Bhishma Parva: Chapter 7

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ಸಂಜಯನು ಧೃತರಾಷ್ಟ್ರನಿಗೆ ಭೂಮಿ ಮೊದಲಾದವುಗಳ ಪರಿಮಾಣಗಳನ್ನು ವರ್ಣಿಸಿದುದು (೧-೫೩).

06007001 ಧೃತರಾಷ್ಟ್ರ ಉವಾಚ|

06007001a ಉಕ್ತೋ ದ್ವೀಪಸ್ಯ ಸಂಕ್ಷೇಪೋ ವಿಸ್ತರಂ ಬ್ರೂಹಿ ಸಂಜಯ|

06007001c ಯಾವದ್ಭೂಮ್ಯವಕಾಶೋಽಯಂ ದೃಶ್ಯತೇ ಶಶಲಕ್ಷಣೇ|

06007001e ತಸ್ಯ ಪ್ರಮಾಣಂ ಪ್ರಬ್ರೂಹಿ ತತೋ ವಕ್ಷ್ಯಸಿ ಪಿಪ್ಪಲಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ದ್ವೀಪದ ಕುರಿತು ಸಂಕ್ಷೇಪವಾಗಿ ಹೇಳಿದ್ದೀಯೆ. ವಿಸ್ತಾರವಾಗಿ ಹೇಳು. ಶಶಖಂಡದಲ್ಲಿ ಭೂಮಿಯ ಅವಕಾಶವೆಷ್ಟಿರುವುದು? ಅನಂತರ ಪಿಪ್ಪಲ ಖಂಡವನ್ನು ವಿವರಿಸುವೆಯಂತೆ.””

06007002 ವೈಶಂಪಾಯನ ಉವಾಚ|

06007002a ಏವಮುಕ್ತಃ ಸ ರಾಜ್ಞಾ ತು ಸಂಜಯೋ ವಾಕ್ಯಮಬ್ರವೀತ್|

06007002c ಪ್ರಾಗಾಯತಾ ಮಹಾರಾಜ ಷಡೇತೇ ರತ್ನಪರ್ವತಾಃ|

06007002e ಅವಗಾಢಾ ಹ್ಯುಭಯತಃ ಸಮುದ್ರೌ ಪೂರ್ವಪಶ್ಚಿಮೌ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ರಾಜನಿಗೆ ಸಂಜಯನು ಹೇಳಿದನು: “ಮಹಾರಾಜ! ಪೂರ್ವ-ಪಶ್ಚಿಮವಾಗಿ ಸಮುದ್ರದ ಪರ್ಯಂತ ಆರು ಪರ್ವತರತ್ನಗಳಿವೆ. ಇವುಗಳ ಪೂರ್ವ ಮತ್ತು ಪಶ್ಚಿಮಗಳಲ್ಲಿ ಎರಡು ಸಮುದ್ರಗಳಿವೆ.

06007003a ಹಿಮವಾನ್ ಹೇಮಕೂಟಶ್ಚ ನಿಷಧಶ್ಚ ನಗೋತ್ತಮಃ|

06007003c ನೀಲಶ್ಚ ವೈಡೂರ್ಯಮಯಃ ಶ್ವೇತಶ್ಚ ರಜತಪ್ರಭಃ|

06007003e ಸರ್ವಧಾತುವಿನದ್ಧಶ್ಚ ಶೃಂಗವಾನ್ನಾಮ ಪರ್ವತಃ||

ಇವುಗಳು - ಹಿಮಾಲಯ, ಹೇಮಕೂಟ, ನಗೋತ್ತಮ ನಿಷಧ, ವೈಡೂರ್ಯಮಯ ನೀಲ, ರಜತಪ್ರಭೆಯುಳ್ಳ ಶ್ವೇತ, ಸರ್ವಧಾತುಗಳಿಂದ ಕೂಡಿರುವ ಶೃಂಗವೆಂಬ ಹೆಸರಿನ ಪರ್ವತ.

06007004a ಏತೇ ವೈ ಪರ್ವತಾ ರಾಜನ್ಸಿದ್ಧಚಾರಣಸೇವಿತಾಃ|

06007004c ತೇಷಾಮಂತರವಿಷ್ಕಂಭೋ ಯೋಜನಾನಿ ಸಹಸ್ರಶಃ||

ರಾಜನ್! ಈ ಪರ್ವತಗಳು ಸಿದ್ಧ-ಚಾರಣರ ವಾಸಸ್ಥಾನಗಳು. ಇವುಗಳ ಒಳಭಾಗವು ಸಹಸ್ರಾರು ಯೋಜನ ವಿಶಾಲವಾಗಿವೆ.

06007005a ತತ್ರ ಪುಣ್ಯಾ ಜನಪದಾಸ್ತಾನಿ ವರ್ಷಾಣಿ ಭಾರತ|

06007005c ವಸಂತಿ ತೇಷು ಸತ್ತ್ವಾನಿ ನಾನಾಜಾತೀನಿ ಸರ್ವಶಃ||

ಭಾರತ! ಅಲ್ಲಿ ಪುಣ್ಯ ಜನಪದಗಳಿರುವ ವರ್ಷ[1]ಗಳಿವೆ. ಅಲ್ಲಿ ನಾನಾ ಜಾತಿಯ ಎಲ್ಲ ಸತ್ವಗಳೂ ವಾಸಿಸುತ್ತವೆ.

06007006a ಇದಂ ತು ಭಾರತಂ ವರ್ಷಂ ತತೋ ಹೈಮವತಂ ಪರಂ|

06007006c ಹೇಮಕೂಟಾತ್ಪರಂ ಚೈವ ಹರಿವರ್ಷಂ ಪ್ರಚಕ್ಷತೇ||

ಇದು ಭಾರತ ವರ್ಷ. ಇದರ ನಂತರದ್ದು ಹೈಮವತ. ಹೇಮಕೂಟದ ನಂತರದ್ದು ಹರಿವರ್ಷವೆಂದು ಹೇಳುತ್ತಾರೆ.

06007007a ದಕ್ಷಿಣೇನ ತು ನೀಲಸ್ಯ ನಿಷಧಸ್ಯೋತ್ತರೇಣ ಚ|

06007007c ಪ್ರಾಗಾಯತೋ ಮಹಾರಾಜ ಮಾಲ್ಯವಾನ್ನಾಮ ಪರ್ವತಃ||

ಮಹಾರಾಜ! ನೀಲಪರ್ವತದ ದಕ್ಷಿಣಕ್ಕೂ ನಿಷಧ ಪರ್ವತದ ಉತ್ತರಕ್ಕೂ ಪೂರ್ವ-ಪಶ್ಚಿಮವಾಗಿ ಮಾಲ್ಯವತ್ ಎಂಬ ಹೆಸರಿನ ಪರ್ವತವಿದೆ.

06007008a ತತಃ ಪರಂ ಮಾಲ್ಯವತಃ ಪರ್ವತೋ ಗಂಧಮಾದನಃ|

06007008c ಪರಿಮಂಡಲಸ್ತಯೋರ್ಮಧ್ಯೇ ಮೇರುಃ ಕನಕಪರ್ವತಃ||

ಮಾಲ್ಯವತ್ಪರ್ವತದಿಂದಾಚೆ ಗಂಧಮಾದನ ಪರ್ವತವಿದೆ. ಈ ಎರಡು ಪರ್ವತಗಳ ಮಧ್ಯೆ ಗೋಲಾಕಾರದ ಕನಕಪರ್ವತ ಮೇರುವಿದೆ.

06007009a ಆದಿತ್ಯತರುಣಾಭಾಸೋ ವಿಧೂಮ ಇವ ಪಾವಕಃ|

06007009c ಯೋಜನಾನಾಂ ಸಹಸ್ರಾಣಿ ಷೋಡಶಾಧಃ ಕಿಲ ಸ್ಮೃತಃ||

ಉದಯಿಸುವ ಸೂರ್ಯನಂತೆ, ಹೊಗೆಯಿಲ್ಲದ ಅಗ್ನಿಯಂತೆ ಹೊಳೆಯುವ ಇದರ ಆಳವು ಹದಿನಾರು ಸಹಸ್ರ ಯೋಜನೆಗಳೆಂದು ಹೇಳುವುದಿಲ್ಲವೇ?

06007010a ಉಚ್ಚೈಶ್ಚ ಚತುರಾಶೀತಿರ್ಯೋಜನಾನಾಂ ಮಹೀಪತೇ|

06007010c ಊರ್ಧ್ವಮಂತಶ್ಚ ತಿರ್ಯಕ್ಚ ಲೋಕಾನಾವೃತ್ಯ ತಿಷ್ಠತಿ||

ಮಹೀಪತೇ! ಇದರ ಎತ್ತರವು ಎಂಭತ್ನಾಲ್ಕು ಯೋಜನೆಗಳು. ಇದರ ಅಗಲವೂ ಅಷ್ಟೇ ಆಗಿರುತ್ತದೆ. ಇದರ ಮೇಲೆ, ಕೆಳಗೆ, ಮತ್ತು ಸುತ್ತಲೂ ಲೋಕಗಳು ಆವರಿಸಿಕೊಂಡು ನಿಂತಿವೆ.

06007011a ತಸ್ಯ ಪಾರ್ಶ್ವೇ ತ್ವಿಮೇ ದ್ವೀಪಾಶ್ಚತ್ವಾರಃ ಸಂಸ್ಥಿತಾಃ ಪ್ರಭೋ|

06007011c ಭದ್ರಾಶ್ವಃ ಕೇತುಮಾಲಶ್ಚ ಜಂಬೂದ್ವೀಪಶ್ಚ ಭಾರತ|

06007011e ಉತ್ತರಾಶ್ಚೈವ ಕುರವಃ ಕೃತಪುಣ್ಯಪ್ರತಿಶ್ರಯಾಃ||

ಪ್ರಭೋ! ಭಾರತ! ಅದರ ಪಾರ್ಶ್ವಗಳಲ್ಲಿ ನಾಲ್ಕು ದ್ವೀಪಗಳಿವೆ: ಭದ್ರ, ಕೇತುಮಾಲ, ಜಂಬೂದ್ವೀಪ, ಮತ್ತು ಪುಣ್ಯಕೃತರಿಗೆ ಆಶ್ರಯವಾಗಿರುವ ಉತ್ತರ ಕುರು.

06007012a ವಿಹಗಃ ಸುಮುಖೋ ಯತ್ರ ಸುಪರ್ಣಸ್ಯಾತ್ಮಜಃ ಕಿಲ|

06007012c ಸ ವೈ ವಿಚಿಂತಯಾಮಾಸ ಸೌವರ್ಣಾನ್ಪ್ರೇಕ್ಷ್ಯ ವಾಯಸಾನ್||

06007013a ಮೇರುರುತ್ತಮಮಧ್ಯಾನಾಮಧಮಾನಾಂ ಚ ಪಕ್ಷಿಣಾಂ|

06007013c ಅವಿಶೇಷಕರೋ ಯಸ್ಮಾತ್ತಸ್ಮಾದೇನಂ ತ್ಯಜಾಮ್ಯಹಂ||

ಸುಪರ್ಣನ ಮಗ ಸುಮುಖನೆಂಬ ಪಕ್ಷಿಯು ಸುವರ್ಣಮಯ ಕಾಗೆಗಳನ್ನು ನೋಡಿ ಯೋಚಿಸಿದನು: “ಈ ಮೇರುವು ಪಕ್ಷಿಗಳಲ್ಲಿ ಉತ್ತಮ, ಮದ್ಯಮ ಮತ್ತು ಅಧಮರಲ್ಲಿ ವ್ಯತ್ಯಾಸವನ್ನೇ ಕಾಣುತ್ತಿಲ್ಲ. ಆದುದರಿಂದ ಇದನ್ನು ನಾನು ತ್ಯಜಿಸುತ್ತೇನೆ.”

06007014a ತಮಾದಿತ್ಯೋಽನುಪರ್ಯೇತಿ ಸತತಂ ಜ್ಯೋತಿಷಾಂ ಪತಿಃ|

06007014c ಚಂದ್ರಮಾಶ್ಚ ಸನಕ್ಷತ್ರೋ ವಾಯುಶ್ಚೈವ ಪ್ರದಕ್ಷಿಣಂ||

ಮೇರುಪರ್ವತವನ್ನು ಗ್ರಹಗಳ ಅಧಿಪತಿ ಸೂರ್ಯನು ಸುತ್ತುಹಾಕುತ್ತಾನೆ. ನಕ್ಷತ್ರಗಳೊಂದಿಗೆ ಚಂದ್ರನೂ, ಮತ್ತು ವಾಯುವೂ ಅದಕ್ಕೆ ಪ್ರದಕ್ಷಿಣೆ ಮಾಡುತ್ತಾರೆ.

06007015a ಸ ಪರ್ವತೋ ಮಹಾರಾಜ ದಿವ್ಯಪುಷ್ಪಫಲಾನ್ವಿತಃ|

06007015c ಭವನೈರಾವೃತಃ ಸರ್ವೈರ್ಜಾಂಬೂನದಮಯೈಃ ಶುಭೈಃ||

ಮಹಾರಾಜ! ದಿವ್ಯ ಪುಷ್ಪ ಫಲಭರಿತವಾದ ಆ ಪರ್ವತವು ಎಲ್ಲಕಡೆಗಳಲ್ಲಿಯೂ ಬಂಗಾರಗಳಿಂದ ಮಾಡಲ್ಪಟ್ಟ ಶುಭ ಭವನಗಳಿಂದ ಆವೃತಗೊಂಡಿದೆ.

06007016a ತತ್ರ ದೇವಗಣಾ ರಾಜನ್ಗಂಧರ್ವಾಸುರರಾಕ್ಷಸಾಃ|

06007016c ಅಪ್ಸರೋಗಣಸಂಯುಕ್ತಾಃ ಶೈಲೇ ಕ್ರೀಡಂತಿ ನಿತ್ಯಶಃ||

ರಾಜನ್! ಆ ಶೈಲದಲ್ಲಿ ನಿತ್ಯವೂ ದೇವಗಣಗಳು, ಗಂಧರ್ವ-ಅಸುರ-ರಾಕ್ಷಸ-ಅಪ್ಸರ ಗಣಗಳು ಒಟ್ಟುಗೂಡಿ ಆಟವಾಡುತ್ತಿರುತ್ತಾರೆ.

06007017a ತತ್ರ ಬ್ರಹ್ಮಾ ಚ ರುದ್ರಶ್ಚ ಶಕ್ರಶ್ಚಾಪಿ ಸುರೇಶ್ವರಃ|

06007017c ಸಮೇತ್ಯ ವಿವಿಧೈರ್ಯರ್ಯಜ್ಞೈರ್ಯಜಂತೇಽನೇಕದಕ್ಷಿಣೈಃ||

ಅಲ್ಲಿ ಬ್ರಹ್ಮ, ರುದ್ರ ಮತ್ತು ಸುರೇಶ್ವರ ಶಕ್ರನೂ ಕೂಡ ಒಟ್ಟು ಸೇರಿ ಅನೇಕ ದಕ್ಷಿಣೆಗಳಿಂದ ಕೂಡಿದ ವಿವಿಧ ಯಜ್ಞಗಳನ್ನು ಯಾಜಿಸಿದರು.

06007018a ತುಂಬುರುರ್ನಾರದಶ್ಚೈವ ವಿಶ್ವಾವಸುರ್ಹಹಾ ಹುಹೂಃ|

06007018c ಅಭಿಗಮ್ಯಾಮರಶ್ರೇಷ್ಠಾಃ ಸ್ತವೈ ಸ್ತುನ್ವಂತಿ ಚಾಭಿಭೋ||

ಅಲ್ಲಿ ತುಂಬುರು, ನಾರದ, ವಿಶ್ವಾವಸು, ಹಹಾ ಹುಹೂ ಎಂಬ ಗಂಧರ್ವರು ಮತ್ತು ಅಮರಶ್ರೇಷ್ಠರು ವಿಭುವನ್ನು ಸ್ತೋತ್ರಗಳಿಂದ ಸ್ತುತಿಸುತ್ತಾರೆ.

06007019a ಸಪ್ತರ್ಷಯೋ ಮಹಾತ್ಮಾನಃ ಕಶ್ಯಪಶ್ಚ ಪ್ರಜಾಪತಿಃ|

06007019c ತತ್ರ ಗಚ್ಛಂತಿ ಭದ್ರಂ ತೇ ಸದಾ ಪರ್ವಣಿ ಪರ್ವಣಿ||

ನಿನಗೆ ಮಂಗಳವಾಗಲಿ! ಅಲ್ಲಿಗೆ ಪರ್ವ ಪರ್ವಗಳಲ್ಲಿ ಸದಾ ಮಹಾತ್ಮ ಸಪ್ತರ್ಷಿಗಳು ಮತ್ತು ಪ್ರಜಾಪತಿ ಕಶ್ಯಪರು ಬರುತ್ತಿರುತ್ತಾರೆ.

06007020a ತಸ್ಯೈವ ಮೂರ್ಧನ್ಯುಶನಾಃ ಕಾವ್ಯೋ ದೈತ್ಯೈರ್ಮಹೀಪತೇ|

06007020c ತಸ್ಯ ಹೀಮಾನಿ ರತ್ನಾನಿ ತಸ್ಯೇಮೇ ರತ್ನಪರ್ವತಾಃ||

ಮಹೀಪತೇ! ಇದರ ಶಿಖರದಲ್ಲಿಯೇ ಉಶನ ಕಾವ್ಯನನ್ನು ದೈತ್ಯರು ಗೌರವಿಸುತ್ತಾರೆ. ಚಿನ್ನ, ರತ್ನಗಳು ಮತ್ತು ರತ್ನ ಪರ್ವತವೂ ಇದರ ಸಂಬಂಧಿಗಳು.

06007021a ತಸ್ಮಾತ್ಕುಬೇರೋ ಭಗವಾಂಶ್ಚತುರ್ಥಂ ಭಾಗಮಶ್ನುತೇ|

06007021c ತತಃ ಕಲಾಂಶಂ ವಿತ್ತಸ್ಯ ಮನುಷ್ಯೇಭ್ಯಃ ಪ್ರಯಚ್ಛತಿ||

ಭಗವಾನ್! ಅದರ ನಾಲ್ಕನೇ ಒಂದು ಭಾಗವು ಕುಬೇರನಿಗೆ ಸೇರಿದೆ. ಅವನ ವಿತ್ತದ ಹದಿನಾರರ ಒಂದಂಶವನ್ನು ಅವನು ಮನುಷ್ಯರಿಗೆ ನೀಡುತ್ತಾನೆ.

06007022a ಪಾರ್ಶ್ವೇ ತಸ್ಯೋತ್ತರೇ ದಿವ್ಯಂ ಸರ್ವರ್ತುಕುಸುಮಂ ಶಿವಂ|

06007022c ಕರ್ಣಿಕಾರವನಂ ರಮ್ಯಂ ಶಿಲಾಜಾಲಸಮುದ್ಗತಂ||

ಅದರ ಉತ್ತರ ಭಾಗದಲ್ಲಿ ಸರ್ವ‌ಋತುಗಳಲ್ಲಿಯೂ ಕುಸುಮಗಳಿರುವ ಶುಭವಾದ ರಮ್ಯವಾದ ಬೆಟ್ಟದಾವರೆ ಕರ್ಣಿಕಾ ವನವಿದೆ.

06007023a ತತ್ರ ಸಾಕ್ಷಾತ್ಪಶುಪತಿರ್ದಿವ್ಯೈರ್ಭೂತೈಃ ಸಮಾವೃತಃ|

06007023c ಉಮಾಸಹಾಯೋ ಭಗವಾನ್ರಮತೇ ಭೂತಭಾವನಃ||

ಅಲ್ಲಿ ಸಾಕ್ಷಾತ್ ಪಶುಪತಿ ಭಗವಾನ್ ಭೂತಭಾವನನು ಉಮೆಯೊಂದಿಗೆ ದಿವ್ಯ ಭೂತಗಳಿಂದ ಸಮಾವೃತನಾಗಿ ರಮಿಸುತ್ತಾನೆ.

06007024a ಕರ್ಣಿಕಾರಮಯೀಂ ಮಾಲಾಂ ಬಿಭ್ರತ್ಪಾದಾವಲಂಬಿನೀಂ|

06007024c ತ್ರಿಭಿರ್ನೇತ್ರೈಃ ಕೃತೋದ್ದ್ಯೋತಸ್ತ್ರಿಭಿಃ ಸೂರ್ಯೈರಿವೋದಿತೈಃ||

ಅಲ್ಲಿ ಅವನು ಪಾದದವರೆಗೂ ಕರ್ಣಿಕಾರಗಳಿಂದ ಮಾಡಿದ ಮಾಲೆಯನ್ನು ಧರಿಸಿ ಉದಯಿಸುತ್ತಿರುವ ಮೂರು ಸೂರ್ಯಗಳಂತಿರುವ ಮೂರುಕಣ್ಣುಗಳಿಂದ ಬೆಳಗುತ್ತಾನೆ.

06007025a ತಂ ಉಗ್ರತಪಸಃ ಸಿದ್ಧಾಃ ಸುವ್ರತಾಃ ಸತ್ಯವಾದಿನಃ|

06007025c ಪಶ್ಯಂತಿ ನ ಹಿ ದುರ್ವೃತ್ತೈಃ ಶಕ್ಯೋ ದ್ರಷ್ಟುಂ ಮಹೇಶ್ವರಃ||

ಅವನನ್ನು ಉಗ್ರತಪಸ್ವಿ, ಸುವ್ರತ, ಸತ್ಯವಾದಿ ಸಿದ್ಧರು ಮಾತ್ರ ನೋಡುತ್ತಾರೆ. ದುರ್ವೃತ್ತರು ಮಹೇಶ್ವರನನ್ನು ನೋಡಲು ಶಕ್ತರಿಲ್ಲ.

06007026a ತಸ್ಯ ಶೈಲಸ್ಯ ಶಿಖರಾತ್ ಕ್ಷೀರಧಾರಾ ನರೇಶ್ವರ|

06007026c ತ್ರಿಂಶದ್ಬಾಹುಪರಿಗ್ರಾಹ್ಯಾ ಭೀಮನಿರ್ಘಾತನಿಸ್ವನಾ||

06007027a ಪುಣ್ಯಾ ಪುಣ್ಯತಮೈರ್ಜುಷ್ಟಾ ಗಂಗಾ ಭಾಗೀರಥೀ ಶುಭಾ|

06007027c ಪತತ್ಯಜಸ್ರವೇಗೇನ ಹ್ರದೇ ಚಾಂದ್ರಮಸೇ ಶುಭೇ|

06007027e ತಯಾ ಹ್ಯುತ್ಪಾದಿತಃ ಪುಣ್ಯಃ ಸ ಹ್ರದಃ ಸಾಗರೋಪಮಃ||

ನರೇಶ್ವರ! ಆ ಶೈಲದ ಶಿಖರದಿಂದ ಹಾಲಿನಂತೆ ಬೆಳ್ಳಗೆ, ಮೂರು ಕವಲುಗಳಾಗಿ, ಭಯಂಕರ ನಿರ್ಘಾತ ನಿಸ್ವನದೊಂದಿಗೆ, ಪುಣ್ಯೆ ಪುಣ್ಯತಮೆ, ಜುಷ್ಟೆ, ಗಂಗಾ, ಭಾಗೀರಥಿ, ಶುಭೆಯು ಅತಿ ವೇಗದಿಂದ ಧುಮಿಕಿ ಶುಭ ಚಾಂದ್ರಮಸ ಸರೋವರಕ್ಕೆ ಬೀಳುತ್ತಾಳೆ. ಅವಳಿಂದ ನಿರ್ಮಾಣಗೊಂಡ ಆ ಸರೋವರವು ಸಾಗರದಂತಿದೆ.

06007028a ತಾಂ ಧಾರಯಾಮಾಸ ಪುರಾ ದುರ್ಧರಾಂ ಪರ್ವತೈರಪಿ|

06007028c ಶತಂ ವರ್ಷಸಹಸ್ರಾಣಾಂ ಶಿರಸಾ ವೈ ಮಹೇಶ್ವರಃ||

ಪರ್ವತಗಳಿಗೂ ಹೊರಲು ಅಸಾಧ್ಯವಾದ ಅವಳನ್ನು ಹಿಂದೆ ಮಹೇಶ್ವರನು ನೂರು ಸಾವಿರ ವರ್ಷಗಳು ತಲೆಯಲ್ಲಿ ಹೊತ್ತಿದ್ದನು[2].

06007029a ಮೇರೋಸ್ತು ಪಶ್ಚಿಮೇ ಪಾರ್ಶ್ವೇ ಕೇತುಮಾಲೋ ಮಹೀಪತೇ|

06007029c ಜಂಬೂಷಂಡಶ್ಚ[3] ತತ್ರೈವ ಸುಮಹಾನ್ನಂದನೋಪಮಃ||

ಮಹೀಪತೇ! ಆ ಮೇರುವಿನ ಪಶ್ಚಿಮ ಪಾರ್ಶ್ವದಲ್ಲಿ ಕೇತುಮಾಲವೆಂಬ ಪ್ರದೇಶವಿದೆ. ಅಲ್ಲಿಯೇ ನಂದನದಂತಿರುವ ತುಂಬಾ ವಿಶಾಲವಾಗಿರುವ ಜಂಬೂಖಂಡವಿದೆ.

06007030a ಆಯುರ್ದಶ ಸಹಸ್ರಾಣಿ ವರ್ಷಾಣಾಂ ತತ್ರ ಭಾರತ|

06007030c ಸುವರ್ಣವರ್ಣಾಶ್ಚ ನರಾಃ ಸ್ತ್ರಿಯಶ್ಚಾಪ್ಸರಸೋಪಮಾಃ||

ಭಾರತ! ಅಲ್ಲಿರುವವರ ಆಯುಸ್ಸು ಹತ್ತು ಸಾವಿರ ವರ್ಷಗಳು. ಮನುಷ್ಯರು ಬಂಗಾರದ ವರ್ಣದವರಾಗಿರುತ್ತಾರೆ ಮತ್ತು ಸ್ತ್ರೀಯರು ಅಪ್ಸರೆಯರಂತೆ ಇರುತ್ತಾರೆ.

06007031a ಅನಾಮಯಾ ವೀತಶೋಕಾ ನಿತ್ಯಂ ಮುದಿತಮಾನಸಾಃ|

06007031c ಜಾಯಂತೇ ಮಾನವಾಸ್ತತ್ರ ನಿಷ್ಟಪ್ತಕನಕಪ್ರಭಾಃ||

ಅವರು ನಿತ್ಯ ಅನಾಮಯರೂ, ಶೋಕವಿಲ್ಲದವರೂ, ಮುದಿತಮಾನಸರೂ ಆಗಿರುತ್ತಾರೆ. ಅಲ್ಲಿ ಹುಟ್ಟುವ ಮಾನವರು ಕರಗಿಸಿದ ಅಪ್ಪಟ ಚಿನ್ನದ ಪ್ರಭೆಯನ್ನು ಹೊಂದಿರುತ್ತಾರೆ.

06007032a ಗಂಧಮಾದನಶೃಂಗೇಷು ಕುಬೇರಃ ಸಹ ರಾಕ್ಷಸೈಃ|

06007032c ಸಂವೃತೋಽಪ್ಸರಸಾಂ ಸಂಘೈರ್ಮೋದತೇ ಗುಹ್ಯಕಾಧಿಪಃ||

ಗಂಧಮಾದನದ ಶೃಂಗದಲ್ಲಿ ಗುಹ್ಯಕಾಧಿಪ ಕುಬೇರನು ರಾಕ್ಷಸರೊಂದಿಗೆ ಮತ್ತು ಅಪ್ಸರಗಣಗಳೊಂದಿಗೆ ಸಂವೃತನಾಗಿ ಮೋದಿಸುತ್ತಾನೆ.

06007033a ಗಂಧಮಾದನಪಾದೇಷು ಪರೇಷ್ವಪರಗಂಡಿಕಾಃ|

06007033c ಏಕಾದಶ ಸಹಸ್ರಾಣಿ ವರ್ಷಾಣಾಂ ಪರಮಾಯುಷಃ||

ಗಂಧಮಾದನದ ಬುಡದಲ್ಲಿ ಇನ್ನೊಂದುಕಡೆ ಇರುವ ಗಂಡಿಕರು ಹನ್ನೊಂದು ಸಾವಿರ ವರ್ಷಗಳ ಪರಮಾಯುಷಿಗಳಾಗಿರುತ್ತಾರೆ.

06007034a ತತ್ರ ಕೃಷ್ಣಾ ನರಾ ರಾಜಂಸ್ತೇಜೋಯುಕ್ತಾ ಮಹಾಬಲಾಃ|

06007034c ಸ್ತ್ರಿಯಶ್ಚೋತ್ಪಲಪತ್ರಾಭಾಃ ಸರ್ವಾಃ ಸುಪ್ರಿಯದರ್ಶನಾಃ||

ರಾಜನ್! ಅಲ್ಲಿರುವ ಕಪ್ಪು ಮನುಷ್ಯರು ಮಹಾಬಲಶಾಲಿಗಳೂ, ತೇಜೋಯುಕ್ತರೂ ಆಗಿದ್ದು, ಸ್ತ್ರೀಯರೆಲ್ಲರೂ ಕುವಲಯದ ಕಾಂತಿಯಿಂದ ಕೂಡಿದ್ದು, ನೋಡಲು ತುಂಬಾ ಚೆನ್ನಾಗಿರುತ್ತಾರೆ.

06007035a ನೀಲಾತ್ಪರತರಂ ಶ್ವೇತಂ ಶ್ವೇತಾದ್ಧೈರಣ್ಯಕಂ ಪರಂ|

06007035c ವರ್ಷಮೈರಾವತಂ ನಾಮ ತತಃ ಶೃಂಗವತಃ ಪರಂ||

ನೀಲದ ಆಚೆಯಿರುವುದು ಶ್ವೇತ. ಶ್ವೇತದ ಆಚೆಯಿರುವುದು ಹಿರಣ್ಯಕ. ಅನಂತರ ಐರಾವತ ವರ್ಷ ಮತ್ತು ಅದಕ್ಕೂ ಆಚೆ ಶೃಂಗವತ.

06007036a ಧನುಃಸಂಸ್ಥೇ ಮಹಾರಾಜ ದ್ವೇ ವರ್ಷೇ ದಕ್ಷಿಣೋತ್ತರೇ|

06007036c ಇಲಾವೃತಂ ಮಧ್ಯಮಂ ತು ಪಂಚ ವರ್ಷಾಣಿ ಚೈವ ಹ||

ಮಹಾರಾಜ! ದಕ್ಷಿಣ ಮತ್ತು ಉತ್ತರಗಳಲ್ಲಿ ಧನುಸ್ಸಿನ ಆಕಾರದಲ್ಲಿ ಎರಡು ವರ್ಷಗಳಿವೆ. ಮಧ್ಯದಲ್ಲಿರುವ ಇಲಾವೃತವೂ ಸೇರಿ ಒಟ್ಟು ಐದು ವರ್ಷಗಳು[4].

06007037a ಉತ್ತರೋತ್ತರಮೇತೇಭ್ಯೋ ವರ್ಷಮುದ್ರಿಚ್ಯತೇ ಗುಣೈಃ|

06007037c ಆಯುಷ್ಪ್ರಮಾಣಮಾರೋಗ್ಯಂ ಧರ್ಮತಃ ಕಾಮತೋಽರ್ಥತಃ||

06007038a ಸಮನ್ವಿತಾನಿ ಭೂತಾನಿ ತೇಷು ವರ್ಷೇಷು ಭಾರತ|

06007038c ಏವಮೇಷಾ ಮಹಾರಾಜ ಪರ್ವತೈಃ ಪೃಥಿವೀ ಚಿತಾ||

ಭಾರತ! ಈಗ ಹೇಳಿರುವ ವರ್ಷಗಳಲ್ಲಿ ವಾಸಿಸುವವರು ಗುಣಗಳಲ್ಲಿ, ಆಯುಷ್ಪ್ರಮಾಣಗಳಲ್ಲಿ, ಆರೋಗ್ಯದಲ್ಲಿ, ಧರ್ಮ-ಕಾಮ-ಅರ್ಥಗಳಲ್ಲಿ ಉತ್ತರೋತ್ತರ ಸಮನ್ವಿತರು[5]. ಮಹಾರಾಜ! ಹೀಗೆ ಪೃಥ್ವಿಯು ಪರ್ವತಗಳಿಂದ ಹೆಣೆಯಲ್ಪಟ್ಟಿದೆ.

06007039a ಹೇಮಕೂಟಸ್ತು ಸುಮಹಾನ್ಕೈಲಾಸೋ ನಾಮ ಪರ್ವತಃ|

06007039c ಯತ್ರ ವೈಶ್ರವಣೋ ರಾಜಾ ಗುಹ್ಯಕೈಃ ಸಹ ಮೋದತೇ||

ಕೈಲಾಸ ಪರ್ವತದ ಒಂದು ಭಾಗವಾಗಿರುವ ಹೇಮಕೂಟವೆಂಬ ದೊಡ್ಡ ಪರ್ವತದಲ್ಲಿ ರಾಜಾ ವೈಶ್ರವಣನು ಗುಹ್ಯಕರೊಂದಿಗೆ ಮೋದಿಸುತ್ತಾನೆ.

06007040a ಅಸ್ತ್ಯುತ್ತರೇಣ ಕೈಲಾಸಂ ಮೈನಾಕಂ ಪರ್ವತಂ ಪ್ರತಿ|

06007040c ಹಿರಣ್ಯಶೃಂಗಃ ಸುಮಹಾನ್ದಿವ್ಯೋ ಮಣಿಮಯೋ ಗಿರಿಃ||

ಈ ಕೈಲಾಸದಿಂದ ಉತ್ತರಕ್ಕೆ ಮೈನಾಕ ಪರ್ವತದ ಕಡೆ ಹಿರಣ್ಯಶೃಂಗವೆಂಬ ಅತಿ ದೊಡ್ಡ, ದಿವ್ಯ ಮಣಿಮಯ ಗಿರಿಯಿದೆ.

06007041a ತಸ್ಯ ಪಾರ್ಶ್ವೇ ಮಹದ್ದಿವ್ಯಂ ಶುಭಂ ಕಾಂಚನವಾಲುಕಂ|

06007041c ರಮ್ಯಂ ಬಿಂದುಸರೋ ನಾಮ ಯತ್ರ ರಾಜಾ ಭಗೀರಥಃ|

06007041e ದೃಷ್ಟ್ವಾ ಭಾಗೀರಥೀಂ ಗಂಗಾಮುವಾಸ ಬಹುಲಾಃ ಸಮಾಃ||

ಅದರ ಮಗ್ಗುಲಲ್ಲಿ ಮಹಾ ದಿವ್ಯವಾದ, ಶುಭ ಕಾಂಚನವಾಲುಕವಿದೆ. ಅಲ್ಲಿ ಬಿಂದುವೆಂಬ ಹೆಸರಿನ ರಮ್ಯ ಸರೋವರದಲ್ಲಿ ರಾಜಾ ಭಗೀರಥನು ಗಂಗೆ ಭಾಗೀರಥಿಯನ್ನು ಸಾಕ್ಷಾತ್ಕರಿಸಿ ಬಹಳಷ್ಟು ವರ್ಷಗಳು ವಾಸಿಸಿದನು.

06007042a ಯೂಪಾ ಮಣಿಮಯಾಸ್ತತ್ರ ಚಿತ್ಯಾಶ್ಚಾಪಿ ಹಿರಣ್ಮಯಾಃ|

06007042c ತತ್ರೇಷ್ಟ್ವಾ ತು ಗತಃ ಸಿದ್ಧಿಂ ಸಹಸ್ರಾಕ್ಷೋ ಮಹಾಯಶಾಃ||

ಅಲ್ಲಿಯ ನೆಲವು ಹಿರಣ್ಮಯವು, ಯೂಪಗಳು ಮಣಿಮಯವು. ಅಲ್ಲಿ ಸಹಸ್ರಾಕ್ಷನು ಮಹಾಯಶ ಇಷ್ಟಿಗಳನ್ನು ಮಾಡಿ ಸಿದ್ಧಿಯನ್ನು ಪಡೆದನು.

06007043a ಸೃಷ್ಟ್ವಾ ಭೂತಪತಿರ್ಯತ್ರ ಸರ್ವಲೋಕಾನ್ಸನಾತನಃ|

06007043c ಉಪಾಸ್ಯತೇ ತಿಗ್ಮತೇಜಾ ವೃತೋ ಭೂತೈಃ ಸಮಾಗತೈಃ|

06007043e ನರನಾರಾಯಣೌ ಬ್ರಹ್ಮಾ ಮನುಃ ಸ್ಥಾಣುಶ್ಚ ಪಂಚಮಃ||

ಅಲ್ಲಿ ಸರ್ವಲೋಕಗಳನ್ನೂ ಸೃಷ್ಟಿಸಿ ಭೂತಪತಿ, ಸನಾತನನು ತಿಗ್ಮತೇಜಸ್ಸಿನಿಂದ ಆವೃತನಾಗಿ ಭೂತಗಳಲ್ಲಿ ಸಮಾಗತನಾಗಿ ಉಪಾಸಿಸಲ್ಪಡುತ್ತಾನೆ. ಅಲ್ಲಿ ನರ-ನಾರಾಯಣರಿಬ್ಬರು, ಬ್ರಹ್ಮ, ಮನು ಮತ್ತು ಐದನೆಯವನಾಗಿ ಸ್ಥಾಣುವು ಇದ್ದಾರೆ.

06007044a ತತ್ರ ತ್ರಿಪಥಗಾ ದೇವೀ ಪ್ರಥಮಂ ತು ಪ್ರತಿಷ್ಠಿತಾ|

06007044c ಬ್ರಹ್ಮಲೋಕಾದಪಕ್ರಾಂತಾ ಸಪ್ತಧಾ ಪ್ರತಿಪದ್ಯತೇ||

06007045a ವಸ್ವೋಕಸಾರಾ ನಲಿನೀ ಪಾವನಾ ಚ ಸರಸ್ವತೀ|

06007045c ಜಂಬೂನದೀ ಚ ಸೀತಾ ಚ ಗಂಗಾ ಸಿಂಧುಶ್ಚ ಸಪ್ತಮೀ||

ಅಲ್ಲಿ ತ್ರಿಪಥಗೆ ದೇವಿಯು ಮೊದಲು ಪ್ರತಿಷ್ಠಿತಳಾಗಿದ್ದಳು. ಬ್ರಹ್ಮಲೋಕದಿಂದ ಅವಳು ಏಳು ಧಾರೆಗಳಾಗಿ ವಸ್ವೋಕಸಾರಾ ನಲಿನೀ, ಪಾವನೀ, ಸರಸ್ವತೀ, ಜಂಬೂನದೀ, ಸೀತಾ, ಗಂಗಾ ಮತ್ತು ಏಳನೆಯದಾಗಿ ಸಿಂಧು - ಕೆಳಗಿಳಿದಳೆಂದು ಹೇಳುತ್ತಾರೆ.

06007046a ಅಚಿಂತ್ಯಾ ದಿವ್ಯಸಂಕಲ್ಪಾ ಪ್ರಭೋರೇಷೈವ ಸಂವಿಧಿಃ|

06007046c ಉಪಾಸತೇ ಯತ್ರ ಸತ್ರಂ ಸಹಸ್ರಯುಗಪರ್ಯಯೇ||

ಅವಳು ಅಚಿಂತ್ಯೆ, ದಿವ್ಯಸಂಕಲ್ಪೆ ಮತ್ತು ಪ್ರಭುವು ಇಲ್ಲಿಯೇ ಸಂವಿಧಾನನಾಗಿರುವನು. ಇಲ್ಲಿ ಸಹಸ್ರಯುಗಪರ್ಯಂತವಾಗಿ ಸತ್ರಗಳಿಂದ ಉಪಾಸನೆ ನಡೆಯುತ್ತಿತ್ತು.

06007047a ದೃಶ್ಯಾದೃಶ್ಯಾ ಚ ಭವತಿ ತತ್ರ ತತ್ರ ಸರಸ್ವತೀ|

06007047c ಏತಾ ದಿವ್ಯಾಃ ಸಪ್ತ ಗಂಗಾಸ್ತ್ರಿಷು ಲೋಕೇಷು ವಿಶ್ರುತಾಃ||

ಸರಸ್ವತಿಯು ಅಲ್ಲಲ್ಲಿ ಕಾಣುತ್ತಾಳೆ ಮತ್ತು ಅದೃಷ್ಯಳಾಗುತ್ತಾಳೆ. ಈ ದಿವ್ಯ ಸಪ್ತ ಗಂಗೆಯರು ಮೂರು ಲೋಕಗಳಲ್ಲಿ ವಿಶ್ರುತರು.

06007048a ರಕ್ಷಾಂಸಿ ವೈ ಹಿಮವತಿ ಹೇಮಕೂಟೇ ತು ಗುಹ್ಯಕಾಃ|

06007048c ಸರ್ಪಾ ನಾಗಾಶ್ಚ ನಿಷಧೇ ಗೋಕರ್ಣೇ ಚ ತಪೋಧನಾಃ||

ಹಿಮವತ್ಪರ್ವತದಲ್ಲಿ ರಾಕ್ಷಸರು, ಹೇಮಕೂಟದಲ್ಲಿ ಗುಹ್ಯಕರು ಇರುವರು. ನಿಷಧ ಪರ್ವತದಲ್ಲಿ ಸರ್ಪರೂ, ನಾಗರೂ ಮತ್ತು ಗೋಕರ್ಣರೆಂಬ ತಪೋಧನರೂ ಇದ್ದಾರೆ.

06007049a ದೇವಾಸುರಾಣಾಂ ಚ ಗೃಹಂ ಶ್ವೇತಃ ಪರ್ವತ ಉಚ್ಯತೇ|

06007049c ಗಂಧರ್ವಾ ನಿಷಧೇ ಶೈಲೇ ನೀಲೇ ಬ್ರಹ್ಮರ್ಷಯೋ ನೃಪ|

06007049e ಶೃಂಗವಾಂಸ್ತು ಮಹಾರಾಜ ಪಿತೄಣಾಂ ಪ್ರತಿಸಂಚರಃ||

ನೃಪ! ಮಹಾರಾಜ! ಶ್ವೇತ ಪರ್ವತವನ್ನು ದೇವಾಸುರರ ಗೃಹವೆಂದು, ನಿಷಧ ಪರ್ವತವನ್ನು ಗಂಧರ್ವರ ಗೃಹವೆಂದೂ, ನೀಲ ಪರ್ವತವನ್ನು ಬ್ರಹ್ಮರ್ಷಿಗಳ ಗೃಹವೆಂದೂ ಹೇಳುತ್ತಾರೆ. ಶೃಂಗ ಪರ್ವತದಲ್ಲಿ ಪಿತೃಗಳು ಸಂಚರಿಸಿರುತ್ತಾರೆ.

06007050a ಇತ್ಯೇತಾನಿ ಮಹಾರಾಜ ಸಪ್ತ ವರ್ಷಾಣಿ ಭಾಗಶಃ|

06007050c ಭೂತಾನ್ಯುಪನಿವಿಷ್ಟಾನಿ ಗತಿಮಂತಿ ಧ್ರುವಾಣಿ ಚ||

ಮಹಾರಾಜ! ಇವೇ ವಿಭಜನೆಗೊಂಡಿರುವ ಏಳು ವರ್ಷಗಳು. ಚಲಿಸುವ ಮತ್ತು ಅಚಲವಾಗಿರುವವು ಇವುಗಳಲ್ಲಿ ಕೂಡಿವೆ.

06007051a ತೇಷಾಂ ಋದ್ಧಿರ್ಬಹುವಿಧಾ ದೃಶ್ಯತೇ ದೈವಮಾನುಷೀ|

06007051c ಅಶಕ್ಯಾ ಪರಿಸಂಖ್ಯಾತುಂ ಶ್ರದ್ಧೇಯಾ ತು ಬುಭೂಷತಾ||

ಅವುಗಳಲ್ಲಿ ದೈವ-ಮಾನುಷವಾದ ಬಹುವಿಧದ ಲಕ್ಷಣಗಳು ಕಾಣುತ್ತವೆ. ಅವುಗಳನ್ನು ಎಣಿಸುವುದು ಅಶಕ್ಯ. ಶ್ರದ್ಧೆಯುಳ್ಳವರು ಇದನ್ನು ನಂಬುತ್ತಾರೆ.

06007052a ಯಾಂ ತು ಪೃಚ್ಛಸಿ ಮಾ ರಾಜನ್ದಿವ್ಯಾಮೇತಾಂ ಶಶಾಕೃತಿಂ|

06007052c ಪಾರ್ಶ್ವೇ ಶಶಸ್ಯ ದ್ವೇ ವರ್ಷೇ ಉಭಯೇ ದಕ್ಷಿಣೋತ್ತರೇ|

06007052e ಕರ್ಣೌ ತು ನಾಗದ್ವೀಪಂ ಚ ಕಶ್ಯಪದ್ವೀಪಮೇವ ಚ||

ರಾಜನ್! ದಿವ್ಯ ಶಶಾಕೃತಿಯಲ್ಲಿರುವ ಇವುಗಳ ಕುರಿತು ನೀನು ನನ್ನನ್ನು ಕೇಳಿದೆಯಷ್ಟೇ? ಆ ಶಶದ ಎರಡೂ ಪಕ್ಕಗಳಲ್ಲಿ, ಎಡ-ಬಲಗಳಲ್ಲಿ, ಎರಡು ವರ್ಷಗಳಿವೆ. ಈ ನಾಗದ್ವೀಪ ಮತ್ತು ಕಶ್ಯಪ ದ್ವೀಪಗಳು ಆ ಮೊಲದ ಕಿವಿಗಳಿದ್ದಂತೆ.

06007053a ತಾಮ್ರವರ್ಣಃ ಶಿರೋ ರಾಜನ್ ಶ್ರೀಮಾನ್ಮಲಯಪರ್ವತಃ|

06007053c ಏತದ್ದ್ವಿತೀಯಂ ದ್ವೀಪಸ್ಯ ದೃಶ್ಯತೇ ಶಶಸಂಸ್ಥಿತಂ||

ರಾಜನ್! ತಾಮ್ರವರ್ಣದ ಶ್ರೀಮಾನ್ ಮಲಯಪರ್ವತವು ಮೊಲದ ಆಕಾರದಲ್ಲಿರುವ ದ್ವೀಪದ ಶಿರದಂತಿರುವ ಎರಡನೆಯದು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭೂಮ್ಯಾದಿಪರಿಮಾಣವಿವರಣೇ ಸಪ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭೂಮ್ಯಾದಿಪರಿಮಾಣವಿವರಣ ಎನ್ನುವ ಏಳನೇ ಅಧ್ಯಾಯವು.

Image result for indian motifs earth

[1] ವರ್ಷಾಣಿ ಎಂದರೆ ಖಂಡಗಳು. ಮೇಲೆ ಹೇಳಿದ ಆರು ಪರ್ವತಗಳ ನಡುವೆ ಐದು ಖಂಡಗಳೂ ಪೂರ್ವ-ಪಶ್ಚಿಮ ಸಮುದ್ರಾಂತವಾಗಿ ಎರಡು ಖಂಡಗಳೂ - ಒಟ್ಟಿಗೆ ಏಳು ಖಂಡಗಳೆಂದು ವ್ಯಾಖ್ಯಾನಕಾರರು ಅರ್ಥಮಾಡಿರುತ್ತಾರೆ.

[2] ಅರಣ್ಯಕಪರ್ವದ ಅಧ್ಯಾಯ ೧೦೮ರಲ್ಲಿ ಗಂಗಾವತರಣದ ಸಮಯದಲ್ಲಿ ಶಿವನು ಗಂಗೆಯನ್ನು ಧರಿಸಿದ ಪುರಾಣ ಕಥೆಯನ್ನು ಲೋಮಶನು ಯುಧಿಷ್ಠಿರನಿಗೆ ಹೇಳಿದುದಿದೆ.

[3] ಜಂಬೂಖಂಡಸ್ತು ಎಂಬ ಪಾಠಾಂತವಿದೆ.

[4] ಧನುಸ್ಸಿನ ರೂಪದಲ್ಲಿರುವ ದಕ್ಷಿಣೋತ್ತರ ಪರ್ವತಗಳ ಸಾಲಿನ ದಕ್ಷಿಣ ದುದಿಯಲ್ಲಿ ಶ್ವೇತ-ಹಿರಣ್ಯಕಗಳು, ಮಧ್ಯದಲ್ಲಿ ಇಲಾವೃತ, ಅನಂತರ ಹರಿವರ್ಷ-ಹೈಮವತ ಖಂಡಗಳು, ಉತ್ತರದ ತುದಿಯಲ್ಲಿ ಐರಾವತಖಂಡ ಮತ್ತು ಭರತಖಂಡ - ಹೀಗೆ ಏಳು ಖಂಡಗಳಿವೆ. ಈ ಏಳು ಖಂಡಗಳ ಸ್ಥಾನವು ಈ ಕೆಳಗಿನಂತಿವೆ: (೧) ಹಿಮಪತ್ಪರ್ವತದ ದಕ್ಷಿಣಭಾಗದಲ್ಲಿ ಭರತಖಂಡ (೨) ಹಿಮವತ್ಪರ್ವತದ ಉತ್ತರ ಭಾಗದಲ್ಲಿ ಹೈಮವತ ಖಂಡ (೩) ಹೇಮಕೂಟಪರ್ವತದ ಉತ್ತರದಲ್ಲಿ ಹರಿವರ್ಷ (೪) ನಿಷಧಪರ್ವತದ ಉತ್ತರದಲ್ಲಿ ನೀಲಪರ್ವತದ ಉತ್ತರದಲ್ಲಿ ಮೇರುಪರ್ವತದ ಸುತ್ತಲೂ ಇಲಾವೃತಖಂಡ - ಇದರಲ್ಲಿ ಭದಶ್ವ ಅಥವಾ ರಮ್ಯಕ ಮತ್ತು ಕೇತುಮಾಲ ಖಂಡಗಳಿವೆಯೆಂದೂ - ಒಟ್ಟು ನವಮಖಂಡಗಳೆಂದೂ ಹೇಳುತ್ತಾರೆ (೫) ನೀಲಪರ್ವತದ ಉತ್ತರದಲ್ಲಿ ಶ್ವೇತವರ್ಷ (೬) ಶ್ವೇತಪರ್ವತದ ಉತ್ತರದಲ್ಲಿ ಹೈರಣ್ಯಕವರ್ಷ (೭) ಶೃಂಗವತ್ಪರ್ವತದ ಸುತ್ತಲೂ ಇರುವುದು ಐರಾವತವರ್ಷ.

[5] ಭಾರತ ವರ್ಷದಿಂದ ಪ್ರಾರಂಭಿಸಿ ಅನುಕ್ರಮವಾಗಿ ಆ ಎಲ್ಲ ಖಂಡಗಳೂ ಉತ್ತರೋತ್ತರವಾಗಿ ಅತಿಶಯಿಸುತ್ತವೆ. ಭಾರತದಲ್ಲಿ ಆಯುಃಪ್ರಮಾಣವು ೧೨೦ ವರ್ಷಗಳಾದರೆ ಹೈಮವತಖಂಡದಲ್ಲಿ ಸಾವಿರ ವರ್ಷಗಳು. ಈ ರೀತಿ ಒಂದು ಖಂಡದಿಂದ ಮುತ್ತೊಂದು ಖಂಡಕ್ಕೆ ಆಯುರಾರೋಗ್ಯ ಧರ್ಮಕಾಮಾರ್ಥಗಳು ಅಧಿಕವಾಗುತ್ತಾ ಹೋಗುತ್ತವೆ.

Comments are closed.