Bhishma Parva: Chapter 72

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೨

ಧೃತರಾಷ್ಟ್ರನ ಚಿಂತೆ (೧-೨೬).

06072001 ಧೃತರಾಷ್ಟ್ರ ಉವಾಚ|

06072001a ಏವಂ ಬಹುಗುಣಂ ಸೈನ್ಯಮೇವಂ ಬಹುವಿಧಂ ಪರಂ|

06072001c ವ್ಯೂಢಮೇವಂ ಯಥಾಶಾಸ್ತ್ರಮಮೋಘಂ ಚೈವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನಮ್ಮ ಸೇನೆಯು ಅನೇಕ ಉತ್ತಮ ಗುಣಗಳನ್ನು ಹೊಂದಿದೆ. ಬಹುವಿಧವಾಗಿದೆ. ಶ್ರೇಷ್ಠವಾಗಿದೆ ಮತ್ತು ಯಥಾಶಾಸ್ತ್ರವಾಗಿ ವ್ಯೂಹದಲ್ಲಿ ರಚಿಸಲ್ಪಟ್ಟಿದೆ. ಅಮೋಘವಾಗಿದೆ.

06072002a ಪುಷ್ಟಮಸ್ಮಾಕಮತ್ಯಂತಮಭಿಕಾಮಂ ಚ ನಃ ಸದಾ|

06072002c ಪ್ರಹ್ವಮವ್ಯಸನೋಪೇತಂ ಪುರಸ್ತಾದ್ದೃಷ್ಟವಿಕ್ರಮಂ||

ಇದು ನಮಗೆ ಅಂಟಿಕೊಂಡಿದೆ ಮತ್ತು ಸದಾ ನಮ್ಮ ಒಳಿತನ್ನೇ ಅತ್ಯಂತವಾಗಿ ಬಯಸುತ್ತಿದೆ. ಇದು ವಿನೀತವಾಗಿದೆ ಮತ್ತು ಕುಡಿತ ಮೊದಲಾದ ದುಶ್ಚಟಗಳಿಂದ ರಹಿತವಾಗಿದೆ.

06072003a ನಾತಿವೃದ್ಧಮಬಾಲಂ ಚ ನ ಕೃಶಂ ನ ಚ ಪೀವರಂ|

06072003c ಲಘುವೃತ್ತಾಯತಪ್ರಾಯಂ ಸಾರಗಾತ್ರಮನಾಮಯಂ||

ಅತಿಯಾದ ವೃದ್ಧರೂ ಬಾಲಕರೂ ಸೇನೆಯಲ್ಲಿಲ್ಲ. ಕೃಶರಾದವರೂ ಅತಿದಪ್ಪನಾದವರೂ ಇಲ್ಲ. ಲಘುವಾಗಿದ್ದಾರೆ. ಸಾರ-ಗಾತ್ರ-ಪ್ರಾಯಗಳಲ್ಲಿ ಅನಾಮಯರಾಗಿದ್ದಾರೆ.

06072004a ಆತ್ತಸನ್ನಾಹಶಸ್ತ್ರಂ ಚ ಬಹುಶಸ್ತ್ರಪರಿಗ್ರಹಂ|

06072004c ಅಸಿಯುದ್ಧೇ ನಿಯುದ್ಧೇ ಚ ಗದಾಯುದ್ಧೇ ಚ ಕೋವಿದಂ||

ಅವರು ಕವಚಗಳನ್ನೂ ಅಸ್ತ್ರಗಳನ್ನೂ ಅನೇಕ ಶಸ್ತ್ರಗಳನ್ನೂ ಹಿಡಿದು ಸನ್ನದ್ಧರಾಗಿದ್ದಾರೆ. ಅವರು ಖಡ್ಗಯುದ್ಧ, ಶಕ್ತಿಯುದ್ಧ ಮತ್ತು ಗದಾಯುದ್ಧಗಳಲ್ಲಿ ಕೋವಿದರಾಗಿದ್ದಾರೆ.

06072005a ಪ್ರಾಸರ್ಷ್ಟಿತೋಮರೇಷ್ವಾಜೌ ಪರಿಘೇಷ್ವಾಯಸೇಷು ಚ|

06072005c ಭಿಂಡಿಪಾಲೇಷು ಶಕ್ತೀಷು ಮುಸಲೇಷು ಚ ಸರ್ವಶಃ||

06072006a ಕಂಪನೇಷು ಚ ಚಾಪೇಷು ಕಣಪೇಷು ಚ ಸರ್ವಶಃ|

06072006c ಕ್ಷೇಪಣೀಷು ಚ ಚಿತ್ರಾಸು ಮುಷ್ಟಿಯುದ್ಧೇಷು ಕೋವಿದಂ||

ಪ್ರಾಸ-ಋಷ್ಟಿ-ತೋಮರಗಳಲ್ಲಿ ಪ್ರಣೀತರಾಗಿದ್ದಾರೆ. ಪರಿಘ-ಹಾರೆಕೋಲುಗಳಲ್ಲಿ, ಭಿಂಡಿಪಾಲಗಳಲ್ಲಿ, ಶಕ್ತಿ ಮುಸಲಗಳಲ್ಲಿ, ಕಂಪನಗಳಲ್ಲಿ, ಚಾಪಗಳಲ್ಲಿ, ಕಣಪಗಳಲ್ಲಿ, ಕ್ಷೇಪಣಿಗಳಲ್ಲಿ ಮತ್ತು ಚಿತ್ರ ಮುಷ್ಟಿಯುದ್ಧಗಳಲ್ಲಿ ಎಲ್ಲರೂ ಕೋವಿದರಾಗಿದ್ದಾರೆ.

06072007a ಅಪರೋಕ್ಷಂ ಚ ವಿದ್ಯಾಸು ವ್ಯಾಯಾಮೇಷು ಕೃತಶ್ರಮಂ|

06072007c ಶಸ್ತ್ರಗ್ರಹಣವಿದ್ಯಾಸು ಸರ್ವಾಸು ಪರಿನಿಷ್ಠಿತಂ||

ಅಪರೋಕ್ಷವಿದ್ಯೆಯಲ್ಲಿ, ವ್ಯಾಯಾಮ ಕೃತಶ್ರಮಗಳಲ್ಲಿ, ಶಸ್ತ್ರಗಳ ವಿದ್ಯೆ ಎಲ್ಲವುಗಳಲ್ಲಿ ಪರಿಣಿತರಾಗಿದ್ದಾರೆ.

06072008a ಆರೋಹೇ ಪರ್ಯವಸ್ಕಂದೇ ಸರಣೇ ಸಾಂತರಪ್ಲುತೇ|

06072008c ಸಮ್ಯಕ್ಪ್ರಹರಣೇ ಯಾನೇ ವ್ಯಪಯಾನೇ ಚ ಕೋವಿದಂ||

ಅವರು ಆನೆಗಳ ಮೇಲೆ ಏರುವುದರಲ್ಲಿ ಮತ್ತು ಅವುಗಳಿಂದ ಕೆಳಗೆ ಇಳಿಯುವುದರಲ್ಲಿ, ಮುಂದೆ ಹೋಗುವುದರಲ್ಲಿ ಮತ್ತು ಹಿಂದೆ ಸರಿಯುವುದರಲ್ಲಿ ಕೋವಿದರಾಗಿದ್ದಾರೆ.

06072009a ನಾಗಾಶ್ವರಥಯಾನೇಷು ಬಹುಶಃ ಸುಪರೀಕ್ಷಿತ|

06072009c ಪರೀಕ್ಷ್ಯ ಚ ಯಥಾನ್ಯಾಯಂ ವೇತನೇನೋಪಪಾದಿತಂ||

06072010a ನ ಗೋಷ್ಠ್ಯಾ ನೋಪಚಾರೇಣ ನ ಚ ಬಂಧುನಿಮಿತ್ತತಃ|

06072010c ನ ಸೌಹೃದಬಲೈಶ್ಚಾಪಿ ನಾಕುಲೀನಪರಿಗ್ರಹೈಃ||

ಆನೆ-ಅಶ್ವ-ರಥ ಯಾನಗಳಲ್ಲಿ ಬಹಳಷ್ಟು ಪರೀಕ್ಷಿಸಲ್ಪಟ್ಟಿದ್ದಾರೆ. ಯಥಾನ್ಯಾಯವಾಗಿ ಪರೀಕ್ಷಿಸಲ್ಪಟ್ಟೇ ವೇತನಗಳನ್ನು ನೀಡಲಾಗುತ್ತಿದೆ. ಅವರ ಕುಲಕ್ಕಾಗಿಯಾಗಲೀ, ಉಪಚಾರಕ್ಕಾಗಲೀ, ಬಂಧುವೆಂಬ ಕಾರಣದಿಂದಾಗಲೀ, ಸೌಹೃದಯರೆಂದಾಗಲೀ ಅಲ್ಲ.

06072011a ಸಮೃದ್ಧಜನಮಾರ್ಯಂ ಚ ತುಷ್ಟಸತ್ಕೃತಬಾಂಧವಂ|

06072011c ಕೃತೋಪಕಾರಭೂಯಿಷ್ಠಂ ಯಶಸ್ವಿ ಚ ಮನಸ್ವಿ ಚ||

ಅವರೆಲ್ಲರೂ ಸಮೃದ್ಧರೂ ಆರ್ಯಜನರೂ ಆಗಿದ್ದಾರೆ. ಮತ್ತು ಅವರ ಬಾಂಧವರು ತುಷ್ಟರೂ ಸತ್ಕೃತರೂ ಆಗಿದ್ದಾರೆ. ತುಂಬಾ ಉಪಕಾರಗಳನ್ನು ಮಾಡಿದ್ದಾರೆ. ಯಶಸ್ವಿಗಳೂ ಮನಸ್ವಿಗಳೂ ಆಗಿದ್ದಾರೆ.

06072012a ಸಜಯೈಶ್ಚ ನರೈರ್ಮುಖ್ಯೈರ್ಬಹುಶೋ ಮುಖ್ಯಕರ್ಮಭಿಃ|

06072012c ಲೋಕಪಾಲೋಪಮೈಸ್ತಾತ ಪಾಲಿತಂ ಲೋಕವಿಶ್ರುತೈಃ||

ಅಯ್ಯಾ! ಅವರೆಲ್ಲರೂ ಅನೇಕ ಮುಖ್ಯಕರ್ಮಗಳನ್ನು ಮಾಡಿರುವ ಜಯಶಾಲಿಗಳಾದ ಲೋಕಪಾಲಕರಂತಿರುವ ಲೋಕವಿಶ್ರುತ ನರಮುಖ್ಯರಿಂದ ಪಾಲಿತರಾಗಿದ್ದಾರೆ.

06072013a ಬಹುಭಿಃ ಕ್ಷತ್ರಿಯೈರ್ಗುಪ್ತಂ ಪೃಥಿವ್ಯಾಂ ಲೋಕಸಮ್ಮತೈಃ|

06072013c ಅಸ್ಮಾನಭಿಗತೈಃ ಕಾಮಾತ್ಸಬಲೈಃ ಸಪದಾನುಗೈಃ||

ಭೂಮಿಯ ಅನೇಕ ಲೋಕಸಮ್ಮತ ಕ್ಷತ್ರಿಯರು ಬಯಸಿಯೇ ರಕ್ಷಣೆಗೆಂದು ನಮ್ಮಕಡೆ ಸಸೇನೆ ಸಪದಾನುಗರೊಂದಿಗೆ ಬಂದಿದ್ದಾರೆ.

06072014a ಮಹೋದಧಿಮಿವಾಪೂರ್ಣಮಾಪಗಾಭಿಃ ಸಮಂತತಃ|

06072014c ಅಪಕ್ಷೈಃ ಪಕ್ಷಸಂಕಾಶೈ ರಥೈರ್ನಾಗೈಶ್ಚ ಸಂವೃತಂ||

ನಮ್ಮ ಸೇನೆಯು ಎಲ್ಲಕಡೆಯಿಂದ ಹರಿದುಬಂದ ನದಿಗಳು ಸೇರುವ ಮಹಾಸಾಗರದಂತಿದೆ. ರಥ-ಆನೆಗಳಿಂದ ತುಂಬಿಕೊಂಡು ರೆಕ್ಕೆಗಳಿಲ್ಲದೆಯೂ ಹಾರಿಹೋಗಬಲ್ಲ ಪಕ್ಷಿಯಂತಿದೆ.

06072015a ನಾನಾಯೋಧಜಲಂ ಭೀಮಂ ವಾಹನೋರ್ಮಿತರಂಗಿಣಂ|

06072015c ಕ್ಷೇಪಣ್ಯಸಿಗದಾಶಕ್ತಿಶರಪ್ರಾಸಸಮಾಕುಲಂ||

ನಾನಾ ಯೋಧರು ನೀರಿನಂತೆ, ವಾಹನಗಳು ಭೀಕರ ತರಂಗಗಳಂತೆ. ಖಡ್ಗ, ಗದೆ, ಶಕ್ತಿ, ಪ್ರಾಸ ಸಮಾಕುಲಗಳು ಹುಟ್ಟಿನಂತಿವೆ.

06072016a ಧ್ವಜಭೂಷಣಸಂಬಾಧಂ ರತ್ನಪಟ್ಟೇನ ಸಂಚಿತಂ|

06072016c ವಾಹನೈಃ ಪರಿಸರ್ಪದ್ಭಿರ್ವಾಯುವೇಗವಿಕಂಪಿತಂ||

ಧ್ವಜ ಭೂಷಣಗಳು, ರತ್ನಗಳ ಪಟ್ಟಿಗಳು ಮತ್ತು ವಾಹನಗಳ ಪರಿಸರ್ಪಗಳು ವಾಯುವೇಗಗಳಂತಿವೆ.

06072017a ಅಪಾರಮಿವ ಗರ್ಜಂತಂ ಸಾಗರಪ್ರತಿಮಂ ಮಹತ್|

06072017c ದ್ರೋಣಭೀಷ್ಮಾಭಿಸಂಗುಪ್ತಂ ಗುಪ್ತಂ ಚ ಕೃತವರ್ಮಣಾ||

06072018a ಕೃಪದುಃಶಾಸನಾಭ್ಯಾಂ ಚ ಜಯದ್ರಥಮುಖೈಸ್ತಥಾ|

06072018c ಭಗದತ್ತವಿಕರ್ಣಾಭ್ಯಾಂ ದ್ರೌಣಿಸೌಬಲಬಾಹ್ಲಿಕೈಃ||

ಗರ್ಜಿಸುವ ಮಹಾ ಸಾಗರದಂತೆ ಅಪಾರವಾಗಿರುವ ಈ ಸೇನೆಯನ್ನು ದ್ರೋಣ-ಭೀಷ್ಮಾದಿಗಳು ರಕ್ಷಿಸುತ್ತಿದ್ದಾರೆ. ಕೃತವರ್ಮ, ಕೃಪ, ದುಃಶಾಸನ, ಜಯದ್ರಥ, ಭಗದತ್ತ, ವಿಕರ್ಣ, ದ್ರೌಣಿ, ಸೌಬಲ, ಬಾಹ್ಲೀಕರಿಂದ ರಕ್ಷಣೆಗೊಂಡಿದೆ.

06072019a ಗುಪ್ತಂ ಪ್ರವೀರೈರ್ಲೋಕಸ್ಯ ಸಾರವದ್ಭಿರ್ಮಹಾತ್ಮಭಿಃ|

06072019c ಯದಹನ್ಯತ ಸಂಗ್ರಾಮೇ ದಿಷ್ಟಮೇತತ್ಪುರಾತನಂ||

ಲೋಕದ ಪ್ರವೀರರಿಂದ, ಶಕ್ತಿಮಂತ ಮಹಾತ್ಮರಿಂದ ರಕ್ಷಿಸಲ್ಪಟ್ಟಿದ್ದರೂ ಈ ಸೇನೆಯು ಸಂಗ್ರಾಮದಲ್ಲಿ ಹತವಾಗುತ್ತಿದೆಯೆಂದರೆ ಇದು ಮೊದಲೇ ನಿರ್ಧರಿಸಲ್ಪಟ್ಟ ದೈವವೇ ಸರಿ.

06072020a ನೈತಾದೃಶಂ ಸಮುದ್ಯೋಗಂ ದೃಷ್ಟವಂತೋಽಥ ಮಾನುಷಾಃ|

06072020c ಋಷಯೋ ವಾ ಮಹಾಭಾಗಾಃ ಪುರಾಣಾ ಭುವಿ ಸಂಜಯ||

ಸಂಜಯ! ಮನುಷ್ಯರಾಗಲೀ ಮಹಾಭಾಗ ಋಷಿಗಳಾಗಲೀ ಭೂಮಿಯ ಮೇಲೆ ಇಷ್ಟು ಅಪಾರ ಸೇನಾಸಂಗ್ರಹವನ್ನು ಈ ಹಿಂದೆ ನೋಡಿಯೇ ಇರಲಿಲ್ಲ.

06072021a ಈದೃಶೋ ಹಿ ಬಲೌಘಸ್ತು ಯುಕ್ತಃ ಶಸ್ತ್ರಾಸ್ತ್ರಸಂಪದಾ|

06072021c ವಧ್ಯತೇ ಯತ್ರ ಸಂಗ್ರಾಮೇ ಕಿಮನ್ಯದ್ಭಾಗಧೇಯತಃ||

ಶಸ್ತ್ರಾಸ್ತ್ರಸಂಪದ ಬಲದಿಂದ ಕೂಡಿದ ಈ ಸೇನೆಯೂ ಕೂಡ ಸಂಗ್ರಾಮದಲ್ಲಿ ವಧಿಸಲ್ಪಡುತ್ತಿದೆಯೆಂದರೆ ಇದು ಕೇವಲ ಅದೃಷ್ಟದ ವಿಷಯವಲ್ಲದೇ ಮತ್ತೇನು?

06072022a ವಿಪರೀತಮಿದಂ ಸರ್ವಂ ಪ್ರತಿಭಾತಿ ಸ್ಮ ಸಂಜಯ|

06072022c ಯತ್ರೇದೃಶಂ ಬಲಂ ಘೋರಂ ನಾತರದ್ಯುಧಿ ಪಾಂಡವಾನ್||

ಸಂಜಯ! ಈ ಬಲವಾದ ಘೋರ ಸೇನೆಯು ಪಾಂಡವರನ್ನು ಮೀರಲಿಕ್ಕಾಗಲಿಲ್ಲ ಎಂದರೆ ನನಗೆ ಎಲ್ಲವೂ ವಿಪರೀತವಾಗಿಯೇ ತೋರುತ್ತಿವೆ.

06072023a ಅಥ ವಾ ಪಾಂಡವಾರ್ಥಾಯ ದೇವಾಸ್ತತ್ರ ಸಮಾಗತಾಃ|

06072023c ಯುಧ್ಯಂತೇ ಮಾಮಕಂ ಸೈನ್ಯಂ ಯದವಧ್ಯಂತ ಸಂಜಯ||

ಸಂಜಯ! ಅಥವಾ ಅಲ್ಲಿ ಸಮಾಗತರಾಗಿರುವ ದೇವತೆಗಳು ಹೋರಾಡುತ್ತಿರುವ ನನ್ನ ಸೇನೆಯೊಂದಿಗೆ ಯುದ್ಧ ಮಾಡುತ್ತಿದ್ದಾರೆ.

06072024a ಉಕ್ತೋ ಹಿ ವಿದುರೇಣೇಹ ಹಿತಂ ಪಥ್ಯಂ ಚ ಸಂಜಯ|

06072024c ನ ಚ ಗೃಹ್ಣಾತಿ ತನ್ಮಂದಃ ಪುತ್ರೋ ದುರ್ಯೋಧನೋ ಮಮ||

ಸಂಜಯ! ವಿದುರನು ಹಿತವೂ ಪಥ್ಯವೂ ಆದುದನ್ನು ಹೇಳಿದ್ದನು, ಆದರೆ ನನ್ನ ಮಂದ ಮಗ ದುರ್ಯೋಧನನು ಅವುಗಳನ್ನು ಸ್ವೀಕರಿಸಲಿಲ್ಲ.

06072025a ತಸ್ಯ ಮನ್ಯೇ ಮತಿಃ ಪೂರ್ವಂ ಸರ್ವಜ್ಞಸ್ಯ ಮಹಾತ್ಮನಃ|

06072025c ಆಸೀದ್ಯಥಾಗತಂ ತಾತ ಯೇನ ದೃಷ್ಟಮಿದಂ ಪುರಾ||

ಅಯ್ಯಾ! ಆ ಸರ್ವಜ್ಞ ಮಹಾತ್ಮನಿಗೆ ಹೀಗಾಗುವುದೆಂದು ಮೊದಲೇ ತಿಳಿದಿತ್ತು. ಇಂದು ಏನು ನಡೆಯುತ್ತಿದೆಯೋ ಅದು ಅವನ ದೃಷ್ಟಿಗೆ ಮೊದಲೇ ಗೋಚರವಾಗಿತ್ತು.

06072026a ಅಥ ವಾ ಭಾವ್ಯಮೇವಂ ಹಿ ಸಂಜಯೈತೇನ ಸರ್ವಥಾ|

06072026c ಪುರಾ ಧಾತ್ರಾ ಯಥಾ ಸೃಷ್ಟಂ ತತ್ತಥಾ ನ ತದನ್ಯಥಾ||

ಅಥವಾ ಸಂಜಯ! ಇದು ಹೀಗೆಯೇ ಆಗಬೇಕೆಂದಿತ್ತೋ ಏನೋ ಯಾರು ಬಲ್ಲರು? ಹಿಂದೆ ಧಾತ್ರನು ಹೇಗೆ ಸೃಷ್ಟಿಸಿದ್ದನೋ ಹಾಗೆಯೇ ಆಗುತ್ತದೆಯಲ್ಲದೇ ಅನ್ಯಥಾ ಆಗುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಧೃತರಾಷ್ಟ್ರಚಿಂತಾಯಾಂ ದ್ವಿಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಧೃತರಾಷ್ಟ್ರಚಿಂತೆ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.

Image result for flowers against white background

Comments are closed.