ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೫೦
ಕಲಿಂಗ-ನಿಷಾದರೊಡನೆ ಭೀಮನ ಯುದ್ಧ (೧-೧೧೫).
06050001 ಧೃತರಾಷ್ಟ್ರ ಉವಾಚ|
06050001a ತಥಾ ಪ್ರತಿಸಮಾದಿಷ್ಟಃ ಕಲಿಂಗೋ ವಾಹಿನೀಪತಿಃ|
06050001c ಕಥಮದ್ಭುತಕರ್ಮಾಣಂ ಭೀಮಸೇನಂ ಮಹಾಬಲಂ||
06050002a ಚರಂತಂ ಗದಯಾ ವೀರಂ ದಂಡಪಾಣಿಮಿವಾಂತಕಂ|
06050002c ಯೋಧಯಾಮಾಸ ಸಮರೇ ಕಲಿಂಗಃ ಸಹ ಸೇನಯಾ||
ಧೃತರಾಷ್ಟ್ರನು ಹೇಳಿದನು: “ಹೀಗೆ ಆದೇಶಗೊಂಡ ಕಲಿಂಗ ವಾಹಿನೀಪತಿಯು ಸಮರದಲ್ಲಿ ಸೇನೆಯೊಂದಿಗೆ ದಂಡಪಾಣಿ ಅಂತಕನಂತೆ ಗದೆಯನ್ನು ತಿರುಗಿಸುವ ಅದ್ಭುತಕರ್ಮಿ ಮಹಾಬಲ ವೀರ ಭೀಮಸೇನನೊಂದಿಗೆ ಹೇಗೆ ಯುದ್ಧಮಾಡಿದನು?”
06050003 ಸಂಜಯ ಉವಾಚ|
06050003a ಪುತ್ರೇಣ ತವ ರಾಜೇಂದ್ರ ಸ ತಥೋಕ್ತೋ ಮಹಾಬಲಃ|
06050003c ಮಹತ್ಯಾ ಸೇನಯಾ ಗುಪ್ತಃ ಪ್ರಾಯಾದ್ಭೀಮರಥಂ ಪ್ರತಿ||
ಸಂಜಯನು ಹೇಳಿದನು: “ರಾಜೇಂದ್ರ! ನಿನ್ನ ಮಗನಿಂದ ಹಾಗೆ ಆದೇಶಗೊಂಡ ಮಹಾಬಲನು ಮಹಾಸೇನೆಯಿಂದ ರಕ್ಷಿತನಾಗಿ ಭೀಮನ ರಥದ ಬಳಿ ಬಂದನು.
06050004a ತಾಮಾಪತಂತೀಂ ಸಹಸಾ ಕಲಿಂಗಾನಾಂ ಮಹಾಚಮೂಂ|
06050004c ರಥನಾಗಾಶ್ವಕಲಿಲಾಂ ಪ್ರಗೃಹೀತಮಹಾಯುಧಾಂ||
06050005a ಭೀಮಸೇನಃ ಕಲಿಂಗಾನಾಮಾರ್ಚದ್ಭಾರತ ವಾಹಿನೀಂ|
06050005c ಕೇತುಮಂತಂ ಚ ನೈಷಾದಿಮಾಯಾಂತಂ ಸಹ ಚೇದಿಭಿಃ||
ಭಾರತ! ಮಹಾಯುಧಗಳನ್ನು ಹಿಡಿದು ರಥ-ಆನೆ-ಕುದುರೆಗಳಿಂದ ಕೂಡಿದ ಕಲಿಂಗ ಮಹಾಸೇನೆಯು ರಭಸದಿಂದ ತನ್ನ ಮೇಲೆ ಬೀಳಲು ಭೀಮಸೇನನು ಕಲಿಂಗರನ್ನು, ಮತ್ತು ಚೇದಿಗಳೊಡನೆ ಬಂದಿದ್ದ ನೈಷಾದೀ ಕೇತುಮಂತನನ್ನೂ ಪೀಡಿಸಿದನು.
06050006a ತತಃ ಶ್ರುತಾಯುಃ ಸಂಕ್ರುದ್ಧೋ ರಾಜ್ಞಾ ಕೇತುಮತಾ ಸಹ|
06050006c ಆಸಸಾದ ರಣೇ ಭೀಮಂ ವ್ಯೂಢಾನೀಕೇಷು ಚೇದಿಷು||
ಆಗ ಸಂಕ್ರುದ್ಧನಾದ ಶ್ರುತಾಯುವು ರಾಜಾ ಕೇತುಮತ ಮತ್ತು ಚೇದಿಸೇನೆಗಳೊಂದಿಗೆ ರಣದಲ್ಲಿ ಭೀಮನನ್ನು ಎದುರಿಸಿದನು.
06050007a ರಥೈರನೇಕಸಾಹಸ್ರೈಃ ಕಲಿಂಗಾನಾಂ ಜನಾಧಿಪಃ|
06050007c ಅಯುತೇನ ಗಜಾನಾಂ ಚ ನಿಷಾದೈಃ ಸಹ ಕೇತುಮಾನ್|
06050007e ಭೀಮಸೇನಂ ರಣೇ ರಾಜನ್ಸಮಂತಾತ್ಪರ್ಯವಾರಯತ್||
ರಾಜನ್! ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ, ಹತ್ತು ಸಾವಿರ ಆನೆಗಳೊಂದಿಗೆ, ಕೇತುಮಾನ ನಿಷಾದರೊಂದಿಗೆ ರಣದಲ್ಲಿ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
06050008a ಚೇದಿಮತ್ಸ್ಯಕರೂಷಾಶ್ಚ ಭೀಮಸೇನಪುರೋಗಮಾಃ|
06050008c ಅಭ್ಯವರ್ತಂತ ಸಹಸಾ ನಿಷಾದಾನ್ಸಹ ರಾಜಭಿಃ||
ಭೀಮಸೇನನನ್ನು ಮುಂದಿಟ್ಟುಕೊಂಡು ಚೇದಿ-ಮತ್ಸ್ಯ-ಕರೂಷರು ತಕ್ಷಣವೇ ಬಂದು ರಾಜರೊಂದಿಗೆ ನಿಷಾದರನ್ನು ಎದುರಿಸಿದರು.
06050009a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾನಕಂ|
06050009c ಪ್ರಜಾನನ್ನ ಚ ಯೋಧಾನ್ಸ್ವಾನ್ಪರಸ್ಪರಜಿಘಾಂಸಯಾ||
ಆಗ ಘೋರರೂಪವಾದ ಭಯಾನಕ ಯುದ್ಧವು ನಡೆಯಿತು. ಪರಸ್ಪರರನ್ನು ಕೊಲ್ಲಲು ಬಯಸುತ್ತಿದ್ದ ಸೈನಿಕರು ಅವರು ತಮ್ಮವರೋ ಅಥವಾ ಶತ್ರುಗಳೋ ಎಂದೂ ಯೋಚಿಸುತ್ತಿರಲಿಲ್ಲ.
06050010a ಘೋರಮಾಸೀತ್ತತೋ ಯುದ್ಧಂ ಭೀಮಸ್ಯ ಸಹಸಾ ಪರೈಃ|
06050010c ಯಥೇಂದ್ರಸ್ಯ ಮಹಾರಾಜ ಮಹತ್ಯಾ ದೈತ್ಯಸೇನಯಾ||
ಮಹಾರಾಜ! ಶತ್ರುಗಳೊಂದಿಗೆ ಭೀಮನು ಮಾಡಿದ ಯುದ್ಧವು ಇಂದ್ರನು ಮಹಾ ದೈತ್ಯಸೇನೆಯೊಡನೆ ಮಾಡಿದಂತೆ ಘೋರವಾಗಿತ್ತು.
06050011a ತಸ್ಯ ಸೈನ್ಯಸ್ಯ ಸಂಗ್ರಾಮೇ ಯುಧ್ಯಮಾನಸ್ಯ ಭಾರತ|
06050011c ಬಭೂವ ಸುಮಹಾಂ ಶಬ್ದಃ ಸಾಗರಸ್ಯೇವ ಗರ್ಜತಃ||
ಭಾರತ! ಸಂಗ್ರಾಮದಲ್ಲಿ ಅವನು ಸೈನ್ಯದೊಂದಿಗೆ ಯುದ್ಧಮಾಡುವಾಗ ಸಾಗರವೇ ಗರ್ಜಿಸುತ್ತಿದೆಯೋ ಎನ್ನುವಂತೆ ಮಹಾ ಶಬ್ಧವುಂಟಾಯಿತು.
06050012a ಅನ್ಯೋನ್ಯಸ್ಯ ತದಾ ಯೋಧಾ ನಿಕೃಂತಂತೋ ವಿಶಾಂ ಪತೇ|
06050012c ಮಹೀಂ ಚಕ್ರುಶ್ಚಿತಾಂ ಸರ್ವಾಂ ಶಶಶೋಣಿತಸಮ್ನಿಭಾಂ||
ವಿಶಾಂಪತೇ! ಅನ್ಯೋನ್ಯರನ್ನು ಕತ್ತರಿಸುತ್ತಾ ಯೋಧರು ಭೂಮಿಯನ್ನೇ ಮೊಲದ ರಕ್ತದಂತೆ ಚಿತೆಯನ್ನಾಗಿ ಮಾಡಿದರು.
06050013a ಯೋಧಾಂಶ್ಚ ಸ್ವಾನ್ಪರಾನ್ವಾಪಿ ನಾಭ್ಯಜಾನಂ ಜಿಘಾಂಸಯಾ|
06050013c ಸ್ವಾನಪ್ಯಾದದತೇ ಸ್ವಾಶ್ಚ ಶೂರಾಃ ಸಮರದುರ್ಜಯಾಃ||
ಯೋಧರು ತಮ್ಮವರು ಅಥವಾ ಪರರು ಯಾರು ಎಂದು ತಿಳಿದುಕೊಳ್ಳದೆಯೇ ಸಂಹರಿಸುತ್ತಿದ್ದರು. ಆ ಸಮರ ದುರ್ಜಯ ಶೂರರು ಕೈಗೆ ಸಿಕ್ಕಿದವರನ್ನು, ತಮ್ಮವರೇ ಆಗಿದ್ದರೂ, ಕೊಲ್ಲುತ್ತಿದ್ದರು.
06050014a ವಿಮರ್ದಃ ಸುಮಹಾನಾಸೀದಲ್ಪಾನಾಂ ಬಹುಭಿಃ ಸಹ|
06050014c ಕಲಿಂಗೈಃ ಸಹ ಚೇದೀನಾಂ ನಿಷಾದೈಶ್ಚ ವಿಶಾಂ ಪತೇ||
ವಿಶಾಂಪತೇ! ಹೀಗೆ ಅತಿ ದೊಡ್ಡದಾದ ಕಲಿಂಗ, ನಿಷಾದ ಮತ್ತು ಚೇದಿ ಸೇನೆಗಳೊಡನೆ ಅಲ್ಪರ ಮಹಾ ಯುದ್ಧವು ನಡೆಯಿತು.
06050015a ಕೃತ್ವಾ ಪುರುಷಕಾರಂ ತು ಯಥಾಶಕ್ತಿ ಮಹಾಬಲಾಃ|
06050015c ಭೀಮಸೇನಂ ಪರಿತ್ಯಜ್ಯ ಸಮ್ನ್ಯವರ್ತಂತ ಚೇದಯಃ||
ಯಥಾಶಕ್ತಿ ಪೌರುಷವನ್ನು ತೋರಿಸಿ ಮಹಾಬಲ ಚೇದಯರು ಭೀಮಸೇನನನ್ನು ಬಿಟ್ಟು ಪಲಾಯನ ಮಾಡಿದರು.
06050016a ಸರ್ವೈಃ ಕಲಿಂಗೈರಾಸನ್ನಃ ಸಮ್ನಿವೃತ್ತೇಷು ಚೇದಿಷು|
06050016c ಸ್ವಬಾಹುಬಲಮಾಸ್ಥಾಯ ನ ನ್ಯವರ್ತತ ಪಾಂಡವಃ||
ಚೇದಿಯೋಧರು ಹಿಮ್ಮೆಟ್ಟಲು ಪಾಂಡವನು ಸ್ವಬಾಹುಬಲವನ್ನು ಆಶ್ರಯಿಸಿ ಸರ್ವ ಕಲಿಂಗರನ್ನೂ ತಡೆದನು.
06050017a ನ ಚಚಾಲ ರಥೋಪಸ್ಥಾದ್ಭೀಮಸೇನೋ ಮಹಾಬಲಃ|
06050017c ಶಿತೈರವಾಕಿರನ್ಬಾಣೈಃ ಕಲಿಂಗಾನಾಂ ವರೂಥಿನೀಂ||
ರಥದಲ್ಲಿದ್ದ ಮಹಾಬಲ ಭೀಮಸೇನನು ಕಲಿಂಗರ ಸೇನೆಯು ಹರಿತ ಬಾಣಗಳ ಮಳೆಸುರಿಸುತ್ತಿದ್ದರೂ ವಿಚಲಿತನಾಗಲ್ಲ.
06050018a ಕಲಿಂಗಸ್ತು ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ|
06050018c ಶಕ್ರದೇವ ಇತಿ ಖ್ಯಾತೋ ಜಘ್ನತುಃ ಪಾಂಡವಂ ಶರೈಃ||
ಶಕ್ರದೇವನೆಂದು ಖ್ಯಾತನಾದ ಕಲಿಂಗನ ಮಗ ಮಹಾರಥ ಮಹೇಷ್ವಾಸನು ಪಾಂಡವನನ್ನು ಶರಗಳಿಂದ ಹೊಡೆದನು.
06050019a ತತೋ ಭೀಮೋ ಮಹಾಬಾಹುರ್ವಿಧುನ್ವನ್ರುಚಿರಂ ಧನುಃ|
06050019c ಯೋಧಯಾಮಾಸ ಕಾಲಿಂಗಾನ್ಸ್ವಬಾಹುಬಲಮಾಶ್ರಿತಃ||
ಆಗ ಮಹಾಬಾಹು ಭೀಮನು ಸುಂದರ ಧನುಸ್ಸನ್ನು ಠೇಂಕರಿಸಿ ಸ್ವಬಾಹುಬಲವನ್ನು ಆಶ್ರಯಿಸಿ ಕಲಿಂಗರೊಂದಿಗೆ ಯುದ್ಧಮಾಡಿದನು.
06050020a ಶಕ್ರದೇವಸ್ತು ಸಮರೇ ವಿಸೃಜನ್ಸಾಯಕಾನ್ಬಹೂನ್|
06050020c ಅಶ್ವಾಂ ಜಘಾನ ಸಮರೇ ಭೀಮಸೇನಸ್ಯ ಸಾಯಕೈಃ|
06050020e ವವರ್ಷ ಶರವರ್ಷಾಣಿ ತಪಾಂತೇ ಜಲದೋ ಯಥಾ||
ಶಕ್ರದೇವನು ಸಮರದಲ್ಲಿ ಅನೇಕ ಸಾಯಕಗಳನ್ನು ಬಿಟ್ಟು ಭೀಮಸೇನನ ಕುದುರೆಗಳನ್ನು ಕೊಂದನು ಮತ್ತು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಸಮರದಲ್ಲಿ ಸಾಯಕಗಳ ಶರವರ್ಷಗಳನ್ನು ಸುರಿಸಿದನು.
06050021a ಹತಾಶ್ವೇ ತು ರಥೇ ತಿಷ್ಠನ್ಭೀಮಸೇನೋ ಮಹಾಬಲಃ|
06050021c ಶಕ್ರದೇವಾಯ ಚಿಕ್ಷೇಪ ಸರ್ವಶೈಕ್ಯಾಯಸೀಂ ಗದಾಂ||
ಕುದುರೆಗಳು ಸತ್ತರೂ ರಥದ ಮೇಲೆ ನಿಂತು ಮಹಾಬಲ ಭೀಮಸೇನನು ಲೋಹಮಯ ಗದೆಯನ್ನು ಶಕ್ತಿಯನ್ನೆಲ್ಲ ಉಪಯೋಗಿಸಿ ಶಕ್ರದೇವನ ಮೇಲೆ ಎಸೆದನು.
06050022a ಸ ತಯಾ ನಿಹತೋ ರಾಜನ್ಕಲಿಂಗಸ್ಯ ಸುತೋ ರಥಾತ್|
06050022c ಸಧ್ವಜಃ ಸಹ ಸೂತೇನ ಜಗಾಮ ಧರಣೀತಲಂ||
ರಾಜನ್! ಕಲಿಂಗನ ಮಗನು ಅವನಿಂದ ಹತನಾಗಿ ಧ್ವಜ-ಸೂತರೊಂದಿಗೆ ರಥದಿಂದ ಧರಣೀತಲಕ್ಕೆ ಬಿದ್ದನು.
06050023a ಹತಮಾತ್ಮಸುತಂ ದೃಷ್ಟ್ವಾ ಕಲಿಂಗಾನಾಂ ಜನಾಧಿಪಃ|
06050023c ರಥೈರನೇಕಸಾಹಸ್ರೈರ್ಭಿಮಸ್ಯಾವಾರಯದ್ದಿಶಃ||
ತನ್ನ ಮಗನು ತೀರಿಕೊಂಡಿದುದನ್ನು ಕಂಡು ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
06050024a ತತೋ ಭೀಮೋ ಮಹಾಬಾಹುರ್ಗುರ್ವೀಂ ತ್ಯಕ್ತ್ವಾ ಮಹಾಗದಾಂ|
06050024c ಉದ್ಬಬರ್ಹಾಥ ನಿಸ್ತ್ರಿಂಶಂ ಚಿಕೀರ್ಷುಃ ಕರ್ಮ ದಾರುಣಂ||
06050025a ಚರ್ಮ ಚಾಪ್ರತಿಮಂ ರಾಜನ್ನಾರ್ಷಭಂ ಪುರುಷರ್ಷಭ|
06050025c ನಕ್ಷತ್ರೈರರ್ಧಚಂದ್ರೈಶ್ಚ ಶಾತಕುಂಭಮಯೈಶ್ಚಿತಂ||
ರಾಜನ್! ಆಗ ಮಹಾಬಾಹು ಭೀಮನು ದಾರುಣ ಕರ್ಮವನ್ನು ಮಾಡಲೆಸಗಿ ಭಾರವಾದ ಮಹಾಗದೆಯನ್ನು ಬಿಟ್ಟು ಖಡ್ಗವನ್ನೂ ಅಪ್ರತಿಮವಾಗಿದ್ದ ನಕ್ಷತ್ರ-ಅರ್ಧಚಂದ್ರಗಳ ಮತ್ತು ನೂರುಕುಂಭಗಳ ಚಿತ್ರವಿರುವ ಗುರಾಣಿಯನ್ನು ಹಿಡಿದು ಕೆಳಗಿಳಿದನು.
06050026a ಕಲಿಂಗಸ್ತು ತತಃ ಕ್ರುದ್ಧೋ ಧನುರ್ಜ್ಯಾಮವಮೃಜ್ಯ ಹ|
06050026c ಪ್ರಗೃಹ್ಯ ಚ ಶರಂ ಘೋರಮೇಕಂ ಸರ್ಪವಿಷೋಪಮಂ|
06050026e ಪ್ರಾಹಿಣೋದ್ಭೀಮಸೇನಾಯ ವಧಾಕಾಂಕ್ಷೀ ಜನೇಶ್ವರಃ||
ಆಗ ಕಲಿಂಗ ಜನೇಶ್ವರನು ಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸಿ ಘೋರ ಸರ್ಪವಿಷೋಪಮ ಬಾಣವೊಂದನ್ನು ಹಿಡಿದು ಭೀಮಸೇನನ ವಧಾಕಾಂಕ್ಷಿಯಾಗಿ ಪ್ರಯೋಗಿಸಿದನು.
06050027a ತಮಾಪತಂತಂ ವೇಗೇನ ಪ್ರೇರಿತಂ ನಿಶಿತಂ ಶರಂ|
06050027c ಭೀಮಸೇನೋ ದ್ವಿಧಾ ರಾಜಂಶ್ಚಿಚ್ಛೇದ ವಿಪುಲಾಸಿನಾ|
06050027e ಉದಕ್ರೋಶಚ್ಚ ಸಂಹೃಷ್ಟಸ್ತ್ರಾಸಯಾನೋ ವರೂಥಿನೀಂ||
ರಾಜನ್! ವೇಗದಿಂದ ಬಂದು ಬೀಳುತ್ತಿದ್ದ ಆ ನಿಶಿತ ಶರದಿಂದ ಪ್ರೇರಿತನಾಗಿ ಭೀಮಸೇನನು ಅದನ್ನು ವಿಪುಲ ಖಡ್ಗದಿಂದ ಎರಡಾಗಿ ತುಂಡರಿಸಿದನು. ಸಂಹೃಷ್ಟನಾಗಿ ಜೋರಾಗಿ ಸಿಂಹನಾದಗೈದು ಸೇನೆಗಳನ್ನು ತತ್ತರಿಸುವಂತೆ ಮಾಡಿದನು.
06050028a ಕಲಿಂಗಸ್ತು ತತಃ ಕ್ರುದ್ಧೋ ಭೀಮಸೇನಾಯ ಸಂಯುಗೇ|
06050028c ತೋಮರಾನ್ಪ್ರಾಹಿಣೋಚ್ಚೀಘ್ರಂ ಚತುರ್ದಶ ಶಿಲಾಶಿತಾನ್||
ಆಗ ಕ್ರುದ್ಧನಾದ ಕಲಿಂಗನು ಸಂಯುಗದಲ್ಲಿ ಭೀಮಸೇನನ ಮೇಲೆ ಹದಿನಾಲ್ಕು ಶೀಘ್ರವಾದ, ಶಿಲಾಶಿತ ತೋಮರಗಳನ್ನು ಪ್ರಯೋಗಿಸಿದನು.
06050029a ತಾನಪ್ರಾಪ್ತಾನ್ಮಹಾಬಾಹುಃ ಖಗತಾನೇವ ಪಾಂಡವಃ|
06050029c ಚಿಚ್ಛೇದ ಸಹಸಾ ರಾಜನ್ನಸಂಭ್ರಾಂತೋ ವರಾಸಿನಾ||
ರಾಜನ್! ಅವುಗಳು ತಲುಪುವುದರೊಳಗೆ ಆಕಾಶಮಾರ್ಗದಲ್ಲಿರುವಾಗಲೇ ಪಾಂಡವನು ಸಂಭ್ರಾಂತನಾಗಿ ಶ್ರೇಷ್ಠ ಖಡ್ಗದಿಂದ ತಕ್ಷಣವೇ ತುಂಡುಮಾಡಿದನು.
06050030a ನಿಕೃತ್ಯ ತು ರಣೇ ಭೀಮಸ್ತೋಮರಾನ್ವೈ ಚತುರ್ದಶ|
06050030c ಭಾನುಮಂತಮಭಿಪ್ರೇಕ್ಷ್ಯ ಪ್ರಾದ್ರವತ್ಪುರುಷರ್ಷಭಃ||
ರಣದಲ್ಲಿ ಆ ಹದಿನಾಲ್ಕು ತೋಮರಗಳನ್ನು ಕತ್ತರಿಸಿ ಪುರುರ್ಷಭ ಭೀಮನು ಭಾನುಮಂತನನ್ನು ನೋಡಿ ಧಾವಿಸಿ ಬಂದನು.
06050031a ಭಾನುಮಾಂಸ್ತು ತತೋ ಭೀಮಂ ಶರವರ್ಷೇಣ ಚಾದಯನ್|
06050031c ನನಾದ ಬಲವನ್ನಾದಂ ನಾದಯಾನೋ ನಭಸ್ತಲಂ||
ಆಗ ಭಾನುಮಂತನು ಭೀಮನನ್ನು ಶರವರ್ಷಗಳಿಂದ ಹೊಡೆದು ನಭಸ್ಥಲವನ್ನೂ ಮೊಳಗಿಸುವ ಬಲವತ್ತಾದ ಸಿಂಹನಾದವನ್ನು ಕೂಗಿದನು.
06050032a ನ ತಂ ಸ ಮಮೃಷೇ ಭೀಮಃ ಸಿಂಹನಾದಂ ಮಹಾರಣೇ|
06050032c ತತಃ ಸ್ವರೇಣ ಮಹತಾ ವಿನನಾದ ಮಹಾಸ್ವನಂ||
ಮಹಾರಣದಲ್ಲಿ ಅವನ ಸಿಂಹನಾದವನ್ನು ಸಹಿಸದೇ ಭೀಮನು ಮಹಾ ಸ್ವರದಲ್ಲಿ ಮಹಾಸ್ವನ ಸಿಂಹನಾದವನ್ನು ಮಾಡಿದನು.
06050033a ತೇನ ಶಬ್ದೇನ ವಿತ್ರಸ್ತಾ ಕಲಿಂಗಾನಾಂ ವರೂಥಿನೀ|
06050033c ನ ಭೀಮಂ ಸಮರೇ ಮೇನೇ ಮಾನುಷಂ ಭರತರ್ಷಭ||
ಭರತರ್ಷಭ! ಅವನ ಶಬ್ಧದಿಂದ ವಿತ್ರಸ್ತರಾದ ಕಲಿಂಗರ ಸೇನೆಯು ಸಮರದಲ್ಲಿ ಭೀಮನು ಮನುಷ್ಯನಲ್ಲವೆಂದು ಅಭಿಪ್ರಾಯಪಟ್ಟಿತು.
06050034a ತತೋ ಭೀಮೋ ಮಹಾರಾಜ ನದಿತ್ವಾ ವಿಪುಲಂ ಸ್ವನಂ|
06050034c ಸಾಸಿರ್ವೇಗಾದವಪ್ಲುತ್ಯ ದಂತಾಭ್ಯಾಂ ವಾರಣೋತ್ತಮಂ||
06050035a ಆರುರೋಹ ತತೋ ಮಧ್ಯಂ ನಾಗರಾಜಸ್ಯ ಮಾರಿಷ|
06050035c ಖಡ್ಗೇನ ಪೃಥುನಾ ಮಧ್ಯೇ ಭಾನುಮಂತಮಥಾಚ್ಛಿನತ್||
ಮಹಾರಾಜ! ಆಗ ಭೀಮನು ವಿಪುಲ ಸ್ವರದಲ್ಲಿ ಕೂಗಿ, ವೇಗವಾಗಿ ಉತ್ತಮ ಆನೆಯ ಎರಡೂ ದಂತಗಳನ್ನು ಬಲವಾಗಿ ಹಿಡಿದು ಛಂಗನೆ ಗಜರಾಜನ ಮೇಲೆ ಹಾರಿ ಹೋಗಿ ಮಹಾ ಖಡ್ಗದಿಂದ ಭಾನುಮಂತನನ್ನು ಮಧ್ಯದಲ್ಲಿಯೇ ಕತ್ತರಿಸಿದನು.
06050036a ಸೋಽಂತರಾಯುಧಿನಂ ಹತ್ವಾ ರಾಜಪುತ್ರಮರಿಂದಮಃ|
06050036c ಗುರುಭಾರಸಹಸ್ಕಂಧೇ ನಾಗಸ್ಯಾಸಿಮಪಾತಯತ್||
ಆ ಯೋಧ ರಾಜಪುತ್ರನನ್ನು ಸಂಹರಿಸಿದ ಅರಿಂದಮನು ಅತಿಭಾರವಾದ ಖಡ್ಗವನ್ನು ಆನೆಯ ಮೇಲೆ ಪ್ರಯೋಗಿಸಿ ಅದನ್ನೂ ಬೀಳಿಸಿದನು.
06050037a ಚಿನ್ನಸ್ಕಂಧಃ ಸ ವಿನದನ್ಪಪಾತ ಗಜಯೂಥಪಃ|
06050037c ಆರುಗ್ಣಃ ಸಿಂಧುವೇಗೇನ ಸಾನುಮಾನಿವ ಪರ್ವತಃ||
ಭುಜಗಳು ತುಂಡಾಗಲು ಆ ಗಜಯೂಥಪವು ಸಿಂಧುವೇಗದಿಂದ ಕೊರೆಯಲ್ಪಟ್ಟು ಬೀಳುವ ಪರ್ವತದಂತೆ ಕೂಗಿ ಬಿದ್ದಿತು.
06050038a ತತಸ್ತಸ್ಮಾದವಪ್ಲುತ್ಯ ಗಜಾದ್ಭಾರತ ಭಾರತಃ|
06050038c ಖಡ್ಗಪಾಣಿರದೀನಾತ್ಮಾ ಅತಿಷ್ಠದ್ಭುವಿ ದಂಶಿತಃ||
ಭಾರತ! ಅದು ಕೆಳಗೆ ಬೀಳುವುದರೊಳಗೆ ಭಾರತನು ಆನೆಯಿಂದ ಕೆಳಗೆ ಹಾರಿ ಖಡ್ಗವನ್ನು ಹಿಡಿದುಕೊಂಡೇ ಅದೀನಾತ್ಮನಾಗಿ ಕವಚಗಳನ್ನು ಧರಿಸಿ ನೆಲದ ಮೇಲೆ ನಿಂತನು.
06050039a ಸ ಚಚಾರ ಬಹೂನ್ಮಾರ್ಗಾನಭೀತಃ ಪಾತಯನ್ಗಜಾನ್|
06050039c ಅಗ್ನಿಚಕ್ರಮಿವಾವಿದ್ಧಂ ಸರ್ವತಃ ಪ್ರತ್ಯದೃಶ್ಯತ||
ಆಗ ಅನೇಕ ಮಾರ್ಗಗಳಲ್ಲಿ ಭಯವಿಲ್ಲದೇ ಚಲಿಸುತ್ತಾ ಅನೇಕ ಆನೆಗಳನ್ನು ಬೀಳಿಸಿದನು. ಅವನು ಅಗ್ನಿಚಕ್ರದಂತೆ ಎಲ್ಲಕಡೆ ಕಡಿಯುತ್ತಿರುವುದು ಕಂಡುಬಂದಿತು.
06050040a ಅಶ್ವವೃಂದೇಷು ನಾಗೇಷು ರಥಾನೀಕೇಷು ಚಾಭಿಭೂಃ|
06050040c ಪದಾತೀನಾಂ ಚ ಸಂಘೇಷು ವಿನಿಘ್ನಂ ಶೋಣಿತೋಕ್ಷಿತಃ||
ಅಶ್ವವೃಂದಗಳನ್ನೂ, ಆನೆಗಳನ್ನೂ, ರಥಾನೀಕಗಳನ್ನು, ಪದಾತಿಗಳ ಸಂಕುಲಗಳನ್ನೂ ಸಂಹರಿಸಿ ರಕ್ತದಿಂದ ತೋಯ್ದು ಹೋದನು.
06050040e ಶ್ಯೇನವದ್ವ್ಯಚರದ್ಭೀಮೋ ರಣೇ ರಿಪುಬಲೋತ್ಕಟಃ||
06050041a ಚಿಂದಂಸ್ತೇಷಾಂ ಶರೀರಾಣಿ ಶಿರಾಂಸಿ ಚ ಮಹಾಜವಃ|
ರಿಪುಬಲೋತ್ಕಟ ಮಹಾವೇಗೀ ಭೀಮನು ರಣದಲ್ಲಿ ಗಿಡುಗದಂತೆ ಸಂಚರಿಸಿ ಅವರ ಶರೀರ-ಶಿರಗಳನ್ನು ಕತ್ತರಿಸಿದನು.
06050041c ಖಡ್ಗೇನ ಶಿತಧಾರೇಣ ಸಂಯುಗೇ ಗಜಯೋಧಿನಾಂ||
06050042a ಪದಾತಿರೇಕಃ ಸಂಕ್ರುದ್ಧಃ ಶತ್ರೂಣಾಂ ಭಯವರ್ಧನಃ|
06050042c ಮೋಹಯಾಮಾಸ ಚ ತದಾ ಕಾಲಾಂತಕಯಮೋಪಮಃ||
ಸಂಯುಗದಲ್ಲಿ ಶತ್ರುಗಳ ಭಯವರ್ಧಕ ಭೀಮನು ಹರಿತ ಖಡ್ಗದಿಂದ ಒಬ್ಬನೇ ಕಾಲ್ನಡುಗೆಯಲ್ಲಿಯೇ ಗಜಯೋಧಿಗಳನ್ನು ಕೊಲ್ಲುತ್ತಾ ಕಾಲಾಂತಕನಂತೆ ಅವರನ್ನು ಭಯದಿಂದ ಮೋಹಗೊಳಿಸಿದನು.
06050043a ಮೂಢಾಶ್ಚ ತೇ ತಮೇವಾಜೌ ವಿನದಂತಃ ಸಮಾದ್ರವನ್|
06050043c ಸಾಸಿಮುತ್ತಮವೇಗೇನ ವಿಚರಂತಂ ಮಹಾರಣೇ||
ಆ ಮೂಢರು ಜೋರಾಗಿ ಕೂಗಿಕೊಳ್ಳುತ್ತಾ ಅವನ ಮೇಲೆ ಎರಗುತ್ತಿದ್ದರು. ಅವನು ಉತ್ತಮ ವೇಗದಿಂದ ಮಹಾರಣದಲ್ಲಿ ಸಂಚರಿಸುತ್ತಿದ್ದನು.
06050044a ನಿಕೃತ್ಯ ರಥಿನಾಮಾಜೌ ರಥೇಷಾಶ್ಚ ಯುಗಾನಿ ಚ|
06050044c ಜಘಾನ ರಥಿನಶ್ಚಾಪಿ ಬಲವಾನರಿಮರ್ದನಃ||
ರಥಿಗಳನ್ನೂ ರಥಸಂಕುಲಗಳನ್ನು ಆ ಬಲವಾನ ಅರಿಮರ್ದಮನು ಕತ್ತರಿಸಿ ಸಂಹರಿಸಿದನು.
06050045a ಭೀಮಸೇನಶ್ಚರನ್ಮಾರ್ಗಾನ್ಸುಬಹೂನ್ಪ್ರತ್ಯದೃಶ್ಯತ|
06050045c ಭ್ರಾಂತಮುದ್ಭ್ರಾಂತಮಾವಿದ್ಧಮಾಪ್ಲುತಂ ಪ್ರಸೃತಂ ಸೃತಂ|
06050045e ಸಂಪಾತಂ ಸಮುದೀರ್ಯಂ ಚ ದರ್ಶಯಾಮಾಸ ಪಾಂಡವಃ||
ಪಾಂಡವ ಭೀಮಸೇನನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿರುವಂತೆ ಕಾಣುತ್ತಿತ್ತು. ಅವನು ಭ್ರಾಂತ, ಉದ್ಭ್ರಾಂತ, ಅವಿದ್ಧ, ಆಪ್ಲುತ, ಪ್ರಸೃತ, ಸೃತ, ಸಂಪಾತ, ಸಮುದೀರ್ಣ ಮುಂತಾದ ವರಸೆಗಳನ್ನು[1] ಪ್ರದರ್ಶಿಸಿದನು.
06050046a ಕೇ ಚಿದಗ್ರಾಸಿನಾ ಚಿನ್ನಾಃ ಪಾಂಡವೇನ ಮಹಾತ್ಮನಾ|
06050046c ವಿನೇದುರ್ಭಿನ್ನಮರ್ಮಾಣೋ ನಿಪೇತುಶ್ಚ ಗತಾಸವಃ||
ಕೆಲವರನ್ನು ಮಹಾತ್ಮ ಪಾಂಡವನು ಖಡ್ಗದಿಂದ ಕತ್ತರಿಸಿದರೆ ಇನ್ನು ಕೆಲವರನ್ನು ಮರ್ಮಗಳನ್ನು ಭೇದಿಸಿ ಕೆಳಗೆ ಬೀಳಿಸಿ ಅಸುನೀಗಿಸುತ್ತಿದ್ದನು.
06050047a ಚಿನ್ನದಂತಾಗ್ರಹಸ್ತಾಶ್ಚ ಭಿನ್ನಕುಂಭಾಸ್ತಥಾಪರೇ|
06050047c ವಿಯೋಧಾಃ ಸ್ವಾನ್ಯನೀಕಾನಿ ಜಘ್ನುರ್ಭಾರತ ವಾರಣಾಃ|
06050047e ನಿಪೇತುರುರ್ವ್ಯಾಂ ಚ ತಥಾ ವಿನದಂತೋ ಮಹಾರವಾನ್||
ಆನೆಗಳ ದಂತ ಸೊಂಡಿಲುಗಳು ತುಂಡಾದವು. ಇತರ ಆನೆಗಳ ಕುಂಭಸ್ಥಲಗಳು ಒಡೆದವು. ಭಾರತ! ಇಂತಹ ಆನೆಗಳು ನೋವನ್ನು ತಡೆಯಲಾರದೇ ತಮ್ಮದೇ ಸೇನೆಗಳ ಮೇಲೆ ಎರಗಿ ಮಹಾರವವನ್ನು ಕೂಗಿ ಸೈನಿಕರನ್ನು ಸಂಹರಿಸುತ್ತಿದ್ದವು.
06050048a ಚಿನ್ನಾಂಶ್ಚ ತೋಮರಾಂಶ್ಚಾಪಾನ್ಮಹಾಮಾತ್ರಶಿರಾಂಸಿ ಚ|
06050048c ಪರಿಸ್ತೋಮಾನಿ ಚಿತ್ರಾಣಿ ಕಕ್ಷ್ಯಾಶ್ಚ ಕನಕೋಜ್ಜ್ವಲಾಃ||
06050049a ಗ್ರೈವೇಯಾಣ್ಯಥ ಶಕ್ತೀಶ್ಚ ಪತಾಕಾಃ ಕಣಪಾಂಸ್ತಥಾ|
06050049c ತೂಣೀರಾಣ್ಯಥ ಯಂತ್ರಾಣಿ ವಿಚಿತ್ರಾಣಿ ಧನೂಂಷಿ ಚ||
06050050a ಅಗ್ನಿಕುಂಡಾನಿ ಶುಭ್ರಾಣಿ ತೋತ್ತ್ರಾಂಶ್ಚೈವಾಂಕುಶೈಃ ಸಹ|
06050050c ಘಂಟಾಶ್ಚ ವಿವಿಧಾ ರಾಜನ್ ಹೇಮಗರ್ಭಾಂಸ್ತ್ಸರೂನಪಿ|
06050050e ಪತತಃ ಪತಿತಾಂಶ್ಚೈವ ಪಶ್ಯಾಮಃ ಸಹ ಸಾದಿಭಿಃ||
ರಾಜನ್! ಕತ್ತರಿಸಿ ಬಿದ್ದಿದ್ದ ತೋಮರಗಳು, ಧನುಸ್ಸುಗಳು, ಮಹಾಗಾತ್ರದ ಶಿರಗಳು, ಚಿತ್ರವಿಚಿತ್ರವಾಗಿದ್ದ ಬಂಗಾರದದಾರಗಳಿಂದ ಉಜ್ವಲವಾಗಿದ್ದ ಆನೆಗಳ ನಡುವಿಗೆ ಕಟ್ಟುವ ಹಗ್ಗಗಳು, ಕಂಠಾಭರಣಗಳು, ಶಕ್ತಿ, ಪತಾಕೆ, ಕಣಪಗಳು, ತೂಣೀರಗಳು, ವಿಚಿತ್ರ ಯಂತ್ರಗಳು, ಧನುಸ್ಸುಗಳು, ಶುಭ್ರ ಅಗ್ನಿಕುಂಡಗಳು, ಚಾವಟಿಗಳು, ಅಂಕುಶಗಳು, ವಿವಿಧ ಗಂಟೆಗಳು, ಸುವರ್ಣಖಚಿತ ಖಡ್ಗ-ಋಷ್ಟಿಗಳು, ಬಿದ್ದ ಮತ್ತು ಬೀಳುತ್ತಿರುವ ಮಾವುತರು ಎಲ್ಲವನ್ನೂ ಒಟ್ಟಿಗೇ ನೋಡಿದೆವು.
06050051a ಚಿನ್ನಗಾತ್ರಾವರಕರೈರ್ನಿಹತೈಶ್ಚಾಪಿ ವಾರಣೈಃ|
06050051c ಆಸೀತ್ತಸ್ಮಿನ್ಸಮಾಸ್ತೀರ್ಣಾ ಪತಿತೈರ್ಭೂರ್ನಗೈರಿವ||
ದೇಹ ಮತ್ತು ಶ್ರೇಷ್ಠ ಸೊಂಡಿಲುಗಳು ಕತ್ತರಿಸಲ್ಪಟ್ಟು ಸತ್ತು ಬಿದ್ದಿದ್ದ ಆನೆಗಳ ರಾಶಿಗಳಿಂದ ಕೆಳಕ್ಕೆ ಕುಸಿದು ಹರಡಿಕೊಂಡಿರುವಂತೆ ರಣಭೂಮಿಯು ವ್ಯಾಪ್ತವಾಗಿ ಕಾಣುತ್ತಿತ್ತು.
06050052a ವಿಮೃದ್ಯೈವಂ ಮಹಾನಾಗಾನ್ಮಮರ್ದಾಶ್ವಾನ್ನರರ್ಷಭಃ|
06050052c ಅಶ್ವಾರೋಹವರಾಂಶ್ಚಾಪಿ ಪಾತಯಾಮಾಸ ಭಾರತ||
06050052e ತದ್ಘೋರಮಭವದ್ಯುದ್ಧಂ ತಸ್ಯ ತೇಷಾಂ ಚ ಭಾರತ||
ಭಾರತ! ಹೀಗೆ ಮಹಾಗಜಗಳನ್ನು ಮರ್ದಿಸಿ ನರರ್ಷಭನು ಅಶ್ವಗಳನ್ನೂ ಅಶ್ವಾರೋಹಿಗಳನ್ನೂ ಬೀಳಿಸತೊಡಗಿದನು. ಭಾರತ! ಆಗ ಅವನ ಮತ್ತು ಅವರ ಮಧ್ಯೆ ಘೋರ ಯುದ್ಧವು ನಡೆಯಿತು.
06050053a ಖಲೀನಾನ್ಯಥ ಯೋಕ್ತ್ರಾಣಿ ಕಶಾಶ್ಚ ಕನಕೋಜ್ಜ್ವಲಾಃ|
06050053c ಪರಿಸ್ತೋಮಾಶ್ಚ ಪ್ರಾಸಾಶ್ಚ ಋಷ್ಟಯಶ್ಚ ಮಹಾಧನಾಃ||
06050054a ಕವಚಾನ್ಯಥ ಚರ್ಮಾಣಿ ಚಿತ್ರಾಣ್ಯಾಸ್ತರಣಾನಿ ಚ|
06050054c ತತ್ರ ತತ್ರಾಪವಿದ್ಧಾನಿ ವ್ಯದೃಶ್ಯಂತ ಮಹಾಹವೇ||
ಆಗ ಕುದುರೆಗಳ ಲಗಾಮು, ಕಟ್ಟುವ ಹಗ್ಗ, ಜೀನು, ಪ್ರಾಸ, ಅಮೂಲ್ಯ ಋಷ್ಟಿಗಳು, ಕವಚಗಳು, ಗುರಾಣಿಗಳು, ಬಣ್ಣಬಣ್ಣದ ಕಂಬಳಿಗಳು ಅಲ್ಲಲ್ಲಿ ಮಹಾಹವದಲ್ಲಿ ಚದುರಿ ಬಿದ್ದಿರುವುದು ಕಂಡುಬಂದಿತು.
06050055a ಪ್ರೋಥಯಂತ್ರೈರ್ವಿಚಿತ್ರೈಶ್ಚ ಶಸ್ತ್ರೈಶ್ಚ ವಿಮಲೈಸ್ತಥಾ|
06050055c ಸ ಚಕ್ರೇ ವಸುಧಾಂ ಕೀರ್ಣಾಂ ಶಬಲೈಃ ಕುಸುಮೈರಿವ||
ವಿಚಿತ್ರ ಯಂತ್ರಗಳಿಂದಲೂ, ವಿಮಲ ಖಡ್ಗಗಳಿಂದಲೂ ಹರಡಿಹೋದ ವಸುಧೆಯನ್ನು ಅವನು ಶಬಲ ಕುಸುಮಗಳು ಹರಡಿರುವಂತೆ ಮಾಡಿದನು.
06050056a ಆಪ್ಲುತ್ಯ ರಥಿನಃ ಕಾಂಶ್ಚಿತ್ಪರಾಮೃಶ್ಯ ಮಹಾಬಲಃ|
06050056c ಪಾತಯಾಮಾಸ ಖಡ್ಗೇನ ಸಧ್ವಜಾನಪಿ ಪಾಂಡವಃ||
ಕೆಲವೊಮ್ಮೆ ಆ ಮಹಾಬಲ ಪಾಂಡವನು ರಥದ ಮೇಲೆ ಹಾರಿ ಖಡ್ಗದಿಂದ ಅಲ್ಲಿರುವವರನ್ನು ಕೊಂದು ಕೆಳಗೆ ಹಾರುತ್ತಿದ್ದನು.
06050057a ಮುಹುರುತ್ಪತತೋ ದಿಕ್ಷು ಧಾವತಶ್ಚ ಯಶಸ್ವಿನಃ|
06050057c ಮಾರ್ಗಾಂಶ್ಚ ಚರತಶ್ಚಿತ್ರಾನ್ವ್ಯಸ್ಮಯಂತ ರಣೇ ಜನಾಃ||
ಕ್ಷಣದಲ್ಲಿಯೇ ಹಾರುತ್ತಿದ್ದನು. ಯಶಸ್ವಿಯು ದಿಕ್ಕುಗಳಲ್ಲಿ ಓಡುತ್ತಿದ್ದನು. ಚಿತ್ರವಿಚಿತ್ರ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಅವನನ್ನು ನೋಡಿ ರಣದಲ್ಲಿ ಎಲ್ಲರೂ ವಿಸ್ಮಿತರಾದರು.
06050058a ನಿಜಘಾನ ಪದಾ ಕಾಂಶ್ಚಿದಾಕ್ಷಿಪ್ಯಾನ್ಯಾನಪೋಥಯತ್|
06050058c ಖಡ್ಗೇನಾನ್ಯಾಂಶ್ಚ ಚಿಚ್ಛೇದ ನಾದೇನಾನ್ಯಾಂಶ್ಚ ಭೀಷಯನ್||
ಕೆಲವರನ್ನು ಕಾಲಿನಿಂದ ತುಳಿದು ಕೊಂದನು. ಅನ್ಯರನ್ನು ನೆಲಕ್ಕೆ ಬಡಿದು ಕೊಂದನು. ಅನ್ಯರನ್ನು ಖಡ್ಗದಿಂದ ಕತ್ತರಿಸಿ ಮತ್ತೆ ಕೆಲವರನ್ನು ಕೂಗಿ ಹೆದರಿಸಿ ಕೊಂದನು.
06050059a ಊರುವೇಗೇನ ಚಾಪ್ಯನ್ಯಾನ್ಪಾತಯಾಮಾಸ ಭೂತಲೇ|
06050059c ಅಪರೇ ಚೈನಮಾಲೋಕ್ಯ ಭಯಾತ್ಪಂಚತ್ವಮಾಗತಾಃ||
ಅವನು ನಡೆಯುವಾಗ ತೊಡೆಗಳ ವೇಗದಿಂದಲೇ ಭೂತಲದಲ್ಲಿ ಕೆಲವರು ಬಿದ್ದರು. ಇನ್ನು ಕೆಲವರು ಅವನನ್ನು ನೋಡಿಯೇ ಭೀತರಾಗಿ ಪಂಚತ್ವವನ್ನು ಸೇರಿದರು.
06050060a ಏವಂ ಸಾ ಬಹುಲಾ ಸೇನಾ ಕಲಿಂಗಾನಾಂ ತರಸ್ವಿನಾಂ|
06050060c ಪರಿವಾರ್ಯ ರಣೇ ಭೀಷ್ಮಂ ಭೀಮಸೇನಮುಪಾದ್ರವತ್||
ಈ ರೀತಿ ಭೀಷ್ಮನನ್ನು ಸುತ್ತುವರೆದು ಯುದ್ಧಮಾಡುತ್ತಿದ್ದ ತರಸ್ವೀ ಕಲಿಂಗರ ಮಹಾ ಸೇನೆಯನ್ನು ಭೀಮಸೇನನು ರಣದಲ್ಲಿ ಆಕ್ರಮಣಿಸಿದನು.
06050061a ತತಃ ಕಲಿಂಗಸೈನ್ಯಾನಾಂ ಪ್ರಮುಖೇ ಭರತರ್ಷಭ|
06050061c ಶ್ರುತಾಯುಷಮಭಿಪ್ರೇಕ್ಷ್ಯ ಭೀಮಸೇನಃ ಸಮಭ್ಯಯಾತ್||
ಭರತರ್ಷಭ! ಆಗ ಕಲಿಂಗ ಸೈನ್ಯಗಳ ಪ್ರಮುಖ ಶ್ರುತಾಯುಷನನ್ನು ನೋಡಿ ಭೀಮಸೇನನು ಧಾವಿಸಿದನು.
06050062a ತಮಾಯಾಂತಮಭಿಪ್ರೇಕ್ಷ್ಯ ಕಲಿಂಗೋ ನವಭಿಃ ಶರೈಃ|
06050062c ಭೀಮಸೇನಮಮೇಯಾತ್ಮಾ ಪ್ರತ್ಯವಿಧ್ಯತ್ಸ್ತನಾಂತರೇ||
ಅವನು ಬರುತ್ತಿರುವುದನ್ನು ನೋಡಿ ಅಮೇಯಾತ್ಮ ಕಲಿಂಗನು ಒಂಭತ್ತು ಶರಗಳಿಂದ ಭೀಮಸೇನನ ಎದೆಗೆ ಹೊಡೆದನು.
06050063a ಕಲಿಂಗಬಾಣಾಭಿಹತಸ್ತೋತ್ತ್ರಾರ್ದಿತ ಇವ ದ್ವಿಪಃ|
06050063c ಭೀಮಸೇನಃ ಪ್ರಜಜ್ವಾಲ ಕ್ರೋಧೇನಾಗ್ನಿರಿವೇಂಧನೈಃ||
ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಕಲಿಂಗಬಾಣದಿಂದ ಹೊಡೆಯಲ್ಪಟ್ಟ ಭೀಮಸೇನನು ಇಂಧನಗಳಿಂದ ಪ್ರಜ್ವಲಿಸುವ ಅಗ್ನಿಯಂತೆ ಕ್ರೋಧದಿಂದ ಉರಿದೆದ್ದನು.
06050064a ಅಥಾಶೋಕಃ ಸಮಾದಾಯ ರಥಂ ಹೇಮಪರಿಷ್ಕೃತಂ|
06050064c ಭೀಮಂ ಸಂಪಾದಯಾಮಾಸ ರಥೇನ ರಥಸಾರಥಿಃ||
ಅದೇ ಸಮಯದಲ್ಲಿ ರಥಸಾರಥಿ ಅಶೋಕನು ಭೀಮನಿಗೆ ಹೇಮಪರಿಷ್ಕೃತ ರಥವನ್ನು ತಂದು ಕೊಟ್ಟನು.
06050065a ತಮಾರುಹ್ಯ ರಥಂ ತೂರ್ಣಂ ಕೌಂತೇಯಃ ಶತ್ರುಸೂದನಃ|
06050065c ಕಲಿಂಗಮಭಿದುದ್ರಾವ ತಿಷ್ಠ ತಿಷ್ಠೇತಿ ಚಾಬ್ರವೀತ್||
ಶತ್ರುಸೂದನ ಕೌಂತೇಯನು ತಕ್ಷಣವೇ ಆ ರಥವನ್ನು ಏರಿ “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ಕಲಿಂಗನನ್ನು ಎದುರಿಸಿದನು.
06050066a ತತಃ ಶ್ರುತಾಯುರ್ಬಲವಾನ್ಭೀಮಾಯ ನಿಶಿತಾನ್ ಶರಾನ್|
06050066c ಪ್ರೇಷಯಾಮಾಸ ಸಂಕ್ರುದ್ಧೋ ದರ್ಶಯನ್ಪಾಣಿಲಾಘವಂ||
ಆಗ ಬಲವಾನ್ ಶ್ರುತಾಯುವು ಕೈಚಳಕವನ್ನು ಪ್ರದರ್ಶಿಸುತ್ತಾ ಸಂಕ್ರುದ್ಧನಾಗಿ ಭೀಮನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.
06050067a ಸ ಕಾರ್ಮುಕವರೋತ್ಸೃಷ್ಟೈರ್ನವಭಿರ್ನಿಶಿತೈಃ ಶರೈಃ|
06050067c ಸಮಾಹತೋ ಭೃಶಂ ರಾಜನ್ಕಲಿಂಗೇನ ಮಹಾಯಶಾಃ|
06050067e ಸಂಚುಕ್ರುಧೇ ಭೃಶಂ ಭೀಮೋ ದಂಡಾಹತ ಇವೋರಗಃ||
ರಾಜನ್! ಮಹಾಯಶ ಕಲಿಂಗನು ಆ ಶ್ರೇಷ್ಠ ಧನುಸ್ಸಿನಿಂದ ಒಂಭತ್ತು ನಿಶಿತ ಬಾಣಗಳನ್ನು ಪ್ರಯೋಗಿಸಿ ಹೊಡೆಯಲು ದಂಡದಿಂದ ಹೊಡೆಯಲ್ಪಟ್ಟ ಹಾವಿನಂತೆ ಭೀಮನು ತುಂಬಾ ಸಿಟ್ಟಿಗೆದ್ದನು.
06050068a ಕ್ರುದ್ಧಶ್ಚ ಚಾಪಮಾಯಮ್ಯ ಬಲವದ್ಬಲಿನಾಂ ವರಃ|
06050068c ಕಲಿಂಗಮವಧೀತ್ಪಾರ್ಥೋ ಭೀಮಃ ಸಪ್ತಭಿರಾಯಸೈಃ||
ಕ್ರುದ್ಧನಾಗಿ ಬಲವಾದ ಚಾಪವನ್ನು ತೆಗೆದುಕೊಂಡು ಬಲಿಗಳಲ್ಲಿ ಶ್ರೇಷ್ಠ ಪಾರ್ಥ ಭೀಮನು ಕಲಿಂಗನನ್ನು ಏಳು ಆಯಸಗಳಿಂದ ಹೊಡೆದನು.
06050069a ಕ್ಷುರಾಭ್ಯಾಂ ಚಕ್ರರಕ್ಷೌ ಚ ಕಲಿಂಗಸ್ಯ ಮಹಾಬಲೌ|
06050069c ಸತ್ಯದೇವಂ ಚ ಸತ್ಯಂ ಚ ಪ್ರಾಹಿಣೋದ್ಯಮಸಾದನಂ||
ಎರಡು ಕ್ಷುರಗಳಿಂದ ಕಲಿಂಗನ ಚಕ್ರರಕ್ಷಕರಾದ ಮಹಾಬಲಿ ಸತ್ಯದೇವ ಮತ್ತು ಸತ್ಯರನ್ನು ಯಮಸಾದನಕ್ಕೆ ಕಳುಹಿಸಿದನು.
06050070a ತತಃ ಪುನರಮೇಯಾತ್ಮಾ ನಾರಾಚೈರ್ನಿಶಿತೈಸ್ತ್ರಿಭಿಃ|
06050070c ಕೇತುಮಂತಂ ರಣೇ ಭೀಮೋಽಗಮಯದ್ಯಮಸಾದನಂ||
ಆಗ ಪುನಃ ಅಮೇಯಾತ್ಮ ಭೀಮನು ರಣದಲ್ಲಿ ಮೂರು ನಿಶಿತ ನಾರಾಚಗಳಿಂದ ಕೇತುಮಂತನನ್ನು ಯಮಸಾದನಕ್ಕೆ ಕಳುಹಿಸಿದನು.
06050071a ತತಃ ಕಲಿಂಗಾಃ ಸಂಕ್ರುದ್ಧಾ ಭೀಮಸೇನಮಮರ್ಷಣಂ|
06050071c ಅನೀಕೈರ್ಬಹುಸಾಹಸ್ರೈಃ ಕ್ಷತ್ರಿಯಾಃ ಸಮವಾರಯನ್||
ಆಗ ಸಂಕ್ರುದ್ಧ ಕಲಿಂಗರು ಅಮರ್ಷಣ ಭೀಮಸೇನನನ್ನು ಅನೇಕ ಸಾವಿರ ಕ್ಷತ್ರಿಯ ಸೈನ್ಯಗಳಿಂದ ಸುತ್ತುವರೆದರು.
06050072a ತತಃ ಶಕ್ತಿಗದಾಖಡ್ಗತೋಮರರ್ಷ್ಟಿಪರಶ್ವಧೈಃ|
06050072c ಕಲಿಂಗಾಶ್ಚ ತತೋ ರಾಜನ್ಭೀಮಸೇನಮವಾಕಿರನ್||
ರಾಜನ್! ಆಗ ಕಲಿಂಗರು ಭೀಮಸೇನನನ್ನು ಶಕ್ತಿ-ಗದೆ-ಖಡ್ಗ-ತೋಮರ-ಋಷ್ಠಿ-ಪರಶಾಯುಧಗಳಿಂದ ಮುತ್ತಿಗೆ ಹಾಕಿದರು.
06050073a ಸಮ್ನಿವಾರ್ಯ ಸ ತಾಂ ಘೋರಾಂ ಶರವೃಷ್ಟಿಂ ಸಮುತ್ಥಿತಾಂ|
06050073c ಗದಾಮಾದಾಯ ತರಸಾ ಪರಿಪ್ಲುತ್ಯ ಮಹಾಬಲಃ|
06050073e ಭೀಮಃ ಸಪ್ತಶತಾನ್ವೀರಾನನಯದ್ಯಮಸಾದನಂ||
ಆ ಘೋರ ಶರವೃಷ್ಟಿಯನ್ನು ತಡೆದು ತಕ್ಷಣವೇ ಗದೆಯನ್ನು ಹಿಡಿದು ಮಹಾಬಲ ಭೀಮನು ಕೆಳಗೆ ಧುಮುಕಿ ಎಪ್ಪತ್ತು ವೀರರನ್ನು ಯಮಸಾದನಕ್ಕೆ ಕಳುಹಿಸಿದನು.
06050074a ಪುನಶ್ಚೈವ ದ್ವಿಸಾಹಸ್ರಾನ್ಕಲಿಂಗಾನರಿಮರ್ದನಃ|
06050074c ಪ್ರಾಹಿಣೋನ್ಮೃತ್ಯುಲೋಕಾಯ ತದದ್ಭುತಮಿವಾಭವತ್||
ಪುನಃ ಆ ಅರಿಮರ್ದನನು ಎರಡು ಸಾವಿರ ಕಲಿಂಗರನ್ನು ಮೃತ್ಯುಲೋಕಕ್ಕೆ ಕಳುಹಿಸಿ ಅದ್ಭುತವನ್ನೆಸಗಿದನು.
06050075a ಏವಂ ಸ ತಾನ್ಯನೀಕಾನಿ ಕಲಿಂಗಾನಾಂ ಪುನಃ ಪುನಃ|
06050075c ಬಿಭೇದ ಸಮರೇ ವೀರಃ ಪ್ರೇಕ್ಷ್ಯ ಭೀಷ್ಮಂ ಮಹಾವ್ರತಂ||
ಹೀಗೆ ಮಹಾವ್ರತ ಭೀಷ್ಮನನ್ನು ರಕ್ಷಿಸುತ್ತಿದ್ದ ಕಲಿಂಗರ ಸೇನೆಗಳನ್ನು ಪುನಃ ಪುನಃ ಆ ವೀರನು ಸಮರದಲ್ಲಿ ಮರ್ದಿಸಿದನು.
06050076a ಹತಾರೋಹಾಶ್ಚ ಮಾತಂಗಾಃ ಪಾಂಡವೇನ ಮಹಾತ್ಮನಾ|
06050076c ವಿಪ್ರಜಗ್ಮುರನೀಕೇಷು ಮೇಘಾ ವಾತಹತಾ ಇವ|
06050076e ಮೃದ್ನಂತಃ ಸ್ವಾನ್ಯನೀಕಾನಿ ವಿನದಂತಃ ಶರಾತುರಾಃ||
ಮಹಾತ್ಮ ಪಾಂಡವನಿಂದ ಆರೋಹಿಗಳು ಹತರಾಗಲು ಆನೆಗಳು ಅವನ ಬಾಣಗಳನ್ನು ತಡೆದುಕೊಳ್ಳಲಾಗದೇ ಜೋರಾಗಿ ಕೂಗುತ್ತಾ ತಮ್ಮ ಸೇನೆಯನ್ನೇ ತುಳಿದು ಹಾಕುತ್ತಾ ಗಾಳಿಯಿಂದ ಚದುರಿದ ಮೋಡಗಳಂತೆ ಓಡಿ ಹೋದವು.
06050077a ತತೋ ಭೀಮೋ ಮಹಾಬಾಹುಃ ಶಂಖಂ ಪ್ರಾಧ್ಮಾಪಯದ್ಬಲೀ|
06050077c ಸರ್ವಕಾಲಿಂಗಸೈನ್ಯಾನಾಂ ಮನಾಂಸಿ ಸಮಕಂಪಯತ್||
ಆಗ ಮಹಾಬಾಹು ಬಲೀ ಭೀಮನು ಶಂಖವನ್ನು ಊದಿ ಸರ್ವಕಲಿಂಗ ಸೈನಿಕರ ಮನಸ್ಸುಗಳನ್ನು ಕಂಪಿಸಿದನು.
06050078a ಮೋಹಶ್ಚಾಪಿ ಕಲಿಂಗಾನಾಮಾವಿವೇಶ ಪರಂತಪ|
06050078c ಪ್ರಾಕಂಪಂತ ಚ ಸೈನ್ಯಾನಿ ವಾಹನಾನಿ ಚ ಸರ್ವಶಃ||
ಪರಂತಪ! ಕಲಿಂಗರನ್ನು ಮೋಹವು ಆವೇಶಿಸಿತು. ಎಲ್ಲೆಡೆಯೂ ಸೈನ್ಯ- ವಾಹನಗಳು ಕಂಪಿಸಿದವು.
06050079a ಭೀಮೇನ ಸಮರೇ ರಾಜನ್ಗಜೇಂದ್ರೇಣೇವ ಸರ್ವತಃ|
06050079c ಮಾರ್ಗಾನ್ಬಹೂನ್ವಿಚರತಾ ಧಾವತಾ ಚ ತತಸ್ತತಃ|
06050079e ಮುಹುರುತ್ಪತತಾ ಚೈವ ಸಮ್ಮೋಹಃ ಸಮಜಾಯತ||
ರಾಜನ್! ಭೀಮನು ಸಮರದಲ್ಲಿ ಗಜೇಂದ್ರನಂತೆ ಎಲ್ಲಕಡೆ ಅನೇಕ ಮಾರ್ಗಗಗಳಲ್ಲಿ ಚಲಿಸಿ ಅತ್ತಿತ್ತ ಓಡಿ, ಮತ್ತೆ ಮತ್ತೆ ಹಾರುತ್ತಾ ಸಮ್ಮೋಹವನ್ನುಂಟುಮಾಡಿದನು.
06050080a ಭೀಮಸೇನಭಯತ್ರಸ್ತಂ ಸೈನ್ಯಂ ಚ ಸಮಕಂಪತ|
06050080c ಕ್ಷೋಭ್ಯಮಾಣಮಸಂಬಾಧಂ ಗ್ರಾಹೇಣೇವ ಮಹತ್ಸರಃ||
ಮಹಾಸರೋವರವನ್ನು ತಡೆಯಿಲ್ಲದೇ ಅಲ್ಲೋಲಕಲ್ಲೋಲ ಮಾಡುವ ಮೊಸಳೆಯಂತಿದ್ದ ಭೀಮಸೇನನ ಭಯದಿಂದ ತ್ರಸ್ತವಾದ ಸೈನ್ಯವು ಕಂಪಿಸಿತು.
06050081a ತ್ರಾಸಿತೇಷು ಚ ವೀರೇಷು ಭೀಮೇನಾದ್ಭುತಕರ್ಮಣಾ|
06050081c ಪುನರಾವರ್ತಮಾನೇಷು ವಿದ್ರವತ್ಸು ಚ ಸಂಘಶಃ||
ಅದ್ಭುತಕರ್ಮಿ ಭೀಮನಿಂದ ತ್ರಾಸಿತರಾದ ವೀರರು ಗುಂಪುಗುಂಪಾಗಿ ಓಡಿ ಹೋಗುತ್ತಿದ್ದರು. ಪುನಃ ಹಿಂದಿರುಗಿ ಅವನೊಂದಿಗೆ ಯುದ್ಧಮಾಡುತ್ತಿದ್ದರು.
06050082a ಸರ್ವಕಾಲಿಂಗಯೋಧೇಷು ಪಾಂಡೂನಾಂ ಧ್ವಜಿನೀಪತಿಃ|
06050082c ಅಬ್ರವೀತ್ಸ್ವಾನ್ಯನೀಕಾನಿ ಯುಧ್ಯಧ್ವಮಿತಿ ಪಾರ್ಷತಃ||
ಆಗ ಪಾಂಡವರ ಧ್ವಜಿನೀಪತಿ ಪಾರ್ಷತನು ತನ್ನ ಸೇನೆಗೆ “ಸರ್ವ ಕಲಿಂಗ ಯೋಧರೊಡನೆ ಯುದ್ಧಮಾಡಿ!” ಎಂದು ಆಜ್ಞಾಪಿಸಿದನು.
06050083a ಸೇನಾಪತಿವಚಃ ಶ್ರುತ್ವಾ ಶಿಖಂಡಿಪ್ರಮುಖಾ ಗಣಾಃ|
06050083c ಭೀಮಮೇವಾಭ್ಯವರ್ತಂತ ರಥಾನೀಕೈಃ ಪ್ರಹಾರಿಭಿಃ||
ಸೇನಾಪತಿಯ ಮಾತನ್ನು ಕೇಳಿ ಶಿಖಂಡಿಪ್ರಮುಖ ಗಣಗಳು ರಥಸೇನೆ ಪ್ರಹಾರಿಗಳೊಂದಿಗೆ ಭೀಮನಿದ್ದಲ್ಲಿಗೆ ಧಾವಿಸಿ ಬಂದವು.
06050084a ಧರ್ಮರಾಜಶ್ಚ ತಾನ್ಸರ್ವಾನುಪಜಗ್ರಾಹ ಪಾಂಡವಃ|
06050084c ಮಹತಾ ಮೇಘವರ್ಣೇನ ನಾಗಾನೀಕೇನ ಪೃಷ್ಠತಃ||
ಪಾಂಡವ ಧರ್ಮರಾಜನೂ ಮೇಘವರ್ಣದ ಮಹಾ ಗಜಸೇನೆಯೊಂದಿಗೆ ಅವರನ್ನು ಹಿಂಬಾಲಿಸಿ ಬಂದನು.
06050085a ಏವಂ ಸಂಚೋದ್ಯ ಸರ್ವಾಣಿ ಸ್ವಾನ್ಯನೀಕಾನಿ ಪಾರ್ಷತಃ|
06050085c ಭೀಮಸೇನಸ್ಯ ಜಗ್ರಾಹ ಪಾರ್ಷ್ಣಿಂ ಸತ್ಪುರುಷೋಚಿತಾಂ||
ಹೀಗೆ ಪಾರ್ಷತನು ತನ್ನ ಎಲ್ಲ ಸೇನೆಗಳನ್ನೂ ಒಟ್ಟುಗೂಡಿಸಿಕೊಂಡು ಸತ್ಪುರುಷರಿಗೆ ಉಚಿತವಾದಂತೆ ಭೀಮಸೇನನ ಪೃಷ್ಠಭಾಗವನ್ನು ರಕ್ಷಿಸಿದನು.
06050086a ನ ಹಿ ಪಾಂಚಾಲರಾಜಸ್ಯ ಲೋಕೇ ಕಶ್ಚನ ವಿದ್ಯತೇ|
06050086c ಭೀಮಸಾತ್ಯಕಯೋರನ್ಯಃ ಪ್ರಾಣೇಭ್ಯಃ ಪ್ರಿಯಕೃತ್ತಮಃ||
ಏಕೆಂದರೆ ಪಾಂಚಾಲರಾಜನಿಗೆ ಲೋಕದಲ್ಲಿ ಭೀಮ-ಸಾತ್ಯಕಿಯರನ್ನು ಬಿಟ್ಟು ಬೇರೆ ಯಾರೂ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯರಾದವರು ಇರಲಿಲ್ಲ.
06050087a ಸೋಽಪಶ್ಯತ್ತಂ ಕಲಿಂಗೇಷು ಚರಂತಮರಿಸೂದನಂ|
06050087c ಭೀಮಸೇನಂ ಮಹಾಬಾಹುಂ ಪಾರ್ಷತಃ ಪರವೀರಹಾ||
ಪರವೀರಹ ಪಾರ್ಷತನು ಕಲಿಂಗರ ಮಧ್ಯೆ ಸಂಚರಿಸುತ್ತಿದ್ದ ಮಹಾಬಾಹು ಅರಿಂದಮ ಭೀಮಸೇನನನ್ನು ನೋಡಿದನು.
06050088a ನನರ್ದ ಬಹುಧಾ ರಾಜನ್ ಹೃಷ್ಟಶ್ಚಾಸೀತ್ಪರಂತಪಃ|
06050088c ಶಂಖಂ ದಧ್ಮೌ ಚ ಸಮರೇ ಸಿಂಹನಾದಂ ನನಾದ ಚ||
ರಾಜನ್! ಆಗ ಪರಂತಪನಿಗೆ ಅತೀವ ಹರ್ಷವಾಗಿ ಅವನು ಕೂಗಿದನು, ಶಂಖವನ್ನು ಊದಿದನು ಮತ್ತು ಸಿಂಹನಾದಗೈದನು.
06050089a ಸ ಚ ಪಾರಾವತಾಶ್ವಸ್ಯ ರಥೇ ಹೇಮಪರಿಷ್ಕೃತೇ|
06050089c ಕೋವಿದಾರಧ್ವಜಂ ದೃಷ್ಟ್ವಾ ಭೀಮಸೇನಃ ಸಮಾಶ್ವಸತ್||
ಭೀಮಸೇನನೂ ಕೂಡ ಹತ್ತಿರದಲ್ಲಿಯೇ, ಪಾರಿವಾಳಗಳ ಬಣ್ಣದ ಕುದುರೆಗಳನ್ನು ಕಟ್ಟಿದ ಹೇಮಪರಿಷ್ಕೃತ ರಥದಲ್ಲಿ ಕೋವಿದಾರ ಧ್ವಜನನ್ನು ನೋಡಿ ಆಶ್ವಾಸಿತನಾದನು.
06050090a ಧೃಷ್ಟದ್ಯುಮ್ನಸ್ತು ತಂ ದೃಷ್ಟ್ವಾ ಕಲಿಂಗೈಃ ಸಮಭಿದ್ರುತಂ|
06050090c ಭೀಮಸೇನಮಮೇಯಾತ್ಮಾ ತ್ರಾಣಾಯಾಜೌ ಸಮಭ್ಯಯಾತ್||
ಕಲಿಂಗರಿಂದ ಸುತ್ತುವರೆಯಲ್ಪಟ್ಟ ಅಮೇಯಾತ್ಮ ಭೀಮಸೇನನನ್ನು ನೋಡಿ ಅವನಿಗೆ ಸಹಾಯಮಾಡಲು ಧೃಷ್ಟದ್ಯುಮ್ನನು ಇನ್ನೂ ಹತ್ತಿರಕ್ಕೆ ಬಂದನು.
06050091a ತೌ ದೂರಾತ್ಸಾತ್ಯಕಿರ್ದೃಷ್ಟ್ವಾ ಧೃಷ್ಟದ್ಯುಮ್ನವೃಕೋದರೌ|
06050091c ಕಲಿಂಗಾನ್ಸಮರೇ ವೀರೌ ಯೋಧಯಂತೌ ಮನಸ್ವಿನೌ||
ದೂರದಿಂದ ಸಾತ್ಯಕಿಯು ಸಮರದಲ್ಲಿ ಕಲಿಂಗರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಮನಸ್ವಿ, ವೀರ ಧೃಷ್ಟದ್ಯುಮ್ನ-ವೃಕೋದರರನ್ನು ನೋಡಿದನು.
06050092a ಸ ತತ್ರ ಗತ್ವಾ ಶೈನೇಯೋ ಜವೇನ ಜಯತಾಂ ವರಃ|
06050092c ಪಾರ್ಥಪಾರ್ಷತಯೋಃ ಪಾರ್ಷ್ಣಿಂ ಜಗ್ರಾಹ ಪುರುಷರ್ಷಭಃ||
ವಿಜಯಿಗಳಲ್ಲಿ ಶ್ರೇಷ್ಠ ಪುರುಷರ್ಷಭ ಶೈನಿಯು ವೇಗದಿಂದ ಅಲ್ಲಿಗೆ ಬಂದು ಪಾರ್ಥ-ಪಾರ್ಷತರ ಹಿಂಬಾಗದ ರಕ್ಷಣೆಯನ್ನು ವಹಿಸಿಕೊಂಡನು.
06050093a ಸ ಕೃತ್ವಾ ಕದನಂ ತತ್ರ ಪ್ರಗೃಹೀತಶರಾಸನಃ|
06050093c ಆಸ್ಥಿತೋ ರೌದ್ರಮಾತ್ಮಾನಂ ಜಘಾನ ಸಮರೇ ಪರಾನ್||
ಅಲ್ಲಿ ಅವನು ಧನುಸ್ಸನ್ನು ಹಿಡಿದು ತನ್ನನ್ನೇ ರೌದ್ರನನ್ನಾಗಿಸಿಕೊಂಡು ಸಮರದಲ್ಲಿ ಶತ್ರುಗಳೊಂದಿಗೆ ಕಾದು ಕೊಂದನು.
06050094a ಕಲಿಂಗಪ್ರಭವಾಂ ಚೈವ ಮಾಂಸಶೋಣಿತಕರ್ದಮಾಂ|
06050094c ರುಧಿರಸ್ಯಂದಿನೀಂ ತತ್ರ ಭೀಮಃ ಪ್ರಾವರ್ತಯನ್ನದೀಂ||
ಅಲ್ಲಿ ಭೀಮನು ಕಲಿಂಗರ ಮಾಂಸ-ಶೋಣಿತ-ಕರ್ದಮಗಳ ರಕ್ತಪ್ರವಾಹದ ನದಿಯನ್ನೇ ಸೃಷ್ಟಿಸಿದ್ದನು.
06050095a ಅಂತರೇಣ ಕಲಿಂಗಾನಾಂ ಪಾಂಡವಾನಾಂ ಚ ವಾಹಿನೀಂ|
06050095c ಸಂತತಾರ ಸುದುಸ್ತಾರಾಂ ಭೀಮಸೇನೋ ಮಹಾಬಲಃ||
ಕಲಿಂಗರ ಮತ್ತು ಪಾಂಡವರ ಸೇನೆಗಳ ಮಧ್ಯೆ ಭೀಮಸೇನನು ಸುದುಸ್ತಾರ ನದಿಯನ್ನು ಹರಿಸಿದ್ದನು.
06050096a ಭೀಮಸೇನಂ ತಥಾ ದೃಷ್ಟ್ವಾ ಪ್ರಾಕ್ರೋಶಂಸ್ತಾವಕಾ ನೃಪ|
06050096c ಕಾಲೋಽಯಂ ಭೀಮರೂಪೇಣ ಕಲಿಂಗೈಃ ಸಹ ಯುಧ್ಯತೇ||
ನೃಪ! ಹಾಗಿರುವ ಭೀಮಸೇನನನ್ನು ನೋಡಿ ನಿನ್ನವರು “ಕಲಿಂಗರೊಡನೆ ಯುದ್ಧಮಾಡುತ್ತಿರುವ ಇವನು ಭೀಮರೂಪದ ಕಾಲ!” ಎಂದು ಕೂಗಿಕೊಳ್ಳುತ್ತಿದ್ದರು.
06050097a ತತಃ ಶಾಂತನವೋ ಭೀಷ್ಮಃ ಶ್ರುತ್ವಾ ತಂ ನಿನದಂ ರಣೇ|
06050097c ಅಭ್ಯಯಾತ್ತ್ವರಿತೋ ಭೀಮಂ ವ್ಯೂಢಾನೀಕಃ ಸಮಂತತಃ||
ಆಗ ರಣದಲ್ಲಿ ಆ ಕೂಗನ್ನು ಕೇಳಿ ಶಾಂತನವ ಭೀಷ್ಮನು ತ್ವರೆಮಾಡಿ ಬಂದು ಸೇನೆಯೊಂದಿಗೆ ಭೀಮನನ್ನು ಎಲ್ಲಕಡೆಗಳಿಂದ ಸುತ್ತುವರೆದನು.
06050098a ತಂ ಸಾತ್ಯಕಿರ್ಭೀಮಸೇನೋ ಧೃಷ್ಟದ್ಯುಮ್ನಶ್ಚ ಪಾರ್ಷತಃ|
06050098c ಅಭ್ಯದ್ರವಂತ ಭೀಷ್ಮಸ್ಯ ರಥಂ ಹೇಮಪರಿಷ್ಕೃತಂ||
ಆಗ ಭೀಷ್ಮನ ಹೇಮಪರಿಷ್ಕೃತ ರಥವನ್ನು ಸಾತ್ಯಕಿ, ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಮುತ್ತಿಗೆ ಹಾಕಿದರು.
06050099a ಪರಿವಾರ್ಯ ಚ ತೇ ಸರ್ವೇ ಗಾಂಗೇಯಂ ರಭಸಂ ರಣೇ|
06050099c ತ್ರಿಭಿಸ್ತ್ರಿಭಿಃ ಶರೈರ್ಘೋರೈರ್ಭೀಷ್ಮಮಾನರ್ಚುರಂಜಸಾ||
ಅವರೆಲ್ಲರೂ ಗಾಂಗೇಯನನ್ನು ಸುತ್ತುವರೆದು ಪ್ರತಿಯೊಬ್ಬರೂ ಮೂರು ಮೂರು ಘೋರ ಬಾಣಗಳಿಂದ ಭೀಷ್ಮನನ್ನು ಚುಚ್ಚಿದರು.
06050100a ಪ್ರತ್ಯವಿಧ್ಯತ ತಾನ್ಸರ್ವಾನ್ಪಿತಾ ದೇವವ್ರತಸ್ತವ|
06050100c ಯತಮಾನಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರಜಿಹ್ಮಗೈಃ||
ಅವೆಲ್ಲವನ್ನು ತಡೆದು ನಿನ್ನ ಪಿತ ದೇವವ್ರತನು ಪ್ರಯತ್ನಿಸಿ ಆ ಮಹೇಷ್ವಾಸರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು.
06050101a ತತಃ ಶರಸಹಸ್ರೇಣ ಸಮ್ನಿವಾರ್ಯ ಮಹಾರಥಾನ್|
06050101c ಹಯಾನ್ಕಾಂಚನಸಮ್ನಾಹಾನ್ಭೀಮಸ್ಯ ನ್ಯಹನಚ್ಚರೈಃ||
ಆಗ ಸಾವಿರ ಶರಗಳಿಂದ ಆ ಮಹಾರಥರನ್ನು ತಡೆಹಿಡಿದು, ಭೀಮನ ಕಾಂಚನಸಂನಹ ಕುದುರೆಗಳನ್ನು ಶರಗಳಿಂದ ಕೊಂದನು.
06050102a ಹತಾಶ್ವೇ ತು ರಥೇ ತಿಷ್ಠನ್ಭೀಮಸೇನಃ ಪ್ರತಾಪವಾನ್|
06050102c ಶಕ್ತಿಂ ಚಿಕ್ಷೇಪ ತರಸಾ ಗಾಂಗೇಯಸ್ಯ ರಥಂ ಪ್ರತಿ||
ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ಭೀಮಸೇನನು ಬೇಗನೇ ಗಾಂಗೇಯನ ರಥದ ಮೇಲೆ ಶಕ್ತಿಯನ್ನು ಎಸೆದನು.
06050103a ಅಪ್ರಾಪ್ತಾಮೇವ ತಾಂ ಶಕ್ತಿಂ ಪಿತಾ ದೇವವ್ರತಸ್ತವ|
06050103c ತ್ರಿಧಾ ಚಿಚ್ಛೇದ ಸಮರೇ ಸಾ ಪೃಥಿವ್ಯಾಮಶೀರ್ಯತ||
ಅದು ತಲುಪುವುದರೊಳಗೇ ಸಮರದಲ್ಲಿ ನಿನ್ನ ಪಿತ ದೇವವ್ರತನು ಅದನ್ನು ಮೂರು ಭಾಗಗಳನ್ನಾಗಿ ತುಂಡರಿಸಿ ಭೂಮಿಯ ಮೇಲೆ ಬೀಳಿಸಿದನು.
06050104a ತತಃ ಶೈಕ್ಯಾಯಸೀಂ ಗುರ್ವೀಂ ಪ್ರಗೃಹ್ಯ ಬಲವದ್ಗದಾಂ|
06050104c ಭೀಮಸೇನೋ ರಥಾತ್ತೂರ್ಣಂ ಪುಪ್ಲುವೇ ಮನುಜರ್ಷಭ||
ಮನುಜರ್ಷಭ! ಆಗ ಭಾರವಾದ ಬಲವತ್ತಾದ ಉಕ್ಕಿನ ಗದೆಯನ್ನು ಹಿಡಿದು ಭೀಮಸೇನನು ವೇಗದಿಂದ ರಥದ ಕೆಳಗೆ ಧುಮುಕಿದನು.
06050105a ಸಾತ್ಯಕೋಽಪಿ ತತಸ್ತೂರ್ಣಂ ಭೀಮಸ್ಯ ಪ್ರಿಯಕಾಮ್ಯಯಾ|
06050105c ಸಾರಥಿಂ ಕುರುವೃದ್ಧಸ್ಯ ಪಾತಯಾಮಾಸ ಸಾಯಕೈಃ||
ಆಗ ಭೀಮನ ಪ್ರಿಯಕಾಮಿ ಸಾತ್ಯಕಿಯೂ ಕೂಡ ಕುರುವೃದ್ಧನ ಸಾರಥಿಯನ್ನು ಸಾಯಕಗಳಿಂದ ಉರುಳಿಸಿದನು.
06050106a ಭೀಷ್ಮಸ್ತು ನಿಹತೇ ತಸ್ಮಿನ್ಸಾರಥೌ ರಥಿನಾಂ ವರಃ|
06050106c ವಾತಾಯಮಾನೈಸ್ತೈರಶ್ವೈರಪನೀತೋ ರಣಾಜಿರಾತ್||
ರಥಿಗಳಲ್ಲಿ ಶ್ರೇಷ್ಠನಾದ ಭೀಷ್ಮನ ಸಾರಥಿಯು ಹತನಾಗಲು ಕುದುರೆಗಳು ವಾಯುವೇಗದಿಂದ ಅವನನ್ನು ರಣರಂಗದಿಂದ ಆಚೆಗೆ ಕೊಂಡೊಯ್ದವು.
06050107a ಭೀಮಸೇನಸ್ತತೋ ರಾಜನ್ನಪನೀತೇ ಮಹಾವ್ರತೇ|
06050107c ಪ್ರಜಜ್ವಾಲ ಯಥಾ ವಹ್ನಿರ್ದಹನ್ಕಕ್ಷಮಿವೈಧಿತಃ||
ರಾಜನ್! ಮಹಾವ್ರತನು ಹಿಂದೆಸರಿಯಲು ಭೀಮಸೇನನು ಒಣಹುಲ್ಲನ್ನು ಸುಡುತ್ತಿರುವ ಬೆಂಕಿಯಂತೆ ಜ್ವಾಜಲ್ಯಮಾನನಾಗಿ ಬೆಳಗಿದನು.
06050108a ಸ ಹತ್ವಾ ಸರ್ವಕಾಲಿಂಗಾನ್ಸೇನಾಮಧ್ಯೇ ವ್ಯತಿಷ್ಠತ|
06050108c ನೈನಮಭ್ಯುತ್ಸಹನ್ಕೇ ಚಿತ್ತಾವಕಾ ಭರತರ್ಷಭ||
ಭರತರ್ಷಭ! ಅವನು ಸರ್ವಕಲಿಂಗರನ್ನೂ ಸಂಹರಿಸಿ ಸೇನಾಮಧ್ಯದಲ್ಲಿ ನಿಂತುಕೊಂಡನು. ನಿನ್ನವರು ಯಾರೂ ಅವನೊಂದಿಗೆ ಯುದ್ಧಮಾಡಲು ಉತ್ಸುಕರಾಗಿರಲಿಲ್ಲ.
06050109a ಧೃಷ್ಟದ್ಯುಮ್ನಸ್ತಮಾರೋಪ್ಯ ಸ್ವರಥೇ ರಥಿನಾಂ ವರಃ|
06050109c ಪಶ್ಯತಾಂ ಸರ್ವಸೈನ್ಯಾನಾಮಪೋವಾಹ ಯಶಸ್ವಿನಂ||
ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ಆ ಯಶಸ್ವಿಯನ್ನು ತನ್ನ ರಥದಲ್ಲಿ ಏರಿಸಿಕೊಂಡು ಎಲ್ಲ ಸೈನ್ಯಗಳೂ ನೋಡುತ್ತಿದ್ದಂತೆ ಕರೆದುಕೊಂಡು ಹೋದನು.
06050110a ಸಂಪೂಜ್ಯಮಾನಃ ಪಾಂಚಾಲ್ಯೈರ್ಮತ್ಸ್ಯೈಶ್ಚ ಭರತರ್ಷಭ|
06050110c ಧೃಷ್ಟದ್ಯುಮ್ನಂ ಪರಿಷ್ವಜ್ಯ ಸಮೇಯಾದಥ ಸಾತ್ಯಕಿಂ||
ಭರತರ್ಷಭ! ಪಾಂಚಾಲರಿಂದ ಮತ್ತು ಮತ್ಸ್ಯರಿಂದ ಗೌರವಿಸಿಕೊಂಡ ಅವನು ಧೃಷ್ಟದ್ಯುಮ್ನನನ್ನು ಆಲಂಗಿಸಿ ಸಾತ್ಯಕಿಯಿರುವಲ್ಲಿಗೆ ಹೋದನು.
06050111a ಅಥಾಬ್ರವೀದ್ಭೀಮಸೇನಂ ಸಾತ್ಯಕಿಃ ಸತ್ಯವಿಕ್ರಮಃ|
06050111c ಪ್ರಹರ್ಷಯನ್ಯದುವ್ಯಾಘ್ರೋ ಧೃಷ್ಟದ್ಯುಮ್ನಸ್ಯ ಪಶ್ಯತಃ||
ಆಗ ಸತ್ಯವಿಕ್ರಮ ಯದುವ್ಯಾಘ್ರನು ಭೀಮಸೇನನನ್ನು ಸಂತೋಷಗೊಳಿಸುತ್ತಾ ಧೃಷ್ಟದ್ಯುಮ್ನನು ನೋಡುತ್ತಿದ್ದಂತೆ ಹೇಳಿದನು:
06050112a ದಿಷ್ಟ್ಯಾ ಕಲಿಂಗರಾಜಶ್ಚ ರಾಜಪುತ್ರಶ್ಚ ಕೇತುಮಾನ್|
06050112c ಶಕ್ರದೇವಶ್ಚ ಕಾಲಿಂಗಃ ಕಲಿಂಗಾಶ್ಚ ಮೃಧೇ ಹತಾಃ||
“ಒಳ್ಳೆಯದಾಯಿತು! ಯುದ್ಧದಲ್ಲಿ ನೀನು ಕಲಿಂಗರಾಜ, ರಾಜಪುತ್ರ ಕೇತುಮಾನ, ಕಾಲಿಂಗ ಶಕ್ರದೇವ ಮತ್ತು ಕಲಿಂಗಸೇನೆಯನ್ನು ಸಂಹರಿಸಿದೆ.
06050113a ಸ್ವಬಾಹುಬಲವೀರ್ಯೇಣ ನಾಗಾಶ್ವರಥಸಂಕುಲಃ|
06050113c ಮಹಾವ್ಯೂಹಃ ಕಲಿಂಗಾನಾಮೇಕೇನ ಮೃದಿತಸ್ತ್ವಯಾ||
ನಿನ್ನ ಬಲವೀರ್ಯದಿಂದ ಕಲಿಂಗ ಸೇನೆಗಳ ಗಜಾಶ್ವರಥಸಂಕುಲಗಳ ಮಹಾವ್ಯೂಹಗಳು ನಾಶವಾದವು.”
06050114a ಏವಮುಕ್ತ್ವಾ ಶಿನೇರ್ನಪ್ತಾ ದೀರ್ಘಬಾಹುರರಿಂದಮಃ|
06050114c ರಥಾದ್ರಥಮಭಿದ್ರುತ್ಯ ಪರ್ಯಷ್ವಜತ ಪಾಂಡವಂ||
ಹೀಗೆ ಹೇಳಿ ಆಪ್ತನಾದ ದೀರ್ಘಬಾಹು ಅರಿಂದಮ ಶೈನಿಯು ರಥದಿಂದಿಳಿದು ಪಾಂಡವನನ್ನು ಬಿಗಿದಪ್ಪಿದನು.
06050115a ತತಃ ಸ್ವರಥಮಾರುಹ್ಯ ಪುನರೇವ ಮಹಾರಥಃ|
06050115c ತಾವಕಾನವಧೀತ್ಕ್ರುದ್ಧೋ ಭೀಮಸ್ಯ ಬಲಮಾದಧತ್||
ಆಗ ಪುನಃ ತನ್ನ ರಥವನ್ನೇರಿ ಮಹಾರಥನು ಭೀಮನ ಬಲವನ್ನು ವೃದ್ಧಿಸಿ ಕ್ರುದ್ಧನಾಗಿ ನಿನ್ನವರನ್ನು ವಧಿಸಲು ಉಪಕ್ರಮಿಸಿದನು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಿತೀಯಯುದ್ಧದಿವಸೇಕಲಿಂಗರಾಜವಧೇ ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಿತೀಯಯುದ್ಧದಿವಸೇಕಲಿಂಗರಾಜವಧ ಎನ್ನುವ ಐವತ್ತನೇ ಅಧ್ಯಾಯವು.
[1] (೧) ಭ್ರಾಂತ - ಖಡ್ಗವನ್ನು ಮಂಡಲಾಕಾರವಾಗಿ ತಿರುಗಿಸುವುದು (೨) ಅವಿದ್ಧ – ಶ್ರಮಪಟ್ಟು ಭ್ರಾಂತವನ್ನು ಸಾಧಿಸುವುದು (೩) ಉದ್ಭ್ರಾಂತ - ತಲೆಯ ಮೇಲೆ ಮಂಡಲಾಕಾರವಾಗಿ ತಿರುಗಿಸುವುದು (೪) ಆಪ್ಲುತ - ಖಡ್ಗವನ್ನು ಮಂಡಲಾಕಾರವಾಗಿ ತಿರುಗಿಸುತ್ತಲೇ ಹಾರುವುದು (೫) ಪ್ರಸೃತ - ಎಲ್ಲ ದಿಕ್ಕುಗಳಲ್ಲಿಯೂ ವ್ಯವಸ್ಥಿತವಾದ ನಡುಗೆಯಿಡುತ್ತಾ ಖಡ್ಗವನ್ನು ತಿರುಗಿಸುತ್ತಾ ಸಾಗುವುದು (೬) ಪ್ಲುತ - ಖಡ್ಗವನ್ನು ತಿರುಗಿಸುತ್ತಾ ಒಂದೇ ದಿಕ್ಕಿನಲ್ಲಿ ಮುಂದುವರೆಯುವುದು (೭) ಸಂಪಾತ - ವೇಗದಿಂದ ಪ್ಲುತ (೮) ಸಮುದೀರ್ಣ – ಗಾಯಗೊಳಿಸುವುದು/ಕೊಲ್ಲುವುದು [ಭಾರತ ದರ್ಶನ ಪ್ರಕಾಶನ - ೧೭೩೮].