ಮೇಲಕ್ಕೆತ್ತಿ ಪ್ರತಿಯುದ್ಧದ ಬೆದರಿಕೆಯನ್ನು ಹಾಕುತ್ತಾ ಎದುರಾದನು. ಅದನ್ನು ನೋಡಿ ಸುತ್ತಲೂ ಇದ್ದ ಕುರುಗಳು ಉಗ್ರನಾದ ನಿನ್ನ ಮಗನನ್ನು ಬಿಟ್ಟು ಮೇಲೆಬೀಳುವ ಗದೆಯಿಂದ ತಪ್ಪಿಸಿಕೊಳ್ಳಲು ಪಲಾಯನಗೈದರು.

06081034c ಅಪಕ್ರಾಂತಾಸ್ತುಮುಲೇ ಸಂವಿಮರ್ದೇ

         ಸುದಾರುಣೇ ಭಾರತ ಮೋಹನೀಯೇ||

06081035a ಅಮೂಢಚೇತಾಸ್ತ್ವಥ ಚಿತ್ರಸೇನೋ

         ಮಹಾಗದಾಮಾಪತಂತೀಂ ನಿರೀಕ್ಷ್ಯ|

06081035c ರಥಂ ಸಮುತ್ಸೃಜ್ಯ ಪದಾತಿರಾಜೌ

         ಪ್ರಗೃಹ್ಯ ಖಡ್ಗಂ ವಿಮಲಂ ಚ ಚರ್ಮ|

06081035e ಅವಪ್ಲುತಃ ಸಿಂಹ ಇವಾಚಲಾಗ್ರಾಜ್

         ಜಗಾಮ ಚಾನ್ಯಂ ಭುವಿ ಭೂಮಿದೇಶಂ||

ಭಾರತ! ಅತ್ಯಂತ ಮೋಹಕರ ದಾರುಣ ಮತ್ತು ಘೋರ ಯುದ್ಧದಲ್ಲಿ ಮಹಾಗದೆಯು ತನ್ನ ಮೇಲೆ ಬೀಳುತ್ತಿರುವುದನ್ನು ನಿರೀಕ್ಷಿಸಿಯೂ ಕೂಡ ಚಿತ್ರಸೇನನು ವಿಮೂಢನಾಗಲಿಲ್ಲ. ಅವನು ವಿಮಲ ಖಡ್ಗವನ್ನೂ ಗುರಾಣಿಯನ್ನೂ ಹಿಡಿದು ಪರ್ವತದ ಮೇಲಿಂದ ಸಿಂಹವು ಧುಮುಕುವಂತೆ ರಥವನ್ನು ಬಿಟ್ಟು ಧುಮುಕಿ ರಣಾಂಗಣದ ಮತ್ತೊಂದು ಕಡೆ ಹೊರಟುಹೋದನು.

06081036a ಗದಾಪಿ ಸಾ ಪ್ರಾಪ್ಯ ರಥಂ ಸುಚಿತ್ರಂ

         ಸಾಶ್ವಂ ಸಸೂತಂ ವಿನಿಹತ್ಯ ಸಂಖ್ಯೇ|

06081036c ಜಗಾಮ ಭೂಮಿಂ ಜ್ವಲಿತಾ ಮಹೋಲ್ಕಾ

         ಭ್ರಷ್ಟಾಂಬರಾದ್ಗಾಮಿವ ಸಂಪತಂತೀ||

ಆ ಗದೆಯಾದರೋ ಸುಚಿತ್ರ ರಥವನ್ನು ತಲುಪಿ ಕುದುರೆಗಳು ಮತ್ತು ಸೂತನೊಂದಿಗೆ ಅದನ್ನು ನಾಶಮಾಡಿ ಆಕಾಶದಿಂದ ಭ್ರಷ್ಟವಾದ ಪ್ರಜ್ವಲಿಸುವ ಮಹಾ‌ಉಲ್ಕೆಯಂತೆ ಭೂಮಿಯ ಮೇಲೆ ಬಿದ್ದಿತು.

06081037a ಆಶ್ಚರ್ಯಭೂತಂ ಸುಮಹತ್ತ್ವದೀಯಾ

         ದೃಷ್ಟ್ವೈವ ತದ್ಭಾರತ ಸಂಪ್ರಹೃಷ್ಟಾಃ|

06081037c ಸರ್ವೇ ವಿನೇದುಃ ಸಹಿತಾಃ ಸಮಂತಾತ್

         ಪುಪೂಜಿರೇ ತವ ಪುತ್ರಂ ಸಸೈನ್ಯಾಃ||

ಭಾರತ! ಆಶ್ಚರ್ಯವನ್ನುಂಟುಮಾಡುವ ಅವನ ಆ ಮಹತ್ಕಾರ್ಯವನ್ನು ನೋಡಿಯೇ ನಿನ್ನವರು ಸಂಪ್ರಹೃಷ್ಟರಾಗಿ ಎಲ್ಲರೂ ಒಟ್ಟಾಗಿ ಎಲ್ಲ ಕಡೆಗಳಿಂದಲೂ ಕೂಗಿ ಸೇನೆಗಳೊಂದಿಗೆ ನಿನ್ನ ಮಗನನ್ನು ಗೌರವಿಸಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮಯುದ್ಧದಿವಸೇ ಏಕಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮಯುದ್ಧದಿವಸ ಎನ್ನುವ ಎಂಭತ್ತೊಂದನೇ ಅಧ್ಯಾಯವು.

Image result for flowers against white background

Comments are closed.