Bhishma Parva: Chapter 8

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ಸಂಜಯನು ಧೃತರಾಷ್ಟ್ರನಿಗೆ ಮಾಲ್ಯವತವನ್ನು ವರ್ಣಿಸುವುದು (೧-೩೧).

06008001 ಧೃತರಾಷ್ಟ್ರ ಉವಾಚ|

06008001a ಮೇರೋರಥೋತ್ತರಂ ಪಾರ್ಶ್ವಂ ಪೂರ್ವಂ ಚಾಚಕ್ಷ್ವ ಸಂಜಯ|

06008001c ನಿಖಿಲೇನ ಮಹಾಬುದ್ಧೇ ಮಾಲ್ಯವಂತಂ ಚ ಪರ್ವತಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಮಹಾಬುದ್ಧೇ! ಮೇರುವಿನ ಉತ್ತರ ಮತ್ತು ಪೂರ್ವ ಪಾರ್ಶ್ವಗಳಲ್ಲಿರುವವುಗಳ ಕುರಿತು ಮತ್ತು ಪರ್ವತ ಮಾಲ್ಯವಂತದ ಕುರಿತು ಸಂಪೂರ್ಣವಾಗಿ ತಿಳಿಸಿ ಹೇಳು.”

06008002 ಸಂಜಯ ಉವಾಚ|

06008002a ದಕ್ಷಿಣೇನ ತು ನೀಲಸ್ಯ ಮೇರೋಃ ಪಾರ್ಶ್ವೇ ತಥೋತ್ತರೇ|

06008002c ಉತ್ತರಾಃ ಕುರವೋ ರಾಜನ್ಪುಣ್ಯಾಃ ಸಿದ್ಧನಿಷೇವಿತಾಃ||

ಸಂಜಯನು ಹೇಳಿದನು: “ರಾಜನ್! ನೀಲಪರ್ವತದ ದಕ್ಷಿಣದಲ್ಲಿ ಮತ್ತು ಮೇರು ಪರ್ವತದ ಉತ್ತರ ಪಾರ್ಶ್ವದಲ್ಲಿ ಸಿದ್ಧನಿಷೇವಿತ ಪುಣ್ಯ ಉತ್ತರ ಕುರುವಿದೆ.

06008003a ತತ್ರ ವೃಕ್ಷಾ ಮಧುಫಲಾ ನಿತ್ಯಪುಷ್ಪಫಲೋಪಗಾಃ|

06008003c ಪುಷ್ಪಾಣಿ ಚ ಸುಗಂಧೀನಿ ರಸವಂತಿ ಫಲಾನಿ ಚ||

ಅಲ್ಲಿಯ ಸಿಹಿಹಣ್ಣಿನ ಮರಗಳು ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿದ್ದು, ಪುಷ್ಪಗಳು ಸುಗಂಧಯುಕ್ತವೂ ಫಲಗಳು ರಸವತ್ತಾಗಿಯೂ ಇರುತ್ತವೆ.

06008004a ಸರ್ವಕಾಮಫಲಾಸ್ತತ್ರ ಕೇ ಚಿದ್ವೃಕ್ಷಾ ಜನಾಧಿಪ|

06008004c ಅಪರೇ ಕ್ಷೀರಿಣೋ ನಾಮ ವೃಕ್ಷಾಸ್ತತ್ರ ನರಾಧಿಪ||

ಜನಾಧಿಪ! ಅಲ್ಲಿರುವ ಕೆಲವು ವೃಕ್ಷಗಳು ಸರ್ವಕಾಮಗಳನ್ನು ಕೊಡುವವು. ನರಾಧಿಪ! ಅಲ್ಲಿ ಕ್ಷೀರೀ ಎಂಬ ಹೆಸರಿನ ಬೇರೆ ವೃಕ್ಷಗಳೂ ಇವೆ.

06008005a ಯೇ ಕ್ಷರಂತಿ ಸದಾ ಕ್ಷೀರಂ ಷಡ್ರಸಂ ಹ್ಯಮೃತೋಪಮಂ|

06008005c ವಸ್ತ್ರಾಣಿ ಚ ಪ್ರಸೂಯಂತೇ ಫಲೇಷ್ವಾಭರಣಾನಿ ಚ||

ಅವು ಸದಾ ಷಡ್ರಸ, ಅಮೃತೋಪಮ ಹಾಲನ್ನು, ಫಲಗಳಾಗಿ ವಸ್ತ್ರ-ಆಭರಣಗಳನ್ನೂ ಕೊಡುತ್ತವೆ.

06008006a ಸರ್ವಾ ಮಣಿಮಯೀ ಭೂಮಿಃ ಸೂಕ್ಷ್ಮಕಾಂಚನವಾಲುಕಾ|

06008006c ಸರ್ವತ್ರ ಸುಖಸಂಸ್ಪರ್ಶಾ ನಿಷ್ಪಂಕಾ ಚ ಜನಾಧಿಪ||

ಜನಾಧಿಪ! ಅಲ್ಲಿಯ ಭೂಮಿಯೆಲ್ಲಾ ಮಣಿಮಯವಾದುದು, ಮತ್ತು ಸೂಕ್ಷ್ಮವಾದ ಬಂಗಾರದ ಮರಳಿನಿಂದ ಕೂಡಿದೆ. ಎಲ್ಲೆಲ್ಲಿಯೂ ಸುಖಸಂಸ್ಪರ್ಷವಿದೆ. ಕೆಸರೆಂಬುದೇ ಇಲ್ಲ.

06008007a ದೇವಲೋಕಚ್ಯುತಾಃ ಸರ್ವೇ ಜಾಯಂತೇ ತತ್ರ ಮಾನವಾಃ|

06008007c ತುಲ್ಯರೂಪಗುಣೋಪೇತಾಃ ಸಮೇಷು ವಿಷಮೇಷು ಚ||

ದೇವಲೋಕದಿಂದ ಚ್ಯುತರಾದ ಮಾನವರೆಲ್ಲರೂ ಅಲ್ಲಿ ಹುಟ್ಟುತ್ತಾರೆ. ಸಮ-ವಿಷಮಗಳಲ್ಲಿ ಅವರು ಸರಿಸಾಟಿಯಾದ ರೂಪಗುಣಗಳನ್ನು ಹೊಂದಿರುತ್ತಾರೆ.

06008008a ಮಿಥುನಾನಿ ಚ ಜಾಯಂತೇ ಸ್ತ್ರಿಯಶ್ಚಾಪ್ಸರಸೋಪಮಾಃ|

06008008c ತೇಷಾಂ ತೇ ಕ್ಷೀರಿಣಾಂ ಕ್ಷೀರಂ ಪಿಬಂತ್ಯಮೃತಸನ್ನಿಭಂ||

ಅಲ್ಲಿ ಅವಳಿ-ಜವಳಿ ಮಕ್ಕಳು[1] ಹುಟ್ಟುತ್ತಾರೆ. ಅವರಲ್ಲಿ ಹುಟ್ಟುವ ಸ್ತ್ರೀಯರು ಅಪ್ಸರೆಯರಂತಿರುತ್ತಾರೆ. ಅವರು ಅಲ್ಲಿ ಆ ಕ್ಷೀರಿಗಳ ಅಮೃತಸನ್ನಿಭ ಕ್ಷೀರವನ್ನು ಕುಡಿಯುತ್ತಾರೆ.

06008009a ಮಿಥುನಂ ಜಾಯಮಾನಂ ವೈ ಸಮಂ ತಚ್ಚ ಪ್ರವರ್ಧತೇ|

06008009c ತುಲ್ಯರೂಪಗುಣೋಪೇತಂ ಸಮವೇಷಂ ತಥೈವ ಚ|

06008009e ಏಕೈಕಮನುರಕ್ತಂ ಚ ಚಕ್ರವಾಕಸಮಂ ವಿಭೋ||

ವಿಭೋ! ಮಿಥುನರಾಗಿ ಹುಟ್ಟಿದವರು ಅಲ್ಲಿ ಸಮ ಸಮವಾಗಿಯೇ ಬೆಳೆಯುತ್ತಾರೆ, ಸರಿಸಮನಾದ ರೂಪ-ಗುಣಗಳನ್ನು ಹೊಂದಿರುತ್ತಾರೆ. ಅವರ ವೇಷಭೂಷಣಗಳೂ ಒಂದೇ ಆಗಿರುತ್ತವೆ. ಮತ್ತು ಚಕ್ರವಾಕ ಪಕ್ಷಿಗಳಂತೆ ಪರಸ್ಪರರಲ್ಲಿ ಅನುರಕ್ತರಾಗಿರುತ್ತಾರೆ.

06008010a ನಿರಾಮಯಾ ವೀತಶೋಕಾ ನಿತ್ಯಂ ಮುದಿತಮಾನಸಾಃ|

06008010c ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ|

06008010e ಜೀವಂತಿ ತೇ ಮಹಾರಾಜ ನ ಚಾನ್ಯೋನ್ಯಂ ಜಹತ್ಯುತ||

ಮಹಾರಾಜ! ನಿರಾಮಯರಾಗಿ, ವೀತಶೋಕರಾಗಿ, ನಿತ್ಯವೂ ಮುದಿತ ಮಾನಸರಾಗಿ ಅವರು ಹತ್ತು ಸಾವಿರದ ಹತ್ತು ನೂರು ವರ್ಷಗಳು ಜೀವಿಸುತ್ತಾರೆ ಮತ್ತು ಅನ್ಯೋನ್ಯರನ್ನು ತೊರೆಯುವುದಿಲ್ಲ[2].

06008011a ಭಾರುಂಡಾ ನಾಮ ಶಕುನಾಸ್ತೀಕ್ಷ್ಣತುಂಡಾ ಮಹಾಬಲಾಃ|

06008011c ತೇ ನಿರ್ಹರಂತಿ ಹಿ ಮೃತಾನ್ ದರೀಷು ಪ್ರಕ್ಷಿಪಂತಿ ಚ||

ಅವರು ಮೃತರಾದಾಗ ಭಾರುಂಡ ಎಂಬ ಹೆಸರಿನ, ತೀಕ್ಷ್ಣ ಕೊಕ್ಕುಗಳನ್ನುಳ್ಳ ಮಹಾಬಲಶಾಲೀ ಪಕ್ಷಿಗಳು ಅವರನ್ನು ಎತ್ತಿ ಪರ್ವತ ಕಣಿವೆಗಳಲ್ಲಿ ಎಸೆಯುತ್ತವೆ.

06008012a ಉತ್ತರಾಃ ಕುರವೋ ರಾಜನ್ವ್ಯಾಖ್ಯಾತಾಸ್ತೇ ಸಮಾಸತಃ|

06008012c ಮೇರೋಃ ಪಾರ್ಶ್ವಮಹಂ ಪೂರ್ವಂ ವಕ್ಷ್ಯಾಮ್ಯಥ ಯಥಾತಥಂ||

ರಾಜನ್! ಈಗ ನಾನು ನಿನಗೆ ಸಂಕ್ಷಿಪ್ತವಾಗಿ ಉತ್ತರ ಕುರುವಿನ ಕುರಿತು ಹೇಳಿದ್ದೇನೆ. ಈಗ ನಾನು ಮೇರುವಿನ ಪೂರ್ವಭಾಗವನ್ನು ಯಥಾತಥವಾಗಿ ವರ್ಣಿಸುತ್ತೇನೆ.

06008013a ತಸ್ಯ ಪೂರ್ವಾಭಿಷೇಕಸ್ತು ಭದ್ರಾಶ್ವಸ್ಯ ವಿಶಾಂ ಪತೇ|

06008013c ಭದ್ರಸಾಲವನಂ ಯತ್ರ ಕಾಲಾಮ್ರಶ್ಚ ಮಹಾದ್ರುಮಃ||

ವಿಶಾಂಪತೇ! ಅದರ ಪೂರ್ವದಲ್ಲಿರುವವುಗಳಲ್ಲಿ ಭದ್ರಸಾಲವೃಕ್ಷಗಳನ್ನು ಕೂಡಿದ ಭದ್ರಾಶ್ವವೆಂಬ ವನವಿದೆ. ಅಲ್ಲಿ ಕಾಲಾಮ್ರವೆಂಬ ಮಹಾ ವೃಕ್ಷವೂ ಇದೆ.

06008014a ಕಾಲಾಮ್ರಶ್ಚ ಮಹಾರಾಜ ನಿತ್ಯಪುಷ್ಪಫಲಃ ಶುಭಃ|

06008014c ದ್ವೀಪಶ್ಚ ಯೋಜನೋತ್ಸೇಧಃ ಸಿದ್ಧಚಾರಣಸೇವಿತಃ||

ಮಹಾರಾಜ! ಕಾಲಾಮ್ರವೂ ನಿತ್ಯ ಶುಭ ಪುಷ್ಪಫಲಗಳಿಂದ ಕೂಡಿರುತ್ತದೆ. ಆ ವೃಕ್ಷವು ಎತ್ತರದಲ್ಲಿ ಒಂದು ಯೋಜನದಷ್ಟಿದ್ದು, ಅದನ್ನು ಸಿದ್ಧಚಾರಣರು ಸೇವಿಸುತ್ತಾರೆ.

06008015a ತತ್ರ ತೇ ಪುರುಷಾಃ ಶ್ವೇತಾಸ್ತೇಜೋಯುಕ್ತಾ ಮಹಾಬಲಾಃ|

06008015c ಸ್ತ್ರಿಯಃ ಕುಮುದವರ್ಣಾಶ್ಚ ಸುಂದರ್ಯಃ ಪ್ರಿಯದರ್ಶನಾಃ||

06008016a ಚಂದ್ರಪ್ರಭಾಶ್ಚಂದ್ರವರ್ಣಾಃ ಪೂರ್ಣಚಂದ್ರನಿಭಾನನಾಃ|

06008016c ಚಂದ್ರಶೀತಲಗಾತ್ರ್ಯಶ್ಚ ನೃತ್ತಗೀತವಿಶಾರದಾಃ||

ಅಲ್ಲಿಯ ಪುರುಷರು ಶ್ವೇತವರ್ಣದವರಾಗಿಯೂ, ತೇಜೋಯುಕ್ತರಾಗಿಯೂ, ಮಹಾಬಲಶಾಲಿಗಳಾಗಿಯೂ ಇರುತ್ತಾರೆ. ಸ್ತ್ರೀಯರು ಕುಮುದ[3] ವರ್ಣದವರಾಗಿದ್ದು, ಸುಂದರಿಯರೂ ಪ್ರಿಯದರ್ಶನೆಯರೂ, ಚಂದ್ರಪ್ರಭೆಯುಳ್ಳವರೂ, ಚಂದ್ರವರ್ಣದವರೂ, ಪೂರ್ಣಚಂದ್ರನಂತಹ ಮುಖವುಳ್ಳವರೂ, ಚಂದ್ರನಂತೆ ಶೀತಲ ದೇಹವುಳ್ಳವರೂ ನೃತ್ಯ-ಗೀತ ವಿಶಾರದರೂ ಆಗಿರುತ್ತಾರೆ.

06008017a ದಶ ವರ್ಷಸಹಸ್ರಾಣಿ ತತ್ರಾಯುರ್ಭರತರ್ಷಭ|

06008017c ಕಾಲಾಮ್ರರಸಪೀತಾಸ್ತೇ ನಿತ್ಯಂ ಸಂಸ್ಥಿತಯೌವನಾಃ||

ಭರತರ್ಷಭ! ಅಲ್ಲಿ ಆಯುಸ್ಸು ಹತ್ತು ಸಾವಿರ ವರ್ಷಗಳು. ಕಾಲಾಮ್ರದ ರಸವನ್ನು ಕುಡಿದು ಅವರು ನಿತ್ಯವೂ ಯೌವನದಲ್ಲಿಯೇ ಇರುತ್ತಾರೆ.

06008018a ದಕ್ಷಿಣೇನ ತು ನೀಲಸ್ಯ ನಿಷಧಸ್ಯೋತ್ತರೇಣ ತು|

06008018c ಸುದರ್ಶನೋ ನಾಮ ಮಹಾನ್ ಜಂಬೂವೃಕ್ಷಃ ಸನಾತನಃ||

ನೀಲಪರ್ವತದ ದಕ್ಷಿಣದಲ್ಲಿ, ನಿಷಧದ ಉತ್ತರದಲ್ಲಿ ಸುದರ್ಶನ ಎಂಬ ಹೆಸರಿನ ಸನಾತನ ಜಂಬೂ[4]ವೃಕ್ಷವಿದೆ.

06008019a ಸರ್ವಕಾಮಫಲಃ ಪುಣ್ಯಃ ಸಿದ್ಧಚಾರಣಸೇವಿತಃ|

06008019c ತಸ್ಯ ನಾಮ್ನಾ ಸಮಾಖ್ಯಾತೋ ಜಂಬೂದ್ವೀಪಃ ಸನಾತನಃ||

ಸರ್ವಕಾಮಫಲಗಳನ್ನೂ ನೀಡುವ, ಪುಣ್ಯ, ಸಿದ್ಧಚಾರಣ ಸೇವಿತ, ಸನಾತನ ವೃಕ್ಷದಿಂದಾಗಿ ಅದನ್ನು ಜಂಬೂದ್ವೀಪವೆಂಬ ಹೆಸರಿನಿಂದಲೂ ಕರೆಯುತ್ತಾರೆ[5].

06008020a ಯೋಜನಾನಾಂ ಸಹಸ್ರಂ ಚ ಶತಂ ಚ ಭರತರ್ಷಭ|

06008020c ಉತ್ಸೇಧೋ ವೃಕ್ಷರಾಜಸ್ಯ ದಿವಸ್ಪೃಮ್ಮನುಜೇಶ್ವರ||

ಭರತರ್ಷಭ! ಮನುಜೇಶ್ವರ! ದಿವವನ್ನು ಮುಟ್ಟುವ ಆ ವೃಕ್ಷರಾಜನ ಎತ್ತರವು ಒಂದು ಸಾವಿರದ ಒಂದು ನೂರು ಯೋಜನವಿದೆ.

06008021a ಅರತ್ನೀನಾಂ ಸಹಸ್ರಂ ಚ ಶತಾನಿ ದಶ ಪಂಚ ಚ|

06008021c ಪರಿಣಾಹಸ್ತು ವೃಕ್ಷಸ್ಯ ಫಲಾನಾಂ ರಸಭೇದಿನಾಂ||

ಒಡೆದು ರಸವನ್ನು ಸುರಿಸುವ ಆ ವೃಕ್ಷದ ಫಲಗಳ ಪರಿಧಿಯು ಒಂದು ಸಾವಿರದ ಐದು ನೂರು ಅರತ್ನಿ[6]ಗಳು.

06008022a ಪತಮಾನಾನಿ ತಾನ್ಯುರ್ವ್ಯಾಂ ಕುರ್ವಂತಿ ವಿಪುಲಂ ಸ್ವನಂ|

06008022c ಮುಂಚಂತಿ ಚ ರಸಂ ರಾಜಂಸ್ತಸ್ಮಿನ್ರಜತಸನ್ನಿಭಂ||

ರಾಜನ್! ಈ ಹಣ್ಣುಗಳು ನೆಲದ ಮೇಲೆ ಬೀಳುವಾಗ ದೊಡ್ಡ ಶಬ್ಧವನ್ನು ಮಾಡುತ್ತವೆ ಮತ್ತು ಬೆಳ್ಳಿಯಂತಿರುವ ರಸವನ್ನು ಸುರಿಸುತ್ತವೆ.

06008023a ತಸ್ಯಾ ಜಂಬ್ವಾಃ ಫಲರಸೋ ನದೀ ಭೂತ್ವಾ ಜನಾಧಿಪ|

06008023c ಮೇರುಂ ಪ್ರದಕ್ಷಿಣಂ ಕೃತ್ವಾ ಸಂಪ್ರಯಾತ್ಯುತ್ತರಾನ್ಕುರೂನ್||

ಜನಾಧಿಪ! ಆ ಜಂಬೂ ಫಲಗಳ ರಸವು ನದಿಯಾಗಿ ಮೇರುವನ್ನು ಪ್ರದಕ್ಷಿಣೆಮಾಡಿ ಉತ್ತರ ಕುರುಗಳಲ್ಲಿಗೆ ಬರುತ್ತದೆ.

06008024a ಪಿಬಂತಿ ತದ್ರಸಂ ಹೃಷ್ಟಾ ಜನಾ ನಿತ್ಯಂ ಜನಾಧಿಪ|

06008024c ತಸ್ಮಿನ್ಫಲರಸೇ ಪೀತೇ ನ ಜರಾ ಬಾಧತೇ ಚ ತಾನ್||

ಜನಾಧಿಪ! ನಿತ್ಯವು ಆ ರಸವನ್ನು ಹೃಷ್ಟ ಜನರು ಕುಡಿಯುತ್ತಾರೆ. ಆ ಫಲದ ರಸವನ್ನು ಕುಡಿದವರಿಗೆ ಮುಪ್ಪು ಬಾಧಿಸುವುದಿಲ್ಲ.

06008025a ತತ್ರ ಜಾಂಬೂನದಂ ನಾಮ ಕನಕಂ ದೇವಭೂಷಣಂ|

06008025c ತರುಣಾದಿತ್ಯವರ್ಣಾಶ್ಚ ಜಾಯಂತೇ ತತ್ರ ಮಾನವಾಃ||

ಅಲ್ಲಿ ಜಾಂಬೂನದರೆಂಬ ಹೆಸರಿನ ಬಂಗಾರದ, ದೇವಭೂಷಣಗಳ, ತರುಣ ಆದಿತ್ಯವರ್ಣದ ಮಾನವರು ಹುಟ್ಟುತ್ತಾರೆ.

06008026a ತಥಾ ಮಾಲ್ಯವತಃ ಶೃಂಗೇ ದೀಪ್ಯತೇ ತತ್ರ ಹವ್ಯವಾಟ್|

06008026c ನಾಮ್ನಾ ಸಂವರ್ತಕೋ ನಾಮ ಕಾಲಾಗ್ನಿರ್ಭರತರ್ಷಭ||

ಭರತರ್ಷಭ! ಮಾಲ್ಯವತದ ಶೃಂಗದಲ್ಲಿ ಸಂವರ್ತಕ ಎಂಬ ಹೆಸರಿನ ಅಗ್ನಿ ಕಾಲಾಗ್ನಿಯು ಉರಿಯುತ್ತದೆ.

06008027a ತಥಾ ಮಾಲ್ಯವತಃ ಶೃಂಗೇ ಪೂರ್ವೇ ಪೂರ್ವಾಂತಗಂಡಿಕಾ|

06008027c ಯೋಜನಾನಾಂ ಸಹಸ್ರಾಣಿ ಪಂಚಾಶನ್ಮಾಲ್ಯವಾನ್ ಸ್ಥಿತಃ||

ಹಾಗೆಯೇ ಮಾಲ್ಯವತದ ಶೃಂಗದ ಪೂರ್ವದಲ್ಲಿ ಹಲವಾರು ಸಣ್ಣ ಸಣ್ಣ ಪರ್ವತಗಳಿವೆ. ಮಾಲ್ಯವತವು ಐದು ಸಾವಿರ ಯೋಜನೆ ವಿಸ್ತೀರ್ಣದಲ್ಲಿ ನಿಂತಿದೆ.

06008028a ಮಹಾರಜತಸಂಕಾಶಾ ಜಾಯಂತೇ ತತ್ರ ಮಾನವಾಃ|

06008028c ಬ್ರಹ್ಮಲೋಕಾಚ್ಚ್ಯುತಾಃ ಸರ್ವೇ ಸರ್ವೇ ಚ ಬ್ರಹ್ಮವಾದಿನಃ||

ಬ್ರಹ್ಮಲೋಕದಿಂದ ಚ್ಯುತರಾದವರೆಲ್ಲರೂ, ಎಲ್ಲ ಬ್ರಹ್ಮವಾದಿಗಳೂ ಅಲ್ಲಿ ಮಹಾರಜತ ಸಂಕಾಶರಾದ ಮಾನವರಾಗಿ ಜನಿಸುತ್ತಾರೆ.

06008029a ತಪಸ್ತು ತಪ್ಯಮಾನಾಸ್ತೇ ಭವಂತಿ ಹ್ಯೂರ್ಧ್ವರೇತಸಃ|

06008029c ರಕ್ಷಣಾರ್ಥಂ ತು ಭೂತಾನಾಂ ಪ್ರವಿಶಂತಿ ದಿವಾಕರಂ||

ತಪಸ್ಸನ್ನು ತಪಿಸಿ ಅವರು ಊರ್ಧ್ವರೇತಸರಾಗಿರುತ್ತಾರೆ. ಭೂತಗಳ ರಕ್ಷಣೆಗೋಸ್ಕರ ದಿವಾಕರನನ್ನು ಪ್ರವೇಶಿಸುತ್ತಾರೆ.

06008030a ಷಷ್ಟಿಸ್ತಾನಿ ಸಹಸ್ರಾಣಿ ಷಷ್ಟಿರೇವ ಶತಾನಿ ಚ|

06008030c ಅರುಣಸ್ಯಾಗ್ರತೋ ಯಾಂತಿ ಪರಿವಾರ್ಯ ದಿವಾಕರಂ||

ಅರವತ್ತಾರು ಸಾವಿರ ಸಂಖ್ಯೆಗಳ ಅವರು ಅರುಣನ ಮುಂದೆ ನಡೆದು ದಿವಾಕರನನ್ನು ಸುತ್ತುವರೆಯುತ್ತಾರೆ.

06008031a ಷಷ್ಟಿಂ ವರ್ಷಸಹಸ್ರಾಣಿ ಷಷ್ಟಿಮೇವ ಶತಾನಿ ಚ|

06008031c ಆದಿತ್ಯತಾಪತಪ್ತಾಸ್ತೇ ವಿಶಂತಿ ಶಶಿಮಂಡಲಂ||

ಅರವತ್ತಾರು ಸಾವಿರ ವರ್ಷಗಳು ಆದಿತ್ಯನನ್ನು ತಪಿಸಿ ಅವರು ಶಶಿಮಂಡಲವನ್ನು ಪ್ರವೇಶಿಸುತ್ತಾರೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಮಾಲ್ಯವದ್ವರ್ಣನೇ ಅಷ್ಟಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಮಾಲ್ಯವದ್ವರ್ಣನ ಎನ್ನುವ ಎಂಟನೇ ಅಧ್ಯಾಯವು.

Image result for indian motifs earth

[1] ಒಂದು ಗಂಡು ಮತ್ತು ಒಂದು ಹೆಣ್ಣು.

[2] ಅವಳಿ-ಜವಳಿಗಳು ಒಟ್ಟಿಗೇ ಸಾಯುತ್ತಾರೆ ಕೂಡ.

[3] ಬಿಳೀ ನೈದಿಲೆ.

[4] ನೇರಳೇ ಮರ?

[5] ಈ ನೇರಳೆಯ ಮರಕ್ಕೆ ಸುದರ್ಶನ ಎಂಬ ಹೆಸರಿರುವುದರಿಂದ ಜಂಬೂಖಂಡಕ್ಕೆ ಸುದರ್ಶನಖಂಡ ಅಥವಾ ಸುದರ್ಶನದ್ವೀಪ ಎನ್ನುವ ಹೆಸರೂ ಇದೆ. ಸುದರ್ಶನದ್ವೀಪದ ವರ್ಣನೆಯು ಅಧ್ಯಾಯ ೬ರಲ್ಲಿದೆ.

[6] ಅರತ್ನಿಃ ಎಂದರೆ ಕಿರುಬೆರಳು ನೀಡಿದ ಒಂದು ಗುದ್ದುಮೊಳ.

Comments are closed.